ಎಷ್ಟು ಕಂಬಗಳಿರುತ್ತವೆಯೋ ಅದಕ್ಕಿಂತ ಒಂದು ಸಂಖ್ಯೆ ಹೆಚ್ಚು ಆಟಗಾರರು ಬೇಕು. ಎಲ್ಲರೂ ಒಂದೆಡೆ ನಿಂತುಕೊಳ್ಳುವರು. ಅವರಲ್ಲಿ ಒಬ್ಬರು ತಮ್ಮನ್ನೂ ಎಣಿಸಿಕೊಳ್ಳುತ್ತಾ ಅವ್ಲಕ್ಕಿ, ತವ್ಲಕ್ಕಿ, ಕಂಚಿನ ಮೀಣಿಮೀಣಿ, ಟಾಂಗಾ – ಟೊಂಗಾ ಮುರ್ಗಾ – ತೀರ್ಗಾ ಎಂದು ಹೆಸರು ಹಾಕುತ್ತಾಹೋಗುವರು, ಯಾರಿಗೆ “ತಿರ್ಗಾ” ಬಮ್ತೋ ಅವರಿಗೆ ಕಂಬವಿಲ್ಲ. ಅವರು ಕಂಬ ದೊರಕಿಸಲು ತಿರುಗಾಡಬೇಕು. ಉಳಿದವರೂ ಕೂಡ ತಾವು ಹಿಡಿದುಕೊಂಡಿದ್ದ ಸ್ಥಳವನ್ನು ಬದಲು ಮಾದುತ್ತಾ ಇರಬೇಕು. ತಿರ್ಗಾನು ಯಾರನ್ನಾದರೂ (ಕಂಬ ಮುಟ್ಟದಿದ್ದಾಗ) ಮುಟ್ಟಿ, ತಾನು ಕಂಬ ಮುಟ್ಟಿದರೆ ಮಾತ್ರ ಅವನಿಗೆ ಕಂಬ ದೊರೆಯುತ್ತದೆ.

ಸ್ಥಳ ಬದಲು ಮಾಡುತ್ತಿದ್ದವರು ಈ ಮೊದಲೇ ಜನರಿದ್ದ ಕಂಬವನ್ನೂ ಹಿಡಿದುಕೊಳ್ಳಬಹುದು. ಆದರೆ ಒಂದು ಕಂಬವನ್ನು ಮೂರು ಜನರಿಗಿಂತ ಹೆಚ್ಚು ಜನ ಹಿಡಿದುಕೊಳ್ಳಬಾರದು. ಒಬ್ಬರಿಗಿಂತ ಹೆಚ್ಚು ಜನ ಇದ್ದಾಗ ಮೊದಲನೆಯವನು ನಿಂತುಕೊಂಡು ಎರಡನೆ ಬಾರಿಗೆ ಬಂದವನು ತುಸು ಬಗ್ಗಿ ಮೂರನೆಯವನು ಪೂರ್ಣ ಬಗ್ಗಿ ಅಥವಾ ಮಲಗಿ ಇರಬೆಕು. ಇವರಲ್ಲಿ ನಿಂತುಕೊಂಡಿದ್ದವರೇ ಮೊದಲು ಸ್ಥಳ ಬದಲು ಮಾಡಬೇಕು. ನಿಂತುಕೊಂಡವರು ಬೇರೆಡೆ ಹೋದರೆ ತುಸು ಬಗ್ಗಿದವರುನಿಲ್ಲಬೇಕು, ಹಾಗೂ ಪೂರ್ಣ ಬಗ್ಗಿದವರು ತುಸು ಬಗ್ಗಬೇಕು. ಆದರೆ ಹಾಗೆ ಮಾಡಿದರೆ ನಿರ್ದಿಷ್ಟ ರೀತಿಯಲ್ಲಿಯೇ ನಿಲ್ಲದಿದ್ದರೆ, ಅಂಥವರ ತಲೆಯ ಮೇಲೆ ತಿರ್ಗಾ “ಉಪ್ಪುಪ್ಪು” ಎನ್ನುತ್ತ ಮೂರು ಸಾರೆ ತಟ್ಟಿಬಿಡುವನು. ಆಗ ತಿರ್ಗಾನಿಗೆ ಸ್ಥಳ ಕೊಟ್ಟು ತಾನೇ ತಿರ್ಗಾ ಆಗಬೇಕು.