ಕವಿ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಕಸಬಾ ಟೌನ್ ಚಿಕ್ಕಪೇಟೆಯ ಶ್ರೀ ಮುನಿಯಪ್ಪ

ಕಾಲ : 10-06-1953

 

ವಿಘ್ನೇಶ್ವರನ ಸ್ತುತಿ

ಶಿವಕುಮಾರನೆ  ದೇವಾ  ಶಿಂಧು ರಾಜನೆ ॥ಪ ॥

ಮುಂದೆ ನಿಮ್ಮ ಪೂಜಿಸುವೆನು  ಸುಂದರಾಂಗ ಇಂದು
ತೇಜಾ  ವಂದಿಸುವೆನು ರಕ್ತವರ್ಣ  ವರವ ಪಾ
ಲಿಸೋ  ಗೌರಿ ಕಂದಾ ॥ಪ ॥
ಜಗತ್ತಿಗೆ  ಕರ್ತನೀನೆ ಕರುಣನೀನೆ  ಯಿನ್ನು ನಿಮ್ಮ ಚ
ರಣ ಕಮಲ  ಬಣ್ಣಿಸುವೆನು  ಯನ್ನ ಸಲಹೊ ॥

ಸುರಪ ಮುಖ್ಯ ಆದಿಯಾಗಿ  ನರರು ನಿಮ್ಮ
ಪೂಜಿಸುವರು  ಪರಮಪುರುಷ  ಗಿರಿಜಸು
ತನೆ  ಪಾಲಿಸೈಯ್ಯ ಭಾನುತೇಜಾ ॥

ಘೋರಕಲುಶ  ಧುರಧೀರ ಚಾರು ಚತುರ ವೇದಕಾರ
ಮಾರಹರನ ಮಗುವೆ ನಿಮ್ಮ  ಸಾರಿಸಾರಿ ಪೊಗಳುತಿರುವೇ ॥

ಕುಂಭಿಣಿಯೊಳಗೆ ಚಂಪಾಕಪುರ  ಶಂಭುತನಯ
ಶರಣು ಶರಣು  ನಂಬಿದವರಿಗಭಯ ಕೊಟ್ಟು
ಸಂಭ್ರಮದಿಂದಾ ಸಲಹೋ ದೇವಾ॥
ಶಿವಕುಮಾರನೆ  ದೇವಾನಾಗ ಬಂದನಾ ॥ಪ ॥

ಕಥಾರಂಭ

ತ್ರಿವುಡೆ

ಧರೆಯೊಳಸ್ತಿನಾ  ಪುರದ ಧರ್ಮಜ  ಪರಮ
ಧರ್ಮ ರಹಸ್ಯದಿಂದಲಿ  ಹರುಷದಿಂದಾಳುತ್ತೆ
ಅನುಜರೋಳ್  ಅರ್ಥದಿಂದಾ ॥

ಅಂತರಂಗದಿ ಚಿಂತೆ ಮಾಡುತ  ಕಂತುಪಿತನ ಭ್ರಾಂ
ತಿ ಇಂದಲಿ  ಸ್ವಾಂತದಲಿ ನೆನೆನೆನೆದು ಮರುಗುತಾ
ಲಿದ್ದ ಮನದೊಳಗೆ ॥

ಇಂತು ಯೋಚಿಪ ಸಮಯದಲಿ
ಅತ್ಯಂತ ಹರುಷದಿ  ನಾರದರುಷಿಗಳು
ಅಂತರಿಕ್ಷದಿ ಹರಿಯ ಭಜಿಸುತಾ ॥ಅರಸನೆಡೆಗೆ ॥

ಬಂದ ಮುನಿಗವ  ನೀಶ ವಂದಿಸೀ ನಿಂದುಕ್ತ ರಾ
ದಲಿ  ಪರಮಾನಂದದಿಂದುಪಚರಿಸೇ
ಮನಿಯಾನಂದದಿಂದಾ ॥

ಏ ದುಗುಡ ಧರ್ಮಜ  ನೀನು ರಾಗದಿ ಪೇಳಬೇಕೆ
ನೆ  ಮಾನವಾಧಿಪ ಮನದಿ ಮರುಗುತಾ  ಮತ್ತೇ
ನುಡಿದಾ ॥

ಮೆರೆವ ಕುರುಪತಿ  ಕರ್ನನಡಿಸುತಾ
ಗುರುಕೃಪಾಶ್ವಥಾಮಶಲ್ಯರ  ಧುರದೊಳರಿ
ದೆಯಂ  ಇದರ ದೋಷವ  ಕಳೆವುದೆಂತು ॥

ಇಷ್ಠ ಕಾರ‌್ಯಕೆ  ಕಷ್ಠ ಬಂದರು.  ಶ್ರೇಷ್ಠವೆಂದನು
ಮುನಿಯು ಕುದುರೆಯ  ನಿಷ್ಠೆ ಇಂದಲಿ ತರಿಸಿ ಯಾಗವ
ದಿಟ್ಟತನದಿ ॥ ॥

ಮುಟ್ಟಿ ಮಾಡಲು ಮನದ ಸಂಶಯ
ಬಿಟ್ಟು ಪೋಪುದು  ಮಾಡು ಯನ್ನುತ  ತಟ್ಟ
ನೆ ತಾ ಪೋದ ಮುನಿಪನು  ದಿಟ್ಟತನದಿ ॥

ಮುನಿಯನುಜ್ಞೆಯಾ  ಆಗ ಧರ್ಮಜ  ಚಿನ್ಮಯನ
ಚರಣವನು ನೆನೆಯಲು  ವನಜನಾಭನು ಜನಪನಿದ್ದೆಡೆ

ಬಂದು ಕುಂತಿ ನಂದನನ  ನಿಂದು ಕೇಳಿದನು
ಕಂದಿತ್ಯಾಕೈ ನಿನ್ನ ಹೃದಯಾ  ನಂದವೆನುತಾ ॥

ಕೇಳಾಲಾಕ್ಷಣ ವ್ಯಾಳಶಾಇಂಗೆ  ಕಾಳ
ಗ ಕೊಳುಗುಳದೊಳ್ ಅರ್ಭದ  ಕೇಣವಿಲ್ಲದೆ ಕೋದ್ದ
ದುರಿತವ  ತಾಳಲೆಂತ್ತು ॥ಯವ್ವನಾಶ್ವನ ಮೇ
ಘುದಶ್ವವ  ಸರ್ವಸಾಹಸದಿಂದ ತಂದರೆ  ವೂರ‌್ವಿಯೊ
ಳು ಸಂಚರಿಸಿ ರಾಜರ  ಸಂಹರಿಸಿ ಬರಲೂ

ಭೀಮ ಕರ್ಣಜ ಮೇಘನಾಥನು  ಸ್ವಾಮಿ ಆಜ್ಞೆಯಲಿ ತಂ
ದರಾಕ್ಷಣ  ಕಾಮಜನಕನೆ ಕರುಣಿಸೆಂದರು  ಪ್ರೇಮದಿಂದ॥

ಬಿಟ್ಟು ರಚಿಸಿ  ಹಯವ ಶುಭದಿ
ನ  ಅಟ್ಟಹಾಸದಿ ಹರಿಯು ರಕ್ಷಣೆ  ತಟ್ಟನೆ ತಾ ಹೊ
ರಟ ಫಲ್ಗುಣ  ದಿಟ್ಟ ಸಹಿತ ॥ಧರೆಯೊಳ್ ವಾಸು
ಕೀ ಪುರವ ಹರುಷದಿ  ಸ್ಥಿರದಿ ಪಾಲಿಪಾ ಮಾರುತೀಶ
ನ  ಕರುಣದಿಂದಲಿ  ಚಂಪಕಪುರ ವನವ ಸೇರಿ ॥

ವನಪಾಲಕ: ಭಲೈ ಸಾರಥಿ. ಈ ಬ್ರಹ್ಮಾಂಡ ಕಟಹಾಯ ಮಧ್ಯದೋಳ್ ಚಟುಲತೆಯಿಂದೆಸೆವಾ ಚಂಪಾಕಪುರಕ್ಕೆ ಅದ್ಯಕ್ಷನೆನಿಸುವ ಧೀರನಾದ ಹಂಸಧ್ವಜ ರಾಜರ ವುದ್ಯಾನವನವಂ ಪಾಲಿಸುವ ವನಪಾಲಕನೆಂದು ತಿಳಿಯಲಾ ಚಾರಕ ವರ ಮಣಿಹಾರಕ. ಎಲಾ ಸಾರಥಿ ಈ ಸಭಾ ಸ್ಥಾನಕ್ಕೆ ಬಂದ ಕಾರಣವೇನೆಂದರೆ ನಮ್ಮ ದೊರೆಯಾದ ಹಂಸಧ್ವಜ ರಾಜರ ವುದ್ಯಾನವನಕ್ಕೆ ಯಾರದೋ ವಂದು ಕುದುರೆ ಬಂದಿರುವುದು ಅದನ್ನು ಕಟ್ಟುವುದಕ್ಕೆ ಬಂದು ಇರುವೆನಲಾ ಸಾರಥಿ.

ಪದ

ವಾಜಿ ಪಣೆಯೊಳು  ರಾಜಲಿಪಿಗಳು
ಮಾದೊಪ್ಪುತಿಹುದೇನು  ಸೋಜಿಗಿಳೆಯೊಳು

ವನಪಾಲಕ: ಭಲೈ ಸಾರಥಿ ಈ ವಾಜಿ ಪಣಿಯ ಮಧ್ಯದಲ್ಲಿ ರಾಜಿಸುವ ರಾಜಲಿಪಿಯುಳ್ಳ ಬಿರುದು ಮಾಜದೆ ತೋರುತಿರುವುದು. ಭಲೆ ತೇಜಿಯ ಸಮೀಪಕ್ಕೆ ಪೋಗಿ ನೋಡಿ ಬರುತ್ತೇನೈಯ್ಯ ಸಾರಥಿ.

ಪದ

ಬಿಗಿವೆ ಹಯವನು  ತೆಗಿವೆ ಬಿರುದನು
ಜಗಳಕ್ಯಾರು ಬರುವವರ  ಪೊಗರು ಮುರಿವೆನೊ ॥

ವನಪಾಲಕ: ಯಲೈ ಸಾರಥಿ. ಬಗೆ ಬಗೆಯ ಒಕ್ಕಣೆಗಳನ್ನು ಇಕ್ಕೆ ಕಡುಪರಾಕ್ರಮನೆಂದು ಕಡು ಗರ‌್ವದಿಂದ ಬರೆದು ಕಟ್ಟಿರುವ ಬಿರುದನ್ನು ತೆಗೆದು ಆ ಗಂಡುವಾದಿಯ ಸೊಗಡನ್ನು ಕೆಡಿಸಿ ಬಿಗಿಯತ್ತೇನೆ. ಭಲಾ ಜಗಳಕ್ಕೆ ಬರುವವರ ಪೊಗರನ್ನು ಮುರಿದು ಹಗರಣವನ್ನು ಪಡಿಸಿ ನಗೆಗೀಡು ಮಾಡಿ ನಗರದ ಕಡೆಗೆ ಓಡಿಸುವಂತೆ ಮಾಡುತ್ತೇನೈಯ್ಯ ಸಾರಥಿ.

ಪದ

ಧರಣಿ ಚಂಪಕಾ  ಪುರ ನಿವಾಸನಾ  ಕರು
ಣದಿಂದ ವಾಚಿಸುವೆನು  ಬಿರುದನೀಗ ನಾಂ ॥

ವನಪಾಲಕ: ಎಲೈ ಚಾರಕಾ. ಚಂಪಕಾಪುರದ ಶಂಕರನ ಕರುಣದಿಂದಾ ತುರಗದ ಮಸ್ತಕಾಗ್ರದೊಳ್ ಬರೆದು ಧರಿಸಿರುವ ಬಿರುದನ್ನು ವಾಚಿಸುತ್ತಾ ಇದ್ದೇನಯ್ಯ ಸಾರಥಿ.

ಕಂದ ಸೌರಾಷ್ಟ್ರ

ತರಣಿ ಕುಲಾಶಿಖಾಮಣಿಯೆ  ವರಕುಂ
ತಿಯ ಗರ್ಭಜಾತ  ಶ್ರೀ ಧರ್ಮರಾಯರ
ತುರುಗವಿದೆನ್ನದು  ಭುವಿಯೊಳ್  ದಾ
ರಾದರು ಕಟ್ಟಬಹುದು ॥

ವನಪಾಲಕ: ಕೇಳಿದೇನಯ್ಯ ಚಾರಕ, ಕ್ಷತ್ರಿಯಕುಲದೊಳಗೆಲ್ಲಾ ತಾನೇ ಶಿಖಾಮಣಿಯಂತೆ ವರಕುಂತಿಯ ತನಯನಾದ ಧರ್ಮರಾಯನ ತುರುಗವಂತೆ. ಧರಣಿಯ ಮೇಲೆ ಸಮರ್ಥಶಾಲಿಗಳಿದ್ದರೆ ಕಟ್ಟಬಹುದಂತೆ. ಆಹಾ ಅವನ ಅಹಂಕಾರವನ್ನು ಮುರಿಸುತ್ತೇನೆಲಾ ಸಾರಥಿ.

ಹಂಸಧ್ವಜ: ಯಲಾ ಸಾರಥಿ ಹೀಗೆ ಬರುವಂಥವನಾಗು ಮತ್ತೂ ಹೀಗೆ ನಿಲ್ಲುವಂಥವನಾಗು. ಎಲಾ ಮಾನುಷನೆ ಯಮ್ಮ ಸಂಮುಕದಿ ಬಂದುನಿಂತು ಚಟುಲತರ ಧೈರ‌್ಯ ಶೌರ‌್ಯನಾಗಿ ನಿಟಿಲತಟಗಟಿತ ಮೃದುಕರಕಮಲವೆತ್ತಿ ನಿಟಿಲಾಭಕನಂತೆ ಮಾತನಾಡಿಸುವ ಮನುಷ್ಯ ನೀ ದಾರೊ ಯನ್ನೊಳು ಸಾರೊ.

ಹಂಸಧ್ವಜ: ಎಲಾ ಚಾರಕ ನಮ್ಮ ಅಭಿದಾನವನ್ನು ಬೆಸಗೊಳ್ಳುತ್ತೀಯ. ಹಾಗಾದರೆ ವಿಸ್ತಾರವಾಗಿ ಪೇಳುತ್ತೇನೆ ಚಿತ್ತವಿಟ್ಟು ಕೇಳುವಂಥವನಾಗೆಲಾ ಸಾರಥಿ.

ಎಲೈ ಸಾರಥಿ ಈ ಬ್ರಂಹ್ಮಾಂಡ ಮಧ್ಯದೊಳು ಪರಿಪರಿವಿಧದಿಂದ ಮೆರೆಯುವ ಕನಕ ವಜ್ರ ವೈಡೂರ‌್ಯ ಗೋಮೇಧಿಕ ಪುಷ್ಯರಾಗ ಮರಕತಾಮಾಣಿಕ್ಯ ನೀಲಪ್ರವಾಳಗಳಿಂದ ರಚಿಸಲ್‌ಪಟ್ಟ, ಚಂಪಕಾಪುರವನ್ನು ಪರಿಪಾಲಿಸುವ ಹಂಸಧ್ವಜ ರಾಜನೆಂದು ತಿಳಿಯಲಾ ಸಾರಥಿ.

ವನಪಾಲಕ: ನಮೋ ನಮೋ ರಾಜಾ ಮಾರ್ತಾಂಡತೇಜ

ಹಂಸಧ್ವಜ: ನಿನಗೆ ಮಂಗಳವಾಗಲಯ್ಯ ಚಾರನೆ. ಭಲೈ ವನ ಪಾಲಕರೆ ದೇವೇಂದ್ರನ ಉದ್ಯಾನವನಕೆ ಮಿಗಿಲಾದ ನಮ್ಮ ವನದ ಸಂರಕ್ಷಣೆಯನ್ನು ಬಿಟ್ಟು ತ್ವರಿತದಿಂದ ಬಂದ ಕಾರಣವೇನು ಪೇಳುವಂಥವರಾಗೆಲಾ ವನಪಾಲಕರಿರಾ॥

ವನಪಾಲಕ: ಅಯ್ಯ ರಾಜ ನಮ್ಮ ವುಪವನಕ್ಕೆ ಧರ್ಮರಾಯರ ಯಜ್ಞದ ಕುದುರೆ ಬಂದಿರಲಾಗಿ ಅದನ್ನು ಕಟ್ಟಿ ಇರುತ್ತೇನೆ. ಅದರಿಂದ ಜಾಗ್ರತೆಯಾಗಿ ಹೊರಡಬೇಕಿದೆ ರಾಜಾ ಮಾರ್ತಾಂಡತೇಜಾ.

ಹಂಸಧ್ವಜ: ಎಲೈ ದೂತ ಶಿಖಾಮಣಿ ನೀನು ಕುದುರೆಯನ್ನು ಕಟ್ಟಿರುವುದು ಬಹಳ ಸಂತೋಷ ವಾಯಿತು ಅತಿ ಜಾಗ್ರತೆಯಿಂದ ಬರುತ್ತೇನೆ ಹೊರಡುವಂಥವನಾಗೆಲಾ ವನಪಾಲಕನೆ,

ಹಂಸಧ್ವಜ: ಎಲಾ ಸಾರಥಿ. ಗಜನಗರವನ್ನು ಪರಿಪಾಲಿಸುವ ಧರ್ಮರಾಯನು ಯಾಗವನ್ನು ಮಾಡಲು ನಿಚ್ಚಯಿಸಿ ಯಜ್ಞದ ಕುದುರೆಯ ಕಾವಲದೋಳ್ ಕಟ್ಟಿಸಿ ಬಿಡಿಸಿರಲು ಆ ಕುದುರೆಯು ನಮ್ಮ ನಂದನವನಕ್ಕೆ ಬರಲು ತಟ್ಟನೆ ವನಚರರು ಅಟ್ಟಹಾಸದಿಂದ ಕಟ್ಟಿಬಂದು ಎನ್ನೊಡನೆ ಪೇಳಿದರಾದ ಕಾರಣಾ ಅತಿಜಾಗ್ರತೆ ಇಂದ ಪೋಗಿ ಯಮ್ಮ ಅಷ್ಠ ಪ್ರಧಾನರೊಳ್ ಮಹಾಶ್ರೇಷ್ಠನಾದ ಸುಮತಿ ಎಂಬ ಮಂತ್ರಿ ಶಿಖಾಮಣಿಯನ್ನು ಕರೆದುಕೊಂಡು ಬರುವಂಥವನಾಗೆಲಾ ಚಾರ ವರಮಣಿಹಾರ॥

(ಮಂತ್ರಿ ಬರುವಿಕೆ)

ಮಂತ್ರಿ: ಯಲಾ ಮಾನುಷನೆ ಹೀಗೆ ಬರುವಂತಾವನಾಗು ಮತ್ತು ಹೀಗೆ ನಿಲ್ಲುವಂತಾವನಾಗು. ಎಲಾ ಸಾರಥಿ ಅಂಜದೆ ಅಳುಕದೆ ತೇಜಪುಂಜದಿಂ ಬಂದು ನಿಂದು ಅಂಜಲೀಬದ್ದನಾಗಿ ಮಂಣುಳ್ಳ ಮೃದು ವಾಕ್ಯದಿಂದ ಕೇಳುವ ಮಾನುಷ್ಯ ನೀ ಧಾರೊ ಯನ್ನೋಳ್ ನೀ ಸಾರೊ.

ಮಂತ್ರಿ: ಯಲಾ ಸಾರಥಿ ಯೀ ಕ್ಷಿತಿಯೊಳಗೆ ಮತಿ ಇಲ್ಲದೆ ಅತಿಪರಾಕ್ರಮದಿಂದೊಪ್ಪುವ ಚಂಪಕಪುರವ ಪಾಲಿಸುವ ಹಂಸಧ್ವಜ ಭೂಪಾಲರ ಸಂಮುಕದೊಳ್ ಇರುವ ಸುಮತಿ ಎಂಬ ನೀತಿಯುಳ್ಳ ಮಂತ್ರಿ ಶಿಖಾಮಣಿ ನಾನೇ ಅಲ್ಲವೇನಪ್ಪಾ ಸಾರಥಿ ಯಲಾ ಮಾನುಷನೆ ಈ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಚಂಪಕಾಪುರದರಸು ಹಂಸಧ್ವಜ ಭೂಪಾಲರು ಕರೆಸಿದ ಕಾರಣ ಬಂದು ಇದ್ದೇನೆ ಭೇಟಿಯನ್ನು ಮಾಡಿಸುವಂತಾವನಾಗೊ ಚಾರ ವರಪಣಿಹಾರ.

ಸುಮತಿ: ನಮೊ ನಮೋ ರಾಜ ಮಾರ್ತಾಂಡ ತೇಜ.

ಹಂಸಧ್ವಜ: ಐಶ್ವರ‌್ಯವಂತನಾಗಪ್ಪ ಮಂತ್ರಿ ಯನ್ನ ಕಾರ್ಯ ಸ್ವತಂತ್ರಿ.

ಮಂತ್ರಿ: ಅಯ್ಯ ರಾಜ ಎನ್ನನ್ನಿಷ್ಠು ಜಾಗ್ರತೆ ಇಂದ ಕರಸಿದ ಕಾರಣವೇನೊ ಅತಿಜಾಗ್ರತೆ ಇಂದ ಪೇಳಬೇಕೈ ರಾಜ ಮಾರ್ತಾಂಡ ತೇಜಾ.

ಪದ

ಕಟ್ಟಿಸಲೇನೊ ನಾನು  ಮಂತ್ರೀಶನೆ  ಕಟ್ಟಿಸ
ಲೇನೊ ನಾನು ॥ಹಸ್ತಿಪುರದ ಸಿಸ್ತಿನಕು
ದುರೆಯಾ  ವಾಸ್ನಾರದಲಿ ಬಿಡಿಸಿ ॥ಪ ॥
ಅರ್ಜುನ ಅನಿರುದ್ಧರು  ವೃಷಕೇತು
ಸಾತ್ಯಕಿ  ಗರ್ಜಿಸುತಲೆ ಬಂದರು ॥ವನ
ದೊಳಿರುವದೆಂದು  ಚರರಿಂದ ಕೇಳ್ದೆ
ನೋ ಘನ ಭೀಮೇಶನ ದಯದಿ ॥ಕಟ್ಟಿಸ ॥

ಹಂಸಧ್ವಜ: ಅಯ್ಯ ಮಂತ್ರಿ ಹಸ್ತಿನಾಪುರದರಸು ಧರ್ಮರಾಯನು ಅಶ್ವಮೇಧಯಾಗವಂ ಮಾಡಲಿಚ್ಚಯಿಸಿ  ತನ್ನ ಬಿರುದಂ ಬರೆದು ಕುದುರೆಯ ಕಪಾಲದೊಳ್ ಕಟ್ಟಿಸಿ ಅದರ ಸಂರಕ್ಷಣೆಗೆ ಅರ್ಜುನ ಅನಿರುದ್ಧ ವೃಷಕೇತು ಸಾತ್ಯಕಿ ಮೊದಲಾದ ವೀರಾಧಿವೀರರ ಸಮೂಹದೊಡನೆ ಬಿಡಿಸಿರಲಾಗಿ ದೇಶಾದಿ ದೇಶಂಗಳಂ ಸಂಚರಿಸಿಕೊಂಡು ನಮ್ಮ ನಂದನವನಕ್ಕೆ ಪ್ರವೇಶವಂಗೈದ ಕಾರಣ ವನಪಾಲಕರು ಕುದುರೆಯಂ ಕಟ್ಟಿ ಯನ್ನೊಡನೆ ವುಸುರಲಾಗಿ ವಾಸುಕಿಪುರದ ಭೀಮೇಶನ ದಯದಿಂದ ಇದರ ಆಲೋಚನೆಯನ್ನು ಪೇಳಬೇಕೈ ಮಂತ್ರಿ ಯನ್ನ ಕಾರ‌್ಯಸ್ವಸಂತ್ರಿ ॥

ಪದ

ಧರ್ಮಜನಶ್ವವಾ  ಮರ್ಮವ ತಿಳಿಯ
ದೆ  ನಿರ್ಮಲದಲಿ ಕಟ್ಟಬಹುದೆ ॥ ನೀ ಬಹುದೆ ॥
ದುಷ್ಠದಾನವಾ ಮಾನಾ  ಅಷ್ಠ ಪರಿ
ಣಾಮ  ಕೆಟ್ಟ ಕಾರ್ಯಂಗಳಾಗುವವೊ ॥ತೋರುವವು ॥

ಮಂತ್ರಿ: ಅಯ್ಯ ರಾಜ ಧರ್ಮರಾಯನು ತನ್ನ ಬಂಧು ವರ್ಗಗಳಂ ಸಂಹರಿಸಿದ ದೋಷ ನಿವೃತ್ತಿಗೋಸ್ಕರ ಅಶ್ವಮೇಧಯಾಗವಂ ಮಾಡುವನಾಗಿ ಶತ್ರು ಜಯಪ್ರದಕೋಸ್ಕರವಾಗಿ ಬಿಡಿಸಿರುವ ಕುದುರೆಯನ್ನು ದುಷ್ಠತನದಿಂದ ಕಟ್ಟಿಸುವದು ನಷ್ಠವಲ್ಲದೆ ಶ್ರೇಷ್ಠವಲ್ಲದ್ದಯ್ಯ ರಾಜಾ ರವಿ ಸಮತೇಜ.

ಪದ

ಶಂಕು ಚಕ್ರಗಳನ್ನು  ಬಿಂಕದಿಂದರಿ
ಶಿವಾ  ಪಂಕಜೋಧ್ಭವ ಬ್ರಹ್ಮ ಜನಕಾ ॥ತಿಳಿಹನಕಾ ॥ಪ ॥
ನರನ ಸಂರಕ್ಷಣೆಗೆ
ಕರುಣಿ ತಾನಾಗಿರ್ದು ರಣವ ಬಯಸವ
ರೇನೊ ರಾಜ ॥ಕೇಳೊ ಭೋಜ ॥ಪ ॥
ಉರುಗಪುರೀಶನ  ಚರಣವ ಸ್ಮರಿಸುತಾ
ತ್ವರಿತದಿಂದಲಿ ಹರಿಯ ॥ನೀ ಹರಿಯೇ ॥

ಮಂತ್ರಿ: ಹೇ ರಾಜಾ ಶಂಕುಚಕ್ರಗಳಂ ಬಿಂಕದಿಂದ ಧರಿಸಲ್ಪಟ್ಟ ಪಂಕಜೋದ್ಭವನಾದ ಬ್ರಹ್ಮನಂ ಪಡೆದ ದ್ವಾರಕೀವಾಸನಾಥ ಶ್ರೀಕೃಷ್ಣಮೂರ್ತಿಯೂ ಪಾಂಡವರ ಪಕ್ಷವೆಂದು ಬಿರುದಂ ಧರಿಸಲ್ಪಟ್ಟವನಾಗಿಯೂ ಅರ್ಜುನನ ಪಂಚಭೂತಂಗಳಾಗಿ ನರನಾರಾಯಣರೆಂಬ ಭಾವವಂ ತಿಳಿದು ಇಂಥಾ ಅಜ್ಞಾನ ಬುದ್ಧಿಯಿಂದ ಕುದುರೆಯಂ ಕಟ್ಟಿಸಿ ಕೆಡುವದು ಯೆಷ್ಠು ಮಟ್ಟಿಗೂ ವುಚಿತವಲ್ಲಾ. ಯೀಗಲಾದರು ಸುಜ್ಞಾನವಂ ಕೈಕೊಂಡು ವುರುಗಪುರೀಶನಾದ ಮಾರುತೀಶನ ಚರಣವಂ ಭಜಿಸುತ್ತಾ ಸುಸ್ಥಿರಮತಿಯಿಂದ ಕುದುರೆಯಂ ಬಿಡಿಸಿ ಸುಖಪಡುವುದು ವಳ್ಳೆಯದಯ್ಯ ರಾಜಾ ಮಾರ್ತಾಂಡ ತೇಜಾ. ಹೇ ರಾಜಾ ಯಿದೂ ಅಲ್ಲದೆ ನೊಣಗಳು ಹುಣ್ಣನ್ನೆ ಬಯಸುವವೂ ಅಂದಂತೆ ಪಾರ್ಥನು ರಣವನ್ನೇ ಬಯಸುವನು. ಸರ್ವಜ್ಞರು ಸತ್ಕಾರ್ಯವನ್ನೆ ಬಯಸುವರು. ಆದ ಕಾರಣ ನೀನು ಸತ್ಪುರುಷನಾಗಿ ವಳ್ಳೆಯ ಕಾರ‌್ಯವನ್ನು ಬಯಸದೆ ದುಷ್ಟಕಾರ‌್ಯಂಗಳಂ ಬಯಸುವರೇನೊ ರಾಜಾ ಮಾರ್ತಾಂಡತೇಜ.

ರಾಜ: ಅಯ್ಯ ಮಂತ್ರಿ ವುದಾರಿಯಾದ ಪುರುಷನು ದ್ರವ್ಯವನ್ನು ತೃಣವಾಗಿ ಕಾಣುವನು ವೀರನಾದವನು ಮರಣವೆಂದರೆ ತ್ರುಣವಾಗಿ ಕಾಣುವನು. ವಿರಕ್ತನಾದವನು ನಾರಿಯನ್ನು ತೃಣವಾಗಿ ಕಾಣುವನು. ನಿಸ್ಪಹನಾದವನು ಜಗತ್ತೆಲ್ಲಾ ತೃಣವಾಗಿ ನೋಡುವರಾದ ಕಾರಣ ನಾನು ಕ್ಷತ್ರಿಯನಾಗಿ ಸಂಗರಕ್ಕೆ ಭಯಪಟ್ಟರೆ ಅಪಕೀರ್ತಿಯ ನರಕವು ಪ್ರಾಪ್ತವಾಗುವುದಾದ ಕಾರಣ ಯೆಷ್ಟು ಮಟ್ಟಿಗು ಕುದುರೆಯನ್ನು ಬಿಡುವುದಿಲ್ಲವಯ್ಯ ಮಂತ್ರಿ ಕಾರ‌್ಯದಲ್ಲಿ ಸ್ವತಂತ್ರಿ.

ಮಂತ್ರಿ: ಹಾಗಾದರೆ ನಾನು ಪೋಗಿ ಬರುತ್ತೇನಯ್ಯ ರಾಜಾ ಸಿತಕಲ್ಪ ಭೋಜ

ರಾಜ: ಪೋಗಿ ಬರುವಂಥವನಾಗೈಯ್ಯ ಮಂತ್ರಿ ಕಾರ‌್ಯದಲಿ ಸ್ವತಂತ್ರಿ. ಭಲಾ ಸಾರಥಿ ನೀನು ಜಾಗ್ರತೆ ಇಂದ ಪೋಗಿ ಯನ್ನ ಮುದ್ದು ಕುಮಾರನನ್ನು ಜಾಗ್ರತೆ ಇಂದ ಕರೆದುಕೊಂಡು ಬರುವಂಥವನಾಗೋ ಸಾರಥಿ.

ಸುಧನ್ವ: ಯಲಾ ಸಾರಥಿ ಹೀಗೆ ಬರುವಂಥವನಾಗು ಮತ್ತೂ ಹೀಗೆ ನಿಲ್ಲುವಂತಾವನಾಗು. ಯಲಾ ಸಾರಥಿ ಈ ಸಭಾಸ್ಥಾನದಲ್ಲಿ ಬಂದು ನಿಂತು ಕಿಂಚಿತ್ತು ಭೀತಿ ಇಲ್ಲದೆ ಚಟುಲತರದಿಂದ ಅಂಜಲೀಬದ್ದನಾಗಿ ಯನ್ನ ಎದುರಿನಲ್ಲಿ ನಿಂತು ಬೆಸಗೊಳ್ಳುವ ಮಾನುಷ ನೀ ಧಾರೋ ಹೀಗೆ ಬಾರೆಲಾ ಸಾರಥಿ.

ಯಲಾ ಸಾರಥಿ. ಶ್ರೀ ಮದುದ್ದಂಡ ಧರಾಮಂಡಲವೆಂಬ ನವಖಂಡ ಪೃಥ್ವಿಯೊಳ್ ಚಂಪಕ ನಗರವನ್ನು ಪರಿಪರಿಯ ವಿಧದಿಂದ ಪಾಲಿಸುವ ಮಾರ್ತಾಂಡ ವಂಶದೊಳ್ ಇಂದುಧರನಂತೆ ಪುಟ್ಟಿ ಹಂಸಧ್ವಜ ಭೂಕಾಂತನ ಅನ್ವಯದಿಂದುದಿಸಿದ ಶಾಂತಸುಖದಿಂದಿರುವ ನಿಟಿಲಮಣಿ ಮಕುಟನಾಗಿ ಅಂದ ಚಂದದಿಂದ ಮಾರ‌್ಮಲೆವ ಮಂಡಲಾಧಿಪರ ತಂಡೋಪತಂಡದಿಂ ನಿಗಮಪಾಂಡಿತ್ಯ ಕರ್ಕಶಖಂಡಗಳನ್ನು ಚಂಡಪರಾಕ್ರಮಿಯಾಗಿ ಈ ಭೂಮಂಡಲದೊಳ್ ಮಾರ್ತಾಂಡ ತೇಜದಿಂದೊಪ್ಪುವ ಸುಧನ್ವ ರಾಜನೆಂದು ತಿಳಿಯುವಂಥವನಾಗೊ ಚಾರ ವರ ಫಣಿಹಾರ.

ಅಯ್ಯ ಸಾರಥಿ ಯಮ್ಮ ಜನಕನಾದ ಹಂಸಧ್ವಜ ಭೂಪಾಲರು ಕರೆಸಿದ ಪ್ರಯುಕ್ತ ಬಾಹೋಣವಾಯಿತು. ಅತಿ ಜಾಗ್ರತೆ ಇಂದ ಭೇಟಿಯನ್ನು ಮಾಡಿಸುವಂಥವನಾಗೊ ದೂತಾ ರಾಜ ಸಂಪ್ರೀತ.

ಸುಧನ್ವ: ನಮೋ ನಮೊ ಜನಕ ಅರಿಗಳಸಹಾಯಕ.

ರಾಜ: ದೀರ್ಘಾಯುಷ್ಯಮಸ್ತು ಏಳಪ್ಪ ಕಂದ ನೀ ಬಹುಚಂದಾ.

ಸುಧನ್ವ: ಹೇ ಜನಕ ಯನ್ನಿಷ್ಟು ಜಾಗ್ರತೆ ಇಂದ ಕರೆಸಿದ ಕಾರಣವೇನು  ಯಾರೊಡನೆ ಯುದ್ಧಕ್ಕೆ ಸನ್ನದ್ಧನಾಗಿ ಪೋಗಬೇಕೋ ಧಾವ ರಾಯರಿಂದ ಕಪ್ಪವನ್ನು ತಂದು ನಿಮ್ಮ ಪಾದಕ್ಕೆ ವಪ್ಪಿಸಬೇಕೊ ಜಾಗ್ರತೆಯಾಗಿ ಪೇಳಬೇಕಯ್ಯ ತಂದೆ ನಿಮ್ಮ ಪಾದಕ್ಕೆ ಶರಣೆಂದೆ.

ಪದ

ಧರ್ಮನ ಯಜ್ಞದ ಕುದುರೆ ಬಂದಿರು
ವದು  ಮರ್ಮವ ನೀ ಕೇಳೊ ॥ಮಗನೆ ॥
ನಿರ್ಮಲದಲಿ ನಾ  ಕಟ್ಟಿಸಿ ಇರು
ವೆನು  ಅನ್ವಯವನು ಕೇಳೊ ॥ಮಗನೆ ॥

ಹಂಸಧ್ವಜ: ಹೇ ಕಂದ, ಹಸ್ತಿನಾಪುರದರಸು ಧರ್ಮರಾಯನು ಅಶ್ವಮೇಧಯಾಗವನ್ನು ಮಾಡಲಿಚ್ಛಿಸಿ ದೇಶಂಗಳ ಮೇಲೆ ಕುದುರೆಯನ್ನು ಸಂಚಾರಕೋಸ್ಕರ ಬಿಡಿಸಿರಲು ಆ ಕುದುರೆಯು ನಮ್ಮ ಮಧ್ಯವನಕ್ಕೆ ಬರಲು  ಅದನ್ನು ಕಟ್ಟಿಸಿ ಇರುತ್ತೇನಪ್ಪ ಕಂದಾ ನೀ ಬಹು ಚಂದಾ.

ಪದ

ವಿಜಯನು ಯುದ್ಧಕೆ ಬಿಜಯ
ಮಾಡಿರುವನು  ಭುಜಗನಂದದಿ ಕೇಳೊ ॥ನೀ ಕೇಳೋ ॥
ವಾಸುಕಿಪುರಿ ಭೀಮೇಶನ ದಯದಲಿ  ಸುಸ್ಥಿ
ರದಲ್ಲಿ ನಿಂದೂ ॥ತಾ ಮುಂದು ॥
ಅಸುರ ವನಸುತಾ  ಈ ಸಮಯದಿ ಬಹು  ಘಾಸಿ
ಗೈವನೀಗಾ  ತಾ ಬೇಗಾ ॥

ಹಂಸಧ್ವಜ: ಹೇ ಕಂದ, ವಿಜಯನಾದ ಅರ್ಜುನನೆ ಮೊದಲಾದ ಸೇನಾ ಸಮೂಹವೆಲ್ಲಾ ಆದಿಶೇಷನೋಪಾದಿಯಲ್ಲಿ ಮೆರೆಯುತ್ತಾ ಶರಸಂಧಾನಯುಕ್ತರಾಗಿ ಬರುತ್ತಾ ಇರುವರಂತೆ. ಅಂತೊಪ್ಪುವ ಅಧ್ವರಕ್ಕೆ ನೀನು ವುದ್ಯುಕ್ತನಾಗಿ ಪೋಗಿ ಅ ಸುರಪನ ಸುತನಾದ ಪಾರ್ಥನನ್ನು ಗೆಲ್ಲುವದಕ್ಕೆ ವಾಸುಕಿಪುರಿ ಭೀಮೇಶನನ್ನು ಧ್ಯಾನಿಸುತ್ತಾ ಪೋಗಬೇಕಪ್ಪಾ ಬಾಲಾ ಸುಂದರಶೀಲಾ ॥ಅಲ್ಲದೆ ಶಾಲ್ಮೀಲವೆಂಬ ಅರಣ್ಯಕೆ ರಾತ್ರಿ ಚಂದ್ರನೆ ದೀಪ ಹಗಲು ಸೂರ‌್ಯನೆ ದೀಪ ಮೂರುಲೋಕಕೆ ಧರ್ಮವೆ ದೀಪ ಸುಪುತ್ರನಾದ ಮಗನಿಂದ ತನ್ನ ಕುಲಕೋಟಿಗೆಲ್ಲಾ ದೀಪವೆಂಬುವ ಶಾಸ್ತ್ರವುಂಟು. ಆದಕಾರಣ ನಿನ್ನಂಥ ಸುಪುತ್ರನಾದ ಮಗನಿರಲು ಯನಗೆ ಕೊರತೆ ಏನಿರುವದು ಜಾಗ್ರತೆ ಇಂದ ಅಧ್ವರಕ್ಕೆ ಪೋಗಬೇಕೆಂದು ಕರೆಸಿ ನಿನ್ನ ಮನೋಭಿಪ್ರಾಯವೇನು ಪೇಳಬೇಕಪ್ಪಾ ಬಾಲಾ ಜ್ಞಾನದಲಿ ಸುಶೀಲಾ ॥

ಪದ

ಯಾತಕೈಯಾ ಇಷ್ಟು ಚಿಂತೆ  ಭೂತಳಾ
ಧಿಪ  ಮಾತು ನುಡಿದೇನ ಮುಂದೆ ಮಾತು ಲಾಲಿಸೊ ॥

ಸುಧನ್ವ: ಹೇ ಜನಕಾ ಈ ಭೂಮಿಯಲ್ಲಿ ತಿಳಿಯದ ಮೂಢರಾಡುವಂತೆ ವುಪಚರಿಸಿ ಮಾತನಾಡುವದು ಸರಿಯಲ್ಲಾ. ಯನ್ನ ಏಕಚಿತ್ತ ಮನೋಭಾವವನ್ನು ನಿನು ತಿಳಿದವನಾಗಿ ಈ ರೀತಿ ಪೇಳಬಹುದೇನೈಯ್ಯ ಜನಕಾ ಅರಿಗಳಸಹಾಯಕ.

ಪದ

ವಿಜಯನಲ್ಲಿಗೆ ಪೋಗಿ ಅವಗೆ  ಅವನು
ಬರದಿಹ  ಬರಹಾ ಕೆಡಿಸಿ ಮೆಚ್ಚುವಂತೆ ॥
ನಿಜವ ತೋರುವೆ ॥ಪ ॥

ಸುಧನ್ವ: ಹೇ ತಂದೆ, ವಿಜಯನಾದ ಅರ್ಜುನನ ಪಣೆಯಲ್ಲಿ ಬ್ರಹ್ಮನು ಬರೆದಿರುವ ಲಿಪಿಯನ್ನು ಕೆಡಿಸಿ ಅಜಸುರಾದಿಗಳು ಮೆಚ್ಚುವಂತೆ ವಾಸುಕಿಪುರೀಶನಾದ ಮಾರುತೀಶನ ದಯದಿಂದ ಯುದ್ಧವಂ ಮಾಡಿ ನಿಮ್ಮ ಮನಸ್ಸಿನ ಕ್ಲೇಶಂಗಳಂ ಪರಿಹರಿಸಿ ಸಂತೋಷಪಡಿಸುತ್ತೇನೊ ಜನಕ ಅರಿಗಳಸಹಾಯಕ.

ಶ್ಲೋಕ

ಹಂದಿಗೆ ಗಜಕನ್ಯವ್ಯಾತಕ್ಕೆ  ತಂದೆಯ
ಮಾತನ್ನು ಮೀರಿ  ನಡೆಯುವ ಮಗನಿದ್ಯಾ
ತಕ್ಕೆ ಕಂದಿದ ಪುಷ್ಪವಿದ್ಯಾತಕ್ಕೆ
ಮುಂದರಿಯದ ಮಂತ್ರಿ ಯಾತಕ್ಕೆ

ಸುಧನ್ವ: ಹೇ ಜನಕ ಹಂದಿ ಗಜದಂತೆ ಮದಿಸಿದರೆ ಆನೆ ಎನಿಸಿಕೊಳ್ಳಲಾರದು. ತಂದೆಯ ಮಾತನ್ನು ಮೀರಿ ನಡೆಯುವವನು ಮಗನೆನಿಸಿಕೊಳ್ಳಲಾರನು. ಕಂದಿದ ಪುಷ್ಪವು ವಾಸನೆ ಹೊಂದಲಾರದು. ಮುಂದಿನ ಯೋಚನೆ ಅರಿಯದವನು ಮಂತ್ರಿಯೆನಿಸಿಕೊಳ್ಳಲಾರನು. ಅದರಂತೆ ಎಷ್ಟು ಮಟ್ಟಿಗೂ ನಿಮ್ಮ ಆಜ್ಞೆಯನ್ನು ಮೀರಲಾರೆನಯ್ಯ ಜನಕ ಅರಿಗಳಸಹಾಯಕ.

ಹಂಸಧ್ವಜ: ಹಾಗಾದರೆ ನಿನ್ನ ಮಾತುಗಳನ್ನು ನಂಬುತೇನೈಯ್ಯ ಬಾಲಾ ಜ್ಞಾನದಲಿ ಸುಶೀಲಾ.

ಸುಧನ್ವ: ಯನಗೆ ಅಪ್ಪಣೆಯನ್ನು ಕೊಟ್ಟರೆ ಪೋಗಿ ಬರುತೇನೈಯ್ಯ ತಂದೆ.

ಹಂಸಧ್ವಜ: ಹಾಗಾದರೆ ಪೋಗಿ ಬರಬಹುದಪ್ಪ ಬಾಲಾ ಸುಗುಣ ಶೀಲಾ.