ದ್ವಿಪದೆಯರಕುಲ ಕಾಂಭೋದಿ

ಶ್ರೀ ಸರಸಿಜ ನೇತ್ರೆ ಶ್ರಿತಜನ ಸ್ತೋತ್ರೆ ಭಾಸುರತಿ
ಗಾತ್ರೆ  ಉಭಯ ಚರಿತ್ರೇ ರೂಪುರೇಖೆಯಲಿ  ರತಿಗಿಂತಧಿಕ
ವಾದ  ಕಮಲದಂತಿರ್ಪ ಅಂದದ ಮರಮ ॥
ಕುಟಿಲಕುಂತಳೆ ಚಾರು  ಕಟಿಯಳೆ ಬಾಲೆ  ಕಲಕೀರ
ವಾಣಿ ಮಂಜುಳ ಮಧುರವಾಣಿ ॥ಮದಗಜ
ಯಾನೆ ಮನಸಿಜ ಮಂದಗಮನೆ  ಮನ್ಮಥ ಕಠಾರಿ
ಅಸಮಸುಂದರ ಗಾತ್ರೆ  ಭುವನ ಕಳನೇತ್ರೆ ॥
ಮನಸಿಜನರಗಿಳಿ  ಮದನ ಕೈಮುರಳಿ  ಯಳೆ ಬಳ್ಳಿಯಂದದಲಿ
ಪೊಳೆಯುತಾ ಸುಂದರಿಯು  ಬಟುಕುಚದ ಬಾಲೆ
ಬಹುಪುಣ್ಯಶೀಲೆ ॥ಘನತರದ ಜರತಾರಿ ಸೀರೆಯನ್ನುಟ್ಟು
ಪಂಚಮುಖಿ ನಿಲುವಾಭರಣವಿಟ್ಟು  ಗಂಧ
ಕಸ್ತುರಿ ಪುನಗು  ಜವ್ವಾ ಪೂಸಿ ॥ಮಂದಿರದಲಿ
ಸುಂದರನಾದ  ಸುತನಿಲ್ಲದಿರಲು  ಸಂದೇಹದಲಿ
ಚಂದನಗಂಧೀ ॥ಮಂದಹಾಸದಿ ಮನದಿ  ಮಾರುತೀ
ಶನ  ನೆನೆದು  ಬಂದು ತೆರೆಯೊಳಗೆ  ನಿಂದಳಾ
ಇಂದುಮುಖಿ ಅಮ್ಮಯ್ಯ ॥

ಪದ

ಸರಸಿಜಾಕ್ಷಿಯರೆನ್ನಾ ತರಳನ ತೋರಿರೆ  ಕಾಣ
ದೆಲ್ಲಿ ಪೋದನಮ್ಮ  ಕುರುಹ ಪೇಳಿರಮ್ಮ ॥ಸರಸಿಜಾ ॥

ಚಂದನಗಂಧಿ: ಅಪ್ಪಾ ಸಾರಥಿ ಹೀಗೆ ಬರುವಂಥವನಾಗು ಮತ್ತು ಹೀಗೆ ನಿಲ್ಲುವಂಥವನಾಗು. ಅಣ್ಣ ಚಾರಕಾ ಯನ್ನ ಧಾವ ರಾಯರ ಅರಸಿ ಎಂದು ಕೇಳುತ್ತಾ ಇದ್ದೀಯಪ್ಪ. ವಿದ್ಯಮಾನವನ್ನು ಚಂದದಿಂದ ಪೇಳುತ್ತೇನೆ ಕೇಳುವಂಥವನಾಗಪ್ಪ ಸಾರಥಿ. ಅಣ್ಣಯ್ಯ ಸಾರಥಿ ಯೀ ಬ್ರಹ್ಮಾಂಡ ಕಟಾಹದಿಂದೊಪ್ಪುವ ಛಪ್ಪನ್ನ ಐವತ್ತಾರು ದೇಶದೋಳ್ ಮುತ್ತಿನಂತೊಪ್ಪುವ ಚಂಪಕಾಪುರವನ್ನು ಪಾಲಿಸುವ ಹಂಸಧ್ವಜ ಭೂಪಾಲರಿಗೆ ಅರ್ಧಾಂಗಿಯೆಂದೆನಿಸಿ ಅಸಮಗುಣಗಳುಳ್ಳ ಅಂಗನೆಯರಂಗಕ್ಕೆ ಹಚ್ಚಿಕೊಳ್ಳುವ ಹಾಗೆ ಇರುವ ಚಂದನವೆಂಬೊ ಗಂಧದಂತೊಪ್ಪುವ ಪೆಸರುಳ್ಳ ಸುಂದರವಾದ ಚಂದನಗಂಧಿ ಎಂಬ ನಾಮಾಂಕಿತವುಳ್ಳಾಕೆ ನಾನೇ ಅಲ್ಲವೇನಪ್ಪ ಸಾರಥಿ.

ಅಪ್ಪಾ ಚಾರಕಾ, ಇಂದ್ರಪ್ರಸ್ತವೆಂಬ ಸುಂದರ ಪುರವಂ ಸಾಮ್ರಾಜ್ಯದಿಂದಾಳುವ ಧರ್ಮಭೂಪಾಲನು ಅಶ್ವಮೇಧಯಾಗವಂ ಮಾಡಲು ನಿಶ್ಚಯಿಸಿ ಮಂಡಲದ ಮೇಲಿಪ್ಪ ಪುಂಡುಮಾನವರ ಕೈಯೊಳ್ ಕಪ್ಪಕಾಣಿಕೆಯಂ ತಪ್ಪದೆ ತೆಗೆದುಕೊಳ್ಳುವ ನಿಮಿತ್ಯವಾಗಿ ಕುದುರೆಯನ್ನು ಬಿಡಿಸಿರಲಾಗಿ ನಮ್ಮ ವುದ್ಯಾನವನಕ್ಕೆ ಬರಲು ಯಮ್ಮ ಅರಸರು ಕಟ್ಟಿಸಿ. ಕಂದನಾದ ಸುಧನ್ವನನ್ನು ಕರೆಸಿಕೊಂಡರೆಂಬ ವಾರ್ತೆಯನ್ನು ಕೇಳಿ ಸುಂದರನೊಡನೆ ಮಾತನಾಡಲು ಬಂದು ಇದ್ದೇನೆ. ಯನ್ನ ಕಂದನಾದ ಸುಧನ್ವನು ಧಾವಲ್ಲಿ ಇದ್ದಾನೋ ತೋರಿಸುವಂಥವನಾಗಪ್ಪ. ಚಾರ ವರ ಪಣಿಹಾರಾ.

ಸುಧನ್ವ: ನಮೋ ನಮೋ ಜನನಿ ಫಣಿರಾಜ ವೇಣಿ.

ಚಂದನಗಂಧಿ: ಅತಿ ಐಶ್ವರ‌್ಯವಂಥನಾಗಪ್ಪ ಬಾಲಾ ಜ್ಞಾನದಲ್ಲಿ ಸುಶೀಲಾ.

ಸುಧನ್ವ: ಹೇ ಮಾತೆ ಹೇ ಜನನಿ, ಇಂದ್ರನ ಮಂದಿರಕಧಿಕವಾದ ಮಂದಿರವಂ ಬಿಟ್ಟು ಇಂಲೇನು ಕಾರ‌್ಯವಾಗಿ ಬಾಹೋಣವಾಯಿತಮ್ಮ ತಾಯೆ ಕರುಣದಿ ಕಾಯೆ ॥

ಚಂದನಗಂಧಿ: ಅಪ್ಪಾ  ಮಗನೆ, ಆಕಾಶದಲ್ಲಿ ಅಂದವುಳ್ಳ ಚಂದ್ರನಿಲ್ಲದಿರಲು ಕುಂದಕವಾದಂತೆ ಮಂದಿರದಲ್ಲಿ ನೀನಿಲ್ಲದಿರಲು ಸಂದೇಹವಂ ಪಟ್ಟು ನಿಮ್ಮ ಜನಕರಾದ ಹಂಸಧ್ವಜ ಭೂಪಾಲರು ಕರೆಸಿಕೊಂಡರೆಂಬ ವಾರ್ತೆಯನ್ನು ಕೇಳಿ ನಿನ್ನಲ್ಲಿ ಮಾತನಾಡಿ ಪೋಗಲು ಬಂದು ಇದ್ದೇನಪ್ಪಾ ಕಂದ ನೀ ಬಹು ಚಂದಾ.

ಸುಧನ್ವ: ಅಮ್ಮಾ ಜನನಿ ಹಸ್ತಿನಾಪುರದರಸು ಧರ್ಮರಾಜನು ಅಶ್ವಮೇಧಯಾಗವಂ ಮಾಡಲಿಚ್ಛಿಸಿ ಅಶ್ವವಂ ಬಿಡಿಸಿ ಇರಲು. ಅದು ಬಂದು ನಮ್ಮ ವುದ್ಯಾನವನದೊಳು ನಿಲ್ಲಲು ವನಪಾಲಕರು ಕಟ್ಟಿ ನಮ್ಮ ಜನಕನಾದ ಹಂಸಧ್ವಜ ಭೂಪಾಲಕರಿಗೆ ತಿಳುಹಲಾಗಿ ಯುದ್ಧವಂ ಮಾಡಬೇಕೆಂದು ಯನ್ನನ್ನು ಕರೆಸಿದ ಪ್ರಯುಕ್ತ ಬಂದು ಇದ್ದೇನೆ. ನೀನು ಎಷ್ಟು ಮಾತ್ರಕು ಪೇಳಲಾಗದು. ಜಾಗ್ರತೆ ಇಂದಾ ವೋಗುವಂಥವಳಾಗಮ್ಮಾ ಮಾತೆ. ಲೋಕ ಪ್ರಖ್ಯಾತೆ.

ಪದ

ಬ್ಯಾಡೊ ಮಗನೆ ರಣಕೆ ಪೋಗಲು  ಬ್ಯಾ
ಡೊ ಮನಿಗೆ ಬಾರೋ ಪೋಗನದಕೆ
ನೇಮವ ಕೊಟ್ಟವ  ಯಾರೋ ಯನಗೇ ತೋರೋ ॥

ಚಂದನಗಂಧಿ: ಅಪ್ಪಾ ಮಗನೆ ಸರಸಿಜನಂತೊಪ್ಪುವ ಸುಂದರ ಸುತನೆ ಕೇಳು  ಸಮುದ್ರವು ಮೆರೆತಪ್ಪಿ ಬರುವಂತೆ ಮಾರ್ಬಲದೊಡನೆ ಯುದ್ಧವಂ ಮಾಡಬೇಕೆಂದು ನಿನಗೆ ಆಜ್ಞೆಯನ್ನು ಕೊಟ್ಟವರ‌್ಯಾರೊ ಯನಗೆ ಪೇಳಬೇಕಪ್ಪ ಬಾಲಾ ಸುಂದರಶೀಲಾ ॥

ಪದ

ಹಣೆಯು ಗಟ್ಟಿ ಯಂದು ಕಲ್ಲುಕಣಿಯ ಹಾಯ್ವರೆ
ಸೆಣಸುವಂತ ಕಾರಣದಭೀಷ್ಠೆಯಣೆ
ಬಹುದೆ ಮಗನೆ ॥ಬ್ಯಾಡವೊ ॥

ಚಂದನಗಂಧಿ: ಅಪ್ಪಾ ಮಗನೆ ಹಣೆಯಂ ಗಟ್ಟಿಯಂದು ಕಲ್ಲನ್ನು ಹಾಯ್ವರೆ ಭಾಷೆಯಂ ಮಾಡಿ ಪೋಗಲು ಸೋಲುಗೆಲವು ತಿಳಿಯದು. ಆದಕಾರಣ ತಿಳಿಯದೆ ಇರುವ ಹಸುಮಗುವಿಗೆ ಇಂಥಾ ಮಾತುಗಳನ್ನು ಹೇಳಿದವರ‌್ಯಾರು. ಯಂನೊಡನೆ ಪೇಳಬೇಕಪ್ಪಾ ಕಂದಾ ನೀ ಬಹುಚಂದಾ ॥

ಪದ

ವುರಗಪುರದೊಳಿರುವ ಹರಿಯಾ  ಸ್ಥಿರದಿ
ಸ್ಮರಿಸುತಾ ಕರುಣದಿಂದಾ ಕಾಯಲೆಂದು  ಹ
ರುಶದಿಂದ ಪೇಳೊ ಕಂದಾ ॥ಬ್ಯಾಡವೊ ॥

ಚಂದನಗಂಧಿ: ಅಪ್ಪಾ ಕಂದಾ ವುರಗಪುರಿವಾಸನಾದ ಮಾರುತೀಶನನ್ನು ಭಜಿಸುತ ಮಂದಿರದಲ್ಲಿ ಇರದೆ ಭಾಷೆಯಂ ಮಾಡಿ ಪೋಗುವದು ವುಚಿತವಲ್ಲಾ. ಮಂದಿರಕ್ಕೆ ಬಂದು ಆನಂದದಿಂದಾ ಆಡಿಕೊಡು ಇರಬಹುದಪ್ಪಾ  ಬಾಲಾ ಸುಂದರಶೀಲಾ.

ಪದ

ತಡೆಯಾಬ್ಯಾಡ ಮಾತೆ ರಣದ  ಗೊಡವೆ
ನಿನಗ್ಯಾತಕಮ್ಮಾ ಬಿಡು ಬಿಡು ನಿನ್ನ ಮನದ ದುಗುಡ
ಕಡು ಹರುಷದಿ ಕಳುಹಿಸದೇ ॥ಬೇಡವೇ ॥

ಸುಧನ್ವ: ಹೇ ಜನನಿ, ಈ ಸೃಷ್ಠಿಯನ್ನು ಕುಕ್ಷಿಯೊಳಗಿಟ್ಟು ರಕ್ಷಿಸುತಿರ್ಪ ಪಕ್ಷಿವಾಹನನಾದ ಶ್ರೀಕೃಷ್ಣನು ಮೋಕ್ಷವನ್ನು ಕರುಣಿಸುವದಕ್ಕೆ ಕರ್ತನಾಗಿರಲು ಧಾವ ಕಾರ‌್ಯವು ಸಾಫಲ್ಯವಲ್ಲದೆ ಸರ‌್ವಥಾ ಹುಸಿಯಾಗಲಾರದು. ಇಂತಾ ಕಾರ‌್ಯಕ್ಕೆ ಪೋಗುತ್ತಿರಲು ತಡೆಯುವದು ವುಚಿತವಲ್ಲವಮ್ಮಾ ಮಾತೆ ಲೋಕಪ್ರಖ್ಯಾತೆ.

ಪದ

ಸ್ರಿಷ್ಠಿಯೊಳಗೆ ಸರ‌್ವಶ್ರೇಷ್ಠ ಕೃಷ್ಣನಿರಲು
ಕಷ್ಟವಹುದೇ  ನಿಷ್ಠೆಯಿಂದ ಪೋಪಿ ಮನದ
ಭೀಷ್ಠೆಯನೆ  ರವೆಗಿಸಮ್ಮಾ ॥ಬೇಡುವೆ

ಸುಧನ್ವ: ಹೇ ಜನನಿ, ಸೃಷ್ಠಿಯೊಳಗೆ ಸರ‌್ವಶ್ರೇಷ್ಠನಾಗಿರತಕ್ಕಂಥ ಶ್ರೀಕೃಷ್ಣನ ದಯಾ ಸಹಜವಾಗಿದ್ದದಾದರೆ ಯಾವ ಕಾರ‌್ಯವು ಸಫಲವಲ್ಲದೆ ವುಸಿಯಾಗದಾದ ಕಾರಣ ನಾನು ಪೋಗಿ ಬರುತ್ತೇನಮ್ಮಾ ಮಾತೆ ಸುಲಲಿತೇ॥

ಪದ

ವುರಗಪುರಿವಾಸನಾದ  ಮಾರುತೀಶನ
ಭಜಿಸಿ  ಕರುಣದಿಂದಲಾಶೀರ‌್ವದಿಸಿ  ಭರ
ದೋಳ್ ಆಗ್ನೆ ಕರುಣಿಸಮ್ಮಾ ॥ಬೇಡುವೆ ॥

ಸುಧನ್ವ: ಹೇ ಮಾತೆ, ನಗಧರನಾದ ಶ್ರೀ ಕೃಷ್ಣನ ಪಾದಾರವಿಂದಗಳಂ ನಂಬಿ ಉತ್ಸಾಹದಿಂದ ನರನೊಡನೆ ಯುದ್ಧವಂ ಮಾಡಲು ಸಂತೋಷಪಟ್ಟು ಹೋಗುತ್ತಿರಲು ವುರಗಪುರೀಶನಾದ ಮಾರುತೀಶನೂ ಕರುಣಿಸಿ ಕಾಯಬೇಕೆಂದು ಹರಸಿ ಆಶೀರ‌್ವಾದವಂ ಕೊಟ್ಟು ಕಳುಹಿಸದೆ ಮತ್ತೊಂದು ಪರಿ ಯೋಚಿಸುತ್ತ ಪೋಗಕೂಡದೆಂದು ತಡೆಯುವದು ಸರ‌್ವಥಾ ಸಹಜವಲ್ಲವಮ್ಮಾ ಮಾತೆ ಲೋಕಪ್ರಖ್ಯಾತೆ.

ಹೇ ಜನನಿ, ಈ ಜೀವವು ಯೌವನವೂ ನಾರಿಯು ಮಕ್ಕಳು ಈ ಭೂಮಿಯಲ್ಲಿ ಅಸ್ಥಿರವಲ್ಲದೆ ಸ್ಥಿರವಲ್ಲವು. ಕೀರ್ತಿಯು ಧರ್ಮವು ಸೂರ‌್ಯ ಚಂದ್ರಾದಿಗಳು ಇರುವ ಪರಿವಿಗು ಸ್ಥಿರವಾಗಿ ನಿಲ್ಲುವುದರಿಂದ ತಮ್ಮ ಗರ್ಭದಿಂದುದಿಸಿದ್ದಕ್ಕೆ ಅರ್ಜುನನೊಡನೆ ಯುದ್ಧವಂ ಮಾಡಿ ಶ್ರೀಕೃಷ್ಣನ ಪಾದಾರವಿಂದಂಗಳಂ ಕಂಡು ಸಾಯುಜ್ಯವಂ ಹೊಂದಬೇಕಲ್ಲದೆ ಅಪಕೀರ್ತಿಗೆ ಗುರಿಯಾಗಲಾರೆ. ಈ ವೇಳೆಯಲ್ಲಿ ಸರ‌್ವಥಾ ತಡೆಯಲಾಗದಮ್ಮಾ ತಾಯೇ ಕರುಣದಿಂದ ಕಾಯೇ.

ಚಂದನಗಂಧಿ: ಹಾಗಾದರೆ ನಾನು ಪೋಗಿ ಬರುತೇನಪ್ಪಾ ಬಾಲಾ ಸುಂದರಶೀಲಾ.

ದ್ವಿಪದಿ ಮುಖಾರಿ

ಅಣ್ಣನಿರುವುದನ್ನು ಕೇಳಿ ಅತಿಹರುಶವಾ ತಾಳಿ  ಅಘ
ಹರನ ಭಜಿಸುತ್ತಾ ಅತಿಹರುಶದಿಂದಾ ಮಂದಿರವ ತಾ ಬಿಟ್ಟು
ಇಂದುಮುಖಿ ಬೇಗ ಅಂಗಜನ ಮಡದಿಗಿಂ ಮಿಗಿಲಾದ
ಅತಿರೂಪಿನಿಂದ ರಂಗುಳ್ಳ ಸೀರೆಯನು ರಮಣಿ ತಾನುಟ್ಟು
ಬಂಗಾರಮಯವಾದ  ಕುಪ್ಪಸವ ತೊಟ್ಟು ಪಣೆಗೆ
ಕಸ್ತೂರಿ ಬಟ್ಟು ಪಣತಿ ತಾನಿಟ್ಟು ನವರತ್ನದಾ
ಭರಣವಿಟ್ಟು ಅಂಗನೆ ಕುವಲೆಯು ಅಣ್ಣನೋ
ಲಗಕ್ಕೆ ಅಂದುಳ್ಳ ನಡುಕೇರಿ ರಂಗನಂ ಭಜಿಸಿ
ಚಂದದಿಂ ಬಂದು ನಿಂದಳಾ ಇಂದುಮುಖಿ ಅಮ್ಮಯ್ಯ ॥

ಪದ

ಜಾಣೆ ತಾ ಬಂದಳಾಗ  ಅಣ್ಣನಾ ಹುಡು
ಕುತ್ತಾ  ಸಣ್ಣ ಸಣ್ಣ ಪಾದದ ಗೆಜ್ಜೆ ಝಣು
ಝಣೆನುತಲಿ ॥ಜಾಣೆ ತಾ ಬಂದಳಾಗ ॥

ಕುನಲೆ: ಅಪ್ಪಾ ಸಾರಥಿ ಹೀಗೆ ಬರುವಂಥವನಾಗು ಮತ್ತು ಹೀಗೆ ನಿಲ್ಲುವಂಥವನಾಗು. ಅಪ್ಪಾ ಚಾರಕಾ ಅಂದ ಚೆಂದದಿಂದ ಮಂದಿರದ ದ್ವಾರದಲ್ಲಿ ನಿಂತು ಸಂದೇಹವಿಲ್ಲದೆ ಕೇಳುವುದಕ್ಕೆ ನೀ ದಾರು ನಿನ್ನ ಜನನಿ ಜನಕರು ಪೆಸರಿಟ್ಟು ಕರೆವ ನಾಮಧೇಯವೇನಪ್ಪಾ ಚಾರ ವರ ಪಣಿಹಾರ. ಅಣ್ಣಯ್ಯ ಸಾರಥಿ, ಈ ತ್ರಿಭುವನವಂ ಕುಕ್ಷಿಯೊಳಗಿಟ್ಟು ರಕ್ಷಣೆಯಂ ಮಾಳ್ವ ಪಕ್ಷಿವಾಹನ  ಮೋಕ್ಷದಾಯಕ ವಾರಿಜಾಕ್ಷನಂತಿರ್ಪ  ಚಂಪಕಪುರ ಅಧ್ಯಕ್ಷನಾದ ಹಂಸಧ್ವಜ ಭೂಪಾಲರ ಸುಂದರಸುತೆಯಾದ ಕುವಲೆ ಎಂಬ ನಾಮಾಂಕಿತವಲ್ಲವೇನಪ್ಪಾ ಸಾರಥಿ. ಅಪ್ಪಾ ಸಾರಥಿ ಈ ತ್ರಿಭುವನ ಮಂಡಲಕ್ಕೆ ಅಧಿಕತರವಾದ ಚಂಪಕಾಪುರವನ್ನು ಶೌರ‌್ಯದಿಂದಾಳುವ ಹಂಸಧ್ವಜ ಭೂಪಾಲನಾದ ಯನ್ನ ತಂದೆಯು ಅಶ್ವಮಂ ದಿಟ್ಟತನದಿಂದ ಕಟ್ಟಿಸಿ ತನ್ನ ಕಂದನಾದ ಸುಧನ್ವನಂ ಕರೆಸಿ ಅರಿಗಳ ಶಿರಗಳನ್ನು ಚೆಂಡಾಡಬೇಕೆಂದು ಆಜ್ಞಾಪಿಸಲಾಗಿ ಬಂದು ಇರುತ್ತಾನಂತೆ. ಅಂತಪ್ಪ ಅಣ್ಣನೊಡನೆ ಮಾತನಾಡಿ ವೋಗಲು ಬಂದು ಇದ್ದೇನೆ. ಅಣ್ಣನ ಸನ್ನಿಧಿಗೆ ಕರೆದುಕೊಂಡುವೋಗಿ ಭೇಟಿಯನ್ನು ಮಾಡಿಸಬೇಕಪ್ಪಾ ಚಾರ ಇದೇ ನಮ್ಮ ವಿಚಾರಾ.

ಕುವಲೆ: ನಮೋ ನಮೋ ಅಣ್ಣಾ ಪುತ್ಥಳಿಯ ಬಣ್ಣ.

ಸುಧನ್ವ: ಅತಿ ಆಶ್ಚರ‌್ಯವಂತಳಾಗಿ ಬಾಳಮ್ಮಾ ತಂಗಿ ಮಂಗಳಾಗಿ. ನೀನು ಈ ರಾಜಸಭೆಗೆ ಏನು ಕಾರಣ ಬಾಹೋಣವಾಯಿತಮ್ಮ ಸಹೋದರಿ.

ಕುವಲೆ:ಅಣ್ಣಯ್ಯ ನಿನ್ನನ್ನು ಮಂದಿರದಲ್ಲಿ ಗಕ್ಕನೆ ವುಡುಕಲು ನೀನು ಸಿಕ್ಕದಿರಲು ವುಡುಕಿಕೊಂಡು ಬಾಹೋಣವಾಯಿತು. ನೀನು ಧಾವಲ್ಲಿಗೆ ಪೈಣವೊ ಪೇಳಬೇಕಪ್ಪ ಅಣ್ಣಾ ನಿನ್ನ ಮಾತು ಬಹು ಬಣ್ಣ.

ಪದ ಜಂಪೆ

ಅನುಜೆ ನೀ ಕೇಳಮ್ಮಾ ದನುಜಾರಿ ಸಖ ನರನ  ಘನ
ಗರ್ವವನು ನಾನೀಗ ॥ಕೇಳೀಗಾ ॥ಪ ॥
ಸಂಗರದಲಿ ಗೆದ್ದು ಹಿಂದರುಗುವೆನು ಮಂಗಳಾಂಗಿಯೆ
ಪೋಗಿ ಬರುವೆ ॥ನಾ ಬರುವೆ ॥

ಸುಧನ್ವ: ಅಮ್ಮಾ ತಂಗಿ. ದನುಜಾರಿ ಸಖನಾದ ಅರ್ಜುನನಲ್ಲಿ ಸಂಗರವನ್ನು ಮಾಡಿ ಅವನ ಗರ್ವವನ್ನು ಭಂಗಪಡಿಸಿ ಬರುವದಕ್ಕೆ ಪ್ರಯಾಣವನ್ನು ನಿಶ್ಚಯಿಸಿರುತ್ತೇನೆ. ಅಮ್ಮಾ ತಂಗಿ ನೀನು ಪ್ರಯಾಣದ ಕಾಲದಲ್ಲಿ ಎನ್ನ ಎದುರಾಗಿ ಬಂದದ್ದು ಶುಭಕರವೆಂದು ಸಂತೋಷಿಸುವೆನಮ್ಮಾ ತಂಗಿ ಮಂಗಳಾಗಿ॥

ಪದ

ಕ್ಷತ್ರಿಯ ಕುಲದೊಳು ವುತ್ಪತ್ತನಾಗಿದ್ದು
ಮತ್ಪಿತನಾಜ್ಞೆ ಪಡದಿಂದು  ಪಡೆದಿಂದು ॥ಪ ॥
ಅಕ್ಷಯ ಬಾಣದಿ  ಶಿಕ್ಷಿಸದಿರ್ದಡೆ  ಮೋಕ್ಷ
ದಾಯಕ ಮೆಚ್ಚನಮ್ಮಾ ॥ಕೇಳಮ್ಮಾ   ॥

ಸುಧನ್ವ: ಅಮ್ಮಾ ಸಹೋದರಿ, ಕ್ಷತ್ರಿಯ ಕುಲದಲ್ಲಿ ವುದ್ಭವಿಸಿ ಯನ್ನ ಪಿತನಾಜ್ಞೆಯಂ ಪಡೆದು ಯನ್ನ ಬಾಹುವಿನಲ್ಲಿ ಧರಿಸಲ್ಪಟ್ಟ ಅಕ್ಷಯವೆಂಬೊ ಬಾಣಗಳಿಂದ ಲಕ್ಷ್ಮೀರಮಣನ ಸಖನ ತೆಗೆಯದೆ ಬಿಟ್ಟಿದ್ದೇ ಆದರೆ ಮೋಕ್ಷದಾಯಕನಾದ ಶ್ರೀಕೃಷ್ಣನು ಮೆಚ್ಚಲಾರನಮ್ಮಾ ತಂಗಿ ಮಂಗಳಾಗಿ.

ಪದ

ವಾಸುಕಿಪುರಿವಾಸ  ಲೇಸು ಕಾಣಿನೊ  ಶ್ರೀಶ
ಘಾಸಿಪಡಿಸಿದಲೇ ಶ್ರೀನಿವಾಸ ॥ಜಗದೀಶಾ ॥

ಸುಧನ್ವ: ಅಮ್ಮಾ ತಂಗಿ, ವಾಸುಕಿಪುರಿವಾಸನಾದ ಮಾರುತೀಶನಂ ಭಜಿಸುತ್ತಾ ಎನಗೆ ಲೇಶವು ಘಾಸಿಯಾಗದಂತೆ ಲೇಸು ಮಾಡೆಂದು ಕಲಹಕ್ಕೆ ಆಯುಧಂಗಳು ಮಸಕುತ್ತಿವೆ ಜಾಗ್ರತೆಯಾಗಿ ಪೋಗಿಬರುತ್ತೇನೆ. ನಿನ್ನ ಮನದ ಅಭಿಪ್ರಾಯವನ್ನು ಬಿಟ್ಟು ನಿರ್ವಂಚನೆಯಿಂದ ಪೇಳಬೇಕಮ್ಮಾ ಅನುಜೆ ಹಂಸಧ್ವಜ ತನುಜೆ.

ಪದ

ಅಣ್ಣಯ್ಯ ನಿ ಪೋಗಿ ಕಣ್ಣು ಮೂರುಳ್ಳ
ವನೊಳ್  ಮನ್ನಣೆ ಪಡೆದ ಪಾರ್ಥನಿಗೆ ॥
ನಿಪುಣತೆಯಲಿ ಕಾದು  ಚಪಳತೆಯಿಂದಲಿ
ಸುಪಥದಿ ತಿರಗಿ ನೀ  ಚಂದದಿಂ  ಬಾರಣ್ಣ ಅಣ್ಣಯ್ಯ

ಕುವಲೆ: ಅಣ್ಣಯ್ಯ, ಕಣ್ಣು ಮೂರುಳ್ಳ ಪರಮೇಶ್ವರನಲ್ಲಿ ಯುದ್ಧವಂ ಮಾಡಿ ಬದ್ಧವಾದ ಚಾಣವಂ ಪಡೆದುಕೊಂಡು ಬಂದಿರುವ ಪಾರ್ಥನಲ್ಲಿ ನಿಪುಣತೆಯಿಂದಲೀ ಯುದ್ಧವಂ ಮಾಡಿ ಸುಪಥವೆಂಬ ಮಾರ್ಗದಲ್ಲಿ ಬರುವಂಥವನಾಗಪ್ಪ ಅಣ್ಣಾ ನಿನ್ನ ರೂಪು ಬಹು ಬಣ್ಣ.

ಪದ

ಮಾವನ ಮನೆಯಲ್ಲಿ  ಮಾನವಾಗಿರುವಂತೆ
ಭೂಮಿಯೊಳಗೇ ಕೀರ್ತಿ ಬರುವಂತೆ ॥
ಮಾಡಿ ನೀ ಬಂದರೆ ಕ್ಷಿತಿಯೊಳ್ ತಲೆ ಎತ್ತಿ
ಗಾಡದಿಂ ತಿರುಗುವೆ  ಚಂದದಿ ಕೇಳಣ್ಣ ॥ಅಣ್ಣಯ್ಯ

ಕುವಲೆ: ಅಗ್ರಜ ಭೂಪಾಲ, ನೀನು ಸಂಗರಕೆ ಪೋಗಿ ಗೆದ್ದು ಬಂದಿದ್ದೆ ಸಹಜವಾದರೆ ಯನ್ನ ಮಾವನವರ ಮನೆಯಲ್ಲಿ ತಲೆಯನ್ನು ಎತ್ತಿ ಹರುಷದಿಂದ ತಿರುಗುತ್ತೇನೆ. ಇಲ್ಲವಾಯಿತೆ ಈ ಪ್ರಾಣವನ್ನು ಪರ ಲೋಕಕ್ಕೆ ಕಳುಹಿಸಲು ಸಂದೇಹವಿಲ್ಲವಪ್ಪಾ ಅಣ್ಣಯ್ಯ.

ಪದ

ಸಂಗರದೊಳು ಗೆದ್ದು  ಹಿಂದಿರುಗು ಎಂದು
ಮಂಗಳಾರತಿ ಬೆಳಗೆ  ವುರಗಪು
ರೀಶನ  ಚರಣಾವ ಭಜಿಸುತ್ತಾ  ಹರುಷದಿಂ
ಪೋಗಿ ನೀ  ಚಂದದಿ ಬಾರಣ್ಣಾ  ಅಣ್ಣಯ್ಯ

ಕುವಲೆ: ಅಣ್ಣಯ್ಯ, ಉರಗಪುರೀಶನ ಕರುಣ ಕಟಾಕ್ಷದಿಂದ ಸಂಗರವನ್ನು ಗೆದ್ದು ಬರುವಂಥವನಾಗೆಂದು ಶುಭಕರವುಳ್ಳ ಮಂಗಳಾರತಿಯನ್ನು ಬೆಳಗುತ್ತೇನೆ. ಹರುಶಪಟ್ಟು ಪೋಗಿ ಬಾರಪ್ಪಾ ಅಣ್ಣಯ್ಯ.

ಸುಧನ್ವ: ಅದೇ ಪ್ರಕಾರವಾಗಿ ಪೋಗಿ ಬರುತ್ತೇನಮ್ಮ ತಂಗಿ ಮಂಗಳಾಗಿ.

ದ್ವಿಪದೆ ॥॥ಆರವಿ

ಶ್ರೀ ಸುಧಾರಮಣಿ  ಸೌಂದರ‌್ಯ  ಭರಣಿ  ಇದು ದಿನ
ಕತಿಶಯದಿ  ಇರಲೊಂದು ದಿವಸ ಸಂತಾನ ಬಯಕೆಯು
ತೋರ್ವಡಿಸೆ  ಕಂತು ಜನನಿಯ ತೆರದಿ
ಪುಷ್ಪವತಿಯಾಗಿ  ಅರವಿಂದ ದಳನೇತ್ರೆ ಅಂಚೆ
ಗಮನೆ ತರುಣಿಮಣಿ ನಾಲ್ಕನೆಯ ದಿವಸದಲಿ
ಮಿಂದು ಅಂಗನೆ ಪ್ರಭಾವತಿಯು ಆಭರಣವಿಟ್ಟು
ರಂಗುಳ್ಳ ಸೀರೆಯನು ರಮಣಿ ತಾನುಟ್ಟು ಬಂಗಾರ
ಮಯವಾದ ಕುಪ್ಪಸವ ತೊಟ್ಟು  ಪಣೆಗೆ
ಕಸ್ತೂರಿಬಟ್ಟು  ಪಣತಿ ತಾನಿಟ್ಟು ಬಾಲೆ ಕನ್ನಡಿಯು
ಕೈಯಲ್ಲಿ ಪಿಡಿದು ಅಂಗವನು ನೋಡಿ ಪರಿಪರಿಯ
ಪುಷ್ಪಗಳಂ ತಾ ಧರಿಸಿ  ಸರಸಾಜಾಕ್ಷಿಯು ತಾ ನಡು
ಕೇರಿ ರಂಗನಂ ಭಜಿಸಿ  ಕಾಂತನ ಕಾಣುವ
ತವಕದಿಂ ಬಂದು  ತೆರೆಯೊಳಗೆ ನಿಂದಳಾ ಇಂದುವದನೆ ॥

ಪದ

ಎಂತು ಸೈರಿಸಲಿ ಈ ವಿರಹ
ಕಾಂತನು ಕಾಣದೀಗಾ ॥

ಪ್ರಭಾವತಿ: ಅಪ್ಪಾ ಸಾರಥಿ ಹೀಗೆ ಬರುವಂಥವನಾಗು. ಮಂದಿರದ ದ್ವಾರದಲ್ಲಿ ನಿಂದು ನೀವ್ಯಾರು ತಾವ್ಯಾರೆಂದು ಅಂದದಿಂದ ಬೆಸಕೊಳ್ಳುವ ಚಾರಕ ನೀ ಧಾರೊ ನಿನ್ನಯ ಅಭಿಧಾನವೇನೋ ಪೇಳುವಂಥವನಾಗಪ್ಪ ಚಾರ ವರ ಪಣಿಹಾರ.

ಅಪ್ಪಾ ಸಾರಥಿ, ಯೀ ಮಂಡಲವೆಂಬ ನವಖಂಡ ಪೃಥ್ವಿಯೊಳ್ ಅಖಂಡ ತೇಜದಿಂದೊಪ್ಪುವ ಚಂದ್ರಾಂಶುವಿನ ವಂಶದೊಳ್ ಇಂದುಧರನಂತೆ ಕಳೆಯುಳ್ಳ ಚಂಪಕಾಪುರಕ್ಕೆ ಅಧ್ಯಕ್ಷನಾದ ಹಂಸಧ್ವಜ ರಾಜರಾಜರ ಅರ್ಧಾಂಗಿಯಾದ ಚಂದನಗಂಧಿಯವರ ಗರ್ಭಾಂಬುಧಿಯಲ್ಲಿ ಜನಿಸಿ ಶುಭ್ರಾಂಶುವಿನಂ ತೊಪ್ಪುವ ಸುಧನ್ವ ರಾಜರಿಗೆ ಮೋಹದ ಮಡದಿಯಾದ ಪ್ರಭಾವತಿ ಎಂಬ ನಾಮಾಂಕಿತವುಳ್ಳಾಕೆ ನಾನೇ ಅಲ್ಲವೇನಪ್ಪಾ ಚಾರ ವರಪಣಿಹಾರ.

ಇನ್ನು ಯಮ್ಮಯ ನಾಮಾಂಕಿತ ಗೊತಾಗಲಿಲ್ಲವೇನಪ್ಪಾ ಸಾರಥಿ. ಶುಂಡಾಲಪುರವನ್ನು ದಂಡದಿಂದಾಳುವ ಚಂಡವಿಕ್ರಮ ಪುಂಡುಕಾರರ ವರಗಂಡ ಮಾರ್ತಾಂಡನೆಂಬ ಧರ್ಮರಾಯನು ಅಶ್ವಮೇಧಯಾಗವಂ ಮಾಡಲಿಚ್ಛಿಸಿದವನಾಗಿ ಕುದುರೆಯಂ ಬಿಡಿಸಿರಲಾಗಿ ಯನ್ನ ಮಾವನವರು ಕಟ್ಟಿಸಿ ಎನ್ನ ಅರಸನಾದ ಸುಧನ್ವ ರಾಜರನ್ನು ಕರೆಸಿದರೆಂಬ ವಾರ್ತೆಯಂ ಕೇಳಿ ಆನಂದದಿಂದ ಮಂದಿರದಲ್ಲಿ ಹುಡುಕಲು ಸುಂದರನು ಇಲ್ಲದಿರಲು ಕಾಂತನಂ ವುಡುಕುತ್ತಾ ಬಾಹೋಣವಾಯಿತಪ್ಪ ಸಾರಥಿ. ನಮ್ಮ ಅರಸರಾದ ಸುಧನ್ವರಾಜರು ತಾವೆಲ್ಲಿ ಇದ್ದಾರು ತೋರಿಸಪ್ಪಾ ಚಾರ ವರ ಪಣಿಹಾರ.

ಪ್ರಭಾವತಿ: ನಮೋ ನಮೊ ಕಾಂತಾ ಕಾರುಣ್ಯವಂಥ.

ಸುಧನ್ವ: ನಿನಗೆ ಮಂಗಳವಾಗಲೆ ಕಾಂತೆ ಗುಣವಂತೆ. ಸುಂದರಾಂಗಿ ಇಂದ್ರನಗರವಂ ಪೋಲ್ವ ಮಂದಿರವಂ ಬಿಟ್ಟು ಇಲ್ಲಿಗ್ಯಾತಕ್ಕೆ ಬಾಹೋಣವಾಯಿತೆ ನೀರೆ ಶರಧಿಗಂಭೀರೆ ॥

ಪದ

ಎಲ್ಲಿಗೆ  ಪಯಣವೊ  ಕಾಂತಾ  ನಲ್ಲಾ
ಸಲ್ಲಲಿತದಿಂದ  ಪೇಳೊ ॥
ಪುಲ್ಲಶರಗಳು ಸೋಕಿ  ಮನ ತಲ್ಲಣಿಸುತ್ತಿದೆ ॥
ಬಿಲ್ಲುಬಾಣಗಳನ್ನು ಪಿಡಿದು  ನೀನೆಲ್ಲಿಗೆ ಪೋಪು
ದೊ  ರಮಣ ॥ಎಲ್ಲಿಗೆ ಪಯಣ ॥

ಪ್ರಭಾವತಿ: ಹೇ ರಮಣಾ ಹೇ ಕಾಂತಾ  ಹೇ ನಲ್ಲಾ, ಬಿಲ್ಲು ಬಾಣಗಳಂ ಪಿಡಿದುಕೊಂಡು ಉಲ್ಲಾಸದಿಂದ ಪುಲ್ಲನಾಭನಂತೆ ಪ್ರಯಾಣವಾಗಿರುವ ಕಾರಣವೇನು? ಯನ್ನ ಸಂಗಡ ಪೇಳಬೇಕೈ ಕಾಂತಾ ಕಾರುಣ್ಯವಂತಾ.

ಪದ

ರುತುದಾನವನ್ನು ಮಾಡಿ ಸತಿಗೆ
ಸದ್ಗತಿಯನ್ನು ಹಿತವಾಗಿ ತೋರದೆ ॥
ಮತಿವಂತಾ ಪೋಪುದು ಸರಿಯೆ
ನಾನತಿ ದುಃಖದೊಳು ಗೋಳಾಡುತ್ತಿರುವೆ  ॥

ಪ್ರಭಾವತಿ: ಹೇ ಕಾಂತಾ, ರುತುಮತಿಯಾದ ಸತಿಯಳಿಗೆ ರತಿ ದಾನವನ್ನು ಮಾಡಿ ಸತಿಗೆ ಸದ್ಗತಿಯನ್ನು ಕೊಟ್ಟು ಹಿತವನ್ನು ಆಚರಿಸದೇ ಮತಿವಂತರಾದ ತಾವು ಎಲ್ಲಿಗೆ ಪ್ರಯಾಣವಾಗಿರುವುದು ಪೇಳಬೇಕೋ ರಮಣ ಸದ್ಗುಣಾಭರಣ ॥

ಪದ

ಉರಗಪುರೀಶನ ಚರಣಾವ  ನಂಬಿ ಇರು
ವೆ ನೀ ಕರುಣಿಸೊ  ಸುಗುಣಾ ॥ಎಲ್ಲಿಗೆ ॥

ಪ್ರಭಾವತಿ: ಹೇ ಕಾಂತಾ, ಪೊಡವಿಗಧಿಕವಾದ ಶೇಷಪುರಿ ಮಾರುತೀಶನಂ ಭಜಿಸಿ ಎನಗೆ ರುತುದಾನವನ್ನು ಮಾಡಿ ಪ್ರಯಾಣ ಬೆಳಸಬಹುದೊ ರಮಣಾ ಸದ್ಗುಣಾಭರಣಾ ॥

ಕಂದ ಗೌಳ

ಕಾಂತಾಮಣಿ ಪ್ರಭಾವತಿಯೆ ಕೇಳು
ಹಸ್ತಿನಾಪುರದರಸು  ಧರ್ಮರಾಯರ
ತಮ್ಮ ಅರ್ಜುನನೊಡನೆ  ಯುದ್ಧವಂ
ಮಾಡಲು ಸಿದ್ಧನಾಗಿ ಪೊರಟಿರುವೆ
ಎನ್ನನೀ ತಡೆಯಬೇಡವೆ  ರಮಣಿ ॥

ಸುಧನ್ವ: ಹೇ ಕಾಂತೆ, ಹಸ್ತಿನಾಪುರದರಸು ಧರ್ಮರಾಯನು ಅಶ್ವಮೇಧಯಾಗವಂ ಮಾಡಲುಳ್ಳವನಾಗಿ ಶ್ರೀಕೃಷ್ಣನಾಜ್ಞೆಯಿಂದ ಅಶ್ವವ ಬಿಡಿಸಿರಲು ಆ ಕುದುರೆಯು ದೇಶಾಧಿದೇಶಂಗಳಂ ಸಂಚರಿಸಿಕೊಂಡು ನಮ್ಮ ನಂದನವನಕೆ ಬರಲು ಯಮ್ಮ ತಂದೆಯು ಕುದುರೆಯನ್ನು ಕಟ್ಟಿಸಿ, ಕುದುರೆ ಸಂರಕ್ಷಣೆಗೆ ಬಂದಿರುವ ಅರ್ಜುನ ಮೊದಲಾದ ವೀರರೊಡನೆ ಯುದ್ಧವಂ ಮಾಡಲು ಎನಗೆ ನೇಮವನ್ನು ಕೊಟ್ಟು ಕಳುಹಿಸಲಾಗಿ, ಮಾತೆಯನ್ನು ಕಂಡು ಆಶೀರ್ವಾದವಂ ಪಡೆದು ನಮ್ಮ ಅನುಜೆಗೆ ಪೇಳಿ ಪ್ರಮಾಣವನ್ನು ಮಾಡುತ್ತಿರುವ ಕಾಲದಲ್ಲಿ ನೀನು ಯನ್ನ ತಡೆಯಬಹುದೇನೆ ಕಾಂತೆ ಮತಿ ಗುಣವಂತೆ.

ಪದ ರೂಪಕ

ಮುನ್ನ ಮಾಡಿದ ಪುಣ್ಯದಿಂದಾ ನೀನಿಲ್ಲಿ
ಗೆ  ಕನ್ನೆಯೋಳ ಕರುಣದಲಿ ॥ಕರುಣದಲಿ ॥
ಬಂದ ಕಾರ‌್ಯವು ಬಹಳ  ಚಂದವಾಯಿತು ಈಗ
ಮಂದಿರದಲಿ ಬಂದು ॥ನೀ ಹೋಗು ॥ಪ ॥

ಪ್ರಭಾವತಿ: ಹೇ ಕಾಂತಾ, ಹಿಂದಿನ ಜನ್ಮದಲ್ಲಿ ನಾನು ಸುಕ್ರುತವನ್ನು ಮಾಡಿ ಇದ್ದೆನೊ ಅದರ ದೆಸೆಯಿದ್ದ ತಾವು ಇಲ್ಲಿಗೆ ದಯಮಾಡಿಸಿದ್ದು ಬಹಳ ಸಂತೋಷವಾಯಿತು. ಆನಂದದಿಂದ ಮಂದಿರಕ್ಕೆ ಬಂದು ಇಂದುಮುಖಿಯಳನ್ನು ಕೂಡಿ ಸುಖಿಸಬಹುದೂ ಕಾಂತಾ ಕಾರುಣ್ಯವಂತಾ.

ಪದ

ಯನ್ನಲ್ಲಿ ದಯವಿಟ್ಟು  ಮನ್ನಿಸೊ
ಕೃಪೆ ಇಟ್ಟು ರನ್ನೆಯೊಳ್ ಮನಸಿಟ್ಟು ಮನಸಿಟ್ಟು ॥

ಪ್ರಭಾವತಿ: ಹೇ ಕಾಂತಾ, ಸನ್ನುತಾಂಗಿಯಾದ ಯನಗೆ ದಯವಿಟ್ಟು ರತಿ ಸುಖವನ್ನು ಕೊಟ್ಟು ವಿರಹತಾಪವನ್ನು ತಪ್ಪಿಸಿ ಆನಂದವೆಂಬ ಶರಧಿಯೊಳ್ ಮುಳುಗಿಸಿ ಪೋಗುವದು ಚಂದವಲ್ಲವೇನೊ ಕಾಂತಾ ಮತಿ ಗುಣವಂತಾ.

ಪದ

ಕಂದರ್ಪನೆಸುಗೆಯಾ  ನಂದದಲಿ ತಪಿಸಿ
ಸುಂದರ ಸುಖದಿಂದಿರಿ ಸೋ  ನಿಂಬೆರೆಸೊ ॥
ವುರಗಪುರೀಶನ  ಚರಣವ ಸ್ಮರಿಸುತಾ
ಕರುಣಿಸಿ ನೀ ಕಾಯೊ ॥ನೀ ಕಾಯೊ ॥

ಪ್ರಭಾವತಿ: ಹೇ ರಮಣಾ, ವುರಗಪುರೀಶನಾದ ಮಾರುತೀಶನಂ ಭಜಿಸಿ ಕಂದರ್ಪನ ಬಾಣ ಬೆಸುಗೆಗೆ ಯನ್ನನ್ನು ಕೊಡದೆ, ಮಡದಿಯಳನ್ನು ನಿಚ್ಚಳಚಿತ್ತನಾಗಿ ಕೂಡಿ ಕಡುತಾಪವನ್ನು ಕಡೆಹಾಯಿಸಿ ಪೊಡವಿಯೊಳ್ ಕೀರ್ತಿಯನ್ನು ಪಡೆಯಬಹುದೊ ರಮಣ ಸದ್ಗುಣಾ ಭರಣಾ ॥

ಹೇ ಕಾಂತಾ ನನಗೆ ರುತುಸ್ನಾನಕಾಲದಲ್ಲಿ ಸಂಭವಿಸಿರುವುದಾದ ಕಾರಣ ಈ ವ್ಯಾಳೆಯೊಳ್ ಯನ್ನನ್ನು ಕೂಡದೆ ಪೋಗಕೂಡದೊ ಕಾಂತಾ ಮತಿಗುಣವಂತಾ.

ಕಂದಾರ್ಥ ರೇಗುಪ್ತಿ

ಕಾಂತೆಶಯನ ಭ್ರಾಂತಿಯನು  ಯಂತಾದರು
ಬಿಡಿಸಿ ಮನಕೆ ಸಂತೋಷಮಾಡಲು
ದಂತೀಶನ ಚಿತ್ತ ಹರಿಸೆ  ಶ್ರೀಕಾಂತನಂ ಕಂಡು ಬಂದು ॥

ಸಂತೋಷಿಸುವೆ ಹೇ ದಂತಿ ಗಮನೆ ॥
ಅಂತರಂಗದಿ ನೀನೂ
ಕಂತುಪಿತನನೀಗ ॥ಭ್ರಾತಿ ಇಂದಲಿ ॥
ಸ್ವಾಂತದಲಿ ನೆನೆನೆನೆದು  ಲಕ್ಷ್ಮೀಕಾಂತನಂ ॥
ಮನದಲ್ಲಿ ಭಜಿಸಿ  ಪೋಗುವೇ ತರುಣಿ ॥

ಸುಧನ್ವ: ಹೇ ಕಾಂತೆ, ನಾನು ಪ್ರಯಾಣವಾಗಿರುವ ಕಾಲದಲ್ಲಿ ಯನ್ನನ್ನು ಕೂಡಿ ಪೋಗೆಂದು ಅಡ್ಡಲಾಗಿ ಬರುವದು ಸರಿಯಲ್ಲಾ. ದಂತೀಶನಾದ ಗಜರಾಜನಿಗೆ ಮೊಸಳೆ ಇಂದ ಬಾಧೆಪಟ್ಟಂತೆ ನನಗೂ ಚಿಂತೆ ದೊರಕಿ ಇದೇ ನನ್ನಯ ಮನಸ್ಸು ಶ್ರೀಲಕ್ಷ್ಮೀಕಾಂತನಾದ ಶ್ರೀಕ್ರಿಷ್ಣನ ಹೃದಯದಲ್ಲಿರುವುದರಿಂದ ಇತರ ಆಸಕ್ತಿಗೆ ಮನಸ್ಸು ಬಾರದು. ಆದಕಾರಣ ನೀನು ಮೊಸಳೆಯಂತೆ ಯನ್ನನ್ನು ರತಿಕೇಳಿಗೆ ಎಳೆಯುವುದು  ಸರಿಯಲ್ಲಾ. ಯೀ ವ್ಯಾಳೆಯಲ್ಲಿ ಯನ್ನನ್ನು ತಡೆಯಬೇಡವೆ ರಮಣಿ ಸದ್ಗುಣಾಭರಣಿ.