ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಇಂದು ಬಹುಮುಖವಾಗಿ ಬೆಳೆದಿವೆ. ಕೃಷಿಯು ನಾಡಿನ ಗ್ರಾಮೀಣ ಜನತೆಯ ಮುಖ್ಯ ಜೀವನ ಮಾರ್ಗವಾಗಿರುವಂತೆಯೇ ಇತರ ಉದ್ಯಮ ಕ್ಷೇತ್ರಗಳೊಂದಿಗೆ ಕೃಷಿ ರಂಗವೂ ಕೂಡ ತನ್ನ ಪ್ರಗತಿ ಸಾಧನೆಯಲ್ಲಿ ಮುಂಚೂಣಿಯ ಸ್ಥಾನದಲ್ಲೊರುವುದು ದೇಶದ ಆಹಾ‌ರೋತ್ಪಾದನೆ ಸಾಮರ್ಥ್ಯವನ್ನು ಬೆಳೆಸುವ ದೃಷ್ಟಿಯಿಂದ ಅತಿ ಮುಖ್ಯವಾಗಿದೆ. ಹಾಗೆಯೇ ಅಧಿಕ ಲಾಭದಾಯಕತೆ ಕೃಷಿ ವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡುವುದು ಇಂದಿನ ತುರ್ತುಅಗತ್ಯವಾಗಿದೆ. ಈ ಎಲ್ಲ ಅಂಶಗಳನ್ನು ಕುರಿತಂತೆ ಕೃಷಿ ವಿದ್ಯಾರ್ಥಿಗಳು ಮತ್ತು ರೈತರಲ್ಲಿ ಪ್ರಜ್ಞಾಪೂರ್ವಕವಾದ ತಿಳಿವಳಿಕೆ ಮೂಡಿಸಲು ನೆರವಾಗುವಂತೆ ಕನ್ನಡ ಮಾತೃಭಾಷೆಯಲ್ಲಿ ಆಧುನಿಕ ಕೃಷಿ ವಿಜ್ಞಾನ ಸಾಹಿತ್ಯವನ್ನು ಪ್ರಕಟಿಸುವುದು ಕೃಷಿ ವಿಶ್ವವಿದ್ಯಾನಿಲಯದ ಒಂದು ವಿಶೇಷ ಹೊಣೆಯಾಗಿದೆ. ಭಾರತ ;ಸರ್ಕಾರದ ನೆರವಿನಿಂದ ೧೯೬೯ -೭೦ ರಲ್ಲಿ ಪ್ರಾರಂಭವಾದ ಕನ್ನಡ ಅಧ್ಯಯನ ವಿಭಾಗ ಈ ದಿಶೆಯಲ್ಲಿ ಕಾರ್ಯನಿರತವಾಗಿದೆ. ಶಿಕ್ಷಣ ಮಾಧ್ಯಮ ಪ್ರಾದೇಶಿಕ ಭಾಷೆಗಳಲ್ಲಿ ನಡೆಯಬೇಕೆಂಬ ೧೯೮೪ ರ ಸಂಸತ್ತಿನ ತೀರ್ಮಾನದಂತೆ, ಕೃಷಿ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಜಾರಿಗೆ ತರುವ ಪ್ರಥಮ ಹೆಜ್ಜೆಯಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಕನ್ನಡ ಪಠ್ಯಪುಸ್ತಕಗಳ ಪ್ರಕಟಣಾ ಕಾರ್ಯ ನಡೆದಿದೆ. ಪಠ್ಯವಿಷಯವಾಗಿ ಅಲ್ಲದೆ ಈ ಪುಸ್ತಕಗಳು ಕೃಷಿ ವಿಜ್ಞಾನ ಪ್ರಸರಣೆಯ ಮಾಧ್ಯಮವೂ ಆಗಿವೆ. ವಿದ್ಯಾರ್ಥಿಗಳಿಗೆ ರೈತರಿಗೆ, ಬೋಧಕರಿಗೆ ಹಾಗೂ ವಿಜ್ಞಾನಿಗಳಿಗೂ ಸಹ ಉಪಯುಕ್ತವಾಗುವಂತೆ ಈಗಾಗಲೇ ೨೭೪ ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ.

ಪಠ್ಯಪುಸ್ತಕ ಪ್ರಕಟಣಾಕಾರ್ಯದ ಜೊತೆಯಲ್ಲಿಯೇ ಕನ್ನಡದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ, ಲೇಖಕರಿಗೆ ಹಾಗೂ ಬೋದಕರಿಗೆ ಅನುವಾಗಲೆಂದು ಸಂಶೋಧನಾ ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನದ ವಿವಿಧ ವಿಷಯಗಳಲ್ಲಿ ಪಾರಿಭಾಷಿಕ ಶಬ್ದಕೋಶಗಳನ್ನು ಪ್ರಕಟಿಸಲಾಗಿದೆ. ಅಲ್ಲದೆ ಕೃಷಿ ವಿಜ್ಞಾನ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ವರ್ಷ ಪುಸ್ತಕ ರಚನಾ ಸ್ಪರ್ಧೆಯನ್ನು ಏರ್ಪಡಿಸಿ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ನೀಡುವ ಯೋಜನೆಯನ್ನು ನಡೆಸಲಾಗುತ್ತಿದೆ. ೨೦೦೩ ನೇ ವರ್ಷದಿಂದ ಕನ್ನಡ ಅಧ್ಯಯನ ವಿಭಾಗವು ಕೃಷಿ ಜ್ಞಾನ ಭಂಡಾರ ಮಾಲಿಕೆ ಎಂಬ ವಿನೂತನ ಜನಪ್ರಿಯ ಮಾಲಿಕೆಯನ್ನು ಪ್ರಾರಂಭಿಸಿದ್ದು ಇದರಲ್ಲಿ ಈಗಾಗಲೇ ಹಲವು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ರೈತರ ಜನಮನವನ್ನು ತಲುಪುವ ಉನ್ನತ ಉದ್ದೇಶದಿಂದ ಪ್ರಾರಂಭವಾದ ಈ ಮಾಲಿಕೆಯ ಪ್ರಕಟಣೆಗಳನ್ನು ರೈತರಿಗೆಂದೇ ವಿಶೇಷವಾಗಿ ವಿನ್ಯಾಸಿತಗೊಳಿಸಲಾಗಿದ್ದು, ಸರಳ ಸುಂದರ ರೂಪದಲ್ಲಿ ಹೊರತರಲಾಗಿದೆ.

ಇಂದು ಹೆಚ್ಚು ಶಿಕ್ಷಕರು, ವಿಜ್ಞಾನಿಗಳು ಹಾಗೂ ಲೇಖಕರು ತಮ್ಮ ತಜ್ಞತೆಯ ವಿಷಯದಲ್ಲಿ ಕನ್ನಡ ಕೃತಿಗಳನ್ನು ರಚಿಸಿ ಕೃಷಿ ವಿಜ್ಞಾನದ ಆಧುನಿಕ ಆವಿಷ್ಕಾರ, ತಂತ್ರಜ್ಞಾನ ಹಾಗೂ ಆಲೋಚನೆಗಳನ್ನು ಕನ್ನಡದ ನಾಡಿನ ಪ್ರತಿ ಮೂಲೆಗೂ ತಲುಪಿಸಲು ಸಹಕರಿಸಬೇಕಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ರೈತನ ಆಡುಭಾಷೆಯಾದ ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಕಟಣೆಗಳಿಗೆ ಮಹತ್ತರವಾದ ಸ್ಥಾನ ನೀಡಲಾಗಿದೆ.

ಪ್ರಸ್ತುತ ಪ್ರಕಟವಾಗುತ್ತಿರುವ ಸುಧಾರಿತ ಹೈನೋತ್ಪಾದನೆ ಪುಸ್ತಕವು ರೈತರಿಗೆ, ಕೃಷಿ ವಿಜ್ಞಾನಗಳಿಗೆ ಬರಹಗಾರರಿಗೆ ಹಾಗೂ ಇತರ ಆಸಕ್ತರಿಗೆ ಹೆಚ್ಚು ಉಪಯುಕ್ತವಾಗುವುದೆಂದು ಆಶಿಸಲಾಗಿದೆ.

ಡಾ. ಪಿ. ಜಿ. ಚೆಂಗಪ್ಪ
ಕುಲಪತಿಗಳು
ಕೃಷಿ ವಿಶ್ವವಿದ್ಯಾನಿಲಯ
ಗಾಂಧಿ ಕೃಷಿ ವಿಜ್ಞಾನ ಕೇಂದ್ರ
ಬೆಂಗಳೂರು -೫೬೦ ೦೬೫.