ದರುವು

ಭೂಸುರರಾ  ಒಡವೆಗೆ ನೀವು  ಮೋಸಗೈದೊಡೇ
ಈ ಸಮಯದಿ  ನಿಮ್ಮನು ಘಾ  ತಿಸದೇ ಬಿಡೇ                          ॥2 ॥

ಅರ್ಜುನ: ಯಲಾ ! ಮೋಸಚಿತ್ತರಾದ ಹೇಡಿಗಳಿರಾ. ವಾಸಿ ಪಂಥಗಳ ಮಾಡದೆ ಭೂಸುರರ ವಸನಾ ಭರಣಗಳನ್ನು ತಂದಿತ್ತರೇ ಸಮವಾಯಿತು. ಮೋಸಗೈದರೇ ಭಾಸುರಮಾದ ಈ ಶರ ಸಂಧಾನದಿಂದ ನಿಮ್ಮನ್ನು ನಾಶಗೈಯ್ಯದಿರ್ದೊಡೆ ವಾಸವಾತ್ಮಜ. ವಸುಧೀಶ ಪಾರ್ಥರಾಜನೆಂಬ ಪೆಸರೆನಗ್ಯಾತಕ್ಕೋ ದ್ರೋಹಿಗಳಿರಾ ॥

ದರುವು

ಧರಣಿ ಕುಂಕು  ಮಾನಪುರದ  ವರ ನೃಸಿಂಗನಾ
ಮರೆಯ ಹೋಗಲು  ಬಿಡದೆ ನಿಮ್ಮ  ಶಿರವ ತರಿವೆನಾ                ॥3 ॥

ಅರ್ಜುನ: ಯಲಾ ! ಪರಮ ದ್ರೋಹಿಗಳಾದ ದುರುಳ ತಸ್ಕರರೇ  ಅರಿತು ಮರ‌್ಯಾದೆಯಿಂದ ಧರಣೀಸುರರ ವಸ್ತ್ರಾಭರಣಗಳನ್ನು ತಂದಿತ್ತರೆ ನಿಮ್ಮ ಶಿರವು ಉಳಿಯುವುದು, ಇಲ್ಲವಾದರೆ ಸರಸತರ ಕುಂಕುಮಪುರ ನಿಲಯ ನರ ಕೇಸರಿಯ ಚರಣ ಸರಸಿಜವ ಮರೆ ಹೊಕ್ಕರೂ ಬಿಡದೆ ಉರುತರಮಾದ ಈ ಶರಮುಖದಿಂದ ನಿಮ್ಮನ್ನು ಪರಿಭಂಗಿಸುವೆನೋ ದ್ರೋಹಿಗಳಿರಾ ॥

ಚೋರರು: ಅಯ್ಯಯ್ಯಪ್ಪಾ ! ಒಳ್ಳೇ ಗಾಸಾರ ಬಂತಲ್ಲಪ್ಪ. ಉಯ್ಯಿ ಬ್ಯಾಡೋ ಕಾಣೋ ನಮ್ಮಪ್ಪ, ದೋತ್ರೈನೋರೊಡವೆ ಕೊಡ್ತೀನಪ್ಪಾ, ಪೊಳ್ಳು ನನ್ನೆಂಡ್ರು ಮಕ್ಕಳ್ರಾ! ಕಳ್ಳತನಕ್ಕೆ ಹೋಗಬ್ಯಾಡಿ ಅಂತ ಮೊದಲೇ ನಾನು ಹೇಳಲಿಲ್ಲವೇ, ನನ್ನ ಮಾತು ಕೇಳದೋದ್ರಿ, ಸುಮ್ಮನೆ ಪರಾಣ ಕಳಕೊಳ್ಳಬ್ಯಾಡ್ರಿ, ಬ್ಯಾಂಬ್ರೊಡವೇ ಬ್ಯಾಂಬರಿಗೆ ಕೊಟ್ಟು ವೂರಡಿಕೋಗನ ಬನ್ನಿರ‌್ಲಾ ॥

ಅರ್ಜುನ: ಸ್ವಾಮೀ! ದ್ವಿಜ ಸಾರ್ವಭೌಮರೇ ನಿಮ್ಮ ನಿಮ್ಮ ವಸನಾಭರಣ ದ್ರವ್ಯಗಳನ್ನು ತೆಗೆದುಕೊಂಡು ದಯಮಾಡಿಸಬಹುದೈ ಧರಣೀಸುರರೇ ಭೂಸುರೋತ್ತಮರೇ ॥

ಬ್ರಾಹ್ಮಣರು: ಆಹಾ ! ಮಹಾನುಭಾವನೇ ! ಬಹುಕಾಲ ನೀನು ಧಾತ್ರಿಯನ್ನು ಪರಿಪಾಲಿಸಿಕೊಂಡು ಸುಖವಾಗಿರು. ನಮ್ಮ ನಮ್ಮ ನಿವಾಸಂಗಳಿಗೆ ಗಮನಿಸುವೆವೈಯ್ಯ ರಾಜ ಆಶ್ರಿತ ಕಲ್ಪಭೋಜ ॥

ಧರ್ಮಜ ಅರ್ಜುನರ ಪರ್ಯಾಲೋಚನೆ

ದರುವು

ಕರುಣಿಸು ಭೂಮಿಪಾಲ  ಒರೆವೆನು ಧರ್ಮಶೀಲಾ
ದೊರಕಿತು ಚಿಂತೆ ಬಹಳಾ, ಕೇಳ್ ಬಹಳಾ                              ॥1 ॥

ಜಲಜಾಕ್ಷಿ ಸಹಿತ ಗೃಹದಿ  ಮಲಗಿರಲು ನೀವು ಸುಖದಿ
ಸಲೆ ನೋಡಿ ನಾನು ಭಯದೀ  ಚಿಂತೆ ಮನದೀ                        ॥2 ॥

ಅರ್ಜುನ: ಕ್ಷೋಣೀಶರೋಳ್ ಜಾಣನಾದ ಅಣ್ಣಯ್ಯನೇ ಲಾಲಿಸು. ಏಣಾಂಕ ವದನೆಯಾದ ದ್ರೌಪದಿಯಳನ್ನು ನಿಮ್ಮನ್ನು ಸಹ ಈ ದಿನ ಶಯನ ಮಂದಿರದಲ್ಲಿ ಮಲಗಿರುವುದನ್ನರಿತೆನು. ಅಹೋ ಅಣ್ಣಯ್ಯ ಈ ಅಜ್ಞಾನ ಕಾರ‌್ಯಕ್ಕೆ ಧಾವ ಉಪಾಯವನ್ನು ಎಸಗಬೇಕು. ಅಪ್ಪಣೆ ಕೊಡಿಸಬೇಕೈ ಅಣ್ಣಾ ಕರುಣಾಗ್ರಗಣ್ಯ॥

ದರುವು

ಬಿಡದೀಗಪವಾದ ವೆನಗೇ  ತೊಡರಿತು ಧಾತ್ರಿಯೊಳಗೆ
ಪೊಡವೀಶ ಪೋಪುದ್ಯಾಗೆ  ಪೇಳೆನಗೆ                                    ॥3 ॥

ಅರ್ಜುನ: ಶ್ರೀಪತಿಯ ಭಕ್ತನಾದ ಭೂಪತಿ ಧರ್ಮಪುತ್ರನೇ ಕೇಳು, ಆಪತ್ತನುಸರಿಸಿದ್ದ ಪೃಥ್ವೀಸುರರ ಕಾಪಾಡುವ ಉದ್ದಿಶ್ಯ ಹದುಳ ತವಕದಿಂದ ಶರ ಚಾಪಂಗಳಂ ಕೈಗೊಳ್ಳಲಾಗಮಿಸಿ ಶ್ರೀಪತಿ ಕೃಪೆ ತಪ್ಪಿ ಸತಿ ಸಹಿತ ಭೂಪತಿಯಾದ ನಿಮ್ಮನ್ನು ಕಂಡದ್ದಾಯಿತು. ಈ ಪರಮ ಘೋರ ಪಾತಕವು ಹೇಗೆ ಪರಿಹರವಾದೀತು. ಕಪಟವಿಲ್ಲದೇ ಪೇಳಬೇಕೈ ಧರ್ಮ ಭೂಪತಿ ನೃಪತಿ.

ದರುವು

ಧರೆಯೊಳು ಕುಂಕುಮನಾ  ಪುರವಾಸನೀಗಲೆನ್ನಾ
ಪೊರೆಯುವ ಭಾಗವನ್ನಾ  ಅರಿಯೇನೋ ಮುನ್ನಾ                     ॥4 ॥

ಅರ್ಜುನ: ವರ ಸತ್ಯ ಸಂಧಾನದ ಧರ್ಮಜನೇ ಕೇಳು! ಧರೆಯೊಳು ಕುಂಕುಮನಪುರ ನರ ಕೇಸರಿಯೆನ್ನುವ ಶ್ರೀಹರಿ ಕರುಣದೊಳು ಯನ್ನ ಈ ದುರಿತವನ್ನು ಹೋಗಲಾಡಿಸಿಕೊಳ್ಳುವೆನೆಂಬ ಭರವಸೆ ಯನಗೆ ಸಾಲದು. ದೊರಕಿರುವ ಈ ದೋಷವು ಧಾವ ರೀತಿಯಿಂದ ಪರಿಹಾರವಾಗಬೇಕೈ ಅಗ್ರಜಾ – ಒರೆಯಬೇಕೈ ಧರ್ಮಜಾ॥

ಏಳು ಏಳೆನ್ನಯ ಭಾವ ಪರಿಯೋಚಿಸುವುದೇಕೆ ನರನೇ  ಸುರಪಸುತನೇ ॥ಪ ॥
ನಾರದ ಋಷಿ ಪೇಳ್ದ  ತೆರದೊಳು ಧಾತ್ರಿಯನೂ
ಭರದಿಂದ ಅನುಜ ನೀ  ಚರಿಸಲು ಬೇಕೈಯ್ಯ  ಪರಿಯೋಚಿಸು       ॥1 ॥

ಧರ್ಮರಾಯ: ಹೇ ಸಹೋದರಾ  ಪರಿಪರಿ ನೀನು ಯೋಚಿಸಲೇತಕ್ಕೆ ? ಸುರಗುರಗಳಾದ ನಾರದರ ಅನುಜ್ಞೆಯಂತೆ ವರುಷ ವಂದರ ಪರಿಯಂತರಕ್ಕು ಭೂ ಪ್ರದಕ್ಷಿಣೆಗೈದದ್ದಾದರೇ ಈ ದುರಿತ ಪರಿಹಾರವಾಗುವುದಪ್ಪಾ ತಮ್ಮಾ ನರಹರಿ ಸಲಹುವನಮ್ಮಾ ॥

ದರುವು

ಬಿಡು ಯೋಚನೆ ನೀನು  ದೃಢಮನದೊಳು ತಮ್ಮಾ
ಜಲಜಾಕ್ಷ ಮುರಹರಿಯು  ಕಡೆಹಾಯ್ಸುವನಮ್ಮಾ ಪರಿಯೋಚಿಸು ॥2 ॥

ಧರ್ಮರಾಯ: ಅಪ್ಪಾ ಕಡುಗಲಿ ಶೂರನಾದ ವಿಜಯ-ಧನಂಜಯ ಕಡು ದುರಿತಕ್ಕೆ ಒಳಗಾದೆನೆಂದು ಮನದೊಳು ನೀನು ಸಂಶಯಪಡಲಾಗದು. ಜಡಜಾಯತಾಕ್ಷನಾದ ಶ್ರೀಹರಿಯು ಕಡೆ ಹಾಯಿಸುವನಪ್ಪಾ ಪಾರ್ಥ ನೀನು ಸಂಶಯ ಪಡುವುದು ನಿರರ್ಥ ॥

ದರುವು

ಧರೆಯು ಶ್ರೀ ಕುಂಕಮ  ಪುರದ ನರಕೇಸರಿಯೂ
ಪೊರೆಯುವನನವರತ  ಮರುಗದಿರೈಯ್ಯ ಪರಿಯೋಚಿಸು         ॥3 ॥

ಧರ್ಮರಾಯ: ಹೇ ಜಂಭಾರಿ ಪುತ್ರನಾದ ಧನಂಜಯನೇ ಕೇಳು ಕುಂಭಿಣಿಗಧಿಕ ಕುಂಕುಮ ನಗರವನ್ನು ಗಂಭೀರದಿಂ ಪೊರೆಯುತ್ತಿರುವ ಶಂಬರಾರಿ ಪಿತ ಅಂಬುಜನಾಭ ಲಕ್ಷ್ಮೀನೃಸಿಂಗನೆನ್ನುವ ಶ್ರೀಕೃಷ್ಣನು ಬೆಂಬಿಡದೆ ನಮ್ಮನ್ನು ಪೊರೆಯುವನಪ್ಪಾ ತಮ್ಮಾ – ರಕ್ಷಿಸುವಾತನೇನಮ್ಮಾ ॥

ಅರ್ಜುನ: ಹೇ ಧರ್ಮ ಪಯೋನಿಧೇ – ದಯಾನಿಧೇ  ಹಿರಿಯರಾದ ತಮ್ಮ ಆಶೀರ್ವಾದದಂತೆ ಧರೆಯೊಳಗಿರುವ ಸರ್ವತೀರ್ಥಂಗಳಲ್ಲಿ ಮಿಂದು ದುರಿತಹರಮಾದ ಸುಕ್ಷೇತ್ರ ಭೂಮಿಗಳಂ ಚರಿಸಿಕೊಂಡು ಬರಲು ಪೋಗಿ ಬರುತ್ತೇನೈ ಅಗ್ರಜಾ ದಂಡಧರಾತ್ಮಜಾ ॥

ಧರ್ಮರಾಯ: ಪೋಗಿ ಬರಬಹುದೈಯ್ಯ ಧನಂಜಯಾ ನಿನಗಾಗಲಿ ಶುಭೋದಯ ॥

ಭೀಮಸೇನ: ಹೋಗಿಬರಬಹುದೈಯ್ಯ ವಿಜಯ ಧನಂಜಯಾ ॥

ಭಾಗವತರ ಕಂದ

ನರನಿಂದ್ರಪ್ರಸ್ತ ಪುರಮಂ
ಭರದಿ ನೆರೆ ದಾಂಟಿ ಸಕಲ ಪುಣ್ಯಾಶ್ರಮಂಗಳಾ
ಚರಿಸಲೊಂದು ಗಂಗಾ
ವರತಡಿಯೋಳ್ ಕುಳಿತು ಹರಿಯ ಸ್ಮರಿಸುತಲಿದ್ದನೂ ॥

ಭಾಗವತರು: ಈ ಪ್ರಕಾರವಾಗಿ ಅರ್ಜುನನು ನಾರದಮುನಿ ವಚನದಂತೆ ಧರ್ಮಜನ ಆಶೀರ್ವಾದವಂ ಪಡೆದು ಒಂದು ವರ್ಷ ಪರ‌್ಯಂತರ ಸುಕ್ಷೇತ್ರ ಭೂಮಿಗಳಂ ಚರಿಸಿಕೊಂಡು ಬರಲು ಹೊರಟು, ಗಂಗಾ ತೀರದಲ್ಲಿ ಕುಳಿತು ಹರಿಸ್ಮರಣೆ ಮಾಡುತ್ತಲಿರ್ದನೈಯ್ಯ ಭಾಗವತರೇ ॥

 

(ಉಲೂಪಿ ಬರುವಿಕೆ)

ದ್ವಿಪದೆಕಾಂಬೋಧಿ ರಾಗ

ಶ್ರೀಮನೋಹರಗಾತ್ರೆ  ಕಮಲದಳನೇತ್ರೇ
ಆ ಮಹಾವಾಸುಕಿಯ ವರ ತನುಜೆಯೂ
ಕಾಮಿನೀಮಣಿ ಉಲೂಪಿ ಘನ ಠೀವಿಯಿಂದಾ
ಸರಸ ಪರಿಮಳಯುತ ಜಲಕ್ರೀಡೆಯನ್ನಾಡಿ
ವರ ಕುಸುಂಬೆ ಜರತಾರಿ ಸೀರೆಯನುಟ್ಟು
ಸುರ ಚಿರದಂಚಿನ ಕಂಚುಕವ ತಾ ತೊಟ್ಟೂ
ವರ ಲಲಾಟದಿ ಕುಂಕುಮದ ರೇಖೆಯನು ತಿದ್ದೀ
ಪರಿಪರಿಯ ಕನಕಾಭರಣಗಳನು ಧರಿಸೀ
ಕಡಗ ಕಂಕಣ ತೋಳ ಭಾಪುರಿಯನಿಟ್ಟೂ
ನಡೆವ ಪಾದದಿ ಗೆಜ್ಜೆ ಪಿಲ್ಲಿಯನಿಟ್ಟೂ
ಉಡುರಾಜಮುಖಿ ಮುಕುರ ಮೂಗುತಿಯಿಟ್ಟೂ
ಕಡು ಹರುಷದಿಂ ನಿಲುವುಗನ್ನಡಿಯ ನೋಡಿ
ಸಡಗರದೊಳು ಭಾಗೀರಥಿಯನರ್ಚಿಸಲು
ಪೊಡವಿ ಕುಂಕುಮಪುರದೊಡೆಯನೆಂದೆನಿಪಾ
ಜಲಜಾಕ್ಷ ಲಕ್ಷ್ಮೀ ನೃಸಿಂಗನ ಮನದಿ ಧ್ಯಾನಿಸುತಾ
ತಡ ಮಾಡದೆ ಬಂದು ತೆರೆಯೊಳಗೆ ನಿಂದಳೂ ॥

ತೆರೆದರುವು

ಸರಸೀಜಾ ನಯನೆ ನಾನು  ವಿರಹಾ ಸೈರಿಸಲಾರೇ
ತರುಣಿ ಮಣಿಯೆ ಯನಗೆ ತಕ್ಕ  ಪುರುಷನನ್ನು ಕರೆದು ತಾರೇ       ॥1 ॥

ನಿಲ್ಲಾದೇ, ಯನ್ನಮನವೂ  ತಲ್ಲಣಿಸುತಾ, ಇರುವುದಮ್ಮಾ
ಪಲ್ಲವ ಪಾಣಿಗೆ ತಕ್ಕ  ನಲ್ಲನಾ ವದಗಿಸಮ್ಮಾ                           ॥2 ॥

ಧರಣಿಶ್ರೀ ಕುಂಕುಮಾನ  ಪುರದ ನೃಸಿಂಗನಾಣೆ
ತರುಣಿ ಈ ಮೌಕ್ತಿಕದಾ  ಸರವ ನಿನಗೆ ಕೊಡುವೆ ಕಾಣೆ               ॥3 ॥

ಉಲೂಪಿ: ಅಪ್ಪಾ! ಸಾರಥೀ! ಯಮ್ಮ ಸಮ್ಮುಖದಲ್ಲಿ ಬಂದು ನಿಂದು ಯಮ್ಮನ್ನು ಧಾವಲೋಕದ ಸ್ತ್ರೀಯರೆಂದು ಸುಮ್ಮನದಿಂ ಕೇಳಿದೆಯಲ್ಲವೇ. ಆದರೆ ಯಮ್ಮಯ ವೃತ್ತಾಂತವನ್ನು ಬಿತ್ತರಿಸುತ್ತೇನೆ ಚಿತ್ತವಿಟ್ಟು ಕೇಳಪ್ಪಾ ಚರನೇ ಮಾನವಕುಲ ರನ್ನನೇ ॥ಅಪ್ಪಾ ಸಾರಥೀ! ಅತಲ, ವಿತಲ, ಸುತಲ ತಲಾತಲ ರಸಾತಲ ಮೊದಲಾದ ಲೋಕಂಗಳೋಳ್ ಮಹಾ ಶ್ರೇಷ್ಠಮಾದ ಪಾತಾಳ ಲೋಕದೋಳ್ ಫಣಿಗಳಿಗೆ ಶ್ರೇಷ್ಠನಾದ ರಾಜ, ವಾಸುಕೇಂದ್ರನಾದ ಆದಿಶೇಷನ ಮುದ್ದು ಕುಮಾರಿ, ಕಲಕಂಠಹಾರಿ, ಚಿತ್ತಜ ಮನೋಹಾರಿ, ಉಲೂಪಿಯೆಂಬ ನಾಮಾಂಕಿತವಲ್ಲವೇನಪ್ಪಾ ಸಾರಥೀ ॥ಅಪ್ಪಾ ಸಾರಥೀ ! ಮುಪ್ಪುರಾರಿಯ ರಾಣಿಯಾದ ಭಾಗೀರಥಿಯ ವಪ್ಪದಿಂದರ್ಚಿಸಬೇಕಾದ್ದರಿಂದ ಸಕಲ ವಸ್ತುಗಳೊದಗಿಸಿಕೊಂಡು ಸುನೇತ್ರೆಯೆಂಬ ಸಖಿಯಳೊಡಗೂಡಿ ಬಾಹೋಣವಾಯ್ತು, ಈಗ ಯನ್ನ ಸಖಿಯು ಧಾವಲ್ಲಿರುವಳೋ ತೋರಿಸಪ್ಪಾ ಸಾರಥೀ॥

ಸುನೇತ್ರೆ: ನಮೋನ್ನಮೋ ಹೇ ತಾಯೇ ಬಾಲಾರ್ಕ ಛಾಯೇ ॥

ಉಲೂಪಿ: ಸೌಮಂಗಲ್ಯಾಭಿವೃದ್ಧಿರಸ್ತು ಬಾರಮ್ಮಾ ಸುನೇತ್ರೇ ಸೌಂದರ‌್ಯಗಾತ್ರೇ ॥

ಸುನೇತ್ರೆ: ಯನ್ನಿಂದಾಗಬಹುದಾದ ಕಾರ‌್ಯಾರ್ಥವೇನಿದ್ದರೂ ಅರುಹಬೇಕಮ್ಮಾ ತಾಯೇ ಹಿಮಾಂಶು ಮುಖಛಾಯೇ ॥

ಉಲೂಪಿ: ಅಮ್ಮಾ ಸಾರಸಾಕ್ಷಿಯಾದ ಸುನೇತ್ರೆಯೇ ಕೇಳು. ಚಾರುತರಮಾದ ಈ ಶರಧಿಯ ತಡಿಯೋಳ್ ಬಂದು ಕುಳಿತಿರುವ ಮಾರ ಸುಂದರನಾದ ಈ ಧೀರಪುರುಷನು ಧಾರೋ ಅರಿಯೆನು. ಭೋರನೆ ತೆರಳಿ ವಿಚಾರ ಮಾಡಿಕೊಂಡು ಬಾರಮ್ಮಾ ಸಖಿಯೇ ವರ ಚಂದ್ರಮುಖಿಯೇ ॥

ಸುನೇತ್ರೆ: ಅದೇ ಪ್ರಕಾರ ಹೋಗಿ ನೋಡಿಕೊಂಡು ಬರುವೆನಮ್ಮಾ ನಾಗಪುತ್ರಿ ಚಾರು ಚರಿತ್ರೀ ॥

ದರುವು

ಧರಣೀಶ ಕೇಳೈಯ್ಯ  ಧರಣಿಯು ಧಾವುದೈಯ್ಯ ॥
ಪರಿಯ ಪೇಳೆನಗೆ ದೊರೆಯೇ ॥
ವರ ಜಲಧಿ ತಡಿಗೆ ನೀ  ಬರಲೇನು ಕಾರ‌್ಯವೋ
ಮರೆ ಮಾಜದೆಲ್ಲವನು ಪೇಳಿ  ಮನದೀ
ಹರುಷವಾ ತಾಳೀ                                                             ॥1 ॥

ಸುನೇತ್ರೆ: ಹೇ ರಾಜಶ್ರೇಷ್ಠನೇ, ನೀನು ಧಾರು ? ನಿನ್ನ ಪುರವು ಯಾವುದು ? ನಿನ್ನ ನಾಮಾಭಿಧಾನವೇನು? ಸಕಲ ದುರಿತಹರಮಾದ ಈ ಗಂಗಾಂಬಿಕೆಯ ತಡಿಯಲ್ಲಿ ಕುಳಿತಿರುವ ಕಾರಣವೇನು ? ಮರೆಮಾಜದೆ ನಿಮ್ಮ ಪರಿಯನೆಲ್ಲವನು ಒರೆಯಬೇಕೈ ಕ್ಷಿತಿಪತಿ ವರ ರೂಪಿನೋಳ್ ನೀನೇ ಸರಿ ಶ್ರೀಪತಿ ॥

ದರುವು

ತರಳಾಕ್ಷಿ ಕೇಳೆ ನಾನು  ಹರಿ ಚರಣ ಸೇವಕನೂ
ಧುರದೊಳು ಶತೃಹರನೂ  ಅರ್ಜುನನೂ                                ॥1 ॥

ಅರ್ಜುನ: ಹೇ ತರಳಾಕ್ಷಿಯೇ ಕೇಳು! ಈ ಧರಣಿಯೋಳ್ ರಾರಾಜಿಸುತ್ತಾ ಮೆರೆಯುತ್ತಿರುವ ಪುರ ಹಸ್ತಿನಾವತಿಯನ್ನು ಪ್ರೇಮದಿಂದ ಪರಿಪಾಲಿಸಿದ ಕರುಣಾಕರಮೂರ್ತಿ ಪಾಂಡು ಮಹಾರಾಯರ ತನುಜ ಧರ್ಮರಾಯರ ಅನುಜ ಭೂಭುಜ ಲಲಾಮ ಪಾರ್ಥ ತ್ರಿಲೋಕ ಸಮರ್ಥನೆಂದು ತಿಳಿಯೇ ನಾರಿ ಮದನ ವೈಯ್ಯರಿ ॥

ಸುನೇತ್ರೆ: ಅಪ್ಪಾ ಸಾರಥೀ! ಈ ಪರಮ ಪಾವನವಾದ ಜಲಧಿಯ ತಡಿಯಲ್ಲಿ ಕುಳಿತಿರುವ ಮಾರ ಸನ್ನಿಭನಾದ ಈ ಪುರುಷನನ್ನು ಸರಸತರ ಕುಂಕುಮಪುರಿ ನರಸಿಂಹಮೂರ್ತಿಯು ದೊರಕಿಸಿ ಕೊಟ್ಟಿರುವನು. ಈ ದೊರೆಯು ತರಳಾಕ್ಷಿಯಾದ ಉಲೂಪಿಗೆ ತಕ್ಕ ವರನಾಗಿರುವನು. ಈ ವಾರ್ತೆಯನ್ನು ನಾಗಪುತ್ರಿಗೆ ತ್ವರಿತದಿಂದ ಪೋಗಿ ಅರುಹುವೆನಪ್ಪಾ ಚಾರಕಾ ದ್ವಾರಪಾಲಕಾ॥

ಅಮ್ಮಾ ಉರಗ ಕುಮಾರಿ  ವರ ಸರಸಿಯ ತಡಿಯೋಳ್ ಸ್ಮರನಂತೆ ರಾರಾಜಿಸುತ್ತಾ ಕುಳಿತಿರುವಾತನು ವರಪಾಂಡು ಮಧ್ಯಮನಾದ ದೊರೆ ಪಾರ್ಥರಾಜನೀತನೇ ನೋಡಬಹುದಮ್ಮಾ ನಾರಿ ಉರಗ ಕುಮಾರಿ ॥

 

(ಅರ್ಜುನನ ಬಳಿಗೆ ಉಲೂಪಿ ಬರುವಿಕೆ)

ದರುವು

ದೊರೆಯೇ ಲಾಲಿಸು  ಯನ್ನೋಳ್
ಬೆರೆದು ಪೋಗಿ ನೀಂ ॥ಪ ॥
ಸ್ಮರನ ತೆರದಿ ಇಲ್ಲಿ ಕುಳಿತು
ಇರುವ ಕಾರ‌್ಯವೇನು ? ಅರಸೇ
ಕರುಣವಿಟ್ಟು ಯನ್ನೊಳೀಗಾ
ವರೆಯಬೇಕು ಮನದ ವಿವರಾ

ಸುನೇತ್ರೆ: ಆಹಾ ! ವರ ರೂಪಿನೋಳ್ ಸ್ಮರನನ್ನು ಜರಿಯುತ್ತಿರುವ ದೊರೆ ಪಾರ್ಥರಾಜನೇ ಲಾಲಿಸು. ಪರಮ ಪಾವನಮಾದ ಪುರಹರನರಸಿಯ ತಡಿಯೋಳ್ ಸರಸದಿಂ ಕುಳಿತಿರುವ ಪರಿಯಾಯವೇನು? ಕರುಣವಿಟ್ಟು ಒರೆಯಬೇಕೈ ರಾಜ ವಾಸವಾತ್ಮಜಾ ॥

ದರುವು

ಭೂಮಿ ಪಾಲ ನಿನ್ನೊಳೀಗಾ
ಪ್ರೇಮದಿಂದ ಮನವು ಸಿಲುಕಿ ॥
ಕಾಮಬಾಧೆಯಿಂದ ನಾನು
ನೇಮದಿಂದ ಬೇಡಿಕೊಂಬೆ

ಉಲೂಪಿ: ಸೋಮಕುಲ ತಿಲಕನಾದ ಹೇ ಭೂಮೀಶನೇ! ಕಾಮಜ್ವರ ಪೀಡಿತಳಾದ ಯನಗೆ ನೀ ಮುದದೋಳ್ ಔಷಧವಿತ್ತು ಈ ಮದನಜಾಡ್ಯವಂ ಪರಿಹರಿಸಿ ಕಾಮಿನಿಯಾದೆನ್ನ ಅಧರಾಮೃತ ಪಾನವಂ ಗೈದು ನೀ ಮಮತೆಯಿಟ್ಟು ಸಂತೋಷಪಡಿಸೋ ರಾಜ ಕಮಲ ಸಖತೇಜ ॥

ದರುವು

ಪೊಡವಿ ಕುಂಕುಮಾನ ಪುರದ
ಒಡೆಯ ನಾರಸಿಂಹ ಮೂರ್ತಿ
ಅಡಿಗಳಾಣೆ ಯನ್ನ ವಚನ
ನಡೆಸೋ ನಿನಗೆ ವಂದಿಸುವೆನು ದೊರೆಯೇ

ಉಲೂಪಿ: ಸ್ವಾಮೀ! ಹಿಮಕರ ಕುಲಾಬ್ಧಿ ಚಂದಿರನಾದ ಫಲುಗುಣರಾಜನೇ, ನಿಮಗೆ ವಂದಿಸುವೆನು. ಸುಮನಸರಾಂಗಿಯಾದೆನ್ನ ವಿಮಲಕರ ಮಧುರೋಕ್ತಿಗಳ್ ಲಾಲಿಸಿ. ಅಮರಪುರಕ್ಕೆಣೆಯೆನಿಪ ಕುಂಕುಮಪುರ ನಿವಾಸ ಸುಮನೋಹರುಷಮಾಗ ಕಮಲಾಂಬಕನಾದ ಲಕ್ಷ್ಮೀರಮಣನ ದಯದಿಂದ ಅಮಿತ ಕರುಣವಿಟ್ಟು ಯನ್ನ ವರಿಸಿದ್ದಾದರೆ ಮಮ ಜನಕನಿರುವ ನಾಗಲೋಕಕ್ಕೆ ಕರೆದೊಯ್ದು ಕ್ರಮದಿಂದ ಪರಿಣಯವಾಗುವೆನೈ ದೊರೆಯೇ ಕರುಣ ವಾರಿಧಿಯೇ ॥

ಅರ್ಜುನ: ಎಲೈ ಚಂದಿರವದನೆಯೇ ಕೇಳು. ಆತ್ಮಬುದ್ಧಿ ಸುಖಂ ಚೈವ ಗುರು ಬುದ್ಧಿ ವಿಶೇಷತಃ ಪರಬುದ್ಧಿ ವಿನಾಶಾಯ ಸ್ತ್ರೀ ಬುದ್ಧಿ ಪ್ರಳಯಾಂತಕಃ ॥ಎಂಬ ರೀತಿಯಾಗಿ ಎಲೈ ತರುಣಿ ತನ್ನ ಆತ್ಮದಲ್ಲಿ ಹುಟ್ಟಿದ ಬುದ್ಧಿಯು ಸುಖವಾಗಿರುವುದು. ಗುರು ಹೇಳಿದ ಬುದ್ಧಿಯ ಮಾತು ವಿಶೇಷವಾಗಿರು ವುದು, ಪರರು ಹೇಳಿದ ಬುದ್ಧಿಯು ನಾಶವಾಗುವುದು, ಸ್ತ್ರೀಯರ ಮಾತು ಕೇಳಿದರೆ ಅನರ್ಥಕ್ಕೆ ಕಾರಣವಾಗಿ ನಾಳೆ ಬರುವ ಕಲಹ ಈಗಲೇ ಬರುವುದಾದ್ದರಿಂದ ! ಎಲೈ ಮಂದಗಮನೇ ಒಂದು ವರುಷ ಭೂ ಪ್ರದಕ್ಷಿಣೆಗೈಯಬೇಕೆಂಬ ಸಂಕಲ್ಪವಿರೋಣವಾದ್ದರಿಂದ ಆ ಪರಿಯಂತರವೂ ಪರಸ್ತ್ರೀಯರಲ್ಲಿ ಬೆರೆಯುವ ಪದ್ಧತಿ ಇಲ್ಲವಾದ್ದರಿಂದ ಖಂಡಿತವಾಗಿ ನಾನು ನಿನ್ನ ಮಂದಿರಕ್ಕೆ ಬರುವುದಿಲ್ಲ. ಕುಂದ ಶರನ ಕೇಳಿಗೆ ಬಾರೆಂದು ಕರೆಯುವುದು ಬಿಟ್ಟು ಬಂದ ಪಥವಿಡಿದು ತೆರಳುವುದು ಚಂದವಾಗಿ ತೋರುವುದೇ ನಾರಿ ಕಲ ಕಂಠಹಾರಿ ॥

ಉಲೂಪಿ: ಅಮ್ಮಾ ! ವನಜದಳ ನೇತ್ರೆಯಾದ ಸುನೇತ್ರೆ! ಜನಪಾಲನಾದ ಧನಂಜಯನು ಯನಗೊಳಗಾಗದೆ ಇರುವುದೇನು ವಿಚಿತ್ರ, ಮನಸಿಜನ ತಾಪದಿಂದ ತರಹರಿಸುವುದೆನ್ನ
ಗಾತ್ರ. ನೀನನುವರಿತು ಪೇಳೆನಗಿದರ ಸೂತ್ರ, ಅನುನಯಗಳಿಂದಿವನ ಮಾಯತನದಿಂದ ಮನೆಗೆಳದೊಯ್ದು ತನು ಮನಗಳೊಪ್ಪಿಸಿ ಇನಿಯನಂ ಮಾಡಿಕೊಳ್ಳದೇ ಬಿಡಲಾಗದು ಸುನೇತ್ರೇ-ಸುಂದರಗಾತ್ರೇ ॥

ಸುನೇತ್ರೆ: ಅಮ್ಮಾ! ಮದನ ಮೋಹಿನಿ ವಿಧವರಿತು ಚದುರ ಚಮತ್ಕೃತಿಯಿಂದ ಚದುರನಾದಿವನ ಸದನಕ್ಕೆಳದೊಯ್ದು ಮದನ ಕೇಳಿಯೋಳ್ ಮುದ ಹೊಂದಬಹುದಮ್ಮಾ ನಾರೀ ಫಣಿರಾಜ
ಕುಮಾರಿ॥

 

(ಉಲೂಪಿಯು ಪಾರ್ಥನನ್ನು ಮಾಯದಿಂ ಕರೆದೊಯ್ಯುವಿಕೆ)

ಭಾಗವತರ ಕಂದ

ಹರಿಚರಣವ ಸ್ಮರಿಸುತಾಗಲ್
ವರ ಜಲಧಿಯ ತಡಿಯೋಳ್ ಇದ್ದ ನರನಂ ಕಂಡು ॥
ಪರಿ ಮೋಹಿಸಿ ಉಲೂಪಿ ಮಾಯದಿ
ಕರೆದೊಯ್ದಳು ನಾಗಲೋಕಕೆ ಭರದೋಳ್ ॥

ಭಾಗವತರು: ಈ ಪ್ರಕಾರವಾಗಿ ಉಲೂಪಿಯು ತನಗೆ ಒಲಿಯದಿರ್ದ ಪಾರ್ಥನನ್ನು ಕಂಡು ಮೋಹ ಪರವಶಳಾಗಿ ತನ್ನ ಮಾಯಾಶಕ್ತಿಯಿಂದ ಆತನನ್ನು ನಾಗಲೋಕಕ್ಕೆ ಕರೆದೊಯ್ದು ಇಂತೆಂದಳೈಯ್ಯ ಭಾಗವತರೇ ॥

ಉಲೂಪಿ: ಅಮ್ಮಾ ವೃತ್ತಕುಚೆ ! ಬಿಸಿಲಿನ ತಾಪದಿಂದ ಬಸವಳಿದ ಚಕೋರ ಪಕ್ಷಿಗೆ ಶಶಿಕಿರಣಗಳಿತ್ತು ಬದುಕಿಸಿದಂತೆ, ಯನಗುಂಟಾಗಿರುವ ಮನಸಿಜನ ತಾಪವನ್ನು ಬಿಡಿಸಲು ಬಂದ ಈ ರಮಣನು ಯನ್ನ ಕೈಸೇರಿದನಮ್ಮಾ ತರುಣೀ ಫಣಿವೇಣಿ॥

ಸುನೇತ್ರೆ: ಹ್ಯಾಗಾದರೂ ನಿನ್ನ ಅದೃಷ್ಠ ವಳಿತಾಗಿರುವುದಮ್ಮಾ ನಾಗಪುತ್ರಿ ಸೌಂದರ‌್ಯಗಾತ್ರಿ ॥

ಸ್ತೋತ್ರ

ಹರಿ ಹರೀ ಕೃಷ್ಣ ವಾಸುದೇವ ಜನಾರ್ಧನ
ಮುಕುಂದ ಮಾಧವ  ಸಾನಂದ ಗೋವಿಂದ
ದೇವಾಧಿದೇವ ಮದುಸೂಧನ ಯಾದವ
ಕುಲಾಗ್ರಗಣ್ಯ, ದಾಶರಥೇ, ಕರುಣಾಪಯೋ
ನಿಧೇ  ಇಂದಿರೇಶ ಅಘವಿನಾಶ ಭವಬಂಧ
ಖಂಡನ ಭಕ್ತಜನಪಾಲ ಯನ್ನಂ ರಕ್ಷಿಸೋ
ದೀನ ಶರಣ್ಯ ವೈಕುಂಠ ನಾರಾಯಣ
ಮುರ ಮರ್ಧನ, ಪಕ್ಷಿವಾಹನ ಕಮಲನಯನ
ರಾಮ ಲಕ್ಷ್ಮೀರಮಣ ಭಕ್ತವತ್ಸಲ
ಕೃಪಾಕರ ಮಹಾಭಯ ನಿವಾರಣ
ನೃಸಿಂಹ ನಮಸ್ತೇ ನಮಸ್ತೇ ನಮಸ್ತೇ ನ್ನಮಃ ॥

ದರುವುಜಂಪೆ

ಹರಿಮುಕುಂದನೇ ದೇವಾ  ಶರಣು ಜನರನು ಪೊರೆವಾ
ಪರಮಾ ಪುರುಷನೇ ಯನ್ನ  ಸಲಹೋ ಹೇ ಶ್ರೀಶಾ ಸರ್ವೇಶಾ    ॥1 ॥

ಧರೆಯಾ ತ್ಯಜಿಸುತ ಈಗ  ಉರಗಲೋಕಕೆ ಬೇಗ
ತೆರಳೀ ಬಂದೆನು ಯಾಕೆ  ಪೊರೆಯೋ ನರಹರಿಯೇ ಮುರಹರಿಯೇ ॥2 ॥

ಅರ್ಜುನ: ಹೇ ವಾಸುದೇವಾ ! ವೈಕುಂಠ ಪುರಾಧಿಪ. ಈ ಸಮಯದಲ್ಲಿ ನಿನ್ನ ಕೃಪೆ ತಪ್ಪಿದ ಕಾರಣ ಮೋಸಗತಿಯಿಂದ ಈ ವಾಸುಕೀ ಪಟ್ಟಣಕ್ಕೆ ಬಂದಿಹೆನೆಲ್ಲೋ ಶ್ರೀಹರಿ – ಮುಂದೇನು ದಾರಿ ॥

ದರುವು

ಜಲಧೀ ತಡಿಯೊಳು ನಾನು  ಸುಲಲಿತದಿ ಕುಳಿತಿರಲು
ಲಲನೇ ಯನ್ನನು ಮೋಸ ಗೊಳಿಸಿ ಬಂದಿಹಳೂ ತಂದಿಹಳೂ     ॥3 ॥

ಅರ್ಜುನ: ಹೇ ಜಲಜನಾಭ! ಹಲವು ದುರಿತಗಳ ತೊಲಗಿಸುವ ಸಲ್ಲಲಿತದೊಡೆಯನೇ ಸುಲಲಿತದಿಂ ನಾನು ಕುಳಿತಿರುವುದಂ ನೋಡಿ ಲಲಿತಾಂಗಿಯಾದಿವಳು ಯನ್ನ ಚೆಲುವಿಕೆಗೆ ಸಲೆ ಮೋಹಿಸಿ ಬಲು ಕುಟಿಲಗಳಂ ಅಣಿದು, ನೆಲೆ ತಪ್ಪಿಸಿ ತನ್ನ ನಿಲಯಕ್ಕೆ ಕರೆತಂದಳಲ್ಲೋ ಶೌರೀ-ದುರಿತಾಪಹಾರೀ

ದರುವು

ಧರಣಿ ಕುಂಕುಮಪುರದ  ವರದ ನೃಸಿಂಗನೇ
ಭರದಿ ಯನ್ನನು ಕಾಯೋ  ಗರುಡ ವಾಹನನೇ ಸಿರಿವರನೇ        ॥4 ॥

ಅರ್ಜುನ: ಹೇ ಪರಮಾತ್ಮ! ಮುರಹರನಾದ ಗರುಡಧ್ವಜನೇ ಧರಣಿಯ ಮಧ್ಯದಲ್ಲೊಪ್ಪುವ ಸರಸತರ ಕುಂಕುಮನ ಪುರವರ ಸಿರಿ ಮನೋಹರನಾದ ನರಸಿಂಹಮೂರ್ತಿಯೇ  ನಿರುತವು ನಿಮ್ಮ ಚರಣ ಸೇವಕನಾದೆನಗೆ ದೊರಕಿರುವ ಈ ಕೊರತೆಯನ್ನು ಪರಿಹರಿಸಿ ಪೊರೆಯಬೇಕೈ ಮುಕುಂದನೇ – ದೇವಕೀ ಕಂದನೇ ॥

ದರುವು

ಬಾರೋ ಸುಂದರಾ  ಸುಖವ
ತೋರೋ ಚಂದಿರಾ ರಮಣಾ                                              ॥1 ॥
ಮಾರನು ಬಾಧಿಸುವನು
ಸೈರಿಸಲಾರೆ ನಾನು
ಧೀರನೇ ಪರಿಹರಿಸೋ
ಮಾರ ಸುಂದರಾ  ನಲ್ಲಾ                                          ॥1 ॥

ಉಲೂಪಿ: ಕ್ಷೋಣೀಶರೋಳ್ ತ್ರಾಣಗಾರನಾದ ಜಾಣ ಪಾರ್ಥನೇ ಕೇಳು ! ಸ್ಥಾಣುವಿನ ವೈರಿಯಾದ ಮನ್ಮಥನು ಬಾಣಗಳಂ ಪಾಣಿಯೋಳ್ ಪಿಡಿದು ತೂರ್ಣದಿಂದೆನ್ನ ಹೃದಯಕ್ಕೆ ಕೈಸಾರ್ದು ತ್ರಾಣಗುಂದಿಸುವನಾದ ಕಾರಣ ಯನ್ನ ಪ್ರಾಣವನ್ನುದ್ಧರಿಸಬೇಕೋ ಪ್ರಿಯಾ – ಅರ್ಜುನರಾಯಾ ॥