ದರುವುತ್ರಿವುಡೆ

ವನಜನೇತ್ರೆಯರಿರುವ ಸದನಕೆ
ಮುನಿಗಳನು ಕರೆ ತರುವ ಯೋಚನೆ
ಯನಗೆ ಸಮ್ಮತವಲ್ಲ ಯತಿಗಳ  ಮನವ ನಂಬುವುದು ॥

ಕೃಷ್ಣ: ಮನಸಿಜ ಪಾಲನಾದ ಅಣ್ಣಯ್ಯನೇ, ಲಾಲಿಸು, ವನ ನಿವಾಸಿಗಳಾದ ಮುನಿಗಳನ್ನು ವನಿತಾಮಣಿಯರಿರುವ ನಮ್ಮ ಅರಮನೆಗೆ ಕರೆತರುವ ವಿಷಯವು ಯನಗೆ ಅಸಮ್ಮತವಾಗಿ ತೋರುವುದು. ಘನಕುಟಿಲರಾದ ಮುನಿಗಳ ಮನವನ್ನು ಇನಿತಾದರೂ ನಂಬಲಾಗದು. ಅನುನಯದೊಳೆಮ್ಮಯ ಮಂದಿರಕ್ಕೆ ಸರ್ವಥಾ ಕರೆತರಲಾಗದೈಯ್ಯ ಅಣ್ಣನೇ ಅಮಿತ ಗುಣರನ್ನನೇ॥

ದರುವುತ್ರಿವುಡೆ

ಧರಣಿ ಕುಂಕುಮ ಪುರವ ಪಾಲಿಪ
ವರದ ನರಹರಿ ಯೆನುವ ಕೃಷ್ಣನೇ
ಸರಿಯಿದಲ್ಲವು ತಾಪಸರನೀ  ತೆರದಿ ಜರಿಯುವುದು ॥

ಬಲರಾಮ: ಅಹೋ! ವರ ಕಂಸಾರಿಯಾದ ಶ್ರೀ ವಧು ಪ್ರಿಯನೇ ಲಾಲಿಸು. ದುಷ್ಠನಾಗಲಿ, ದುರ್ಜನನಾಗಲಿ ಸುಗುಣನಾಗಲಿ ವಿದ್ವಾಂಸನಾಗಲಿ ಕಪಾಲ ದಂಡ ಕಮಂಡಲಧಾರಿಯಾದಂಥ ಮಹಾತ್ಮರೇ ಪೂಜ್ಯರು. ಅವರ ಗುಣದೋಷವನ್ನು ಎಣಿಸಲಾಗದು. ಶಿರಿಯ ಕುಂಕುಮನಪುರಿ ನರಕೇಸರಿಯೆನಿಪ ಶ್ರೀ ಕೃಷ್ಣಮೂರ್ತಿಯಾದ ನೀನು ಮುನಿವರನನ್ನು ಅರಮನೆಗೆ ಕರೆದುಕೊಂಡು ಬರಬಹುದೈಯ್ಯ ಮಾಧವಾ ಮಾಡದಿರು ತಾಪಸರ ಭೇದವಾ ॥

ಶ್ರೀಕೃಷ್ಣ: ಅಣ್ಣಾ! ಭಾವಜಪಾಲನಾದ ಬಲರಾಮನೇ. ಭಾವಜ್ಞರಾದ ನಿಮಗೆ ನಾ ವರೆಯುವುದೇನೆಂದರೇ ಈ ವಿಷಯದಲ್ಲಿ ನಿಮ್ಮ ಮನೋಭಾವವಿದ್ದಂತೆ ನಡೆಸಬಹುದೈ ಅಣ್ಣಾ ಕರುಣ ಸಂಪನ್ನ ॥

ಬಲರಾಮ: ಎಲೈ ಸಾರಥೀ. ಸಾರಸಾಪ್ತ ಶತಭಾಸಮಾನನಾದ ಮುರಾರಿಯ ಪೋಲ್ವ ಧೀರ ಮುನಿವರನನ್ನು ಚಾರುತರ ಶೃಂಗಾರ ಭರಿತಮಾದ ನಮ್ಮ ಅರಮನೆಗೆ ಕರೆತರಬೇಕಾದ ಪ್ರಯುಕ್ತ ಊರ ಪ್ರಜೆಗಳೆಲ್ಲಾ ಮಾರಪಿತನೊಡನೆ ಬರಬೇಕೆಂದು ಕೇರಿ ಕೇರಿಯೋಳ್ ಡಂಗೂರ ಬಾರಿಸೋ ಚಾರ ಯನ್ನ ಆಜ್ಞಾಧಾರ॥

ಸಾರಥಿ: ಇಂದಿನ ದಿನ ನಮ್ಮ ದೊರೆಯಾದ ಹಲಧರ ರಾಜರೊಂದಿಗೆ ನಂದನವನಕ್ಕೆ ತೆರಳಿ ಸುಂದರ ಮೂರ್ತಿಗಳಾದ ಯತಿವರ‌್ಯರನ್ನು ಎದಿರ್ಗೊಂಡು ಬರಲು ಮಂದಿ ಸಂದಣಿಯೆಲ್ಲಾ, ವಂದುಗೂಡಿ ತೆರಳಬೇಕು. ಮಂದಮತಿಯಿಂದ ಮಂದಿರದಲ್ಲಿ ನಿಂತಿದ್ದಾದರೆ ಒಂದು ನೂರು ರೂಪಾಯಿ ಜುಲ್ಮಾನೆಯನ್ನು ವಿಧಿಸಿ ಬಂದೀಖಾನೆಯಲ್ಲಿ ಇರಿಸುತ್ತಾರೆ ॥

(ಕಪಟ ಯತಿಯ ಬಳಿಗೆ ಬರುವಿಕೆ)

ದರುವು

ಪರಮಯತಿ ನಿಮ್ಮಯ  ಚರಣಕ್ಕೆ ವಂದಿಪೆನು
ನಿರುತದೀ ಪೊರೆಯೆಮ್ಮಾ  ಸದ್ಗುರು ನೀಂ                               ॥1 ॥

ಚಂದದೊಳೆಮ್ಮಯ  ಮಂದಿರಕ್ಕೀಗಲೇ
ಬಂದು ಪಾಲಿಸ ಬೇಕು  ನೀವೀಗಾ                                         ॥2 ॥

ಧರಣಿ ಕುಂಕುಮಪುರದ  ನರಹರಿ ಕೃಪಾಭರಿತ
ಎರಗುವೆನು ನಿಮ್ಮಡಿಗೇ  ತಾಪಸನೇ                                    ॥3 ॥

ಬಲರಾಮ: ಆಹಾ! ವರ ತಪೋಧನರಾದ ಮುನಿ ಶ್ರೇಷ್ಠರೇ! ಪರಿ ಪರಿ ಬೈಲವ್ಯಾಮೋಹವೆಂಬ ಕಾಷಾಯ ವೇಷಗಳನು ತೊಲಗಿಸಿ, ಸ್ಮರಸಿಜ ಮಿತ್ರನಂತೆ ಪರಿಶುದ್ಧಮಾದ ಸ್ಥಿರದಿಂ ಪ್ರಕಾಶಿಸುತ್ತಾ ವರ ತಪವಂ ಗೈದು ಶಿರಿಧರ ಪ್ರಿಯನ ಭಜಿಸುತ್ತಾ ಸುರನರರಿಂ ಸ್ತುತಿಸಿಕೊಳ್ಳುವ ಪರಮೇಶನಂತೆ ಪ್ರಕಾಶಿಸುತ್ತಾ ವರ ತೇಜೋಮಯದಿಂದಿರುವ ಮುನಿವರ‌್ಯನೇ! ಸರಸತರ ಕುಂಕುಮನ ಪುರಿ ಶಿರಿಮನೋಹರನ ಕೃಪಾಭರಿತರಾದ ನೀವು ಚರಣ ಸೇವಕನಾದ ನನ್ನ ಮೇಲೆ ಕರುಣವಿಟ್ಟು ಪುರಕ್ಕೆ ದಯಮಾಡಿಸಬೇಕೈ ಮುನಿಯೇ ವರ ತಪೋನಿಧಿಯೇ ॥

ದರುವುಧಾರಮ್ಮ ಜನನಿಯೇ

ಧರಣಿಪ ಯನ್ನಯ  ವಚನವ ಲಾಲಿಸು
ಪರಮ ಹರುಷದಿಂದಾ ॥
ಪರಿಪರಿ ಅಡವಿಯಾ  ಚರಿಸುತ್ತಿರುವೆನೂ
ನಿರುತದೀ ಲಾಲಿಪುದೈ                                                       ॥1 ॥

ವರಚತುರ್ಮಾಸದ  ಕ್ರತುವನು ನಾವಾ
ಚರಿಸಲು ಬೇಕಿನ್ನು ॥
ಪುರಕೈತಂದರೇ  ವರ ವ್ರತಕ್ರಮಗಳೂ
ಜರುಗುವುದ್ಯಾಗಿನ್ನೂ                                                         ॥2 ॥

ಯತಿ: ಎಲೈ ಧರಣೀಶನೇ ಲಾಲಿಸು! ಪರಿ ಪರಿ ವನದುರ್ಗ, ಗಿರಿಕುಂಟೆ ವಾಪಿ ಕೂಪ, ತಟಾಕಾದಿ ಸರಸಿಗಳು ಚರಿಸಿಕೊಂಡು, ವರ ಜಪ ತಪಸ್ಸನ್ನಾಚರಿಸುತ್ತಿರುವ ಮುನಿವರರು ಪುರಕ್ಕೆ ಬರುವುದುಂಟೇ. ಸರಿಸರಿ ನಿಮಗ್ಯಾಕೆ ನಮ್ಮಯ ತಂಟೇ, ಎಲೈ ದೊರೆಯೇ ನಿನ್ನ ವರ ವಚನವಂ ಮಾರದೇ ಬಂದರೇ, ವಿರಚಿಸುವ ನಮ್ಮ ಚತುರ್ಮಾಸದ ಪೂಜೆಗೆ ತಕ್ಕ ಸಾಮಗ್ರಿಗಳನ್ನು ಒದಗಿಸಿಕೊಟ್ಟು ಸೇವೆ ಸತ್ಕಾರಗಳಂ ಗೈಯುವರು ಧಾರು ? ಎಲೈ ಧರಣೀಶನೇ, ನಮ್ಮ ಸಂದರ್ಭಗಳು ಹೀಗಿರುವುದರಿಂದ ಅರಮನೆಗೆ ಬರಬೇಕೆಂಬ ವಿಷಯವನ್ನು ನೀನೇ ಯೋಚಿಸಬಹುದೈಯ್ಯ ರಾಜ ಸರಸಿಜ ಸಖತೇಜ ॥

ದರುವು

ಯೇನು ಸಂಶಯ  ಬೇಡಿ ನಿಮಗೇ  ಮಾನ ನಿಧಿಗಳೇ
ನಾನು ನಿಮ್ಮ  ಸೇವೆ ಗೈವೇ  ಮುನಿಪ ಈಗಲೇ                        ॥1 ॥

ಬಲರಾಮ: ಓ, ಮಹನೀಯರೇ, ತಾಮಸವಿಲ್ಲದೇ ನಮ್ಮ ಅರಮನೆಗೆ ದಯಮಾಡಿಸಿದ್ದಾದರೆ ಚಂದದಿಂ ತಮ್ಮ ಜಪತಪಾದಿ ಕ್ರಿಯೆಗಳಿಗೆ ತಕ್ಕ ಸಾಮಗ್ರಿಗಳನ್ನೊದಗಿಸಿಕೊಡುವೆನು, ಪ್ರೇಮವಿಟ್ಟು ಆಗಮಿಸಬೇಕೈ ದೇವಾ ಕರುಣ ಪ್ರಭಾವ ॥

ದರುವು

ನರಪತಿ ನಿನ್ನಯ  ವಚನವು ಮನಕೆ
ಪರಿತೋಷಿಸುತಿಹುದೈ
ಧರೆ ವರ ಕುಂಕುಮ  ಪುರದ ನೃಸಿಂಗನಾ
ಕರುಣ ಕಟಾಕ್ಷವಿದೇ                                                           ॥3 ॥

ಯತಿ: ಎಲೈ ಧರಣೀಶನೇ! ಕರುಣಾರಸದಿಂ ನೀನು ಸಂತೋಷಕರಮಾದ ವಚನವಂ ಪೇಳಿದ್ದರಿಂದ ಅರಮನೆಗೆ ಬರಬೇಕಾಯ್ತು, ವರ ತಪಗೈಯಲು, ಆಗತಕ್ಕ ಕರ್ತವ್ಯಗಳನ್ನು ಪರಮಾನಂದದಿಂದ ನಡೆಸುವ ಕಾರ‌್ಯಭಾಗ ನಿನ್ನದಾಗಿರುವುದು. ಸುರ ನಮಿತನಾದ ಕುಂಕುಮನಪುರಿ ನೃಸಿಂಗನೆನ್ನುವ ಶ್ರೀಹರಿಯು ಕರುಣದಿಂ ಪರಿಪಾಲಿಸುವನೈ ರಾಜ ಭಾಸ್ಕರತೇಜಾ ॥

ಬಲರಾಮ: ಭಲಾ, ಸಾರಥೀ! ಕಳೆಯುಳ್ಳ ಘನ ತಪಸ್ವಿಗಳನ್ನು ತಳುವದೇ ಯಮ್ಮ ನಿಳಯಕ್ಕೆ ಕರೆ ತಂದದ್ದಾಯಿತು. ಥಳಥಳಿಸುವ ಆತನ ತಳಿರಡಿಗಳನ್ನರ್ಚಿಸಲು ನಳಿನಮುಖಿಯಾದ ಯಮ್ಮ ಅನುಜೆ ಸುಭದ್ರಾದೇವಿಯನ್ನು ಘಳಿಲನೇ ಕರೆದುಕೊಂಡು ಬಾರೋ ಸಾರಥೀ ॥

 

(ಸುಭದ್ರಾದೇವಿ ಬರುವಿಕೆ)

ದ್ವಿಪದೆಕಾಂಭೋದಿ ರಾಗ

ಶ್ರೀವನಜ ದಳ ನೇತ್ರೇ  ಪಾವನ ಸುಗಾತ್ರೇ
ಗೋವರ್ಧನೋದ್ಧರನ  ವರಸಹೋದರಿಯೂ
ತೀವಿದ ತನುಜಾಯೇ  ದೇವಕೀ ತನಯೇ
ನಾರಿ ಶಿರೋಮಣಿಯು  ಸೌಂದರ‌್ಯದಾಗಣಿಯು
ಚಾರು ಹರುಷದಲಿ ಉದಕ ಮಜ್ಜನವಗೈದೂ
ಸರಸತರ ಪಟ್ಟೆ ಪೈಠಣೆ ಸೀರೆಯನುಟ್ಟೂ
ಸರಸ ಸುಂದರ ಸುದತಿ  ಕಂಚುಕವ ತೊಟ್ಟು
ಪದಕ ಕಂಠೀಹಾರ ಕೊರಳೊಳಳವಟ್ಟೂ
ಕರದೊಳಗೆ ವರ ಬಾಜಿ ಬಂದು ವಪ್ಪುತಲೀ
ಕರಿವೈರಿ ಸಮವಾದ ಕಟಿಯ ಮಧ್ಯದಲೀ
ಸುರಚಿರ ಡಾಬು ಬಿಂಕದೊಳೊಪ್ಪುತಿರಲೂ
ಮೆರೆವ ಪಾದದಿ ಗೆಜ್ಜೆ ಪಿಲ್ಲಿಯಾ ನಿಟ್ಟೂ
ಸರಸತರ ಕೆನ್ನೆಗಳಿಗರಿಸಿನವ ಪೂಸೀ
ವರ ಲಲಾಟದೊಳು ಕಸ್ತೂರಿ ತಿಲಕವನಿಟ್ಟೂ
ಧರೆಯೊಳು ಕುಂಕುಮನ ಪುರವಾಸನಾದ
ನರಸಿಂಹ ಮೂರ್ತಿಯ ಪಾದಪದ್ಮವ ಸ್ಮರಿಸುತಲೀ
ಪರಮ ಹರುಷದಿ ಬಂದು ತೆರೆಯೊಳಗೆ ನಿಂದಳೂ ॥

ದರುವು

ಸಾರಸಾಕ್ಷೀ ತೋರಿಸಮ್ಮಾ  ಧೀರಾ ಬಲರಾಮನನ್ನೂ
ಕರೆಸಿ ಇರುವ ಕಾರ‌್ಯವೇನು  ಅರಿತು ಯನಗೆ ಪೇಳು ಸಖಿಯೇ ॥1 ॥

ಇಂದೀವರಾಕ್ಷಿ ಶ್ರೀ ಗೋ  ವಿಂದನಗ್ರಜನ ಯನಗೆ
ತಂದು ತೋರಲು ತ್ವರಿತ  ಬಂದಿಯ ಕೊಡುವೆ ನಿನಗೆ                ॥2 ॥

ಧರಣಿ ಶ್ರೀ ಕುಂಕುಮಾನ  ಪುರಲಕ್ಷ್ಮೀಕಾಂತನೆನುವ
ನರಸಿಂಹಾ ಮೂರ್ತಿ ನಿನ್ನ  ಭರದಿ ಮೆಚ್ಚುವನಮ್ಮಾ                   ॥3 ॥

ಸುಭದ್ರೆ: ಅಪ್ಪಾ ಮಾನುಷ್ಯನೇ ಹೀಗೆ ಬಾ. ಅಪ್ಪಾ ಮಾನುಷ್ಯನೇ! ಸರ್ಪ ಶಯನನ ಪಾದ ಪದ್ಮಗಳನ್ನು ತಪ್ಪದೆ ಪೂಜಿಸುತ್ತಿರುವ ಪುರುಹೂತನಾಸ್ಥಾನದಂತೆ ಪರಿಶೋಭಿಸುತ್ತಿರುವ ಅಹೋ ಸಚಿವಾ ಈ ವರ ಸಭಾಸ್ಥಾನದೋಳ್ ನಿಂತು ನೀವ್ಯಾರೆಂದು ಬೆಸಗೊಳ್ಳುವ ಮಾನುಷ್ಯ ನೀ ಧಾರೈಯ್ಯ ಸಜ್ಜನ ಪ್ರಿಯಾ ॥

ಅಪ್ಪಾ! ಸಾರಥೀ! ಧಾರುಣಿಯ ಮಧ್ಯದಲ್ಲಿ ಒಪ್ಪುವ ಚಾರುತರ ಮಾದ ದ್ವಾರಕಾಪುರವನ್ನು ಧೀರತ್ವದಿಂ ಪರಿಪಾಲಿಸುತ್ತಿರುವ ದುರಧೀರ ವಸುದೇವನ ಪುತ್ರ ಸಾರಸಾಕ್ಷಿ ರುಕ್ಮಿಣೀ ಮನೋ ಪ್ರೀತನಾದ, ಚಾರು ಹರುಷದಿಂ ಶೋಭಿಸುವ ನಾರಾಯಣನ ಸಹೋದರೀ, ಸುಭದ್ರಾ ದೇವಿಯೆಂದು ತಿಳಿಯಪ್ಪಾ ಸಾರಥೀ॥

ಈ ವರ ಸಭೆಗೆ ಬಂದ ಕಾರಣವೇನೆಂದರೆ ಇಂದಿನ ದಿನ ಯನ್ನ ಅಗ್ರಜನಾದ ಬಲಭದ್ರ ರಾಜನು ಕರೆಸಿದ ಪ್ರಯುಕ್ತ ಬಾಹೋಣವಾಯ್ತು ಚರಣ ದರುಶನವನ್ನು ಮಾಡಿಸಪ್ಪಾ ಸಾರಥೀ ॥

ಕಂದ

ವರ ರೇವತಿಯರಸನೇ ಬಿನ್ನಪಾ
ಧರೆಯಾಣ್ಮರೊಳಧಿಕ ಶೂರ ಹರಿಯಗ್ರಜನೇ ॥
ತರಣಿ ಶತಭಾ ಸಮಾನನೇ
ಎರಗುವೆ ತವ ಚರಣಕೀಗಾ ಧರಣಿಪ ಬೇಗಾ                            ॥1 ॥

ಸುಭದ್ರೆ: ಇದೇ ಶಿರಸಾಷ್ಠಾಂಗ ಬಿನ್ನಪಂಗಳೈ ಅಣ್ಣಾ ಕರುಣಾಗ್ರಗಣ್ಯ.

ಬಲರಾಮ: ಧೀರ್ಘಾಯುವಾಗಲಮ್ಮ ತಂಗೀ ಮಂಗಳಾಂಗೀ ॥

ಸುಭದ್ರೆ: ಸನ್ನುತಗುಣ ಸಂಪನ್ನನಾದ ಅಣ್ಣಯ್ಯನೇ ಲಾಲಿಸು. ಕನ್ಯಕಾಮಣಿಯರಾದ ಸಖಿಯರೊಡನೆ ಸೇರಿ ಬಿನ್ನಾಣದಿಂದಾಡುತ್ತಿದ್ದ ಸನ್ನುತಾಂಗಿಯಳನ್ನು ಈ ಸಭೆಗೆ ಕರೆಸಿದ ಕಾರಣವೇನು? ಚೆನ್ನಾಗಿ ವಿವರಿಸೈ ಅಣ್ಣನೇ ವರ ಬಲದೇವನೇ ॥

ದರುವು

ವಿಧು ಸಮವದನೆಯೇ  ಮುದದಿಂದ ಕರೆಸಿದಾ
ಹದನ ಪೇಳುವೆ ಕೇಳೆ  ಅನುಜೇ ॥
ಮದನಾರಿ ದಯದಿಂದ  ಸದನದಿ ಶುಭಕಾರ‌್ಯ
ಉದಿಸಿರುವುದು ಕೇಳೇ  ಅನುಜೇ                                         ॥1 ॥

ಬಲರಾಮ: ಮಂಗಳ ತರಂಗಿಯಾದ ಹೇ ತಂಗಿ ಸುಭದ್ರಾ! ಹಿಂಗದೆ ನಿನ್ನ ಕರೆಸಿದ ಸಂಗತಿಯೇನೆಂದರೆ ಅಂಗಜಾರಿ ದಯದಿಂದ ಯಮ್ಮ ಸದನದೋಳ್ ಮಂಗಳಪ್ರದಮಾದ ಶುಭಕಾರ‌್ಯಂಗಳೆಸಗಿರುವೆನು. ಹಿಂಗಿತವರಿತು ತತ್ಕಾರ‌್ಯಂಗಳನ್ನು ಸಾಂಗಪಡಿಸಬೇಕಮ್ಮಾ ಅನುಜೇ ವಸುದೇವ ತನುಜೇ ॥

ದರುವು

ಹರಿಣಲೋಚನೇ ಕೇಳು  ವರ ಯತೀಶ್ವರನನೂ
ಕರೆ ತಂದಿಹೆನಮ್ಮಾ  ಕೇಳಮ್ಮಾ
ಧರೆಯೊಳಗತಿಶಯ  ಗುರು ಸೇವೆ ದೊರೆವುದೂ
ವಿರಚಿಸಾತನ ಸೇವೇ  ಅನುಜೆ ॥

ಬಲರಾಮ: ಅಮ್ಮಾ! ಹರಿಣಲೋಚನೆಯಾದ, ಹೇ ತರುಣಿ ಸುಭದ್ರಾ! ಸ್ಮರ ವೈರಿ ಸಮರೂಪನಾದ ಮುನಿಯೋರ್ವನನ್ನು ಯಮ್ಮ ಅರಮನೆಗೆ ಕರೆ ತಂದಿರುವೆನು. ಧರೆಯೊಳು ಗುರು ಸೇವೆ ದೊರೆಯುವುದು ದುರ್ಲಭವಾಗಿರುವುದರಿಂದ ಹರುಷದಿಂದ ವರ ಚರಣ ಸರಸಿಜನನರ್ಚಿಸಲು ಪರಿ ಪರಿ ವಸ್ತುಗಳನ್ನೊದಗಿಸುವ ಪ್ರಯುಕ್ತ ನಿನ್ನನ್ನು ಕರೆಸಿದೆನು. ಪರಿಯರಿತು ಮತಿಪೂರ್ವಕದಿಂದ ವರ ಸೇವೆಯಂಗೈದು ಗುರುಗಳ ಕರುಣವಂ ಪಡೆಯಬೇಕಮ್ಮ ತಂಗೀ ಮಂಗಳಾಂಗೀ ॥

ದರುವು

ಧರಣಿ ಕುಂಕುಮಪುರದ  ವರದ ನೃಸಿಂಗನಾ
ಕರುಣದಿಂದಲಿ ಮುನಿಯಾ  ಯತಿಯಾ ॥
ಚರಣ ಸೇವೆಗಳನ್ನಾ  ಚರಿಸುತ ಭಕ್ತಿಯೊಳು
ಇರು ನೀನು ಲಲಿತಾಂಗೀ  ಹೇ ತಂಗೀ ॥

ಬಲರಾಮ: ಅಮ್ಮಾ! ಸರಸಿಜ ಗಂಧಿಯಾದ ಹೇ ಅನುಜೆ ವಸುದೇವ ತನುಜೆ! ಧರಣಿಯ ಮಧ್ಯದಲ್ಲಿ ಪರಿಶೋಭಿಸುತ್ತಿರುವ ಸರಸತರ ಕುಂಕುಮನ ಪುರಿವರ ಸಿರಿ ಮನೋಹರನಾದ ನರಕೇಸರಿ ಶ್ರೀಕೃಷ್ಣನ ಕರುಣ ಕಟಾಕ್ಷದಿಂದ ಗುರುಗಳಾಚರಿಸುವ ದೇವತಾರ್ಚನೆಗೆ ವರ ಜಪ ತಪ ಕ್ರಿಯೆಗಳಿಗೆ ತಕ್ಕ ಪರಿಸಾಮಗ್ರಿಗಳನ್ನೊದಗಿಸಿಕೊಂಡು ವರ ಋಷಿಗಳ ವಚನವಂ ಮೀರದೆ ಪರಮ ಸದ್ಭಕ್ತಿ ಪೂರ್ವದಿಂ ವರ ತಪೋಧನರ ಚರಣ ಕಮಲಗಳ ಸೇವೆಯಂ ಮಾಡಿಕೊಂಡಿರಬೇಕಮ್ಮಾ ತಂಗೀ ವಿಮಲಾಂಗೀ॥

ದರುವು

ಕರುಣಿಸಣ್ಣನೇ ಹಲಧರ ನೃಪಾಲನೇ ॥ಪ ॥
ಧರಣಿಪಾಲ ನಿಮ್ಮ ವಚನ
ಶಿರದೊಳಾಂತು ನಡೆಸುವೆನೂ ॥
ಪರಮಮುನಿ ವರನ ದಿವ್ಯ
ಚರಣಸೇವೆ ನಡೆಸುತಿಹೆನೂ                                                ॥1 ॥

ಸುಭದ್ರೆ: ಅಣ್ಣಾ! ಹಲಧರ ಭೂಪಾಲನೇ ಲಾಲಿಸು, ಹಿರಿಯರಾದ ನೀವು ಪೇಳಿದ ವಚನವನ್ನು ಶಿರದೊಳಾಂತು ನಡೆಸುವೆನು. ಮತ್ತು ವರ ತಪೋಜ್ಞರಾದ ಮುನಿವರನ ಚರಣ ಸರಸಿಜವನರ್ಚಿಸಲು ಪರಿ ಪರಿ ಕಾರ‌್ಯ ಭಾಗಗಳು ನಿಮ್ಮವರ ಮನಸ್ಸಿಗೆ ಮುದ ಪಕ್ವವಾಗುವ ರೀತಿ ಸದನದೊಳಾಚರಿಸುವೆನು. ಇದಕ್ಕೆಷ್ಟು ಮಾತ್ರವೂ ಯೋಚಿಸಲಾಗದೈ ಅಣ್ಣನೇ ವರ ಅಗ್ರಗಣ್ಯನೇ ॥

ದರುವು

ಯತಿಯ ಪಾದ ಪೂಜಿಸಿದರೆ
ಅತಿಶಯದ ಸ್ವರ್ಗವಿಹುದು ॥
ವ್ರತಕ್ಕೆ ತಕ್ಕ ವಸ್ತುಗಳನು
ಹಿತದಿ ನಾನು ಒದಗಿಸುವೆನು                                               ॥2 ॥

ಸುಭದ್ರೆ: ಕ್ಷಿತಿಪತಿ ಸನ್ನುತನಾದ ಬಲದೇವನೇ ಲಾಲಿಸು. ಪತಿತ ಪಾವನರಾದ ಯತಿವರ‌್ಯರ ಪದಕಮಲವನ್ನು ಅತಿಭಕ್ತಿಯಿಂ ಪೂಜಿಸಿದ್ದಾದರೆ ಶತಕೋಟಿ ದುರಿತಗಳು ತೊಲಗಿ ಅತಿಶಯಮಾದ ಮೋಕ್ಷಗತಿ ಕೈ ಸೇರುವುದು, ತತ್ಕಾರಣ ಯತಿಗಳ ವ್ರತ ಪೂಜೆಗೆ ತಕ್ಕ ಅತಿಶಯ ವಸ್ತುಗಳನ್ನು ಅತಿ ಹಿತದಿಂದೊಗಿಸ ಬಹುದೈ ಬಲರಾಮ ರಾಜ ಜಲಜಸಖತೇಜಾ ॥

ದರುವು

ಭೂಮಿ ಕುಂಕುಮಾನ ಪುರದ
ಸ್ವಾಮಿ ಕೃಷ್ಣರಾಯ ನವಗೇ ॥
ಪ್ರೇಮದಗ್ರಜನೇ ನಿಮ್ಮಾ
ನೇಮವನ್ನು ಮೀರುತಿಹೆನೇ                                                 ॥3 ॥

ಸುಭದ್ರೆ: ಅಣ್ಣಾ! ಕರುಣಾಕರ, ಜಲಧಿ ಚಂದಿರನಾದ ಹಲಧರ ರಾಜೇಂದ್ರನೇ, ಲಾಲಿಸು, ದುರಿತ ದೂರನಾದ ಕುಂಕುಮನ ಪುರಿ ಲಕ್ಷ್ಮೀವರನ ಕಟಾಕ್ಷದಿಂ ಪರಮ ಋಷಿವರರ ಚರಣ ಸರಸಿಜಗಳನ್ನು ಸ್ಥಿರ ಚಿತ್ತದಿಂದರ್ಚಿಸಲು ವರ ಸಹೋದರಿಯಾದ ನಾನು ಸಿದ್ಧಗಳಾಗಿರುವೆನೈ ಅಗ್ರಜಾ ಬಲಭದ್ರರಾಜ॥

ಕೃಷ್ಣ: ಅಹೋ ಅಗ್ರಜ. ಬಲರಾಮ, ರಾಜ  ಮಹಿಪಾಲಕನಾದ ನೀನೂ, ಬಹಳ ಗೌರವವುಳ್ಳ ಆಲೋಚನೆಯನ್ನೆಸಗಿ ವನ ನಿವಾಸಿಯಾದ ಕುಹಕ ಯತಿಯನ್ನು ನಮ್ಮ ಅರಮನೆಗೆ ಕರೆ ತಂದದ್ದು ಉಚಿತವಲ್ಲವೂ. ಅಹಿರಾಜ ವೇಣಿಯಾದ ಯಮ್ಮ ಸಹೋದರಿಯಳನ್ನು ಕಪಟ ಸನ್ಯಾಸಿಯ ಸೇವೆಗೆ ಇರಿಸುವುದಾಗಿ ತಿಳಿದೆನು. ಅಹೋ ಅಗ್ರಜ! ಬಹುಗುಣ ಶೀಲೆಯಾದ ನಮ್ಮ ಸಹೋದರಿಯಳನ್ನು, ಯತೀಶನ ಸನ್ನಿಧಿಯೊಳಿರಿಸುವುದು ಯುಕ್ತವಲ್ಲವೈ ಹಲಧರಾ ದ್ವಾರಕಾಪುರಿವರ ॥

ಬಲರಾಮ: ಅಹೋ ಮಾಧವ! ಕೇಳೆನ್ನ ಮೃದು ಮಧುರೋಕ್ತವಾ, ಕ್ರೋಧ, ಲೋಭ, ಕಾಮ, ಮೋಹ, ಮದ, ಮತ್ಸರಾದಿ ಸಪ್ತ ವ್ಯಸನಗಳನ್ನು ಛೇದಿಸಿದ ಸಾಧು ಗುಣಯತಿಯಾದ ಯತೀಶನನ್ನು ದೂಷಿಸಲಾಗದು. ಆದಿಮೂಲಗಳ ತಿಳಿಯುವ ಮಧುಸೂದನನಾದ ನೀನೀ ಪರಿ ವಾದಿಸಲಾಗದು. ಸಾದರದಿಂದ ಋಷಿವರನ ಪಾದವನ್ನರ್ಚಿಸಿದ್ದಾದರೇ ಮೇಧಿನಿಯೋಳ್ ನಮ್ಮ ಯಾದವ ಕುಲವೆಲ್ಲಾ ಪವಿತ್ರವಾಗುವುದೈ ಶ್ರೀಪತಿ ರುಕ್ಮಿಣೀ ಪತಿ ॥

ಕೃಷ್ಣ: ಭಾವಜ ಪಾಲನಾದ ಬಲದೇವನೇ ಲಾಲಿಸು, ಈ ವಿಧಮಾಗಿ ನೀವು ಅಪ್ಪಣೆಯಿತ್ತರೆ ಯನ್ನಿಂದೇನಾಗುವುದು. ಈ ವಿಷಯದಲ್ಲಿ ಮುಂದಾಗುವ ಕಾರ‌್ಯಭಾಗಗಳನ್ನು ಪಾವಕಾಕ್ಷನಾದ ಪರಶಿವಮೂರ್ತಿಯೇ ಬಲ್ಲನು, ಇದಂತಿರಲಿ, ಈ ವಸುಧೆಯೋಳ್ ನಾವು ಪ್ರತಿ ವರುಷವೂ ನಡೆಸುವ ವನಭೋಜನದ ಕಾರ‌್ಯಗಳನ್ನು ನಡೆಸುವುದಕ್ಕೆ ಅಪ್ಪಣೆಯೇನಾಗುತ್ತೆ, ಪೇಳಬೇಕೈ ಅಣ್ಣಾ ಅಮಿತ
ಗುಣರನ್ನ ॥

ಬಲರಾಮ: ತತ್ಕಾರ‌್ಯವನ್ನು ಶೀಘ್ರಪಡಿಸಬೇಕೈಯ್ಯ ಅಚ್ಯುತಾ ಇದು ಎನಗೆ ಸಮ್ಮತ ॥

ಕೃಷ್ಣ: ಎಲೈ ದೂತ ಶಿಖಾಮಣಿಯೇ ಕೇಳು! ಪ್ರೀತಿಯಿಂದ ನಾವು ಪುರಾತನದಿಂದ ಪ್ರತಿ ವರುಷವು ನಡೆಸುವ ಪ್ರಖ್ಯಾತಮಾದ ವನದೇವತೆ ಅರ್ಚನೆಗೆ ಈ ಕ್ಷಣ ಪುರಪ್ರಜೆ ವೃದ್ಧಬಾಲರಾದಿಯಾಗಿ ಸರ್ವರೂ ವನಕ್ಕೆ ತೆರಳುವಂತೆ ಡಂಗೂರ ಮೂಲಕ ಪ್ರಸಿದ್ಧಿಪಡಿಸೋ ದೂತ ರಾಜ ಸಂಪ್ರೀತ ॥

ಸಾರಥಿ: ಈ ದಿನ ಆರಾರು ಘಂಟೆಗೆ ಸರಿಯಾಗಿ ಮಾಧವ ಹಲಧರ ಭೂಪಾಲರೊಂದಿಗೆ ಸರ್ವರೂ ವನದೇವತೆ ಅರ್ಚನೆಗೆ ತೆರಳಬೇಕು, ಬಾರದೇ ನಿಂತದ್ದಾದರೆ ನೂರು ರೂಪಾಯಿ ಜುಲ್ಮಾನೆಯನ್ನು ವಿಧಿಸಿ ಕಾರಾಗೃಹದೊಳಿರಿಸುತ್ತಾರೆ. ಸರ್ವರೂ ತಿಳಿಯುವುದು ॥

ಕಂದ

ಪದುಮಾಕ್ಷಿ ಕೇಳು ಪೇಳ್ವೆಂ
ವಿಧುಧರನರ್ಚನೆಗೆ ತಕ್ಕ ವಸ್ತುಗಳನೀಗಳ್ ॥
ವದಗಿಪರ‌್ಯಾರೆನಗಂ
ಸುದತೀ ಮಣೀ ಕಾಲಾತೀತವಾಗುತಲಿದಿಕೋ                         ॥1 ॥

ಯತಿ: ಎಲೈ ಪದುಮಾಕ್ಷಿಯೇ! ಸದನದಲ್ಲಿರುವ ಸುದತೀ ಮಣಿಯಳು ಧಾರು? ಮದನಾರಿಯ ಸೇವೆಗೆ ವೇಳೆಯಾಯಿತಲ್ಲಾ. ಇದಕ್ಕೆ ಬಲರಾಮರಾಜರು ಧಾರನ್ನು ನೇಮಿಸಿ ಇರುವನೋ ಕಾಣೆನು. ನದಿವನಗಳಲ್ಲಿ ವಾಸವಾಗಿರ್ದ ನಮ್ಮನ್ನು ಸದನಕ್ಕೆ ಕರೆದೊಯ್ದು ಈ ವಿಧಗೈದನೇ ಶಿವ ಮಹಾದೇವಾ-ಪದುಳ ತವಕದಿಂದವಗೇ ವಿಧಿಸುವೆ ನೋಡೀಗ ಶಾಪವಾ ॥

ಕಂದ

ಮುನಿವರ ಕೋಪಿಸಲಾಗದು
ವಿನಯದಿ ತವಸೇವೆಗೆನ್ನ ನಿರಿಸಿಹನಣ್ಣನೂ ॥
ಘನಪಾದ ವನಜ ಕೊಂದಿಪೆ
ಮುನಿ ಮೌಳಿಯೇ ಕ್ಷಮಿಸೀಗಲೆನ್ನಪರಾಧವನೂ                       ॥1 ॥

ಸುಭದ್ರೆ: ಹೋ, ಮುನಿ ಮುಹಾತ್ಮರೇ, ಯಮ್ಮ ಅಣ್ಣನಾದ ಹಲಧರ ಭೂಪಾಲನು ತಮ್ಮ ಪಾದ ಸೇವಾ ವೃತ್ತಿಗೆ ಯನ್ನನ್ನು ನೇಮಿಸಿರುವನು. ನೀವು ಕೋಪಿಸಲಾಗದೈ ಸ್ವಾಮಿಯೇ ಭಕ್ತಜನ ಪ್ರೇಮಿಯೇ॥

ಯತಿ: ಎಲೈ ಸಾರಸಾಕ್ಷಿಯೇ! ಮಾರ ವೈರಿಯ ಸೇವೆಗೆ ನಾವು ನಿರುತವು ಇರುವೆವು. ಚಾರುತರಮಾದ ಪಂಚಪಾತ್ರೆ, ತೀರ್ಥ ಬಟ್ಟಲು, ಉದ್ಧರಣೆ, ಆಹ್ನಿಕದ ತಟ್ಟೆ ಇವೆಲ್ಲವನ್ನೂ, ಶುದ್ಧಿಯಾಗಿ ತೊಳೆದು ಸಿದ್ಧಪಡಿಸು. ಬಂಗಾರಮಯ ರತ್ನ ಖಚಿತಮಾದ ಶೃಂಗಾರದ ಪೀಠವನ್ನು ಪೂರ್ವಾಭಿಮುಖವಾಗಿ ತಂದಿಡು. ಸ್ನಾನಾ ನಂತರ ಮುಂದಿನ ಕಾರ‌್ಯಭಾಗಗಳನ್ನು ಆಚರಿಸುತ್ತೇನೆ॥

ಸುಭದ್ರೆ: ಇಕ್ಷು ಚಾಪ ವೈರಿಯ ಜಪಿತರಾದ, ಪಾಲಾಕ್ಷನ ಪೋಲ್ವ ಲಕ್ಷಣವುಳ್ಳ ತಪೋಜ್ಞನೇ, ಮೋಕ್ಷ ಮಾರ್ಗ ಯೋಗಾಪೇಕ್ಷೆಯೋಳ್ ದಕ್ಷರಾದ ತಾವು ನಿಯಮಿಸಿದಂತೆ ಅಕ್ಷತೆ ಬಟ್ಟಲು ಮೊದಲಾದ ಪಾತ್ರೆಗಳನ್ನು ಲಕ್ಷಣವಾಗಿ ತೊಳೆದು ತಕ್ಷಣ ಸಿದ್ಧಪಡಿಸಿರುವೆನು. ಈಕ್ಷಿಸಿ ತಮ್ಮ ಮೋಹಾಪೇಕ್ಷೆಯಂತೆ ತಪಕ್ಷೇಮೆಯಂ ಕಟಾಕ್ಷದಿಂದಾಚರಿಸಬಹುದೈ ಸ್ವಾಮಿ ಶರಣು ಜನಪ್ರೇಮಿ ॥

ಯತಿ: ಹೇ ನಾರಿ! ಗರುಡಧ್ವಜನ ಸಹೋದರೀ. ನೀನು ಮಾಡಿದ ಸೇವಾ ವೃತ್ತಿಗೆ ನಾನು ಪರಿಪರಿ ಸಂತೋಷ ಹೊಂದಿದವನಾದೆನು. ಹೇ ಮೀನಾಕ್ಷಿಯೇ! ಯನ್ನೀಪಾತ್ರೆಗಳನ್ನು ಒಳಗೆ ದೇವತಾರ್ಚನೆಯ ಸಮೀಪದಲ್ಲಿಟ್ಟು ಬಾ. ಇನ್ನೂ ಅನೇಕ ಕಾರ‌್ಯಗಳುಂಟು. ಅದನ್ನು ಸೂಚಿಸುತ್ತೇನೆ॥

ಸುಭದ್ರೆ: ಪೂಜ್ಯರೇ! ತಮ್ಮ ಆಜ್ಞೆ ಪ್ರಕಾರ ಸಮಸ್ತ ವಸ್ತುಗಳನ್ನು ದೇವತಾರ್ಚನೆಯ ಸಾಮಾನಿನ ಸಮೀಪದಲ್ಲಿಟ್ಟು ಬಂದೆನು. ಮುಂದೇನಪ್ಪಣೆಯಾಗಲಿ ಯತಿಯೇ ಸರ್ವಜ್ಞಮತಿಯೇ ॥

ಯತಿ: ಹೇ ಲಲಿತಾಂಗಿಯೇ ಈ ಪೀಠವನ್ನಲಂಕರಿಸು ಹೇಳುವೆನು ॥

ದರುವು

ತರುಣಿ ಮಣಿಯೇ  ನಿನ್ನ ನೋಡಿ  ಹರುಷವಾಯಿತು
ಸರಸಿಜಾಕ್ಷೀ  ಮನವು ನಿನ್ನೊಳೆರಕವಾಯಿತು                         ॥ಪ ॥

ನಿನ್ನೋಳ್ಮಾತು  ನಡೆಸಬೇಕು  ಯನ್ನು ವಾಶೆಯೂ
ಯನ್ನ ಮನದೋ  ಳಿಹುದು ಪೇಳೆ  ನಿನ್ನಭಿಷ್ಠೆಯೂ                     ॥1 ॥

ಯತಿ: ಎಲೈ ಪನ್ನಗವೇಣಿಯಾದ ಕನ್ಯಕಾಮಣಿಯೇ, ನಿನ್ನ ಮನ್ನಣೆಯ ವಾಕ್ಯವು, ನಿನ್ನ ಮನೋಭಾವವು ಇವುಗಳನ್ನು ನೋಡಿ, ಯನ್ನ ಮನಕಾನಂದವಾಯಿತು. ಹೇ, ಸನ್ನುತಾಂಗಿಯೇ, ಯನ್ನ ಜಪ ತಪಾದಿ ಕ್ರಿಯೆಗಳಿಗೆ ಭಿನ್ನತೆ ಬಂದರೂ ಬರಲಿ, ಮನ್ನಣೆಯಿಂದ ನಿನ್ನೊಡನೆ ಕೆಲವು ಸಂಭಾಷಣೆಗಳನ್ನು ನಡೆಸುವೆನು. ಚೆನ್ನಾಗಿ ಲಾಲಿಸೆ ತರುಣಿ ಮನ್ಮಥನರಗಿಣಿ ॥

ಸುಭದ್ರೆ: ಗುರುಗಳೇ! ಅದೇನು ವಿಷಯವಾದಾಗ್ಯೂ ಯನಗೆ ಸಮ್ಮತ. ಸಂಶಯವಿಲ್ಲದೆ ಅಪ್ಪಣೆಯಂ ದಯಪಾಲಿಸಿ ಸ್ವಾಮೀ – ಭಕ್ತಜನ ಪ್ರೇಮಿ ॥

ದರುವು

ಧರಣಿಯೊಳಗೆ  ನಿನ್ನ ಪೋಲ್ವ  ತರುಣಿಯಿಲ್ಲವೇ
ಸರಸಿಜಾಕ್ಷೀ  ನಿನಗೆ ತಕ್ಕ  ವರ ನಾನಲ್ಲವೇ                            ॥2 ॥

ಯತಿ: ಹರಿಣಲೋಚನೆಯಾದ ತರುಣಿಯಳೇ ಕೇಳು, ವರಗುಣರೂಪ ಶಾಂತ ಶಮಾ, ದಮ, ದಯೆ ಯೆಂಬ ಕರುಣಾ ರಸದಲ್ಲಿ ನಿನಗೆ ಸರಿಯಾದ ತರುಣಿಯಳನ್ನು ಧರಣಿಯೊಳೆಲ್ಲಿಯೂ, ನಾನರಿಯಲಿಲ್ಲವೇ ನೀರೆ, ಆದರೆ ರತಿ ಮನ್ಮಥಗೆ ಪ್ರತಿಯಾಗಿ ಪಿತಾಮಹನು ಯಮ್ಮನ್ನು ನಿರ್ಮಿಸಿ ಯಿರುವುದು ಕ್ಷಿತಿಯೊಳತ್ಯಾಶ್ಚರ‌್ಯಕರಮಾದ ವಿಷಯವಲ್ಲವೇನೇ ಲಲಿತಾಂಗೀ ಹಲಧರ ಭೂಪಾಲನ ತಂಗೀ ॥