ಪ್ರಯಾಗ ನಮ್ಮ ದೇಶದ ಪವಿತ್ರ ತೀರ್ಥ ಕ್ಷೇತ್ರ. ಇಲ್ಲಿಗೆ ಅಲಹಾಬಾದ್ ಎಂಬ ಹೆಸರೂ ಇದೆ. ಇಲ್ಲಿಗೆ ಸಮೀಪದ ನಿಹಾಲಪುರಕ್ಕೆ ಬಹಳ ಹಿಂದೆ ರಜಪೂತ ಠಾಕೂರ್ ಕುಟುಂಬವೊಂದು ಲೊಹಂದಾದಿಂದ ಬಂದು ನೆಲೆಸಿತು. ಮಹೀಪಾಲ ಸಿಂಹರು ಲೊಹಂದಾದಲ್ಲಿ ಭಾರೀ ಜಮೀನ್‌ದಾರರು. ಸಿಪಾಯಿ ದಂಗೆಯ ಕಾಲದಲ್ಲಿ ತಲೆ ತಪ್ಪಿಸಿಒಂಡು ಬಂದ ಆಂಗ್ಲ ಸೈನಿಕರಿಗೆ ಅಡಗಿಕೊಳ್ಳಲು ಅವಕಾಶ ಕೊಡಲಿಲ್ಲ. ಸಿಪಾಯಿಗಳು ಅವರ ರೈತನ ಮನೆಯಲ್ಲಿ ಅಡಗಿಕೊಂಡರು. ದಂಗೆಯ ಬಿಸಿ ಇಳಿದ ನಂತರ ಸಿಪಾಯಿಗಳು ಜಮೀನ್ದಾರಿಕೆ ಕೊಡಿಸಿದರು. ಹಾಗೆ ಊರು ಬಿಟ್ಟು ಮಹೀಪಾಲ ಸಿಂಹರು ನಿಹಾಲದಲ್ಲಿ ನೆಲೆಸಿದರು. ಅವರ ಹಿರಿಯ ಮಗ ರಾಮನಾಥ ಸಿಂಹ. ಅವರ ಹೆಂಡತಿ ಧೀರಾಜ್ ಕುಮಾರಿ. ಈಕೆ ತುಂಬ ಸುಂದರಿ. ಧೈರ್ಯವಂತ ಮಹಿಳೆ.

ಬಾಲ್ಯ

ತಂದೆ ಮಹೀಪಾಲ ಸಿಂಹರ ಅಕಾಲ ಮರಣದಿಂದ ರಾಮನಾಥ ಮನೆಯ ಯಜಮಾನನಾದ. ಸಹೋದದ ಸಹಾಯದಿಂದ ಸಂಸಾರ ನಿರ್ವಹಿಸುತ್ತಿದ್ದ. ಸರ್ಕಾರದ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. ದೊಡ್ಡ ಸಂಸಾರ. ಬಡತನದ ಬವಣೆ ಕಿತ್ತು ತಿನ್ನುತ್ತಿದ್ದರೂ ಕುಲ ಪರಂಪರೆಗಳ ಪಾಲನೆಯಲ್ಲಿ ತುಂಬ ಕಟ್ಟು ನಿಟ್ಟು. ಧೀರಾಜ್ ಕುಮಾರಿ ಮಕ್ಕಳನ್ನು ಶಿಸ್ತಿನಿಂದ ಬೆಳೆಸುತ್ತಿದ್ದರು. ತಂದೆಯೂ ಹಾಗೇ, ಶಿಸ್ತಿನ ವಷಯದಲ್ಲಿ ತುಂಬ ಕಠೋರ. ಧರ್ಮವೇ ಜೀವನದ ಮೂಲವೆಂದು ತಿಳಿದರು. ೧೯೦೪ ರ ವಸಂತ ಪಂಚಮಿಯಂದು ಧೀರಾಜ್ ಕುಮಾರಿ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತರು. ಅಚ್ಚ ಬಿಳಿ ಬಣ್ಣದ, ಗುಂಡು ಗುಂಡಾದ ಮುದ್ದು ಮಗು. ಹಿಂದಿನ ಗಂಡು ಮಗು ಹೆತ್ತ ಕೆಲವೇ ದಿನಗಳಲ್ಲಿ ಮಣ್ಣು ಮಾಡಿ ಬಂದ ತಂದೆ-ತಾಯಿಗೆ ಈ ಮಗುವಿನಲ್ಲಿ ಎಲ್ಲಿಲ್ಲದ ಮಮತೆ ಉಕ್ಕಿ ಹರಿಯಿತು. ಗಟ್ಟಿ ಮುಟ್ಟಾದ ಸುಂದರ ಮಗುವಿಗೆ “ಸುಭದ್ರಾ” ಎಂದು ನಾಮಕರಣ ಮಾಡಿದರು. ಮೂವರು ಅಣ್ಣಂದಿರು, ಮೂವರು ಅಕ್ಕಂದಿರುಗಳ ಅಕ್ಕರೆಯ ತಂಗಿ ಸುಭದ್ರಾ ಮನೆ ಮಂದಿಗೆಲ್ಲ ಸಕ್ಕರೆಯ ಗೊಂಬೆ.

ಮನೆಯ ಹೆಣ್ಣು ಮಕ್ಕಳು ತಲೆ ಕೂಡ ಹೊರಗೆ ಹಾಕುವಂತಿಲ್ಲ. ಮಡಿ ಮೈಲಿಗೆ ಪಾಲನೆಯಲ್ಲೂ ಕಠೋರ ನಿಯಮ. ಅಡಿಮೆ ಮನೆಗೆ ಮನೆಯ ಮಕ್ಕಳೂ ಮೈಲಿಗೆಯಲ್ಲಿ ಪ್ರವೇಶಿಸುವಂತಿಲ್ಲ. ಆರು ವರ್ಷ ದಾಟಿದರೆ ಹೆಣ್ಣು ಮಕ್ಕಳು ದೊಡ್ಡವರಂತೆ ವರ್ತಿಸಬೇಕು.

ಕಷ್ಟಗಳ ನಡುವೆ ಓದು

ಹಿರಿಯ ಅಣ್ಣ ರಾಮ ಅವತಾರ್ ಸಿಂಹ ಓದುವುದರಲ್ಲಿ ಜಾಣ. ಪುಸ್ತಕದ ಗೀಳು ಹೆಚ್ಚು. ಹಾಗಾಗಿ ತಂಗಿಯರೂ ಓದುಬರಹ ಕಲಿಯಬೇಕೆಂಬ ಹಂಬಲ. ಮನೆಯ ಹಿರಿಯರ ಕಣ್ಣು ತಪ್ಪಿಸಿ ತಂಗಿಯರಿಗೆ ಓದು ಬರಹ ಕಲಿಸಿದ. ಅಜ್ಜಿ, ತಾಯಿಯ ಕಣ್ಣು ತಪ್ಪಿಸಿ ಹುಡುಗಿಯರು ಅಕ್ಷರ ತಿದ್ದಿದರು, ಓದಲು ಕಲಿತರು.ಎರಡನೆಯ ಅಣ್ಣ ರಾಮ ಪ್ರಸಾದ್ ಕಲಿತು ನಾನಾ ಕೆಲಸ ಮಾಡಿ ಮನ ಬಂದಂತೆ ಅಲೆದು ಕೊನೆಗೆ ಪೊಲೀಸ್ ಕೆಲಸಕ್ಕೆ ಸೇರಿ ಸಿ.ಐ.ಡಿ. ಅಧಿಕಾರಿಯಾಗಿ ಅಲಹಾಬಾದಿಗೇ ಬಂದ. ಕೊನೆಗೆ ಅದಕ್ಕೂ ರಾಜೀನಾಮೆ ನೀಡಿ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಧುಮುಕಿದ. ಹಿರಿ ಮಗ ರಾಮ ಅವತಾರ್ ಸಿಂಹನಿಗೆ ಮದುವೆ ಮಾಡಿದ ತಂದೆ ರಾಮನಾಥ ಸಿಂಹರು ಸಂಸಾರದ ಭಾರವನ್ನು ಹೊರಿಸಿ ಕಣ್ಣು ಮುಚ್ಚಿದರು. ಕಷ್ಟಗಳ ಬೆಟ್ಟವೇ ತಲೆ ಮೇಲೆ ಕುಸಿಯಿತು. ಧೀರಾಜ್ ಕುಮಾರಿ ಹೆಸರಿಗೆ ತಕ್ಕ ಹಾಗೆ ಧೈರ್ಯವಂತ ಮಹಿಳೆ. ಹಿರಿಮಗನ ನೆರವಿನಿಂದ ಮನೆಯ ಹೊಣೆ ಹೊತ್ತು ನಿಂತರು. ಗಂಡನ ಸಹೋದರರೂ ಒಬ್ಬೊಬ್ಬರಾಗಿ ತೀರಿಕೊಂಡರು. ಮೂರನೇ ಮಗ ರಾಜಬಹಾದ್ದೂರ ಕೂಡ ಈಗ ಸಂಪಾದಿಸುತ್ತಲೇ ಶಾಲೆಗೆ ಹೋಗಿ ಕಲಿಯುತ್ತಿದ್ದ. ಕಾಲನಿಗೆ ಕರುಣೆಯೇ ಇಲ್ಲ.

ಹಿರಿಮಗ ರಾಮ ಅವತಾರ್‌ನ ಹೆಂಡತಿ ತೀರಿಕೊಂಡಳು. ಕೆಲವೇ ದಿನಗಳಲ್ಲಿ ಅವನೂ ತೀರಿಕೊಂಡ. ಸಾವು-ನೋವು ಕಷ್ಟಗಳ ಪರಂಪರೆ. ಧೀರಾಜ್ ಕುಮಾರಿ ಹೆದರಲಿಲ್ಲ. ಈಗ ರಾಜಬಹಾದ್ದೂರ್ ಮನೆಯ ಯಜಮಾನ. ಈ ನಡುವೆ ಹಿರಿಮಗಳು ಮಹಾದೇವಿಯ ಗಂಡ ತೀರಿಕೊಂಡು ಆಕೆ ಮನೆಗೇ ಬಂದಳು. ಶಿಕ್ಷಣವಿಲ್ಲದ ಆಕೆಯ ಬರಡು ಬಾಳನ್ನು ನೆನೆದು ರಾಜಬಹಾದ್ದೂರ್ ಮರುಗಿದ. ತಾಯಿಯ ಮಡಿವಂತಿಕೆಯನ್ನು ನಯ, ವಿನಯ, ತರ್ಕಗಳಿಂದ ಎದುರಿಸಿ ತಂಗಿಯರ ಜೊತೆಗೆ ಆಕೆಯನ್ನು ಶಾಲೆಗೆ ಸೇರಿಸಿದ. ಸುಂದರ್, ಸುಭದ್ರೆಯರ ಜೊತೆಗೆ ಮಹಾದೇವಿಯೂ ಶಾಲೆಗೆ ಸೇರಿದಳು.

ಅವರ ಹೈಸ್ಕೂಲು ಹುಡುಗಿಯರ ಪಾಠಶಾಲೆ. “ಠಾಕೂರರ ಮನೆಯ ಹುಡುಗಿಯರು ಶಾಲೆಗೆ ಹೋಗುತ್ತಾರೆ”! ಕೇರಿಯ ಜನರಿಗೆ ಭಾರೀ ಸುದ್ಧಿ. “ಹುಡುಗಿಯರು ಓದು ಬರಹ ಕಲಿಯುವುದೆಂದರೇನು? ಕಾಲ ಕೆಟ್ಟಿತು” ಎಂದು ಜನ ಆಡಿಕೊಂಡರು. ಆ ಕಾಲವೇ ಹಾಗೆ.

ರಾಜಬಹಾದ್ದೂರ್ ಇದ್ಯಾವುದಕ್ಕೂ ಕವಿಗೊಡಲಿಲ್ಲ.

ಸುಭದ್ರಾ ಮನೆಯ ಹುಡುಗಿಯರಲ್ಲೇ ಅತ್ಯಂತ ಚೂಟಿ. ಸ್ವಲ್ಪ ಸಿಡುಕು. ತಾಯಿಯ ಮುದ್ದಿನಿಂದ ಮೊಂಡುತನವೂ ಸೇರಿತ್ತು.

ಯಾಕೆ ಮುಟ್ಟಬಾರದು

ಠಾಕೂರರ ಮನೆಯ ಹಿಂದೆ ಕೆಲವು ಶೂದ್ರರ ಮನೆಗಳಿದ್ದುವು. ಅಲ್ಲಿನ ಹೆಂಗಸರು ಆಗಾಗ ಬಂದು ಧೀರಾಜ್ ಕುಮಾರಿಯ ಬಳಿ ಕಷ್ಟ ಸುಖ ಹೇಳಿಕೊಳ್ಳುತ್ತಿದ್ದರು. ಮನೆಯ ಕಸಮುಸುರೆ ಕೆಲಸವನ್ನು ಮಾಡುತ್ತಿದ್ದರು. ಅವರನ್ನು ಮುಟ್ಟಕೂಡದೆಂದು ಮನೆಯಲ್ಲಿ ದೊಡ್ಡವರ ಅಪ್ಪಣೆ. ಸುಭದ್ರೆಗೆ ಮಡಿ ಮೈಲಿಗೆ ಹಿಡಿಸದು. “ಅವರೂ ನಮ್ಮ ಹಾಗೇ ಮನುಷ್ಯರಲ್ಲವೇ? ಯಾಕೆ ಮುಟ್ಟಬಾರದು?” ಎಂದೆಲ್ಲ ಅವಳವಾದ. ಒಮ್ಮೆ ಒಬ್ಬ ಹೆಂಗಸು ತನ್ನ ಕಷ್ಟ ಹೇಳಿಕೊಳ್ಳಲು ಬಂದಳು. ಧೀರಾಜ್ ಕುಮಾರಿ ಅಂಗಳದ ಕಲ್ಲೊಂದರ ಮೇಲೆ ಕುಳಿತು ಮಾತಾಡಿಸುತ್ತಿದ್ದರು. ಸುಭದ್ರಾ ಪಕ್ಕದಲ್ಲಿ ಅಮ್ಮನಿಗೆ ಅಂಟಿಕೊಂಡು ನಿಂತಿದ್ದಳು. ಮಾತನಾಡುತ್ತ ಹೆಂಗಸು ತೀರಾ ಹತ್ತಿರ ಬಂದಳು. “ಅರರೆ! ದೂರ ನಿಂತು ಮಾತಾಡು, ಕಲ್ಲು ಮುಟ್ಟಬೇಡ, ನಾನು ಕೂತಿದ್ದೇನೆ” ಧೀರಾಜ್ ಕುಮಾರಿ ಕೂಗಿಕೊಂಡರು.

“ಅವಳು ನೀನು ನಿಂತ ನೆಲದಲ್ಲೇ ನಿಂತಿದ್ದಾಳಮ್ಮ! ನೆಲವನ್ನು ಕತ್ತರಿಸಿ ಹಾಕಿಬಿಡು” ಎಂದಳು ಸುಭದ್ರ. ತಾಯಿ ಗದರಿಸಿದಾಗ ಓಳಗೋಡಿದಳು.

ಕಿವಿಯ ಮೇಲ್ಭಾಗದಲ್ಲಿ “ಬಾಲಿ” (ಉಂಗುರ) ಗಳನ್ನು ಚುಚ್ಚಿಸಿಕೊಳ್ಳುವುದೆಂದರೆ ಹುಡುಗಿಯರಿಗೆ ಇಷ್ಟ. ಠಾಕೂರರ ಹುಡುಗಿಯರು ಬೇರೆಯವರಿಂದ ಚುಚ್ಚಿಸಿಕೊಳ್ಳಬಾರದೆಂಬ ನಿಯಮ ಹುಡುಗಿಯರಿಗೇನು ಗೊತ್ತು? ಒಂದು ದಿನ ಮಧ್ಯಾಹ್ನ ಕಿವಿ ಚುಚ್ಚುವವನೊಬ್ಬ ಬಂದ. ಅಕ್ಕ ಸುಂದರ್‌ನನ್ನು ಪುಸಲಾಯಿಸಿ “ನೆರೆಯ ಹುಡುಗಿಯರಂತೆ ನಾವು ಬಾಲಿ ಚುಚ್ಚಿಸಿಕೊಳ್ಳುವ” ಎಂದಳು ಸುಭದ್ರ. ಕಿರಿಯವಳಾದ ಪೊಲೀಸು ಅಣ್ಣನ ಹೆಂಡತಿಯೂ ಸೇರಿದಳು. ಕಿವಿ ತುಂಬ ಬಾಲಿ ಚುಚ್ಚಿಸಿಕೊಂಡು ಹುಡುಗಿಯರು ಸಂಭ್ರಮ ಪಡುತ್ತಿರುವಾಗ ಪೊಲೀಸು ಅಣ್ಣ ಅಕಸ್ಮಾತ್ ಮನೆಗೆ ಬಂದ. ಸಂಗತಿ ತಿಳಿದು ಕಿಡಿಕಾರಿದ. “ಠಾಕೂರರ ಹುಡುಗಿಯರು ದಾರಿಯಲ್ಲಿ ಹೋಗುವ ಪುರುಷನಿಂದ ಬಾಲಿ ಚುಚ್ಚಿಸಿಕೊಳ್ಳುವುದೆಂದರೇನು?” ಅವಮಾನ ತಾಳಲಾರದೆ ಬಂದೂಕು ಕೈಗೆತ್ತಿಕೊಂಡ. ಹುಡುಗಿಯರು ಕತ್ತಲೆ ಕೋಣೆ ಸೇರಿ ಸರಸರನೆ ಬಾಲಿ ಕಿತ್ತು ಹಾಕಿದರು. ಅಂತೂ ವಿಪರೀತ ರಂಪವಾಯಿತು.

 

"ಅವಳು ನೀನು ನಿಂತ ನೆಲದಲ್ಲೇ ನಿಂತಿದ್ದಾಳಮ್ಮ! ನೆಲವನ್ನು ಕತ್ತರಿಸಿ ಹಾಕಿಬಿಡು"

ಬಾಲ್ಯದಲ್ಲಿಯೇ ಕವಿತೆ

 

ಸುಭದ್ರ ಬಾಲ್ಯದಲ್ಲಿಯೇ ಕವಿತೆ ಬರೆಯುತ್ತಿದ್ದಳು. ಬೇಸಿಗೆಯ ಕುರಿತು ಆಕೆ ಬರೆದ ಮೊದಲ ಕವಿದೆ “ಮರ್ಯಾದಾ” ಪತ್ರಿಕೆಯಲ್ಲಿ ಪ್ರಕಟವಾಯಿತು. ಆಗ ಸುಭದ್ರೆಗೆ ಒಂಬತ್ತೇ ವರ್ಷ. ಠಾಕೂರರ ಹುಡುಗಿಯರು ಶಾಲೆಗೆ ಹೋಗುವುದು ಕುದುರೆಗಾಡಿಯಲ್ಲಿ. ಜೊತೆಗೆ ಅಂಗರಕ್ಷಕನೊಬ್ಬ ನಿರುತ್ತಿದ್ದ. ಸುಭದ್ರ ಕವಿತೆ ಬರೆಯುವುದು ಗಾಡಿಯಲ್ಲಿ ಹೋಗುವಾಗಲೇ. ಶಾಲೆಯಲ್ಲಿ ಸುಭದ್ರ ತುಂಬ ಜಾಣೆ. ಚಟುವಟಿಕೆಯ ಚೂಟಿ ಹುಡುಗಿ. ಪರೀಕ್ಷೆಗಳಲ್ಲೂ ಪ್ರಥಮ. ಇನಾಮುಗಳು ಅವಳಿಗೇ. ಶಾಲೆಯ ಅಧ್ಯಾಪಕಿಯರ ನಡೆನುಡಿಗಳ ಬಗ್ಗೆ ಚುಟುಕ ಕಟ್ಟಿ ಹಾಡಿಬಿಡುತ್ತಿದ್ದಳು. ಅಧ್ಯಾಪಕಿಯರು ಖುಷಿ ಪಡುತ್ತಿದ್ದರು.

ಪ್ರಾಯ ಹನ್ನೆರಡು ದಾಟಿತು. ಈಗ ಹುಡುಗಿಯರು ಶಾಲೆಯ ಬೋರ್ಡಿಂಗ್ ಮನೆಯಲ್ಲೇ ವಾಸಿಸಿದರು. ಮಡಿವಂತ ತಾಯಿಯು ಮಕ್ಕಳ ಒತ್ತಾಯಕ್ಕೆ ಮಣಿದರು. ಬೋರ್ಡಿಂಗ್ ಮನೆಯಲ್ಲಿ ಎಲ್ಲ ಜಾತಿಯವರೂ ಇದ್ದರು. ಸುಭದ್ರೆಗೆ ಅವತೆಲ್ಲ ಗೆಳತಿಯರು. ಒಂಬತ್ತನೆಯ ತರಗತಿಯ ಪರೀಕ್ಷೆಯಲ್ಲಿ ಸುಭದ್ರ ಪ್ರಾಂತಕ್ಕೆ ಎಂಟನೆಯವಳು. ಶಾಲೆಯ ಹುಡುಗಿಯರಲ್ಲಿ ಮೊದಲನೆಯ ರ‍್ಯಾಂಕ್‌.

ಮದುವೆ

ಹಿರಿಯಕ್ಕ ರಾಜದೇವಿಗೆ ಮೊದಲೇ ಮದುವೆಯಾಗಿತ್ತು. ಈಗ ಸುಂದರ್‌ಗೂ ಮದುವೆಯಾಯಿತು. ಉಳಿದವಳು ಸುಭದ್ರ ಮಾತ್ರ. ಹುಡುಗಿಗೆ ಹದಿನಾಲ್ಕು ತುಂಬಿತ್ತು.

ಲಕ್ಷ್ಮಣಸಿಂಹ ಚೌಹಾನ್ ಉನ್ನಾವಾ ಜಿಲ್ಲೆಯ ಠಾಕೂರ್ ಚೌಹಾನ್ ವಂಶದ ಪ್ರತಿಭಾವಂತ ಹುಡುಗ. ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ಲಕ್ಷ್ಮಣಸಿಂಹ ಚೌಹಾನ್ ಸ್ವಸಾಮರ್ಥ್ಯದಿಂದ ಓದಿ ಮೆಟ್ರಿಕ್ ಮುಗಿಸಿದ. ನಂತರ ಆಗರಾದಲ್ಲಿ ಬಿ.ಎ. ತನಕ ಓದಿದ. ಎಲ್.ಎಲ್.ಬಿ.ಗಾಗಿ ಅಲಿಘರ ವಿಶ್ವವಿದ್ಯಾಲಯಕ್ಕೆ ದಾಖಲಾದ. ಆಗ ಆತ ಬರೆದ “ಕುಲೀಪ್ರಧಾ” ಎಣಬ ನಾಟಕ ಸರ್ಕಾರದ ಕಣ್ಣು ಕುಕ್ಕಿತು. ಕೃತಿಗಳನ್ನು ಜಪ್ತಿ ಮಾಡಿದ ಸರ್ಕಾರ ಲೇಖಕನನ್ನು ಹುಡುಕಲು ಆಜ್ಞೆ ಹೊರಡಿಸಿತು. ನಾಟಕವನ್ನು “ರಾಮಾನುಜ” ಎಂಬ ಕಾವ್ಯ ನಾಮದಿಂದ ಬರೆದಿದ್ದ. ಆದರೂ ಅಲಿಘರ್‌ನಲ್ಲಿರುವುದು ಅಸಾಧ್ಯವಾದಾಗ ಅಲಹಾಬಾದಿಗೆ ಬಂದ. ಸ್ವಾತಂತ್ಯ್ರ ಹೋರಾಟಗಾರರ ಗುಂಪಿನ ಸದಸ್ಯ ಲಕ್ಷ್ಮಣಸಿಂಹನಿಗೆ ಎಲ್ಲ ಕಡೆ ಗೆಳೆಯರಿದ್ದರು. ಅಲಹಾಬಾದಿನಲ್ಲಿ ಫೋಟೋ ಸ್ಟುಡಿಯೋ, ಅಧ್ಯಾಪಕ ವೃತ್ತಿಗಳ ಜೊತೆಗೆ ಮನೆಯನ್ನು ನೋಡಿಕೊಂಡು ಕಾಲೇಜಿಗೂ ಹೋಗುತ್ತಿದ್ದ ರಾಜಬಹಾದ್ದೂರ್ ಗೆಳೆತನ ಲಭಿಸಿತು. ಗೆಳೆತನ ಬೆಳೆಯಿತು. ಮನೆಗೆ ಬಂದು ಹೋಗುವುದು ಪ್ರಾರಂಭವಾಯಿತು. ನಗು ಮುಖದ ಹಾಸ್ಯ ಚಟಾಕಿ ಹಾರಿಸುತ್ತ ಮಾತನಾಡುವ ಲಕ್ಷ್ಮಣಸಿಂಹ ಮನೆ ಮಂದಿಗೆಲ್ಲ ಮೆಚ್ಚುಗೆ. ವಿಶ್ವವಿದ್ಯಾಲಯದಲ್ಲಿ ನಡೆದ ಪದವೀದಾನ ಸಮಾರಂಭದಲ್ಲಿ ಸುಭದ್ರೆಯ ಹೈಸ್ಕೂಲಿನ ಕಾರ್ಯಕ್ರಮವಿತ್ತು. ಸುಭದ್ರಾ ಭಾಷಣ ಮಾಡಿದ್ದಳು. ಆ ಭಾಷಣವನ್ನು ಲಕ್ಷ್ಮಣಸಿಂಹ ಹೆಳಿದ್ದ. ಆಕೆಯ ಕವಿತೆಗಳನ್ನು ಓದಿದ್ದ. ಒಂದು ದಿನ ರಾಜಬಹಾದ್ದೂರ್ ತಂಗಿಯ ಮದುವೆಯ ಪ್ರಸ್ತಾಪ ಪಾಡಿದಾಗ ಲಕ್ಷ್ಮಣ ಸಿಂಹ ಒಪ್ಪಿದ. ತಾಯಿಯೂ ಹುಡುಗನನ್ನು ನೋಡಿದಳು ಒಪ್ಪಿಗೆಯಾಯಿತು.

ರಾಮನಾಥಸಿಂಹರು ತೀರಿಕೊಂಡ ಮೂರು ವರ್ಷದ ನಂತರ ಧೀರಾಜ್ ಕುಮಾರಿ ತೀರಿಕೊಂಡರು. ಆಗಿನ್ನೂ ಸುಭದ್ರೆಯ ಮದುವೆ ಆಗಿರಲಿಲ್ಲ. ಸುಭದ್ರೆಯ ಮದುವೆಯ ಹೊಣೆಯ ಜೊತೆಗೆ ಸಂಸಾರದ ಸಂಪೂರ್ಣ ಭಾರ ರಾಜಬಹಾದ್ದೂರನ ಹೆಗಲಿಗೆ ಇಳಿಯಿತು. ತಾಯಿಯ ಮರಣದಿಂದ ಆಕಾಶವೇ ಕಳಚಿ ಬಿದ್ದಂತಾಗಿತ್ತು.

ಲಕ್ಷ್ಮಣಸಿಂಹನ ತಾಯಿಗೆ, ಮಗನಿಗೆ ಸಿರಿವಂತರ ಮನೆಯ ಹುಡುಗಿ ತರಬೇಕೆಂಬ ಆಸೆಯಿದ್ದರೂ ಮಗನ ಹಟಕ್ಕೆ ಮಣಿದಳು. ೧೯೧೯ ಫೆಬ್ರವರಿ ೨೦ ರಂದು ಸುಭದ್ರಾ ಕುಮಾರಿಯ ವಿವಾಹ ಲಕ್ಷ್ಮಣಸಿಂಹ ಚೌಹಾನರ ಜೊತೆಗೆ ನಡೆಯಿತು.

ಭಾವನ ಸ್ವಾಗತ!

ರೈಲಿನಲ್ಲಿ ಸುಭದ್ರ ಗಂಡನ ಕಡೆಯವರ ಜೊತೆ ಹಲ್ಲುಗಳ ನಡುವೆ ನಾಲಿಗೆಯಂತೆ ಮುದುಡಿಕೊಂಡ ಕುಳಿತಿದ್ದಳು. ರೈಲು ಇಟಾರ್ಸಿಸ್ಟೇಶನ್‌ನಲ್ಲಿ ಬಹಳ ಹೊತ್ತೇ ನಿಲ್ಲುತ್ತಿತ್ತು. ಲಕ್ಷ್ಮಣಸಿಂಹ ಹೆಂಡತಿಯನ್ನು ಕೆಳಗಿಳಿಸಿ ಪ್ಲಾಟ್‌ಫಾರಂ ಉದ್ದಕ್ಕೂ ಓಡಾಡಿದರು. ಹಿರಿಯರಿಗೆ ಇದು ಸರಿಬರಲಿಲ್ಲ. “ಇನ್ನೂ ಮದುವೆಯ ಹೂವು ಬಾಡಿಲ್ಲ. ಆಗಲೇ ಗಂಡನ ಜೊತೆ ಓಡಾಡುತ್ತಾಳೆ. ಮುಖ ಮುಂದೆ ಸೆರಗೂ ಇಳಿಸಿಕೊಂಡಿಲ್ಲ. ಇದೆಂಥ ನಾಚಿಕೆಗೇಡಿ ಹೆಣ್ಣು? ಇವನಿಗೂ ನಾಚಿಕೆ ಬೇಡವೆ?” ಎಂದೆಲ್ಲಾ ಆಡಿಕೊಂಡರು. ರೈಲು ಇಳಿದು ನೇರ ಮನೆಗೆ ಹೋದ ಲಕ್ಷ್ಮಣಸಿಂಹನ ಅಣ್ಣ ಮನೆ ಬಾಗಿಲಲ್ಲಿ ದೊಣ್ಣೆ ಹಿಡಿದು ನಿಂತ. “ಇಂಥ ನಾಚಿಕೆ ಇಲ್ಲದ, ಆಚಾರ ವಿಚಾರ ತಿಳಿಯದ ಹೆಣ್ಣು ನನ್ನ ಮನೆಗೆ ಬರಬಾರದು” ಎಂದು ಕೂಗಾಡಿದ. ಅವನನ್ನು ಸಮಾಧಾನ ಪಡಿಸಿ ಹೆಂಡತಿಯನ್ನು ಹೊಸಲು ದಾಟಿಅಲು ಲಕ್ಷ್ಮಣಸಿಂಹ ಪಟ್ಟಪಾಡು ಅಷ್ಟಿಷ್ಟಲ್ಲ. ಅಣ್ಣನ ಹೆಂಡತಿ ಮತ್ತು ಸುಭದ್ರೆಗೆ ಸರಿಬರಲಿಲ್ಲ.

ಸ್ವಾತಂತ್ಯ್ರ ಸಮರದತ್ತ

ಲಕ್ಷ್ಮಣಸಿಂಹರು ಓದು ಪೂರೈಸಲು ಅಲಹಾಬಾದಿಗೆ ಬಂದರು. ಸುಭದ್ರ ಕಾಶಿಯ ಥಿಯಾಸಫಿ ಶಾಲೆಗೆ ಸೇರಿದರು. ದೇಶದಲ್ಲಿ ಸ್ವಾತಂತ್ಯ್ರ ಸಂಗ್ರಾಮದ ಬಿಸಿ ಏರತೊಡಗಿತ್ತು. ಗಾಂಧೀಜಿ ಅಸಹಕಾರ ಆಂದೋಲನ ಪ್ರಾರಂಭಿಸಿದ್ದರು. ಸುಭದ್ರ ತನ್ನ ದೇಶಭಕ್ತಿ ತುಂಬಿದ ಕವಿತೆಗಳಿಂದ, ವೀರಗೀತೆಗಳಿಂದ ಆಗಲೇ ಜನಪ್ರಿಯತೆ ಗಳಿದ್ದರು. ಜಲಿಯನ್ ವಾಲಾಬಾಗ್‌ನ ಭೀಕರ ನರಹತ್ಯೆಯ ಘಟನೆ ನಡೆಯಿತು. ಈ ಘಟನೆಯ ಹೃದಯವಿದ್ರಾವಕ ವರ್ಣನೆಯ ಸುಭದ್ರ ಕುಮಾರಿಯ ಕವಿತೆ ಜನಮನವನ್ನು ಕಲುಕಿತು. ಝಾನ್ಸಿ ಲಕ್ಷ್ಮೀಬಾಯಿಯ ವೀರತ್ವವನ್ನು ಹೊಗಳಿರುವ, ಸ್ವಾತಂತ್ಯ್ರ ಪ್ರಿಯತೆಯನ್ನು ಸಾರುವ ಲಾವಣಿ ಧಾಟಿಯ ವೀರಗೀತೆ ಸುಭದ್ರಾ ಕುಮಾರಿಯನ್ನು ಮನೆ ಮನೆಗೆ ಪರಿಚಯ ಮಾಡಿಕೊಟ್ಟಿತು. “ಖೂಬ್ ಲಡೀಮರ್ದಾನಿವೋ ಝಾನ್ಸಿ ಲಕ್ಷ್ಮೀಬಾಯೀ ಥೀ” ಎಂದು ಪ್ರಾರಂಭವಾಗುವ ಈ ಲಾವಣಿ ಧಾಟಿಯ ಗೀತೆ ಜನರ ತುದಿ ನಾಲಿಗೆಯಲ್ಲಿ ಕುಣಿಯಿತು. ಲಕ್ಷ್ಮಣಸಿಂಹ ಅಸಹಕಾರ ಆಂದೋಲನಕ್ಕೆ ಧುಮಿಕಿದರು. ಸುಭದ್ರೆಯೂ ಓದು ನಿಲ್ಲಿಸಿ ಕಾಶಿಯಿಂದ ಬಂದರು. ಇದೇ ವೇಳೆಗೆ ಮಾಖನಲಾಲ್ ಚತುವೇದಿಯವರು ಜಬ್ಬಲ್‌ಪುರದಲ್ಲಿ “ಕರ್ಮವೀರ” ಪತ್ರಿಕೆ ಪ್ರಸಿದ್ಧರಾಗಿದ್ದ ಲಕ್ಷ್ಮಣಸಿಂಹರು ಉಪಸಂಪಾದಕರಾಗಿ ಸೇರಿಕೊಂಡರು. ಜಬ್ಬಲ್‌ಪುರದ “ಕರ್ಮವೀರ”ದ ಕಾರ್ಯಾಲಯದ ಆವರಣದಲ್ಲೇ ಲಕ್ಷ್ಮಣಸಿಂಹರ ಸಂಸಾರ ಪ್ರಾರಂಭವಾಯಿತು. ವಿದೇಶಿ ಆಡಳಿತ, ಪರದಾ ಪದ್ಧತಿ, ಅಸ್ಪೃಶ್ಯತೆ ಇವುಗಳ ವಿರುದ್ಧ ಪ್ರಚಾರ ಕಾರ್ಯದಲ್ಲಿ ಸುಭದ್ರ ತೊಡಗಿದರು. ಲಾವಣಿ ಹಾಡಿ ಜನ ಸೇರಿಸಿ ಭಾಷಣ ಮಾಡಿ ಜನ ಜಾಗೃತಿ, ಮಹಿಳಾ ಜಾಗೃತಿ ಮಾಡುವುದರಲ್ಲಿ ಸುಭದ್ರ ಕುಮಾರಿಯ ದೇಶಸೇವೆ ಪ್ರಾರಂಭವಾಯಿತು. ಹಲವಾರು ಸಲ ಹೊರ ಊರುಗಳಿಗೂ ಹೋಗುತ್ತಿದ್ದರು.

೧೯೨೧ರಲ್ಲಿ ಕಾಂಗ್ರೆಸ್‌ನ ಸದಸ್ಯರಾದ ಚೌಹಾನ್‌ ದಂಪತಿಗಳು ತಮ್ಮ ಲೇಖನ ಭಾಷಣ, ಕವಿತೆಗಳಿಂದ ಜನರಲ್ಲಿ ಸ್ವತಂತ್ಯ್ರದ ಹಂಬಲ ಮೂಡಿಸುವುದರಲ್ಲಿ ಮಗ್ನರಾದರು.

ಲಕ್ಷ್ಮಣಸಿಂಹರ ತಾಯಿ ಮಗನ ಜೊತೆಗೆ ಜಬ್ಬಲ್‌ಪುರಕ್ಕೆ ಬಂದರು. ತನ್ನ ನಯ ವಿನಯದ ಮಾತುಗಳಿಂದ ಸುಭದ್ರ ಅತ್ತೆಯ ಪ್ರೀತಿ ವಿಶ್ವಾಸ ಗಳಿಸಿದರು. ಅತ್ತೆಗೆ ತನ್ನ ಸೊಸೆ ಬೇರೆ ಬೇರೆ ಊರುಗಳಿಗೆ ತಿರುಗಾಡುವುದು, ಪರದೆ ಇಲ್ಲದೆ ನಡೆಯುವುದು, ಬೇರೆ ಗಂಡಸರ ಜೊತೆ ಮಾತನಾಡುವುದು ಸರಿಬರುತ್ತಿರಲಿಲ್ಲ. ಅದನ್ನೆಲ್ಲ ನೋಡಿ ಮಗ ಸುಮ್ಮನಿರುತ್ತಿದ್ದುದನ್ನು ಕಂಡು “ಮಗನಿಗೆ ಏನೋ ಮೋಡಿ ಮಾಡಿದ್ದಾಳೆ” ಎನ್ನುತ್ತಿದ್ದರು.ದೇಶಭಕ್ತಿಯ ಗೀಳು ಹಿಡಿದ ಗಂಡ ಹೆಂಡತಿಗೆ ಪರಸ್ಪರರಲ್ಲಿ ಸಂಪೂರ್ಣ ನಂಬಿಕೆ. ದೇಶಕ್ಕಾಗಿ ತಮ್ಮ ಸರ್ವಸುಖವನ್ನು ತ್ಯಾಗ ಮಾಡಲು ಸಿದ್ಧರಿರುವ ಇಬ್ಬರ ಮನೋಧರ್ಮವೂ ಒಂದೇ. ಇದೇ ಅವರು ಒಬ್ಬರಿನ್ನೊಬ್ಬರಿಗೆ ಹಾಕಿದ ಮೋಡಿ.

ಬಾಪೂ ಭೇಟಿ

ಸುಭದ್ರ ಖಾದಿ ಧರಿಸುತ್ತಿದ್ದರು. ಲಕ್ಷ್ಮಣಸಿಂಹರೂ ಖಾದಿವ್ರತ ಕೈಗೊಂಡಿದ್ದರು. ಲಕ್ಷ್ಮಣಸಿಂಹರೂ ಖಾದಿವ್ರತ ಕೈಗೊಂಡಿದ್ದರು. ೧೯೨೧ ರ ಅಹಮದಾಬಾದ್‌ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರನ್ನು ಸುಭದ್ರ ಭೇಟಿ ಮಾಡಿ ಮಾತಾಡಿದರು. ಖಾಲಿ ಹಣ, ಬಳೆಗಳಿಲ್ಲದ ಕೈ, ಅಂಚು ಇಲ್ಲದ ಬಿಳಿಯ ಖಾದಿ ಸೀರೆ ಧರಿಸಿದ್ದ ಸುಭದ್ರಾಕುಮಾರಿಯನ್ನು ಕಂಡು ಬಾಪೂ “ನಿನ್ನ ಮದುವೆ ಆಗಿದೆಯೇ?” ಎಂದು ಅಳುಕುತ್ತಲೇ ಕೇಳಿದರು. ಪಕ್ಕದಲ್ಲಿದ್ದವು “ಅವರ ಗಂಡ ಲಕ್ಷ್ಮಣಸಿಂಹ ಚೌಹಾನ್ ವಕೀಲರು; “ಕರ್ಮವೀರ”ದಲ್ಲಿದ್ದಾರೆ. ನಿಷ್ಠಾವಂತ ಕಾರ್ಯಕರ್ತ” ಎಂದು ಪರಿಚಯ ಮಾಡಿಕೊಟ್ಟರು. ಬಾಪೈ ಕೂಡಲೇ ಸುಭದ್ರೆಗೆ, “ನೀನು ಕುಂಕುಮ ಧರಿಸಿ, ಕೈಗೆ ಬಳೆ ಹಾಕಿ ಅಂಚು ಇರುವ ಸೀರೆ ಉಡಬೇಕು. ಹೀಗಿರುವುದು ಅಮಂಗಳಕರ” ಎಂದರು. ಸುಭದ್ರ ಬಾಪೂಜಿಯ ಸಲಹೆಯನ್ನುಕೂಡಲೇ ಪಾಲಿಸಿದರು.

ಅಭಿಷೇಕ

ಒಮ್ಮೆ ಒಂದು ಹಳ್ಳಿಯಿಂದ ಪ್ರಚಾರ ಕಾರ್ಯ ಮುಗಿಸಿ ಸುಭದ್ರೆ ರೈಲ್ವೆ ಸ್ಟೇಷನ್‌ಗೆ ಮರಳುತ್ತಿದ್ದರು.”ತಾಯೀ ಸ್ವಲ್ಪ ನಿಲ್ಲಿ” ಹಳ್ಳಿಯವನೊಬ್ಬ ಕೂಗುತ್ತ ಓಡಿ ಬರುತ್ತಿದ್ದ. “ಯಾಕಪ್ಪಾ, ಏನಾಗಬೇಕು?” ಸುಭದ್ರ ನಿಂತರು. “ಬಹಳ ದಿನಗಳಿಂದ ನಿಮಗೆ ಗಂಗಾಜಲ ಅಭಿಷೇಕ ಮಾಡಿ ಪುಣ್ಯ ಸಂಪಾದಿಸಬೇಕೂಂತ ಇದ್ದೆ. ಈವತ್ತು ನೀವು ಕಾಣಿಸಿದಿರಿ. ನೀವು ನಮ್ಮ ನಾಡಿನ ಝಾನ್ಸೀಬಾಯಿ” ಎಂದವನೇ ಹಳೆಯ ತಗಡಿನ ಡಬ್ಬಿಯಲ್ಲಿದ್ದ ಗಂಗಾಜಲವನ್ನು ಸುಭದ್ರಾ ಕುಮಾರಿಯ ತಲೆಗೆ ಸುರಿದ. ಕಿಲುಬುಗಟ್ಟಿದ್ದ ಪಾತ್ರೆಯ ನೀರು ಬಿದ್ದು ಬಿಳಿಸೀರೆ ತುಂಬ ಕಲೆಯಾಯಿತು. ಸುಭದ್ರ ಸಂತೋಷದಿಂದ ನಗಾಡಿದರು.

ಧ್ವಜ ಸತ್ಯಾಗ್ರಹ

೧೯೨೩ರಲ್ಲಿ ಜಬ್ಬಲ್‌ಪುರ ಪುರಸಭಾ ಭವನದ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಸಂಘಟಿತವಾಯಿತು. ನಿಶ್ಚಿತದಿನ ತ್ರಿವರ್ಣ ಧ್ವಜ ಹಾರಿಸಿದರು. ಡ್ಯೆಪುಟಿ ಕಮೀಷನರ್ ಧ್ವಜ ಇಳಿಸಿ ಅದನ್ನು ಕಾಲಿನಿಂದ ತುಳಿದರು. ಕಾರ್ಯಕರ್ತರು ಕೆರಳಿದರು. ಮರುದಿನ ಸುಂದರ್‌ಲಾಲ್‌ರವರ ನೇತೃತ್ವದಲ್ಲಿ ಧ್ವಜ ಸತ್ಯಾಗ್ರಹ. ಸುಭದ್ರ ಕಾಂಗ್ರೆಸ್ ಧ್ವಜ ಹಿಡಿದು “ಭಾರತ ಮಾತಾಕೀ ಜೈ” “ವಂದೇ ಮಾತರಂ” ಎನ್ನುತ್ತ ಮುನ್ನಡೆದರು. ಪೊಲೀಸರು ಸತ್ಯಾಗ್ರಹಿಗಳ ಮೇಲೆ ಲಾಠಿ ಚಾರ್ಜ್ ಮಾಡಿದರು. ಸುಭದ್ರಾ ಕುಮಾರಿಗೂ ಏಟುಗಳು ಬಿದ್ದವು. ಸುಂದರ್‌ಲಾಲ್ ಬಂಧಿತರಾದರು. ಚೌಹಾನ್‌ ದಂಪತಿಗಳು ಚಳುವಳಿಗೆ ಪುಟ ನೀಡಿದರು. ಚಳುವಳಿ ದೇಶವಿಡೀ ವ್ಯಾಪಿಸಿತು. ಏಪ್ರೀಲ್ ೧೩ ರಂದು ನಾಗಪುರದಲ್ಲಿ ಬೃಹತ್ ಪ್ರಮಾಣದ ಸತ್ಯಾಗ್ರಹ ನಡೆಸುವ ನಿರ್ಧಾರವಾಯಿತು.

 

ಧ್ವಜ ಸತ್ಯಾಗ್ರಹ-ಸುಭದ್ರಾ ಕುಮಾರಿಗೂ ಏಟು ಬಿತ್ತು

ಸತ್ಯಾಗ್ರಹಿಗಳನ್ನು ಸಂಘಟಿಸುವುದು. ಚಂದಾ ಎತ್ತುವುದು ಮುಂತಾದ ಕಾರ್ಯದಲ್ಲಿ ಸುಭದ್ರಾ ಬಿರುಗಾಳಿಯಂತೆ ಓಡಾಡಿದರು. ಭಾರಿ ತಂಡದೊಂದಿಗೆ ನಾಗಪುರಕ್ಕೆ ಬಂದರು. ಚೌಕದಲ್ಲಿ ನಿಂತು ಭಾಷಣ ಪ್ರಾರಂಭಿಸಿದರೆ ಲಾವಣಿ ಶುರು ಮಾಡಿದರೆ ನೋಡುನೋಡುತ್ತಿದ್ದಂತೆ ಸಹಸ್ರಾರು ಜನ ಸೇರಿಬಿಡುತ್ತಿದ್ದರು. ಸತ್ಯಾಗ್ರಹದ ಹಿಂದಿನ ದಿನ ಸಿನಿಮಾ ನೋಡಿ, ಹರಟೆ ಹೊಡೆದು ಸಂತಸದಿಂದಿದ್ದ ಸುಭದ್ರಾ ಮರುದಿನ ಧ್ವಜ ಹಿಡಿದು ವೀರಾವೇಶದಿಂದ ಸತ್ಯಾಗ್ರಜಕ್ಕೆ ಮುನ್ನುಗ್ಗಿದರು. ಪೊಲೀಸರು ಮನಬಂದಂತೆ ಥಳಿಸಿದರು. ಸತ್ಯಾಗ್ರಹಿಗಳು ತಂಡ ತಂಡವಾಗಿ ಬಂಧಿಸಲ್ಪಟ್ಟರು. ಧ್ವಜಸತ್ಯಾಗ್ರಹದಲ್ಲಿ ಬಂಧಿತರಾದ ಪ್ರಥಮ ಮಹಿಳೆ ಸುಭದ್ರಾ ಕುಮಾರಿ ಚೌಹಾನ್‌. ಜೈಲಿಗೆ ಹೋದಾಗಸ ಆಕೆ ಚೊಚ್ಚಲ ಬಸುರಿ. ಜೈಲಿನ ಒಣ ರೊಟ್ಟಿ ಜೀರ್ಣವಾಗಲಿಲ್ಲ. ಅನ್ನ ಕೊಡಲಿಲ್ಲ. ಅಲ್ಲಿ ಮತ್ತೆ  ಸತ್ಯಾಗ್ರಹ ಹೂಡಿದರು. ಸರಿಯಾದ ಪೋಷಕ ಆಹಾರವಿಲ್ಲದೆ ಖಾಯಿಲೆ ಬಿದ್ದರು. ನಾಗಪುರದ ಸಭೆಯೊಂದರಲ್ಲಿ ಭಾಷಣ ಮಾಡುತ್ತ ರಾಜಗೋಪಾಲ ಚಾರಿಯವರು ಸುಭದ್ರಾಕುಮಾರಿಯ ಶೌರ್ಯ, ಸಾಹಸ, ದೇಶಪ್ರೇಮಗಳನ್ನು ವಿವರಿಸುತ್ತ, ಆ ವೀರಮಹಿಳೆ ಜೈಲಿನಲ್ಲಿ ಕಷ್ಟ ಪಡುತ್ತಿರುವುದನ್ನು ವಿವರಿಸಿದರು. ಜನ ಕೆರಳಿ ನಿಂತರು. ಸತ್ಯಾಗ್ರಹಿಸಿಗಳ ಸಂಖ್ಯೆ ಹೆಚ್ಚಿತು. ಸುಭದ್ರಾಕುಮಾತಿಯ ಆರೋಗ್ಯ ತೀರ ಹದಗೆಟ್ಟಾಗ ಸರ್ಕಾರ ಅವರನ್ನು ಬಿಡುಗಡೆ ಮಾಡಿತು. ಲಕ್ಷ್ಮಣಸಿಂಹರೂ ಬಿಡುಗಡೆ ಹೊಂದಿದರು. ದಂಪತಿಗಳು ಜಬ್ಬಲ್‌ಪುರಕ್ಕೆ ಹಿಂತಿರುಗಿದರು. ಕೆಲವೇ ದಿನಗಳಲ್ಲಿ ಸುಭದ್ರಾ ಹೆಣ್ಣು ಮಗುವಿನ ತಾಯಿಯಾದರು. ಬಸುರಿಯಾಗಿರುವಾಗ ಪೋಷಣೆ ಸಾಲದೆ ಮಗು ಬಾಣಂತಿ ಇಬ್ಬರೂ ತೀರ ದುರ್ಬಲರಾಗಿದ್ದರು. ೧೯೨೬ ರಲ್ಲಿ ಲಕ್ಷ್ಮಣಸಿಂಹ ಚೌಹಾನ್‌ ವಕೀಲಿ ವೃತ್ತಿ ಆರಂಭಿಸಿದರು. ಸುಭದ್ರಾ ಚೇತರಿಸಿಕೊಂಡು ಮನೆಗೆ ಬಂದರು. ಮುನಿಸಿಪಾಲಿಟಿ ನೀಡಿದ ಜಾಗದಲ್ಲಿ ಒಂದು ಜೋಪಡಿ ಕಟ್ಟಿಕೊಂಡರು.

ಮುಕುಲ”

“ಸುಭದ್ರಾಕುಮಾರಿ ಸೈಕಲ್‌ ಸವಾರಿ ಮಾಡ್ತಾರೆ” ಜಬ್ಬಲ್‌ಪುರದ ಮಹಿಳಾ ವಲಯದಲ್ಲಿ ಭಾರೀ ಸುದ್ಧಿ. ಐವತ್ತು ವರ್ಷಗಳ ಹಿಂದೆ ಹೆಂಗಸೊಬ್ಬಳು ಸೈಕಲ್ ಸವಾರಿ ಮಾಡಿದಳೆಂದರೆ ಪರಮಾಶ್ವರ್ಯ. ಅದೂ ಗಂಡನ ಜೊತೆಗೇ ಬೆಳಗಿನ ವಾಯುವಿಹಾರ. ಕೆಲವು ಸಲ ಒಂಟಿಯಾಗಿ ಸೈಕಲ್ ಸವಾರಿ. ಕೆಲವು ಸಲ ಗಂಡ ಹೆಂಡಿರಲ್ಲಿ “ಸೈಕಲ್‌ ರೇಸ್‌” ಕೂಡಾ ನಡೆಯುತ್ತಿತ್ತು.

೧೯೨೯ರಲ್ಲಿ ಸುಭದ್ರಾ ಕುಮಾರಿ ಚೌಹಾನ್‌ರವರ ಆಯ್ದ ಕವನಗಳ ಸಂಕಲನ “ಮುಕುಲ” ಪ್ರಕಟವಾಯಿತು. ಲಕ್ಷ್ಮಣಸಿಂಹರು ಸತ್ಯಾಗ್ರಹವೊಂದರಲ್ಲಿ ಭಾಗವಹಿಸಿ ಜೈಲು ಸೇರಿದರು. ಮರುವರ್ಷ “ಮುಕುಲ್ ಸಂಕಲನಕ್ಕೆ ಹಿಂದೀ ಸಾಹಿತ್ಯ ಸಮ್ಮೇಳನ ೫೦೦ ರೂಪಾಯಿ ಬಹುಮಾನ ನೀಡಿತು. ಬಹುಮಾನದ ಹಣ ಕೈಗೆ ಬಂದಾಗ ಸುಭದ್ರಾ ತುಸು ನೆಮ್ಮದಿ ಹೊಂದಿದರು.

ಜೈಲಿನಿಂದ ಬಿಡುಗಡೆ ಹೊಂದಿ ಬಂದ ಲಕ್ಷ್ಮಣಸಿಂಹರು ಮತ್ತೆ ವಕೀಲಿ ಆರಂಭಿಸಿದರು. ಆದರೆ ಸುಮ್ಮನಿರುವುದು ಸಾಧ್ಯವಿಲ್ಲದ ಜೀವ. ಚಳುವಳಿಯೇ ಉಸಿರು. ಅಗಿನ ಮಂತ್ರಿಮಂಡಲವನ್ನು ಪ್ರತಿಭಟಿಸಿ  ಕತ್ತೆಗಳ ಮೆರವಣಿಗೆ ನಡೆಸಿದರು. ಮತ್ತೆ ಬಂಧನ, ಜೂಲು, ಜುಲ್ಮಾನೆ. ಜುಲ್ಮಾನೆ ಹಣವಿಲ್ಲದಾಗ ಮನೆ ಸಾಮಾನು ಹರಾಜಿಗೆ ನಿಂತಿತು.

ಸುಭದ್ರ ಬೆದರಲಿಲ್ಲ ಪತ್ರಿಕೆಗಳು ಅವರ ಗದ್ಯ ರಚನೆ ಕೇಳುತ್ತಿದ್ದವು. ಹಣ ಬರುವ ಕೆಲಸ ಅದು. ಸುಭದ್ರ ಬರೆದರು. ತಮ್ಮ ಕತೆಗಳ ಒಂದು ಸಂಕಲನ ಪ್ರಕಟಿಸಿದರು. “ಬಿಖರೇ ಯೋತಿ” ಸಂಕಲನದ ಹೆಸರು. ಕೃತಿಗೆ ಈ ಸಲವೂ ೫೦೦ ರೂಪಾಯಿಗಳ ಪುರಸ್ಕಾರ ದೊರೆಯಿತು. ಸಾಲದ ಹೊರೆ ತಗ್ಗಲಿಲ್ಲ. ಕೃತಿಗಳನ್ನು ಅರ್ಧಬೆಲೆಗೆ ಪ್ರಕಾಶಕರೊಬ್ಬರಿಗೆ ಮಾರಿದರು.

ಜಾತಿಪದ್ಧತಿಗೆ ಧಿಕ್ಕಾರ

ಸುಭದ್ರಾಕುಮಾರಿಗೆ ಜಾತಿ ಭೇದ ಹಿಡಿಸದು. ಅತ್ತೆಯವರ ವಿರೋಧವನ್ನು ಲೆಕ್ಕಿಸದೆ ಮನೆಯ ಕೆಲಸಕ್ಕೆ ಚಮ್ಮಾರನೊಬ್ಬನನ್ನು ನೇಮಿಸಿಕೊಂಡರು. ಹರಿಜನ ಮುಖಂಡರಿಗೂ ಮನೆಯ ಒಳಗೇ ಊಟ ಬಡಿಸುತ್ತಿದ್ದರು. ಜಲಗಾರರಿಗೆ ಎಂಜಲೆಲೆ ಎಸೆಯುವುದು ಅವರಿಗಾಗದ ಕೆಲಸ. ಆಹಾರವನ್ನು ಲಕ್ಷಣವಾಗಿ ಬಡಿಸಿ ಊಟ ಹಾಕುತ್ತಿದ್ದರು.

ಈ ಬಾರಿ ಜೈಲಿನಿಂದ ಬಂದ ನಂತರ ಗೆಳೆಯರ ಒತ್ತಡದಿಂದ ಲಕ್ಷ್ಮಣಸಿಂಹರಿಗೆ ಸರ್ಕಾರಿ ವಕೀಲರ ಕೆಲಸ ಸಿಕ್ಕಿತು. ಆದರೆ ಅವರೆಂದೂ ಸರ್ಕಾರದ ತಪ್ಪನ್ನು ಮುಚ್ಚಿಟ್ಟವರಲ್ಲ,

ಹಿರಿಮಗಳು ಸುಧಾ ಬೆಳೆದು ತಾಯಿಗೆ ಗೆಳತಿಯಾಗಿ ತಿಂತಳು. ಮಕ್ಕಳಿಗೆ ತಂದೆ ತಾಯಿ ಮನೆಯಲ್ಲಿರುವುದೇ ಸ್ವರ್ಗ ಸುಖ. ಸಂಪಾದನೆಯೂ ಇತ್ತು. ತನ್ನ ಬಾಲ್ಯದ ಬಡತನ, ಕಷ್ಟ, ಕಟ್ಟುನಿಟ್ಟನ್ನು ನೆನೆದ ಸುಭದ್ರ ಮಕ್ಕಳಿಗೆ ಬೇಕುಬೇಕಾದ್ದು ತಂದುಕೊಡುತ್ತಿದ್ದರು.

ಮನೆಗೆ ಬರುವ ಸಾಹಿತಿಗಳ, ಮಿತ್ರರ, ರಾಜಕೀಯ ಕಾರ್ಯಕರ್ತರ ಸರ್ಕಾರ, ಹರಟೆ, ಚರ್ಚೆಗಳಿಂದ ತಮ್ಮ ಚಿಂತೆ ಮಾಡುತ್ತಿದ್ದ ಸುಭದ್ರ ಬಲುಬೇಗ ದುಃಖ ಮರೆಯುತ್ತಿದ್ದರು. ನಾಲ್ಕು ಮಕ್ಕಳ ತಾಯಿಯಾದರೂ ಪ್ರಾಯ ಮೂವತ್ತೆ. ಸ್ಫೂರ್ತಿಯ ಚಿಲುಮೆ, ಪಾದರಸದಂತೆ ಚುರುಕು. ಯಾವ ಹಂಗು ಮುಲಾಜುಗಳೂ ಇಲ್ಲದ ನಿರ್ಭೀತ ವರ್ತನೆ.  ಬಡವರ, ಧೀನದಲಿತರ ಬಗ್ಗೆ ಅಪಾರ ಕರುಣೆ. ಸಹಾಯಕ್ಕೆ ಕರೆಯದೇ ಮುನ್ನುಗ್ಗುವ ಉದಾರತೆ.

ಒಮ್ಮೆ ಶ್ರೀಮಂತರೊಬ್ಬರು ಮದುವೆಗೆ ಕರೆದಿದ್ದರು. ಪಕ್ಕದ ಮನೆಯ ಬೇರೆ ಜಾತಿಯ ಹುಡುಗಿಯೊಬ್ಬಳು ಬಂದಿದ್ದರು. ಸುಭದ್ರ ಆಕೆಯನ್ನು ಹತ್ತಿರ ಕೂರಿಸಿಕೊಂಡರು. ಊಟದ ವೇಳೆಯಲ್ಲಿ ತನ್ನ ಜೊತೆಗೇ ಕೂರಿಸಿಕೊಂಡರು. ಬಡಿಸುತ್ತ ಬಂದ ಮನೆಯೊಡತಿ ಆ ಬೇರೆ ಜಾತಿಯ ಹುಡುಗಿಯನ್ನು  ರಟ್ಟೆ ಹಿಡಿದು ಪಂಕ್ತಿಯಿಂದ ಎಬ್ಬಿಸಿದಳು. ಕೆರಳಿ ಕೆಂಡವಾದ ಸುಭದ್ರ ಮನೆಯೊಡತಿಯ ವರ್ತನೆಯನ್ನು ಪ್ರತಿಭಟಿಸಿ ತಾನೂ ಪಂಕ್ತಿಯಿಂದೆದ್ದು ಹೊರನಡೆದರು. ಮನೆಯೊಡತಿಯ ಮುಖಕ್ಕೆ ಹೊಡೆದಂತಾಯ್ತು.

ವಿಧಾನಸಭಾ ಸದಸ್ಯೆ

ಮಹಿಳಾ ವಲಯದಲ್ಲಿ ಸುಭದ್ರಾಕುಮಾರಿ ಧೈರ್ಯ, ಸಾಹಸ, ಆದರ್ಶಗಳ ಕೇಂದ್ರ ಬಿಂದು. ಅವರ ಪ್ರಯತ್ನ, ಪ್ರಚಾರಗಳಿಂದಾಗಿ ಪರದಾ ಪದ್ಧತಿ ದೂರವಾಗಿತ್ತು. ಸ್ತ್ರೀ ಶಿಕ್ಷಣ ಸಂಪೂರ್ಣ ಸಫಲವಾಗಿತ್ತು. ವಿಧವಾ ವಿವಾಹಗಳೂ ನಡೆದವು. ಒಂಡೆರಡನ್ನು ಸುಭದ್ರಾಕುಮಾರಿಯವರೇ ಮಾಡಿದ್ದರು. ಶ್ರೀಮಂತ ಮಹಿಳೆಯರೂ ಪರದಾ ಬಿಟ್ಟು ಕಾಂಗ್ರೆಸ್‌ನ ಕಾರ್ಯಗಳಲ್ಲಿ ಭಾಗವಹಿಸತೊಡಗಿದ್ದರು. ೧೯೩೭ ರ “ಪ್ರತಿನಿಧಿ ಸಭೆ”ಯ ಚುನಾವಣೆಯಲ್ಲಿ ಸುಭದ್ರಾ ಕುಮಾರಿ ಚೌಹಾನ್, ವಿದರ್ಭ ಪ್ರಾಂತದಿಂದ ಅವಿರೋಧವಾಗಿ ಆಯ್ಕೆಯಾದರು. ವಿಧಾನ ಸಭೆಯ ಕಾರ್ಯ ಕಲಾಪಗಳು ನಾಗಪುರದಲ್ಲಿ ನಡೆಯುತ್ತಿದ್ದವು. ಜಬ್ಬಲ್‌ಪುರದಿಂದ ನಾಗಪುರಕ್ಕೆ ಹೋಗಿ ಬರುವುದು ದಿನನಿತ್ಯದ ವ್ಯವಹಾರ. ಸಿಫಾರಸಿನಿಂದ ಹಿಡಿದು ಔಷಧಿ ತಂದುಕೊಡುವುದು, ಸೀರೆಗೆ ಬಣ್ಣ ಹಾಕಿಸಿ ತರುವವರೆಗಿನ ಎಲ್ಲಾ ಕಾರ್ಯಗಳನ್ನು ಸುಭದ್ರಾ ಜನರಿಗಾಗಿ ಮಾಡುತ್ತಿದ್ದರು. ಊರಿನ ಕಷ್ಟಸುಖಗಳಲ್ಲಿ ಸಕ್ರಿಯ ಪಾಲುಗಾರಿಕೆ.

ಮದುವೆಗೆ ನೀವು ಹೇಗೆ ಸಹಾಯ ಮಾಡುತ್ತೀರಿ”

ಒಂದು ದಿನ ಮುದುಕನೊಬ್ಬ ಮನೆಗೆ ಬಂದ. ಆತನ ಮಗಳ ವಿವಾಹಕ್ಕೆ ಅವರ ಕೇರಿಯ ಒಬ್ಬ ಗೂಂಡಾ ಅಡ್ಡಿ ಪಡಿಸುತ್ತಲಿದ್ದ. “ಹೇಗೆ ಮದುವೆ ಮಾಡ್ತಿರೋ ನೋಡ್ತೇನೆ” ಎಂದು ಸವಾಲು ಹಾಕಿದ್ದ. ಮುದುಕನಿಗೆ ಗೊಂಡಾನನ್ನು ಇದಿರಿಸುವ ಧೈರ್ಯವಿಲ್ಲ. ಆತ ಸುಭದ್ರಾ ಕುಮಾರಿಯ ಸಹಾಯ ಬೇಡಿದ. ಸುಭದ್ರ ಒಡನೆ ಹೊರಟು ಆ ಊರಿನ ತನ್ನ ಗೆಳೆಯರೊಬ್ಬರ ಮನೆಯಲ್ಲಿ ಕುಳಿತು ಗೂಂಡಾನಿಗೆ ಹೇಳಿಕಳಿಸಿದರು. ಸುಭದ್ರಾರವರ ಹೆಸರು ಕೇಳುತ್ತಲೇ ಆತ ಓಡೋಡಿ ಬಂದ. ನಮಸ್ಕಾರ-ಸಮಾಚಾರಗಳ ನಂತರ ಸುಭದ್ರಾ. ನಗುತ್ತ, “ನಿಮ್ಮ ಕೇರಿಯಲ್ಲಿ ನಾಳಿದ್ದು ಮದುವೆಯಂತಲ್ಲ? ಹೇಗೆ ಮಾಡುತ್ತೀರಿ? ಆ ಬಡವನಿಗೆ ಯಾರೂ ಸಹಾಯಕರಿಲ್ಲ. ಕೇರಿಯ ಹೆಣ್ಣು ಮಗಳ ಮದುವೆಯೆಂದರೆ ನಮ್ಮ ಸೋದರಿಯ ಮದುವೆಯಂತೆ. ನೀವೆಲ್ಲ ನಿಂತು ಮಾಡಬೇಕು. ನೆಂಟರನ್ನು ಸ್ವಾಗತಿಸುವುದರಿಂದ ಹಿಡಿದು ಹೆಣ್ಣು ಕಳಿಸಿಕೊಡುವವರೆಗಿನ ಎಲ್ಲಾ ಜವಾಬ್ದಾರಿ ನೀವು ವಹಿಸಬೇಕು. ಏನು ಹೇಳುತ್ತೀ?” ಎಂದರು. ಗೂಂಡಾ ಕರಗಿ ನೀರಾಗಿದ್ದ. “ಆಗಲಿ, ಅಕ್ಕಾ, ನೀವು ಹೇಳಿದ ನಂತರ ಇಲ್ಲಾನ್ನುವುದಕ್ಕಾಗುತ್ತದೆಯೇ? ನೀವೇ ಬಂದು ನೋಡಿ ಹೇಗೆ ಮಾಡ್ತೇವೇಂತ” ಎಂ. ಮದುವೆ ಅದ್ದೂರಿಯಿಂದ ನಡೆಯಿತು. ಸುಭದ್ರಾ ಕೂಡ ಹಾಜರಿದ್ದರು.

ಭಾರತ ಬಿಟ್ಟು ಹೋಗಿ” ಚಳುವಳಿ

೧೯೪೨ರ ಕಾಲ ಕ್ವಿಟ್ ಇಂಡಿಯಾ (ಬ್ರಿಟಿಷರೇ ಭಾರತ ಬಿಟ್ಟು ಹೋಗಿ) ಚಳುವಳಿ ಪ್ರಾರಂಭವಾಯಿತು. ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಸುಭದ್ರಾ ಕುಮಾರಿಗೆ ಪತ್ರ ಬರೆಯಿತು. ಆಗ ಅವರ ಕೊನೆಯ ಮಗಳ ಚಿಕಿತ್ಸೆಗಾಗಿ ಮುಂಬಯಿಗೆ ತುರ್ತಾಗಿ ಹೋಗಬೇಕಾಗಿತ್ತು. ಸುಭದ್ರಾ ಬಾಪೂಜಿಗೆ ಪತ್ರ ಬರೆದು ತನ್ನ ಮಗಳ ಸ್ಥಿತಿ ವಿವರಿಸಿ ಮುಂಬಯಿಗೆ ಆಗಾಗ ಹೋಗಿ ಬರಬೇಕಾಗುವುದರಿಂದ ಸತ್ಯಾಗ್ರಹದಲ್ಲಿ ಭಾಗವಹಿಸಲು ಸಾಧ್ಯವಾಗದು ಎಂದು ತಿಳಿಸಿದರು. ಬಾಪೂ ಒಪ್ಪಿಗೆ ನೀಡಿದರು. ಸತ್ಯಾಗ್ರಹ ಪ್ರಾರಂಭವಾಯಿತು.

ಸರಕಾರ ಸತ್ಯಾಗ್ರಹಿಗಳನ್ನು ಬಂದಿಸಲಿಲ್ಲ. ಎಲ್ಲರೂ ದಿಲ್ಲಿ ತನಕ ನಡೆದೇ ಹೋಗುವ ನಿರ್ಧಾರ ಮಾಡಿದರು. ವಾತಾವರಣದಲ್ಲಿ ಬಿಸಿ ಮೂಡಿತು. ಸುಭದ್ರಾ ಕುಮಾರಿಗೆ ಮನೆಯಲ್ಲಿರುವುದು ಸಾಧ್ಯವಾಗಲಿಲ್ಲ. ಜಬ್ಬಲ್ ಪುರದ “ತಿಲಕ ತಲೈಯಾ” ದಲ್ಲಿ ಸತ್ಯಾಗ್ರಹ ಮಾಡಿದರು. ಪೊಲೀಸರು ಬಂಧಿಸಲಿಲ್ಲ. ಸುಭದ್ರ ರಾತ್ರಿ ಬಹಳ ಹೊತ್ತು ಅಲ್ಲೆ ಕುಳಿತು ಅನಂತರ ಪರಿಚಿತರೊಬ್ಬರ ಮನೆಗೆ ಹೋದರು. ಗ್ರಾಮಗ್ರಾಮಗಳಲ್ಲಿ ಸತ್ಯಾಗ್ರಹ ಮಾಡುತ್ತ ದೆಹಲಿಗೆ ಹೋಗುವ ತನ್ನ ನಿರ್ಧಾರವನ್ನು ತಿಳಿಸಿದರು. ಇದನ್ನು ತಿಳಿದ ಮ್ಯಾಜಿಸ್ಟ್ರೇಟರು ಬಂಧನದ ಆಜ್ಞೆ ಹೊರಡಿಸಿ ಕೋರ್ಟಿಗೆ ಹಾಜರು ಪಡಿಸಿದರು. ಒಂದು ರೂಪಾಯಿ ದಂಡ. ಕೋರ್ಟು ಹೇಳುವವರೆಗಿನ ಶಿಕ್ಷೆ. ಹಿಂದೆ ಕುಳಿತಿದ್ದ ಕಾರ್ಯಕರ್ತರೊಬ್ಬರು ಒಂದು ರೂಪಾಯಿ ನಾಣ್ಯವನ್ನು ಠಣ್ಣನೆ ಎಸೆದರು. ಸುಭದ್ರ ಸಂಜೆ ಮನೆಗೆ ಬಂದರು. ಮರುದಿನ ಮತ್ತೆ ಸತ್ಯಾಗ್ರಹ ಮಾಡಿದಾಗ ಒಂದು ತಿಂಗಳ ಸಜೆ ವಿಧಿಸಲ್ಪಟ್ಟಿತು. ಒಂದು ತಿಂಗಳು ಜೈಲಿನಲ್ಲಿದ್ದು ಹದಿನೈದು ಕತೆ ಬರೆದರು.

ಸೈನ್ಯಕ್ಕೆ ಜನರನ್ನು ಭರ್ತಿ ಮಾಡಲು ಸರ್ಕಾರ ಕವಿ ಸಮ್ಮೇಳನ ಏರ್ಪಡಿಸುತ್ತಿತ್ತು. ಆಂಧ್ರ ಸಮ್ಮೇಳನವೊಂದರಲ್ಲಿ ಸುಭದ್ರ ಕುಮಾರಿ ಎದ್ದು ನಿಂತು “ಆಂಗ್ಲರಿಗಾಗಿ ನಾವೇಕೆ ಸಾಯಬೇಕು? ಯೂರೋಪಿನಲ್ಲಿ ನಡೆಯುವ ಯುದ್ಧ ನಮ್ಮದಲ್ಲ. ನಮ್ಮ ಒಂದು ಬೇಡಿಕೆಯನ್ನು ಈಡೇರಿಸಿದ ಆಂಗ್ಲರಿಗೆ ನಾವೇಕೆ ಸಹಾಯ ಮಾಡಬೇಕು?” ಎಂದು ಗರ್ಜಿಸಿದರು. ಸಭೆಯಲ್ಲಿ “ಹೌದು ಹೌದು” ಎಂಬ ಗಲಿಬಿಲಿ ಮೂಡಿತು.

ನಗುನಗುತ್ತ ಸೆರೆಮನೆಗೆ

ಕ್ವಿಟ್ ಇಂಡಿಯಾ ಚಳುವಳಿ ಕಾವು ಪಡೆಯುತ್ತಿತ್ತು. “ತಮ್ಮನ್ನು ಸರ್ಕಾರ ಮತ್ತೆ ಬಂಧಿಸುವುದು ಖಂಡಿತ” ಎಂಬ ಸಂಗತಿ ಚೌಹಾನ್ ದಂಪತಿಗಳಿಗೆ ತಿಳಿದಿತ್ತು. ಸಿದ್ಧತೆಗಳು ನಡೆಯುತ್ತಿದ್ದಂತೇ ಮರುದಿನ ಬೆಳಿಗ್ಗೆ ಪೊಲೀಸು ವ್ಯಾನು ಬಂದು ನಿಂತಿತು. ಲಕ್ಷ್ಮಣಸಿಂಹರ ಹೆಸರಿಗೆ ವಾರೆಂಟ್ ತಂದಿದ್ದ, ಅಧಿಕಾರಿ. ಅತ್ತೆ ಮನೆಗೆ ಹೊರಡುವ ಸಂಭ್ರಮದಿಂದ ಲಕ್ಷ್ಮಣಸಿಂಹರು “ಮನೆಕಡೆ ಜೋಪಾನ” ಎಂದು ಹೇಳಿ ವ್ಯಾನು ಹತ್ತಿದರು. ಪ್ರಾಯಕ್ಕೆ ಬಂದ ಮಗಳು, ಚಿಕ್ಕ ಮಕ್ಕಳು, ಬಾಯಿ ಅಪರೇಶನ್ ಮಾಡಿಸಿಕೊಂಡ ಚಿಕ್ಕ ಮಗು-ಇವರನ್ನೆಲ್ಲ ತ್ಯಜಿಸಿ ಸುಭದ್ರಾಕುಮಾರಿಯೂ ಜೈಲಿಗೆ ಹೋಗುವ ಸಿದ್ಧತೆ ಮಾಡಿದರು. ಮರುದಿನ ತನ್ನ ಕಥಾ ಸಂಗ್ರಹವನ್ನು ಪ್ರಕಾಶಕರಿಗೆ ಕೊಟ್ಟು ಹಣ ತರಲು ಹೋದರು. ಅದು ಸಾಧ್ಯವಾಗದಾಗ ಪ್ರಬಂಧ ಸಂಕಲವೊಂದನ್ನು ಪಠ್ಯಪುಸ್ತಕ ಪ್ರಕಾಶಕರಿಗೆ ಮಾರಾಟ ಮಾಡಿ ಸ್ವಲ್ಪ ಹಣ ಪಡೆದುಕೊಂಡರು. ಅಷ್ಟರಲ್ಲೇ ಮನೆ ಮುಂದೆ ಪೊಲೀಸು ವ್ಯಾನು ಬಂದ ಸುದ್ದಿಯನ್ನು ಚಿಕ್ಕ ಮಗ ತಿಳಿಸಿದ. ನಗುತ್ತಲೇ ಮನೆಗೆ ಬಂದರು. ಪೊಲೀಸರು ಪರಿಚಿತರೆ. ಮಕ್ಕಳು ದುಃಖದಿಂದ ಮೂಕರಾಗಿದ್ದರು. ಹಿರಿಮಗಳು ಅಳುತ್ತಲಿದ್ದಳು. ತಾಯಿ ಹೊರಟು ಬಂದಾಗ. “ಅಮ್ಮಾ, ಮಕ್ಕಳ ಗತಿ ಏನು? ಇವು ಎಲ್ಲಿರುತ್ತವೆ?” ಎಂದು ಅತ್ತಳು. “ಇಲ್ಲೇ ಇರುತ್ತವೆ. ಹೆದರಬೇಡ. ಬೇಗನೆ ಬಂದು ಬಿಡುತ್ತೇನೆ” ಎಂದರು ಸುಭದ್ರ. ಜೈಲಿಗೆ ಹೋಗುವುದೆಂದರೆ ಪ್ರಯಾಣ ಹೊರಟಷ್ಟು ಸಲೀಸು. ಮಮತಾಳನ್ನು ಎತ್ತಕೊಂಡು ವ್ಯಾನು ಹತ್ತಿದರು.

ಜೈಲಿನಿಂದ ಆಸ್ಪತ್ರೆಗೆ

ಜೈಲಿನಲ್ಲಿ ಸುಭದ್ರ “ಬಿ” ವಿಭಾಗದ ಕೈದಿ. ಆದರೆ ಅವರ ಗೆಳೆತನ ಯಾವಾಗಲೂ “ಸಿ” ವರ್ಗದ ಮಹಿಳಾ ಕೈದಿಗಳೊಡನೆ ಅವರ ಕಷ್ಟ ಸುಖ ಕೇಳುವುದು, ತನ್ನ ಅಡಿಗೆ ನೀಡುವುದು, ರವಿಕೆ ಹೊಲಿದು ಕೊಡುವುದು ಇತ್ಯಾದಿ ಪ್ರಿಯಕಾರ್ಯವಾಗಿದ್ದವು.

ಸುಭದ್ರಾಗೆ ಹಿಂದೊಮ್ಮೆ ಟ್ಯುಮರ್ ಬಂದಿದ್ದು ಹೋಮಿಯೋಪತಿ ಚಿಕಿತ್ಸೆಯಿಂದ ಗುಣ ಹೊಂದಿತ್ತು. ಟ್ಯುಮರ್ ಮತ್ತೆ ಸೆರೆಮನೆಯಲ್ಲಿ ಉಲ್ಬಣಿಸಿತು. “ನೀವು ಕ್ಷಮೆಯಾಚಿಸಿ ಹೊರ ಹೋಗಬಹುದು” ಎಂದು ಜೈಲಿನ ಅಧಿಕಾರಿಗಳು ಸಲಹೆ ನೀಡಿದರು. ಸುಭದ್ರ ಒಪ್ಪಲಿಲ್ಲ. ಗಂಡ ಹೆಂಡತಿ ಒಂದೇ ಜೈಲಿನಲ್ಲಿದ್ದರೂ ವಿಭಾಗ ಬೇರೆ ಬೇರೆ. ಪರಸ್ಪರರ ಭೇಟಿ ಇಲ್ಲ. ಕೆಲವೇ ದಿನಗಳಲ್ಲಿ ಲಕ್ಷ್ಮಣಸಿಂಹರನ್ನು ಶಿವನಿ ಜೈಲಿಗೆ ಸಾಗಿಸಿದರು. ಸುಭದ್ರಾ ಕುಮಾರಿಯ ಖಾಯಿಲೆ ಅಧಿಕಗೊಂಡಿತು. ತುಂಬ ಸುಸ್ತಾದರು. ಗಾಬರಿಗೊಂಡ ಸರ್ಕಾರ ೧೯೪೩ ಮೇ ಒಂದರಂದು ಅವರನ್ನು ಜಬ್ಬಲ್‌ಪುರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿತು. ವೈದ್ಯರು ಪರೀಕ್ಷಿಸಿ ೪ನೇ ತಾರೀಖು ಆಪರೇಶನ್ ಮಾಡುವುದಾಗಿ ತಿಳಿಸಿದರು. ಆಪರೇಶನ್ ನಂತರ ಸುಭದ್ರ ಬದುಕುವುದು ಅಸಂಭವವೆಂದು ಶಂಕಿಸಿ ಸರ್ಕಾರ ಮರುದಿನ ಅವರ ಬಿಡುಗಡೆಯ ಆಜ್ಞೆ ಹೊರಡಿಸಿತು. ಅಂದೇ ಸಂಜೆ ಸುಭದ್ರ ಮನೆಗೆ ಬಂದರು. ಮಕ್ಕಳು ಕುಣಿದಾಡಿದರು. ಕಷ್ಟದಲ್ಲಿಯೂ ಸುಖ. “ಆಪರೇಶನ್ ನಾಳೆ ತಾನೆ? ಇವತ್ತು ಒಂದು ಸಿನಿಮಾ ನೋಡಬೇಕು” ಎಂದು ಮೂರನೇ ತಾರೀಖು ಸುಭದ್ರ ಮಕ್ಕಳ ಜೊತೆ ಸಿನಿಮಾಕ್ಕೆ ಹೋದರು. ಅಲ್ಲೇ ಮೂರ್ಛೆ ಹೋದವರನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿದರು. ಮಕ್ಕಳು ಗಾಬರಿಯಿಂದ ಅಳತೊಡಗಿದರು. ಎಚ್ಚರಗೊಂಡ ಸುಭದ್ರ “ಅಳುವುದೇಕೆ? ನಾನು ಸಾಯುವುದಿಲ್ಲ” ಎಂದು ಸಮಾಧಾನ ಪಡಿಸಿದರು. ಮರುದಿನ ಶಸ್ತ್ರ ಚಿಕಿತ್ಸೆ ಆಯಿತು. ಸುಭದ್ರ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದರು.

ಅಂತರ ಜಾತಿ ವಿವಾಹ

ಸುಭದ್ರ ಮನೆಗೆ ಬಂದರು. ಆಪರೇಶನ್, ಚಿಕಿತ್ಸೆ, ಉಪಚಾರಕ್ಕಾಗಿ ಸಾಕಷ್ಟು ಹಣ ಖರ್ಚಾಗಿತ್ತು. ಪದವಿ ಮುಗಿಸಿದ್ದ ಹಿರಿಮಗಳು ಕೆಲಸಕ್ಕೆ ಸೇರಿದಳು. ಜೈಲಿನಲ್ಲಿದ್ದವರ ಕುಟುಂಬಕ್ಕೆ ಬರುತ್ತ ಸಹಾಯಧನ ಸಾಲದಾಯಿತು. ಸುಭದ್ರ ಕವಿ ಸಮ್ಮೇಳನಗಳಿಗೆ ಹೋಗುವುದು, ಲೇಖನ ಬರೆಯುವುದು ಮತ್ತೆ ಪ್ರಾರಂಭಿಸಿದರು. ಕಲ್ಕತ್ತೆ, ಮುಂಬಯಿಗಳಂತಹ ಊರುಗಳಿಗೂ ಕವಿ ಸಮ್ಮೇಳನಕ್ಕಾಗಿ ಹೋಗುತ್ತಿದ್ದರು. ಇದೇ ವೇಳೆಗೆ ಪ್ರಸಿದ್ಧ ಲೇಖಕ ಪ್ರೇಮಚಂದ್‌ರವರ ಮಗ ಅಮೃತರಾಯ್‌ರವರ ಪರಿಚಯವಾಯಿತು. ಅವರ ಜೊತೆ ಮಗಳು ಸುಧಾಳ ವಿವಾಹದ ಕ್ರಾಂತಿಕಾರಿ ನಿರ್ಣಯ ಮಾಡಿದರು. ಅಮೃತರಾಯ್‌ ಕಾಯುಸ್ತ ವಂಶಜರು. ಸುಭದ್ರಾ ಕುಮಾರಿ ಚೌಹಾನ್ ಠಾಕೂರ್ ವಂಶಜರು. ಅಂತರಜಾತಿ ವಿವಾಹಕ್ಕೆ ಲಕ್ಷ್ಮಣಸಿಂಹರು ಜೈಲಿನಲ್ಲಿದ್ದೇ ಒಪ್ಪಿಗೆ ನೀಡಿದ್ದರು. ಆದರೆ ಸ್ವಜಾತಿ ಬಾಂಧವರಿಂದ ಸಾಕಷ್ಟು ವಿರೋಧ ಬಂತು. ಹುಡುಗಿಯನ್ನೇ ಅಪಹರಿಸುವ ಬೆದರಿಕೆ ಹಾಕಿದರು. ಸುಭದ್ರ ಯಾವುದಕ್ಕೂ ಜಗ್ಗಲಿಲ್ಲ. ೧೯೪೫ ರಲ್ಲಿ ಸುಧಾ ಮತ್ತು ಅಮೃತರಾಯ್‌ರವರ ವಿವಾಹ ಮೊದಲು ರಿಜಿಸ್ಟ್ರಾರ್‌ರವರ ಕಚೇರಿಯಲ್ಲಿ ಆನಂತರ ಮನೆಯಲ್ಲಿ ಅತ್ಯಂತ ಸರಳವಾಗಿ ಜರುಗಿತು. ಈ ವೇಳೆಗೆ ಲಕ್ಷ್ಮಣಸಿಂಹರು ಬಿಡುಗಡೆ ಹೊಂದಿದ್ದರು.

ಮತ್ತೆ ವಿಧಾನ ಸಭೆಗೆ

೧೯೪೬ರಲ್ಲಿ ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಸುಭದ್ರ ಮತ್ತೆ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಹುಪತ್ನಿತ್ವ ವಿರೋಧಿ ಮಸೂದೆ ಒಂದು ಐತಿಹಾಸಿಕ ದಾಖಲೆ. ಕಷ್ಟಗಳ ಕಾರ್ಮೋಡ ಹರಿದು, ಸಂತಸದ ಸೂರ್ಯೋದಯವಾಗಿತ್ತು.

ಸುಭದ್ರಾಕುಮಾರಿಯವರಿಗೆ ಆಗಾಗ ತಲೆ ನೋವು ಬರುತ್ತಿತ್ತು. ತಲೆ ನೋವು ಬಂದರೆ ಐದು-ಆರು ಆಸ್ಟ್ರಿನ್ ನುಂಗಿದರೂ ಸಾಲದು. ಒಮ್ಮೆ ನಾಗಪುರಕ್ಕೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಫಕ್ಕನೆ ಮೂಗಿನ ನರ ಒಡೆದು ಬಳಬಳನ ರಕ್ತ ಹರಿಯಿತು. ಒಡನೇ ವೈದ್ಯರ ಬಳಿಗೆ ಧಾವಿಸಿದರು. ಪರೀಕ್ಷಿಸಿದಾಗ ರಕ್ತದ ಒತ್ತಡವಿರುವುದು ತಿಳಿದುಬಂತು. ಕ್ರಮ ಪ್ರಕಾರ ಔಷಧಿ ತೆಗೆದುಕೊಂಡರೆ ಗುಣವಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಯಾವಾಗಲೂ ಸಭೆ, ಸಮಾರಂಭ, ಚರ್ಚೆ ಚಳುವಳಿ, ಭೇಟಿ, ಭಾಷಣಗಳಲ್ಲೇ ವೇಳೆ ಕಳೆಯುತ್ತಿತ್ತು.

 

"ಎಲ್ಲಾ ಜವಾಬ್ದಾರಿಯನ್ನು ನೀನು ವಹಿಸಬೇಕು"

ಸ್ವತಂತ್ಯ್ರೋತ್ಸವ! ಜಬ್ಬಲ್‌ಪುರದಲ್ಲೂ ಅದ್ಧೂರಿಯ ಕಾರ್ಯಕ್ರಮ. ಸುಭದ್ರ ಕೇರಿಯ ಮಕ್ಕಳಿಗೆಲ್ಲ ಸಹಿ ಹಂಚಿದರು. ಮೊದಲ ಮಗ ಅಜಯ ನೌಕಾ ಪಡೆಗೆ ಸೇರಲು ಹೋದರೆ ಸಂದರ್ಶನದಲ್ಲಿ ಆತ ನೀಡಿದ ದೇಶಭಕ್ತಿ ಪೂರ್ಣ ಉತ್ತರಗಳಿಂದಾಗಿ ಆಯ್ಕೆ ಆಗಲಿಲ್ಲ. ಈಚೆಗೆ ಸುಭದ್ರ ರವರ ಓಡಾಟ ಹೆಚ್ಚಿತ್ತು. ತೆರೆಯುವ ಟಾಪ್ ಇರುವ ಒಂದು ಕಾರು ಕೊಂಡರು.

ಯಾಕೆ ಬಿಡುವುದಿಲ್ಲ?

೧೯೪೮ರ ಜನವರಿ ೩೦ ಗಾಂಧೀಜಿಯವರ ಹತ್ಯೆ ನಡೆಯಿತು. ಈ ಭಯಂಕರ ಸುದ್ಧಿ ಸುಭದ್ರಾಕುಮಾರಿಗೆ ಭಾರೀ ನೋವುಂಟು ಮಾಡಿತು. ಜೀವನದಲ್ಲಿ ಮೊದಲ ಬಾರಿಗೆ ಚಿಕ್ಕ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. “ಇನ್ನು ಬದುಕಿ ಫಲವಿಲ್ಲ” ಎಂದು ಗೋಳಾಡಿದರು.

ಜಬ್ಬಲ್‌ಪುರದ ಬಳಿದ ತಿಲವಾರಾಘಾಟ್‌ನಲ್ಲಿ ಮಹಾತ್ಮರ ಭಸ್ಮ ವಿಸರ್ಜನೆಯ ಕಾರ್ಯಕ್ರಮವಿತ್ತು. ಭಸ್ಮಕುಂಡ ಅಲ್ಲಿಗೆ ತಂದಿದ್ದರು. ಸುಭದ್ರ  ಎಂಟು ಮೈಲಿ ದೂರ ಕಾಲ್ನಡಿಗೆಯಲ್ಲೇ ಹೋದರು. ಅವರ ಜೊತೆಗೆ ಹಲವರು ಮಹಿಳೆಯರೂ ಬಂದರು. ಘಾಟ್‌ನಲ್ಲಿ ಆಗಲೇ ಬಂದೋಬಸ್ತ್‌ ಕಾರ್ಯ ನಡೆದಿತ್ತು. ಮಹಿಳೆಯರ ಗುಂಪು ಕಂಡು “ಎಲ್ಲರನ್ನು ಒಳಗೆ ಬಿಡುವಂತಿಲ್ಲ, ನೀವು ಹಲವರು ಮಹಿಳೆಯರು ಅಲಂಕರಿಸಿಕೊಂಡು ನಿಂತಿದ್ದರು. ಸುಭದ್ರ ಕೆರಳಿದ ಸಿಂಹಿಣಿಯಂತೆ “ಯಾಕೆ ಬಿಡುವುದಿಲ್ಲ? ಕಾರಿನಲ್ಲಿ ಹಾರಿ ಬಂದವರನ್ನು ಒಳಗೆ ಬಿಟ್ಟಿದ್ದೀರಿ, ಬಾಪೂಜಿಯಲ್ಲಿ ಶ್ರದ್ಧೆ ಭಕ್ತಿ ಇದ್ದು ಕಾಲ್ನಡಿಗೆಯಲ್ಲಿ ಬಂದವರನ್ನು ಬಿಡುವುದಿಲ್ಲವೆಂದರೇನು? ಇವರನ್ನು ಬಿಡದಿದ್ದರೆ ನಾನೂ ಹೋಗುವುದಿಲ್ಲ” ಎಂದರು. ಡೆಪ್ಯುಟಿ ಕಮೀಷನರ್ ತತ್ತರಿಸಿಹೋದ. ಹತ್ತಿರ ಬಂದ ಲಕ್ಷ್ಮಣಸಿಂಹರು “ನಿನ್ನ ಜೊತೆಗೆ ಮೂವತ್ತಕ್ಕೂ ಹೆಚ್ಚು ಜನ ಮಹಿಳೆಯರಿದ್ದಾರಲ್ಲವೇ?” ಎಂದು ಕೇಳಿದರು. ಅಧಿಕಾರಿಗೆ ಇದರ ಅರ್ಥ ತಿಳಿಯಿತು. ಇವರು ಧರಣಿ ಮುಷ್ಕರ ಹೂಡಿದರೆ ಕೆಲಸ ಕೆಡುತ್ತದೆಂದು ಗಾಬರಿಯಿಂದ” ಹಾಗಾದರೆ ಬನ್ನಿ, ಒಳಗೆ ಬಿಡುತ್ತೇನೆ” ಎಂದ. ಎಲ್ಲರೂ ಬಾಪೂಜಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಸಾವಿನ ಸೂಚನೆ

ಒಮ್ಮೆ ಸುಭದ್ರ ಗೆಳತಿಯೊಬ್ಬರ ಮನೆಗೆ ಹೋದವರು ಮೆಟ್ಟಿಲು ಹತ್ತುವಾಗ ಬವಳಿ ಬಂದಂತಾಗಿ ಕುಸಿದು ಬಿದ್ದರು. ಶೈತ್ಯೋಪಚಾರದನಂತರ ಚೇತರಿಸಿಕೊಂಡಾಗ ಗೆಳತಿಗೆ, “ನಾನೇನಾದರೂ ಸತ್ತರೆ ನನ್ನ ಮಕ್ಕಳನ್ನು ನೋಡಿಕೊಳ್ತಿಯಾ?” ಎಂದರು. ಸಾವಿನ ಮಾತು ಅದೇ ಮೊದಲ ಸಲ ಅವರ ಬಾಯಿಂದ ಬಂದಿತ್ತು. ಗೆಳತಿ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದಳು.

೧೯೪೮ರ ಫೆಬ್ರವರಿ ೧೪ನೇ ತಾರೀಖು ನಾಗಪುರದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳಕ್ಕೆ ಸುಭದ್ರಾಕುಮಾರಿ ಹೋಗಬೇಕಾಗಿತ್ತು. ಹಿಂದಿನ ದಿನ ಪರೀಕ್ಷಿಸಿದ ವೈದ್ಯರು “ರಕ್ತತದ ಒತ್ತಡ ಹೆಚ್ಚು ಇದೆ. ನೀವು ರೈಲಿನಲ್ಲಿ ಪ್ರಯಾಣ ಮಾಡಬಾರದು” ಎಂದು ಸಲಹೆ ಮಾಡಿದರು. ಕಾರ್ಯಕರಮಕ್ಕೆ ಹೋಗಲೇ ಬೇಕಾಗಿರುವುದರಿಂದ ಕಾರಿನಲ್ಲಿ ಹೋಗುವುದೆಂದು ತೀರ್ಮಾನವಾಯಿತು.

ನಸುಕಿಗೇ ಎದ್ದು ಚಹಾ ಕುಡಿದು ಕಾಲಿನಲ್ಲಿ ಕುಳಿತ ಸುಭದ್ರ ಅದೇನೋ ನೆನಪಾಗಿ ಹಿಂತಿರುಗಿ ಬಂದರು. ಒಳಗೆ ಹೋಗಿ, ಮಲಗಿದ್ದ ಕಿರಿಮಗ ಹಾಗೂ ಮಮತಾನ ತಲೆದಿಂಬಿನಡಿಗೆ ಸ್ವಲ್ಪ ಹಣ ಇರಿಸಿದರು. ಇದಿರಿಗೆ ಬಂದ ಮಗಳ ಕೈಗೆ ಬೀಗದ ಕೈ ಗೊಂಚಲು ನೀಡಿ “ತಗೋ ಮಗಳೇ, ನೋಡಿಕೋ” ಎಂದರು. ಆಚೆ ಕಡೆ ಮಲಗಿದ್ದ ಮೊಮ್ಮಗಳನ್ನು ಮುದ್ದಿಸಿದರು. ಹೊರಗೆ ಬಂದಾಗ ದೂರದಲ್ಲಿ ನರಿಗಳು ಊಳಿಡುವ ಶಬ್ಧ ಕೇಳಿಸಿತು. ತಡೆದು ನಿಂತ ಸುಭದ್ರಾ “ಇಂದೇಕೋ ಅಪಶಕುನಗಳೇ ಆಗುತ್ತವೆ” ಎಂದವರೇ ಕಾರು ಹತ್ತಿದರು.

ನಾಗಪುರದಲ್ಲಿ ಕಾರ್ಯಕ್ರಮ ಮುಗಿಯಿತು. ಮರುದಿನ ಬೆಳಿಗ್ಗೆ ಬೇಗನೆ ಹಿಂದಿರುಗುವ ಯೋಚನೆ ಮಾಡಿದ್ದರು. ಕಾಯಿಲೆ ಆಗಿದ್ದ ಸ್ನೇಹಿತ ಮೆಹತಾ ಅವರನ್ನು ನೋಡಲು ಹೋದರು. ಬಹಳ ಹೊತ್ತು ಅವರೊಡನೆ ಮಾತನಾಡುತ್ತ ಕುಳಿತರು. ಮರುದಿನ ನಸುಕಿಗೆ ಹೋಗುವುದಾಗಿ ಹೇಳಿ  ಹೊರಟಾಗ ಮೆಹತಾ “ನಾಳೆ ಬೆಳಿಗ್ಗೆ ಬಂದು ಸ್ವಲ್ಪ ಹೊತ್ತು ರಾಮಾಯಣ ಓದಿದರೆ ನನಗೆ ನೆಮ್ಮದಿಯಾಗುತ್ತದೆ” ಎಂದರು.

ಅಂತಿಮ ಯಾತ್ರೆ

ನಸುಕಿನಲ್ಲೇ ಹೊರಡುವ ಕಾರ್ಯಕ್ರಮ ರದ್ದಾಯಿತು. ಸುಭದ್ರ ಮೆಹತಾರವರ ಮನೆಗೆ ಹೋಗಿ ತುಲಸೀ ರಾಮಾಯಣ ವಾಚನ ಮಾಡಿದರು. ಉಪಹಾರ ಪೂರೈಸಿ ಜಬ್ಬಲ್‌ಪುರದ ಕಡೆ ಹೊರಟರು. ಕಾರಿನಲ್ಲಿದ್ದರು ನಾಲ್ಕೇ ಜನ. ಮಗ ವಿಜಯ, ಡ್ರ್‌ಐವರ್, ಹಿರಿಯ ಮಿತ್ರರೊಬ್ಬರು ಮತ್ತು ಸುಭದ್ರಾ ಕುಮಾರಿ. ದಾರಿಯಲ್ಲಿ ಅಡ್ಡ ಬಂದ ಕಾಡುಕೋಳಿಗಳನ್ನು ತಪ್ಪಿಸಲು ಹೋಗಿ ಹಿಂದುಗಡೆ ಬಾಗಿಲು ಮರಕ್ಕೆ ಹೊಡೆಯಿತು. ಸುಭದ್ರಾಕುಮಾರಿಗೆ ಗಾಜಿನ ಚೂರು ಹಾಕಿ ಚಿಕ್ಕ ಗಾಯಗಳಾಗಿದ್ದವು. ಆದರೆ ಅಷ್ಟರಿಂದಲೇ ಅವರು ಮೂರ್ಛೆ ಹೋಗಿದ್ದರು. ಉಳಿದವರಿಗೆಲ್ಲ ಏನೂ ಅಪಾಯ ಸಂಭವಿಸಲಿಲ್ಲ. ತುಸು ಹೊತ್ತಿನ ನಂತರ ಸುಭದ್ರ ಕಣ್ಣು ತೆರೆದರು. ಇದಿರಗೆ ಮಗ ವಜಯ ಕಾಣಿಸಿದ. ಆಶೀರ್ವಾಹ ಮಾಡುವವರಂತೆ ಕೈ ಎತ್ತಿ “ಬೇಟಾ” ಎಂದರು. ಮತ್ತೆ ಎಲ್ಲವೂ ಶಾಂತ.

ಸಾವಿಗೆ ತುತ್ತಾದಾ ಈ ಧೀರ ಮಹಿಳೆಗೆ ನಲವತ್ತ ನಾಲ್ಕೇ ವರ್ಷ. ಕ್ಷಾತ್ರ ತೇಜಸ್ಸಿನಿಂದ ಬೆಳಗಿದ ಸ್ವಾತಂತ್ಯ್ರ ಸಂಗ್ರಾಮದ ವೀರಮಹಿಳೆ ವಸಂತ ಪಂಚಮಿಯಂದೇ ಹುಟ್ಟಿ ವಸಂತ ಪಂಚಮಿಯಂದೇ ಕಣ್ಣು ಮುಚ್ಚಿದರು. ಸ್ವಾತಂತ್ಯ್ರ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಸುಭದ್ರಾ ಕುಮಾರಿಯ ಹೆಸರು ಶಾಶ್ವತವಾಗಿ ಬರೆಯಲ್ಪಟ್ಟಿದೆ. ಜಬ್ಬಲ್‌ಪುರದ  ಪುರಭವನದ ಎದುರುಗಡೆ ಇರುವ ಸುಭದ್ರಾಕುಮಾರಿಯವರ ಪೂರ್ಣ ಪ್ರಮಾಣದ ಶಿಲಾಪ್ರತಿಮೆ ಗಂಗೆಯ ಮಡಿಲಲ್ಲಿ ಹುಟ್ಟದ ಗಟ್ಟಿ ಹೆಣ್ಣು ನರ್ಮದೆಯ ಪ್ರದೇಶದಲ್ಲಿ ಸಾಧಿಸಿದ ಸ್ವಾತಂತ್ಯ್ರ ಸಂಗ್ರಾಮದ ಕತೆ ಹೇಳುತ್ತದೆ. ಅವರ ಕವಿತೆ, ಕಥೆ, ಗೀತೆಗಳು, ಆಚಂದ್ರಾರ್ಕವಾಗಿ ಸಾಹಿತ್ಯ ಕೂಟದಲ್ಲಿ ಶೋಭಿಸುತ್ತವೆ.