ದರುವು

ವರಮುನೀಂದ್ರನೆ ಕೇಳೈಯ್ಯ ನಿಮ್ಮಯ ವಚನ
ಮೀರುವ ನಾನಲ್ಲೈಯ್ಯ ॥
ಕರುಣಿಸಿ ಪೇಳಿದ ಉರುತರ ವಾಕ್ಯವಾ
ಶಿರವಾಂತು ನಡೆವೆನೈಯ್ಯ                                                 ॥1 ॥

ಧರ್ಮರಾಯ: ಸ್ವಾಮಿ! ವರ ತಪೋಧನರಾದ ನಾರದ ಮಹಾಋಷಿಗಳೇ, ಗುರುಗಳಾದ ತಾವು ಅಪ್ಪಣೆ ಕೊಡಿಸಿದ್ದನ್ನು ಶಿರದೊಳಾಂತು ನಡೆಸುವೆನಲ್ಲದೆ ಪರಿಯೋಚಿಸಬೇಕಾದ ಪರಿಯೇನಿರುವುದೈ ಗುರುವೇ-ಹಿರಿಯರಾದ ತಮ್ಮ ಆಜ್ಞೆಯಂ ನಾನೆಂತು ಮೀರುವೆ॥

ದರುವು

ಪರಮಪಾವನ ಮೂರ್ತಿಯೇ ಯಮ್ಮೊಳುಯಿಂತು
ಕರುಣದಿ ಪೇಳಿದೆಯೇ ॥
ಹರಿಹರಾದ್ಯರೊಳೂ  ಸತತವು ಚರಿಪಂತಾ
ಗುರುವರ ನಮಿಪೆನೈಯ್ಯ                                                   ॥2 ॥

ಧರ್ಮರಾಯ: ಸ್ವಾಮಿ! ಪತಿತಪಾವನರಾದ ಯತಿವರರೇ, ಅವಧರಿಸಬೇಕು, ತಮ್ಮ ವಚನವನ್ನು ಮೀರಿದೊಡೆ ಕ್ಷಿತಿಯೊಳಗೆ ಯನಗೆ ಅಧೋಗತಿ ಫಲಿಸುವುದಾದ ಕಾರಣ ಮತಿಪೂರ್ವಕದಿಂ ನಿಮ್ಮ ಅನುಮತಿಯಂತೆ ನಡೆಸುವೆನಲ್ಲದೇ ಪ್ರತಿಕೂಲಮಾಗಿ ನಡೆಯಬೇಕೆನ್ನುವುದು ಯನ್ನ ಮತಿಯೊಳಗಿಲ್ಲವೈ ಮುನಿಪಾ ಕರುಣಕಲಾಪ॥

ದರುವು

ಧರಣಿಯೋಳಿರುತಿರುವಾ ಕುಂಕುಮ ಪುರವಾ
ಪರಿಪಾಲಿಸುತ್ತಿರುವಾ ॥
ವರ ನಾರಸಿಂಹನ  ಕರುಣ ಕಟಾಕ್ಷದಿಂ
ಮರೆಯದೆ ನಡೆವೇನೈಯ್ಯ                                                  ॥3 ॥

ಧರ್ಮರಾಯ: ಸುರುಗುರುಗಳಾದ ನಾರದ ಮಹಾಋಷಿಗಳೇ! ಧರಣಿಯ ಮಧ್ಯದೊಳೊಪ್ಪುವಾ, ಸರಸತರ ಕುಂಕುಮನ ಪುರವರಾಧಿಪ ನಾರಸಿಂಹ ಮೂರ್ತಿಯೆನಿಪ ಶ್ರೀಕೃಷ್ಣನು ಕರುಣವಿಟ್ಟು ನಮ್ಮ ಪರಿಪಾಲಿಸುವನು. ಹಿರಿಯರಾದ ತಾವು ಒರೆದ ವಚನದಂತೆ ಅರಸಿಯಳ ಪರಿಪಾಲಿಸಿಕೊಂಡು ಇರುವೆವೈ ಮುನಿಪಾ ಕರುಣಕಲಾಪ॥

ನಾರದ: ಹಾಗಾದರೆ ನಾವು ಸತ್ಯಲೋಕಕ್ಕೆ ಪೋಗಿ ಬರುತ್ತೇವೈ ಧರ್ಮಜಾ ಕುಂತೀ ತನುಜಾ ॥

ಧರ್ಮರಾಯ: ದಯ ಮಾಡಿಸಬಹುದೈ ತಾಪಸೇಂದ್ರಾ ವರಗುರುಸಾಂದ್ರ ॥

 

(ದ್ರೌಪದಾದೇವಿ ಬರುವಿಕೆ)

ದ್ವಿಪದೆಕಾಂಭೋದಿ ರಾಗ

ಶ್ರೀಕರವರ ಚಿತ್ರೇ  ಶುಭ್ರಾಂಶು ನೇತ್ರೇ
ವರಗುಣಸಾಂದ್ರ  ಪಾಂಚಾಲನ ಪುತ್ರೀ
ಸರಸಿಮೋಹನ ರಮಣೀ  ಶೈಕತ ಶ್ರೋಣಿ
ಸರಸ ಪರಿಮಳ ಜಲಕ್ರೀಡೆಯಂ ತಾನಾಡೀ
ಶಿಸ್ತಾದ ಜರತಾರಿ ಸೀರೆಯನು ತಾನುಟ್ಟೂ
ಶಿಸ್ತಿನಿಂ ಕಂಚುಕವ ತೋಳಿನಲಿ ತೊಟ್ಟೂ
ಥಳಥಳಿಪ ಡಾಬು ನಡುವಿನೊಳಗಿಟ್ಟೂ
ಶಿರದೊಳಗೆ ವರಚಂದ್ರ ಭೂಷಣವ ಧರಿಸೀ
ಮೆರೆವ ರತ್ನದ್ವಯಾಭರಣ ಪ್ರಜ್ವಲಿಪ ಮುಕುರವೂ ॥
ಝೋಕಾದ ಬುಲಾಕು, ಠೀಕಾದ ಚಂದ್ರಹಾರವೂ
ಪಾದದಲಿ ಗೆಜ್ಜೆ ಸರಪಣಿಯು ಪಾಗಡವ ಧರಿಸೀ
ಮೋದದಿಂ ಝಣ ಝಣರೆನಲು ಮೋಹನಗಾತ್ರೀ ॥
ಕಾಲು ಅಂದಿಗೆ ಕಡಗಗಳು ಘಲಿ ಘಲಿರೆನುತಿರಲೂ
ಪರಮ ಸಂತಸದಿಂದ ಪಾಂಚಾಲಿ ತಾನಾಗಾ
ಧರಣಿಯೋಳ್ ಕುಂಕುಮಪುರಿವಾಸನೆಂದೆನಿಪಾ
ವರದ ನೃಸಿಂಗನಾ ಚಾರು ಚರಣ ಕಮಲಗಳಾ
ಸ್ಮರಿಸಿ ಮನದೊಳು ಹರುಷದಿಂದಲಿ ಬಂದೂ
ತೆರೆಯೊಳಗೆ ನಿಂದಳಾ ಸರಸಿಜಾನೇತ್ರೇ ॥

ತೆರೆದರುವು

ಕಮಲಾ ನೇ  ತ್ರೆಯೆ ಯನ್ನಾ
ರಮಣಾನ  ತೋರಿಸಮ್ಮಾ
ಕಾಮನಾ ಭಾಧೆಯ ನಾನು
ನಿಮಿಷ ಸೈ  ರೀಸಲಾರೇ                                                    ॥1 ॥

ದ್ರೌಪದಿ: ಅಹೋ ಚಾರ ! ಸರಸ ಗುಣವಿಚಾರ, ಪೇಳುವೆನು ಕೇಳೋ ಧೀರಾ ॥ಅಪ್ಪಾ ಸಾರಥೀ, ಹಿಂದೆ ಇಂದ್ರನ ಹೆಂಡತಿ ಶಚಿದೇವಿ, ಯಮನ ಸತಿ ಶ್ಯಾಮಲಾದೇವಿ, ಅಶ್ವಿನೀ ದೇವತೆಗಳ ಪತ್ನಿ ಉಷಾ, ಪರಶಿವನ ಸತಿ ಪಾರ್ವತಿ ಈ ನಾಲ್ವರು ಸಹ ಬ್ರಹ್ಮದೇವನಿಂದ ನಾಲ್ಕು ಜನ್ಮಗಳಲ್ಲಿ ಒಂದೇ ಗೂಡಿನಲ್ಲಿ ಜನ್ಮಿಸುವ ಹಾಗೆ ಶಾಪಗ್ರಸ್ತರಾಗಿ ಪರಪುರುಷರ ಸಂಗವಾಗದಂತೆ ಅನುಗ್ರಹಿಸಬೇಕೆಂದು ಭಾರತಿಯನ್ನು ಕುರಿತು ಒಂದು ಸಾವಿರ ವರ್ಷ ತಪವನ್ನಾಚರಿಸಲು, ಭಾರತೀ ದೇವಿಯು ಪ್ರತ್ಯಕ್ಷಳಾಗಿ ಅವರ ಮನೋಗತವನ್ನು ಈಡೇರಿಸಲೂ, ನಿಮ್ಮಗೂಡ ನಾನೂ ಜನಿಸುವೆನು ಭೂಮಿಯಲ್ಲಿ ಎಂದು ಅಭಯ ಪ್ರಧಾನ ಮಾಡಿ ವಾರುಣೀ, ನಳನಂದಿನೀ ಮತ್ತು ಇಂದ್ರಸೇನಾ, ಎಂಬ ಮೂರು ಜನ್ಮಗಳನ್ನು ಧರಿಸಿ, ಕೊನೆಯ ಜನ್ಮದಲ್ಲಿ ಇಂದ್ರಸೇನೆಯು ಮೌದ್ಗಲ್ಯನೆಂಬ ತಪೋವರನಿಂದ ದಿಟ್ಟ ಹೆಂಗಸೇ, ನೃಪರ ಬಸುರಲಿ ಹುಟ್ಟು ಎಂದು ಶಾಪವನ್ನು ಹೊಂದಲೂ, ಮಹಾದೇವನನ್ನು ಕುರಿತು ಹರನೇ ಪತಿಂ ದೇಹಿ ಪ್ರಭೋ, ಶಂಕರ ಪತಿಂ ದೇಹಿ ಪ್ರಭೋ ಎಂದು ಅರಸಿ ಐದು ಬಾರಿ ಬೇಡಿದ್ದರಿಂದ ಮಹಾದೇವನು ಪ್ರತ್ಯಕ್ಷನಾಗಿ ನಿನಗೆ ಮುಂದಿನ ಜನ್ಮದಲ್ಲಿ ಐದು ಜನ ಪತಿಗಳಾಗುವರು ಎಂದು ವರವನ್ನು ಕೊಟ್ಟು ನಿನ್ನ ನೆನೆವ ಅಂಗನೆಗೆ ಪತಿವ್ರತಾ ವಿಭವ ಬಹುದು ಎಂದು ವರದಹಸ್ತವನ್ನು ಇರಿಸಿ ಅದೃಶ್ಯನಾಗಲು, ಅದೇ ಪ್ರಕಾರವಾಗಿ ದೃಪದರಾಜನ ಪುತ್ರಕಾಮೇಷ್ಠಿಯಾಗದ ಅಗ್ನಿಕುಂಡದಲ್ಲಿ ಜನಿಸಿ, ಪಂಚ ಪಾಂಡವರಿಗೂ ಸತಿಯೆಂದೆನಿಸಿ ನಾರಿಯರೋಳ್ ಶಿರೋರತ್ನವೆನಿಸಿದ ದ್ರೌಪದಾದೇವಿಯೆಂದು ತಿಳಿಯಪ್ಪಾ ಚಾರ ಸುಗುಣ ಗಂಭೀರಾ॥

ಈ ವರಸಭೆಗೆ ನಾನು ತೆರಳಿದ ಪರಿಯಾಯವೇನೆಂದರೆ ಯನ್ನ ರಮಣರಾದ ಕುಂತೀ ತನಯರನ್ನು ಕಾಣಲೋಸುಗ ಬಾಹೋಣವಾಯ್ತು, ಧಾವಲ್ಲಿರುವರೋ ತೋರಿಸಪ್ಪಾ ದ್ವಾರಪಾಲಕಾ ನಿನಗೀವೆನು ಯನ್ನ ಕೊರಳಪದಕಾ ॥

ಕಂದಕಾಂಭೋದಿ ರಾಗ

ವಂದನವಿದೇ ಯಮನಂದನ ನಿಮ
ಗೊಂದನವು ಪವಮಾನ ತನಯ ಕೀರ್ತಿಸಹಾಯ ॥
ವಂದನವು ಪಾರ್ಥ ನಕುಲರೇ
ವಂದನೆ ಸಹದೇವ ರಾಜ ವಂದನೇ ನಿಮಗೇ                           ॥1 ॥

ದ್ರೌಪದಿ: ಇದೊ ಸಹಸ್ತ್ರ ವಂದನೆಗಳೈ ಸ್ವಾಮಿ ಪ್ರಾಣಪತಿಗಳಿರಾ ॥

ಧರ್ಮರಾಯ: ಸೌಮಂಗಲ್ಯಾಭಿವೃದ್ಧಿರಸ್ತು ಬಾರೇ ಪ್ರಾಣನಾಯಕಿ, ಮತ್ತೂ ಪೇಳುತ್ತೇನೆ ಕೇಳಿರೈ ಸಹೋದರರೇ॥

ದರುವು

ಸೋದರನೇ ಲಾಲಿಪುದು  ಮೋದಾದೊಳೀಗನೀ
ಭೇದವು ಜನಿಸೀತೇನಿದಕೇ ಹೇಳಿದಕೇ ॥                               ॥1 ॥

ಸುರಮುನಿಯೂ ನಾರದರೂ  ವರೆದೂದ ನೀನೀಗಾ
ಅರಿತು ಯೋಚನೆಯ ಪೇಳೆನಗೇ, ಅರುಹೆನಗೇ                      ॥2 ॥

ಧರ್ಮರಾಯ: ಆಹಾ! ಚಂಡ ಪ್ರಚಂಡನಾದ ಗಂಡುಗಲಿ ವೃಕೋದರನೇ ಕೇಳು. ಪುಂಡರೀಕಾಕ್ಷಿಯಳಾದ ದ್ರೌಪದಿಯ ವಿಷಯವಾಗಿ ಚಂಡ ತಪೋಧನರಾದ ಮಹಾಋಷಿಗಳು ಪೇಳಿರುವ ವಚನಗಳನ್ನು ನೀನು ಕೇಳಿರುವೆಯಷ್ಠೆ. ಅದೇ ಪ್ರಕಾರ ಸತಿಯಳನ್ನು ಮಂಡಲದಿ ನಾವೈವರು ಗಂಡಂದಿರಲ್ಲಿ ಒಂದೊಂದು ಸಂವತ್ಸರ ಒಬ್ಬೊಬ್ಬರ ಅಧೀನದಲ್ಲಿ ಇರುವ ಹಾಗೆ ಏರ್ಪಡಿಸಬೇಕು. ಮಂಡಲದಲ್ಲಿ ಸತ್ಪುರುಷರ ವಚನವನ್ನು ಮೀರಲಾಗುವುದೇ, ಖಂಡ ಪರಶುವಿನಾಣೆ ಯನ್ನಿಷ್ಠವು ಋಷಿಗಳ ವಾಕ್ಯದಂತೆಯೇ ಇರುವುದು. ಚಂಡಪರಾಕ್ರಮನಾದ ನಿನ್ನ ಚಿತ್ತಾಭಿಪ್ರಾಯವೇನಿರುವುದು! ಖಂಡಿತ ಪೇಳಬೇಕಪ್ಪಾ ವೃಕೋದರಾ ವಾಯುಕುಮಾರ ॥

ಭೀಮಸೇನ: ಹೇ ಭ್ರಾತನಾದ ಧರ್ಮಜನೇ ಕೇಳು! ಭೂತಳದಿ ನಿಮ್ಮಯ ವಚನಗಳನ್ನು ಮೀರಿ ನಡೆಯುವುದುಂಟೇನೈ ಅಗ್ರಜ! ಕಮಲದಳಾಯತಾಕ್ಷಿಯಾದ ದ್ರೌಪದಿಯ ವಿಷಯವಾಗಿ ಆ ತಪೋಧನರಾದ ನಾರದರು ಅಪ್ಪಣೆ ಕೊಡಿಸಿದಂತೆ ಪ್ರತಿ ಮಾತೇನಿರುವುದು ? ನಿಮ್ಮ ಉತ್ತರದಂತಾಗಲೈ ಅಣ್ಣನೇ ವರ ಅಗ್ರಗಣ್ಯನೇ ॥

ದರುವು

ಕ್ಷೋಣಿಪತಿ ಫಲುಗುಣನೇ  ಜಾಣನೇ ಕೇಳೈಯ್ಯ
ಮಾಣದೆ ಮನಸಿನ ಯೋಚನೆಯಾ, ಯೋಚನೆಯಾ               ॥3 ॥

ಧರ್ಮರಾಯ: ಕ್ಷೋಣಿಯೊಳು, ಶತೃಗಳ ತ್ರಾಣಗೆಡಿಸಿ ಪ್ರಾಣವನ್ನು ಅಂತಕನ ಕಾಣಿಸುವ ಗೀರ್ವಾಣಪತಿ ಸುತನಾದ ಪಾರ್ಥನೇ ಕೇಳು ! ಮಾಣದೇ ನಾರದರ ಅನುಜ್ಞೆಯಂತೆ ಏಣಾಂಕವದನೆಯಾದ ಪಾಂಚಾಲಿಯನ್ನು ಒಂದೊಂದು ವರುಷ ಒಬ್ಬೊಬ್ಬರ ಅಧೀನದಲ್ಲಿರುವ ಹಾಗೂ, ಅಣ್ಣ ತಮ್ಮಂದಿರು ನಾವೈವರಲ್ಲಿ ಸತಿ ಪುರುಷರ ಶಯನವನ್ನು ಕಣ್ಣಾರೆ ನೋಡಿದ್ದಾದರೆ ನಿರ್ಣಯವಾಗಿ ಒಂದು ಸಂವತ್ಸರ ಭೂಪ್ರದಕ್ಷಿಣೆಗೈದು ಪುಣ್ಯ ತೀರ್ಥಂಗಳಂ ಮಿಂದು ಬರಬೇಕೆನ್ನುವುದಾಗಿ ಅಪ್ಪಣೆಯನ್ನಿತ್ತಿರುವರು. ಯನ್ನ ಮನಸ್ಸು ಋಷಿಗಳ ವಾಕ್ಯದಂತೆಯೇ ಇರುವುದು. ಇದಕ್ಕೆ ನಿನ್ನ ಚಿತ್ತಾಭಿಪ್ರಾಯವೇನೈ ವಿಜಯ ಧನಂಜಯ ॥

ಅರ್ಜುನ: ಹೇ, ಯಮಪುತ್ರನಾದ ಧರ್ಮರಾಯನೇ ಕೇಳು ! ಈ ಭೂಮಿಯೋಳ್ ತಮ್ಮ ಇರಾದೆಗೆ ಮೀರಿ ನಡೆಯುವನಲ್ಲವೆಂದು ತಿಳಿದು ಯನ್ನನ್ನು ಕೇಳುವುದೇನುಂಟು. ತಮ್ಮ ಚಿತ್ತಾಭಿಪ್ರಾಯದಂತೆ ನಡೆಸಬಹುದು, ತಮ್ಮ ಆಜ್ಞೆಗೆ ಪ್ರತಿ ನಿರೂಪವುಂಟೇ ಧರ್ಮಜಾ ವಂದಿತ ಕುಂತೀ ತನುಜ ॥

ದರುವು

ಅನುಜರೇ ಮಾದ್ರಿವರಾ  ತನುಜರೇ ಕೇಳಿರಾ
ಸನುಮತವೇ ಮನಕೇ ನುಡಿಯು ಈ ನುಡಿಯು                        ॥4 ॥

ಧರ್ಮರಾಯ: ಸಹೋದರರಾದ ನಕುಲ ಸಹದೇವರೇ ಲಾಲಿಸಿ! ವನಜದಳ ನೇತ್ರೆಯಾದ ದ್ರೌಪದಿಯ ವಿಷಯವಾಗಿ ನಾನು ಹೇಳಿದ ಮಾತು ನಿಮ್ಮಗಳ ಮನಸ್ಸಿಗೆ ಸಮ್ಮತವೇನೈ ಸಹೋದರರೇ ಮಾದ್ರಿ ಸಂಭೂತರೇ ॥

ನಕುಲ ಸಹದೇವರು: ಅಣ್ಣಾ ಧರ್ಮನಂದನ! ನಿಮ್ಮ ಉತ್ತರಕ್ಕೆ ಪ್ರತಿಯೇನಿರುವುದು ನಿಮ್ಮ ಚಿತ್ತಾಭಿಪ್ರಾಯದಂತೆ ನಡೆದುಕೊಳ್ಳುವೆವೈ ಯಮಸುತ ಇದು ನಮಗೆ ಸಮ್ಮತಾ ॥

ದರುವು

ಧರೆಯೋಳು ಕುಂಕುಮ  ಪುರವರ ಪತಿ ನಮ್ಮಾ
ನಿರುತಾದಿ ಪೊರೆಯುವಾನಮ್ಮಾ ನರಸಿಂಹಾ                          ॥5 ॥

ಧರ್ಮರಾಯ: ಹೇ ಸಹೋದರರಾದ ಭೀಮ ಪಾರ್ಥ ನಕುಲ ಸಹದೇವರಾದ್ಯರೇ ಲಾಲಿಸಿ. ಮಹಿಯೊಳು ಕುಂಕುಮ ಪುರಿ ಲಕ್ಷ್ಮೀವರನ ಹರುಷದಿಂ ಸ್ಮರಿಸುತ್ತಾ ಮಹನೀಯರಾದ ನಾರದರ ಅನುಜ್ಞೆಯಂತೆ ಅಹಿರಾಜ ವೇಣಿಯಾದ ದ್ರೌಪದಿಯಳನ್ನು ಹೊಂದಿ ಬಹು ಸಂತೋಷದಿಂದ ಯಿರಲು ಸಂಶಯವೇನಿರುವುದು? ವಿಹಿತದಿಂ ಗೃಹಾಂತರಕ್ಕೆ ತೆರಳೋಣ ಬನ್ನಿರೈಯ್ಯಿ ಸಹೋದರರೇ ಬಾಹುಬಲ ಶೂರರೇ ॥

ದರುವು

ಚಂದವಾಯ್ತೇ, ನಿಮಗೆ ಪತಿಗಳೇ
ಇಂದು ಮಾಡಿದ ಯೋಚನೆಗಳು ॥
ಬಂದು ಒದಗಿತು ಬಹಳ ಕಷ್ಠವು
ಮುಂದೆ ನಿಮ್ಮೊಳಗೇ ಪತಿಯೇ                                            ॥1 ॥

ಸ್ತ್ರೀಯಳಾ ನುಡಿ, ಮನಕೇ ಬಾರದೂ
ಪ್ರಿಯರೇ ನೋಡಿರಿ, ಅಂದವಲ್ಲವೂ
ಆ ಯತಿಯ ದೆಶೆ, ಯಿಂದ ಬರುವುದ
ಪಾಯ ಮುಂದೆಮಗೇ, ರಮಣಾ                                           ॥2 ॥

ದ್ರೌಪದಿ: ಇಂದುಕುಲ ವಂಶಾಬ್ಧಿಜಾತರಾದ ಪಾಂಡು ನಂದನರೇ ಲಾಲಿಸಿ, ಇಂದಿನಾ ಸಮಯದಿ ನೀವುಗಳೊಂದುಗೂಡಿ ಮಾಡಿರುವ ಯೋಚನೆ ಬಹು ಚಂದವಾಗಿರುವುದು, ಮಂದದ ದೆಶೆಯಿಂದ ನಿಮಗೆ ಬಂಧನವು ತಪ್ಪದು. ಅಂದರೆ ಸ್ತ್ರೀಯಳಾದ ನಾನಂದ ವಚನ ಮುಂದೆ ನಿಮಗೇ ಸಾದೃಶ್ಯವಾಗುವುದು. ಒಂದಾದರೂ ನಾನೆತ್ತೆಣಿಸಬಾರದು. ಬಂದದ್ದನ್ನು ಅನುಭವಿಸುವ ಭಾರ ನಿಮ್ಮದಾಗಿರುವುದೈ ಪತಿಗಳಿರಾ ॥

ದರುವು

ಖೂಳ ನಾರದ  ಋಷಿಯ ವಚನವು
ಚೇಳು ಬಡಿದಂ  ತಾಯಿತೆನಗೇ ॥
ತಾಳುವುದು ಕಡು  ಕಷ್ಟ ಮುಂದಿನ
ಬಾಳಿಗೆ ಭಂಗಾ  ಕಾಂತ                                                      ॥3 ॥

ದ್ರೌಪದಿ: ಕೇಳುವಿರಾ ಸ್ವಾಮೀ! ಪ್ರಿಯೇಶ್ವರರೇ, ಖೂಳ ನಾರದರ ನುಡಿಯಂ ಕೇಳಲು ಚೇಳು ಬಡಿದಂತಾಗುವುದು, ಭಂಗ ವದಗಿ ಗೋಳಾಡುವುದಕ್ಕೆ ಕಾರಣವಾಗುವುದೈ ಭೀಮಾದ್ಯರೇ ಯನ್ನಾಳಿದೊಲ್ಲಭರೇ ॥

ದರುವು

ಕೆಡಕು ನಾರದ  ನುಡಿದಾ ವಚನಕೆ
ಕೊಡಲು ಬಹುದೇ  ಮನಸು ನೀವು ॥
ಪೊಡವಿಗತಿಶಯ  ಕುಂಕುಮನಪುರ
ದೊಡೆಯ ಮೆಚ್ಚನೂ, ಪ್ರಿಯಾ                                               ॥4 ॥

ದ್ರೌಪದಿ: ಉಡುರಾಜ ವಂಶ ಸಂಜಾತರಾದ ಯನ್ನೊಡೆಯರೇ ಲಾಲಿಸಿ, ಕಡು ನಿಪುಣರಾದ ನೀವುಗಳು ಕೆಡಕು ನಾರದ ನುಡಿಗೆ ಅನುಮೋದಿಸಿದ್ದಾದರೇ, ಪೊಡವಿಯೊಳು ಕುಂಕುಮನಪುರದೊಡೆಯ ಜಡಜಾಯತಾಕ್ಷನಾದ ನೃಸಿಂಗ ಮೂರ್ತಿಯು ನಿಮ್ಮ ನಡತೆಯನ್ನು ಸರ್ವಥಾ ಮೆಚ್ಚಲಾರನೈ ಪ್ರಾಣ ಪ್ರಿಯರೇ ಪಾಂಡು ತನಯರೇ ॥

ಧರ್ಮರಾಯ: ಹೇ ಸರಸ ಸುಂದರವತೀ ದ್ರೌಪದೀ, ಗುರುಗಳಾದ ನಾರದರು ವರೆದ ಅನುಜ್ಞೆಯನ್ನು ಪರಿಪಾಲಿಸದೇ ಹೋದರೆ ಶಾಪಗ್ರಸ್ಥರಾಗುವೆವಲ್ಲದೇ ಉರುತರಮಾದ ನರಕ ದುರ್ಗತಿ ಪ್ರಾಪ್ತವಾಗುವುದೇ ನೀರೆ. ಆದರೇ ನೀನೀ ಪರಿಯೊಳು ಪೇಳುವುದು ಬಿಟ್ಟು ಅರಮನೆಗೆ ತೆರಳೇ ಸರೋಜನೇತ್ರೇ ಸೌಂದರ‌್ಯಗಾತ್ರೆ ॥

ಭಾಗವತರು: ಈ ಪ್ರಕಾರವಾಗಿ ಪಾಂಡವರೈವರೂ, ನಾರದರನುಜ್ಞೆಯಂ ಪರಿಪಾಲಿಸುತ್ತಿರಲೂ, ಒಂದಾ ನೊಂದು ಸಮಯದಲ್ಲಿ ಚೋರರು ಭೂಸುರೋತ್ತಮರ ಮನೆಗಳಿಗೆ ಕನ್ನ ಹಾಕಿದರೈಯ್ಯ ಭಾಗವತರೇ ॥

 

(ಚೋರರು ಬರುವಿಕೆ)

ದರುವು ಚೌಪದಿ ಅಟತಾಳ

ಬನ್ನಿರಿ ಬನ್ನಿರಿ ಬೇಗನೇ  ಚನ್ನಮಲ್ಲರೇ
ಬನ್ನಿರಿ ಬನ್ನಿರಿ ಬೇಗನೆ ॥ಪ ॥
ಬನ್ನಿರಿ ಬನ್ನಿರಿ ಬೇಗ  ಇನ್ನು ವಿಪ್ರರ ಮನೆಗೆ ಈಗ
ಕನ್ನವಿಕ್ಕಿ ತರುವ ಬೇಗ  ಹೊನ್ನು ವಸ್ತ್ರ ನಮಗೆ ಭಾಗ ॥

ಚಿಕ್ಕಲಕ್ಕ: ಯಲಾ, ಮಲ್ಲಿಗುಟ್ಟೇ ಮಾರ, ಕಲ್ಲಟ್ಟಿ ಬೋರನ ಮಗ ಈರ, ಯಲ್ಲಾಪುರದ ಚಿಕ್ಕ ಹುಲ್ಲಟ್ಟಿ ಹೊಲಸಿಗ, ಎಲ್ಲಾರು ಬಂದಿರೇನ್ಲಾ, ಈ ಊರ ದೋತ್ರೈನೋರ ಮನ್ಯಾಗ ಕನ್ನಾಯಿಕ್ಕಿ ಬೆಳ್ಳಿ, ಚಿನ್ನ, ತಪ್ಪಲೆ, ಚಂಬು, ವೊಳ್ಳೊಳ್ಳೇ ಬಟ್ಟೆ ಬರೆ. ಹಣಕಾಸು, ಎಲ್ಲಾ ಕದ್ದುಕೊಂಡು ಹೋಗಾನಿ ಬನ್ನಿರಲಾ॥

ಮಾರ: ಯೇನಲಾ ಈರ ! ಮಾಸಿಗ ಲಕ್ಕಾ ಈ ಊರು ದೋತ್ರೈನೋರು ಅಂಥಾ ಪುಣ್ಯವಂತರೇನ್ಲಾ, ಸರಿ ಸರಿ ಅಂಗಾದ್ರೆ ಯಾರು ಕಾಣದಂತೆ ಹೋಗಿ ಯಲ್ಲಾ ದೋಚಿಕೊಂಡು ಬರಾನ ಬನ್ರೆಲಾ ॥

ಚಿಕ್ಕ ಲಕ್ಕ: ಯಲಾ ! ಕಲ್ಲಟ್ಟಿ ಬೋರ ! ಮಲ್ಲಿಗುಂಟೆ ಮಾರ ! ಸದ್ದು ಗಿದ್ದು ಮಾಡಬೇಡ. ಬುದ್ಧಿಯಿಲ್ಲದ ತನ್ನೆಂಡ್ರು ಮಕ್ಳು ನಿದ್ದೆ ವಳಗೆ ಬಿದ್ದಿರೋದೋ, ಇಲ್ಲದಿದ್ರೆ ಎದ್ದು ಬಂದು ಗಿಂದಾರು. ಸದ್ದ್ಯಾಕೆ ಮಾಡ್ತೀರಿ ಇಲ್ಲಿಗೆ ಬಂದಿದ್ದಕ್ಕೆ ಕೈಗೆ ಸಿಕ್ಕಿದ್ದು ಬಾಚಿಕ್ಕೊಂಡು ಹೋಗಾನಿ ಬನ್ರೆಲಾ ॥

 

(ಬ್ರಾಹ್ಮಣರು ಬರುವಿಕೆ)

ದರುವು

ಧರಣಿಗೊಡೆಯ  ಕುಂತಿ ತನಯಾ  ಪೊರೆಯೋ ನಮ್ಮನೂ
ಒರೆಯಲಾರೆವು  ಚೋರತನದ  ಕರ ಕರೇಯನೂ                     ॥1 ॥

ಇರುಳಿನೊಳಗೆ  ಸಾರಿಗೃಹಕೇ  ಕ್ರೂರ ಚೋರರೂ
ಭಾರಿ ಒಡವೇ  ಪಾತ್ರೆ ವಸ್ತ್ರವಾ  ಸೂರೆಗೈದರೂ                       ॥2 ॥

ಸುಬ್ಬಾಭಟ್ಟ: ಯಾರೈಯ್ಯ ದೊರೆಗಳೇ ! ಈ ಊರಲ್ಲಿ ಬ್ರಾಹ್ಮಣರ ಮನೆಗಳು ಎಲ್ಲಾದರೂ ಹಾಳಾಗಿ ಹೋಗಲಿ. ನೀವು ಮಾತ್ರ ರಾಜ್ಯ ಪರಿಪಾಲನೆ ಮಾಡಿಕೊಂಡು ಸುಖವಂತರಾಗಿರಿ. ನಮ್ಮ ಮನೆಯಲ್ಲಿ ಚೋರರು ಪ್ರವೇಶಿಸಿ ಅವಲಕ್ಕಿ ಗಂಟು, ದೊಡ್ಡ ಸುಬ್ಬಾಭಟ್ಟರ ಮನೆಯಿಂದ ತಂದಿದ್ದ ಸಾರಿನ ಕೊಳಗ, ಬಸಿಯೋ ತಟ್ಟೆ, ಹಪ್ಪಳ ಇಟ್ಟಿದ್ದ ದೊಡ್ಡ ಹಂಡೆ, ಉಪ್ಪಿನಕಾಯಿ ಬಾಂಡ್ಲೆ, ನಮ್ಮಪ್ಪನ ಕಾಲದಿಂದ ಇದ್ದ ದೊಡ್ಡ ಭಂಡಾರ, ಅರಮನೆಯಲ್ಲಿ ಕೊಟ್ಟಿದ್ದ ಕಲಾಬತ್ತಿನ ಶಾಲು, ಎಲ್ಲಾ ಅಪಹರಿಸಿಕೊಂಡು ಹೋದರೂ. ಲಕ್ಷ್ಮೀನಾರಾಯಣ ಭಟ್ಟರೇ ನಿಮ್ಮ ಮನೆಯಲ್ಲಿ ಏನು ಹೋಗಿದೆ ಹೇಳಿ ಸ್ವಾಮಿ.

ದರುವು

ಸಾಲಿಗ್ರಾಮವೂ  ಜರತಾರಿಯಾ  ಮೇಲು ಧೋತ್ರವೂ
ಬಾಲೆಯರು ತಾ  ಉಡುವ ವಸನಾ  ಎಲ್ಲಾ ಪೋದವೂ              ॥3 ॥

ಧರಣಿಗಧಿಕಾ  ಕುಂಕುಮಪುರ  ವರ ನೃಸಿಂಗನೇ
ದುರಿತಗಳನು  ಪರಿಹರಿಸುತಾ  ಪೊರೆಯೋ ಬೇಗನೇ               ॥4 ॥

ಲಕ್ಷ್ಮೀನಾರಾಯಣಭಟ್ಟ: ಅಯ್ಯ ! ಸುಬ್ಬಾ ಭಟ್ಟರೇ, ನಾನೇನೆಂದು ಹೇಳಲಿ, ನಮ್ಮ ಮನೆಗಳು ಹೋದರು ಹೋಗಲಿ ಈ ದೊರೆಗಳಿಗೆ ಅವರ ಸುಖವೇ ಅವರದು. ನಮ್ಮ ಮನೆಯಲ್ಲಿ ಐವತ್ತು ವರುಷಗಳಿಂದ ಇಟ್ಟಿದ್ದ ಹಳೇ ಪಂಚಾಂಗಗಳು ಮಳೆ ಚಳಿ ಬಿಸಿಲಿಗೆ ಅನುಕೂಲವಿಲ್ಲದ ಬಿಳಿ ಕೊಡೆಗಳು. ಪುಳಿತ ಪುಷ್ಪಾಂಡಗಳು. ಹಳೇಬೀಡಿನವರು ಕೊಟ್ಟಿದ್ದ ಜೀರ್ಣ ವಸ್ತ್ರಗಳು. ಹಳೇ ಭಾಂಡಗಳು ತೊಳಚಪ್ಪನವರ ಮನೆಯಲ್ಲಿ ಕೊಟ್ಟಿದ್ದ ನಾರಿಕೇಳಗಳು. ಎಳೆ ಮಗುವಿನ ಕೆಳಕ್ಕೆ ಹಾಸುತ್ತಿದ್ದ ತರೂರು ಜಂಖಾನದ ತುಂಡುಗಳು. ನಮ್ಮಪ್ಪನ ಕಾಲದಿಂದಿದ್ದ ಸಾಲಿಗ್ರಾಮಗಳು ಮುಂತಾದ ಇತ್ತಾಪಹಾರವೆಲ್ಲಾ ಈವತ್ತಿಗೆ ಕಡೆಯಾಯ್ತು. ಅಯ್ಯ ದೊರೆಗಳೇ ! ಈಗ ಚೋರರನ್ನು ಶಿಕ್ಷಿಸಿ ನಮ್ಮನ್ನು ರಕ್ಷಿಸುವಿರೋ ಇಲ್ಲವೋ, ನಾವು ಈ ಗ್ರಾಮವನ್ನು ಬಿಟ್ಟು ಮತ್ತೆಲ್ಲಿಗಾದರೂ ಹೋಗೋಣವೋ. ಅಯ್ಯ ಧರ್ಮಪುತ್ರ, ಅಯ್ಯ ಭೀಮಸೇನ, ಅಯ್ಯ ಪಾರ್ಥ ನಕುಲ  ಸಹದೇವಾದ್ಯರೇ ನಮ್ಮನ್ನು ಕಾಪಾಡಿ ಕಾಪಾಡಿ  ನಿಮಗೆ ಪುಣ್ಯ ಬರುವುದು ॥

ಅರ್ಜುನ: ಆಹಾ! ಸ್ವಾಮಿ, ದ್ವಿಜಸಾರ್ವಭೌಮರೇ, ನೀವು ಚಿಂತಿಸಬೇಡಿರಿ. ಚೋರರನ್ನು ಶಿಕ್ಷಿಸಿ ನಿಮ್ಮನ್ನು ರಕ್ಷಿಸುವೆನು. ನಿಮ್ಮ ನಿಮ್ಮ ನಿಜಾಲಯಕ್ಕೆ ತೆರಳಿರೈ ದ್ವಿಜರೇ-ಭೂಸುರೋತ್ತಮರೇ ॥

ದರುವು

ಪರಿಯೇನು ತೋಚದು  ಸಿರಿವರ ನಲ್ಲಾ
ಧರಣೀ ಸುರರೀಗಾ  ಮರುಗುವರಲ್ಲಾ                                    ॥1 ॥

ಅರಸಿ ಸಹಿತಲೀ  ವರ ಧರ್ಮಜಾತಾ
ಹರುಷದೊಳು ಮಲ  ಗಿರುವ ನಿದ್ರಿಸುತಾ                                ॥2 ॥

ಶರ ಧನುಗಳು ಶಿ  ಲ್ಕಿದವಲ್ಲಿ ತ್ವರಿತಾ
ತರಲು ಪೋದಡೆ ಬಹು  ದು ವಿಘಾತಾ                                   ॥3 ॥

ಅರ್ಜುನ: ಆಹಾ ! ವಾಸುದೇವನೇ ವಾಸವಾದಿ ಸುರಗಣ ನಮಿತನಾದ ಪರಮಾತ್ಮನೇ  ಭೂಸುರರು ಈ ಪರಿ ಶೋಕಿಸುತ್ತಿರುವರು. ವಸುಧೀಶ ಧರ್ಮಜನು ವಾಸುಕಿವೇಣಿ ದ್ರೌಪದಿ ಸಹಿತ ಸಜ್ಜಾ ಗೃಹದೊಳು ಶಯನಿಸಿರುವರು. ಈ ಸಮಯ ಶರಧನುಗಳು ತರಲೆಂತಾಗುವುದು. ಭೂಸುರರಿಗಾಶೆಯಿತ್ತು ಮೋಸಗೈದೊಡೆ ಯನಗೆ ದೋಷ ಪ್ರಾಪ್ತಿಯಾಗುವುದು. ದೇಶದೊಳಗೆ ಯನ್ನ ವಾಸಿಪಂಥ ಮೆರೆಯಲು ಈ ಅಸಂಗತ ಕಾರ‌್ಯಗಳಿಗೇನು ಗತಿ ಮಾಡಲೋ ಶ್ರೀಶಾ-ಭವದುರಿತ ವಿನಾಶ ॥

ದರುವು

ವನಜಮುಖಿಯ ಮಂ  ದಿರ ದೊಳಗೆನ್ನಾ
ಧನುರ್ಬಾಣವೆಲ್ಲವೂ  ಸಿಲ್ಕಿದಾವಿನ್ನಾ                                     ॥4 ॥

ಎನಿತು ಗೈಯಲೀ  ಇದಕೆ ನಾ ನಿನ್ನಾ
ಮನಸೀಜಾ ಪಿತನೇ  ಮನ್ನಿಸೋ ಯನ್ನಾ                               ॥5 ॥

ಅರ್ಜುನ: ಹೇ ತಾಪಹಾರಕನಾದ ಶ್ರೀಪತಿ, ರುಕ್ಮಿಣೀಪತಿ  ನಾಂ ಪಿಡಿಯುವ ಧನುಶರಗಳ್ಯಾವತ್ತೂ ಆ ಪದುಮಾಕ್ಷಿಯ ಸದನದೊಳು ಸೇರಿರುವುವು. ಭೂಪತಿಯ ನೋಡಿದರೆ ಪಾಪ ಸಂಘಟಿಸುವುದು. ತಾಪಸರಾದ ನಾರದರ ಅನುಜ್ಞೆಯಂತೆ ಭೂ ಪ್ರದಕ್ಷಿಣೆಗೈದ ಹೊರತು ಪಾಪ ತೊಲಗದು. ಈ ಪರಿ ಗೈಯದಿರ್ದೊಡೆ ಯನ್ನಯ ಪಂಥ ಈಡೇರದು. ನಾ ಪಡೆದ ಫಲಕ್ಕೆ ಈಗ ಏನು ಮಾಡಲೋ ಶ್ರೀಹರೀ – ದಾನವಾರಿ ॥

ದರುವು

ಕ್ಷಿತಿಯೊಳು ಕುಂಕುಮ  ಪುರ ನೆಲೆ ವಾಸಾ
ಪತಿತ ಪಾವನನಾದ  ಶ್ರೀ ಲಕ್ಷ್ಮೀಶಾ                                      ॥6 ॥

ಗತಿಯೇನು ಗೈಯಲೋ  ಸತ್ಯ ಭಾಮೇಶಾ
ಮತಿಯನಿತ್ತು ಪಾ  ಲಿಸ ಬೇಕೋ ಶ್ರೀಶಾ                                ॥7 ॥

ಅರ್ಜುನ: ಹೇ ಶ್ರೀಹರೀ-ಜಗದೋದ್ಧಾರಿ ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವಿತಃ  ನಿತ್ಯಂ ಸನ್ನಿಹಿತೋ ಮೃತ್ಯುಃ, ಕರ್ತವ್ಯೋ ಧರ್ಮ ಸಮಗ್ರಹಃ ॥ಎಂಬ ವಚನದಂತೆ ಈ ಶರೀರವು ಅನಿತ್ಯವಾದದ್ದು. ಮೃತ್ಯುವು ನಿತ್ಯವೂ ಬೆನ್ನು ಬಿಡದೆ ಕಾದುಕೊಂಡಿರುವದಾದ ಕಾರಣ ಧರ್ಮವನ್ನೇ ಸಂಗ್ರಹಿಸಿಕೊಂಡಿರುವುದು, ಒಳಿತಾಗಿರುವುದು. ಆದ್ದರಿಂದ ಧನು ಶರಗಳನ್ನು ಕೈಗೊಂಡು ಚೋರರನ್ನು ಶಿಕ್ಷಿಸಿ ಬ್ರಾಹ್ಮಣರನ್ನು ರಕ್ಷಿಸುವೆನು. ಈ ಕ್ಷಿತಿಗೆ ಶ್ರೇಷ್ಠತರಮಾದ ಕುಂಕುಮಪುರಿ ಲಕ್ಷ್ಮೀವರನೇ ಈ ಸಮಯದಲ್ಲಿ ಯನ್ನನ್ನು ರಕ್ಷಿಸಿ ಕಾಯಬೇಕೋ ನರಹರೀ ಮುಂದೇನು ದಾರಿ ॥

ಕಂದ

ಎನುತ ನರನೊಳ ಹೊಕ್ಕು ತನ್ನಯ
ಧನು ಶರಂಗಳ ಕೊಂಡು ನುಡಿದನು ॥
ಮುನಿ ವಚನ ಸಂಘಟಿಸಿತು ನೃಪದಂಪತಿ ವಿಲೋಕನದ
ಘನದುರಿತ ನಿಷ್ಕೃತಿಗೆ ವರುಷದೊ
ಳೆನಗೆ ದೇಶ ಭ್ರಮಣವಾಯ್ತೆಲೇ
ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ ॥

ಭಾಗವತರು: ಈ ಪ್ರಕಾರವಾಗಿ ಯೋಚಿಸಿ ಫಲುಗುಣನು ಶಯ್ಯಗೃಹದೊಳ ಹೊಕ್ಕು ಏಕಾಂತವಾಸದ ನೃಪ ದಂಪತಿಗಳನ್ನು ನೋಡಿ ಇದು ಯಾವ ಘನದುರಿತ ಕರ್ಮಫಲವೋ, ಮುನಿ ವಚನದಂತೆ ಯನಗೆ ದೇಶ ಪರ್ಯಟನವಾಯಿತು. ಇದಕೇಕೆ ಚಿಂತಿಸುವುದೆಂದು ಧನು ಶರಂಗಳನ್ನು ಕೈಗೊಂಡು ಹೊರವಂಟು ಇಂತೆಂದನೈಯ್ಯ ಭಾಗವತರೇ ॥

ದರುವು

ಎಲ್ಲಿಗೆ ನೀವ್  ತೆರಳುವಿರಿ  ನಿಲ್ಲಿ ಚೋರರೇ
ಕೊಲ್ಲದೆ ಬಿಡೆ  ನಿಮ್ಮನೀಗ  ಖುಲ್ಲು ಮನುಜರೇ ॥                     ॥1 ॥

ಅರ್ಜುನ: ಯಲಾ! ಪುಂಡುತನದೊಳು ಪ್ರಚಂಡರಾದ ಭಂಡ ಚೋರರೇ, ಕಂಡವರೊಡವೆ ಕೈಗೂಡಿತೆಂದು ಓಡಿ ಹೋದರೆ ಬಿಡುವನೋ ಈ ಕಲಿ ಧನಂಜಯನು. ನೀವು ಕೊಂಡು ಹೋಗಿರುವ ಭೂಸುರರ ವಸನಾಭರಣಗಳನ್ನು ತಂದಿತ್ತರೆ ಸಮನಾಯಿತು. ಇಲ್ಲವಾದರೆ ಈ ಕೋದಂಡದಿಂದ ನಿಮ್ಮ ಮಂಡೆಗಳನ್ನು ಖಂಡ್ರಿಸಿ ದಂಡಧರನ ನಗರಿಗೆ ಪೊರಮಡಿಸುವೆನೆಲಾ ಷಂಡರೇ ಮಂಡಲದೊಳು ಭಂಡರೇ ॥