ಕಂದ

ಕರುಣಾಕರನೆಂದು ಬೇಡಲು  ತರಳೆಯು
ತವಕದಲಿ ಕಂದಿಕುಂದುವ ತೆರದಲಿ ॥
ನಿರುತ ನಂಬಿದ ಸತಿಯಳಿಗಭಯವ ॥ಕರು
ಣಿಸಿ ಪೋಪುದುಚಿತವೇ ಕಾಂತಾ ॥
ಹರುಶವೆ ನಿಮಗೆ ॥ಕೇಳಯ್ಯ ಕಾಂತ ॥
ಕಾಂತ ನಿನ್ನನು ಬಿಟ್ಟು  ಎಂತು ನಾ ಸೈರಿಸೆ ॥
ಅಂತರಂಗ ಚರಿಪಂತಪಕ್ಷಿಯು ಪೋಡಿ ॥
ಪೋಗುವೆಯಾ ಕಾಂತಾ ಯನ್ನ ತಾಪ ॥
ಪರಿಹರಿಸೋ ಕಾಂತಾ ॥

ಪ್ರಭಾವತಿ: ಹೇ ಕಾಂತ, ಕರುಣಾಕರನೆಂದು ಬೆಂಬಿಡದೆ ನಂಬಿದ ಸತಿಯಳನ್ನು ತೊರೆದು ಪೋಗುವದು ವುಚಿತವಲ್ಲಾ. ನಿರುತವು ನಂಬಿದ ಸತಿಯಳಿಗೆ ಅಭಯವನ್ನು ಕೊಟ್ಟು ಮದನಶರತಾಪ ಒಟ್ಟಿಗಿಟ್ಟು ಮನ್ನಿಸಿ ಪೋಗದೆ ಅಂತರಿಕ್ಷದಲ್ಲಿ ಸಂಚರಿಸುವಂಥ ಪಕ್ಷಿಯನ್ನು ಬೈವಾಗಿಟ್ಟು ಪೋಗುವದುಚಿತವೇನೊ ಕಾಂತಾ ಸರಸ ಧೀಮಂತ …..

ಕಂದ ॥॥ರೇಗುಪ್ತಿ

ತಂದೆಯ ಕಾಣುವ ತವಕದಿಂ ಬಂದಿರೆ
ಬಾಗಿಲಲಿ ತಡದು ಬಗೆಬಗೆಯಲಿ  ಕಂದರ್ಪನ
ಕಡುತಾಪ ನಂದಿಸು ಎನ್ನುತ  ನಿಂದಿಹೆ ನಳಿನದಳಾಕ್ಷಿ ॥
ಕಾಂತೆ ಯನ್ನೊಳು  ಸುರತಾಪೇಕ್ಷಿ ॥ಹಂಸಗಮನೆ ॥

ಸುಧನ್ವ: ಹೇ ರಮಣಿ, ಯನ್ನ ತಂದೆ ಅಗ್ನಿಯಿಂ ಪಡೆದ ಬಿಲ್ಲು ಬಾಣಗಳನ್ನು ತೆಗೆದುಕೊಂಡು ನಿನ್ನ ಮಂದಿರಕ್ಕೆ ಬಂದು ಸಂತೈಸಿ ಪೋಗಲು ಬಂದಿರಲು ಬೆಂಬಿಡದೆ ಕಂದರ್ಪನ ಕೇಳಿಗೆ ಬಾರೆಂದು ಕರೆಯುವುದು ಉಚಿತವೆ ನಾರಿ. ಕಂಸಾರಿಯಾದ ಕ್ರಿಷ್ಣನ ದರುಶನಂಗಳಂ ಪಡೆದು ವೈರಿ ಧ್ವಂಸವನ್ನು ಮಾಡಿ ಬರುತ್ತೇನೆ ಕಾಂತೆ ಮತಿಗುಣವಂತೆ.

ಕಂದ

ನೀರಜಮುಖಿಯಳ ತಾಪವ
ತಪ್ಪಿಸು ಎಂದು ॥ಬಗೆ ಬಗೆ ಸಾರುತ ಕೊ
ರಗುತಲಿರೆ ॥ಧೀರನೆ ಧಿಕ್ಕಾರ ಮಾಡಿ
ಪೋಗುವೆ ಕಾಂತ ॥ಸರಸ ಧೀಮಂತ
ಬಿಡಿಸೆನ್ನ ಭ್ರಾಂತ ॥

ಬುದ್ಧಿಯ ಬಿಟ್ಟು  ನಾರಿಯೊಳ್
ದಯವಿಟ್ಟು  ವಾರಿಜಾಂಬಕಿಯಳ
ರಮಿಸದೆ ಪೋಪುದು ॥ಥರವೇನೋ
ಕಾಂತ ॥ಸದ್ಗುಣಾವಂತಾ  ಬಿಡಿಸೆನ್ನ ಭ್ರಾಂತಾ ॥

ಪ್ರಭಾವತಿ: ಹೇ ರಮಣಾ, ನೀರಜಮುಖಿಯಳಿಗೆ ಮೀರಿದ ತಾಪವನ್ನು ಧೀರನಾದ ನೀನು ಬಿಡಿಸೆಂದು ಬೇಡಿಕೊಂಡರೆ ಧಿಕ್ಕಾರವಂ ಮಾಡಿ ಕ್ರೂರಬುದ್ಧಿಯಿಂದ ವಾರಿಜಾಂಬಕಿಯಳ ಮಾತುಗಳನ್ನು ಮೀರಿ ಪಾರಿಪೋಗುತ್ತೇನೆಂದು ಶೌರ‌್ಯದ ಮಾತುಗಳನ್ನಾಡಿ ಪಾರಿ ಪೋಗುವುದು ವುಚಿತವೇನೊ ಕಾಂತ ॥ಸರಸ ಧೀಮಂತ ॥

ಶ್ಲೋಕ

ಹೇ ಕಾಂತೆ ಕಾರ‌್ಯೇಷು ಮಂತ್ರಿ ಕರುಣೇಷು ದಾಸಿ
ಭೋಜ್ಯೇಶುಮಾತ  ಶಯನೇಶು
ವೇಶ್ಯ  ರೂಪೇಶು ರಂಭಾ  ಕ್ಷಮಯಾ
ಧರಿತ್ರೀ  ನಾರಿಕುಲ ಧರ್ಮಪತ್ನಿ ॥

ಸುಧನ್ವ: ಹೇ ಕಾಂತೆ, ಇದರ ತಾತ್ಪರ‌್ಯವೇನೆಂದರೆ ಕಾರ‌್ಯಯೋಚನೆಯಲ್ಲಿ ಮಂತ್ರಿಯಾಗಿರಬೇಕು ಕೆಲಸ ಮಾಡುವುದರಲ್ಲಿ ದಾಸಿಯಾಗಿರಬೇಕು ಭೋಜನ ಮಾಡಿಸುವುದರಲ್ಲಿ ತಾಯಿಯೋಪಾದಿಯಲ್ಲಿ ಶಯನದಲ್ಲಿ ಸೂಳೆಯೋಪಾದಿಯಲ್ಲಿ ರೂಪಿನಲ್ಲಿ ರಂಭೆಯೋಪಾದಿಯಲ್ಲಿ ಕ್ಷಮೆಯಲ್ಲಿ ಭೂದೇವಿಯೋಪಾದಿಯಲ್ಲಿ ಯಿ ರೀತಿ ಆರು ಗುಣಗಳುಳ್ಳವಳು ಮಹಾಪತಿವ್ರತೆ ಎಂದು ಹೇಳುವರಾದ ಕಾರಣಾ, ನೀನು ಕಾತರಿಸಿ ಚಿಂತೆಯಂ ಕೈಕೊಳ್ಳದೆ ಶಾಂತಳಾಗಿ ಇದ್ದಿದ್ದೇ ಆದರೆ ಸ್ತ್ರೀಯರಿಗೆಲ್ಲಾ ರತ್ನವೆನ್ನಿಸಿಕೊಂಡು ಪತಿಯಾಜ್ಞೆ ಮೀರದೆ ಹಿತವಂತಳಾಗಿ ಇರುವೆ ಹೇ ರಮಣಿ ಸದ್ಗುಣಾ ಭರಣೆ ….

ಪದ

ಚಿಂತೆ ಯಾತಕೆ ಕಾಂತ ನಿನಗೆ ॥ಕಾಂತ ನಿನಗೆ ॥
ಯಂತು ಪೇಳಲಿ ನಿಮಗೆ  ಅಂತರಂಗ
ವೇದನೆ  ಭ್ರಾಂತಳಾಗಿರುವೆನೊ  ಅಕಟ ಕೇಳಕಟ ॥
ಗಂಧ ವೀಳ್ಯಾದಿಗಳನ್ನು ॥ಕೇಳಿನ್ನು॥
ರಮಣಾ ಸುಂದರ ಸಖ ಇನ್ನು  ಮಂ
ದಗಮನೆಯನ್ನು ॥ಕೂಡು ಎಂದು ಯಾಚನೆ ಮಾಳ್ಪೆ ॥ಮಾಳ್ಪೆ ॥

ಪ್ರಭಾವತಿ: ಹೇ ಕಾಂತ ಹೇ ರಮಣಾ, ಗಂಧವಂ ಹಚ್ಚಿಕೊಳ್ಳದೆ ಪುಷ್ಪಂಗಳಂ ಮುಡಿಯದೆ ಸುಂದರನಾಗಿ ಯನ್ನನ್ನು ಕೂಡದೆ ಮಂದವಾದ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳದೆ ಎಷ್ಟು ವಿಧವಾಗಿ ಹೇಳಿಕೊಂಡಾಗ್ಯು ವಲ್ಲೆನೆಂದು ತಿರಸ್ಕರಿಸುವ ಭಾವ ಸರಿಯಲ್ಲವೊ ರಾಜ ಮಾರ್ತಾಂಡ ತೇಜ.

ಪದ

ಅಗ್ಗವಿಲ್ಲದಂತರನ  ಸಂಗವಾದಿಗಿಳೆ
ಯೊಳಗೇ  ಮಂಗಳಾಂಗ ಇವಳ ಭಂಗ
ಹಿಂಗಿಸುವಂತೆ ಮಾಡಿಸೆನಗೆ ॥ಪೇಳುವೆ ॥
ಕಕ್ಕಸ ಕುಚಗಳನ್ನು ಈಗಾ ತೆಕ್ಕೆ
ಯೊಳಗಿಕ್ಕೊ ಯನ್ನ  ಸಕ್ಕರೆ ತುಟಿಯನ್ನು
ಸವಿದು  ಅಕ್ಕರವ ನೀಡೊ ರಮಣಾ ॥ಪೇಳುವೆ ॥

ಪ್ರಭಾವತಿ: ಹೇ ಕಾಂತ, ಕಕ್ಕಸ ಕುಚಗಳನ್ನು ನಿನ್ನ ತೆಕ್ಕೆಯೋಳ್ ಬಿಗಿದು ಸಕ್ಕರೆಯ ಸಮವಾದ ತುಟಿಯಂ ಸವಿದು ಯನ್ನ ಪಂತವನ್ನುಧಕಿಸದೆ ಚಿಂತಿಸಬಹುದೇನೋ ಕಾಂತ ಸರಸ ಧೀಮಂತ॥

ಪದ

ಕಮಲಗಳನ್ನು ಬೆದಕಿಕೊಂಡು
ಭ್ರಮರಂಗಳು  ಪೋಗುವಂತಾ
ರಮಣ ನಿನ್ನ  ಕೊಡೊ ಯನ್ನನು  ಸುಮಾ
ನಸದಿಂದ  ಬಿಡುವೆ ॥ರಾಜ ಬಿಡುವೆ ॥

ಪ್ರಭಾವತಿ: ಹೇ ರಮಣಾ, ಕಮಲಗಳನ್ನು ಹುಡುಕಿಕೊಂಡು ಭ್ರಮರಗಳು ತಿರುಗುವಂತೆ ರಮಣನಾದ ನಿನ್ನನ್ನು ನಾನು ಹುಡುಕಿಕೊಂಡು ಬರಲು ಸಂತೋಷ ವಲ್ಲೆನೆಂದು ತಿರಸ್ಕರಿಸುವ ಭಾವವಂ ನಿನ್ನ ಸಮನಾದ ಪುರುಷರು ಕೇಳಿದರೆ ಅಪಹಾಸ್ಯಕ್ಕೆ ಗುರಿ ಮಾಡುವರಲ್ಲಾ, ಸರ‌್ವಥಾ ಪೋಗಲಾಗದೇ ಕಾಂತ ಮತಿಗುಣವಂತಾ.

ಪದ

ಕುಂಡಲಪುರಿ ಈಶನನ್ನು  ಮಂಡಲಾ
ಧಿಪ ಭಜಿಸೊ  ಬಂಡು ಮಾಡದೆನ್ನ
ಬೇಗ  ಮಂಡಲಾಧಿಪತಿಯೆ  ಕೂಡೊ ॥ಪೇಳುವೆ ॥

ಪ್ರಭಾವತಿ: ಹೇ ಕಾಂತ ಹೇ ರಮಣಾ, ಕುಂಡಲಪುರೀಶನಾದ ಮಾರುತೀಶನು ಯನ್ನನ್ನು ಸಲಹಲೆಂದು ಬೇಡುತ್ತೇನೆ ಕರುಣಿಸಿ ಕೂಡುವಂಥವನಾಗೊ ಕಾಂತಾ ಮತಿ ಗುಣವಂತಾ.

ಪದ

ಪೋಗಬೇಕು ಯುದ್ಧ ಮಾಡಲು  ಗಾಂಡೀ
ವಿಯೊಡನೆ  ಬೇಗದಿಂದ ರಣಕೆ ನಾನು
ಪೋಗಿಬರುವೇ ಕೇಳೆ  ರಮಣಿ ॥ಮೆಚ್ಚಲು ॥

ಸುಧನ್ವ: ಹೇ ಕಾಂತ ಹೇ ರಮಣಾ ಹೇ ನಲ್ಲಾ  ಗಾಂಡೀವಿಯೊಡನೆ ಯುದ್ಧಕ್ಕೆ ಪೋಗಬೇಕೆಂದು ಸಿದ್ಧನಾಗಿ ಬಂದಿರಲು ಬಾರಿ ಬಾರಿಗೂ ಯನ್ನನ್ನು ರುತುವಂ ಪರಿಹರಿಸಲು ನಿಂತಿದ್ದಾದರೇ ಭೋಗಿ ಭೂಷಣಾದಿಗಳು ಮೆಚ್ಚಲಾರರೂ ಯನ್ನ ಕಾಡಬೇಡವೇ ರಮಣಿ ಸದ್ಗುಣಾಭರಣಿ.

ಪದ

ಚಟುಲ ರವುದ್ರ ರಭಸದಿಂದಲಿ  ಕೇಳೆನ್ನ
ರಮಣಿ ಕಟಕ ಪೋಗುತ್ತಿಹುದಲ್ಲಿ  ತಡೆ
ಯಬೇಡ ಕೇಳೆ ರಮಣಿ ॥ಪೇಳುವೆ ॥

ಸುಧನ್ವ: ಹೇ ಕಾಂತೆ, ಕಟಕವೆಂಬ ಯುದ್ಧಕ್ಕೆ ಮಂದಿಸಂದಣೆಯರೆಲ್ಲಾ ಪ್ರಯಾಣಬದ್ಧರಾಗಿ ಹೊರಟು ಇರುತ್ತಾರೆ. ಅವರ ಸಂಗಡಲೆ ನಾನು ವೋದರೆ ಪುರಮಹೋತ್ಸವಯೆಂದು ಯನ್ನ ಜನಕನು ಮೆಚ್ಚುತ್ತಾನೆ. ನಾನು ಈ ವ್ಯಾಳೆಯಲ್ಲಿ ನಿನ್ನ ಇಚ್ಛೆಯ ಬಯಕೆಯನ್ನು ಸಲಿಸಲು ನಿಂತಿದ್ದೆ ಆದರೆ ಅತಿ ಕಷ್ಟ ಸಂಭವಿಸುವದೂ. ಆದಕಾರಣ ಯನ್ನನ್ನು ತಡೆಯಬೇಡವೆ ರಮಣಿ ಸದ್ಗುಣಾಭರಣಿ ॥

ಪದ

ವುರಗಪುರವಾಸ ಬಲ್ಲಾ  ಯನ್ನಯ ಸೊಲ್ಲಾ
ನರರು ನೋಡಿ ಮೆಚ್ಚಬೇಕಲ್ಲಾ  ಸುರತಸುಖವು
ಜೈಸಬೇಕಲ್ಲಾ ॥ಪೇಳುವೇ ॥ಕೇಳಿನ್ನ

ಸುಧನ್ವ: ಹೇ ರಮಣಿ ವುರುಗಪುರೀಶನಾದ ಮಾರುತೀಶನು ಯನ್ನ ಹೃದಯಾಂಶವನ್ನು ತಿಳಿಯುವನಲ್ಲದೆ ನಾನು ನಿನ್ನ ಮಾತಿಗೆ ಬದ್ದವಾದರೆ ಸುರರು ಮೆಚ್ಚರು. ಯನ್ನ ಜನಕನಿಗು ಶತ್ರುವಾಗಿ ತೋರುತ್ತೇನಲ್ಲದೆ ಸರ‌್ವಥಾ ನಿನ್ನನ್ನು ಕೂಡುವದಕ್ಕೆ ಆಗುವದಿಲ್ಲವೆ ನಾರಿ ಮದನ ಕಠಾರಿ.

ಕಂದ

ವಲ್ಲೆನು ನಾನೆಂದರೆ  ಸಲ್ಲಲಿತದಿಂ  ಬಲ್ಲ
ಬುಧ್ದಿವಂತರಿಳೆಯೊಳ್  ಪಲ್ಲವ ಪಾ
ಣಿಗಳೆಮ್ಮನೂ  ವಲ್ಲೆನು ನಾನೆಂದು
ನುಡಿಯುವದಿದು ಸರಿಯೇನೊ ಕಾಂತ ॥

ಪ್ರಭಾವತಿ: ಹೇ ಕಾಂತ ಯನ್ನನ್ನು ಕೂಡು ಎಂದು ಎಷ್ಟು ವಿಧವಾಗಿ ಬೇಡಿಕೊಂಡಾಗು ವಲ್ಲೆನೆಂದು ಪೇಳುವದು ಸರಿಯಲ್ಲವೊ ಕಾಂತಾ ಮತಿಗುಣವಂತಾ.

ಸುಧನ್ವ: ಹೇ ಕಾಂತೆ ನೀನು ಎಷ್ಟು ಬೇಡಿಕೊಂಡರು ನಾನು ನಿಲ್ಲುವದಿಲ್ಲಾ. ಯನ್ನನ್ನು ತಡೆಯಬೇಡವೇ ನೀರೆ ಶರಧಿ ಗಂಭೀರೆ.

ಪದ

ವಲ್ಲೆನೆಂಬುವರೇನೊ  ಯಲೊ ಜಾಣ
ಸೈ ಸೈ ಯಲೊ ಜಾಣ ಇಲ್ಲದೋಯಿತೆ ಕರು
ಣಾ ಕೇಳೊ ರಮಣಾ ॥
ನಿನ್ನ ರೂಪನು ನೋಡಿ ಖಿನ್ನಳಾದೆನೋ ದೇವಾ ಮ
ನ್ನಿಸು ಮಹಾನುಭಾವನೆ  ಕನ್ನೆಯ ಬಿಡ
ಬೇಡೊ  ಮೋಹವಿಡೊ ॥
ಸನ್ನುತ ಭೀಮೇಶ  ನೆನ್ನುತಾ ಮನದಲ್ಲಿ  ಪನ್ನಗಧರ
ನಾಣೆ ಯನ್ನ  ಕರುಣದಲಿ ನೀ ಕೂಡೊ ॥ಮನವಿಡೊ ॥

ಪ್ರಭಾವತಿ: ಹೇ ಸುಂದರಾಂಗ ರುತುಮತಿಯಾಗಿ ಮೂರು ಇರುಳು ಕಳೆದ ನಂತರ ರುತುಸ್ನಾನವಾದ ಬಳಿಕ ಸತಿಯು ಪತಿಯನ್ನು ಕೂಡುವ ಪದ್ಧತಿಯುಂಟೆಂದು ಧರ್ಮಶಾಸ್ತ್ರವುಂಟು ಅದರಂತೆ ತ್ವರಿತದಿಂದ ಕೂಡಿ ರತಿಕೇಳಿಯನ್ನು ನಡೆಸುವಂಥವನಾಗೆಂದು ಬೇಡಿಕೊಂಡರೆ ವಲ್ಲೆನೆಂಬುವದು ಧಾವ ನೀತಿಯುಂಟು ಪೇಳಬೇಕೊ ಕಾಂತ ಕಾಮಿನಿಯ ವಸಂತಾ.

ಪದ

ಧರ್ಮಶಾಸ್ತ್ರಂಗಳ ತಿಳಿದು ಕರ್ಮಬಂಧನಾಗಿದ್ದು
ಸುಮ್ಮನಿರುವದೇನು ಮುದ್ದು  ಮರ್ಮವನ್ನು ಬಿಟ್ಟು
ಮನ ನಿಜವನು  ಪಟ್ಟು ॥ಶಮನ
ಗೈಸದೇ  ಗಮನಾವ್ಯವಸ್ಥೆ ಬ್ಯಾಡ ॥ಕೇಳೂ ॥

ಪ್ರಭಾವತಿ: ಹೇ ರಮಣ, ಧರ್ಮಶಾಸ್ತ್ರಂಗಳಂ ತಿಳಿದವನಾಗಿ ಕರ್ಮ ಸೇರಿಸಲು ಬದ್ದನಾಗಿರ್ದು ಸುಮ್ಮನೆ ಇರುವದು ಮುದ್ದಲ್ಲಾ. ಮನಸಿಜನ ಉಪಟಳವನ್ನು ಶಮನ ಗೈಯದೆ ಗಮನಕ್ಕೆ ಮನಸು ಕೊಡಬಹುದೋ ವೀರ ಸುತಗಂಭೀರ.

ಪದ

ತುದಿ ವಿಶಾಖೆಗೆ ಬಂದು ನಿಂದು  ಬೆದೆ ಮೀರಿ
ತೆಂದು  ಬೇಡುತ್ತಲಿಹೆನು ನಾನು ಇಂದು ॥
ಹಸನಾದ ಭೂಮಿಗೆ ಪಸರಿಸೆ ಬೀಜವ
ಕುಸುಮಶರವ ಸತಿಯೊಳೀಗ ಬಿತ್ತದೆ ॥

ಪ್ರಭಾವತಿ: ಹೇ ಕಾಂತ ಹೇ ರಮಣಾ, ವಿಶಾಖೆಯ ಮಳೆ ಬಂದಾಗ್ಯು ಬೀಜವನ್ನು ಹಾಕದಿದ್ದರೆ ಹ್ಯಾಗೆ ಫಲವಿಲ್ಲವೊ ನೀನು ಸಂಗರಕ್ಕೆ ಪೋಗಿ ಬಂದು ಕೂಡುತ್ತೇನೆನ್ನುವದು ಪ್ರತಿಯಾಗಿರುತ್ತೆ. ಈಗ ಹಸನಾದ ಭೂಮಿಗೆ ಬೀಜವನ್ನು ಹಾಕಿದ್ದೇ ಆದರೆ ಅದು ಫಲಿಸುತ್ತದೆ. ಈ ಬೆದೆಗಾಲವನ್ನು ಕಳೆದು ಬೇಸಿಗೆಯಲ್ಲಿ ಕಾದಿರ್ಪ ಭೂಮಿಗೆ ಬೀಜವನ್ನು ಹಾಕಿದರೆ ಪ್ರಯೋಜನ ಹೊಂದಲಿಕ್ಕಿಲ್ಲವಾಗಿ ಯೆನ್ನ ತಾಪವನ್ನು ಶಮನಗೈಸೆ ಬೀಜವನ್ನು ಬಿತ್ತಿ ಪೋಗಬಹುದೊ ಕಾಂತ ಸರಸ ಧೀಮಂತಾ ….

ಪದ

ಕಂದನ ಕರುಣಿಸಿ ಕೊಟ್ಟು ಚಂದದಿಂದ
ದಯವಿಟ್ಟು  ಸುಂದರ ಮನವೆನ್ನೊಳಿಟ್ಟು  ಕಂದ
ರ್ಪಜನಕಾನಂದ ಪೋಲುವ ಇಂದು  ನಿಮ್ಮಯ
ಪಾದದ್ವಂದ್ವವ ಪಿಡಿವೆನೋ ॥

ಪ್ರಭಾವತಿ: ಹೇ ಕಾಂತ, ಮುಂದಿನ ಸದ್ಗತಿಗೆ ಸಂತತಿಯನ್ನು ಬಯಸಿ ಬಂದು ನಿಮ್ಮ ಹೊಂದಬೇಕೆಂದು ಬೇಡಿಕೊಳ್ಳಲು ನಿನಗೆ ದಯವು ಬಾರದೇ ಹೋಯಿತು. ಅಪುತ್ರಸ್ಯ ಗತಿರ್ನಾಸ್ತಿಯೆಂಬುವ ವಚನವುಂಟು ಅದನ್ನ ತಾವು ತಿಳಿದು ಮೂಢರಂತೆ ಅರಿಯದ ಸ್ತ್ರೀಯಳಲ್ಲಿ ಮೂರ್ಖವನ್ನು ಮಾಡಿ ಬಳಲಿಸಿ ಪೋಗುವದು ಯಷ್ಟು ಮಾತ್ರಕ್ಕು ವುಚಿತವಲ್ಲಾ. ಸದ್ಗತಿಗೆ ಮಾರ್ಗವನ್ನು ಮಾಡಿಸು ಕಾಂತ ಸದ್ಗುಣವಂತಾ.

ಪದ

ವುರಗಪುರೀಶನು ವರವಾ  ಬೇಗ ಕರುಣಿಸಿ
ಕೊಡುವ  ಸ್ಥಿರಪದವಿಯ ಪಾಲಿಸುವಾ ॥
ಪರಿಪರಿ ವಿಧದಲಿ  ಪೇಳಿದರೇ
ಮಾರನಂಬಿಗೆ ಗುರಿ  ಮಾಡಿ ನೀ
ತೆರಳದೇ ಕೇಳೊ ರಮಣ॥

ಪ್ರಭಾವತಿ: ಹೇ ಸುಂದರಾಂಗ. ಈ ಕಾಲದಲ್ಲಿ ಯನ್ನನ್ನು ಕೂಡಿ ಸುಖಿಸಿ ನೀವು ಪ್ರಯಾಣಬದ್ದರಾದರೆ ವುರಗ ಪುರೀಶನು ಮೆಚ್ಚಿ ವರವಂ ಕರುಣಿಸಿ ಕೊಡುತ್ತಾನೆ. ನಂಬಿದ ಸತಿಯಳನ್ನು ತಿರಸ್ಕರಿಸಿ ಪೋದರೆ ಯಾರು ಮೆಚ್ಚಲಾರರು. ಯಾವ ಕಾರ‌್ಯವಾದರು ಬಿಟ್ಟು ಮಂಗಳಾಂಗಿಯನ್ನು ಕೂಡದೆ ಪೋಗುವದು ವುಚಿತವಲ್ಲವೊ ರಮಣಾ ಸದ್ಗುಣಾಭರಣಾ ॥

ಸುಧನ್ವ: ಹೇ ಸುಂದರಾಂಗಿ, ಪತಿಯೊಡನೆ ವ್ಯರ್ಥವಾದಿಸೋಣವು ತನ್ನ ಸುತನನ್ನು ತಾನೇ ಸಂಹರಿಸೋಣವೂ ಪರರಿಗೆ ಅನುಕೂಲಪಡಿಸೋಣವೂ, ಇಂಥಾ ಸ್ತ್ರೀಯು ಹತ್ತು ಮಕ್ಕಳನ್ನು ಹಡೆದವಳಾದಾಗ್ಯೂ ತ್ಯಜಿಸಬೇಕೆಂದು ಧರ್ಮಶಾಸ್ತ್ರವುಂಟಾಗಿರುವುದರಿಂದ ನಾನು ಹೇಳಿದ್ದಕ್ಕೆಲ್ಲಾ ಪ್ರತಿ ಮಾತನಾಡುತ್ತಾ ವಾದಿಸುವುದು ವುಚಿತವಲ್ಲವೆ ಕಾಂತೆ ಸರಸಿ ಧೀಮಂತೆ.

ದ್ವಿಪದೆ ಮುಖಾರಿ

ಯಂತು ಪೇಳಲಿ ನಾನು ಏನೆಂಬೆನಕಟ ಅಂತ
ರದೊಳಿರ್ಪ ಚಿಂತೆಯಂ ಮರೆತು  ಯಂತು ಸೈ
ರಿಸಲಿ ನಾನು  ಕಾಂತಾ ನಿನಗೆ ಲೇಶವು ಕರುಣವಿ
ಲ್ಲದೇ  ಬಹು ಕಾಠಿಣ್ಯನಾದೆ  ಹರಹರ ಅತಿಕ
ಷ್ಠ ಅನುಭವಿಸಲಾರೆ ಪರಮೇಶ ಪಾಲಿಸೊ
ಪಾರ‌್ವತಿ ರಮಣಾ ಪರಿತಾಪದಿಂದೆನ್ನ  ಪ್ರಾಣವ
ನ್ನು ತೊರೆದೊಡೆ ನಿರುತ ನಂಬಿದ ಸತಿಗೆ
ಗತಿಯು ಪಾಲಿಸದೇ  ಸ್ಮರಚಾಪ  ಶರತಾಪ  ಸಂ
ತಾಪಕಿಕ್ಕಿ  ಸರಸಿಜಾಕ್ಷಿಯ ತೊರೆದು  ನೀ ಪೋ
ದರೆ  ವುರಗಪುರಿವಾಸನೂ  ಸ್ಥಿರಪದವಿ
ಯನ್ನು ಕೊಡನು ಹರುಷದಿಂದ ಕೂಡೆನ್ನ
ಸ್ಮರರೂಪ ಕಾಂತ ॥

ಪದ

ಮಾತಾನಾಡೊ ಚದುರ ನಲ್ಲಾ  ಪ್ರೀತಿ
ಯೊಳೀಗ ॥ಮಾತನಾಡೊ ಚದುರ
ನಲ್ಲಾ ॥ಮಾರನ ಕೇಳಿಗಿಂದು ನೀನು
ಆರೈಸಿನಾನು  ಧೀರನೆ ನಿನ್ನಿಗ
ಬಿಡದೆ  ಸೇರಿದೆನು ವರಿಸೊ ಬಂದು  ಮಾತನಾಡೊ ॥

ಪ್ರಭಾವತಿ: ಹೇ ಪ್ರಾಣ ಕಾಂತಾ, ನಿನ್ನನ್ನು ನಂಬಿದ ಸ್ತ್ರೀಯಳಿಗೆ ಮೀರಿದ ತಾಪವನ್ನು ಸಾರಿ ಬಿಡಿಸದೇ ವಾರಿಜಾಕ್ಷಿಯಳ ಪಾರು ಮಾಡದೆ ಮೀರಿ ಪೋಗುವದು ವುಚಿತವಲ್ಲವೊ ಕಾಂತ ॥

ಪದ

ಕಡುಚಲ್ವನಿವನ ನಾನು  ಕೇಳೈಯ್ಯ ರಮ
ಣಾ  ಕಡುಚಲ್ವನಿವನ ನಾನು ॥ಬಿಡದೀಗ ಮೋ
ಹಿಸಿದೆನೊ   ಜಲಜಾಕ್ಷ ಹರಿಯು ತಾನು  ಬಿ
ಡದಿವನ ವದಗಿಸಿಹನು ॥ಕರುಣದಿಂದ  ಕೂ
ಡೂ ರಮಣಾ ॥ಮಾತನಾಡೂ ಚದುರ ನಲ್ಲಾ ॥

ಪ್ರಭಾವತಿ: ಕಾಂತಾ ನಿನ್ನ ನಂಬಿದ ಸತಿಯ ನಿನ್ನ ಹೃದಯಕಮಲವೆಂಬ ಕರುಣಸಮುದ್ರದಲ್ಲಿ ಮುಳುಗಿಸದೆ ಶಂಭರಾಸುರನ ಕೈಗೆ ರತಿಸಿಕ್ಕಿ ಸೆರೆಯಲ್ಲಿ ಮುಳುಗಿದಂತ್ತೆ, ಯನ್ನನ್ನು ಅಪಾರವಾದ ಚಿಂತೆಯ ಸೆರೆಗೆ ಸೇರಿಸಿ ಪೋಗುವದುಚಿತವೇನೋ ಕಾಂತ ಸದ್ಗುಣವಂತಾ.

ಹೇ ಸ್ವಾಮಿಯೆ, ವುರುಗಪುರೀಶನಾದ ಮಾರುತೀಶನೆ ನಿಮ್ಮ ಚರಣಗಳನ್ನು ಭಜಿಸುವಂತೆ ಕರುಣಿಸಿರುವನು. ಹೇ ಕಾಂತ ಯನ್ನನ್ನು ಕೂಡದೇ ಪೋದರೆ ಗರಳವೆಂಬ ವಿಷವನ್ನು ಪಾನಮಾಡಿ ಈ ಹರಣವನ್ನು ಪಾರ್ವತೀಶನಿಗೆ ಸಮರ್ಪಿಸಿ ಪ್ರಾಣವನ್ನು ಬಿಡುತ್ತೇನೊ ಶ್ರೀಹರಿ. ನೀನಾದರು ಕರುಣಿಸಿ ಯನ್ನ ರಮಣನನ್ನು ಕೂಡುವಂತೆ ಮಾಡಬಾರದೆ ಗೌರೀಪತಿ.

ಶ್ಲೋಕ

ಆತ್ಮ ಬುದ್ಧಿ ಸುಖಂಚೈವ  ಗುರುಬದ್ದಿ ವಿಶೇಷಿತಃ
ಪರಬುದ್ಧಿ ವಿನಾಶಾಯ  ಸ್ತ್ರೀ ಬುದ್ಧಿ ಪ್ರಳಯಾಂತಕಃ ॥

ಸುಧನ್ವ: ಹೇ ರಮಣಿ, ತನ್ನ ಸ್ವಬುದ್ಧಿಯಿಂದ ನಡೆಯುವದು ಸರ‌್ವೋತ್ತಮವಾದ ಕಾರ‌್ಯ. ಗುರುಹಿರಿಯರ ಮಾತಿನಂತೆ ನಡೆಯುವುದು ವಿಶೇಷವಾದ ಕಾರ‌್ಯ. ಪರರ ಹೇಳಿಕೆಯಂತೆ ನಡೆಯುವದು ವಿನಾಶಕ್ಕೆ ಕಾರಣ. ಸ್ತ್ರೀಯರ ಹೇಳಿಕೆಯಂತೆ ನಡೆಯುವದು ಮಹಾಪ್ರಳಯಕ್ಕೆ ಕಾರಣವೆಂದು ಪೂರ್ವಿಕರು ನಿರ್ಣಯಿಸಿರುತ್ತಾರಾಗಿ ಯೀಗ ನಿನ್ನ ಹೇಳಿಕೆಯಂತೆ ವಳಪಟ್ಟವನಾದರೆ ವಿಪತ್ತು ಸಂಭವಿಸದೇ ತಪ್ಪದು ಎಷ್ಟು ತಿಳಿವಳಿಕೆ ಹೇಳಿದಾಗ್ಯು ಮೂರ್ಖತ್ವದಲ್ಲಿ ವೇದನೆಪಡಿಸುತ್ತಾ ಇದ್ದಿ. ಯಾವ ಮನುಷ್ಯನಿಗೂ ಸಂಸಾರದಲ್ಲಿ ಬದ್ದವಾಗಿರುವದು ಕಷ್ಠವೇ ಹೊರ್ತು ಸುಖ ದೊರೆಯದಾದ ಕಾರಣ ಯೀ ವ್ಯಾಳೆಯಲ್ಲಿ ಎಷ್ಟು ಮಾತ್ರಕು ಕೂಡಲಾರೆನೇ ನಾರಿ ಮದನ ಕಠಾರಿ ॥

ಯಾಲಪದ

ಕಾಮಿಸು ಕಾಂತನೆ ಯನ್ನ ॥ಕಾಮಿನಿಯಾದೆ
ನ್ನನೀಗ  ಕಾಮ ಕ್ರೀಡಳಾಗಿ ಬಂದಿಹೆನು
ಕಾಂತಾ ಕೇಳು ॥ತಾಮಸವ ಮಾಡದೇನಿನ್ನು ॥
ಸರಸ ಸುಗುಣಕರನೆ ॥ನಿನ್ನ
ಬೇಡುವೆನು ನಾನು ॥ಸರಸಿಜನೇತ್ರ ಕೇಳೈಯ್ಯ ॥

ಸುಂದರಾಗ ॥ಸುರಚಿರದಿಂದ ಕೇಳೈಯ್ಯ ॥
ಪರಿಪರಿಯ ವಿಧದಿಂದಲಿ  ಶರಗಳನ್ನು ಬೀರುತಲಿ ॥
ಗಾರು ಮಾಡದೆನ್ನ ಕೂಡೈಯ್ಯ
ಸುಗುಣಾಕರನೆ ॥ಮೀರಿದಂತಾ ಮೋಹದ ಕೆಲಸಕೆ ॥

ಪ್ರಭಾವತಿ: ಕಾಂತ, ಪೂರ್ವಜನ್ಮದಲ್ಲಿ ನಾನು ಯಾರ ಸುಖಂಗಳಿಗೇ ದುಷ್ಠ ಕಾರ‌್ಯಗಳಾಚರಿಸಿ ಇದ್ದೆನೊ. ಆದಕಾರಣ ಈ ಕಾಲಕ್ಕೆ ಯನಗೆ ಪತಿಯಾಗಿ ನೀನು ಕಷ್ಠವನ್ನು ಅನುಭವಿಸುವದಕ್ಕೆ ಪ್ರಾಪ್ತಿಯಾಯಿತು. ಇದಕ್ಕೆ ನೀನು ಮಾಡತಕ್ಕದ್ದೇನು. ನಾನು ಮಾಡಿದ ಅನ್ಯಾಯ ನಾನೇ ಅನುಭವಿಸ ಬೇಕಲ್ಲಾ, ಎಷ್ಟು ಹೇಳಿಕೊಂಡಾಗ್ಯು ವ್ಯರ್ಥವೊ ಕಾಂತ ಮತಿಗುಣವಂತಾ.

ಪದ

ಅಗಲಿ ಪೋಗುವರೇನೊ ರಮಣಾ  ಕೇ
ಳೆಲವೊ ಸುಗುಣಾ ॥
ಇಂದು ನಿನ್ನ ನಂಬಿದೆನೊ  ಕಾಂತ ಕೇಳು
ಬಂದು ಯನ್ನ ಮಂದಿರದಿ ॥ವೊಂದಬೇಕು
ಕೇಳೊ  ಪ್ರಿಯ ॥ಅಗಲಿ ಪೋಗು ॥
ನಾರಿಮಣಿಯಳನ್ನು ಈಗ ನಿರಾಕರಿಸಿ ಪೋ
ಗಬಹುದೆ  ಮಾರಕೇಳಿಯೊಳೀಗಾ
ಸೇರಿ ಸುಖವ ತೋರಬೇಕೊ ॥ಅಗಲಿ ॥

ಪ್ರಭಾವತಿ: ಹೇ ಕಾಂತಾ, ಎಷ್ಠು ಕ್ರೂರ ಕರ್ಮಗಳಂ ಮಾಡಿ ಈಗ ಈ ಕಷ್ಠವನ್ನು ಅನುಭವಿಸುವ ಪ್ರಾಪ್ತಿ ಯನಗುಂಟಾಯಿತು. ಇಂಥ ಪಾಪಿ ಜನ್ಮವನ್ನು ವಾರಿಜೋದ್ಭವನಾದ ಬ್ರಹ್ಮನು ಸ್ರಷ್ಠಿ ಮಾಡಿದ್ದರಿಂದ ಎನಗೆ ಈ ಕಷ್ಠ ಬಂದು ವದಗಿತೆಲೊ ಕಾಂತ ಸರಸ ಧೀಮಂತ.

ಪದ

ಜಡೆಯು ಕೊರಳಿಗೆ ಹಾಕಿ ॥ಬಿಡುವೆ ಪ್ರಾಣವ
ನೂ ಕಾಂತ ॥ಮೃಡನಿಗರ್ಪಿಸುವೆನು  ತಡೆಯದೆ ಈಗಾ ॥

ಪ್ರಭಾವತಿ: ಹೇ ಸುಂದರಾಂಗ, ಕೊರಳಿಗೆ ಉರುಳನ್ನು ಹಾಕಿಕೊಂಡು ಮೃಢನಾದ ಪರಮೇಶ್ವರನಿಗೆ ಈ ಪ್ರಾಣವನ್ನು ಅರ್ಪಿಸುತ್ತೇನೆ. ಇನ್ನೆಷ್ಠು ಮಾತ್ರಕ್ಕು ಹೊರೆಯುವದಿಲ್ಲವೊ ರಮಣಾ ಸದ್ಗುಣಾಭರಣ॥

ಪದ

ವಡವೆ ವಸ್ತುಗಳೆಲ್ಲಾ  ಪೊಡವೀಶ
ತಕ್ಕೊಂಡು ॥ನಲ್ಲಾ ॥ತಡೆಯಾದೆ ನೀ
ಪೋಗೊ  ಸಡಗರದಿಂದಾ ॥

ಪ್ರಭಾವತಿ: ಹೇ ನಲ್ಲಾ, ಈ ವಡವೆ ವಸ್ತುಗಳನೆಲ್ಲ ತೆಗದು ಇಡುತ್ತೇನೆ. ನಿನ್ನ ಹಸ್ತದಲ್ಲಿ ತೆಗೆದುಕೊಂಡು ಪೋಗುವಂಥವನಾಗು. ನಿನ್ನ ಚರಣಕ್ಕೆ ವಂದನೆಯನ್ನು ಮಾಡಿ ಈ ಪ್ರಾಣವನ್ನು ಬಿಡುವಂಥವಳಾಗು ತ್ತೇನೆ. ಸಂತೋಷಪಡಬಹುದೊ ಕಾಂತ ಮತಿಗುಣವಂತಾ.

ಪದ

ವುರಗಪುರೀಶನ  ಚರಣಾವ ಭಜಿ
ಸುತ್ತಾ ॥ಹರಣಾವ ಬಿಡುವೆ
ನೊ  ಕರುಣಿಸೊ ಕಾಂತ ॥

ಪ್ರಭಾವತಿ: ಹೇ ಕಾಂತ, ವುರಗಪುರೀಶನಾದ ಮಾರುತೀಶನಂ ಭಜಿಸುತ್ತಾ ಹರಣವಂ ಬಿಡುತ್ತೇನೆ ನಿನ್ನ ಕಣ್ಣುಗಳಿಂದ ನೋಡಬಹುದೊ ರಮಣಾ.