ಚೆನ್ನೈನಲ್ಲಿ ವಾಸವಾಗಿರುವ ಅಚ್ಚ ಕನ್ನಡತಿ ಶ್ರೀಮತಿ ಸುಧಾರಾಣಿ ರಘುಪತಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡು, ಯು.ಎಸ್.ಎ.ಯ ರಾಂಡೊಲ್ಪ್ ಮಕಾನ್ ಮಹಿಳಾ ಕಾಲೇಜಿನಲ್ಲಿ ಓದಿದ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಆಧುನಿಕ ನೃತ್ಯವನ್ನು ಅಲ್ಲಿ ಕಲಿತುಕೊಂಡರು. ಶ್ರೀ ಯು.ಎಸ್.ಕೃಷ್ಣರಾವ್, ಶ್ರೀಮತಿ ಚಂದ್ರ ಭಾಗಾದೇವಿ, ಶ್ರೀ ಕೆ.ಪಿ.ಕಿಟ್ಟಪ್ಪಪಿಳ್ಳೈ ಹಾಗೂ ಶ್ರೀಮತಿ ಗೌರಿ ಅಮ್ಮಾಳ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ ಶ್ರೀಮತಿ ಸುಧಾರಾಣಿ ಅವರು ತಮ್ಮ ೧೨ನೇ ವಯಸ್ಸಿನಲ್ಲಿಯೇ ಮಾಜಿ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರ ಸಮ್ಮುಖದಲ್ಲಿ ಭರನಾಟ್ಯ ಪ್ರದರ್ಶನ ನೀಡಿ ಪ್ರಶಂಸೆ ಗಳಿಸಿದವರು. ಸಂಗೀತ ಕ್ಷೇತ್ರದ ದಿಗ್ಗಜಗಳಾದ ಪಿಟೀಲು ಟಿ.ಚೌಡಯ್ಯ ಮತ್ತು ಮಧುರೈ ಎನ್. ಕೃಷ್ಣನ್ ಅವರಲ್ಲಿ ಸಂಗೀತವನ್ನೂ ಅಭ್ಯಾಸ ಮಾಡಿರುವ ಸುಧಾರಾಣಿ ಓರ್ವ ಪರಿಪೂರ್ಣ ನರ್ತಕಿ.

ಪ್ರಪಂಚದಾದ್ಯಂತ ಅನೇಕ ಸಹಾಯಾರ್ಥ ಪ್ರದರ್ಶನಗಳನ್ನೂ ನೀಡಿದ ಇವರು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅನೇಕ ಸಮ್ಮೇಳನಗಳಲ್ಲಿ ಭಾಗವಹಿಸಿ, ನೃತ್ಯ ಹಾಗೂ ತತ್ವ ಶಾಸ್ತ್ರ ಕುರಿತಂತೆ ಶಿಕ್ಷಣ ನೀಡಿದ್ದಾರೆ. ಅತ್ಯುತ್ತಮ ನೃತ್ಯ ಸಂಯೋಜಕಿಯೂ ಆಗಿರುವ ಶ್ರೀಮತಿ ಸುಧಾರಾಣಿ, ರವೀಂದ್ರನಾಥ ಟಾಗೂರರ ’ಗೀತಾಂಜಲಿ’, ’ಕುಮಾರ ಸಂಭವಂ’, ’ಶಾಕುಂತಲಾ’ ಮುಂತಾದ ರೂಪಕಗಳನ್ನು ನಿರ್ದೇಶಿಸಿ ಜನಪ್ರಿಯತೆಗಳಿಸಿದ್ದಾರೆ. ಭರತನಾಟ್ಯ ಕುರಿತಾಗಿ ಇವರು ನಿರ್ಮಿಸಿದ ’ಭರತಾಂಜಲಿ’ ಎಂಬ ಧಾರಾವಾಹಿ ಚೆನ್ನೈ ದೂರದರ್ಶನ ಕೇಂದ್ರದಲ್ಲಿಯೂ ಹಾಗೂ ಹಾಗೂ ರಾಷ್ಟ್ರೀಯ ಜಾಲದಲ್ಲಿಯೂ ಹಲವಾರು ಕಂತುಗಳಲ್ಲಿ ಪ್ರಸಾರವಾಗಿದೆ.

ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ, ಬ್ರಹ್ಮಗಾನ ಸಭಾದ ಉಪಾಧ್ಯಕ್ಷೆಯಾಗಿಯೂ, ಭಾರತೀಯ ಭರತನಾಟ್ಯ ಕಲಾವಿದರ ಸಂಘದ ಅಧ್ಯಕ್ಷೆಯಾಗಿಯೂ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಧಾರಾಣಿ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಪರೀಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

೧೯೮೧ರ ಡಿಸೆಂಬರ್ ೧೦ರಂದು ಮಾನವ ಹಕ್ಕು ದಿನಾಚರಣೆ ಅಂಗವಾಗಿ ಯು.ಎಸ್.ಎ. ಯಲ್ಲಿ ಇವರನ್ನು ಸನ್ಮಾನಿಸಲಾಯಿತು. ೧೯೮ ಜನವರಿ ೨೬ರಂದು ಪ್ರತಿಷ್ಠಿತ ’ಪದ್ಮಶ್ರೀ’ ರಾಷ್ಟ್ರೀಯ ಗೌರವದಿಂದ ಸನ್ಮಾನಿತರಾದ ಶ್ರೀಮತಿ ಸುಧಾರಾಣಿ ಅವರಿಗೆ ’ನೃತ್ಯ ಚೂಡಾಮಣಿ’, ’ಸಪ್ತಗಿರಿ ಸಂಗೀತ ವಿದ್ಯಾಮಣಿ’ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಸಂದಿವೆ.