ಹನ್ನೆಯ್ವರ ಸೀನಾ ಸೆಣ್ಣವಳು ಸೂಭದ್ರೆ
ಮತ್ತೆ ಮಂಗಿಲಕೆ ನೆರದಾಳೆ |ಳ್| ಂದ್ ಮಾದೇವಿ
ಹೂಂವ್ಗೀನ ಚಬ್ಬೀ ತಡದಾಳೆ | ಮಾದೇವಿ
ಮಾಳಗ್ಗಿಂದೆರಗೇ ಬರೋವಾಳೆ | ಮಾದೇವಿ
ರಾಜಂಗ್ಳ ಮೆಟ್ಟಾ ಇಳೀದಾಳೆ | ಮಾದೇವಿ   
ರಾಜೂ ಬಿದಿಗಾಗೇ ನೆಡೂದಾಳೆ | ಮಾದೇವಿ
ಹೂಂಗೀ ನಕ್ಕಲಗೇ ನೆಡದಾಳೆ | ಮಾದೇವಿ
ಹೂಗೀನಕ್ಲ್ ಬೇಲಿ ತೆಗದಾಳೆ | ಮಾದೇವಿ
ಹೂಂಗೀನಕ್ಲೊಳಗೇ ನೆಡದಾಳೆ | ಮಾದೇವಿ
ಎಳಿಯಾ ಸಿಂಗರವಾ ಒಗದಾಳೆ | ಮಾದೇವಿ
ಹೂಂಗಂಬು ಹೂಂಗೆಲ್ಲಾ ಕೊಯೀದಾಳೆ

ಹೂಂಗಂಬು ಹೂಂಗೆಲ್ಲಾ ಕೊಯ್ದೀದಂಡೀ ಕಟ್ಟೀ
ಹೂಂಗ್ನ ಚಬ್ಬೀಲೇ ಮಡೂಗಾಳೆ | ಮಾದೇವಿ
ಹೂಂಗ್ನಕ್ಕಲೆರಗೇ ಬರೋವಾಳೆ | ಮಾದೇವಿ
ಬಂದೀ ರಾಜಂಗ್ಳಾ ನೆಗದತ್ತೀ | ಮಾದೇವಿ
ಮೊಳೂಗೀ ಒಳಗೇ ನೆಡದಾಳೆ | ಮಾದೇವಿ
ಹೂಂಗೀನಾ ಚಬ್ಬೀ ಮಡಗಾಳೆ | ಮಾದೇವಿ
ಸಿಕ್ಕದಾ ಕಣ್ಣಾ ಸೆಡೂಲೀಸಿ | ಮಾದೇವಿ
ನೆತ್ತೀ ತುಂಬೆಣ್ಣೀ ಎರದಾಳೆ | ಮಾದೇವಿ

ಬಣ್ಣದ ಬಾಚಣಗೀ ಬಲಗಯ್ಲಿ | ತಡಕಂಡೇ
ಮಾಳಗ್ಗಿಂದೆರಗೇ ಬರೋವಾಳೆ | ಮಾದೇವಿ
ತೂಗು ಮಂಚದಲೇ ಕುಳತಾಳೆ | ಮಾದೇವಿ
ಕೆನ್ನೀಯಾ ನೆಗ್ರಾ ಎಡ್ಕೊತ್ತೇ ಬಲ್ಕೊತ್ತೇ
ಬಲ್ಲಾ ಳಾರಂಬಾ ಬಗತಲೆ| ತೆಗದಿನ್ನೇ

ಇಕ್ಕೀ ಕಟ್ಟಿದಳೇ ಸೆರುಮಂಡಿಯೇ | ಮಾದೇವಿ
ಎಳಿಯಾ ಸಿಂಗರವಾ ಮುಡೀದಾಳೇ | ಮಾದೇವಿ
ಹೂಂಗಂಬು ಹೂಂಗೆಲ್ಲಾ ಮುಡಿದಾಳೇ | ಮಾದೇವಿ
ಕೂತಾ ಮಂಚವ ಜಡದೆದ್ದೇ | ಮಾದೇವಿ
ಮಾಳೂಗೀ ಒಳಗೆ ನೆಡದಾಳೆ | ಮಾದೇವಿ
ಬಣ್ಣದ ಬಾಚಣಗೀ ಮಡೂಗಾಳೇ | ಮಾದೇವಿ

ಅಟ್ಟತ್ತೀ ಪೆಟ್ಟುಗಿಯಾ ತೆಗದಾಳೇ | ಮಾದೇವಿ
ಪೆಟ್ಟೂಗೀ ಬೀಗವಾ ಕರೀದಾಳೆ | ಮಾದೇವಿ  
ತನ್ನಾ ಪಟ್ಟೀಯಾ ನೆರದುಟ್ಟೇ | ಮಾದೇವಿ
ತನ್ನಾ ಚಿನ್ನೆಲ್ಲಾ ಕೆಮೀದುಂಬೇ | ಮಾದೇವಿ
ನೊಸಲಿಗೆ ಸಿರಿಗಂದಾ ಇಡೋವಾಳೆ | ಮಾದೇವಿ

ಹಸ್ತಕಡ್ಗ್  ಜೋಡೆಯ್ಡಾ ಮಡಲಲ್ಲೇ |ಲೀ| ಟ್ಟೀ ಗಂಡೆ
ಪೆಟ್ಟೂಗೀ ಬಾಯಲ್ಲೆ ಮಡೂಗದೆ | ಮಾದೇವಿ
ಮಾಳಗ್ಗಂದೆರಗೇ ಬರೋವಾಳೆ | ಮಾದೇವಿ
ರಾಜಂಗ್ಳ ಮೆಟ್ಟಾ ಇಳೀದಾಳೆ | ಮಾದೇವಿ
ರಾಜ ಬದಿಗಾಗೇ ನೆಡದಾಳೇ | ಮಾದೇವಿ
ಅತ್ತಗೀ ಅರಮನೆಗೇ ನೆಡದಾಳೇ | ಮಾದೇವಿ
ಹೋಗಿ ಬಾಗಲ್ಲೇ ನಿಲೋವಾಳೆ

ಅತ್ತಗಬರುಬರವಾ ಅಟದೂರೇ ನೋಡಾಳೆ
ಮಾಳೂಗೀ ಒಳಗೇ ನೆಡದಾಳೆ| ಸೂಬದ್ರೆ
ತನ್ನಾ ಗವ್ಡೇರಾ ದೆನಿದೂರೇ
ಇಂದೂ ಕರದಮಲ್ಲ ಬಂದಾರೆ |  ಗವ್ ಡೇರು
ನಿಂದಾರೆ ಸೂಬದ್ರಿ ಬಡನಲ್ಲಿ |ಲ್| ನಿಂದೀಕಂಡೇ
“ಏನು ಕಾರಣಲೆ ಕರದೀಯೇ”

“ಕರದಂ ಕಾರ್ಯವಿಲ್ಲಾ ಕಿರಿದಂಬೆಸರಸಯ್ಯೆ
ಅತ್ತಗ್ ಬರ ಬರುವೇ ಹೊಸಪರಿ| ಗವ್ಡೀಯೋರೆ
ತಡಮಿರೆ ಚಂಬಗಲೆ ಉದಕವ.
ಪಾದಾ ತೊಳಿಯೀರೆ ಪಾವುಡದಲ್ಲುದ್ದೀರೆ

ಹೊನ್ನು ಹರಳ್ಹೋಯ್ದೇ ಸರಣನ್ನೀ | ಗವ್ಡಿಯೋರೆ
ತೂಗು ಮಂಚದಲೆ ಕುಳುವೇಳಿ ”
ಅಟ್ಟಂಬಾ ಮಾತಾ ಕೇಳಾರೆ ಗವ್ಡೀಯೋರು
ತಡದರೆ ಚಂಬಗಲೆ ಉದಕವೆ
ಪಾದಾ ತೋಳ್ದಾರೆ ಪಾವುಡದಲ್ದುದ್ದಾರೆ
ಮುತ್ತೂ ಹರಳ್ಹೋಯ್ದೇ ಸರಣಂದೀ | ಗವ್ಡೀಯೋರು
ತೂಗು ಮಂಚದಲೆ ಕುಳುವೇಳಿ.

ಇಪ್ಪತ್‌ವರ್ಸನ ಚಿಕ್ಕೋಳು ಸೂಬದ್ರೆ
ಚಿನ್ನದ ಮಣಿಮಾಡಾ ಇಳದಾಳೆ | ಸೂಬದ್ರೆ
ಮಾಳೂಗೀ ಒಳಗೆ ನೆಡದಾಳೆ.
ಆಯೊಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ

ಹಾಲಿನಲ್ಲಿ ಬೆಂದಾ ತೆನೆಸುಣ್ಣ | ತಡಕಂಡಿ
ಮಾಳಗ್ಗಿಂದೆರಗೇ ಬರೋವಾಳೆ | ಸೂಭದ್ರೆ
ಅತ್ತೂಗೀ ಒಡನೋಗೇ ನಿಲೋವಾಳೆ | ಮಾದೇವಿ
ಅತ್ತೆಗ್ಗೊಂದೀಳ್ಯಾ ಕೊಡೋವಾಳೇ
ಅತ್ತಗ್ ಕೊಟ್ಟೀಳ್ಯಾ ತಟ್ಟಾನೆ ತಡ್ದಾಳೆ
ಹಿಡಿದಾಳೆ ಬಳಿಯಾ ನಳಿತೋಳಾ | ಮಾದೇವಿ
ಇಟ್ಟಾಳೇ ಹಸ್ತ ಕಡಗವ.

“ನಾ ನಿನ್ನಣ್ಣಗೇ ವರ್ನಾಗಿ ಬಂದಿದ್ದೇ
ನೀ ನನ್ನಣ್ಣಗೆ ವರನಾಗೇ ” | ಗೂ | ಅಂದೇಳೇ
ಇಟ್ಟಳೇ ಹಸ್ತ ಕಡಗವೇ
“ಅತ್ತೂಗೀ ಹೇಳಿದ ಮಾತು ಕತ್ತಿಲಿ ಕಡದಂತೆ
ಸತ್ತೆಲಿ ಪಾಂಡವರ ಕೊಮರಾಗೆ | ಗ | ಲ್ಲದೆ
ಮಿಕ್ಕೀ ಸೆಟ್ಟುಗವ ತಡವಲಾರೆ ”

“ನಾಚೂಕಿ ಇಲ್ಲದ ಹೆಣ್ಣೆ ಆಡಿದ್ಯ ಮರುಮಾತಾ
ಈಚೆ ಕೂತೊಂದು ನೆಗೆ ಮಾಡೆ”
ಈಚೆ ಕೂತೊಂದು ಯಾತಕೆ ನೆಗೆಮಾಡ್ಲೆ
ಸಾಸಟಗಿ ತೋಳು ಹೆರಿಯಣ್ಣ|  ಕೇಳಿದರೆ
ನೆಗ್ಯಾಡ್ವೋರ್ಗೆ ಕೊಡೋವಾನೆ ”

ಅಟ್ಟಂಬಾ ಮಾತಾ ಕೇಳಾಳೆ ಮಾದೇವಿ
ಸಿಟ್ಟಿನಲ್ಲದ್ದೇ ನೆಡದಾಳೆ | ಮಾದೇವಿ
ರಾಜಂಗ್ಳ ಮೆಟ್ಟಾ ಇಳೀದಾಳೆ
ದೆವಾ ದೇವತ್ ಗೋಳು ಕೂಟಾ ಕೂಡಾಡ್ವಲ್ಲಿ
ಅಲ್ಲಿಗೆ ಮಾದೇವಿ ನೆಡದಾಳೆ | ಮಾದೇವಿ
ಹೋಗ್ತಾನೆ ಗಂಡಾಗೆ ಜರದಾಳೆ |
ಅಲ್ಲಾಗೇಟ್ ಗಂಡಾನೆ ದಂಡಾ ತಕ್ಕಂಬ್ ದೊರೆಯಿಲ್ಲ
ಸೂಬದ್ರಿ ಮಂಗಲಕೆ ನೆರದಾಳೆ

ದಂಡಾ ತಕ್ಕಂಬೋಕೆ ಬಂಡಾರ ಕಳಿಲಿಲ್ಲಾ
ಗಂಡುಳ್ಳೋರಾಕಿ ಎಳಿಯಾಲಿಲ್ಲಾ | ಮಳ್ಳೂದೇವಿ
ನೀನೋಗ್ ಮಂಗಿಲಕೆ ಅನುಮಾಡು ”
ಅಟ್ಟಂಬಾ ಮಾತಾ ಕೇಳಾಳೆ ಮಾದೇವಿ

ತನ್ನಲರುಮನಗೇ  ನೆಡದಾಳೆ | ಮಾದೇವಿ
ಮಾಳೂಗೀ ಒಳಗೆ ನೆಡದಾಳೆ | ಮಾದೇವಿ
ತನ್ನಾ ಗವಡ್ಯೋರಾ ದೆನೀದೂರೇ
ಎಂದೂ ಕರದಮಲ್ಲಾ ಬಂದಾರೆ ಗವ್ಡೀಯೋರು
ನಿಂದಾರೆ ಮಾದೇವಿ ಒಡನಲ್ಲ | ನಿಂದೀ ಕಂಡೇ
ಏನು ಕಾರಣಲೆ ಕರದೀಯೇ.

ಕರದಂಕಾರ್ಯವಿಲ್ಲ ಕಿರಿದಂಚಿಸರ ಸಯ್ಯೆ
ಸಣಿಯರಾ ಸೂಬದ್ರೀ ಮದವೀಯೇ.
ಕಿತ್ ದಲ್ಲ್ ಮಿತ್ತೀರೇ ಮಿತ್ ದಲ್  ಸಾರಸೀರೇ
ಸಾರ್ಸದಲ್ ಸೇಡೀ ಬರೀಯಾರೇ
ಗೇರ‍್ವರ್ ಗೇರೀರೇ ತಳಸ್ವರ್ ತಳ್ಸೀರೇ

ಮಿಕ್ಕದ್ದೋರುದ್ದಾ ಬಡೀಯೊರೇ | ಗವ್ಡೀಯೋರೇ
ಸಣಿಯಾರಾ ಸೂಬದ್ರೀ ಮದವೀಯೇ | ಅಂದ್ ಮಾದೇವಿ
ಕವ್ಲಿಂದ್ರ ನರಮನಗೇ ನೆಡದಾಳೆ | ನಾರ್ಣದೆವ
ಕೆದೂಗೀ ಬನವಾ ಇಳೀದಾನೆ | ನಾರ್ಣದೆವ
ಕೆದೂಗೊಂದೋಲಿ | ಒಗದಾನೆ | ನಾರ್ಣದೆವ

“ಚಂಬಗ ತುಂಬಿದ ತುಪ್ಪಾ ನಾವಯ್ವರುಂಡೀದೋ
ಇಂದೀಗೆ ಏಳೋ ದಿನದಲ್ಲಿ |ಬಾವನಕಯ್ಲೇ
ತೊಂಡಲ ಬಾಸಿಂಗಾ ಒಲದಾಡೇ |ಡ| ದಿದ್ದರೆ
ಕೂಸು ಹೊಯ್ದದೆ ಪರರೀಗೆ | ಗ| ಂದ್ ನಾರ್ಣದೆವ
ಸೆಳ್ಳುಗರೀಲೋಲೀ ಬರದಾನೆ | ನಾರ್ಣದೆವ
ತನ್ನಾ ಗಿಳಿಗೋಳಾ ದೆನಿದೂರಿ.

ಇಂದೂ ಕರದಮಲ್ಲಾ ಬಂದಾರೆ ಗಿಳಿಗೋಳು
ನಿಂದಾರೆ ನಾರ್ಣದೆವ್ನಾ ಒಡನಲ್ಲೇ |ಲ್| ನಿಂದೀಕಂಡೇ
“ಏನು ಕಾರಣಲೆ ಕರದೀಯೋ”
ಕರದಂಕಾರ್ಯವಿಲ್ಲಾ ಕಿರಿದಂಟಿಸರ ಸಯ್ಯೆ.
ಹೋಗ್ ಬನ್ನಿ ಬಾವನ ಅರಮನ್ನೇ

“ಗಿಂಡೀ ತುಂಬಿದ ತುಪ್ಪಾ ನಾವಯ್ವ ರುಂಡೀದೋ
ಇಂದೀಗೆ ಏಳೋ ದಿನದಲ್ಲಿ | ಬಾವನ ಕಯ್ಲೆ
ತೊಂಡಲ ಬಾಸಿಂಗ ಬಲದಾಡೇ | ಡಾ| ದಿದ್ದರೆ.
ಕೂಸು ಹೊಯ್ತದೆ ಪರರಿಗೆ |ಗ್| ಂದ್ ನಾರ್ಣದೆವ
ಕೊಟ್ಟಾನೆ ಕಯ್ಯಾ ಬರದೋಲೆ

ಕೊಟ್ಟಾ ವಾಲೀಯೂ ರಟ್ಟಿಯಲಡಗಸ ಗಂಡೆ
ಹಾರೀದವಂಬರಕೇ ಸೆರಿಯಾಗೆ | ಗಿಳಿಗೋಳ |
ಅರಜುಣ್ಣರ ಮನಗೇ ನೆಡದಾವೇ | ಗಿಳಿಗೋಳ
ಹೋಗಿ ಮಿಳಿಮೆನೆ ಕುಳತಾರೆ | ಗಿಳಿಗೋಳ
ಅರಗೀ ನೋಡಿದರೆ ಒಳಗೊಮ್ಮೆ | ಗಿಳಿಗೋಳ
ಆಗೊಂದು ಮಾತಾ ನುಡೀದಾರೆ

“ಮಾಳೂಗೀ ಒಳಗೆ ಹಾಲೊಗರುಂಬರಜೀಣಾ
ಕೇಳೀ ಬಾರೊಂದು ಹೊಸ ಸುದ್ದೇ| ಅಂಬುದ್ನು ಅರ್ಜಿಣ್ಣಾ
ಉಣತಾ ಕುಳತವ್ನೆ ಕುಡಗೆದ್ದೆ | ಅರಜಿಣಾ
ಮಾಳಗ್ಗಿಂದೆರಗೇ ಬರೋವಾನೇ | ಅರಜಿಣಾ
ಪನ್ನೀರಲಿ ಮೊಕವಾ ತೊಳದಾನೆ | ಅರಜಿಣಾ
ಗಿಳಿಗೋಳೋಡನೋಗೆ ನಿಲೋವಾನೆ.

ಗಿಳಿಗೋಳೊಡನೋಗೇ ನಿಲ್ವದ್ನು ಗಿಳಿಗೋಳು
ಕೊಟ್ಟಾರ ಕಯ್ಯಾ ಬರದೊಲೆ.

“ಚಂಬಗ್ ತುಂಬಿದ ತುಪ್ಪಾ ನಾವಯ್ವರುಂಡಿ | ದೊ
ಇಂದೀಗೆ ಏಳೋ ದಿನದಲ್ಲಿ |ಬಾವನ ಕಯ್ಲೆ
ಗೊಂಡೆ ಬಾಸಿಂಗಾ ಒಲದಾಡೇ |ಡ| ದಿದ್ದರೆ
ಕೂಸು ಹೊಯ್ತದೆ ಪರರೀಗೆ |ಗ್|ಂದ್ ನಾರ್ಣದೆವ
ಕೊಟ್ಟಾನಿಯೇ ಕಯ್ಯಾ ಬರದೊಲೆ.

ಕೊಟ್ಟ್ ವಾಲೀಯೂ ದುಟ್ಟೇತ್ ನೋಡಾನೆ
ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ತನ್ನಾ ನಾರೋರಾ ದೇನಿದೂರೇ.
ಎಂದೂ ಕರದಮಲ್ಲಾ ಬಂದಾರೆ ನಾರೋರು
ನಿಂದಾರೆ ಅರಜೀಣನಾ ಒಡನಲ್ಲೇ |ಲ್| ನಿಂದೀ ಕಂಡೆ
ಏನು ಕಾರಣಲೆ ಕರದೀಯೋ.

ಕರದಂ ಕಾರ್ಯವಿಲ್ಲಾ ಕಿರಿದುಂಚಿಸರ ಸಯ್ಯೆ
ಹಾಲ್ ತಟ್ಟೀಲ್ಹಾಲಾ ಎರ ಕೊಡಿ
ಆದಾ ಹಾಲೆಲ್ಲಾ ಜದುಂಬ್ ಮಾಣುಂಡಾ
ಮಿಕ್ಕಿದ್ದ್ ಹಾಲಗೆ ನೆರಗೊಟ್ಟೆ | ಅರಜಿಣಗೆ
ಹಾದೀಲ್ ಹೋಗ್ವರಿಗೆ ಅವದಾನಾ | ಅಂದ್ ನಾರ‍್ಯೋರು

ಮಾಳಗ್ಗಿಂದೆರಗೇ ಬರೂವಾರೇ | ನಾರೋರು
ಗಿಳಿಗೋಳೊಡನೊಗೇ ನಿಲೂವಾರೆ | ನಾರೋರು
ಆಗೊಂದು ಮಾತಾ ನುಡೀದಾರೆ
ಆಗೊಂದು ಮಾತಾ ಏನಂದಿ ನುಡೀದಾರೆ

ಹುಸ್ ಮಾತಾತಂದೇ ಬರದೀರೋ | ಅಂಬುದ್ನು ಗಿಳಿಗೋಳು
ಆಗೊಂದು ಮಾತಾ ನುಡೀದಾರೋ
ಹುಸಿಯಾದ್ರ ಅಪ್ಪಾ ನಾಣಿ ಹುಸಿಯಾದ್ರ ಅವ್ವಿ ಯಾಣಿ  |
ಹುಸಿಯಾದ್ರ ನಾವ್ ಕೊಂಬು ಎರೀ ಆಣೀ ಅಮ್ಮಾನೋರೆ
ಹುಸ್ಮಾತಾ ತಂದೀ ಒರಿಯಾಲಿಲ್ಲಾ | ಅಮ್ಮಾನೋರೆ
ನೀವುಟ್ಟಾ ಹೂಬಣ್ಣಾ ದಾಣೀ ಹುಸಿ ಇಲ್ಲಾ ಅಮ್ಮಾನೋರೆ

ಯಾವೂರ ಹಕ್ಕಿಯೇ ನೀವು ಯಾವೂರು  ಪಕ್ಷಿಯೇ ನೀವು
ಯಾವಲ್ಲೋ ನಿಮ್ಮಾ ಮನೆಮಟಾ
“ಗೂಡುಂಟಾ ಹಕ್ಕಿಗೆ ಗೂಡುಂಟಾ ಪಕ್ಷಿಗೆ
ಕೋಡುಂಟಾ ಕಾಡಾ ಮಿಗವೀಗೆ | ಅಮ್ಮಾನೋರೆ
ಹೋದಲ್ಲೇ ನಮ್ಮಾ ಮನೆಮಟಾ | ಅಮ್ಮಾನೋರೆ

ಅಟ್ಟಂಬಾ ಮಾತಾ ಕೇಳಾರೆ ನಾರ್ಯೋರು
ಮಾಳೂಗೀ ಒಳಗೆ ನೆಡದಾರೆ | ನಾರ್ಯೋರು
ಹಾಲ್ತಟ್ಟೀಲ್ಹಾಲಾ ಎರೆದಾರೆ | ನಾರ್ಯೋರು
ಆರ್ಜಿಣ್ನಾ ಬಲಗಯ್ಲೆ ಕೊಡೋವಾರೆ
ಅರ್ಜೀಣ್ನ ಬಲಗಯ್ಲೆ ಕೊಡುವುದ್ನು ಅರ್ಜೀಣಾ

ಎಯ್ಡು ಕಯ್ಯೊಡ್ಡೇ ತಡದಾನೆ | ಅರ್ಜಿಣ್ಣಾ
ಬಾಳೀ ಹಣ್ಣೇಳಾ ಸೊಲೀದಾನೆ | ಅರ್ಜಿಣ್ಣಾ
ಇಳ್ಳೀ ಹಣ್ಣೇಳಾ ಸೊಲೀದಾನೆ | ಅರ್ಜಿಣ್ಣಾ
ಹಾಲೊಳಗಣ್ಣಾ ನುರೀದಾನೆ | ಅರ್ಜಿಣ್ಣಾ
ಮಾಳಗ್ಗಿಂದೇ ರಗೆ ಬರೋವಾನೇ | ಅರ್ಜಿಣ್ಣಾ

ಗಿಳಿಗೋಳೋಡನೋಗೇ ನಿಲೋವಾನೇ | ಅರ್ಜಿಣ್ಣಾ
ಗಿಳಿಗೋಳೀಗ್ ಹಾಲಾ ಕೊಡೋವಾನೇ
ಗಿಳಿಗೋಳೀಗ್ ಹಾಲಾ ಕೊಡುವುದ್ನು ಗಿಳಿಗೋಳು
ರಟ್ಟೀ ಅಲ್ಲಾಡೇ ಕುಡೀದಾವೋ
ಹಾಲಾ ಕುಡ್ದವೋ ಗಿಳಿಯೇ ಹಣ್ಣಾ ತಿಂದವೋ ಗಿಳಿಯೋ

ಹಾರಿದವಂಬರಕೇ ಸೆರಿಯಾಗಿ | ಅರಜೀಣಾ
ಮಾಳೂಗೀ ಒಳಗೇ ನೆಡದಾನೆ | ಅರಜೀಣಾ
ತೂಗು ಮಂಚಲ್ಲೇ ಕುಳತಾನೆ | ಅರಜೀಣಾ
ತನ್ನಾ ನಾರೋರಾ ದೆನಿದೂರೇ | ನಾರ್ಯೋರು
ಓಯ್ಗುಂಡೇ ಒಡನೇ ಬರೋವಾರೇ

ಓಯ್ಗುಂಡೇ ಒಡನೇ ಬಂದೀ ಏನಂಬಾರೇ
ಏನು ಕಾರಣಲೆ ಕರದೀಯೋ ಏನಂಬಾರೇ
“ಹಾಗ್ಲ ಕಾಯಿಗೆ ಹಾಲಾಬೆರಸೀದಂತೆ
ಹಾಲ್ನಂತಾ ಮನಸೋ ಹಲವಾದೋ | ನಾರಿಯೋರೆ.
ಹಾಲ್ಗಂಜಗ ಊಟಕೇ ಅನೂಮಾಡಿ “

ಅಟ್ಟಂಬಾ ಮಾತಾ ಕೇಳಾರೇ ನಾರಿಯೋರು
ಮಾಳೂಗೀ ಒಳಗೆ ನೆಡದಾರೆ
ಅಟ್ದ ಮೆನನಾ ಜೀರಗ್ ಸಾಲಕ್ಕೀಯಾ
ಅನ್ನಾಮೆಗರಕೇ ಅನುಮಾಡೇ
ಹಿತ್ಲಕಣ ಕೀನಾ ಬುಟ್ಟೂ ಕೆಂಬರಗೀಯಾ
ಬುಟ್ಟೆಣ್ಣಿ ಕಿಟ್ಟೇ ಮೆಣ ಸಿಟ್ಟೇ

ಬೇಲೀಮೆನನಾ ದಾರೆ ಹಿರೇ ಕಾಯಾ
ದಾರಿಯನರದೇ ಮೆಣಸಿಟ್ಟೇ
ಹರ್ದುಟ್ಟು ಹಾಗೀಲಾ ಮುರ್ದುಟ್ಟು ತೊಂಡೀಲಾ
ಪಲಬರು ಸೊಪ್ಪು ಬಸಳೀಯೂ | ಕೂಡಿಟ್ಟು
ತುಪ್ಪಾದಲ್ಲದರಾ ಬೇಯೀಸಿ

ಎಲ್ಲಾ ಕಲ್ಲಿ ಕಾಯಿ ಎಲ್ಲಾ ಗುಳ್ಳೀ ಕಾಯಿ
ಕಲ್ಲೊಡೆದೇ ಬರುವಾ ಕಣಲೀಯಾ | ಸೂಸಕವ
ಅನುಮಾಡಿ ದರೊಂದು ಗಳಗ್ಯಲ್ಲೆ | ನಾರ್ಯೋರು.

ಸೆಣ್ಣ ಗಿಂಡ್ಯಲೇ ಉದಕವೇ |ವ| ತಡಕಂಡೀ
ಮಾಳಗ್ಗಿಂದೆರಗೇ ಬರೋವಾರೆ | ನಾರಿಯೋರು
ಅರಜಿಣ ನೊಡನೋಗೇ ನಿಲೋವಾರೆ
ನಾರ್ಯೋರ್ ಕೊಟ್ಟುದಕಾ ತಟ್ಟಾನೆ ತಡದಾನೆ
ಕಾಲೂಸಿರಿಮೊಕವಾ ತೊಳದಾನೆ | ಅರಜೀಣಾ

ಮಾಳೂಗೀ ಒಳಗೆ ನೆಡದಾನೆ
ಮಾಳೂಗೀ ಒಳಗೆ ನೆಡ್ವದ್ನು ನಾರಿಯೋರು
ಮಾಳೂಗೀ ಒಳಗೆ ನೆಡದಾರೆ | ನಾರಿಯೋರು
ಹೊಸ್ಮಣಿಯೊಂದಾ ಮಡುಗಾರೆ

ಹೊಸ್ಮಣಿಯೊಂದಾ ಮಡಗ್ವದ್ನು ಅರ್ಜಿಣ್ಣಾ
ಮಣಿಯಾ ಮೆನೋಗೇ ಕುಳಿತಾನೆ
ಮಣಿಯಾ ಮೆನೋಗೇ ಕುಳ್ವದ್ನು ನಾರಿಯೋರು
ಕಿರಳ ಬಾಳೆಲಿಯಾ ತೊಳದಾಸೇ | ನಾರಿಯೋರು
ಅನ್ನಾ ಮೆಗರವಾ ಬಡಸಾರೆ | ನಾರಿಯೋರು
ತುಪ್ಪಾ ಸಕ್ಕರೆಯಾ ಎರದಾರೆ
ತುಪಪ ಸಕ್ಕರೆಯಾ ಎರ‍್ತೀರ‍್ಗೂ ರೊಟ್ಗೆ
ಉಂಡೆದ್ದ ನೊಂದು ಗಳಗ್ಯಲೇ |
ಉಂಡಾನೂಟವಾ ತೋಳ್ದಾರೆನೆಂಜಲ ಮೊಕವಾ

ತೂಗು ಮಂಚದಲೆ ಕುಳತಾನೆ | ನಾರಿಯೋರು
ಎಂಜಲ ಮಯ್ಲಗೀಯಾ ತೆಗದಾರೆ | ನಾರಿಯೋರು
ತಮ್ಮೂಟಕೆ ತಾವೂ ಎಡಮಾಡೇ | ಬಡಸೀಗಂಡೇ
ಉಂಡೆದ್ದರೊಂದು ಗಳಗ್ಯಲ್ಲೆ |
ಉಂಡಾರೂಟವಾ ತೋಳ್ದಾರೆಂಜಲ ಮೊಕವಾ

ಎಂಜಲ ಮಯ್ಲಗೀಯೂ ತೆಗೆದಾರೆ | ನಾರೀಯೋರು
ಮಾಳೂಗಿ ಒಳಗೆ ನೆಡದಾರೆ
ಆಯೋಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲಿನಲಿ ಬೆಂದಾ ನೆನೆಸುಣ್ಣಾ | ತಡಕಂಡೇ
ಮಾಳಗ್ಗಿಂದೆರಗೇ ಬರೋವಾರೇ | ನಾರಿಯೋರು
ಅರ್ಜಿಣ್ಣ ನೊಡನೋಗೇ ಕುಳತಾರೆ | ನಾರಿಯೋರು

ಅರ್ಜಿಣ್ಣಾಗೋಂದೀಳ್ಯಾ ಕೊಡೋವಾರೇ
ನಾರ್ಯೋರ್ ಕೊಟ್ಟೀಳ್ಯಾ ತಟ್ಟಾನೆ ತಡ್ದಾನೆ
ಅಯಾಕೊಂದೀಳ್ಯಾ ಮೇಲೋವಾನೇ | ನಾರ‍್ಯೋರು
ತಾವೊಂದೀಳ್ಯಾ ಮೆಲೋವಾರು.
ಎಲಿಯೊಂದ್ ತಿಂದಾನೆ ರಜವಲ್ಲೇ ಉಗಳಾನೆ
ಆಗೊಂದು ಮಾತಾ ನುಡೀದಾನೆ
“ಅಂದಿಗಿಂದಿಗೆ ಹಿಂಗೆ ಇರಲುಬಾರಾ

ಗಂಗೀಗೆ ಹೋಗೇ ಬರಬೇಕೇ | ನಾರೋರೆ
ಮಂಚಕೇ ಹಾಸಾ ಬಿಡಸಂದೇ

ಗಂಗೀಗೆ ಗೋಗ್ವಕೆ ಬಂದದ್ದು ಮೆತ್ತನೆ
ಕೆಂದೀ ಅವದಾನಾ ಕೊಡಸೂವ್ರೋ- ದೆವ್ರಗೆ
ಬಂದಾ ಕಂಟಕವೇ ಪರಿಹಾರಾ
ಏನೂ ಹೇಳದ್ರೂ ಕೇಳಾನೆ ಅರಜೂಣಾ
ಮಾಳಗ್ಗೇ ಹಾಸಾ ಬಿಡಸಂದೇ| ನಾರ್ಯೋರು
ಮಾಳಗ್ಗಿಂದೊಳಗೇ ನೆಡದಾರೇ | ನಾರ್ಯೋರು

ಮಾಳಗ್ಲೆ ಹಾಸಾ ಬಿಡಸಾರೆ | ಅಜೀಣಾ
ಹಾಸನ ಮೆನೋಗೇ ಒರೂಗಾನೆ | ನಾರಿಯೋರು.
ಹಾಸನ ಮೆನೋಗೇ ಒರೂಗಾರೆ | ಅರಜೀಣಾ
ನಾರೋರಾ ಕೇಸಾ ಉಗರಾಡೇ | ಅರಜೀಣಾ
ನಾರ್ಯೋರಿಗೆ ಸಾಪಾ ಇಡೋವಾನೇ

ನಾರ್ಯೋರ್ಗೆ ಸಾಪಾ ಏನಂದಿ ಇಡೋವಾನೇ
ನಾರಿಯೋರಿಗೆ ನಿದ್ದೂರೀ ಕಮಿಯಾಲೆ |ಲ್| ಂದ್ ಅರಜೀಣಾ
ನಾರಿಯರಿಗೆ ಸಾಪಾ ಇಡೋವಾನೇ | ಅರಜೀಣಾ.
ಮಿಯ್ಯಾ ಮುರುದೆದ್ದೇ ಕುಳೂತಾನೆ |
ಪನ್ನೀರಾ ಗಿಂಡೀಬಲಗಯ್ಲೀ | ತಡಕಂಡಿ.

ಪನ್ನೀರಲಿ ಮೊಕವಾ ತೊಳದಾನೆ | ಅರಜೀಣಾ
ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ಪನ್ನೀರಾ ಗಿಂಡೀ ಮಡೂಗಾನೆ | ಅರಜೀಣಾ
ತೂಗೂ ಮಂಚದಲೆ ಕುಳೋತಾನೆ | ಅರಜೀಣಾ
ತನ್ನಾ ಕಯ್ಚಂಚೀ ಬಡಸಾನೆ | ಅರಜೀಣಾ
ಎಲೆ ತಿಂದೀ ತಂಬಳವಾ ಉಗದಾನೆ | ಅರಜೀಣಾ
ಕೂತಾ ಮಂಚವಾ ಜಡದೆದ್ದೇ | ಅರಜೀಣಾ

ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ಅಟ್ಟತ್ತೀ ಪೆಟ್ಟಗೀಯಾ ತೆಗೆದಾನೆ | ಅರಜೀಣಾ
ಮೆಟ್ಟೀ ಬೀಗವಾ ಕರಿದಾನೇ | ಅರಜೀಣಾ
ಮುಚ್ಚೀಲಾ ತದೇ ಕಡಗಿಟ್ಟ್ಯೀ | ಅರಜೀಣಾ
ಪಟ್ಟೆ ಜೋತರವಾ ಹೊಗಲೀಗೆ | ಹಾಯಿಕಂಡಿ
ಸೇರನ ಬಳಿ ಎಯ್ಡಾ ಕಯ್ಯಾಗಿಟ್ಟೇ | ಅರಜೀಣಾ