ಬಲರಾಮ: ಅಯ್ಯೋ, ದೇವಕೀಸುತನಾದ ಶ್ರೀಹರಿಯೇ. ಈ ವಸುಧೆಗೆ ಪೊಸತೆನಿಪ ಕುಂಕುಮನಪುರಿ ಲಕ್ಷ್ಮೀ ನೃಸಿಂಗಮೂರ್ತಿಯೆನ್ನುವ, ಕೃಷ್ಣಮೂರ್ತಿಯೇ! ಭಾವಜಪಿತನಾದ ನಿನ್ನ ಕೃಪೆ ತಪ್ಪಿದ ಕಾರಣ ಈ ವಿಧವಾಯಿತಲ್ಲವೇ. ಆಯ್ಯೋ, ಪುಣ್ಯವೇ! ಇದಕ್ಕೆ ಹ್ಯಾಗೆ ಮಾಡಲೋ ಮುಕುಂದನೇ, ಭಾವ ಶಿರೋರನ್ನೆಯಾದ ಸುಭದ್ರಾ ದೇವಿಯನ್ನು ತೋರಿಸಬೇಕೋ ಶೌರಿ ಮಾಯಕತನದೋಳ್ ಸಮರ್ಥನು ನೀನೇ ಸರಿ ॥

ಕೃಷ್ಣ: ಅಹೋ, ಅಗ್ರಜನಾದ ಬಲರಾಮ ರಾಜನೇ ಲಾಲಿಸು. ನೆಲೆಯರಿಯದೆ ನೀನು, ಚಿಂತಿಪುದೇತಕ್ಕೆ! ಲಲನಾಮಣಿ ಸುಭದ್ರೆಯಳನ್ನು ಅಪಹರಿಸಿದ ಚೆಲುವ ಸನ್ಯಾಸಿ ಧಾರೆಂದು ತಿಳಿಯಬಲ್ಲೆ. ಜಲರುಹಾಕ್ಷಿ ಕುಂತೀದೇವಿ ಅತ್ತೆಮ್ಮನವರ ಸುತ ಬಲವುಳ್ಳ ಫಲುಗುಣನಲ್ಲವೇ, ಲಲಿತದಿ ನಾನು ಧರಣಿ ಸುರರೀರ್ವರಂ ಒಡಗೊಂಡು ಪೋಗಿ ಸುಲಭೋಪಾಯದಿಂದ ಗಾಂಧರ್ವ ವಿವಾಹವನ್ನಾಚರಿಸಿ ಕೊಟ್ಟಿರುವೆನು. ಹುಲು ಸನ್ಯಾಸಿ ಅಪಹರಿಸಿದನೆಂದು, ಚಿಂತಿಸಲಾಗದು, ಲಲಿತಾಂಗಿಯಳನ್ನು ಫಲುಗುಣ ನಿಗೀಯಬೇಕೆಂದು ಮೊದಲೇ ನಾನು ತಿಳಿಸಿದ್ದಕ್ಕೆ ಯನ್ನ ಮಾತನ್ನು ತಿರಸ್ಕರಿಸಿದ ಕಾರಣ ಈ ಪರಿಯಾಯಿತೈ ಅಣ್ಣನೇ ವರ ಬಲದೇವನೇ ॥

ದರುವು

ಕಪಟಿ ನೀನೈಯ್ಯ  ದೇವಕೀ ತನಯಾ
ಕಪಟಿ ನೀನೈಯ್ಯ ॥ಪ ॥
ಕಪಟಿಯು ನೀನೈಯ್ಯ  ಚಪಲಾಯತಾಕ್ಷಿಯಾ
ಗುಪಿತದಿಂ ನರಗೆ ಶ್ರೀ  ಪತಿಯೇ ವಲಿಸಿದೆಯೆಯ್ಯ                     ॥1 ॥

ಬಲರಾಮ: ಅಯ್ಯ ಕೃಷ್ಣಾ! ಕಪಟದಲ್ಲಿ ವಜೀರ ನೀನೇ ಸರಿ. ನೃಪಶಿಖಾಮಣಿಯಾದ ಕೌರವಗೆ ಕೊಡಬೇಕೆಂದ ಚಪಲಾಯತಾಂಬಕಿಯನ್ನು ವಿಪಿನವಾಸಿಯಾದ ಬಡ ಪಾರ್ಥನಿಗೆ ಗುಪಿತದಿಂದ ಪರಿಣಯಗೈದು ಅಪಹರಿಸಿಕೊಂಡು ಹೋಗುವ ರೀತಿ ಮಾಡಿದ ನಿನ್ನ ಕಪಟ ವಿದ್ಯೆಯನ್ನು ವರ್ಣಿಸಲು ತ್ರಿಪುರಾರಿಗಸದಳವಾಗಿರ್ಪುದಲ್ಲೋ ಮಾಧವಾ ನೀನೆಸಗಿದೆ ಯನ್ನೊಳು ಭೇದವ ॥

ದರುವು

ಕರೆಸು ಪಾರ್ಥನನೂ  ನೋಡಲಿ ಬೇಕೂ
ವರ ಸುಭದ್ರೆಯನೂ ॥
ತರುಣಿಯ ನೊಯ್ದವ  ನರನೋ ಸನ್ಯಾಸಿಯೋ
ಹರಿಯೇ ನಿನ್ನಯ ಮಾಯ  ವರಿತವರಾರೈಯ್ಯ ॥                     ॥2 ॥

ಬಲರಾಮ: ಆಹಾ! ಮುರರಿಪು! ವರ ಸಹೋದರಿಯಳಾದ ಸುಭದ್ರಾ ತರುಣಿಯಳನ್ನು ಅಪಹರಿಸಿದವನು ನರನೋ ತಿರುಕ ಸನ್ಯಾಸಿಯೋ ಅರಿಯೆನು. ಹೇ ಸಹೋದರ! ಪರಮ ಮೋಸಗಾರನಾದ ನಿನ್ನ ವರ ವಚನವು ಯನಗೆ ಭರವಸೆ ಸಾಲದು. ಆದಕಾರಣ ತ್ವರಿತದಿಂದ ಪಾಂಡು ಮಧ್ಯಮನಾದ ಪಾರ್ಥನನ್ನೂ ತರಳಾಯತಾಕ್ಷಿಯಳಾದ ಸುಭದ್ರೆಯಳನ್ನೂ, ಪರಮ ಪಾವನೆಯಾದ ದ್ರೌಪದೀ ಮುಂತಾದ ಬಂಧು ವರ್ಗದವರನ್ನು ತ್ವರಿತದಿಂದ ಕರೆಸೈಯ್ಯ ಶ್ರೀಹರಿ ಧರೆಯೊಳು ವರ ಮಾಯಕಾರಿ ನೀನೇ ಸರಿ ॥

ದರುವು

ತಡವ್ಯಾತಕೈಯ್ಯಾ  ಸೋದರ ಯನ್ನಾ
ನುಡಿ ಲಾಲಿಸೈಯ್ಯ ॥
ಪೊಡವಿಕುಂಕುಮಪುರ  ದೊಡೆಯ ಶ್ರೀಕೃಷ್ಣನೇ
ಕಡುಬೇಗ ತೋರಿಸೋ  ಉಡುರಾಜ ವದನೇಯಾ ॥                ॥3 ॥

ಬಲರಾಮ: ಆಹಾ ಜಲಜನಾಭ! ಸಡಗರದಿಂದೆನ್ನ ಮೃದು ನುಡಿಗಳಂ ಲಾಲಿಸು. ಕಡುಗಲಿಗಳಾದ ಪಾಂಡು ಪುತ್ರರನ್ನೂ, ಉಡುರಾಡ್ವದನೆಯರಾದ ದ್ರೌಪದಿಯನ್ನೂ, ಸುಭದ್ರೆಯನ್ನೂ ಸಹ ಕಡು ಸಡಗರದಿಂದ ಕರೆಸೈಯ್ಯ ಹರಿಯೇ ಧೃಡವತ್ತಾದ ಕುಂಕುಮನ ಪುರಿ ಜಡ ಜಾಯತಾಕ್ಷನಾದ ಶ್ರೀ ಕೃಷ್ಣಮೂರ್ತಿಯೇ॥

ಕೃಷ್ಣ: ಅದೇ ಪ್ರಕಾರ ಕರೆಸುತ್ತೇನೈ ಅಣ್ಣನೇ. ಕರುಣ ಸಂಪನ್ನನೇ ॥ಯಲೈ ಸಾಂದ್ರಗುಣಯುಕ್ತನಾದ ಸೇವಕನೇ ಇಂದ್ರಪ್ರಸ್ತಪುರಿಗೆ ತೆರಳಿ ಚಂದ್ರವಂಶ ಲಲಾಮರಾದ ಪಾಂಡು ಪುತ್ರರನ್ನೂ, ಸಾಂದ್ರ ವಿಭ್ರಾಜ ಮುಖಿಯರಾದ ದ್ರೌಪದೀ ಸುಭದ್ರೆಯರನ್ನು ಕರೆದುಕೊಂಡು ಬಾರೋ ಸೇವಕ ॥

 

(ಪಾಂಡವರು ಬರುವಿಕೆ)

ದರುವುಜಂಪೆ

ಬಂದಾರಾಗಲೇ ಪಾಂಡು  ನಂದನರು ಅತಿಬೇಗಾ
ದಿಂದಾ ಶ್ರೀ ಮುರಹರಿಯ  ಚರಣ ಸನ್ನಿಧಿಗೇ  ದ್ವಾರಕಿಗೇ           ॥1 ॥

ಕರುಣ ವಾರುಧಿ ಹರಿಯೂ  ಭರದಿಂದ ಕರೆಸಿರುವ
ಪರಿಯನ್ನು ತಿಳಿಯಬೇಕೆನುತಾ  ಬಹು ತ್ವರಿತಾ                        ॥2 ॥

ಪೊಡವೀ ಕುಂಕುಮನಗರ  ದೊಡೆಯಾನ ಸನ್ನಿಧಿಗೆ
ನಡೆತಂದು ಹರುಷದಿ  ಅಡಿಗೆ ನಮಿಸಿದರೂ  ಯರಗಿದರೂ          ॥3 ॥

ಪಾಂಡವರು: ಸ್ವಾಮೀ, ಇಂದಿರೇಶನಾದ ಶ್ರೀಕೃಷ್ಣಮೂರ್ತಿಯೇ. ಇದೇ ನಿಮ್ಮ ದಿವ್ಯ ಪಾದ ಪದ್ಮಂಗಳಿಗೆ ನಮೋನ್ನಮಃ॥

ಶ್ರೀಕೃಷ್ಣ: ಸುಖೀಭವತು ಬನ್ನಿರೈಯ್ಯಿ. ಪಾಂಡು ಪುತ್ರರೇ ಕಡು ಸಮರ್ಥರೇ ॥

ಕಂದ

ವಂದಿಸುವೆನು ಸುರವಂದ್ಯಾ
ವಂದನವ ಮಾಡುವೆ ಸುರ
ವಂದ್ಯದ್ವಾರಕಿಯರಾಯ ರುಕ್ಮಿಣೀ ಪ್ರಿಯಾ ॥
ವಂದನವು ರೇವತೀ ಪತಿ ॥
ವಂದನೆ ತವ ಪಾದಕೀಗಾ ವಂದಿಪೆ ಬೇಗಾ ॥

ದ್ರೌಪದಿ: ಅಣ್ಣಾ, ಸದುಹೃದಯರಾದ ಹಲಧರಾಚ್ಯುತರೇ ಇದೇ ನಿಮ್ಮ ಚರಣಾರವಿಂದಗಳಿಗೆ ಸಹಸ್ರ ವಂದನೆಗಳೈ ಮಹಾನುಭಾವರೇ ॥

ಕೃಷ್ಣ: ಧೀರ್ಘಾಭಿವೃದ್ಧಿರಸ್ತು ಬಾ ಸುಮಂಗಲೀ ಭವತು ಬಾರಮ್ಮಾ ದ್ರೌಪದೀ – ಪಾಂಡುನಂದನರ ಸತಿ॥

ಸುಭದ್ರೆ: ನಮೋನ್ನಮೋ ಅಣ್ಣಯ್ಯನವರೇ ಹಲಧರಾಚ್ಯುತರೇ ॥

ಬಲರಾಮ: ಸುಮಂಗಲೀ ಭವತು ಬಾರಮ್ಮಾ ಸಹೋದರೀ ಮಂಗಳೋದರೀ ॥

ಕಂದ

ಪರಮಾತ್ಮನೆ ಪರಮ ಪುರುಷನೇ
ಪರತರ ಪರಂಜ್ಯೋತಿ  ಪರಮ ಪಾವನಮೂರ್ತಿ ॥
ಶಿರಿಯರಸನೆಮ್ಮ ಕರೆಸಿದಾ
ಪರಿಯರುಹಲುಬೇಕು ದಯದೀ  ಕರಣಾಜಲಧಿ ॥

ಧರ್ಮರಾಯ: ಆಹಾ ಪರಮಾತ್ಮನೇ ಪರತರ ಪರಂಜ್ಯೋತಿ ಸ್ವರೂಪನಾದ ಶ್ರೀಮನ್ ನಾರಾಯಣನೇ ಚರಣ ಸೇವಕರ ಮೇಲೆ ಕರುಣವಿಟ್ಟು ಕರೆಸಿದ ಪರಿಯೇನಿರುವುದು ? ತ್ವರಿತದಿಂದಪ್ಪಣೆ ಕೊಡಿಸಬೇಕೈ ದೇವಾ ಭಕ್ತರ ಜೀವಾ ॥

ಕಂದ

ದೊರೆ ಧರ್ಮರಾಜನೇ ಕೇಳ್
ವರ ರೇವತಿಯರಸ ನಿಮ್ಮ ಕರೆಸುವುದೆನುತಂ ॥
ವರೆಯಲ್ ಯನ್ನೊಳಗದರಿಂ
ಪರಿತೋಷವಹಿಸಿ ನಿಮ್ಮ ಕರೆಸಿದೆನೀಗಳ್ ॥

ಕೃಷ್ಣ: ವರ ಸತ್ಯಸಂಧನಾದ ಧರ್ಮಪುತ್ರನೇ ಲಾಲಿಸು. ಅರಸು ಬಲಭದ್ರ ರಾಜನು, ತ್ವರಿತದಿಂದ ನಿಮ್ಮನ್ನು ಕರೆಸುವುದೆಂದು ಯನ್ನೊಳು ವರೆದನಾದ ಪ್ರಯುಕ್ತ ನಿಮ್ಮನ್ನ ಕರೆಸಲಾಯಿತೈ ಪಾಂಡುಪತ್ರನೇ॥

ದರುವು

ಕರೆಸಲ್ಯಾತಕೆಮ್ಮನೀಗಾ  ದೊರೆಯೇ ಹಲಧರಾ
ಪರಿಯಿದೇನೂ  ಪೇಳುಯಿಗ  ಸರಸ ಸುಂದರಾ                        ॥1 ॥

ದೇವ ನಿಮ್ಮಾ  ಮನಸಿನಂತ್ತಾ  ರ್ಭಾವ ತಿಳಿಯದೂ
ಸಾವಧಾನ  ದಿಂದ ಯನ್ನೋಳ್  ನೀವು ಪೇಳ್ವುದೂ                  ॥2 ॥

ಧರ್ಮರಾಯ: ಭಾವಜ ಪಾಲನಾದ ಬಲದೇವನೇ ಲಾಲಿಸು. ಕೇವಲ ದಯಾಂತಃಕರುಣವಿಟ್ಟು ಯಮ್ಮನ್ನ ಕರೆಸಿದ ಭಾವವಿದೇನೋ ತಿಳಿಯದು. ನಿಮ್ಮಯ ವರ ಮನಸ್ಸಿನಂತರ್ಭಾವವನ್ನು ಸಾವಧಾನದಿಂದಪ್ಪಣೆ ಕೊಡಿಸಬೇಕೈ ದೇವನೇ ರೇವತೀ ರಮಣನೇ ॥

ದರುವು

ಕಂತುಪಾಲ  ಯಮ್ಮ ಕರೆಸೀ  ದಂಥ ಪರಿಗಳಾ
ಅಂತರಿಸದೇ  ವರೆಯೋ ಭೂಮಿ  ಕಾಂತ ಯನ್ನೊಳೂ              ॥3 ॥

ಧರ್ಮರಾಯ: ಆಹಾ ಕಂತುಪಾಲ! ಸಂತಸದೀ ಅಂತಃಕರುಣವಿಟ್ಟು ಅತ್ಯವಸರದಿಂದೆಮ್ಮನ್ನು ಕರೆಸಿದ ಸಂಗತಿಯೇನಿರುವುದು ? ಅಂತರಂಗದೋಳ್ ಅಂತರಿಸದೇ ವಿಶ್ರಾಂತಿಯಿಂದ ಅರುಹಬೇಕೈ ದೇವಾ ಕರುಣಾ ಪ್ರಭಾವ ॥

ದರುವು

ಒಡೆಯ ನಿಮ್ಮಾ  ವಚನದಂತೆ  ನಡೆದುಕೊಳ್ವೆವೂ
ಜಲಜನಾಭ  ನಾಣೆ ನುಡಿದಾ  ನುಡಿಗೆ ತಪ್ಪೇವೂ                      ॥4 ॥

ಧರ್ಮರಾಯ: ಸ್ವಾಮಿ! ಜಗದೊಡೆಯನಾದ ಹಲಧರ ರಾಜೇಂದ್ರನೇ ಲಾಲಿಸು. ವಡಲೊಳು ಅಂತವಿಡದೆ ನಡೆದ ಸಂಗತಿ ಧೃಡವಾಗಿ ವಿವರಿಸಿದ್ದಾದರೆ ನಿಮ್ಮನುಮತಿಯಂತೆ ನಡೆಯಲು ಸಂಶಯವೇನಿರುವುದು. ಪೊಡವಿಯೊಳು ಕುಂಕುಮನಪುರಿ ಧಾಮ ದುರಿತ ವಿರಾಮ ಧೃಡಮೂರ್ತಿ ನರಸಿಂಹನೆನ್ನುವ ಶ್ರೀಕೃಷ್ಣನ ಅಡಿದಾವರೆಗಳಾಣೆಯಾಗಿಯೂ ನುಡಿದ ಭಾಷೆಗೆ ತಪ್ಪಲಾರೆವು. ತಡಮಾಡದೆ ಕಡು ಸಡಗರದಿಂದ ಅಪ್ಪಣೆ ಕೊಡಿಸಬೇಕೈ ದೇವಾ ಕರುಣ ಪ್ರಭಾವ ॥

ದರುವುತ್ರಿವುಡೆ

ಧರಣಿಪತಿ ಧರ್ಮಜನೆ ಲಾಲಿಸು
ವರೆವೆ ನಿನ್ನೊಳು ಮಾಜದೀಗಲೇ
ಹರಿಯು ಗೈದಿಹ ತಂತ್ರ ಪರಿಕಿಸೆ  ಕರೆಸಿದೆನು ನಿಮ್ಮಾ               ॥1 ॥

ನರನು ವರ ಸನ್ಯಾಸಿ ವೇಷವಾ
ಧರಿಸಿ ಉಪವನದೊಳಗೆ ಇರಲೂ
ವರ ಋಷಿಯ ಇವನೆಂದು ಭಾವಿಸಿ  ಅರಮನೆಗೆ ಬೇಗಾ              ॥2 ॥

ಬಲರಾಮ: ಅಯ್ಯ ತರಣಿಸುತ ಸೂನುವೆನಿಪ ಧರ್ಮಪುತ್ರನೇ ಕೇಳು, ವರ ಸತ್ಯಸಂಧನಾದ ನಿನ್ನೊಳು ಮರೆಮಾಜಬೇಕಾದ ಪರಿಯೇನಿರುವುದು. ಸ್ಮರಪಿತನು ಗೈದ ಕೃತಕವನ್ನು ಪರಿಕಿಸಲೋಸುಗಾ ನಿಮ್ಮನ್ನು ಬರಮಾಡಿಕೊಂಡೆನು. ಪುರುಹೂತ ಕುಮಾರನಾದ ಈ ಪಾರ್ಥನು ವರ ಸನ್ಯಾಸಿ ವೇಷಭೂಷಿತನಾಗಿ ನರಹರಿ ಧ್ಯಾನದಿಂದ ವನದೊಳಗೆ ಕುಳಿತಿರ್ದ ಪರಿಯನ್ನು ಕೇಳಿ ವರ ಋಷಿಯೆಂದು ಪರಮ ಸಂತೋಷದಿಂದ ಅರಮನೆಗೆ ಕರೆದುಕೊಂಡು ಬಂದೆನೈ ಭೂಪತಿ ನೃಪತಿ॥

ದರುವು

ನಿಲಿಸಿದೆನು ಮುನಿವರನ ಸೇವೆಗೇ
ನೀಲವೇಣಿ ಸುಭದ್ರೆಯಳನೂ
ಜಲರುಹಾಕ್ಷನು ಕಪಟದೊಳು ನರ  ಗೊಲಿಸಿ ಕಳುಹಿದನೂ          ॥3 ॥

ಬಲರಾಮ: ಎಲೈ, ಜಲಜ ಸಖ ಸುತ ಸೂನುವೆನಿಪ ಧರ್ಮರಾಜನೇ ಕೇಳು. ಚೆಲುವ ಮುನಿವರನ ಪದಕಮಲ ಸೇವೆಗೆ ಲಲಿತಾಂಗಿ ಸುಭದ್ರೆಯಳನು ನಿಲಿಸಿದ ನಂತರ ಜಲರುಹಾಕ್ಷನು ಯನಗೆ ತಿಳಿಯದಂತೆ ಹಲವು ತಂತ್ರಗಳ ವಲಿದು ನೀಲವೇಣಿಯಳ ಸುಲಭೋಪಾಯದಿಂದ ಫಲುಗುಣನಿಗೊಲಿಸಿದ ಕಾರಣ ಜಲರುಹಾಕ್ಷನ ವಚನವು ನಂಬಲಾರದೆ ನೆಲೆಯಂ ತಿಳಿಯಲು ಬಲುಜವದಿ ನಿಮ್ಮ ಕರೆಸಿದವ ನಾದೆನೈಯ್ಯ ಧರ್ಮಜ ತರಣಿ ಸಂಭವಾತ್ಮಜ ॥

ದರುವು

ಅರಸನನುಜೆಯ ತಿರುಕನೋರ್ವನೂ
ಕರೆದು ಹೊಯ್ದನೇ ಭರದೊಳೆನ್ನುತಾ
ಜರಿಯುವರು ಜನರೆನ್ನ ಹಿಂಗದೆ  ಪರಿಹಾಸದಿಂದಾ                   ॥4 ॥

ಬಲರಾಮ: ಅಯ್ಯ ಧರಣಿಪಾಗ್ರಣಿಯಾದ ಧರ್ಮಜನೇ ಕೇಳು, ಅರಸು ಬಲರಾಮರಾಜರ ವರ ಸಹೋದರಿಯಳನ್ನು ತಿರುಕ ಸನ್ಯಾಸಿ ಕರೆದೊಯ್ದನೆಂದು ಅರಿಯದ ಪಾಮರರೂ ಜರಿದು ಅಪಹಾಸ್ಯ ಗೈಯುವರೈ ಧರ್ಮಜ ಕುಂತೀ ತನುಜ ॥

ದರುವು

ತರುಣಿ ದ್ರೌಪದಿಯೊಡನೆ ನೀವ್ಗಳೂ
ತೆರಳಿರೈ ನಿಜ ನಗರಿಗೀಗಲೇ
ವರ ಸುಭದ್ರೆಯ ಪರಿಣಯಕೆ ನಾ  ಭರದಿ ಕರೆಸುವೆನೂ              ॥5 ॥

ಬಲರಾಮ: ಅಯ್ಯ ನರಪತಿ – ಯುಧಿಷ್ಠಿರ ಭೂಪತಿ  ಸಾರಸಾಕ್ಷನೆಸಗಿದ ತಂತ್ರಗಳರಿಯದೆ ಅರಸು ಬಲರಾಮ ರಾಜನ ವರಸಹೋದರಿಯು ತಿರುಕನ ಕೈಹಿಡಿದಳೆಂದು ಅರಿಯದ ಪಾಮರರು ಯನ್ನ ಜರಿಯುವರಾದ ಕಾರಣ ತರುಣದಲ್ಲಿ ಹರಿಣಲೋಚನೆಯಾದ ಸುಭದ್ರೆ ಇಲ್ಲಿರಲಿ. ಧರೆ ದೊರೆಗಳರಿವಂತೆ ತರಳಾಕ್ಷಿಗೆ ಎರಡನೇ ಪರಿಣಯವನ್ನು ವಿರಚಿಸುವ ಪ್ರಯತ್ನ ಮಾಡುವೆನು. ಮರೆಯದೆ ಆ ವೇಳೆಗೆ ನಿಮ್ಮನ್ನು ಬರಮಾಡಿಕೊಳ್ಳುವೆನು. ಸದ್ಯಕ್ಕೆ ನೀವುಗಳು ಸರಸಿಜಾಕ್ಷಿ ದ್ರೌಪದಿಯೊಡನೆ ಇಂದ್ರಪ್ರಸ್ತಪುರಕ್ಕೆ ತೆರಳಬಹುದೈ ಪಾಂಡುಪುತ್ರರೇ.

ದರುವು

ಪೊಡವಿಗತಿಶಯ ಕುಂಕುಮನಪುರ
ದೊಡೆಯನರಹರಿ ಕೃಷ್ಣಮೂರ್ತಿಯ
ಧೃಡ ಕರುಣ ವೆಂತಿಹುದೋ ನಿಮ್ಮೊಳು ಅಂತಹುದು ಕೇಳಿ ॥

ಬಲರಾಮ: ಅಯ್ಯ, ಧೃಡ ಚಿತ್ತನಾದ ಧರ್ಮರಾಯನೇ ಉಡುರಾಡ್ವದನೆಯಾದ ಸುಭದ್ರಾ ಸ್ವಯಂವರ ನಡೆಯುವ ಕಾಲಕ್ಕೆ ತಡೆಯದೆ ನಿಮ್ಮನ್ನು ಬರಮಾಡಿಕೊಳ್ಳುವೆನು. ಪೊಡವಿಯೊಳು ಕುಂಕುಮನ ಪುರದೊಡೆಯನಾದ ಧೃಡಮೂರ್ತಿ ನಾರಸಿಂಹನೆನ್ನುವ ಶ್ರೀಕೃಷ್ಣನ ಕೃಪಾಕಟಾಕ್ಷವು ನಿಮ್ಮೊಳಗೆಂತಿರುವುದೋ ಅಂತಾಗುವುದೈ ಧರ್ಮಜಾ – ವರ ಪಾಂಡು ತನುಜ ॥

ಧರ್ಮರಾಯ: ಆಹಾ! ಬಲಭದ್ರರಾಜ! ಪದುಮಾಕ್ಷನ ಭಕ್ತರಾದೆಮಗೆ ವದಗಿದ ವಿಘ್ನವೂ ತುದಿಗೆ ಲೇಸಹುದು. ಮದನಾರಿ ಚರಣದಾಣೆ ನಿನ್ನ ಹೃದಯದಾಲೋಚನೆ ನದಿಯೊಳು ಹೋಮಗೈದಂತಾಗಿಹುದು. ಇದಕೇಕೆ ನಾನು ಯೆದುರುತ್ತರ ವೀಯುವುದು. ಪದುಮಾಕ್ಷಿಯ ನಿಮ್ಮ ಸದನದಲ್ಲಿರಿಸಿಕೊಳ್ಳುವುದು ಪದುಮ ಸಂಭವನ ಸಂಕಲ್ಪ ವದಗಿದ ವೇಳೆ ಕಾರ‌್ಯವಾಗುವುದು. ಮುದವಿತ್ತು ಅಪ್ಪಣೆಯಿತ್ತರೆ ನಾವು ಪೋಗಿ ಬರುತ್ತೇವೈ ಹಲಧರಾ ದ್ವಾರಕಾಪುರಿವರ ॥

ಭೀಮ: ಭಳಿರೇ. ಅಗ್ರಜನಾದ ಯುಧಿಷ್ಠಿರ ಭೂಪತಿ! ಮುರರಿಪುಯೆಸಗಿದ ಶುಭಕಾರ‌್ಯಗಳಿಗೆ ಕೊರತೆಗಳನ್ನುಂಟು ಮಾಡಿದ ಈ ದುರುಳ ಬಲಭದ್ರನ ಕೊರಳು ಮುರಿದು ಕರುಳು ತೆಗೆದು ಮರಣ ಗಾಣಿಸಿದರೂ ತೀರದು. ಭಲಾ, ವಳಿತಾಯಿತಿರಲಿ. ದುರುಳ ದುರ‌್ಯೋಧನನಿಗೆ ವರ ಸಹೋದರಿಯ ಪರಿಣಯ ಗೈಯಲೆತ್ನಿಸಿ ಈ ಪರಿ ತಂತ್ರವೆಸಗಿರುವನು. ಈ ದುರುಳನು ನಾಳೆ ಪ್ರಯತ್ನಿಸುವ ಸ್ವಯಂವರ ಕಾಲದಲ್ಲಿ ಬರುವ ದೊರೆಗಳೆದುರಿನಲ್ಲಿ ಇವರ ಗರ್ವವನ್ನು ಮುರಿದು ಹರಿಣಾಕ್ಷಿ ಸುಭದ್ರೆಯನ್ನು ಧುರ ವಿಜಯನಾದ ಪಾರ್ಥನಿಗೊಲಿಸದಿರ್ದೊಡೆ ಧರಣಿಯೋಳ್ ಕುಂಕುಮನಪುರಿ ನರಸಿಂಹ ಮೂರ್ತಿಗೆ ನಾನು ಭಕ್ತನಾಗಿ ಸಾರ್ಥಕವೇನು ? ಹರಿಚರಣಕ್ಕೆರಗಿ ಪುರಕ್ಕೆ ತೆರಳೋಣ ಬಾರೈ ಅಗ್ರಜಾ ಭೂಭುಜಕುಲ ತೇಜಾ.

ಧರ್ಮರಾಯ: ಎಲೈ ಮರುತ್ಕುಮಾರ! ವೃಕೋದರ ಹರಿಚರಣ ಕಟಾಕ್ಷ ಯಮ್ಮೊಳಗಿರಲು ಅರಸು ಬಲರಾಮನೋಳ್ ವಾದಿಸಲ್ಯಾಕೆ ನರನಿಗೆ ಅರ್ಹನಾಗಿ ಸ್ಮರಪಿತನಿರಲು ತರಳಾಕ್ಷಿ ಸುದ್ಧಿ ನಮಗ್ಯಾತಕ್ಕೆ? ತ್ವರಿತದಿಂದ ತೆರಳೋಣ ಬಾರೈ ಪುರಕೆ ಇಲ್ಲಿರುವುದಿನ್ಯಾಕೆ.

ಕೃಷ್ಣ: ಎಲೈ ಫಲುಗುಣ! ಲಲನಾಮಣಿ ಸುಭದ್ರೆಯಳನ್ನು ಕೌರವಗೊಲಿಸುವನೆಂಬ ಸಂಶಯವನ್ನು ಬಿಡು. ಲಲಿತಾಂಗಿಯ ಸ್ವಯಂವರಕ್ಕನುವಾಗಿ ಹಲವು ದೇಶದ ಅರಸುಗಳೊಡನೆ ಕುಲಗೇಡಿ ಕೌರವನು ಬಂದರೂ ಬರಲಿ. ಜಲರುಹಾಕ್ಷಿಯನ್ನು ಅವನಿಗೊಲಿಸುವನಾವನೋ ನೋಡುವೆನವನ ವೈಖರಿ. ಛಲದಿಂ ನಿನಗೊಲಿಸಲು ನಾನಿರುವೆನು ಬಲವಂತನಾದ ಶ್ರೀಹರಿ. ಬಲು ತರದಿ ನೀನು ಚಿಂತಿಸಲಾಗದು. ಸುಲಲಿತದಿಂ ಪುರಕ್ಕೆ ತೆರಳಿರಿ ಸಾರಿ! ಕಲಹಂಸಗಮನೆಯ ನಿನಗೊಲಿಸುವುದೇ ಸರಿ – ಇದು ಯನಗೆ ಶಿರಿ.

ಅರ್ಜುನ: ಸ್ವಾಮಿ! ಕಾಮಪಿತನಾದ ಶ್ರೀಮನ್ ನಾರಾಯಣನೇ! ಭೂಮಿಯೋಳ್ ನಿಮ್ಮ ನೇಮವನ್ನು ಮೀರಿ ಬಾಳುವೆನೇನೈ ಮಹಾನುಭಾವನೇ ಪಾಮರನಾದ ಯನ್ನಂ ಪರಿಪಾಲಿಸುವ ಮಹಾತ್ಮನು ನೀನೇ. ಚಿನ್ಮಯ ಚಿತ್ತ ಸ್ವರೂಪನೇ ನಾನು ಪೋಗಿ ಬರುವೆನೈ ದೇವನೇ ನಿಮಗೆ ಸಹಸ್ರವಂದನೇ

ಕೃಷ್ಣ: ಅಹೋ ಪಾರ್ಥ. ತ್ರಿಲೋಕ ಸಮರ್ಥ. ನೀನು ಅನುಮಾನಿಸುವ ಮಾತೆ ವ್ಯತಾರ್ಥ. ನೀನಾಗುವೆ ಕೃತಾರ್ಥ. ಬಲಭದ್ರನ ಯೋಚನೆ ವ್ಯರ್ಥ. ಕಾರ‌್ಯ ನಿರರ್ಥ, ನೀನು ತೆರಳಬಹುದೈ ಪಾರ್ಥ ॥

ದ್ರೌಪದಿ: ಸ್ಮರಪಿತನಾದ ಅಣ್ಣಯ್ಯನೇ ಲಾಲಿಸು. ಹಿರಿಯಣ್ಣನು ವಿರಚಿಸುವ ಸ್ವಯಂವರ ಕಾಲದಲ್ಲಿ ಹರಿಣಾಕ್ಷಿ ಸುಭದ್ರೆಯಳ ಅರಸು ಪಾರ್ಥನಿಗೊಲಿಸುವ ಭಾರ ನಿನ್ನದಾಗಿರುವುದು. ಅಪ್ಪಣೆಯಾದರೆ ಹೋಗಿ ಬರುವೆನೈ ಪರಮಾತ್ಮನೇ ॥

ಶ್ರೀಕೃಷ್ಣ: ಅಮ್ಮಾ ಕೋಮಲಾಂಗಿಯೇ! ನಿನ್ನ ಪತಿಗಳೊಂದಿಗೆ ತೆರಳಿ ನೆಮ್ಮದಿಯಾಗಿ ಬಾಳಮ್ಮ ತಂಗಿ ಮಂಗಳಾಂಗಿ.

ಪಾಂಡವರು: ಭಾವಜಪಾಲನಾದ ಬಲರಾಮ ರಾಜನೇ. ಈ ವಿಷಯದಲ್ಲಿ ನೆನಪಿರಲಿ, ನಾವು ಪೋಗಿ ಬರುತ್ತೇವೈ ಹಲಧರನೇ ಬಲರಾಮ ದೇವನೇ.

ಬಲರಾಮ: ಪೋಗಿ ಬರಬಹುದೈ ಪಾಂಡು ಪುತ್ರರೇ.

ದರುವುತ್ರಿವುಡೆ

ಅರಸೇ ಜನಮೇಜಯನೇ ಲಾಲಿಸು
ನರಪ ಕುಲ ಮಣಿ ಪಾಂಡು ತನಯರು
ಪುರಕೆ ಹೊರಟರು ಪದುಮನಾಭನಿ  ಗೆರಗಿ ಹರುಷದಲೀ            ॥1 ॥

ಕಳೆಯೆ ಮಾಸಗಳೆರಡು ಬಳಿಕಾ
ಇಳೆಯ ಪತಿ ಬಲಭದ್ರರಾಜನು
ಘಳಿಲನೇ ಪಾಂಡವರ ಕರೆಸಿದ  ಕಳುಹಿ ಚಾರಕರ                     ॥2 ॥

ಧರಣಿ ಕುಂಕುಮಪುರ ನೃಸಿಂಗನಾ
ವರ ಸಹೋದರ ಯೆನುವ ಹಲಧರಾ
ನರಗೆ ಅನುಜೆಯನಿತ್ತು ಪರಿಣಯ  ವಿರಚಿಸಿದಾಗ                      ॥3 ॥

(ಮುಹೂರ್ತ)

ಭಾಗವತರು: ಈ ಪ್ರಕಾರವಾಗಿ ಪಾಂಡವರು ಬಲದೇವಾಚ್ಯುತರ ಅನುಜ್ಞೆಯಂತೆ ಇಂದ್ರಪ್ರಸ್ತಪುರಕ್ಕೆ ತೆರಳಲು, ಕೆಲವು ದಿನ ಕಳೆದ ನಂತರ ಹಲಧರನು ಸೋದರನೊಡನೆ ಪರ‌್ಯಾಲೋಚಿಸಿ ಅಖಿಲ ರಾಜರುಗಳಿಗೆ ಆಹ್ವಾನವನ್ನು ಕಳುಹಿಸಿ ಯದುಕುಲ ಬಂಧುಗಳನ್ನು, ಪಾಂಡವರನ್ನೂ ಕರೆಯಿಸಿ ಶುಭ ಮುಹೂರ್ತದೊಳು ಸಭೆಯು ಜಯ ಜಯವೆನುತಿರೆ ಸರಸತರ ಕುಂಕುಮನಪುರ ನಿವಾಸ ನರಕೇಸರಿಯೆನಿಪ ಶ್ರೀಕೃಷ್ಣಮೂರ್ತಿಯ ಅಗ್ರಜನಾದ ಹಲಧರ ಭೂಪಾಲನು ತನ್ನ ಸೋದರಿ ಸುಭದ್ರಾ ದೇವಿಯಳನ್ನು ಪರಿಣಾಯದೊಳು ಅರ್ಜುನನಿಗಿತ್ತು ಬಹುಸಂಭ್ರಮದಿಂದ ಧಾರೆಯೆರೆದನೈಯ್ಯ ಭಾಗವತರೇ ॥

ಕಥೆ ಸಂಪೂರ್ಣಂ

ಮಂಗಳಾರತಿ

ಮಂಗಳಂ ಮಂಗಳಂ  ನರಕೇಸರಿಗೆ  ಮಂಗಳಂ ಮಂಗಳಂ ॥ಪ ॥
ಮಂಗಳಂ ಜಯ ಶುಭ  ಮಂಗಳಂ ಕೃಷ್ಣಗೇ
ಮಂಗಳ ಮಹಿಮ ಶ್ರೀ  ಅಂಗಜನೈಯ್ಯಗೇ                              ॥1 ॥

ಜನಕನ ನುಡಿ ಕೇಳಿ  ಮನಕೆ ಹರುಷವ ತಾಳಿ
ಜನಕ ಸಂಭವೆಯೊಡನೆ  ವನವ ಚರಿಸಿದಗೇ                           ॥2 ॥

ಮಂಡಲದೊಳಗೆ ತಾ  ಚಂಡ ವಿಕ್ರಮರಾದ
ಪಾಂಡು ಸುತರನು ಪೊರೆದ  ಪುಂಡರೀಕಾಕ್ಷ                            ॥3 ॥

ಧಾರುಣಿಗತಿಶಯ  ವರ ಕುಂಕುಮನಪುರಾ
ವರದನೇ ಸಲಹೋ ಶ್ರೀ  ಹರಿಯೇ  ನೃಸಿಂಗಾ                         ॥4 ॥

* * *

ಪರಿಸಮಾಪ್ತಿ ದರುವು ತ್ರಿವುಡೆ

ಅಂಬಿಕಾಸುತ ದಂತಿ ಮುಖನನೂ
ಕಂಬು ಕಂಧರೀ ಶಾರದೆಯನೂ
ಅಂಬುಜೋದ್ಭವ ಪಿತನ ಸುಖನನು  ನಂಬಿ ನುತಿಸುವೆನೂ         ॥1 ॥

ವರುಷ ಶುಭಕೃತು ಮಾಸ ಶ್ರಾವಣ
ನೆರೆದಿರಲು ತಾ ಶುಕ್ಲ ಪಕ್ಷದೀ
ಇರುವ ಉತ್ತರ ತಾರೆಯೊಳು ಶನಿ  ವಾರ ಪ್ರಕಟಿಸಿದಾ              ॥2 ॥

ಧಾರುಣಿಯೊಳು ಹಿರಿಯ ಬಳ್ಳಾ
ಪುರದ ಹಣಬೇ ಶ್ರೀಕಂಠಪ್ಪನ
ವರಸುಪುತ್ರನು ಸುಬ್ಬರಾಯ  ಪ್ಪಾನು ಬರೆದಿಹನೂ                   ॥3 ॥

ಧರಣಿ ಕುಂಕುಮ ಪುರ ನೃಸಿಂಗನಾ
ಪರಮ ಸಖ ಶ್ರೀ ಹಿರಿಯ ಬಳ್ಳಾ
ಪುರದ ಸೋಮೇಶ್ವರನ ಕರುಣದಿ  ತಿದ್ದಿ ಪ್ರಕಟಿಸಿದಾ                 ॥4 ॥

 

* * *