ಪದ
ವುರುಗಪುರೀಶನು ಕರುಣದಿ ಕಾಯ್ವ
ತರಳನಾ ಬಳಿಗೆ ನೀವು ಮಾರುತಿಶನು
ನಿಮ್ಮ ಕಾಯುತ್ತನಲ್ಲದೆ ಇದಕ್ಕೇನು ಯೋಚನೆ
ಸಂದೇಹವಿಲ್ಲದೆ ॥ಸಂದೇಹವ್ಯಾತಕೈಯ್ಯಾ ॥
ಸುಧನ್ವ: ಅಯ್ಯ ಭೂಸುರೋತ್ತಮ ವುರಗಪುರೀಶನಾದ ಮಾರುತೀಶನು ಕರುಣಿಸಿ ಕಾಯುತ್ತಾನಲ್ಲದೆ ಇದಕ್ಕೆ ನೀವು ಯೋಚಿಸದೆ ತರಳನಾದ ಯನ್ನ ಬಳಿಗೆ ದಯಮಾಡಿದರೆ ನಿಮ್ಮ ಹರಣವಂ ಶ್ರೀಕೃಷ್ಣನು ಕಾಯುವಂಥವನಾಗುತ್ತಾನೈಯ್ಯಾ ಭೂಸುರೋತ್ತಮ ॥
ಮಾತು: ಅಯ್ಯ ಭಾಗವತರೆ ಈ ರಾಜಪುರೋಹಿತರಾದ ಶಂಕಲಿಕರು ತನಗೆ ಸಂಭವಿಸಿದ ವಿಪತ್ತನ್ನು ತಾಳಲಾರದೆ ಸುಧನ್ವನ ಮರೆವೊಕ್ಕು ತಾವು ಎಣ್ಣೆ ಕೊಪ್ಪರಿಗೆಯಲ್ಲಿ ಆನಂದಭರಿತನಾಗಿದ್ದುದ ರಿಂದ ಇತ್ತಲಾ ರಾಜನು, ಇವರ ಮಹತ್ತನ್ನು ನಿರೀಕ್ಷಿಸಿ ತನ್ನ ಕಂದನಾದ ಸುಧನ್ವನಂ ಕೊಪ್ಪರಿಗೆಯಿಂದ ತೆಗೆಸಿ ಆನಂದಬಾಷ್ಪಗಳಂ ತುಂಬಿ ಕೇಳುತಿದ್ದನೂ ॥
ಕಂದ
ಭಕ್ತರ ಬಂಧುವೆ ನಿನ್ನಯ ಭಕ್ತಿಯ ನಾಂ
ತಿಳಿಯದೇ ಈಗ ಶಕ್ತಿಯ ನಡಿಸಿದೆ ಮುಕ್ತಿ
ಯನ್ನು ಪಡೆದು ಮೂಜಗಕೀರ್ತಿಯು ನೀನಾ
ದೆ ತರುಣಾ ಶಕ್ತಿಯೊಳೆನ್ನಾ ಮಾತನು
ಪರಿಪಾಲಿಸು ಮುನ್ನಾ ಸತ್ಯದಿಂದಲಿ ನಿತ್ಯ
ತೃಪ್ತನ ಭಕ್ತಿ ಭಾವದಿ ಭಜಿಸಿ ಮುಕ್ತಿಯು ತಪ್ಪ
ದಂತೆ ಪಡೆದು ಮೂಜಗ ಅರ್ತಿಯಲಿ ನೀಂ
ತೊಳಗಿ ಬೆಳಗಿದೇ ಬಾರೆನ್ನ ಕಂದ ॥
ಕಂದ
ಜನಕನೆ ನಿನ್ನಯ ಮನದೊಳ್ ಘನ ಕೊರತೆಯು
ತಾರದೆ ನನಗೆ ಸಂಗರಕೀಗ ಸಂಮ್ಮತಿಯಲಾ
ಪೋಪುದೇನನು ಅನುವಿನಿಂದ ಅಪ್ಪಣೆಯ ಕೊಡಲು
ಪೋಗುವೆನೈಯ್ಯ ಜನಕಾ ॥
ಸುಧನ್ವ: ಅಯ್ಯ ಜನಕ, ತಮ್ಮ ಮನಸ್ಸಿನಲ್ಲಿ ಲೇಶವಾದರು ಕೊರತೆಯಂ ತಾರದೆ ಅಧ್ವರಕ್ಕೆ ಅಪ್ಪಣೆಯಂ ಕೊಟ್ಟು ಕಳುಹಿಸಿದರೆ, ವೈರಿಯಂ ಜೈಸಿ ತಂಮ ಪಾದಗಳಿಗೆ ಕೀರ್ತಿಯನ್ನು ತಾರದೆ ಸುಧನ್ವನೆಂಬ ಪೆಸರು ಯನಗ್ಯಾತಕಯ್ಯ ಜನಕಾ ಅರಿಗಳಿಗಸಹಾಯಕ.
ಮಾತು: ಅಪ್ಪಾ ಕಂದ ಅಗತ್ಯವಾಗಿ ಪೋಗಿಬರಬಹುದೈಯ್ಯ ಕಂದ ನೀ ಬಹುಚಂದಾ ….
(ಸುಧನ್ವ ಯುದ್ಧಕ್ಕೆ ಹೊರಡುವುದು)
ಅರ್ಜುನ: ಎಲಾ ಸಾರಥಿ ಹೀಗೆ ಬರುವಂಥವನಾಗು ಹೇ ಮನುಷ್ಯನೆ ಮತ್ತೂ ಹೀಗೆ ನಿಲ್ಲುವಂಥವನಾಗು. ಎಲಾ ಸಾರಥಿ, ಕುಬೇರನ ಮಂಟಪಕಿಂ ಮಿಗಿಲಾದ ಈ ಸಭಾಸ್ಥಳದಲ್ಲಿ ಪ್ರಭಾಕರ ತೇಜದಿಂದೊಳೆವ ರಿಪು ಕುಲಭಯಂಕರ ಚಮತ್ಕೃತಿಯಿಂದ ಮಾತನಾಡಿಸುವ ಮಾನುಷ್ಯ ನೀ ಧಾರೊ ಯೆಂನೊಳ್ ಸಾರೊ.
ಭಳಿರೆ ಸಾರಥಿ, ಈರೇಳು ಲೋಕದಲ್ಲಿ ಇರುವ ಸಪ್ತ ಕುಲಾಚಲದ ಪರ್ವತಂಗಳೊಳು ಶ್ರೇಷ್ಠತರವಾದ, ರಜತಾಚಲದಲ್ಲಿ ಅಗ್ರ ಭಾಗದೊಳಿರುವ ಕೈಲಾಸಪಟ್ಟಣವನ್ನು ದಿಟ್ಟತನದಿಂದ ಪಾಲಿಸುವಂಥ ದುಷ್ಟರನ್ನು ಕುಟ್ಟಿ ಕುಟ್ಟಿ ಬಿಸುಟು ಶ್ರೇಷ್ಠರಿಗಿಷ್ಟಾರ್ಥವಂನ್ನು ಕೊಡುವಂಥ, ದ್ರಿಷ್ಠಿ ಮೂರುಳ್ಳ ಸಾಂಬಮೂರ್ತಿಯಂ ಮೆಚ್ಚಿಸಿ ಸಂಭ್ರಮದಿಂದ ಪಾಶುಪತಾಸ್ತ್ರವಂ ಪಡೆದು ಚಂಡ ಪ್ರಚಂಡ ತ್ರೈಜಗದ್ಗಂಡರಿಪು ಮದಗರ್ವ ಗಂಡಭೇರುಂಡ ಕನಕಾಮಣಿಕುಂಡಲ ಪ್ರಭಾಮಯ ಮಂಡಲ ನಗರಾಧ್ಯಕ್ಷ ಪಾಂಡುರಾಯರ ಸುಕುಮಾರ ಗಾಂಡೀವಿ ಎಂದರಿಯಲಾ ಸಾರಥಿ ಮನ್ಮನೋ ಮೂರುತಿ.
ಎಲೋ ಚಾರ, ಅರ್ಜುನ ಧನಂಜಯ ಸವ್ಯಸಾಚಿ ಕಿರೀಟಿ ನರ ಗಾಂಡೀವಿ ಪಲ್ಗುಣ ವಿಜಯ ಪಾರ್ಥನೆಂಬ ಮೊದಲಾದ ದಶನಾಮಾಂಕಿತವನ್ನು ಪಡೆದಿರುವ ನಾನು ಈ ಸಭೆಗೆ ಬಂದ ಕಾರಣವೇನೆಂದರೆ, ವಿಸ್ತಾರವಾದ ಹಸ್ತಿನಾವತಿಯನ್ನು ವಿಸ್ತಾರದಿಂದಾಳುವ ಧರ್ಮ ಭೂಪಾಲನು ಶತ್ರುಗಳ ಮಸ್ತಕಂಗಳಂ ಕತ್ತರಿಸಿದ ದೋಷ ನಿವೃತ್ತಿಗೋಸ್ಕರ ಅಶ್ವಮೇಧಯಾಗವಂ ಮಾಡಲು ನಿಶ್ಚಯಿಸಿ ಕುದುರೆಯಂ ಬಿಡಿಸಿರಲು ಚಂಪಕಾಪುರದ ಅರಸು ಕಟ್ಟಿಸಿದರೆಂಬ ವಾರ್ತೆಯಂ ಕೇಳಿ ಬಾಹೋಣವಾಯಿತೆಲಾ ಸಾರಥಿ.
ಎಲಾ ಸಾರಥಿ, ಜಾಗ್ರತೆಯಿಂದ ಪೋಗಿ ಯಮ್ಮ ಅಣ್ಣನ ಕುವರನಾದ ವೃಷಕೇತು ದಾವಲ್ಲಿ ಇದ್ದಾನೊ ಅತಿ ಜಾಗ್ರತೆಯಿಂದ ಕರೆದುಕೊಂಡು ಬರುವಂಥವನಾಗೊ ಸಾರಥಿ ॥
ವೃಷಕೇತು: ಎಲಾ ಸಾರಥಿ, ಶ್ರೀ ಮದ್ಬ್ರಹ್ಮಾಂಡ ಮಧ್ಯದೊಳ್ ಪ್ರಚಂಡಪಾಂಡಿತ್ಯದಿಂದೀವ ಸದಾ ಕಾಂಡವಂ ಪರಿಪರಿ ವಿಧದಿಂದ ಪಾಲಿಸುವ ಚಂಡಾಸುವಿನ ವಂಶದೊಳ್ ಸಿಂಧುವಿನಂತೊಪ್ಪುವ ಛಪ್ಪನ್ನಾಧೀಶ್ವರರ ಕನಕ ಕಿರೀಟಾಗ್ರದಿಂದೆನ್ನಾ ನಿಜ ಚರಣ ಸರೋಜಂಗಳ ಸೋಂಕುವಂತೆ ವಂದನೆಗೈಸಿ ಕೊಳ್ಳುವ ಅಖಂಡ ತೇಜೋಮಯನು ಸುಂದರಸುತನಾದ ಕಲಿಕರ್ಣನ ಕುಮಾರ ವೃಷಕೇತು ಎಂಬ ನಾಮಾಂಕಿತ ಕೇಳಲರಿಯೆಯೇನೊ ಚಾರ ವರ ಪಣಿಹಾರ.
ಹೇ ಸಾರಥಿ, ಅಂದವಾದ ಅರಮನೆಯನ್ನು ಬಿಟ್ಟು ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಛಪ್ಪನ್ನ ದೇಶಗಳಿಗೆ ಅಧಿಕವಾಗಿ ವಪ್ಪುತ್ತಿರುವ ಶುಂಡಾಲನಗರಕ್ಕೆ ಅಧ್ಯಕ್ಷನಾದ ಪಾಂಡುರಾಯನ ವರಗರ್ಭದೊಳ್ ವುದ್ಭವಿಸಿದ ಸೋಮಕಳೆಯುಳ್ಳ ಧರ್ಮಭೂಪಾಲನ ಅನುಜನಾದ ಗಾಂಡೀವಿ ಯನಿಸಿಕೊಳ್ಳುವ ಯನ್ನ ಚಿಕ್ಕ ತಂದೆಯು ಅಕ್ಕರದಿಂದ ಘಕ್ಕನೆ ಕರೆಸಿದ ಪ್ರಯುಕ್ತ ಬಾಹೋಣವಾಯಿತೆಲಾ ಸಾರಥಿ.
ನಮ್ಮ ಚಿಕ್ಕತಂದೆಯಾದ ಅರ್ಜುನ ಭೂಪಾಲನು ಧಾವಲ್ಲಿ ಇದ್ದಾನೊ ಅತಿಜಾಗ್ರತೆಯಿಂದ ಭೇಟಿಯನ್ನು ಮಾಡಿಸುವನಾಗೊ ಚಾರ ವರ ಪಣಿಹಾರ ನಮೋ ನಮೋ ಜನಕ ಅರಿಗಳಸಹಾಯಕಾ.
ಅರ್ಜುನ: ದೀರ್ಘಾಯುಷ್ಯಮಸ್ತು ಏಳಪ್ಪ ಕಂದ ನೀ ಬಹು ಚಂದಾ.
ವೃಷಕೇತು: ಹೇ ಜನಕ, ಯನ್ನನ್ನಿಷ್ಟು ಜಾಗ್ರತೆಯಿಂದ ಕರೆಸಿದ ಕಾರಣವೇನು. ಧಾವ ರಾಯರ ಮೇಲೆ ಯುದ್ಧಕ್ಕೆ ಸನ್ನದ್ಧನಾಗಿ ಪೋಗಬೇಕೊ ಧಾವ ರಾಯರಿಂದ ಕಪ್ಪವಂ ತಂದು ನಿಮ್ಮ ವುತ್ತಮವಾದ ಪಾದಪದ್ಮಗಳಿಗೆ ವೊಪ್ಪಿಸಬೇಕೊ ಅತಿ ಜಾಗ್ರತೆಯಿಂದ ಪೇಳಬೇಕೈಯ್ಯ ಜನಕ ಅರಿಗಳಿಗಸಹಾಯಕ.
ಪದ
ಅಣ್ಯಯ್ಯ ನಡಿಸುವೊ ಪುಣ್ಯಯಾಗದ ಹಯವ
ಸಣ್ಣವನು ಕಟ್ಟಿಹನು ಈ ದೃಢಮನದಿ ॥ಮನದಿ ॥
ಅರ್ಜುನ: ಅಪ್ಪಾ ಕಂದ, ಯನ್ನಗ್ರಜನಾದ ಧರ್ಮಭೂಪಾಲನು ದೇವತೆಗಳ ತೃಪ್ತಿಪಡಿಸುವುದಕ್ಕೋಸ್ಕರ ವಾಗಿ ಮತ್ತು ತಾನು ಸಂಪಾದಿಸಿಕೊಳ್ಳುವ ಪುಣ್ಯಕ್ಕೋಸ್ಕರವಾಗಿಯು ಅಶ್ವಮೇಧ ಯಾಗವಂ ಮಾಡಲಿಚ್ಚಿಸಿದವನಾಗಿ ಯನ್ನೊಡನೆ ಬಿಡಿಸಿರುವ ಕುದುರೆಯನ್ನ ಈ ಪಟ್ಟಣದ ಅರಸರ ಮಗನು ಕಟ್ಟಿಸಿ ಇರುವ ಕಾರಣ, ಇದರ ಆಲೋಚನೆಗೋಸ್ಕರ ನಿನ್ನನ್ನು ಕರೆಸಿದೆನಪ್ಪಾ ಬಾಲಾ ಸುಜ್ಞಾನಶೀಲಾ.
ಪದ
ತಂದೆಯಾ ಮಾತಿನಲ್ಲಿ ಬಂದು ಸುಧನ್ವನೂ
ಕಾದು ಕದನವ ಮಾಳ್ವೆನೆಂದು ತಾನೆಂದು ॥
ಅರ್ಜುನ: ಅಪ್ಪಾ ಕಂದಾ, ಸುಧನ್ವನ ತಂದೆಯಾದ ಹಂಸಧ್ವಜನ ಅಜ್ಞೆ ಪ್ರಕಾರ ಕುದುರೆಯಂ ಕಟ್ಟಿಸಿ ಯಮ್ಮೊಡನೆ ಯುದ್ಧವಂ ಮಾಡಲಪೇಕ್ಷಿಸಿ ಬಂದು ಇರುತ್ತಾನಪ್ಪಾ ಬಾಲಾ ಸುಗುಣಶೀಲಾ ॥
ಪದ
ಬಂದು ನಿಂದಿಹನೀಗ ಚಂದದಿಂದಲಿ
ಪೋಗಿ ಮಂದಬುದ್ಧಿಯ ಬಿಡಿಸಿ
ಬರುವೆನು ನಾನು ಕೇಳ್ ನಾನು ॥
ಅರ್ಜುನ: ಎಲೈ ಕಂದಾ, ಯುದ್ಧವನ್ನೆಸಗಲು ಸಿದ್ಧವಾಗಿ ಬಂದಿರ್ಪ ಮುದ್ದು ಕುವರನಿಗೆ ಬುದ್ಧಿ ಗದ್ದಲಿಸಿ ಪೇಳಿ ಕುದುರೆಯನ್ನು ಬಿಡಿಸಿಕೊಂಡು ಬರುತ್ತೇನಪ್ಪಾ ಬಾಲಾ ಸುಂದರಶೀಲಾ.
ಪದ
ವಾರುಧಿ ಧಾಂಟಿದ ಧೀರನಾ ಕರು
ಣದಲಿ ರಣದಲ್ಲಿ ಗೆದ್ದು ನಾ ಬರುವೆನೊ
ಮಗನೆ ಕೇಳ್ ಮಗನೆ ॥
ಅರ್ಜುನ: ಅಪ್ಪಾ ಬಾಲಾ, ವಾರುಧಿಯನ್ನು ದಾಂಟಿದ ಧೀರನಾದ ಮಾರುತೀಶನ ಕರುಣ ಕಟಾಕ್ಷದಿಂದ ಪೋರನಾದ ಸಣ್ಣ ಹುಡುಗನಂ ಗೆದ್ದು ಕುದುರೆಯಂ ತೆಗೆದುಕೊಂಡು ಬರುತ್ತೇನಪ್ಪ ಕಂದ ನೀ ಬಹುಚಂದ.
ಪದ
ಕುಲಕುವರನೊಳ್ ಬಲ್ಲಿದ ಕಲಹವ
ಸಲ್ಲದು ನೀ ಪೋಗೆ ಜನಕ ॥
ಮಲ್ಲ ಯುದ್ಧ ಮಾಡಿ ತಲ್ಲಣಗೊಳ್ಳಿಸಿ ನಿಲ್ಲ
ದೆ ವೋಡಿಸುವೆನೂ ॥ತರಿಸುವೆನು ॥
ವೃಷಕೇತು: ಅಯ್ಯ ಜನಕ, ಖುಲ್ಲನಾದ ಕುವರನೊಳ್ ಯುದ್ಧ ಮಾಡುವುದಕ್ಕೆ ಘನ ಶೂರರು ಪೋಗುವದು ಸರಿಯಲ್ಲವಯ್ಯ ಜನಕ.
ಪದ
ಬಾಲನೆಂದು ಬಾಲ ಭಾಷೆಯನಾಡುವೆ
ಸಾಲದ ಮಾತಲ್ಲಾ ॥ಮಾತಲ್ಲಾ ॥
ಕಾಲನಂತೆ ಕಡು ಕ್ರೂರದೊಳಿರುವನು ಫಾಲ
ನೇತ್ರ ಬಲ್ಲಾ ॥ತಾ ಬಲ್ಲಾ ॥
ಅರ್ಜುನ: ಅಪ್ಪಾ ಮಗನೆ, ಸುಧನ್ವನು ಬಾಲನೆಂದು ನಿಸ್ಸಾರದ ಮಾತುಗಳನ್ನಾಡುತ್ತಾ ಇದ್ದಿ ಸಾವಕಾಶದ ಮಾತಲ್ಲಾ. ಕಾಲನಾದ ಯಮನಂತೆ ಕ್ರೂರನಾಗಿ ಇರುವಂತೆ ಕಾಣುತ್ತದೆ. ಸಣ್ಣ ಮನುಷ್ಯನಾದಾಗ್ಯು ದೊಡ್ಡ ಮಾತಿನಿಂದ ದಂಡನೆ ಮಾಡಬೇಕೆಂಬ ನೀತಿಶಾಸ್ತ್ರ ಇರುವದರಿಂದ ಹುಡುಗನಾದಾಗ್ಯು ಅವನ ನಿಸ್ಸಾರ ಮಾಡಬಾರದಪ್ಪಾ ಕಂದ ನೀ ಬಹುಚಂದ.
ಪದ
ಇಷ್ಟು ಕಾರ್ಯಕೆ ತಟ್ಟನೆ ಅಪ್ಪಣೆ ಕೊಟ್ಟು ಕಳಿ
ಸೊ ಜನಕಾ ॥ತಿಳಿಹನಕಾ ॥
ಅಷ್ಠಮದವ ಮುರಿದು ನಷ್ಠವಗೊಳಿಸಿ
ಶ್ರೇಷ್ಠನೆನಿಸಿ ಬರುವೇ ॥ನಾ ಬರುವೆ ॥
ವೃಷಕೇತು: ಹೇ ತಂದೆ, ಇಷ್ಠು ಕಾರ್ಯಕ್ಕೆ ಪೋಗುವದು ಸರಿಯಲ್ಲಾ. ಜಾಗ್ರತೆ ಇಂದ ಅಪ್ಪಣೆಯನ್ನು ಕೊಟ್ಟು ಕಳುಹಿಸಿದ್ದೇ ಆದರೆ ಸುಧನ್ವನ ಅಷ್ಠಮದಗಳನ್ನು ಮುರಿದು ದುಷ್ಠತನವಂ ಬಿಡಿಸಿ ಬರುವಂಥವನಾಗುತ್ತೇನೆ. ಅಪ್ಪಣೆಯನ್ನು ಕೊಟ್ಟು ಕಳುಹಿಸುವಂಥವನಾಗೊ ಜನಕಾ ತಿಳಿಹನಕಾ ॥
ಪದ
ಬ್ಯಾಡೊ ಮಗನೆ ಬಹಳ ಕೇಡಿನ ಕಾಳಗ
ಹುಡುಗನು ನೀನಲ್ಲೊ ॥ನೀನಲ್ಲೊ ॥
ಕೇಡಿಗ ಕಾಡುವ ಮಾತನು ಕೇಳಲೂ
ಮೂಢನು ನಾನಲ್ಲಾ ॥
ಅರ್ಜುನ: ಅಪ್ಪಾ ಬಾಲಾ, ಇದು ಸಾಮಾನ್ಯವಾದ ಕಾಳಗವಲ್ಲ. ನಿನಗತಿಶಯವಾದ ರೂಢಿಯು ಇಲ್ಲ. ನಿನ್ನನ್ನು ಸಮರಕ್ಕೆ ಕಳುಹಿಸಿದ್ದೇ ಆದರೆ ಕೇಡು ಜನರು ಆಡುವ ಮಾತುಗಳನ್ನು ನಾನು ಕೇಳಲಾರೆ ನೀನು ಸರ್ವಥಾ ಪೋಗಲಾಗದಪ್ಪ ಕಂದ …..
ಪದ
ಹುಡುಗನು ನಾನೆಂದು ತಡೆಮಾತುಗಳಾಡಲು ॥
ಬಿಡುವನು ನಾನಲ್ಲಾ ॥
ಪೊಡವಿಯೊಳ್ ಮಾರುತಿ
ವಡೆಯನ ಕರುಣಾದಿ ಮೃಡ
ಪತಿ ಬಿಡನಲ್ಲಾ ॥ಬಿಡನಲ್ಲಾ ॥
ಅರ್ಜುನ: ಹೇ ತಂದೆ, ತಿಳಿಯದ ಹುಡುಗನೆಂದು ತಿವಿಯುವ ಮಾತುಗಳ್ನಾಡಿದರೆ ಬಿಡುವನಲ್ಲ. ಮಾರುತೀಶನಾದ ಯನ್ನ ವಡೆಯನು ಯನಗೆ ಸಹಾಯವಾಗಿ ಇರುತ್ತಾನೆ. ಒಂದೇ ಮನಸ್ಸಿನಿಂದ ಪೋಗಿ ಬರುವುದಕ್ಕೆ ಅಪ್ಪಣೆಯನ್ನು ಕೊಟ್ಟು ಕಳುಹಿಸಯ್ಯ ರಾಜ ಮಾರ್ತಾಂಡತೇಜಾ.
ಪದ
ಯುದ್ಧಕ್ಕೆ ಕಳುಹಲು ಬುದ್ಧಿಯು ಯನಗೆ
ಹೊಂದಲಿಕೆ ಇಲ್ಲಾ ಬಾಲಾ ಕೇಳೊ ಬಾಲಾ ॥ಪ॥
ಸುದ್ದಿಯ ನೀ ಬಿಟ್ಟು ನಿರ್ಧರವಾಗಿ
ನೀನು ಮಂದಿರದಲಿ ನೀನು ಕೇಳ್ ನೀನು ॥
ಅರ್ಜುನ: ಅಪ್ಪಾ ಕಂದ, ನಿನ್ನನ್ನು ಯುದ್ಧಕೆ ಕಳುಹಿಸುವುದಕ್ಕೆ ಸರ್ವಥಾ ಯನಗೆ ಬುದ್ಧಿಯು ಸಾಲದು. ನಿರ್ಧಾರ ಮನಸ್ಸುಳ್ಳವನಾಗಿ ಮಂದಿರದಲ್ಲಿ ಚಂದದಿಂದ ಇರಬಹುದಪ್ಪಾ ಬಾಲಾ ಸುಂದರಶೀಲಾ.
ಶ್ಲೋಕ
ಪ್ರಸ್ತಾಪಕ್ಕೊದಗದ ನುಡಿಯಂ ಮಸ್ತ
ಕ ಕೊಯ್ವ ವ್ಯಾಳ್ಯಕಿಲ್ಲದ ಖಡ್ಗಂ ಚಿ
ತ್ತಕ್ಕೆ ವದಗದ ಅಂಗನೆ ಇದ್ದೇನು ಫಲಂ ॥
ವೃಷಕೇತು: ಹೇ ತಂದೆ, ಸಂಧಿಸಿದ ಮಾತಿಗೆ ಸಮ್ಮತಿ ಕೊಡದ ವಿದ್ವಾಂಸನು, ಶಿರವನ್ನು ಕಡಿಯುವ ವ್ಯಾಳ್ಯಕಿಲ್ಲದ ಖಡ್ಗವೂ, ತನಗೆ ಅನುಕೂಲವಾಗದ ಸ್ತ್ರೀಯೂ ಇವೆಲ್ಲಾ ಇದ್ದರೂ ಪ್ರಯೋಜನ ಇಲ್ಲಾ. ವೈರಿ ಬಂದಿಳಿದ ಕಾಲದಲ್ಲಿ ಜಯವನ್ನು ಹೊಂದದೆ ದೇಹವನ್ನು ಬೆಳೆಸಿ ವುತ್ತರನಂತೆ ಪೌರುಷವನ್ನು ಇಟ್ಟುಕೊಂಡು ಅಧಮ ಮನುಷ್ಯನೆನಿಸಿಕೊಳ್ಳಲಾರೆ. ನೀವು ಎಷ್ಟು ವಿಧವಾಗಿ ಪೇಳಿದರು ಕೇಳುವುದಿಲ್ಲ… ಜಾಗ್ರತೆಯಾಗಿ ಯುದ್ಧಕ್ಕೆ ಅಪ್ಪಣೆಯನ್ನು ಕೊಟ್ಟು ಕಳುಹಿಸಬೇಕೈ ಜನಕಾ ಅರಿಗಳಿಗಸಹಾಯಕ.
ಅರ್ಜುನ: ಹಾಗಾದರೆ ಅಗತ್ಯವಾಗಿ ಪೋಗಿ ಬರಬಹುದಪ್ಪಾ ಬಾಲಾ ಜ್ಞಾನದಲ್ಲಿ ಸುಶೀಲಾ …
ವೃಷಕೇತು: ಎಲೈ ಸಾರಥಿ. ನೀನು ಜಾಗ್ರತೆಯಿಂದ ಈ ಪಟ್ಟಣದ ರಾಜಸುತನಲ್ಲಿಗೆ ಪೋಗಿ ಅರ್ಜುನರಾಯರ ಕುದುರೆಯನ್ನ ಬಿಟ್ಟು ಶರಣಾಗತನಾಗಬೇಕು. ಇಲ್ಲವಾದರೆ ಯುದ್ದಕ್ಕೆ ಬರಬಹುದೆಂದು ಪೇಳಿ ಬರುವಂಥವನಾಗೊ ಸಾರಥಿ ॥
ಪದ ॥॥ರೂಪಕ
ಪೋರ ನೀನ್ಯಾರಯ್ಯ ಧೀರನೆ ಕುದು
ರೆ ಕ್ರೂರತನದಲ್ಲಿ ಕಟ್ಟಲು ಬಹುದೆ
ನೀ ಬಹುದೆ ॥
ವೃಷಕೇತು: ಎಲಾ ಪೋರ, ಯಮ್ಮಯ ಕುದುರೆಯು ದೇಶಂಗಳಂ ಸಂಚರಿಸಿಕೊಂಡು ಇಲ್ಲಿಗೆ ಬರಲು ವಿಚಾರಿಸದೆ ದುರುಳತನದಿಂದ ಕಟ್ಟಬಹುದೇನೊ ಭ್ರಷ್ಠ ಪರಮ ಪಾಪಿಷ್ಠ.
ಪದ
ಶೂರ ನೀನಾದರೆ ಪೋರನೆಂದು ದೂಷಿಸಲ್ಯಾಕೆ
ತೋರೆಲೊ ನಿನ್ನ ಸಾಹಸ ॥ನಿನ್ನ ಸಾಹಸ ॥
ಸುಧನ್ವ: ಯಲಾ ತರಳ, ನೀನು ಶೂರನಾದರೆ ಯನ್ನ ಪೋರನೆಂದು ದೂಷಿಸುವುದು ಸಹಜವಲ್ಲ. ನೀನು ಪರಾಕ್ರಮವನ್ನು ತೋರದೆ ಹುಚ್ಚು ಮಾತುಗಳನ್ನು ಆಡುವದು ಜಾಣತನವಲ್ಲವೋ ಕುವರಾ ಇದೇನು ಗಂಭೀರ.
ಪದ
ನಿನ್ನಾ ನಾಮಂಗಳ ಚನ್ನಾಗಿ ನೀ ಪೇಳೊ
ಕಳಕಳುವಿನೊಳ್ ತರಳ ಹೇ ದುರುಳಾ ॥ಕೇಳಾ ॥
ವೃಷಕೇತು: ಎಲಾ ದುರುಳಾ, ನಿನ್ನ ನಾಮಗಳೇನೂ ನೀನು ಮಾಡಿರುವ ಕಳ್ಳ ಕಾರ್ಯವೇನೂ ಚನ್ನಾಗಿ ವಂಚನೆ ಇಲ್ಲದೆ ಪೇಳಬೇಕೊ ದುರುಳ.
ಪದ
ವುತ್ತರನಂದದಿ ಮತ್ತೆ ನೀ ನುಡಿಯದೆ
ಯತ್ತಣ ಮಾತು ನೀನಾಡು ನೀನಾಡು ॥
ಸುಧನ್ವ: ಎಲಾ ದುರುಳಾ, ನೀನು ಬಂದಿರುವ ಕಾರ್ಯ ಯಾವುದು. ನೀನಾಡುವ ಮಾತುಗಳನ್ನು ನೋಡಿದರೆ ಮತ್ಸ್ಯದೇಶಾಧಿಪತಿಯಾದ ವಿರಾಟರಾಯನ ಮಗ ವುತ್ತರನು ಪಂಥಗಳಂ ಮಾಡಿದಂತಾಯಿತು. ಇದು ಯಾವ ನಡತೆಗಳೆಂದು ಆಡಿದೆ ಭ್ರಷ್ಟ ಪರಮ ಪಾಪಿಷ್ಟ ॥
ಪದ
ಕುದುರೆ ಬಿಟ್ಟರೆ ಚದುರ ನಿನ್ನ ಬಿಡುವೆ
ಪದುಮನಾಭನ ಪಾದದಾಣೆ ನಿನ್ನಾಣೆ ॥
ವೃಷಕೇತು: ಎಲಾ ತರಳ, ಯಮ್ಮ ಕುದುರೆಯನ್ನ ಬಿಟ್ಟಿದ್ದೆಯಾದರೆ ನಿನ್ನ ಪ್ರಾಣ ಬಿಡುತ್ತೇನೆ. ಶ್ರೀಕೃಷ್ಣನ ಪಾದದಾಣೆಗು ನಿನ್ನ ನೋಯಿಸುವುದಿಲ್ಲವೊ ದುರುಳ ಕೇಳೊ ತರಳ.
ಪದ
ಸುಧನ್ವನಾ ಬಗೆ ಬಿಟ್ಟಿಗೆ ಬಿದ್ದಿಲ್ಲಾ
ತಟ್ಟನೆ ಕುದುರೆಯ ಬಿಡೆನು ॥ನಾ ಬಿಡೆನೊ
ಸುಧನ್ವ: ಯಲಾ ಭ್ರಷ್ಠ. ನೀನು ಕುದುರೆಯಂ ಕೇಳಿದರೆ ನಿನ್ನನ್ನು ಕುಟ್ಟಿ ಕುದುರೆಯ ಬಿಡುತ್ತೇನಲ್ಲದೆ ಎಷ್ಟು ಮಾತ್ರಕ್ಕು ಬಿಡುವುದಿಲ್ಲಾ. ಹಯವನ್ನು ಕೇಳಲು ಅಣಗಿಸಿ ಬಿಡುತ್ತೇನೊ ॥ದುರುಳ ಕೇಳೊ ತರಳಾ ॥
ವೃಷಕೇತು: ಎಲೊ ಅಧಮನೆ ಕೇಳು. ರಾಧೇಯ ಸುತನಾದ ಕರ್ಣನ ಮಗನು ಯನ್ನ ಹೆಸರು ವೃಷಕೇತು. ಯನ್ನೊಡನೆ ಯುದ್ಧವಂ ಗೈದರೆ ಯೀ ಭೂಮಿಯಲ್ಲಿ ನಿನ್ನನ್ನ ವರಗಿಸಿ ಪೋಗುತ್ತೇನೊ ಭ್ರಷ್ಟ ಪರಮ ಪಾಪಿಷ್ಟ ॥
ಪದ
ವಾರುಧಿ ಮಥನದಲ್ಲಿ ತೋರಿದ ಸುಧೆಯಂದು
ಸಾರಿ ಕರೆಯುವರೇ ॥ಕರೆಸುವರೆ ॥
ಸುಧನ್ವ: ಎಲಾ ವೃಷಕೇತು, ಕ್ಷೀರಸಮುದ್ರ ಮಥನದಲ್ಲಿ ದೇವತೆಗಳ ಸಂರಕ್ಷಣೆಗೋಸ್ಕರವಾಗಿ ಪುಟ್ಟಿದಂಥ ಸುಧೆಯೆಂಬ ನಾಮಾಂಕಿತವಂ ಕೇಳಿಬಲ್ಲೆಯಾ. ಅದಕ್ಕೆ ಪ್ರತಿಯಾಗಿ ಸುಧನ್ವನೆಂದು ನೀನು ತಿಳಿಯಲಿಲ್ಲವೇನೊ ಅಧಮಾ.
ಪದ
ತಪ್ಪಾದೆ ನಿನ್ನನ್ನು ಸರ್ಪ ಬಾಣದೊಳಿಡೆ
ತಪ್ಪಿಸಿಕೊಳ್ಳಬಹುದೆ ಶರವಾ ನಿನ್ನ ಶಿರವಾ ॥
ವೃಷಕೇತು: ಎಲಾ ಸುಧನ್ವ, ಈಗ ಸರ್ಪ ಬಾಣವಂನ್ನು ಬಿಟ್ಟು ಇದ್ದೇನೆ. ತಪ್ಪಿಸಿಕೊಂಡು ಬದುಕುವಂಥವ ನಾಗೊ ಶುನಕಾ ತುಳಿಯುವೇನು ಪಾತಳತನಕಾ ॥
ಪದ
ನಿನ್ನ ಬಾಣವ ಕಡಿದೆ ಯನ್ನ ಶರಂಗ
ಳನ್ನು ಚನ್ನಾಗಿ ಬಿಡುವೆ ಕಡಿಯೊ ನೀ ಕಡಿಯೊ ॥
ಸುಧನ್ವ: ಎಲಾ ವೃಷಕೇತು. ನೀನು ಬಿಟ್ಟ ಸರ್ಪ ಬಾಣವಂ ಕಡಿದು ಪ್ರತಿಯಾಗಿ ವಂಭತ್ತು ಬಾಣಗಳನ್ನು ಜಾಡಿಸಿ ಬಿಡುತ್ತೇನೆ. ತಡೆಯುವಂಥವನಾಗೊ ವುಡುಗ ಬಿಡು ನಿನ್ನ ಬೆಡಗಾ ॥
ಪದ
ಹೊಡೆದ ಪೆಟ್ಟಿಗೆ ಕರ್ಣಸುತನು ತಡೆ
ಯದೆ ಬಿದ್ದ ಪೊಡವಿಯೊಳ್ ಮೂರ್ಚೆ
ವೊಡೆದಿರ್ದ ॥ವೊಡೆದಿದ್ದಾ ॥
(ವೃಷಕೇತುವಿನ ಮೂರ್ಛೆ)
Leave A Comment