ಎಂದೂ ಕರದಮಲ್ಲಾ ಬಂದಾನೇ ಸಾದೆವಾ
ನಿಂದಾನೇ ನಾರ‍್ನದೆವ್ನಾ ಒಡನಲ್ಲೆ | ನಿಂದೀ ಕಂಡೇ
ಏನು ಕಾರಣಲೆ ಕರದಿಯೋ.
“ಕರದಂ ಕಾರ್ಯವಿಲ್ಲಾ ಕಿರಿದಂಬೆ ಸರಸಯ್ಯೆ

ಹೋಗ್ಬಾರೋ ತಂಗೀ ಅರಮನ್ಗೆ.
ಅಟಂಬಾ ಮಾತಾ ಕೇಳಾನೆ ಸಾದೆವಾ
ರಾಜಂಗ್ಳ ಮೆಟ್ಟಾ ಇಳೀದಾನೆ.
ಸಾದೇವಾ ಮುಂದಾಗೇ ಸಂನ್ಯೆಸೇ ಹಿಂದಾಗೇ
ರಾಜೋಬದಿಗಾಗೇ ನೆಡದಾರೆ.

ರಾಜೋ ಬಿದಿಗಾಗೇ ನೇಡ್ವದ್ನು ಸಂನ್ಯಾಸಿ
ಆಗೊಂದು ಮಾತಾ ನುಡೀದಾನೆ.

ಹಿಂದೀಕೊಂದ್ ಪೆಟೆ ಈ ಹಾದಿಲ್ ಬಂದಿದೆ.
ಈದಾರಿ ಗುರ‍್ತಾ ತನಗುಂಟೋ | ಬಾವಾಕೇಳೋ
ಇನ್ನಾದಿ ಬಲೆಬಾವಾ ಮನಗೋಗೋ | ಅಂಬುತ್ನು ಸಾದೆವಾ
ಹಿಂದಕ್ಕೆ ತಿರುಗೆ ಬರೋವಾನೇ
ಹಿಂದಕ್ಕೆ ತಿರುಗೆ ಬರ‍್ವದ್ನು ಸಂನ್ಯಾಸಿ

ಹೂವ್ನಕ್ಲ ಬೇಲೀ ತೆಗೆದಾನೆ | ಸಂನ್ಯಾಸಿ
ಹೂವ್ನಕ್ಲೋಳಗೇ ನೆಡದಾನೆ | ಸಂನ್ಯಾಸಿ
ಸಂಪೊಗಯ್ದಾಂಗಾ ಕೊಯಾದಾನೆ | ಸಂನ್ಯಾಸಿ
ಮಲ್ಲೂ ಗಯ್ದಾಂಗಾ ಕೊಯೀದಾನೆ | ಸಂನ್ಯಾಸಿ
ಜುಟ್ಟಾ ಕಿಂಬಾಗೇ ಮುಡೀದಾನೆ.
ಜುಟ್ಟಾ ಕಿಂಬಾಗೇ ಮುಡ್ದೀ ಏನಂಬಾನೆ

ಹೂಂಪ್ಗಿ ನೀಬಾಡಾದಿರಬೇಕೇ | ಕು| ಅಂದೇಳೇ
ಹೂಂವ್ನಕ್ಕ ಲೆರಗೇ ಬರೋವಾನೆ | ಸಂನ್ಯಾಸಿ
ರಾಜಬಿದಿಗಾಗೇ ನೆಡದಾನೆ | ಸಂನ್ಯಾಸಿ
ಸುಬದ್ರಿ ಅರಮನೆಗೇ ಬರೋವಾನೆ | ಸಂನ್ಯಾಸಿ
ಹೋಗಿ ಬಾಗಲ್ಲೇ ನಿಲೋವಾನೆ.

ಹಣ್ಣಡಕೀ ಅಂತಾ ರನ್ನದಾ ಓಕುಳಿ
ಓಕುಳಿ ಕಸವಿಲ್ಲಾ ಸುರನಾರಿ ಅರಮಲ್ಲೇ ಸನ್ಯಾಸಿ
ಸೆಣ್ಣಾ ಗಂಬಳಿಯೂ ಮಡದಾಸೇ | ಸಂನ್ಯಾಸಿ
ಚಕ್ರಪಡಿ ಹೊಯ್ದೇ ಕುಳೂತಾನೇ

ಚಕ್ರಪಡಿ ಹೊಯ್ದೆ ಕುಳುವುದ್ನು ಸೂಬದ್ರಿ
ಅರಗೀ ನೋಡಿದಳೇ ಹೊರಗೊಮ್ಮೇ | ಸೂಬದ್ರಿ
ಮಾಳೂಗೀ ಒಳಗೆ ನೆಡದಾಳೆ | ಸೂಬದ್ರಿ
ಹಿತ್ಲ ಕಣಕ್ನ ಬಾಗಲ್ಗೇ ನೆಡದಾಳೆ | ಸೂಬದ್ರಿ
ತನ್ನಾ ಗವ್ ಡ್ಯೋರಾ ದೆನೀ ದೂರೇ |ರ‍್ವದ್ನು | ಗವ್ವಿಯೋರು

ಓಯ್ಗುಂಡೇ ಒಡನೇ ಬರೋವಾರೇ.
ಓಯ್ಗುಂಡೇ ಒಡನೇ ಬಂದೇ ನಂಬಾರೆ
“ಏನು ಕಾರಣಲೆ ಕರದೀಯೇ”
ಎಂದೂ ಬಾರಾಡಿ ಇಂದೋಬ್ ಸಂನ್ಯಾಸೀ ಬಂದಾ
ಸಂನ್ಯಾಸೀ ದುಟ್ಟಿ ಹರದಕ್ಕು | ಗವ್ಡಿಯೋರೆ
ಪಡಿಯಾ ಕೊಟ್ಟವನಾ ಕಳಗೀರೆ

ಅಟ್ಟಂಬಾ ಮಾತಾ ಕೆಳಾರೆ ದಾದಿಯೋರು
ದೊಡ್ಡಾ ಹಚ್ಚಗೀಯಾ ತಡದಾರೆ
ದೊಡ್ಡ ಹಚ್ಚಗ್ಲೆ ದೊಡ್ಡಕ್ಕಿ ಹೊಯ್ಕಂಡೀ
ತೆಂಗೀನಾ ಕಾಯಾ ಪಲದೋಸ್ತಾ | ತಡಕಂಡೇ
ಮಾಳಗ್ಗಿಂದೆರಗೇ ಬರೋವಾರೇ | ದಾದಿಯೋರು
ಬಂದೀ ಬಾಗಲ್ಲೇ ನಿಲೋವಾರೇ | ದಾದಿಯೋರು
ಇಕ್ಕೋಳ್ಳೋ ಜೋಗೀ ಪಡೀದಾನಾ

“ನಿಮ್ಮಾ ಕಯ್ಪಡಿಯಾ ಮುಟ್ಟೂ ಜೋಗೀ ಅಲ್ಲಾ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕೆ ”
ನಮ್ಮಾ ಅಕ್ಕಾನು ನಿಮ್ಮಂತೋರಿಗ್ ಪಡಿಕೋಡಾ
ಮಟ್ಟಾದಲ್ಲಿರುವಾ  ಹೆರಿಗುರುವೇ
ಮಟ್ಟಾದಲ್ಲಿರುವಾ ಹೆರಿಗುರುಗಲ್ಲದೆ

ಮಿಕ್ಕದ್ದೋರಿಂಗ್ ಪಡಿಯಾ ಕೊಡುವಾದಿಲ್ಲ
ಮಟ್ಟಾದಲ್ಲಿರುವಾ ಹೆರಿಗುರು ತಾನೇ ಸಯ್ಯೆ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕೆ
ಅಟ್ಟಂಬಾ ಮಾತಾ ಕೇಳಾರೇ ಗವ್ಡೀಯೋರು
ಬಂದ್ ತಮ್ಮಕ್ಕಾಗೇ ಒರದಾರೆ | ವದ್ನು| ಸೂಬದ್ರಿ
ಸೆಣ್ಣ ಹಚ್ಚಗಿಯಾ ತಡದಾಳೆ

ಸೆಣ್ಣ ಹಚ್ಚಗ್ಲೆ ಸೆಣ್ಣಕ್ಕೀ ಹೊಯ್ಕಂಡೇ
ತೆಂಗೀನಾ ಕಾಯಾ ಪಲದೋಸ್ತಾ | ತಡಕಂಡೇ
ಮಾಳಗ್ಗಿಂದೆರಗೇ ಬರೂವಾಳು |ಸೂಬದ್ರಿ
ಇಕ್ಕೋಳೋ ಸಂನ್ಯಾಸಿ ಪಡೀದಾನಾ
ಪಡಿಯಾ ತಕ್ಕಾಂಡ್ಹೋಕೆ ಜೋಳುಗಿ ತರಲಿಲ್ಲಾ

ಅಕ್ಕೀ ಕೊಡಕ್ಕೀ ತೊಳದೆತ್ತು |ಕೆ| ತಾಯಿಲ್ಲಾ ತಂದಿಲ್ಲ
ಸೆಣ್ಣಂದ್ ತಾಳೀದಾ ಹರಿಯಣ್ಣಾ| ಮಲ್ಲಿಲ್ಲ
ನೀಲೋಗೋ ಮಟ್ಟದಾ ಜಗೋಲಿಗೆ
ಮಟವಾ ನಾನೋಡ್ಲಿಲ್ಲಾ ಮನಿಯಾ ನಾನೋಡ್ಲಿಲ್ಲ
ಹಾದೀಯಾ ಗುರುತಾ ತನಗಿಲ್ಲಾ

ಹಾದೀ ಬಲ್ಲಾದೀರೆ ದಾದಿಯೋರ್ ಕಳಗೀತೆ
ನೀಲೋಗೋ ಮಟದಾ ಜಗೋಲೀಗೋ
ನಿನ್ನಾ ದಾದೀಯೋರೆ ಒಳ್ಳೋಳ್ಳಾ ಜಂವ್ತೀರು
ಕಲ್ಲೆಲ್ಲೆ ತನ್ನಾ ಎಳವರು | ಎಲೆಣ್ಣೆ
ಅಕ್ಕೀ ಕೊಡಕ್ಕೀ ತೊಳದೆತ್ತೆ

ಹಾದೀ ಬಲ್ಲಾಗೀರೆ ದಾದ್ಯೋರಾ ಕಳಗೂತೆ
ನೀಹೋಗೊ ಮಟದಾ ಜಗೋಲೀಗೋ
ನಿನ್ನಾ ಗವ್ಡೀಯೋರು ಒಳ್ಳೋಳ್ಳಾ ಜಂವ್ತೀರು
ಮುಳ್ಳಲ್ಲೇ ತನ್ನಾ ಎಳವರೇ |ರು| ಎಲೆಣ್ಣೆ.
ಅಕ್ಕೀ ಕೊಡಕ್ಕಿ ತೊಳದೆತ್ತೆ.

ಏನು ಹೇಳದ್ರೂ ಕೇಳಾನಂದ್ ಸೂಬದ್ರಿ
ಮಾಳೂಗೀ ಒಳಗೆ ನೆಡದಾಳೆ | ಸೂಬದ್ರಿ
ತನ್ನಾ ಗವಡೇರಾ ದೆನಿ| ದೊರೇ
ಎಂದೂ ಕರದಮಲ್ಲಾ ಬಂದಾರೆ ಗವಡೇರು.

ನಿಂದಾರೆ ಸೂಬದ್ರಿ ಒಡನಲ್ಲಿ
ಕರದಂಬ ಕಾರ್ಯವಿಲ್ಲ ಕಿರಿದುಂಬೆಸರ ಸಯ್ಯೆ
ಹೋಗ್ಬನ್ನಿ ಅಣ್ಣನಾ ಅರಮನಗೆ

“ಎಂದೂ ಬಾರದೇ ಇಂದೊಬ್ ಸಂನ್ಯಾಸಿ ಬಂದಾ.
ಸಂನ್ಯಾಸಿ | ದೂಟಿ ಹೆರದಕ್ಕೆ | ಅಕ್ಕನ ಕೂಡೇ
ಅಡಗೀಯೇ ಮಾಡೇ ಬಡಸೆಂದೇ |ಅಂದೇಳಿ
ಹೋಗ್ ಬನ್ನಿ ಅಣ್ಣನಾ ಅರಮನಗೆ.

ಮೂರು ಬಂದ್ ಗವಡೇರು ಹೋಗ್ವಾರಣ್ಣನ ಮನಗೆ |
ಹೋಗಿ ಬಾಗಲ್ಲೇ ನಿಲೋವಾರು
ಹೋಗಿ ಬಾಗಲ್ಲೇ ನಿಲ್ವದ್ನು ನಾರ್ಣದೆವ
ವಾಲೆಗುಂಡಾನೆ ಹಸೀಯಲ್ಲಿ

ಯಾವಾಗೂ ತಂಗಿಯೂ ಅರ‍್ಮಲ್ಲಿರು ಗವಡ್ಯೋರೆ |
ಏನ್ ಬಂದ್ರೆ ನನ್ನ ಅರಮನಗೆ.
“ಎಂದೂ ಬಾರಾದೆ ಇಂದೋಬ್ಬ ಸಂನ್ಯಾಸಿ ಬಂದಾ
ಸಂನ್ಯಾಸಿ ದೋಟೀ ಹೆರದಕ್ಕೇ | ಅಕ್ಕನ ಕೊಡೆ
ಅಡಗೀಯಾ ಮಾಡೇ ಬಡಸೆಂದಾ”

“ಒಂದು ದಿನ ಬಂದೇ ನಿಂದುಂಬು ಸಂನ್ಯಾಸಿಗೇ
ದಂದುಗ್ ಮಾಡ್ಬೇಡಾ ಕಿರೂದಂಗಿ
ದುಂದುಗ್ ಬಿಡ್ಬೇಡಾ ಕಿರ‍್ದಂಗೀ ಕೂಡಿನ್ನು
ಅಡಗೀಯಾ ಮಾಡೇ ಬಡಸಂದೇ
ಅಟ್ಟಂಬಾ ಮಾತಾ ಕೇಳಾರೇ ಗವ್ಡೀಯೋರು

ಹಿಂದಕ್ಕೆ ತಿರುಗೇ ಬರೂವಾರೇ |ಗವ್ಡೀಯೋರು
ಬಂದ್ ತಮ್ಮಕ್ಕಾಗೇ ಒರದಾರೇ
ಬಂದ್ ತಮ್ಮಕ್ಕಾಗೇ ಒರ‍್ವದ್ನು ಸೂಬದ್ರಿ
ಹಳ್ಳದ ನೀರ‍್ತಂದೇ ಎಸೂರಿತ್ತೇ | ಸೂಬದ್ರಿ
ಹಳ್ಗನಕ್ಕೀ ತೊಳ್ದೇ ಹೋಯೀದಾಳೇ | ಸೂಬದ್ರಿ
ಇನ್ನೇಳು ಸಂನ್ಯಾಸೀ ಅನೂವದೆ.

“ಹಳ್ಳದ್ನಿ ರುಂಬುಕೇ ನನ್ನೂರು ಸುಬನವೇ
ನಿನ್ನಣ್ಣಾ ನಾರ್ಣದೆವ ಹದೂಳವೇ | ಎಲೆಣ್ಣೆ
ಕೆರಿಯಾ ನೀರ‍್ತಂದೀ ಎಸರಿತ್ತೇ | ಸೂಬದ್ರೀ
ನೀನುಂಬು ಸೆಣ್ಣಕ್ಕಿ ತೊಳದೀತ್ತೇ

ಅಟ್ಟಂಬಾ ಮಾತಾ ಕೇಳಾಳೆ ಸೂಬದ್ರಿ
ತನ್ನಾದಾದ್ಯೋರಾ ದೆನೀದೂರೇ
ತನ್ನಾ ದಾದ್ಯೋರಾ ದೆನಿದೂರ‍್ವದ್ನು ದಾದಿಯೋಯ
ಓಯ್ಗೊಂಡೇ ಒಡೂನೇ ಬರೂವಾರೇ
ಒಯ್ಗುಂಡೇ ಬಡ್ನೆ ಬಂದೀ ಏನಂಬಾರೆ
ಏನೂ ಕಾರಣಲೆ ಕರದಿಯೇ

ಕರದಂ ಕಾರ್ಯಾವಿಲ್ಲ ಕಿರಿದುಂಗಬೆಸರಸಯ್ಯೆ
ನೀ ಹೋಗು ಅಣ್ಣನಾ ಅರಮನೆಗೇ | ಅಕ್ಕನ ಕೂಡೆ
ಕೆರೆಯ ನೀರ‍್ತಂದೀ ಎಸರಿತ್ತೇ | ಸೂಬದ್ರಿ
ನೀನುಂಬು ಸೆಣ್ಣಕ್ಕೀ ತೊಳದಿತ್ತೇ
ನೀನುಂಬು ಸೆಣ್ಣಕ್ಕಿ ತೊಳ್ದೆತ್ತು ಅಂದೇಳಿ
ಹೋಗ್ಬನ್ನಿ ಅಣ್ಣನಾ  ಅರಮನಗೇ

ಮುರ್ ಬಂದಿಗವಡ್ಯೇರು ಹೋಗ್ವಾರಣ್ಣನಮನಗೆ
ಹೋಗಿ ಬಾಗಲ್ಲೇ ನಿಲೋವಾರು
ಹೋಗಿ ಬಾಗಲ್ಲೇ | ನಿಲ್ವದ್ನು ನಾರ್ಣದೆವ
ಒಲಗ್ಗುಂಡಾ ಹಸೆಯಲ್ಲಿ | ನಾರ್ಣದೆವ
ಲಾಗೊಂದು ಮಾತಾ ನುಡೀದಾನೆ.

ಯಾವಾಗೂ ತಂಗಿ ಅರ‍್ಮಲ್ಲಿರು ಗವಡೇರು
ಏನ್ ಬಂದ್ರೀ ತನ್ನಾ ಅರಮನೆಗೆ
“ಎಂದೂ ಬಾರದೆ ಇಂದೊಬ್ ಸಂನ್ಯಾಸಿ ಬಂದಾ
ಸಂನ್ಯಾಸಿ ದೋಟೀ ಹರದಕ್ಕು | ಅಕ್ಕನಕೂಡೆ
ಕೆರಿಯನ್ನೀರ‍್ತಂದೇ ಎಸರಿತ್ತೇ |”

ತಾನುಂಬ ಸೆಣ್ಣಕ್ಕಿ ತೋಳದೆತ್ತೇ |
“ಒಂದು ದಿನ ಬಂದಿ ನಿಂದುಂಬು ಸಂನ್ಯಾಸಿ
ದಂದುಗ ಬಿಡಬೇಡಾ ಕಿರುದಂಗಿ | ಕೂಡಿನ್ನು
ಅಡಗೀಯೂ ಮಾಡೇ ಬಡಸನ್ನು

ಅಟ್ಟಂಬಾ ಮಾತಾ ಕೇಳಾರೆ  ಗವ್ಡೀಯೋರು
ಹಿಂದಕ್ಕೆ ತಿರುಗೇ ಬರೋವಾರೆ | ಗವ್ಡೀಯೋರು
ಬಂದ್ ತಮ್ಮಕ್ಕಗೆ ಬರದಾರೆ.
ಒಂದು ದಿನ ಬಂದೀ ನಿಂದುಂಬ ಸಂನ್ಯಾಸಿಗೆ
ದಂದುಗ ಬಿಡಬೆಡಾ ಕಿರೂದಂಗಿ | ಕೂಡಿನ್ನು
ಅಡಗೀಯೂ ಮಾಡೇ ಬಡಸಂದೇ.

ಅಟ್ಟಂಬಾ ಮಾತಾ ಕೇಳಾಳೇ ಸವ್‌ಬದ್ರಿ
ಕೆರೆಯನ ನಿರ‍್ತಂದೇ ಎಸರಿತ್ತೇ | ಸೂಬದ್ರಿ
ತಾನುಂಬ ಸೆಣ್ಣಕ್ಕಿ ತೊಳದೆತ್ತೇ | ಸೂಬದ್ರಿ
“ಇನ್ನೆಳು ಸಂನ್ಯಾಸಿ ಅನುವದೆ”.

“ಕೆರಿನೀರುಂಬುಕೇ ನನ್ನೂರು ಸುಬನವೇ
ನಿನ್ನಣ್ಣ ನಾರ್ಣದೆವ ಹದೂಳವೆ | ಎಲ್ಲೆಣ್ಣೆ
ಬಚ್ಚಲಗೆ ನೀರಾ ಎರೆಹೊಗೆ | ಸೂಬದ್ರಿ
ಬಚ್ಚಲಗೇ ಕಿಚ್ಚಾ ಉರೀಹೋಗೇ |”
ನೀನುದ್ದು ಕೆಮ್ಮಣೀ ತನಗುದ್ದೇ.

ಅಟ್ಟಂಬಾ ಮಾತಾ ಕೇಳಾರೆ ಸೂಬದ್ರಿ
ತನ್ನಾಗವಡ್ಯೋರಾ ದೆನೀದೂರೇ
ತನ್ನಾ ಗವ್ ಡ್ಯೋರಾ ದೆನಿದೂರ‍್ವದ್ನು ಗವ್ಡೀಯೋರು
ಓಯ್ಗುಂಡೇ ಒಡೂನೆ ಬರೂವಾರೇ

ಎಂದೂ ಕರದಮ್ಮಲ್ಲ ಬಂದಾನೆ ಗವ್ಡೀಯೋರು
ನಿಂದಾರೆ ಸೂಬದ್ರಿ ಒಡನಲ್ಲಿ | ಲ್ಲೆ | ನಿಂದೀ ಕಂಡೇ
ಏನು ಕಾರಣಲೆ ಕರದೀಯೇ.
ಕರ್ದಂ ಕಾರ್ಯವಿಲ್ಲ ಕಿರಿದುಂಬೆಸರಸಯ್ಯೆ
ಹೋಗ್ಬನ್ನೀ ಅಣ್ಣಾನ ಅರಮನಗೆ

“ಎಂದೂ ಬಾರದೆ ಇಂದೋಬ್ ಸಂನ್ಯಾಸೀ ಬಂದಾ
ಸಂನ್ಯಾಸಿ ದೋಟೀ ಹೆರದಕ್ಕೇ | ಅಕ್ಕನಕೂಡೆ
ಕಾಸಂದಾ ನೀರಾ ಬೆರಸಂದಾ|
ತಾನುದ್ದ ಕೆಮ್ಮಣ್ಣೀ ತನಗುದ್ದು | ಅಂದೇಳಿ
ಹೋಗ್ನನ್ನಿ ಅಣ್ಣನ ಅರಮನ್ಗೆ| ಅಂಬುದ್ನು ಗವಡೇರು
ಹೋಗಿ ಬಾಗಲ್ಲೇ ನಿಲೋವಾರೇ.

“ಕೆಟ್ಟಾಗವ್ಡೇರಿಗ್ ವಿಟ್ಟೂ ಬಾರೇಳಲೆ
ಚಬಕಾ ತಂದೆಯ್ಡಾ ಬಿಗಿಯಾಲೆ | ಅಂದೇಳೇನಾರ್ಣದೆವ
ಚಬಕಾ ತಂದೆಯ್ಡಾ ಬಿಗೀದಾನೇ.
ಕೆಟ್ಟಾ ಗವ್ಡೇರಿಗ್ ವಿಟ್ಟೂ ಬಾರೇಳಲೆ.
ಬಡರಾ ತಂದೆಯ್ಡಾ ಒಗೀಯಾಲೇ.
ಬಡಡಾ ತಂದೆಯ್ಡಾ ಒಗ್ವದ್ನು ಗವ್ಡೀಯೋರು

ಉದ್ದೀ ಕಂಡೊಡೇ ಬರೂವಾರೆ | ‌ಗವ್ಡೀಯೋರು
ಬಂದ್ ತಮ್ಮಕ್ಕಗೇ ಒರೂವಾರೇ
ಕಂತೆ ಕಪ್ಪಡವಿಲ್ಲಾ ಎಂಟೂ ಜೋಳೂಗಿಲ್ಲಾ
ಮಂಚಕಪ್ಪುವಾ ಬೆಳಿ ಎಲೆ | ತಡ್ಡಬಂದಾನೆ
ಅಕ್ಕಾ ನಿನ್ನಾಟತರವಲ್ಲಾ.

ಕಂತೆಕಪ್ಪಡನೂ ಎಂಟೂ ಜೋಳೂಗೀನೂ
ಸೆಟ್ಟಿ ಅರಮಲ್ಲೆ ಮಡಗಿ | ದೆ| ಗವ್ಡೀಯೋರೆ
ಸೆಟ್ಟೀಯೋರ್ ಮದವೀತನಲ್ಲೇ | ಆಗುವಂಗೆ
ಅಲ್ಲೆ ನೀಡಿದರೆ ಬೆಳಿ ಎಲೆ

ಕಂತೆ ಕಪ್ಪಡನು ಎಂಟೂ ಜೋಳಗಿನು.
ಹಾರೂ ಅರಮಲ್ಲೆ ಮಡಗಿದೆ| ಗವ್ಡೀಯೋರೆ
ಹಾರೂವರೆ ಮದವೀ ತರನಲ್ಲೆ | ಆಗುವಂಗೆ
ಅಲ್ಲೆ ನೀಡಿದರೆ ಬೆಳಿ ಎಲೆ.

ಅಟ್ಟಂಬಾ ಮಾತಾ ಕೇಳಾಳೆ ಸೂಬದ್ರಿ
ಬಚ್ಚಲಗೆ ನೀರಾ ಎರದಾಳೆ | ಸೂಬದ್ರಿ
ಬಚ್ಚಲಗೆ ಕಿಚ್ಚಾ ಉರೀಸಾಳೆ | ಸೂಬದ್ರಿ
ಸೀಗೆ ಬಾಗವಾ ಅರದಾಳೆ | ಸೂಬದ್ರಿ
ಕಮ್ಮನ ಕರಿ ಇಟ್ಟೇ ಹೊಡೀಮಾಡೇ | ಸೂಬದ್ರಿ

ಮಾಳೂಗೀ ಒಳಗೆ ನೆಡದಾಳೆ.
ಮಾಳುಗಿ ಒಳಗೆ ನೆಡ್ವದ್ನು ಸಂನ್ಯಾಸಿ
ಆಗೊಂದು ಮಾತಾ ನುಡೀದಾನೆ
ಗವ್ಡೀ ಗವ್ಡೀಯೋರಾ ಜೋಡಸ ಬೀಗನಾಕೇ

ನೀ ಬಂದೀ ಎಣ್ಣೇ ಉಗೂರಾಡೇ
ಗವ್ಡೀ ಗವ್ಡೀಯೋರಾ ಜೋಡಸ್ ಬೀಗನಾಕೇ
ಮಾಳೂಗೀ ಒಳಗೇ ನೆಡದಾಳೇ
ದಾದೀದಾದೀಯೊರೆಲ್ಲಾ ಜೋಡಸ್ ಬೀಗನಾಕೇ
ನೀ ಬಂದೀ ಎಣ್ಣೀ ಉಗೂರಾಡೇ
ದಾದಿದಾದಿಯೋರೆಲ್ಲಾ ಜೋಡಸ್ ಬೀಗನಾಕೇ

ಮಾಳೂಗೀ ಒಳಗೇ ನೆಡದಾಳೇ | ಸೂಬದ್ರಿ
ಹೊನ್ನಾ ಮಣೇಯೊಂದಾ ತಡದಾಳೇ | ಸೂಬದ್ರಿ
ಎಣ್ಣೀಯ ಗಿಂಡೀ ಬಲಗಯ್ಲೆ |ಯ್ಲಿ| ತಡಕಂಡಿ
ಮಾಳಗ್ಗಿಂದೆರಗೇ ಬರೂವಾಳೇ | ಸೂಬದ್ರಿ
ಸಂನ್ಯಾಸಿ ಒಡನೋಗೆ ನಿಲೂವಾಳೇ
ಸಂನ್ಯಾಸಿ ಒಡ್ನೋಗೇ ನಿಲ್ವದ್ನು ಸೂಬದ್ರಿ

ಹೊನ್ನಾ ಮಣೆಯೊಂದಾ ಮಡಗಾಳೆ
ಹೊನ್ನಾ ಮಣಿಯೊಂದಾ ಮಡಗ್ವದ್ನು ಸಂನ್ಯಾಸಿ
ಮಣೆಯಾ ಮೆನೋಗೇ ಕುಳೂತಾನೆ
ಮಣೆಯಾ ಮೆನೋಗೇ ಕುಳುವದ್ನು ಸೂಬದ್ರಿ

ತಾಬಂದೀ ಎಣ್ಣೇ ಉಗೂರಾಡೇ
ಆಕಯ್ಯ ಅಂಕಣವಾ ಮಾಕಯ್ಲೇ ತಿದ್ದೀತೇ
ಇದು ಯಾರೇ ತೊಡೂಸೀದಾ ತೊಡುಗೀಯೇ | ಎಲೆಣೆ
ಕವ್ಲರು ತೋಡಸೀದ ತೊಡೂಗೀಯಾ ?”

ಯಾಉರ ಸಂನ್ಯಾಸೀ ನೀನು ಯಾವುರ ಬಡಮಾಣಿ ನೀನೋ
ಯಾವಲ್ಲೋ ನಿನ್ನ ಮನೆಮುಟಾ | ಕೇಳ್ವದ್ನು

ಹತ್ಯಣ್ಣಪುರ ತನ್ನಾ ಅರಮನೆ
“ಹತ್ಯಣ್ಣ ಪುರದಲ್ಲಿ ಅತ್ ಮಾವ್ನ ಮಕ್ಕಳು
ಅವರಯ್ವರು ಹದೂಳಾವೋ ?
ಸಾದೇವ ಸಕುಲರು ಧರ್ಮಾಭೀಮಾರು
ಅವರಯ್ವರು ಹದೂಳಾವೋ ”

“ಅಯ್ವರಿದ್ದಲ್ಲೀ ನಾಲ್ವರೆಸರೇಳಿದೆ
ಇನ್ನೊಬ್ಬ ನೆಸರಾ ಮರತೆಯಾ?”
“ಸೆಣ್ಣಲ್ಲೇ ತಾಯಿ ತಂದೆ ಕೊಡತೇನಂದೇಳೀರು
ಹೆಸರಾ ಹೇಳ್ವದಕೆ ಅಳಕಿದೆ”
ಕುಮ್ಮಣ್ಣಿಯನ್ನಿಟ್ಟು ಕಮ್ಮಣ್ಣಿ ಎಣ್ಣೇ ಉಗುರಾಡೇ

ಸುಮ್ಮನೆ ಎಣ್ಣೇ ಉಗೂರಾಡೇ | ಸಂನ್ಯಾಸೀಯಾ
ಎಣ್ಣೀಯಾ ಜಳಕಾ ಉರದಾವೇ | ಸಂನ್ಯಾಸೀ
ಬಚ್ಚಲರ ಮನಗೆ ನೆಡದಾನೇ
ಬಚ್ಚಲರ ಮನಗೇ ನೆಡ್ವದ್ನು ಸೂಬದ್ರಿ
ಬಚ್ಚಲರಮನಗೇ ನೆಡದಾಳೆ.

ಕಾಮನ ಗುಂಡಿಯ ನೀರಾ ಬೀಮನಗುಂಡಿಗೆ ತಿರಗೇ
ಅರ್ಜನ ಗುಂಡ್ಯಲೇ ಹದಮಾಡೇ | ಸಂನ್ಯಾಸಿ
ಬಚ್ಚಲ ಕಲ್ ಮೆನೇ ಕುಳತಾನೇ | ಸೂಬದ್ರೆ
ಮುತ್ತಿನಾಯರದಾ ಮಣಿತೆಂಗಾ | ತಡಕಂಡೇ
ಅರ್ಜುನನ ಕೇಸಿಗೆ ನೀರಾ  ಎರದಾಳೇ
ಕೇಸಾ ಬಿಡಸದ್ರೇ ಚಲ್ಲದವೇ ಮಲ್ಲಿಗೇ,

ಗಂಗೀಲಿದ್ದೇಳು ಗಿಳಿಬಂದೇ | ಸಂನ್ಯಾಸೀಯಾ
ಚಲ್ಲದ ಮಲ್ಲಗೀಯಾ ಕುಸುಮಕ್ಕೇ
ಚಂಡಾ ಬಿಡಸದ್ರೇ ಚಲ್ಲದವೇ ಮಲ್ಲಿಗೇ
ದೇಸಾದಲ್ಲಿದ್ದೇಳು ಗಿಳಿಬಂದೇ. | ಸಂನ್ಯಾಸಿಯಾ
ಚಲ್ಲದ ಮಲ್ಲಗೀಯಾ ಕುಸುಮಕ್ಕೇ | ಸೂಬದ್ರಿ

ಸೀಗೇ ಬಾಗವಾ ತಲಗುದ್ದೆ | ಸೂಬದ್ರಿ
ಕಮ್ಮನ ಕರಿಯಿಟ್ಟಾ ಮಯೀಗುದ್ದೇ | ಸೂಬದ್ರಿ
ಸಂನ್ಯಾಸಿ ಕೇಸಿಗೆ ನೀರಾ ಎರದಾಳೇ
ಸಂನ್ಯಾಸಿ ಕೇಸಿಗೆ ನೀರಾ ಎರ‍್ವದ್ನು ಸಂನ್ಯಾಸಿ
ಮಿಂದೋಗದಾನೊಂದು ಗಳಗ್ಯಲ್ಲೇ

ಸಂನ್ಯಾಸಿ ಅಂಬೆಸರು ಇಲ್ಲಗಿಂದಿತ್ತಾಗಿರಲೇ
ಅರಜುಣ ನಂಬೆಸರು ನೆಡಿಯಾಲಿ | ಅಂದ್ ಅರಜೂಣಾ
ಸೆಣ್ಣಾ ಗಿಂಡ್ಯಲ್ಲೆ ಉದಕವೇ| ವ| ತಡಕಂಡೇ
ಮಾಳೂಗೀ ಒಳಗೆ ನೆಡದಾನೆ | ಅರಜೀಣಾ
ದೆವ್ರ ಬುಡಕೋಗೆ ಕುಳತಾನೆ | ಅರಜೀಣಾ
ತೇದೀ ಗಂದಾವಾ ಇಡೋವಾನೆ | ಅರಜೀಣಾ
ಚೊಳಚೀ ಸುತ್ತೊಂದಾ  ತಿರುಗಾನೆ | ಅರಜೀಣಾ
ಚೋಳಚೀ ತಿರುತವಾ ಕುಡೀದಾನೆ | ಅರಜೀಣಾ

ಮಾಳುಗೀ ಒಳಗೆ ನೆಡದಾನೆ.
ಮಾಳೂಗೀ ಒಳಗೆ ನೆಡ್ವದ್ನು ಸೂಬದ್ರಿ
ಮಾಳೂಗಿ ಒಳಗೆ  ನೆಡದಾಳೆ
ಮಾಳೂಗೀ ಒಳಗೆ ನೆಡ್ವದ್ನು ಸೂಬದ್ರಿ
ಒಂದೋ ಹೊಸ್ಮಣಿಯೂ ಮಡಗಾಳೆ.
ಒಂದೋ ಹೊಸ್ಮಣಿಯೂ ಮಡಗ್ವದ್ನು ಅರ್ಜೀಣಾ
ಮಣೆಯೂ ಮೆನೋಗೇ ಕುಳತಾನೆ.

ಮಣಿಯೂ ಮೆನೋಗೇ ಕುಳುವುದ್ನು ಸೂಬದ್ರಿ
ಕಿರುಳ ಬಾಳೆಲಿಯಾ ತೊಳದಾಸೇ |  ಸೂಬದ್ರಿ
ಅನ್ನಾ ಮೆಗರವಾ ಬಡೂಸಾಳೆ |  ಸೂಬದ್ರಿ
ಹಾಲೂ ಪಾಯಸವಾ ಬಡೂಸಾಳೆ |  ಸೂಬದ್ರಿ
ತುಪ್ಪಾ ಸಕ್ಕರೆಯಾ ಎರದಾಳೆ
ತುಪ್ಪಾ ಸಕ್ಕರೆಯೂ ಎರ್ದೀ ತಿರ‍್ಗೂರೋಟಗೇ
ಹಿಡ್ಡಾನೆ ಬಳಿಯೂ ನಳೀತೋಳಾ