ವಿದೇಶದಲ್ಲಿ ನೆಲೆಸಿ ಅನಿವಾಸಿ ಭಾರತೀಯರಾಗಿ ಭಾರತೀಯ ಸಾಂಸ್ಕೃತಿಕ ಹಾಗೂ ಕಲಾ ಪರಂಪರೆಯನ್ನು ಆ ರಾಷ್ಟ್ರಗಳಲ್ಲಿ ಬಿತ್ತಿ, ಬೆಳೆಸಿ ಬಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಎತ್ತಿ ಹಿಡಿದವರಲ್ಲಿ ಈಗ ಅಮೇರಿಕಾದಲ್ಲಿ ನೆಲೆಸಿರುವ ಸುಪ್ರಿಯಾ ದೇಸಾಯಿ ಒಬ್ಬರು.

ಮೂಲತಃ ಬೆಂಗಳೂರಿನವರೇ ಆಗಿದ್ದು ಗುರು ಸುನಂದಾ ದೇವಿಯವರಲ್ಲಿ ಭರತನಾಟ್ಯ ಹಾಗೂ ಕುಚಿಪುಡಿ ನೃತ್ಯ ಪ್ರಕಾರಗಳಲ್ಲಿ ಶಿಕ್ಷಣ ಪಡೆದು ಮುಂದೆ ಗುರು ನರ್ಮದಾ ಅವರಲ್ಲಿ ಭರತನಾಟ್ಯದಲ್ಲಿ ಉನ್ನತ ಶಿಕ್ಷಣವನ್ನೂ ಹಾಗೂ ಕಲಾನಿಧಿ ನಾರಾಯಣ್ ಅವರಲ್ಲಿ ವಿಶೇಷವಾಗಿ ಅಭಿನಯದಲ್ಲಿ ತರಬೇತಿ ಹೊಂದಿ ೧೯೭೮ರಲ್ಲಿ “ರಂಗ ಪ್ರವೇಶ” ಮಾಡಿದರು. ಸುಮಾರು ಇಪ್ಪತ್ತೈದು ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು ಅದರಲ್ಲಿ ಹದಿನಾಲ್ಕು ವರ್ಷ ಅಮೆರಿಕಾದಲ್ಲಿ ನೆಲೆಸಿ ಅಲ್ಲಿನ ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದ್ದು ಈಗಾಗಲೇ ಆರು ಜನ ವಿದ್ಯಾರ್ಥಿಗಳು “ರಂಗ ಪ್ರವೇಶ”ವನ್ನು ಮಾಡಿದ್ದಾರೆ.

ಉತ್ತಮ ಸಂಯೋಜಕಿ, ನೃತ್ಯ ಪಟು ಹಾಗೂ ಒಳ್ಳೆಯ ಗುರು ಎನಿಸಿಕೊಂಡಿರುವ ಸುಪ್ರಿಯಾ ಭರತನಾಟ್ಯ, ಕೂಚಿಪುಡಿ ಎರಡೂ ಪ್ರಕಾರಗಳಲ್ಲೂ ಉತ್ತಮ ಅನುಭವ ಗಳಿಸಿ ಅನೇಕ ಪ್ರಸಂಗಗಳನ್ನು ನಾಟ್ಯಕ್ಕೆ ಅಳವಡಿಸಿದ್ದಾರೆ. ವಿದೇಶಿ ನೆಲದಲ್ಲಿ ಈಕೆ ಪ್ರದರ್ಶಿಸಿದ “ಶ್ರೀ ರಾಮ ಚರಿತ ಮಾನಸ” “ಕೃಷ್ಣ ವೈಜಯಂತಿ” “ಜೈ ಶಿವಶಂಕರ್” “ನೃತ್ಯ ವಿಜಯ” ಅಪಾರ ಯಶಸ್ಸುಗಳಿಸಿ ಅತ್ಯಂತ ಜನಪ್ರಿಯವಾಗಿವೆ. ಇತ್ತೀಚೆಗೆ ಡೆಟ್ರಾಯಟ್ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದಲ್ಲಿ ಇವರು ಅಭಿನಯಿಸಿ ಪ್ರದರ್ಶಿಸಿದ “ಮಹಿಷಾಸುರ ಮರ್ದಿನಿ” ಒಂದು ಉತ್ತಮ ಕಾರ್ಯಕ್ರಮವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಪ್ರಸಿದ್ಧ ನೃತ್ಯ ತಜ್ಞ ಸುನಿಲ್ ಕೊಠಾರಿ ಹಾಗೂ ನೃತ್ಯ ದಂಪತಿಗಳಾದ ಧನಂಜಯನ್ ಅವರುಗಳು ಇವರ ಪ್ರತಿಭೆ ಪಾಂಡಿತ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತದ ಅನೇಕ ದೈನಿಕ ಹಾಗೂ ನಿಯತಕಾಲಿಕಗಳು ಇವರ ಪ್ರತಿಭೆಯ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆದಿದ್ದಾರೆ.

“ನಾಟ್ಯ ಶಕುಂತಲೆ” ಎಂಬ ಬಿರುದಿಗೆ ಪಾತ್ರರಾಗಿರುವ ಸುಪ್ರಿಯಾ ಭಾರತ ಹಾಗೂ ವಿದೇಶಿ ನೆಲೆಗಳಲ್ಲಿ ಅನೇಕ ಕಡೆ ಸನ್ಮಾನಿಸಿ ಗೌರವಿಸಲ್ಪಟ್ಟಿದ್ದಾರೆ. ಉತ್ತರ ಕೆರೋಲೀನಾದಲ್ಲಿ ತಮ್ಮದೇ ಆದ “ಪಾಯಲ್ ಸ್ಕೂಲ್ ಆಫ್ ಅಕಾಡೆಮಿ” ಎಂಬ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಹೀಗೆ ಭಾರತೀಯರಾಗಿ ಹೊರ ರಾಷ್ಟ್ರವೊಂದರಲ್ಲಿ ನಮ್ಮ ಕಲಾ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿರುವ ಸುಪ್ರಿಯಾ ದೇಸಾಯಿಯವರ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹೊರನಾಡು ರಾಷ್ಟ್ರದ ಕಲಾವಿದರಿಗಾಗಿ ನೀಡುವ ೨೦೦೨-೦೩ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.