ದರುವು

ಛಲವ್ಯಾತಕೈಯ್ಯಾ  ನಿಮ್ಮಯ ಕಾರ‌್ಯ
ಚೆಲುವಾಯಿತೈಯ್ಯ ॥ಪ ॥
ಅಳುವಡಿಸಿದ ಮೂರು  ವೇಳೆಯೊಳು ಸೇತುವೆ
ಚೆಲುವ ಹನುಮನು ಮುರಿಯೇ  ಬೀಳುವುದಗ್ನಿಗೇ ॥                  ॥1 ॥

ಕಪಟದ್ವಿಜ: ಅಯ್ಯ ಅರ್ಜುನ ಭೂಪಾಲ! ಅಯ್ಯ ಹನುಮಂತ! ನೀವು ಗೈದಿರತಕ್ಕ ಕಾರ‌್ಯ ಭಾಗಗಳು ಬಹಳ ಚೆನ್ನಾಗಿರುವುದು, ಈ ಹನುಮಂತನು ಸೇತುವೆಯನ್ನು ಮೂರಾವರ್ತಿ ಮುರಿದಂಥದ್ದು, ನೀನು ಅಗ್ನಿಕುಂಡದಲ್ಲಿ ಬೀಳುವಂಥದ್ದು ಇವುಗಳನ್ನು ನೋಡಲು ಬಹುಚೆಂದವಾಗಿರುತ್ತೈಯ್ಯ ಬಹು ಚೆಂದವಾಗಿರುತ್ತೆ॥

ದರುವು

ಕೇಳೈಯ್ಯ ನೀನೂ  ಶರಧಿಗೆ ಸೇತೂ
ಬಲಿವ ಕಾಲದೊಳೂ ॥
ಕಲಿಹನುಮಂತನು  ತುಳಿವ ಸಮಯದೊಳಿಲ್ಲಿ
ನೆಲೆಯಾದ ಸಾಕ್ಷಿಗ  ಳುಂಟೇನು ಪೇಳೈಯ್ಯ ॥ಛಲವ್ಯಾತಕೈಯ್ಯಾ ॥2 ॥

ಕಪಟದ್ವಿಜ: ಎಲೈ ಪುರಂಧರಾತ್ಮಜಾ ! ನೀನು ಸೇತುವೆಯನ್ನು ಬಲಿವ ಕಾಲದಲ್ಲಿ ಧಾರಾದರೂ ನೆಲೆಯಾದ ಸಾಕ್ಷಿಗಳುಂಟೋ. ಅಯ್ಯ ಮಾರುತಿ! ನರನು ಬಲಿದ ಸೇತುವೆಯನ್ನು ನೀನು ಮುರಿಯುವ ಕಾಲದಲ್ಲಿ ಧಾರಾದರೂ ಸರಿಯಾದ ಸಾಕ್ಷಿಗಳಿದ್ದರೋ ಏನೈಯ್ಯ, ಸರಿಯಾದ ಸಾಕ್ಷಿಗಳಿಲ್ಲದೇ ನಿಮ್ಮಲ್ಲಿ ನೀವೇ ಪ್ರತಿಜ್ಞಾಬದ್ಧರಾಗಿ ಅಗ್ನಿಕುಂಡದಲ್ಲಿ ಬೀಳುವಂಥದ್ದು ಧಾವ ನ್ಯಾಯ ? ಆದರೆ ನಾವು ಸ್ವಲ್ಪ ಹೇಳುತ್ತೇವೆ ಕೇಳಿರೈಯ್ಯ ಕೇಳಿ ॥

ದರುವು

ಮಾಡು ಸೇತುವೆಯಾ  ಮುರಿಯಲಿ ಹನುಮ
ನೋಡುವೆ ವೈಯ್ಯ ॥
ರೂಢಿ ಕುಂಕುಮ ಪುರದ  ಒಡೆಯನ ಭಕ್ತನು
ಗಾಢಾದಿಂ ಮುರಿದರೇ  ಕೂಡು ವಹ್ನಿಯ ನೀನು ॥ಛಲವ್ಯಾತಕೈಯ್ಯಾ ॥3 ॥

ಕಪಟದ್ವಿಜ: ಅಯ್ಯ ಕಿರೀಟಿ! ಯಾರು ಇಲ್ಲದ ವೇಳೆ ಸೇತುವೆಯನ್ನು ಕಟ್ಟಿದಂಥ ಧೀರ ಪರಾಕ್ರಮಿಯಾದ ನೀನು ಮತ್ತೊಂದು ಬಾರಿ ಸೇತುವೆಯನ್ನು ಮೂಡಲಿಸು. ಪವನಜನ ವಡಂಬಡಿಸಿ ಕೊಡುತ್ತೇವೆ. ಅಯ್ಯ ಮಾರುತಿ, ಮೂರಾವರ್ತಿ ಸೇತುವೆಯನ್ನು ಮುರಿದಂಥ ವೀರಾಗ್ರಣಿಯಾದ ನೀನು ಸರಸತರ ಕುಂಕುಮನ ಪುರಿ ನರಸಿಂಹಮೂರ್ತಿಗೆ ವರಭಕ್ತ ಶಿರೋಮಣಿಯಾದದ್ದಕ್ಕೆ ಇನ್ನೊಂದು ಸಾರಿ ಸೇತುವೆಯನ್ನು ಮುರಿ. ನಾವು ಸಾಕ್ಷೀಭೂತರಾಗಿರುತ್ತೇವೆ. ಈತ ಸೋತ. ಈತ ಸೋತನೆಂಬುವಂಥದ್ದನ್ನು ಹೇಳುತ್ತೇವೆ. ಜಾಗ್ರತೆಯಿಂದ ಸೇತುವೆಯನ್ನು ಬಂಧಿಸೈಯ್ಯ ವಾಸವಾತ್ಮಜಾ ನೀನು ಅದಕ್ಕನುಮೋದಿಸೈಯ್ಯ ಪವನಾತ್ಮಜಾ ॥

ಅರ್ಜುನ: ಸ್ವಾಮೀ ! ದ್ವಿಜ ಸಾರ್ವಭೌಮರೇ ! ತಮ್ಮ ಅಪ್ಪಣೆಯಂತೆ ಸೇತುವೆಯನ್ನು ಈಗಲೇ ಬಂಧಿಸುವೆನು. ಭೂಸುರೋತ್ತಮರೇ ॥

ದರುವು

ಸಿದ್ಧವಾಗಿದೆ ನೋಡೋ  ಈಗ
ಒದ್ದು ಕೆಡಹೀಡಾಡೋ ॥
ಸುದ್ಧಿಗಳನು ಬಿಟ್ಟು ಮೊದ
ಲಿದ್ದ ಭಾಷೆಯ ನೀನು ಮಾಡೋ                                           ॥1 ॥

ಅರ್ಜುನ: ಯಲಾ ! ಗದ್ಧ ಮುಸುಕ ! ಗುದ್ಧರಗಣ್ಣು ಉದ್ದವಾದ ಬಾಲವುಳ್ಳ ವೃದ್ಧ ಮರ್ಕಟನೇ ಕೇಳು! ಬದ್ಧವಾದ ಈ ಶರಪಂಜರವನ್ನು ಸಿದ್ಧಪಡಿಸಿರುವೆನು. ಅದ್ಭುತ ಪರಾಕ್ರಮಿ ನೀನಾದರೆ ಒದ್ದು ಕೆಡಹಿ ಧರೆಗುರುಳಿಸುವಂಥವನಾಗು, ಹಾಗಿಲ್ಲದಿದ್ದರೆ ಈ ಸುದ್ಧಿಗಳನ್ನು ಬಿಟ್ಟು ಮೊದಲಾಡಿದ ಭಾಷೆಗೆ ಬದ್ಧನಾಗೋ ಕಪಿಯೇ ವಿಪಿನ ವಾಸಿಯೇ ॥

ಆಂಜನೇಯ: ಎಲೈ ಪಾರ್ಥ  ಇದು ಎಷ್ಠರ ಕಾರ‌್ಯ ! ಈ ಶರ ಸೇತುವೆಯನ್ನು ಏಕಚರಣದಿಂದ ಮುರಿದು ಕೆಡಹುವೆನು. ಪರಿಕಿಸಿ ನೋಡುತ್ತಿರೋ ಕಿರೀಟಿ ಯನಗಾರು ಸರಿಸಾಟಿ. ಆಹಾ. ಶ್ರೀಹರಿ! ದಾನವಾರಿ ಗರುಡಧ್ವಜ. ಮರಳಿ ಮರಳಿ ನಾನು ತರಣಿ ಮಂಡಲ ಪರಿಯಂತರಕ್ಕೂ ಹಾರಿ ತುಳಿದರೂ ಶರಪಂಜರ ಗರಿ ಸೋಂಕದೆ ಇರುವ ಪರಿಯನ್ನು ನೋಡಿದರೆ ಸರಸತರ ಕುಂಕುಮನಪುರಿ ನರಕೇಸರಿಯೆನ್ನುವ ಶ್ರೀರಾಮನೇ ಬಲ್ಲ ? ಹರಿ ಪರಮಾತ್ಮ ! ಈ ದುರುಳನಾದ ನರಾಧಮನಾಜ್ಞೆಗೊಳಗಾಗಿ ಚಿರಕಾಲಮಿರ್ಪ ಪರಿಯಿತ್ತೆಯಾ ಪರಮಾತ್ಮನೇ ! ನಿರುತವು ನಿನ್ನ ಚರಣ ಸೇವಕನಾದ ಯನ್ನನ್ನು ಈ ಕೊರತೆಗೆ ಈಡು ಮಾಡಿದೆಯಾ ಶ್ರೀಹರಿ ! ಧರೆಯೋಳ್ ಈ ದೇಹವಿರಲು ವ್ಯರ್ಥವಲ್ಲದೇ ಸಾರ್ಥಕವಾಗಲರಿಯದೋ ರಾಮನೇ. ಹರಿ, ವಾಸುದೇವನೇ ಈ ದೇಹವನ್ನಾದರೂ ಪರಿಹರಿಸಿಕೊಳ್ಳುವೆನೆಂದರೆ ಚಿರಂಜೀವಿಯಾಗಿರೆಂದು ಸುರ ಶ್ರೇಷ್ಠರಿಂದ ವರಮಂ ಪಡೆದಿರುವೆನು. ಈ ಶರೀರವನ್ನಾದರೂ ಗರಗಸದಿಂದ ಕೊರೆದು ಬಿಡಿಸುವೆನೆಂದರೆ ಹರಿಯುವುದಿಲ್ಲ, ಮುರಿಯುವುದಿಲ್ಲ. ಧರೆಯೊಳು ಮರಣವೇ ಇಲ್ಲಾ. ಹರಿ, ಮುಕುಂದಾ, ಮಾಧವಾ, ದುರಿತ ಹರಣಾ, ಈ ಪರಮ ಪಾಪಿಷ್ಠ ದೇಹವನ್ನು ಹ್ಯಾಂಗೆ ವರೆಯಲೋ ರಾಮನೇ ಈ ದುರಿತವನ್ನು ನೀನೇ ಪರಿಹರಿಸಿ ಕಾಯಬೇಕೋ ಸೀತಾಪತಿ ನಿನ್ನ ಚರಣಾರವಿಂದವೇ ಗತಿ ॥

 

 

(ಶ್ರೀರಾಮ ಬರುವಿಕೆ)

ತೆರೆದರುವುತ್ರಿವುಡೆ

ಶ್ರೀಮಹಿತ ವಿಭ್ರಾಜ ಸುಂದರಾ
ಭೂಮಿಪರ ಗಂಭೀರ ಹಿಮಕರಾ
ಸ್ವಾಮಿ ದಾನವ ಭೀಮ ವರರಘು  ರಾಮ ತಾ ಬಂದಾ               ॥1 ॥

ನರನ ಶರಪಂಜರದ ಸೇತುವೆ
ಮುರಿಯಲಾರದೆ ಮನದೊಳಗೆ ಕಪಿ
ವರನು ಚಿಂತಿಸುತಿರುವ ಪರಿಯನು  ಅರಿತು ತಾನಾಗ               ॥2 ॥

ಧರಣಿ ಕುಂಕುಮ ಪುರವ ಪಾಲಿಪ
ವರ ನೃಸಿಂಗನು ಯೆನುವ ಶ್ರೀರಘು
ವರನು ಕರುಣಿಸಿ ಬಿಜಯಂಗೈದನು  ಶರಣನಿದ್ದೆಡೆಗೇ                 ॥3 ॥

ಆಂಜನೇಯ: ಇದೇ ಶಿರಸಾಷ್ಟಾಂಗ ಬಿನ್ನಹವೈಯ್ಯ ಮಹಾನುಭಾವ

ಶ್ರೀರಾಮ: ಚಿರಾಯುವಾಗಿರಪ್ಪಾ ಮಾರುತೀ

ಆಂಜನೇಯ: ಹೇ ಸ್ವಾಮಿ. ಇಂದಿರಾಪತಿ-ರಘುಪತಿ. ಇಂದಿನ ದಿನ ಪಾರ್ಥನ ದೆಶೆಯಿಂದ ಯನಗೆ ಬಂದೊದಗಿದ ಅಪಮಾನವನ್ನು ಸುಂದರ ಮೂರ್ತಿಯಾದ ನಿನ್ನ ಪಾದ ಸನ್ನಿಧಿಯಲ್ಲಿ ಯೇನೆಂದು ಹೇಳಲೈ ಸ್ವಾಮಿ ಸೀತಾ ಮನೋ ಪ್ರೇಮಿ ॥

ದರುವು

ವಾತಸಂಭವ ನೀನೂ  ಸೋತೆನೆಂಬುವುದನ್ನು
ನೀತವಲ್ಲವೂ ತಿಳಿಯೈ  ಪವನಜ ಕೇಳೈ ॥
ಆತನ ಪಕ್ಷದಲೀ  ಸೇತುವೆಯೊಳು ಬೆನ್ನಾ
ಆತು ಸೋಲಿಸಿದೆ ಮುನ್ನಾ  ಕಪಿವರನೆ ನಿನ್ನಾ                          ॥1 ॥

ಶ್ರೀರಾಮ: ಅಯ್ಯ ವಾತಸಂಭವನಾದ ಹನುಮಂತನೇ, ಶ್ವೇತವಾಹನನಿಗೆ ಸೋತೆನೆಂಬ ಸಂಶಯವನ್ನು ಬಿಡು  ಪ್ರೀತಿಯಿಂ ನಾನೊರೆಯುವ ಮಾತಿನ ಮೇಲೆ ಚಿತ್ತವಿಡು. ಖ್ಯಾತಿಯುತ ಪಾರ್ಥನು ಬಲಿಸಿದ ಸೇತುವೆಗೆ ನಾ ತವಕದಿಂ ಮೈಯಾಂತು ಈ ತೆರದಿ ನಿನ್ನ ಸೋಲಿಸಿದೆನಪ್ಪಾ ಮಾರುತಿ  ನೀನು ಮನದೊಳಗೆ ಯೋಚಿಸದೆ ಇರು ಅತಿ ॥

ದರುವು

ಸಂದ ಯುಗದೊಳು ಭಕ್ತಾ  ಇಂದ್ರಸುತ ಫಲುಗುಣನು
ಇಂದು ಯುಗದೊಳಗೆ ಸಖನೂ  ಕೇಳೈಯ್ಯ ನೀನೂ ॥
ಮುಂದೆ ಕಾರ‌್ಯಗಳು ನಿ  ನ್ನಿಂದ ಬಹಳಾವುಂಟು
ಅಂದು ನಿಮಿತ್ಯಾ ಈಗಾ  ಸೋಲಿಸಿದೆ ಬೇಗಾ                          ॥2 ॥

ಶ್ರೀರಾಮ: ಎಲೈ ಮಂದ ಮಾರುತ ತನಯನೇ ! ಸಂದ ಯುಗದಲ್ಲಿ ಯನಗೆ ನೀನು ಪ್ರಿಯ ಮಿತ್ರನು. ಇಂದಿನ ಯುಗದಲ್ಲಿ ಪುರಂದರಾತ್ಮಜನಾದ ಈ ಪಾರ್ಥನು ಯನಗೆ ಬಂಧು ಮಿತ್ರನಾದ್ದರಿಂದ ಮುಂದೆ ನಿನ್ನಿಂದ ಆತನಿಗಾಗಬೇಕಾದ ಕೆಲವು ಕಾರ‌್ಯೋನ್ನತೆಗಳು ಇರುವ ಪ್ರಯುಕ್ತ ನಿನ್ನನ್ನು ಸೋಲಿಸಿದೆನು. ಇದಕ್ಕಾಗಿ ನೀನು ಚಿಂತಿಸದೆ ನೀವಿಬ್ಬರೂ ಪರಸ್ಪರ ಸ್ನೇಹ ಭಾವದಿಂದಿರಬೇಕೈ ಅಂಜನಕುವರಾ ವಜ್ರ ಶರೀರಾ ॥

ದರುವು

ಫಲುಗುಣನೆ ಪೇಳುವೆನು  ಗೆಲಿದೆನೆಂಬುವ ಶೌರ‌್ಯಾ
ಛಲವು ಮಾಡಲು ಬೇಡೈಯ್ಯ  ಕೇಳೈಯ್ಯ ವಿಜಯ ॥
ನೆಲವು ಕುಂಕುಮಪುರ  ನಿಲಯ ನೃಸಿಂಗನಾ
ಸಲೆ ಭಕ್ತಹನುಮನನ್ನೂ  ವಲಿಸುವುದು ಇನ್ನೂ                         ॥3 ॥

ಶ್ರೀರಾಮ: ಎಲೈ ಕಲಿ ಧನಂಜಯಾ ವಿಜಯಾ ಸಲೆ ಚದುರನಾದ ಹನುಮನೋಳ್ ಕಾದಿ ಗೆಲಿದೆನೆಂಬ ಶೌರ‌್ಯವು ಮಾತ್ರ ಪ್ರಬಲಿಸಬೇಡ ಕಂಡ್ಯಾ. ಸಲ್ಲಲಿತ ಕುಂಕುಮನಪುರಿ ಲಕ್ಷ್ಮೀಮನೋಹರಗೆ ಸಲೆ ಭಕ್ತನಾದ ಈ ಕಲಿ ಹನುಮನಿಂದ ನಿನಗಾಗಬೇಕಾದ ಕೆಲವು ಕಾರ‌್ಯೋನ್ನತಗಳಿರುವುದರಿಂದ ಸಲಿಗೆಯಿಂದ ಈತನನ್ನು ವಲಿಸಿಕೊಂಡು ಅನ್ನೋನ್ಯ ಮಿತ್ರತ್ವದಿಂದಿರಬೇಕೈ ವಿಜಯಾ-ಧನಂಜಯಾ ॥ಇನ್ನು ನಾನು ಪೋಗಿ ಬರುವೆನೈ ವಿಜಯಾ-ಹೇ ಆಂಜನೇಯಾ ॥

ಅರ್ಜುನ: ಅದೇ ಪ್ರಕಾರ ನಡೆಯುತ್ತೇನೈ ದೇವಾ ಕರುಣ ಪ್ರಭಾವ ॥

ಆಂಜನೇಯ: ತಮ್ಮ ಚಿತ್ತಾಭಿಪ್ರಾಯದಂತೆ ವರ್ತಿಸುವೆವೈ ಸ್ವಾಮೀ  ಭಕ್ತಜನ ಪ್ರೇಮೀ ॥

ಅರ್ಜುನ: ಶರಣು ಶರಣೈಯ್ಯ ಸ್ವಾಮಿ  ಹರಿಕುಲಾಧಿಪನೇ  ಪರಮ ಪರಾಕ್ರಮವಂತನಾದ ನಿನ್ನ ಪ್ರಭಾವಗಳ್ ತಿಳಿಯದೆ ಅಲ್ಪಮತಿಯಾದ ನಾನು ವೃಥಾ ಪೌರುಷಗಳ್ ತೋರಿಸಿದ ತರಳನಾದೆನ್ನ ಅಪರಾಧಂಗಳ್ ಮನ್ನಿಸಿ ಸಲಹಬೇಕೈ ಪವನ ಸಂಜಾತ ಪರಮ ಪ್ರಖ್ಯಾತ ॥

ಆಂಜನೇಯ: ಎಲೈ ಕರುಣಾಕರನಾದ ಪಾರ್ಥ ! ತ್ರಿಲೋಕ ಸಮರ್ಥ, ಪರಿ ಪರಿಯಿಂದ ನಿನ್ನ ರಕ್ಷಿಸುವ ಭಾರ ಸರಸತರ ಕುಂಕುಮನಪುರಿ ಲಕ್ಷ್ಮೀವರನದಾಗಿರುವುದಲ್ಲದೇ ಯನ್ನಿಂದಲೇನಾಗುವುದು? ಹೇ ಪುರಂದರಾತ್ಮಜಾ ನನ್ನನ್ನು ಸ್ಮರಿಸಿದ ಕಾಲದಲ್ಲಿ ಭರದಿಂದ ಬಂದೊದಗುವೆನು, ಹರಿಸಾಕ್ಷಿಯಾಗಿ ಇದೇ ಭಾಷೆಯೆಂದು ತಿಳಿಯೈ ಕಿರೀಟಿ ನಿನಗಾರು ಸರಿಸಾಟಿ ॥

ಅರ್ಜುನ: ಹಾಗಾದರೆ ನಾನು ಭೂಪ್ರದಕ್ಷಿಣೆಗೆ ಹೋಗಿ ಬರಲೇ ಸ್ವಾಮಿ ಆಂಜನೇಯ ಮೂರ್ತಿಯೇ॥

ಆಂಜನೇಯ: ಹೋಗಿ ಬರಬಹುದೈ ಅರ್ಜುನ ಭೂಪಾಲ-ನಿರ್ಜರಾಧಿಪನ ಬಾಲ ॥

(ಚಿತ್ರಾಂಗದೆ ಬರುವಿಕೆ)

ದ್ವಿಪದೆಕಾಂಭೋದಿ ರಾಗ

ಶ್ರೀರಮಣೀ ಮಣಿ  ಶೃಂಗಾರ ವೇಣೀ
ಮಾನಿತೆ ಗುಣಮಣಿ, ಮಹಿತೆ ಕಲ್ಯಾಣಿ ॥
ಸರಸಿಜಪಾಣಿ, ವನಿತೆ ಕಟ್ಟಾಣಿ
ಧರೆ ಪಾಂಡ್ಯರಾಜನ, ವರ ಪುತ್ರಿಯಾದ
ತರುಣಿ ಚಿತ್ರಾಂಗದಾ ದೇವಿ ತಾನಾಗ
ಮುಗುಳುನಗೆ ಬೀರುತಲಿ ಮೋಹನಾ ತಾರೇ
ಕಡಗ ಕಂಕಣ ಝಣತ್ಕಾರಂಗ ಳೊಲಿಯೇ
ಉಡುರಾಜ ಮುಖಿ ನಡುವಿನೊಡ್ಯಾಣವಳವಟ್ಟೂ
ಕರದೊಳು ವರಬಾಜಿ ಬಂದು ವಪ್ಪುತಲೀ
ಪರಮಪಾವನೆ ಸರಸಿಜಾರಿಯನು ಪೋಲ್ವ
ಸರಸತರ ಕೆನ್ನೆಗಳಿಗರಿಸಿನವ ಪೂಸಿ
ಪರಿಪರಿಯ ಕುಸುಮಗಳ ತುರುಬಿಗಳವಡಿಸಿ
ಧರೆಗಧಿಕ ಕುಂಕುಮನ ಪುರವಾಸ ನೆಂದೆನಿಪ
ನರಸಿಂಹ ಮೂರ್ತಿಯ ಚರಣ ಕಮಲಗಳಾ
ಸ್ಮರಿಸುತಲಿ ನಡೆತಂದು ತೆರೆಯೊಳಗೆ ನಿಂದಳೂ ॥

ತೆರೆದರುವು

ಸಾರಸಾಕ್ಷೀ ತೋರಿಸೇ  ಸ್ಮರ ರೂಪನಾ
ಸ್ಮರರೂಪನಾ  ಯನ್ನ  ಮನಕೆ ವಪ್ಪುವನಾ ॥ಪ ॥
ಸರಸಿಜಮುಖಿ ನಾ  ಸೈರಿಸಲಾರೆನೂ
ಸ್ಮರನುಪಟಳವನು  ಸರಸದಿ ನೀಂ                                       ॥1 ॥

ಚಿತ್ರಾಂಗದೆ: ಅಪ್ಪಾ ಚಾರಕಾ! ಹೀಗೆ ಬಾ ! ಅಪ್ಪಾ ಚಾರಕುಲ ಶ್ರೇಷ್ಠನೇ ! ವಪ್ಪದಿಂ ಕಪ್ಪುಗೊರಳನಾದ ಸರ್ಪಭೂಷಣನಂ ಸ್ತುತಿಸಿ ಭಜಿಸುವ ಸರ್ಪವೇಣಿಯರಾದ ಅಪ್ಸರ ಸ್ತ್ರೀಯರ ನರ್ತನದಿಂ ಪರಿ ಶೋಭಿಸುತ್ತಿರುವ ಈ ಸಭಾ ಸ್ಥಾನದೋಳ್ ಬಂದು ನಿಂದು ಇಭಗಮನೆಯಾದ ಯನ್ನನ್ನು ಮಾತನಾಡಿಸುವ ನೀ ಧಾರೋ ಚರನೇ ಚರರೋಳ್ ಪ್ರಖ್ಯಾತನೇ ॥

ಅಣ್ಣಯ್ಯ ಸಾರಥೀ ! ಸಡಗರದಿಂದ ಈ ಪಾಂಡ್ಯದೇಶವನ್ನು ಪರಿಪಾಲಿಸುತ್ತಿರುವ ಪಾಂಡ್ಯರಾಜನ ಪುತ್ರಿ ಜಲಜ ನೇತ್ರೆ. ಉಡುರಾಜ ಮುಖಿಯಾದ ಚಿತ್ರಾಂಗದೆಯೆಂಬ ಪೆಸರನ್ನು ಪಡೆದಿರುವ ಬಡ ನಡುರನ್ನೆ, ಕಡು ಸಂಪನ್ನೆ ನಾನೇ ಅಲ್ಲವೇನಪ್ಪಾ ಸಾರಥೀ ॥- ಅವನೀಂದ್ರ ಸಚಿವಾಂಬುಧಿ ॥

ಅಣ್ಣಯ್ಯ ಸಾರಥೀ! ಮಂಗಳತರಮಾದ ಈ ರಂಗಸ್ಥಳಕ್ಕೆ ಆಗಮಿಸಿದ ಪರಿಯಾಯವೇನೆಂದರೆ ಮಂಗಳಪ್ರದಳಾದ ಗಂಗಾಂಬಿಕೆಯನ್ನು ಅರ್ಚಿಸಲು ಬಂದಾ ಸಮಯಲ್ಲಿ ಧಾರೋ ಮಾರ ಸಮರೂಪನಾದ ಪುರುಷ ಶ್ರೇಷ್ಠನು ಈ ವೃಕ್ಷದಡಿಯಲ್ಲಿ ಕುಳಿತಿರುವನು. ನಾನು ತ್ವರಿತದಿಂ ಪೋಗಿ ಸುಂದರನು ಧಾರೋ ವಿಚಾರಿಸುತ್ತೇನಪ್ಪಾ ಸಾರಥೀ ॥

ಚಿತ್ರಾಂಗದೆ: ಆಹಾ! ಮಾರ ಸುಂದರನಾದ ರಾಜನೇ ನೀನು ಧಾರು ? ಧಾರೊಬ್ಬರಿಲ್ಲದ ಈ ಕಾಂತಾರದಲ್ಲಿ ಓರ್ವನೇ ಕುಳಿತಿರುವ ಕಾರಣವೇನು ? ವಾರಿಜಮಿತ್ರನಂತೆ ಕಾಂತಿಯಂ ಬೀರುವ ನಿನ್ನ ಸುಂದರಾಕಾರವನ್ನು ನೋಡಿ ನೀರೆಯಾದ ಯನ್ನ ಮನವು ಸಂಮೋಹಿಸುತ್ತಿರುವುದಾದ ಕಾರಣ ಧೀರನಾದ ನಿನ್ನ ಪುರವ್ಯಾವುದು? ಚಾರುತರಮಾದ ನಿನ್ನ ನಾಮಾಭಿಧಾನವೇನು ? ವಿಸ್ತರಿಸಿ ಪೇಳಬೇಕೈ ಧರಾಧಿಪಾ ಕೀರ್ತಿಕಲಾಪ ॥

ಅರ್ಜುನ: ಏಣಾಂಕ ವದನೆಯಾದ ನಾರೀಮಣಿಯೇ ಕೇಳು! ಕ್ಷೋಣಿ ಮಧ್ಯದೋಳ್ ಮಾಣದೆ ಒಪ್ಪುತ್ತಿರುವ ಇಂದ್ರಪ್ರಸ್ತ ಪುರವನ್ನು ಸಾಂದ್ರ ವೈಭವದಿಂದ ಪರಿಪಾಲಿಸುವ ಚಂದ್ರ ವಂಶ ಸಂಜಾತನಾದ ಪಾರ್ಥರಾಜನೆಂದರಿಯೇ ಕಮಲ ವಾಸಿನೀ ಅಮಿತ ಕರುಣೋಲ್ಲಾಸಿನೀ ॥

ದರುವು

ಪೊಡವಿ ಪಾಲಕ ವಿಜಯಾ  ನೀ
ದೃಢದಿ ಲಾಲಿಸು ನುಡಿಯಾ ॥
ಒಡೆಯ ಯನ್ನೊಳು ಬೆರೆದು ಭೋಗಿಸಿ
ಬಿಡದೆ ಪಾಲಿಸೋ ದಯದೊಳೀಗಾ ॥                                   ॥1 ॥

ಕಾಮನಂಬಿಗೆ ಸಿಲುಕಿ  ನಾನು
ಪ್ರೇಮದಿಂ ಮರೆ ಹೊಕ್ಕೆನು
ನೇಮದಿಂದಲಿ ಕೂಡೋ ಯನ್ನನೂ
ಭೂಮಿಪಾಲ ಬೇಡಿಕೊಂಬೆನೂ                                             ॥2 ॥

ಚಿತ್ರಾಂಗದೆ: ಪೊಡವಿಪತಿಯಾದ ಅರ್ಜುನ ಭೂಪಾಲಕನೇ ಲಾಲಿಸು, ಮೃಡನ ವೈರಿಯು ಬಿಡುವ ಶರದ ಘಾತಿಗೆ ನಾನು ತಡೆಯಲಾರದೆ ಕಡು ಕಳವಳ ಪಡುವೆನಾದ ಕಾರಣ ಒಡೆಯನಾದ ನೀನು ಸಡಗರದಿಂ ಯನ್ನೋಳ್ ಬೆರೆದು ಕೆಡಕು ಮದನನ ಭಾದೆಯನ್ನು ಬಿಡಿಸಿ ತಡೆಯದೆ ಯನ್ನ ಕೈ ಪಿಡಿದು ರಕ್ಷಿಸೋ ರಾಜ ಜಲಜ ಸಖತೇಜ ॥

ದರುವು

ನೋಡಿ ಸ್ಮರನ ರೂಪಾ ಇನ್ನು
ಬಿಡೆನು ನಿನ್ನನು ಭೂಪಾ
ರೂಢಿಪಾಲಕ ಕೂಡೋ ಯನ್ನನು
ಬೇಡಿಕೊಂಬೆ ಚರಣಕೆರಗೀ                                                  ॥3 ॥

ಚಿತ್ರಾಂಗದೆ: ಪೊಡವಿಯೊಳು ಮದನನಿಗೀಡಾಗಿ ತೋರ್ಪ ರೂಢಿಪಾಲಕನೇ ಕೇಳು ! ಇಂದಿನ ದಿನ ನಿನ್ನ ಸುಂದರತ್ವಗಳ ನೋಡಿ ಕೂಡಬೇಕೆನ್ನುವ ಅಭಿಲಾಷೆಯಿಂದ ಗಾಢ ತವಕದಿಂ ಮೋಹಿಸಿ ಇರುವೆನು. ಗಾಡಿಕಾರ್ತಿಯಾದೆನಗೆ ಕೂಡಿರುವ ಮದನ ಜಾಡ್ಯಕ್ಕೆ ಔಷಧಿ ಇತ್ತು ಕಾಪಾಡಬೇಕೈ ದಯಾವಂತನೇ ಭೂಪರೋಳ್ ಧೀಮಂತನೇ.

ದರುವು

ಧರಣಿ ಕುಂಕುಮ ಪುರವನೂ
ಪೊರೆವ ಹರಿಯು ಮೆಚ್ಚುವನೂ ॥
ಸರಸ ಸುಂದರ ಬೇಡಿಕೊಂಬೆನೂ
ವರಿಸೋ ಕರುಣವಿಟ್ಟು ಯನ್ನನೂ                                          ॥4 ॥

ಚಿತ್ರಾಂಗದೆ: ಹೇ ಧರಣಿಪಾಗ್ರಣಿಯೇ! ಸ್ಮರನಂತೆ ಪರಿಶೋಭಿಸುತ್ತಿರುವ ಪಿರಿದಾದ ನಿನ್ನಯ ರೂಪಾತಿ ಶಯಗಳಿಗೆ ಬೆರಗುಪಟ್ಟು ವರಿಸಬೇಕೆಂದಿರುವೆನು. ಕರುಣವಿಟ್ಟು ಯನ್ನೊಳು ಸುರತ ಸುಖಪಟ್ಟರೇ ಸರಸತರ ಕುಂಕುಮ ಪುರಾಧಿಪ ನರಸಿಂಹ ಮೂರ್ತಿಯೆನಿಪ ಶ್ರೀಕೃಷ್ಣನು ಕರುಣದಿಂದ ನಿನ್ನ ಪೊರೆಯುವನೇಳೋ ರಾಯ ಆಗೆನಗೆ ಪ್ರಿಯಾ ॥

ದರುವು

ಮದನ ಮೋಹಿನಿಯೇ ಕೇಳೆ ! ಪೇಳುವೆನೀಗಾ
ಪದುಮ ದಳಾನನೆಯೇ ॥ಪ ॥
ಮದನ ಸದನಕ್ಕೊದಗು ಯೆಂದು
ಮುದದಿ ಬೇಡುವೆ ಚದುರೆ ನಿನ್ನಯ ॥
ಹದನ ತಿಳಿಯದು ಸದುಮಲಾಂಗಿಯೇ
ಮುದದಿ ನಾ ವರಿಸುವುದು ಹ್ಯಾಂಗೇ                                      ॥1 ॥

ಅರ್ಜುನ: ಎಲೈ ಮದನ ಮೋಹಿನಿಯಾದ ಸುದತಿರನ್ನಳೇ ಕೇಳು! ಮದನ ಶರ ಪೀಡಿತಳಾಗಿ ಹೃದಯದಿ ಬೆದರಿಕೆಯಿಲ್ಲದೇ ಮುದದಿಂದೆನ್ನ ವರಿಸಬೇಕೆಂದು ಬೇಡುವ ಹದನ್ಯಾವುದೋ ತಿಳಿಯದು! ಇದಕ್ಕೆ ಸಾದ್ಗುಣ್ಯವಾದ ಒಂದು ಧರ್ಮಶಾಸ್ತ್ರವಿರುವುದು, ಹ್ಯಾಗಂದರೇ, ಔದುಂಬರಾಣಿ ಪುಷ್ಪಾಣಿ, ಶ್ವೇತವರ್ಣಂಚ ವಾಯಸಃ  ಮತ್ಸ್ಯಪಾದೇ ಜಲೇ ಪರ್ಶ್ಯ, ನಾರೀ ಹೃದಯಂ ನ ಪಶ್ಯತಿ ॥ಎಂಬಂತೆ, ಹೇ ತರುಣಿ ಅತ್ತಿಯ ಹೂವನ್ನಾದರೂ ಕಾಣಬಹುದು. ಬಿಳಿಯ ಕಾಗೆಯನ್ನಾದರೂ ಕಾಣಬಹುದು, ಜಲದಲ್ಲಿ ಇರುವ ಮತ್ಸ್ಯದ ಹೆಜ್ಜೆಯನ್ನಾದರೂ ಕಾಣಬಹುದು. ಆದರೆ ಲಲಿತಾಂಗಿಯರಾದ ಸ್ತ್ರೀಯರ ಮನಸ್ಸನ್ನು ತಿಳಿಯಲ ಸಾಧ್ಯವಾಗಿರುವ ಕಾರಣ ನಿನ್ನ ವಚನವು ಹೇಗೆ ನಂಬಲಾಗುವುದೇ ವನಿತಾ ಯನಗಿಲ್ಲ ಸಮ್ಮತಾ ॥

ದರುವು

ತಂದೆ ತಾಯಿಗಳಿಲ್ಲವೇ  ಮಂದಿರದೊಳಗೆ
ಬಂಧೂ ಬಳಗವಿಲ್ಲವೇ ॥
ಇಂದಿನಾಗಮವೇನೋ ತೋಚದು
ಮಂದಗಮನೆಯೇ ಲಾಲಿಸೀಗಾ
ಇಂದಿರೇಶನೆ ಬಲ್ಲನಿದ ಯನ
ಗೊಂದು ತೋಚದು ಸುಂದರಾಂಗಿಯೇ ಮದನಮೋಹಿನಿಯೇ    ॥2 ॥

ಅರ್ಜುನ: ಎಲೈ ಕಂದರ್ಪನರಸಿಯಂತೊಪ್ಪುವ ಸುಂದರಾಂಗಿಯೇ ಕೇಳು ! ಇಂದು ಮಂದಾಕಿನಿ ತಡಿಯಲ್ಲಿ ನಿನ್ನ ವರಿಸಿದ್ದಾದರೇ, ಮಂದಿರದೊಳಿರುವ ನಿನ್ನ ತಂದೆ ತಾಯಿ ಬಂಧುಗಳೆಲ್ಲರೂ ಸಮ್ಮತಿಸುವರೇನೇ ಮಂದಗಮನೇ ಅಂದರೇ ನೀನಂದ ವಚನದಂತೆ ನಿನ್ನ ಮಂದಿರಕ್ಕೊಡಗೊಂಡು ಪೋದರೆ ಕುಂದದೆ ನಿನ್ನಭೀಷ್ಠವನ್ನು ನಡೆಸುವೆನು. ಮುಂದಿನ ಕಾರ‌್ಯಭಾಗಗಳ ಸಂದರ್ಭವೆನಗೆ ತೋಚದು. ಇಂದಿರೇಶನಾದ ಶ್ರೀಕೃಷ್ಣನ ಕೃಪೆ ಇದ್ದಂತಾಗುವುದು. ಮಂದಗಮನೆಯಾದ ನಿನ್ನ ಮನೋಭಿಪ್ರಾಯವು ಯನಗೆ ತಿಳಿಯದೇ ನಾರಿ ಅಸಮ ಸುಂದರಿ ॥

ದರುವು

ಧರಣಿ ಕುಂಕುಮ ಪುರದೀ  ನೆಲಸಿರುವ ಶ್ರೀ
ಹರಿ ನೃಸಿಂಗನ ದಯದೀ ॥
ವರಿಸುವೆನು ತರಳಾಕ್ಷಿ ನಿನ್ನನೂ
ಮರುಗದಿರು ಮನದೊಳಗೆ ಭಾಮಿನೀ
ತೆರಳು ಸದನಕೆ ಸ್ಮರನ ಕೇಳಿಯೋಳ್
ಬೆರೆಯುವೆನು ವರಗುರು ಪಯೋಧರೇ ಮದನ ಮೋಹಿನಿಯೇ ಕೇಳೆ ॥3 ॥

ಅರ್ಜುನ: ಸರಸಿಜಗಂಧಿಯಾದ ಹೇ ತರುಣಿ ಧರೆಯೊಳು ಕುಂಕುಮನಪುರಿ ನರಕೇಸರಿಯೆನ್ನುವ ಶ್ರೀಹರಿ ಕರುಣ ಕಟಾಕ್ಷದಿಂದ ನಿನ್ನ ವರಿಸುತ್ತೇನೆ. ಸ್ಮರನ ವಿರಹದಿಂದ ಮನದಿ ಮರುಗುವುದಂ ಬಿಟ್ಟು ಅರಮನೆಗೆ ಕರೆದುಕೊಂಡು ಹೋದರೆ ವರ ಜನನೀ ಜನಕರ ಅನುಮತಿಯಂ ಪಡೆದು, ಸರಸದಿಂ ನಿನ್ನ ವರಿಸುವೆನೇಳೇ ನೀರೆ ನೀತಿ ವಿಚಾರೇ ॥

ಚಿತ್ರಾಂಗದೆ: ಹಾಗಾದರೆ ಅರಮನೆಗೆ ತೆರಳೋಣ ಬಾರೈ ಇನಿಯಾ – ಅನಿಮಿಷಾಧಿಪನ ತನಯಾ॥

ದರುವುತ್ರಿವುಡೆ

ಭರತ ವಂಶಜ ಕೇಳು ಪೇಳುವೆ
ತರುಣಿ ಚಿತ್ರಾಂಗದೆಯು ತಾನು ॥
ಭರದಿ ಪಾರ್ಥನ ಕರೆದು ತಂದಳು  ಜನಕನಿದ್ದೆಡೆಗೆ                    ॥1 ॥

ಭಾಗವತರು: ಈ ಪ್ರಕಾರವಾಗಿ ಚಿತ್ರಾಂಗದೆಯು ಪಾರ್ಥನನ್ನು ಪ್ರೇಮದಿಂದ ಆತನ ಮನವೊಲಿಸಿ ತನ್ನ ತಂದೆಯಾದ ಪಾಂಡ್ಯರಾಜನ ಬಳಿಗೆ ಆತನನ್ನು ಕರೆತಂದು ಇಂತೆಂದಳೈಯ್ಯ ಭಾಗವತರೇ॥

 

(ಪಾಂಡ್ಯರಾಜ ಬರುವಿಕೆ)

ತೆರೆದರುವು

ಧರಣಿಗಧಿಕವಾದ ರಾಜ್ಯವೂ
ರಾರಾಜಿಸುತ್ತಾ
ಮೆರೆಯುತಿರುವ ಪಾಂಡ್ಯ ನಗರವೂ                                      ॥1 ॥

ರಾಜ ಸುರಪ ರಾಜನಂದದೀ
ಪರಿಪಾಲಿಸುತ್ತಾ
ರಾಜ್ಯವನ್ನು ಪರಮ ವಿಭವದೀ                                              ॥2 ॥

ಧರಣಿ ಕುಂಕುಮ ಪುರ ನಿವಾಸನೂ
ನರಹರಿಯ ಮನದೀ
ಸ್ಮರಿಸಿ ಬಂದ ಪಾಂಡ್ಯ ರಾಜನೂ                                          ॥3 ॥

ಚಿತ್ರಾಂಗದೆ: ನಮೋನ್ನಮೋ ಹೇ ಜನಕಾ ಕ್ಷಿತಿಜನ ಪಾಲಕಾ ॥

ಪಾಂಡ್ಯರಾಜ: ಸೌಮಂಗಲ್ಯಾಭಿವೃದ್ದಿರಸ್ತು ಬಾರಮ್ಮಾ ಪುತ್ರೀ ಸೌಂದರ‌್ಯಗಾತ್ರಿ ॥

ಚಿತ್ರಾಂಗದೆ: ತಂದೆಯಾದ ಪಾಂಡ್ಯರಾಜನೆ ಲಾಲಿಸು. ಕಡು ಸುಂದರನಾದ ಪಾರ್ಥ ರಾಜನು ಬಂದಿರುವನು. ಮಂದಹಾಸದಿಂದೆನ್ನವಗಿತ್ತು ಪರಿಣಯವಾಚರಿಸಬೇಕೈ ಜನಕಾ ನನಗಿದು ತವಕಾ॥

ಪಾಂಡ್ಯರಾಜ: ಅಯ್ಯ. ವರ ಪಾಂಡು ಮಧ್ಯಮನಾದ ಪಾರ್ಥ ರಾಜನೇ ಕರುಣವಿಟ್ಟು ನೀನಿಲ್ಲಿ ಆಗಮಿಸಿದ್ದು ಪರಮ ಸಂತೋಷವಾಯಿತು. ಆದರೆ ನೀನಿರುವ ನಿಜನಗರವ್ಯಾವುದು ? ನಿನ್ನ ಜನನೀ ಜನಕರು ಧಾರು? ಕರುಣವಿಟ್ಟು ಪೇಳಬೇಕೈ ದೊರೆಯೇ ॥ವರಗುಣ ನಿಧಿಯೇ ॥

ಕಂದ

ದೊರೆಯೇ ಪಾಂಡ್ಯರಾಜನೆ ಕೇಳೈ
ಧರೆ ಇಂದ್ರಪ್ರಸ್ತ ಪುರಮಂ ಪರಿಪಾಲಿಸುವ ॥
ವರ ಧರ್ಮಪುತ್ರನನುಜನು
ಅರಿಕುಲ ಗಜಸಿಂಗನೆನಿಪ ಪಾರ್ಥನು ನಾನೈ ॥

ಅರ್ಜುನ: ಆಹಾ! ವರದಯ ಗುಣ ಭರಿತನಾದ ಪಾಂಡ್ಯ ರಾಜನೇ ಕೇಳು! ಧರೆಗೆ ಪ್ರಖ್ಯಾತಮಾದ ಇಂದ್ರಪ್ರಸ್ತ ಪುರವನ್ನು ಪರಿಪಾಲಿಸುತ್ತಿರುವ ವರ ಧರ್ಮಯುಕ್ತನಾದ ಧರ್ಮರಾಯನ ಸಹೋದರ, ಅರಿಕುಲ ಗಜಕಂಠೀರವನೆಂಬ ಬಿರುದಾಂಕಿತನಾದ ಪಾರ್ಥ ತ್ರಿಲೋಕ ಸಮರ್ಥನೆಂಬ ಪೆಸರೆನಗಿರುವುದು, ಸರಸಿಜಾಕ್ಷಿಯಾದ ನಿಮ್ಮಯ ವರಪುತ್ರಿ ಚಿತ್ರಾಂಗದ ತರುಣಿ ಯನ್ನನ್ನು ಕರೆತಂದಳಾದ ಕಾರಣ ಬರಲಿಕ್ಕೆ ಕಾರಣವಾಯಿತೈ ರಾಜ ಆಶ್ರಿತಕಲ್ಪ ಭೋಜ ॥

ಕಂದ

ವರಪಾರ್ಥನೇ ಧರ್ಮ ಪುತ್ರನು
ಪರಿಣಾಮವೇ ದೃಪದ ತನುಜೆ ಕುಶಲದೊಳಿಹಳೇ ॥
ತರಳೆ ಚಿತ್ರಾಂಗದೆಯಂ ವರಿಸು
ಪರಿಣಯಗೈವೆ ಹರುಷದಿ ನಿನಗಂ ॥

ಪಾಂಡ್ಯರಾಜ: ಎಲೈ, ಅಸಮ ಬಲನಾದ ಪಾರ್ಥ ರಾಜೇಂದ್ರನೇ ಬಿಸಜಾಕ್ಷನ ಕರುಣದಿಂ ವಸುಮತೀಶನಾದ ಧರ್ಮಜನು ಕುಸುಮ ವಾಸಿನಿಯಾದ ದ್ರೌಪದಿಯು ಮುಂತಾದವರೆಲ್ಲರೂ ಕುಶಲದಿಂದಿರುವರೇ, ಅಸಮಾಕ್ಷನ ಕೃಪೆಯಿಂದ ನಿನಗೆ ಚಿತ್ರಾಂಗದೆಯಂ ಪರಿಣಯಗೈವೆನು. ರಸಿಕತೆಯಿಂದ ವರಿಸಬೇಕಯ್ಯ ವಿಜಯಾ ಧನಂಜಯಾ ॥