ಪ್ರತಿ ಸಾರಿ ಬೆಳೆ ವಿಫಲವಾದಾಗ, ರೈತನ ಆತ್ಮಹತ್ಯೆಯಾದಾಗ ಅಥವಾ ಒಟ್ಟಾರೆ ಕೃಷಿಯಲ್ಲಿ ದುಷ್ಪರಿಣಾಮಗಳಾದಾಗ ಆರೋಪ ಸುಧಾರಿತ ತಳಿಗಳ ಮೇಲೆ ಮತ್ತು ಅವನ್ನು ಸಂಶೋಧಿಸಿದ ಸಂಸ್ಥೆಯ ಮೇಲೆ ಬರುತ್ತದೆ.  ಅಪ್ಪಟ ದೇಸಿ ತಳಿಗಳೆಂದು ಹೆಸರಾದ ಚಿನ್ನಪೊನ್ನಿ, ಮೈಸೂರುಮಲ್ಲಿಗೆ ಇವುಗಳೂ ಸಹ ಸುಧಾರಿತ ತಳಿಗಳು.

ಹೊಲದಲ್ಲಿ ಬೆಳೆದ ಮೈಸೂರು ಮಲ್ಲಿಗೆ ಭತ್ತದಲ್ಲಿ ಅತ್ಯುತ್ತಮ, ಆರೋಗ್ಯವಂತ, ಹೆಚ್ಚು ಇಳುವರಿ, ಗಟ್ಟಿಮುಟ್ಟಾದ ಹುಲ್ಲಿಗೆ ಯೋಗ್ಯವಾದ, ಕಾಳಿಗೆ ಯೋಗ್ಯವಾದ ಹೀಗೆ ಏನೆಲ್ಲಾ ಗುರಿ ಇಟ್ಟುಕೊಂಡು ಗಿಡಗಳನ್ನು ಆಯ್ಕೆ ಮಾಡುತ್ತಾರೆ.  ಆಯ್ದ ಬೀಜಗಳನ್ನು ಮಾತ್ರ ಬಿತ್ತುತ್ತಾರೆ.  ಇದರಿಂದ ಕೇವಲ ಉತ್ತಮ ಗುಣಲಕ್ಷಣಗಳ ಗಿಡಗಳು ಹೆಚ್ಚುತ್ತವೆ.

ಹೀಗೆ ಪದೇ ಪದೇ ಮಾಡುತ್ತಾ ಹೋದಂತೆ ಒಂದೇ ಗುಣಲಕ್ಷಣ ಹಾಗೂ ನಿಶ್ಚಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.  ಇದನ್ನೇ ರೈತ ಶಂಕರ್‌ಗುರುರವರು ಮಾಡಿದ್ದು, ನಮ್ಮ ಪೂರ್ವಜರು ಮಾಡುತ್ತಿದ್ದುದು.  ಇದೇ ತಳಿಗುಣಗಳನ್ನು ಸ್ಥಿರಗೊಳಿಸಲು ಮಾಡುತ್ತಿದ್ದ ವೈಜ್ಞಾನಿಕ ಕ್ರಮ.

ಈ ರೀತಿಯ ಸುಧಾರಣಾಕ್ರಮ ಅಧಿಕೃತವಾಗಿ ದಾಖಲಾದದ್ದು ೨೦ನೇ ಶತಮಾನದಲ್ಲಿ.  ಪರಿಣಾಮ ಭತ್ತ, ರಾಗಿ, ಜೋಳ, ಕಬ್ಬು, ಶೇಂಗಾ ಮುಂತಾದ ಬೆಳೆಗಳ ಅನೇಕ ಸುಧಾರಿತ ತಳಿಗಳು ಮೂಡಿಬಂದವು.  ಸುಧಾರಿತ ತಳಿಗಳಿಂದ ಪ್ರಯೋಜನೆ ಇದೆ ಎಂದು ಗೊತ್ತಾದ ಮೇಲೆ ವಿದೇಶಗಳಿಂದಲೂ ಆಮದಾಗತೊಡಗಿತು.

ಮುಂದೆ ಇದು ರೈತರ ಮಟ್ಟದಿಂದ ವಿಜ್ಞಾನಿಗಳ ಮಟ್ಟಕ್ಕೇರಿತು.  ಸುಧಾರಿತ ತಳಿಗಳಿಗೆ ಎಕ್ಸ್‌ರೇ ಚಿಕಿತ್ಸೆ, ರಾಸಾಯನಿಕ ಚಿಕಿತ್ಸೆಗಳೆಲ್ಲಾ ಮುಗಿದು ಈಗ ಜೀನ್‌ಗಳನ್ನೆ ಬೆರೆಸುವ ಚಿಕಿತ್ಸೆಯವರೆಗೆ ಸುಧಾರಣೆಯಾಗಿದೆ.

ಕೃಷಿಯು ಹೆಚ್ಚು ಗಮನ ಸೆಳೆದದ್ದು ೨೦ನೇ ಶತಮಾನದ ಅರ್ಧಭಾಗ ಪೂರೈಸಿದ ನಂತರ.  ಸರ್ಕಾರದ ಪಂಚವಾರ್ಷಿಕ ಯೋಜನೆಗಳು, ಸಹಕಾರಿ ತತ್ವಗಳು, ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿಗೆ ಪ್ರಾಧಾನ್ಯತೆ ಕೊಟ್ಟವು.

ದೇಶ ಸ್ವಾತಂತ್ರ್ಯವಾದಾಗ ಅತಿಯಾದ ಆಹಾರದ ಅಭಾವ ಎಲ್ಲೆಲ್ಲೂ ಅನಾಹುತಗಳನ್ನೇ ಉಂಟುಮಾಡಿತು.  ಆಗ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನಡೆಯುತ್ತಿರುವ ಕೃಷಿಪದ್ಧತಿಗಳು, ವಿಧಾನಗಳನ್ನು ಅಳವಡಿಸಿಕೊಳ್ಳಲು ನಮ್ಮ ದೇಶ ತೀರ್ಮಾನಿಸಿತು.  ಆಗಲೇ ಜಪಾನ್ ಮಾದರಿಯ ಕೃಷಿ ಕ್ರಮ ನಮ್ಮಲ್ಲಿ ಬೆಳಕಿಗೆ ಬಂತು.

ಇಸವಿ ೧೯೫೦ರಿಂದ ಎಕರೆವಾರು ಇಳುವರಿಯ ಹೆಚ್ಚಳ ಹಾಗೂ ಕಡಿಮೆ ಖರ್ಚು ಇದು ಕೃಷಿ ಮಂತ್ರವಾಯಿತು.  ವಿಜ್ಞಾನಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಸತೊಡಗಿದರು.  ೧೯೬೫ರಲ್ಲಿ ೧೮ ಲಕ್ಷ ಟನ್ ಗೋಧಿ, ೫೦ ಲಕ್ಷ ಟನ್ ಭತ್ತ ಮೆಕ್ಸಿಕೋದಿಂದ ಆಮದಾಗಿ ಹೊಸ ಕ್ರಾಂತಿ ಪ್ರಾರಂಭವಾಯಿತು.

ತಳಿಶಾಸ್ತ್ರದ ನಿಯಮ ಹಾದಿ ತಪ್ಪಿ ವಿಜ್ಞಾನಿಗಳು ಹೇಳಿದಂತೆ ಬೆಳೆವ ಗಿಡಗಳೂ ಬಂದವು.  ಅಧಿಕ ಇಳುವರಿ, ಒಂದೇ ಎತ್ತರ, ಬಣ್ಣ, ಶಕ್ತಿ ಹೊಂದಿರುವ ತಳಿಗಳು ಜನಪ್ರಿಯವಾಯಿತು.  ಪೆಡುಸಾದ ದಪ್ಪ ಎಲೆ, ಗಿಡ್ಡ ಹಾಗೂ ಕಡಿಮೆ ಗಿಣ್ಣುಗಳಿರುವ ಈ ತಳಿಗಳು ಹೆಚ್ಚು ಇಳುವರಿ ನೀಡುವುದಾದರೂ ಹೇಗೆ?

ಕಾರಣ ಸೂರ್ಯನ ಶಕ್ತಿ ಎನ್ನುತ್ತಾರೆ ವಿಜ್ಞಾನಿ ಡಾ. ರಮೇಶ್ ಉಪಾಧ್ಯಾಯ.  ಒಂದು ಗಿಡದ ನೆರಳು ಮತ್ತೊಂದು ಗಿಡದ ಮೇಲೆ ಬೀಳುವುದರಿಂದ, ಮೇಲಿನ ಎಲೆಗಳ ನೆರಳೂ ಕೆಳಗಿನ ಎಲೆಗಳ ಮೇಲೆ ಬೀಳುವುದರಿಂದ ಒಟ್ಟಾರೆ ನೆರಳಿನಿಂದ ಸಸ್ಯಗಳ ಮುಖ್ಯ ಕೆಲಸ ದ್ಯುತಿ ಸಂಶ್ಲೇಷಣೆಗೆ ಅಡ್ಡಿಯಾಗುತ್ತದೆ.  ಸೂರ್ಯನ ಪೂರ್ಣ ಬೆಳಕು ಸಿಗದೆ ಉತ್ಪಾದನೆ ಕಡಿಮೆಯಾಗುತ್ತದೆ.  ಎತ್ತರದ ಗಿಡ, ಉದ್ದದ ಎಲೆಗಳಲ್ಲಿ ಈ ಕ್ರಿಯೆ ಸಾಮಾನ್ಯ.  ಸೂರ್ಯನ ಬೆಳಕಿನ ಅಭಾವ ಕೇವಲ ಇಳುವರಿ ಕಡಿಮೆ ಆಗುವುದೊಂದೇ ಅಲ್ಲದೆ ರೋಗರುಜಿನಗಳಿಗೂ ಕಾರಣವಾಗುತ್ತದೆ.

ಗಿಡ್ಡತಳಿಗಳಲ್ಲಿ ಗಿಡಕ್ಕೆ ಸೂರ್ಯನ ಬೆಳಕು ಹೆಚ್ಚು ಸಿಗುತ್ತದೆ.  ಕಡಿಮೆ ಗಿಣ್ಣುಗಳಿಂದ ಶರ್ಕರಪಿಷ್ಠಗಳ ಬಳಕೆ ಕಡಿಮೆಯಾಗುತ್ತದೆ.  ಪೈರು ನೆಲಕ್ಕೆ ಬೀಳುವುದಿಲ್ಲ.  ಹೆಚ್ಚು ತೆಂಡೆಯೊಡೆಯುತ್ತದೆ.  ಹೀಗೆ ಏನೆಲ್ಲಾ ಗುಣಗಳೊಂದಿಗೆ ರೈತರ ಮನೆ ಮನೆ ಸೇರಿದವು.  ಸುಧಾರಿತ ತಳಿಗಳಿಗಿಂತ ಅತಿ ಹೆಚ್ಚು ಸುಧಾರಿತ ತಳಿಗಲು ಬಿಡುಗಡೆಯಾದವು.

ಅತಿಹೆಚ್ಚು ಸುಧಾರಿತ ತಳಿಗಳು ಹಿಂದಿನ ದಾಖಲೆಗಳನ್ನೆಲ್ಲಾ ಮುರಿಯಿತು.  ಬೆಳೆ ಮೂರುಪಟ್ಟು ಹೆಚ್ಚಿತು.  ೧೯೬೬-೬೭ರಿಂದ ಕೃಷಿ ಪೂರಾ ಅತಿಹೆಚ್ಚು ಸುಧಾರಿತ ತಳಿಗಳನ್ನು ಅವಲಂಬಿಸಿತು.  ದೇಶೀ ತಳಿಗಳು ಕೇವಲ ಕಡಿಮೆ ಇಳುವರಿ ಕಾಡುತ್ತವೆ ಎನ್ನುವ ಕಾರಣದಿಂದ ಹಿಂದುಳಿದವು.

ಹಾಗಂತ ಈ ಸುಧಾರಿತ ತಳಿಗಳು ಎಲ್ಲಾ ಕಡೆಗೆ, ಎಲ್ಲಾ ಹವಾಮಾನಕ್ಕೆ ಮಾನ್ಯವಾಗಲಿಲ್ಲ.  ಅತಿ ನೀರು, ನೆರೆ, ಅತಿ ಬರ ಪ್ರದೇಶಗಳಲ್ಲಿ ಇಂದಿಗೂ ದೇಶಿ ತಳಿಗಳೇ ಉಳಿದಿವೆ.  ನದಿಗಳು ಸಮುದ್ರ ಸೇರುವ ಮುಖಜ ಭೂಮಿಗಳಲ್ಲಿ ನೆಲ ವರ್ಷಪೂರ್ತಿ ಒದ್ದೆಯಾಗಿರುತ್ತದೆ.  ಕಾಲಿಟ್ಟಲ್ಲಿ ನುಂಗಿಯೇ ಬಿಡುವ ಭೂಮಿ, ಮೇ ತಿಂಗಳಲ್ಲಿ ಮಾತ್ರ ಸ್ವಲ್ಪ ಗಟ್ಟಿಯಾಗುತ್ತದೆ.  ಇಂತಹ ಕಡೆ ವರ್ಷಕ್ಕೊಮ್ಮೆ ಇಳುವರಿ ಕೊಡುವ ತಳಿಗಳು ಮಾತ್ರ ಇರಲು ಸಾಧ್ಯ.  ಹೀಗೆ ವಿಶೇಷ ಪರಿಸರಗಳಿಗೆ ವಿಶಿಷ್ಟ ತಳಿಗಳು ಬೇಕೇ ಬೇಕು.  ಆದರೂ ಅತಿ ಹೆಚ್ಚು ಪ್ರದೇಶದಲ್ಲಿ ಈ ಸುಧಾರಿತ ತಳಿಗಳೇ ಜನಪ್ರಿಯವಾದವು.  ಸಾವಿರಾರು ತಳಿ ವೈವಿಧ್ಯಗಳು ಕಣ್ಮರೆಯಾದವು.

ಕಡಿಮೆ ವಿಸ್ತೀರ್ಣದಲ್ಲಿ ಅಧಿಕ ಇಳುವರಿ ಎನ್ನುವ ಸೂತ್ರ ಮಾತ್ರ ಯಶಸ್ವಿಯಾಯಿತು.  ಸ್ವಾತಂತ್ರ್ಯಪೂರ್ವದಲ್ಲಿ ವಾರ್ಷಿಕ ೪೦ ಲಕ್ಷ ಟನ್ ಆಹಾರಧಾನ್ಯಗಳನ್ನು ಬೆಳೆಯುತ್ತಿದ್ದರೆ ಕ್ರಮೇಣ ೭೦ರ ದಶಕದಲ್ಲಿ ೭೦ ಲಕ್ಷ ಟನ್‌ಗಳಿಗೆ ಏರಿತು.

ಇದೇ ಸಮಯದಲ್ಲಿ ಭಾರತದ ನವನಿರ್ಮಾಣ ಶಿಲ್ಪಿ ನೆಹರೂರವರ ಕನಸಾದ ನೀರಾವರಿ ಯೋಜನೆ, ಅಣೆಕಟ್ಟುಗಳ ನಿರ್ಮಾಣ ಸಾಕಾರಗೊಂಡಿತು.

ಹೊಸ ಸುಧಾರಿತ ತಳಿಗಳು ಕಡಿಮೆ ಅವಧಿಯಲ್ಲಿ ಫಸಲು ನೀಡತೊಡಗಿದವು.  ೭೦ರಿಂದ ೯೦ ದಿನಗಳೊಳಗಾಗಿ ಕೊಯ್ಲಿಗೆ ಬರುವ ತಳಿಗಳ ಆವಿಷ್ಕಾರ ಮತ್ತಷ್ಟು ಕ್ರಾಂತಿಗೆ ಕಾರಣವಾಯಿತು.  ಇದರಿಂದ ನೀರಾವರಿ ಪ್ರದೇಶಗಳಲ್ಲಿ ವರ್ಷಕ್ಕೆ ಮೂರು ಸಾರಿ ಭತ್ತವನ್ನೇ ಬೆಳೆಯತೊಡಗಿದರು.  ಸುಧಾರಿತ ತಳಿಗಳಿಂದ ಹೆಚ್ಚಾದ ಇಳುವರಿ ಯಥೇಚ್ಛ ನೀರಿನಿಂದಾಗಿ ಇನ್ನೂ ಹೆಚ್ಚಾಯಿತು.  ವರ್ಷಕ್ಕೆ ಮೂರು ಸಾರಿ ಬೆಳೆ ತೆಗೆಯುವುದರಿಂದ ವಾರ್ಷಿಕ ಇಳುವರಿ ಅತ್ಯಧಿಕವಾಯಿತು.

ಬರಗಾಲ ಬಂದಾಗಲೂ ಸುಧಾರಿತ ತಳಿಗಳಿಂದಾಗಿ ಅಧಿಕ ಇಳುವರಿ ಪಡೆದ ರೈತರು ಎರಡನೇ ಬೆಳೆ ಬೆಳೆಯದಿದ್ದರೂ ಸೋಲುಣ್ಣಲಿಲ್ಲ.  ಒಮ್ಮೊಮ್ಮೆ ಮಳೆ ಪ್ರಮಾಣ ಕಡಿಮೆಯಾದಾಗ, ಮಳೆ ಬರುವುದು ತಡವಾದಾಗಲೂ ಕಡಿಮೆ ಅವಧಿಯಲ್ಲಿ ಫಸಲು ನೀಡುವ ಸುಧಾರಿತ ತಳಿಗಳೇ ಸಂಕಟ ನಿವಾರಣೆ ಮಾಡಿದವು.

ಹೀಗೆ ದೇಶ ಬಯಸಿದ್ದ ಹಸಿರುಕ್ರಾಂತಿಯ ಅಂದರೆ ಅಧಿಕ ಇಳುವರಿ, ಆಹಾರದಲ್ಲಿ ಸ್ವಾವಲಂಬನೆಯ ಉದ್ದೇಶ ಸಾರ್ಥಕವಾಗಿ ಈಡೇರಿತ್ತು.  ಇಸವಿ ೧೯೭೦ರಲ್ಲಿ ಅಮೇರಿಕಾವು ಭಾರತದ ಜನಸಂಖ್ಯೆ ಏರುತ್ತಿರುವುದನ್ನು ಗಮನಿಸಿ ೨೦೦೦ನೇ ಇಸವಿಯ ಹೊತ್ತಿಗೆ ಹಸಿವಿನಿಂದ ಕೋಟಿ ಕೋಟಿ ಜನ ಸಾಯುತ್ತಾರೆ ಎಂದು ಹೇಳಿತು.  (ಪಾಪ್ಯುಲೇಶನ್ ಬಾಂಬ್)  ಆದರೆ ಭಾರತ ಅವಶ್ಯಕತೆಗಿಂತ ಆರುಪಟ್ಟು ಅಧಿಕ ಧಾನ್ಯ ಸಂಗ್ರಹ ಮಾಡಿ ತೋರಿಸಿತು.

ಈ ರೀತಿಯ ಸುಧಾರಣಾ ಕ್ರಮದಲ್ಲಿ ಎಲ್ಲವೂ ಸರಿಯಾಗಿಯೇ ನಡೆಯಿತೇ ಎಂಬ ಪ್ರಶ್ನೆ ಹಿಂದಿರುಗಿ ನೋಡುವಂತೆ ಮಾಡುತ್ತದೆ ಅಥವಾ ಇನ್ನೂ ಅಧಿಕ ಉತ್ಪಾದನೆ ನಮ್ಮಿಂದ ಸಾಧ್ಯವಿಲ್ಲ ಎಂದಾದಾಗ ಏರಿಬಂದ ದಾರಿಯನ್ನು ತಿರುಗಿ ನೊಡಲೇಬೇಕಾಯಿತು.  ಆಗ ಕಾಣಿಸಿದ ವಿಲಕ್ಷಣಗಳು ಸರಿಪಡಿಸಲಾಗದಷ್ಟು ಬೆಳೆದಿದ್ದವು.

ಕಡಿಮೆ ಇಳುವರಿ ನೀಡುವ ಆದರೆ ವೈದ್ಯಕೀಯ ಗುಣವಿದ್ದ ಸ್ಥಳೀಯ ಹವಾಮಾನ, ಮಣ್ಣು, ಬರ, ಅತಿವೃಷ್ಟಿಗೆ  ಪ್ರಯೋಜನಕಾರಿಯಾಗಿದ್ದ ಅತ್ಯಂತ ಪೌಷ್ಟಿಕವೆನಿಸಿದ್ದ ಹೀಗೆ ಏನೆಲ್ಲಾ ಅತ್ಯುತ್ತಮ ಗುಣಗಳಿದ್ದ ಸ್ಥಳೀಯ ತಳಿಗಳೆಲ್ಲಾ ನಾಪತ್ತೆಯಾಗಿದ್ದವು.

ಸುಧಾರಿತ ತಳಿಗಳ ಜೀನ್ ಬದಲಾವಣೆ ಅಥವಾ ರೋಗನಿರೋಧಕ ಶಕ್ತಿ ಜೋಡಿಸುವ ಹೊಸ ಕೆಲಸ ರೈತರಲ್ಲಿ ಆಕ್ರೋಶ ಉಂಟುಮಾಡಿತು.  ಒಂದು ರೋಗವನ್ನು ಓಡಿಸಲು ಹೋಗಿ ಇಡೀ ತಳಿಯೇ ಆಹಾರವಾಗದೇ ವಿಷವೆನಿಸಿದ್ದು ಹಾಗೂ ಪರಿಸರಕ್ಕೆ ಹಾನಿಕಾರಕ ಎಂಬ ವಿರುದ್ಧ ಪರಿಣಾಮಗಳನ್ನು ವಿಜ್ಞಾನಿಗಳು ಮುಚ್ಚಿಟ್ಟಿದ್ದರು.  ಸುಧಾರಿತ ತಳಿಗಳು ಅತ್ಯಧಿಕ ಇಳುವರಿ ನೀಡುವ ಸಲುವಾಗಿ ಬಳಸಿದ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ನೆಲಜಲಮಾಲಿನ್ಯ ಮಾಡಿದ್ದೊಂದೇ ಅಲ್ಲ, ಇಡಿ ಪರಿಸರವನ್ನೇ ವಿಷಮಯ ಮಾಡಿತ್ತು.

ಸುಧಾರಿತ ತಳಿಗಳಿಗೆ ಕೃಷಿಪದ್ಧತಿಯೂ ವಿಭಿನ್ನವಾಗಿತ್ತು.  ಅದನ್ನು ಸರಿಯಾಗಿ ನಿರ್ವಹಿಸಲಾಗದ ರೈತರು ವಿಫಲಗೊಂಡಾಗ ಆತ್ಮಹತ್ಯೆ ಹೆಚ್ಚಿತು.  ಕಿರುಧಾನ್ಯಗಳನ್ನು, ಅಪರೂಪದ ಧಾನ್ಯಗಳನ್ನು ಸುಧಾರಿತಗೊಳಿಸದ ಕಾರಣ ಕೆಲವೇ ಬೆಳೆಗಳು ಪ್ರಾಧಾನ್ಯ ಪಡೆದವು.  ಏಕಬೆಳೆ ಪದ್ಧತಿ ವಿಸ್ತಾರಗೊಂಡಿತು.  ಅಧಿಕ ನೀರು, ರಾಸಾಯನಿಕಗಳಿಂದ ನೆಲ ಬರಡಾಯಿತು. ಕಾಡುನಾಶ, ನದಿಗಳ ಸಾವು, ಜೀವವೈವಿಧ್ಯಗಳ ಅಳಿವು ಲೆಕ್ಕವಿಲ್ಲದಷ್ಟು ಹೆಚ್ಚಿತು.  ಒಣಭೂಮಿ ಬೇಸಾಯ, ತೋಟಗಾರಿಕೆ, ಬೆಳೆವೈವಿಧ್ಯ ಇವೆಲ್ಲಾ ಮೂಲೆಗುಂಪಾಯಿತು.

ಒಟ್ಟಾರೆ ಸಮಗ್ರ ಕೃಷಿ ಹಾಗೂ ಸಮಗ್ರ ಗ್ರಾಮೀಣಾಭಿವೃದ್ಧಿ ಆಗಲೇ ಇಲ್ಲ.  ಇದನ್ನು ನೇರವಾಗಿ ಸುಧಾರಿತ ತಳಿಗಳ ಮೇಲೆ ಹಾಕಲು ಸಾಧ್ಯವಿಲ್ಲ.  ಆದರೂ ಇದೂ ಒಂದು ಕಾರಣವೆಂಬುದನ್ನು ಅಲ್ಲಗಳೆಯಲಾಗದು.

ಇದನ್ನೆಲ್ಲಾ ತುಲನಾತ್ಮಕವಾಗಿ ನೋಡಿದಾಗ ಸುಧಾರಿತ ತಳಿಗಳಿಂದ ಆದ ಅನಾಹುತವೇ ಹೆಚ್ಚು ಎನ್ನಿಸುತ್ತದೆ.  ಆದರೆ ಆಹಾರ ಸ್ವಾವಲಂಬನೆಗೋಸ್ಕರ ನಾವು ಅನುಸರಿಸಿದ ಬೇಸಾಯ ಕ್ರಮಗಳಿಂದ ಈ ಎಲ್ಲಾ ಅನಾಹುತಗಳು ಹೆಚ್ಚಿದ್ದು ನಿಜವಾದ ಕಾರಣ.  ಜಯ, ಗೌರಿ, ಅಭಿಲಾಷ ಮುಂತಾದ ಸುಧಾರಿತ ತಳಿಗಳು ರಾಸಾಯನಿಕ ವಿಷ ಬಳಸದೆಯೇ ಉತ್ತಮ ಇಳುವರಿ ನೀಡಿದ್ದು ನಮ್ಮ ಎದುರಿನಲ್ಲಿದೆ.  ಹಾಗೇ ಸಾವಯವದಲ್ಲೂ ಸುಧಾರಿತ ತಳಿಗಳಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಅನೇಕ ರೈತರು ಈಗಾಗಲೇ ಮಾಡಿ ತೋರಿಸಿದ್ದಾರೆ.

ಹಾಗಿದ್ದಾಗ ಬೆಳೆ ವಿಫಲತೆಯನ್ನು ಸುಧಾರಿತ ತಳಿಗಳ ಮೇಲೆ ಏಕೆ ಹೊರಿಸುತ್ತಾರೆ?  ನಿಜವಾಗಿಯೂ ತಪ್ಪುವುದೆಲ್ಲಿ? ಎಂದು ಮರುಪರಿಶೀಲನೆಯನ್ನು ಇಲಾಖೆಗಳು, ಸಂಘಸಂಸ್ಥೆಗಳು, ರೈತ ಸಮುದಾಯಗಳು ಮಾಡಬೇಕಾಗಿದೆ.

ಕೃಷಿ ಸಾಕ್ಷರತೆ, ಜಲಸಾಕ್ಷರತೆ ಇವೆಲ್ಲಾ ಇಂದಿನ ಅಗತ್ಯಗಳು.  ಸುಧಾರಿತ ತಳಿಗಳನ್ನು ಆವಿಷ್ಕರಿಸುವಾಗ ವಿಜ್ಞಾನಿಗಳು ಆ ತಳಿಗಳ ಎಲ್ಲಾ ಗುಣಗಳನ್ನೂ ದಾಖಲಾತಿ ಮಾಡಿರುತ್ತಾರೆ.  ಆದರೂ ಅದರ ಕಾರ್ಯಕ್ಷಮತೆ ವಿಭಿನ್ನ ಪ್ರದೇಶಗಳಿಗೆ, ವಿಭಿನ್ನ ಹವಾಮಾನಕ್ಕೆ ವಿಭಿನ್ನ ವರ್ತನೆ ಇರುತ್ತದೆ.  ಇದನ್ನು ಸಹ ವಿಜ್ಞಾನಿಗಳು ದಾಖಲು ಮಾಡಿರುತ್ತಾರೆ.

ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಇಲಾಖೆಗಳು, ಸಮಗ್ರ ಕೃಷಿಪದ್ಧತಿ, ಸಮಗ್ರ ಪೀಡೆ ನಿರ್ವಹಣೆ ಹೇಳುವುದರೊಂದಿಗೆ ಕೃಷಿಗೆ ಬಳಸುವ ಸುಧಾರಿತ ತಳಿಗಳ ಗುಣಲಕ್ಷಣ, ಕೃಷಿಪದ್ಧತಿಗಳನ್ನೂ ವಿವರಿಸಬೇಕು.  ರೈತರೊಂದಿಗೆ ಪ್ರತಿ ಹಂತದಲ್ಲೂ ಕೈಜೋಡಿಸುವ ಕೆಲಸ ಮಾಡಬೇಕು.  ಕೇವಲ ಮಾರಾಟವೊಂದೇ ಗುರಿಯಾಗಬಾರದು.  ಸಹಭಾಗಿತ್ವದಿಂದ ರೈತರಿಗೆ ನಂಬಿಕೆ ಹಾಗೂ ಧೈರ್ಯ ಬರುತ್ತದೆ.

ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬೀಜ ಮಾರಾಟ ಕೇಂದ್ರವಿದೆ.  ರೈತರು ಪೈಪೋಟಿಯ ಮೇಲೆ ಬೀಜ ಖರೀದಿಸುತ್ತಾರೆ.  ಆದರೆ ಇಲ್ಲಿ ಬೇರಾವ ಮಾಹಿತಿಗಳೂ ಸಿಗುವುದಿಲ್ಲ.  ಜವಾಬ್ದಾರಿಯುತ ವ್ಯಕ್ತಿಗಳೇ ಇರುವುದಿಲ್ಲ.  ಇನ್ನು ಮಾಹಿತಿ ಕೇಂದ್ರವಂತೂ ಅವ್ಯವಸ್ಥೆಗಳ ಆಗರ.  ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರ ಮನೆಯಲ್ಲೇ ಕುಳಿತು ಮಾಹಿತಿ ಪಡೆಯಲು ೧೫೫೧ ಎನ್ನುವ ಫೋನ್ ಸಂಖ್ಯೆ ನೀಡಿದೆ.  ಇದರ ಪ್ರಚಾರ ಅತಿ ಎನ್ನಿಸುವಷ್ಟಿದೆ.  ಆದರೆ ೧೫೫೧ರಲ್ಲಿ ರಾಜ್ಯ ಸರ್ಕಾರದ ಸಾವಯವ ಕೃಷಿ ನೀತಿಯ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದರೆ ಗೊತ್ತಿಲ್ಲ.  ರಾಜ್ಯದಲ್ಲಿ ಸುಧಾರಿತ ಬತ್ತದ ತಳಿಗಳು ಎಷ್ಟಿವೆ ಎಂದು ಕೇಳಿದರೆ ಗೊತ್ತಿಲ್ಲ.  ಗೊತ್ತಿರುವುದಾದರೂ ಏನು ಎಂತೀರಾ?  ಮಾನೋ ಕ್ರೋಟೋಫಾಸ್ ಸಿಂಪಡಣೆ, ಎನ್‌ಪಿಕೆ ಬಳಸುವ ರೀತಿ ಇವೇ ಹಳೆಯ ವಿಧಾನಗಳು.

ಕೃಷಿಗೆ ತಳಿ ಸುಧಾರಣೆಯಾದರೆ ಮಾತ್ರ ಸಾಕೇ?  ಪದ್ಧತಿಗಳು ಸುಧಾರಣೆ ಆಗಬೇಡವೇ?  ಬೀಜದಿಂದ ಫಸಲು ಮಾರಾಟದವರೆಗೆ ರೈತರಿಗೆ ತಿಳುವಳಿಕೆ ಇರಬೇಕಾದ ಅಗತ್ಯ ತುರ್ತಾಗಿದೆ.  ಅದಕ್ಕಾಗಿ ಪ್ರಯತ್ನ ನಡೆಯಬೇಕಾಗಿದೆ.  ಬೀಜದ ವಿಷಯದಲ್ಲಿ ಸ್ವಾವಲಂಬನೆ ಒಳ್ಳೆಯದು.  ನಮ್ಮ ಮಣ್ಣಿಗೆ, ನಮ್ಮ ಪರಿಸರಕ್ಕೆ, ಹವಾಮಾನಕ್ಕೆ ಯಾವ ತಳಿಗಳು ಸೂಕ್ತ ಎನ್ನುವ ವಿಚಾರ ನಮಗೆ ಗೊತ್ತಿರಬೇಕು.

ಉದಾಹರಣೆಗೆ ಸೊರಬ ತಾಲ್ಲೂಕಿನ ಕಾನ್‌ಬೈಲು ಪುಟ್ಟ ಹಳ್ಳಿ.  ಇಲ್ಲಿಯ ಸ್ಥಳೀಯ ಭತ್ತದ ತಳಿ ಗೊಲ್ಟಿಗ.  ದಪ್ಪ ಭತ್ತವಾದರೂ ಒಳ್ಳೆಯ ಇಳುವರಿ ಹಾಗೂ ರೋಗನಿರೋಧಕ ಶಕ್ತಿ ಹೊಂದಿದೆ.  ಇಲ್ಲಿನ ರೈತರು ಗ್ರೀನ್ ಪ್ರತಿಷ್ಠಾನದ ಸಹಾಯದೊಂದಿಗೆ ಊರಿನಲ್ಲಿ ಬೀಜ ಬ್ಯಾಂಕ್ ಸ್ಥಾಪಿಸಿದ್ದಾರೆ.  ಜೊತೆಗೆ ಸಾಂಪ್ರದಾಯಿಕವಾಗಿ ಗೊಲ್ಟಿಗದ ತಳಿ ಸುಧಾರಣೆಯಲ್ಲಿ ನಿರತರು.  ಅಷ್ಟೇ ಅಲ್ಲ, ತಮ್ಮಲ್ಲಿರುವ ಭತ್ತವನ್ನು ಮತ್ತೆಲ್ಲೋ ಇರುವ ಬೀಜ ಬ್ಯಾಂಕ್‌ಗಳೊಂದಿಗೆ ವಿನಿಮಯ ಮಾಡಿಕೊಂಡು ಪ್ರಾಯೋಗಿಕವಾಗಿ ಅನೇಕ ರೀತಿಯ ತಳಿಗಳನ್ನು ಬೆಳೆದರು.  ಅದರಲ್ಲಿ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಅಧಿಕ ಇಳುವರಿ ನೀಡುವ ತಳಿಗಳನ್ನು ಗುರುತಿಸಿದರು.  ಆ ತಳಿಗಳ ಬೀಜಗಳನ್ನು ಹೆಚ್ಚು ಮಾಡಿದರು.  ಊರಿನೊಳಗೆ ಹತ್ತಾರು ತಳಿಗಳಿದ್ದಾಗ ಬೆರಕೆ ಸಾಮಾನ್ಯ.  ಆದರೆ ಮೂಲತಳಿಯ ಗುಣಲಕ್ಷಣಗಳು ತಿಳಿದರೆ ಅದನ್ನು ಅಭಿವೃದ್ಧಿಪಡಿಸುವುದು ಕಷ್ಟವಲ್ಲ.  ಇಂದು ಕೊಯಮತ್ತೂರು ಸಣ್ಣ, ರತ್ನಚೂಡಿ ಮುಂತಾದ ಸುಧಾರಿತ ತಳಿಗಳ ಉತ್ತಮ ಬೀಜಗಳು ಕಾನ್‌ಬೈಲಿನ ಬೀಜಬ್ಯಾಂಕ್‌ನಲ್ಲಿ ಲಭ್ಯವಿದೆ.  ಇಲ್ಲಿನ ರೈತರಿಗೆ ಈ ಬೀಜಗಳನ್ನು ಯಾರಿಗೋ ಮಾರಾಟ ಮಾಡಿ ಲಾಭ ಗಳಿಸುವ ಬುದ್ಧಿ ಇಲ್ಲ.  ಪದೇ ಪದೇ ಕೃಷಿ ಇಲಾಖೆಗೋ, ಬೀಜ ಕಂಪೆನಿಗಳಿಗೋ ಹೋಗಿ ಬೀಜ ತರುವ ಕಷ್ಟವಿಲ್ಲ.  ಪ್ರತಿಸಾರಿ ತಳಿ ಬದಲಿಸಬೇಕಾದ ಕಾರಣ ಬೀಜಗಳನ್ನು ತಮ್ಮಲ್ಲೇ ವಿನಿಮಯ ಮಾಡಿಕೊಳ್ಳುತ್ತಾರೆ.  ಹಾಗೇ ಊರಿನ ವಿಶೇಷ ತಳಿ ಗೊಲ್ಟಿಗವನ್ನು ಸುಧಾರಿಸಿ ಅತ್ಯಧಿಕ ಇಳುವರಿಯನ್ನು ಗಳಿಸುತ್ತಿದ್ದಾರೆ ಹಾಗೂ ಉಳಿಸುವುದಕ್ಕೋಸ್ಕರವೇ ಬೆಳೆದೇ ಬೆಳೆಯುತ್ತಾರೆ.  ಇವರಿಗೆ ಮಾರಾಟದ ಸಮಸ್ಯೆಯೂ ಇಲ್ಲ.  ಕಾರಣ ಇವರ ಕೃಷಿ ಸಾವಯವ.  ಬೆಳೆಯುವುದು ಸ್ವತಃ ಉಣ್ಣ್ಣಲು, ಉಳಿದದ್ದು ಮಾರಾಟಕ್ಕೆ ವಿನಿಯೋಗ.  ಕೃಷಿಗಾಗಿ ಸಾಲ ಮಾಡುವುದಿಲ್ಲ.  ಅದಕ್ಕಾಗಿ ಉಳಿದ ಧಾನ್ಯವನ್ನು ಧಾರಣೆ ಏರಿದಾಗ ಕೊಡುತ್ತಾರೆ.  ಐಷಾರಾಮಿ ಬದುಕಲ್ಲವಾದ ಕಾರಣ ಖರ್ಚು ಕಡಿಮೆ.  ಬೆಳೆದಿದ್ದರಲ್ಲಿ ತೃಪ್ತಿ ಇದೆ.

ಯುವ ರೈತರೆಲ್ಲಾ ಸೇರಿ ಸಂಘಟನೆ ಮಾಡಿಕೊಂಡಿದ್ದಾರೆ.  ಸಂಘಟನೆಯಲ್ಲಿ ಬೀಜಮಸೂದೆ, ಜಾಗತೀಕರಣ, ಸಾವಯವ, ರಾಸಾಯನಿಕ, ಶೂನ್ಯಕೃಷಿ, ಮಾರಾಟತಂತ್ರ, ಮೌಲ್ಯವರ್ಧನೆ ಹೀಗೆ ಏನೆಲ್ಲಾ ವಿಚಾರಗಳ ವಿನಿಮಯವಾಗುತ್ತದೆ.  ಸಾಗರದ ಕೃಷಿ ಪ್ರಯೋಗ ಪರಿವಾರ ಇವರಿಗೆ ಬೆನ್ನೆಲುಬಾಗಿ ನಿಂತಿದೆ.  ಕೃಷಿ ತಿಳುವಳಿಕೆಗಳನ್ನು ಕಾಲ ಕಾಲಕ್ಕೆ ಹಂಚುತ್ತಿದೆ.

ಮದುವೆ ಸಮಾರಂಭಗಳಿರಲಿ, ನಾಟಿ ಕೊಯ್ಲಾಗಿರಲಿ, ಮನೆ ಕಟ್ಟುವುದಿರಲಿ, ಗೊಬ್ಬರ ಹೊರುವುದಾಗಿರಲಿ ಒಟ್ಟಾಗಿ ಕೆಲಸ ಮಾಡುತ್ತಾರೆ.  ಇದಕ್ಕೆ ಇವರು ಮೈಯ್ಯಾಳು ಎನ್ನುತ್ತಾರೆ.  ಇದರಿಂದ ಕೂಲಿ ಹಣ ಉಳಿತಾಯವಾಗುತ್ತದೆ.

ಸರಿಯಾದ ರಸ್ತೆ ಇಲ್ಲದ, ವಿದ್ಯುತ್ ಇಲ್ಲದ, ಯಾವುದೇ ಪ್ರಾಥಮಿಕ ಸೌಲಭ್ಯಗಳೇ ಇಲ್ಲದ ಕಾನ್‌ಬೈಲಿನ ರೈತರು ಸ್ವಾವಲಂಬಿಗಳು.  ಜಾಗತಿಕಮಟ್ಟದ ಕೃಷಿ ವಿದ್ಯಮಾನಗಳನ್ನು ತಡವಾಗಿಯಾದರೂ ತಿಳಿದುಕೊಳ್ಳುವವರು.  ಆತ್ಮಹತ್ಯೆಯೆಡೆಗೆ ಸಾಗದ ಬದುಕನ್ನು ರೂಪಿಸಿಕೊಂಡವರು.  ಸರ್ಕಾರದ ಅಥವಾ ಯಾವುದೇ ಇಲಾಖೆಗಳ ಸಹಾಯಕ್ಕಾಗಿ ಕೈಚಾಚದವರು.

ಹಸಿರುಕ್ರಾಂತಿಯಾಗಲಿ, ಸುಧಾರಿತ ತಳಿಗಳಾಗಲಿ, ಸರ್ಕಾರದ ಕೃಷಿನೀತಿಗಳಾಗಲಿ, ಜಾಗತೀಕರಣದ ಕೃಷಿ ಪ್ರಕ್ರಿಯೆಗಳಾಗಲಿ ಇವರ ಬದುಕನ್ನು ಹಾನಿ ಮಾಡಲು ಸಾಧ್ಯವಿಲ್ಲ.  ಇವರೊಂದಿಗೆ ಸಹಬಾಳ್ವೆ ಮಾಡುತ್ತದೆ.