ಕವಿ               :     ಎಚ್.ಎಸ್. ಸುಬ್ಬರಾಯಪ್ಪ
                           ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ

ಅವಧಿ            :     ಆರಂಭ – 25-06-1962
ಮುಕ್ತಾಯ – 04-08-1962

 

 

ವಿಘ್ನೇಶ್ವರ ಪ್ರಾರ್ಥನೆ

ಶುಕ್ಲಾಂಬರಧರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನೋ ಧ್ಯಾಯೇ, ಸರ್ವವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ, ಗಜಾನನ ಮಹರ್ನಿಶಂ
ಅನೇಕ ದಂತ ಭಕ್ತನಾಂ, ಏಕದಂತ ಮುಪಾಸ್ಮಹೇ ॥

ಶಾರದಾ ಸ್ತುತಿ

ನಮಸ್ತೇ ಶಾರದಾದೇವಿ, ವರದೇ ಭಕ್ತವತ್ಸಲೇ
ವಿದ್ಯಾರಂಭಂ ಕರಿಷ್ಯಾಮಿ, ಸಿದ್ಧಿರ್ಭವತು ಮೇ ಸದಾ ॥

ಗುರು ಸ್ತುತಿ

ಗುರು ರ್ಬ್ರಹ್ಮಾ, ಗುರು ರ್ವಿಷ್ಣುಃ, ಗುರುರ್ದೇವೋ ಮಹೇಶ್ವರ
ಗುರು ಸ್ಸಾಕ್ಷಾತ್ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ॥

ಶ್ರೀಕೃಷ್ಣ ಸ್ತುತಿ

ವಸುದೇವ ಸುತಂ ದೇವಂ, ಕಂಸ ಚಾಣೂರ ಮರ್ದನಂ
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ॥

ಭೂದೇವಿ ಸ್ತುತಿ

ವಿಷ್ಣು ಶಕ್ತಿರ್ಜಗನ್ಮಾತೆ, ಶಂಖವರ್ನ ಮಹೀತಳೇ
ಅನೇಕ ರತ್ನ ಸಂಭೂತೆ, ಶ್ರೀ ಭೂಮಿದೇವಿ ನಮೋಸ್ತುತೇ ॥

ನವಗ್ರಹ ಸ್ತುತಿ

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ
ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತುವೇ ನಮಃ ॥

ಇಷ್ಠದೇವತಾ ಪ್ರಾರ್ಥನೆ

ದರುವು

ಗಿರಿಜೆ ಪ್ರಿಯನೇ  ದುರಿತದೂರನೇ  ಕರುಣಿಸೆನ್ನನೂ
ಮಾರಹರನೇ, ಚರಣ ನೀರಜ  ಕೆರಗಿ ನಮಿಪೆನೂ                     ॥1 ॥

ಉರಗ ಭೂಷಣ  ಯಕ್ಷಗಾನದ  ವರ ಸುಭದ್ರೆಯಾ
ಪರಿಣಯವನೂ  ತಿದ್ದಿ ಬರೆವೆ  ಕರುಣಿಸೀಗಭಯಾ                     ॥2 ॥

ಧರಣಿ ಕುಂಕುಮ  ಪುರನೃಸಿಂಗನಾ  ಪರಮಸಖ ನೀನೂ
ಹಿರಿಯ ಬಳ್ಳಾ  ಪುರ ಸೋಮೇಶಾ  ಪೊರೆಯೋ ಯನ್ನನೂ        ॥3 ॥

ಗಣಸ್ತುತಿದರುವುಜಂಪೆ

ಶ್ರೀ ಪಾರ್ವತಿ ವರಸುತನೇ  ಪಾಪ ಪರಿಹಾರಕನೇ
ಕಾಪಾಡೆನ್ನನು ದಯದೀ  ಭೂಪ ಗಣನಾಥ ಗುಣಭರಿತಾ            ॥1 ॥

ಎರಗುವೆನು ತವ ದಿವ್ಯ  ಚರಣ ಕಮಲಕೆ ಭವ್ಯ
ವರಗಳನು ಇತ್ತೆನಗೇ  ಪೊರೆಯೋ ಹೇ ಗಣಪಾ, ಹೇ ಗಣಪಾ     ॥2 ॥

ಧರಣಿ ಕುಂಕುಮ ಪುರದ  ವರ ಲಕ್ಷ್ಮೀರಮಣನಾ
ಪರಮ ಪೌತ್ರನೇ ಸಲಹೋ  ಕರಿಮುಖ ವಿಘ್ನೇಶಾ ಸರ್ವೇಶಾ     ॥3 ॥

ಭಾಗವತರು: ಸರ್ವಪಾಪ ಪರಿಹಾರಕನಾಗಿ, ಮೋಕ್ಷ ಸ್ವರೂಪನಾಗಿ, ನಿರ್ವಿಘ್ನದಾಯಕನಾಗಿ ಮೆರೆಯುವ ಕುಂಕುಮಪುರ ಶ್ರೀ ಲಕ್ಷ್ಮೀನರಕೇಸರಿಯ ಪೌತ್ರನಾದ ಹೇ ಗಜವದನಾ, ಭುಜಗ ಭೂಷಣ, ಅಜಸುರ ವಂದಿತ ತ್ರಿಜಗ ಜನ ಪೂಜಿತ  ನಿಮ್ಮ ಅಡಿ ಸರೋಜಗಳಾ ಭಜಿಸಿ ನಮಿಸುವೆನು, ನಿಜಮತಿ ಯನಗಿತ್ತು ಈಗ ಅಭಿನಯಿಸುವ ಸುಭದ್ರಾಪರಿಣಯವೆಂಬ ಈ ಯಕ್ಷಗಾನ ನಾಟಕಕ್ಕೆ ಯಾವ ವಿಘ್ನವೂ ಬಾರದಂತೆ ನಿರ್ವಿಘ್ನವನ್ನು ದಯಪಾಲಿಸಿ ತಾವು ಹಿಮಗಿರಿಗೆ ತೆರಳಬಹುದು ಸ್ವಾಮಿ ವಿನಾಯಕನೇ – ಮಂಗಳದಾಯಕನೇ॥

ಶಾರದಾ ಸ್ತುತಿದರುವು

ಸರಸವಾಣಿ  ವರಕಲ್ಯಾಣಿ  ಹರುಷಧಾರಿಣೀ
ಉರಗವೇಣಿ  ಕರುಣಿಸೆನ್ನಾ  ಕೀರ ರಾಗಿಣೀ                             ॥1 ॥

ಜಾತ ರೂಪ  ಕುಂಭಸುಕುಚ  ನೀತಿ ಸುಲಲಿತೆ
ಜಾತಿ ಮಲ್ಲೀ  ಕಾದಿ ಕುಸುಮ  ಹಾರ ಶೋಭಿತೇ                       ॥2 ॥

ಧರಣಿಗಧಿಕಾ  ಕುಂಕುಮಪುರ  ವರನೃಸಿಂಗನಾ
ಕರುಣಾಭರಿತೆ, ಶಾರದಾಂಬೆ  ಪೊರೆಯೆ ಅನುದಿನಾ ॥ಸರಸವಾಣೀ ॥3 ॥

ಪೀಠಿಕೆ: ಅಯ್ಯ ಫಣಿಹಾರ! ಸಮಸ್ತ ಗುಣವಿಚಾರ ಪೇಳುವೆನು ಕೇಳೋ ಧೀರಾ! ಶ್ರೀಮನ್ ಧರಾವಲಯದೋಳ್ ಕಮಲಜ ಭವಸಖ, ಘೃಣೋ ಪರಿಣಯ ಸಲ್ಲಲಿತ ಲಕ್ಷ್ಮೀ ವಕ್ಷಸ್ಥಳ. ಪಕ್ಷಿರಾಜಗಮನ ನಿಕ್ಷೇಪವೆನಿಸುವ ಸುರವರ ಕರ ಪೂಜಿತನೆನಿಸಿ ದುರುಳ ಹಿರಣ್ಯಾಕ್ಷ ಹಿರಣ್ಯ ಕಶ್ಯಪರೇ. ಮೊದಲಾದ ಅಸುರರ ಅಸುಗಳನ್ನು ಅಂತಕನ ವಶವರ್ತಿಯಂ ಮಾಡಿದ ವಸುದೇವಾತ್ಮಜನಾದ ಮದುಸೂಧನನ ಹೃದಯ ಕಮಲದೋಳ್ ಉದ್ಭವಿಸಿ ಪದುಮಾಸನವಂ ಪಡೆದಿರುವ ಪರಮೇಷ್ಠಿಗೆ ಅರ್ಧಾಂಗಿಯೆನಿಸಿ ಈ ಧರೆಯೋಳ್ ಸಕಲ ವಿದ್ಯಾಕರ್ತಳಾದ ಶಾರದಾ ದೇವಿಯೆಂದು ತಿಳಿಯಪ್ಪಾ ಸಾರಥೀ॥

ಅಯ್ಯ ಸಾರಥೀ, ಸಾರಸುಗುಣ ಪಾರವರ ಫಲಶಿತರಾದ ಭಕ್ತರಂ ಪೊರೆಯಲ್ಕೆ ಸಾರಿಬಂದಿರುವೆನಲ್ಲದೇ ಈ ಧಾರುಣಿಯ ಮಧ್ಯದೋಳ್ ವಿರಾಜಿಸುವ ಚಾರುತರ ಶೃಂಗಾರ, ಭರಿತಮಾದ ಕುಂಕುಮನ ಪುರಿನಿಲಯ. ನಾರಸಿಂಹ ಮೂರ್ತಿಯ ಕೃಪಾಭರಿತರಾದ ಮದ್ಭಕ್ತ ಹುಚ್ಚೀರಾರ‌್ಯನು ಸದ್ಭಕ್ತಿ ಪೂರ್ವಕದಿಂ ನಡೆಸುವ ಈ ಸುಭದ್ರಾ ಪರಿಣಯವೆಂಬ ಕಥಾ ನಾಟಕಕ್ಕೆ ಸರ್ವವಿಘ್ನೋಪಶಾಂತಿಯಾಗಲೆಂದು ಮಂಗಲ ವ್ಯಾಪ್ತಿಯಂ ಮಾಡಲು ಆಗಮಿಸಿದ್ದಾಯಿತು. ಮುಂದೆ ಈ ಕಥೆಯು ನಿರ್ವಿಘ್ನವಾಗಿ ನಡೆಯಲೆಂದು ಆಶೀರ್ವದಿಸಿರುತ್ತೇನೆ. ನಾವು ಬಂದು ಹೇರಳ ಹೊತ್ತಾಯಿತು. ಇನ್ನು ವಿರಂಚಿಯ ಪಟ್ಟಣಕ್ಕೆ ಹೋಗಿ ಬರುತ್ತೇನೈ ಸೂತ್ರಧಾರ! ಮುಂದೆ ನಡೆಯಲಿ ಕಥಾನುಸಾರ॥

ಕಥಾ ಸೂಚನೆದರುವುತ್ರಿವುಡೆ

ಧರಣಿಗಧಿಕವು ಹಸ್ತಿನಾಪುರ
ದರಸು ಧೃತರಾಷ್ಟ್ರನು ಪಾಂಡ್ವರು
ಧರಣಿ ಪಾಲಕರೊಳಗೆ ಶ್ರೇಷ್ಠರು ಮೆರೆಯಲತಿಶಯದಿ                ॥1 ॥

ಕ್ಷೋಣಿಪತಿ ಧೃತರಾಷ್ಟ್ರ ಭೂಪಗೆ
ಸೂನುಗಳು ನೂರೋರ್ವರಿರುತಿರೆ
ಜನಪ ಪಾಂಡು ಕುಮಾರರೈವರು ಮಾಣ ದೊಪ್ಪಿರಲೂ              ॥2 ॥

ಕಡುಪರಾಕ್ರಮಿ ಕೌರವೇಶ್ವರಾ
ಪೊಡವಿ ಹಸಿಗೆಯ ಪಾಂಡು ಸುತರಿಗೇ
ಕೊಡಲು ಮನ ವಡಂಬಡದೆ ಘರ್ಜಿಸಿ ನುಡಿದ ತಾನಾಗ             ॥3 ॥

ಮತ್ತೆ ಕುರು ಪಾಂಡವರಿಗೆ ಮತ್ಸರ
ಬಿತ್ತಿ ಬೆಳೆಯುತಲಿರ್ದುದನುದಿನಾ
ಚಿತ್ತದಲಿ ದಾಯಾದ್ಯ ಪಾಲಿನ ಕೃತ್ಯದಿಂದಾ                             ॥4 ॥

ಇಂದ್ರಪ್ರಸ್ತದಿ ಪಾಂಡು ತನಯರು
ಇಂದುಮುಖಿ ದ್ರೌಪದಿಯು ಸಹಿತಲಿ
ಇಂದಿರೇಶನ ಪೊಗಳುತಿರ್ದರು ಚಂದದಿಂದಾ                          ॥5 ॥

ಪೊಡವಿ ಕುಂಕುಮ ಪುರನೃಸಿಂಗನಾ
ಅಡಿಸರೋಜವ ಭಜಿಸುತಿರ್ದರು
ಧೃಡವಿವೇಕಿಗಳಾದ ಪಾಂಡವರು, ಸಡಗರದೊಳಾಗ                ॥6 ॥

ತೆರೆದರುವುಧರ್ಮರಾಯರು ಬರುವಿಕೆ

ದಂಡಧರ ಕುಮಾರ ಬಂದನೂ
ಸೌರಂಭದಿಂದಾ
ಮಂಡಲಾಧಿಪ ಧರ್ಮಪುತ್ರನೂ                                            ॥1 ॥

ಶಿರದಿ ಮಣಿ ಕಿರೀಟವೊಪ್ಪಿರೇ
ಕರಯುಗಳದಲ್ಲೀ
ವರ ಧನುಗಳು ರಾಜಿಸುತಲಿರೇ                                            ॥2 ॥

ಧರಣಿ ಶ್ರೀ ಕುಂಕುಮ ಪುರವನೂ
ಪಾಲಿಸುವ ಹರಿಯ
ಪರಮಭಕ್ತ ಬಂದು ನಿಂತನೂ                                               ॥3 ॥

ಪೀಠಿಕೆ: ಯಲೈ, ಚಾರಕುಲ ಶಿಖಾಮಣಿಯೇ! ಈ ಕ್ಷಿತಿಯೋಳ್ ಶ್ರೇಷ್ಠರೆಂದೆನಿಸಿ ಖ್ಯಾತಿ ಹೊಂದಿರುವ ಹಿಮಾಂಶು ವಂಶೋದ್ಭವನಾದ ಶಂತನು ಚಕ್ರವರ್ತಿಯೆಂಬ ಭೂಕಾಂತನನ್ವಯದಿ ಅಂತರವಿಲ್ಲದುದಿಸಿ ಧಾತ್ರಿಯೋಳ್ ದಿನಕರ ಶತಕೋಟಿ ಪ್ರಭಾಸಮಾನನಾದ ಮನ್ಮಥ ಪಿತನ ಪದವನಜವನ್ನು ಅನುದಿನವೂ ಮನದೊಳು ಸ್ಮರಿಸುವ ಜನಪಾಲ ಪಾಂಡು ಮಹಾರಾಯನ ಧರ್ಮಪತ್ನಿ ಪಲ್ಲವಾಧರಿ ಕುಂತೀದೇವಿಯ ಗರ್ಭದೋಳ್ ಸಂಜೆನಿಸಿ ಸಂತಸ ಸಮರ ಧೀರ ರಿಪುಕುಲ ಕೃತಾಂತ ಜಯ ಧೈರ‌್ಯ ಶೌರ‌್ಯವಂತನಾದ ಧರ್ಮ ಭೂಪಾಲನೆಂದು ತಿಳಿಯೋ ಸಾರಥೀ-ಸಂಧಾನಮತೀ

ಈ ವರ ಸಭಾಸ್ಥಾನಕ್ಕೆ ಬಂದ ಕಾರಣವೇನೆಂದರೆ ಯನ್ನ ಅನುಜರಾದ ಭೀಮಸೇನ, ಅರ್ಜುನ, ನಕುಲ, ಸಹದೇವರಲ್ಲಿ ಪ್ರಾಸಂಗಿಸಬೇಕಾದ ಕಾರ‌್ಯವಿರುವುದಾದ ಕಾರಣ ಅತಿ ಜಾಗ್ರತೆ ಕರೆಸೋ ದೂತ-ಕೇಳೆನ್ನ ಮಾತ॥

 

ಭೀಮಸೇನ ಬರುವಿಕೆ

ತೆರೆದರುವುತ್ರಿವುಡೆ

ಅಂದು ಧರ್ಮಜ ಕರೆಸಲಾಕ್ಷಣಾ
ಬಂದನಾ ಪವಮಾನ ತನಯನು
ಇಂದಿರೇಶನ ಮನದಿ ಪೊಗಳುತಾ ನಂದದಿಂದಾ                      ॥1 ॥

ಸರಸಿಜಾಪ್ತ ಕುಮಾರ ತನಯನು
ಕರೆ ಕಳುಹಿದ ಕಾರ‌್ಯ ವಿತತಿಯು
ಸರಸದೊಳು ಬೆಸಗೊಂಬೆ ನೆನುತಲೀ ಭರದಿ ಪವನಜನೂ         ॥2 ॥

ಪೊಡವಿಗತಿಶಯ ಕುಂಕುಮನಪುರ
ದೊಡೆಯ ಶ್ರೀ ನರಸಿಂಹ ಮೂರ್ತಿಯ
ಸಡಗರದಿ ಧ್ಯಾನಿಸುತ ಬಂದನು ಕಡು ಪರಾಕ್ರಮಿಯೂ               ॥3 ॥

ಭೀಮಸೇನ: ಭಲಾ ಪಟುಭಟ ರಿಪು ಕಟಕ, ನಿಟಿಲಾಂಬಕನ ತಟಘಟಿಸುವ ಚಟುವಾರಣ ಸ್ಪುಟಕೋಟಿ ಬಿಂಬೋಜ್ವಲ ಸೌರಭನಾದೆನ್ನ ಗಂಭೀರ ವಚನದಿಂ ವಿಚಾರಿಸುವ ಭಟ ನೀ ಧಾರೋ ಯನ್ನೊಳು ಸಾರೋ॥

ಭಲೈ ಸಾರಥೀ ಧುರದೊಳರಿಗಳ ಶಿರವ ಬರ ಸೆಳೆವ ಪರಮ ಸಾಹಸ ಕರುಣಾವನಿಧಿ ಹೃತ್ಪದ್ಮದೋಳ್ ಮನ್ಮಥಪಿತ ಚಿನ್ಮಯ ಗುಣಸಾಂದ್ರ ಸನ್ನುತಾಂಗ, ಪನ್ನಗಾರಿಧ್ವಜ ಭಜನೋಲ್ಲಾಸ ಶುಭ್ರಾಂಶು ವಂಶದೋಳ್ ಅಭ್ರಮಣನಂತೆ ವಿಭ್ರಾಜಿಸುವ ಭಲಾ ಸಾರಥೀ. ಅತಿಹಿತದೋಳ್ ವಿಚಿತ್ರ ವೀರ‌್ಯ ಸುಪುತ್ರ ಕ್ಷಿತಿಪತಿ ಪಾಂಡುರಾಯನ ಸತಿ ಶಿರೋಮಣಿ ದಂತಿಗಮನೆಯಾದ ಕುಂತೀದೇವಿಯ ಹೃದಯ ಕಂಜದೋಳ್ ಉದ್ಭವಿಸಿ ರಿಪು ಭಯಂಕರನಾದ ಧನಂಜಯಾಗ್ರಜ ಧರ್ಮಭೂಪಾಲನನುಜ, ಶಕ್ತಿ ಯುಕ್ತನಾದ ಭೀಮಾ, ವರ ಗದಾಧಾಮ ಮಹಾಪರಾಕ್ರಮ ಜಯ ಧೈರ‌್ಯ ಶೌರ‌್ಯವಂತನೆಂದು ಕಿತಾಬ್ ಮಾಡಿಸೋ ಸಾರಥೀ-ಚಮತ್ಕಾರಮತೀ॥

ಅಂದವಾದ ಈ ವರಸಭೆಗೆ ನಾ ಬಂದ ಕಾರಣವೇನೆಂದರೇ ದಂಡಧರಸುತನಾದ ಧರ್ಮಜ ನಡಿದಾವರೆಗಳಿಗೆ ವಂದಿಸುವ ಪ್ರಯುಕ್ತ ಬಾಹೋಣವಾಯ್ತು, ಧಾವಲ್ಲಿರುವರೋ ತೋರಿಸೋ ಚಾರ-ಯನ್ನ ಆಜ್ಞಾಧಾರ॥

ನಮೋನ್ನಮೋ ಅಣ್ಣಾ ಧರ್ಮನಂದನ॥

ಧರ್ಮರಾಯ: ಧೀರ್ಘಾಯುವಾಗಲೈ ವ್ಯಕೋದರಾ ವಾಯು ಕುಮಾರ॥

ಭೀಮ: ಯನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನು ಪೇಳಬೇಕೈ ಅಗ್ರಜ ಆಶ್ರಿತ ಕಲ್ಪಭೋಜ॥

ಧರ್ಮರಾಯ: ಪೇಳುತ್ತೇನೆ! ಈ ರತ್ನ ಸಿಂಹಾಸನವನ್ನಲಂಕರಿಸೈ ಸಹೋದರಾ ಶತೃಜನ
ಭಯಂಕರಾ॥

 

ಅರ್ಜುನ ಬರುವಿಕೆ

ತೆರೆದರುವುಜಂಪೆ

ಬಂದಾನು ಕಲಿಪಾರ್ಥ ಮಂದಹಾಸದೊಳಾಗ
ಚಂದದಿಂ ಅಗ್ರಜನ ಬಳಿಗೆ ತಾನಾಗ ತಾನಾಗ                         ॥1 ॥

ಕರದೊಳಗೆ ವರಧನುವಾ ಶರಗಳನು ಪಿಡಿದಾಗ
ಪುರುಹೂತ ಸಂಭವನು ಹರುಷಾದಿಂ ಬಂದಾ ತಾ ಬಂದಾ          ॥2 ॥

ಪೊಡವಿ ಕುಂಕುಮನಗರ ದೊಡೆಯಾ ನೃಸಿಂಗನಾ
ಬಿಡದೆ ಭಜಿಸುತ ಮನದಿ ನಡೆತಂದಾ ಪಾರ್ಥ ಕಲಿಪಾರ್ಥ          ॥3 ॥

ಅರ್ಜುನ: ಎಲೈ ಚಾರಕಾ ಯಮ್ಮಯ ದೃಷ್ಠಿಗೆ ನಿಷ್ಠೆಯಿಂ ಸುಳಿದು ವಚನಿಸುವ ಮಾನುಷ್ಯ ನೀ ಧಾರೋ! ಯನ್ನೊಳು ಸಾರೋ॥

ಅಯ್ಯ ಸಾರಥೀ, ಅದ್ರಿಜಾಪತಿ ವಿನುತ ಕ್ಷುದ್ರರ ಛಿದ್ರಗೈವ ಭದ್ರಾಸನದೋಳ್ ಪ್ರಕಾಶಿಸುವ ಭದ್ರದಾಯಕನಾದ ಶೌರಿಯ ನಾಭಿಕಮಲದೊಳು ಜನಿಸಿ ಅಪ್ರತಿಮ ಸುಪ್ರಬಲನಾಗಿ ಮೆರೆಯುವ ಕಮಲಾಸನ ನುತ ಅಮರಗಣವಿನುತ, ಸುಮನಸರೊಡೆಯನಾದ ಪುರುಹೂತ ಸಂಭವನೆನಿಸಿ ಭಲಾ ಸಾರಥೀ. ಈ ತ್ರಿಭುವನದೋಳ್ ಶ್ರೇಷ್ಠಮಾದ ಪ್ರಬಲಾಂಕಿತ ವಿಗ್ರಹದಿ ಉಗ್ರಾಂಬಕನ ನಿಗ್ರಹಿಪ ಆಗ್ರಹವುಳ್ಳ ಪರಾಕ್ರಮಿಗಳಲ್ಲಿ ಅಗ್ರೇಸರನಾಗಿ ದುಡುಕು ವೈರಿಗಳ ಎಡತಲೆಯ ಮೃತ್ಯುವೆನಿಸಿ ಬಿಡದೆ ಘುಡಿಘುಡಿಸಿ ಪೊಡವಿಯೋಳ್ ಕಡುಶ್ರೇಷ್ಠರೆನಿಸಿ ಉಡುರಾಢ್ವಂಶದೋಳ್ ಸಡಗರದಿಂ ಜನಿಸಿ, ಅಡಿಗಡಿಗೆ ಮುದವಂ ಪಡೆದು ಸದಮಲಗುಣ ಭರಿತನಾಗಿ ವಿಧವಿಧ ಪದವಿಯನ್ನನುಭವಿಸಿದ ಶಂತನು ಚಕ್ರವರ್ತಿಯೆಂಬ ಭೂಕಾಂತನ ವರಪೌತ್ರ ಪಾಂಡು ಮಹಾರಾಯನ ಪತ್ನಿ ಪಲ್ಲವಾಧರಿ ಕುಂತೀದೇವಿಯ ಗರ್ಭದೋಳ್ ಅಂತರವಿಲ್ಲದುದಿಸಿ ದಂತಿವಾಹನಗೆ ವರಪುತ್ರನೆನಿಸಿ ಕಂತುಪಿತನಾದ ಶ್ರೀಕಾಂತನನ್ನು ಅಂತರಂಗದೋಳ್ ನುತಿಸುತ್ತಿರುವ ಸಂತಸ ಸಮರ ಧೀಮಂತ ರಿಪುಕುಲಕೃತಾಂತನಾದ ಪಾರ್ಥ ತ್ರಿಲೋಕ ಸಮರ್ಥನೆಂದು ತಿಳಿಯೋ ಸಾರಥೀ ಸಂಧಾನಮತೀ

ಭಲೈ ಸಾರಥೀ! ಹಿಮಾಂಶು ಕುಲ ಪವಿತ್ರ ಭೂ ಭುಜೋತ್ತಮ. ಸುಚರಿತ್ರ ಯನ್ನಯ ಅಗ್ರಜ ಯುಧಿಷ್ಠಿರನ ಚರಣ ಸರಸಿಜವ ಕಾಣಬೇಕಾಗಿರುವ ಪ್ರಯುಕ್ತ ಆಗಮಿಸಿದ್ದಾಯಿತು. ಅತಿಜಾಗ್ರತೆ ಅಗ್ರಜನು ಧಾವಲ್ಲಿರುವನೋ ತೋರಿಸೋ ಸಾರಥೀ-ಅವನೀಂದ್ರ ಸಚಿವಾಂಬುಧೀ॥ನಮೋ ನಮೋ ಅಣ್ಣಾ ಅಮಿತಗುಣ ರನ್ನ॥

ಧರ್ಮರಾಯ: ಧೀರ್ಘಾಯುಷ್ಯಮಸ್ತು ಬಾರಪ್ಪಾ ವಿಜಯಾ ಧನಂಜಯಾ॥

ಅರ್ಜುನ: ಯನ್ನನ್ನು ಅತಿ ತವಕದಿಂ ಕರೆಸಿದ ಪರಿಯಾಯವೇನೋ ಪೇಳಬೇಕೈ ಅಗ್ರಜಾ ಚಂದ್ರವಂಶಜ॥

ಧರ್ಮರಾಯ: ಪೇಳುತ್ತೇನೆ ಈ ಪೀಠವನ್ನು ಅಲಂಕರಿಸೈ ಅನುಜಾ ವಾಸವಾತ್ಮಜಾ॥

 

ನಕುಲ ಸಹದೇವರು ಬರುವಿಕೆ

ನಕುಲ ಸಹದೇವರು: ಅಯ್ಯ, ಸಾರಥೀ! ಯಮ್ಮಯ ದೃಷ್ಠಿಗೆ ನಿಷ್ಠೆಯಿಂ ಸುಳಿದು ವಚನಿಸುವ ಮಾನುಷ್ಯ ನೀ ಧಾರು? ಸಾಂಗವಾಗಿ ಪೇಳೈಯ್ಯ ಸಾರಥೀ॥ಅಯ್ಯ ಸಾರಥೀ. ಯಮ್ಮ ನಾಮಾಂಕಿತವನ್ನು ಅನುವರಿತು ಬಿತ್ತರಿಸುತ್ತೇವೆ ಅಂದದಿಂ ಕೇಳೈಯ್ಯ ಸಾರಥೀ ಸಂಧಾನಮತೀ!

ಈ ನವಖಂಡ ಪೃಥ್ವಿಯೋಳ್ ಸೀಮಂತ ಮಣಿಯೆಂದೆನಿಪ ಸುರಪುರಕ್ಕೆ ಮಿಗಿಲಾಗಿ ಒಪ್ಪುವ ಕರಿಪುರಕ್ಕೆ ಕರ್ತರೆಂದೆನಿಸಿ ಮೆರೆಯುವ ಪಾಂಡು ಮಹಾರಾಯನ ದ್ವಿತೀಯ ಭಾರ‌್ಯಾಮಣಿಯಾದ ಮಾದ್ರಿದೇವಿಯವರ ಉದರಾಬ್ಧಿಯೋಳ್ ದೂರ್ವಾಸಮುನೀಂದ್ರರ ಮಹಾಪ್ರಭಾವದಿಂ ಅಶ್ವಿನೀ ದೇವತೆಯರ ವರಪ್ರಸಾದದಿಂ ಶಶಿರವಿಗಳಂತೆ ಅವಳಿಸುತರಾಗಿ ಜನಿಸಿದ ನಕುಲ ಸಹದೇವರೆಂಬ ನಾಮಾಂಕಿತವೆಮಗೆ ಒಪ್ಪುವುದೈ ಸಾರಥೀ॥

ಈ ವರ ಸಭಾಸ್ಥಾನಕ್ಕೆ ಆಗಮಿಸಿದ ಕಾರಣವೇನೆಂದರೆ ಯಮ್ಮ ಅಗ್ರಜರಾದ ಧರ್ಮ ಭೂಪಾಲರ ಚರಣಾರವಿಂದ ದರುಶನಾರ್ಥ ಬಾಹೋಣವಾಯ್ತು, ಧಾವಲ್ಲಿರುವರೋ ತೋರಿಸೋ ಚಾರಯನ್ನ ಆಜ್ಞಾಧಾರ॥

ನಮೋನ್ನಮೋ ಅಗ್ರಜ ತರಣಿ ಸಂಭವಾತ್ಮಜ॥

ಧರ್ಮರಾಯ: ಧೀರ್ಘಾಯುಷ್ಯಮಸ್ತು ಬನ್ನಿರಪ್ಪಾ ಸಹೋದರರೇ ಅಶ್ವಿನೀ ಸಂಭೂತರೇ॥

ನಕುಲ ಸಹದೇವರು: ಯಮ್ಮನ್ನಿಷ್ಠು ಜಾಗ್ರತೆಯಿಂದ ಕರೆಸಿದ ಕಾರಣವೇನು? ಪೇಳಬೇಕೈ ಅಣ್ಣಾ ಕರುಣ ಸಂಪನ್ನ!

ಧರ್ಮರಾಯ: ಹೇ ಭೀಮಸೇನ, ಅರ್ಜುನ, ನಕುಲ ಸಹದೇವರಿರಾ! ಸುರಮುನಿಗಳಾದ ನಾರದರು ಯಮ್ಮ ಆಸ್ಥಾನಕ್ಕೆ ಬಿಜಯಂಗೈಯುತ್ತಿರುವರು. ಅವರನ್ನು ಮರ‌್ಯಾದೆಯಿಂದ ಎದಿರುಗೊಂಡು ಸತ್ಕರಿಸುವ ಬನ್ನಿರೈಯ್ಯಿ ಸಹೋದರರೇ ಅರಿಕುಲ ಭಯಂಕರರೇ॥

 

ನಾರದರು ಬರುವಿಕೆ

ತೆರೆದರುವುಜಂಪೆ

ಬಂದನೂ ನಾರದ ಮು ನೀಂದ್ರ ವರ ತಾನಾಗ
ಇಂದಿರಾಪತಿಯನ್ನು ಚಂದದಿ ಸ್ಮರಿಸೀ ತಾ ಭಜಿಸಿ                    ॥1 ॥

ಕರದೊಳಗೆ ಜಪಸರವ ಹರುಷದಿಂದಲಿ ಪಿಡಿದೂ
ಹರಿಯ ಮನದೊಳು ನೆನೆದು ಭರದಿ ಮುಂಬರಿದೂ ಮುಂಬರಿದೂ ॥2 ॥

ನಾರದ: ಎಲೈ! ಮರ್ತ್ಯನೇ ಅಘಹರನ ಪಾದ ಸೇವಕ ಸುಗುಣಾಂಬುಧಿ ದೇವೇಂದ್ರನ ಆಸ್ಥಾನಕ್ಕಿಂತ ಅತಿಶಯವಾದ ಈ ಸಭಾ ಮಧ್ಯದೋಳ್ ಭಾಸುರಮಾನನಾದ ಶ್ರೀಶಾ ಯೆಂದು ಬಂದ ಯತೀಶನ ಮತಿಯೊಳು ಅತಿಶಯದಿ ಧಾರೆಂದು ಹಿತವಚನದಿಂ ಮಾತನಾಡಿಸುವ ನೀ ಧಾರು? ಜಾಗ್ರತೆಯಿಂದ ಪೇಳೈ ಮಾನವಾ-ಇಲ್ಲವಾಯಿತೇ ಹಿಡಿ ಶಾಪವಾ॥ಅಯ್ಯ ಸಾರಥೀ. ಯಮ್ಮ ವೃತ್ತಾಂತವನ್ನು ಬಿತ್ತರಿಸುತ್ತೇನೆ. ಚಿತ್ತ ಚಂಚಲವಿಲ್ಲದೇ ಕೇಳೋ ಸಾರಥೀ ಸಂಧಾನಮತೀ ಎಲೈ ಸಾರಥೀ! ಕ್ಷೀರವಾರುಧಿಯೊಳು ಚಾರು ಹರುಷದಿ ಶಯನಿಸುವ ವಾರಿಜಾಕ್ಷನ ಸುತ ನೀರಜಾಸನನೆಂದೆಂಬ ನಾಮವಂ ಪಡೆದು ಬಾರಿ ಬಾರಿಗೂ ಲೋಕದ ಸಚರಾಚರ ಪ್ರಾಣಿಜಾಲಂಗಳಂ ನಿರ‌್ಮಿಸುತ್ತಾ ಮಾರಾಗ್ರಜ ಅಂಬುಜಭವ ಮಾನಸಪುತ್ರನಾಗಿ ಮೂರು ಲೋಕಂಗಳಂ ಸಂಚಾರಗೈಯುವ ನಾರದ ಮಹಾ ಮುನಿಯೆಂದು ತಿಳಿಯೋ ಚಾರಕಾ-ಆಜ್ಞಾಧಾರಕಾ॥

ಈ ರಮಣೀಯವಾದ ಸಭೆಗೆ ಸುಮನೋ ಹರುಷದಿಂದ ಆಗಮಿಸಿದ ಕಾರಣವೇನೆಂದರೆ ದ್ಯುಮಣಿಸುತ ಸೂನುವೆನಿಪ ಧರ್ಮಜನ ಕಾಣಬೇಕಾಗಿರುವ ಪ್ರಯುಕ್ತ ಬಾಹೋಣವಾಯ್ತು. ಅಮರಗುರುವಾದ ನಾರದರು ಆಗಮಿಸಿಹರೆಂದು ಯಮಸುತಗೆ ಅರುಹಿ ಬಾರೋ ಸೂತ-ಕೇಳೆನ್ನ ಮಾತ॥

ಪದ
ದಶರಥನ ಸುತರಾದ ಮುನಿವರ‌್ಯನೇ ತವಪಾದ
ವನಜವನು ನುತಿಸುವೆನು
ಚಿನುಮಯಾರೂಪನೇ ಸನುಮತದಿಂದಾ                               ॥1 ॥

ಸುರ ನರರ ವಂದಿತನೇ ಪರಮಾಗುರುವೇ ನಿಮ್ಮ
ಚರಣಾ ದರುಶನದಿಂದ
ಹರುಷ ಹೊಂದಿಹೆನೂ                                                        ॥2 ॥

ಪೊಡವೀ ಕುಂಕುಮಪುರದ
ಒಡೆಯನಂಘ್ರಿಗಳನ್ನು ಬಿಡದೇ ಭಜಿಸುತ್ತಿರುವೇ
ಧೃಡಮೌನಿ ವರನೇ                                                           ॥3 ॥

ಧರ್ಮರಾಯ: ನಮೋನ್ನಮೋ ನಾರದ ಮುನಿವರಾ ಪರಮ ಗುರುವರಾ॥

ನಾರದ: ಚಿರಾಯುವಾಗಿ ಪುತ್ರ ಪೌತ್ರಾಭಿವೃದ್ಧಿಯಾಗಿ ಸರ್ವಕಾಲವು ಧಾತ್ರಿಯನ್ನು ಪರಿಪಾಲಿಸುತ್ತಾ ಸಂತೋಷದಿಂ ಬಾಳೈಯ್ಯ ಧರ್ಮಜಾ ಯಮ ತನುಜ॥

ಧರ್ಮರಾಯ: ಸ್ವಾಮಿ! ನಾರದ ಮಹಾಋಷಿಗಳೇ! ತಮ್ಮ ಚರಣ ಸಂದರುಶನದಿಂದ ಇಂದಿಗೆ ನಾಂ ಧನ್ಯನಾದೆನು. ಕುಂದದೆ ಯಮ್ಮ ವಂಶ ಪವಿತ್ರವಾಯಿತು. ಇಂದು ಇಲ್ಲಿಗೆ ತಾವು ಚಿತ್ತೈಸಿದ ಸಂದರ್ಭವೇನು? ಮಂದಹಾಸದಿಂದ ಅಪ್ಪಣೆ ಕೊಡಿಸಬೇಕೈ ಸ್ವಾಮಿ ಸುಜನಪ್ರೇಮಿ॥

ನಾರದ: ಅಯ್ಯ ಧರ್ಮಪುತ್ರನೇ ಲಾಲಿಸು! ವಿಪ್ರಾಣಾಂ ಜ್ಞಾನತೋ ಜ್ಯೇಷ್ಠಃ ಕ್ಷತ್ರಿಯಾಣಾಂತು ವೀರ‌್ಯತಃ ವೈಶ್ಯಾನಾಂ ಧನ ಧಾನ್ಯತಃ ಶೂದ್ರಾಣಾಂ ಮೇವ ಜನ್ಮತಃ ಎಂಬ ಶೃತಿ ವಚನದಂತೆ ಅಯ್ಯ ಧರ್ಮಪುತ್ರಾ! ಬ್ರಾಹ್ಮಣರಲ್ಲಿ ಜ್ಞಾನಿಯೇ ದೊಡ್ಡವನು, ಕ್ಷತ್ರಿಯರಲ್ಲಿ ಪರಾಕ್ರಮಶಾಲಿಯೇ ದೊಡ್ಡವನು, ವೈಶ್ಯರಲ್ಲಿ ಸಂಪತ್ತುಳ್ಳವನೇ ದೊಡ್ಡವನು. ಶೂದ್ರರಲ್ಲಿ ವಯಸ್ಸು ಅಧಿಕನಾದವನೇ ದೊಡ್ಡವನು. ಆದಕಾರಣ ಅನೇಕ ಸಂಪತ್ತುಗಳಿಂದಲೂ ಪರಾಕ್ರಮದಿಂದಲೂ ಸತ್ಯಮಾರ್ಗದಿಂದಲೂ ಪರಿಶೋಭಿಸುತ್ತಿರುವ ವಸುಧೀಶನೇ, ನಿಮ್ಮಲ್ಲಿ ಒಂದು ಆಶ್ಚರ‌್ಯಕರವಾದ ವಿದ್ಯಮಾನವು ನಡೆಯುತ್ತಿರುವುದು ಏನೆಂದರೆ ನೀವು ಐವರೂ ಓರ್ವ ಸತಿಯಲ್ಲಿ ಗಮನಿಸುತ್ತಿರುವುದರಿಂದ ಸಮಯಾನುಸಾರ ಅಪಾಯ ಸಂಭವಿಸದೇ ಬಿಡದು. ಏನಯ್ಯ, ಧರ್ಮಜಾ! ಪೂರ್ವದಲ್ಲಿ ಸುಂದೋಪಸುಂದರೆನಿಪ ಖಳರು ಪುರಂದರನ ಸಭೆಗೆ ತೆರಳಿ ಅಪ್ಸರ ಸ್ತ್ರೀಯರ ರೂಪು ಲಾವಣ್ಯ ಶೀಲ ಸ್ವಭಾವಗಳ ನೋಡಿ ಪರಿಮೋಹಿಸಿ ಇಂದ್ರನಂ ಕುರಿತು ಈ ಚಂದ್ರವದನೆಯರನ್ನು ನಮ್ಮ ಸ್ವಾಧೀನ ಮಾಡುವೆಯೋ ಇಲ್ಲವೇ ಸುರಪುರವ ನಾಶ ಮಾಡೋಣವೋ ಎಂದು ಘರ್ಜಿಸಿ ನುಡಿದದ್ದಕ್ಕೆ ವರ್ಜಿಯು ಜರ್ಜರಿತನಾಗಿ ಸ್ತ್ರೀಯರೊಡ ಗೊಂಡು ತೆರಳಿ ತ್ರಿಪುರಾರಿಯಂ ಮರೆಹೋಗಲು ಮದನಾರಿಯು ರಕ್ಷಿಸುವುದಕ್ಕಾಗಿ ಕೈಲಾಸ ದ್ವಾರದಲ್ಲಿ ಕಾದಿರಲು, ಕ್ರೂರರಾದ ಆ ರಕ್ಕಸರು ಭೋರನೆ ಬಂದು ಇಂದ್ರಾದಿಗಳಂ ಕಾಣದೆ ಚಂದ್ರಮೌಳಿಯ ವಕ್ಷಸ್ಥಳದೊಳಿರ್ಪ ಪಾರ್ವತಿ ದೇವಿಯಂ ಮೋಹಿಸಿ ನಮ್ಮ ವಶಮಾಡೆನಲೂ ಮೃಢನು ಗಢಗಢನೆ ನಡುಗಿ ಶ್ರೀ ಮಹಾವಿಷ್ಣುವಿನ ಬಳಿಗೆ ಪೋಗಲು ಮಾರಪಿತನಾದ ನಾರಾಯಣನು ವೈಕುಂಠದ್ವಾರದಲ್ಲಿ ಕಾದಿರಲು, ಈ ರಕ್ಕಸರು ಸಿರಿದೇವಿಯಂ ಮೋಹಿಸಿ ಕೇಳಲೂ. ವೈಕುಂಠ ಪುರಾಧಿಪನು ಸರ್ವರನ್ನು ಒಡಗೊಂಡು ಪರಮೇಷ್ಠಿಯ ಬಳಿಗೆ ತೆರಳಲು ಆಗಲಾ ಪಿತಾಮಹನು ಇವರನ್ನು ಕಾಪಾಡುವ ಉದ್ಧಿಶ್ಯ ಸತ್ಯಲೋಕ ದ್ವಾರದಲ್ಲಿ ಕಾದಿರಲೂ ಆ ರಾಕ್ಷಸರು ನಿನಗೆ ಸತಿಯರುಂಟೇ ಯೆಂದು ಬ್ರಹ್ಮನ ಮೂದಲಿಸಲಾಗಿ, ಸರ್ವ ಚರಾಚರ ಪ್ರಾಣಿಗಳಿಗೂ ಸತಿಯರನ್ನು ನಿರ್ಮಿಸುವೆನೆಂದು ಪೇಳಿದ್ದರಿಂದ ನಮ್ಮೀರ್ವರಿಗೂ ಓರ್ವ ಸತಿಯಳ ನಿರ್ಮಿಸಿ ಕಳುಹಿಸೆಂದು ಪೇಳಿ ಪೋದನಂತರ ಎಲೈ ಧರಣೀಶ್ವರ! ಇತ್ತಲಾಗಿ ವಿರಂಚಿಯು ಶೃಂಗಾರದಂಗನೆಯಂ ನಿರ್ಮಿಸಿ ಕಳುಹಲು, ರಾಕ್ಷಸರಾಪೇಕ್ಷೆಯಿಂ ಮೋಹಿಸಿ ನಮ್ಮ ನಮ್ಮ ವಶವಾಗಬೇಕೆಂದು ಒಬ್ಬರಿಗೊಬ್ಬರು ಹೊಡೆದಾಡಿ ಇಬ್ಬರೂ ಮೃತಿಯಂ ಹೊಂದಿದರು. ನಂತರ ತಿಲೋತ್ತಮೆಯೆಂಬ ಕನ್ಯೆಯು ಸುರಪುರವನೈದಿದಳೂ. ಆದ್ದರಿಂದ ನೀವುಗಳು ಪಾಂಚಾಲಿಯನ್ನು ಪ್ರತಿಯೊಂದು ವರುಷವು ಒಬ್ಬೊಬ್ಬರು ಅನುಭವಿಸಬೇಕು. ಸ್ತ್ರೀ ಪುರುಷರು ಶಯನಗೃಹದೋಳ್ ಇರುವ ವೇಳೆಯಲ್ಲಿ ನಿಮ್ಮವರಲ್ಲಿ ಯಾರೊಬ್ಬರರಿತರೂ, ಭೂ ಪ್ರದಕ್ಷಿಣೆ ಮಾಡಬೇಕು. ಇದು ನಮ್ಮ ಮನಸ್ಸಿಗೆ ಸಮಾಧಾನವಾಗಿರುವುದು. ನಿನ್ನ ಚಿತ್ತಾನುಸಾರ ಎಂತಿರುವುದೋ ವಿಸ್ತರಿಸೈಯ್ಯ ಧರ್ಮಜಾ ಕುಂತೀ ತನುಜ॥