ಪದ

ಬರುವ ಬಾಣವನ್ನು ಖಂಡ್ರಿಸಿ  ಅರ್ಜುನನ
ಶಿರಕೆ ಗುರಿಯ ನೋಡಿಸಿ  ಶರವ ಬಿಡಿಸಿ ॥

ಸುಧನ್ವ: ಎಲಾ ಅರ್ಜುನ, ನೀನು ಬಿಟ್ಟ ಬಾಣವನ್ನು ಖಂಡ್ರಿಸಿ ಇದ್ದೇನೆ. ಇದಕ್ಕೆ  ಪ್ರತಿಯಾಗಿ ವಂದು ಬಾಣವನ್ನು ಬಿಡುತ್ತೇನೆ. ಕಡಿಯುವಂಥವನಾಗಪ್ಪಾ ಪಾರ್ಥ ನೀನು ಬದುಕಿದ್ದೆ ವ್ಯರ್ಥ ॥

ಪದ

ಮರುಳೆ ಕಡಿವೆ ತರಳ ನೋಡೆಲಾ  ಮ
ತ್ತೊಂದು ಬಾಣ ದುರುಳ ಬಿಡುವೆ
ತಡೆದುಕೊಳ್ಳೆಲಾ ॥

ಅರ್ಜುನ: ಎಲಾ ಭ್ರಷ್ಟ ನಿನ್ನ ಬಾಣವನ್ನು ಕಡಿದು ಇದ್ದೇನೆ ಇದಕ್ಕೆ ಪ್ರತಿಯಾಗಿ ಮತ್ತೊಂದು ಬಾಣವನ್ನು ಬಿಡುತ್ತೇನೆ ತಡೆದುಕೊಳ್ಳುವಂಥವನಾಗೊ ದುರುಳಾ.

ಪದ

ಯಂದು ಬಿಟ್ಟ ಬಾಣ ಖಂಡ್ರಿಸಿ  ಸುಧನ್ವ
ನಾಗ  ನಿಂದು ಪಾರ್ಥಗಂದು ಸೂಚಿಸಿ

ಸುಧನ್ವ: ಎಲೋ ಅರ್ಜುನ, ನೀನು ಬಿಟ್ಟ ಬಾಣಂಗಳೆರಡನ್ನು ಕತ್ತರಿಸಿ ಇದ್ದೇನೆ. ಇಂನೊಂದು ವುಂಟಲ್ಲಾ ಅದನ್ನು ಬಿಡುವಂಥವನಾಗೊ ದುರುಳಾ.

ಪದ

ಪಾರ್ಥ ಪಾಶುಪತವ ತೆಗೆಯಲೋ
ಶ್ರೀ ಹರಿಯು ಸೃಷ್ಟಿಕರ್ತ ಬ್ರಹ್ಮನನು ನಿಲಿಸಲೊ ॥
ಮಧ್ಯೆ ಬಾಣದಲ್ಲಿ ಸಾಂಬನು
ಅಂತ್ಯದಲ್ಲಿ ಕೃಷ್ಣ ಸಿದ್ದನಾಗಿ ನಿಂತನೂ ॥
ಆದಿಯಲ್ಲಿ ಆರ್ಜಿಸಿರುವಾ
ಸಾಮ್ರಾಜ್ಯಗಳನೂ  ಮುದದಿಂದ ಧಾರೆ ಎರೆಯುತಾ ॥

ಅರ್ಜುನ: ಎಲಾ ಸುಧನ್ವ, ಪರಮೇಶ್ವರನು ಕೊಟ್ಟ ಪಾಶುಪತ ಬಾಣವನ್ನು ಬಿಡುತ್ತೇನೆ. ಇದರಿಂದ ನಿನ್ನ ಶಿರಸ್ಸು ನಿಲ್ಲುತ್ತದೆಂಬುವದನ್ನು ಖಂಡಿತವಾಗಿ ನಿನ್ನ ಮನಸ್ಸಿನಲ್ಲಿ ತಿಳಿಯಬೇಡ. ಈಗಲಾದರು ನಮ್ಮ ಕುದುರೆಯನ್ನು ಬಿಟ್ಟು ಯನಗೆ ಶರಣಾಗತನಾಗು. ನಿನ್ನ ಶಿರವಂ ಉಳಿಸುತ್ತೇನೆ. ಹಾಗೆ ಶರಣಾಗತ ನಾಗದಿದ್ದರೆ ಖಂಡಿತವಾಗಿಯು ನಿನ್ನ ಶಿರವನ್ನು ತೆಗೆಯುವದು ನಿಜವೆಂದು ತಿಳಿದು, ನಿಮ್ಮವರಿಗೆಲ್ಲಾ ಯಮಲೋಕಕ್ಕೆ ಈ ಸಾರಿ ಪ್ರಯಾಣವೆಂದು ಹೇಳಿ ಬಂದು ಎನ್ನ ಎದುರಿನಲ್ಲಿ ನಿಲ್ಲುವಂಥವನಾಗೊ ದ್ರೋಹಿ.

ಸುಧನ್ವ: ಎಲಾ ಅರ್ಜುನ ಅತಿದುರ್ಜನ. ನೀನು ವುತ್ತರನಂತೆ ಪೌರುಷದ ಮಾತನಾಡಿದಾಗ್ಯು ನಿನ್ನ ಸಾಹಸಿ ಯಂದು ನಂಬಲಾರೆ. ದ್ವಾರಕವಾಸನಾದ ಶ್ರೀಕೃಷ್ಣನು ನಿನಗೆ ಸಹಾಯವಾಗಿರಲಾಗಿ ಈ ರೀತಿ ಬೊಗಳುವೆಯೆ ಹೊರ್ತು ನಿನ್ನ ಸ್ವಯಿಚ್ಚೆ ಇಂದ ಯಾರನ್ನು ಸಂಹರಿಸಲಾರೆ. ನಿಜವಾದ ಮಾತೆಂದು ತಿಳಿಯಲೊ  ಶುನಕಾ ತುಳಿಯೆ ಪಾತಾಳತನಕಾ.

ಪದ

ಕಳೆದುಕೊಂಡೆ ಇಹ ಪುಣ್ಯವಾ ॥
ಶ್ರೀ ಹರಿಯೆ ಈಗ  ನಳಿನನಾಭ  ನಿನ್ನ ಸುಕೃತವ ॥

ಸುಧನ್ವ: ಅಯ್ಯ ಸ್ವಾಮಿ, ಪಾರ್ಥನ ಬಾಣಕ್ಕೆ ನಿನ್ನ ಪುಣ್ಯವನ್ನು ಧಾರೆಯನ್ನೆರೆದು ಕಳೆದುಕೊಂಡೆ. ಇಂಥ ಬಾಣಕ್ಕೆ ಯನ್ನ ಶಿರಸ್ಸು ಕೊಟ್ಟಿದ್ದೇ ಆದರೆ ಮೋಕ್ಷವನ್ನು ಕೊಟ್ಟು ಕರುಣಿಸಬೇಕೊ ಮಹಾನುಭಾವ.

ಪದ

ಬಾಣ ಬಿಡಲು ಕ್ಷೋಣಿ ತಪ್ಪಿಸುತಾ  ಕ
ತ್ತರಿಸಲಾಗ ಜಾಣತನವ ಸುರರು ಮೆಚ್ಚುತಾ ॥
ಬಿಗಿದ ಬಾಣ ಮರಳಿ ಕಂಠವಂ
ಕತ್ತರಿಸಲಾಗ ನಭಕೆ ಎಗರಿ  ಹರಿಯ ಪಾದವ ॥
ಸೇರಲಾಗ ಸುರರು ನಭ
ದಲಿ  ಪೂ ಮಳೆಯ ಕರೆಯೆ  ಮಾರುತಿ
ಯ  ಕರುಣದಿಂದಲಿ ॥

ಕಂದ

ಇಂತಿ ಸುಧನ್ವನು ಬೀಳಲು ಅತ್ತಲು ಅರಸನಿಗೆ
ಬಹಳ ತತ್ತರವಾಗಲು ಮತ್ತೇನು ಕೇಡು ಎನುತಲಿ
ಚಿತ್ತಜನ ಸಮರೂಪ ಸುತನ ಬಳಿಗತಿ ಬೇಗದಿ
ಬಂದಾ ಕಂದ ನೋಡು ತಾನೊಂದಿರದೆ  ಮೂರ್ಚೆ ಹೊಂದಿ
ಅಂದವು ತಪ್ಪಿ ಕಂದಿ ಕಳವಳಿಸಿ ಮನದಲ್ಲಿ
ಸುಂದರ ಸುತನನು ॥ನೆನೆದು ಮರುಗುತಲಿರ್ದನೂ ॥

ಪದ

ಕೇಳೈಯ್ಯ ಕಂದಮ್ಮ ಬಂದು ನೀ ಮಡಿದಾ  ಗೋ
ಳಾಟವ ನಮಗಿಟ್ಟು ಗಗನಕ್ಕೆ ನಡೆದಾ ॥

ಹಂಸಧ್ವಜ: ಅಯ್ಯ ಕಂದ ಅಯ್ಯ ಬಾಲ, ನಮಗೆ ಗೋಳಾಟವನ್ನು ತಂದಿಟ್ಟು ಹೋಗವಂಥವನಾದ ಕಂದಾ.

ಪದ

ಬ್ಯಾಡವೆನ್ನೆದೆ ನಾನು  ಓಡಿಸಿ ಕಳುಹಿಸಿ
ನಾಡಿನ ಜನಕೆಲ್ಲಾ  ಕೇಡಿಗನಾದೆ  ನಾನಾದೆ

ಹಂಸಧ್ವಜ: ಅಪ್ಪಾ ಮಗನೆ, ಬ್ಯಾಡವೆನ್ನದೆ ನಾನು ನಿನ್ನನ್ನು ರಣಾಗ್ರಕ್ಕೆ ವೋಗಲಿಲ್ಲವೆಂದು ಹಿಂಸೆಯನ್ನು
ಕೊಟ್ಟು ಹೂಡಿ ಕಳುಹಿಸಿದವನಾಗಿ ನಾಡಿನಲ್ಲಿರುವ ಜನಕ್ಕೆಲ್ಲಾ ಕೇಡಿಗನಾದೆನಪ್ಪಾ ಬಾಲಾ.

ಪದ

ಮಡದಿಯೊಳ್ ನೀನೇನು ವಡನೆ ನುಡಿ
ಯಲಿ  ಕಡೆಯ ಮಾತನು ಪೇಳೊ
ಬಿಡದೆ ನೀ ಕುವರಾ ॥

ಹಂಸಧ್ವಜ: ಹೇ ಕಂದ, ಅರಮನೆಗೆ ಪೋಗಿ ನಿನ್ನ ಮಡದಿಯೊಳ್ ಏನೆಂದು ಸಡಗರವ ಪೇಳಬೇಕು. ತಡೆಯದೆ ಪೇಳುವ ಮಾತನ್ನೆ ಯನ್ನೊಡನೆ ಪೇಳಪ್ಪಾ ಕಂದಾ-

ಪದ

ಸೊಸೆಯಾದ ಪ್ರಭಾವತಿಗೆ  ನಾನೇನು ವುಸು
ರಲೊ ಹಸನಾದ ಮಾತನ್ನು ವುಸುರೊ ನೀ ಕಂದಾ ॥

ಹಂಸಧ್ವಜ: ಅಪ್ಪಾ ಮಗನೆ. ನಿನ್ನ ಮಡದಿಯಾದ ಪ್ರಭಾವತಿಗೆ ಏನೆಂದು ವುಸುರಬೇಕು. ಅಂಥ ಹಸನಾದ ಮಾತನ್ನು ಯನ್ನೊಳು ಅರುಹಬೇಕಪ್ಪ ಕಂದ.

ಪದ

ಚಿಕ್ಕ ತಂದೆಗೆ ನಾನು ಫಕ್ಕಾನೆ ವುಸು
ರಾಲಿ  ಅದನಾದರು ಪೇಳೊ  ಮಾಣಿಕ್ಯರನ್ನಾ ॥

ಹಂಸಧ್ವಜ: ಅಪ್ಪಾ ಕಂದ. ಚಿಕ್ಕ ತಂದೆಗಳು ಕೇಳಿದರೆ ಏನೆಂದು ಅಕ್ಕರ ಮಾತುಗಳನ್ನ ಪೇಳಬೇಕೊ ಮಕ್ಕಳೊಳಗೆಲ್ಲಾ ಮಾಣಿಕ್ಯರನ್ನವೆ  ಕಂದ ನೀ ಬಹು ಚಂದಾ.

ಪದ

ಭೂಮಿಪಾಲಕನಾಗಿ ಪ್ರೇಮದೊಳಿ
ರದೆ ಕಾಮಿನಿಯೊಳ್ ಪ್ರಮತ್ತನಾಗಿರದೆ ॥

ಹಂಸಧ್ವಜ: ಅಪ್ಪಾ ಸುಕುಮಾರ. ಭೂಮಿಯನ್ನು ಪಾಲನೆ ಮಾಡಿಕೊಂಡು ಕಾಮಿನಿಯಾದ ನಿನ್ನ ಹೆಂಡತಿಯೊಳ್ ಕಾಮಾಸ್ತಕನಾಗದೆ ಸುಮ್ಮನೆ ಮಲಗಿರುವುದು ವುಚಿತವೇನಪ್ಪಾ ಕಂದ ॥

ಪದ

ಶರಖಡ್ಗ ತಾರಿನ್ನು ಕೊರಳನ್ನ ಕಡಿವೆ  ಕರು
ಣಿಸೊ ಮಾರುತಿ ಹರಣವ ತೊರೆವೇ ॥ನಾ ತೊರೆವೆ ॥

ಹಂಸಧ್ವಜ: ಅಪ್ಪಾ ಚಾರಕಾ. ಖಡ್ಗವನ್ನು ತಂದು ಕೊಟ್ಟಿದ್ದೇ ಆದರೆ ಯನ್ನ ಶಿರಸಂನು ಇವನ ಎದುರಿಗೆ ಕಡಿದುಕೊಂಡು ವಾಯುಪುತ್ರನಾದ ಮಾರುತೀಶನಿಗೆ ಈ ದೇಹವನ್ನು ಸಮರ್ಪಿಸುತ್ತೇನೆ. ಖಡ್ಗವನ್ನು ಕೊಡುವಂಥವನಾಗಪ್ಪ  …….. ॥

ಪದ

ದುಃಖಿಸಲ್ಯಾತಕೊ  ನಿನಗಿದು  ಈ ಸಂ
ಕಟವ್ಯಾತಕೊ ॥ಯಿಷ್ಠು ದುಃಖಿಸಿ ಬಹುಕಷ್ಟ
ಕಷ್ಠವ ಪಡೆ ಸಲ್ಲ  ನಷ್ಠವಲ್ಲದೆ ಮುಂದೆ ॥ಇಷ್ಟು ॥

ೃಷ್ಣ: ಅಯ್ಯ ಹಂಸಧ್ವಜ ಭೂಪಾಲ, ನೀನು ಮಹಾಪುಣ್ಯಶಾಲಿಯಾಗಿ ಸಮಸ್ತ ಯುದ್ಧದಲೂ ನಿಪುಣನಾಗಿ ಬಹು ದುಃಖಿಸುವದು ನಷ್ಠವೆ ವಿನಹ, ಯಿಷ್ಟು ಪದವಿಯನ್ನು ಹೊಂದಲು ಮಾರ್ಗವಿಲ್ಲವಾಗಿ ದುಃಖಿಸುವದು ವುಚಿತವಲ್ಲವೊ ರಾಜ ಮಾರ್ತಾಂಡ ತೇಜಾ.

ಪದ

ಪರಶಿವ ಮೂರ್ತಿ ನಿನ್ನ ತರಳನ ಶಿರ
ವ  ಭರದೊಳ್ ತರಿಸಿರುವ  ಕರುಣಿ
ಸಿ ತನ್ನಯ  ಮೆರೆವ ರುಂಡಕೆ ಧ
ರಿಸಿ ಸ್ಥಿರ ಪದವಿ ಬೇಗ ಹರುಶದಿಂದ

ಕೃಷ್ಣ: ಅಯ್ಯ ರಾಜ. ನಿನ್ನ ಮಗನ ಶಿರವನ್ನು ಪರಶಿವ ಮೂರ್ತಿ ರುಂಡಮಾಲೆಗೆ ಧರಿಸಿಕೊಂಡು ಮೋಕ್ಷವಂ ಕರುಣಿಸಿರುವನು. ನೀನು ಸಹ ಮೋಕ್ಷವಂ ಪಡೆಯದೆ ಇಷ್ಟು ದುಃಖಿಸಲ್ಯಾತಕಪ್ಪ ರಾಜಾ॥

ಪದ

ಸತಿಸುತರೆನ್ನುವದು ಗತಿಗಲ್ಲದೆ ಸತತ
ನಿನ್ನೊಳು ಬರ್ಪುದೆ  ಹಿತವನ್ನು ತೊರೆದು
ಸದ್ಗತಿಯನ್ನು ಪಡೆಯದೆ ಮತಿಭ್ರಾಂ
ತಿ ಪುಟ್ಟಿ ನಿನಗೆ  ಇಷ್ಠು ದುಃಖಿಸಲಿ ॥

ಕೃಷ್ಣ: ಅಯ್ಯ ಹಂಸಧ್ವಜ, ಸುತಿಸುತರೆಂಬ ಸಂಸಾರದಲ್ಲಿ ಅಧೋಗತಿ ತಿಳಿಯದೆ  ಮತಿವಂತನಾಗಿ ಮೋಕ್ಷವಂ ಪಡೆಯದೆ ಇಷ್ಟು ದುಃಖಿಸಲ್ಯಾತಕೋ ರಾಜ ॥

ಪದ

ಧರೆಯೊಳಧಿಕವಾದ ವುರಗಪುರಿ
ಮಾರುತೀಶನ ಪಾದವ  ಭರದೊಳು
ಭಜಿಸಲು  ಕರುಣಿಸಿ ನಿನ್ನೊಳು
ಸ್ಥಿರ ಪದವಿಯನ್ನು  ಇಷ್ಠು ದುಃಖಿಸಲ್ಯಾತಕೊ ॥

ಕೃಷ್ಣ: ಅಯ್ಯ ದೊರೆಯೆ, ದುಃಖವನ್ನು ಬಿಟ್ಟು ಈ ಪಾರ್ಥನಲ್ಲಿ ಹೊಂದಿ ಧರ್ಮರಾಯನು ಮಾಡುವ ಯಾಗವಂ ಪೂರೈಸಿ ಅಂತ್ಯದಲ್ಲಿ ಸಾಯುಜ್ಯವಂ ಪಡೆಯದೇ ಕಷ್ಠವಂ ಕೈಕೊಂಡು ದುಃಖಿಸುವದು ವ್ಯರ್ಥವೊ ರಾಜ ॥

ಸ್ತೋತ್ರ ಸಾವೇರಿ

ಶ್ರೀರಾಮ ತಾರಕ ಶ್ರೀ ಪಾರಿಜಾತ  ಮಾಧವ ಗೋ
ವಿಂದ ಮಧುಕೈಟಭಾರಿ ಶ್ರೀಧರ ಕೇಶವ
ಶ್ರೀ ಕೌಸ್ತುಭಾ ನಾಗಾಂತಕರುಣಾ  ನಾಗೇಂದ್ರಪ್ರಿಯಾ
ಯಾಗ ಸಂರಕ್ಷಣ ಆಗಮವೇದ್ಯ ನಿರುಪಮ ಚಾರಿತ್ರ
ನಿರ್ಮಲಗಾತ್ರ ಮುರಹರವಂದಿತ  ಪುಂಡರೀಕಾಕ್ಷ
ದಾನವಾಂತಕ  ಅಚ್ಯುತಾನಂದ
ಸರಸಿಜೋದ್ಭವ  ಕನಕ ಕುಂಡಲಧರ
ಕಾಕುತ್ಸ ವಂಶ  ವನಮಾಲಿ  ವೈಕುಂಠ
ವಾಸ ಸ್ತುತಿಸುವೆ ದೇವ ದೇವೋತ್ತಮ  ದೇವತಾ
ಸಾರ‌್ವಭೌಮ ಅಖಿಳಾಂಡ ಕೋಟಿ  ಬ್ರಹ್ಮಾಂ
ಡನಾಯಕಾ ಆದಿ ಮದ್ಯಂತರಹಿತಾ  ಅಪ್ರಮೇಯ
ಅನಾಥ ರಕ್ಷಕ ಅಕ್ರೂರ ವರದ  ಅನಂತವತಾರ
ನಿಗಮಗೋಚರ ನಿರ್ಮಲಶಾಮಾ  ನಿತ್ಯಾನಂದಾ
ರ್ಚಿತ ಕಲ್ಪನೀರಬ್ಜದಳಾಕ್ಷ ಮಾಂರಕ್ಷ
ಮಾಂರಕ್ಷ  ಮಹಾಪ್ರಭೂ ॥

* * *