ಪದ ರೂಪಕ

ಧಾವ ನೀತಿಯು ಪೇಳೆ  ಭೂತಳದೊಳಗುಂ
ಟೆ  ದೇವ ಮಾನವರೊಳಗೀ  ಪರಿಯುಂಟೆ ಬ್ಯಾಡ ॥

ಜನಕನಾಜ್ಞೆಯ ಮೀರಿ  ಜನಿಸಿದ ಸ್ಥಳ
ತೋರಿ  ಮನುಮತ ಜನಕನಾ  ಕಾಣ
ದೀಪರಿಯ ॥ಈ ಪರಿಯ ॥
ಪಾಕಶಾಸನ ಸೋಮ  ನಾಥನು ಪ್ರಖ್ಯಾತ  ಬೇಕೆಂ
ದು ಯುದ್ಧಕ್ಕೆ  ಬಂದಿರುವನ ಕೂಡೆ  ಕೇಳಿ ॥

ಸಂತೋಷದೊಳಗಿರೆ  ಚಿಂತೆ ಪುಟ್ಟಿ
ಸುವರೇ  ಪಂಥ ಮಾಡದೆ ಬೇಗ  ಕಳು
ಹಿಸೆ ಈಗ ॥ನೀ ಬೇಗ ॥

ಸುಧನ್ವ: ಹೇ ನಾರಿ, ಸ್ತ್ರೀಯರು ಭೋಜನದಲ್ಲಿ ಎರಡು ಪಾಲು ಜಾಸ್ತಿಯಾಗಿರುವರು. ಬುದ್ಧಿಯಲ್ಲಿ ನಾಲ್ಕು ಪಾಲು ಜಾಸ್ತಿಯಾಗಿರುವರು. ಕಾಮದಲ್ಲಿ ಎಂಟು ಪಾಲು ಜಾಸ್ತಿಯಾಗಿರುವರು. ಆದಕಾರಣ ನಾನು ಎಷ್ಟು ನೀತಿವಾಕ್ಯವನ್ನು ಬೋಧಿಸಿದಾಗ್ಯು ಕಾತರಿಸಿ ಮಾತನಾಡುವೆ. ನಾನು ಜಾಗ್ರತೆಯಾಗಿ ಪೋಗಿ ಬರುತ್ತೇನೆ ಯನ್ನನ್ನು ತಡೆಯಬೇಡವೇ ನಾರಿ ಮದನ ಕಠಾರಿ ….

ಪದ

ಹೆಣ್ಣು ಮಕ್ಕಳು ಪೆತ್ತ ಅಣ್ಣಗಳಿರ ಕೇಳಿ
ಸಣ್ಣ ಪ್ರಾಯದ ಸುಗುಣ  ರನ್ನ ಪೋಗುವನು ॥
ಕೇಳಿ  ಕೇಳಿ  ಕೇಳಿ ॥
ರುತುಮತಿಯಾಗಿ ನಾ ಗತಿಸಿತು ದಿನತ್ರಯ
ಪತಿಯು ಕೂಡದೆ ಪೋಪ  ಹಿತವಂತರೆ ಕೇಳಿ
ಹೇಳಿ  ಹೇಳಿ ॥
ಸಂತಾನ ಬಯಸುತ್ತಾ  ಸಂತೋ
ಷದಿ ಬಂದೆ  ನಾಥನು ಪೋಪರೆ  ಏನು ಮಾ
ಡುವದು  ಪೇಳಿ  ಪೇಳಿ  ಪೇಳಿ ॥
ಮಕ್ಕಳಿಲ್ಲದ ಮೇಲೆ  ದಿಕ್ಯಾರು ಯಮಗೆ
ಸ್ವರ್ಗಕ್ಕೆ ಪೋದರೆ  ದಾರಿ ಸಿಕ್ಕಾದು  ನೋಡಿ ॥
ಮುಂದೇನು ಗತಿ ಇನ್ನು
ಈ ಧಾತ್ರಿಯೊಳು ಪ್ರಾಣ  ಇರಿಸಬಾರದು ॥
ಇನ್ನು  ಇದ್ದು ಫಲವೇನು ॥ಹೇಳಿ ॥ಹೇಳಿ ॥

ಪ್ರಭಾವತಿ: ಅಯ್ಯ ಸಭಾಜನರೆ, ಕಠಿಣಚಿತ್ತನಾದ ಕಾಂತನಿಗೆ ಎಷ್ಟು ವಿರಹತಾಪಂಗಳಂ ಪೇಳಿಕೊಂಡಾಗ್ಯು ದಯವುಂಟಾಗಲಿಲ್ಲಾ. ನೀವು ಹೆಣ್ಣು ಮಕ್ಕಳನ್ನು ಪಡೆದಂಥವರು ನೀವಾದರು ಬುದ್ಧಿಯಂ ಪೇಳಿ ಯನ್ನ ಕ್ರೀಡಿಸುವಂತೆ ಮಾಡಿಸಬಾರದೆನಪ್ಪಾ ತಂದೆ ತಾಯಿಗಳಿರಾ.

ಸಾರಥಿ: ಅಯ್ಯ ರಾಜ. ನಿನ್ನ ರಾಣಿಯು ವಿರಹ ತಾಪದಿಂದ ಬಹಳ ವ್ಯಸನ ಪಡುತ್ತಾ ಇರುವಳು ಸಂತೋಷಿಸಿ ಪೋಗುವದು ಲೇಸೈಯ್ಯ ರಾಜ ರವಿಸಮತೇಜಾ.

ಸುಧನ್ವ: ಯಲಾ ಸಾರಥಿ, ಸ್ತ್ರೀಯಳ ಕೂಪಕ್ಕೆ ವಳಪಟ್ಟದ್ದೇ ಅದರೆ ಅರ್ಥಹಾನಿ ಮಾನಹಾನಿ ಪ್ರಾಣಹಾನಿ ಈ ಮೂರು ಸಂಭವಿಸುವುದಕ್ಕೆ ಸಂದೇಹವಿಲ್ಲಾ. ಯೀ ಕಾಲದಲ್ಲಿ ಇಂಥಾ ಮಾತು ಪೇಳಿದರೆ ವಪ್ಪುವದಿಲ್ಲವೋ ಸಾರಥಿ.

ಸಾರಥಿ: ಅಯ್ಯ ರಾಜ. ಪುರುಷರಿಗೆ ಯಾವ ಕಷ್ಠ ಬಂದಾಗ್ಯು ಸಹಿಸಿಕೊಳ್ಳ ಬಹುದು. ಸ್ತ್ರೀಯರನ್ನು ಬಳಲಿಸುವದು ಸರ್ವಥಾ ಸಹಜವಲ್ಲಾ. ನಿನ್ನ ರಾಣಿಯನ್ನು ಸಂತೈಸುವದು ವುಚಿತವೈಯ್ಯ ರಾಜ ರವಿಸಮ ತೇಜಾ.

ಸುಧನ್ವ: ಭಳಿರೆ ಸಾರಥಿ ಹಾಗಾದರೆ ನಿನ್ನ ಮಾತುಗಳನ್ನು ಗ್ರಹಿಸುತ್ತೇನೊ ಸಾರಥಿ.

ಪದ
ಮಚ್ಚೆ ಕಂಗಳೆ ಮೆಚ್ಚಿದೇ ಮಾನುನಿ ರನ್ನೆ ಇಚ್ಚೆ ಇಂದಲಿ ಕೂಡುವೆ ॥
ಮುಚ್ಚುಮರೆ ಇನ್ಯಾಕೆ ಮನದೊಳು ಕಚ್ಚೆ ಕಾಮನ ಕೊಚ್ಚಿ ಬೇಗದಿ
ನೂಚ್ಚು ನೂರನು ಮಾಡುವೆ ಜಗದಾಚ್ಯುತ ಹರಿ
ಮೆಚ್ಚಿ ಸಲಹಲಿ ॥ಮಚ್ಚೆ ಕಂಗಳೆ ॥
ತರಳೆ ಮರುಗಲ್ಯಾತಕ್ಕೆ ರಮಣಿ
ಕ್ರೂರ ಮನ್ಮಥನಾಟಕ್ಕೆ ಕರುಣಾಸಾಗರನಾದ ಹರಿಯು
ಪುರವರಾಧಿಪನಾದ ಲಕ್ಷ್ಮೀ  ರಮಣನಂ
ಪ್ರಿಯೆ ಬೇಗದಿ ಕರುಣದಿಂದಲಿ ರಮಿಸಿ ಪೋಗುವೆ ॥
ಮಚ್ಚೆ ಕಂಗಳೆ ಮೆಚ್ಚಿದೆ ॥

ಸುಧನ್ವ: ಭಲಾ ಹೆಣ್ಣೆ ಗಜನಿಂಬೆ ಹಣ್ಣೆ ನಿನ್ನ ನಾ ಮೆಚ್ಚಿದೆ. ಸರಿ ಯನ್ನೊಳಗೆ ವೈಖರಿ ಸನ್ನುತದಿ ಸರಿಸರಿ ಕನ್ನೆಯಳ ಕೂಡುವೆನು ಕೆನ್ನೆಗಳ ಚೀಪುವೆನು. ಇನ್ಯಾಕೆ ದುಗುಡವು. ಯನ್ನ ತೊಡೆಯ ಮೇಲೆ ಕೂಡ್ರುವ ಮನ್ನಣೆ ಮಮತೆಯನ್ನು ಬಿನ್ನಾಣ ಬಯಕೆಯನು ಭವನಕ್ಕೆ ಬರುವೆನು ಇನ್ನು ನೀ ಸಾಗಬಹುದೇ ಸರಸಾಕ್ಷಿ ಸೌಂದರ‌್ಯಕುಕ್ಷಿ.

ಪ್ರಭಾವತಿ: ಹೇ ಕಾಂತ ಕಾಮಿನಿಯ ವಸಂತಾ. ಯೀ ದಿನ ಮಂದಿರದ ಮಣಿಮಂಚದೆಡೆಯಲ್ಲಿ ಚಂದದಿಂ ಶೋಭಿಸುವ ಗಂಧ ಕಸ್ತೂರಿಯ ಪುಷ್ಪಗಳಂ ಧರಿಸಿ ವಂದಾರುವಿಧವಾದ ಸಕ್ಕರೆಯ ಪಣ್ಗಳಂ ಸೇವಿಸಿ ನಿನ್ನ ಕಾತುರದ ಸುರತಕ್ಕೆ ಮುಂದೆ ದಯ ಮಾಡಬಹುದೊ ಮೋಹನಾಂಗ ಮಮಕರ ಕೃಪಾಂಗ.

ಸುಧನ್ವ : ಓ ಮಧುರವಾಣಿ, ಅಧರಾಮೃತದ ವಿಧ ವಿಧಕ್ಕಾಗಿ ಚದುರತನದಿಂದ ವೊದಗುವಂಥವಳಾಗೆ       ಸುಂದರಿ ಬಂಧುರದ ವೈಖರಿ.

ಹಂಸಧ್ವಜ:ಯಲಾ ಸಾರಥಿ, ನನ್ನ ಕಂದನಾದ ಸುಧನ್ವನು ಇನ್ನೂ ಬರಲಿಲ್ಲಾ. ಎಲ್ಲಿ ಇರುವನು ಜಾಗ್ರತೆಯಿಂದ ನೋಡಿಕೊಂಡು ಬರುವಂಥವನಾಗೊ ಸಾರಥಿ.

ಸಾರಥಿ: ಅಯ್ಯ ರಾಜ ಪಟ್ಟಣದಲ್ಲಿ ತನ್ನ ಸತಿ ಸುಖ ಸಲ್ಲಾಪದಲ್ಲಿ ಇರುವನಯ್ಯ ರಾಜ ಮಾರ್ತಾಂಡ ತೇಜಾ.

ಹಂಸಧ್ವಜ: ಹಾಗಾದರೆ ಕಿಂಕರರನ್ನು ಕರೆದುಕೊಂಡು ಬರುವಂಥವನಾಗೊ ಚಾರ ವರ ಫಣಿಹಾರಾ॥

ಪದ ಜಂಪೇ

ಬಂದರಾಗ ರವುದ್ರ ರಭಸದಿ ಕಿಂಕರರು
ಬೇಗ ಕಂದನನ್ನು ತರುವ ತವಕದಿ ॥
ಕರದಿ ಖಡ್ಗ ಪಾಶದಿಂದಲಿ  ಭರದಿಂದ
ಪಿಡಿದು  ಕರುಣವಿಲ್ಲದೆ  ನಿಂತಪರಿಯಲಿ ॥
ಕಾಲದೂತರಂತೆ ಕಠಿಣದಿ  ಕಿರುಮೀ
ಸೆ ಇಂದ  ಬಾಲನೊಯ್ವ  ಬಿಂಕದಿಂದಲಿ
ಮದನನಂತೆ ಮಗನ ಪಿಡಿಯಲು
ಕೋಪಿಸುತ್ತಲಾಗ  ಮುದದಿ ಹಿ
ಸುಕಿ  ಕಟ್ಟಿ ಯೆಳೆಯಲು ॥
ಮಾರುತೀಶನನ್ನು ಭಜಿಸುತಾ  ಸುಧನ್ವನಾಗ
ವಾರಿಜಾಕ್ಷನನ್ನು  ಸ್ತುತಿಸುತಾ ॥

ಕಿಂಕರ: ಯಲಾ ಸುಧನ್ವ, ನಿನ್ನ ತಂದೆ ಅಜ್ಞೆಯನ್ನು ಮೀರಿದವನಾಗಿ, ಬಂದು ನಿನ್ನ ಸತಿಯೊಡನೆ ಸರಸಸಲ್ಲಾಪದಲಿ ಇರುತ್ತಾ ಇದ್ದಿ. ಜಾಗ್ರತೆ ಇಂದ ಎಳೆತರುವಂತೆ ರಾಜಾಜ್ಞೆಯಾಗಿರುವದರಿಂದ ಬಂದು ಇದ್ದೇವೆ. ಅರಮನೆಯನ್ನು ಬಿಟ್ಟು ಬರುವಂಥವನಾಗೊ ತರಳಾ.

ಪದ

ನಡುಗಿದಳ್ ಬಾಲಕಿಯು  ದೂತರ ನೋಡಿ
ಮರುಗಿದಳಾ ದೇವಿಯಾ ॥ಮರುಗುತ್ತಾ
ಬಾಯಲ್ಲಿ ದಗ್ದರಿಸುತ್ತಾ  ಪೊಡವಿ
ಯೊಳ್ ಹೊರಳುತ್ತಾಳೊ ॥

ಪ್ರಭಾವತಿ: ಹೇ ಕಾಂತ ಈ ದೂತರನ್ನು ನೋಡಿದರೆ ಬಹಳ ಭಯವುಂಟಾಗುವದು. ನಿನ್ನಲ್ಲಿ ಮಾತನಾಡಲು ಯನಗೆ ಶಕ್ತಿ ಇಲ್ಲದಂತಾಗಿ, ಹೇ ಸುಂದರಾಗ ಈ ದೂತರು ಯೀ ಸ್ಥಳಕ್ಕೆ ಬಂದ ಪರಿಯಾಯವೇನೊ ಪೇಳಬೇಕೋ ಕಾಂತಾ ಮತಿಗುಣವಂತ.

ಪದ

ಬ್ಯಾಡೆಂದು ಪೇಳಿದರೆ  ಕೇಳದೆ ನಾನು
ಮುಕತ್ವವನು ಮಾಡಿದೆ  ರೂಢಿಯೊಳಗೆ
ಅಪಕೀರ್ತಿ ಸಂಭವಿಸಿತು ॥ದಿಕ್ಕಿಲ್ಲದಾಯಿತೆ
ಕೇಳೈಯ್ಯ ರಮಣಾ ॥

ಪ್ರಭಾವತಿ: ಹೇ ರಮಣಾ, ರತಿಸುಖಕ್ಕೆ ನೀನು ಬರುವುದಿಲ್ಲವೆಂದು ಎಷ್ಟು ವಿಧವಾಗಿ ಪೇಳಿದಾಗ್ಯು ನಾನು ಕೇಳದೆ ವ್ಯಥೆಪಡಿಸಿದ್ದರಿಂದ ಈ ವಿಪತ್ತು ಸಂಭವಿಸಿತೊ ರಮಣಾ ಸದ್ಗುಣಾಭರಣಾ ॥

ಕಂದ

ಗಡ ಗಡ ನಡುಗುವ ಸತಿಯನು ॥ದೃಢ
ಮತಿ ತಾ ನೋಡಿ ಬೇಗ  ಕಡುಧೈರ‌್ಯದೊಳ್
ಪೊಡವೀಶ ಮಾರುತೀಶನು
ಬಿಡದೆಮ್ಮನು ಸಲಹುತಿಹನು
ಮಡದಿಯೇ ಕೇಳ್ …

ಸುಧನ್ವ: ಹೇ ಕಾಂತೆ,  ದೂತರನ್ನ ನೋಡಿ ನಡುಗಲು ಕಾರಣವೇನು. ಪೊಡವೀಶನಾದ ಮಾರುತೀಶನು ಕಾಪಾಡುತ್ತಾನಲ್ಲದೆ ಲೇಶವು ಭಯಪಡದೆ ಅರಮನೆಗೆ ತೆರಳುವಂಥವಳಾಗೆ ರಮಣಿ ಕರೆಮುತ್ತಿನ ಮಣಿ….

ಸುಧನ್ವ: ಯಲಾ ಸಾರಥಿ. ನಿಮ್ಮ ಮಾತುಗಳನ್ನು ನಂಬಿ ಪತ್ನಿಯನ್ನು ಕೂಡಿದ ದೆಶೆಯಿಂದ ಇಷ್ಟು ಅನರ್ಥಕ್ಕೆ ಕಾರಣವಾಯಿತು. ಇನ್ನಾದರು ಈ ದುಃಖವಂ ಪಡುತ್ತಿರುವ ಯನ್ನ ಸತಿಗೆ ಬುದ್ಧಿಯನ್ನು ಪೇಳಿ ಅರಮನೆಗೆ ಕಳುಹಿಸುವಂಥವರಾಗಿರೈಯ್ಯ ಸಾರಥಿ.

ಸುಧನ್ವ: ಎಲಾ ಕಿಂಕರರೆ ನೀವು ಯಿಲ್ಲಿಗೆ ಬರುವದಕ್ಕೆ ಕಾರಣವೇನು. ನಿಮಗೆ ಅಪ್ಪಣೆಯನ್ನು ಕೊಟ್ಟವರ‌್ಯಾರು ಜಾಗ್ರತೆಯಾಗಿ ಪೇಳಬೇಕೋ ದೂತರುಗಳಿರಾ ॥

ಕಿಂಕರರು: ಸುಧನ್ವ, ನಿಮ್ಮ ತಂದೆಯಾದ ಹಂಸದ್ವಜರಾಜರು ನಿನ್ನನ್ನು ಹಿಡಿದು ಪಿಚಂಡಿಯನ್ನ ಕಟ್ಟಿ ತರುವಂತೆ ಆಜ್ಞಾಪಿಸಿರುವರು ॥ಅತಿ ಜಾಗ್ರತೆಯಿಂದ ಬರುವಂಥವನಾಗಯ್ಯ ರಾಜ ॥

ಸುಧನ್ವ: ಎಲಾ ಕಿಂಕರರೆ, ನಿಮ್ಮ ಮಾತಿನಂತೆ ಬರುತ್ತಾ ಇದ್ದೇನೆ. ನಿಮ್ಮ ರಾಜಾಜ್ಞೆಯನ್ನ ಪಾಲಿಸಬಹುದೊ ದೂತರುಗಳಿರಾ.

ಹಂಸಧ್ವಜ: ಎಲಾ ಸಾರಥಿ, ನಮ್ಮ ದೂತಶಿಖಾಮಣಿಗಳನ್ನು ಯನ್ನ ಕಂದನಾದ ಸುಧನ್ವನನ್ನು ಹಿಡಿದು ಪಿಚಂಡಿಯನ್ನ ಕಟ್ಟಿ ತರಬೇಕೆಂದು ಆಜ್ಞೆಯನ್ನ ಕೊಟ್ಟು ಅವರು ಬಾರದೆ ಇರುವುದರಿಂದ ಜಾಗ್ರತೆಯಾಗಿ ನೋಡಿಕೊಂಡು ಬರುವಂಥವನಾಗೊ ಸಾರಥಿ.

ಕಿಂಕರ: ಅಯ್ಯ ರಾಜ, ತಮ್ಮ ಆಜ್ಞೆ ಪ್ರಕಾರ ಸುಧನ್ವರಾಜರನ್ನು ತಂದು ನಿಲ್ಲಿಸಿರುತ್ತೇವೆ ಮತ್ತೇನು ಆಜ್ಞೆಯಾಗುತ್ತೊ ಅಪ್ಪಣೆ ಕೊಡಬೇಕೈ ರಾಜ ರವಿಸಮತೇಜಾ ॥

ಹಂಸಧ್ವಜ: ಎಲೈ ಭಟರೆ ನಿಮಗೆ ನೇಮಕವಾಗಿರುವ ಸ್ಥಳಕ್ಕೆ ಪೋಗುವಂಥವರಾಗಿರೈಯ್ಯ ಭಟರೆ॥

ಪದ ರೂಪಕಾ

ಇಷ್ಟು ತಡಮಾಡಲೇಕೆ ಎಂಟೆಂಟು
ಜಾವ ತಟ್ಟನೆ ನೀ ಪೇಳೊ  ಕುವರ ಈಗಾ ॥॥
ಸಿಟ್ಟು ಬಂದರೆ ನಾನು  ಕುಟ್ಟಿ
ಬಿಡುವೆನು  ತಟ್ಟನೆ ಬೊಗಳೂ ಕಂದಾ ॥ಕೇಳೊ ಕಂದ ॥

ಹಂಸಧ್ವಜ: ಯಲಾ ತರಳ, ನೀನು ಯುದ್ಧಕ್ಕೆ ಪೋಗುತ್ತೇನೆಂದು ಪೇಳಿದವನು ಇಷ್ಟು ಸಾವಕಾಶ
ಮಾಡುವದಕ್ಕೆ ಕಾರಣವೇನು. ಪೇಳುವಂಥವನಾಗೊ ತರಳ ಕೇಳೊ ದುರುಳಾ.

ಪದ

ಪೇಳುವ ಮಾತಿನೊಳು  ಜಾಳುತನವ
ಬಿಟ್ಟು ಖಳನೇ ನೀ ಬೊಗುಳೊ  ಕೊಲ್ಲಿಸು
ವೆ ನಿನ್ನಾ ॥ಕೇಳಿನ್ನು ॥

ಹಂಸಧ್ವಜ: ಎಲಾ ದುರುಳಾ ನೀನು ಪೇಳಿದ ಮಾತುಗಳೆಲ್ಲಾ ಜಾಳುಮಾತುಗಳೆಂದು ತಿಳಿದೆ. ಸಹಜವಾದ ಮಾತುಗಳನ್ನು ಪೇಳಿದರೆ ಸರಿ. ಇಲ್ಲವಾದರೆ ನಿನ್ನನ್ನು ಕೊಲ್ಲಿಸಿ ಬಿಡುತ್ತೇನೊ ದುರುಳ॥

ಪದ

ಯನ್ನಾಜ್ಞೆಯನು ಮೀರಿ  ಕುನ್ನಿ ನಿನ್ನಲ್ಲ
ವೊ ಪನ್ನಗಪುರಿವಾಸ  ಮೆಚ್ಚನೂ
ಕೇಳೊ ನೀ ಕೇಳೊ ॥

ಹಂಸಧ್ವಜ: ಎಲಾ ಭ್ರಷ್ಟ, ಯನ್ನಾಜ್ಞೆಯನ್ನು ಮೀರಿ ನೀನು ನಿಲ್ಲುವ ಕಾರಣವೇನುಂಟು ಪನ್ನಗಪುರೀಶನಾದ ಮಾರುತೀಶನು ಮೆಚ್ಚಲಾರನು. ನಿಜಸ್ಥಿತಿಯ ಮಾತುಗಳನ್ನು ವಿಸ್ತರಿಸಿ ಪೇಳಬೇಕೊ ತರಳಾ ಕೇಳೊ ದುರುಳಾ ॥

ಪದ ತ್ರಿವುಡೆ

ಬಳಿಕ ನಿಮ್ಮಯ ಮನದ ಬಯಕೆಯು
ಅನುವಿನಿಂದಲಿ ಗೈಸಲೋಸುಗ ಮನೆಗೆ
ಪೋಗಿ ಜನನಿ ಅನುಜೆಗೆ ॥ಪೇಳಿ ಬೇಗಾ ॥

ಸುಧನ್ವ: ಅಯ್ಯ ಜನಕ, ತಮ್ಮ ಆಜ್ಞೆ ಪಡೆದು ಅರಮನೆಗೆ ಪೋಗಿ ಜನನಿಯಾದ ತಾಯಿಗು ತಂಗಿಗು ಪೇಳಿ ಆಶೀರ‌್ವಾದವಂ ಪಡೆದು ಬರುತ್ತಿದ್ದೇನಯ್ಯ ಜನಕಾ ಅರಿಗಸಹಾಯಕಾ.

ಪದ

ಯನ್ನ ವಿಜ್ಞಾಪನೆಯ ಮಾಡಲು
ಮುನ್ನ ಆಶೀರ‌್ವಾದದಿಂದಲಿ  ಮ
ನ್ನಣೆಯಾತ ಪಡೆದು ಬರುತ್ತಿರೆ
ಸನ್ನುತಾಂಗಿ ॥

ಸುಧನ್ವ: ಅಯ್ಯ ತಂದೆ, ಜನನಿ ಇಂದಲು ಅನುಜೆ ಇಂದಲು ಮನ್ನಣೆಯಂ ಪಡೆದು ತಮ್ಮನ್ನು ಕಾಣುವ ತವಕದಿಂ ಬರುತ್ತಿರಲು ಸನ್ನುತಾಂಗಿಯಾದ  ಯನ್ನ ಪತ್ನಿಯು ಬಾಗಿಲಲ್ಲಿ ನಿಂತು ತಡೆದಳೈಯ್ಯ ತಂದೆ ನಿಮಗೆ ಶರಣಂದೇ…..

ಪದ

ತಡೆಯಲಾಕ್ಷಣ  ಮಡದಿ ಮನದೊಳು
ಕಡು ಮರುಗಲಲ್ಲಿದ್ದೆನಲ್ಲದೆ ಪೊಡ
ವಿಪತಿ ವಡೆಯ ಸಲಹೆಂದು ॥ಮರುಗುತಲಿ ॥

ಸುಧನ್ವ: ಅಯ್ಯ ಜನಕ, ಅರಮನೆಯ ಬಾಗಿಲಲ್ಲಿ ಮಡದಿ ರುತುಸ್ನಾನದಿಂದ ವಿರಹಾಸಕ್ತಳಾಗಿ ಇರುತ್ತೇನೆ. ಮುಂದೆ ಸದ್ಗತಿಗೆ ಸಂತಾನವನ್ನು ಕರುಣಿಸಬೇಕೆಂದು ಬಗೆ ಬಗೆಯಲ್ಲಿ ಬೇಡಿಕೊಳ್ಳಲು ಅನೇಕ ಪರಿಯಾಯವಾಗಿ ಪೇಳಿದಾಗ್ಯು ಕೇಳದೆ ತಡೆದಳಾದ ಕಾರಣ ಅವಳ ಬಯಕೆಯ ಫಲಿಸಲು ನಿಂತೆನಯ್ಯ ಜನಕ ಅರಿಗಳಿಗಸಹಾಯಕ.

ಹಂಸಧ್ವಜ: ಎಲಾ ಸಾರಥಿ. ಅತಿಜಾಗ್ರತೆ ನಮ್ಮ ರಾಜ ಸಭೆಗೆ ಪೋಗಿ ಸದ್ಗುರುಗಳಿಗೆ ಸಮವೆನ್ನಿಸಿ ಕೊಳ್ಳುವ ರಾಜ ಪುರೋಹಿತರಾದ ಶಂಕಲಿಕರನ್ನು ಕರದುಕೊಂಡು ಬರುವಂಥವನಾಗೊ ಚಾರ ವರ ಪಣಿಹಾರಾ.

ಪದ

ದಂದಣದಿಂದಲಿ ಬಂದನು ಮುನಿವರಾ
ಯಿಂದುಧರನೆ ತಾ  ಸಲಹೆಂದೂ ॥
ಸುಂದರಾಂಗ ಸಾನಂದ ವರದ ಉರುಗೇಂದ್ರ
ಭೂಷಿತ ನರೇಂದ್ರ ಪೂಜಿತದೇವಾ ॥
ಮಂಗಳಾ ಧವಳಾಂಗ ದಯಾನಿಧೇ  ಗಂಗಾ
ಧರ ಭವ ಭಂಗಪಾಂಗನೆ ॥

ಶಂಕಲಿಖ: ಎಲಾ ಮಾನುಷನೆ ಹೀಗೆ ಬರುಂಥವನಾಗು ಮತ್ತೂ ಹೀಗೆ ನಿಲ್ಲುವಂಥವನಾಗು. ಯಲಾ ಸಾರಥಿ ಚತುರತರಮತಿ, ಯುಕ್ತಿ ಶಕ್ತಿಯುಳ್ಳ ದೂತ ನೀದಾರು ನಾವು ಬಂದ ಮಾನವನ್ನು ವಿಸ್ತಾರವಾಗಿ ಕೇಳುವಂಥ ಮಾನುಷ್ಯ ನೀ ದಾರು ಯನ್ನೊಳ್ ಸಾರೋ. ಅಪ್ಪಾ ಸಾರಥಿ ಶ್ರೀಮದ್ ಕರ್ನಾಟಕ ಭೂಷಾಭೂಷಣನೆನಿಸಿ ಸರ‌್ವ ಕಾಲಕ್ಕೂ ಚಿತ್ರ ಚಮತ್ಕಾರ ಮಂಜುಳ್ಳ ಮಂಜರಂಜಿತ ಮೃದು ಮಧುರ ವಾಖ್ಯಾಂ ಗರ್ಭನಿರ್ಭಿತವಾದ ಚಂಪಕಾಪುರದಲ್ಲಿ ಇರುವ ಹಂಸಧ್ವಜ ಭೂಪಾಲರ ಸಮ್ಮುಖದಲ್ಲಿ ಸುರಗುರುಗಳಿಗೆ ಸಮವೆನಿಸಿಕೊಳ್ಳುವ ಶಂಕಲಿಕ ರಾಜಪುರೋಹಿತರು ನಾನೇ ಅಲ್ಲವೇನಪ್ಪಾ ಸಾರಥಿ.

ಎಲಾ ಮಾನುಷ್ಯನೆ, ಅಂದವಾದ ಅರಮನೆಯನ್ನು ಬಿಟ್ಟು ಚಂದವಾದ ಈ ರಂಗಸ್ಥಳಕ್ಕೆ ಬಂದ ಕಾರಣವೇನೆಂದರೆ ನಮ್ಮ ಅರಸರಾದ ಹಂಸಧ್ವಜ ರಾಜರು ಕರೆಸಿದ ಕಾರಣ ಬಾಹೋಣವಾಯಿತು. ದಾವಲ್ಲಿ ಇದ್ದಾರೊ ಭೇಟಿಯನ್ನು ಮಾಡಿಸಪ್ಪ ಸಾರಥಿ.

ಹಂಸಧ್ವಜ: ಸಹಸ್ರವಂದನವೈಯ್ಯ ಭೂಸುರೋತ್ತಮರೆ.

ಶಂಕಲಿಕ: ನಿನಗೆ ಮಂಗಳವಾಗಲೈಯ್ಯ ರಾಜ ಮಾರ್ತಾಂಡತೇಜಾ ಅಯ್ಯ ರಾಜ ಯನ್ನನ್ನಿಷ್ಟು ಜಾಗ್ರತೆ ಇಂದ ಕರೆಸಿದ ಕಾರಣವೇನು ಪೇಳಬೇಕೈಯ್ಯ ರಾಜ.

ಪದ

ಏನೆಂದು ಹೇಳಲೈಯ್ಯ  ಭೂಸುರವರ‌್ಯ
ಮಾನಹೀನದ ಸುದ್ದಿಯಾ  ದಾನವಾಂತಕ
ಧರ್ಮ  ಯಜ್ಞದ ಕುದುರೆಯು  ದುಮ್ಮಾ
ದಿ ಬಿಡಿಸಿರಲು  ಭೂಸುರವರ‌್ಯಾ  ದುಮ್ಮಾದಿ
ಬಿಡಿಸಿರಲು ॥

ಹಂಸಧ್ವಜ: ಅಯ್ಯ ಭೂಸುರೋತ್ತಮರೆ, ಗಜಪುರದರಸು ಧರ್ಮರಾಯನು ಶ್ರೀ ಕೃಷ್ಣ ಆಜ್ಞಾನುಸಾರವಾಗಿ ಯಜ್ಞದ ಹಯವನ್ನು ದೇಶದ ಸಂಚಾರ ಕಾರ‌್ಯವಾಗಿ ಬಿಡಿಸಿರಲು ಯಮ್ಮ ವುದ್ಯಾನವನಕ್ಕೆ ಬಂದ ವರ್ತಮಾನವನ್ನು ಚರರಿಂದ ತಿಳಿದು ಕಟ್ಟಿಸಿದ್ದೆನೈಯ್ಯ ಭೂಸುರೋತ್ತಮರೆ.

ಪದ

ನಮ್ಮ ವುದ್ಯಾನವನಕೆ ॥ಕುದುರೆಯು ಬರೆ  ನಿರ್ಮ
ಲದಲಿ ಕಟ್ಟಿದೆ  ಗಮ್ಮನೆ ಯನ್ನಯಾ  ಕಂದ
ಸುಧನ್ವಗೆ ಅಧ್ವರಕೆ ಪೋಗೆಂದು ಪೇಳಿದೆನಿಂದು

ಹಂಸಧ್ವಜ: ಅಯ್ಯ ಮಹಾನುಭಾವ, ಕುದುರೆಯನ್ನು ಕಟ್ಟಿಸಿ ಯನ್ನ ಕಂದನಾದ ಸುಧನ್ವನನ್ನ ಕರೆಸಿ ಅಧ್ವರಕ್ಕೆ ಪೋಗೆಂದು ಆಜ್ಞಾಪಿಸಲಾಗಿ, ಅರಮನೆಗೆ ಪೋಗಿ ಸತಿಯೊಡನೆ ಸರಸಸಲ್ಲಾಪದಲ್ಲಿದ್ದು  ಯನ್ನಾಜ್ಞೆಯನ್ನು ಮೀರಿದವನಾದ ಕಾರಣ, ಇದರ ಆಲೋಚನೆಗೋಸ್ಕರವಾಗಿ ತಮ್ಮನ್ನ ಕರೆಸಿದ್ದೇನಯ್ಯ ಭೂಸುರೋತ್ತಮರೆ.

ಅಯ್ಯ ಭೂಸುರೋತ್ತಮರೆ, ಶೇಷಪುರೀಶನಾದ ಭೀಮೇಶನು ಸಲಹಲೆಂದು ಮನದಲ್ಲಿ ನೆನಸುತ್ತಾ ರಾಜಾಜ್ಞೆಯನ್ನ ತಪ್ಪಿದವನಿಗೆ ಏನು ಶಿಕ್ಷೆ ವಿಧಿಸಬೇಕೊ  ಧರ್ಮಶಾಸ್ತ್ರ ವಚನ ಪ್ರಕಾರ ಅಪ್ಪಣೆ ಕೊಡಬೇಕೈಯ್ಯ ಭೂಸುರೋತ್ತಮರೆ ….

ಕಂದ

ತಂದೆಯ ವಚನಕೆ  ಪ್ರತಿಬಂಧಕವನು  ತಂದ ಕಂ
ದನ ಅಂದವಂ ನೋಡದೆ  ಕಾಸಿದ ತೈಲದೊಳ್
ಸಂದೇಹಿಸದೆ  ಹಾಕುವುದು…..

ಶಂಕಲಿಕ: ಅಯ್ಯ ರಾಜ, ರಾಜಾಜ್ಞೆಯಂ ದಾಟಿ ನಡೆದಂಥ ಕುವರನ ಅಂದ ಚಂದ ಭಾವವಂ ನೋಡದೆ ಕೊಪ್ಪರಿಗೆಯಲ್ಲಿ ತೈಲವನ್ನು ಕಾಸಿ ಅದರಲ್ಲಿ ಹಾಕಿಸಿದರೆ ದೋಷ ನಿವೃತ್ತಿ ಎಂದು ಧರ್ಮಶಾಸ್ತ್ರವುಂಟಾಗಿರುವುದರಿಂದ, ಯಿದಕ್ಕೆ ಸಂಶಯಪಡದೆ ನಿನ್ನ ಕುವರನನ್ನು ಹಾಕಿಸಬಹುದೈಯ್ಯ ರಾಜ ರವಿಸಮತೇಜಾ ॥

ಹಂಸಧ್ವಜ: ಅಯ್ಯ ಸ್ವಾಮಿ, ತಮ್ಮ ಅಪ್ಪಣೆಯಂತೆ ಯನ್ನ ಕಂದನನ್ನು ಎಣ್ಣೆಕೊಪ್ಪರಿಗೆಯಲ್ಲಿ ಹಾಕಿಸುತ್ತೇನೆ ನೋಡುವಂಥವರಾಗಿರಯ್ಯ ಭೂಸುರೋತ್ತಮರೆ. ಎಲಾ ಸಾರಥಿ ಯನ್ನ ಕಂದನಾದ ಸುಧನ್ವನನ್ನು ಕಾದಿರ್ಪ ಎಣ್ಣೆಯ ಕೊಪ್ಪರಿಗೆಯಲ್ಲಿ ತಂದು ಹಾಕಿಸುವಂಥವನಾಗೊ ಸಾರಥಿ…

ಭಾಗವತರ ಕಂದ

ಹರಿಸುತನಂತೆ ಪೋಲ್ವ ಕುವರನ ಮೇಲೆ
ಕರುಣವಿಲ್ಲದೆ ಮಾರಿಯ ತೆರದಲಿ
ಕರಪಿಡಿದೆಳೆತಂದು ಕಾದಿರುವ ತೈಲದ
ಪಾತ್ರೆಯಲಿ ದುರುಳತನವನ್ನು ಮಾಡಿದನೆಂದು
ಹಾಕಿಸಲು ಭರದಲಿ ಸುರರು ಒಯ್ಯನೆ
ಹರುಷದಲಿ ಪೂಮಳೆಯ ಕರೆದರು  ಜನರು
ಬೆರಗಾದರು ॥

ಅಯ್ಯ ಭಾಗವತರೆ, ಭಗವಂತನಾದ ಶ್ರೀ ಕೃಷ್ಣನ ಕುಮಾರನಾದ ಮನ್ಮಥನಂತೆ ಪೋಲ್ವ ಸುಧನ್ವನನ್ನು ನಿಷ್ಕಾರಣವಾಗಿ ಹಂಸಧ್ವಜನು ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿಸಲಾಗಿ ಸಮಸ್ತ ದೇವತೆಗಳೆಲ್ಲಾ ಬೆರಗಾಗಿ ಪುಷ್ಪವೃಷ್ಠಿಯಂ ಯೆರೆಯಲು ಸುಧನ್ವನು ಶ್ರೀಕೃಷ್ಣಮೂರ್ತಿಯನ್ನು ಭಜಿಸುತ್ತಾನೆ.

ದಂಡಕ

ಶ್ರೀಮನ್ ಮಹಾಧಿ ದೇವಾದಿದೇವ  ಸದಾನಂದ
ಭಾವ  ನಿರಾಕಾರ ನಿರ್ವೇದ ನಿಗಮ  ಸಂ
ಗಮರೂಪ   ಪರಂಜ್ಯೋತಿ ರೂಪಾ  ..
ಧಾಂಭೋನಿಧೀಚಂದ್ರ ’ಮಹಾಶಿಂಧುಗಂಭೀರಾ
ಸುಜ್ಞಾನ ಸುಶೀಲಾ  ಜಗದ್ರಕ್ಷಕ  ಪಕ್ಷೀಂದ್ರಗಮನ  ದ್ವಿಪ
ಕ್ಷ ಸುರದೃಕ್ಷ  ಲಕ್ಷ್ಮಿ  ಪಾಲಾಕ್ಷ  ವಕ್ಷರಾಕ್ಷ
ಮಹಾ ಮಪನಿಪಕ್ಷ  ಕೋಟಿ ಪ್ರಕಾಶ
ಕೇಶವ  ದಯಾಧರ  ಪದ್ಮನಾಭ  ಅಚ್ಚುತಾನಂದ  ಗೋಪಿಗೋಪಾಲ
ನಾರಯಣಾ  ವೇದಪಾರಯಣ  ಆದಿಶೇಷಪುರೀಶ
ನಮಸ್ತೆ  ನಮಸ್ತೆ  ನಮಸ್ತೇ  ನಮಸ್ತೇ ॥

ಸುಧನ್ವ: ಹೇ ದೇವ ದೇವೋತ್ತಮ, ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ, ಆದಿಮಧ್ಯರಹಿತ ಭಕ್ತ ವತ್ಸಲ ಭವರೋಗ ವೈದ್ಯ, ಕರುಣ ಪಯೋನಿಧೇ ಮಹಾಪ್ರಭೂ ಯನ್ನ ಅಪರಾಧವನ್ನು ಕ್ಷಮಿಸಿ ಕಾಪಾಡಬೇಕೋ  ಮಹಾನುಭಾವಾ ॥

ಭಾಗವತರ ಮಾತು: ಅಯ್ಯ ಭಾಗವತರೆ, ಸುಧನ್ವನು ಕೃತಜ್ಞನೆಂದು  ಈ ಕಪಟ ಭೂಸುರರು ನಾರಿಕೇಳವಂ ತರಿಸಿ ಹೂಣಿಸಿ ಕೊಪ್ಪರಿಗೆಯಲಿ ಎಣ್ಣೆಯನ್ನು ಕಾಯಿಸಿ ಸುಧನ್ವನನ್ನು ಹಾಕಿಸಲು ವುರಿಯು ಭೂಮಂಡಲಕ್ಕೆ ಏರಿ ಈ ಭೂಸುರರನ್ನು ಸುಡುತ್ತಾ ಬರಲೂ ಸೈರಿಸಲಾರದೆ ಸುಧನ್ವನ ಮರೆಹೊಕ್ಕು ಅಂಜಲೀಬದ್ಧನಾಗಿ ಕೇಳಿಕೊಳ್ಳುತ್ತಾನೈಯ್ಯ ಭಾಗವತರೆ ॥

ಶೆಂಕಲಿಕ : ಅಪ್ಪಾ ಸುಧನ್ವ, ಯನ್ನನ್ನು ಕಾಪಾಡಬೇಕಪ್ಪ ರಾಜ ಮಾರ್ತಾಂಡ ತೇಜಾ ॥

ಸುಧನ್ವ: ಅದೇ ಪ್ರಕಾರ ಕಾಪಾಡುತ್ತೇನೈಯ ಭೂಸುರೋತ್ತಮರೆ.

ಪದ

ಅಪರಾಧಿ ಆದೆ ನಾನು
ಮಹಾನುಭಾವ ಕೃಪೆಯಿಂದ ಸಲಹೊ ಯನ್ನಾ
ನಿನ್ನ ಚರಿತ್ರೆಯು ತಿಳಿಯದೆ ಕುಪಿತನು ನಾನಾದೆ.

ಶೆಂಕಲಿಕ: ಅಯ್ಯ ಸುಧನ್ವ, ನಿನ್ನ ಮಹಿಮೆಯಂ ತಿಳಿಯದೆ ಚಪಲಚಿತ್ತನಾಗಿ ಗರ್ವದಿಂದ ಅಪರಿಮಿತವಾದ ಕೈತವವನೆಸಗಿದಂಥ ಅಪರಾಧವಂ ಕ್ಷಮಿಸಿ, ಯನಗೆ ಸಂಭವಿಸಲ್ಪಟ್ಟ ಮೃತ್ಯುವಂ ಪರಿಹರಿಸಿ ರಕ್ಷಿಸಬೇಕೋ ಮಹಾನುಭಾವ.

ಪದ

ಸುಂದರ ಸುಕುಮಾರ  ಸುಧನ್ವರಾಜ  ಕಂದರ್ಪ
ಸಮತೇಜ ತಂದೆ ನಿನ್ನಯ ನಿಜಾನಂದವ
ತಿಳಿಯದೆ ಮಂದಬುದ್ಧಿಯಲಿ  ಬ್ಯಾರೊಂದು
ನಾನೆಣಿಸಿದೆ ॥ಸುಂದರ ಸುಕುಮಾರ ॥

ಶೆಂಕಲಿಕ: ಅಯ್ಯ ಕಂದರ್ಪ, ನಿನ್ನ ನಿಚ್ಚಳ ಮನಸ್ಸು ತಿಳಿಯದೆ ಯನ್ನ ಮದತ್ವದಿಂದ ಕಂಟಕವಂನೆ
ಎಸಗಿದ ಅಪರಾದ ಎನಗುಂಟಾಗಿ ಅಗ್ನಿಭಾಧೆಯಂ ತಡೆಯಲಾರದೆ ಮೊರೆ ಪೊಕ್ಕು ಇದ್ದೇನೆ. ಈ ಕಷ್ಠವನ್ನು ಪರಿಹರಿಸಿ ರಕ್ಷಿಸುವ ಭಾರ ನಿನ್ನದೈಯ್ಯ ಮಹಾನುಭಾವ.

ಪದ

ಕರುಣಿಸಿ ಕಾಯಬೇಕೈ ಮಹಾರಾಯ
ಕರವೆತ್ತಿ ಮಗಿವೆ ಕೈಯ್ಯ ವುರಗಪುರೀ
ಶನ ಚರಣವ ಭಜಿಸದೇ  ಮರಣ
ಕಾಲವು ಬಂತು ಹರಣಾವ ಉಳಿಸೆನ್ನನೂ ॥

ಶೆಂಕಲಿಕ: ಅಯ್ಯ ದೊರೆಯೆ, ವುರಗಪುರೀಶನ ಚರಣವ ಭಜಿಸದೆ ನಿನ್ನಂಥ ಭಕ್ತ ಶಿಖಾಮಣಿಗೆ ದ್ರೋಹವನ್ನೆಸಗಿದ ಕಾರಣ ಮರಣ ಕಾಲವು ಸಂಭವಿಸಿ ಇದೆ. ಇಂತಪ್ಪ ಅಪಮೃತ್ಯುವಂ ಪರಿಹರಿಸಿ ಯನ್ನ ಹರಣವ ವುದ್ದರಿಸಬೇಕೊ ಮಹಾನುಭಾವ.

ಪದ

ಸಂದೇಹವ್ಯಾತಕೈಯ್ಯ ಭೂಸುರವರ‌್ಯ
ಬಂದಯನೊಳುಸಿರೈಯ್ಯ  ಕಂದನ
ಕಾಯುವ ಇಂದು ನಾವಿಬ್ಬರು ಸಂದೇಹವಿ
ಲ್ಲದೆ  ಚಂದಿಕಾವನ್ನೂ ॥ಸಂದೇಹ ॥

ಸುಧನ್ವ: ಅಯ್ಯ ಭೂಸುರೋತ್ತಮ, ಕಂದನಾದ ಪ್ರಹ್ಲಾದನನ್ನು ಕಾಯ್ದಂತೆ ನಮ್ಮಿಬ್ಬರನ್ನು ಕಾಯುವುದಕ್ಕೆ ಭಕ್ತ ಪರಾಧೀನನಾದ ಶ್ರೀಮನ್ ಮಹಾಕೃಷ್ಣನು ಕಾಯುವಂಥವನಾಗಿರುತ್ತಾನೆ. ಇದಕ್ಕೆ ತಾವು ಸಂಶಯ ಪಡದೆ ಈ ಸ್ಥಳಕ್ಕೆ ಬರಬಹುದೈಯ್ಯ ತಾಪಸೋತ್ತಮ.

ಪದ

ದುಷ್ಠತನವ ಮಾಡಿ ಕಷ್ಠಕ್ಕೆ ನೀನು  ಗುರಿ
ಯಾದೆ ಈಗ ॥ಯನ್ನಂಥ ಭ್ರಷ್ಟನ ॥ತಾವು
ಶ್ರೇಷ್ಠರಾಗಿ  ಕಾಯಲಿ ಬೇಕೆಂದು  ಬೇಡಿ
ಕೊಳ್ಳಲುಬಹುದೇ ॥

ಸುಧನ್ವ: ಅಯ್ಯ ಋಷಿಶ್ರೇಷ್ಠರೆ  ಅತಿಶಯವಾದ ದುಷ್ಠತನವಂ ಮಾಡಿ ಕಷ್ಠಕ್ಕೆ ಗುರಿಯಾದ ಯನ್ನಂಥ ಭ್ರಷ್ಠನನ್ನು, ತಾವು ಶ್ರೇಷ್ಠರಾಗಿ ಕಾಯಬೇಕೆಂದು ಕೇಳಿಕೊಳ್ಳುವದನ್ಯಾಯವೇನೈಯ್ಯ ಋಷಿಶ್ರೇಷ್ಠರೆ॥