ಮಣೆಯಾ ಮೆನೋಗೇ ಕುಳವದ್ನು ನಾರ್ಣದೆವ

ಬಾವಾಗಕ್ಸತವಾ ಇಡೋವಾನೆ | ನಾರ್ಣದೆವ
ಬಾವಾಗೇ ಚಿಗರಾ ಉಗೋರಾಡೇ
ಬಾವಾಗೇ ಚಿಗರಾ ಉಗುರ‍್ವದ್ನು ಆಗರೀತು ಚಿಗರೀತು
ಎಳವಾಗಾನೆಡಿಯಾ ಇಳಗೀತೇ | ಅರ್ಜುನ್ನಾ
ಚಿಗ್ರೂನೂರ್ ವರ್ಸೇ ತಿರುವಾಲಿ.   

ಬಾವೆಗೆ ಚಿಗುರಾದುತ್ನು ಬಿನ್ನಾಣಿ
ತಾಮುಂದೆ ಬಂದೇ ಕುಳತಾನೆ | ಬಿನ್ನಾಣಿ
ಅರ್ಜುನ್ನಾ ಸಿರ್ಪನ್ನಿ ಗೇಯೀದಾನೆ
ಗುಬ್ಬಿ ಗುಬ್ಬಿ ಚಂದಾ ಗುಬ್ಬೀಯಾ ಮರ‍್ಚೆಂದಾ
ಗುಬ್ಬೀ ನೀರುಂಬಾ ಕೆರೆಚಂದಾ | ಅರ್ಜುಣ್ನಾ

ಪನ್ನೀ ಮಾಡಿದ್ರೇ ಮೊಕಚೆಂದಾ | ಅರ್ಜುಣ್ನಾ
ಪನ್ನೀಯಾ ಕೆಲಸಾ ಮುಗೀದಾವೇ
ಪನ್ನೀಯಾ ಕೆಲ್ಸಾ ಮುಗ್ವದ್ನು ಅರಜೂಣಾ
ತಾನೊಂದು ಗೊಟೆ ನಿಲೋವಾನೇ
ತಾನೊಂದು ಗೊಟೆ ನಿಲ್ವದ್ನು ನಾರ್ಣದೆವಾ
ಸೂಬದ್ರಿ ಕರ್ಕಂಡೇ ಬರೋವಾನೇ | ನಾರ್ಣದೆವ
ತಂದೀ ಮಣಿ ಮೆನೆ ಕುಳೋಸಾನೆ

ತಂದೀ ಮಣಿ ಮೆನೆ ಕುಳುವುದ್ನು ನಾರ್ಣದೆವ
ತಂಗೀಗೆ ಸೆಸೀ ಇಡೋವಾನೇ | ನಾರ್ಣದೆವ
ತಂಗೀಗೆ ಚಿಗರಾ ಉಗೋರಾಡೇ
ತಂಗೀಗೆ ಚಿಗ್ರಾ ಉಗುರಾಡುತ್ನು ಬಿನ್ನಾಣಿ
ತಾ ಮುಂದೇ ಬಂದೇ ಕುಳೋತಾನೆ
ತಾ ಮುಂದೆ ಬಂದೇ ಕುಳುವುದ್ನು ಬಿನ್ನಾಣಿ
ಸೂಬದ್ರಿ ಸಿರ್ಪನ್ನಿ ಗೆಯೀದಾನೇ
ಸೂಬದ್ರಿ ಸಿರ್ಪನ್ನಿ ಗೆಯ್ವದ್ನು ಸೂಬದ್ರಿ
ಪನ್ನೀಯಾ ಕೆಲಸಾ ಮುಗೀದಾವೇ

ಗುಬ್ಬೀ ಗುಬ್ಬೀ ಚಂದಾ ಗುಬ್ಬಿಯಾ ಮರಿಚಂದಾ
ಗುಬ್ಬಿ ನೀರುಂಬಾ ಕೆರೆ ಚಂದಾ | ಸೂಬದ್ರೀಯಾ
ಹುಬ್ಬಾ ತಿದದ್ರೇ ಮೊಕ ಚೆಂದಾ | ಸೂಬದ್ರೀಯಾ
ಪನ್ನೀಯಾ ಕೆಲಸಾ ಮುಗೀದಾವೇ
ಪನ್ನೀಯಾ ಕೆಲಸ ಮುಗುವದ್ನು ಸೂಬದ್ರಿ
ತಾನೊಂದು ಗೂಟೆ ನಿಲೋವಾಳೆ
ತಾನೊಂದು ಗೂಟೆ ನಿಲ್ವದ್ನು ನಾರ್ಣದೆವಾ
ಮಂಟಪೊಡ್ವದಕೇ ನೆಡದಾನೆ
ಮಂಟಪೋಡ್ವದಕೆ ನೆಂಟರಿಗೆ ಬರುವೇಳಿ

ಎಂಟೂ ಚವ್ಕದಲ್ಲೇ ಮನೀಮಾಡೇ | ಮಂಟಿಪೂಡೇ
ನೆಡ್ಗೇ ತಿದ್ದಾರೆ ಕಳಸವೇ
ಅಯ್ದಾ ಬಂದ ಬಾವಾದೀರು ಅಯ್ದು ಬಂದಿಯನಿಟ್ಟೇ
ಜೋಡಲೇ ಕೊಡಪನವಾ ತಡದಾರೇ | ಬಾವಾದೀರು
ಮೂಡನ ಕೇರಿಗೆ ನೆಡದಾರೆ ಬಾವಾದೀರು

ಹೆಗ್ಗೇರಿ ತಡಿಯಲ್ಲೇ ನಿಲೋವಾರೇ
ಬಂದು ಸಿಂಗರಸಿ ಒಂದೂ ಈಳ್ಯಾ ಪಟ್ಟೀ
ಒಪ್ಪಗೆ ಗಂಗಾತಾಯ್ ನಿನಚಾಜಾ | ನಮಗೇ
ತುಂಬಿಕೊಡೇ ಚಂಬೂ ಕೊಡಪಾನ | ನಾವಿನ್ನು

ತುಂಬೂವೊ ಕೇಳೇ ಕಳಸಕೆ |ಮಿಕ್ಕಿದ ನೀರಾ
ಹಾಲೀಸಸಿಗ್ಹೋಯ್ದೇ ಸಲಗೂವೋ | ಅಂದ್ ನಾರ್ಣದೆವ
ಮಾಳಗೀ ಒಳಗೆ ನೆಡದಾನೆ |ನಾರ್ಣದೆವ
ಅಕ್ಸತ್ ಬಟ್ಟಲವಾ ತಡದಾನೆ | ನಾರ್ಣದೆವ
ಎಣ್ಣೀಯಾ ಗಿಂಡೀ ತಡದಾನೆ  |
ಸೂಬದ್ರಿ ಅರ್ಜಿಣ್ನ ಕರ್ಕಂಡೇ ಬರೋವಾನೇ
ಸೂಬದ್ರಿ ಅರ್ಜಿಣ್ನ ಕರ್ಕಂಡೇ ಬರ‍್ವದ್ನು ಅರ್ಜಿಣ್ಣಾ

ಹೊನ್ನಾಮಣಿ ಮೆನೇ ಕುಳತಾನೇ
ಹೊನ್ನಾಮಣಿ ಮೆನೇ ಕುಳುವುದ್ನ ನಾರ್ಣದೆವ
ಬಾವಾಗಕ್ಸತವಾ ಇಡೋವಾನೇ | ನಾರ್ಣದೆವ
ಬಾವಾಗೇ ಚಿಗರಾ ಉಗೋದಾಡೇ
ತಾಳೀ ಬಂದೀಯಾ ಬಾವಾ ತಾ ತಡಕಂಡೇ
ಸುತ್ತಣ್ಣ ದೆವ್ರೀಗೂ ಸರಣಂದೇ |ಅರ್ಜಿಣ್ನ
ಬಾವ್ ಬಂದೀ ಕಳಸ್ ನಿರಿಗ್ ಅರಗಾನೆ

ಆಕಾಸಣ ನೀರು ಬೂಮಿಯಾ ತಳನೀರು
ಆಕೆ ಬಾವನಾ ಕಳಸ್ ನೀರು | ರಾ|ನೇಮಿಂದೇ
ಗೋಪಳರ ಸಿಸುವೇ ಬಳದಾನೆ | ನಾರಿಯೋರು
ಸೂಬದ್ರಿ ಕರ್ಕಂಡೇ ಬರೋವಾರೇ | ನಾರಿಯೋರು
ತಂದೀ ಮಣಿಮೆನೇ ಕುಳಸಾರೆ
ತಂದೀ ಮಣಿಮೆನೇ ಕುಸ್ವದ್ನು ನಾರ್ಣದೆವ

ತಂಗೀಗೇ ಸೆಸೀ ಇಡೋವಾನೇ ನಾರ್ಣದೆವ
ತಂಗೀಗೆ ಚಿಗರಾ ಉಗೋರಾಡೇ
ತಾಳೀ ಬಂದಿಯಾ ಅಣ್ಣಾ ತಾತಡಕಂಡೇ
ಸುತ್ತಣ ದೇವ್ರಿಗೆ ಸರಣಂದೇ | ಸೂಬದ್ರೀಯಾ
ಅರ್ಣ ಬಂದೀ ಕಳಸಗ ನೀರಿಗ್ ಅರುಗಾನೆ

ಅಕಾಸಣ ನೀರು ಭೂಮಿಯಾ ತಳನೀರು
ಆಕೆ ಅಣ್ಣನಾ ಕಳಸ್ ನೀರೆ |ರ| ನೇಮಿಂದೇ
ಗೂಪಳರೆ ಸೀಸುವೇ ಬಳದಾನೆ | ನಾರಿಯೋರು
ಕಾಮನ ಗುಂಡಿಯ ನೀರು ಬೀಮನ ಗುಂಡಿಗೆ ತಿರುಗೇ
ಅರ್ಜುಣ ಗುಂಡ್ಯಲ್ಲೆ ಹದ ಮಾಡೇ | ನಾರ್ಣದೆವ
ಮುತ್ತಿನಾಯರದಾ ಮಣಿತೆಂಗಾ | ತಡಕಂಡೇ
ಅರ್ಜಿಣ್ನಾ ಕೇಸಿಗೆ ನೀರಾ ಎರೆದಾನೇ

ಬಳ್ದಮಿಂದ್ ಅರ್ಜಿಣ್ಗೆ ಬಂದವೇ ಜವಳಿ| ದಿಂಡು
ತೆಂಕನರ್ಜಿಣ್ರಾ ಜವಳೀ (ಯೇ) |ಯ| ದಿಂಡೀನಲ್ಲೇ
ಪಾದಾ ಚಳಿಉದ್ದೇ ಮಡಗಾರೆ |ನೆ| ನಾರ್ಣದೆವಾ
ಪಟ್ಟೀ  ಜೋತುರವಾ ಉಡಸಾನೆ | ನಾರ್ಣದೆವಾ
ಮುತ್ತಿನ ಮುಂಡಸ್ನಾ ತಲಸುತ್ತೇ | ನಾರ್ಣದೆವಾ

ಪಟ್ಟೀ ಜೋತುರವಾ ಹೊಗಲೀಗೆ | ಹಾಯಿಕಂಡೇ
ಹಾಲೂಗಾಯೊಂದಾ ಕೊಡಸಾನೆ | ನಾರ್ಣದೆವಾ
ಮುತ್ತನ ಬಾಸಿಂಗಾ ಮುಡಸಾನೇ
ಮುತ್ತನ ಬಾಸಿಂಗಾ ಮುಡಸ್ವದ್ನು  ನಾರೀಯೋರು
ಸೂಬದ್ರಿ ಕರ್ಕಂಡೇ ನೆಡದಾರೆ | ನಾರಿಯೋರು
ಸೂಬದ್ರೀಗ್ ನೀರಾ ಎರದಾರೆ

ಬಳ್ದ್‌ಮೀಂದ್ ಸೂಬದ್ರೀಗೆ ಬಂದವೇ ಜವ್ಳೀ ದಿಂಡು
ತೆಂಕಣರಜಿಣರಾ ಜವಳೀ (ಯೆ) ಯ| ದಿಂಡಿನಲ್ಲೇ
ಪಾದಾ ಚಳಿ ಉದ್ದೇ ಮಡಗಾರೆ | ನಾರೀಯೋರು
ಪಟ್ಟೀ ನೆರಿಹೊಯ್ದೇ ಉಡಸಾರೆ | ನಾರೀಯೋರು
ಸೂಬದ್ರಿಗೆ ಚಿನ್ನಾ ಇಡೋವಾರೆ | ನಾರೀಯೋರು
ಸೂಬದ್ರಿ ಸೆರ್ಮುಡಿ ಸೆಳ್ದೇ ಕಟ್ಟೆ |ನಾರೀಯೋರು
ಎಳಿಯಾ ಸಿಂಗರವಾ ಮುಡೀಸಾರೆ | ನಾರಿಯೋರು
ಮುತ್ತನ ತೊಂಡಲವಾ ಮುಡೀಸಾರೆ | ನಾರಿಯೋರು

ರನ್ನಾ ದೋಂದಿಳ್ಯಾ ಕೊಡೋವಾರೇ
ರನ್ನ ದೊಂದೀಳ್ಯಾ ಕೊಡ್ವದ್ನು ಸೂಬದ್ರಿ ಅರ್ಜೀಣಾ
ಬಂದೀ ಬಾಗಲ್ಲೇ ನಿಲೋವಾರೆ
ಬಂದೀ ಬಾಗಲ್ಲೇ ನಿಲ್ವದ್ನು ನಾರ್ಣದೆವ
ಮಾಳೂಗೀ ಒಳಗೇ ನೆಡದಾನೆ
ಅರಂಕಣದವರಮನೆ ಮೂರಂಕಣ ಮುಚ್ಚೀಲ
ಹನ್ನೆಯ್ಡಂಕಣದಾ ಅರಮನೆ | ಲಿಂದೇ
ಬಾವಾಗಾರತಿಯಾ ತರೋವಾನೇ | ನಾರ್ಣದೆವ

ಅರ್ಜುನ ಗೊಂದಾರತಿಯೂ ಬೆಳುಗಾನೆ
ಅರ್ಜುನಗೊಂದಾರತಿಯೂ ಬೆಳಗ್ವದ್ನು ಸೂಬದ್ರಿ
ಆರುತಿಗೊಮ್ಮೆ ಸರುಣಂದೇ | ನಾರ್ಣದೆವಾ
ಮಾಳೂಗೀ ಒಳಗೆ ನೆಡದಾನೆ | ನಾರ್ಣದೆವಾ
ಎತ್ತೀದಾರತಿಯಾ ಮಡೂಗಾನೆ | ನಾರ್ಣದೆವಾ
ಮಳಗ್ಗಿಂದೆರಗೆ ಬರೋವಾನೆ |
ದೆವರ ಪೂಜ್ಯಕೆ ನೆಡದಾನೆ
ದೇವರ ಪೂಜ್ಯಕೆ ನೆಡ್ವದ್ನು ಸೊಬದ್ರಿಯ ಅರ್ಜೂಣಾ

ದೆವರೊಡನೋಗೇ ನಿಲೋವಾರೆ
ದೇವರಡೊನೋಗೇ ನಿಲ್ವದ್ನು ನಾರ್ಣದೆವಾ
ತೇದೀಗಂದಾವಾ ಇಡೋವಾನೇ | ನಾರ್ಣದೆವಾ
ದೀಪಾದೂಪೆಲ್ಲಾ ಕಸೀದಾನೆ | ನಾರ್ಣದೆವಾ
ತೆಂಗಿನೆಳಗಾಯಾ ಒಡೆದಾನೆ | ನಾರ್ಣದೆವಾ
ಕಪ್ಪರದಾರತೀಯೂ ಬೆಳೂಗಾನೆ | ನಾರ್ಣದೆವಾ
ತಂಗೀಗೆ ಬಾವ್ಗೊಂದು ಪರ್ಸದವಾ ಕೋಡೋವಾನೇ | ನಾರ್ಣದೆವಾ
ಸೂಬದ್ರೀ ಅರ್ಜಿಣ್ನ ತಂದೀ ಮಂಟಪಲೇ ಕುಳಿಸಾನೆ | ನಾರ್ಣದೆವಾ
ಮಾಳೂಗೀ ಒಳಗೆ ನೆಡದಾನೆ

ಚಲಕೇ ಚೊಳ್ಚಿಕದ್ರು ಕುಲಕೇ ತುಂಬೀಹೋಂಗು
ಕೆಂದೀಯೂ ಕರದೇ ನೊರಿಹಾಲು |ಲಾ| ಗಿಂಡಿಯಾ ತುಂಬೀ
ತೊಳಚೀಯೂ ಮೆನೇ ಮಡೂಗಾನೆ | ಹೆಣ್ಣೀನಣ್ಣಾ.
ಹೊತ್ತಾನಿಯೇ ಹೊನ್ನಾ ಮಉಡಿಮೆನೆ | ಹೆಣ್ಣೀನಣ್ಣಾ
ಮಂಟಪದಲ್ಲೇ ನಿಲೋವಾನೇ
ಎಡದಾ ತೊಡಿಮೆನೆ ಬಾವಾಬಲದ ತೊಡಿಮೆನೆ ತಂಗಿ
ಸಿರಿಗಂಗೆ ಗವರೀ ತೊಡೀಮೆನೆ | ಕೊರಸಿಕಂಡಿ
ಎರದಾನೇ ಸಾಸನದಾ ಕಯ್ದಾರಿ

ಕಾವಣದಲ್ಲೆ | ಹತ್ತೂ ತರದಾ ಕಂಬು
ಹತ್ತಕೆ ಹತ್ತು ಗುರೂಗೋಳು | ಬಟ್ಟಕ್ಕೋಳೂ.
ಹೊತ್ತಾ ನೊಡ್ ದಾರೀ ಎರದಾರೆ.
ದಾರೀ ಎರದಣ್ಣಾ ಮಾಳಗ್ಗೆ ಹೋಗಾನೆ
ತಂಗಿಗೆ ಬಳುವರಿಯಾ ಕೊಡೋವಾನೆ.
ಮಾಳೂಗೀ ಒಳಗೆ ಹತ್ತು ತರದಾಸಿಕ್ಕಾ
ಹತ್ತಕ್ಕೆ ಹತ್ತು ಕಿರೂನಳ್ಳಿ- ಕಂಚೀನುಟ್ಟು
ತಂಗಿಗೆ ಬಳುವರಿಯಾ ಕೊಡೋವಾನೇ

ಮಾಳೂಗೀ ಒಳಗೆ ಅರುತರದಾಸಿಕ್ಕಾ
ಆರಕ್ಕೆ ಆರು ಕಿರೂನಳ್ಳಿ| ಕಂಚೀನುಟ್ಟು
ತಂಗಿಗೆ ಬಳುವರಿಯಾ ಕೊಡೋವಾನೇ.
ಕೊಟ್ಟೋಗೀ ಒಳಗೀನಾ ಗಟ್ಟು ಮಣಕೆಮ್ಮೀಯಾ
ಬಾಲಕೆ ಸುವಣಾ ಗಳಸೀದಾ | ಎಮ್ಮೀಯೂ
ತಂಗಿಗೇ ಬಳುವರಿಯಾ ಕೊಡೋವಾನೇ
ಕೊಂಬು ಸಂದಕದಿಂದೇ ಸರ್ವವಾದೀದಿಂದೆ

ಸೂಬದ್ರಿ ದಿಬ್ಬಣವೇ ಸವನದೆ
ಕೊಂಬು ಸಂದಕದಿಂದೆ ಸರ್ವವಾದಿ |ದಿಂದೆ
ಅರಜಿಣ್ನ ದಿಬ್ಬಣವೆ ಸವನದೆ
ಅರಜಿಣ್ನ ದಿಬ್ಬಣವೆ ಸವನಿ| ಸುಂಗಾರಾಗಿ
ಒಟ್ಟಾ ಗೋಂದಾನೀ ನೆಗೆದತ್ತೇ | ಸೂಬದ್ರಿ ಅರಜೀಣ   .
ತಮ್ಮ ಅರಮನಗೇ ನೆಡದಾರೆ | ಅಲ್ಲಿನ್ನು
ಕವ್ಲರ ದಿಬ್ಬಣವೇ ಎದೂರಾಗೇ | ಗು| ತ್ನು ಕವ್ಲರು
ಆಗೊಂದು ಮಾತಾ ನುಡೀದಾರೆ

ಯಾವಲ್ಲೇ ಹೋಗಿದ್ಯೋ ಯಾವೂಂಗಾ ಮುಡದಿದ್ಯೋ
ಇದು ಎಲ್ಲೇ ತಂದ್ಯೋ ಎಳಗೂಸೇ
ಗೋವೀಗೇ ಹೋಗಿದ್ದೆ ಗೋವಿ ತೀರುತ ಮಿಂದೀ
ಗೋವಿಯ ದಂಡಿ ಹದಿನಾರು | ಮುಡಿಯಲು ಕೊಟ್ರೂ
ಬೇಡಂದ್ರೂ ಕೊಟ್ರೂ ಎಳಗೂಸಾ
ಗುತ್ತೀಗೆ ಹೋಗಿದ್ದೆ ಗುತ್ತೀ ತಿರುತ ಮಿಂದೀ

ಗುತ್ತಿಯ ದಂಡೀ ಹದಿನಾರು | ಮುಡಿಯಲು ಕೊಟ್ರು
ಬೆಡಂದ್ರೂ ಕೊಟ್ರೂ ಎಳಗೂಸೇ | ಅಂದೇಳಿ
ಆನೀಗಿಂದ್ ಕೆಳಗೆ ಇಳೀದಾನೆ
ಆನಿಗಿಂದ್ ಕೆಳಗೆ ಇಳ್ವದ್ನು ಸೂಬದ್ರಿ
ಆಗೊಂದು ಮಾತ ನುಡೀದಾಳೆ

ಮದುಮಕ್ಕಳಂಬೋರು ಮೂರು ದಿನ್ಕೆ ದೆವರು
ದೇವರೆಂಗಬೋರಾ ಕೊಲುಬಾರಾ | ಅಂದೇಳಿ
ಅರ್ಜುನ ಗೆದುರಾಗಿ ನಿಲೋವಾಳೇ
ಅರ್ಜುನ ಗೆದುರಾಗಿ ನಿಲ್ವದ್ನು ಅರ್ಜುನಾ
ಕವ್ಲಿಂದ್ನೂ ಮಾದೇವೀಯನೂ ಬಿಡೋವಾನೇ | ಅರ್ಜೂನಾ
ಮತ್ತು ಕವ್ಲರು ಪಾಪಾ ಮರೆಲೀಲ್ವೋ | ಅಂದೇಳಿ

ಬೋರೀನೆ ಆನೀ ನೆಗದಾರೆ
ಬೋರೀನೇ ಆನೀ ನೆಗದತ್ತೇ ಆರ್ಜೀಣಾ
ತಮ್ಮ ಅರಮನೆಗೆ ನೆಡುದರೇ | ಅರಜೀಣಾ ಸೂಬದ್ರಿ
ಬೋರೀನೇ ಆನೀ ಇಳದಾರೇ |
ಹೋಗಿ ಬಾಗಲ್ಲೇ ನಿಲೋವಾರೆ | ನಾರಿಯೋರು
ತಡ್ದಾರೆ ಚಂಬಗಲೇ ಉದಕವೇ
ನಾರಿಯೋರ್ ಕೊಟ್ಟುದಕಾ ತಟ್ಟನೇ ತಡದಾನೇ

ಕಾಲುಸಿರಿಮೊಕವಾ ತೊಳದಾನೆ | ಅರ್ಜೀಣಾ ಸೂಬದ್ರಿ
ತೂಗುಮಂಚದಲೇ ಕುಳತಾರೆ | ಅರ್ಜೀಣಾ ಸುಬದ್ರಿ
ಮುತ್ನ ಬಾಸಿಂಗಾ ಸೆಡೋಲೀಸೇ | ನಾರಿಯೋರು
ಸೂಬದ್ರಿ ಗೋಂದಾಸಾ ಬಿಡೋಸಾರೆ
ಸೂಬದ್ರೀ ಗೋಂದಾಸಾ ಬಿಡಸ್ವದ್ನು ಸೂಬದ್ರಿ
ಹಾಸನ ಮೆನೋಗೇ ಕುಳತಾಳೆ
ಹಾಸನ ಮೆನೋಗೇ ಕುಳ್ವದ್ನು ನಾರಿಯೋರು

ತಡ್ದಾರೆ ಚಂಬಲಗೇ ಉದಕವೇ
ನಾರ್ಯೋರ ಕೊಟ್ಟುದಕಾ ತಟ್ಟಾನೆ ತಡ್ದಾನೆ
ಕಾಲೂ ಸಿರಿಮೊಕವಾ ತೊಳದಾರೇ ಅರ್ಜೂಣ ಸೂಬದ್ರಿ
ತೂಗು ಮಂಚದಲೇ ಕುಳತಾರೇ | ಆರ್ಜೂಣ ಸೂಬದ್ರಿ

ಮುತ್ತನ ಬಾಸಿಂಗಾ ಸೆಡೂಲೀಸೇ | ನಾರಿಯೋರು
ಸೂಬದ್ರಿ ಗೊಂದಾಸಾ ಬಿಡೂಸಾರೆ
ಸೂಬದ್ರಿ ಗೊಂದಾಸಾ ಬಿಡುಸ್ವದ್ನು ಸೂಬದ್ರಿ
ಹಾಸನ ಮೆನೋಗೇ ಕುಳತಾಳೆ
ಹಾಸನ್ ಮೆನೋಗೇ ಕುಳವದ್ನು ನಾರಿಯೋರು
ಮಾಳೂಗೀ ಒಳಗೆ ನೆಡದಾರೇ

ಆಯುಳ್ಳ ಹಣ್ಣಡಕೆ ಸೋಯಿಸಿದ ಬೆಳಿ ಎಲೆ
ಹಾಲಿನಲಿ ಬೆಂದಾ ತೆನೆಸುಣ್ಣಾ | ತಡಕಂಡೇ
ಮಾಳಗ್ಗಿಂದೆರಗೇ ಬರೋವಾರೇ | ನಾರೀಯೋರು
ಸೂಬದ್ರಿ ಗೊಂದೀಳ್ಯಾ ಕೊಡೋವಾರೇ | ನಾರೀಯೋರು
ತಾವೊಂದೀಳ್ಯಾ ಮೇಲೋವಾರೇ | ನಾರೀಯೋರು
ಅರ್ಜೂನಗೊಂದೀಳ್ಯಾ ಕೊಡೋವಾರೇ

ಕೊಟ್ಟ ಈಳ್ಯವ ತಟ್ಟಾನೆ ತಡದಾನೆ
ಆಯಾಕೊಂದೀಳ್ಯ ಮೆಲೋವಾನೇ
ಎಲಿಯನೇ ತಿಂದಾನೇರಜವಲ್ಲೇ ಉಗಳಾನೆ
ಆಗೊಂದು ಮಾತಾ ನುಡೀದಾನೆ

ಹಸೆಹಾಕೆ ದೇವ್ಗನ್ನೆ ಕಸತೆಗ್ಯೆ ಇಂದ್ರ ಗನ್ನೇ
ದೇವ್ರ ತಂಗೀಗೂ ತನಗೂ ಸೆಳಮಂಚ”
“ನಮ್ಮ ಹೋಲುವರು ಬೂಮೀಲೋಕ್ದ ಲಿಲ್ಲಾ
ನಮಗಿಂದೂ ಚೆಲುವೆ ದೇವರ್ ತಂಗೀ | ಅಕ್ಕಾ ಕೆಳೇ
ನಾವೊಂದ್ ಹಾದಗಲೇ ಇರೂವಾನೆ

ನಮ್ಮಾ ಒಲುವರು ಭೂಮಿ ತೂಕ್ದಲ್ಲಿಲ್ಲಾ
ನಮಗಿಂದು ಚೆಲುವೆ ದೇವರ ತಂಗೀ| ತಂಗೀ ಕೇಳೇ
ನಾವೊಂದ್ ಹಾದಗಲೇಇರೋವಾನೆ |ಅಂದೇಳೇ
ಅವ್ರೋಂದ ಹಾದಗಲೇ ಇರೋವಾರೆ |ಸೂಬದ್ರಿ ಅರ್ಜೀಣಾ
ತಾವೂ ಚಂದದಲೇ ಇರೋವಾರೇ

ಈ ಹಾಡ್ ಹೆಳ್ದರೋರಿಗೆ ಸರ‍್ದನೀ ತಂದೋರಿಗೆ
ಎತ್ತೂಡಲೆ ಬತ್ತ  ಬೆಳೀಯಲೇ | ಈ ಹಾಡಾ
ಆಲೀಸೀ ಕೇಳ್ದೋರು ಕಲೀಯಲೆ

ಈ ಹಾಡ್ ಹೇಳ್ದೋರಿಗೆ ಆಲೀಸೀ ಕೇಳ್ದೋರ್ಗೆ
ದನ ಕರೆಯಲೆ ದಾನ್ಯಾ ಬೆಳೀಯಲೆ | ಈ ಹಾಡಾ
ಚಿತ್ತಯ್ಸೀ ಕೇಳ್ದೋರೂ ಕಲೀಯಾಲೆ

ಈ ಹಾಡ್ ಹೇಳ್ದೋರ್ಗೆ ಸೆರ್ದನೀ ಕೊಟ್ಟೋರ್ಗೆ
ಹಾದಿಗೋಕನದಾ ಸಿಣಗಂಗೆ | ತೀರುತವಾ
ಹೋಗಿ ಮಿಂದುಟ್ಟೋ ಪಲಉಂಟೋ

ಗಿಂಡಿ ಗಿಂಡೀ ತುಂಬೇ ಗಿಂಡಿಲುದ್ಕಾ ತುಂಬೇ
ಗಿಂಡೀ ಬಾಯೀಗೇ ತೆರಳ ತುಂಬೇ |ಬಿ| ದಂತೆ
ತುಂಬಿರಲೇ ನಮ್ಮ ಮನದಲ್ಲೇ | ಈ ಹಾಡು
ಬರತಿರಲೆ ಹಬ್ಬ ಮೋದವೀಗೆ

ಚಂಬು ಚಂಬೂ ತುಂಬೇ ತುಂಬೀಲುದಕಾ ತುಂಬೇ
ಚಂಬೀನ ಬಾಯಿಗೆ ತರಳ ತುಂಬೇ |ಬೀ| ದಂತೆ
ತುಂಬಿರಲೇನಮ್ಮ ಮನದಲ್ಲೇ | ಈ ಹಾಡು
ಬರತಿರಲೇ ಹಬ್ಬ ಮೊದವೀಗೆ

* * *