ರಾಷ್ಟ್ರೀಯ ಖ್ಯಾತಿ ಗಳಿಸಿ ಶಾಸ್ತ್ರೀಯ ನೃತ್ಯದ ವಿವಿಧ ಪ್ರಕಾರಗಳಲ್ಲಿ ಸಿದ್ಧಹಸ್ತರೆನಿಸಿರುವ ಕಲಾವಿದೆ ಶ್ರೀಮತಿ ಸುನಂದಾದೇವಿ. ಸುಸಂಸ್ಕೃತ ಮನೆತನದಲ್ಲಿ ಬೆಳೆದು ಬಂದವರು.

ಬಾಲ ಕಲಾವಿದೆ ಆಗಿದ್ದಾಗಲೇ ಭರತನಾಟ್ಯದಲ್ಲಿ ಮದರಾಸಿನ ರಾಮನ್ ಮತ್ತು ನಾರಾಯಣ ಪಿಳ್ಳೈರವರಲ್ಲಿ ಶಾಸ್ತ್ರೀಯ ನೃತ್ಯ ಕಲಿತು ಭರತನಾಟ್ಯದಲ್ಲಿ ಪಾಂಡಿತ್ಯ ಗಳಿಸಿ ಅನಂತರ ಹೈದರಾಬಾದಿನಲ್ಲಿ ಭರತ ಕಲಾ ಪ್ರಪೂರ್ಣ ಪದ್ಮಶ್ರೀ ನಟರಾಜ ರಾಜಕೃಷ್ಣರವರಲ್ಲಿ ಕೂಚುಪುಡಿ, ಆಲಯ ನೃತ್ಯಮುಲು, ಆಂಧ್ರ ನಾಟ್ಯಮು, ಇವುಗಳನ್ನು ಸತತವಾಗಿ ೮ ವರ್ಷಗಳ ಕಾಲ ಕಲಿತರು.

ಇವರ ರಂಗ ಪ್ರವೇಶವಾದದ್ದು ೨೪-೨-೧೯೬೪ರಲ್ಲಿ ಬೆಂಗಳೂರಿನ ಪುರಭವನದಲ್ಲಿ ಕೂಚುಪುಡಿ ರಂಗ ಪ್ರವೇಶವನ್ನು ಮಾಡಿ ಪ್ರೇಕ್ಷಕರಿಂದ ಅಪಾರ ಮನ್ನಣೆ ಗಳಿಸಿದರು. ನಂತರದ ಕಳೆದ ನೃತ್ಯ ಪ್ರದರ್ಶನದಲ್ಲಿ ರಾಷ್ಟ್ರಪತಿ ರಾಧಾಕೃಷ್ಣನ್, ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು, ಈಕೆಯ ನೃತ್ಯ ವೀಕ್ಷಿಸಿ ರಜತ ಫಲಕವನ್ನಿತ್ತು ಗೌರವಿಸಿದರು. ಉಜ್ಜಯಿನಿಯಲ್ಲಿ ನಡೆದ ಕಾಳಿದಾಸ ನೃತ್ಯೋತ್ಸವ ಸ್ಪರ್ಧೆಯಲ್ಲಿ ಇವರ ’ಕುಮಾರ ಸಂಭವ’ ನೃತ್ಯ ರೂಪಕಕ್ಕೆ ಪ್ರಥಮ ಬಹಮಾನ, ಬಂಗಾರದ ಕಲಶ ಪಡೆದ ಕೀರ್ತಿ ಇವರ ತಂಡಕ್ಕೆ ಲಭಿಸಿತು. ಆಂಧ್ರ ಪ್ರದೇಶದ ಎಲ್ಲೆಡೆಯೂ ಶ್ರೀ ವೆಂಕಟೇಶ್ವರ ಕಲಾಣ್ಯ ಎಂಬ ನೃತ್ಯರೂಪಕ ಪ್ರದರ್ಶಿಸಿ ಅಪಾರ ಕೀರ್ತಿ ಗಳಿಸಿದರು. ನಂತರ ಬೆಂಗಳೂರಿಗೆ ಬಂದು ನೆಲೆಸಿ, ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಸಂಪ್ರದಾಯಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತಮ್ಮ ’ಛಾಯಾ ನೃತ್ಯ ನಿಕೇತನ’ದ ಮೂಲಕ ಮಾರ್ಗದರ್ಶನ ಮಾಡಿದ್ದಾರೆ.

ಇವರು ಹಲವಾರು ವಿದ್ಯಾರ್ಥಿಗಳಿಗೆ ಭರತನಾಟ್ಯ, ಕುಚಿಪುಡಿಯಲ್ಲಿ ಶಿಕ್ಷಣವನ್ನು ನೀಡಿದ್ದಾರೆ. ಇವರ ಶಿಷ್ಯಂದಿರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಮೊದಲ ಸ್ಥಾನವನ್ನುಗಳಿಸಿದ್ದಾರೆ ಅಲ್ಲದಂ ಅಮೆರಿಕಾ, ಸಂಡನ್, ಕೆನಡಾ, ಫ್ರಾನ್ಸ್, ದುಬಾಯಿ, ರಷ್ಯಾಗಳಲ್ಲಿ ಇವರ ವಿದ್ಯಾರ್ಥಿಗಳ ಪ್ರದರ್ಶನಗಳು ನಡೆದು ಹೆಸರುಗಳಿಸಿದ್ದಾರೆ ನೃತ್ಯ ಪ್ರಕಾರವನ್ನು ಸಾಧಿಸಿಕೊಂಡು ಸ್ಫೂರ್ತಿ ಬೆಳೆಸಿಕೊಂಡು ವೃತ್ತಿಯನ್ನಾಗಿ ಸ್ವೀಕರಿಸಿ ಜೀವನ ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.