(ಕ್ರಿ.ಶ. ೧೯೧೦) (ಶೆತಕುಬ್ಜ ಸಿದ್ಧಾಂತ)

ಡಾ. ಸುಬ್ರಮಣ್ಯಮ್ ಚಂದ್ರಶೇಖರ್ ಮದರಾಸಿನವರು. ಈಗ ಅಮೇರಿಕದಲ್ಲಿ ನೆಲೆಸಿ ಅಂತರರಾಷ್ಟ್ರೀಯ ಖ್ಯಾತಿಗಳಿಸಿರುವ ಭೌತ ವಿಜ್ಞಾನಿಗಳಲ್ಲಿ ಒಬ್ಬರು. ಅವರು ಅಕ್ಟೋಬರ್ ೧೯, ೧೯೧೦ರಂದು ಜನಿಸಿದರು. ಅವರ ವಿಶ್ವವಿದ್ಯಾಲಯದವರೆಗಿನ ಶಿಕ್ಷಣ ಮದರಾಸಿನಲ್ಲೇ ಆಯಿತು. ಮುಂದೆ ಕೆಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಹೋಗಿ ಡಾಕ್ಟರೇಟ್‌ಗಾಗಿ ವ್ಯಾಸಂಗ ಮಾಡಿದರು. ಡಾಕ್ಟರೇಟ ಪದವಿ ಪಡೆದ ನಂತರ ಟ್ರಿನಿಟಿ ಕಾಲೇಜಿನ ಫೆಲೊ ಆಗಿ ಸೇವೆ ಸಲ್ಲಿಸತೊಡಗಿದರು. ಅವರು ತಮ್ಮ ಭೌತ ಶಾಸ್ತ್ರೀಯ ಸಂಶೋಧನೆಗಾಗಿ ೧೯೮೩ರಲ್ಲಿ ನೊಬೆಲ್ ಪಾರಿತೋಷಕ ಪಡೆದರು.

‘ಚಂದ್ರಶೇಖರ್ ಮಿತಿ’ ಮತ್ತು ‘ಕಪ್ಪು ರಂಧ್ರಗಳು’ ಎಂಬ ಪದಗಳು ಈಗಾಗಲೇ ಭೌತ ವಿಜ್ಞಾನದ ನಿಘಂಟುಗಳಲ್ಲಿ ಸ್ಥಾನ ಪಡೆದಿವೆ. ‘ಚಂದ್ರಶೇಖರ್ ಮಿತಿ’ ಎಂಬುದು ಏನು? ಅತ್ಯಂತ ದಟ್ಟವಾದ ಸಾಂದ್ರತೆಯುಳ್ಳ ಶೆತಕುಬ್ಜ ನಕ್ಷತ್ರಗಳು ಆಕಾಶದಲ್ಲಿವೆ. ಇಂಥ ನಕ್ಷತ್ರಗಳ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ ೧.೪೪ಪಟ್ಟಿಗಿಂತ ಅಧಿಕವಾಗಿಲ್ಲ ಎಂಬ ನಿಗಮನಕ್ಕೆ ಬರಲಾಗಿದೆ. ಇದನ್ನೇ ‘ಚಂದ್ರಶೇಖರ್ ಮಿತಿ’ (ಚಂದ್ರಶೇಖರ್ ಲಿಮಿಟ್) ಎಂದು ಕರೆಯುತ್ತಾರೆ. ಇದು ಭೌತ ವಿಜ್ಞಾನಕ್ಕೆ ಚಂದ್ರ ಶೇಖರ್ ರ ಬಹುದೊಡ್ಡ ಕೊಡುಗೆ. ಪರಮ ಭಾರದ ಆಕಾಶಸ್ಥ ಕಾಯಗಳನ್ನು ‘ಕಪ್ಪು ರಂಧ್ರಗಳು’ ಎಂದು ಕರೆಯುತ್ತಾರೆ. ಇವುಗಳ ರಚನೆ ಬಗ್ಗೆ ಕೂಡ ಚಂದ್ರಶೇಖರ್ ಸಂಶೋಧನೆ ಮಾಡಿದ್ದಾರೆ.

ಯಾವುದೇ ನಕ್ಷತ್ರದ ದ್ರವ್ಯರಾಶಿ ಮಿತಿಯನ್ನು ಮೀರಿದಾಗ, ಅದು ಸ್ಫೋಟಗೊಂಡು ಅತ್ಯಂತ ಉಜ್ವಲವಾಗಿ ಹೊಳೆಯುತ್ತದೆ. ಅದು ತನ್ನ ಮಿತಿಗೆ ಮೀರಿದ ದ್ರವ್ಯವನ್ನು ಹೊರಚೆಲ್ಲಿ ಶ್ವೇತಕುಬ್ಜವಾಗುವುವೆಂಬುದನ್ನು ಚಂದ್ರಶೇಖರ್ ಸಮರ್ಥಿಸಿದ್ದಾರೆ. ಸ್ಫೋಟಗೊಂಡು ಪ್ರಕಾಶಮಾನವಾಗಿ ಬೆಳಗುವ ನಕ್ಷತ್ರವನ್ನು ‘ಸೂಪರ್ನೊವಾ’ ಎಂದು ಕರೆಯುತ್ತಾರೆ.

ಈಗ ಅವರು ‘ಕಪ್ಪು ರಂಧ್ರಗಳು’ ಎಂದು ಕರೆಯಲಾಗುವ ಆಕಾಶಸ್ಥ ಕಾಯಗಳ ಬಗ್ಗೆ ತಮ್ಮ ಸಂಶೋಧನಾ ಕಾರ್ಯವನ್ನು ಮುಂದುವರಿಸಿದ್ದಾರೆ.