೧೯೩೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಗೋಕರ್ಣದಲ್ಲಿ ಸುಸಂಸ್ಕೃತ ವೈದಿಕ ಮನೆತನದಲ್ಲಿ ಜನಿಸಿದರು ಶ್ರೀ ಸುಬ್ರಮಣ್ಯ ಮಹಾಬಲೇಶ್ವರ ಭಟ್, ತಂದೆ ಸಂಸ್ಕೃತ ಪಂಡಿತರು, ಉತ್ತಮ ಕೀರ್ತನಕಾರರು ಮತ್ತು ಶ್ರೇಷ್ಠ ನಟರು. ತಾಯಿಯವರೂ ಕೂಡ ದೇವರನಾಮ ಮತ್ತು ಹವ್ಯಕ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಸಿರ್ಸಿಯ ಶಾರದಾ ಸಂಗೀತ ಶಾಲೆಯಲ್ಲಿ ಭಟ್ಟರಿಗೆ ಶ್ರೀ ಗಣಪತಿ ಮಾಸ್ತರರಿಂದ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ ದೊರೆಯಿತು. ನಂತರ ಶ್ರೀ ಚಂದ್ರಶೇಖರ ಪುರಾಣಿಕ ಮಠ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದು, ಸಂಗೀತ ವಿಶಾರದ ಪದವಿಯನ್ನು ಪ್ರಥಮ ಶ್ರೇಣಿಯನ್ನು ಪಡೆದುಕೊಂಡರು. ಮುಂದೆ ಶ್ರೀ ಎಸ್.ಪಿ. ವರ್ಣೀಕರ್ ಅವರಿಂದ ತಬಲಾ ವಾದನದಲ್ಲೂ ಶಿಕ್ಷಣ ಪಡೆದರು.

ಆಸಕ್ತರಿಗೆ ಗಾಯನ ಮತ್ತು ತಬಲಾಗಳಲ್ಲಿ ಶಿಕ್ಷಣ ನೀಡುವುದರಲ್ಲಿ ಬಹಳ ಆಸಕ್ತಿ ವಹಿಸಿದ ಮಹಾಬಲೇಶ್ವರ ಭಟ್ಟರು ಸುಮಾರು ಮೂರು ದಶಕಗಳ ಕಾಲ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಗೀತ ಶಿಕ್ಷಣ ಪಡೆದ ಗಾಯಕರು ಮತ್ತು ತಬಲಾ ವಾದಕರು ಇಂದು ಮಾಧ್ಯಮದಲ್ಲಿ ಬಹಳ ಹೆಸರು ಮಾಡಿದ್ದಾರೆ. ಪಂ. ಪರಮೇಶ್ವರ ಹೆಗಡೆ, ಪಾರ್ವತಿ ಹೆಗಡೆ, ನಾಗವೇಣಿ ಹೆಗಡೆ, ಶಾರದಾ ಭಟ್ (ಗಾಯನ), ಎನ್.ಎಸ್.ಹೆಗಡೆ, ಜಿ.ಕೆ. ಹೆಗಡೆ ಹರಕೇರಿ, ಗೋಪಾಲಕೃಷ್ಣಹೆಗಡೆ ಕಲಭಾಗ (ತಬಲಾ) ಮುಂತಾದವರನ್ನು ಇಲ್ಲಿ ಹೆಸರಿಸಬಹುದು.

ಎಪ್ಪತ್ತೊಂದರ ಈ ಇಳಿ ವಯಸ್ಸಿನಲ್ಲೂ ಆಸಕ್ತಿಯಿಂದ ಸಂಗೀತ ಸೇವೆ ಮಾಡುತ್ತಿರುವ ಶ್ರೀ ಸುಬ್ರಹ್ಮಣ್ಯ ಮಹಾಬಲೇಶ್ವರ ಭಟ್ ಅವರಿಗೆ ೨೦೦೬-೦೭ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನಿತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.