(ಮುಹೂರ್ತ)

ಚಿತ್ರಾಂಗದೆ: ಮದನ ಸುಂದರನಾದ ಚದುರ ಪಾರ್ಥನೇ ಲಾಲಿಸು. ದಿವಾಕರನು ಪರಿ ಪರಿ ಕಾಂತಿಯಿಂದ ಸರಸಿಜಮಾದ ಕಮಲಕ್ಕೆ ಕಾಂತಿಯನ್ನುಂಟು ಮಾಡುವನು. ಅದರಂತೆ ಚಂದ್ರನು ನೈದಿಲೆಗಳಿಗೆ ಕಾಂತಿಯನ್ನು ಉಂಟು ಮಾಡುವನು. ವರ ಮೇಘ ಮಂಡಲಗಳು ಪ್ರಪಂಚವನ್ನು ವೃಷ್ಠಿಯಿಂದ ತುಷ್ಠಿಯನ್ನು ಗೈಯುವುವು. ಹೀಗಿರುವಲ್ಲಿ ಪ್ರಿಯರಾದ ನೀವು ಸುರತ ಸುಖದೋಳ್ ಬೆರೆದು ಸುಖವಿತ್ತ ಪರಿಯನ್ನು ತನುವಿರುವ ತನಕ ಮರೆಯಲಾರೆನೈ ಕಾಂತ – ಸರಸಧೀಮಂತ ॥

ಅರ್ಜುನ: ಸರಸಿಜಗಂಧಿಯಾದ ತರುಣಿ ಚಿತ್ರಾಂಗದೆಯೇ ಕೇಳು ! ಈ ಧರಣಿಯಲ್ಲಿ ಸುತನಿಗೆ ವರಮಾತೆಯಿಂದಲೇ ಸುಖವುಂಟಾಗುವುದು, ಸ್ಮರಕಾಮಿಯಾದ ಪುರುಷನಿಗೆ ಸುರತ ಸುಖವೀವ ತರುಣಿಯಳಿಂದಲೇ ಸುಖವುಂಟಾಗುವುದು. ಈ ಎರಡು ಕಾರಣಗಳಿಲ್ಲದ ಪುರುಷನು ಗೃಹದಲ್ಲಿದ್ದರೂ ಒಂದೇ. ಅರಣ್ಯದಲ್ಲಿದ್ದರೂ ಒಂದೇ. ಹೇ ಕೋಮಲಾಂಗಿ ಭೂಪ್ರದಕ್ಷಿಣೆ ತೀರಿದ ನಂತರ ಯನ್ನ ಅಗ್ರಜ ಯುಧಿಷ್ಠಿರನ ಚರಣ ದರುಶನ ಕೈಗೊಂಡು ತಾಮಸವಿಲ್ಲದೇ ನಿನ್ನೆಡೆಗೆ ಬರುವೆನೆ ಮಂದವತೀ ನಾಂ ಪೋಗಿ ಬರುವೆನೇ ಯುವತಿ ॥

ಚಿತ್ರಾಂಗದೆ: ವಳಿತಾಯಿತು ಪೋಗಿ ಬರಬಹುದೈ ಪ್ರಾಣಕಾಂತನೇ ॥

ಕಂದ

ವರ ಪಾರ್ಥನು ಪಾಂಡ್ಯರಾಜನ
ಪುರವನು ನೆರೆದಾಂಟಿ ಬಂದು ಹರಿಪುರದೆಡೆಯೊಳ್ ॥
ಇರುತಿಹ ವಿಂಧ್ಯಾ ವನದೆಡೆಯ
ತರು ಮೂಲದಿ ಕುಳಿತು ಹರಿಯಂ ಪ್ರಾರ್ಥಿಸುತಿರ್ದನು ॥

ದರುವು

ನಾರಾಯಣ ಹರಿ  ವಾಸುದೇವ ನಿನ್ನಾ
ಪಾರಾಯಣವ ಮಾಡುವೆನೂ ॥ಪ ॥
ಮಾರ ಜನಕನೆ ಯನ್ನ  ಘೋರ ದುರಿತಾವನ್ನೂ
ಪಾರುಗಾಣಿಸಿ ಬೇಗ  ಪೊರೆಯೋ ಜನಾರ್ಧನಾ                       ॥1 ॥

ವಾಸುಕಿ ಶಯನ ಶ್ರೀ  ವಾಸವಾರ್ಚಿತ ಹರಿಯೇ
ಕೇಶವನೇ ಯನ್ನಯ  ಘಾಸಿಯ ಪರಿಹರಿಸೋ                          ॥2 ॥

ಆಶಪಾಶಗಳ ನೀ  ರಾಶೇಯ ಮಾಡಿರುವ
ವಾಸುದೇವನೆ ಪೊರೆಯೋ  ದಾಸನಾದೆನ್ನನೂ                       ॥3 ॥

ಧರೆಯೊಳು ಕುಂಕುಮ  ಪುರದೊಳು ನೆಲಸೀದಾ
ವರ ನಾರಸಿಂಹನೇ  ಕರುಣಿಸಿ ಸಲಹೆನ್ನಾ                               ॥4 ॥

ಅರ್ಜುನ: ಹೇ ನಂದಗೋಪಕುಮಾರ! ಗೋಪೀ ವೃಂದ ವಲ್ಲಭಾ. ದೈತ್ಯ ಮಥನ! ಮುಕುಂದ ಮುರಹರ! ಭಕ್ತವತ್ಸಲ. ಘನಕೃಪಾ ಸಮುದ್ರನೇ, ಗೋವಿಂದನೇ. ಮೈಥಿಲೀಪತಿಯಾದ ಶ್ರೀ ಕೃಷ್ಣನೇ ರಕ್ಷಿಸು ರಕ್ಷಿಸು॥

 

(ಶ್ರೀಕೃಷ್ಣ ಬರುವಿಕೆ)

ತೆರೆದರುವುತ್ರಿವುಡೆ

ಚಾರುತರ ಶೃಂಗಾರ ವೊಪ್ಪುವಾ
ದ್ವಾರಕಾಪುರವನ್ನು ಪಾಲಿಪಾ
ವಾರಿಜಾಕ್ಷನು ಯೆನುವ ಕೃಷ್ಣನು  ಧೀರ ನಡೆ ತಂದಾ                 ॥1 ॥

ಆ ಸಮಯದೊಳು ವಿಂಧ್ಯವನದೆಡೆ
ವಾಸವನ ಸುತ ಕುಳಿತಿರಲು ಸುವಿ
ಲಾಸದಿಂ ನಡೆತಂದ ಶರಣೆಂ  ಬಾಶೆಯಿಂದಾ                          ॥2 ॥

ಧರಣಿಗತಿಶಯ ಕುಂಕುಮನಪುರ
ವರ ನೃಸಿಂಗನು ಯೆನುವ ಕೃಷ್ಣನು
ಕರುಣವಾರಿಧಿ ಬಿಜಯಂಗೈದನೂ  ಶರಣನಿದ್ದೆಡೆಗೇ                  ॥3 ॥

ಶ್ರೀಕೃಷ್ಣ: ಯಲೈ ಮಾನುಷ್ಯನೇ. ಹಲವು ಯಾಗಗಳಂ ಒಲುಮೆಯಿಂದ ಮಾಡಿ ಸಲಿಗೆಯಿಂ ಸುರಲೋಕವನ್ನು ಪರಿಪಾಲಿಸುತ್ತಾ. ಬಲ ಛಲ ಕಲಿಗಳಾದ ದಾನವರ ಹತಗೊಳಿಸಿ ಲಲಿತರಂಭಾದಿ ಅಪ್ಸರ ಸ್ತ್ರೀಯರ ನರ್ತನಾದಿಗಳಿಂ ಒಡ್ಡೋಲಗದಲ್ಲಿ ಕುಳಿತಿರುವ ಇಂದ್ರನಾಸ್ಥಾನದಂತೆ ಕಂಗೊಳಿಸುವ ಈ ಸಭಾಸ್ಥಾನದೋಳ್ ನಿಂದು ಈಗ ಬಂದವರು ಧಾರೆಂದು ಕರಕಂಜಾತವಂ ಮುಗಿದು ಕೇಳುವ ಮರ್ತ್ಯ ನೀ ಧಾರೋ ಯನ್ನೊಳು ಸಾರೋ !

ಭಲಾ ಸಾರಥಿ! ಕ್ಷೀರವಾರುಧಿಯೋಳ್ ಚಾರು ಹರುಷದಿಂ ಶಯನಿಸಿ. ಬಾರಿ ಬಾರಿಗೂ ತ್ರಿಲೋಕಗಳಂ ನಿರ್ಮಿಸುವ ಮಾರನಗ್ರಜನೆನಿಸಿ ಮೆರೆಯುವ. ಭಲಾ ಸಚಿವಾ, ವಾರಿಜಾಸನನಿಗೆ ಪಿತನಾಗಿ ಚಾರುತರಮಾದ ದ್ವಾರಕಾ ಪುರವನ್ನು ಪರಿಪಾಲಿಸುತ್ತಿರುವ ಧೀರ ಬಲಭದ್ರನಿಗೆ ಅನುಜನಾಗಿ ಸಾರಸಾಕ್ಷಿಯರಾದ ಗೋಪಿಕಾ ಸ್ತ್ರೀಯರೋಳ್ ಸುಖಿಸುತ್ತಿರುವ, ಭಲಾ, ಘೋರ ರಕ್ಕಸಿಯಾದ ಪೂತನಿಯನ್ನು ಸಂಹರಿಸಿ, ವಾರಿಜಾಕ್ಷಿಯರಾದ ರುಕ್ಮಿಣೀ ಸತ್ಯಭಾಮೆಯರಿಗೆ ಕಾಂತರತ್ನವೆನಿಸೀ ಭಲಾ ಸಾರಥೀ. ವಾರುಧಿಯ ಮಧ್ಯದೋಳ್ ದ್ವಾರಕಾವತಿಯ ರಚಿಸಿಕೊಂಡು, ಮಂಡಲದೋಳ್ ಗಂಡುಗಲಿಗಳಾದ ಭಂಡ ರಕ್ಕಸರ ಕಂಡಗಳನ್ನು ಖಂಡ್ರಿಸಿ, ಭೂಮಂಡಲದೋಳ್ ಪ್ರಖ್ಯಾತರಾದ ಪಾಂಡವರೇ ಮೊದಲಾದ ಭಕ್ತ ಸಂದಣಿಯಿಂ ಕೊಂಡಾಡಿಸಿಕೊಳ್ಳುವ ಪುಂಡರೀಕಾಕ್ಷನಾದ ಶ್ರೀಕೃಷ್ಣ ಮೂರ್ತಿಯೆಂದರಿಯೋ ದೂತ ದೂತ ಪ್ರಖ್ಯಾತ ॥

ಭಲಾ, ಸಾರಥೀ  ರಮ್ಯವಾದ ಈ ವರ ಸಭಾಸ್ಥಾನಕ್ಕೆ ನಾ ಬಂದ ಪರಿಯಾಯವೇನೆಂದರೆ ಲಲನೆ ರುಕ್ಮಿಣೀ ಸತ್ಯಭಾಮೆಯರೊಡನೆ ವಲುಮೆಯಿಂ ನಾನು ಪಗಡೆಯಾಡುತ್ತಾ ಕುಳಿತಿರಲು ಹಲವು ಪರಿಯಿಂದ ಫಲುಗುಣನು ಯನ್ನನ್ನು ಸ್ತುತಿಸುತ್ತಿರುವುದರಿಂದ ಪರಮ ಮನೋಹರಮಾದ ವಿಂಧ್ಯವನದೆಡೆಗೆ ತೆರಳುವ ಪ್ರಯುಕ್ತ ಬಾಹೋಣವಾಯಿತೋ ದೂತ ಕೇಳೆನ್ನ ಮಾತ ॥

ಅರ್ಜುನ: ನಮೋನ್ನಮೋ ಮುಕುಂದಾ ದೇವಕೀ ಕಂದ ॥

ಕಂದ

ಭರದಿಂದೀ ವನದೆಡೆಗಂ
ಸರಸದೊಳೈತಂದು ಕುಳಿತು, ಮನದೊಳಗೆನ್ನನು ॥
ಸ್ಮರಿಸಿದ ಕಾರಣವೇನೈ
ವರೆಯನ್ನೋಳ್ ಬೇಗ ಪಾರ್ಥ ಸಲಿಸುವೆನಿಷ್ಠವಾ ॥

ಕೃಷ್ಣ: ಎಲೈ ವರಭಕ್ತನಾದ ಪಾರ್ಥ ಶಿರೋಮಣಿಯೇ ಕೇಳು ! ಈ ಪರಿ ವೃಕ್ಷದೆಡೆಯೋಳ್ ಕುಳಿತು ಯನ್ನ ಸ್ಮರಿಸಲು ಕಾರಣವೇನಿರುವುದು ? ನಿನ್ನ ಮನೋಭಿಷ್ಠವನ್ನು ಅರುಹಿದ್ದಾದರೆ ಸಲಿಸುವೆನೈ ವಿಜಯಾ ಧನಂಜಯಾ ॥

ದರುವು

ವಂದಿಪೆ ಶ್ರೀಹರಿಯೇ  ಪಾಲಿಸು ಯನ್ನಾ
ಮಂದಹಾಸದಿ ದೊರೆಯೇ ॥
ಇಂದಿರಾಪತಿ ನಿಮ್ಮಾ  ಚಂದದಿಂ ಸ್ತುತಿಸುವೆನು
ಕಂದನ ಕಾಯ್ದವನೇ                                                        ॥1 ॥

ಅರ್ಜುನ: ಸ್ವಾಮಿ! ಮಾರಪಿತನಾದ ನಾರಾಯಣ ಮೂರ್ತಿಯೇ ! ಧಾರುಣಿಯೋಳ್ ಮನುಜಾವ ತಾರವನ್ನೆತ್ತಿ  ಸಾರಸುಖತರಮಾದ ಸುದತಿಯಂ ಸೇರಿ ಅಪಾರ ಮಹಿಮನಾದ ನಿನ್ನ ದಿವ್ಯ ಶ್ರೀ ಪಾದಾರವಿಂದವನ್ನು ಮರೆತಿರಲಾರೆನು. ತತ್ಕಾರಣ ಬಾರಿ ಬಾರಿಗೂ ಸ್ಮರಿಸುತ್ತಲಿರುವೆನು. ದಯಾಂತಃ ಕರುಣದಿಂದೆನ್ನ ಪರಿಪಾಲಿಸುವ ಪ್ರಭು ನೀನಲ್ಲದೇ ಮತ್ಯಾರಿರುವರು ? ಹರಿ ಪರಮಾತ್ಮ ವಾಸುದೇವ, ಭೂರಿಜನಕಾಧಾರ ಕರ್ತನಾದ ನೀನು ಯನ್ನ ಪರಿಪಾಲಿಸಬೇಕೈ ಶ್ರೀಪತಿ ನಿನ್ನ ಚರಣಾರವಿಂದವೇ ಗತಿ ॥

ದರುವು

ಪೊರೆಯ ಬೇಕೋ ನೀ ಯನ್ನಾ  ನಾರಾಯಣ
ವರ ಗುಣ ಸಂಪನ್ನಾ ॥
ಸಿರಿಯರಸನೇ ಭವ  ದುರಿತ ವಿಮೋಚನಾ
ವರ ಪಕ್ಷಿರಾಜಗಮನಾ                                                       ॥2 ॥

ಅರ್ಜುನ: ಅಹೋ, ರತಿಪತಿ ಪಿತನಾದ ಲಕ್ಷ್ಮೀಪತಿಯೇ ಕ್ಷಿತಿಯಲ್ಲಾ ಚರಿಸಿ ಕಂಗೆಟ್ಟು ವ್ಯಥೆಪಟ್ಟು ಅತಿಚಿಂತೆಪಡುತ್ತಾ ಇಲ್ಲಿಗೈತಂದೆನು. ಪತಿತಪಾವನನಾದ ನೀನು ಸತತವೂ ಯನ್ನ ಸಲಹಬೇಕೆಂದು ಅತಿಶಯಮಾದ ನಿನ್ನ ಪಾದಕಮಲಕ್ಕೆರಗುವೆನು. ಗತಿಹೀನನಾದೆನಗೆ ಸದ್ಗತಿ ಪಥವನ್ನು ತೋರಿಸಿ ಭವಗತಿಯ ಪಾಲಿಸಬೇಕೋ ಪರಮಾತ್ಮನೇ ಗರುಡವಾಹನನೇ ॥

ದರುವು

ಪೊಡವಿಕುಂಕುಮ ಪುರಿಯಾ  ನರಕೇಸರಿಯೇ
ಧೃಡದಿ ಭಜಿಸುವೆ ನಿಮ್ಮಡಿಯಾ ॥
ಮೃಡ ಸಖ ಯನ್ನಯಾ  ಬಿನ್ನಪ ಕೇಳೈಯ್ಯ
ಜಲಜಾಕ್ಷ ಶ್ರೀಹರಿಯೇ ॥

ಅರ್ಜುನ: ಹೇ ಮದನಪಿತನಾದ ಮಧುಸೂಧನ! ಸದಮಲ ಭಕ್ತಿಯಿಂದ ನಿನ್ನ ಪಾದ ಕಮಲವನ್ನು ಹೃದಯದೋಳ್ ಸ್ಮರಿಸುತ್ತಿರುವ ಯನ್ನನ್ನು ಕಾಪಾಡಬೇಕೈ ಮಾಧವನೇ! ಅಹೋ ವಿದುರಾದಿ ಭಕ್ತಜನ ಪಾಲನೆ ಯಿದಿರಾದ ವೈರಿಗಳ ನದುರುಗೆಡಿಸುವ ಸುದರ್ಶನಧಾರಿಯಾದ ನೀನೂ. ಅಧಮ ರಾವಣ ಕುಂಭಕರ್ಣಾದಿ ಮಧುಗುಡಿಕ ದಾನವರ ವಧಿಸಿ, ಚದುರ ವಿಭೀಷಣನಿಗೆ ಸ್ಥಿರ ಪದವಿಯಿತ್ತಂತೆ ಉದಧಿಯ ಮಧ್ಯದಲ್ಲಿ ಅಧಿಕಮಾದ ಕುಂಕುಮನ ಪುರಿಯ ನೃಸಿಂಗಮೂರ್ತಿಯೆನಿಪ, ಹೇ ಮಧುಸೂಧನನೇ; ಮುದವಿತ್ತು ಯನ್ನ ಪೊರೆಯಬೇಕೈ ರುಕ್ಮಿಣೀ ಪ್ರಿಯಾ ವಸುದೇವ ತನಯಾ॥

ದರುವು

ಕುಂತಿ ತನುಜನೆ ಕೇಳು  ಚಿಂತಿಪುದೇತಕಿನ್ನು
ದಂತಿ ಪುರವ ನೀನೂ  ಸ್ವಂತದೊಳಗೆ ನೀ                              ॥1 ॥

ಪರಿ ಪರಿಯೊಳು ನೀನೂ  ಮರುಗದಿರೈಯ್ಯ ಇನ್ನೂ
ಒರೆವೇನು ಲಾಲಿಸು ನೀಂ  ಯೋಚನೆ ನೀಂ                           ॥2 ॥

ಶ್ರೀಕೃಷ್ಣ: ಎಲೈ ಸಿತವಾಹನ ಅರ್ಜುನ, ಸತತವೂ ನೀನು ಪರಿಪರಿ ಪೊಗಳುವ ಅತಿಶಯ ಭಕ್ತಿಗೆ ನಾನು ಮೆಚ್ಚಿದೆನು. ಕ್ಷಿತಿಯೊಳು ನಿನ್ನ ಪೋಲುವ ಅತಿಶಯ ಪರಾಕ್ರಮಿಗಳ್ಯಾರನ್ನೂ ಕಾಣಲಿಲ್ಲಾ. ಮಲೆಯೊಳು ನೀನು ಚಿಂತಿಸದೆ ಅತಿಧೈರ‌್ಯವನ್ನು ಅವಲಂಬಿಸಿಕೊಂಡಿರಬೇಕಲ್ಲದೇ ಮಿತವಾದ ಯನ್ನ ಹಿತವಚನವನ್ನು ಲಾಲಿಸಬೇಕೈಯ್ಯ ವಿಜಯ ಧನಂಜಯ ॥

ದರುವು

ವರಯತಿ ವೇಷವನೂ  ಧರಿಸಿರು ಈಗ ನೀನೂ
ಬರುವನು ಹಲಧರನೂ  ಇಲ್ಲಿಗೆ ಯಿನ್ನೂ                                 ॥3 ॥

ಶ್ರೀಕೃಷ್ಣ: ಎಲೈ ಚಂಡ ವಿಕ್ರಮನಾದ ಗಾಂಡೀವಿಯೇ. ಮಂಡಲದಿ ತಾಪಸರಂತೆ ನೀನು ಕಮಂಡಲ ಧಾರಿಯಾಗಿ ಯತಿವೇಷವನ್ನು ಕೈಗೊಂಡು ಖಂಡ ಪರಶುವಿನ ಧ್ಯಾನದಿಂದೀ ತರುಮೂಲದೋಳ್ ಕುಳಿತಿದ್ದರೆ ಮಂಡಲಾಧಿಪ ಬಲಭದ್ರರಾಜನು ಬಂದು ದಂಡವಿಟ್ಟು ನಿನ್ನ ಕರೆದೊಯ್ಯುವನು, ನಂತರ ಪುಂಡರೀಕಾಕ್ಷಿಯಳಾದ ಸುಭದ್ರೆಯಳನ್ನು ಖಂಡಿತ ನಿನಗಿತ್ತು ಪರಿಣಯ ಗೈಯುವ ಪ್ರಯತ್ನವಂ ಮಾಡುವೆನೈಯ್ಯ ಪಾರ್ಥ ನೀನಾಗುವೆ ಕೃತಾರ್ಥ ಈ ಮಾತು ಯತಾರ್ಥ ॥

ದರುವು

ಧರೆಯೊಳು ಕುಂಕುಮನಾ  ಪುರಪತಿಯೇ ನಾ ನಿನ್ನಾ
ವರ ವಚನ ಮೀರುವೆನೇ  ಕೇಳ್ ನೀನೇ                                 ॥4 ॥

ಅರ್ಜುನ: ಹೇ ಪಕ್ಷಿಗಮನನಾದ ಲಕ್ಷ್ಮೀಪತಿಯೇ! ಈ ಕ್ಷಿತಿಯೊಳಾಶ್ರಿತ ಜನರಿಗೆ ಅಕ್ಷಯ ಮೋಕ್ಷ ಪದವಿಯಿತ್ತು ರಕ್ಷಿಸುವ. ಪಕ್ಷಿರಾಡ್ವಾಹನನಾದ ನಿನ್ನ ಪಾದಾರವಿಂದವಂ ಅಕ್ಷಿಯಿಂದ ಈಕ್ಷಿಸಿದ ಮಾತ್ರದಲ್ಲಿಯೇ ಯಕ್ಷಾದಿ ಪ್ರಮುಖರು ಸುಪ್ರೇಮಕರವಾಗಿ ಮೋಕ್ಷ ಹೊಂದುವರು. ಇಕ್ಷುಶರ ಜನಕನಾದ ನೀನುಪೇಕ್ಷಿಸದೇ ಕಟಾಕ್ಷಿಸಿ ರಕ್ಷಿಸು ರಕ್ಷಿಸೈ ಮಹಾನುಭಾವನೆ ! ಅಹೋ ಲಕ್ಷ್ಮೀವರನೇ ಈ ಕ್ಷಿತಿಯೋಳ್ ಯದುಕುಲಾಧ್ಯಕ್ಷನೆನಿಪ ಕುಂಕುಮನಪುರಿ ಲಕ್ಷ್ಮೀ ನೃಸಿಂಗನೆನಿಪ ಶ್ರೀಕೃಷ್ಣಮೂರ್ತಿಯೇ. ಈ ಕ್ಷಿತಿಯನ್ನು ರಕ್ಷಿಸುವ ಭಾರ ನಿನ್ನದಾಗಿರುವುದೈ ದೇವಾ ಮಹಾನುಭಾವ॥

(ಬಲರಾಮ ಬರುವಿಕೆ)

ತೆರೆದರುವುತ್ರಿವುಡೆ

ಪೊಡವಿಗತಿಶಯ ದ್ವಾರಕಾಪುರ
ದೊಡೆಯ ನೆನಿಸುವ ಧೀರ ಹಲಧರ
ಸಡಗರದಿ ನಡೆ ತಂದನಾಗಲೇ  ಕಡಲ ಶಯನೆಡೆಗೆ                  ॥1 ॥

ಪರಮ ಪಾವನ ಸರಸಿಜಾಕ್ಷನ
ವರ ಸಹೋದರ ರೇವತಿ ಪತಿ
ವರ ಸಭಾಮಂದಿರಕೆ ಬಂದನು  ಪರಮ ಹರುಷದಲೀ                ॥2 ॥

ಕ್ಷಿತಿಯೊಳತಿಶಯ ಕುಂಕುಮನಪುರ
ಪತಿತ ಪಾವನನಾದ ಲಕ್ಷ್ಮೀ
ಪತಿ ನೃಸಿಂಗನ ಅಗ್ರಜನು ತಾ  ಸಂತಸದಿ ಬಂದಾ                   ॥3 ॥

ಬಲರಾಮ: ಯಲಾ ಭಟಕಟಕ! ನಿಟಿಲ ತಟ ಘಟಿತ ಮೃಗಮದ ತಿಲಕನೆಂದೆನಿಪ, ಭದ್ರಾಗ್ರಗಣ್ಯನೇ ಹೀಗೆ ಬಾರೋ ಸಚಿವನೇ! ಭಲಾ ಪಟುತರಮಾದ ನಿಟಿಲಾಂಬಕನ ಭಜಕಪಟು ರೋಷದಿಂದ ಪಟುಭಟರೋಳ್ ಶ್ರೇಷ್ಠರಾದ, ಉಗ್ರಾಸುರ. ಜಂಭಾಸುರ ಮೊದಲಾದ ದುಷ್ಠರನ್ನು ನಷ್ಠಗೊಳಿಸಿ, ಭಲಾ ಪಟುತರಾಂಗಿಯಾದ ರಂಬಾದಿ ಅಪ್ಸರ ಕನ್ಯೆಯರ ನರ್ತನದಿಂ, ವಿಟ ದೂಷಕರ ಗಾಯನದಿಂ ಪಟುತರಮಾದ ಸುರಪನಾಸ್ಥಾನದಂತಿರುವ ಸಭಾಸ್ಥಾನದೋಳ್ ಕರಯುಗಳವಂ ಮುಗಿದು ಮೃದು ಮಧುರೋಕ್ತಿಯಿಂ ಮಾತನಾಡಿಸುವ ಸುಭಟ ನೀ ಧಾರೋ ಯನ್ನೊಳು ಸಾರೋ ॥

ಭಲಾ ಸಾರಥೀ, ಉಗ್ರಾಂಬಕನ ಪೋಲ್ವ ವಿಗ್ರಹದಿಂ ರಿಪು ಸಮುಗ್ರ ನಿಗ್ರಹಗೈದು ಶೀಘ್ರದಿಂ ಶೌರ‌್ಯಾಗ್ರಜನೆನಿಸಿ ಅಗ್ರಾಸನಮಾದ ಕೇಸರಿ ಪೀಠದೋಳ್ ಕುಳಿತು ವ್ಯಾಘ್ರನಂತಖಿಳ ಕಾರ‌್ಯಗಳ ನಿಗ್ರಹಿಸುತ್ತಾ ಅಗ್ರೇಸರರಾದ ರಿಪುಗಳ ಮರ್ಧಿಸುತ್ತಾ ಭುಜಬಲ ಶೌರ‌್ಯ ಯುಕ್ತನಾಗಿ, ಭಲಾ ಪ್ರಾಜ್ಞೋತ್ತಮಾ! ಸುಜ್ಞಾನದಿಂ ಯಜ್ಞಾದಿ ಶತಕ್ರತುಗಳಂ ಹಿತದಿಂ ಪೂರೈಸಿದ ಜಂಭಾರಿಗತಿ ಶಯಮಾದ ಸಂಭ್ರಮದೊಡನೆ ಅಂಬುಜಾಸನಪಿತ ಶಂಬರಾರಿ ಜನಕಾ ತ್ರಿಯಂಬಕನ ಸಖ, ಅಂಬುಧಿ ಶಯನ ಅಂಬರೀಷಾದಿ ಭಕ್ತರ, ಕದಂಬ ಕಂಬು ಕಂಧರ ಸಂಭ್ರಮ ಬಿಂಬಾಧರಿಯರಾದ ಸತ್ಯಭಾಮೆ, ರುಕ್ಮಿಣಿಯರಿಗೆ ಪ್ರಿಯನಾದ, ದ್ವಾರಕಾಪುರಿಯಂ ಸುಖ ಸಾಮ್ರಾಜ್ಯದಿಂದೋಲೈಸುವ ಪೀತಾಂಬರನಗ್ರಜನಾದ ಹಲಧರ ಭೂಪಾಲನೆಂದು ತಿಳಿಯೋ ಸಾರಥೀ ಸದ್ಗುಣ ಪಾರಾವಾರುಧೀ॥

ಭಲಾ ಸಾರಥೀ! ಈ ಸಭಾಸ್ಥಾನಕ್ಕೆ ಬಿಜಯಂಗೈದ ಕಾರಣವೇನೆಂದರೆ ಯನ್ನ ಅನುಜನಾದ ಶ್ರೀಕೃಷ್ಣನೊಡನೆ ಪ್ರಸಂಗಿಸಬೇಕಾದ ಕೆಲವು ಕಾರ‌್ಯೋನ್ನತಿಗಳಿರುವ ಪ್ರಯುಕ್ತ ಬಾಹೋಣವಾಯ್ತು ದೂತ ರಾಜ ಸಂಪ್ರೀತ ॥

ಶ್ರೀಕೃಷ್ಣ: ನಮೋನ್ನಮೋ ಅಣ್ಣಾ ಹಲಧರ – ದ್ವಾರಕಾಪುರಿವರ ॥

ಬಲರಾಮ: ಸಕಲ ಸಾಮ್ರಾಜ್ಯದಿಂ ಪ್ರಕಟಿಸುತ್ತಾ ಸುಖಿಯಾಗಿರಪ್ಪಾ ತಮ್ಮಾ ಸಾರಸಾಕ್ಷ ॥

ಶ್ರೀಕೃಷ್ಣ: ಅಹೋ ಕಡುಗಲಿಯಾದ ಅಗ್ರಜನೇ ಲಾಲಿಸು. ಕಡು ಸಡಗರದಿಂ ಯನ್ನ ಕರೆಸಿದ ಕಾರ‌್ಯಾರ್ಥವೇನೂ ಅಪ್ಪಣೆ ಕೊಡಿಸಬೇಕೈ ಅಣ್ಣನೇ ಕರುಣಾಗ್ರಗಣ್ಯನೇ ॥

ದರುವು

ಮಾತ ಲಾಲಿಸೋ  ಸಹಜಾತ ಕೃಷ್ಣನೇ ॥ಪ ॥
ನೀತಿಯಾ ಸುಭದ್ರೆಯಳಿಗೇ
ಅತಿಶಯದಾ ಪ್ರಾಯವಿಹುದು ॥
ಖ್ಯಾತಿಯಿಂದ ಪರಿಣಯವನು
ಪ್ರೀತಿಯಿಂದ ನಡೆಸಬೇಕು                                                  ॥1 ॥

ಬಲರಾಮ: ಹೇ ತಮ್ಮಾ ! ಜಗತ್ಕಾರಣನಾದ ಲಕ್ಷ್ಮೀಪತಿಯೇ. ನೀತಿ ಕೋವಿದೆಯಾದ ಯಮ್ಮ ತಂಗಿ ಸುಭದ್ರಾ ತರುಣಿಯಳಿಗೆ ಅತಿಶಯದಿಂದ ಯೌವನ ಕಾಲವು ಪ್ರಾಪ್ತವಾಗಿರುವುದಾದ ಕಾರಣ, ತರಳಾಕ್ಷಿಗೆ ತಕ್ಕ ವರನನ್ನು ಈ ಭೂತಳದೊಳಗೆಲ್ಲಾದರೂ ಅರಸಿ, ಪ್ರಖ್ಯಾತಿಯಿಂದ ಪರಿಣಯಗೈಯ ಬೇಕಾದ ಪ್ರಯುಕ್ತ ಪ್ರೀತಿಯಿಂ ನಿನ್ನೋಳ್ ಆಲೋಚಿಸಲು, ನಾನು ತವಕದಿಂ ಕರೆಸಿದೆನಪ್ಪಾ ತಮ್ಮಾ ಜಲಜಾಕ್ಷ – ಇಂದೀವರಾಕ್ಷ॥

ದರುವು

ಲಲನಾ ಮಣಿಯ ಲಗ್ನವನ್ನು
ನಿಲಿಸಲಾಗದೈಯ್ಯ ತಮ್ಮಾ
ಚೆಲುವನಾದ ವರನ ನೋಡಿ
ಸುಲಲಿತದೊಳಾಚರಿಸಬೇಕೂ                                             ॥2 ॥

ಬಲರಾಮ: ತಮ್ಮಾ, ಜಲಜನಾಭ ! ಚೆಲುವಿಕೆಯಲ್ಲಿ ಚಂದ್ರನಂತೊಪ್ಪುವ ಲಲನಾಮಣಿ ಸುಭದ್ರೆಗೆ ಲಗ್ನವನ್ನು ಶೀಘ್ರಪಡಿಸಬೇಕಲ್ಲದೇ ನಿಲ್ಲಿಸುವ ಕಾಲವಲ್ಲದ್ದರಿಂದ ಹೇ ಮುಕುಂದ, ಜಲಜಾಕ್ಷಿಗೆ ತಕ್ಕ ಚೆಲುವುಳ್ಳ ಕಲಿಯಾದ ವರನನ್ನು ಇಳೆಯೊಳಗರಸಿ ಘಳಿಲನೇ ಯಮ್ಮ ಯದುಕುಲವೆಲ್ಲಾ ಭಳಿ ಭಳಿರೆಂದು ಹೊಗಳುವ ರೀತಿ ಪರಿಣಯವೆಸಗಬೇಕೈಯ್ಯ ನಾರಾಯಣ – ಸದಾ ಯನಗದೇ ಪಾರಾಯಣ॥

ದರುವು

ಪೊಡವಿ ಕುಂಕುಮಾನ ಪುರದ
ಒಡೆಯ ನಾರಸಿಂಹನೆನಿಪ ॥
ಜಲಜನಾಭ ಕೃಷ್ಣಮೂರ್ತಿ
ನುಡಿಯೇ ನಿನ್ನ ಮನದ ವಿವರಾ                                            ॥3 ॥

ಬಲರಾಮ: ಯಲೈ ಚಕ್ರಧಾರಿ-ಹರಿ ಅಕ್ರಮದೊಳೆನಗೆ ವಕ್ರಿಸಲು ವಕ್ರಿಸುವ ಮೂರ್ಖರ ಅರ್ಕಜ ನಗರಿಗೈದಿಸಿ ಅಕ್ರಮದಿ ನಕ್ರನ ಚಕ್ರದೋಳ್ ಸೀಳಿ ಮಕರಿಯ ಕಾಯ್ದ ವಿಕ್ರಮಾಟೋಪನೇ ರುಕ್ಮಿಣೀಪ್ರಿಯನೇ, ಚಕ್ರವಾಕ ಪಕ್ಷಿಯಂತೆ ಅಕ್ಷಿಗಳುಳ್ಳ, ಲಕ್ಷಣವಂತೆ, ಪಕ್ಷಿಯಾನೇ ಸುಭದ್ರೆಯಳನ್ನು ಕುಂಕುಮಪುರಿ ಲಕ್ಷ್ಮೀನೃಸಿಂಗನೆನಿಪ ಶ್ರೀಕೃಷ್ಣನಾದ ನೀನು, ಭೂಚಕ್ರದೋಳ್ ಪರಾಕ್ರಮನಾದ ವರನನ್ನು ವಿಚಾರಿಸಿ ಪರಿಣಯವೆಸಗಬೇಕೈ ಮುಕುಂದನೇ – ದೇವಕೀ ಕಂದನೇ ॥

ದರುವುಜಂಪೆ

ಕರುಣಿಪುದು ಅಗ್ರಜನೇ  ಧೀರಾ ಬಲದೇವನೇ
ಪರಿಯರಿತು ಪೇಳುವೆನು  ಮದುವೆ ಯೋಚನೆಯಾ, ಯೋಚನೆಯಾ ॥1 ॥

ಸುರಪತಿಯ ಪುತ್ರನಿಗೆ  ಸರಸಿಜಗಂಧಿನಿಯಾ
ಪರಿಣಯವ ಗೈಯುವುದು  ಸಮ್ಮತವು ರಾಯ ॥                      ॥2 ॥

ಕೃಷ್ಣ: ಅಣ್ಣಾ ! ಮದನಪಾಲ ! ವಿಧುನಿಭ ವದನೆಯಳಾದ ಚದುರೆ ಸುಭದ್ರೆಯಳನ್ನು ಉದಧೀ ಮಧ್ಯದಲ್ಲಿ ಅತ್ಯಧಿಕಮಾದ ಇಂದ್ರಪ್ರಸ್ತದ ಅಧಿಪತಿ ಚಂದ್ರವಂಶಜಾತ. ಸಾಂದ್ರ ಗುಣ ಧರ್ಮಯುಕ್ತನಾದ ಧರ್ಮರಾಯನ ಸಹೋದರಾ! ಚದುರ ಧನಂಜಯನಿಗಿತ್ತು, ವಿಧಿ ಪೂರ್ವಕವಾಗಿ ಮದುವೆಯಂ ಮಾಡಬಹುದೈ ಅಗ್ರಜಾ ಬಲಭದ್ರರಾಜ ॥

ದರುವು

ಸರಿ ದೊರೆಯು ಕುರುವರನು  ಸಿರಿವಂತನವನಿನ್ನೂ
ವರ ಸರಸೀಜಾಕ್ಷಿಯನು  ಕೊಡುವೆನು ಇನ್ನೂ ॥                       ॥1 ॥

ಬಲರಾಮ: ತಮ್ಮಾ ! ಮುಕುಂದ ! ವಮ್ಮನದಿಂ ಗಜಪುರವನ್ನು ಸುಮ್ಮಾನದಿಂ ಪರಿಪಾಲಿಸುವ ನಮ್ಮ ಸರಿಸಮಾನನಾದ ದುರ‌್ಯೋಧನ ಭೂಪಾಲನು ವಜ್ರಿಗಿಮ್ಮಡಿಯಾಗಿ ಸರ್ವ ಸಿರಿಯಿಂದೋಲೈ ಸುತ್ತಿರುವನು. ಅಹೋ, ತಮ್ಮಾ ವಮ್ಮನದಿಂದವನಿಗೆ ಯಮ್ಮನುಜೆ ಸುಭದ್ರಾ ದೇವಿಯನ್ನಿತ್ತು, ಪರಿಣಯ ಗೈಯಬೇಕಲ್ಲದೇ ನೆಮ್ಮದಿಗೆ ಭಂಗವಾಗಿ ಸುಮ್ಮನೆ ಕಳವಳಪಡುವ ಬಡ ಪಾರ್ಥನಿಗೆ ಜಲಜಾಕ್ಷಿಯಳ ಕೊಡುವುದು ಯನ್ನ ಮನಕ್ಕೆ ಸಮ್ಮತವಲ್ಲವೈ ತಮ್ಮ ಕೆಣಕದಿರೆಮ್ಮಾ॥

ದರುವುಜಂಪೆ

ವರಮನಕೆ ಸರಿತೋರ್ಪ  ತೆರದೊಳು ಮಾಡುವುದೈ
ನರಹರಿಯ ಕೃಪೆಯಿರುವ  ತೆರನಂತಾಗುವುದೂ  ಕೇಳಹುದು     ॥3 ॥

ಕೃಷ್ಣ: ಅಹೋ ಅಣ್ಣಯ್ಯ, ಸನ್ನುತಾಂಗಿ ಸುಭದ್ರಾದೇವಿಯಳನ್ನು ನಿನ್ನ ಮನೋಭಿಪ್ರಾಯದಂತೆ ಉನ್ನತ ಕೌರವಗೆ ಕೊಟ್ಟಿದ್ದಾದರೆ ಶ್ರೀಮನ್ ನಿಖಿಲತರ ಮಧ್ಯದೊಳೊಪ್ಪುವಾ, ಉನ್ನತ ಕುಂಕುಮನ ಪುರವರಾಧಿಪ, ಪನ್ನಗಾರಿಧ್ವಜ ಲಕ್ಷ್ಮೀ ನೃಸಿಂಹನೆನ್ನುವ, ಶ್ರೀಕೃಷ್ಣನಾದೆನ್ನ ಉನ್ನತ ಕೃಪೆಯಿಂದ ಚೆನ್ನಿಗನಾದ ಪಾರ್ಥನು ಕನ್ಯಕಾಮಣಿಯನ್ನು ಬಿನ್ನಾಣದಿಂ ಮದುವೆಯಾಗದೆ ಬಿಡಲಾರನೈ ಅಣ್ಣನೇ ವರ ಅಗ್ರಗಣ್ಯನೇ॥

ಬಲರಾಮ: ಅಹೋ ಕಂತು ಪಿತ ! ಉಳಿದ ಮಾತು ಅದಂತಿರಲಿ. ದಂತಿಪುರಾಧಿಪ ಹೊಂತಕಾರಿ ಕೌರವಗೆ ಕಂತು ಶರಾಕ್ಷಿ ಸುಭದ್ರೆಯನ್ನೀಯಲು ಅಂತರಂಗವೇನಿರುವುದು? ಕುಂತೀಸುತ ಪಾರ್ಥನಿಗೆ ಕೊಡಲೆಂತಾಗುವುದು? ಇಂತೆಸಗುವುದೆಮಗೆ ಸಂತೋಷವಾಗುವುದು ! ಅಂತರಿಸದೆ ಲಗ್ನಪತ್ರಿಕೆಯನ್ನು ಸಂತಸದಿಂ ಲಿಖಿಸುವೆನು. ಕಂತುಪಿತನಾದ ನಿನ್ನ ಅಂತರಂಗದೋಳ್ ಸಂತೋಷವನ್ನು ವಹಿಸಿ ಇಂತೊಪ್ಪುವ ಶುಭಪತ್ರಿಕೆಯನ್ನು ಭೂಕಾಂತನಾದ ಕುರುವರನಿಗೆ ರವಾನಿಸ ಬೇಕೈಯ್ಯ ಅನುಜಾ ದೇವಕೀ ತನುಜ ॥

ಕೃಷ್ಣ: ಅಹೋ ಅಗ್ರಜಾ ಈಗಿನ ಸಮಯದೀ ನೀವು ಹೇಳಿದ ರೀತಿ ನಾಗಕೇತನನಿಗೆ ಲಗ್ನಪತ್ರಿಕೆಯನ್ನು ರವಾನಿಸುವೆನು. ಮುಂದಾಗುವ ಕಾರ‌್ಯಭಾಗಂಗಳಂ ನೋಡುತಿರು ನೀನೂ ॥

(ವನಪಾಲಕರು ಬರುವಿಕೆ)

ದರುವು

ವಂದಿಸುವೆ ರಾಜನೇ  ಇಂದ್ರ ಶತ ತೇಜನೇ
ಕುಂದ ಶರಪಾಲನೇ  ಸುಂದರನೇ                                        ॥1 ॥

ಯತಿಯು ಉದ್ಯಾನ ವನದೋಳ್  ಹಿತದಿ ಕುಳಿತು ಮನ
ನುತಿಪ ಹರಿಪಾದವನ್ನೂ  ತಾನಿನ್ನೂ                                      ॥2 ॥

ಪರಿಕಿಸಲು ಮುನಿಪನು  ಹರನ ಪೋಲುತಿಹನೂ
ಧರಣಿಗಧಿಕ ಶ್ರೇಷ್ಠನೂ  ತಾನಿನ್ನೂ                                        ॥3 ॥

ಧರಣಿ ಕುಂಕುಮ ಪುರದ  ವರದ ಹರಿ ಭ್ರಾತನೇ
ವರಮುನಿಯ ನೋಡಿದೆವೂ  ಕೇಳ್ ನಾವೂ                            ॥4 ॥

ವನಪಾಲಕರು: ಸ್ವಾಮಿ ! ಕುಂದ ಶರಪಾಲನಾದ ಬಲಭದ್ರದೇವನೇ, ಇದೇ ತಮ್ಮ ಚರಣಾರವಿಂದಗಳಿಗೆ ಸಹಸ್ರ ವಂದನೆಗಳೈ ಮಹಾನುಭಾವನೇ. ಅಂದರೆ ಒಂದು ಬಿನ್ನಪವನ್ನು ಅರಿಕೆ ಮಾಡುವೆವು. ಇಂದು ತಮ್ಮ ಉದ್ಯಾನವನದಲ್ಲಿ ಸುಂದರನಾದೋರ್ವ ಮುನಿಪುಂಗವನು ಬಂದು ಇಂದುಶೇಖರನ ಧ್ಯಾನದಿಂ ಕುಳಿತು, ಇಹಭೋಗಂಗಳಂ ತೊರೆದು ಒಂದೇ ಭಾವದಿಂ ತಪಸ್ಸು ಮಾಡುತ್ತಿರುವನು. ಸುಂದರ ಮೂರ್ತಿಯಾದ ಆತನ ಪ್ರಭಾವಗಳ್ ಇಷ್ಠೆಂದು ವರ್ಣಿಸಲು ಅಸಾಧ್ಯವಾಗಿರುವುದು. ಇಂದು ಅವರ ಸಂದರ್ಶನವಂ ಕೈಗೊಂಡವರು ಸುಂದರ ಕುಂಕುಮನಪುರಿ ಲಕ್ಷ್ಮೀವರನ ಸೋದರರಾದ ನಿಮಗೆ ಪ್ರೀತಿ ಇದ್ದರೆ ದಯಮಾಡಿಸಿ ದರುಶನವ ಕೈಗೊಳ್ಳಬಹುದೈಯ್ಯ ಸ್ವಾಮಿ ಆಶ್ರಿತಜನ ಪ್ರೇಮಿ ॥

ಬಲರಾಮ: ಭಳಿರೇ! ವನಪಾಲಕರೇ, ಇಳೆಯೊಳು ಅಂಥಾ ಮಹನೀಯರ ದರುಶನವನ್ನು ಕೈಕೊಂಡದ್ದಾದರೇ ಘಳಿಲನೇ ನಮ್ಮ ದುರಿತ ತೊಲಗುವುದು, ತಳುವದೇ ಈ ವಾರ್ತೆಯನ್ನು ನಳಿನಾಕ್ಷನಿಗೆ ಅರುಹಿ ಬರುವಂಥವರಾಗಿರಿ ತ್ವರಿತದಿಂದ ಪೋಗಿರಿ ॥

ವನಪಾಲಕರು: ಅದೇ ಪ್ರಕಾರ ಮಾಡುತ್ತೇವೆಯ್ಯ ದೇವಾ ಕರುಣ ಪ್ರಭಾವ ॥

ಕೃಷ್ಣ: ಅಣ್ಣಾ! ಪೊಡವಿಪತಿಯಾದ ಬಲಭದ್ರರಾಜನೇ ಕಡು ಸಡಗರದಿಂದೆನ್ನ ಕರೆಸಿದ ಕಾರ‌್ಯಾರ್ಥ ವೇನು? ತಡೆಯದೆ ಅಪ್ಪಣೆ ಕೊಡಿಸಬೇಕೈ ದೇವಾ ಯದುಕುಲ ಪ್ರಭಾವ ॥

ದರುವುತ್ರಿವುಡೆ

ಅನುಜ ಲಾಲಿಸು ವನಜನಾಭನೇ
ದನುಜ ಅರಿ ಶ್ರೀ ಕೃಷ್ಣಮೂರ್ತಿಯೇ
ನಿನಗೆ ಪೇಳುವೆ ಇಂದಿನಾಗಮ  ವನು ಜನಾರ್ಧನನೇ               ॥1 ॥

ಮುನಿಪನೋರ್ವನು ಯಮ್ಮ ಈ ಉಪ
ವನದಿ ಕುಳಿತು ಇರುವನೆನುತಲೀ
ಘನದಿ ವನಪಾಲಕರು ಪೇಳ್ವರು  ವಿನಯ ಭಾವದಲೀ                ॥2 ॥

ಬಲರಾಮ: ಭಲಾ! ಮುರ ವಿಜಯನಾದ ಚಕ್ರಧಾರಿಯೇ! ಕರದೊಳು ದಂಡ ಕಮಂಡಲು ಪಿಡಿದು ಪಿರಿದಾದವೇಷ ಚರ್ಮಾಂಬರಧಾರಿಯಾದ ಮುನಿಪನೋರ್ವನು ವರ ತಪಸ್ಸನ್ನಾಚರಿಸುತ್ತಾ ವರ ಮನೋಹರಮಾದ ನಮ್ಮ ಉದ್ಯಾನವನದಲ್ಲಿ ಕುಳಿತಿರುವನೆಂದು ಚರರು ಬಂದೊರೆದರಾದ ಕಾರಣ, ಅಹೋ ನಾರಾಯಣ, ಮುರಹರನ ಪೋಲ್ವ. ಅ ಮುನಿವರನನ್ನು ಅರಮನೆಗೆ ಕರೆತರಲು ತೆರಳಬೇಕೈ ಶ್ರೀಧರಾ ಸರಸಿಜ ಸಖ ಸಮಪ್ರಭಾಕರ ॥