ದರುವು

ತರುಣಿ ನೀನೂ  ದೊರೆತುದೆನಗೆ  ಹರುಷವಾಯಿತು
ವರದ ನಾರ  ಸಿಂಹ ಮೂರ್ತಿಯ  ಕರುಣ ಫಲಿಸಿತೂ                  ॥3 ॥

ಯತಿ: ಎಲೈ ಕುರಂಗಲೋಚನೆ! ಹಿಂಗಿತವರಿತು ನಿನ್ನ ಸಂಗತಿಯನ್ನ ನೋಡಿದರೆ, ಭೃಂಗಕುಂತಳೆಯಾದ ನೀನು ಯನಗೆ ದೊರೆತದ್ದು ಭಂಗ ಬಡವನಿಗೆ ಬಂಗಾರದ ಗಣಿಯು ದೊರೆತು ದಾರಿದ್ರ್ಯ ಹಿಂಗಿದಂತಾಯಿತು. ಹೇ ತುಂಗಕುಚೆ, ಅಂಗಜನೈಯ್ಯನಾದ ಕುಂಕುಮನ ಪುರಿ ಲಕ್ಷ್ಮೀನೃಸಿಂಗನ ಕರುಣವು ಸಾಂಗವಾಗಿ ಯನಗೆ ಸಂಘಟಿಸಿತೇ ವನಿತೆ ಪಾವನ ಚರಿತೆ ॥

ಸುಭದ್ರೆ: ಸ್ವಾಮಿ ! ಮುನಿವರ‌್ಯರೇ! ಕಾಮನ ಸೋದರ ಮಾವನಂತೆ ಮುಖಭಾವವುಳ್ಳ ತಮ್ಮನ್ನು ನೋಡಿದ ಮಾತ್ರದಲ್ಲೇ ಕಾಮಾತುರ ಪೇರ್ಚಿತೈ ಮುನಿವರ ಅರಿಕೆ ಮಾಡುವೆನು ಮತ್ತೊಂದು ವಿವರ॥

ದರುವು

ಲಾಲಿಸುವುದು ಮುನಿರಾಯ  ಪುಣ್ಯಕಾಯ ॥ಸತ್ಯಾ
ಶೀಲಾ ಪೇಳುವೆಯನ್ನ  ಮನದಭಿಪ್ರಾಯಾ ॥ಪ ॥
ಧರೆಯಿಂದ್ರ ಪ್ರಸ್ತಪುರವನ್ನೂ  ನಗರವನ್ನು  ಆಳ್ವ
ದೊರೆ ಧರ್ಮರಾಯನ  ಅನುಜಾತನನ್ನೂ ॥
ಅರಿತಿಹುದುಂಟೆ ನೀವಿನ್ನೂ  ಪಾರ್ಥನನ್ನು  ಆತ
ನಿರುವ ಸ್ಥಳವನು ನೀವೂ  ಬಲ್ಲಿರೆಯಿನ್ನೂ ಲಾಲಿಸುವುದು            ॥1 ॥

ಸುಭದ್ರೆ: ಸುಂದರಮೂರ್ತಿಗಳಾದ ಋಷಿವರ‌್ಯರೇ ಲಾಲಿಸಿ, ಮಂದಹಾಸದಿಂದೀ ಧರಣಿಯೋಳ್ ಇಂದ್ರಪ್ರಸ್ತಪುರವನ್ನು ಸಾಂದ್ರವೈಭವದಿಂದ ಪರಿಪಾಲಿಸುವ ಚಂದ್ರವಂಶರಾಜರೋಳ್ ಸಾಂದ್ರ ಗುಣಯುಕ್ತರಾಗಿ ವಪ್ಪುವಾ, ಅವನೀಂದ್ರ ಧರ್ಮರಾಯನ ಸಹೋದರ ಇಂದ್ರ ತನುಜ ಮಂದಹಾಸ ಶಿಂಧುರಪುರವರಾಧಿಪ ಕಂದರ್ಪ ಸಮರೂಪ, ಸಿಂಧುಗಂಭೀರ, ಸುಂದರ ಕಲಿಪಾರ್ಥನನ್ನು ಯೆಂತಾದರೂ ನೀವು ಕಟಾಕ್ಷದಿಂದೀಕ್ಷಿಸಿ ಅರಿತಿರುವುದುಂಟೇ ಮೌನಿ ವರ ತಪೋಜ್ಞಾನಿ ॥

ದರುವು

ಧರೆಯೊಳು ಸ್ಮರಸಮರೂಪಾ  ಸುಪ್ರತಾಪಾ  ಇಂದ್ರ
ತರಳ ನವನಿಗೆ ಸರೀ  ಯಾರಿಲ್ಲಾ ಭೂಪಾ ॥
ಅರಿಕುಲ ಭಂಜನ ದೀಪಾ  ಧರಣಿಗಧಿಪಾ  ದನುಜ
ವೈರಿ ಸಖ ಪಾರ್ಥನೋಳ್  ಬೆರೆಸು ಕಲಾಪ ಲಾಲಿಸುವುದು ॥    ॥2 ॥

ಸುಭದ್ರೆ: ಸ್ವಾಮೀ ! ವರ ತಪೋಜ್ಞರಾದ ಗುರು ಮಹಾತ್ಮರೇ. ಸ್ಮರನಂತೆ ರಾಜಿಸುತ್ತಿರುವ ದೊರೆ ಪಾರ್ಥರಾಜನಿಗೆ ಯನ್ನ ಶರೀರವನ್ನು ಸಮರ್ಪಿಸಬೇಕೆಂದು ಸಂಕಲ್ಪಿಸಿರುವೆನು. ಪರಮ ಪಾವನರಾದ ನೀವು ಆ ಧನಂಜಯನ ವರಗುಣಾತಿಶಯಗಳನ್ನು ಅರಿತವರಾಗಿದ್ದರೆ ಕರುಣವಿಟ್ಟು ಪೊರೆಯಬೇಕೈ ಗುರು ಮಹಾತ್ಮ ಪರಮ ಪಾವನಾತ್ಮ ॥

ದರುವು

ದೊರೆ ಪಾರ್ಥರಾಜನ ಪರಿಯಾ  ಅವರ ನೆಲೆಯಾ ॥ಈಗ
ಕರುಣವಿಟ್ಟು ಯನ್ನೊಳು  ವರೆಯ ಬೇಕೈಯ್ಯ ॥
ಪರಮ ಪಾವನ ಮುನಿರಾಯ  ಪುಣ್ಯಕಾಯ  ಶ್ರೀ
ನರಸಿಂಹ ಮೂರ್ತಿಯೂ  ಮೆಚ್ಚುವನೈಯ್ಯ ಲಾಲಿಸುವುದು ಮುನಿರಾಯ ॥    ॥3 ॥

ಸುಭದ್ರೆ: ವನಜಾಸನ ವಿನುತರಾದ ಮುನಿ ಮೌನಿಗಳೇ ಘನ ಕೃಪೆಯಿಟ್ಟು ಜನಪತಿ ಪಾರ್ಥನ ನೆಲೆಯನ್ನು ಯನಗೆ ಪೇಳಿದ್ದಾದರೆ ಮನಸಿಜ ಜನಕನಾದ ಕುಂಕುಮನಪುರಿ ಲಕ್ಷ್ಮೀವರನು ಮೆಚ್ಚುವನೈಯ್ಯ ಮುನಿಪಾ ಕರುಣಾಕಲಾಪ ॥

ಯತಿ: ಉಡುರಾಡ್ವದನೆಯಾದ ಸುಭದ್ರೆಯೇ ಕೇಳು. ಪೊಡವಿ ಮಧ್ಯದಲ್ಲಿ ಸಡಗರದಿಂದೊಪ್ಪುವ. ಧೃಢವತ್ತಾದ ಕುಂಕುಮನಪುರಿ, ಜಡಜಾಯತಾಕ್ಷನೆನ್ನುವ ನೃಸಿಂಗ ಮೂರ್ತಿಯ ಧೃಡತರಮಾದ ಕರುಣ ಪ್ರಭಾವದಿಂ ಕಡುಗಲಿ ಪಾರ್ಥನನ್ನು ತೋರಿಸುವೆನು. ಬಡನಡುರನ್ನೆಯಾದ ನಿನಗೆ ಸುರರೊಡೆಯನಾದ ಇಂದ್ರನಂದನನ ಮೇಲೆ ಮನಸ್ಸಿದ್ದರೆ ಧೃಡತರಮಾದ ಒಂದು ವಚನವನ್ನು ಹೇಳ್ತುೇನೆ. ಕೇಳೇ ವನಿತಾ ॥ಹೇ ನಾರಿ ! ಲೋಕದಲ್ಲಿ ಸತ್ಯವಾಗಿ ಮಾತಾಡುವುದು ಬಹಳ ಒಳ್ಳೆಯದು, ಅದರಂತೆಯೇ ಮನಸ್ಸಿಗೆ ಸಮಾಧಾನವಾದ ಕಾರ‌್ಯಗಳನ್ನು ನಡೆಸುವುದು ಅದಕ್ಕಿಂತಲೂ ಅತಿಶಯವಾದದ್ದು. ಭೂಮಿಯ ಮೇಲೆ ಕಣ್ಣಿನಿಂದ ನೋಡಿಕೊಂಡು ನಡೆಯುವುದು ಅಧಿಕವಾದದ್ದು. ಅದರಂತೆಯೇ ನಿನ್ನ ಸ್ಥಿರ ಸ್ವಭಾವವು ವಳ್ಳೇದಾದರೇ ವಸ್ತ್ರದಿಂದ ಪರಿಶೋಧಿಸಿದ ಉದಕವು ಧಾವ ರೀತಿ ಪರಿಶುದ್ಧವಾಗುವುದೋ, ಅದರಂತೆಯೇ ನಿನ್ನ ಇಷ್ಠಪ್ರಕಾರ, ಸೃಷ್ಠೀಶ ಪಾರ್ಥನ ತೋರಿಸುವ ಪ್ರಯತ್ನವನ್ನು ಈಗಲೇ ಮಾಡುವೆನು. ನಿನ್ನ ಧೃಡ ಹ್ಯಾಗಿರುವುದೋ ಪೇಳೇ ಸುಭದ್ರಾ ಕರುಣಾ ಸಮುದ್ರಾ ॥

ದರುವು

ತೋರುವೆಯಾ  ಧೀರ ಮೌನಿ  ವರ‌್ಯ ಪಾರ್ಥನಾ
ನಾರಿ ಕುಂತೀ  ದೇವಿಯ ಸುಕು  ಮಾರ ವಿಜಯನಾ ॥              ॥ಪ ॥

ಚಂದ್ರವಂಶ  ಜಾತ ಸುಗುಣ  ಸಾಂದ್ರ ವಿಜಯನಾ
ಚಂದ್ರನಂದದೀ  ಎಸೆಯುತಿರುವ  ಇಂದ್ರತನಯನಾ                 ॥1 ॥

ಸುಭದ್ರೆ: ಪಾಪ ರಹಿತರಾದ, ತಾಪಸೋತ್ತಮರೇ  ಕೇಳಿ ಈ ಪೃಥ್ವಿಯೋಳ್ ದೀಪದ ಕಳೆಯಂತೊಪ್ಪುವ ಭೂಪಾಲ ಧರ್ಮಪುತ್ರನ ಸಹೋದರ, ಕುಂತೀಕುಮಾರ, ರೂಪಿನೋಳ್ ಇಕ್ಷುಚಾಪನ ಪೋಲ್ವ ಗೋಪವಾಹನನ ಮಿತ್ರ ಆ ಪುರುಹೂತನ ಪುತ್ರ ಭೂಪತಿ ಪಾರ್ಥನನ್ನು ತಾಪಸರಾದ ನೀವು ತೋರಿಸುವುದು ಸತ್ಯವೇ ಸ್ವಾಮಿ ಭೃತ್ಯಜನ ಪ್ರೇಮಿ ॥

ದರುವು

ಸ್ಮರಿಸುತಿರುವೆ  ಮನದೊಳು ಅನ  ವರತ ವಿಜಯನಾ
ಕರುಣವಿಟ್ಟು  ತೋರಿಸೆನಗೇ  ಗುರುವೇ ಪಾರ್ಥನಾ                  ॥2 ॥

ಸುಭದ್ರೆ: ಸ್ವಾಮಿ, ಜ್ಞಾನಶೀಲರಾದ ಮುನಿಗಳೇ ! ನಾನಾದರೆ ಹಗಲಿರುಳು ಮಾನಸದಲ್ಲಿ ಆ ನರನನ್ನೇ ಧ್ಯಾನಿಸುತ್ತಿರುವೆನು. ದಾನವಾರಿಯ ಧ್ಯಾನಾವಲಂಬನರಾದ ತಾವು ಕೃಪೆಯಿಟ್ಟು ಮಾನವ ಪಾಲನಾದ ಪಾರ್ಥನ ತೋರಿಸಿದ್ದಾದರೆ ನಾನು ನಿಮ್ಮ ಸೇವೆಗೈಯ್ದದಕ್ಕೆ ತಕ್ಕ ಫಲ ವದಗಿತೆಂದು ಮಾನಸದಿ ಸಂತೋಷಿಸುವೆನೈಯ್ಯ ಗುರುವೇ ತವ ಚರಣವ ನಂಬಿರುವೇ ॥

ದರುವು

ಧರಣಿ ಕುಂಕುಮ  ಪುರದ ವಡೆಯ  ವರನೃಸಿಂಗನಾ
ಕರುಣದಿಂದ  ತೋರಿಸೆನಗೇ  ಧೀರ ಪಾರ್ಥನಾ                       ॥3 ॥

ಸುಭದ್ರೆ: ಸ್ವಾಮಿ ! ವರ ತಪೋಜ್ಞರಾದ ಗುರು ಮಹಾತ್ಮರೇ ! ಧರಣಿ ಮಧ್ಯದಲ್ಲಿ ಪರಿಶೋಭಿಸುತ್ತಿರುವ ಸರಸತರ ಕುಂಕುಮನ ಪುರವರಾಧಿಪ ನರ ಕೇಸರಿಯೆನ್ನುವ ಲಕ್ಷ್ಮೀವರನ ಕೃಪಾಭರಿತರಾದ ನೀವು ಕೃಪೆಯಿಟ್ಟು ದೊರೆ ಪಾರ್ಥರಾಜನ ತೋರಿಸಬೇಕೈ ಸ್ವಾಮಿಯೇ ಶರಣಾಗತರ ಪ್ರೇಮಿಯೇ ॥

ಯತಿ: ಸರಸಿಜಗಂಧಿಯಾದ ಹೇ ತರುಣೀ ಸುಭದ್ರಾ ! ವರ ರಸಭರಿತವಾದ ನಿನ್ನ ಮೃದುರೋಕ್ತಿಗೆ ಪರಿತೋಷ ಹೊಂದಿದವನಾದೆನು. ಸರಸತರ ಕುಂಕುಮನಪುರ ವರ ಸಿರಿ ಮನೋಹರನಾದ ದುರಿತ ದೂರ ನರಸಿಂಹಮೂರ್ತಿಯ ಪರಮ ದೇವಾಲಯಕ್ಕೆ ಆಗಮಿಸಿದಲ್ಲಿ ಸ್ಮರ ಸನ್ನಿಭನಾದ ನಿನ್ನ ಪ್ರಿಯೇಶ್ವರ ಪಾರ್ಥನು ಬರುವಂತೆ ಪರಿಪರಿ ಪ್ರಾರ್ಥನೆಗೈಯ್ಯುವೆನೇ ನಾಗವೇಣಿ ಮೃದುಕೀರವಾಣಿ ॥

ಸುಭದ್ರೆ: ಅದೇ ಪ್ರಕಾರ ಆಗಬಹುದು ಸ್ವಾಮಿ ಶರಣಾಗತ ಪ್ರೇಮಿ ॥

ದರುವು

ಯಿತ್ತಾ ಬಾರೆಲೆ ಭಾಮಿನೀ  ಯನ್ನನು ಮುಖ
ವೆತ್ತಿ ನೋಡೆಲೆ ಕಾಮಿನೀ ॥ಪ ॥
ಚಿತ್ತದೊಳು ಮತ್ತೇನು ಯೋಚನೆ
ವೃತ್ತ ಕುಚೆಯಳೆ ಮಾರ ವೈರಿಯ
ಮತ್ತೆ ಮನ್ಮಥ ಪಿತನ ಕರುಣದೀ
ಬಿತ್ತರೀ ಕಡು ಹರುಷದಿಂದಿರು                                              ॥1 ॥

ಅರ್ಜುನ: ಎಲೈ ಲೋಲ ಲೋಚನೆಯೇ ! ಫಾಲಲೋಚನನರಸಿಯಂತೊಪ್ಪುವಾ ! ಅಳಿ ನೀಲ ಕುಂತಳೆಯಾದ ನಿನ್ನ ಶ್ರೀ ಲಲಿತಾಂಗಿಯ ರಮಣನು ಕರುಣದಿಂದ ಪರಿಪಾಲಿಸುವನು. ಅಹೋ ತರುಣಿ  ಭೂಲಲಾಮನಾದ ನಿನ್ನ ಅಗ್ರಜ ಹಲಧರನ ದುರಾಲೋಚನೆಗಾಗಿ ಶ್ರೀಕೃಷ್ಣನೀ ರೀತಿ ಕೃತಕ ಯತಿವೇಷಮಂ ತಾಳೆಂದು ಪೇಳಿದನೇ ತರುಣೀ ಕೇಳುರಗವೇಣಿ ॥

ದರುವು

ಪುರ ಬಹಿರುದ್ಯಾನದೀ  ಗೋಪಾಲನ
ಚರಣ ಕಮಲ ಧ್ಯಾನದೀ ॥
ವರ ಋಷಿಯ ವೇಷದೊಳು ಕುಳಿ
ತಿರಲಂದು ವನಪಾಲಕರು ಬಂದೀ
ಪರಿಯ ಹಲಧರ ಗರುಹಲೆನ್ನನೂ
ಕರೆದು ತಂದನು ನಿಜ ನಿವಾಸಕೇ                                          ॥2 ॥

ಅರ್ಜುನ: ಎಲೈ, ತರಳಾಯತಾಕ್ಷಿಯಾದ ಸುಭದ್ರೆಯೇ ಕೇಳು! ಪರಿ ಪರಿ ಕ್ಷೇತ್ರಗಳನ್ನು ಚರಿಸಿಕೊಂಡು ಬಂದು ದ್ವಾರಕಾಪುರದ ಬಹಿರುದ್ಯಾನವನದಲ್ಲಿ ಶಿರಿಯರಸನ ಚರಣ ಸ್ಮರಣೆಯಿಂದ ವರಸನ್ಯಾಸಿ ವೇಷ ಭೂಷಿತನಾಗಿ ಕುಳಿತಿರುವ ಸಮಯದಲ್ಲಿ ಅಹೋ ತರುಣಿ! ಚರರ ಮುಖೇನ ಹಲಧರ ಭೂಪಾಲನೀ ವಾರ್ತೆಯಂ ಕೇಳಿ ನಡೆತಂದು ಪರಮ ಸಂತೋಷದಿಂದರಮನೆಗೆ ಕರೆದುಕೊಂಡು ಬಂದನೇ ಕೋಮಲಾಂಗೀ ಹಲಧರನ ತಂಗೀ ॥

ದರುವು

ಧರಣಿ ಕುಂಕುಮ ಪುರವಾ  ಪಾಲಿಸುವ ಶ್ರೀ
ಹರಿ ನೃಸಿಂಗನು ಪೊರೆವಾ ॥
ನೀರಜಾಕ್ಷಿಯೇ ಲಾಲಿಸೀಗಾ
ಹರುಷದಿಂದಲಿ ಯನ್ನ ವಚನವ
ಕರುಣಭರಿತೇ ವರಸುಭದ್ರೆಯೇ
ಪರಮ ಪಾವನೆ ತರುಣಿ ರನ್ನಳೇ                                           ॥3 ॥

ಅರ್ಜುನ: ಎಲೈ ಗುರು ಪಯೋಧರೆ ನೀರೆ ! ದುರಿತಹರನಾದ ಕುಂಕುಮನ ಪುರಿ ನರಸಿಂಗ ಮೂರ್ತಿಯೆನಿಪ ಶ್ರೀ ಕೃಷ್ಣನ ಕರುಣಕಟಾಕ್ಷದಿಂದ ನಿನ್ನವರ ಮನಸ್ಸಿಗೆ ಪರಮಸಂತೋಷವನ್ನುಂಟು ಮಾಡುವೆನು ಸರಸದಿಂದೀ ಪೀಠವನ್ನು ಅಲಂಕರಿಸಬಹುದೇ ತರುಣೀ ವರಫಣಿವೇಣಿ ॥

ಭಾಗವತರ ಕಂದ

ಹರಿ ಪರಮಾತ್ಮನು ಕರುಣಿಸಿ
ಹರುಷದಿ ಭೂಸುರರ ವೆರಸಿ ಪುರಕೈತಂದು
ತರುಣಿಮಣಿ ವರಸುಭದ್ರೆಯ
ಸರಸದಿ ಫಲುಗುಣನಿಗಿತ್ತು ಪರಿಣಯಗೈಯಲ್ ॥

 

(ಶ್ರೀಕೃಷ್ಣನು ಭೂಸುರರೊಂದಿಗೆ ಬರುವಿಕೆ)

ಶ್ರೀಕೃಷ್ಣ: ಆಹಾ ಸ್ವಾಮಿ ಭೂಸುರೋತ್ತಮರೇ, ವಾಸವಾತ್ಮಜನಾದ ಈ ಪಾರ್ಥನಿಗೂ ವಾಸುಕಿ ವೇಣಿಯಾದ ಈ ಸುಭದ್ರಾದೇವಿಗೂ ಈ ಸಮಯ ಒಂದು ಮುಹೂರ್ತ ಮಾತ್ರದಲ್ಲಿ ವಿವಾಹವನ್ನಾಚರಿಸಬೇಕೈ ದ್ವಿಜಸಾರ್ವಭೌಮರೇ

ಸುಬ್ಬಾ ಭಟ್ಟ: ಅಯ್ಯ ಕೇಶವ ಭಟ್ಟರೇ ! ಶ್ರೀಕೃಷ್ಣ ಮೂರ್ತಿಯವರ ವಾಕ್ಯವನ್ನು ಕೇಳಿದಿರೋ ॥

ಕೇಶವ ಭಟ್ಟ: ಕೇಳಿದೆ ಕೇಳಿದೆ. ಅರಮನೆಯಿಂದ ಸಕಲ ಸಾಮಗ್ರಿಗಳನ್ನು ತೆಗೆಸಿಕೊಂಡು ಬಂದು ವಿವಾಹ ಮುಹೂರ್ತವನ್ನು ಶೀಘ್ರಪಡಿಸೋಣ ಬನ್ನಿ!

ಸುಬ್ಬಾ ಭಟ್ಟ: ಹಾಗೆ ಆಗಲಿ ದಯಮಾಡಿಸಿ, ಮಹಾರಾಜರು ಯೇನಾದರು ಸಂಭಾವನೆ ಕೊಡುತ್ತಾರೆ. ಮುಹೂರ್ತ ಆದ ನಂತರ ಕೇಳೋಣ ದಯಮಾಡಿಸಿ ॥

ಸುಬ್ಬಾ ಭಟ್ಟ: ಅಮ್ಮಾ ನಾಗವೇಣಿಯಾದ ಸುಭದ್ರಾದೇವಿಯೇ ! ಜಾಗರೂಕತೆಯಿಂದ ಮಂಗಳ ಸ್ನಾನವನ್ನಾಚರಿಸಿ ಕೊಂಡು ಬಂದು ಈ ಪೀಠವನ್ನಲಂಕರಿಸಮ್ಮಾ ಸುಭದ್ರಾ ॥

ಅಯ್ಯ ತುಂಗ ವಿಕ್ರಮನಾದ ಅರ್ಜುನ ಭೂಪಾಲನೇ. ಮಂಗಳಸ್ನಾನವನ್ನಾಚರಿಸಿಕೊಂಡು ಅಂಗ ಶೃಂಗಾರವಾಗಿ ಮುಹೂರ್ತಕ್ಕೆ ಸಿದ್ಧನಾಗು ಹ್ಯಾಗಿದ್ದರೂ, ನಿನ್ನ ಅದೃಷ್ಠ ವಳ್ಳೆಯದು. ಬಂಗಾರ ಬೆಳ್ಳಿ ವಸನಾಭರಣಗಳೇನಿಲ್ಲದಂತೆ ಅಂಗಾಮಿನ ಮುಹೂರ್ತವಾಗುವುದು ಅಂಗಜನೈಯ್ಯನಾದ ಶ್ರೀರಂಗನ ಕರುಣದಿಂದಲ್ಲವೇ ಬಂಗಾರದಂಥ ಹೆಣ್ಣು ನಿನಗೆ ದೊರೆತದ್ದು, ಅಂಗಜಪಾಲಗೆ ಈ ಸಂಗತಿ ತಿಳಿದರೆ ಕಾರ‌್ಯ ಭಂಗವಾಗುವುದು. ಜಾಗ್ರತೆ ಸಿದ್ಧನಾಗು. ಮೂರು ಜಾವದೊಳಗಾಗಿ ಕಲ್ಯಾಣ ಸಾಂಗವಾಗಿ ನೆರವೇರಿಸುತ್ತೇವೆ. ಹಿಂಗದೆ ನಮಗೆ ಐವತ್ತು ವರಹಾ ದಕ್ಷಿಣೆಯನ್ನು ಮಾತ್ರ ಕೊಡಬೇಕು॥

ಅರ್ಜುನ: ಕೇಶವಭಟ್ಟರೇ, ಮುಹೂರ್ತ ನಂತರದೋಳ್ ನಿಮ್ಮ ಆಶೆ ತೀರುವಂತೆ ಬಹುಮಾನವನ್ನು ಕೊಡುತ್ತೇನೆ ಕಾರ‌್ಯವನ್ನು ಆಗು ಮಾಡಿಸಿ ॥

 

(ಮುಹೂರ್ತ)

ಕೇಶವ ಭಟ್ಟ: ಮಹಾರಾಜನೇ, ತಮ್ಮ ಅಪ್ಪಣೆ ಪ್ರಕಾರ ಸರ್ವ ಶುಭ ಕಾರ‌್ಯಗಳನ್ನು ತ್ವರಿತವಾಗಿ ನಡೆಸಿದ್ದಾಯಿತು. ನುಡಿದ ರೀತಿ ನಮಗೆ ಉಡುಗೊರೆ ದಕ್ಷಿಣೆ ತಾಂಬೂಲವನ್ನು ದಯಪಾಲಿಸಿದ್ದಾದರೆ ನಾವು ತೆರಳುವೆವೂ॥

ಕೃಷ್ಣ: ಆಹಾ ಭೂಸುರೋತ್ತಮರೇ! ಈ ಸಮಯ ನೀವು ನಡೆಸಿದ ಶುಭಮುಹೂರ್ತಕ್ಕೆ ಬಹಳ ಸಂತೋಷವಾಯಿತು. ನಾ ಸಲಿಸುವ ಈ ದಕ್ಷಿಣೆ ತಾಂಬೂಲವನ್ನು ತೆಗೆದುಕೊಂಡು ದಯ ಮಾಡಿಸಬಹುದು.

ಕೃಷ್ಣ: ಎಲೈ ತುಂಗ ವಿಕ್ರಮನಾದ ವಿಜಯ ಧನಂಜಯ, ಅಂಗಜಪಾಲನರಿಯದಂತೆ ಮಂಗಳ ತರಾಂಗಿಯಾದ ಸುಭದ್ರೆಯನ್ನೊಡಗೊಂಡು ನಿನ್ನ ಪಟ್ಟಣಕ್ಕೆ ತೆರಳುವನಾಗು. ನಾನು ಹೊರಡುವೆನು. ಪಾರ್ಥ ತ್ರಿಲೋಕಸಮರ್ಥ ॥

ಅರ್ಜುನ: ಅದೇ ಪ್ರಕಾರ ಮಾಡುತ್ತೇನೈ ಭಾವ ವಾಸುದೇವ ॥

ಸುಭದ್ರೆ: ಹೇ ಅಣ್ಣಯ್ಯ, ಪೋಗಿ ಬರುವೆನು. ಯನ್ನನ್ನು ಆಶೀರ್ವದಿಸಿ ಕಳುಹಿಸು ಅಣ್ಣಾ ಕರುಣಾ ಸಂಪನ್ನ॥

(ದ್ವಾರಪಾಲಕರು ಬರುವಿಕೆ)

ದರುವು

ನಿಲ್ಲೋ ಯತಿಯೇ ಬೇಗಾ  ನಿನ್ನ
ಕೊಲ್ಲದೆ ಬಿಡೆನೀಗಾ ॥
ಪುಲ್ಲ ನೇತ್ರೆಯಳನು ನೀನು
ಎಲ್ಲಿಗೊಯ್ಯುವೇ ಮಂದಮತಿಯೇ                                        ॥1 ॥

ಯಾರು ಇಲ್ಲದಿರಲೂ, ಬೇಗ
ಚೋರತನದೊಳೊಯ್ಯಲೂ ॥
ದುರುಳತನವನಡಗಿಸುವೆವು
ಸಾರದಿರೆಲೋ ಅಧಮ ಮುಂದಕೇ                                        ॥2 ॥

ದ್ವಾರಪಾಲಕರು: ಯಲಾ ವಿಪಿನವಾಸಿಯಾದ ಕಪಟ ಸನ್ಯಾಸಿಯೇ ! ಕುಪಣತ್ವದಿಂ ಚಪಲಾಯತಾಕ್ಷಿ ಜಾನಕಿಯನ್ನಪಹರಿಸಿದ ದಶಮುಖನಂತೆ ಸುಪವಿತ್ರೆಯಾದ ಸುಭದ್ರಾದೇವಿಯನ್ನು ಅಪಹರಿಸುವೆಯಾ ದ್ರೋಹಿ. ನೃಪಶಿಖಾಮಣಿಯಾದ ಹಲಧರ ಭೂಪಾಲನರಿತರೆ ನಿನ್ನ ಚಪಲ ಚೇಷ್ಠೆಗಳನ್ನಡಗಿಸದೆ ಬಿಡುವನೇನೋ ಯತಿಯೇ ಕುಹಕ ಮತಿಯೇ

ದರುವು

ಕಡು ದುರಾ  ತ್ಮಕರೆ ಯನ್ನ  ಗೊಡವೆ ಬೇಡಿರೋ
ಬಿಡದೆ ನಿಮ್ಮ  ಶಿರವ ತರಿದು  ಬಿಡುವೆ ನೋಡಿರೋ ॥

ಅರ್ಜುನ: ಯಲಾ! ಊರೊಳು ತಿರಿದುಂಡು ಮೂರುಪೈ ಜೀತಕ್ಕಾಗಿ ಅರಮನೆಯ ಬಾಗಿಲನ್ನು ಕಾಯುವ ಭಿಕಾರಿಗಳಾದ ನಿಮಗೆ, ಶೂರಜನ ಗಂಭೀರನಾದೆನ್ನ ವಿಚಾರ ಮಾಡುವ ಅಧಿಕಾರ ನಿಮಗೇತಕ್ಕೆ, ಯಲಾ ಬಾರಿ ಬಾರಿಗೂ ಸಾರಿ ಪೇಳುವೆನು. ಬಹುಜೋಕೆ. ಜೋಕೆ. ಭುಜಬಲಗರಿಷ್ಠನಾದೆನ್ನ ಕೈಪೆಟ್ಟುಗಳಿಂಗಾರು ಗೆಡುವುದು ಸರಿಯಲ್ಲ. ಅಂತಕನೂರ ಸೇರಿಸುವೆನು. ದಾರಿಯಂ ಬಿಟ್ಟು ದೂರ ಸಾರಿರೋ ದುರಾತ್ಮರೇ ॥

ದರುವು

ದುರುಳ ಯತಿಯೇ ನಿನ್ನಾ  ಬೇಗ
ಶಿರವನರಿವೆ ಮುನ್ನಾ ॥
ಧರಣಿ ಕುಂಕುಮ ಪುರದ ವರದ
ಹರಿಯ ಚರಣದಾಣೆ ಬಿಡೆವು                                                ॥3 ॥

ದ್ವಾರಪಾಲಕ: ಯಲಾ. ವಳ ಮೋಸಗಾರನಾದ ತಳುಕು ಯತಿಯೇ ಇಳೆಯೊಳು ಕುಂಕುಮನ ಪುರಿ ನಳಿನಾಯತಾಕ್ಷನಾದ ಲಕ್ಷ್ಮೀ ನೃಸಿಂಗನು ನಿನ್ನ ಮರೆಗೊಳಿಸಿ ಕೊಂಡರೂ ಬಿಡದೇ, ಹೊಳೆಯುವ ಈ ಖಡ್ಗದಿಂದ ನಿನ್ನ ಗಳವನ್ನು ಸೀಳಿ ಇಳೆ ದೇವತೆಗೆ ಬಲಿಕೊಡುವೆವು. ಯಲಾ. ಘಳಿಲನೇ ಹಲಧರ ಭೂಪಾಲನನ್ನು ಕರೆದುಕೊಂಡು ಬರುವೆವು. ಇನ್ನು ನೀನುಳಿಯುವ ಸಂಗತಿಯನ್ನು ನೋಡುವೆವೋ ಕಪಟಯತಿಯೇ ಮಂದಮತಿಯೇ ॥

ದ್ವಾರಪಾಲಕ: ಸ್ವಾಮೀ ಭೂಪತಿಯಾದ ಬಲಭದ್ರರಾಜನೇ ಈ ಮಹಾಕಾರ‌್ಯ ಭಾಗಗಳು ಹಾಗಿರಲಿ. ನೇಮದಿಂ ನಿಮ್ಮ ಅರಮನೆಯೊಳಿದ್ದ ಕಾಮರೂಪಿಯಾದ ಸನ್ಯಾಸಿಯು ಕೋಮಲಾಂಗಿಯರಾದ ಸುಭದ್ರಾದೇವಿಯವರನ್ನು ತಸ್ಕರತನದೊಳಪಹರಿಸಿಕೊಂಡು ಓಡಿಹೋಗಲೆತ್ನಿಸಿ ಇಹನೈ ರಾಜ ಜಲಜಾಪ್ತ ತೇಜಾ ॥

ಬಲರಾಮ: ಎಲೈ, ಚಾರಕುಲಾಗ್ರಣಿಗಳೇ ಕೇಳಿ, ವಳಮೋಸಗಾರನಾದ ತಳಕು ಸನ್ಯಾಸಿಯನ್ನು ನಿಳಯದೆಡೆಗೆ ನಾನು ಕರೆತರುವಾಗಲೇ ಮುನಿಗಳ ಗೊಡವೆ ವಳಿತಲ್ಲವೆಂದು ನಳಿನೋದರನು ಮೊದಲೇ ಯನಗೆ ಪೇಳಿದನು. ನಾನು ಆ ಮಾತು ಕೇಳದೆ ತಿಳಿವಳಿಕೆಯಿಲ್ಲದೇ ಹೋದೆನು. ಭಲಾ, ವಳಿತಾಯಿತಿರಲಿ. ಘಳಿಲನೇ ಆ ತಿರುಕನನ್ನು ಪೊಳೆಯುವ ಹಲಾಯುಧದಿಂದ ಸದೆ ಬಡಿದು ತಳುವದೇ ಅಂತಕನ ಪಾಲು ಮಾಡುವೆನು, ಘಳಿಲನೇ ಹೋಗೋಣ ಬನ್ನಿರೈಯ್ಯಿ ಚರರೇ ದ್ವಾರಪಾಲಕರೇ ॥

ದರುವು

ನಿಲ್ಲೆಲೋ ಸನ್ಯಾಸಿ  ಪೋಗು
ವೆಲ್ಲಿಗೆ ಬಿಕನಾಸಿ ॥
ಖುಲ್ಲ ನಿನ್ನ ದುರುಳತನದ
ಸೊಲ್ಲ ನಡಗಿಸುವೆನು ಬಾರೋ                                            ॥1 ॥

ಬಲರಾಮ: ಯಲಾ ! ಹುಲು ಸನ್ಯಾಸಿಯೇ, ಹಲವು ದುರಿತಗಳ ನೀಗಿದ ಬಲು ಮಹಾತ್ಮನೆಂದು ಭಾವಿಸಿ ಸಲಿಗೆಯಿಂದ ನಿಲಯಕ್ಕೆ ಕರೆತಂದು ಉಪಚರಿಸಿದ್ದಕ್ಕೆ, ನಿಲಯದಿ ನಾನಿಲ್ಲದ ಸಮಯದಲ್ಲಿ ಹಲವು ಕುಟಿಲಗಳ ವಳಿದು ಲಲನಾಮಣಿ ಸುಭದ್ರೆಯಳನ್ನು ವಲಿಯಲಿಚ್ಛಿಸಿ ಬಲು ಜವದಿಂ ಕೊಂಡೊಯ್ಯಲೆತ್ನಿಸಿರುವೆಯಾ ಖೂಳನೇ  ಘಳಿಲನೇ ಈ ಲಲಿತಾಂಗಿಯ ಬಿಟ್ಟು ತೆರಳಿದರೆ ವಳಿತಾಗಿರುವುದು. ಇಲ್ಲವಾಯಿತೇ, ಇಕ್ಕೋ ಈ ಹಲಾಯುಧದಿಂದ ನಿನ್ನ ಲಲಾಟದಲ್ಲಿ ಲಿಖಿತವನ್ನು ತೊಡೆದು ಅಲೆಯುವ ಶಾಕಿನೀ ಗ್ರಹಗಳಿಗೆ ಬಲಿಯಿತ್ತೆಪೆನೋ ಸನ್ಯಾಸಿ ಹೇ ಬಿಕನಾಸಿ ॥

ದರುವು

ಫಡ ಫಡೆಲವೋ ದುರುಳಾ  ಈಗ
ಕಡಿದು ಸಿಗಿವೆ ಕರುಳಾ ॥
ಮೂಢ ನಿನಗೆ ಕಡೆಯಕಾಲ
ಧೃಡದಿ ವದಗಿ ಬಂದಿತೀಗಾ                                                 ॥2 ॥

ಬಲರಾಮ: ಯಲಾ, ಬಡ ಸನ್ಯಾಸಿಯೇ ! ಉಡುರಾಜ ಮುಖಿಯಾದ ಸುಭದ್ರಾ ದೇವಿಯನ್ನು ಒಡಗೊಂಡು ಸಿಡಿದೋಡಿದರೆ ಬಿಡುವೆನೇ ಈ ಬಲಭದ್ರ ರಾಜನು. ಯಲಾ! ಜಡದೇಹಿ ಮುನಿಯೇ, ಪೊಡವಿಯೊಳು ನಿನಗೆ ನಾನೆ ಕಡೆ ಕಾಲರುದ್ರನೆಂದು ತಿಳಿದು ಧೃಡತರಮಾದ ನಿನ್ನ ಶೌರ‌್ಯದೇಳಿಗೆಯನ್ನು ತೋರಿಸಬಹುದೆಲಾ ಯತಿಯೇ ಕುಹಕ ದುರ್ಮತಿಯೇ ॥

ದರುವು

ಧರಣಿ ಕುಂಕುಮ ಪುರಿಯಾ  ಹರಿ
ಕರುಣವಿಹುದನರಿಯಾ ॥
ದುರುಳ ನಿನ್ನ ಹಲಾಯುಧವಾ
ಮುರಿದು ಧರೆಗೆ ಉರುಳಿಸುವೆನು                                          ॥3 ॥

ಅರ್ಜುನ: ಯಲಾ ದುರುಳನಾದ ಬಲಭದ್ರ. ಧರೆಯೊಳು ಯನಗೆ ಸರಿಯಿಲ್ಲವೆಂದು ಮೆರೆಯದಿರೋ ಕ್ಷುದ್ರ. ಧರಣಿ ಮಧ್ಯದಲ್ಲೊಪ್ಪುವಾ ಸರಸತರ ಕುಂಕುಮನಪುರಿ ಶಿರಿದೇವಿಯರಸ ನರಸಿಂಹ ಮೂರ್ತಿಯೆನಿಪ ಶ್ರೀಹರಿಯ ಕರುಣ ಕಟಾಕ್ಷದಿಂದ ಧುರವಿಜಯನೆಂದು ಹೇಳುವ ನಿನ್ನ ಕರದೊಳೊಪ್ಪುವ ಹಲಾಯುಧವಂ ಮುರಿದಿರಿಸಿ ನಂತರ ತಿರುಕ ಸನ್ಯಾಸಿಯಾದೆನ್ನ ಭುಜಬಲ ಪರಾಕ್ರಮವನ್ನು ತೋರಿಸುವೆನು. ಸರಸಿಜ ಗಂಧಿಯಾದ ಸುಭದ್ರೆಯನ್ನು ಎಷ್ಠು ಮಾತ್ರಕ್ಕೂ ಬಿಡೆನು, ಧುರ ಪರಾಕ್ರಮಿ ನೀನಾದದ್ದು ಸಹಜವಾದರೆ ವರ ಸಹೋದರಿಯ ಬಿಡಿಸಿಕೊಳ್ಳಬಾರದೇನೋ ಹಲಧರಾ ನಿನಗೆ ನಾನೇ ದಂಡಧರಾ ॥

ಕೃಷ್ಣ: ಅಹೋ ಕಂತುಪಾಲ ! ದಂತಿಗಮನೆ ಸುಭದ್ರಾದೇವಿಯನ್ನೊಯ್ದ ಶಾಂತಚಿತ್ತನಾದ ಸನ್ಯಾಸಿಯೋಳ್ ಇಂಥಾ ಕಠಿಣತರ ಭಾವ ಸಲ್ಲದು. ಶಾಂತಚಿತ್ತನಾಗಿ ಚಿಂತೆಯನ್ನೀಗಿ ಅಂತಃಪುರಕ್ಕೆ ತೆರಳೋಣ ಬಾರೈಯ್ಯ ಅಗ್ರಜ ಬಲಭದ್ರ ರಾಜ ॥

ದರುವು

ಏನ ಹೇಳ  ಲೈಯ್ಯ ಅನುಜಾ
ಮಾನ ಹೀನವ  ವಸುದೇವ ತನುಜಾ                                    ॥ಪ ॥

ವರ ಸಹೋದರೀ  ಸುಭದ್ರೆಯಳನೂ
ದುರುಳ ಮೋಸದೊಳೊಯ್ದನಿನ್ನೇನೂ                                  ॥1 ॥

ಗತಿಯು ಯೇನಾಗೈ  ಯ್ಯಲಿ ಶ್ರೀಶ ನಾನು
ಕ್ಷಿತಿಯೊಳಪಕೀರ್ತಿ  ಗೊಳಗಾಯಿತಿನ್ನೂ                                ॥2 ॥

ಬಲರಾಮ: ಅಯ್ಯ ಜಲಜನಾಭ. ಲಲನಾಮಣಿ ಸುಭದ್ರೆಯಳನು ಹುಲು ಸನ್ಯಾಸಿ ಅಪಹರಿಸಿದನಲ್ಲೋ ಶೌರಿ. ಅಕಟಕಟಾ. ದಾನವಾರಿ. ಲಲಿತಾಂಗಿಯನ್ನು ದುರ‌್ಯೋಧನ ಭೂಪಾಲಂಗೆ ಕೊಡಬೇಕೆಂದಿದ್ದೆನು, ಬಲವಂತರಾದ ನೆಲಪತಿಗಳೆದಿರಿನಲ್ಲಿ ನಾನು ತಲೆಯೆತ್ತಿ ನಡೆಯದಂತಾಯಿತಲ್ಲೋ ಶ್ರೀಹರಿ ಮುಂದೇನುದಾರಿ ॥

ದರುವು

ನಾರೀ ಮಣಿಯನು  ಚೋರತನದೊಳೂ
ಯಾರು ಹೊಯ್ದರೆಂ  ಬುವರು ಜನರುಗಳೂ                            ॥3 ॥

ದೂರು ಹೋಯ್ತು ಬಾ  ಳುವುದೆಂತು ಪೇಳೂ
ಧರಣಿಯೊಳು  ವ್ಯರ್ಥವಾಯಿತ್ತೆನ್ನ ಬಾಳೂ                             ॥4 ॥

ಬಲರಾಮ: ಹೇ ನಾರಾಯಣ! ಭೂಧರನಾದ ಹಲಧರನ ಸಹೋದರಿಯಳನ್ನು ದರಿದ್ರನಾದ ಹುಲು ಸನ್ಯಾಸಿಯು ಕದ್ದೊಯ್ದನೆಂದು ಊರು ಜನರೆನ್ನ ದೂರುವಂತಾಯ್ತು, ಮೀರಿದ ಈ ಅಪಕೀರ್ತಿಯನ್ನು ಹೊತ್ತು ಹ್ಯಾಗೆ ಬಾಳಲೋ ಶ್ರೀಹರಿ. ಧರಣಿಯೊಳೆನ್ನ ಬಾಳು ವ್ಯರ್ಥವಾಯಿತಲ್ಲೋ ಮುರಾರಿ ತೋರೆನಗೆ ದಾರಿ ॥

ದರುವು

ವಸುಧೆ ಕುಂಕುಮ  ಪುರನೆಲೆ ವಾಸ
ಬಿಸಜನಾಭ ನೃಸಿಂಗ ಲಕ್ಷ್ಮೀಶಾ                                           ॥5 ॥

ವ್ಯಸನಕೀಡಾದೆ  ನಲ್ಲೈಯ್ಯ ಶ್ರೀಶಾ
ಬಿಸರುಹಾಕ್ಷಿಯ  ತೋರೋ ಮಹೀಶಾ                                   ॥6 ॥