ಉಲೂಪಿ: ಹಾಗಾದರೆ ತಾವು ಪೋಗಿ ಬರಬಹುದೈ ಸ್ವಾಮಿ ಪ್ರಾಣಕಾಂತ  ವನಿತಾ ವಸಂತ ॥

ದರುವುತ್ರಿವುಡೆ

ಧುರವಿಜಯ ಕಲಿಪಾರ್ಥ ರಾಜನು
ಉರಗ ಲೋಕವನುಳಿದು ಧಾತ್ರಿಗೇ
ತೆರಳಿ ಬಂದನು ಶರಧಿ ತಡಿಯೊಳ ಗರಿತ ಪವನಜನೂ ॥
ನೋಡಿದನು ಕಪಿವರನ ಗಾತ್ರವಾ
ಖೋಡಿಯನು ನೀನ್ಯಾರೆನುತ ಮಾ
ತಾಡಿಸಿದ ಪರಿಹಾಸ್ಯಗೈದು ಸ  ಘಾಟಿಕೆಯಿಂದಾ                      ॥2 ॥

ಧರಣಿ ಕುಂಕುಮ ಪುರವ ಪಾಲಿಪ
ವರನೃಸಿಂಗನು ಯೆನುವ ಕೃಷ್ಣನ
ಶರಣನೊಳು ಫಲುಗುಣನು ಸೆಣಸಿದ  ಪರಿಯದೆಂತೆನಲು          ॥3 ॥

 

(ಶ್ರೀ ಆಂಜನೇಯ ಬರುವಿಕೆ)

ಚೂರ್ಣಿಕೆ

ಶ್ರಿತಕಮಲ ಭವ ಜನಕ  ಪಾಕಾರಿನುತ ಪದ
ಲೋಕೈಕ ವೀರಂ  ದಶರಥಕುಮಾರಂ  ವಸುಧೆ
ವಲ್ಲಭ ಸುಧೀರಂ  ಶ್ರೀರಾಮ ಚಂದ್ರಂ  ಜಗ
ದ್ಭರಿತಂ  ಶರಧಿ ಗಂಭೀರಂ  ಖರದೂಷಣ
ತ್ರಿಶರಾದಿ  ಅಸುರ ಕುಲ ಸಂಹಾರಕಂ  ಪರ
ಮೇಷ್ಠಿ ಗುಣರಮ್ಯಂ  ವೈದೇಹಿ ಮನೋಹರಂ
ಸರಸ ಸದ್ಗುಣಾವಲಂಬನಂ  ಸುರವೈರಿ ಕುಲ
ಕೃತಾಂತಕಂ  ಶರಣು ಜನ ದುರಿತ ವಿರಾಜಿತಂ
ನಿರುಪಮಾಲಂಕಾರಂ  ಪರಾತ್ಪರಾಕಾರಂ  ಶರ
ಣು ಜನೋದ್ಧಾರಂ  ಘನವಿಭೀಷಣ ಭಕ್ತ
ಸಂರಕ್ಷಿತಂ  ದನುಜ ರಾವಣ ಕುಂಭಕರ್ಣಾ
ದಿ ದಾನವ ಕುಲ ಶಿಕ್ಷಂ  ಜಗದ್ರಕ್ಷಕಂ  ಸರಸ
ಕುಂಕುಮನ ಪುರ ನಿವಾಸಂ  ಲಕ್ಷ್ಮೀ ಮನೋ
ಲ್ಲಾಸಂ  ಹರಿನೃಸಿಂಗ ಭಕ್ತಾಂತರಂಗಂ  ಕರುಣಾ
ಕೃಪಾಂಗಂ  ಭವಭಂಗ ಜಯ  ನಮಸ್ತೇ, ನಮಸ್ತೇ, ನಮಃ ॥

ಆಂಜನೇಯ: ಯಲಾ ಮನುಜಾಗ್ರಣಿಯೇ ! ಘನಲಾವಣ್ಯ ರಘುವರೇಣ್ಯನ ಚರಣಕಮಲಗಳ ಸ್ಮರಿಸುವ ಅನಿಲ ನಂದನನೆಂದರೆ ವಾಯುದೇವರ ವರಪ್ರಸಾದದಿಂದ ಉದ್ಭವಿಸಿ ತಾಯಿ ಅಂಜನಾದೇವಿಯ ಗರ್ಭಸಂಜಾತನಾಗಿ ಯಾದವ ಕುಲಾಗ್ರಣಿಯಾದ ಮಾಧವನ ಪದ ವನಜವನ್ನು ಮೋದದಿಂದ ಭಜಿಸುತ್ತಾ ಮೇದಿನಿಯೋಳ್ ನೀತಿಪಥವನ್ನಾಚರಿಸುತ್ತಾ ಮೋಕ್ಷವನ್ನಪೇಕ್ಷಿಸಿ ಜಗದ್ರಕ್ಷಕನಾದ ಕುಂಕುಮನಪುರ ಲಕ್ಷ್ಮೀವರನ ಧ್ಯಾನದಿಂದ ಈ ವಾರುಧಿಯ ತಡಿಯೋಳ್ ಕುಳಿತು. ತಪಸ್ಸನ್ನಾಚರಿಸುತ್ತಿರುವ ವಾನರ ವೀರನಾದ ಹನುಮಂತ, ಧೀಮಂತ, ಪಟು ಬಲವಂತ, ಸುರವೈರಿ ಕುಲಕೃತಾಂತನೆಂದು ತಿಳಿಯೋ ಮರ್ತ್ಯಶಿಖಾಮಣಿ ॥

ದರುವುಜಂಪೆ

ಯಾರೈಯ್ಯ ನೀವು ಈ  ಘೋರಾರಣ್ಯದಿ ಕುಳಿತು
ಇರುವ ಕಾರಣವೇನು  ಭರದಿ ಪೇಳೈಯ್ಯ  ಅರುಹಯ್ಯ ॥

ಅರ್ಜುನ: ಎಲೈ ವನಚರ ವೀರನೇ ಘನಮಹತ್ತಾದ ಈ ವನದಲ್ಲಿ ವಾಸ ಮಾಡಿಕೊಂಡು ಈ ಸೇತುವಿನ ಬಳಿ ಕುಳಿತಿರಲು ಕಾರಣವೇನು ? ಧಾತ್ರಿಯೊಳು ನಿನ್ನ ಕುಲಗೋತ್ರ ಧಾವುದು ? ಗಾತ್ರ ಮೊದಲಾದ ನಿನ್ನ ಅವಯವಗಳನ್ನು ನೇತ್ರದಿಂ ನೋಡಲಿಕ್ಕೆ ಸೂಕ್ಷ್ಮದಿಂದಿರುವ ಕಾರಣವೇನು ? ನಿನ್ನ ಜನನೀ ಜನಕರ ಪೆಸರೇನು ? ವಿನಯದಿಂದ ಬಿತ್ತರಿಸಬೇಕೈ ವನಚರ ನೀ ಬಹುಶೂರ ॥

ದರುವು

ಕ್ಷೋಣೀಶ ಕೇಳು ವಾ  ಯುವಿನಿಂದ ಜನಿಸಿರುವ
ತ್ರಾಣಿ ಹನುಮಂತನೆಂ  ದೆನ್ನಯ ಪೆಸರೂ ॥

ಆಂಜನೇಯ: ಎಲೈ ! ಕ್ಷೋಣೀಶನೇ! ಕೇಳು! ಜಗತ್ರಾಣ ರೂಪನಾದ ವಾಯುದೇವರ ವರಪ್ರಸಾದದಿಂದ ಉತ್ಪನ್ನನಾದ, ಹನುಮಂತ ಧೀಮಂತ ಪಟು ಬಲವಂತ ಸುರವೈರಿ ಕುಲಕೃತಾಂತನೆನ್ನುವ ಪೆಸರು ಯನಗೊಪ್ಪುವುದೈ ಭೂವರ ಕೇಳೈ ನರವರ ॥

ದರುವುಜಂಪೆ

ವರದ ನೃಸಿಂಗನಾ  ಶರಣ ನೀನಾದರೇ
ಶರೀರವು ಕರಗಿರಲು  ಕಾರಣವ ಪೇಳೈ  ಯನಗರುಹೈ ॥

ಅರ್ಜುನ: ಎಲೈ ಧೀಮಂತನೇ ! ನೀನು ಕುಂಕುಮನಪುರಿ ಶ್ರೀ ನೃಸಿಂಗನ ಭಕ್ತನೆನ್ನುವ ಮಾತು ದಿಟವಾದರೆ ಪೂರ್ಣಮಾದ ನಿನ್ನ ಕಾಯವೆಲ್ಲಾ ಬಳಲಿ ಕೈಕಾಲುಗಳು ಒಳಸೆಳೆದು ಅಳಿಲಿನೋಪಾದಿಯಲ್ಲಿ ಒಣಗಿದ ದೇಹದಿಂದ ಇರಲೇಕೆ ? ನೀನು ಘನತರ ವಜ್ರ ಶರೀರಿಯೆಂದು ಪೂರ್ವಿಕರಾದ ಹಿರಿಯರು ಹೇಳುತ್ತಿದ್ದ ಮಾತು. ನಾನು ಕೇಳಿ ಬಲ್ಲೆ ? ಈಗ ಒಣಗಿದ ದೇಹದಿಂದ ಪೆಣಗಳ ಭಕ್ಷಿಸುವ ರಣಹದ್ದಿನಂತೆ ಕುಳಿತಿರುವ ವೃದ್ಧಕಪಿಯಾದ ನಿನ್ನ ನೋಡಿದರೆ ಗಣನೆಯೊಳಗಿಲ್ಲವೈ ವಾನರಾ ನೀನೊಬ್ಬ ಪಾಮರ॥

ದರುವುತ್ರಿಪುಡೆ

ಮನುಜಪಾಲನೆ ಕೇಳು ಪೇಳುವೆ
ವನಜನಾಭನ ಕಾರ‌್ಯವನು ನಾ
ಅನುದಿನವು ಆಚರಿಸಿ ಯನ್ನಯ  ತನುವು ಬಡವಾಯ್ತು ॥           ॥1 ॥

ಆಂಜನೇಯ: ಕೇಳೈಯ್ಯ ! ಮತಿವಿಕಳನಾದ ಮಾನವಾ ! ತ್ರೇತಾಯುಗದಲ್ಲಿ ಪತಿತ ಪಾವನೆಯಾದ ಕ್ಷಿತಿಸುತೆಯನ್ನು ಕೃತಕ ಮತಿ ಖಳನು ಯತಿವೇಶದಿಂದ ಅಪಹರಿಸಿದ ವೇಳೆ ಮತಿಹೀನ ಖಳನ ಮಥಿಸಲು ಮಿತಿ ಮೀರಿದ ಈ ಜಲಧಿಯನ್ನು ಅತಿ ಸೂಕ್ಷ್ಮದಿಂದ ಲಂಘಿಸಿ, ಶತಕೋಟಿ ದಾನವರ ಹತಗೈದು ರತಿಪತಿ ಪಿತಗೆ ಸತಿ ಶಿರೋಮಣಿಯ ಕುರುಹನ್ನು ತಂದಿತ್ತೆನಾದ ಕಾರಣ ಅತಿಶಯದ ಕಳೆಗುಂದಿ ಈ ಗತಿಯಾಯಿತು. ಮಿತಿ ಮೀರಿ ಆಡಬೇಡವೋ ದುರ್ವಚನವಾ ಮತಿಯಲ್ಲಿ ತಂದುಕೋ ಜ್ಞಾನವ॥

ದರುವು

ಘೋರ ರಕ್ಕಸನೊಡನೆ ಸಮರಕೆ
ಧೀರ ಶ್ರೀ ರಘುವೀರ ತೆರಳಲು
ದಾರಿಯಿಲ್ಲದೆ ಸೇತು ಬಂಧಿಸಿ  ಕರಗಿತೀ ತನುವೂ                    ॥2 ॥

ಆಂಜನೇಯ: ಎಲೈ ಮೇದಿನೀಶನೇ ! ಯಾದವಕುಲ ಸಾರ್ವಭೌಮರಾದ ಮಾಧವನ ದಾಸಾನುದಾಸನಾದೆನ್ನ ಪ್ರಭಾವವು ತಿಳಿಯದೇ ಸಾಧಾರಣವಾದ ಕಪಿಯೆಂದು ಭೇದ ವಚನಗಳಿಂದ ವಾದಿಸುತ್ತಿರುವೆ. ಯಲಾ! ದುರ್ಮತಿಯೇ! ಮಂದಮತಿಯೇ ಕೇಳು ! ಕೋದಂಡಪಾಣಿಯಾದ ಸ್ವಾಮಿಯು ಆ ದುರಿತಶೀಲನಾದ ರಾವಣನ ಪಟ್ಟಣಕ್ಕೆ ತೆರಳಲು ದಾರಿ ಇಲ್ಲದೆ ವ್ಯಥೆಪಟ್ಟು ಈ ಸೇತುವನ್ನು ಸ್ಥಾಪಿಸಿಸುವುದಕ್ಕಾಗಿ ಶತಕೋಟಿ ಪರ್ವತಗಳನ್ನು ಅತಿಸ್ಥೂಲಮಾದ ಈ ಬಾಲದೊಳು ಕಿತ್ತು ನೆತ್ತಿಯೊಳು ಪೊತ್ತು ಇಪ್ಪತ್ತೇಳು ಕೋಟಿ ಕಪಿ ನಾಯಕರು ಮೊತ್ತದೋಳ್ ಬಳಲಿ ಈ ಧೀರ್ಘಮಾದ ಶರೀರವು ಕಂದಿ ಕುಂದಿ ಯಮ್ಮ ಕರ ಚರಣಗಳು ವಳಸೇರಿದವೈಯ್ಯ ಮಾನವಾ ತಿಳಿಯಿತೇ ಯನ್ನ ಧೃಡತರ ವಚನ ಪ್ರಭಾವ॥

ದರುವು

ಧರಣಿ ಕುಂಕುಮ ಪುರವ ಪಾಲಿಪಾ
ಸಿರಿ ಮನೋಹರ ವರ ನೃಸಿಂಗನಾ
ಚರಣ ಕಮಲದ ಸ್ಮರಣೆಯಿಂದಲಿ  ಯಿರುವೆನನವರತಾ             ॥3 ॥

ಆಂಜನೇಯ: ಎಲೈ ನರ ಕುಲೋತ್ತಮನೇ ! ಧರಣಿಯ ಮಧ್ಯದಲ್ಲಿ ಪರಿಶೋಭಿಸುತ್ತಿರುವ ಸರಸತರ ಕುಂಕುಮನ ಪುರವರ ಸಿರಿಮನೋಹರ ನರಸಿಂಹಮೂರ್ತಿಯೆನಿಪ ಶ್ರೀಕೃಷ್ಣನ ಚರಣ ಕಮಲ ಸ್ಮರಣೆಯಿಂದ ಈ ಶರಧಿಯ ತಡಿಯೋಳ್ ತಪಿಸುತ್ತಿರುವೆನೋ ಮಾನವಾ ಅರುವಾಯಿತೇ ಈ ಮರುತಜನ ಪ್ರಭಾವ॥

ಅರ್ಜುನ: ಎಲೈ! ತರು ಚರ ವೀರನೇ ! ಶರಧಿಗೆ ಸೇತುವೆಯನ್ನು ಕಟ್ಟುವುದಕ್ಕೆ ಇಷ್ಟು ಕೋಟಿ ಕಪಿ ನಾಯಕರು ಬೇಕೆ! ಪೂರ್ಣ ಶೌರ‌್ಯವಂತರಾದ ಕಪಿಗಳು ಗಿರಿ ಪರ್ವತಗಳನ್ನು ಕಿತ್ತು ನೆತ್ತಿಯೊಳು ಪೊತ್ತು ತರಬೇಕೆ ! ಶರಮುಖದಿ ಸೇತುವೆಯನ್ನು ಕಟ್ಟುವೆ, ಪರಿಕಿಸಿ ನೋಡುಬೇಕಾದರೆ. ಪಿರಿದಾದ ಬಾಲವನ್ನು ಸುತ್ತಿಕೊಂಡು ನರಿಯಂತೆ ವರಲದಿರು ಜೋಕೆ! ಯನ್ನಂಥಾ ಪರಮ ಸಾಹಸವುಳ್ಳಂಥ ಪರಾಕ್ರಮಶಾಲಿ ಯಾದವನನ್ನು ಈ ಜಗತ್ತಿನೋಳ್ ಕಂಡಿರುವೆಯೇನೋ ವಾನರಾ ನೀನೊಬ್ಬ ಪಾಮರ॥

ದರುವು

ಸಾಕು ಮರ್ತ್ಯನೇ ನಿನ್ನ  ಕಾಕು ಪೌರುಷಗಳೂ
ನೀ ಕಟ್ಟು ಸೇತುವೆಯಾ  ನಾ ತುಳಿದು ಬಿಡುವೆ ॥                         ॥1

ಆಂಜನೇಯ: ಎಲೈ ಕಾಕು ಮತಿಯುಳ್ಳ ಮರ್ತ್ಯನೇ ಕೇಳು ! ಲೋಕದೋಳ್ ! ನಾ ಕಡು ಸಮರ್ಥನೆಂದು ಕಾಕು ಮನುಜನಂತೆ ಯಾತಕ್ಕೆ ಒರಲುತಿದ್ದೀಯೆ ! ಯಲೌ ಅಪರ ಬುದ್ಧಿ! ಭೂಲೋಕದಿಂದ ಸುರಲೋಕದ ಪರಿಯಂತರಕ್ಕೂ ಏಕವಾಗಿ ಸೇತುವೆಯನ್ನು ಬಂಧಿಸು ! ಭಲಾ ! ಏಕಚರಣದೊಳು ತಾಡಿಸಿ ಓಕುಗೈಯದಿರ್ದೊಡೆ ನೀನು ಪೇಳಿದಂತೆ ಇರುವೆನೋ ಮಾನವಾ ಕಟ್ಟು ಸೇತುವಾ ॥

ದರುವುಜಂಪೆ

ಬಣಗು ಕಪಿವರ ಯನ್ನೋಳ್  ಸೆಣಸಾದೀರೆಲೋ ಇನ್ನು
ರಣರಂಗಧೀರ ನಾ  ನೆಂದು ನೀ ತಿಳಿಯೋ, ನೀನರಿಯೋ ॥  ॥1 ॥

ಕಣೆಯಾ ಸೇತುವನು ಈ  ಕ್ಷಣದೀ ರಚಿಸಿರುವೆನೂ
ಅಣಿದು ಕೆಡಹಲು ನಾನು  ಅನಲ ಪೋಗುವೆನೂ  ಹೋಗುವೆನೂ ॥2 ॥

ಅರ್ಜುನ: ಎಲೈ, ಪೆಣಗಳನ್ನು ಭುಂಜಿಸುವ ರಣಹದ್ದಿನ ಆಕೃತಿಯುಳ್ಳ ಬಣಗು ಕಪಿವರನೇ ಕೇಳು! ತ್ರಿಣಯಸಖ ವರಭಕ್ತ ವರಗುಣಾದ್ಯುಕ್ತ ರಣವಿಜಯ ಫಲ್ಗುಣನಾದ ನಾನು ಅಣಿಯಾಗಿ ರಚಿಸಿರುವ ಈ ಕಣೆಯ ಸೇತುವೆಯನ್ನು ಗಣನೆಗೆ ತಾರದೆ ಅಣಿದು ಕೆಡಹಿದ್ದಾದರೆ ತ್ರಿಣಯನಾಣೆ ನಾನಗ್ನಿಯಂ ಪೋಗುವೆನೋ ವಾನರಾ  ನೀನೊಬ್ಬ ಪಾಮರ ॥

ದರುವು

ದಿಟ್ಟಾ ಮಾರುತಿ ಭುಜವಾ  ತಟ್ಟಿಕೊಂಡನು ತಾನು
ದೃಷ್ಠೀಸಿ ನೋಡಿ ಸೇತುವನೂ                                              ॥2 ॥

ಭ್ರಷ್ಠಾ ಮನುಜನೇ ನೀನು  ಕಟ್ಟಿರುವ ಸೇತುವನೂ
ಮೆಟ್ಟೀ ಧಾತ್ರಿಗೆ ನಾನು  ಕುಟ್ಟಿ ಕೆಡಹಿದೆನೂ                             ॥3 ॥

ಆಂಜನೇಯ: ಯಲೋ, ಭ್ರಷ್ಠ ಮಾನವಾ ! ದೃಷ್ಠಿ ಇಟ್ಟು ನೋಡೆನ್ನ ಪ್ರಭಾವ ದಿಟ್ಟತನದಿಂದ ನೀ ಗಟ್ಟಿಪಡಿಸಿದ ಸೇತುವೆಯನ್ನು, ಮುಷ್ಠಿಯಿಂದ ಯನ್ನ ಎಡಗಾಲುಂಗುಷ್ಠದಿಂ ಮೆಟ್ಟಿ ಮುರಿದಿಟ್ಟಿರುವೆನು. ದೃಷ್ಠಿಸಿ ನೋಡೋ ಭ್ರಷ್ಠ ಮಾನವಾ-ಸೃಷ್ಠಿಯೋಳ್ ಕಂಡಂತಾಯ್ತು ನಿನ್ನ ಪ್ರಭಾವ ॥

ಅರ್ಜುನ: ಎಲೈ ಕೆನ್ನೆಗಳು ಸೊಕ್ಕಿ, ಕಿವಿಗಳು ಜೋಲಾಡುತ್ತಿರುವ ಕುನ್ನಿ ಕಪಿವರನೇ ಕೇಳು. ಮುನ್ನಿನ ಸೇತುವೆಯನ್ನು ಮುರಿದ ಉನ್ನತ ಶೌರ‌್ಯವಂತಿರಲಿ, ಇನ್ನೊಂದು ಬಾರಿ ಸೇತುವೆಯನ್ನು ಬಲಿಯುವೆನು, ನಿನ್ನೊಳು ಸಾಹಸವಿದ್ದರೆ ಅದನ್ನು ಮುರಿ. ನಿನ್ನ ಬಲವನ್ನು ನೋಡುವೆನು ವಾನರನೇ ಕಪಿವರನೇ॥

ದರುವು

ಅಕ್ಷಯಾಸ್ತ್ರದಿ ಸೇತೂ  ನಿಕ್ಷಿಪ್ತಗೊಳಿಸಿರುವೆ
ಈಕ್ಷಿಸಿ ನೋಡು ಹೇ  ಬಣಗು ಕಪಿವರನೇ ವನಚರನೇ               ॥3 ॥

ಈ ಕ್ಷಿತಿಯೊಳು ನೀನು  ದಕ್ಷನಾದರೆ ಇದನೂ
ಶಿಕ್ಷೀಸಿ ಕೆಡಹೋ ನೀ  ಈಕ್ಷಿಪೆ ಶೌರ‌್ಯವನೂ ॥ಶೌರ‌್ಯವನೂ ॥4 ॥

ಅರ್ಜುನ: ಎಲೈ ! ಕುಕ್ಷಿಗೆ ಆಹಾರವಿಲ್ಲದೆ, ವನ ವೃಕ್ಷದ ಫಲಗಳಂ ಭಕ್ಷಿಸುತ್ತಾ ಕುಕ್ಷಿಯನ್ನು ರಕ್ಷಿಸಿ ಕೊಂಡಿರುವ ಲಕ್ಷಣಗೇಡಿಯಾದ ವನಚರನೇ ಕೇಳು ! ದಕ್ಷರಾದನೇಕ ಮಂದಿ ರಾಕ್ಷಸರ ಶಿಕ್ಷಿಸಿದೆನೆಂದು ಅಕ್ಷಯ ಪೌರುಷಗಳ ಬೊಗಳುತಿದ್ದೀ ಯಲೋ ಅಪರ ಬುದ್ಧಿ ! ಸಾಕ್ಷಾತ್ ಲಕ್ಷ್ಮೀ ವಕ್ಷಸ್ಥಳ ವರ ನಿಟಿಲಾಕ್ಷ ಸಖ ಕಮಲಾಕ್ಷನಿಗಪೇಕ್ಷೆಯುಳ್ಳ ಭೃತ್ಯನಾದದ್ದೇ ಸತ್ಯ ಆದರೆ ಅಕ್ಷಯಾಸ್ತ್ರದಿಂ ನಿಕ್ಷಿಪ್ತಗೊಳಿಸಿರುವ ಈ ಸೇತುವೆಯನ್ನು ಶಿಕ್ಷಿಸು ಬಾರೋ ವನಚರ ನೀನೊಬ್ಬ ಪಾಮರ ॥

ದರುವು

ಕ್ರೂರಾನೇ ಬಂಧಿಸಿದಾ  ಭಾರಿ ಸೇತುವೆ ಮುರಿದು
ಚೂರು ಮಾಡಿರುವೆನು  ಇದ ನೀನು ನೋಡೋ                        ॥4 ॥

ಧರೆಯೊಳು ಕುಂಕುಮನಾ  ಪುರದ ನರಹರಿ ಭಕ್ತ
ಮಾರುತ ಸುತನವಿ  ಚಾರ ನೆಲೆಯಾಯ್ತೇ                              ॥5 ॥

ಆಂಜನೇಯ: ಬಾರಿ ಬಾರಿಗೂ ಮೇರೆ ಇಲ್ಲದ ವೀರ ಪರಾಕ್ರಮಗಳ್ ಬಗುಳುವ ಕ್ರೂರ ನರಾಧಮನೇ ಕೇಳು! ಮೀರಿದ ಅಕ್ಷಯಾಸ್ತ್ರದಿಂ ನೀನು ರಚಿಸಿ ಇರುವ ಭಾರಿ ಸೇತುವೆಯನ್ನು ಶೂರ ಜನ ಗಂಭೀರನಾದೆನ್ನ ಪಟುತರ ಶಕ್ತಿಯಿಂದ ನೂರು ಚೂರ್ಣಗಳಂ ಮಾಡಿ ವಾರಿಜನಾಭನಾದ ಕುಂಕುಮನ ಪುರಧಾಮ ನರಸಿಂಹಮೂರ್ತಿಯ ಭೃತ್ಯನ ವಿಚಾರ ಪರಿಷ್ಕಾರವಾಗಿ ಗೊತ್ತಾಯಿತೇನೋ ಮರ್ತ್ಯಾ ನಿನ್ನ ಪೌರುಷತನ ವ್ಯರ್ಥ ॥

ಅರ್ಜುನ: ಎಲೈ ಮರುಳು ಮರ್ಕಟನೇ ! ಎರಡಾವರ್ತಿ ನಾನು ಬಂಧಿಸಿದ ಶರಸೇತುವೆಯನ್ನು ಮುರಿದೆನೆಂಬ ದುರಹಂಕಾರವಂ ಬಿಡು. ಇದೇ ಈ ಸಾರಿ ಪರಿಕಿಸಿ ನೋಡು. ಸರಸತರ ಕುಂಕುಮನಪುರ ನಿಲಯ ನರಕೇಸರಿಯ ಕರುಣ ಕಟಾಕ್ಷದಿಂದ ಧೃಡತರಮಾದ ದಿವ್ಯ ಮಹಾಸ್ತ್ರಗಳಿಂದ ಸುರನರ ಕಿನ್ನರ ಖೇಚರರಿಗಸದಳಮಾದ ಸೇತುವೆಯನ್ನು ವಿರಚಿಸಿರುವೆನು, ಭರದಿಂದ ಮುರಿಯೋ ವನಚರ ತರುಚರರೋಳ್ ನೀನೇ ಪಾಮರ ॥

ದರುವು

ದುರುಳಾ ನರನೇ ನಿನ್ನಾ  ಉರುತರದ ಸೇತುವೆಯಾ
ಗರಿಗರಿ ಯೆನುತಾ ಮರಿದಿರುವೆ ನೋಡೋ                             ॥6 ॥

ಆಂಜನೇಯ: ಎಲೈ ರಣಹೇಡಿಯಾದ ಬಣಗು ನರಾಧಮನೆ, ಕೇಳು ! ತ್ರಿಣಯಾದಿ ಸುರಗಣಕಸದಳ
ಮೆಂದು ಗಣನೆ ಇಲ್ಲದೆ ಬಗುಳಿ ಅಣಿಯಾಗಿ ನೀನು ಹೂಣಿದ ಕಣೆಯ ಸೇತುವೆಯನ್ನು ಗಣನೆಗೆ ತಾರದೆ ಕ್ಷಣ ಮಾತ್ರದೋಳ್ ಅಣಿದು ಕೆಡಹಿರುವೆನು. ಕಣ್ಣ ಬಿಟ್ಟು ನೋಡೋ ಮಾನವಾ ಆಡದಿರು ಅಣಕವಾ॥

ಅರ್ಜುನ : ಅಯ್ಯೋ ! ದಾನವಾರಿ ! ಗೋವಿಂದ, ಗರುಡಧ್ವಜ, ನಾನು ಮಾಡಿದ ಪ್ರತಿಜ್ಞೆ ನೆರವೇರದೋಯ್ತೇ. ಶ್ರೀಹರಿ ಇನ್ನು ನಾನಗ್ನಿಯಂ ಪೋಗುವುದೇ ಸರಿ ॥

ದರುವು

ಯೇನು ಮೋಸವಾಯಿತಯ್ಯ
ದಾನವಾರಿ ಮು  ಕುಂದ ಹರಿಯೇ ॥
ನಾನು ಗೈದಿಹ ಪ್ರತಿಜ್ಞೆಗೆ
ವಿಘ್ನ ವದಗೀತೇ ಹರಿಯೇ                                                   ॥1 ॥

ಕಾಕು ಕಪಿಗೆ  ಸೋತು ನಾನು
ಈ ಕಾಯವಿನ್ನು  ವಾಸುದೇವಾ
ಯಾಕೆ ಇಡಲೀ, ಬೇಕು ಜಗದೀ
ಸಾಕು ಸುಡಲಿನ್ನೂ, ಹರಿಯೇ                                               ॥2 ॥

ಅರ್ಜುನ: ಅಯ್ಯೋ ಪಾಕಾರಿ ವಂದಿತನಾದ ಶ್ರೀಹರಿಯೇ ಕೀಕಾರಣ್ಯದಲ್ಲಿ ವಾಸಿಸುವ ಕಾಕುಕಪಿಯೋಡನೆ ಸೆಣಸಿ ಲೋಕಾಪವಾದಕ್ಕೊಳಗಾಗಿ ಈ ಕಾಲದಲ್ಲಿ ನಾಕವನ್ನು ಸೇರುವ ಗತಿಯೆನಗೆ ದೊರಕಿತೇ ಮುಕುಂದನೇ, ಪಾಕಶಾಸನ ಸುತ ಸಿತವಾಹನನೆಂಬ ಪೆಸರೆನಗ್ಯಾತಕ್ಕೋ ಮುರಾರಿಯೆ ಆಹಾ ಕಂಸಾರಿಯೇ ತ್ರಿಲೋಕ ಭೀಕರ ಸಮರ್ಥ ಪಾರ್ಥನೆಂಬುವ ಬಿರುದು ಇಂದಿಗೆ ವ್ಯರ್ಥವಾಗಿ, ಪೂರ್ತಿ ಅಪಕೀರ್ತಿ ಹೊಂದಿದ ಈ ಕಾಯವನ್ನು ಸುಡಲಿ. ಈ ಕಪಿಗೆ ನಾನು ಸೋಲುವಂತಾಯ್ತೇ ಶ್ರೀಹರೀ ಮುಂದೇನು ದಾರಿ ॥

ದರುವು

ಅರಿಯ ಕುಲಸಾ  ಮಜಕೇ ಹರಿಯೂ
ನರನು ಯೆನ್ನುವ  ಬಿರುದು ಇವನೊಳು
ಬರಿದೇ ವ್ಯರ್ಥ  ವಾಗಿ ಹೋಯ್ತೇ
ತೆರನು ಕಾಣೆನೂ  ಹರಿಯೇ                                                 ॥3 ॥

ಅರ್ಜುನ: ಹೇ ಮುರಾರಿಯೇ ! ನರ ಸಂಚಾರವಿಲ್ಲದ ಕಾಂತಾರದಲ್ಲಿ ತರುಚರನಾದ ಇವನಲ್ಲಿ ವಾಸಿ ಪಂಥಗಳ ಬೆಳಸಿ ಸೋತೆನಲ್ಲೋ ಮುಕುಂದನೇ, ಆಹಾ ಪರಮಾತ್ಮನೇ, ಧರೆಯೊಳು ನಾನು ಅರಿಕುಲಗಜ ಕಂಠೀರವನೆಂಬ ಬಿರುದು ವ್ಯರ್ಥವಾಗಿ ಹೋಯ್ತೆ ಶ್ರೀಹರಿ ಇನ್ನು ನಾನಗ್ನಿಯಂ ಪೋಗುವುದೇ ಸರಿ ॥

ದರುವು

ಧಾರುಣಿಯೊಳೂ  ಅಗ್ನೀಕುಂಡವ
ವಿರಚಿಸುವೆನು  ತ್ವರಿತದಿಂದಾ ॥
ವರ ನೃಸಿಂಗನ  ಚರಣದಾಣೆ
ಉರಿಯ ಪೋಗುವೆನೂ  ಹರಿಯೇ                                         ॥4 ॥

ಅರ್ಜುನ: ಹೇ ವನಜನಾಭ, ಘನತರಮಾದ ಅಗ್ನಿಕುಂಡವನ್ನು ರಚಿಸಿ ಅನಿಮಿಷಾದಿಗಳು ಮೆಚ್ಚುವಂತೆ ಅನಲನಿಗೆ ಈ ತನುವನೊಪ್ಪಿಸಿ ಬಿಡುವೆನೋ ಕುಂಕುಮನಪುರ ನರಸಿಂಹಸ್ವಾಮೀ ಭಕ್ತರ ಪ್ರೇಮಿ॥

ಕಂದ

ನರ ಬಲಿದ ಶರ ಸೇತುವನೂ
ಭರದಿಂ ಪವಮಾನ ತನಯ ಮೂರಾವರ್ತಿಯು ॥
ಮುರಿಯಲು ಪಾರ್ಥನು ಮನದೋಳ್
ಮರುಗುವ ಪರಿಯರಿತು ಬಂದ ಸ್ಮರಪಿತನಾಗಲ್ ॥

ಭಾಗವತರು: ಈ ಪ್ರಕಾರವಾಗಿ ತನ್ನ ಪ್ರತಿಜ್ಞಾ ಭಂಗವಾಗಲು ಪಾರ್ಥನು ಮನನೊಂದು ನರಹರಿಯನ್ನು ಪ್ರಾರ್ಥಿಸಿ ಅಗ್ನಿಪ್ರವೇಶವಂ ಮಾಡಲುದ್ಯುಕ್ತನಾಗಲೂ ಶ್ರೀಹರಿಯು ಕಪಟದ್ವಿಜನಾಗಿ ಬಂದನೈಯ್ಯ ಭಾಗವತರೇ ॥

* * *

(ಕಪಟದ್ವಿಜ ಬರುವಿಕೆ)

ತೆರೆದರುವು

ಕರುಣಾನಿಧಿಹರಿ  ಬಂದನು ಧರಣಿಯ  ಸುರ ವೇಷದೊಳಾಗ
ಸುರಪತಿನಂದನ  ಮರುತಜರಿರುವಾ  ಶರಧಿ ತಡಿಗೆ ಬೇಗಾ        ॥1 ॥

ಕರದೊಳು ಪುಸ್ತಕ  ವರ ಜಪಸರಗಳು  ಪರಿಶೋಭಿಸುತಿರಲು
ಉರದೊಳು ವರಯ  ಜ್ಞೋಪವೀತವು  ಹರುಷದಿಂದೊಪ್ಪಿರಲೂ   ॥2 ॥

ಪೂಸಿದ ಗಂಧ ಸು  ವಾಸನೆ ಸೂಸುತ  ಕೇಶವು ಗಂಟಿಡುತಾ
ವಾಸುದೇವ ಹರಿ  ಕೇಶವ ಯೆನ್ನುತ  ಭೂಸುರ ನಸು ನಗುತಾ     ॥3 ॥

ಪೊಡವಿ ಕುಂಕುಮಪುರ  ದೊಡೆಯ ನೃಸಿಂಗನು  ಬಡಬ್ರಾಹ್ಮಣನಾಗಿ
ನುಡಿಸಿದ ಫಲುಗುಣ  ಮರುತಜರೀರ್ವರಾ  ಕಡಲ ತಡಿಗೆ ಪೋಗಿ ॥4 ॥

ದರುವುಜಂಪೆ

ಯೇನಿರೈ ನಿಮ್ಮೊಳಗೆ  ವಾದ ಬಂದಿರುವುದನೂ
ಮಾನವಿಲ್ಲದೆ ಪೇಳಿ  ಸಾನುರಾಗದೊಳೂ       ॥1 ॥ವಿನಯದೊಳೂ ॥

ನಡೆದ ಸಂಗತಿಯನ್ನು  ಸಡಗರದಿಂದಲೀ
ನುಡಿದರೆ ನಾನೀಗಾ  ಬಿಡಿಸುವೆನು ಕಲಹಾ           ॥2 ॥ಈ ಕಲಹಾ ॥

ಕಪಟದ್ವಿಜ: ಹರಿ ಹರಿ ನಾರಾಯಣ ! ವಾಸುದೇವ ವೈಕುಂಠವಾಸ, ಕ್ಷೀರಾಬ್ಧಿಶಯನ, ಪನ್ನಗಶಾಯಿ. ನೀನೇ ರಕ್ಷಿಸು, ರಕ್ಷಿಸು, ಅಯ್ಯ ನೀವುಗಳು ಧಾರು ? ನಿಮ್ಮ ನಿಮ್ಮ ವಿವಾದದ ಸಂಗತಿಯೇನು ? ಅನುಮಾನ ಪಡದೆ ನಮ್ಮೊಡನೆ ಪೇಳುವಂಥವರಾಗಿರೈಯ್ಯ ಮತ್ತೆ ಪರಿಹರಿಸಿ ಕೊಡುವೆನಿವತ್ತೆ ॥

ದರುವು

ನಿರ್ಧೂಮವಾಗಿರುವ  ಅಗ್ನಿಹೋತ್ರವ ರಚಿಸಿ
ಸಿದ್ಧವಾಗಿಹ ಪರಿಯ  ನಿರ್ಧರದೊಳು ಪೇಳಿ ನೀವ್ ಪೇಳಿ            ॥3 ॥

ಅರ್ಜುನ: ಎಲೈ ಪ್ರೌಢರೇ ! ನೀವುಗಳು ಧಾರು ? ನಿಮ್ಮಗಳ ಪೆಸರೇನು ? ಆಹಾ ! ಬಹು ಚೆನ್ನಾಯಿತು. ಏನು ನಿಮಿತ್ಯವಾಗಿ ಈ ಗಹನದಲ್ಲಿ ಅಗ್ನಿಕುಂಡವಂ ರಚಿಸಿ ಬಹುಸಾಮಗ್ರಿಗಳನ್ನೊದಗಿಸಿ ಅದರಲ್ಲಿ ಪ್ರವೇಶಿಸಲು ಕಾರಣವೇನಿರುವುದು. ನಿಮ್ಮ, ನಿಮ್ಮ ವಿವಾದ ಸಂಗತಿಗಳನ್ನು ಪೇಳಿದ್ದಾದರೆ ನಾವು ಸ್ವಲ್ಪ ಕೇಳುತ್ತೇವಯ್ಯ ಕೇಳುತ್ತೇವೆ ॥

ದರುವು

ವರದ ನೃಸಿಂಗನಾ  ಚರಣ ಸಾಕ್ಷಿಯು ನಿಮಗೆ
ಮರೆಯ ಮಾಜದೆ ನಡೆದ  ಪರಿಯ ನರುಹುವೆ ದೇವಾ ॥

ಅರ್ಜುನ: ನಮೋನ್ನಮೋ ಸ್ವಾಮಿ! ದ್ವಿಜ ಸಾರ್ವಭೌಮರೇ ! ನಾವುಗಳು ಒಪ್ಪಿ ಮಾಡಿಕೊಂಡು ಇರುವ ಭಾಷೆಗಳನ್ನು ದೋಷ ರಹಿತನಾದ ಕುಂಕುಮನ ಪುರಿ ವಾಸುದೇವನ ಚರಣ ಸಾಕ್ಷಿಯಾಗಿ ಲೇಶವೂ ಮರೆಮಾಜದೆ ಚರಣ ಸನ್ನಿಧಿಯಲ್ಲಿ ಅರಿಕೆ ಮಾಡುವೆನು. ಹ್ಯಾಗಂದರೆ ಒಂದು ದಿನ ಭೂಸುರರು ಬಂದು ತಸ್ಕರರ ಬಾಧೆಯನ್ನು ದೂರಿಟ್ಟರಾದ ಕಾರಣ ಅವರಿಗೆ ಅಭಯವನ್ನಿತ್ತು, ಯನ್ನ ಅಗ್ರಜ ಯುಧಿಷ್ಠಿರ ದ್ರೌಪದೀ ಇರುವ ಸಜ್ಜಾಗೃಹದಲ್ಲಿದ್ದ ಯನ್ನ ಧನು ಶರಗಳನ್ನು ಕೈಗೊಂಡು ಬರಲು ಶಯ್ಯಗೃಹವಂ ಪೊಕ್ಕು, ಧನುಶರಂಗಳಂ ತಂದು ಕ್ಷಿಪ್ರದಿಂ ವಿಪ್ರಸಂದಣಿಯ ಬಾಧೆಯಂ ಪರಿಹರಿಸಿದೆನು. ಹಿಂದೆ ನಾರದರ ನಿಯಾಮಕದಂತೆ ಪಾಪ ಬಂದದ್ದರಿಂದ ಒಂದು ವರುಷ ಭೂಪ್ರದಕ್ಷಿಣೆ ಗೈಯಬೇಕಾಗಿ ಈ ಸಿಂಧುವಿನೆಡೆಗೆ ಬಂದು ಅಲ್ಲಿ ಇರುವ ತೀರ್ಥಂಗಳೋಳ್ ಮಿಂದು ಈ ರಾಮಸೇತುವಿನ ಬಳಿಗೆ ಬಂದೆನು. ಹೇ ದೇವಾ ! ಮಂದಮಾರುತ ಕಂದನಾದ ಈ ಕಲಿ ಹನುಮನು ಕುಳಿತಿರುವುದು ಕಂಡು ನೀನು ಧಾರೆಂದು ಕೇಳಿದನು. ನಾನು ಹನುಮಂತನೆಂದುಸುರಿದನು. ಒಂದು ವೇಳೆ ನೀನು ಹನುಮಂತನಾದರೆ ಹಿಂದಣ ಹಿರಿಯರಾದವರು ವಜ್ರಕಾಯ ಧೀರ್ಘ ಶರೀರಿಯೆಂದು ಹೇಳುತ್ತಿದ್ದರು. ಕುಂದಿದ ದೇಹದಿಂದಿರುವ ಕಾರಣವೇನೆಂದು ಕೇಳಿದೆನು. ಅದಕ್ಕೆ ಈ ಹನುಮನು, ಅಯ್ಯ, ಅರ್ಜುನ ಭೂಪಾಲ! ಈ ಶರಧಿಗೆ ಸೇತುವೆಯನ್ನು ಎಪ್ಪತ್ತೇಳು ಕೋಟಿ ಕಪಿನಾಯಕರ ಮೊತ್ತದೋಳ್ ಬಳಲಿ ಎತ್ತರಮಾದ ಗಿರಿ ತರುಗಳನ್ನು ಕಿತ್ತು ನೆತ್ತಿಯೋಳ್ ಪೊತ್ತು, ಧೀರ್ಘಮಾದ ಯನ್ನ ಕಾಯವು ಕುಂದಿ ಇರುವುದೆಂದು ಹೇಳಿದನು. ಇಂಥಾ ಸೇತುವೆಯನ್ನು ಕಟ್ಟುವುದು, ನಿಮ್ಮಂಥ ಕಪಿಗಳಿಗೆ ದುಸ್ತರವೇ ಹೊರತು ನಮ್ಮಂಥವರಿಗೆ ಇದು ದೊಡ್ಡದಲ್ಲವೆಂದುಸುರಿ! ಈ ಶರಧಿಗೆ ಸೇತುವೆಯನ್ನು ಬಲಿಯುವೆನೆಂದುಸುರಿದೆನು. ಅದಕ್ಕವನು, ನೀನು ಕಟ್ಟಿದ ಸೇತುವೆಯನ್ನು ಒಂದೇ ಪಾದದಿಂದ ಮೆಟ್ಟಿ ಮುರಿಯದಿದ್ದರೆ ನಾನು ನೀನಿಟ್ಟ ಆಜ್ಞೆಯಂತಿರುವೆನೆಂದುಸುರಿದೆನು. ಅದಕ್ಕನುಮೋದಿಸಿ ನಾನು ಕಟ್ಟಿದ ಸೇತುವೆಯನ್ನು ಒಂದೇ ಪಾದದಿಂದ ನೀನು ಮೆಟ್ಟಿ ಮುರಿದಿದ್ದೇ ಆದರೆ ನಾನು ಅಗ್ನಿಯನ್ನು ಪೋಗುವೆನೆಂದು ಪ್ರತಿಜ್ಞೆಗೈದೆನು. ಅದರಂತೆ ನಾನು ಮೂರಾವರ್ತಿ ಸೇತುವೆಯನ್ನು ಬಂಧಿಸಿದ್ದಾಯಿತು. ಈ ಹನುಮಂತನು ಮೂರಾವರ್ತಿ ಮುರಿದದ್ದೂ ಆಯಿತು. ತತ್ಕಾರಣ ಅಗ್ನಿಯಂ ಪೋಗುವೆನೈ ಸ್ವಾಮಿ ಭೂಸುರೋತ್ತಮರೇ ॥