ಸುಧನ್ವ: ಎಲಾ ಪರಮ ಪಾಪಿಷ್ಟ, ಯನ್ನ ಬಾಣದಿಂದ ಮೂರ್ಚೆ ವೊಂದಿದೆಯಾ ಅಧಮ. ನಿನಗೆ ಯಾರಾದರು ಸಹಾಯವಾಗಿ ಇದ್ದರೆ ಕರೆಸಿಕೊಳ್ಳಬಹುದೊ ದುರುಳಾ.

ಭಾಗವತರ ಮಾತು: ಅಯ್ಯ ಭಾಗವತರೆ, ಈ ಸುಧನ್ವನು ವೃಷಕೇತುವನ್ನು ಕೆಡವಿ ಮಹಾಸಂತೋಷದಿಂದ ವುರಗ ಪುರೀಶನನ್ನು ಭಜಿಸುತ್ತಾ ಬಿದ್ದಿರುವ ವೃಷಕೇತುವಂ ಕಂಡು ನಿನಗೆ ಸಹಾಯಕವಾಗಿರುವವರನ್ನು ಕರೆಸಿಕೊಳ್ಳಬಹುದೆಂದು ಪರಿಹಾಸ್ಯವಂ ಮಾಡುವ ಸಮಯದಲ್ಲಿ, ಪಾರ್ಥನು ತನ್ನ ಕಂದನಾದ ವೃಷಕೇತುವಿನ ಬಳಿಗೆ ಬಂದು ಮೂರ್ಛೆಯಿಂದ ಮಲಗಿರುವ ಕಂದನಂ ಕಂಡು ಪ್ರಲಾಪಿಸುತ್ತಾ ಇದ್ದಾನಯ್ಯ ಭಾಗವತರೆ ॥

ಪದ

ಎಷ್ಠು ಕಷ್ಟವ ಪಟ್ಟೆಯೊ  ಕಂದೈಯ್ಯ
ಈ ದುಷ್ಠ ಮಾನವರೊಡನೆ  ಅಷ್ಠಷ್ಠು ಯ
ನದಿನ್ನೆಷ್ಠಂದು ಪೇಳಲಿ  ಕಷ್ಠ ಸಂಭವಿ
ಸಿಹುದೊ ಕಂದಯ್ಯ ಈ ದುಷ್ಠ ಮಾನವರೊಡನೆ ॥

ಅರ್ಜುನ: ಅಪ್ಪಾ ಕಂದ, ಈ ದುಷ್ಠ ಸುಧನ್ವನೊಡನೆ ಯುದ್ಧವಂ ಮಾಡಿ ಬಹಳ ಘಾಸಿಯಾಗಿ ಬಳಲುವ ಕಾಲದಲ್ಲಿ ಯಷ್ಠು ಸಂಕಟಪಟ್ಟಿಯೊ ಕಂದ  ನೀ ಬಹುಚಂದಾ ॥

ಪದ

ಧರ್ಮಜಗೆ ಈ ಕಷ್ಟವನು
ಎಷ್ಟೆಂದು ಪೇಳಲೈಯ್ಯ  ಅಷ್ಟ ಲಕ್ಷ್ಮಿ
ಯರೊಳು ಶ್ರೇಷ್ಠ ಲಕ್ಷ್ಮಿಯು ನಿನ್ನ
ನಷ್ಠಗೊಳಿಸಿದಳೊ  ಕಂದಯ್ಯ ಈ
ದುಷ್ಟ ಮಾನವರೊಡನೆ ॥

ಅರ್ಜುನ: ಅಪ್ಪಾ ಬಾಲಾ, ನಿನ್ನಂಥ ಅತಿ ಸಾಹಸವುಳ್ಳ ಕಂದನು ಮಲಗಿರುವುದನ್ನು ನಾನು ಸೈರಿಸಿಕೊಂಡು ಧರ್ಮಜ ಭೂಪಾಲನಿಗೆ ಈ ವರ್ತಮಾನವನ್ನು ಏನೆಂದು ಹೇಳಲಿ. ಈ ದುಃಖವನ್ನು ಹ್ಯಾಗೆ ಸಹಿಸಿಕೊಳ್ಳಲಪ್ಪಾ ಬಾಲಾ ಸದ್ಗುಣ ಶೀಲಾ ….

ಪದ

ಯಾರಿಗೆ ಹೇಳಲೈಯ್ಯ  ಈ ದುಃಖವ
ಮತ್ಯಾರಿಗೆ ಹೇಳಲೈಯ್ಯ  ಮಂದಾ
ರಸಖ ಶ್ರೀನಿವಾಸ ಬಂದೆನಗೆ
ನೀ ದಾಯಾ ತೋರಿಸೈಯ್ಯ  ಕಂದಯ್ಯ
ಈ ದುಷ್ಟ ಮಾನವರೊಡನೆ ॥

ಅರ್ಜುನ: ಅಪ್ಪಾ ಕಂದಾ ನಿನಗೆ ಸಂಭವಿಸಿರುವ ದುಃಖವನ್ನು ಯಾರ ಸಂಗಡ ಹೇಳಿಕೊಳ್ಳಲಿ. ಅಂತಪ್ಪರ ಕಾಣದ ದೆಸೆಯಿಂದ ಮುರಾರಿಯಾದ ಪರಮೇಶ್ವರನ ಸಖ ಶ್ರೀನಿವಾಸಮೂರ್ತಿಯು ಬಂದು ಈ ಕಷ್ಟವಂ ಪರಿಹರಿಸಬೇಕೆಂದು ಬೇಡುತ್ತೇನಪ್ಪಾ ಬಾಲಾ ಸುಂದರಶೀಲಾ ॥

ಪದ

ಬರಿದೆ ದುಃಖಿಸಲ್ಯಾಕೊ ಪಾರ್ಥ  ನೀನು ಕ
ರುಣಾವಿಲ್ಲವೀಗ ವ್ಯರ್ಥ ತಂದೆ ತಾಯಿಲ್ಲದ
ಮಗನಾ ತಂದು ಸಾಕಿ ಇಂದು ಬಲಿಯಾ
ಕೊಟ್ಟೆ ಕಂದನಾನೀಗಾ

ಸುಧನ್ವ: ಅಯ್ಯ ಪಾರ್ಥ. ತಂದೆ ತಾಯಿ ಇಲ್ಲದ ಮಗನಂ ಸಾಕಿ ಯನ್ನ ಬಾಣಕ್ಕೆ ಬಲಿಯಂ ಕೊಟ್ಟು ಈಗ ಅವನ ಅಂದ ಚಂದ ಭಾವಂಗಳಂ ನೆನೆಸುತ್ತಾ ದುಃಖಿಸುವುದು ವ್ಯರ್ಥವೇನಯ್ಯ ರಾಜ.

ಪದ

ಅಕ್ಕರವಿಲ್ಲದೆ ಸಾಕಿ  ನೀನು ಸೊಕ್ಕಿ ಮಗನ
ತಂದು ನೂಕಿ  ಚಿಕ್ಕ ಗಿಣಿಯ ಸಾಕಿ  ಬೆಕ್ಕಿನ
ಕೈಗಿಕ್ಕಿ ದುಃಖದಿಂದಳುವದು  ಅಕ್ಕ
ರವೇನೈಯ್ಯ ॥ದಂಡು ಕಡಿದೆ ॥

ಸುಧನ್ವ: ಅಯ್ಯ ಪಾರ್ಥನೆ ಕೇಳು. ಅಕ್ಕರದಲಿ ಸಾಕಿದ ಮಗನೆಂದು ದುಃಖಿಸುತ್ತಾ ಸೊಕ್ಕಿದ ಮದವೇರಿ ಸಮರಕ್ಕೆ ಕಳುಹಿಸಿ ಚಿಂತಿಸುವುದನ್ನು ನೋಡಿದರೆ  ಅರಗಿಣಿಯನ್ನ ಸಾಕಿ ಬೆಕ್ಕಿನ ಕೈಗೆ ಕೊಟ್ಟಂತೆ ಮಾಡಿ ದುಃಖಿಸಲು ಅಕ್ಕರವುಂಟೆನೋ ಪಾರ್ಥ  ನೀನು ಬದುಕಿದ್ದೆ ವ್ಯರ್ಥ ॥

ಪದ

ಕುಂಡಲಪುರಿವಾಸ ಮೆಚ್ಚ ಇದ ಹಿಂಡು
ದಾಯಾದ್ಯರೊಳ್ ಪುಂಡ ಗಂಡುಗಲಿಯಾಗಿ
ಸ್ತ್ರೀಯರಂತೆ ನೀನು ದುಃಖದಿಂದಲಿ ಈಗ
ಮರುಗುವದ್ಯಾಕಯ್ಯ ॥ಕುಂಡಲಪುರಿ ॥

ಸುಧನ್ವ: ಎಲೋ ಗಾಂಡೀವಿ. ನೀನು ವುದ್ದಂಡ ಪರಾಕ್ರಮಿಯಾಗಿ ಯನ್ನೊಡನೆ ಸಂಧಿಸದೆ ಸತ್ತವರಿಗೆಲ್ಲಾ ದುಃಖಿಸುತ್ತಾ ಹೆಂಗಸಿನೋಪಾದಿಯಲ್ಲಿ ಅಳುವುದನ್ನು ಕುಂಡಲಪುರೀಶನಾದ ಮಾರುತೀಶನು ಮೆಚ್ಚುವದಿಲ್ಲವೊ ವುಚ್ಚ ಭ್ರಷ್ಟ.

ಪದ

ಗುಡಿಗುಡಿಸುತ್ತಲಿ ಭೋರ್ಗರಿಸು
ತಲೀಗ ಅಡಿ ಇಡುತಲಿ ಬಂದ
ಹುಡುಗನ ಕೊಲ್ಲಲು ದುಡುಕುತನ
ವ ಮಾಡಿ ಸಡಗರಬಂದಡೆ ॥
ಗುಡಿ ಗುಡಿಸುತ್ತಲಿ॥

ಅರ್ಜುನ: ಎಲಾ ದುರುಳ ಹುಡುಗನೆ, ಯನ್ನ ಕಂದನಾದ ವೃಷಕೇತುವಂ ಸಂತೈಸುತ್ತಾ ಇರಲು ನನಗೆ ದುಡುಕಿನಿಂದ ಆಡಬಹುದೇನೋ ತರಳ ನೋಡೆನ್ನ ಸರಳ.

ಪದ

ಪದ್ಧತಿಯಂತೆ ನೀನಿರದೆ ನೋಡಿ ಗುದ್ದಿಕೊ
ಪಾರ್ಥ ಯಿನ್ಯಾತಕ್ಕೆ ಸದ್ದು ಮಾಡದೆ ಬಲು
ಬುದ್ಧಿಯೊಳಿರದೆ  ಗದ್ದಲಾ ಮಾಡಿ
ದರೆ  ವದ್ದೋಡಿಸುವೆನು ॥ಪದ್ಧತಿಯಂತೆ॥

ಸುಧನ್ವ: ಎಲೋ ಪಾರ್ಥ, ಪದ್ಧತಿಯಂತೆ ಮಾಡಲೂ ಗುದ್ದಿಕೊಂಬೆಯಲ್ಲದೆ ಸದ್ದು ಮಾಡದೆ ಬುದ್ಧಿಯಿಂದ ವಂದು ಮಾತನಾಡದೆ ಗದ್ದಲವನು ಪಡಿಸುವದು ಬೇಕಾಯಿತೇನೊ ಪಾರ್ಥ.

ಪದ

ಕಂದನೆಂದು ಕಡುಕರುಣದಿ  ನಿನ್ನ ಬಿ
ಟ್ಟಿರುವೆ ನೋಡೊ  ಜಗದಲಿ  ತಂದೆ ತಾ
ಯಿಗಳನ್ನು ತೊರೆದು ನೀ ಬಂದಿರುವೆ
ಚಂದದಿಂದಲಿ ಈಗ ಕುದುರೆಯ ನೀ ಬಿಡೊ

ಅರ್ಜುನ: ಎಲಾ ಸುಧನ್ವ. ಹಸುಮಗನೆಂದು ನಾನು ತಾಮಸದಲ್ಲಿ ಇದ್ದಾಗ್ಯು ಯಮ್ಮ ಕುದುರೆಯನ್ನು ಬಿಡದೆ ದುರಂಹಕಾರದಲ್ಲಿ ಇರುವುದನ್ನು ನೋಡಿದರೆ, ತಂದೆ ತಾಯಿಗಳನ್ನು ತೊರೆದು ಬಂದಿರುವನಾಗಿ ಕಾಣಿಸುತ್ತಾ ಇದ್ದಿ. ನಿನಗೆ ಕೊನೆಯು ಬಂದು ವದಗಿದಂತೆ ಕಾಣುವುದಲ್ಲೊ ಭ್ರಷ್ಟ ಪರಮ ಪಾಪಿಷ್ಠ…

ಪದ

ಕುದುರೆಯಾ ಕೇಳಲು ನಿನಗೆ  ಅದು
ಸದರವೆಂಬುದಾ ನೀನರಿಯೆ ॥ಮದನ
ಜನಕನನ್ನು ಕರೆಸಿಕೊ ನಿನ್ನಯ  ಹೃದಯ
ಕಾಯುವದಕ್ಕೆ ಬರುವನು ಬೇಗದಿ ॥ಕುದುರೆ ॥

ಸುಧನ್ವ: ಎಲೋ ಅರ್ಜುನ. ಕುದುರೆಯನ್ನು ಕೇಳುವುದು ಸದರವಲ್ಲಾ. ಈ ಮಾತುಗಳನ್ನು ಕೇಳಿದರೆ ಬುಧರು ಅಪಹಾಸ್ಯಮಂ ಗೈಯುವರು  ಕುದುರೆಯನ್ನ ಬಿಡಿಸಿಕೊಳ್ಳುವದಕ್ಕೆ  ನಿನ್ನಿಂದ ಸಾಧ್ಯವಾಗುವುದಿಲ್ಲಾ. ನಿನ್ನ ಪ್ರಾಣ ರಕ್ಷಣೆಗೆ ಮದನ ಜನಕನನ್ನು ಕರೆಸಿಕೊಳ್ಳುವಂಥವನಾಗೊ ಪಂಡುಮುಂಡೇದೆ.

ಪದ

ಸದ್ದು ಬೀಳಲು ಒದ್ದು ಪೋಪೆನೊ  ಅದ್ದಲಿ
ಸುತ ಪಾರ್ಥ ಸುಧನ್ವನೂ  ಘರ್ಜನೆ ಇಂದೆದ್ದು
ಸುಧನ್ವನ ನಾ ವಡೆದು  ತುದಿಗಾಲವು
ಒದಗುವದಲಿರುವದಲ್ಲೊ

ಅರ್ಜುನ: ಯಲೊ ಸುಧನ್ವ. ನಿನಗೆ ಈ ತುದಿಗಾಲಿನಿಂದ ಒದ್ದು ಬೀಳುವಂತೆ ಮಾಡಿ ಇದ್ದೇನೆ. ಇನ್ನಾದರು ಎಚ್ಚರಿಕೆಯಿಂದ ಶರಣಾಗತನಾಗಿ ಕುದುರೆಯನ್ನು ಬಿಡುವಂಥವನಾಗೊ ದುರುಳಾ ಕೇಳೊ ತರಳಾ.

ಪದ

ಸುದತಿಯರು ಮೆಚ್ಚರೂ ನಿನ್ನ ಪಾರ್ಥ ಸದ
ರದ ಪೆಟ್ಟಿಗೆ ಬೇರಿನ್ನಾ  ಮದಗಜದಲಿ ಇಂ
ದೆ ಹೃದಯಕ್ಕೆ ವದೆವೆನೊ ಅದುರದೆ ಬೆದ
ರದೆ ಚದುರದೆ ನಿಲೆಲೊ॥ಸುದತಿಯರ ॥

ಸುಧನ್ವ: ಯಲೊ ಪಾರ್ಥ. ನೀನು ಹೊಡೆದ ಪೆಟ್ಟಿಗೆ ಹೆಂಗಸರು ಕೂಡಾ ಮೆಚ್ಚುವುದಿಲ್ಲ. ಇಂಥ ಪೆಟ್ಟು ಹೊಡೆಯುವದಕ್ಕೆ ಮದವೇರಿದ ಆನೆಯಂತೆ ಬಂದು ಹೊಡೆದು ಇರುತ್ತೀಯಾ. ನಿನ್ನ ಸಾಹಸವೆಲ್ಲಾ ನಿನ್ನ ಹೃದಯದಲ್ಲಿ ಇರಿಸುವಂಥವನಾಗು. ಎಲೋ ಭ್ರಷ್ಟ, ಕಂಬು ಕತ್ತರಿಸಿದಂತೆ ಹೊಡೆಯುತ್ತೇನೆ ತಡೆದುಕೊಳ್ಳಲಾ ಪಾರ್ಥ.

ಪದ

ಪೋರನೆ ಪೆಟ್ಟಿಗೆ ರುಧಿರವು  ಈ
ಭೂಮಿಗೆ ರುಧಿರವು ಸುರಿಸುತಾ  ಮೂರು
ಬಾಣಗಳೊಳು ತೂರಿ ಹೊಡೆಯದಿರೇ
ಸಾರಿ ಹಿಡಿಯುವೆ ನೋಡೆಲಾ ಶರವಾ ॥
ಪೋರನೆ ಪೆಟ್ಟಿಗೆ ರುಧಿರವು ॥

ಅರ್ಜುನ: ಎಲಾ ಅಧಮ, ನಿನ್ನ ಪೆಟ್ಟಿಗೆ ಯನ್ನ ಶರೀರದಲ್ಲಿ ರುಧಿರವೆಂಬ ರಕ್ತವು ಸುರಿಯುವುದನ್ನು ನಿಗ್ರಹಿಸಿ ಇದ್ದೇನೆ. ಇನ್ನು ನಾನು ಮೂರು ಬಾಣದಿಂದ ನಿನ್ನ ಶಿರವನ್ನು ತೆಗೆಯದೆ ಹೋದರೆ ಶರವೆಂಬ ಬಿಲ್ಲನ್ನು ಹಿಡಿಯುವದಿಲ್ಲವೊ ಅಸುರ ಹಾರಿಸುವೆ ನಿನ್ನ ಶಿರಾ …..

ಪದ

ಇಷ್ಠು ಪಂಥಗಳ್ಯಾಕೊ  ಪಾರ್ಥ ಕೃಷ್ಣನ ಬಲ
ದಿಂದಾಡುವೆ ನೀನು ಧೂರ್ತ  ಸೃಷ್ಠಿಯೊಳಗೆ
ಗರಳಪುರಿ  ಶ್ರೇಷ್ಠನು ತಾ ಬಲ್ಲಾ  ನಿನ್ನ
ಕೊಲ್ಲದೆ ಎಷ್ಠ ಮಾತ್ರಕು ಬಿಡೆನೊ

ಸುಧನ್ವ: ಯಲಾ ಗಾಂಡೀವಿ. ನೀನು ಮಾಡಿದ ಪಂಥಕ್ಕೆ ಸರಿಯಾಗಿ ಶ್ರೀಕೃಷ್ಣನು ನಿನಗೆ ಸಹಾಯಕನಾಗಿದ್ದರಿಂದ ಅತಿ ಜಾಗರೂಕನಾಗಿ ಬಲಿಯಮಂ ನೆಚ್ಚಿ ಪಂಥವಂಗೈದೆ. ಅನಾಥೋ ದೈವರಕ್ಷಕಃ ಅಂದಹಾಗೆ ನಿನಗೆ ಯಾರ ಬಲವು ಇಲ್ಲ. ಈ ಭೂಮಿಯಲ್ಲಿ ದೃಢವುಳ್ಳ ಮಾರುತೀಶನನ್ನು ನಂಬಿ ಇದ್ದೇನೆ  ಶ್ರೀ ಕೃಷ್ಣನಂ ಭಜಿಸಿ ಕರೆಸಿಕೊಳ್ಳುವಂಥವನಾಗೊ ಪಾರ್ಥ ….

ಸೊ್ತ್ರೀೀತ್ರ ದಂಡಕ

ಜಯಜಯ ಶ್ರೀ ಲೋಲ ಕರುಣಾಲಪಾಲ ಜಯತು ರಕ್ಕಸ
ಶೂಲ ಜಯದಾದಿಮೂಲ ಜಯ ಶಂಭು ಚಕ್ರಧರ
ಶ್ರೀಮರ್ತ್ಯಧರನೆ ಜಯ ಮಾರುತೀಶ
ಜಯ ಸತ್ಯ ಗುಣರೂಪ  ಜಯ ಕೃಪಾನಿಧಿಯೇ
ಜಯ ಮಾನ್ಯ ಮೇಷ ಕೌಸ್ತುಭ ಭೂಷ  ಜಯ
ಸುಜ್ಞಾನ  ಲೀಲಾ ವಿನೋದ  ಜಯತು
ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನೆ ಜಯತು
ಶ್ರೀ ಹರಿ ಕೃಷ್ಣ ವೈಕುಂಠವಾಸ ॥

(ಕೃಷ್ಣನು ಬರುವಿಕೆ)

ತ್ರಿವುಡೆ

ಗರುಡ ವಾಹನನಾಗಮನದಿ  ಬೇಗ ಪರಮ
ಸಂಭ್ರಮದಿಂದ ಹರುಷದಿಂ ವರಸಿದ್ಧ ಸಾಧ್ಯರು
ಈ ಕ್ಷಿತಿಗೆ ಸೇರಿದರು ॥
ನಿರುತ ನಿರ್ಮಲವಾದ ಸರಸಿಜ ಪರಿಪರಿಯ ವಿಧದಿಂದಲಾಗ
ಪುಷ್ಪ ವೃಷ್ಠಿಗಳ  ಸುರಿಸುತಲಾಗ  ಸುಮನದಿ ॥
ಖೇಚರದಲ್ಲಿ ಬಂದು ನಿಂತಿರಲು
ಭರದಿ ಪಾರ್ಥನ ಪಂಥಗೈವೆನೆಂದು ಸರಸಿಜೋ
ದ್ಭವನು  ಬಂದು ಕರುಣಿಸಿ  ತೆರೆಯೊಳಗೆ ನಿಂದು ॥

ಕೃಷ್ಣ: ಯಲಾ ಸಾರಥಿ. ಹೀಗೆ ಬರುವಂಥವನಾಗು ಮತ್ತೂ ಹೀಗೆ ನಿಲ್ಲುವಂಥವನಾಗು. ಎಲಾ ಮನುಷ್ಯನೆ, ಶ್ರೀ  ವದನಾಬ್ಜ ಭೃಂಗ ಮಂಗಳ ತರಂಗ ಶತ್ರು ಕುಲಭಂಗ ಶಾಮಲಾಂಗ ಅಂಗಜನ ಹೃತ್ಕಮಲಸಂಗ ಸ್ವಯಂ ಭೂಷಿತ ಶಂಭುಪ್ರಿಯ ಜಂಭಾರಿಸುತ ಕುಂಭಿಣೀಧರ ಕುಲಗಿರಿ ದಯಾಂಭುನಿಧಿ ಅಂಬುಜನಯನ ಕುಂಭವಿನುತಾ ವಿಶ್ವಂಬರನಾದ ಶ್ರೀಕೃಷ್ಣಮೂರುತಿ ನಾನೇ ಅಲ್ಲವೇನಪ್ಪಾ ಸಾರಥಿ.

ಪದ

ನಂದನಂದನದೇವ  ಗೋಕುಲಕಂದ ॥
ನಂದನಂದನಾದೇವ ॥
ಸಿಂಧು ಶಯನ ಮುಚು ॥ಕುಂದ ವಂದಿತ ಸುರ
ಬೃಂದವ ಪಾಲಿಪ  ನಂದಗೋಪಿಯ ಕಂದ ॥ನಂದ ॥

ಕೃಷ್ಣ: ಭಲಾ ಸಾರಥಿ. ಕ್ಷೀರಸಾಗರದಲ್ಲಿ ಶೇಷಶಯನನಾಗಿ ವಾರಿಜಾಕ್ಷಿಯರಿಂದ ಓಲೈಸಿಕೊಳ್ಳುವಂಥ ಸುರವೃಂದಗಳ ಆನಂದದಿಂದ ಪರಿಪಾಲಿಸುವ ನಂದಗೋಪಿಯ ಮಂದಿರದಲ್ಲಿ ಆನಂದದಿಂದಿರುವ ನಂದಗೋಪಿಯ ಕಂದನೆಂಬ ನಾಮಾಂಕಿತವನ್ನು ಕೇಳಲಿಲ್ಲವೇ ಸಾರಥಿ.

ಪದ

ಅಷ್ಠಮಿ ರಾತ್ರಿಯೊಳು  ಶ್ರೇಷ್ಟ ತಾರೆಯೊಳ್
ಪುಟ್ಟಿ  ದುಷ್ಟ ಕಂಸನ ಕುಟ್ಟಿ
ಸೃಷ್ಠಿಯ ಪಾಲಿಸಿದಾ ॥ನಂದನಂದ ॥

ಕೃಷ್ಣ: ಎಲಾ ಸಾರಥಿ ಶ್ರಾವಣ ಬಹುಳ ಅಷ್ಠಮಿ ರಾತ್ರಿಯೊಳ್ ಶ್ರೇಷ್ಠವಾದ ನಕ್ಷತ್ರದೊಳ್ ಪುಟ್ಟಿ ದುಷ್ಠನಾದ ಕಂಸನಂ ಕುಟ್ಟಿ ಯೀ ಸೃಷ್ಠಿಯಂ ಪಾಲಿಸಿದ ಶ್ರೀಕೃಷ್ಣನೆಂಬ ನಾಮಾಂಕಿತವನ್ನು ಕೇಳಲರಿಯಾ ಸಾರಥಿ.

ಪದ

ದುಷ್ಠ ರಾಧೇಯನಿಗೆ ಕಷ್ಠವಂ ಕರುಣಿಸಿ
ಇಷ್ಠ ಧರ್ಮಜನಿಗೆ ಶ್ರೀ ಪದವಿಯ ಕೊ
ಟ್ಟು  ನಂದನಂದಾನದೇವಾ ॥

ಕೃಷ್ಣ: ಎಲಾ ಮಾನುಷ್ಯನೆ, ಹಸ್ತಿನಾವತಿಯಲ್ಲಿ ದುಷ್ಠ ರಾಧೇಯಾದಿಗಳನ್ನು ನಷ್ಠಗೊಳಿಸಿ ಯನಗೆ ಶ್ರೇಷ್ಠನಾದ ಧರ್ಮರಾಯನಿಗೆ ಇಷ್ಠ ಪದವಿಯನ್ನ ಕೊಟ್ಟು ರಕ್ಷಿಸುವ ಶ್ರೀ ಕೃಷ್ಣಮೂರ್ತಿಯೆಂಬ ನಾಮಾಂಕಿತವನ್ನು ಕೇಳಲರಿಯೇ ನಪ್ಪ ಸಾರಥಿ ॥

ಪದ

ಹರುಷದಿಂ ಪಾರ್ಥಗೆ ಸಾರಥಿ ನಾನಾಗಿ
ದುರುಳರೆಲ್ಲರನೊರೆಸಲು ಉದ್ಭವಿ
ಸಿದ ನಂದನಂದಾನದೇವ ॥

ಕೃಷ್ಣ: ಭಲೆ ಸಾರಥಿ. ನರನಾದ ಅರ್ಜುನನಿಗೆ ಸಾರಥಿಯಾಗಿ ದುಷ್ಠ ಜಂತುಗಳಂ ನಷ್ಠಗೊಳಿಸಿ ಪಾಂಡವರ ಕಷ್ಠವಂ ಪರಿಪಾಲಿಸಲು  ಸೃಷ್ಠಿಯೊಳ್ ವುದ್ಭವಿಸಿದ, ಶ್ರೀ ಕೃಷ್ಣನೆಂಬೊ ನಾಮಾಂಕಿತವನ್ನು ಕೇಳಲರಿಯೆ ಯೇನಪ್ಪಾ ಸಾರಥಿ ॥

ಪದ

ವಾಸುಕಿಪುರಿವಾಸ  ಶೇಷಶಯನ
ಶ್ರೀಶ  ದಾಸರ ಪೊರೆಯುವಂಥ  ವಾಸವಾ
ದ್ಯರಪೋಷ ॥ನಂದನಂದಾನ ದೇವ ॥

ಕೃಷ್ಣ: ಎಲಾ ಸಾರಥಿ, ವಾಸುಕಿಪುರಿವಾಸನಾದ ದಾಸರ ಪೋಷಿಸಿ ವಾಸವಾದ್ಯರಾದ ದೇವತೆಯ ಬಾಧೆಗಳನ್ನು ನಿವಾರಣೆ ಮಾಡಲು ವಸುದೇವರ ಸತಿ ದೇವಕಿದೇವಿಯ ವುದರದಲ್ಲಿ ವುದ್ಭವಿಸಿದ ಶ್ರೀಕೃಷ್ಣಮೂರ್ತಿ ನಾನೇ ಅಲ್ಲವೇನಪ್ಪಾ ಸಾರಥಿ….

ಎಲಾ ಮಾನುಷ್ಯನೆ, ಜಂಬಾರಿ ನಂದನನು ಕುಂಭಿಣಿ ವಲಯದೊಳ್ ಸಂಭ್ರಮದಿ ಇಂಬಾಗಿ ಬಿಟ್ಟು ಬೆಂಬಿಡದೆ ಬಲದೊಡನೆ ಅಂಬರದಿ ಬರಲು ರಣದೊಳಗೆ ಅಂಬರದಿ ಸುರರು ನಗುವಂತೆ ಗಂಭೀರ ತಪ್ಪಿ ಪಾರ್ಥ ಯಮ್ಮನ್ನವಲಂಬನೆಗೆ ತರಲು ಬೆಂಬಿಡದೆ ಚುಂಬಿಸುವ ತವಕದಿಂ ಬಂದಿರ್ಪೆನೈ ಸಾರಥಿ.

ಕೃಷ್ಣ: ಎಲಾ ಸಾರಥಿ ಅರ್ಜುನನು ದಾವಲ್ಲಿ ಇದ್ದಾನೊ ಭೇಟಿಯನ್ನು ಮಾಡಿಸುವಂಥವನಾಗೊಸೂತಾಧಿಪಾ.

ಅರ್ಜುನ: ನಮೋ ನಮೊ ಸ್ವಾಮಿ.

ಕೃಷ್ಣ: ಧೀರ್ಘಾಯುಷ್ಯಮಸ್ತು ಅರ್ಜುನ. ಅಯ್ಯ ಪಾರ್ಥ, ಹಸ್ತಿನಾವತಿಯಲ್ಲಿ ನಿಮ್ಮ ಅಗ್ರಜನಾದ ಧರ್ಮರಾಯನ ಯಾಗ ಮಂಟಪದಲ್ಲಿ ಇರಲು, ನೀನು ಏನು ಕಾರಣ ಭಜಿಸೋಣವಾಯಿತು, ಅಂಥ ವಿಪತ್ತು ಏನು ಸಂಭವಿಸಿತು ಜಾಗ್ರತೆಯಿಂದ ಪೇಳಬೇಕಪ್ಪಾ ಅರ್ಜುನ.

ಪದ

ಶ್ರೀಶನೆ ನಿಮ್ಮ ಮರುಗುತ ಬಹಳ
ಘಾಸಿಯಾಗಿ ಸ್ಮರಿಸಿದೆನು  ವಾಸು
ದೇವ ಈಗ ಯನ್ನನು ನೀನು  ಲೇಸು
ಮಾಡಿಸೋ ದೇವಾ ॥

ಅರ್ಜುನ: ಹೇ ಸ್ವಾಮಿ, ಈ ತರಳನಾದ ಸುಧನ್ವನು ಯಮ್ಮ ಕುದುರೆಯನ್ನು ಕಟ್ಟಿ ಯನ್ನ ಕಂದನಾದ ವೃಷಕೇತುವಂ ಕೆಡವಿ ಯನ್ನೊಳ್ ಘೋರವಾದ ಯುದ್ಧವಂ ಮಾಡಿ ಯನ್ನ ಸಾಹಸಕ್ಕೆ ಕುಂದಕವಂ ತಂದನೈಯ್ಯ ಸ್ವಾಮಿ ಆಶ್ರಿತಜನ ಪ್ರೇಮಿ ….

ಪದ

ಎಷ್ಟು ವಿಧದಿ ಪೋರಿದರು ನಷ್ಠವಾ
ಯಿತೆನ್ನಷ್ಠ ಮದವು ಸೃಷ್ಠೀಶನೇ ಯನ್ನ
ಕಷ್ಠವ ನೀನೀಗ ನಷ್ಠಗೊಳಿಸೋ ದೇವಾ ॥

ಅರ್ಜುನ: ಹೇ ಮಹಾನುಭಾವ, ನಾನು ಯಷ್ಠು ವಿಧದಿಂದ ಯುದ್ಧವಂ ಮಾಡಿದಾಗ್ಯು ಯನ್ನಷ್ಟಮದಗಳಂ ನಷ್ಠಿಸಿ ಕಷ್ಠಕ್ಕೆ ಗುರಿಯಾದೆ. ಯಾಕೆಂದರೆ ನಿಮ್ಮನ್ನು ಭಜಿಸದೆ ನಾನೇ ಶ್ರೇಷ್ಠನೆಂದು ಅಹಂಕರಿಸಿದ್ದಕ್ಕೆ ಭಂಗವಾಯಿತು. ಇದನ್ನು ಹಿಂಗುವಂತೆ ಮಾಡಿಸೊ ಮಹಾನುಭಾವಾ.

ಪದ

ಮೂರು ಬಾಣದಿಂದಲವನ ಶಿರವಾ
ವೊಡೆಯಲು  ಮೀರಿದರೆ ಶರವ
ಹಿಡಿಯುವೆ ನಾನು  ವಾರಿಜಾಕ್ಷ ದೇವಾ ॥

ಅರ್ಜುನ: ಅಯ್ಯ ಸ್ವಾಮಿ, ಈ ಸುಧನ್ವನಿಗೆ ಮೂರು ಬಾಣವಂ ಹೊಡೆದು ಕತ್ತರಿಸುತ್ತೇನೆಂದು ಪ್ರತಿಜ್ಞೆಯನ್ನು ಮಾಡಿ ಇದ್ದೇನೆ. ತಪ್ಪಿದರೆ ಇನ್ನು ಶರವನ್ನು ಯಂದಿಗೂ ಹಿಡಿಯುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿ ಇರುವುದಕ್ಕೆ ನಿನ್ನ ಸಹಾಯದಿಂದ ಗೆಲ್ಲುತ್ತೇನೆಂದು ಭಜಿಸಿದ್ದೇನೆ. ಯನ್ನ ಪಂಥವನ್ನು ನೆರವೇರಿಸಿ ಪರಿಪಾಲಿಸಬೇಕೈಯ್ಯ ಮಹಾನುಭಾವ.

ಪದ

ಇಷ್ಠು  ಪಂಥವ ಮಾಡಿ  ಚಂದ
ದಿಂದ ನಿಮ್ಮ ಭಜಿಸದೆ ತಂದೆ  ಮಾ
ರುತಿ ದಯದಿಂದ  ಯನ್ನ ಪ್ರತಿಜ್ಞೆಯನ್ನು
ನೆರವೇರಿಸೊ ದೇವಾ ಶ್ರೀಶ ॥

ಅರ್ಜುನ: ಹೇ ಸ್ವಾಮಿ, ಈ ರೀತಿ ಇದ್ದ ಪಂಥಗಳಂ ಮಾಡಿ ತಂದೆಯಾದ ಮಾರುತೀಶನ ಕರುಣದಿಂದ ನಿಮ್ಮನ್ನು ಭಜಿಸಲು ದಯಮಾಡಿದ್ದೀರಿ. ನನ್ನ ಕಷ್ಠವನ್ನು ನಷ್ಠಗೊಳಿಸಿ ಪಂಥವಂ ನೆರವೇರಿಸಬೇಕೈ ದೇವಾ ಯದುಕುಲಭಾವ॥

ಪದ

ಇಂತು ಪಂಥವ ಮಾಡುವರೆ  ಪಾರ್ಥನೆ
ಕೇಳೊ ಭ್ರಾಂತ ನೀನಾಗುವರೆ  ಅಂತ
ರಂಗದಿ ಕೂಡಲೆಂತು ಗೆಲ್ಲುವದಕೆ  ವೈ
ರಿಯ ತೆರದಿಂದಲಿ ॥ಪಾರ್ಥನೆ ಕೇಳು
ಭ್ರಾಂತಿ ನೀನಾಗುವರೇ ॥

ಕೃಷ್ಣ: ಅಯ್ಯ ಅರ್ಜುನ, ತಿಳಿಯದೆ ಭ್ರಾಂತನಾಗಿ ಇಂಥ ಪಂಥವನ್ನು ಮಾಡುವರೇ. ಶತ್ರು ಸಿಂಹದೋಪಾದಿಯಲ್ಲಿರುವರನ್ನು ತಿಳಿದು ಘಾಸಿಪಟ್ಠು ಇಂಥ ಪಂಥವಂ ಮಾಡುವರೇನು ಪಾರ್ಥ.

ಪದ

ಹದಿನಾಲ್ಕು ಲೋಕವನ್ನು  ಬೆದರಿಸುವಂಥ
ಚದುರ ನೀನಲ್ಲೊ ಪಾರ್ಥ ॥ಇದು ಏನೊ
ನಿನಗೆ  ವದಗಿದ ಭೂತದ  ಹದ
ನಾನೆಂತು ಹೇಳಲಿ ॥ಪಾರ್ಥನೆ ಕೇಳೂ
ಭ್ರಾಂತ ನೀನಾಗುವರೆ ॥

ಕೃಷ್ಣ: ಅಯ್ಯ ಪಾರ್ಥ, ಹದಿನಾಲ್ಕು ಲೋಕವನ್ನು ಪಲ್ಲಟಿಸುವಂಥ ಚದುರನಿಗೆ ಬಂದು ಇರುವ ವಿಪತ್ತು ತಿಳಿದು ಇಂಥ ಪಂಥವನ್ನ ಮಾಡಬಹುದೇನೊ ಪಾರ್ಥ …..

ಪದ

ಮಾರುತೀಶನ ಕರುಣವು  ತರಳನ
ಮೇಲೆ ಇರುವುದ ನೀನರಿಯದೆ  ಬರಿ
ದೆ ಪಂಥವ ಮಾಡಿ ತರಹರಿಸುವಲೇನೈ
ಧರಣಿಯೊಳ್ ಅಪಹಾಸ್ಯವ ॥

ಕೃಷ್ಣ: ಅಪ್ಪಾ ಅರ್ಜುನ. ವುರಗಪುರೀಶನಾದ ಮಾರುತೀಶನು ಆ ತರಳನನ್ನು ಕರುಣ ಕಟಾಕ್ಷದಿಂದ ಕಾಯ್ದು ಇರುತ್ತಾನಾಗಿ, ಅಂತಾ ಭಕ್ತರ ಮನೋಭಾವವಂ ತಿಳಿಯದೆ ಇಂಥ ಪಂಥವನ್ನು ಮಾಡಬಹುದೇನಪ್ಪಾ ಪಾರ್ಥ.

ಕಂದ ॥॥ಸಾವೇರಿ

ಭಗವಂತನೆ ಕೇಳು ಯನ್ನ
ಹರಣದ ಮಾತ ನುಡಿಯೆ ಸೊಗಸೆ
ನಿಮಗೆ ನಗೆಪಾಟಲಾಯಿತು ॥
ಸುಗುಣಾಕರ ಕರುಣಿಸೆನ್ನನೂ ॥
ಖಗವಾಹನನೇ

ಅರ್ಜುನ: ಅಯ್ಯ ಮಹಾನುಭಾವನಾದ ಭಗವಂತನೆ, ಯನ್ನ ಹರಣದ ಮಾತುಗಳನ್ನಾಡಿ ಜನಗಳು ನಗುವುದಕ್ಕೆ ಕಾರಣವಂ ಮಾಡಿಸದೆ ಕರುಣಿಸಿ ಕಾಯಬೇಕೊ ಮಹಾನುಭಾವಾ ॥

ಕಂದ ಸಾವೇರಿ

ಪರಮಾತ್ಮನಾದ ಶಿವನೊಳು ವರಗಳಂ
ಪಡೆದು ಮೆಚ್ಚಿ ಕೊಟ್ಟ ಅಸ್ತ್ರಂಗಳ ಗುರಿ ಇಡು
ಗುಪ್ತದಲಿ ಎನುತಲಿ ಸ್ಮರಿಸುತಾ  ಸೂಚಿಸು
ವರೆ ಹರುಷದೊಳೆದ್ದನೂ ॥

ಕೃಷ್ಣ: ಅಯ್ಯ ಅರ್ಜುನ, ಪರಶಿವ ಮೂರ್ತಿಯಲ್ಲಿ ನೀನು ಯುದ್ಧವಂ ಮಾಡಿ ಮೆಚ್ಚಿಸಿ ಕಂದರ್ಪ ಬಾಣವಂಗುತ್ತರವಾಗಿ ಗುರಿ ಇಟ್ಟಿದ್ದೇ ಆದರೆ ನಿನ್ನ ಪಂಥ ಸಲ್ಲಬಹುದೈಯ್ಯ ಪಾರ್ಥ.

ಭಾಗವತರ ಮಾತು: ಅಯ್ಯ ಭಾಗವತರೆ, ಶ್ರೀ ಕೃಷ್ಣನು ಅರ್ಜುನನೂ ಸಹ ಏಕಾಂತವಾಗಿ ಮಾತನಾಡುವ ಕಾಲದಲ್ಲಿ, ಶ್ರೀ ಹರಿಯು ಭಕ್ತರ ಬಂಧುವಾದ ಕಾರಣ ಸುಧನ್ವನಿಗೆ ದುರುಳವಂ ಕೊಡಲಾದ ಸಮಯದೊಳ್ ಸುಧನ್ವನು ಶ್ರೀ ಕೃಷ್ಣನನ್ನು ಭಜಿಸುತ್ತಾನೈಯ್ಯ ಭಾಗವತರೆ.

ಸುಧನ್ವನ ಸ್ತೋತ್ರ ವಾರ್ಧಕ

ಜಯ ಜಯ ರಮಾರಮಣ  ಜಯ ಪನ್ನಗ ಚ
ರಣಾ  ಜಯಪೂರ್ಣತುಂಗ  ಜಯ ವೃಷಭ
ನಿಶಿತಾಂಗ ಜಯತು ಶ್ರೀ ವೈಕುಂಠ ಜಯದೇವ
ಜಯ ಸುಗುಣಸೌರಭ
ಜಯ ಪುಷ್ಪ ಚಾರುತರ ಜಯತು ಭೂತ
ವ್ರತಾ  ಜಯ ಸರೋರುಹವದನ  ಜಯ ರಜ
ತ ಗಿರಿ ಸದನ ಜಯ ಮಹಾಲಂಕಾರ  ಜಯ
ಭೀಷಣಾಕಾರ  ಜಯ ಜಯಾನುತ ಶಾಂತ ॥

ಭಾಗವತರ ಮಾತು: ಅಯ್ಯ ಭಾಗವತರೆ, ಯೀ ರೀತಿಯಿಂದ ಸುಧನ್ವನು ಸ್ತುತಿಸುತ್ತಿರಲಾಗಿ ಅರ್ಜುನನು ಯುದ್ಧಕ್ಕೆ ಸಂನದ್ಧನಾಗಿ ಬಾಣಂಗಳಂ ತೊಡಿಸಿ ಸುಧನ್ವನ ಎದುರುನಿಂತು ಮಾತನಾಡುತಿರ್ದನು….

ಪದ

ಬಾರೊ ತರಳ ತೋರಿಸು ಶವುರ‌್ಯವಾ  ತಾ ಭ
ರದಿ ಬಿಡುವೆ ಮೀರಿದಂಥ ಕ್ರೂರ ಅಸ್ತ್ರವಾ ॥

ಅರ್ಜುನ: ಎಲಾ ಸುಧನ್ವ, ನಿನ್ನ ಮೇಲೆ ಮಹಾಕ್ರೂರಾಸ್ತ್ರವಂ ಬಿಟ್ಟು ಇದ್ದೇನೆ. ಈ ಬಾಣವನ್ನು ನಿಗ್ರಹಿಸಿಕೊಳ್ಳುವಂಥವನಾಗು  ತರಳಾ ॥