ಹುಡುಗನಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯವರು ಅಪ್ಪಣೆ ಕೊಡಲ್ಲಿ. ಹುಡುಗ ಊರಿಗೆ ಹಿಂದಕ್ಕೆ ಬಂದ. ಅವನಿಗೆ ಹದಿನೈದು ವರ್ಷ.

ಊರಿನ ಅರಸನಿಗೆ ಹುಡುಗನಲ್ಲಿ ಅಭಿಮಾನ. ಇದನ್ನು ಕಂಡು ಹಲವರಿಗೆ ಹೊಟ್ಟೆಕಿಚ್ಚು.

ಹುಡುಗ ಪರೀಕ್ಷೆಗೆ ಕುಳಿತುಕೊಳ್ಳುವ ಹಾಗಿಲ್ಲ ಎಂಬುದು ಇವರಿಗೆ ಸಂತೋಷದ ವಿಷಯ. ಅವರಲ್ಲಿ ಒಬ್ಬ, ರಾಜನ ಆಸ್ಥಾನದವನು. ಹುಡುಗನನ್ನು ಹಾಸ್ಯ ಮಾಡಿದ.

ಹುಡುಗನಿಗೆ ರೇಗಿತು. “ನೀನು ಅಷ್ಟು ಬುದ್ಧಿವಂತನಾದರೆ ವಾದದಲ್ಲಿ ನನ್ನನ್ನು ಸೋಲಿಸು ನೋಡೋಣ” ಎಂದ.

ರಾಜನ ಆಸ್ಥಾನದಲ್ಲಿಯೇ ವಾದ ಏರ್ಪಾಟಾಯಿತು. ವಿಷಯ: “ವಿದ್ಯಾಭ್ಯಾಸ”. ರಾಜನ ಸಮ್ಮುಖದಲ್ಲಿ ಚರ್ಚೆ. ಹುಡುಗನ ವಿರೋಧಿಯ ಪರವಾಗಿ ವಿದ್ವಾಂಸರೊಬ್ಬರು ಚರ್ಚೆಯನ್ನು ಪ್ರಾರಂಭ ಮಾಡಿದರು. ಹುಡುಗ ಎದ್ದು ನಿಂತು ಮಾತನಾಡಿದ. ವಾದವೆಲ್ಲ ತಲೆದೂಗಿಸುವಂತೆ; ತಡೆಯಿಲ್ಲದ ಮಾತಿನ ಧಾರೆ; ಸೊಗಸಾದ ಶಬ್ದಗಳ ಆಯ್ಕೆ: ಮಧ್ಯೆ ಮಧ್ಯೆ ಹಾಸ್ಯದ ಮಿಂಚು.

ಕೇಳಿದವರು ಬೆರಗಾದರು.

ಹಿರಿಯ ವಿದ್ವಾಂಸರೊಬ್ಬನು ಹುಡುಗನ ಅಸಾಧಾರಣ ಬುದ್ಧಿಯನ್ನು ಹೊಗಳಿ, ಅವನನ್ನು “ಭಾರತಿ” ಎಂದು ಕರೆದರು. (“ಭಾರತಿ” ಸರಸ್ವತಿದೇವಿಯ ಹೆಸರುಗಳಲ್ಲಿ ಒಂದು.) ಎಲ್ಲದೂ “ಸುಬ್ಬಯ್ಯ” ಎಂದು ಕರೆಯುತ್ತಿದ್ದ ಹುಡುಗ ಅಂದಿನಿಂದ “ಸುಬ್ರಹ್ಮಣ್ಯ ಭಾರತಿ” ಆದ.

ಇದು ನಡೆದದ್ದು ಸುಮಾರು ೧೮೯೭ ನೆಯ ಇಸವಿಯಲ್ಲಿ. ಎಟ್ಟಿಯಾಪುರಂ ಎಂಬ ಪುಟ್ಟ ಸಂಸ್ಥಾನದ ರಾಜನ ಆಸ್ಥಾನದಲ್ಲಿ.

“ಸುಬ್ರಹ್ಮಣ್ಯ ಭಾರತಿ”ಯ ಹೆಸರು ಇಂದು ಲಕ್ಷಾಂತರ ಮಂದಿ ತಮಿಳು ಮಾತನಾಡುವವರಿಗೂ, ಎಲ್ಲ ಸ್ವಾತಂತ್ಯ್ರ ಪ್ರಿಯ ಭಾರತೀಯರಿಗೂ ಪರಿಚಿತವಾದ ಹೆಸರು.

ಕವಿಸ್ವಾತಂತ್ಯ್ರ ಯೋಧ

ಕಳೆದ ಐಚತ್ತು ವರ್ಷಗಳಿಂದ ನಮ್ಮ ದೇಶ ಭಾಷೆಗಳು ಒಂದು ಹೊಸ ಹುರುಪಿನಿಂದಲೂ, ಶಕ್ತಿಯಿಂದಲೂ ಬೆಳೆಯುತ್ತಿವೆ. ಈ ಭಾಷೆಗಳು-ಅಂದರೆ ಕನ್ನಡ, ತಮಿಳು, ತೆಲುಗು, ಮರಾಠಿ, ಬಂಗಾಳಿ ಮುಂತಾದವು- ಬಹು ಪುರಾತನವಾದುವು. ಇಂಗ್ಲಿಷ್ ಮುಂತಾದ ಯೂರೋಪಿನ ಭಾಷೆಗಳಿಗಂತಲೂ ಹಿಂದಿನ ಸಾಹಿತ್ಯವನ್ನು ಪಡೆದಿರುವ ಭಾಷೆಗಳು.

ರಾಜನ ಆಸ್ಥಾನದಲ್ಲಿ ಹದಿನೈದು ವರ್ಷದ ಹುಡುಗ ವಾದಿಸಿದ

ನಮ್ಮ ದೇಶದಲ್ಲಿ ಹೊಸ ಜಾಗೃತಿ ಕಾಣಿಸಿಕೊಂಡದ್ದು ಹೋದ ಶತಮಾನದಲ್ಲಿ. ಅದಕ್ಕೆ ಹಿಂದಿನ ಕಾಲದಲಲ್ಲಿ ಹದಿನಾರರಿಂದ ಹತ್ತೊಂಬತ್ತನೆಯ ಶತಮಾನದವರೆಗೂ ದೇಶ ಬಹಳ ದುರ್ದೆಶೆಯಲ್ಲಿತ್ತು. ದೇಶದಲ್ಲಿ ಒಗ್ಗಟ್ಟಿರಲಿಲ್ಲ. ಭಾರತೀಯರೆಲ್ಲ ಒಂದು ಎಂಬ ಭಾವನೆ ಇರಲಿಲ್ಲ. ಈ ಕಾರಣಗಳಿಂದ ದೇಶವು ಪರಕೀಯರ ಆಳ್ವಿಕೆಗೆ ಒಳಗಾಯಿತು. ಬ್ರಿಟಿಷರ ಪ್ರಭುತ್ವದಿಂದ ನಾವು ಮುಕ್ತರಾದದ್ದು ಇತ್ತೀಚೆಗೆ, ೧೯೪೭ ರಲ್ಲಿ.. ಈಗ ಸ್ವಾತಂತ್ರರಾಗಿದ್ದೇವೆ. ಈ ಸ್ವಾತಂತ್ಯ್ರವನ್ನು ಪಡೆಯಲು ಜನರಲ್ಲಿ ಸ್ಫೂರ್ತಿಯನ್ನೂ ಶಕ್ತಿಯನ್ನೂ ತುಂಬಲು ಅನೇಕ ಮಹನೀಯರು ಶ್ರಮಿಸಿದರು. ಈ ಹಿಂಸೆಯಿಲ್ಲದ ಸಮರದಲ್ಲಿ ಪಾಲುಗೊಂಡವರಲ್ಲಿ ಕವಿಗಳೂ ಇದ್ದಾರೆ. ಇಂತಹ ಕವಿಗಳಲ್ಲಿ ನಮ್ಮ ನೆರೆ ನಾಡಾದ ತಮಿಳುನಾಡಿನಲ್ಲಿ ಈ ಶತಮಾನದಲ್ಲಿ ಬಾಳಿದ ಸುಬ್ರಹ್ಮಣ್ಯ ಭಾರತಿಯವರು ಜನರ ಪ್ರೀತಿಯನ್ನು ಸೊರೆಗೊಂಡರು.

ಬಾಲ್ಯ

ಸುಬ್ರಹ್ಮಣ್ಯ ಭಾರತಿ ೧೮೮೨ರ ಡಿಸೆಂಬರ್ ೧೧ ನೆಯ ದಿನಾಂಕ ತಮಿಳುನಾಡಿನ ಎಟ್ಟಿಯಾಪುರದಲ್ಲಿ ಹುಟ್ಟಿದರು. ಇದೊಂದು ಸಣ್ಣ ಸಂ‌ಸ್ಥಾನ. ಇದನ್ನು ಆಳುತ್ತಿದ್ದ ಜಮೀನ್ದಾರ “ರಾಜ”ನೆಂಬ ಬಿರುದನ್ನು ಆ ಕಾಲದಲ್ಲಿ ಪಡೆದಿದ್ದನು. ಇಲ್ಲಿ ವಿದ್ವಾಂಸರಿಗೂ, ಕವಿಗಳಿಗೂ ಒಳ್ಳೆಯ ಆಶ್ರಯವಿತ್ತು. ಭಾರತಿಯವರ ತಂದೆ ಚಿನ್ನ ಸ್ವಾಮಿ ಅಯ್ಯರ್‌ರವರು ಯಂತ್ರೋಧ್ಯಮದಲ್ಲಿ ಆಸಕ್ತಿಯುಳ್ಳವರಾಗಿದ್ದರು. ಪ್ರಾಚೀನ ಕಾಲದ ವಿದ್ಯೆಗಳಲ್ಲಿಯೂ ಪರಿಚಯವುಳ್ಳವರು. ಅಷ್ಟು ಹಿಂದಿನ ಕಾಲದಲ್ಲಿಯೇ ಒಂದು ಹತ್ತಿಯ ಗಿರಣಿಯನ್ನು ಸ್ಥಾಪಿಸಿದ್ದರು. ದಕ್ಷಿಣ ಭಾರತದಲ್ಲೇ ಮೊದ್ದ ಮೊದಲು ಪ್ರಾರಂಭವಾದ ಹತ್ತಿಯ ಗಿರಣಿಗಳಲ್ಲಿ ಇದು ಒಂದು. ಎಟ್ಟಿಯಾಪುರದ ರಾಜರು ಇವರಲ್ಲಿ ವಿಶ್ವಾಸವಿಟ್ಟಿದ್ದರು.

ಸುಬ್ರಹ್ಮಣ್ಯನು – ಬಾಲಕನನ್ನು ಮನೆಯಲ್ಲಿ ಮುದ್ದಿಗಾಗಿ ಸುಬ್ಬಯ್ಯನೆಂದು ಕರೆಯುತ್ತಿದ್ದರು- ಆ ಊರಿನ ಪ್ರಾಥಮಿಕ ಶಾಲೆಯನ್ನು ಸೇರಿದ. ಆದರೆ ಅಲ್ಲಿನ ವಿದ್ಯಾಭ್ಯಾಸ ಕ್ರಮ ಅವನಿಗೆ ಹಿಡಿಸಲಿಲ್ಲ. ಅಲ್ಲಿ ನಿರ್ಬಂಧಗಳು ಹೆಚ್ಚೆನಿಸುತ್ತಿದ್ದವು. ಪಾಠ ಹೇಳಿಕೊಡುವುದರಲ್ಲಿ ಜೀವಕಳೆಯೇ ಇರುತ್ತಿರಲಿಲ್ಲ. ಬೋಧನ ರೀತಿ ಸುಬ್ಬಯ್ಯನಿಗೆ ಒಗ್ಗಲೇ ಇಲ್ಲ. ಶಾಲೆಯನ್ನು ತಪ್ಪಿಸಿಕೊಂಡು ಸುಬ್ಬಯ್ಯ ತನ್ನ ಚಿಕ್ಕಪ್ಪ ಸಾಂಬಶಿವನೊಂದಿಗೆ ಕಾಲ ಕಳೆಯುತ್ತಿದ್ದನಂತೆ, ಪ್ರಕೃತಿ ಸೌಂದರ್ಯವನ್ನು ನೋಡಿ ನಲಿಯುತ್ತಿದ್ದನಂತೆ. ಗಿಡ-ಮರ ಬಳ್ಳಿ-ಹೂ ಇವುಗಳ ಸೊಬಗನ್ನು ನೋಡಿ ಮೈಮರೆಯುತ್ತಿದ್ದಂತೆ. ಒಂದು ದಿನ ಸುಬ್ಬಯ್ಯನ ತಂದೆಯು ರಿವಾಲ್ವರಿನೊಂದಿಗೆ ಆ ಹುಡುಗ ಆಡುತ್ತಿದ್ದಾಗ ರಿವಾಲ್ವರ್ ಹಾರಿತು! ಗುಂಡು ಹುಡುಗ ಸುಬ್ಬಯ್ಯನಿಂದ ಎರಡು ಬೆರಳುಗಳ ದೂರದಲ್ಲಿ ಹೋಯಿತಂತೆ! ಸುಬ್ಬಯ್ಯನಿಗೆ ಐದು ವರ್ಷ ತುಂಬುವುದರೊಳಗೆ ಅವನ ತಾಯಿ ಲಕ್ಷ್ಮೀ ತೀರಿಕೊಂಡಳು. ಆಕೆ ಬಹಳ ಮೃದು ಸ್ವಭಾವದವಳು. ಸುಬ್ಬಯ್ಯನೇ ಚೊಚ್ಚಲ ಮಗ. ಅವನು ಆಕೆಯ ತುಂಬು ಪ್ರೀತಿಗೆ ಪಾತ್ರನಾಗಿದ್ದ. ತಾಯಿಯು ಅಗಲಿಕೆ ಆತನ ಜೀವನದಲ್ಲಿ ತುಂಬಲಾಗದ ನಷ್ಟ ತಂದಿತು. ದೊಡ್ಡವನಾದ ಮೇಲೂ ತಾಯಿಯ ನೆನಪು ಬಂದಾಗಲೆಲ್ಲ ತುಂಬ ದುಃಖ ಪಡುತ್ತಿದ್ದ.

ಚಿನ್ನಸ್ವಾಮಿ ಅಯ್ಯರ್‌ರವರು ಮತ್ತೆ ಮದುವೆಯಾದರು. ಲಕ್ಷ್ಮಿಯ ತಂಗಿಯಾದ ಸೀತಾ ಎರಡನೆಯ ಹೆಂಡತಿ. ಮಲತಾಯಿಯಾದರೂ ಸೀತಾ ಸುಬ್ಬಯ್ಯನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದಳು.

ಸುಬ್ಬಯ್ಯನು ಶಾಲೆಯಲ್ಲಿ ಏನೂ ಕಲಿಯಲಿಲ್ಲವೆಂದೇ ಹೇಳಬೇಕು. ಆದರೆ ಹುಡುಗ ಬಹು ಜಾಣ. ವಯಸ್ಸಿಗೆ ಮೀರಿದ ತಿಳುವಳಿಕೆ, ಮಾತುಗಾರಿಕೆಗಳನ್ನು ಪಡೆದವನಾಗಿದ್ದನು. ಅವನು ಮಾತುಗಳು ಎ‌ಲ್ಲರನ್ನೂ ಸೆಳೆಯುತ್ತಿದ್ದವು. ಅಲ್ಲದೆ ಪ್ರಾಸವಿರುವಂಥ ಪದಗಳನ್ನು ಜೋಡಿಸಿ ನಿರಾಯಾಸವಾಗಿ ಕವಿತೆಗಳನ್ನು ರಚಿಸುತ್ತಿದ್ದನು. ಆತನ ಅಜ್ಜ (ತಾಯಿಯ ತಂದೆ) “ಕಂಬ ರಾಮಾಯಣ” ಮುಂತಾದ ಹಳೆಯ ತಮಿಳು ಕಾವ್ಯಗಳನ್ನು ಓದಿದ್ದರು. ಅವರಿಗೆ ಈ ಮೊಮ್ಮಗನ ವಿಷಯದಲ್ಲಿ ತುಂಬ ಪ್ರೀತಿ. ಅವರು ಅವನಿಗೆ ಆ ಪ್ರಾಚೀನ ಕಾವ್ಯಗಳ ಸೊಬಗನ್ನು ತಿಳಿಸುತ್ತಿದ್ದರು. ಎಳೆಯ ವಯಸ್ಸಿನಿಂದಲೇ ಸುಬ್ಬಯ್ಯನಿಗೆ ತಮಿಳು ಭಾಷೆ ಮತ್ತು ಸಾಹಿತ್ಯದಲ್ಲಿ ಅಪಾರ ಪ್ರೀತಿ ಉಂಟಾಯಿತು.

ಚಿನ್ನಸ್ವಾಮಿ ಅಯ್ಯರ್‌ಗೆ ತಮ್ಮ ಮಗ ಆಧುನಿಕ ವಿದ್ಯಾಭ್ಯಾಸದಲ್ಲಿ ಪರಿಣಿತನಾಗಬೇಕು. ಇಂಗ್ಲಿಷ್ ಕಲಿಯಬೇಕು ಎಂಬ ಹಂಬಲವಿತ್ತು. ಅವರು ಸ್ವಲ್ಪ ನಿಷ್ಟುರ ಸ್ವಭಾವದವರು. ಆದರೆ ಹುಡುಗನಿಗೆ ಶಾಲೆ, ಅಲ್ಲಿನ ಓದು ಬೇಕಿಲ್ಲ. ಸುಬ್ಬಯ್ಯನು ಒಬ್ಬನೇ ಇರುತ್ತಿದ್ದ. ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ. ಈ ಸಂತೋಷವನ್ನು ಅವನು ಆನಂತರ ಬರೆದ ಕವಿತೆಯಲ್ಲಿ

ಪ್ರೇಮದಿಂದ ಕಾಡಿನಲ್ಲಿ ಬಾಳುವಾ
ಜೋಡಿ ಹಕ್ಕಿಗಳಂತೆ
…………………………….
ಅನುರಾಗದಲ್ಲಿ ಮೈಮರೆತ ದೇವತೆಗಳಂತೆ
ಆ ಜೇನ್ಸವಿಯ ಸಂಗಾತಿಯೊಡನೆ
ಕಳೆದ ಸ್ವರ್ಗಸುಖದಿನಗಳನು

ಎಂದು ಹೇಳಿಕೊಂಡಿದ್ದಾನೆ.

ಬೇಡದ ಪ್ರೌಢಶಾಲೆ

ಸುಬ್ಬಯ್ಯನು ಇಂಗ್ಲಿಷ್ ವಿದ್ಯಭ್ಯಾಸ ಮಾಡಬೇಕೆಂದು ತಂದೆ ಆಸೆ. ಅವನನ್ನು ತಿರುನೆಲ್‌ವೇಲಿಗೆ ಹಿಂದೂ ಪ್ರೌಢಶಾಲೆಗೆ ಕಳುಹಿಸಿಕೊಟ್ಟರು. ಆಗಲೇ ಹುಡುಗನಿಗೆ ತಮಿಳು ಸಾಹಿತ್ಯದಲ್ಲಿ ಅಭಿರುಚಿ ಇತ್ತು. ಅಲ್ಲಿದ್ದ ಮೂರು ವರ್ಷಗಳಲ್ಲಿ ಇದು ಬೆಳೆಯಿತು. ಇಲ್ಲಿ ಇನ್ನೊಂದು ಅನುಕೂಲವಾಯಿತು. ಹುಡುಗ ಇಂಗ್ಲಿಷ್‌ ಭಾಷೆಯಯನ್ನು ಕಲಿತನು; ವಿಶೇಷವಾಗಿ ಇಂಗ್ಲಿಷ್ ಕವಿಗಳ ಕೃತಿಗಳ ಪರಿಚಯವಾಯಿತು. ಈ ಇಂಗ್ಲಿಷ್ ಕವಿತೆಗಳನ್ನು ಶಾಲೆಯಲ್ಲಿ ಹೇಳಿಕೊಟ್ಟದ್ದು ಕಡಿಮೆ. ಹುಡುಗ ಬಹುಮಟ್ಟಿಗೆ ತಾನೇ ಓದಿಕೊಂಡ. ಮುಂದೆ ಈ ಜ್ಞಾನವನ್ನು ಬೆಳೆಸಿಕೊಂಡು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧಗಳನ್ನೂ ಕವಿತೆಗಳನ್ನೂ ರಚಿಸಿದನು. ಷೆಲಿ ಎಂಬುವನು ಹತ್ತೊಂಬತ್ತನೆಯ ಶತಮಾನದ ಇಂಗ್ಲಿಷ್ ಕವಿ. ಅನ್ಯಾಯವನ್ನು ತೊಡೆದು ಹಾಕಬೇಕು, ಸಮಾಜದ ಕೊಳೆಯನ್ನೆಲ್ಲ ತೊಳೆಯಬೇಕು ಎಂಬ ಧಗಧಗಿಸುವ ತವಕ ಇವನ ಕೃತಿಗಳ್ಲಲಿ ಕಾಣುತ್ತದೆ. ಅವನ ಕವನಗಳನ್ನು ಓದಿದ ಭಾರತೀಯ ತರುಣರು ಇವನನ್ನು ಬಹಳ ಮೆಚ್ಚಿಕೊಂಡರು. ಹುಡುಗ ಸುಬ್ಬಯ್ಯ “ಷೆಲಿ-ದಾಸನ್” ಎಂಬ ಕವ್ಯನಾಮವನ್ನು ಬಳಸಿ ಲೇಖನಗಳನ್ನು ಬರೆದನು.

ಆದರೆ ಪ್ರೌಢಶಾಲೆಯ ವಿದ್ಯಾಭ್ಯಾಸವೂ ಸುಬ್ಬಯ್ಯನಿಗೆ ರುಚಿಸಲಿಲ್ಲ. ಅದರಲ್ಲಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ತಿಳಿಸುವ ಪಾಠಗಳೇನೂ ಇರಲಿಲ್ಲ. ಪೂರ್ವಕಾಲದ ವೀರರ ಚರಿತ್ರೆ ಇರಲಿಲ್ಲ. ಮುಂದೆ ತಾನು ಬರೆದ ಆತ್ಮಕಥೆಯನ್ನೊಳಗೊಂಡ ಕವಿತೆಯಲ್ಲಿ ಭೇರೆ ದೇಶದವರ ವಿಷಯಗಳನ್ನು ಕಲಿಯಲು ತಂದೆ ನನ್ನನ್ನೇಕೆ ತಿರುನೆಲ್‌ವೇಲಿಗೆ ಕಳುಹಿಸಿದರೆಂದು ಆಕ್ಷೇಪಿಸಿದ್ದಾನೆ. “ಹುಲ್ಲುತಿನ್ನೆಂದು ಬಲಶಾಲಿ ಸಿಂಹದ ಮರಿಯ ಕಳುಹಿಸಿದಂತೆ” ಎಂದು ದೂರಿದ್ದಾನೆ. “ಹೇಡಿ ವಿದ್ಯೆಯ. ಕಲ್ತು ಅಲೆವ ಹುಚ್ಚರುಗಳು” ಎಂದು ಆ ಕಾಲದ ಸ್ವಾಭಿಮಾನವಿಲ್ಲದ ವಿದ್ಯಾರ್ಥಿಗಳನ್ನು ಬಣ್ಣಿಸಿದ್ದಾನೆ.

ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಕೂಡಲು ಹುಡುಗರನ್ನು ಆರಿವು ಪರೀಕ್ಷೆಯಲ್ಲಿ ಸುಬ್ಬಯ್ಯನು ಉತ್ತೀರ್ಣನಾಗಲಿಲ್ಲ ಅವನು ಎಟ್ಟಿಯಾಪುರಕ್ಕೆ ಹಿಂದಿರುಗಿದನು. ಈ ಪುಸ್ತಕದ ಪ್ರಾರಂಭದಲ್ಲಿ ವರ್ಣಿಸಿದ ಚರ್ಚೆ ನಡೆದು, ಸುಬ್ಬಯ್ಯ “ಸುಬ್ರಹ್ಮಣ್ಯ ಭಾರತಿ” ಆದದ್ದು ಆಗಲೇ.

ಆ ಕಾಲದಲ್ಲಿ ಬಹು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಿದ್ದರು. ಸುಬ್ರಹ್ಮಣ್ಯ ಭಾರತಿಗೆ ಹದಿನೈದು ವರ್ಷಗಳಾದಾಗ, ಏಳು ವರ್ಷಗಳ ಕನ್ಯೆಯಾದ ಚೆಲ್ಲಮ್ಮಾಳ್ ಜೊತೆಗೆ ವಿವಾಹವಾಯಿತು. ಎಟ್ಟಿಯಾಪುರದ ರಾಜನಿಗೆ ಭಾರತಿಯ ಪ್ರತಿಭೆಯ ವಿಷಯದಲ್ಲಿ ತುಂಬ ಪ್ರೀತಿ, ಗೌರವ. ಅದುದರಿಂದ ಆತನಿಗೆ ಆಸ್ಥಾನದಲ್ಲಿ ಒಂದು ಸಣ್ಣ ನೌಕರಿಯೂ ದೊರೆಯಿತು.

ಒಂದು ವರ್ಷ ನೆಮ್ಮದಿಯಾಗಿ ಕಳೆಯಿತು. ಆದರೆ ಅನಂತರ ಕಷ್ಟದ ಹಿಂದೆ ಕಷ್ಟ ಅಟ್ಟಸಿಕೊಂಡು ಬಂದಿತು. ತಂದೆಯ ಹತ್ತಿಯ ಗಿರಣಿಯಲ್ಲಿ ವಿಪರೀತ ನಷ್ಟವಾಯಿತು. ಜೊತೆಗೆ ಬೇರೆ ರೀತಿಯಲ್ಲಿಯೂ ಹಣ ಕೈ ಬಿಟ್ಟಿತು. ಸುಬ್ರಹ್ಮಣ್ಯನ ತಂದೆ ಚಿನ್ನಸ್ವಾಮಿ ಅಯ್ಯರ್ ೧೮೯೮ ರಲ್ಲಿ ಎದೆಯೊಡೆದು ಸತ್ತರು. ಸಂಸಾರದ ಆಧಾರವೇ ಕುಸಿಯಿತು. ಸುಬ್ರಹ್ಮಣ್ಯನ ತಾಯಿ ಇತರ ಚಿಕ್ಕ ವಯಸ್ಸಿನ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋದರು. ಇನ್ನೂ ಚಿಕ್ಕ ವಯಸ್ಸಿನ ಸುಬ್ರಹ್ಮಣ್ಯನಿಗೂ ಅವನ ಹೆಂಡತಿಗೂ ನೆಲೆ ಇಲ್ಲವಾಯಿತು.

ವಾರಾಣಸಿಯಲ್ಲಿ

ಭಾರತಿಯ ಸೋದರತ್ತೆ ಕುಪ್ಪಮ್ಮಾಳ್ ವಾರಾಣಸಿಯಲ್ಲಿ ನೆಲೆಸಿದ್ದರು. ಅಲ್ಲಿ ಹನುಮಾನ್  ಘಾಟಿನ ಬಳಿ ಇದ್ದ ಒಂದು ಶಿವಮಂದಿರದಲ್ಲಿ ಇವರ ವಾಸ. ಅಲ್ಲಿ ನಟರಾಜ ವಿಗ್ರಹವನ್ನು ಸ್ಥಾಪಿಸಿ ಅದರ ಪೂಜೆ-ಪುರಸ್ಕಾರಗಳನ್ನು ಮಾಡುತ್ತ ಅತಿಥಿ ಸತ್ಕಾರ ಕೈಗೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ವಾರಾಣಸಿಗೆ ಬಂದು ವಿದ್ಯಾಭ್ಯಾಸ ಮುಂದುವರಿಸು ಎಂದು ಅವರು ಭಾರತಿಯನ್ನು ಕರೆದರು. ಭಾರತಿ ವಾರಾಣಸಿಯ ಸೆಂಟ್ರಲ್ ಹಿಂದೂ ಕಾಲೇಜನ್ನು ಸೇರಿದ. ಎಂಟ್ರೆನ್ಸ್‌ ಪರೀಕ್ಷೆಯಲ್ಲಿ ಮೊದಲನೆಯ ವರ್ಗದಲ್ಲಿ ತೇರ್ಗಡೆಯಾದ. ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಚೆನ್ನಾಗಿ ಕಲಿತ. ವೇಷಭೂಷಣಗಳನ್ನು ಬದಲಾಯಿಸಿಕೊಂಡ. ಮೀಸೆ ಬೆಳೆಸಿದ. ಸಿಖ್‌ರಂತೆ ತಲೆಗೆ ರುಮಾಲು ಸುತ್ತುವುದನ್ನು ರೂಢಿ ಮಾಡಿಕೊಂಡ. ಹೇಗೋ ಜೀವನ ಸಾಗುತ್ತಿತ್ತು.

ಎಟ್ಟಿಯಾಪುರದ ರಾಜನಿಗೆ ಭಾರತಿಯನ್ನು ತನ್ನ ಆಸ್ಥಾನಕ್ಕೆ ಕರೆಸಿ ಆಶ್ರಯವನ್ನು ನೀಡಬೇಕೆಂಬ ಇಚ್ಛೆ ಇತ್ತು. ಭಾರತಿ ಎಟ್ಟಿಯಾಪುರಕ್ಕೆ ೧೯೦೨ ರಲ್ಲಿ ಹಿಂದಿರುಗಿದನು. ಆಸ್ಥಾನ ಕವಿಯಾಗಿ ರಾಜನ ಸಲಹೆಗಾರನೂ ಆಪ್ತಮಿತ್ರನೂ ಆಗಿ ಸುಮಾರು ಎರಡು ವರ್ಷಗಳನ್ನು ಕಳೆದನು.

ಹೆಂಡತಿ ಚೆಲ್ಲಮ್ಮಾಳೊಂದಿಗೆ ಸಾಂಸರಿಕ ಜೀವನ ತಕ್ಕಮಟ್ಟಿಗೆ ಅನುಕೂಲವಾಗಿ ನಡೆಯುತ್ತಿತ್ತು. ಆದರೆ ಸ್ವಚ್ಚಂದವಾಗಿ ತಿರುಗಾಡುವ ಹಕ್ಕಿಯನ್ನು ಪಂಜರದಲ್ಲಿ ಇಟ್ಟಂತೆ ಆಯಿತು ಭಾರತಿಯ ಆಸ್ಥಾನ ಜೀವನ. ಆತನಿಗೆ ಈ ಆಸ್ಥಾನದ ಪರಿಸರ ಹಿತವಾಗಿರಲಿಲ್ಲ. ಕಡೆಗೆ ಒಬ್ಬ ಮಿತ್ರನ ಸಲಹೆಯ ಮೇರೆಗೆ, ೧೯೦೪ರ ಆಗಸ್ಟ್ ತಿಂಗಳಲ್ಲಿ ಮಧುರೆಯ ಸೇತುಪತಿ ಪ್ರೌಢಶಾಲೆಯಲ್ಲಿ ತಮಿಳು ಉಪಾಧ್ಯಾಯನಾಗಿ ಸೇರಿಕೊಂಡನು. ಆತನ ತಿಂಗಳ ಸಂಬಳ ಹದಿನೇಳೂವರೆ ರೂಪಾಯಿ!

ಭಾರತಿಯ ಕೆಲವು ಕವನಗಳು ಪತ್ರಿಕೆಯಲ್ಲಿ ಅಚ್ಚಾದವು. ಭಾಷೆ ಹಿಂದಿನ ಕಾಲದ ಪಂಡಿತರದೇ ಆದರೂ ಇಂಗ್ಲಿಷ್ ಕವನಗಳನ್ನು ಓದಿದ್ದರ ಪ್ರಭಾವ ಕಾಣುತ್ತಿತ್ತು. ಭಾರತಿಯರ ಪ್ರತಿಭೆ, ತಮಿಳಿನಲ್ಲಿ ಅವರ ಪಾಂಡಿತ್ಯ, ಇಂಗ್ಲಿಷ್ ಭಾಷಾ ಜ್ಞಾನ ಇವುಗಳ ಕೀರ್ತಿ ಎಟ್ಟಿಯಾಪುರದಲ್ಲಿ ಮಾತ್ರವಲ್ಲದೆ ತಮಿಳುನಾಡಿನಲ್ಲೆಲ್ಲ ಕ್ರಮೇಣ ಹರಡಿತು.

ಪತ್ರಿಕೋದ್ಯಮಿ ಸ್ವಾತಂತ್ಯ್ರದ ಹೋರಾಟಗಾರ

ಉಪಾಧ್ಯಾಯ ವೃತ್ತಿ ಮೂರು ತಿಂಗಳಿಗೇ ಮುಗಿಯಿತು. ಸುಬ್ರಹ್ಮಣ್ಯ ಭಾರತಿ ಪತ್ರಿಕೋದ್ಯಮಿ ಆದರು. ಅದು ನಡೆದದ್ದು ಹೀಗೆ:

ಜಿ. ಸುಬ್ರಹ್ಮಣ್ಯ ಅಯ್ಯರ್ ಎನ್ನುವವರು ಮದರಾಸಿನಲ್ಲಿ “ಸ್ವದೇಶ ಮಿತ್ರನ್” ಎಂಬ ದಿನಪತ್ರಿಕೆಯನ್ನು ನಡೆಸುತ್ತಿದ್ದರು. ಅಯ್ಯರ್‌ರವರು ದೇಶದ ಮುಂದಾಳುಗಳಗಲ್ಲಿ ಒಬ್ಬರು. ಪ್ರಖ್ಯಾತ ಸಂಪಾದಕರು. ಕಾಂಗ್ರೆಸ್ಸಿನ ಕಾರ್ಯಕಲಾಪಗಳಲ್ಲಿ ಪಾಲುಗೊಂಡ ದೇಶಭಕ್ತರು.

“ಸ್ವದೇಶ ಮಿತ್ರನ್” ಪತ್ರಿಕೆಗೆ ಚೆನ್ನಾಗಿ ಕೆಲಸ ಮಾಡುವ ಬುದ್ಧಿವಂತ ಸಹಾಯಕ ಸಂಪಾದಕ ಬೇಕು ಎಂದು ಸುಬ್ರಹ್ಮಣ್ಯ ಅಯ್ಯರ್‌ ಹುಡುಕುತ್ತಿದ್ದರು. ಮಧುರೆಯಲ್ಲಿದ್ದ ಅವರ ಸ್ನೇಹಿತರ ಮೂಲಕ ಭಾರತಿಯವರ ಯೋಗ್ಯತೆಯನ್ನು ತಿಳಿದುಕೊಂಡರು. ೧೯೦೪ ನವೆಂಬರಿನಲ್ಲಿ ಅಯ್ಯರ್‌ರವರ ಆಹ್ವಾನದ ಮೇರೆಗೆ ಭಾರತಿ ಮದರಾಸಿಗೆ ಹೋಗಿ ಪತ್ರಿಕೋದ್ಯಮಿಯಾದರು.

ಮುಖ್ಯವಾಗಿ ಭಾರತಿಯವರ ಪಾಲಿಗೆ ಬಂದ್ದು ಸುದ್ದಿಗಳ ಮತ್ತು ಲೇಖನಗಳ ಭಾಷಾಂತರದ ಕೆಲಸ. ವಿವೇಕಾನಂದ, ಅರವಿಂದರು ಇಂತಹ ಮಹಾನಾಯಕರ ಭಾಷಣಗಳನ್ನು ಇಂಗ್ಲಿಷಿನಿಂದ ತಮಿಳಿಗೆ ಭಾಷಾಂತರ ಮಾಡಬೇಕಾಗಿತ್ತು. ಈ ಕೆಲಸವನ್ನು ಬಹು ಸಮರ್ಪಕವಾಗಿ ನಿರ್ವಹಿಸಿದರು. ಅನೇಕ ಪತ್ರಿಕೆಗಳನ್ನು ಓದುವ ಅವಕಾಶ ದೊರೆಯಿತು. ಗೋಪಾಲಕೃಷ್ಣ ಗೋಖಲೆ, ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್‌- ಇಂತಹ ನಾಯಕರು ರಾಜಕೀಯಕ್ಕೆ ಕಾಲಿಡುತ್ತಿದ್ದರು. ನಮ್ಮ ದೇಶದ ರಾಜಕೀಯರಲ್ಲಿ ಆಗ ಒಂದು ಹೊಸ ಯುಗವೇ ಆರಂಭವಾಗುತ್ತಲಿತ್ತು. ಭಾರತಿಯರವ ಜೀವನದಲ್ಲಿಯೂ ಒಂದು ಹೊಸ ಅಧ್ಯಾಯ ಪ್ರಾರಂಭವಾಯಿತು.

ಬ್ರಿಟಿಷ್ ಸರ್ಕಾರ ೧೯೦೫ ರಲ್ಲಿ ಬಂಗಾಳ ಪ್ರಾಂತವನ್ನು ಎರಡಾಗಿ ಒಡೆಯಿತು. ಇದರಿಂದ ದೇಶಾದ್ಯಂತ- ವಿಶೇಷವಾಗಿ ಬಂಗಾಳದಲ್ಲಿ ದೊಡ್ಡ ಕೋಲಾಹಲವಾಯಿತು. ರಾಷ್ಟ್ರೀಯ ಆಂದೋಲನ ಜನ್ಮ ತಾಳಿತು. ಪರದೇಶಗಳ ವಸ್ತುಗಳ ಬಹಿಷ್ಕಾರ, ಸ್ವದೇಶಿ ವಸ್ತುಗಳ ಪ್ರೋತ್ಸಾಹ, ಸ್ವರಾಜ್ಯ, ರಾಷ್ಟ್ರೀಯ ಶಿಕ್ಷಣ ಇಂತಹ ಗುರಿಗಳು ಜನಪ್ರಿಯವಾದವು. ಇವು ಭಾವುಕರಾದ ಭಾರತಿಯವರ ಮೇಲೆ ತೀವ್ರವಾದ ಪರಿಣಾಮ ಮಾಡಿದವು. ೧೯೦೫ ರಲ್ಲಿ ವಾರಾಣಸಿಯಲ್ಲಿ ಗೋಪಾಲಕೃಷ್ಣ ಗೋಖಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಭಾರತಿ ಹೋದರು. ರಾಷ್ಟ್ರ ನಾಯಕರ ದರ್ಶನವನ್ನು ಪಡೆದರು. ಮರು ವರ್ಷ ಕಲ್ಕತ್ತ ಅಧಿವೇಶನಕ್ಕೆ ಹೋದರು. ಅಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯೆಯಾದ ನಿವೇದಿತಾ ಅವರ ಸಂದರ್ಶನವಾಯಿತು. ನಿವೇದಿತಾ ಅವರು ಪ್ರತಿಭಾವಂತೆ, ಹೆಣ್ಣು ಮಕ್ಕಳಿಗಾಗಿ ಶಾಲೆ ನಡೆಸುತ್ತಿದ್ದರು. ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದರು. ಅರವಿಂದ ಘೋಷ್ ಅವರ ಜೊತೆ ಸೇರಿ ನಮ್ಮ ರಾಜಕೀಯದಲ್ಲಿಯೂ ಉಗ್ರಗಾಮಿಯಾಗಿ ಕೆಲಸ ಮಾಡುತ್ತಿದ್ದರು.

ಭಾರತಿಯ ಕವಿದೃಷ್ಟಿಗೆ ನಿವೇದಿತಾ ಮಹಾಶಕ್ತಿ ಸ್ವರೂಪಿಣಿಯಾಗಿ ಕಂಡಳು. ಆಕೆಯನ್ನು ಗುರುವೆಂದು ಸ್ವೀಕರಿಸಿದರು. ದೇಶದ ಸ್ವಾತಂತ್ಯ್ರವನ್ನು ಸಾಧಿಸುವ ದೀಕ್ಷೆ ಹಿಡಿದರು. ಮುಂದೆ ಭಾರತಿ ತನ್ನ “ಸ್ವದೇಶ ಗೀತಂಗಳ್‌” ಸಂಗ್ರಹವನ್ನು ನಿವೇದಿತಾಗೆ ಅರ್ಪಣೆ ಮಾಡಿದರು.

ತಾಯ್ನಾಡಿಗಾಗಿ ವೀರರಂತೆ ಹೋರಾಡಬೇಕು; ಯಾವ ತ್ಯಾಗಕ್ಕಾದರೂ ಸಿದ್ಧರಾಗಿರಬೇಕು!

ತಿಲಕರು, ಅರವಿಂದರು ಮೊದಲಾದ ಕೆಲವರ ನಾಯಕರ ಭಾಷಣಗಳನ್ನು ಕೇಳಿ, ಅವರ ಸಾಹಸದ ಬಾಳನ್ನು ಕಂಡು ಭಾರತಿಯವರಲ್ಲಿ ಈ ಆದರ್ಶದ ಉತ್ಸಾಹ ತುಳುಕಾಡಿತು. ಆದರೆ “ಸ್ವದೇಶ ಮಿತ್ರನ್” ಪತ್ರಿಕೆಯ ಸುಬ್ರಹ್ಮಣ್ಯ ಅಯ್ಯರ್ ಅವರು ಸೌಮ್ಯವಾದಿಗಳು, ಬ್ರಿಟಿಷರ ವಿರುದ್ಧ ಪ್ರತಿಭಟನೆ ನಯವಾಗಿರಬೇಕು. ಸೌಮ್ಯವಾಗಿರ ಬೇಕು ಎಂದು ಅವರ ಅಭಿಪ್ರಾಯ. ಭಾರತಿಯವರು “ಇಂಡಿಯಾ” ಎಂಬ ತಮಿಳು ವಾರಪತ್ರಿಕೆಯನ್ನು ಸೇರಿದರು. ತಾವೇ “ಬಾಲಭಾರತಿ” ಎಂಬ ಇಂಗ್ಲಿಷ್ ಪತ್ರಿಕೆಯನ್ನೂ ಆರಂಭಿಸಿದರು. ಉಜ್ವಲವಾದ ದೇಶಭಕ್ತಿ ಗೀತೆಗಳನ್ನು ರಚಿಸಿ ತಾವೇ ಅವುಗಳನ್ನು ತಮ್ಮ ಕಂಚಿನ ಕಂಠದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಹಾಡಲು ತೊಡಗಿದರು. ಈ ಗೀತೆಗಳು ಬಹುಬೇಗ ಜನಪ್ರಿಯವಾದವು. ಎಲ್ಲ ವರ್ಗದ ಜನರ ಬಾಯಲ್ಲಿ ನಲಿದವು. ಇಂಗ್ಲೆಂಡಿನಿಂದ ಬಂದ ವಸ್ತುಗಳನ್ನು ಜನ ಬಳಸಬಾರದು ಎಂದು ತಮ್ಮ ಸ್ನೇಹಿತರ ಸಹಾಯದಿಂದ ಭಾರತಿ “ಭಾರತ ಭಂಡಾರ” ಎಂಬ ಅಂಗಡಿಯನ್ನು ಪ್ರಾರಂಭಿಸಿದರು.

ಒಬ್ಬ ಸ್ನೇಹಿತರ ಸಲಹೆಯ ಮೇರೆಗೆ ಭಾರತಿ ತಮ್ಮ “ವಂದೇ ಮಾತರಂ” ಮುಂತಾದ ದೇಶಪ್ರೇಮದ ಗೀತೆಗಳನ್ನು ಮದರಾಸಿನ ಸುಪ್ರಸಿದ್ಧ ವಕೀಲರಾದ ವಿ. ಕೃಷ್ಣಸ್ವಾಮಿ ಅಯ್ಯರ್‌ರವರ ಮನೆಗೆ ಹೋಗಿ ಅವರ ಮುಂದೆ ಹಾಡಿದರು. ಅಯ್ಯರ್‌ರವರು ಸೌಮ್ಯವಾದಿಗಳು. ಅವರನ್ನು ಭಾರತಿ ತಮ್ಮ “ಇಂಡಿಯಾ” ಪತ್ರಿಕೆಯಲ್ಲಿ ಕಟುವಾಗಿ ಟೀಕಿಸಿದ್ದರು. ಆದರೂ ಭಾರತಿಯವರ ಗೀತೆಗಳನ್ನು ಕೇಳಿ ಅಯ್ಯರ್‌ರವರು ತನ್ಮಯರಾದರು.

ಸಾವಿರ ಜಾತಿಗಳಿದ್ದರು ಇಲ್ಲಿ
ವಿದೇಶಿ ಕಾಲಿಡಲಂಗುಲ ಸ್ಥಳವಿಲ್ಲ;
ತಾಯಿಯ ಮಕ್ಕಳು ಕಲಹವಾಡಿದರು
ಕೋಪಿಸಿಕೊಂಡರು, ಸೋದರರೆಲ್ಲ

ಎಂದು ಭಾರತಿ ಹಾಡಿದಾಗ ಅಯ್ಯರ್‌ರವರಿಗೆ ರೋಮಾಂಚನವಾಯಿತು. “ಈ ಹಾಡುಗಳಿಗೆ ಉಪ್ಪಿನಕಾಯಿ ಹಾಕಿ ಇಟ್ಟುಕೊಂಡಿದ್ದೀರಾ? ಅಚ್ಚು ಹಾಕಿಸಿ” ಎಂದರು. “ಹಣವಿಲ್ಲ” ಎಂದು ಭಾರತಿಯ ಸ್ನೇಹಿತರು ಹೇಳಿದರು. ಅಯ್ಯರ್‌ ಅವರು ಭಾರತಿಯವರಿಗೆ ಕಾಣಿಕೆ ಅರ್ಪಿಸಿದ್ದಲ್ಲದೆ ಅವರು ಮೂರು ಗೀತೆಗಳನ್ನು ತಮ್ಮ ಖರ್ಚಿನಲ್ಲಿಯೇ ಅಚ್ಚು ಮಾಡಿಸಿ ೧೫,೦೦೦ ಪ್ರತಿಗಳನ್ನು ಉಚಿತವಾಗಿ ಹಂಚಲು ಏರ್ಪಾಟು ಮಾಡಿದರು.

 

"ಗಾಂಧೀಜಿ, ನಿಮ್ಮ ಚಳವಳಿ ಗೆಲ್ಲಲಿ ಅಂತ ನನ್ನ ಹಾರೈಕೆ"

ಪಾಂಡಿಚೆರಿಯಲ್ಲಿ ಕಷ್ಟ ಕಾರ್ಪಣ್ಯಗಳು

 

“ಇಂಡಿಯಾ” ಮತ್ತು “ಬಾಲಭಾರತಿ” ಪತ್ರಿಕೆಗಳಲ್ಲಿ ಹೊರಬೀಳುತ್ತಿದ್ದ ಲೇಖನಗಳೂ ಭಾರತಿಯವರ ದೇಶಭಕ್ತಿ ಗೀತೆಗಳೂ ಬ್ರಿಟಿಷ್ ಸರ್ಕಾರವನ್ನು ಕೆರಳಿಸಿದವು. ಪತ್ರಿಕೆಗಳ ಮೇಲೆ ಮುಟ್ಟುಗೋಲು ಹಾಕುವುದು, ಉಗ್ರವಾದಿಗಳನ್ನು ಬಂಧಿಸಿ ಸೆರೆಮನೆಯಲ್ಲಿಡುವುದು- ಈ ಕಾರ್ಯಕ್ರಮಗಳನ್ನು ದೇಶಾದ್ಯಂತ ಸರ್ಕಾರ ಕೈಗೊಂಡಿತು. ಸುಬ್ರಹ್ಮಣ್ಯ ಭಾರತಿಯವರನ್ನೂ ಬಂಧಿಸುವ ಸುದ್ಧಿ ಕೇಳಿ ಬಂತು. ಇದರಿಂದ ಭಾರತಿ ಎದೆಗೆಡಲಿಲ್ಲ. ಆದರೆ ಅವರ ಮಿತ್ರರು ಅವರ ಭಾವಪೂರ್ಣವಾದ ಲೇಖನಗಳಿಗೂ ತೇಜಃಪುಂಜವಾದ ಕವಿತೆಗಳಿಗೂ ಅಡ್ಡಿಯಾಗಬಾರದು, ಆದುದರಿಂದ ಅವರು ಸೆರೆಮನೆಗೆ ಹೋಗಬಾರದು ಎಂದು ಬಯಸಿದರು. ಆಗ ಪಾಂಡಿಚೆರಿ ಫ್ರಾನ್ಸ್‌ಗೆ ಸೇರಿತ್ತು. ಅಲ್ಲಿದ್ದವರನ್ನು ಬ್ರಿಟಿಷ್ ಸರ್ಕಾರ ಮುಟ್ಟುವ ಹಾಗಿರಲಿಲ್ಲ. ಸುಬ್ರಹ್ಮಣ್ಯ ಭಾರತಿ ಅಲ್ಲಿ ನೆಲೆಸಿ ಅಲ್ಲಿಂದ ತನ್ನ ದೇಶ ಸೇವೆಯನ್ನೂ ಸಾಹಿತ್ಯ ಸೇವೆಯನ್ನೂ ನಿರಾತಂಕವಾಗಿ ನಡೆಸಬೇಕೆಂದು ಸ್ನೇಹಿತರು ಒತ್ತಾಯ ಮಾಡಿದರು. ಹೀಗೆ ತಪ್ಪಿಸಿಕೊಳ್ಳಲು ಭಾರತಿಗೆ ಇಷ್ಟವಿರಲಿಲ್ಲ. ಆದರೆ ಕೊನೆಗೆ ಆತನ ಗೆಳೆಯರೇ ಗೆದ್ದರು. ವೇಷ ಮರೆಯಿಸಿಕೊಂಡು ಗುಪ್ತವಾಗಿ ಭಾರತಿ ೧೯೦೮ ರಲ್ಲಿ ಪುದುಚೇರಿಯನ್ನು ಸೇರಿದರು. ಬ್ರಿಟಿಷ್ ಸರ್ಕಾರದ ವಕ್ರದೃಷ್ಟಿಯಿಂದ ಪಾರಾಗಿ ಫ್ರೆಂಚರ ವಸಾಹತಿಗೆ ಬಂದು ಸೇರಿದ ದೇಶಭಕ್ತದಲ್ಲಿ ಭಾರತಿ ಮೊದಲನೆಯವರು.

“ಇಂಡಿಯಾ” ಪತ್ರಿಕೆಯನ್ನು ನಡೆಸುತ್ತಿದ್ದ ಮಂಡ್ಯಂ ಶ್ರೀನಿವಾಸಾಚಾರ್ಯರಿಗೆ ಬ್ರಿಟಿಷರು ತುಂಬಾ ತೊಂದರೆ ಕೊಡುತ್ತಿದ್ದರು. ಅವರೂ ತಮ್ಮ ಅಚ್ಚುಕೂಟದೊಂದಿಗೆ ಅಲ್ಲಿಗೆ ಬಂದು ಸೇರಿಕೊಂಡರು. “ಇಂಡಿಯಾ” ಪತ್ರಿಕೆಯನ್ನು ಭಾರತದೊಳಕ್ಕೆ ತರಕೂಡದು ಎಂದು ಬ್ರಿಟಿಷ್‌ ಸರ್ಕಾರ ಕಟ್ಟಾಜ್ಞೆ ಮಾಡಿತು. ಅಚ್ಚಾದ ಪ್ರತಿಗಳನ್ನು ಬ್ರಿಟಿಷ್ ಪ್ರದೇಶದಲ್ಲಿ ಗುಟ್ಟಾಗಿ ಹಂಚುವ ವ್ಯವಸ್ಥೆ ಮಾಡಬೇಕಾಗಿತ್ತು. ಬಹಳ ಕಾಲ ಈ ನಿರ್ಬಂಧಗಳನ್ನು ಎದುರಿಸಲು ಸಾಧ್ಯವಾಗದೆ ಮಾರ್ಚ್‌ ೧೯೧೦ ರಲ್ಲಿ ಇವರಿಬ್ಬರೂ ಈ ಪತ್ರಿಕೋದ್ಯಮವನ್ನು ನಿಲ್ಲಿಸಬೇಕಾಯಿತು.

ಭಾರತಿ ಈ ಕಾಲದಲ್ಲಿ ಬಹಳ ಕಷ್ಟ ಕಾರ್ಪಣ್ಯಗಳಿಗೂ ಬಡತನಕ್ಕೂ ಗುರಿಯಾದರು. ಆಗ ಅವರಿಗೆ ಕೆಲವರು ಸ್ನೇಹಿತರು ಹಣ ಸಹಾಯ ಮಾಡಿದರು. ರಾಮಸ್ವಾಮಿ ಎಂಬುವರು ತುಪ್ಪದ ಡಬ್ಬಗಳಲ್ಲಿ ಕೆಳಗಡೆ ಬೆಳ್ಳಿಯ ರೂಪಾಯಿಗಳನ್ನು  ಇಟ್ಟು ಭಾರತದಿಂದ ಕಳುಹಿಸಿ ಭಾರತಿಗೆ ನೆರವಾದರು.

ಭಾರತಿಯವರು ಪಾಂಡಿಚೆರಿಯಲ್ಲಿದ್ದರೂ ಬ್ರಿಟಿಷ್ ಸರ್ಕಾರಕ್ಕೆ ಅವರ ಗೀತೆಗಳು, ಲೇಖನಗಳು ಎಂದರೆ ಭಯ. ಸರ್ಕಾರ ಅವರನ್ನು ಮರೆಯಲಿಲ್ಲ. ಗುಪ್ತ ಪೊಲೀಸರನ್ನು ಅವರ ಹಿಂದೆಯೇ ಇಟ್ಟಿದ್ದರು. ಭಾರತಿ ಪಾಂಡಿಚೆರಿಗೆ ಬಂದ ಎರಡು ವರ್ಷಗಳ ನಂತರ ಭಾರತದಲ್ಲಿ ಒಬ್ಬ ಕಲೆಕ್ಟರನ ಕೊಲೆಯಾಯಿತು. ಬ್ರಿಟಿಷ್ ಸರ್ಕಾರಕ್ಕೆ ಭಾರತಿ ಮತ್ತು ವಿ.ವಿ.ಎಸ್. ಅಯ್ಯರ್ ಇದರಲ್ಲಿ ಸೇರಿದ್ದರು ಎಂದು ಸಂಶಯ. ವಿ.ವಿ.ಎಸ್. ಅಯ್ಯರ್ ಅವರು ಕರಾಂತಿಕಾರರಾಗಿ ವೀರ ಸಾವರಕರರೊಂದಿಗೆ ಕೆಲಸ ಮಾಡಿದ ಪ್ರತಿಭಾವಂತರು. ಭಾರತಿಯವರಿಗೆ ಒಂದು ಕಾಗದ ಬಂದಿತು;  ಅದರಲ್ಲಿ ಇದ್ದ ಸಹಿ “ತಿರುನೆಲ್‌ವೇಲಿಯ ಒಬ್ಬ ಸ್ನೇಹಿತ” ಎಂದು. ಭಾರತಿಯವರನ್ನು “ಕವಿಚಕ್ರವರ್ತಿ” ಎಂದು ಹೊಗಳಿ, “ನನ್ನ ಕೈಯಲ್ಲಿ ಮೂರು ಕಾಸಿಲ್ಲ. ಆದರೂ ಕಷ್ಟಪಟ್ಟು ಪಾಂಡಿಚೆರಿಗೆ, ನಿಮ್ಮ ತಾಜಸ್ಸಿನ ಮುಖವನ್ನು ನೋಡಲು, ಅಮೃತದಂತಹ ಕಾವ್ಯವನ್ನು ಕೇಳಲು ಬಂದಿದ್ದೇನೆ. ಸಂಜೆ ಏಳಕ್ಕೆ ನಿಮ್ಮ ಮನೆಗೆ ಬರುತ್ತೇನೆ. ದೀಪಗಳನ್ನು ಮಂಕುಮಾಡಿರಿ” ಎಂದು ಆತ ಬರೆದಿದ್ದ.

ಸಂಜೆ ಕಾಗದ ಬರೆದಿದ್ದವನುಸ ಬಂದ. ಆತ ಕಟ್ಟು ಮಸ್ತಾದ ಆಳು. ಸನ್ಯಾಸಿ ವೇಷದಲ್ಲಿದ್ದ. ಬಂದವನೇ ಕವಿಗೆ ನಮಸ್ಕಾರ ಮಾಡಿದ. ಭಾರತಿಯವರಿಗೆ ಆತ ಕಳ್ಳ ಸನ್ಯಾಸಿ, ಬ್ರಿಟಿಷ್ ಗೂಢಚಾರಿ ಎಂದು ಅರ್ಥವಾಯಿತು. “ನೀನು ತಪ್ಪು ಮಾಡಿದೆ, ಗೃಹಸ್ಥ ನಮಸ್ಕಾರ ಮಾಡಬೇಕು, ಸನ್ಯಾಸಿ ಆಶೀರ್ವಾದ ಮಾಡಬೇಕು” ಎಂದು ಆತನಿಗೆ ಹೇಳಿದರು. ಏನು ಮಾಡಿದರೂ ಆತ ಹೋಗಲಿಲ್ಲ. ಕಡೆಗೆ ಭಾರತಿಯವರು ಕೋಪದಿಂದ, “ನೀನು ಕಳ್ಳ ಸನ್ಯಾಸಿ, ನನಗೆ ಗೊತ್ತು. ಹೋಗಾಚೆ” ಎಂದು ಕಳುಹಿಸಬೇಕಾಯಿತು.

ಸರ್ಕಾರದ ಗೂಢಚಾರರು ವ್ಯಾಪಾರಿಗಳ ವೇಷದಲ್ಲಿ ವಕೀಲರ ವೇಷದಲ್ಲಿ, ಹಲವು ವೇಷಗಳಲ್ಲಿ ಬರುತ್ತಿದ್ದರು. ಭಾರತಿಯವರು ಪ್ರಸಿದ್ಧ ಕವಿಯಾದುದರಿಂದ, ಕೆಲವರು ಗೂಢಚಾರರು ತಮಗೆ ಕಾವ್ಯ ಎಂದರೆ ಬಹಳ ಪ್ರೀತಿ, ಭಾರತಿಯವರ ಕವನಗಳನ್ನು ಕೇಳಲು ಬಂದಿದ್ದೇವೆ ಎಂದು ಹೇಳುತ್ತಿದ್ದರು. ಅವರು ಉಗರ ದೇಶಾಭಿಮಾನಿಗಳಾದುದರಿಂದ ಮತ್ತೆ ಕೆಲವರು ಗೂಢಚಾರರು ತಾವೂ ದೇಶಾಭಿಮಾನಿಗಳು ಎಂದು ಹೇಳಿಕೊಂಡು ಬರುತ್ತಿದ್ದರು. ಹೇಗಾದರೂ ಅವರಿಂದ ಸ್ವಾತಂತ್ಯ್ರ ಹೋರಾಟದ ಸುದ್ದಿ ಸಂಗ್ರಹಸುವುದು ಅವರ ಉದ್ದೇಶ. ಆದರೆ ಸುಬ್ರಹ್ಮಣ್ಯ ಭಾರತಿ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು.

೧೯೧೦ ರ ಏಪ್ರಿಲ್ ತಿಂಗಳಲ್ಲಿ ಮಹಾಯೋಗಿ ಅರವಿಂದ ಘೋಷ್ ಅವರು ಪಾಂಡಿಚೆರಿಗೆ ಬಂದು ಸೇರಿದರು. ಅವರೊಂದಿಗೆ ಭಾರತಿ ನಿಕಟ ಸಂಬಂಧವನ್ನು ಬೆಳೆಸಿಕೊಂಡರು. ಅದು ಅವರ ಜೀವನದಲ್ಲಿಯೇ ಒಂದು ಹೊಸ ಘಟ್ಟವೆಂದು ಹೇಳಬಹುದು. ಆಗಲೇ ವಿ.ವಿ.ಎಸ್. ಅಯ್ಯರ್‌ರವರು ಭಿಕ್ಷುಕನ ವೇಷದಲ್ಲಿ ಪಾಂಡಿಚೆರಿಯನ್ನು ಸೇರಿದರು. ಅಯ್ಯರ್‌ರವರು ಆಂಗ್ಲ ಮತ್ತು ತಮಿಳು ಸಾಹಿತ್ಯದಲ್ಲಿ ದೊಡ್ಡ ಪಂಡಿತರು. ದೇವೀ ಉಪಾಸಕರು. ಅರವಿಂದರು ಮಹಾಯೋಗಿಗಳು, ಜ್ಞಾನಿಗಳು, ಭಕ್ತರು, ಇವರ ಸಹವಾಸದಲ್ಲಿ ಭಾರತಿಯವರ ಪ್ರತಿಭೆ ಮತ್ತಷ್ಟು ವಿಕಾಸಗೊಂಡಿತು. ಆತ್ಮ, ದೇವರು ಇಂತಹ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಯಿತು.

ಅರವಿಂದ ಪ್ರೇರಣೆಯಿಂದ ವೇದಮಂತ್ರಗಳು ಮತ್ತು ಅವುಗಳ ಆಧ್ಮಾತ್ಮಿಕ ಅರ್ಥದ ಕಡೆ ಭಾರತಿಯ ಗಮನ ಹರಿಯಿತು. ಕೆಲವು ಶ್ಲೋಕಗಳನ್ನು ತಮಿಳು ಭಾಷೆಗೆ ಭಾಷಾಂತರಿಸಿದರು. ಭಗವದ್ಗೀತೆಯ ತಮಿಳು ಅನುವಾದವನ್ನು ಮಾಡಿದರು.

ದೇವರತ್ತ ಮನಸ್ಸು

ಅರವಿಂದರೊಂದಿಗೂ ಮತ್ತು ವಿ.ವಿ.ಎಸ್. ಅಯ್ಯರ್‌ರೊಂದಿಗೂ ಭಾರತಿ ಕಡಲ ತೀರದಲ್ಲಿ ಕುಳಿತು ಸಂಭಾಷಣೆಯಲ್ಲಿ ಕಳೆಯುತ್ತಿದ್ದರು. ಅರವಿಂದರೂ, ಅಯ್ಯರ್ ಅವರೂ ಹಿಂದೆ ಉಗ್ರವಾದ ರಾಜಕೀಯ ಚಟುವಟಿಕೆಗಳಲ್ಲಿ ಪಾಲುಗೊಂಡವರು. ಈಗ ಆ ಆಸಕ್ತಿ ಕಡಿಮೆಯಾಗಿತ್ತು. ಭಾರತದ ಸಾಹಿತ್ಯ ಮತ್ತು ಸಂಸ್ಕೃತಿಗಳ ಶಾಶ್ವತವಾದ ಗುಣ ವಿಶೇಷಗಳನ್ನು ಕುರಿತು ಆಳವಾದ ಚಿಂತನೆ ಮಾಡುತ್ತಿದ್ದರು. ಅದೇ ಚಿಂತನೆಯಲ್ಲಿಯೇ ಭಾರತಿಯೂ ಮಗ್ನರಾದರು. ಮನುಷ್ಯನ ಜೀವನದ ಅರ್ಥ ಏನು ಎಂಬ ಪ್ರಶ್ನೆಯ ಕಡೆ ಅವರ ಮನಸ್ಸು ಹೆಚ್ಚು-ಹೆಚ್ಚು ತಿರುಗುತ್ತಿತ್ತು. ನಮ್ಮ ಕಣ್ಣಿಗೆ ಕಾಣದ, ನಾವು ಮುಟ್ಟಲು ಸಿಕ್ಕದ ಯಾವುದೋ ಮಹಾಶಕ್ತಿ, ಪರಾಶಕ್ತಿ ಇದೆ, ಆ ಶಕ್ತಿಯೇ ಪ್ರಪಂಚವನ್ನು ನಡೆಸುತ್ತಿದೆ. ತನ್ನ (ಭಾರತಿಯ) ಜೀವನವನ್ನು ಅದೇ ಶಕ್ತಿ ನಡೆಸುತ್ತಿದೆ ಎಂದು ಅವರಿಗೆ ಎನಿಸಿತು.

ಆಗಾಗ್ಗೆ “ಓಂ” ಎಂದು ಉದ್ಗಾರ ತೆಗೆಯುವುದು ಅವರಿಗೆ ಅಭ್ಯಾಸವಾಯಿತು.

“ಓಂ ಶಕ್ತಿ ಓಂ ಶಕ್ತಿ ಓಂ ಪರಾಶಕ್ತಿ” ಎಂಬ ಹಾಡಿನಲ್ಲಿ ಕೃಷ್ಣನು ಮಾವಿನ ಹಣ್ಣಿನಂತೆ ಸಿಹಿಯಾದ ಬಾಯಿಂದ ಕೊಳಲನೂದುತ್ತ ಕಾಳೀಯ ಸರ್ಪವನ್ನು ತುಳಿದು ಹಾಕಿದ ವರ್ಣನೆಯಿದೆ. ಪರಾಶಕ್ತಿಯೇ ಕೃಷ್ಣನ ವಿವಿಧ ಲೀಲೆಗಳ್ನನು ಮಾಡಿಸಿತು ಎಂಬ ಭಾವವಿದೆ.

ಕೃಷ್ಣನ ರೂಪದಲ್ಲಿ ಕಾಣಿಸಿಕೊಂಡ ಈ ಪರಾಶಕ್ತಿಯ ಲೀಲೆಗಳು ಭಾರತಿಯನ್ನು ಬಹಳವಾಗಿ ಆಕರ್ಷಿಸಿದವು. ತಾನು ರಚಿಸಿದ “ಕಣ್ಣನ್ ಪಾಟ್ಟು” ಎಂಬ ಹಾಡಿನಲ್ಲಿ ಕೃಷ್ಣನನ್ನು ತನ್ನ ತಂದೆ, ಸೇವಕ, ಮಗು, ತುಂಬ ಹುಡುಗ, ಪ್ರಿಯತಮ ಎಂದು ಸ್ತುತಿಸಿದ್ದಾರೆ. ಕೃಷ್ಣನನ್ನು  ಹೆಣ್ಣಿನಂತೆ ಭಾವಿಸಿ ತನ್ನ ತಾಯಿಯಂತೆಯೂ ತನ್ನ ಪ್ರೇಯಸಿಯಂತೆಯೂ ಕಲ್ಪಿಸಿಕೊಂಡು ಬಹು ಜನಪ್ರಿಯವಾದ ಹಾಡುಗಳನ್ನು ಕವಿ ರಚಿಸಿದರು.

ಆಗಸದಲಿ ಹಾರುವ ಹಕ್ಕಿ ಎಲ್ಲ ನಾನು,
ಮಣ್ಣಿನಲೋಡಾಡುವ ಮೃಗಗಳೆಲ್ಲ ನಾನು,
ಕಾಡಿನಲ್ಲಿ ಬೆಳೆವ ಗಿಡಮರಗಳೆಲ್ಲ ನಾನು,
ಗಾಳಿ ನಾನು, ಹರಿವ ನೀರು ನಾನು ಕಡಲೂ ನಾನು,

ಎಂದು “ನಾನು” ಎಂಬ ಹಾಡಿನಲ್ಲಿ ಮೊದಲನೆಯ ಪದ್ಯದಲ್ಲಿ ಕವಿ ಹೇಳುತ್ತಾನೆ.

ಹೀಗೆ ಕವಿಗೆ ತಾನು ಇತರರಿಂದ ಬೇರೆ ಎನ್ನಿಸುವುದಿಲ್ಲ. ನಮ್ಮ ಸುತ್ತ ಮರ-ಗಿಡ-ಕಾಡು-ಪ್ರಾಣಿ-ಪಕ್ಷಿಗಳ ವಿಶಾಲವಾದ ಪ್ರಪಂಚ ಇದೆಯಲ್ಲವೆ, ಅದರಿಂದ ತಾನು ಬೇರೆಯಲ್ಲ ಎನ್ನಿಸುತ್ತದೆ; ತಾನು ಅದರಲ್ಲಿ ಒಂದು ಭಾಗ ಎನ್ನಿಸಿ ಕವಿ ಅದರಲ್ಲಿ ಬೆರೆತುಹೋಗುತ್ತಾನೆ. ಹೀಗೆನ್ನಿಸಿದಾಗ ಆತನಿಗೆ ತುಂಬ ಉಲ್ಲಾಸವಾಗುತ್ತದೆ. ಇಂತಹ ಉಲ್ಲಾಸವನ್ನು ಹೇಳಿಕೊಳ್ಳುವ ಅನೇಕ ಹಾಡುಗಳನ್ನು ಭಾರತಿ ಬರೆದರು.

ಭಾರತಿ ತಮ್ಮ ಸುತ್ತಲಿನ ಜಗತ್ತನ್ನು ಮರೆತು ತಮ್ಮದೇ ಪ್ರಪಂಚವನ್ನು ಕಲ್ಪಿಸಿಕೊಳ್ಳುತ್ತಿದ್ದರು. ಕಣ್ಣಿಗೆ ಕಾಣುವ ಪ್ರಪಂಚವನ್ನು ಮರೆತು ಇಡೀ ಸೃಷ್ಟಿಯಲ್ಲಿ ಒಂದಾಗುತ್ತಿದ್ದರು. ಶ್ರೀ ಕೃಷ್ಣನೊಡನೆ ಆನಂದದಲ್ಲಿ ಮುಳುಗುತ್ತಿದ್ದರು.

ಬಡತನ

ಹೀಗೆ ಈ ಕಾಲದಲ್ಲಿ ಭಾರತಿ ಮನಸ್ಸಿನಲ್ಲಿ ಹೊಸ ಅನುಭವಗಳನ್ನು ಪಡೆಯುತ್ತಿದ್ದರು. ಸುಂದರ ಕವನಗಳನ್ನು ಬರೆಯುತ್ತಿದ್ದರು. ಆದರೆ ಸಂಸಾರ ನಡೆಸುವುದು ಬಹಳ ಕಷ್ಟವಾಗಿತ್ತು ಸಂಸಾರದ ವೆಚ್ಚಕ್ಕೆ ಸಾಕಾಗುವ ವರಮಾನ ಇರುತ್ತಿರಲಿಲ್ಲ. ಮಿತ್ರರು ಅಲ್ಪ ಸ್ವಲ್ಪ ಸಹಾಯವನ್ನು ಒದಗಿಸುತ್ತಿದ್ದರೂ ಬಡತನದ ಬೇಗೆ ಕಾಡುತ್ತಿತ್ತು. ಅವರ ದೇಹಸ್ಥಿತಿಯೂ ಕೆಟ್ಟಿತು. ಈ ದಾರಿದ್ಯ್ರದ ಜೊತೆಗೆ ಬ್ರಿಟಿಷ್ ಸರ್ಕಾರದ ಗೂಢಚಾರ ಕಿರುಕುಳ ಇದ್ದೇ ಇತ್ತು.

ಬ್ರಿಟಿಷ್ ಸರ್ಕಾರ ಭಾರತದಿಂದ ಅವರಿಗೆ ಯಾರೂ ಹಣ ಕಳುಹಿಸುತ್ತಾರೆ, ಹೇಗೆ ಕಳುಹಿಸುತ್ತಾರೆ ಎಂದು ಕಂಡು ಹಿಡಿದು ಎಲ್ಲವನ್ನೂ ನಿಲ್ಲಿಸಿ ಬಿಟ್ಟಿತು. ಬ್ರಿಟಿಷರ ಗೂಢಚಾರರು, ಸರ್ಕಾರದ ವಿರುದ್ಧ ಭಾರತಿ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಲು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗನನ್ನೇ ಹೊತ್ತುಕೊಂಡು ಹೋಗಿಬಿಟ್ಟರು! ಭಾರತಿಯವರು ನಡೆಸುತ್ತಿದ್ದ ಪತ್ರಿಕೆಗಳೂ ನಿಂತು ಹೋದವು. “ಸ್ವದೇಶ ಮಿತ್ರನ್” ಪತ್ರಿಕೆಯ ಮಾಲೀಕರಾದ ರಂಗಸ್ವಾಮಿ ಅಯ್ಯಂಗಾರ್ ತಿಂಗಳಿಗೆ ಮೂವತ್ತು ರೂಪಾಯಿ ಕಳುಹಿಸುತ್ತಿದ್ದರು. ಬ್ರಿಟಿಷ್ ಸರ್ಕಾರ ಅಡ್ಡಿ ಮಾಡದಿದ್ದಾಗ ಈ ಹಣ ಅವರ ಕೈ ಸೇರುತ್ತಿತ್ತು. ಇಷ್ಟೆ ವರಮಾನ! ಅಲ್ಲದೆ ಭಾರತಿಯವರದು ಇತರರಿಗೆ ಧಾರಾಳವಾಗಿ ಸಹಾಯ ಮಾಡುವ ಸ್ವಭಾವ.

ಒಮ್ಮೆ ಭಾರತಿಯವರ ಹೆಂಡತಿ ಚೆಲ್ಲಮ್ಮ ಅಂಗಳದಲ್ಲಿ ಅಕ್ಕಿಯಲ್ಲಿ ಮಣ್ಣು-ಕಲ್ಲುಗಳನ್ನು ತೆಗೆಯುತ್ತಿದ್ದರು. ಮಧ್ಯೆ ಅಕ್ಕಿಯನ್ನು ಅಲ್ಲಿಯೇ ಇಟ್ಟು ಒಳಗೆ ಕೆಲಸಕ್ಕೆಂದು ಹೋದರು. ಮತ್ತೆ ಬಂದು ನೋಡಿದರೆ ಅಕ್ಕಿ ಎಲ್ಲ ನೆಲದ ಮೇಲೆ ಚೆಲ್ಲಿದೆ, ಗುಬ್ಬಚ್ಚಿಗಳು ಸಂತೋಷವಾಗಿ ಕುಪ್ಪಳಿಸುತ್ತ ಆರಿಸಿಕೊಳ್ಳುತ್ತಿವೆ. ಭಾರತಿ ಅಕ್ಕಿಯನ್ನು ಪಕ್ಷಿಗಳಿಗೆ ಹಾಕಿಬಿಟ್ಟಿದ್ದರು. ಚೆಲ್ಲಮ್ಮನ ಕಣ್ಣಿನಿಂದ ಹನಿಗಳುರುಳಿದವು. ಭಾರತಿಗೆ ಆಕೆಯ ದುಃಖ ಅರ್ಥವಾಗಲಿಲ್ಲ “ನೋಡು, ಚೆಲ್ಲಮ್ಮ ಈ ಪಕ್ಷಿಗಳು ಎಷ್ಟು ಖುಷಿಯಾಗಿವೆ! ನಾವೂ ಹಾಗೆಯೇ ಏಕಿರಬಾರದು?” ಎಂದರು.

"ನೋಡು ಚೆಲ್ಲಮ್ಮ, ಈ ಪಕ್ಷಿಗಳು ಎಷ್ಟು ಖುಷಿಯಾಗಿವೆ"!

ಸ್ವತಂತ್ರವಾದ ಗುಬ್ಬಚ್ಚಿಗಳನ್ನೂ ಸ್ವಾತಂತ್ಯ್ರ ಇಲ್ಲದ ಮನುಷ್ಯರನ್ನೂ ಹೋಲಿಸಿ ಅವರು ಒಂದು ಸುಂದರವಾದ ಕವನವನ್ನೇ ಬರೆದಿದ್ದಾರೆ.

ಮತ್ತೆ ಭಾರತಕ್ಕೆ

ಈ ಬಗೆಯ ದೇಶ ಭ್ರಷ್ಟ ಜೀವನವನ್ನು ಮುಂದುವರಿಸುವುದಕ್ಕಿಂತಲೂ ಮತ್ತೆ ಸ್ವದೇಶಕ್ಕೆ ಹಿಂತಿರುಗಬೇಕೆಂದು ಭಾರತಿ ನಿರ್ಧರಿಸಿದರು. ಆ ವೇಳೆಗೆ ೧೯೧೮ ರ ಕೊನೆಯ ಭಾಗದಲ್ಲಿ ಮೊದಲನೆಯ ಮಹಾಯುದ್ಧವು ಮುಗಿದು ದೇಶದ ರಾಜಕಾರಣದಲ್ಲಿ ಬದಲಾವಣೆಗಳಾಗಿದ್ದವು. ಭಾರತಿ ಪಾಂಡಿಚೆರಿಯಿಂದ ಹೊರಬಿದ್ದರು. ಸರ್ಕಾರ ಇವರನ್ನು ಕಡಲೂರಿನಲ್ಲಿ ದಸ್ತಗಿರಿ ಮಾಡಿ ವಿಚಾರಣೆಗೆ ಗುರಿ ಮಾಡಿತು. ಆದರೆ ಮದರಾಸಿನ ಕೆಲವು ಪ್ರಮುಖರು ಮಧ್ತೆ ಪ್ರವೇಶಿಸಿದ್ದರಿಂದ ಬಿಡುಗಡೆ ಆಯಿತು. ತಮ್ಮ ಹೆಂಡತಿಯ ಊರಾದ ತಿರುನೆಲ್‌ವೇಲಿ ಜಿಲ್ಲೆಯ ಕಡಾಯಂ ಎನ್ನುವ ಹಳ್ಳಿಯನ್ನು ಸೇರಿದರು.

ಅಲ್ಲಿ ಸುಮಾರು ಎರಡು ವರ್ಷಗಳ ಕಾಲ ಬಹು ರಮ್ಯವಾದ ಪ್ರಕೃತಿಯ ಪರಿಷರದಲ್ಲಿ ವಾಸವಾಗಿದ್ದರು.

ಭಾರತಿಯವರ ಆಂತರಿಕ ಜೀವನ, ಮನೋಧರ್ಮ ಇವುಗಳಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಜಾತಿ ಮತ ಭೇದಗಳನ್ನು ಅವರು ಲೆಕ್ಕಿಸುತ್ತಿರಲಿಲ್ಲ. ಕೆಲವು ಜಾತಿಗಳನ್ನು “ಮುಟ್ಟಬಾರದು” ಎಂದು ಇತರರು ದೂರ ಇಡುತ್ತಿದ್ದ ಕಾಲ ಅದು. (ಇದು ತಪ್ಪು ಎಂದು ಗಾಂಧೀಜಿ ಅವರನ್ನು ಹರಿಜನರು, ದೇವರ ಮಕ್ಕಳು ಎಂದು ಕರೆದರು.) ಭಾರತಿ ಹರಿಜನರೊಂದಿಗೆ ಬೆರೆಯುತ್ತಿದ್ದರು. ಹೆಂಗಸರಿಗೆ ಸಮಾಜದಲ್ಲಿ ಸಮವಾದ ಸ್ಥಾನವೂ ಸ್ವಾತಂತ್ಯ್ರವೂ ಇರಬೇಕೆಂಬ ತಮ್ಮ ನಿಲುವನ್ನು ಪ್ರದರ್ಶಿಸಲು ಹೆಂಡತಿಯ ಕೈ ಹಿಡಿದುಕೊಂಡು ಬೀದಿಯಲ್ಲಿ ಓಡಾಡುತ್ತಿದ್ದರು. ಹಳ್ಳಿಯವರು ಹಿಂದಿನ ಸಂಪ್ರದಾಯಗಳನ್ನು ಅನುಸರಿಸುವವರು. ಅವರಿಗೆ ಭಾರತಿಯವರು ಸಂಪ್ರದಾಯಗಳನ್ನು ಮುರಿದದ್ದನ್ನು ಕಂಡು ಕೋಪ. ಹಳ್ಳಿಯ ಆಚೆ ಒಂದು ಮನೆಗೆ ಭಾರತಿ ಬದಲಾಯಿಸಬೇಕಾಯಿತು.

ಈ ಮಧ್ಯೆ ಭಾರತಿ ಕೆಲವು ವೇಳೆ ಹೊರ ಊರುಗಳಿಗೆ ಹೋಗಿ ದೇಶದ ಗುಲಾಮಗಿರಿ, ಕಷ್ಟಗಳನ್ನು ಕುರಿತು ಭಾಷಣಗಳನ್ನು ಮಾಡುತ್ತಿದ್ದರು, ತಮ್ಮ ಗೀತೆಗಳನ್ನೂ ಪ್ರಚಾರ ಮಾಡುತ್ತಿದ್ದರು; ಇವರ ಮಾತುಗಳನ್ನು, ಹಾಡುಗಳನ್ನು ಕೇಳಿದರೆ ಜನರಿಗೆ ರೋಮಾಂಚನ. ತಂಡೋಪತಂಡವಾಗಿ ಜನಗಳು ಸೇರುತ್ತಿದ್ದರು.

ಗಾಂಧೀಜಿಯ ಭೇಟಿ

೧೯೧೯ ರಲ್ಲಿ ಮಹಾತ್ಮಾ ಗಾಂಧಿಯವರು ಮದರಾಸಿಗೆ ಬಂದಿದ್ದಾಗ ಭಾರತಿ ಅವರನ್ನು ಭೇಟಿ ಮಾಡಿದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡಿದ್ದ ಸತ್ಯಾಗ್ರಹದ ಚಳವಳಿಯನ್ನು ಮೆಚ್ಚಿಕೊಂಡಿದ್ದರು. ಅದಕ್ಕಾಗಿ ಹಣ ಕೂಡಿಸಿ ಕಳುಹಿಸಿದ್ದರು.

ಭಾರತಿ ಗಾಂಧೀಜಿಯನ್ನು ಭೇಟಿ ಮಾಡಿದುದು ಸ್ವಾರಸ್ಯವಾದ ಘಟನೆ. ಆಗಲೆ ಗಾಂಧೀಜಿ ತುಂಬ ಪ್ರಸಿದ್ಧರಾಗಿದ್ದರು. ಮದರಾಸಿನಲ್ಲಿ ಒಂದು ನಿಮಿಷ ಅವರಿಗೆ ಬಿಡುವಿಲ್ಲ. ಅವರ ಭೇಟಿ ತುಂಬ ಕಷ್ಟ. ಅವರ ಕಾರ್ಯದರ್ಶಿ ಮಹದೇವ ದೇಸಾಯಿಯವರಿಗೆ ಮೊದಲೇ ತಿಳಿಸಿ ವೇಳೆ ಗೊತ್ತು ಮಾಡಿಕೊಳ್ಳಬೇಕು. ಒಂದು ದಿನ ಗಾಂಧೀಜಿಯವರು ರಾಜಾಜಿ, ಸತ್ಯಮೂರ್ತಿ ಮೊದಲಾದವರೊಡನೆ ಮಾತನಾಡುತ್ತಿದ್ದರು. ಯಾರೂ ಒಳಕ್ಕೆ ಬರದಂತೆ ನೋಡಿಕೊಳ್ಳಲು ರಾಮಸ್ವಾಮಿ ಎನ್ನುವವರನ್ನು ನಿಲ್ಲಿಸಿದ್ದರು. ಭಾರತಿಗೆ ರಾಮಸ್ವಾಮಿ ಚೆನ್ನಾಗಿ ಪರಿಚಯ. ಭಾರತಿ ಬಂದವರೇ, “ಓ ಚೆನ್ನಾಗಿದ್ದೀಯಾ?” ಎಂದು ರಾಮಸ್ವಾಮಿಗೆ “ನಿಲ್ಲಿ” ಎನ್ನಲು ಬಾಯಿಯೇ ಬರಲಿಲ್ಲ. ಒಳಕ್ಕೆ ಹೋದ ಭಾರತಿ, ತಮ್ಮನ್ನು ಯಾರಾದರೂ ಗಾಂಧೀಜಿಗೆ ಪರಿಚಯ ಮಾಡಿಕೊಡಲಿ ಎಂದು ಕಾಯಲಿಲ್ಲ. “ಗಾಂಧೀಜಿ, ಇವತ್ತು ಸಂಜೆ ಐದೂವರೆಗೆ ನಾನು ಭಾಷಣ ಮಾಡುತ್ತಿದ್ದೇನೆ. ಅಧ್ಯಕ್ಷತೆ ವಹಿಸುತ್ತೀರಾ?” ಎಂದು ಕೇಳಿದರು. ಇವರು ಯಾರೋ ಮುಖ್ಯ ವ್ಯಕ್ತಿ ಇರಬೇಕು ಎನ್ನಿಸಿರಬೇಕು ಬಾಪೂಜಿಗೆ. ಅವರಿಗೆ ಅಂದು ಸಂಜೆ ಬಿಡುವಿರಲಿಲ್ಲ. “ನಿಮ್ಮ ಸಭೆ ನಾಳೆ ಆಗಬಹುದೆ?” ಎಂದು ಭಾರತಿಯವರನ್ನು ಕೇಳಿದರು. ಭಾರತಿ “ನಾಳೆಗೆ ಮುಂದಕ್ಕೆ ಹಾಕುವ ಹಾಗಿಲ್ಲ. ನಾನೀಗ ಹೊರಡುತ್ತೇನೆ. ಗಾಂಧೀಜಿ, ನಿಮ್ಮ ಚಳವಳಿ ಗೆಲ್ಲಲಿ ಅಂತ ನನ್ನ ಹಾರೈಕೆ” ಎಂದು ಹೇಳಿ ಹೊರಟು ಬಿಟ್ಟರು. “ಈತ ಯಾರು?” ಎಂದು ಗಾಂಧೀಜಿ ಕೇಳಿದರು. “ನಮ್ಮ ತಮಿಳು ನಾಡಿನ ಕವಿ” ಎಂದರು ರಾಜಾಜಿ. ಗಾಂಧೀಜಿ ಎಂದರಂತೆ: “ಇವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇವರನ್ನು ನೋಡಿಕೊಳ್ಳಲು ತಮಿಳುನಾಡಿನಲ್ಲಿ ಯಾರೂ ಇಲ್ಲವೇ?”

ಗಾಂಧಿಯವರೊಡನೆ ಭೇಟಿ ಸ್ವಲ್ಪ ಕಾಲದ್ದಾದರೂ ಭಾರತಿಯವರ ಮೇಲೆ ಪರಿಣಾಮಕಾರಿಯಾಗಿತ್ತು. ಭಾರತಿ ಒಂದು ಕವನದಲ್ಲಿ ಘೋಷಿಸಿದರು!

ಭಾರತ ದೇಶವನ್ನು
ಬಾಳಿಸಲು ಬಂದ ಗಾಂಧಿ
ಮಹಾತ್ಮ ! ನೀ ಬಾಳು ! ಬಾಳು !

ನೆಮ್ಮದಿಯೊಡನೆ ಬಂತು ಸಾವು

೧೯೨೦ ರಲ್ಲಿ ಮದರಾಸಿಗೆ ಹೋಗಿ “ಸ್ವದೇಶ ಮಿತ್ರನ್” ಉಪ-ಸಂಪಾದಕರಾಗಿ ಭಾರತಿ ಸೇರಿಕೊಂಡರು.

ಭಾರತಿಗೆ ಈಗ ಕೈತುಂಬ ಕೆಲಸವಿತ್ತು. ಮಿತ್ರರಿದ್ದರು. ಸಭೆಗಳನ್ನುದ್ದೇಶಿಸಿ ಮಾತನಾಡುವುದಿತ್ತು, ಹಾಡುವುದಿತ್ತು. ನಿಶ್ಚಿತ ವರಮಾನವಿತ್ತು. ದಾರಿದ್ಯ್ರದ ದೆಸೆಯಿಂದಲೂ, ಅನಾರೋಗ್ಯದಿಂದಲೂ ಕೆಲವು ವರ್ಷಗಳಿಂದ ಭಾರತಿ ಅನುಭವಿಸುತ್ತಿದ್ದ ದುಗುಡ ದೂರವಾಗಿತ್ತು. ಮೊದಲ ಬಾರಿಗೆ ತಕ್ಕ ಮಟ್ಟಿಗೆ ನೆಮ್ಮದಿಯಾದ ಜೀವನವನ್ನು ಈಗ ನಡೆಸುತ್ತಿದ್ದರು.

ಆದರೆ ಮೃತ್ಯುದೇವತೆ ಕಾದಿತ್ತು. ಮದಾರಾಸಿನಲ್ಲಿ ಟ್ರಿಪ್ಲಿಕೇನ್ ಎಂಬ ಭಾಗದಲ್ಲಿರುವ ಪಾರ್ಥಸಾರಥಿ ಗುಡಿಗೆ, ಭಾರತಿ ಆಗಾಗ ಹೋಗುತ್ತಿದ್ದರು. ಅಲ್ಲಿನ ಆನೆಗೆ ಹಣ್ಣು, ತೆಂಗಿನಕಾಯಿ ಕೊಡುವುದು ಅವರ ವಾಡಿಕೆ. ಒಂದು ದಿನ ಆನೆ ಮತ್ತಿನಲ್ಲಿತ್ತು. ತನ್ನ ಸೊಂಡಿಲಿನಲ್ಲಿ ಭಾರತಿಯನ್ನು ಹಿಡಿದೆತ್ತಿ ನೆಲಕ್ಕೆ ಅಪ್ಪಳಿಸಿತು. ಅವರು ಪ್ರಜ್ಞಾಹೀನರಾದರು. ಭಾರತಿಯ ಹಳೆಯ ಮಿತ್ರ ಕುವಲೈಕಣ್ಣನ್ ಧೈರ್ಯವಾಗಿ ನುಗ್ಗಿ ಭಾರತಿಯನ್ನು ಎತ್ತಿ ಹೊರತಂದನು- ಆಸ್ಪತ್ರೆಗೆ ಸೇರಿಸಿದನು. ೧೯೨೧ ನೆಯ ಇಸವಿ ಸೆಪ್ಟೆಂಬರ್ ಹನ್ನೆರಡರಂದು ಮುಂಜಾವಿನಲ್ಲಿ ಭಾರತಿ ಇಹಲೋಕ ಯಾತ್ರೆಯನ್ನು ಮುಗಿಸಿದರು. ಆಗ ಅವರಿಗೆ ೩೯ ವರ್ಷಗಳೂ ತುಂಬಿರಲಿಲ್ಲ.

ಭಾರತಿಯ ಕೃತಿಗಳು

ಅಲ್ಪಾಯುವಾಗಿ ಭಾರತಿ ತೀರಿಕೊಂಡರು. ಅದರಲ್ಲಿಯೂ ಬಹುಭಾಗ ಅನಾರೋಗ್ಯ ಮತ್ತು ಬಡತನದ ಕಾಟ. ಇಷ್ಟಾದರೂ ಆಧುನಿಕ ತಮಿಳು ಸಾಹಿತ್ಯಕ್ಕೆ ಅವರು ಮಹತ್ವದ ಕೊಡುಗೆ ಕೊಟ್ಟರು. ಒಂದು ಹೊಸ ಯುಗದ ಪ್ರವರ್ತಕರಾದರು. ಒಂದು ಪರಂಪರೆಗೆ ಮೂಲ ಪುರುಷರಾದರು.

ಉತ್ತಮ ವಿದ್ವಾಂಸರಾದರೂ ಅವರ ರಚನೆಗಳಲ್ಲಿ ಪಾಂಡಿತ್ಯ ಪ್ರದರ್ಶನವಿಲ್ಲ. ನಿತ್ಯ ಬಳಕೆಯ ಭಾಷೆಯನ್ನೇ ಉಪಯೋಗಿಸಿ ಅದಕ್ಕೆ ಒಂದು ಮಂತ್ರಶಕ್ತಿ ತುಂಬಿದರು. ಅವರು ಕಟ್ಟಿದ ಹಾಡುಗಳು ಸಾಮಾನ್ಯ ಜನರ ಬಾಯಲ್ಲಿ ನಲಿದಾಡುತ್ತವೆ; ಸ್ಪೂರ್ತಿಯನ್ನೊದಗಿಡುತ್ತವೆ; ಮನರಂಜನೆ ಮಾಡುತ್ತವೆ; ಶ್ರಮ ಪರಿಹಾರ ಮಾಡುತ್ತವೆ.

ಅವರ ಒಟ್ಟು ಕವನಗಳ ರಾಶಿಯಲ್ಲಿ ಅವರ ದೇಶಭಕ್ತಿ ಗೀತೆಗಳು ಐದರಲ್ಲಿ ಒಂದು ಭಾಗವೇ ಆದರೂ ಇವುಗಳಿಂದಲೇ ಅವರ ಖ್ಯಾತಿ ತಮಿಳುನಾಡಿನಲ್ಲಿಯೂ ಹೊರನಾಡುಗಳಲ್ಲಿಯೂ ವಿಶೇಷವಾಗಿ ಹರಡಿತು. ಇವುಗಳ ಸೊಗಸನ್ನು ಸವಿಯಬೇಕಾದರೆ ತಮಿಳಿನಲ್ಲೇ ಅವನ್ನು ಓದಬೇಕು. ಆದರೂ ಕವಿಯ ದೇಶಪ್ರೇಮ ಏನೆಂದು ತಿಳಿಯಲು ಕೆಲವು ಉದಾಹರಣೆಗಳನ್ನು ಕೊಡಬಹುದು. ಭಾರತಿಯವರು ಕವನಗಳನ್ನು ಬರೆದಾಗ, ಬ್ರಿಟಿಷರ ಮುಷ್ಟಿಯಲ್ಲಿ ಭಾರತ ನರಳುತ್ತಿತ್ತು. ಭಾರತವನ್ನು ಹೊಗಳುವುದು -ಸ್ವಾತಂತ್ಯ್ರ ಬೇಕು ಎನ್ನುವುದ- ಕಡೆಗೆ “ವಂದೇ ಮಾತರಂ” ಎನ್ನುವುದೂ ಸೆರೆಮನೆಗೆ ದಾರಿಯಾಗಿತ್ತು ಎಂಬುದನ್ನು ನೆನಪಿಡಬೇಕು.

ಭಾರತದೇಶದಲ್ಲಿ ವೈವಿಧ್ಯವಿದೆ. ಹಲವು ಧರ್ಮಗಳವರು, ಹಲವು ಭಾಷೆಗಳವರು, ಹಲವು ಭಾವಗಳವರು ಇದ್ದಾರೆ. ಆದರೆ ದೇಶ ಒಂದೇ.

ಅವಳ ಹೃದಯ ಒಂದು;
ಹದಿನೆಂಟು ಭಾಷೆಗಳ ಅವಳು ಮಾತಾಡುವಳು
ಆದರೂ ಅವಳ ಮನವೊಂದು.

ಎಲ್ಲ ಭಾರತೀಯರಲ್ಲಿ ಸ್ವಾತಂತ್ಯ್ರ ಪ್ರೇಮವೂ ಧೈರ್ಯವೂ ಇಲ್ಲವಲ್ಲ ಎಂದು ಅವರು ಕೊರಗಿದರು.

ಸಹಿಸಲಾರದು ಹೃದಯ ಇನ್ನು ಇದನು;
ಸಂಕಲ್ಪವಿಲ್ಲದ ಈ ಜನರ ನೋಡು,
ಭಯಭೀತರಿವರು, ಆಹಾ! ಏನ ಕಂಡರೂ
ನಡುಗುವರು ಇವರು, ನೋಡು

ಭಾರತೀಯರೆಲ್ಲ ಒಂದೇ ಎಂದು ಘೋಷಿಸುವ ಹಾಡುಗಳು ಮೊಳಗಿದವು:

ಎಲ್ಲರೂ ಒಂದೆ ಕುಲ ಎಲ್ಲರೂ ಒಂದೆ ಜನ
ಎಲ್ಲರೂ ಭಾರತದ ಮಕ್ಕಳೇ;
ನ್ಯಾಯ ಒಂದೆಲ್ಲರಿಗೆ, ಎಲ್ಲರಿಗೂ ಬೆಲೆಯೊಂದೇ
ಎಲ್ಲರೂ ಈ ನಾಡದೊರೆಗಳ್- ನಾವ್
ಎಲ್ಲರೂ ಈ ನಾಡದೊರೆಗಳ್.

ಭಾರತ ಸ್ವಾತಂತ್ಯ್ರ ಪಡೆಯುವುದಕ್ಕೆ ಇಪ್ಪತ್ತಾರು ವರ್ಷಗಳ ಮುಂಚೆಯೇ ಅವರು ತೀರಿಕೊಂಡರು. ಆದರೆ ಸ್ವತಂತ್ರ ಭಾರತ ಹೇಗಿರಬೇಕೆನ್ನುವ ಕನಸನ್ನು ಕಂಡು ನಲಿದರು:

ಎಲ್ಲೆಲ್ಲೂ ಸ್ವಾತಂತ್ಯ್ರ
ಎಂಬುದೇ ಮಾತು – ನಾವ್
ಎಲ್ಲಾ ಸಮ, ಇದು ನಿರ್ಧರಿಸಿಯಾಯ್ತು.
ಉಳುಮೆಗೂ ಕೆಲಸಕೂ
ವಂದಿಸುವೆವು, ಬರಿದೆ
ಉಂಡು ಕೊಬ್ಬಿರುವರ
ನಿಂದಿಸುವೆವು.

ಹೆಂಗಸು ಗಂಡಸು ಸರಿಸಮಾನರು, ಗಂಡಸಿಗಿರುವ ಸ್ಥಾನ ಮತ್ತು ಹಕ್ಕು ಹೆಂಗಸಿಗೂ ಇರಬೇಕು ಎಂದು ಅವರು ಸಾರಿದರು;

ಕಣ್ಣೊಂದನ್ನು ಕಿತ್ತುಕೊಂಡು
ಎಂದೆಂದಿಗೂ ದೃಷ್ಟಿ ಮಸುಕ ಮಾಡೋಣವೆ?
ಅಜ್ಞಾನ ತೊಲಗಬೇಕೆ? – ಸ್ತ್ರೀಯ
ಕ್ಷಿತಿಜ ವಿಸ್ತರಿಸು!

ಈ ದೇಶಭಕ್ತಿಗೀತೆಗಳು ಮಾತ್ರವಲ್ಲದೆ ಅನೇಕ ದೇವತಾ ಸ್ತೋತ್ರಗಳನ್ನು ಜ್ಞಾನಪರವಾದ ಹಾಡುಗಳನ್ನು ಭಾರತಿ ರಚಿಸಿದರು. ಶಿಶು ಸಾಹಿತ್ಯಕ್ಕೂ ಭಾರತಿಯ ಕೊಡುಗೆ ಬಹಳವಿದೆ. “ಪಾಪಾಪಾಟ್ಟು” (ಕಂದನ ಹಾಡು) ಎಂಬ ಹೆಸರನ್ನು ಕೊಟ್ಟು ಮಕ್ಕಳಲ್ಲಿ ದೇಶಭಕ್ತಿಯೂ ದೈವಭಕ್ತಿಯೂ ಒಳ್ಳೆಯ ನಡತೆಯೂ ಬೆಳೆಯುವಂತೆ ಅನೇಕ ಸರಳ ಧಾಟಿಯ ಹಾಡುಗಳನ್ನು ಕಟ್ಟಿದರು. ಅವರು ರಚಿಸಿದ “ಪಾಂಚಾಲಿ ಶಪಥಂ”ದಲ್ಲಿ ಪಾಂಡವರ ಹೆಂಡತಿ ದ್ರೌಪದಿಯ ಕಥೆ ಇದೆ. ಸ್ತ್ರೀ ಸ್ವಾತಂತ್ಯ್ರವನ್ನು ಎತ್ತಿ ಸಾರುವ ಈ ರಚನೆ ವೀರರಸದಿಂದ ತುಂಬಿದೆ. ದ್ರೌಪದಿಯ ಕಷ್ಟಗಳನ್ನು ಕವಿ ವರ್ಣಿಸುವಾಗ, ಬ್ರಿಟಿಷರ ಹಿಡಿತಕ್ಕೆ ಸಿಕ್ಕು ನರಳುತ್ತಿದ್ದ ಭಾರತದ ಕಷ್ಟಗಳನ್ನು ವರ್ಣಿಸುತ್ತಿದ್ದಾರೆ ಎನ್ನಿಸುತ್ತದೆ.

ಮುಖ್ಯವಾಗಿ ಸುಬ್ರಹ್ಮಣ್ಯ ಭಾರತಿ ಕವಿಯೇ ಆದರೂ ಸಣ್ಣ ಕಥೆಗಳು, ಕಾದಂಬರಿಗಳು, ವಿಮರ್ಶೆಗಳು, ಶಬ್ದ ಚಿತ್ರಗಳು ಇವನ್ನೂ ಬರೆದಿದ್ದಾರೆ.

ಇದು ನಮ್ಮ ಭಾರತ

ಬಡತನ, ಹುಟ್ಟಿದೂರಿನಿಂದ ದೂರವಾಗಿ ಎಲ್ಲಿಯೋ ಜೀವನ ನಡೆಸುವ ಕಷ್ಟ- ಎಲ್ಲವನ್ನೂ ನುಂಗಿಕೊಂಡು ದೇಶಕ್ಕಾಗಿ ಬಾಳಿದ ಶಕ್ತಿ ಕವಿ ಸುಬ್ರಹ್ಮಣ್ಯ ಭಾರತಿ. ಅವರು ಬದುಕಿದ್ದುದು ಮೂವತ್ತೊಂಬತ್ತೇ ವರ್ಷಗಳು. ಆದರೆ ಅವರ ಕಾವ್ಯ ಜನರನ್ನೆಚ್ಚರಿಸುವ ರಣಕಹಳೆಯಾಯಿತು. ದಾಸ್ಯದ ದಿನಗಳಲ್ಲಿ ಅವರು ಹಾಡಿದರು;

ವಿಜಯವೆ ನಮ್ಮದಾಗಲಿ,
ಸೋಲು ಸಾವುಗಳೆ ಬರಲಿ,
ನಾವೆಲ್ಲ ಒಂದಾಗಿ ನಿಲ್ಲುವೆವು,
ಘೋಷಣೆಯಲ್ಲಿ ದನಿ ಎತ್ತುವೆವು-“ತಾಯಿ, ತಲೆಬಾಗುವೆವು ನಿನಗೆ”

ನಮ್ಮ ನಾಡು ಭಾರತವನ್ನು ಅವರು ಚಿತ್ರಿಸಿದ್ದಾರೆ; ಆ ಚಿತ್ರವು ನಮ್ಮ ಹೃದಯಗಳಲ್ಲಿ ಸ್ಥಿರವಾಗಿ ಬೆಳಗಲಿ;

ಜ್ಞಾನದಲ್ಲಿ ಯೋಗಸಮಾಧಿಯಲ್ಲಿ
ಸ್ವಾಭಿಮಾನದಲ್ಲಿ ಔದಾರ್ಯದಲ್ಲಿ
ಗಾನದಲ್ಲಿ ಜೇನ್ಸುರಿವ ಕಾವ್ಯದಲ್ಲಿ
ನಮ್ಮ ಭಾರತವೇ ಜಗದಲೆಲ್ಲ ಶ್ರೇಷ್ಠ ನಾಡು.
ವೀರ ಸಾಹಸದಲ್ಲಿ ಸಮರ ಶೌರ್ಯದಲ್ಲಿ
ಕರುಣೆಯಲ್ಲಿ ನೆರವು ನೀಡುವುದರಲ್ಲಿ
ಅನುಭವಕೆ ಆಲೋಚನೆಯ ಬೆರೆಸಿ ಬೆಳೆಸುವುದರಲ್ಲಿ
ಉಜ್ವಲವಾಗಿ ಮೆರೆವ ಭಾರತ ನಮ್ಮ ನಾಡು.