ಕೆಲವರಿಗೆ
ಕಳೆದು ಹೋಗುವ ಭೀತಿ ;
ಅದಕ್ಕಾಗಿ ಸದಾ ಕೂರುತ್ತಾರೆ
ಮೊದಲ ಪಂಕ್ತಿಯ ಖುರ್ಚಿ
ಅಥವಾ ಅಧ್ಯಕ್ಷತೆಯ ಗದ್ದುಗೆ.

ಹಳಹಳಿಸುತ್ತಾರೆ, ಅವರಿವರ ಮುಂದೆ
ಹಸನ್ಮುಖಿಗಳಾಗಿ ;
ಕೈಕುಲುಕಿ, ಹಲ್ಕಿರಿದು, ಸೌಜನ್ಯಮೂರ್ತಿಗಳಾಗಿ,
ದಿನಕ್ಕೊಂದು ಸುದ್ದಿಯಾಗಿ.

ಸುದ್ದಿ ಜೀವಿಗಳಿವರು-
ನಿದ್ದೆ ಬಾರದು ಇವರಿಗ್ಯಾರಾದರೂ
ತಮ್ಮನು ಕುರಿತು ಮಾತಾಡಿಕೊಳದಿದ್ದರೆ ;
ಪತ್ರಿಕೆಯಲ್ಲಿ ತಾವಾಡಿದ್ದು ಬರದಿದ್ದರೆ.

ತಾವಾಗಿಯೇ ಬಾಗಿಲು ಬಡಿದು ನುಗ್ಗುತ್ತಾರೆ
ಬಗೆಬಗೆಯ ವೇದಿಕೆಗೆ,
ಮೈಕಿಗೆ, ಚಪ್ಪಾಳೆಗೆ, ಜಿರಾಫೆ ಕೊರಳೊಡ್ಡುತ್ತ
ಬೀಳಬಹುದಾದ ಹಾರಕ್ಕೆ.

ನಿಶ್ಶಬ್ದದಲ್ಲಿರುವರು ತುಕ್ಕು ಹಿಡಿಯುತ್ತಾರೆ ;
ಸಣ್ಣಗೆ ಕೊರಗುತ್ತಾರೆ,
ಮರೆತು ಹೋಗುವ ಭಯದಲ್ಲಿ ಬೆವರುತ್ತಾರೆ ;
ಸಿಕ್ಕದ್ದಕ್ಕೆಲ್ಲಾ ತೆಕ್ಕೆ ಬೀಳುತ್ತಾ
ಪ್ರವಾಹದಗುಂಟ ತೇಲುತ್ತಾರೆ.