ದರುವು

ಕಾಡದಿರೆ ಕಾಮಿನೀಮಣಿ  ತರಳಾಕ್ಷಿ ನಿನಗೆ
ಬೇಡವೆನ್ನ ಗೊಡವೆ ಭಾಮಿನೀ ॥ಪ ॥
ಗಾಡಿಕಾರ್ತಿ ನಿನ್ನನೀಗ
ಕೂಡುವಾತನಲ್ಲ ನಾನು
ಗಾಢದಿಂದ ಧರೆಗೆ ಪೋಗುವ
ಜಾಡು ತೋರು ಬಾರೆ ನೀರೇ

ಅರ್ಜುನ: ಎಲೈ ತೋಯಜಾಕ್ಷಿ! ಅನೃತಂ ಸಾಹಸಂ ಮಾಯಂ ಮೂರ್ಖತ್ವಂ ಚಪಲಚಿತ್ತಃ, ಅಸತ್ಯಂ ನಿರ್ದಯತ್ವಂ ಚ ಸ್ತ್ರೀಣಾಂ ಚಿತ್ತ ಸ್ವಭಾವಿತಃ ಎಂಬಂತೆ ಈ ಸಪ್ತಗುಣಗಳು ನಿನ್ನಲ್ಲಿ ನೆಲಸಿಹವಾದ್ದರಿಂದ ಮಾಯಾಂಗನೆಯಾದ ನಿನ್ನನ್ನು ಹ್ಯಾಂಗೆ ನಂಬಲಾಗುವುದೇ ನೀರೆ. ಆದರೆ ಕಾಯಜನ ಕೇಳಿಗೆ ಬಾರೆಂದು ಪ್ರಿಯವಾದ ಮೃದು ಮಧುರೋಕ್ತಿಗಳಿಂದ ಮನ್ನಿಸಿ ಮಾತುಗಳಾಡಿದರೆ ನಿನ್ನ ಮಾಯತನಕ್ಕೊಳಗಾಗುವ ಪುರುಷನಲ್ಲವೇ ನಾರೀ ತೋರೆನಗೆ ದಾರಿ ॥

ದರುವು

ಚಂದದೋಳೆನ್ನಯಾ
ಮಂದಿರವನ್ನು ಸೇರೋ
ಇಂದು ಅಧರಾಮೃತವಾ
ಚಂದದಿಂ ಸವಿಯೋ ನಲ್ಲಾ                                                 ॥2 ॥

ಉಲೂಪಿ: ವಿಧು ಬಿಂಬಾಕೃತಿಯಂತೆ ಮದನ ಕಳೆಯುಳ್ಳ ಚದುರ ಧನಂಜಯನೇ ಕೇಳು! ಮೃದುತರಮಾದ ಯನ್ನಧರ ಸುಧೆಯನ್ನು ವದನದಿಂ ಸವಿದು ಮದನ ಕದನಕ್ಕೆ ಮುದದಿಂದೊದಗಿ ಹದನವಾದ ಯೌವನವುಳ್ಳ ಸುದತಿಯಾದ ಯನ್ನ ಕದಪುಗಳಿಗೆ ಚುಂಬನ ಕೊಟ್ಟು ಮುದವನ್ನುಂಟು ಮಾಡೋ ಮದನ ಸುಂದರಾ ಕರುಣಾರ್ಣವ ಚಂದಿರಾ ॥

ದರುವು

ನಾರಿಮಣಿ ಕೇಳೊಂದು ವರುಷ
ಧಾರುಣೀಯ ಚರಿಸಲೀಕೆ ॥
ನಾರದ ಮುನಿ ವಚನ ಮೀರ
ಲಾರೆ ತೋರೆ ದಾರಿ ಜಗಕೇ

ಅರ್ಜುನ: ಎಲೌ! ಮಂದಗಮನೆಯೇ ಕೇಳು! ಒಂದು ದಿನ ಭೂಸುರರು ಬಂದು ತಮ್ಮ ಮಂದಿರದ ವಸ್ತ್ರಾಭರಣಗಳೊಂದುಳಿಯದಂತೆ ತಸ್ಕರರು ಕೊಂಡೊಯ್ದರೆಂದು ದೂರಿಟ್ಟು ಮರುಗಿ ಯಮ್ಮ ಬಂಧನವ ಬಿಡಿಸೆಂದು ಅಂದ ಭೂಸುರರಿಗೊಂದಿಸಿ ಅವರಿಗಭಯವಿತ್ತೆನು. ಹೇ ಸುಂದರಿ ಅಂದಿನ ಸಮಯ ದೃಪದ ಸುತೆಯೊಡಗೂಡಿ ಧರ್ಮನಂದನನು ಶಯನಿಸಿರ್ದ ಮಂದಿರದಲ್ಲಿ ಬಂಧುರಮಾದ ಯನ್ನ ಧನು ಶರಗಳಿರಲು ಮುಂದರಿಯದೆ ಕೈಗೊಂಡು ಬಂದು ಮಂದಮತಿ ತಸ್ಕರರ ಕೊಂದು ವಿಪ್ರ ಸಂದಣಿಯನ್ನು ಸಂತೈಸಿ ಬಂದೆನಾದ ಕಾರಣ, ಕುಂದದೇ ವರುಷ ಒಂದರೊಳಗಾಗಿ ಧಾತ್ರಿಯೊಳಿರುವ ಅನೇಕ ಸಿಂಧುಗಳೋಳ್ ಮಿಂದು ಬರಬೇಕೆಂದು ಅಂದ ನಾರದರ ನಿಯಮದಂತೆ ಬಂದಿರುವೆನು. ಅಂದರೆ ವಸುಧೆಯೋಳ್ ಋಷಿವಾಕ್ಯ ಮೀರುವುದು ಪಶುಪತಿಗಳಿಗಾದರೂ ಅಸಾಧ್ಯವು. ಹೀಗಿರುವ ವಿಷಯದಲ್ಲಿ ಸರ್ವಥಾ ನಿನ್ನ ಕೂಡಲಿಕ್ಕಿಲ್ಲವೇ ನಾಗವೇಣಿ ಇದು ಏನು ವಾಣಿ ॥

ದರುವು

ಜಲಧಿಯ ತಡಿಯಲ್ಲೀ
ಸುಲಲಿತದೊಳು ನೋಡಿ ॥
ಸಿಲುಕಿದೆ ಕಾಮ ಶರಕೇ
ವಲಿಯೋ ಪ್ರಿಯಾ  ನಲ್ಲಾ ಬಾರೋ                                            ॥

ಉಲೂಪಿ: ಮಂಡಲತ್ರಯದಲ್ಲಿ ಪ್ರಚಂಡ ವಿಕ್ರಮನೆಂದೆನಿಸಿ ಕೊಂಡಾಡಿಸಿಕೊಳ್ಳುವ ಕಲಿಪಾರ್ಥರಾಜರೇ ಕೇಳಿ, ಖಂಡ ಪರಶುವಿನ ಹೆಂಡತಿಯ ತಡಿಯೋಳ್ ನಿನ್ನ ಕಂಡು ಮೋಹಿಸಿ ಒಡಗೊಂಡು ಬಂದು ದಂಡವಿಟ್ಟು ಬೇಡಿಕೊಂಡರೂ ಮನ ಕರಗದೆ ಗುಂಡಿನಂತೆ ಕುಳಿತಿರುವೆಯಲ್ಲೋ ನಲ್ಲಾ ಚಂಡಿ ಮಾಡುವುದುಚಿತವಲ್ಲಾ ॥

ದರುವು

ಪಟುತರಾಂಗಿ ವರಿಸಲು ನಿನ್ನ
ವಿಟ ಪುರುಷ ನಾನಲ್ಲ ಕಾಣೆ
ನಟಿಸದಿರೂ ಯನ್ನೊಳೀಗಾ
ಕುಟಿಲ ವಿದ್ಯೆಗಳನು ಜಾಣೆ ಕಾಡದಿರೆ                                     ॥3 ॥

ಅರ್ಜುನ: ಯಲೌ! ಕುಟಿಲ ಕುಂತಳೆಯಾದ ಪಟುತರಾಂಗಿಯೇ ಕೇಳು! ಬಟುವಾದ ಘಟ ಕುಚದ್ವಯಗಳನ್ನು ತೋರಿ ನಟನೆ ಮಾಡುವೆಯಾ ನಾರಿ ! ಅಹೋ! ಮಿಟುಕು ವೈಯ್ಯರಿ ಚಟುಲ ಮಾತುಗಳಿಂದ ಯನ್ನ ಘಟಣೆ ಮಾಡಿದರೆ ನಿನ್ನ ನಟಣೆಗೆ ಒಳಪಡುವ ವಿಟಪುರುಷನಲ್ಲವೇ ಕುಟಿಲಗಾತಿಯೇ, ಹೇ ಲಲಿತಾಂಗಿಯೇ! ಪಟುತರದ ಧರ್ಮಯುಕ್ತನಾದ ಯನ್ನ ಅಗ್ರಜನ ಚರಣವನ್ನಗಲಿ ಧರಣಿಯೋಳ್ ಮೆರೆಯುವ ಸುಕ್ಷೇತ್ರಂಗಳಂ ಚರಿಸಿ ತರಣಿಗರ್ಘ್ಯಂಗಳಿತ್ತು ತೆರಳಬೇಕೆಂದು ಆಲೋಚಿಸುವ ಕಾಲದೋಳ್ ಸ್ಮರಣೆ ತಪ್ಪಿ ದುರುಳ ಮನ್ಮಥನ ಕೇಳಿಗೆ ಯನ್ನ ಕರೆಯಬಹುದೇ ನಾರಿ ಉರಗ ಕುಮಾರಿ ॥

ದರುವು

ಅಂಗಜನಾತುರವಾ
ಇಂಗಿಸೋ ಧೀರನೇ ॥
ಮಂಗಳ ಮಹಿಮ ನೃ
ಸಿಂಗ ಪಾಲಿಪಾ ನಲ್ಲಾ ಬಾರೋ                                           ॥4 ॥

ಉಲೂಪಿ: ಕಂತು ವಿಕ್ರಮನಾದ ಹೇ ವಿಜಯ, ಧನಂಜಯ ! ಅಂಗಜನಿಂದೊದಗಿರುವ ಭಂಗ ಸಂತಾಪಗಳನ್ನು ಹಿಂಗಲಿಕೆ ಮಂಗಳಾಂಗನಾದ ಸೊಗಸುಗಾರನೇ! ಅಂಗದೊಳಗಿರುವ ಮಂಗಯೋಚನೆಯಂ ಬಿಟ್ಟು ಇಂಗದೆ ಯನ್ನ ಸಂಗದೋಳ್ ಬೆರೆದು ಅಂಗಜನ ತಾಪವನ್ನು ಇಂಗಿಸಿದ್ದಾದರೇ ಅಂಗಜನ ಪಿತ ಮಂಗಳ ಮಹಿಮ ಶ್ರೀ ನೃಸಿಂಗನು ತುಂಗ ವಿಕ್ರಮನಾದ ನಿನ್ನನ್ನು ಭಂಗವಿಲ್ಲದೆ ಸಲಹುವನೋ ಕಾಂತ – ವರ ದಯಾವಂತ ॥

ಕಂದಾರ್ಧ

ವಾಸುಕಿ ಪುತ್ರಿಯೇ ಲಾಲಿಸು  ಭಾಸುರ
ಮಾದೀ ನದಿ ತಡಿಯೊಳು ನಾಂ  ವಾಸಿಸು
ತಿರುತಿರೆ  ಮನ್ಮಥ ಘಾಸಿಯ ಹರಿಸೆಂದು
ಆಸೆ ಮಾಡುವರೇನೇ ॥
ಫಣಿರಾಜ ಪುತ್ರಿ  ಸೌಂದರ‌್ಯಗಾತ್ರಿ
ಫಣಿರಾಜ ಪುತ್ರಿ ॥
ಕುಸುಮ ಗಂಧಿಯೇ ಕೇಳು  ವಸುಧೆ ಸಂಚರಿಸಲು
ವಸುಧೀಶ ಧರ್ಮಜಾ  ಬೆಸಸಿದ ಬಗೆಯೊಳು ॥
ಬಂದೆ ನೀ ತಡಿಗೆ  ಸರಿಯಲ್ಲ ಬಯಕೇ
ಕಳುಹೆನ್ನ ಹೊರಗೆ                                                             ॥1 ॥

ಅರ್ಜುನ: ಹೇ ರಮಣೀ! ಧರಾಧೀಶರಾದ ಯುಧಿಷ್ಠಿರನಾಜ್ಞೆ ಪ್ರಕಾರ ಧರಣಿಯ ಸಂಚರಿಸಲು ಒಂದು ವರ್ಷಕಾಲ ಪುಣ್ಯತೀರ್ಥ ಕ್ಷೇತ್ರಗಳಂ ಸಂದರ್ಶಿಸುತ್ತಾ, ಮಾರ್ಗಾಯಾಸದಿಂ ಬಂದು ಈ ಸರಸಿಯ ತಡಿಯೋಳ್ ಕುಳಿತಿರಲು ಮರುಳು ಹಿಡಿದವಳಂತೆ ಬಂದು ಸ್ಮರಣೆ ಇಲ್ಲದಂತೆ ಯನ್ನನ್ನು ಇಲ್ಲಿಗೆ ಕರೆ ತಂದು ಹೇ ತರಳೇ ! ಮಾರಪಿತ ಭಕ್ತರಾದ ಯಮ್ಮನ್ನು ಈ ರೀತಿ ಮಾತನಾಡಿಸಬಹುದೇ ನಾರೀ ಬಿಡು ಯನಗೆ ದಾರಿ ॥

ಕಂದಾರ್ಧ

ಪಾರ್ಥನೇ ಕೀರ್ತಿಕಲಾಪನೇ  ಪ್ರಾರ್ಥಿಪೆ ನಿನ್ನನೀಗಾ
ಪಾರ್ಥಿವ ಕುಲಶ್ರೇಷ್ಠನೇ  ಧಾತ್ರಿಯೋಳ್
ಮಾರಾಸ್ತ್ರದಿಂ  ತತ್ತರಿಸುವ ನಾರಿ ಮಣಿಯ
ಚಿತ್ತಜನ ತಾಪವಂ  ಪರಿಹರಿಸಿ ಸಲಹೈಯ್ಯ ॥
ಪಾರ್ಥಭೂಪಾಲ  ಕ್ಷೋಣಿಜನ ಪಾಲ
ಪಾರ್ಥ ಭೂಪಾಲ ॥
ಆರ್ತಳಾದಬಲೆಗೇ  ಪ್ರೀತಿ ತೋರಿಸದಿರೇ
ಧಾತ್ರಿಯೊಳು ನಿನ್ನನೂ  ವ್ಯರ್ಥನೆಂದೆನ್ನುವರೂ ॥
ಕೇಳು ಕೃಪಾಳು  ದೀನ ದಯಾಳು
ಕೇಳು ಕೃಪಾಳು                                                                ॥1 ॥

ಉಲೂಪಿ: ಹೇ ಪಾರ್ಥರಾಜ! ಪತಿತಳಾಗಿ ಬೇಡುವ ಯನ್ನ ಪ್ರಾರ್ಥನೆಗೆ ಮತಿವಂತನಾದ ಹೇ ಧೀರ! ಖತಿಗೈಯ್ಯದೇ ಹಿತವಾಗಿ ಕಾಡುವ ಮತಿಗೇಡಿ ಮನ್ಮಥ ಕ್ರೂರನ ಹತಗೊಳಿಸಿ ಯನ್ನ ಹಿತಮಂ ಸಂಪೂರ್ತಿಗೊಳಿಸೋ ನಲ್ಲಾ ನಿನಗಿದು ಸಲ್ಲಾ ॥

ಅರ್ಜುನ: ಪರಮ ವಿಷಮಯವಾದ ಭುಜಗರಾಜನೋಳ್ ಅವತರಿಸಿದ ದುರುಳ ಸ್ತ್ರೀಯಳೇ ಕೇಳು! ನೀನು ಸರ್ಪರಾಜನಿಗೆ ಉದಯಿಸಿದವಳಾದ ಕಾರಣ ಕಂದರ್ಪಕನ ಕೇಳಿಯೊಳು ನಿನ್ನ ಕೂಡುವುದು ಉಚಿತವಲ್ಲ. ಸುಮ್ಮನೇ ಯನ್ನ ಕಾಡಬೇಡವೇ ಪೋರಿ-ಗಮ್ಮನೇ ತೋರೆನಗೆ ದಾರಿ॥

ದರುವು

ವಲ್ಲೆನೆಂಬುವರೇನೋ ಕಾಂತ
ಸಲ್ಲಿಸು ಯನ್ನಯ ಪಂಥ ॥
ಉಲ್ಲಾಸ ತೋರೋ ಧೀಮಂತ ॥ಪ ॥
ಪುಲ್ಲಾ ಶರನ ಕೇಳಿ
ಯಲ್ಲಿರುವವ ಳೋಳು ॥
ವಲ್ಲೇನೆಂಬುವ ಮಾತು ॥
ಸಲ್ಲದೊ ದಯಾವಂತ ಪಲ್ಲೆನೆಂಬು                                        ॥1 ॥

ಉಲೂಪಿ: ವರಪಾಂಡು ಮಧ್ಯಮನಾದ ದೊರೆ ಪಾರ್ಥ ರಾಜನೇ ಕೇಳು ! ಸ್ಮರನ ತಾಪದಿಂದ ನಿನ್ನನ್ನು ಸ್ಮರಿಸುತ್ತಿರುವ ತರಳಾಕ್ಷಿಯಾದೆನ್ನ ಸುರತ ಗೋಷ್ಠಿಯೋಳ್ ನೆರೆದು ಹರುಷವೆಂಬ ಶರಧಿಯೋಳಾಡದೆ ಶಿರಮಂ ಬಾಗಿಸಿ ಮೌನದಿ ಕುಳಿತಿರುವ ಪರಿ ಸರಿಯಲ್ಲವೋ ಚದುರ-ಸವಿಯನ್ನಧರ ॥

ದರುವು

ಭೂಮಿ ಹೇಮವೇ ಮೊದಲಾದ
ಕಾಮಿನಿಯ ಮುದದಿಂದಾ
ಕಾಮಿಸದವರ‌್ಯಾರೋ ಮುಗ್ಧಾ ॥
ಸೋಮ ಸನ್ನಿಭ ನಿನ್ನಾ
ಪ್ರೇಮಿಸಿ ಕರೆತಂದಾ
ಭಾಮಿನಿಯನು ನೀನೂ
ನೇಮದಿಂ ಕೂಡದೇ ಒಲ್ಲೆನೆಂಬುವ                                        ॥2 ॥

ಉಲೂಪಿ: ಕಾಮಕೋಟಿ ಲಾವಣ್ಯ ನಿಸ್ಸೀಮನಾದ ಭೂಮೀಶನೇ ಕೇಳು! ಹೇಮವನ್ನು ಭೂಮಿಯನ್ನು, ಕಾಮಿನಿಯನ್ನು ಕಂಡು ಕಾಮಿಸಬಾರದೆನ್ನುವುದು ರಸಿಕರಾದ ವಿರಕ್ತರಿಗಿರಬೇಕಲ್ಲದೇ ನಿಮ್ಮಂಥ ವಿಷಯಾಸಕ್ತರಾದ ರಸಿಕರಾಡಿದರೆ ಚಂದವಾಗಿರುವುದೇನೋ ಚದುರ; ಹೇ ಸುಂದರ! ಕನಕವನ್ನು ಕಂಡು ಕಾಣದಂತೆ ಕಡೆಗೆ ತೆರಳಿದರೆ ನಿರ್ಭಾಗ್ಯನೆಂಬುವರು. ಸುಗಂಧ ದ್ರವ್ಯಗಳ ಸುವಾಸನೆ ತಿಳಿಯದೇ ಹೋದರೆ ನಾಸಿಕವಿಲ್ಲದವನೆನ್ನುವರು. ಪುಂಡರೀಕಾಕ್ಷಿಯರ ಕಂಡು ಕಾಮಿಸದೇ ಹೋದರೆ ಗಂಡಸುತನ  ವಿಲ್ಲದ ಷಂಡನೆಂದು ಆಡುವರಾದ ಕಾರಣ ತನುಮನಾದಿಗಳ ನಿನಗೊಪ್ಪಿಸಿರುವ ಯನ್ನನ್ನು ವಿನಯದಿಂದ ವರಿಸಬೇಕೋ ಕಾಂತ – ಸರಸ ಧೀಮಂತ ॥

ದರುವು

ಧರೆಯೊಳು ಕುಂಕುಮಾ ಪುರದೀ
ಇರುವ ನೃಸಿಂಗನ ದಯದೀ
ವರಿಸೋ ಯನ್ನನು ಕಡು ಮುದದೀ ॥
ಸರಸ ಸುಂದರ ಯನ್ನೋಳ್
ಬೆರೆಯಲು ಮೋಹಿಸಿ
ಹರುಷಾದಿಂ ಕರೆ ತಂದ
ತರುಣಿ ಯನ್ನನು ನೀನೂ                                                    ॥3 ॥

ಉಲೂಪಿ: ಚಂಡವಿಕ್ರಮನಾದ ಗಾಂಡೀವಿಯೇ ಕೇಳು  ತೊಂಡೆಹಣ್ಣಿನಂತೆ ತುಟಿಯುಳ್ಳವಳು, ಚಂದ್ರ ಸಮಾನ ಮುಖವುಳ್ಳವಳು, ಕಮಲದಂಥ ನಯನವುಳ್ಳವಳೂ, ಅಗಲಿ ಹೋಗದವಳಾಗಿಯೂ ಉತ್ತಮ ಜಾತಿ ಸ್ತ್ರೀಯಾಗಿಯೂ, ಚಿತ್ತಜನ ಕೇಳಿಯಲ್ಲಿ ಇಷ್ಠದಿಂ ನೆಲೆಗೊಂಡವಳಾಗಿಯೂ ಇರುವಂಥಾ ಹೆಣ್ಣಿನಲ್ಲಿ ನಿನ್ನಂಥಾ ಉತ್ತಮ ಪುರುಷನು ಸುರತಗೊಂಡರೆ ಸಂಸಾರ ವಿಷಯ ಸೌಖ್ಯಗಳೊಳಗಾಗಿ ಅತಿಶಯವಾದ ಆನಂದವಿರುವುದು. ಹೀಗಿರುವ ನೀತಿಯಂ ತಿಳಿಯದೇ ವಲ್ಲೆನೆಂಬುವುದುಚಿತವಲ್ಲಾ, ಸಲ್ಲಲಿತ ಕುಂಕುಮನಪುರಿ ಲಕ್ಷ್ಮೀವಲ್ಲಭನ ಪಾದಪಲ್ಲವಗಳ ಧ್ಯಾನಿಸಿ ಉಲ್ಲಾಸದಿಂ ಸುಖಿಸು ಬಾರೋ ನಲ್ಲಾ – ಪುರುಷತ್ವವ್ಯಾಕಿಲ್ಲಾ ॥

ಅರ್ಜುನ: ಎಲೈ ವೃತ್ತ ಕುಚೆಯೇ ಇತ್ತ ಲಾಲಿಸು. ಪ್ರಯೋಜನವಿಲ್ಲದ ದೇಶದಲ್ಲಿ ಅಥವಾ ಪ್ರಜೆಗಳಲ್ಲಿ ಪ್ರಜಾಪರಿಪಾಲನಾದ ಅರಸು, ಜುಲ್ಮಾನೆಗಳನ್ನು ಪ್ರಜೆಗಳ ಧನವನ್ನು ಅಪಹರಿಸುವ ಸ್ಥಳದಲ್ಲಿ, ಹುಲಿ, ಸಿಂಹ, ಕರಡಿ, ಕರಿ ವರಾಹ ಇತ್ಯಾದಿ ಕ್ರೂರ ಮೃಗಗಳಿರುವ ಪ್ರಾಂತ್ಯದಲ್ಲಿ ಕ್ಷುದ್ರ ಜಂತು ಪಿಶಾಚಾದಿ ಗ್ರಹಗಳಿರುವ ಕಡೆಯೂ, ಸಂಚು ತಿಳಿಯದಂಥ ರಾಜರಿರುವ ಸ್ಥಳದಲ್ಲಿಯೂ ಎಂದಿಗೂ ಇರಲಾಗದು ಕಂಡ್ಯಾ, ಎಲ್ಲಿ ಅನರ್ಥ ಉಂಟಾಗುವುದೆಂದು ತೋರುವುದೋ ಆ ಸ್ಥಳದಲ್ಲಿ ಇರಬಾರದೆಂಬ ಧರ್ಮಶಾಸ್ತ್ರ ವಿರೋಣಾದ್ದರಿಂದ ಈ ಲೋಕದಲ್ಲಿ ನಿನ್ನನ್ನು ವರಿಸಿಕೊಂಡು ಇರಲಾರೆನು. ಇದಲ್ಲದೇ ಇನ್ನೊಂದು ವಿಷಯವನ್ನು ಹೇಳುತ್ತೇನೆ ಕೇಳೆ ತರುಣಿ :

ಶ್ಲೋಕ

ಪರಯೋನಿ ಪತಿತೆ ಬಿಂದು  ಕೋಟಿ ಪೂಜ್ಯ ವಿನಶ್ಯಂತಿ
ತೀರ್ಥಹಾನಿ, ತಪೋಹಾನಿ, ರೌರವ ನರಕಂ ಭವೇತ್ ॥

ಅರ್ಜುನ: ಯೆನ್ನುವ ರೀತಿಯಾಗಿ! ಎಲೈ ಕೋಮಲಾಂಗಿಯೇ ಪರ ಯೋನಿಯಲ್ಲಿ ವೀರ‌್ಯವನ್ನು ವಿಸರ್ಜನೆ ಮಾಡಿದಂಥ ಪುರುಷನಿಗೆ ಕೋಟಿ ತೀರ್ಥ ತಪಸ್ಸ್ಯಾದಿಗಳು ಸಹ ನಾಶವಾಗುವುದಲ್ಲದೇ ಅನೇಕ ನರಕ ದುರ್ಗತಿ ಪ್ರಾಪ್ತವಾಗುವುದು. ಹೀಗಿರುವ ನೀತಿಯಂ ತಿಳಿದು ಈಗ ನಿನ್ನನ್ನು ವರಿಸಿದ್ದಾದರೆ ನಾನು ಮಾಡಿದಂಥ ಪುಣ್ಯ ಫಲಗಳೆಲ್ಲಾ ವ್ಯರ್ಥವಾಗುವುದಾದ ಕಾರಣ ಸರ್ವಥಾ ನಿನ್ನ ಕೂಡಲಿಕ್ಕಿಲ್ಲವೇ ನಾರಿ – ಮತಿಗೆಟ್ಟ ಪೋರಿ ॥

ಉಲೂಪಿ: ಹೇ ಗಾಂಡೀವಿ! ಮಂಡಲದಿ ನೀನೇ ಸರಿ ಷಂಡ ಜೀವಿ; ಮನ್ಮಥನ ದಂಡನೆಗೆ ತಾಳಲಾರದೆ ಗಂಡನಾಗೆಂದು ಅಂಡಲೆದು ಬೇಡಿಕೊಂಡರೆ ಭಂಡನೇ ನಿನ್ನ ಮನಸ್ಸು ಕರಗದೆ ಗುಂಡಿನಂತೆ ಕುಳಿತಿರುವೆ, ಖಂಡ ಪರಶುವಿನಾಣೆ ನಿನ್ನ ಮುಂಗಡೆಯಲ್ಲಿ ಬಿದ್ದು ಖಂಡಿತಾ ಪ್ರಾಣವಂ ಬಿಡುವೆನೋ ಪಾರ್ಥ ಮಂಡಲದಿ ನೀನು ಬದುಕಿದ್ದು ವ್ಯರ್ಥ॥

ದರುವು

ಇನಿತು ಚಿಂತೆಯು ಯಾತಕೇ  ಬಿಡು ಬಿಡು ಈಗಾ
ವನಜ ಗಂಧಿಯೇ ಮನಕೇ ॥ಪ ॥
ಸಾನುರಾಗದಿ ನಿನ್ನ ವರಿಸುವೇ
ಮಾನ ಕೇತನ ತಾಪ ಹರಿಸುವೇ ॥
ಮೌನ ತ್ಯಜಿಸೀ ಹರುಷ ತೋರೇ
ಪನ್ನಗಾಧಿಪ ವರ ಸುಪುತ್ರಿಯೇ                                             ॥1 ॥

ಅರ್ಜುನ: ಯಲಾ ದಂತಿಗಮನೇ! ನೀನು ಚಿಂತಿಸಬೇಡ. ಕಂತುವಿನ ತಾಪದಿಂದ ನಿನಗಿರುವ ಭ್ರಾಂತಿಯನ್ನು ಪರಿಹರಿಸುವೆನು. ಸಂತಸದಿಂದೆದ್ದು ಮಾತನಾಡೆ ಶ್ರೀಮಂತಿನೀ ॥

ಉಲೂಪಿ: ಹೇ ಸುಂದರಾಂಗನೇ ಹಾಗಾದರೆ ಮಂದಿರಕ್ಕೆ ದಯ ಮಾಡಿಸಬೇಕೈ ಸ್ವಾಮಿ-ಯನ್ನ ಮನೋ ಪ್ರೇಮಿ ॥

 

(ಆದಿಶೇಷ ಬರುವಿಕೆ)

ದರುವುಜಂಪೆ ಅಟತಾಳ

ಸುಂದರಾಧಿಪ ವಾಸುಕೇಂದ್ರನೂ  ಕೌರವ್ಯರಾಜ
ಮಂದಹಾಸದಿ ಬಂದು ನಿಂದನೂ ॥ಪ ॥
ಅಂದು ಫಣಿ ಸಾಮೂಹವೆಲ್ಲಾ
ಒಂದುಗೂಡಿ ತಮ್ಮೊಳಗೇ
ಚಂದದಿಂದ ಪೊಗಳುತಿರಲಾ
ನಂದ ವಿಭವಾದಿಂದ ಬೇಗಾ                                                ॥1 ॥

ಕಂದ

ವರ ಜನಕನೆ ಚರಣಕೆರಗುವೇ
ವರ ಮನ್ಮಥರೂಪನಾದ ನರನಂ ಕಂಡು ॥
ವರ ಭಾಗೀರಥೀ ತಡಿಯೋಳ್
ಪರಿ ಮೋಹಿಸಿ ಕರೆ ತಂದೆನೆಮ್ಮಯ ಪುರಕಂ ॥

ಉಲೂಪಿ: ನಮೋನ್ನಮೋ ಜನಕನಾದ ವಾಸುಕೇಂದ್ರನೇ ॥

ಆದಿಶೇಷ: ಸೌಮಂಗಲ್ಯಾಭಿವೃದ್ಧಿರಸ್ತು ಬಾರಮ್ಮಾ ಪುತ್ರೀ ಸೌಂದರ‌್ಯಗಾತ್ರಿ ॥

ಉಲೂಪಿ: ಹೇ ಜನಕಾ! ಮನಸಿಜ ರೂಪನಾದ ಜನಪಾಲನಾದಿವನ ಭಾಗೀರಥಿಯ ತಡಿಯೋಳ್ ಕಂಡು ಕರೆತಂದಿರುವೆನು. ಸನುಮತದಿಂದೆನ್ನ ಆತನಗಿತ್ತು ಪರಿಣಯವಾಚರಿಸಬೇಕೈ ಜನಕಾ-ಫಣಿಕುಲ ತಿಲಕಾ ॥

ಆದಿಶೇಷ: ಅಮ್ಮಾ ಸರಸಿಜಾಕ್ಷಿಯಾದ ಪುತ್ರಿಯೇ ಸರಸದಿಂ ನೀನು ಕರೆ ತಂದಿರುವ ಪುರುಷನು ಧಾರು? ಕರೆ ತಂದೆನಗೆ ತೋರಿಸಿದ್ದಾದರೆ ನಿನ್ನ ಕೋರಿಕೆಯಂತೆ ಪರಿಣಯ ಗೈಯುವೆನಮ್ಮಾ ಪುತ್ರೀ ಸೌಂದರ‌್ಯಗಾತ್ರಿ ॥

ಉಲೂಪಿ: ಹೇ ವಿಜಯ-ಧನಂಜಯಾ. ಯನ್ನ ಜನಕನಾದ ವಾಸುಕೇಂದ್ರನಂ ಕಂಡು ಬರಬಹುದೈ ಪಾರ್ಥ ನೀನಾಗುವೆ ಕೃತಾರ್ಥ ॥

ಕಂದ

ಕರುಣಿಸು ವರ ವಾಸುಕೇಂದ್ರನೇ
ಪುರುಹೂತ ಕುಮಾರ ವೀರ ಪಾರ್ಥನು ನಾನೈ ॥
ಶ್ರೀಹರಿ ಸೇವಕನಾಗಿಹೆನೂ
ಪೊರೆಯೈ ಕೃಪೆಯಿಂದಲೆನ್ನ ಉರಗೇಂದ್ರಾ ॥

ಅರ್ಜುನ: ಇದೇ ಸಹಸ್ರ ವಂದನೆಗಳೈ ಫಣಿರಾಜನೇ  ಇಂದಿನ ದಿನ ನಿಮ್ಮ ಸಂದರುಶನದಿಂದ ನಾ ಧನ್ಯನಾದೆನು. ಇಂದುಮುಖಿಯಾದ ನಿಮ್ಮ ನಂದನೆ ಉಲೂಪಿಯು ಮಂದಾಕಿನಿ ತಡಿಯಿಂದ ಯನ್ನ ಕರೆತಂದಳಾದ ಪ್ರಯುಕ್ತ ಚಂದದಿಂದಿಲ್ಲಿಗೆ ಬಂದಿಹೆನೈ ಆದಿಶೇಷ ಸದ್ಗುಣಭೂಷ ॥

ದರುವು

ಧರಣೀಶ ಫಲುಗುಣನೇ  ವರೆಯುವೆನು ಕೇಳೈಯ್ಯ
ಸುರಪತಿಯ ಸುಕುಮಾರ  ಸುಂದರಾಕಾರ                              ॥1 ॥

ಹರುಷಾದಿಂದಲಿ ಯನ್ನ  ವರಸುತೆಯುಲೂಪಿಯ
ಭರದಿಂದ ಪರಿಣಯವಾ  ಗೈವೇನೋ ರಾಯ                          ॥2 ॥

ಆದಿಶೇಷ: ಅಯ್ಯ ಪುರುಹೂತ ಕುಮಾರನಾದ ಕಲಿ ಧನಂಜಯನೇ ಕೇಳು. ನೀರಜ ನೇತ್ರೆಯಾದ ಯನ್ನ ವರ ಮೋಹದ ಪುತ್ರಿ, ಸುಂದರಗಾತ್ರಿಯಾದ ಉಲೂಪಿಯನ್ನು ಹರಷದಿಂ ನಿನಗಿತ್ತು ಪರಿಣಯ ಗೈಯುವೆನೈ ಪಾರ್ಥ ಈ ಮಾತು ಯತಾರ್ಥ ॥

ದರುವು

ಪೊಡವೀಶ ಮನದೊಳಗೆ  ಇಡಬೇಡ ಚಿಂತೆಯನೂ
ಕೊಡುವೆನೂ ಸುತೆಯಳನೂ  ಧೃಢವಿದು ರಾಯ                      ॥3 ॥

ಆದಿಶೇಷ: ಅಯ್ಯ ಪೊಡವಿಪತಿಯಾದ ವಿಜಯ ಧನಂಜಯ, ಕಡುಗಲಿಯಾದ ನಿನ್ನ ಮನದೋಳ್ ಸಂಶಯಪಡದೆ ಧೈರ‌್ಯವನ್ನವಲಂಬಿಸಿಕೊಂಡಿರು. ಪಡೆದ ಅಣುಗಿಯ ನಿನಗಿತ್ತು ಸಡಗರದಿಂ ವಿವಾಹವಾಚರಿಸುವೆನೈ ಭೂಪಾಲ ನಿರ್ಜರಾಧಿಪನ ಬಾಲ ॥

ದರುವು

ಧರಣೀ ಕುಂಕುಮ ಪುರದ  ವರದ ಶ್ರೀ ನರಹರಿಯ
ಚರಣಾ ಸಾಕ್ಷಿಯಾಗೀ  ಕೊಡುವೆನು ಸುತೆಯಾ ॥                     ॥4 ॥

ಆದಿಶೇಷ: ಎಲೈ ಧರ್ಮಜನ ಸಹೋದರನಾದ ಅರ್ಜುನನೇ, ಕ್ಷಿತಿಗಧಿಕಮಾದ ಕುಂಕುಮನಪುರ ಪತಿ ಪತಿತ ಪಾವನನಾದ ನೃಸಿಂಹಮೂರ್ತಿಯ ಅತಿಶಯದ ಕಮಲಪಾದದಾಣೆ ಮತಿಯುತೆಯಳಾದ ಯನ್ನ ನಿಜ ಸುತೆಯಳನ್ನು ಮತಿಪೂರ್ವಕವಾಗಿ ನಿನಗಿತ್ತು ವೈವಾಹವನ್ನು ಆಚರಿಸುವೆನೈ ವಾಸವಾತ್ಮಜಾ ಈ ಮಾತು ಸಹಜಾ ॥

ಅರ್ಜುನ: ಹೇ ಫಣಿಪತಿ ಕರುಣಮತಿ, ತ್ರಿಣಯನಿಗಸದಳಮಾದ ನಿಮ್ಮ ಮಹಿಮೆಗಳನ್ನು ವರ್ಣಿಸಲಾರೆನು. ಬಣಗು ನರಮಾನವರ ಮೇಲೆ ಕರುಣವಿಟ್ಟು ಅಣುಗಿಯನ್ನು ಕೊಟ್ಟು ಪರಿಣಯ ಗೈಸಿದ್ದಾದರೆ ನಿಮ್ಮಗಳ ಆಜ್ಞಾಬದ್ಧನಾಗಿರುವೆನೈ ಆದಿಶೇಷ ಸದ್ಗುಣ ಭೂಷ ॥

(ಮುಹೂರ್ತ)

ಕಂದಕೇದಾರಗೌಳ

ಮುದದಿ ಮಂಗಳ ಮಜ್ಜನವ ಮಾ
ಡಿದರು ದಿವ್ಯಾಂಬರವನುಟ್ಟರು
ಸುದತಿಯರ ಹರಿವಾಣದಾರತಿಗಳನು ಕೈಗೊಳುತಾ ॥
ಪದಕ ಕರ್ಣಾಭರಣ ಹಾರಾಂ
ಗದದಿ ನೊಪ್ಪಂ ಬಡೆದಿವರು ಪೂ
ಸಿದರು ಸಾದು ಜವಾಜಿ ಕತ್ತುರಿ ಯಕ್ಷ ಕರ್ದಮವಾ                    ॥1 ॥

ಸಾರಿದರು ಮೆಟ್ಟಕ್ಕಿಗಳ ಗುಡ
ಜೀರಿಗೆಗಳೊದಗಿದವು ಲಗ್ನವಿ
ಹಾರದಾಶೀರ್ವಾದ ದಾಯತ ರವದ ರಭಸದಲೀ ॥
ಧಾರೆಯೆರೆದನು ವಾಸುಕೇಂದ್ರನು
ಸುರಪ ಸುತನಿಗೆ ತನ್ನ ಸುತೆಯ ವಿ
ಸ್ತಾರಿಸಿತು ವೈವಾಹ ರಚನೆ ವಿಶಾಲ ವಿಭವದಲೀ                     ॥2 ॥

ಭಾಗವತರು: ಈ ಪ್ರಕಾರವಾಗಿ ಸಭೆಯು ಜಯ ಜಯವೆನುತಿರೆ, ಮಂಗಳ ವಾದ್ಯಗಳು ಭೋರ್ಗರೆಯೇ ಶುಭಮುಹೂರ್ತದಿ ಆದಿಶೇಷನು ತನ್ನ ಸುತೆಯದ ಉಲೂಪಿಯನ್ನು ಪರಮ ವೈಭವದಿಂದ ಪಾರ್ಥನಿಗೆ ಕೊಟ್ಟು ಧಾರೆಯೆರೆದನೈಯ್ಯ ಭಾಗವತರೇ ॥

ಅರ್ಜುನ: ಹೇ ವಾಸುಕೇಂದ್ರಾ! ಈ ಸಮಯ ನೀವು ನಡೆಸಿದ ಶುಭಕಾರ‌್ಯವು ಯನ್ನ ಮನಸ್ಸಿಗೆ ಬಹಳ ಸಂತೋಷವಾಯಿತು. ಸಾಸಿರ ವದನನೇ! ನಾನು ಸಕಲ ಸುಕ್ಷೇತ್ರಗಳಂ ಚರಿಸಲು ತೆರಳಬೇಕಾದ ಪ್ರಯುಕ್ತ ಭಾಸುರಮಾದ ನಿಮ್ಮಾಶೀರ್ವಚನವನ್ನು ದಯಪಾಲಿಸಿದ್ದಾದರೆ ಹೋಗಿ ಬರುವೆನೈ ನಾಗೇಂದ್ರ ಶರಣು ಗುಣಸಾಂದ್ರ ॥

ಆದಿಶೇಷ: ಎಲೈ ತುಂಗ ವಿಕ್ರಮನಾದ ಫಲುಗುಣ ರಾಜನೇ ಅಂಗಜಾರಿಯ ದಯದಿಂದ ನಿನಗೆ ಭಂಗ ವದಗದಂತೆ ಸರ್ವಕಾರ‌್ಯಗಳು ನಿರ್ವಿಘ್ನವಾಗಲಿ. ಹೋಗಿ ಬಾರೈ ವಿಜಯ ಧನಂಜಯ ॥

ಭಾಗವತರಕಂದ

ಚಂದಿರಮುಖಿಯಾದುಲೂಪಿಗೆ
ಕುಂದದೆ ನವಮಾಸ ಪೂರ್ತಿಯಾಗಲು ಮುದದಿ ॥
ಇಂದಿರ ರಮಣನ ಕೃಪೆಯಿಂ
ಮಂದರ ಸಮಧೀರ ಸುತನ ಪಡೆದಳು ಬೇಗಾ ॥

ಅರ್ಜುನ: ಎಲೈ ಪ್ರಾಣಕಾಂತೆಯೇ! ನಾನು ಬಂದು ಬಹಳ ದಿನಗಳಾಯ್ತು. ಒಂದು ವರುಷದೊಳಗಾಗಿ ಧರಣಿಯೊಳಗಿರುವ ಅನೇಕ ಸಿಂಧುಗಳೋಳ್ ಮಿಂದು ಧರ್ಮನಂದನನ ಚರಣ ಸರಸಿಜವ ಕಾಣಬೇಕಾಗಿರುವ ಪ್ರಯುಕ್ತ ಈ ಪಾತಾಳಲೋಕ ಬಿಟ್ಟು ಭೂತಳಕ್ಕೆ ಹೋಗಿ ಬರುವೆನೇ ವನಿತಾ ಇದು ಯನಗೆ ತ್ವರಿತ ॥

ಉಲೂಪಿ: ಸ್ಮರ ರೂಪನಾದ ಹೇ ಕಾಂತನೇ, ಈ ಉರಗ ಲೋಕಕ್ಕೆ ಇನ್ನೆಂದಿಗೆ ಬರುವೆಯೋ ಧೀಮಂತನೇ, ಧರಣಿಯೋಳ್ ನೀವು ಸುರಕ್ಷಿತವಾಗಿರುವುದಕ್ಕೆ ಸರಿಯಾದ ಒಂದು ಗುರುತನ್ನಾದರೂ ದಯಪಾಲಿಸಿ ತೆರಳಬಹುದೈ ಕಾಂತ ವರದಯಾವಂತ ॥

ಅರ್ಜುನ: ಎಲೈ ಮಂದಗಮನೇ! ಒಂದು ದಾಡಿಂಬದ ವೃಕ್ಷವನ್ನು ಸಂರಕ್ಷಣೆ ಮಾಡಿಕೊಂಡಿರು. ಎಂದಿಗೆ ಅದು ಕಂದಿ ಹೋಗುವುದೋ ಅಂದಿನ ದಿನ ಯನ್ನ ಪ್ರಾಣಕ್ಕೆ ಹಾನಿಯೆಂದು ತಿಳಿದುಕೋ ರಮಣೀ. ಇನ್ನು ನಾನು ಪೋಗಿ ಬರುವೆನೇ ಮನೋಹರೀ ಫಣಿರಾಜಕುವರೀ ॥