ಸುಬೋಧ ಯಂ. ರಾಮರಾವ್ಬಡತನ, ಕಷ್ಟಗಳು ಇವಕ್ಕೆ ಹೆದರದೆ ಬಾಳನ್ನು ರೂಪಿಸಿಕೊಂಡ ಹಿರಿಯರು. ಮಕ್ಕಳಿಗೆ ಓದಲು ಪುಸ್ತಕಗಳೇ ಇಲ್ಲದ ಕಾಲದಲ್ಲಿ ಅವರಿಗಾಗಿ ಮಾರ್ಗ ದರ್ಶನ ಮಾಡುವ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಸರಳವಾದ, ಶುಚಿಯಾದ ಜೀವನ. ಇತರರಿಗಾಗಿ ಬದುಕಿದವರು.

 ಸುಬೋಧ ಯಂ.ರಾಮರಾವ್

 

ಇಂದಿಗೆ ಸುಮಾರು ಅರವತ್ತು ವರ್ಷಗಳ ಹಿಂದೆ ಒಬ್ಬ ಮಹನೀಯರು ಒಂದು ಯೋಜನೆಯನ್ನು ರೂಪಿಸಿ ಕೊಂಡರು. ಅದರಂತೆ ಪ್ರತಿ ತಿಂಗಳೂ ಒಂದೊಂದು ಪುಟ್ಟ ಪುಸ್ತಕವನ್ನು ಪ್ರಕಟಿಸಿ ಓದುಗರಿಗೆ ನೀಡಿದರು. ಒಳ್ಳೆಯ ರಾಜಮಹಾರಾಜರು, ಸಂತರು, ಪುರಾಣಪುರುಷರು ಇಂತಹವರ ಜೀವನವನ್ನು ಅವುಗಳಲ್ಲಿ ವಿವರಿಸಿದರು. ಸುಲಲಿತವಾಗಿ ಓದಿಸಿಕೊಂಡು ಹೋಗುವ ಪುಸ್ತಕಗಳು. ಒಮ್ಮೆ ಇಂತಹ ಪುಸ್ತಕವನ್ನು ಓದಿದವರು, ಮುಂದಿನ ಪುಸ್ತಕ ಯಾವಾಗ ಬರುತ್ತದೆಯೊ ಎಂದು ಕಾತರರಾಗಿ ರುತ್ತಿದ್ದರು. ಪುಸ್ತಕ ತೆರೆದರೆ ಓದಿ ಮುಗಿಸುವವರೆಗೂ ಅದನ್ನು ಕೆಳಗಿಡಲು ಮನಸ್ಸು ಬರುತ್ತಲೆ ಇರಲಿಲ್ಲ ಓದುಗರಿಗೆ. ಇಂತಹ ಸೇವಾ ಕಾರ್ಯವನ್ನು ಸತತವಾಗಿ ಇವರು ಹನ್ನೆರಡು ವರ್ಷಗಳ ಕಾಲ ಮಾಡಿದರು. ಕನ್ನಡದ ಪುಟಾಣಿಗಳಿಗೆ ಇಂತಹ ೧೪೦ ಅಮೂಲ್ಯವಾದ, ಅಪರೂಪವಾದ ಜೀವನ ಚರಿತ್ರೆಗಳನ್ನು ನೀಡಿದರು. ಮಕ್ಕಳಿಗಾಗಿ ಇಂತಹುದೊಂದು ಅದ್ಭುತ ಕಾರ್ಯವು ಭಾರತದ ಯಾವ ಭಾಷೆಯಲ್ಲೂ ಆಗಿರಲಿಲ್ಲ. ಇದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ. ಈ ಕೆಲಸವನ್ನು ವ್ರತದಂತೆ ಮಾಡಿದವರು ಸುಬೋಧ ರಾಮರಾಯರು.

ಅವರ ಜೀವನ ನಿರಂತರ ಕಷ್ಟಗಳಿಂದ ಕೂಡಿತ್ತು. ಆದರೂ ಪುಟಾಣಿಗಳಿಗಾಗಿ, ಹಿರಿಯರಿಗಾಗಿ, ವಿದ್ವಾಂಸರಿಗಾಗಿ, ಸಾಮಾನ್ಯ ಜನರಿಗಾಗಿ ಅವರು ನಿರ್ಮಿಸಿದ ಸಾಹಿತ್ಯವು ತುಂಬಾ ಬೆಲೆ ಬಾಳುವಂತಹುದು.

ಕಷ್ಟದ ಬಾಲ್ಯ

ರಾಮರಾಯರು ೧೮೯೦ ರಲ್ಲಿ ಚಿಕ್ಕಮಗಳೂರಿ ನಲ್ಲಿ ಗಣಪತಿ ಹಬ್ಬದ ದಿನ ಜನಿಸಿದರು. ಇವರ ತಂದೆ ಹನುಮಂತರಾವ್ ಮತ್ತು ತಾಯಿ ಭಾರತೀದೇವಿ. ತಂದೆತಾಯಿಗಳ ಆರು ಮಕ್ಕಳಲ್ಲಿ ಇವರು ಐದನೆಯವರು.

ಅದೊಂದು ಬಡತನದಲ್ಲಿ ಬೇಯುತ್ತಿದ್ದ ಕುಟುಂಬ. ಹೆಚ್ಚು ಮಕ್ಕಳು. ಆದಾಯ ಕಡಿಮೆ. ತಾಯಿ ಸಂಸಾರವನ್ನು ಹೇಗೋ ತೂಗಿಸಿಕೊಂಡು ಹೋಗುತ್ತಿದ್ದರು. ಸಹನೆ, ತಾಳ್ಮೆಗಳ ಸಾಕಾರಮೂರ್ತಿ ಆಕೆ. ಮುಂದೆ ಇವೇ ಗುಣಗಳು ರಾಮರಾಯರಲ್ಲಿ ಕಂಡು ಬಂದದ್ದು ಆಶ್ಚರ್ಯವೇನಲ್ಲ.

ರಾಮರಾಯರು ಎಂಟು ವರ್ಷದವರಾಗಿದ್ದಾಗ ಆ ಸಂಸಾರದ ಮೇಲೆ ಸಿಡಿಲೊಂದು ಎರಗಿತು.

ಗರ್ಭಿಣಿ ತಾಯಿ ಹಾಲು ಕರೆಯುತ್ತಿದ್ದಳು. ಯಾರೋ ಹೊರಗಡೆ ಕೂಗಿದರು. ಆ ಕೂಗುವಿಕೆಗೆ ಬೆದರಿದ ಹಸು ಗರ್ಭಿಣಿಯನ್ನು ಒದೆಯಿತು. ಇದರಿಂದ ಆಕೆಗೆ ಬಲವಾದ ಪೆಟ್ಟುಬಿದ್ದಿತು. ಎರಡು ದಿನಗಳ ನಂತರ ಆಕೆ ಕಣ್ಣುಮುಚ್ಚಿದಳು.

ತಾಯಿಯ ಸಾವಿನ ನಂತರ ಕುಟುಂಬ ಒಂದೇ ಊರಿನಲ್ಲಿ ನೆಲೆಯಾಗಿ ನಿಲ್ಲಲಿಲ್ಲ. ಊರಿಂದ ಊರಿಗೆ ಸುತ್ತಾಡುತ್ತಿತ್ತು. ಇದರಿಂದ ರಾಮರಾಯರ ಪ್ರಾಥಮಿಕ  ವಿದ್ಯಾಭ್ಯಾಸ ಗೊತ್ತಾದ ರೀತಿಯಲ್ಲಿ ಮುಂದುವರಿಯದೆ ಏರುಪೇರಾಯಿತು. ಈ ಊರಿನಲ್ಲಿ ಒಂದನೇ ತರಗತಿ, ಆ ಊರಿನಲ್ಲಿ ಎರಡನೇ ತರಗತಿ, ಇನ್ನೊಂದು ಊರಿನಲ್ಲಿ ಮೂರನೇ ತರಗತಿ – ಹೀಗೆಯೇ ಮುಂದುವರಿಯಿತು ಅವರ ವಿದ್ಯಾಭ್ಯಾಸ.

ಶ್ರದ್ಧಾವಂತ ವಿದ್ಯಾರ್ಥಿ

ಕುಟುಂಬದಲ್ಲಿ ಏನೆಲ್ಲ ಕಷ್ಟಗಳಿದ್ದರೂ ರಾಯರಿಗೆ ಶಾಲೆಯ ಪಾಠಗಳ ಬಗ್ಗೆ ಶ್ರದ್ಧೆ ಇತ್ತು. ಅವನ್ನು ಮನಸ್ಸಿಟ್ಟು ಓದುತ್ತಿದ್ದರು. ಮನೆಯ ಕಷ್ಟಗಳು, ಅಕ್ಕರೆಯ ಅಭಾವವನ್ನು ಓದಿನ ತಲ್ಲೀನತೆಯಲ್ಲಿ ಮರೆಯುತ್ತಿದ್ದರು. ಮನೆಯಲ್ಲಿ ಪಾಠ ಹಾಗೂ ಲೆಕ್ಕಗಳನ್ನು ಶ್ರದ್ಧೆಯಿಟ್ಟು ಮಾಡುತ್ತಿದ್ದರು. ತಪ್ಪದೆ ತರಗತಿಗೆ ಹಾಜರಾಗುತ್ತಿದ್ದರು. ಇದರಿಂದ ಇವರ ಉಪಾಧ್ಯಾಯರುಗಳಿಗೂ ಇವರ ಮೇಲೆ ಪ್ರೀತಿ ಹುಟ್ಟಿತು.

ತಮ್ಮ ಸಂಸಾರ ಕಷ್ಟದಲ್ಲಿದೆ, ತಾವು ಓದಿ ಸಂಪಾದಿಸಿ ಮನೆಯವರಿಗೆ ನೆರವಾಗಬೇಕು ಎಂಬುದನ್ನು ರಾಮರಾಯರು ತಿಳಿದುಕೊಂಡಿದ್ದರು.

ಎಲ್ಲೆಲ್ಲೋ ಸುತ್ತಾಡಿ ಕುಟುಂಬವು ಶಿವಮೊಗ್ಗಾಕ್ಕೆ ಬಂದಿತು. ಹತ್ತಿರದ ಹಳ್ಳಿಯೊಂದರ ಗ್ರಾಮಪಟೇಲನ ಕೆಲಸವು ತಂದೆಯವರಿಗೆ ದೊರಕಿತು. ಆಗ ರಾಯರಿಗೆ ಹದಿಮೂರು ವರ್ಷಗಳು. ಅಷ್ಟು ಹೊತ್ತಿಗೆ ಅವರಿಗೆ ಉಪನಯನವೂ ಆಗಿತ್ತು. ಆದರೆ ಅವರು ಓದುತ್ತಿದ್ದುದು ನಾಲ್ಕನೆಯ ತರಗತಿ ಮಾತ್ರ. ಇಂತಹ ಸನ್ನವೇಶದಲ್ಲಿ ರಾಯರ ಜೀವನದಲ್ಲಿ ಎರಡನೆಯ ಸಿಡಿಲು ಬಡಿಯಿತು.

ತಂದೆಯೂ ದೂರವಾದರು

ತಂದೆಯವರ ಪಟೇಲಿಕೆಗೆ ಸಂಬಂಧ ಪಟ್ಟಂತೆ ಹಳ್ಳಿಯ ಕಂದಾಯ ೧೫೦ ರೂಪಾಯಿಗಳು ವಸೂಲಾಗಿತ್ತು. ಅದನ್ನು ಖಜಾನೆಗೆ ಕಟ್ಟಬೇಕಾಗಿತ್ತು. ತಂದೆಯವರಿಗೆ ಖಾಯಿಲೆ. ಇದರಿಂದ ಹಣಕಟ್ಟುವ ಕೆಲಸವನ್ನು ಒಬ್ಬ ಸ್ನೇಹಿತನಿಗೆ ವಹಿಸಿದರು. ಆದರೆ ಆತ ನಂಬಿಕೆದ್ರೋಹ ಮಾಡಿದ. ಆ ಹಣವನ್ನು ಖಜಾನೆಗೆ ಕಟ್ಟದೆ ಸ್ವಂತಕ್ಕೆ ಉಪಯೋಗಿಸಿಕೊಂಡ, ಹಣದ ದುರುಪ ಯೋಗದ ಆಪಾದನೆ ತಂದೆಯವರಾದ ಹನುಮಂತ ರಾಯರ ಮೇಲೆ ಬಿತ್ತು. ಮನೆಯಲ್ಲಿ ದರಿದ್ರ ದೇವತೆ ತಾಂಡವಾಡುತ್ತಿದೆ. ಆಗಿನ ಒಂದು ನೂರ ಐವತ್ತು ರೂಪಾಯಿಗಳೆಂದರೆ ಸಾಮಾನ್ಯವೆ! ಅದನ್ನು ಸಂಪಾದಿಸಿ, ತಂದು, ತುಂಬುವುದು ಸಾಧ್ಯವೇ? ಮೇಲಾಗಿ ಎಷ್ಟೊಂದು ಕೆಟ್ಟ ಹೆಸರು! ಸತ್ಯಸಂಧರೂ ನಿಷ್ಠರೂ ಆಗಿದ್ದ ಅವರಿಗೆ ಈ ಅಪಮಾನ ಸಹಿಸಲಾರದ್ದಾಗಿತ್ತು. ಆ ಸಮಯದಲ್ಲಿ ಪಲಾಯನವೊಂದೇ ಅವರಿಗೆ ತೋರಿದ ದಾರಿ. ಮಕ್ಕಳನ್ನೆಲ್ಲ ಬಿಟ್ಟುಬಿಟ್ಟು ಅವರು ದೇಶಾಂತರ ಹೊರಟುಹೋದರು. ನಿಜ ಅರ್ಥದಲ್ಲಿ ರಾಮರಾಯರು ಅನಾಥರಾದರು, ತಂದೆ ತಾಯಿ ಇಲ್ಲದ ತಬ್ಬಲಿಯಾದರು. ಇದು ನಡೆದದ್ದು ೧೯೦೩ ರಲ್ಲಿ.

ಇಷ್ಟು ದಿನಗಳಿಂದಲೂ ದೂರವಾಗಿದ್ದ ಇವರ ಹಿರಿಯಣ್ಣ ಸುಬ್ಬರಾಯರು ಇವರನ್ನು ಬಂದು ಕೂಡಿಕೊಂಡರು. ಉದ್ಯೋಗಕ್ಕಾಗಿ ಬಹಳ ಪ್ರಯತ್ನಪಟ್ಟ ನಂತರ ಸುಬ್ಬರಾಯರಿಗೆ ಹೊನ್ನಾಳಿಯಲ್ಲಿ ಪೊಲೀಸ್ ಕಾನ್ಸಸ್ಟೇಬಲ್ ಕೆಲಸ ದೊರೆಯಿತು. ಇದರಿಂದ ಅಂಡಲೆ ಯುತ್ತಿದ್ದ ಸಂಸಾರಕ್ಕೆ ತುಸು ನೆಮ್ಮದಿ ದೊರೆಯಿತು.

ಪರೀಕ್ಷೆ ನಿಲುಕೀತೆ?

ಅಂತೆಯೆ ರಾಮರಾಯರ ವಿದ್ಯಾಭ್ಯಾಸವೂ ಕೂಡ ಸಲೀಸಾಗಿ ಮುಂದುವರಿಯತೊಡಗಿತು. ಆಗ ಅವರು ಕನ್ನಡದ ಐದನೆ ತರಗತಿಗೆ ಬಂದಿದ್ದರು. ಹುಡುಗ ಚೂಟಿ, ಬುದ್ಧಿವಂತ. ಉಪಾಧ್ಯಾರುಗಳಿಗೂ ಈ ವಿದ್ಯಾರ್ಥಿಯನ್ನೂ ಕಂಡರೆ ಇಷ್ಟ. ಇದರಿಂದ ನೇರವಾಗಿ ಎಲ್. ಎಸ್. (ಲೋಯರ್ ಸೆಕೆಂಡರಿ) ಪರೀಕ್ಷೆಗೆ ಕೊಡಿಸಲು ಉಪಾಧ್ಯಾಯರುಗಳು ಒಪ್ಪಿದರು. ಅದಕ್ಕಾಗಿ ರಾಯರು ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದರು.

ಇಲ್ಲಿ ಮತ್ತೊಂದು ತೊಂದರೆ ಎದುರಾಯಿತು. ಎಲ್.ಎಸ್. ಪರೀಕ್ಷೆಗೆ ಹಣ ಕಟ್ಟಬೇಕಾಗಿತ್ತು. ಶುಲ್ಕ ಐದು ರೂಪಾಯಿಗಳು. ಅದನ್ನು ಹೊಂದಿಸಲು ಆಗಲಿಲ್ಲ. ರಾಮರಾಯರಿಗೆ ನಿರಾಶೆಯ ಮಡುವಿನಲ್ಲಿ ಸಿಕ್ಕಿ ಬಿದ್ದಂತಾಗಿತ್ತು. ಆದರೆ ಉಪಾಧ್ಯಾಯರು ಇಂತಹ ಬುದ್ಧಿವಂತ ವಿದ್ಯಾರ್ಥಿಯನ್ನು ಬಿಟ್ಟುಕೊಟ್ಟಾರೆಯೆ? ಚಂದಾ ಎತ್ತಿ ಹಣ ಕೂಡಿಸಿ, ಪರೀಕ್ಷೆಗೆ ಕಟ್ಟಿಸಿದರು. ರಾಮರಾಯರ ಸಂತೋಷಕ್ಕೆ ಮೇರೆಯೇ ಇಲ್ಲವಾಯಿತು. ಉತ್ಸಾಹದಿಂದ ಓದತೊಡಗಿದರು. ಆದರೆ ವಿಧಿ ಅವರನ್ನು ವಂಚಿಸಿತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾ ಯಿತು. ಆ ವರ್ಷ ಹೊನ್ನಾಳಿಗೆ ಪ್ಲೇಗ್ ವ್ಯಾಧಿ ಹರಡಿತು. ಈ ಭಯಂಕರ ವ್ಯಾಧಿಗೆ ತುತ್ತಾಗಿ ಜನರು ಮಿಡಿತೆಗಳಂತೆ ಸಾಯತೊಡಗಿದರು. ಸಾಲದುದಕ್ಕೆ ರಾಮರಾಯರ ಅಕ್ಕ, ಭಾವ, ಅವರ ಮಗು ಹಾಗೂ ಅವರ ತಮ್ಮ ಹೊನ್ನಾಳಿಗೆ ಬಂದರು. ಅಕ್ಕ ಗರ್ಭಿಣಿಯಾಗಿದ್ದಳು. ಒಂದು ಕಡೆಯಿಂದ ಎಲ್ಲರಿಗೂ ವ್ಯಾಧಿ ತಗುಲಿತು.  ಊರಾಚೆ ಗುಡಿಸಿಲುಗಳಲ್ಲಿ ಅವರ ವಾಸ ಪ್ರಾರಂಭವಾಯಿತು. ಅವರೆಲ್ಲರ ಉಸ್ತುವಾರಿ ರಾಮರಾಯರ ತಲೆಯ ಮೇಲೆ ಬಿತ್ತು. ದುರದೃಷ್ಟದ ಬೇಟೆ ಮುಗಿದಿರಲಿಲ್ಲ. ಅವರ ತಮ್ಮ ಮೂರ್ತಿಯು ಸಾವನ್ನಪ್ಪಿದ. ಗರ್ಭಿಣಿಯಾಗಿದ್ದ ಅಕ್ಕನ ಹೆರಿಗೆ ಆಗಿ, ಹುಟ್ಟಿದ ಮಗುವೂ  ಸತ್ತಿತು. ಆಕೆಯ ಹಿರಿಯ ಮಗು ಕಮಲಳಿಗೂ ಪ್ಲೇಗ್ ತಗುಲಿ ಅದೂ ಸತ್ತಿತು. ಇನ್ನೊಬ್ಬ ಅಕ್ಕನ ಪತಿಯೂ ತೀರಿಕೊಂಡರು. ಈ ಸಾವುಗಳ ಸರಮಾಲೆಯು ಸಂಸಾರವನ್ನು ತತ್ತರಿಸುವಂತೆ ಮಾಡಿತು. ಕಣ್ಣೀರಿನಲ್ಲಿ ಕೈ ತೊಳೆದಂತಾಯಿತು. ರಾಮರಾಯರ ಪಾಲಿಗೆ ಆ ವರ್ಷ ಅತ್ಯಂತ ದುಃಖಪೂರಿತ ವರ್ಷವಾಯಿತು. ಪರೀಕ್ಷೆಗೆ ಹೋಗುವ ಅವರ ಆಸೆಯ ಹೂವು ಮುರುಟಿಕೊಂಡಿತು.

೧೯೦೪ರಲ್ಲಿ ಪರೀಕ್ಷೆಗೆ ಕೊಡುವ ಕತೆ ಹೀಗಾದರೆ, ೧೯೦೫ ರಲ್ಲಿ ಅದು ಬೇರೊಂದು ರೀತಿಯ ದಾಯಿತು. ಶಾಲೆಯಲ್ಲಿನ ಓರ್ವ ಉಪಾಧ್ಯಾಯರು ಜಾತೀ ಯತೆಯ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಪಕ್ಷಪಾತ ಮಾಡುತ್ತಿದ್ದರು. ಇದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಅವರಲ್ಲಿ ರಾಮರಾಯರೂ ಒಬ್ಬರಾಗಿದ್ದರು. ವಿಚಾರಣೆ ನಡೆದಾಗ ವಿದ್ಯಾರ್ಥಿಗಳು ಇವರನ್ನೇ ಮುಂದೆ ತಳ್ಳಿದರು. ಆರೋಪಿಯ ಪಟ್ಟ ಅವರಿಗೆ ಕಟ್ಟಲಾಯಿತು. ಉಪಾಧ್ಯಾಯ ರಿಂದ ಪೆಟ್ಟುಗಳು ಬಿದ್ದವು. ತರಗತಿಯಿಂದ ಹೊರಗೆ ಹಾಕಿದ್ದೂ ಅಲ್ಲದೆ ಮುಂದೆ ಶಾಲೆಯಿಂದಲೇ ಹೊರದೂಡಲಾಯಿತು. ಶಿಕಾರಿಪುರಕ್ಕೆ ಹೋಗಿ ಓದು ಮುಂದುವರಿಸುವ ಪ್ರಯತ್ನವೂ ಫಲಿಸಲಿಲ್ಲ. ಹೀಗಾಗಿ ಮನೆಯಲ್ಲೇ ಓದಿಕೊಳ್ಳುವುದೆಂದು ಕೊನೆಗೆ ತೀರ್ಮಾನಿಸ ಲಾಯಿತು. ಕಷ್ಟಪಟ್ಟು ಪರೀಕ್ಷೆಗೂ ಕಟ್ಟಿದ್ದಾಯಿತು. ಪಾಠಗಳ ಅಭ್ಯಾಸದಲ್ಲಿ ನಿರತರಾಗಿದ್ದ ರಾಮರಾಯರ ಮೇಲೆ ವಿಧಿಯು ಮತ್ತೊಮ್ಮೆ ಅಪ್ಪಳಿಸಿತು. ಪರೀಕ್ಷೆಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಾಗ ದೇಶಾಂತರ ಹೋಗಿದ್ದ ತಂದೆಯವರ ವಿಷಯ ಗೊತ್ತಾಯಿತು. ಅವರು ಅನಾಥ ಸ್ಥಿತಿಯಲ್ಲಿ ದೂರದ ಸಿರ್ಸಿ ಎಂಬ ಊರಿನಲ್ಲಿ ಮರಣ ಹೊಂದಿದ್ದರು. ಪರೀಕ್ಷೆಯ ಅವರ ಜೀವನದ ಪರೀಕ್ಷಾ ಸಮಯವಾಯಿತು. ಪರೀಕ್ಷೆಯಲ್ಲಿ ಉತ್ತರ ಬರೆಯಬೇಕಾದ ದಿನಗಳಲ್ಲಿ ಅವರು ತಂದೆಯ ಕರ್ಮಾಂತರಗಳಲ್ಲಿ ಭಾಗವಹಿಸಬೇಕಾಯಿತು.

ಆದರೆ ರಾಮರಾಯರು ವಿದ್ಯಾಭ್ಯಾಸದಲ್ಲಿ, ಕಲಿಕೆಯಲ್ಲಿ ಹಠವಾದಿಗಳು. ಮುಂದಿನ ವರ್ಷ (೧೯೦೬ ರಲ್ಲಿ) ಮತ್ತೆ ಹೊನ್ನಾಳಿಯಲ್ಲಿನ ಶಾಲೆಗೆ ಸೇರಿ, ಪರೀಕ್ಷೆಗೆ ಕಟ್ಟಿ, ಚೆನ್ನಾಗಿ ಓದಿ, ಉತ್ತೀರ್ಣರಾದರು.

ಬೆಂಗಳೂರಿನಲ್ಲಿ ಓದು

ಮುಂದೆ? ಪ್ರೌಢಶಾಲೆಗೆ ಸೇರಬೇಕೆಂಬ ಆಸೆ. ಆದರೆ ಅದು ಇದ್ದುದು ದೂರದ ಬೆಂಗಳೂರಿನಲ್ಲಿ. ಅಲ್ಲೊಬ್ಬ ಚಿಕ್ಕಪ್ಪನವರು ಇರುವುದು ನೆನಪಿಗೆ ಬಂದಿತು. ಅವರನ್ನು ಹುಟ್ಟಿದಂದಿನಿಂದ ಕಂಡೇ ಇಲ್ಲ. ಆದರೂ ಪ್ರಯತ್ನ ಮಾಡೋಣವೆಂದು ಬೆಂಗಳೂರಿಗೆ ಹೊರಟರು.

ಚಿಕ್ಕಪ್ಪ ಕೃಷ್ಣರಾಯರು ಬೆಂಗಳೂರಿನ ಸಿಟಿ ಮಾರ್ಕೆಟ್ ಬಳಿಯ ಒಂದು ಅಂಗಡಿಯಲ್ಲಿ ಗುಮಾಸ್ತರಾಗಿದ್ದರು. ಅವರನ್ನು ಪತ್ತೆ ಹಚ್ಚಿ, ಕಂಡು, ತಮ್ಮ ಪರಿಚಯವನ್ನೆಲ್ಲ ಹೇಳಿಕೊಂಡರು. ತಮ್ಮ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕೆಂದು ಬೇಡಿದರು. ಮಕ್ಕಳಿಲ್ಲದ ಚಿಕ್ಕಪ್ಪನವರಿಗೆ ಮನ ಕರಗಿತು. ಸಹಾಯ ಮಾಡುವುದಾಗಿ ಮಾತು ಕೊಟ್ಟರು. ಚಿಕ್ಕಮ್ಮನವರೂ ಕೂಡ ಪ್ರೀತಿಯಿಂದ ನೋಡಿಕೊಳ್ಳತೊಡಗಿದರು. ಮರುಭೂಮಿಯ ನಡುವೆ ಒಂದಿಷ್ಟು ಹಸಿರುಗಿಡಗಳ ಪ್ರದೇಶ ಕಂಡಂತಾಯಿತು ರಾಮರಾಯರಿಗೆ.

ಮೊದಲು ಇಂಗ್ಲಿಷ್ ಶಾಲೆಯೊಂದಕ್ಕೆ ಸೇರಿ ಇಂಗ್ಲಿಷ್ ಕಲಿತರು. ೧೯೦೮ ರಲ್ಲಿ ಸೇಂಟ್ ಅಲಾಷಿಯಸ್ ಶಾಲೆಗೆ ಸೇರಿದರು. ಚೆನ್ನಾಗಿ ಓದಿ ತರಗತಿಗೆ ಮೊದಲನೆಯ ವರಾದರು. ಪ್ರಿನ್ಸಿಪಾಲರ ಪ್ರಿಯ ಶಿಷ್ಯರಾದರು. ಮೊದಲನೆ ಫಾರಂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎರಡನೆ ಫಾರಂಗೆ ಬಂದರು. ದುರದೃಷ್ಟವಶಾತ್ ಇಲ್ಲಿ ಕೆಟ್ಟ ಹುಡುಗರ ಸಹವಾಸ ಗಂಟು ಬಿದ್ದಿತು. ಅವರು ಮಾಡಿದ ಯಾವುದೋ ಒಂದು ತಪ್ಪು ರಾಮರಾಯರ ಮೇಲೆರಗಿತು. ಕೂಡಲೇ ಅವರನ್ನು ಶಾಲೆಯಿಂದ ಹೊರಗೆ ಹಾಕಿದರು. ರಾಮರಾಯರು ಇದರಿಂದ ಪಾಠ ಕಲಿತರು. ಇನ್ನು ಮುಂದೆ ಇಂತಹವರ ಸಹವಾಸ ಮಾಡಕೂಡದೆಂದು ತೀರ್ಮಾನಿಸಿಕೊಂಡರು. ಬೇರೆ ಪ್ರೌಢಶಾಲೆಗೆ ಸೇರಿ ೧೯೦೯ರಲ್ಲಿ ಮೂರನೇ ಫಾರಂ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಇಲ್ಲಿಗೆ ಅವರ ವಿದ್ಯಾಭ್ಯಾಸ ಕೊನೆಗೊಂಡಂತಾ ಯಿತು. ಅವರ ಬಾಲ್ಯದ ಬವಣೆಯಲ್ಲಿ ಇಷ್ಟು ಮಾತ್ರ ವಿದ್ಯಾಭ್ಯಾಸ ಆದದ್ದೇ ಹೆಚ್ಚು ಎನ್ನಬೇಕು. ಇದಕ್ಕೆ ಅಕ್ಕರೆ ಅಣ್ಣನ ಚಿಕ್ಕಪ್ಪನ ಮತ್ತು ಚಿಕ್ಕಮ್ಮನ ಪ್ರೀತಿವಾತ್ಸಲ್ಯಗಳೇ ಕಾರಣ.

ಅಣ್ಣ ಸುಬ್ಬರಾಯರು ಓದಿದ್ದು ಸಾಕು, ಕೆಲಸಕ್ಕೆ ಸೇರು ಎಂದು ಹೇಳಿದರು. ಅಂತೆಯೇ ಅಲ್ಲಿನ ಅಮಲ್ದಾರರ ಆಫೀಸ್‌ನಲ್ಲಿ  ಗುಮಾಸ್ತೆ ಉದ್ಯೋಗ ದೊರೆಯಿತು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ಮೇಲೆ ಅದೇ ಊರಲ್ಲಿದ್ದ ಸಬ್‌ರಿಜಿಸ್ಟ್ರಾರ್‌ರವರ ಆಫೀಸಿನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಬರೀ ಲಂಚ ಪ್ರಪಂಚವೇ! ಪ್ರತಿಯೊಂದು ವ್ಯವಹಾರಕ್ಕೂ ಹಣ ಪಡೆಯುವ ರೀತಿ ನೋಡಿ ಬೇಸರವಾಯಿತು. ಕೆಲವು ದಿನಗಳ ನಂತರ ತಾಲ್ಲೂಕು ಕಛೇರಿಗೆ ಹಿಂದಿರುಗಿದರು.

ಸಾಹಿತ್ಯದ ರಚನೆ ಪ್ರಾರಂಭ

ಬಾಲ್ಯದಿಂದಲೂ ರಾಮರಾಯರಿಗೆ ಪೌರಾಣಿಕ ಗ್ರಂಥಗಳೆಂದರೆ ತುಂಬಾ ಇಷ್ಟ. ಅವನ್ನು ಓದುತ್ತಾ ಕುಳಿತರೇ ಕಾಲ ಉರುಳಿದ್ದೇ ಅವರಿಗೆ ಗೊತ್ತಾಗುತ್ತಿರಲಿಲ್ಲ. ವಿದ್ಯಾಭ್ಯಾಸ ಕಾಲದಲ್ಲಿ ಅನಂತರ ಗುಮಾಸ್ತೆ ಕೆಲಸಕ್ಕೆ ಸೇರಿದ ಮೇಲೂ ಈ ಅಭ್ಯಾಸ ಕಣ್ಮರೆಯಾಗಲಿಲ್ಲ. ಒಮ್ಮೆ ಶಾಲೆಯೊಂದರ ಗ್ರಂಥಾಲಯದಲ್ಲಿ ಮುದ್ದಣ್ಣ ಕವಿಯ ‘ಶ್ರೀ ರಾಮ ಪಟ್ಟಾಭಿಷೇಕಂ’ ಎನ್ನುವ ಗ್ರಂಥ ದೊರೆಯಿತು. ಅದು ಕಾವ್ಯ. ಓದಿದರು ಸುಂದರವಾಗಿತ್ತು ಅದು. ಅದನ್ನು ಗದ್ಯದಲ್ಲಿ ಬರೆಯಬೇಕೆನ್ನಿಸಿತು. ಒಂದು ತಿಂಗಳು ಶ್ರಮವಹಿಸಿ ಅದರ ಕಥಾಸಾರವನ್ನು ಗದ್ಯರೂಪದಲ್ಲಿ ಬರೆದರು.

ಅದೇ ಸಮಯಕ್ಕೆ ಆ ಊರಿಗೆ ಕೂಡಲಿ ಮಠದ ಸ್ವಾಮಿಗಳು ಬಂದರು. ಅಮಲ್ದಾರ್‌ರವರ ಮುಖಾಂತರ ಪ್ರಯತ್ನಿಸಿ ಸ್ವಾಮಿಗಳ ಎದುರಿಗೆ ಈ ಗ್ರಂಥವನ್ನು ಓದಲು ಅವಕಾಶ ದೊರಕಿಸಿಕೊಂಡರು. ಸಂಜೆ ಮಂಗಳಾರತಿ ಸಮಯದಲ್ಲಿ ಅದನ್ನು ಓದಿದರು. ಆಲಿಸಿದ ಜನರಿಗೆಲ್ಲ ತುಂಬಾ ಸಂತೋಷವಾಯಿತು. ಆ ಸಭೆಯಲ್ಲಿ ಕರ್ಪೂರ ಶ್ರೀನಿವಾಸರಾಯರು ಎನ್ನುವವರು  ಇದ್ದರು. ಅವರು ಸೂಪರಿಟೆಂಡೆಂಟ್ ಎಂಜಿನಿಯರ್ ಆಗಿದ್ದರು. ಅವರಿಗೆ ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳೆಂದರೆ ತುಂಬಾ ಅಭಿಮಾನ.  ರಾಮರಾಯರಲ್ಲಿನ ಸಾಹಿತ್ಯ ರಚನಾಶಕ್ತಿ ಯನ್ನು ಅವರು ಗುರ್ತಿಸಿದರು. ಮುಂದೆ ಉತ್ತಮ ಸಾಹಿತಿಯಾಗುವ ಲಕ್ಷಣಗಳು ಅವರಲ್ಲಿರುವುದನ್ನು ಕಂಡು ಕೊಂಡರು. ಅವರಿಗೆ ‘ನಾರಾಣಪ್ಪನ ಗದುಗಿನ ಭಾರತವನ್ನು ಗದ್ಯದಲ್ಲಿ ಬರಿ ಅದನ್ನು ಮುದ್ರಿಸುವ ಭಾರ ನನ್ನ ಮೇಲಿರಲಿ. ಅದರ ಮಾರಾಟದಿಂದ ಬಂದ ಹಣದಲ್ಲಿ ಖರ್ಚು ಕಳೆದು ಉಳಿದ ಹಣದಲ್ಲಿ ಸ್ವತಂತ್ರ್ಯ ಜೀವನ ನಡೆಸು. ಈ ಕುಗ್ರಾಮದಲ್ಲಿ ತಾಲ್ಲೂಕು ಕಛೇರಿಯ ನೌಕರಿಯಲ್ಲಿ ಬಿದ್ದು ಏಕೆ ಒದ್ದಾಡುತ್ತೀ?’  ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ರಾಮರಾಯರಲ್ಲೂ ಸ್ವತಂತ್ರ ಜೀವನ  ನಡೆಸಬೇಕೆಂಬ ಹಂಬಲ ಹೆಚ್ಚಾಗ ತೊಡಗಿತು.

ಕರ್ಪೂರ ಶ್ರೀನಿವಾಸರಾಯರು ತಮ್ಮ ಮಾತಿ ನಂತೆ ಮಹಾಭಾರತದ ಪುಸ್ತಕವನ್ನು ರಾಮರಾಯರಿಗೆ ಕಳುಹಿಸಿದರು. ಅದನ್ನು ಓದುತ್ತಾ ಹೋದಂತೆ ರಾಮರಾಯರ ಕಣ್ಣೆದುರಿಗೆ ಹೊಸದೊಂದು ಲೋಕವೇ ತೆರೆದಿಟ್ಟಂತಾಯಿತು. ಇದರಿಂದ ಅವರ ಹೃದಯ ಶ್ರೀಮಂತವಾಯಿತು. ಬುದ್ಧಿಗೆ ಸಾಣೆ ಹಿಡಿದಂತಾಯಿತು. ಆದಿಪರ್ವವನ್ನು ಗದ್ಯರೂಪದಲ್ಲಿ ಬರೆದು ಮುಗಿಸಿದರು.

ವ್ಯಾಪಾರಿ ರಾಮರಾಯರು!

ಶ್ರೀನಿವಾಸರಾಯರು ಮೂಡಿಸಿದ ಸ್ವತಂತ್ರ ಜೀವನದ ಹಂಬಲ ಇನ್ನೂ ಅವರಲ್ಲಿ ಗುಂಯ್‌ಗುಟ್ಟುತ್ತಿತ್ತು. ತಾಲ್ಲೂಕು ಕಛೇರಿಯ ಗುಮಾಸ್ತಿಕೆ ಗುಲಾಮಗಿರಿಯಂತೆ ಕಂಡಿತು. ಅವರ ಕೆಲವು ಸ್ನೇಹಿತರೂ ಈ ಭಾವನೆಗೆ ಉತ್ತೇಜನ ನೀಡಿದರು. ಸ್ವತಂತ್ರ ವೃತ್ತಿ ಹಿಡಿದರೆ ಬರವಣಿಗೆಗೆ ಬೇಕಾದಷ್ಟು ಸಮಯ ಸಿಗುವುದೇ ಅಲ್ಲದೆ ಹಣವು ದೊರೆಯುವುದೆಂದು ತಿಳಿದಿದ್ದರು. ಅದರಂತೆ ಆ ಗುಮಾಸ್ತಿಕೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅದೇ ಊರಿನ ಕೋಟೆ ಪ್ರದೇಶದಲ್ಲಿ ಒಂದು ದಿನಸಿ ಅಂಗಡಿಯನ್ನು ತೆರೆದರು. ಆದರೆ ಆ ಅಂಗಡಿಯದೇ ಒಂದು ದೊಡ್ಡ ಕತೆಯಾಯಿತು. ದೂರದ ದಾವಣಗೆರೆ ಯಿಂದ ಸಾಮಾನುಗಳನ್ನು ಸ್ವತಃ ಗಾಡಿಗಳ ಮೇಲೆ ತರಬೇಕಾಗಿತ್ತು. ವ್ಯಾಪಾರದಲ್ಲಿ ಸಾಲ ನೀಡಬೇಕಾಗಿತ್ತು.  ಸಾಲದ ವಸೂಲಿ ಸಾಮಾನುಗಳನ್ನು  ತರುವುದು, ಅಂಗಡಿಯಲ್ಲಿ ನಿಂತು ವ್ಯಾಪಾರ ಮಾಡುವುದು ಇವೆಲ್ಲ ವನ್ನೂ ರಾಮರಾಯರೆ ಏಕಾಂಗಿಯಾಗಿ ಮಾಡ ಬೇಕಾಗಿತ್ತು. ಇದರ ಮಧ್ಯೆ ಕೊಟ್ಟ ಸಾಲದ ವಸೂಲಿ ಸರಿಯಾಗಿ ಆಗದೆ, ಯಾವಾಗಲೂ ಹಣ, ಹಣ ಎನ್ನುವಂತಾಯಿತು. ಗೀತೆ ಮಹಾಭಾರತಗಳ ಹಾಗೂ ಸದ್ಗ್ರಂಥಗಳ ಓದು ದೂರವಾಯಿತು. ಮನಸ್ಸಿಗೆ ನೆಮ್ಮದಿ ತಪ್ಪಿತು. ಆರೇಳು ತಿಂಗಳಲ್ಲಿ ಮನಸ್ಸಿಗೆ ಒಗ್ಗದ ಈ ರೀತಿಯ ಸ್ವತಂತ್ರ ಜೀವನ ಬೇಸರವಾಯಿತು. ಹೊನ್ನಾಳಿಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಎಲ್ಲವನ್ನೂ ಅಣ್ಣನವರಿಗೆ ವಹಿಸಿದರು. ಅದುವರೆಗೆ ತಾವು ಬರೆದಿದ್ದ ಪುಸ್ತಕಗಳ ಹಸ್ತಪತ್ರಿಗಳನ್ನು ಗಂಟುಕಟ್ಟಿಕೊಂಡು, ಅದರ ಸಮೇತ ೧೯೧೩ರ ಮಾಚ್ ೩೧ ರಂದು ಬೆಂಗಳೂರಿಗೆ ಬಂದಿಳಿದರು. ಉದ್ಯೋಗವೊಂದನ್ನು ಅರಸುವುದು ಅವರ ಮುಖ್ಯ ಗುರಿಯಾಗಿತ್ತು.

ಉಪಾಧ್ಯಾಯರು

ರಾಮರಾಯರ ಎರಡನೆ ಅಕ್ಕ ಜಾನುಬಾಯಿ ಉಪಾಧ್ಯಾಯನಿಯಾಗಿದ್ದು, ಬೆಂಗಳೂರಿನ ದಂಡಿನ ಪ್ರದೇಶದಲ್ಲಿದ್ದರು. ಅವರೊಂದಿಗೆ ವಾಸಿಸುತ್ತಿದ್ದು, ಉದ್ಯೋಗಕ್ಕಾಗಿ ಹುಡುಕಾಡತೊಡಗಿದರು. ಕೊನೆಗೆ ಶಿಶು ವಿಹಾರದಲ್ಲಿ ತಿಂಗಳಿಗೆ ಹತ್ತು ರೂಪಾಯಿ ಸಂಬಳದ ಉಪಾಧ್ಯಾಯರ ಉದ್ಯೋಗ ದೊರಕಿತು. ಇದರಿಂದ ಅವರಿಗೆ ಬದುಕುವುದಕ್ಕೆ ಒಂದು ಮಾರ್ಗವಾಯಿತು. ಆದರೂ ಸ್ವತಂತ್ರ ಜೀವನದ ಹಂಬಲ ಹೋಗಲಿಲ್ಲ. ಇದಕ್ಕಾಗಿ ಬಿಡುವಿನ ವೇಳೆಯಲ್ಲಿ ಹೊಲಿಗೆ ಹಾಗೂ ಟೈಪ್‌ರೈಟಿಂಗ್‌ಗಳನ್ನು ಕಲಿಯತೊಡಗಿದರು. ಆದರೆ ಈ ವೃತ್ತಿಗಳಲ್ಲಿ ಕುದುರುವುದು ಕಷ್ಟವೆಂದು ತಿಳಿದು, ಅವುಗಳನ್ನು ಮಧ್ಯದಲ್ಲೇ ಕೈಬಿಟ್ಟರು. ಆದರೂ ಅಂಗಡಿಯೊಂದರಲ್ಲಿ ಲೆಕ್ಕ ಬರೆದು ಮೇಲುಕಾಸನ್ನು ಪಡೆಯುತ್ತಿದ್ದರು. ಮಧ್ಯೆ ಮಧ್ಯೆ ಬಿಡುವು ಮಾಡಿಕೊಂಡು ಹಲವಾರು ದೇವರ ಹಾಡುಗಳನ್ನು ರಚಿಸಿದರು.

ಉಪಾಧ್ಯಾಯರ ಕೆಲಸ ಅವರಿಗೆ ಚೆನ್ನಾಗಿ ಒಗ್ಗಿತು. ಪುಟಾಣಿಗಳಿಗೆ ಬಿಡುವಿನ ವೇಳೆಯಲ್ಲಿ ತಾವು ಓದಿದ ಪುರಾಣಗ್ರಂಥಗಳಿಂದ, ರಾಮಾಯಣ, ಮಹಾಭಾರತ ಗಳಿಂದ ಅವರಿಗೆ ಅರ್ಥವಾಗುವಂತೆ ಕತೆಗಳನ್ನು ಹೇಳುವರು. ಆ ಮಕ್ಕಳೂ ಅಷ್ಟೇ ಆಸಕ್ತಿಯಿಂದ ಕೇಳುತ್ತಿದ್ದವು. ಇಂತಹ ಒಂದು ತರಗತಿಗೆ ಒಂದು ದಿನ ಇನ್ಸ್‌ಪೆಕ್ಟರ್‌ರವರು ಬಂದು ಇವರು ಪಾಠ ಮಾಡುವ ರೀತಿಯನ್ನು ಗಮನಿಸಿ ಸಂತೋಷಗೊಂಡರು. ಅವರ ಶಿಫಾರಸಿನ ಮೇರೆಗೆ ಆಗ ತಾನೆ ಪ್ರಾರಂಭವಾಗಿದ್ದ ಮುನಿಸಿಪಲ್ ಸ್ಕೂಲಿನ ಅಧ್ಯಾಪಕರ ಕೆಲಸ ಸಿಕ್ಕಿತು. ಕೆಲವೇ ದಿನಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ನೀತಿಕತೆಗಳು, ದೇವತಾ ಪ್ರಾರ್ಥನೆಗಳನ್ನು ಹೇಳಿಕೊಡುತ್ತಾ, ಅವರೊಂದಿಗೆ ಬೆರೆಯುತ್ತಾ ಜನಪ್ರಿಯರಾದರು.

ಆಗ ಭಾರತಾದ್ಯಂತ ಸ್ವಾತಂತ್ರ್ಯ ಚಳುವಳಿ ನಡೆಯುತ್ತಿತ್ತು. ಇವರಲ್ಲಿ ದೇಶಭಕ್ತಿ ಅಪಾರವಾಗಿತ್ತು. ಅನೇಕ ದೇಶಭಕ್ತಿ ಗೀತೆಗಳನ್ನು ರಚಿಸಿ ವಿದ್ಯಾರ್ಥಿಗಳಿಗೂ ಹೇಳಿಕೊಡುತ್ತಿದ್ದರು. ತರಗತಿಯಲ್ಲಿ ದೇಶಭಕ್ತರ ಚಿತ್ರಪಟ ಗಳನ್ನು ಹಾಕಿಸಿದ್ದರು. ಸಭೆ, ಸಮಾರಂಭಗಳಿಗೆ ಹೋಗಿ, ಮುದ್ರಿಸಿದ ದೇಶಭಕ್ತಿಗೀತೆಗಳನ್ನು ಹಂಚುತ್ತಿದ್ದರು. ಒಮ್ಮೆ ಆಂಗ್ಲ ಇನ್ಸ್‌ಪೆಕ್ಟರ್ ತನಿಖೆಗಾಗಿ ಇವರಿದ್ದ ತರಗತಿಗೆ ಬಂದರು. ತರಗತಿಯಲ್ಲಿದ್ದ ಭಾರತದ ದೇಶಭಕ್ತರ ಚಿತ್ರಪಟ ಗಳನ್ನು ನೋಡಿ ಆ ಆಂಗ್ಲನು ರಾಮರಾಯರನ್ನು ವಜಾ ಮಾಡುವನೆಂದೇ ಶಾಲೆಯ ಮುಖ್ಯೋ ಪಾಧ್ಯಾಯರು ದಿಗಿಲು ಬಿದ್ದಿದ್ದರು. ಆದರೆ ಆತ ರಾಯರು ಪಾಠ ಮಾಡುವ ಕ್ರಮವನ್ನು ನೋಡಿ, ಮೆಚ್ಚಿ, ಪ್ರೋತ್ಸಾಹದ ವರದಿ ಬರೆದಿದ್ದ.

ಇವುಗಳ ಮಧ್ಯೆ ರಾಮರಾಯರ ಲೇಖನ ಕೆಲಸವೂ ಮುಂದುವರಿಯುತ್ತಿತ್ತು. ಹಿಂದೆ ಪ್ರೋತ್ಸಾಹ ನೀಡಿದ್ದ ಕರ್ಪೂರ ಶ್ರೀನಿವಾಸರಾಯರ ಬಳಿಗೆ ಹೋಗಿ ಬರ ತೊಡಗಿದರು. ಅವರು ಬಿಡುವಿನ ವೇಳೆಯಲ್ಲಿ ಇವರಿಂದ ಭಾರತದ ಗದ್ಯಾನುವಾದವನ್ನು ಓದಿಸಿ, ಆಲಿಸಿ, ಚೆನ್ನಾಗಿದೆ ಎಂದು ಹೊಗಳಿದರು. ಆದರೆ ಅಚ್ಚು ಮಾಡುವುದಕ್ಕೆ ಮುಂಚೆ ಯಾರಾದರೂ ಪಂಡಿತರಿಗೆ ಅದನ್ನು ತೋರಿಸುವುದು ಒಳ್ಳೆಯದೆಂದು ಅವರು ಸೂಚಿಸಿದರು. ಇಷ್ಟು ಮಾತ್ರಕ್ಕೇನೆ ತಿಂಗಳುಗಳ ಸಮಯ ಹಿಡಿದಿರುವಾಗ, ಪಂಡಿತರ ಬಳಿ ಹೋದ ಮೇಲೆ ಇನ್ನೆಷ್ಟು ದಿನ ತೆಗೆದು ಕೊಳ್ಳುವುದೊ, ಅವರು ಏನು ತಪ್ಪು ಹುಡುಕುವರೋ ಎಂದು ರಾಮರಾಯರು ಭಯಗೊಂಡರು. ಅಂತೆಯೇ ಮಹಾಭಾರತದ ಪ್ರಕಟಣೆಯನ್ನು ದೂರವಿರಿಸಿದರು.

ಮಕ್ಕಳಿಗಾಗಿ ಪುಸ್ತಕ

ಬರೆಯುವ ಚಪಲ ಇದ್ದೇ ಇತ್ತಲ್ಲ! ಮಕ್ಕಳಿಗೆ ದಿನ ನಿತ್ಯ ನೀತಿಯ ಕತೆಗಳನ್ನು ಹೇಳುತ್ತಲೇ ಇದ್ದರು. ಇಂಗ್ಲಿಷ್ ಭಾಷೆಯಲ್ಲಿ ಅಂಥಹ ಪುಸ್ತಕಗಳನ್ನು ಓದಿದ್ದು ನೆನಪಿದ್ದಿತು. ಕನ್ನಡದಲ್ಲಿ ಅಂತಹವು ಇಲ್ಲದಿರುವುದರ ಕೊರತೆಯನ್ನು ಕಂಡುಕೊಂಡರು. ಭಾರತದ ಪ್ರಪಂಚದ ಆದರ್ಶ ಪುರುಷರ ಜೀವನ ಚರಿತ್ರೆಗಳನ್ನು ಬರೆಯಲು ಪ್ರಾರಂಭಿಸಿದರು.

ಮೊದಲು ‘ಧ್ರುವ’ ಪುಸ್ತಕವನ್ನು ಬರೆದರು. ಕರ್ಪೂರ ಶ್ರೀನಿವಾಸರಾಯರ ಎದುರಿಗೆ ಓದಿದರು. ಅವರು ಆಲಿಸಿ ಸಂತೋಷಗೊಂಡರು. ಬದಲಾವಣೆ ಗಳನ್ನು ಸೂಚಿಸಿದರು. ಮಕ್ಕಳಿಗೆ ಅರ್ಥವಾಗುವ ಸುಲಭ ಶೈಲಿಯಲ್ಲಿ ಹೇಗೆ ಬರೆಯಬೇಕೆಂದು ತಿಳಿಸಿದರು.

ಅದರಂತೆ ಮತ್ತೇ ಬರೆದು ತಂದರು. ಆಗ ಶ್ರೀನಿವಾಸರಾಯರು ಆಫೀಸಿಗೆ ಹೋಗಬೇಕಾದ ಸಮಯ ವಾಗಿತ್ತು. ಆದರೂ ಸ್ವಲ್ಪ ಓದಿಸಿ ಕೇಳೋಣವೆಂದು ಕುಳಿತರು. ಆದರೆ ರಾಮರಾಯರು ಓದುತ್ತಾ ಹೋದಂತೆ, ಕತೆಯನ್ನು ಆಲಿಸುವುದರಲ್ಲಿ ತಲ್ಲೀನರಾಗಿ ತಮ್ಮ ಆಫೀಸು, ಈ ಪ್ರಪಂಚ ಎಲ್ಲವನ್ನೂ ಮರೆತರು. ಅವರೂ ಧ್ರುವನೊಂದಿಗೆ ಒಂದಾಗಿದ್ದರು. ಓದುವುದು ಮುಗಿದಾಗ ನಾಲ್ಕು ಗಂಟೆಯಾಗಿತ್ತು. ಅವರನ್ನು ಯಾವುದೋ ಲೋಕಕ್ಕೆ ಒಯ್ದಿತ್ತು. ‘ಕಥಾ ನಿರೂಪಣೆ ಮಕ್ಕಳಿಗೆ ಹಿತ, ಅನುಕೂಲ, ರುಚಿಕರವಾಗಿದೆ, ಮುಂದುವರಿಸಿ’ ಎಂದು ಹೊಗಳಿದರು. ಇದರಿಂದ ಸ್ಫೂರ್ತಿಗೊಂಡ ರಾಮ ರಾಯರು ಚಂದ್ರಹಾಸ, ಪ್ರಹ್ಲಾದ, ಸಾವಿತ್ರಿ, ಹರಿಶ್ಚಂದ್ರ ಪುಸ್ತಕಗಳನ್ನು ಬರೆದರು.

ಪ್ರಕಟಣೆ ಪ್ರಾರಂಭ

ಪುಸ್ತಕಗಳ ಹಸ್ತಪ್ರತಿಗಳು ಸಿದ್ಧವಾದವು. ಆದರೆ ಅವನ್ನು ಅಚ್ಚು ಮಾಡಿಸುವುದು ಹೇಗೆ? ಅದಕ್ಕಾಗಿ ಬಂಡವಾಳ ಬೇಕು. ವ್ಯಾಪಾರ ಮಾಡಬೇಕು – ಈ ಯೋಚನೆ ರಾಯರ ತಲೆತಾಗಿದವು.

ಪ್ರಕಟಣೆಗಾಗಿ ಬಹಳ ಶ್ರಮವಹಿಸಿದರು; ಹತ್ತಾರು ಕಡೆ ಸುತ್ತಾಡಿದರು; ಯಾರ‍್ಯಾರನ್ನೋ ಕಂಡರು. ಪ್ರಯೋಜನವಾಗಲಿಲ್ಲ. ಬಿಡುವಿನ ವೇಳೆಯಲ್ಲಿ ಜನರ ಸೇವೆ ಮಾಡಲು ‘ಹಿತಕಾರಿಣೀ ಸಂಘ’ ಎಂಬ ಸಂಸ್ಥೆ ಯನ್ನು ಕಟ್ಟಿದ್ದರು. ಅದರ ಮುಖಾಂತರ ಉಪನ್ಯಾಸಗಳು,  ಗ್ರಾಮಗಳ ಸೇವೆ, ರಾತ್ರಿ ಶಾಲೆಗಳನ್ನು ನಡೆಸುತ್ತಿದ್ದರು. ಈ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದ  ಓರ್ವ ಮಿತ್ರರೇ ಪ್ರಕಟಣಾ ಕಾರ್ಯದಲ್ಲಿ ಜೊತೆಗೂಡಿದರು. ಇಬ್ಬರೂ ಸಾಹಸದಿಂದ ‘ಚಂದ್ರಹಾಸ’ ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ೧೯೧೫ನೆ ವರ್ಷ ದಸರ ಹಬ್ಬದ ಸರಸ್ವತಿ ಪೂಜೆಯ ದಿನ ಈ ಪುಸ್ತಕವನ್ನು ಮುದ್ರಣಾಲಯದಿಂದ ತಂದು, ಪೂಜೆ ಮಾಡಿ, ಬಿಡುಗಡೆ ಮಾಡಿದರು.

ಅದೇ ವರ್ಷ ಉಡುಪಿ ಯಾತ್ರೆ ಕೈಗೊಂಡರು. ಅಲ್ಲಲ್ಲಿ ಕೆಲವು ಊರುಗಳಲ್ಲಿ ಉಪನ್ಯಾಸಗಳನ್ನೂ ಮಾಡಿದರು. ಮೊದಲಿನಿಂದಲೂ ರಕ್ತಗತವಾಗಿ ಹರಿದು ಬಂದಿದ್ದ ಸ್ವಧರ್ಮ ನಿಷ್ಠೆ ಇನ್ನೂ ಅಧಿಕವಾಯಿತು. ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೂ ರಾಮನಾಮವನ್ನು ಜಪಿಸುತ್ತಿದ್ದರು. ಜೀವನದ ಕಡೆಯವರೆಗೂ ರಾಯರು ಈ ರೂಢಿಯನ್ನು ಬಿಡಲಿಲ್ಲ. ಉತ್ತಮ ಸಾಹಿತಿಗಳಾದ ಟಿ. ಎಸ್. ವೆಂಕಣ್ಣಯ್ಯ, ಎ. ಆರ್. ಕೃಷ್ಣಶಾಸ್ತ್ರಿಗಳು ಮೊದಲಾದವರ ಸಹವಾಸ ದಿಂದ ಅವರಲ್ಲಿ ಹುದುಗಿದ್ದ ಸಾಹಿತ್ಯ ರಚನಾಶಕ್ತಿ ಎಚ್ಚೆತ್ತಿತ್ತು. ಇವೆಲ್ಲದರ ಫಲವಾಗಿ ಅವರ ಲೇಖನ ಕಲೆ ಮುಂದುವರಿಯಿತು.

ಬೈಬಲ್ ಪರೀಕ್ಷೆಯಲ್ಲಿ!

ಈ ಮಧ್ಯೆ ಅವರಿಗೆ ಉಪಾಧ್ಯಾಯರ ತರಬೇತಿಯೂ ಮುಗಿಯಿತು. ಇದಾದ ಕೆಲವು ದಿನಗಳ ಮೇಲೆ, ೧೯೧೮ರಲ್ಲಿ ಮುನಿಸಿಪಲ್ ಶಾಲೆಯಿಂದ ಬಿಡುಗಡೆಹೊಂದಿ, ಆರ್.ಬಿ.ಏ.ಎನ್.ಎಮ್. ಶಾಲೆಯಲ್ಲಿ ಉದ್ಯೋಗ ಪಡೆದರು. ಈ ಶಾಲೆಯಲ್ಲಿದ್ದಾಗ ಒಂದು ಘಟನೆ ಸಂಭವಿಸಿತು. ಆ ಶಾಲೆಯಲ್ಲಿ ಕ್ರೈಸ್ತರ ಪ್ರಾಧಾನ್ಯತೆ ಇತ್ತು. ಅವರಿಗೆ ಬೈಬಲ್ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಆ ಧರ್ಮಗ್ರಂಥದಲ್ಲಿರುವ ಸತ್ವವನ್ನು ಅರಿತುಕೊಳ್ಳಲು ರಾಮರಾಯರು ಆ ಪರೀಕ್ಷೆಗೆ ಕುಳಿತರು. ಪರೀಕ್ಷೆಗೆ ಕುಳಿತ ಕ್ರೈಸ್ತರಿಗಿಂತಲೂ ಇವರು ಹೆಚ್ಚು ಅಂಕಗಳನ್ನು ಪಡೆದರು. ಆಗ ಪುಸ್ತಕ ಪ್ರಕಟಣೆಯ ಪ್ರಾರಂಭ ಸಮಯ. ಸಾಲಸೋಲದಲ್ಲಿ ತೊಳಲಾಡುತ್ತಿದ್ದರು, ತುಂಬಾ  ಕಷ್ಟದಲ್ಲಿದ್ದರು ಇದನ್ನೆಲ್ಲ ತಿಳಿದಿದ್ದ ಒಬ್ಬ ಪಾದ್ರಿ ಇವರನ್ನು ಕಂಡು ‘ಪರೀಕ್ಷೆಯಲ್ಲಿ ಕ್ರೈಸ್ತರಿಗಿಂತಲೂ ಹೆಚ್ಚು ಅಂಕಗಳನ್ನು ಪಡೆದಿದ್ದೀರಿ. ಕ್ರೈಸ್ತಮತಕ್ಕೆ ಸೇರಿಬಿಡಿ. ನಿಮ್ಮ ಬಡತನವೂ ನೀಗುತ್ತದೆ’ ಎಂದರು.

ರಾಯರು ತಮ್ಮ ಧರ್ಮ, ನಂಬಿಕೆಗಳಲ್ಲಿ ಅಚಲ ವಿಶ್ವಾಸವಿದ್ದವರು.  ಬೇರೆ ಧರ್ಮಗಳಲ್ಲಿ ಅವರಿಗೆ ಗೌರವವಿತ್ತು. ಜ್ಞಾನ ಸಂಪಾದನೆಗಾಗಿ ಆ ಗ್ರಂಥಗಳನ್ನು ಓದುತ್ತಿದ್ದರು. ಆದರೆ ಮತಾಂತರದಿಂದ ಶ್ರೀಮಂತರಾಗು ವಂತಹ  ಹೀನಚಪಲ ಅವರಿಗಿರಲಿಲ್ಲ. ಸ್ಪಷ್ಟವಾಗಿ ನೇರವಾದ ಮಾತಿನಲ್ಲಿ ಆತನಿಗೆ ಉತ್ತರಿಸಿದರು. ‘ಸ್ವಧರ್ಮೇನಿಧನಂ ಶ್ರೇಯಃ ಎಂದು ನಂಬಿರುವ ನನಗೆ ನನ್ನ ಧರ್ಮ ದೊಡ್ಡದು. ನನ್ನ ಧರ್ಮದಲ್ಲಿ ನಾನಿರುವುದರಿಂದ ನಾನೇನು ಬಡವನಾಗಿಲ್ಲ. ಹಾಗಾದರೆ ಕ್ರೈಸ್ತರಲ್ಲಿ ಎಲ್ಲರೂ ಶ್ರೀಮಂತರೇನು? ಅವರಲ್ಲಿ ಬಡವರೇ ಇಲ್ಲವೇನು?’ ಪಾದ್ರಿ ನಿರುತ್ತರಗೊಂಡರು.

೧೯೧೮ – ರಾಮರಾಯರ ಜೀವನದಲ್ಲೊಂದು ಮೈಲಿಗಲ್ಲು, ಅದೇ ವರ್ಷ ಅವರ ವಿವಾಹವು ಜರುಗಿತು. ಕಾನಕಾನಹಳ್ಳಿ ಮಧ್ವರಾಯರ ಮಗಳು ಶಕುಂತಲ ಎಂಬುವರು ಅವರ ಧರ್ಮಪತ್ನಿಯಾಗಿ, ಅವರ ಜೀವನದ ಬೆಳಕಾದರು.

ಇದಾದ ಮೂರು ತಿಂಗಳಲ್ಲೇ ಬೆಂಗಳೂರಿನಲ್ಲಿ ಇನ್‌ಫ್ಲುಯೆನ್‌ಜಾ ಎಂಬ ರೋಗ ಕಾಣಿಸಿಕೊಂಡಿತು. ಈ ಘೋರ ವ್ಯಾಧಿ ನಗರಾದ್ಯಂತ ಹರಡಿತು. ನೂರಾರು ಜನರು ಇದಕ್ಕೆ ತುತ್ತಾದರು. ಬೀದಿಗಳಲ್ಲಿ ಹೆಣಗಳ ಸಾಲೇ ಆಯಿತು. ರಾಮರಾಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಅವರ ಚಿಕ್ಕಮ್ಮ ಇದಕ್ಕೆ ಬಲಿಯಾದರು. ಸಮಾಜಕಾರ್ಯಗಳಿಗೆ ಹೆಸರಾದ ‘ಹಿತಕಾರಿಣೀ ಸಂಘ’ವು ಜನರ ಉಸ್ತುವಾರಿ ನೋಡಿಕೊಳ್ಳತೊಡಗಿತು.

ಸ್ವರಾಜ್ಯ ಚಳುವಳಿ ತೀವ್ರರೂಪ ಪಡೆಯಿತು. ಎಲ್ಲೆಲ್ಲೂ ಬ್ರಿಟಿಷರ ದಬ್ಬಾಳಿಕೆ ಮುಂದುವರೆಯಿತು. ಭಾರತೀಯರ ಮೇಲೆ ಗುಂಡಿನ ಸುರಿಮಳೆ ಸುರಿಯಿತು. ಸಾವಿರಾರು ಜನ ಹುತಾತ್ಮರಾದರು. ಇದೇ ಸಮಯದಲ್ಲಿ ’‘ಜಲಿಯನ್ ವಾಲಾಬಾಗ್’ ಘಟನೆ ಜರುಗಿತು. ಅಮೃತಸರದ ಒಂದು ಪಾರ್ಕಿನಲ್ಲಿ ಸಭೆ ಸೇರಿದ್ದ ನೂರಾರು ಜನರ ಮೇಲೆ ಸೈನಿಕರು ಗುಂಡು ಹಾರಿಸಿ ರಕ್ತಪಾತ ಮಾಡಿದರು. ರಾಮರಾಯರು ಆಂದೋಳನದಲ್ಲಿ ಧುಮುಕ ಬೇಕೆಂದು ಆಸೆಪಟ್ಟರು. ಆದರೆ ಮನೆ ತಾಪತ್ರಯ, ಮಾರಾಟವಾಗದ ಪುಸ್ತಕಗಳು, ಉಳಿದ ಜವಾಬ್ದಾರಿ ಇವುಗಳು ಅವರನ್ನು ಹಾಗೆ ಮಾಡಗೊಡಲಿಲ್ಲ. ಆದರೂ ಆ ಸಮಯದಲ್ಲಿ ‘ಮಹಾತ್ಮಗಾಂಧಿ’ ‘ಲೋಕಮಾನ್ಯ ತಿಲಕ್’, ‘ದಾದಾಭಾಯಿ ನವರೋಜಿ’ ಪುಸ್ತಕಗಳನ್ನು ಪ್ರಕಟಿಸಿದರು.

ಹೊಸ ಯೋಜನೆ

ಪುಸ್ತಕ ಪ್ರಕಟಣೆ  ನಿಧಾನಗೊಂಡಿತ್ತು. ಅದನ್ನು ಚುರುಕಾಗಿಸಲು ರಾಯರು ನಿರ್ಧರಿಸಿದರು. ಒಂದು ಯೋಜನೆಯನ್ನು ಹಾಕಿಕೊಂಡರು. ಅದರಂತೆ ಪೌರಾಣಿಕ, ಐತಿಹಾಸಿಕ  ಆಧುನಿಕ ಮಹಾಪುರುಷರ ೧೫೦ ಜನರ ಪಟ್ಟಿಯೊಂದನ್ನು ಸಿದ್ಧಗೊಳಿಸಿದರು. ಒಂದು ತಿಂಗಳಿಗೆ ಒಂದು ಪುಸ್ತಕವನ್ನು ಪ್ರಕಟಿಸಲು ಇಷ್ಟಪಟ್ಟು, ಕಾರ್ಯೋನ್ಮುಖರಾದರು. ಪ್ರತಿ ಪುಸ್ತಕಕ್ಕೆ ಎರಡು ಆಣೆಯಂತೆ, ವಾರ್ಷಿಕ ಚಂದಾ ಒಂದೂವರೆ ರೂಪಾಯಿ ಎಂದಾಯಿತು.

ಇದೊಂದು ಸಾಹಸವೆ ಆಗಿತ್ತು. ವರ್ಷಕ್ಕೆ ಹನ್ನೆರಡು ಪುಸ್ತಕಗಳನ್ನು ಬರೆದು, ಮುದ್ರಿಸಿ, ಪ್ರಕಟಿಸುವುದು ಎಂದರೆ ಸಾಮಾನ್ಯವೇ? ಪುಸ್ತಕ ರಚನೆಗೆ ಅನೇಕ ಗ್ರಂಥಗಳ ಅಧ್ಯಯನ ಮಾಡಬೇಕಾಗಿತ್ತು. ಮುದ್ರಣಾಲಯಗಳಿಗೆ ಸುತ್ತಾಡಬೇಕಾಗಿತ್ತು. ಚಂದಾದಾರ ರಿಂದ ಚಂದಾ ವಸೂಲು ಮಾಡಬೇಕಾಗಿತ್ತು. ಅಂಚೆ ಮುಖಾಂತರ ಪುಸ್ತಕಗಳ ರವಾನೆ, ಉದ್ಯೋಗ ಹಾಗೂ ಸಮಾಜ ಸೇವೆಯ ಕೆಲಸಗಳು ಹೀಗೆ ನಿರಂತರ ದುಡಿಮೆ.

ಆದರೂ ಧೈರ್ಯದಿಂದ ಸುಬೋಧ ಕುಸು ಮಾಂಜಲಿ ಗ್ರಂಥಮಾಲೆಯನ್ನು ಪ್ರಾರಂಭಿಸಿಯೇ ಬಿಟ್ಟರು. ಪ್ರಾರಂಭದಲ್ಲಿ ಯಾವ ಯಾವ ಪುಸ್ತಕಗಳನ್ನು ಪ್ರಕಟಿಸುತ್ತೇವೆಂದು ತಿಳಿಸುತ್ತಿದ್ದರು. ಅದರಂತೆ ಮೊದಲ ವರ್ಷ (೧೯೨೧) ದಲ್ಲಿ ದಮಯಂತಿ, ಭೀಷ್ಮ, ಮೊದಲಾದ ಪುಸ್ತಕಗಳು ಪ್ರಕಟವಾದವು. ಪುಸ್ತಕಗಳು ತುಂಬಾ ಜನಪ್ರಿಯವಾದವು. ಮೊದಲ ವರ್ಷ ಮುಗಿಯುತ್ತಿದ್ದಂತೆ ಎಂಟು ನೂರು ಚಂದಾದಾರರಾದರು. ಇದು ಗ್ರಂಥಮಾಲೆಗೆ ಭದ್ರ ಅಡಿಗಲ್ಲಾಯಿತು.

ಗ್ರಂಥಮಾಲೆ ಮುಂದುವರಿದಂತೆ ಅದನ್ನು ನಡೆಯಿಸಿಕೊಂಡು ಹೋಗುವುದು ಕಷ್ಟವೇ ಆಯಿತು. ಹಗಲಿರುಳೂ ಅದಕ್ಕಾಗಿ ದುಡಿಯತೊಡಗಿದರು. ಈ ಸಮಯದಲ್ಲೇ ಮತ್ತೇ ಗಾಂಧೀಜಿಯವರಿಗೆ ಶಿಕ್ಷೆ ಆಯಿತು. ರಾಮರಾಯರಿಗೆ ಉದ್ಯೋಗ ಬೇಸರ ಹುಟ್ಟಿತು. ಸ್ವತಂತ್ರ ಜೀವನ ನಡೆಸಬೇಕೆಂಬ ಬಯಕೆ ಬೃಹದಾಕಾರವಾಯಿತು. ಅದರಂತೆ ತಮ್ಮ ಅಧ್ಯಾಪಕ ವೃತ್ತಿಗೆ  ರಾಜೀನಾಮೆ ನೀಡಿದರು. ಇದೇ ಸಮಯದಲ್ಲಿ ಒಂದು ಘಟನೆ ನಡೆಯಿತು. ಒಂದು ದಿನ ಮುದ್ರಣಾಯಲದಲ್ಲಿ ಕುಳಿತಿದ್ದರು. ಮುದ್ರಣದ ತಪ್ಪೊಂದನ್ನು ಸರಿಪಡಿಸುವಂತೆ ಒತ್ತಿ ಹೇಳಿದರು. ಆದರೆ ಪ್ರೆಸ್ಸಿನಾತ ಕೋಪಗೊಂಡು ರಾಯರನ್ನು ನೆಲದ ಮೇಲೆ ತಳ್ಳಿದ. ಇದರಿಂದ ರಾಯರಿಗೆ ಅವಮಾನವಾದಂತಾಯಿತು. ಸ್ವಂತ ಮುದ್ರಣಾಲಯ ವೊಂದನ್ನು ತೆರೆಯಲು ನಿರ್ಧರಿಸಿದರು.

ಸುಬೋಧ

ಅದೇ ಸಮಯದಲ್ಲಿ ಸರ್ಕಾರದವರು ಒಟ್ಟಾಗಿ ಕೆಲವು ಪುಸ್ತಕಗಳನ್ನು ಕೊಂಡರು. ಅದರ ಹಣ ಕೈಯಲ್ಲಿತ್ತು. ಕರ್ಪೂರ ಶ್ರೀನಿವಾಸರಾಯರು ಆರು ನೂರು ರೂಪಾಯಿಗಳ ಸಾಲ ನೀಡಿದರು. ಇವುಗಳ ಸಹಾಯ ದಿಂದ ಚಾಮರಾಜಪೇಟೆ ಮೂರನೇ ಬೀದಿಯಲ್ಲಿ ಸುಬೋಧ ಮುದ್ರಣ ಹಾಗೂ ಪ್ರಕಟಣಾಲಯವನ್ನು ೧೯೨೫ರಲ್ಲಿ ತೆರೆದರು. ಅದೇ ವರ್ಷ ವಿಜಯದಶಮಿ ಯಂದು ‘ಸುಬೋಧ’ ಮಾಸಪತ್ರಿಕೆಯನ್ನು ಪ್ರಾರಂಭಿದರು.

ರಾಮರಾಯರು ಸುಬೋಧ ಕುಸುಮಾಂಜಲಿ ಮಾಲೆಯ ಪುಸ್ತಕಗಳ ಪ್ರಕಟಣೆಯನ್ನು ಮುಂದುವರಿಸಿ ೧೯೩೩ ರ ಹೊತ್ತಿಗೆ ಮುಗಿಸಿದರು. ಶ್ರೀರಾಮ ಮತ್ತು ಆಂಜನೇಯರಂತಹ ಪೌರಾಣಿಕ ವೀರರು, ಗೋಸ್ವಾಮಿ ತುಳಸೀದಾಸರು, ಸುಖುಬಾಯಿ, ಕಬೀರ್ ಮತ್ತು ನಾಮದೇವರಂತಹ ಸಂತರು, ಶ್ರೀಹರ್ಷ ಮತ್ತು ಕಂಠೀರವ ನರಸಿಂಹರಾಜ ಒಡೆಯರಂತಹ ಶ್ರೇಷ್ಠ ಮಹಾರಾಜರು, ರಾಜಾರಾಮ್ ಮೋಹನ ರಾಯ್ ಅಂತಹ ಸಮಾಜ ಸುಧಾರಕರು, ಚಿತ್ತರಂಜನ ದಾಸರಂತಹ ದೇಶಭಕ್ತರು, ಬಂಕಿಮಚಂದ್ರ ಚಟ್ಟೋಪಾಧ್ಯಾಯರಂತಹ ಸಾಹಿತಿಗಳು ಇವರೆಲ್ಲರ ಜೀವನ ಚರಿತ್ರೆಗಳಿದ್ದವು. ಗುರು ನಾನಕ್, ಮಹಮದ್ ಪೈಗಂಬರ್, ಯೇಸು ಕ್ರಿಸ್ತರಂತೆ ಹಲವು ಧರ್ಮಗಳ ಬೆಳಕುಗಳಾದ ಹಿರಿಯರ ಜೀವನ ಚರಿತ್ರೆ ಗಳಿದ್ದವು. ಬೇರೆ ದೇಶಗಳಲ್ಲಿ ಅಗಾಧ ಸೇವೆ ಸಲ್ಲಿಸಿದ ಏಬ್ರಹಂ ಲಿಂಕನ್, ಜಾರ್ಜ್ ಸ್ಟೀವನ್‌ಸನ್, ಲಿಯೋ ಟಾಲ್ಸ್‌ಟಾಯ್ – ಇಂತಹ ಧೀರರನ್ನು ಈ ಪುಸ್ತಕಗಳಲ್ಲಿ ಪರಿಚಯ ಮಾಡಿಕೊಟ್ಟರು.

ಹೀಗೆ ರಾಮರಾಯರು ಹನ್ನೆರಡು ವರ್ಷಗಳ ಕಾಲ ಬರೆದು ಪ್ರಕಟಿಸಿದ ೧೪೦ಪುಸ್ತಕಗಳನ್ನು ಭಗವದ್ಭಕ್ತರು(೨೬), ಮತೋದ್ಧಾರಕರು(೮), ಧರ್ಮೊದ್ಧಾರಕರು(೧೩), ಪೌರಾಣಿಕ ಪುರುಷರು(೨೦), ಪೌರಾಣಿಕ ಮಹಿಳೆಯರು(೧೩), ಐತಿಹಾಸಿಕ ಮಹಾಪುರುಷರು(೧೯), ಐತಿಹಾಸಿಕಮಹಿಳೆಯರು (೧೧). ಆಧುನಿಕ ಮಹಾಪುರುಷರು (೧೭), ವಿದೇಶಿಯ ಮಹಾಪುರುಷರ(೧೩) ಪುಸ್ತಕಗಳು ಎಂಬುದಾಗಿ ವಿಭಾಗಿಸಬಹುದು.

ಪುಸ್ತಕಗಳ ಜನಪ್ರಿಯತೆ

ಕಿರಿಯರಿಗಾಗಿಯೆ ಅಲ್ಲದೆ ಹಿರಿಯರಿಗಾಗಿಯೂ ಅವರು ಅನೇಕ ಗ್ರಂಥಗಳನ್ನು ಬರೆದರು. ಹರಿದಾಸರುಗಳ ಕೀರ್ತನೆಗಳನ್ನು ಸಂಗ್ರಹಿಸಿ ‘ಹರಿದಾಸ ಕೀರ್ತನ ತರಂಗಿಣಿ’ ಮಾಲೆಯಲ್ಲಿ ಪ್ರಕಟಿಸಿದರು.

ರಾಮರಾಯರ ಮಕ್ಕಳ ಪುಸ್ತಕಗಳಂತೂ ತುಂಬಾ ಜನಪ್ರಿಯವಾದವು. ಸಾಮಾನ್ಯ ಜನರೆ ಅಲ್ಲದೆ ಅರಮನೆ, ಗುರುಮನೆಗಳೂ ಕೂಡ ಮೆಚ್ಚಿದವು. ಎಲ್ಲ ಮತಸ್ಥರಿಗೂ ಅವು ಇಷ್ಟವಾದುವು. ಬೆಂಗಳೂರಿನಲ್ಲಿ ಸೈನ್ಯದಲ್ಲಿದ್ದ ಸಿಕ್ ಮತಸ್ಥರು ಗುರು ಗೋವಿಂದ ಸಿಂಗ್ ಮತ್ತು ಸಿಖ್ ಧರ್ಮವೀರರು ಎಂಬ ಪುಸ್ತಕಗಳನ್ನು ಓದಿಸಿ, ಆನಂದ ಗೊಂಡರು. ರಾಮರಾಯರನ್ನೇ ತಮ್ಮೊಂದಿಗೆ ಕರೆದೊಯ್ದು, ಸಭೆಗಳಲ್ಲಿ ಉಪನ್ಯಾಸ ಮಾಡಿಸಿದರು, ಈ ಮಕ್ಕಳ ಪುಸ್ತಕಗಳು ಭಾರತದಲ್ಲೇ ಅಲ್ಲದೆ ಬ್ರಿಟನ್, ಪೂರ್ವ ಆಫ್ರಿಕಾ, ಬರ್ಮ ಇತ್ಯಾದಿ ವಿದೇಶಗಳಲ್ಲೂ ಖ್ಯಾತಿ ಪಡೆದವು.

ಪ್ರಾಮಾಣಿಕತೆ  

ಪುಸ್ತಕಗಳೇನೋ ವ್ಯಾಪಾರವಾಗುತ್ತಿದ್ದವು, ಹಣವೂ ಬರುತ್ತಿತ್ತು. ಆದರೆ ಅಷ್ಟೇ ಖರ್ಚಾಗುತ್ತಿತ್ತು. ಯಾರಾದರೂ ಹಾಡಿ ಹೊಗಳಿದರೆ ‘ಕೃಷ್ಣಾರ್ಪಣ’ ಎಂದು ದಾಸರ ಕೀರ್ತನೆಗಳ ಪುಸ್ತಕವನ್ನು ಅವರಿಗೆ ದಾನ ಮಾಡುತ್ತಿದ್ದರು. ಇವರ ಮುದ್ರಣಾಲಯದಲ್ಲಿ ಪುಸ್ತಕ ಗಳನ್ನು ಮುದ್ರಿಸಿಕೊಳ್ಳಲು ಬರುವ ವ್ಯಕ್ತಿಗಳಿಗೆ ಇವರ ಮನೆಯಲ್ಲೇ ಊಟ, ನಿವಾಸದ ವ್ಯವಸ್ಥೆ. ಹಗಲು ರಾತ್ರಿ ಬಂದು ಹೋಗುವ ಅತಿಥಿಗಳು ಇದ್ದೇ ಇರುತ್ತಿದ್ದರು. ಹೀಗಾಗಿ ಆ ಮನೆ ಒಂದು ಧರ್ಮಛತ್ರದಂತೆ ಕಾಣುತ್ತಿತ್ತು. ಇದರಿಂದ ಬಂದ ಹಣ ಸಾಕಾಗುತ್ತಿರಲಿಲ್ಲ. ಆಗಾಗ್ಗೆ ಸಾಲ ಮಾಡಬೇಕಾಗುತ್ತಿತ್ತು. ಇವುಗಳೊಂದಿಗೆ ಶ್ರೀ ರಾಮಾಯಣ ಕಥಾಸಾರ, ಶ್ರೀಮದ್ಭಾಗವತ ಕಥಾಸಾರ ಮತ್ತು ಶ್ರೀಮನ್ಮಹಾಭಾರತ ಕಥಾಸಾರ ಇತ್ಯಾದಿ ಬೃಹತ್ ಪುಸ್ತಕಗಳನ್ನು ಪ್ರಕಟಿಸಿದರು. ಅವು ನಿರೀಕ್ಷಿಸಿದ್ದ ಮಟ್ಟದಲ್ಲಿ ಖರ್ಚಾಗಿರಲಿಲ್ಲ. ರಾಯರ ಆರ್ಥಿಕ ಪರಿಸ್ಥಿತಿಯ ಮೇಲೂ ಇದು ಒಂದು ರೀತಿ ಪೆಟ್ಟು ಕೊಟ್ಟಿತು.

ಇವರ ಪುಸ್ತಕ ‘ಮೈಸೂರಿನ ರಾಜ್ಯಲಕ್ಷ್ಮಿಯರು’ ೧೯೪೨ ರಲ್ಲಿ ಎಲ್. ಎಸ್. ಪರೀಕ್ಷೆಗೆ ಪಠ್ಯ ಪುಸ್ತಕವಾಗಿತ್ತು. ಅದರಿಂದ ಸಾಕಷ್ಟು ಹಣವೂ ಬಂದಿತ್ತು. ಆ ಹಣದಿಂದ ಸ್ವಂತ ಮನೆಯೊಂದನ್ನು ಮಾಡಿಕೊಳ್ಳುವಂತೆ ಮಿತ್ರರು ಬಲವಂತ ಪಡಿಸಿದರು. ಆದರೆ  ರಾಯರು ಆ ಮಾತಿಗೆ  ಕಿವಿಗೊಡಲಿಲ್ಲ. ಹಣವನ್ನು ತೆಗೆದುಕೊಂಡು, ಸಾಲಗಾರರ ಮನೆಗಳಿಗೆ ಹೋಗಿ ಅವರ ಸಾಲವನ್ನು ಹಿಂತಿರುಗಿಸಿದರು.

ಸೇವೆಯ ಹಲವು ಮುಖಗಳು

೧೯೩೩ ರಲ್ಲಿ ಮಾಧ್ವ ಸಂಘವನ್ನು ಸ್ಥಾಪಿಸಿದ ವರಲ್ಲಿ ರಾಮರಾಯರು ಪ್ರಮುಖರು. ಇಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಅಂತೆಯೇ ೧೯೪೫ ರಲ್ಲಿ ‘ಮಾಧ್ವಯುವಕ ಸಂಘ’ ವನ್ನು ಸ್ಥಾಪಿಸಿದರು. ಓದುವಾಗ ತಾವು ಅನುಭವಿಸಿದ ಕಷ್ಟಗಳನ್ನು ನೆನೆಸಿ ಕೊಂಡು ಇದರ ಆಶ್ರಯದಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ತೆರೆದರು. ಮನೆ ಮನೆ ತಿರುಗಿ ಹಿಡಿ ಭಿಕ್ಷೆ ಎತ್ತಿ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡಿ ಈ ಸಂಸ್ಥೆಯನ್ನು ನಡೆಸಿದರು (ಇಂದಿಗೂ ಬೆಂಗಳೂರಿನ ಬಸವನಗುಡಿಯಲ್ಲಿ ಈ ಸಂಸ್ಥೆಯು ನಡೆಯುತ್ತಿದೆ) ಜನರಿಂದ ಚಂದಾ ಸಂಗ್ರಹಿಸುತ್ತಿದ್ದರು. ಎಷ್ಟೋ ಬಾರಿ ನಿಲಯದ ವೆಚ್ಚ ಭರಿಸುವುದು ಕಷ್ಟವಾದಾಗ ಸ್ವತಃ ತಾವೇ ಉಪವಾಸವಿದ್ದು, ತಮ್ಮ ಊಟದ ಖರ್ಚಿನಷ್ಟು ಹಣವನ್ನು ನಿಲಯಕ್ಕೆ ನೀಡುತ್ತಿದ್ದರು. ನಿಲಯದ ವಿದ್ಯಾರ್ಥಿಗಳು ಆದರ್ಶರಾಗ ಬೇಕೆಂದು ‘ಸತ್ಪಂಥ’ ಎಂಬ ಸಂಘವನ್ನು ಸ್ಥಾಪಿಸಿ, ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇದೇ ಹೆಸರಿನ ಮಾಸಪತ್ರಿಕೆಯೊಂದನ್ನು  ನಡೆಸಿದರು. ಅಂತೆಯೇ ‘ಮಕ್ಕಳ ಕೂಟ’ದ ಸದಸ್ಯರೂ ಆಗಿದ್ದರು. ಈ ಮಧ್ಯೆ ‘ನಗುವ ನಂದ’ ಎಂಬ ನಗೆ ಮಾಸಪತ್ರಿಕೆಯನ್ನೂ ನಡೆಸಿದರು.

ಈ ರೀತಿ ರಾಮರಾಯರು ಅನೇಕ ಸಂಘ, ಪತ್ರಿಕೆಗಳ ಮುಖಾಂತರ ನಿರ್ವಂಚನೆಯ ಸಮಾಜ ಸೇವೆ ಮಾಡಿದರು.

೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಬೆಂಗಳೂರು ನಗರಸಭೆ ರೂಪುಗೊಂಡಿತು. ೧೯೪೮ ರಲ್ಲಿ ಮೊಟ್ಟಮೊದಲ ಬಾರಿಗೆ ಚುನಾವಣೆಗಾಗಿ ಸಿದ್ಧತೆಗಳು ಆಗತೊಡಗಿದವು. ಕಾಂಗ್ರೆಸ್ ಪರವಾಗಿ ನಿಲ್ಲುವಂತೆ ರಾಮರಾಯರನ್ನು ಪ್ರಾರ್ಥಿಸಲಾಯಿತು. ಮೊದಲು ಅವರು ಒಪ್ಪಲಿಲ್ಲ. ಬಲವಂತದಿಂದ ಚುನಾವಣೆಗೆ ನಿಂತರು. ಇದನ್ನು ತಿಳಿದ ಉಳಿದ ಉಮೇದುವಾರರು ತಮ್ಮ ನಾಮಪತ್ರಗಳನ್ನು ವಾಪಾಸುಪಡೆದರು. ಅವಿರೋಧವಾಗಿ ರಾಯರು ಚಾಮರಾಜಪೇಟೆ ಕ್ಷೇತ್ರದಿಂದ ಚುನಾಯಿತ ರಾದರು. ೧೯೫೧ ರವರೆಗೆ ನಗರಸಭೆಯ ಸದಸ್ಯರಾಗಿ ಅನೇಕ ಸಮಾಜಸೇವಾ ಕಾರ್ಯಗಳನ್ನು ನಡೆಸಿದರು. ಪತ್ರಿಕೋದ್ಯಮಿಗಳಿಗಾಗಿ ಬೆಂಗಳೂರಿನಲ್ಲಿ ಒಂದು ಕಾಲೋನಿ ಸ್ಥಾಪಿತವಾಗಲು ಅವರು ಶ್ರಮಿಸಿದರು. ಎಲ್ಲ  ಪತ್ರಿಕೋದ್ಯಮಿಗಳಿಗೂ ನಿವೇಶನಗಳು ದೊರಕಿದವು. ಪತ್ರಿಕೋದ್ಯಮಿ ಯಾದರೂ ರಾಯರು ನಿವೇಶನಕ್ಕಾಗಿ ಅರ್ಜಿ ಹಾಕಲಿಲ್ಲ. ಹಾಕುವುದೂ ಇಲ್ಲ ಎಂದರು. ಆದರೆ ನಗರಸಭೆಯವರು ಬಲವಂತದಿಂದ ಒಂದು ನಿವೇಶನ ವನ್ನು ನೀಡಿದರು. ಇದು ಅವರ ನಿಸ್ಪೃಹತೆಗೆ ಸಾಕ್ಷಿಯಾಗಿದೆ. ಮತ್ತೆ ಅವರು ಚುನಾವಣೆಗೆ ನಿಲ್ಲಲಿಲ್ಲ. ಬೇಡವೆಂದು ನಿರಾಕರಿಸಿದರು.

ವ್ಯಕ್ತಿತ್ವ

ಮುಂದೆ ತಮ್ಮ ಜೀವನವನ್ನು  ಬರವಣಿಗೆ, ಮಧ್ವ ಸಂಘಗಳಿಗೆ ಮೀಸಲಾಗಿರಿಸಿದರು. ಅವರಿಗೆ ಬರ ವಣಿಗೆಯು ಒಂದು ತಪಸ್ಸು ಇದ್ದಂತೆ. ಅನೇಕ ಧಾರ್ಮಿಕ ಗ್ರಂಥ ಗಳನ್ನು ಬರೆದರು, ಸಂಪಾದಿಸಿದರು. ಸತ್ಯ,  ನಿಷ್ಠೆ ಗಳಿಂದ ತಮ್ಮ ಸಾತ್ವಿಕ ಜೀವನವನ್ನು ನಡೆಸಿದರು. ಅವರದು ಕೋಮಲ ಸ್ವಭಾವವಾಗಿತ್ತು.

೧೯೨೧ನೇ ವರ್ಷ ಮಹಾತ್ಮಾಗಾಂಧಿ ವರ್ಷ ದಸ್ತಗಿರಿಯಾದರು. ಭಾರತೀಯರು ದುಃಖಗೊಂಡರು. ದೇಶಸೇವೆಗಾಗಿ ಒಬ್ಬೊಬ್ಬರು ಒಂದೊಂದು ಚಟ ಬಿಡಬೇಕೆಂದು ಮಿತ್ರರು ತೀರ್ಮಾನಿಸಿದರು. ಶಿವಮೊಗ್ಗ, ಹೊನ್ನಾಳಿಯಲ್ಲಿ ಬೆಳೆದ ರಾಯರಿಗೆ ಕಾಫಿ ಎಂದರೆ ಪಂಚಪ್ರಾಣ. ಅದನ್ನೇ ತ್ಯಾಗ ಮಾಡಿದರು. ಸಾಯುವ ತನಕ ಮರೆತೂ ಅದನ್ನು ಸೇವಿಸಲಿಲ್ಲ.

ಪೂಜೆ ಮಾಡುವ ಗೋವಿನ ಚರ್ಮದಿಂದ ‘ಹಿಂದೂಗಳು ಚಪ್ಪಲಿ ಮಾಡಿಸಿಕೊಳ್ಳುವರು’ ಎಂದು ಒಮ್ಮೆ ಗಾಂಧೀಜಿಯವರು ತಿಳಿಸಿದರು. ಅವರ ಮನ ಕಲಕಿತು. ಚಪ್ಪಲಿ ಹಾಕುವುದನ್ನೇ ಬಿಟ್ಟುಬಿಟ್ಟರು. ಟಾರ್ ರಸ್ತೆಯಲ್ಲಿ ತುಂಬು ಬಿಸಿಲಿನಲ್ಲೂ ಬರಿಗಾಲಲ್ಲೇ ನಡೆಯುತ್ತಿದ್ದರು. ಮಿತ್ರರೊಬ್ಬರು ಬಲವಂತದಿಂದ ರಬ್ಬರ್ ಚಪ್ಪಲಿಯನ್ನು ಧರಿಸುವಂತೆ ಮಾಡಿದರಂತೆ.

೧೯೬೭ರಲ್ಲಿ ಅಖಿಲ ಭಾರತ ಮಾಧ್ವ ಮಂಡಲಿಯು ಅವರನ್ನು ಸನ್ಮಾನಿಸಿತು. ‘ಸಮಾಜ ಭೂಷಣ’ ಎಂಬ ಬಿರುದನ್ನು ನೀಡಿತು. ಕನ್ನಡ ಸಾಹಿತ್ಯ ಪರಿಷತ್ತೂ ಅದೇ ವರ್ಷ ಅವರನ್ನು ಸನ್ಮಾನಿಸಿತು ಮತ್ತೊಂದು ಸನ್ಮಾನ ಸಭೆಯು ಅವರನ್ನು ‘ಜ್ಞಾನ ಶಿಲ್ಪಿ’ ಎಂದು ಗೌರವಿಸಿತು.

‘ಸಂತರ ಜೀವನ ಸಾವಿನಲ್ಲಿ ನೋಡು’ ಎನ್ನುವ ಗಾದೆ. ರಾಯರ ಜೀವನದಲ್ಲಿ ನಿಜವಾಯಿತು. ಎಂಬತ್ತು ವರ್ಷಗಳಾಗಿದ್ದರೂ ಅವರ ನಿಯಮದ ಜೀವನ ತಪ್ಪಿರಲಿಲ್ಲ. ೧೯೭೦ ರ ಮಾರ್ಚ ೧೯ ರಂದು ಹಿಂದಿನ ದಿನ ಏಕಾದಶಿ ಮಾಡಿ ಉಪವಾಸವಿದ್ದರು. ‘ಸಂಕಟ ವಾಗುತ್ತಿದೆ, ನಿಧಾನವಾಗಿ ಏಳುತ್ತೇನೆ’ ಎಂದರು. ದ್ವಾದಶಿ ಪಾರಣೆ ಅಲ್ಲವೆ ಅಂದು. ಅದರಿಂದ ಎಲ್ಲರದೂ ಊಟ ಮುಗಿಸುವಂತೆ ತಿಳಿಸಿದರು. ಅನಂತರ ಮಕ್ಕಳು, ಸೊಸೆಯರು, ಮೊಮ್ಮಕ್ಕಳನ್ನೆಲ್ಲ ಸುತ್ತಲೂ ಕುಳ್ಳಿರಿಸಿದರು. ‘ಶುದ್ಧ ಬ್ರಹ್ಮ ಪರಾತ್ಪರ ರಾಮ’ ಭಜನೆ ಮಾಡಿ ಎಂದರು. ಭಜನೆ ಮುಂದುವರಿಯಿತು. ‘ಗಂಗೆ ತೆಗೆದುಕೊಂಡು ಬಾ’ ಎಂದು ಹಿರಿಯ ಮಗನಿಗೆ ಹೇಳಿದರು. ಆತ ಗಂಗಾ ಜಲವನ್ನು ತಂದು, ತಂದೆಯ ಬಾಯಿಯಲ್ಲಿ ಹಾಕಿದ ಆತನ ತಲೆಯ ಮೇಲೆ ಕೈ ಇಟ್ಟು ಆಶೀರ್ವದಿಸಿದರು. ದೇವರು ನಿಮ್ಮನ್ನೆಲ್ಲ ಕಾಪಾಡಲಿ ಎಂದು ಎಲ್ಲರನ್ನೂ ಹರಸಿದರು. ಬಾಯಲ್ಲಿ ರಾಮನಾಮ ಜಪಿಸತೊಡಗಿದರು. ಸ್ವಲ್ಪ ಹೊತ್ತಿನ ನಂತರ ಅವರ ಪ್ರಾಣಪಕ್ಷಿ ಹಾರಿ ಹೋಯಿತು.

ಮುಡಿಪಾದ ಜೀವನ

ಇದು ರಾಮರಾಯರ ಸುಬೋಧಮಯ ಜೀವನ. ಅವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಸಸಿಯನ್ನು ನೆಟ್ಟರು. ಬೆಳೆಸಿದರು. ಅದು ಇಂದು ವೃಕ್ಷರೂಪವಾಗಿದೆ. ಅನೇಕ ರೆಂಬೆಗಳು, ಬಿಳಲುಗಳು ಹೊರಬಂದಿವೆ.

ರಾಮರಾಯರು ಪುಸ್ತಕಗಳನ್ನು ಬರೆದು ಪ್ರಕಟಿಸಲು ಪ್ರಾರಂಭಿಸಿದಾಗ ಕನ್ನಡದಲ್ಲಿ ಓದಬೇಕೆಂದು ಆಸೆಪಟ್ಟವರಿಗೆ ಪುಸ್ತಕಗಳು ಸಿಕ್ಕುವುದೇ ಕಷ್ಟವಾಗಿತ್ತು.  ಇವತ್ತು ಓದಬೇಕೆಂದರೆ ನೂರಾರು ಕಾದಂಬರಿಗಳೂ, ಕಥೆ ಪುಸ್ತಕಗಳೂ, ಇತರ ಪುಸ್ತಕಗಳೂ ಸುಲಭವಾಗಿ ಸಿಕ್ಕುತ್ತವೆ ಅಲ್ಲವೆ? ೧೯೧೭ ರ ಹೊತ್ತಿಗೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಕೆಲವು ಕಾದಂಬರಿಗಳನ್ನು ಬಿಟ್ಟರೆ ಕನ್ನಡದಲ್ಲಿ ಅಚ್ಚಾಗಿದ್ದದು ಮೂರು ನಾಲ್ಕು ಕಾದಂಬರಿ ಗಳಷ್ಟೇ! ಅಕ್ಷರ ಬಲ್ಲವರು ಕಡಿಮೆ, ಆಗ ರೈಲು ಬಸ್ಸು ಲಾರಿಗಳ ಓಡಾಟ ಇಷ್ಟಿರಲಿಲ್ಲ. ಆದುದರಿಂದ ಪುಸ್ತಕಗಳು ಕನ್ನಡ ನಾಡಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗುವುದು, ಮಾರಾಟವಾಗುವುದು ಕಷ್ಟ. ಈಗಿನಂತೆ ಗ್ರಂಥಾಲಯಗಳಿರಲಿಲ್ಲ. ಹೀಗಾಗಿ ಒಂದು ಪುಸ್ತಕದ ಐದುನೂರು ಪ್ರತಿ ಅಚ್ಚುಮಾಡಿದರೆ ನಾಲ್ಕೈದು ವರ್ಷಗಳಲ್ಲಿ ಅಷ್ಟು ಮಾರಾಟವಾಗುವುದು ವಿರಳ. ಹೀಗಾಗಿ ಪುಸ್ತಕ ಅಚ್ಚು ಮಾಡಿ ಪ್ರಕಟಿಸಲು ಹೆಚ್ಚು ಜನಕ್ಕೆ ಧೈರ್ಯ ಬರುತ್ತಿರಲಿಲ್ಲ. ಮಕ್ಕಳಿಗಾಗಿಯೇ ಬರೆದ ಪುಸ್ತಕಗಳು ಇರಲೇ ಇಲ್ಲ ಎನ್ನಬೇಕು. ರಾಮರಾಯರು ಬಡತನ ದಲ್ಲಿಯೇ ಬಹುಕಾಲ ಬಾಳಿದರು. ಹಲವಾರು ಕಷ್ಟಗಳನ್ನು ಅನುಭವಿಸಿದರು. ಆದರೂ ಧೈರ್ಯ ಮಾಡಿ ಮಕ್ಕಳಿಗಾಗಿ, ದೊಡ್ಡವರಿಗಾಗಿ ಪುಸ್ತಕಗಳನ್ನು ಬರೆದರು, ಪ್ರಕಟಿಸಿದರು, ಸಾಲ ಸೋಲವಾಯಿತು, ಪುಸ್ತಕಗಳು ಮಾರಾಟವಾಗಲಿಲ್ಲ. ಅವರದು ದೊಡ್ಡ ಸಂಸಾರ. ಅವರ ಹೊಣೆ ಹೆಚ್ಚಾದದ್ದು, ಆದರೂ ಅವರು ಹೆದರಲಿಲ್ಲ. ಕನ್ನಡದ ಕೆಲಸವನ್ನು ಮುಂದುವರಿಸಿದರು. ಶುಭ್ರ ಜೀವನ, ಸರಸ್ವತಿಯ ಸೇವೆ, ಕನ್ನಡ ನಾಡಿನ ಸೇವೆ ಇವುಗಳಿಂದ ಬಾಳನ್ನು ಸಾರ್ಥಕ ಮಾಡಿಕೊಂಡರು.