ಐದು ಮಂದಿ ಆಟಗಾರರಿತ್ತಾರೆ ಅಂಗಳದಲ್ಲಿ ಸುಮಾರು ಆರು ಮೊಳ ಉದ್ದ, ಆರು ಮೊಳ ಅಗಲದ ಚೌಕವನ್ನು ಎಳೆದು, ಅದರಲ್ಲಿ ಸುಮಾರು ಮೂರು ಮೊಳ ಉದ್ದ ಮೂರು ಮೊಳ ಅಗಲದ ನಾಲ್ಕು ಅಂಕಣಗಳನ್ನು ಗೆರೆಯೆಳೆದು ತಯಾರಿಸಬೇಕು. ದೊಡ್ಡ ಚೌಕದನಡುವೆ ಸಣ್ಣ ಚೌಕಗಳು ಕೂಡುವ ಮೂಲೆಯಲ್ಲಿ ನಾಲ್ಕು ಹರಳುಗಳನ್ನಿಡಬೇಕು. ಒಂದು ಚೌಕದಲ್ಲಿ ಒಬ್ಬರಂತೆ ನಾಲ್ಕು ಜನ ನಿಲ್ಲಬೇಕು. ಐದನೆಯವನು ನಾಲ್ಕು ಚೌಕಗಳ ರೇಕೆಯ ಮೇಲೆಯೇ ತಿರುಗಾಡುತ್ತಿರಬೇಕು. ಅವನು ಗೆರೆಯ ಮೇಲೆಯೇ ತಿರುಗಾಡುತ್ತಿರುವಾಗ, ಚೌಕದಲ್ಲಿ ನಿಂತ ಆಟಗಾರರು ಅವನ ಕೈಯಿಂದ ಮುಟ್ಟಿಸಿಕೊಳ್ಳದೇ ಮಧ್ಯದ ಹರಳುಗಳನ್ನು ಎತ್ತಬೇಕು. ಒಬ್ಬನೇ ನಾಲ್ಕು ಹರಳುಗಳನ್ನೂ ಎತ್ತಬಹುದು. ನಂತರ ಸುತ್ತುತ್ತಿರುವವನಿಂದ ಮುಟ್ಟಿಸಿಕೊಳ್ಳದೆ ತಮ್ಮಲ್ಲಿರುವ ಹರಳುಗಳನ್ನು ಒಬ್ಬರಿಂದ ಒಬ್ಬರಿಗೆ ಹಂಚಿಕೊಳ್ಳಬೇಕು. ಹಂಚಿಕೊಂಡಾದ ಮೇಲೆ, ಎಲ್ಲರೂ ಸುತ್ತುವವನಿಂದ ಮುಟ್ಟಿಸಿಕೊಳ್ಳದೆ ಒಂದೇ ಅಂಕಣದಲ್ಲಿ ಸೇರಿ ಒಬ್ಬನ ಹತ್ತರ ನಾಲ್ಕು ಹರಳುಗಳನ್ನು ಕೊಡಬೇಕು. ಇಷ್ಟಾದ ಮೇಲೆ ಆಟ ಮುಗಿಯುತ್ತದೆ. ಈ ಆಟದಲ್ಲಿ ಭಾಗ ವಹಿಸುವವರು ಚಾಣಾಕ್ಷರಿದ್ದರೆ ಮೋಜು ಹೆಚ್ಚು.