ಉತ್ಸಾಹಗೊಂಡ ಬಾಲಕರು ಅಂಗಳದಲ್ಲಿ ನಿಂತು ತಮ್ಮ ತಮ್ಮ ಎರಡೂ ತೋಳುಗಳನ್ನು ನೆಲಕ್ಕೆ ಸಮಾಂತರವಾಗಿ ಉದ್ದಕ್ಕೆ ಚಾಚಿ “ಅಂಗಾಳೇ ಬಿಂಗಾಳೇ” ಎನ್ನುತ್ತ ತಮ್ಮ ಮೈಸುತ್ತ ಗರಗರ ತಿರುಗುವರು. ಹೀಗೆ ಕೆಲಹೊತ್ತು ತಿರುಗಿ ತಲೆ ಸುತ್ತಿ ಬಂದಂತಾಗಲು ನಿಲ್ಲುವರು. ಆಗ ಭೂಮಿ ಹೊರಳತೊಡಗಿದಂತೆ. ಗಿಡ ಮರಗಳೆ ಚಲಿಸಿದಂತೆ ಭಾಸವಾಗಿ, ಮನಸ್ಸು ಒಂದು ಬಗೆಯ ಆನಂದದಲ್ಲಿ ಮುಳುಗುವದು. ತಿರುತಿರುಗಿ ಅಂಗಳದಲ್ಲಿ ಬೀಳುವರು; ಸಂತೋಷಪಡುವರು. ಹೀಗೆ ಬಹಳಷ್ಟು ಮಂದಿ ಸ್ಪರ್ಧೆಯಿಂದ ತಿರುಗಿ ಎಲ್ಲರಕ್ಕಿಂತಲೂ ಕೊನೆಯಲ್ಲಿ ಬೀಳುವವನು ಆಟ ಗೆದ್ದಂತೆ ಎಂದು ತೀರ್ಮಾನಿಸುವುದೂ ಕೆಲವೆಡೆ ಪ್ರಚಲಿತವಿದೆ.