ಭತ್ತ

‘ಭತ್ತ’ ಜಗತ್ತಿನ ಪ್ರಮುಖ ಆಹಾರ ಬೆಳೆಗಳಲ್ಲೊಂದು. ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ಜನ ತಮ್ಮ ಆಹಾರಕ್ಕಾಗಿ ಅಕ್ಕಿಯನ್ನೇ ಅವಲಂಬಿಸಿದ್ದಾರೆ. ಭತ್ತದ ಬೆಳೆ ವಿಕಾಸವಾದದ್ದು ಮೊದಲು ಭಾರತದಲ್ಲಿ. ಆನಂತರ ಜಪಾನ್‌ನಲ್ಲಿ. ಹೀಗಾಗಿ ಭತ್ತದ ಮೂಲವನ್ನನುಸರಿಸಿ ‘ಇಂಡಿಕಾ’ ಮತ್ತು ‘ಜಪಾನಿಕಾ’ ಎಂಬುದಾಗಿ ವಿಭಾಗೀಕರಿಸಲಾಗಿದೆ.

ಭಾರತದ ಖ್ಯಾತ ಕೃಷಿವಿಜ್ಞಾನಿ, ಭತ್ತದ ತಜ್ಞ ಡಾ.ರಿಚಾರಿಯಾ ಅವರ ಪ್ರಕಾರ ವೇದಗಳ ಕಾಲದಲ್ಲಿ ನಾಲ್ಕು ಲಕ್ಷಕ್ಕೂ ಮೀರಿದ ಭತ್ತದ ತಳಿಗಳಿದ್ದವು! ಹಸಿರು ಕ್ರಾಂತಿಗೂ ಮುಂಚೆ ನಮ್ಮಲ್ಲಿ ಎರಡು ಲಕ್ಷಕ್ಕೂ ಮೀರಿದ ಭತ್ತದ ತಳಿಗಳಿದ್ದವು. ಅಧುನಿಕ ಬೇಸಾಯಕ್ರಮ, ರಾಸಾಯನಿಕ ಗೊಬ್ಬರ, ಕೀಟ ಹಾಗೂ ಕಳೆ ನಾಶಕಗಳು ಕ್ರಮೇಣ ನಮ್ಮ ಅಮೂಲ್ಯ ಭತ್ತದ ತಳಿಗಳನ್ನು ನಾಶಪಡಿಸುತ್ತಾ ಬಂದವು. ಅಧಿಕ ಇಳುವರಿ, ಅಧಿಕ ಲಾಭಗಳ ವ್ಯಾಮೋಹದಲ್ಲಿ ಪಾರಂಪರಿಕವಾಗಿ ಕಾಯ್ದಿಟ್ಟುಕೊಂಡು ಬಂದಿದ್ದ ಎಷ್ಟೋ ತಳಿಗಳನ್ನು ನಮ್ಮ ರೈತ ಮರೆತ ಮತ್ತು ಕಳೆದುಕೊಂಡ. ಇಷ್ಟಾದರೂ ಭಾರತದ ಮಟ್ಟಿಗೆ ಸುಮಾರು ೭೦ರಿಂದ ೭೫ ಸಾವಿರ ಸಾಂಪ್ರದಾಯಿಕ ಭತ್ತದ ತಳಿಗಳು ಉಳಿದುಕೊಂಡು ಬಂದಿರುವುದು ಆಶ್ಚರ್ಯದ ಸಂಗತಿ.

‘ಭತ್ತ’ ಅಪೂರ್ವ ಸಾಮರ್ಥ್ಯ ಹೊಂದಿರುವ ಬೀಜ. ನಮ್ಮ ದೇಶದ ಯಾವುದೇ ಭಾಗದಲ್ಲೂ, ಹವಾಗುಣದಲ್ಲೂ ಅದು ಬೆಳೆಯುತ್ತದೆ. ನಡನೀರಿನಲ್ಲಿ, ಕೆಸರುಗದ್ದೆಯಲ್ಲಿ, ಹೊಲದಲ್ಲಿ, ತೋಟದಲ್ಲಿ, ಗುಡ್ಡ-ಬೆಟ್ಟಗಳಲ್ಲಿ, ಕಡೆಗೆ ಸಮುದ್ರದ ಉಪ್ಪು ನೀರಿನಲ್ಲೂ ಬೆಳೆಯುವ ಸಾಮರ್ಥ್ಯ, ತಳಿ ವೈಶಿಷ್ಟ್ಯಗಳು ಭತ್ತದಲ್ಲಿ ಇವೆ. ಭತ್ತವನ್ನು ‘ಅನ್ನದೇವರು’ ಎಂದು ಪೂಜಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ಇದೆ. ಛತ್ತೀಸ್‌ಘಡದ ಅಕ್ಕಿ ಹಬ್ಬ, ಋತುಪಂಚಮಿ, ನೂಲಹುಣ್ಣಿಮೆ, ಯುಗಾದಿ, ಅಕ್ಷಯ ತೃತೀಯ, ನಾಗಪಂಚಮಿ,  ನವರಾತ್ರಿ ಮುಂತಾದ ಹಬ್ಬಗಳೆಲ್ಲ ಸುಗ್ಗಿ ಮತ್ತು ಧಾನ್ಯ ಸಂರಕ್ಷಣೆಗೆ ಸಂಬಂಧಿಸಿದ ಆಚರಣೆಗಳು. ನಮ್ಮ ರೈತರು ತೀವ್ರ ಬರಗಾಲಗಳ ಸಂದರ್ಭದಲ್ಲೂ ಅವಕ್ಕೂ ಮೀರಿದ ಕಠಿಣ ಸಂದರ್ಭಗಳಲ್ಲೂ ಭತ್ತದ ಬಿತ್ತನೆ ಬೀಜಗಳನ್ನು ಸಂರಕ್ಷಿಸಿಕೊಂಡು ಬಂದದ್ದಕ್ಕೆ ಇತಿಹಾಸದಲ್ಲಿ ಉದಾಹರಣೆಗಳಿವೆ. ಸರಿಸುಮಾರು ೨೦ ಲಕ್ಷ ಜನರನ್ನು ಬಲಿ ತೆಗೆದುಕೊಂಡ ೧೯೪೨ರ ಭೀಕರ ಬರಗಾಲದ ನಂತರವೂ ಬಂಗಾಳದ ರೈತ ಸಮುದಾಯ ತನ್ನ ಭತ್ತದ ತಂಟೆಗೆ ಬ್ರಿಟೀಷರು ಬಾರದಂತೆ ತಡೆಯಿತು. ‘ಜೀವ ಕೊಟ್ಟೇವು ಆದರೆ ಭತ್ತವನ್ನಲ್ಲ’ ಎಂದರು. ಈ ಹಿನ್ನೆಲೆಯಲ್ಲಿ ಹುಟ್ಟಿದ್ದು ತ್ರಿಭಾಗ ಬಂಡಾಯ!

ಆದರೀಗ ಏನಾಗಿದೆ; ಒರೈಝಾ ಸಟೈವಾ- ೧೯೬೬ರಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡಿದ ಭತ್ತದ ತಳಿ. ಇದೀಗ ಈ ತಳಿಯನ್ನು ಸ್ವಿಟ್ಜರ್‌ಲೆಂಡ್‌ನ ಸಿಂಜೆಂಟಾ ಕಂಪೆನಿ ಪೇಟೆಂಟ್ ಮಾಡಿಕೊಂಡಿದೆ. ಅವಕಾಶ ಸಿಕ್ಕರೆ ನಮ್ಮ ವಿಜ್ಞಾನಿಗಳು ದೇಶ ಕೂಡ ಮಾರಿಬಿಡುತ್ತಾರೆ. ಛತ್ತೀಸ್‌ಘಡದ ರಾಯಪುರದ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂಥದ್ದೇ ಪ್ರಯತ್ನ ನಡೆಸಿದ್ದರು. ಹೇಳಿ-ಕೇಳಿ ಛತ್ತೀಸ್‌ಘಡ ಇಂಡಿಯಾದ ‘ಇಂಡಿಕಾ’ ಭತ್ತದ ಪ್ರಭೇದಗಳ ಬಹುದೊಡ್ಡ ಕಣಜ. ಈ ಕಣಜಕ್ಕೆ ಕನ್ನ ಹಾಕಿತ್ತು ಸಿಂಜೆಂಟಾ ಕಂಪೆನಿ.

ಆಧುನಿಕ ಹೈಬ್ರಿಡ್ ತಳಿ, ರಸಗೊಬ್ಬರಗಳ ಬಳಕೆಯ ತರುವಾಯವೂ ಎಲ್ಲೆಡೆಯಂತೆ ಛತ್ತೀಸ್‌ಘಡದಲ್ಲೂ ಉತ್ಪಾದನೆ ಕುಂಠಿತಗೊಳ್ಳುತ್ತಿರುವುದನ್ನು ಮನಗಂಡ ಡಾ.ರಿಚಾರಿಯ ೧೯೭೧ರಲ್ಲಿ ಸ್ಥಳೀಯ ಭತ್ತದ ತಳಿಗಳ ದಾಖಲೀಕರಣ ಹಾಗೂ ಮೌಲ್ಯೀಕರಣಕ್ಕಾಗಿ ಸಂಶೋಧನೆಯನ್ನು ಆರಂಭಿಸಿದರು. ರೈತರು ತಳಿಗಳನ್ನು ಅಭಿವೃದ್ಧಿಪಡಿಸಿ ಮತ್ತೆ ಅವರಿಗೇ ಹಿಂದಿರುಗಿಸುವ ಒಪ್ಪಂದದೊಂದಿಗೆ ಶುರುವಾದ ಈ ಯೋಜನೆಯು ಕಡೆಗೆ ತಳಿ ಸಂಗ್ರಹಕ್ಕಷ್ಟೇ ಸೀಮಿತವಾಗಿಹೋಯಿತು. ಈ ಹಿನ್ನೆಲೆಯಲ್ಲಿ ಡಾ. ರಿಚಾರಿಯಾ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು ತಳಿ ೨೨,೯೭೨. ಇದು ಜಗತ್ತಿನಲ್ಲೇ ಎರಡನೆ ಅತಿ ದೊಡ್ಡ ಸಂಗ್ರಹ. ಛತ್ತೀಸ್‌ಘಡದಲ್ಲಿ ತನ್ನ ಮೂಲವುಳ್ಳ ಪ್ರಭೇದಗಳಲ್ಲದೆ, ಇತರೆಡೆ ಬೆಳೆಯುವ ಛತ್ತೀಸ್‌ಘಡ ಮೂಲದ ೧೯,೦೦೦ ಭತ್ತದ ತಳಿಗಳೂ ಇಲ್ಲಿ ಸಂರಕ್ಷಿಸಲ್ಪಟ್ಟಿದ್ದವು.

ಆಧುನಿಕ ತಳಿ ಮತುತ ರಸಗೊಬ್ಬರಗಳ ಬಳಕೆಯಿಂದಾಗಿ ಇಡೀ ಛತ್ತೀಸ್‌ಘಡ ತತ್ತರಿಸುತ್ತಿರುವಾಗಲೂ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯ ರೈತರೆಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ರೈತರ ಅಂಥ ಬಿಕ್ಕಟ್ಟಿನ ಸಂದರ್ಭದಲ್ಲೂ ಅವರನ್ನು ಪುನರುಜ್ಜೀವನಗೊಳಿಸಬಹುದಾಗಿದ್ದ ತಳಿಗಳನ್ನು ಒಪ್ಪಂದದಂತೆ ಹಿಂದಿರುಗಿಸುವ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ, ೨೦೦೩ರಲ್ಲಿ ತನ್ನ ಸಂಗ್ರಹದಲ್ಲಿದ್ದ ಎಲ್ಲ ೨೨,೯೭೨ ಬಗೆಯ ಭತ್ತದ ಜೀವದ್ರವ್ಯವನ್ನು ರಾತ್ರೋರಾತ್ರಿ ಸಿಂಜೆಂಟಾ ಕಂಪೆನಿಗೆ ಮಾರಿಕೊಳ್ಳಲು ಹುನ್ನಾರ ನಡೆಸಿತು. ಅಂಥದೊಂದು ರೈತದ್ರೋಹಿ, ದೇಶದ್ರೋಹಿ ಕೃತ್ಯದ ಒಪ್ಪಂದವೂ ಜರುಗಿ ಹೋಯಿತು. ಸಕಾಲದಲ್ಲಿ ಡಾ.ರಿಚಾರಿಯಾ ಇದನ್ನು ಬೆಳಕಿಗೆ ತಾರದೆ ಹೋಗಿದ್ದರೆ ಇಷ್ಟೊತ್ತಿಗೆ ನಮ್ಮ ದೇಶದ ಅತ್ಯಮೂಲ್ಯ ೨೨,೯೭೨ ಇಂಡಿಕಾ ಪ್ರಭೇದದ ತಳಿಗಳು ಸಿಂಜೆಂಟಾ ವಶವಾಗಿ ಹೋಗುತ್ತಿದ್ದವು. ಬೀಜ ಸಂರಕ್ಷಣೆಯ ವಿಷಯವಾಗಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ದರೋಡೆ ಮತ್ತು ಪೇಟೆಂಟ್ ವಿಷಯವಾಗಿ ಜರುಗಿದ ಛತ್ತೀಸ್‌ಘಡದ ಸತ್ಯಾಗ್ರಹ ಇಡೀ ಜಗತ್ತಿನ ಗಮನ ಸೆಳೆಯಿತು.

ಶೂನ್ಯ ಬಂಡವಾಳದಿಂದ ಬೆಳೆಯುತ್ತಿರುವ ಭತ್ತ

ಬಾಸ್ಮತಿ ಅಕ್ಕಿ ಸಂಬಂಧದಲ್ಲೂ ನಮ್ಮ ವಿಜ್ಞಾನಿಗಳ ವಂಚನೆ ಎದ್ದುಕಾಣುವಂಥದ್ದು. ಆಯಾಯ ಕ್ಷೇತ್ರಗಳಲ್ಲಿ ನುರಿತವರು ಬಹುರಾಷ್ಟ್ರೀಯ ಕಂಪನಿಗಳಿಗೆ ತಮ್ಮನ್ನು ಮಾರಿಕೊಂಡ ಕಾರಣವಾಗಿಯೇ ನಮ್ಮ ಅದೆಷ್ಟೋ ಸಂಪನ್ಮೂಲಗಳ ಮೇಲೆ ಸ್ವಾಮ್ಯತೆ ಸಾಧಿಸಲಾಗಿಲ್ಲ. ಈ ಪೇಟೆಂಟ್ ಸಂಬಂಧಿ ವಿಷಯಗಳಿಗೆ ಆಮೇಲೆ ಬರೋಣ.

ಬಾಸ್ಮತಿ ಬೆಳೆಯಲ್ಲೂ ಜಗತ್ತಿನಲ್ಲೇ ಅತಿ ದೊಡ್ಡ ಸ್ಥಾನ ಭಾರತದ್ದು. ಇಲ್ಲಿ ೨೭ ಬಗೆಯ ತಳಿಗಳಿವೆ. ೧೯೯೭ರ ಸೆಪ್ಟೆಂಬರ್ ಎರಡರಂದು ಟೆಕ್ಸಾಸ್ ಮೂಲದ ರೈಸ್‌ಟೆಕ್ ಇಂಕ್ ಭಾರತದ ಬಾಸ್ಮತಿ ತಳಿಯೊಂದರ ಮೇಲೆ ಪೇಟೆಂಟ್ ಪಡೆಯಿತು. ಬಾಸ್ಮತಿಯ ವಂಶವಾಹಿಯಲ್ಲದೆ, ರೈತರು ಅಭಿವೃದ್ಧಿಪಡಿಸಿದ ಬಾಸ್ಮತಿಯ ಮೇಲೂ ರೈಸ್‌ಟೆಕ್‌ಗೆ ಹಕ್ಕು ನೀಡಲಾಗಿದೆ. ಈ ರೈಸ್‌ಟೆಕ್-ಕಾಸ್ಮತಿ, ಟೆಕ್ಸ್‌ಮತಿ, ಜಾಸ್ಮತಿ ಹೆಸರುಗಳಲ್ಲಿ ಬಾಸ್ಮತಿ ಅಕ್ಕಿಯನ್ನು ಮಾರುಕಟ್ಟೆಗೆ ತಂದಿದೆ.

ಭಾರತದ ವಾರ್ಷಿಕ ಬಾಸ್ಮತಿ ಅಕ್ಕಿ ಉತ್ಪಾದನೆ ೬,೫೦,೦೦೦ ಟನ್‌ಗಳಷ್ಟು, ನಮ್ಮ ಭತ್ತ ಕೃಷಿ ಕ್ಷೇತ್ರದಲ್ಲಿ ಶೇಕಡ ೧೦ರಿಂದ ೧೫ ಭಾಗದಲ್ಲಿ ಬಾಸ್ಮತಿ ಬೆಳೆಯಲಾಗುತ್ತಿದೆ. ಜಗತ್ತಿನ ಸುಮಾರು ೮೫ ರಾಷ್ಟ್ರಗಳಿಗೆ ನಮ್ಮ ಬಾಸ್ಮತಿ ರಫ್ತಾಗುತ್ತಿದೆ. ಉದ್ದಕಾಳು, ವಿಶಿಷ್ಟ ಸುಗಂಧ ನಮ್ಮ ಬಾಸ್ಮತಿಯ ವೈಶಿಷ್ಟ್ಯ.

ಶೂನ್ಯ ಬಂಡವಾಳದಲ್ಲಿ ಭತ್ತ ಬೆಳೆವ ವಿಧಾನ

ಪ್ರತಿ ಜೀವಿಗಳು ನೇರವಾಗಿ ಉಸಿರಾಡುತ್ತವೆ. ಸಸ್ಯಗಳೂ ಕೂಡ. ಆದರೆ ಭತ್ತದ ವಿಶೇಷತೆಯೇ ಬೇರೆ. ಅದು ಬೇರಿನ ಮೂಲಕ ಉಸಿರಾಡುತ್ತದೆ. ನೀರಿನಲ್ಲೂ ಉಸಿರಾಡುವ ವಿಶೇಷ ಕ್ಷಮತೆ ಭತ್ತಕ್ಕಿದೆ. ನೀರಿಲ್ಲಿದ್ದರೂ ಉಸಿರಾಡುತ್ತದೆ. ಗದ್ದೆಯಲ್ಲಿ ನೀರಿಲ್ಲದಿದ್ದರೆ ವಾತಾವರಣದಿಂದಲೇ ನೀರು ಸ್ವೀಕರಿಸುವ ವಿಶೇಷ ಸಾಮರ್ಥ್ಯ ಭತ್ತದ ಬೆಳೆಗಿದೆ. ಗದ್ದೆಯಲ್ಲಿ ನೀರಿದ್ದರೆ ಮಾತ್ರ ಭತ್ತ ಬೆಳೆಯುವುದು ಸಾಧ್ಯ ಅನ್ನುವುದು ತಪ್ಪು ಕಲ್ಪನೆ.

ಒಂದು ಕೆ.ಜಿ. ಅಕ್ಕಿಯ ಹಿಂದೆ ೫೦೦ ಲೀಟರ್ ನೀರು ಅಡಗಿದೆ. ಒಂದು ಕೆ.ಜಿ. ಸಕ್ಕರೆ ನಿರ್ಮಾಣದ ಹಿಂದೆ ೭೦೦ ಲೀಟರ್ ನೀರು ಅಡಗಿದೆ. ಒಂದು ವೇಳೆ ಕೇಂದ್ರ ಸರಕಾರದವರು ಅಕ್ಕಿ ಮತ್ತು ಸಕ್ಕರೆಗಳನ್ನು ರಫ್ತು ಮಾಡಿದರೆ, ಅಷ್ಟು ಪ್ರಮಾಣದ ನೀರನ್ನೂ ರಫ್ತು ಮಾಡುತ್ತಿದ್ದೇವೆ ಅನ್ನವುದು ಗಮನದಲ್ಲಿರಲಿ.

ವಾಸ್ತವವಾಗಿ ಭತ್ತ ಹೆಚ್ಚು ನೀರು ಬೇಡದ ಬೆಳೆ.

ವಾರ್ಷಿಕ ೯೦೦ ಮಿ.ಮಿ. ಮಳೆ ಬೀಳುವ ಯಾವುದೇ ಪ್ರದೇಶದಲ್ಲೂ ಭತ್ತ ಬೆಳೆಯಬಹುದು. ನಿಸರ್ಗ ಕೃಷಿ ಅನುಸರಿಸುವವರು ಇನ್ನುಮುಂದೆ ಭತ್ತಕ್ಕಾಗಿ ಕೆಸರುಗದ್ದೆ ಮಾಡಿಕೊಳ್ಳಬೇಕಾಗಿಲ್ಲ. ಉಳುಮೆ ಕೂಡ ಮಾಡಬೇಕಾಗಿಲ್ಲ.

ನಾವೀಗ ಈ ಅಕ್ಟೋಬರ್ ತಿಂಗಳಿನಲ್ಲಿ ಭತ್ತ ಕಟಾವು ಮಾಡುತ್ತೀವಿ; ಕಟಾವಿಗೂ ಹದಿನೈದು ದಿನ ಮುಂಚೆ ಉದ್ದು, ಹೆಸರು, ಅಲಸಂದೆ, ಕಡಲೆ, ಬೀನ್ಸ್, ಅವರೆ, ಹುರುಳಿ, ಬಟಾಣಿ- ಈ ಎಲ್ಲ ದ್ವಿದಳ ಧಾನ್ಯಗಳನ್ನು- ಮಿಶ್ರ ಮಾಡಿ (ಎಕರೆಗೆ ಸುಮಾರು ಆರರಿಂದ ಎಂಟು ಸೇರು) ಭತ್ತದ ಬೆಳೆ ನಡುವೆ ಒತ್ತೊತ್ತಾಗಿ ಚೆಲ್ಲಿರಿ. ಭೂಮಿಯಲ್ಲಿ ತೇವ ಇರುವುದರಿಂದ ಬೀಜಗಳು ಮೊಳೆಯುತ್ತವೆ. ಹೀಗೆ ದ್ವಿದಳ ಧಾನ್ಯ ಚೆಲ್ಲಿದ ೧೫ ದಿವಸಗಳ ನಂತರ ಭತ್ತ ಕಟಾವು ಮಾಡಿ. ಕಟಾವು ಮಾಡುವಾಗ ಮೊಳಕೆಗಳಿಗೆ ಹಾನಿಯಾದರೆ ಚಿಂತಿಸುವ ಅಗತ್ಯವಿಲ್ಲ. ಬೀಜ ಬಿತ್ತಿದ ಒಂದೆರಡು ದಿನಗಳಲ್ಲೇ ಜೀವಾಮೃತ ನೀಡಿ.

ಜೀವಂತ ಹೊದಿಕೆಯ ಆಸರೆಯಲ್ಲಿ ಎರೆಹುಳುಗಳು ಕಾರ್ಯಾಚರಣೆ ಶುರುಮಾಡುತ್ತವೆ. ಭೂಮಿ ಫಲವತ್ತುಗೊಳ್ಳುತ್ತದೆ. ನವೆಂಬರ್-ಡಿಸೆಂಬರ್‌ನಲ್ಲಿ ಬೀಳುವ ಮಳೆ ಬೆಳೆಗಳಿಗೆ ಹಿತಕಾರಿ. ಫಸಲು ಬಂದ ಬಳಿಕ ಕೊಯ್ದುಕೊಳ್ಳಿ. ಗಿಡಗಳನ್ನು ಹಾಗೆಯೇ ಬಿಟ್ಟುಬಿಡಿ. ಭತ್ತ ಒಕ್ಷಣೆಯಾಗಿ ಉಳಿದಿರುವ ಹುಲ್ಲು, ಹೊಟ್ಟು, ಜಳು ಇತ್ಯಾದಿಗಳನ್ನೆಲ್ಲ ದ್ವಿದಳ ಧಾನ್ಯಗಳ ಮಲ್ಚಿಂಗ್ ಮೇಲೆ ಹರಡಿ. ಭತ್ತದ ಹುಲ್ಲಿನಲ್ಲಿ ಶೇಕಡ ೮೦ರಷ್ಟು ಆರ್ಗ್ಯಾನಿಕ್ ಕಾರ್ಬನ್ ಇದೆ. ನಾವು ದ್ವಿದಳ ಧಾನ್ಯ ಬೆಳೆಯದೆ ಭತ್ತ ಕಟಾವಿನ ನಂತರ ಬರೇ ಹುಲ್ಲನ್ನೇ ಮಲ್ಚಿಂಗ್ ಮಾಡಿದ್ದರೆ, ಆ ಎಲ್ಲ ಆರ್ಗ್ಯಾನಿಕ್ ಕಾರ್ಬನ್ ಗಾಳಿಯಲ್ಲಿ ಲೀನವಾಗಿಬಿಡುತ್ತಿತ್ತು. ಹೀಗಾಗಿ ಮಲ್ಚಿಂಗ್ ಮಾಡಿಯೂ ಲಾಭ ಇರುತ್ತಿರಲಿಲ್ಲ. ಭತ್ತ ಕಟಾವಿಗಿಂತ ಮುಂಚೆಯೇ ದ್ವಿದಳ ಧಾನ್ಯ ಬಿತ್ತಿದ್ದೇವಾದ್ದರಿಂದ ಸಹಜವಾಗಿ ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣವಾಗಿರುತ್ತದೆ. ಹೀಗಾಗಿ ೮೦% ಸಾವಯವ ಕಾರ್ಬನ್‌ಗೆ ೭ರಿಂದ ೮% ನೈಟ್ರೋಜನ್ ಸೇರಿ ಹ್ಯೂಮಸ್ ಅಭಿವೃದ್ಧಿಯಾಗುತ್ತದೆ. ನಮ್ಮ ಮಣ್ಣಿಗೆ ಇಂಥ ಸ್ಥಿತಿ ಪ್ರಾಪ್ತವಾದ ಕೂಡಲೆ ನಮ್ಮ ಸ್ಥಳೀಯ ಭತ್ತದ ತಳಿಗಳನ್ನೇ ಬಳಸಿ ಅಧಿಕ ಇಳುವರಿಯನ್ನು ಪಡೆಯಬಹುದು.

ಜೂನ್ ತಿಂಗಳಲ್ಲಿ ಮಾನ್ಸೂನ್ ಶುರುವಾಗುತ್ತದೆ. ಮೇ ತಿಂಗಳ ಕಡೇ ವಾರದಲ್ಲಿ ಭತ್ತ ಬಿತ್ತೋಣ. ನಾವೀಗ ಉಳುಮೆ ಮಾಡುವಂತಿಲ್ಲ. ಸಾಲಿನಿಂದ ಸಾಲಿಗೆ ೧.೫ ಅಡಿ; ಬೀಜದಿಂದ ಬೀಜಕ್ಕೆ ೧/೨ ಅಡಿ ಅಂತರ ಇಟ್ಟು; ಒಂದು ಕೋಲಿನಿಂದ ಒಂದರಿಂದ ಒಂದೂವರೆ ಇಂಚು ಆಳಕ್ಕೆ ಗುಳಿಮಾಡಿ. (ಒಂದೂವರೆ ಇಂಚಿಗಿಂತ ಹೆಚ್ಚು ಆಳ ಬೇಡ) ಎರಡು ಕೆ.ಜಿ. ಭತ್ತದ ಬೀಜಗಳಿಗೆ ಬೀಜಾಮೃತದಿಂದ ಬೀಜೋಪಚಾರ ಮಾಡಿ. ಪ್ರತಿ ಗುಳಿಗೆ ತಲಾ ಎರಡೆರಡು ಬೀಜಗಳನ್ನು ಹಾಕಿ. ಮಣ್ಣು ಮುಚ್ಚುವುದು ಬೇಡ. ಮಳೆ ಬಂದಾಗ ತಾನಾಗಿಯೇ ಮಣ್ಣು ಮುಚ್ಚಿಕೊಳ್ಳುತ್ತದೆ. ಮಳೆ ಬಿದ್ದ ನಂತರ ಜೀವಾಮೃತ ನೀಡಿ ಎಲ್ಲ ಬೀಜಗಳೂ ಮೊಳಕೆಯೊಡೆಯುತ್ತವೆ.

ನಿಸರ್ಗ ಕೃಷಿಯಲ್ಲಿ ಭತ್ತ ಬೆಳೆಯುವವರು ೧. ಡೆಹರಾಡೂನ್ ಬಾಸ್ಮತಿ, ೨. ಪೂಸಾ ಬಾಸ್ಮತಿ, ೩. ಬಾಸ್ಮತಿ-೩೭೦, ೪. ಚಿನ್ನೂರ್, ೫. ಇಂದ್ರಾಣಿ, ೬. ಬಾಸ್ರಾಯಿ ಕೋಲಂ, ೭. ಗಂಧಸಾಲ್, ೮. ಜೀರಿಗೆ ಸಾಂಬ, ೯. ಅಂಬೆಮಹೂರ್… ಈ ಬಗೆಯ ಸ್ವಾದ, ಸುಗಂಧ, ಪೌಷ್ಟಿಕತೆ, ಪ್ರತಿರೋಧಶಕ್ತಿ, ಕೀಪಿಂಗ್ ಕ್ವಾಲಿಟಿಗಳು ಸಮೃದ್ಧವಾಗಿರುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಿ. ಮೇಲಿನ ಕ್ರಮ ಅನುಸರಿಸಿದರೆ ಭತ್ತದ ಕನಿಷ್ಠ ಇಳುವರಿ ೪೦ ಕ್ವಿಂಟಾಲ್! ಇಲ್ಲಿ ಉಳುಮೆ ಇಲ್ಲ, ಕೆಸರುಗದ್ದೆಯಿಲ್ಲ, ರಸಗೊಬ್ಬರಗಳಿಲ್ಲ, ರಾಸಾಯನಿಕ ಕೀಟನಾಶಕ, ಕಳೆನಾಶಕಗಳಿಲ್ಲ, ನೀರು ಕಟ್ಟಬೇಕಾಗಿಲ್ಲ, ಕಡೆಗೆ ಖರ್ಚೂ ಇಲ್ಲ. ಇಲ್ಲಿ ಹೆಚ್ಚು ಕಳೆ ಬರುವುದಿಲ್ಲ. ಕಳೆ ನಿಯಂತ್ರಣ ಅಷ್ಟು ದೊಡ್ಡ ರಗಳೆಯ ಕೆಲಸವಲ್ಲ. ಯಥಾಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಭತ್ತದ ನಡುವೆ ದ್ವಿದಳ ಧಾನ್ಯಗಳನ್ನು ಚೆಲ್ಲಿ: ಭತ್ತ ಬಲಿತ ಮೇಲೆ ಕಟಾವು ಮಾಡಿ.

ಬೆಳೆ ಸಂರಕ್ಷಣೆ

ತಿಂಗಳಿಗೊಮ್ಮೆ ಜೀವಾಮೃತ ನೀಡಿ. ಪ್ರತಿ ಹದಿನೈದು ದಿವಸಕ್ಕೊಮ್ಮೆಯೂ ಜೀವಾಮೃತ ನೀಡಬಹುದು. ಭತ್ತ ಮೊಳಕೆಗೆ ಬಂದ ೨೦ರಿಂದ ೩೦ ದಿನಗಳ ಒಳಗೆ ನೂರು ಲೀಟರ್ ನೀರಿನೊಂದಿಗೆ ಎರಡು ಲೀಟರ್ ನಾಡ ಹಸುವಿನ ಗಂಜಳ ಬೆರೆಸಿ ಬೆಳೆಗೆ ಸಿಂಪಡಿಸಿ. ಇದಾದ ೧೫ ದಿವಸಗಳ ನಂತರ ನೂರು ಲೀಟರ್ ನೀರಿನೊಂದಿಗೆ ಮೂರು ಕೆ.ಜಿ. ಸಗಣಿ, ಐದು ಲೀಟರ್ ಗಂಜಳ ಬೆರೆಸಿ-೨೪ ಗಂಟೆಗಳ ನಂತರ ಈ ಮಿಶ್ರಣವನ್ನು ಬಸಿದು ಫಸಲಿಗೆ ಸಿಂಪಡಿಸಿ. ಸೆಪ್ಟೆಂಬರ್ ತಿಂಗಳ ಎರಡನೆ ವಾರ ಅಥವಾ ಮೂರನೇ ವಾರ (ಬೆಳೆ ಕಟಾವಿಗೆ ಒಂದು ತಿಂಗಳಿರುವಾಗ) ನೂರು ಲೀಟರ್ ನೀರಿಗೆ ಮೂರು ಲೀಟರ್ ಹುಳಿ ಮಜ್ಜಿಗೆ ಸೇರಿಸಿ ಸಿಂಪಡಿಸಿ. ಇಷ್ಟು ಮಾಡಿದರೆ ನಿಮ್ಮ ಕರ್ತವ್ಯ ಮುಗಿಯಿತು. ವಿಷಮುಕ್ತ ಮಣ್ಣು, ವಿಷಮುಕ್ತ ಪರಿಸರ, ವಿಷಮುಕ್ತ ಆಹಾರ, ಸಾಲಮುಕ್ತ ಜೀವನ ನಿಮ್ಮದಾಯಿತು.

ಕಬ್ಬು ಇಳುವರಿಯಲ್ಲಿ ಹೊಸ ದಿಗಂತ

ಕಬ್ಬು ಹುಲ್ಲು ಜಾತಿಯ ಸಸ್ಯ. ಸೂರ್ಯನ ಪ್ರಖರತೆ ತಾಳಿಕೊಳ್ಳುವ ಶಕ್ತಿ ಕಬ್ಬಿನಲ್ಲಿದೆ. ಹಾಲಿ ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ಬಳಸುತ್ತಿರುವ ನೀರಿನ ಪ್ರಮಾಣ ಇದೆಯಲ್ಲಾ, ಆ ನೀರಿನಲ್ಲೇ ನಿಸರ್ಗ ಕೃಷಿಯಲ್ಲಿ ಹತ್ತು ಎಕರೆ ವಿಸ್ತೀರ್ಣದಲ್ಲಿ ಕಬ್ಬು ಬೆಳೆಯಬಹುದು. ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ಬಿತ್ತನೆಗಾಗಿ ನಾಲ್ಕು ಟನ್ ಕಬ್ಬು ಬಳಸುತ್ತಿದ್ದೇವೆ. ಇಲ್ಲಿ ಒಂದು ಎಕರೆಗೆ ಬಳಸುವ ಬಿತ್ತನೆಯನ್ನು ನಿಸರ್ಗ ಕೃಷಿಯಲ್ಲಿ ೧೬ ಎಕರೆಗೆ ಬಳಸಬಹುದು. ಇವತ್ತು ಒಂದು ಟನ್ ಕಬ್ಬಿನ ಬೆಲೆ- ಒಂದು ಸಾವಿರ ರೂಪಯಿ. ಒಂದು ಟನ್ ಕಬ್ಬಿನಲ್ಲಿ ೧೫೦ ಕೆ.ಜಿ, ಸಕ್ಕರೆ ತಯಾರಿಸಲಾಗುತ್ತದೆ. ಅಂದರೆ ನಾವು ಬಿತ್ತನೆಗಾಗಿ ಬಳಸುವ ನಾಲ್ಕು ಟನ್ ಕಬ್ಬಿನಿಂದ ಆರು ಕ್ವಿಂಟಾಲ್ ಸಕ್ಕರೆ ತಯಾರಿಸಬಹುದು. (ಆರು ಕ್ವಿಂಟಾಲ್ ಸಕ್ಕರೆಯ ಬೆಲೆ-೯೦೦ ರೂ.ಗಳು) ಒಂದು ಕೆ.ಜಿ. ಸಕ್ಕರೆ ಉತ್ಪಾದನೆಯ ಹಿಂದೆ ೭೦೦ ಲೀಟರ್ ನೀರು ಅಡಗಿದೆ. ೬೦೦ ಕೆ.ಜಿ. ಸಕ್ಕರೆ x ೭೦೦ ಲೀಟರ್ ನೀರು; ಅಂದರೆ ೪,೨೦,೦೦೦ ಲೀಟರ್ ನೀರು ವ್ಯಯವಾಗಿದೆ. ಈ ಮಾಹಿತಿ ನಿಮ್ಮ ಗಮನದಲ್ಲಿರಲಿ.

ನಮ್ಮ ಆಧುನಿಕ ಕೃಷಿ ವಿಜ್ಞಾನ ಕಬ್ಬನ್ನು ಅತ್ಯಂತ ಅವೈಜ್ಞಾನಿಕ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ವರ್ಷ ವರ್ಷವೂ ಖರ್ಚು ಜಾಸ್ತಿ ಆಗಿ ಇಳುವರಿ ಕಡಿಮೆಯಾಗುತ್ತಾ ಬಂದಿದೆ. ೨೦,೦೦೦ ಎಕರೆ ಪ್ರದೇಶದಲ್ಲಿ ಎಕರೆಗೆ ನಾಲ್ಕು ಟನ್‌ನಂತೆ ಬಿತ್ತನೆಗಾಗಿ ಕಬ್ಬು ಬಳಸಿದರೆ- ಬಿತ್ತನೆ ಕಬ್ಬಿನ ವೆಚ್ಚವೇ ಎಂಟು ಕೋಟಿ ರೂಪಾಯಿ ಆಗುತ್ತದೆ. ನೈಸರ್ಗಿಕ ಕೃಷಿಯಲ್ಲಿ ಅಷ್ಟೇ ವಿಸ್ತೀರ್ಣದ ಬಿತ್ತನೆಗಾಗಿ ತಗಲುವ ವೆಚ್ಚ ೫೦ ಲಕ್ಷ ರೂಪಾಯಿಗಳು ಮಾತ್ರ.

ನಾವೀಗ ಶೂನ್ಯ ಬಂಡವಾಳದಿಂದಲೇ ಕಬ್ಬಿನ ಬೆಳೆ ಶುರು ಮಾಡೋಣ. ಇಲ್ಲಿ ಒಮ್ಮೆ ಕಬ್ಬು ನೆಟ್ಟರೆ ಸತತವಾಗಿ ೩೫ ವರ್ಷ ಕಬ್ಬು ಬೆಳೆಯಬಹುದು. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಾ ಹೋಗಿ ತನ್ನ ಗರಿಷ್ಠ ಇಳುವರಿ ಸಾಮರ್ಥ್ಯವನ್ನು ಕಬ್ಬು ಪ್ರದರ್ಶಿಸುತ್ತದೆ. ಅಂದರೆ ಎಕರೆಗೆ ೨೦೦ ಟನ್ ದಾಟುವ ಸಾಮರ್ಥ್ಯ. ಹೈಬ್ರಿಡ್ ತಳಿಯ ಕಬ್ಬಿನಲ್ಲಿ ಈ ಸಾಮರ್ಥ್ಯ ಇಲ್ಲ. ಮೊದಲನೇ ಬೆಳೆಯಿಂದ ಎರಡನೇ ಬೆಳೆ, ಎರಡನೇ ಬೆಳೆಯಿಂದ ಮೂರನೇ ಬೆಳೆಗೆ ಬರುವಷ್ಟರಲ್ಲಿ ಅದರ ಇಳುವರಿ ಸಾಮರ್ಥ್ಯ ಅರ್ಧದಷ್ಟು ಕುಸಿದಿರುತ್ತದೆ.

ಸಾಮಾನ್ಯವಾಗಿ ನಮ್ಮ ಬೆಳೆಗಾರರು ಸಾಲಿನಿಂದ ಸಾಲಿಗೆ ಮೂರು ಅಡಿ, ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತವಿಟ್ಟು ಕಬ್ಬು  ಬೆಳೆಯುತ್ತಿದ್ದಾರೆ. ಹೀಗಾದಾಗ ಬಿತ್ತನೆಗಾಗಿ ಎಕರೆಗೆ ನಾಲ್ಕು ಟನ್ ಕಬ್ಬು ಬೇಕು. ಈ ರೀತಿ ಕಬ್ಬು ನೆಡುವುದರಿಂದಾಗಿ ಸಾಲುಗಳು ಕತ್ತಲುಗಟ್ಟುತ್ತವೆ. ಕಬ್ಬಿನ ಎಲ್ಲಾ ಗರಿಗಳಿಗೆ ಬೆಳಕು ತಾಗುವುದಿಲ್ಲ. ಜೊತೆಗೆ ಕಬ್ಬು ಬೆಳೆಯುತ್ತಿದ್ದಂತೆ ಮುರಿಗೆ ಹಾಕಿ ಪಟ ಕಟ್ಟುತ್ತಾರಾದ್ದರಿಂದ ಹೆಚ್ಚಿನ ಗರಿಗಳಿಗೆ ಆಹಾರ ತಯಾರಿಸುವ ಅವಕಾಶವೇ ಸಿಗುವುದಿಲ್ಲ. ಇದರ ಜೊತೆಗೆ ಯಥೇಚ್ಛ ನೀರು ಬೇರೆ! ಅಹಾರ ಸ್ವೀಕರಿಸಲ ಆಗದ ಗಿಡಗಳು ಬಸವಳಿಯುತ್ತವೆ, ರೋಗಗಳ ದಾಳಿಗೆ ಬಲಿಯಾಗುತ್ತವೆ.

ವಾಸ್ತವವಾಗಿ ಕಬ್ಬಿನ ನಿಜವಾದ ನೈಸರ್ಗಿಕ ಅಂತರ ಸಾಲಿನಿಂದ ಸಾಲಿಗೆ ೧೨ ಅಡಿ, ಗಿಡದಿಂದ ಗಿಡಕ್ಕೆ ೮ ಅಡಿ. ಇಷ್ಟು ದೂರದ ಅಂತರ ಕಂಡು ಅನೇಕರು ಹೌಹಾರುತ್ತಾರೆ. ಮಹಾರಾಷ್ಟ್ರದ ನೈಸರ್ಗಿಕ ಕೃಷಿಯ ಕಬ್ಬು ಬೆಳೆಗಾರರು ೮’x೮’ ರ ಅಳತೆಯನ್ನು ಮಾಡೆಲ್ ಮಾಡಿಕೊಂಡಿದ್ದಾರೆ. ನಾವೀಗ ಶುರುವಿನಿಂದಲೇ ಹೆಚ್ಚು ಇಳುವರಿ ಪಡೆಯುವ ಹಿನ್ನೆಲೆಯಲ್ಲಿ ಕಬ್ಬಿನ ಅಂತರವನ್ನು ಸಾಲಿನಿಂದ ಸಾಲಿಗೆ ೮ ಅಡಿ, ಗಿಡದಿಂದ ಗಿಡಕ್ಕೆ ೨ ಅಡಿಗೆ ಮಿತಿಗೊಳಿಸಿಕೊಳ್ಳೋಣ.

ಈ ಮಿತಿಯಲ್ಲಿ ಒಂದು ಎಕರೆಯಲ್ಲಿ ಕಬ್ಬು ಬೆಳೆಯಲು ೧೭೦ ಕಬ್ಬು ಸಾಕು. ಈ ೧೭೦ ಕಬ್ಬಿನ ತೂಕ ೨೫೦ ಕೆ.ಜಿ. ಒಂದು ಎಕರೆಯ ವಿಸ್ತೀರ್ಣ ೪೩,೫೬೦ ಚದರಡಿ(ಕ್ಷೇತ್ರಫಲ). ಇದನ್ನು ಸಾಲುಗಳಿಗೆ ರೂಪಾಂತರಿಸಿ. ಈ ವಿಸ್ತರಣೆಯ ಒಟ್ಟು ಉದ್ದ (ಎಂಟು ಅಡಿ ಅಂತರದ ಸಾಲು) ೫,೪೪೨ ಅಡಿ. ಈ ೫,೪೪೨ ಅಡಿ ಉದ್ದವನ್ನು ೨ ರಿಂದ ಭಾಗಿಸಿ (ಗಿಡದಿಂದ ಗಿಡಕ್ಕೆ ಅಡಿ ಅಂತರ). ಈ ಪ್ರಕಾರ ಒಂದು ಎಕರೆಗೆ ೨,೭೨೨ ಕಬ್ಬಿನ ಗಿಣ್ಣುಗಳು ಬಿತ್ತನೆಗೆ ಬೇಕು. ಬಿತ್ತನೆಗಾಗಿ ಒಂದು ಕಬ್ಬಿನ ಜಲ್ಲೆಯಿಂದ ೧೬ ಗಿಣ್ಣುಗಳು ದೊರೆಯುತ್ತವೆ. ೧೭೦ ಕಬ್ಬಿನ ಜಲ್ಲೆಯಿಂದ ೨,೭೨೦ ಕಬ್ಬಿನ ಗಿಣ್ಣುಗಳನ್ನು ನಾವು ಪಡೆಯಬಹುದು.

ನಾವೀಗ ನಮ್ಮ ಕಬ್ಬು ಕೃಷಿಯನ್ನು ಒಂದು ಕಬ್ಬಿನ ಜಲ್ಲೆಯಿಂದಲೆ ಶುರುಮಾಡೋಣ. ಆ ಒಂದು ಕಬ್ಬಿನ ಬೆಲೆ ೧.೫ ರೂಪಾಇ. ಒಂದೂವರೆ ರೂಪಾಯಿ ತೆತ್ತರೆ ಶೂನ್ಯ ಬಂಡವಾಳದ ಮಾತೆಲ್ಲಿ ಅಂತ ಚಿಂತೆ ಮಾಡುತ್ತಾ ನಿಲ್ಲಬೇಕು. ಎಂಟಾಣೆ ಹೆಚ್ಚು ಕೊಟ್ಟೇ ಕಬ್ಬು ತನ್ನಿ. ಒಂದು ಜಿಲ್ಲೆ ಕಬ್ಬು ತರಲು ಟ್ರಾಕ್ಟರ್ ಬೇಕಾಗಿಲ್ಲ ತಾನೆ? ಬಿತ್ತನೆ ಆಯ್ಕೆ ಬಗ್ಗೆ ಗಮನಕೊಡಿ. ಆಯ್ಕೆ ಮಾಡಿಕೊಳ್ಳಲಿರುವ ಕಬ್ಬು ಏಳರಿಂದ ಒಂಬತ್ತು ತಿಂಗಳ ನಡುವಿನದ್ದಾಗಿರಬೇಕು. ನೈಸರ್ಗಿಕ ಕೃಷಿಯಲ್ಲಿ ಬೆಳೆದ ಕಬ್ಬಿಗೆ ನಿಮ್ಮ ಮೊದಲ ಆದ್ಯತೆ ಇರಲಿ. ಇಳುವರಿ ದೃಷ್ಟಿಯಿಂದ ಇದು ತೀರಾ ಮಹತ್ವದ್ದು. ಯಾಕೆಂದರೆ ರಾಸಾಯನಿಕ ಕೃಷಿಯ ಕಬ್ಬಿನಲ್ಲಿ Anti ಜರ್ಮಿನೇಷನ್ ಪ್ರೊಟೀನ್‌ಗಳು ಹೆಚ್ಚಿರುತ್ತವೆ. ಮೊಳಕೆ ಬರಲು ಸತಾಯಿಸುತ್ತವೆ. ಹೀಗಾಗಿ ರಾಸಾಯನಿಕ ಕೃಷಿಯವರು ಒಂದೇ ಗುಳಿಗೆ ೨-೩ ಗಿಣ್ಣುಗಳಿರುವ ಕಬ್ಬು ನೆಡುತ್ತಾರೆ. ನಾವು ಆಯ್ಕೆಮಾಡಲಿರುವ ಕಬ್ಬಿನ ಗರಿಗಳು ಹಚ್ಚ ಹಸಿರಿನಿಂದ ಕೂಡಿರಬೇಕು. ಜಲ್ಲೆ ರಸದಿಂದ ತುಂಬಿರಬೇಕು. ಉಗುರು ಬೆರಳಿನಿಂದ ಕುಟ್ಟಿದರೆ ಠಣ್, ಠಣ್ ಸದ್ದು ಬರುವಂತಿರಬೇಕು. ಕಣ್ಣು ಉಬ್ಬಿರಬೇಕು. ಗಿಣ್ಣಿನ ಉದ್ದಳತೆ ಮತ್ತು ಕಣ್ಣಿನ ಸುತ್ತಳತೆ ಸಮನಾಗಿರಬೇಕು. ಈ ಲಕ್ಷಣಗಳಿರುವ ಕಬ್ಬನ್ನು ಮಾತ್ರ ಬಿತ್ತನೆಗೆ ಆಯ್ದುಕೊಳ್ಳಿ. ಎಲ್ಲಿಯೂ ಸಿಗದಿದ್ದರೆ ಮಾರುಕಟ್ಟೆಯಿಂದ ಮಾತ್ರ ತರಬೇಡಿ. ಯಾಕೆಂದರೆ ದಂಧೆ ಮಾಡಿಕೊಳ್ಳುವ ಅವಕಾಶವನ್ನು ನೀವಾಗಿಯೇ ಯಾರಿಗೂ ಕಲ್ಪಿಸಬಾರದು.

ನಾವೀಗ ಈ ಒಂದು ಕಬ್ಬಿನಿಂದ ಮುಂದಿನ ಒಂದು ಎಕರೆಗೆ ಬಿತ್ತನೆ ಮಾಡಿಕೊಳ್ಳಬೇಕು. ಅದಕ್ಕಾಗಿ ಒಂದು ಗುಂಟೆ (೧,೦೮೯ ಚದರಡಿ) ಜಾಗ ಅಣಿಮಾಡಿಕೊಳ್ಳಿ. ಈ ಒಂದು ಗುಂಟೆ ವಿಸ್ತೀರ್ಣ ೩೩ ಅಡಿ ಅಗಲ x ೩೩ ಅಡಿ ಉದ್ದ ಬರುತ್ತದೆ.

ಇಲ್ಲಿ ಎಂಟು ಅಡಿ ಅಂತರದ ಉತ್ತರ-ದಕ್ಷಿಣದ ಸಾಲು; ಎಂಟು ಅಡಿ ಅಂತರದ ಪೂರ್ವ ಪಶ್ಚಿಮದ ಸಾಲು. ತಲಾ ನಾಲ್ಕು ಸಾಲುಗಳನ್ನು ಮಾಡಿಕೊಳ್ಳಿ. (ಸಾಲಿನಿಂದ ಸಾಲಿಗೆ ಎಂಟು ಅಡಿ; ಗಿಡದಿಂದ ಗಿಡಕ್ಕೆ ಎಂಟು ಅಡಿ) ಹೀಗಾದಾಗ ೧೬ ಗುಳಿಗಳು ಬರುತ್ತವೆ. ಕಬ್ಬಿನ ಬೀಜಕ್ಕೆ ಬೀಜಾಮೃತ ನೀರಿ ಕಬ್ಬು ನೆಡಿ. ಕಬ್ಬಿನ ಕಣ್ಣಿನ ಭಾಗ ಮೇಲ್ಮುಖವಾಗಿರಲಿ. ಗಿಣ್ಣಿನ ಭಾಗವನ್ನು ಬೆರಳುಗಳಿಂದ ಭೂಮಿಗೆ ಒತ್ತಿ. ಕಣ್ಣಿನ ಭಾಗ ಮಾತ್ರ ಮಣ್ಣಿನಿಂದ ಮುಚ್ಚದಿರಲಿ. ಕಬ್ಬು ಬಿತ್ತುವ ಮುಂಚೆ ಎರಡು ಅಡಿಗೊಂದರಂತೆ ನೇಗಿಲಿನಿಂದ ಸಾಲು ಹೊಡೆಯಿರಿ. ಉತ್ತರ-ದಕ್ಷಿಣವಾಗಿ ೧೬ ಸಾಲು; ಪೂರ್ವ ಪಶ್ಚಿಮವಾಗಿ ೧೬ ಸಾಲು. ಚಿತ್ರದಲ್ಲಿ ತೋರಿರುವಂತೆ ಪ್ರತಿ ಎಂಟು ಅಡಿಗೊಂದರಂತೆ ಹಳ್ಳದ ಸಾಲಿನಲ್ಲಿ ಕಬ್ಬು ಬಿತ್ತಿ. ಸಾಲುಗಳು ಹೆಚ್ಚು ಆಳಕ್ಕಿರಬಾರದು. ಈಗ ಕಬ್ಬಿನಿಂದ ಕಬ್ಬಿಗೆ ಇರುವ ಎಂಟು ಅಡಿ ಅಂತರದ ನಡುವೆ ಉತ್ತರದಿಂದ ದಕ್ಷಿಣಕ್ಕೆ ಮೂರು ಸಾಲುಗಳು, ಪೂರ್ವದಿಂದ ಪಶ್ಚಿಮಕ್ಕೆ ಮೂರು ಸಾಲುಗಳಿವೆ. ಸಾಲುಗಳು ‘ವಿ’ ಕಾರದಲ್ಲಿವೆ.

ಬರಿ ಕಬ್ಬು ಮಾತ್ರವಲ್ಲ... ಅಣ್ಣಾ

ನೀವೀಗ ಮೊದಲ ಸಾಲಿನ ಹಳ್ಳದಲ್ಲಿ ಕಬ್ಬು ಬಿತ್ತಿರುವಿರಿ. ಹಳ್ಳದ ಎಡದಂಡೆಯ ಮೇಲೆ ಬೆಳ್ಳುಳ್ಳಿ, ಬಲದಂಡೆಯ ಮೇಲೆ ಈರುಳ್ಳಿ ಬಿತ್ತನೆ ನೆಡಿ. ಈರುಳ್ಳಿಗೆ ಒಂದು ಅಡಿ ಅಂತರಕ್ಕೆ ಅಲಸಂದೆ ಬೀಜ ಹಾಕಿ. ಅಲ್ಲಿಂದ ಒಂದು ಅಡಿ ದೂರದಲ್ಲಿ ಮೆಣಸಿನಕಾಯಿ ಗಿಡ ಬರಲಿ, ಮಧ್ಯದ ಸಾಲಿನಲ್ಲಿ ಮನೆಗೆ ಬೇಕಾದ ತರಕಾರಿ, ರಾಗಿ, ಭತ್ತ, ಜೋಳ ಇತ್ಯಾದಿ ಯಾವುದಾದರೊಂದು ಧಾನ್ಯ ಬೆಳೆಯಲು ಅವಕಾಶ ಮಾಡಿಕೊಳ್ಳಿ. ಆನಂತರದ ಒಂದು ಅಡಿ ಅಂತರದಲ್ಲಿ ಮತ್ತೆ ಮೆಣಸಿನಕಾಯಿಗಿಡ, ಅಲ್ಲಿಂದ ಉಳಿದ ಒಂದೊಂದಡಿ ದೂರದಲ್ಲಿ ಕ್ರಮವಾಗಿ ಆಲಸಂದೆ, ಈರುಳ್ಳಿ ಇರಲಿ.

ಮೇಲ್ಕಾಣಿಸಿದ ಮಾದರಿ ಸಾಲನ್ನು ಪೂರ್ವ-ಪಶ್ಚಿಮವಾಗಿ ಅಳವಡಿಸಲಾಗಿದೆ. ಆ ಸಾಲುಗಳನ್ನು ಹಿಂಬಾಲಿಸಿ ಎರಡು ಅಡಿಗೊಂದರಂತೆ ಈ ಫಸಲುಗಳನ್ನೇ ಅಳವಡಿಸಿ. ಉತ್ತರ ದಕ್ಷಿಣದ ಸಾಲುಗಳೂ ರೂಪುಗೊಳ್ಳುತ್ತವೆ. ಎಂಟು ಅಡಿಗೊಂದರಂತೆ ಇರುವ ಕಬ್ಬಿನ ಉತ್ತರ ದಕ್ಷಿಣದ ಸಾಲಿನಲ್ಲಿ ಮಾತ್ರ ಎರಡು ಅಡಿಗೊಂದು ಹಸಿ ಮೆಣಸಿನಕಾಯಿ ಗಿಡವಿರಲಿ.

ಸಾಮಾನ್ಯವಾಗಿ ಕಬ್ಬಿನ ಬೀಜ ಬೇಗ ಮೊಳಕೆಯೊಡೆಯುವುದಿಲ್ಲ. ಕಬ್ಬಿನಲ್ಲಿ Anti germination ಪ್ರೋಟೀನ್‌ಗಳು ಹೆಚ್ಚಾಗಿರುವ ಕಾರಣಕ್ಕೆ. ನೈಸರ್ಗಿಕ ಕೃಷಿ ಕಬ್ಬಿನಲ್ಲಿ Anti germination ಪ್ರೋಟೀನ್‌ಗಳು ಹೆಚ್ಚು ಇರುವುದಿಲ್ಲ. ಬೀಜಾಮೃತದಲ್ಲಿ ಅತ್ಯುತ್ಕೃಷ್ಟ ಮಟ್ಟದಲ್ಲಿ ಜರ್ಮಿನೇಟಿಂಗ್‌ಗೊಳಿಸುವ ಬಲ ಇರುವುದರಿಂದ ಹಾಕಿದ ಬಿತ್ತನೆಯಲ್ಲಿ ಒಂದೂ ವಿಫಲವಾಗದೆ ಎಲ್ಲ ೧೬ ಗಿಣ್ಣುಗಳೂ ಮೊಳಕೆಯೊಡೆಯುತ್ತವೆ. ಮಳೆಗಾಲ ಅಲ್ಲದ ದಿನಗಳಲ್ಲಿ ಕಬ್ಬು ನಾಟಿ ಮಾಡುವುದಾದರೆ ನಾಟಿಗೆ ಮುಂಚೆಯೇ ನೀರು ಹಾಯಿಸಿರಿ. ಕಬ್ಬು ನೆಡುವಾಗಲೆ, ಬೆಳ್ಳುಳ್ಳಿ, ಈರುಳ್ಳಿ, ಆಲಸಂದೆ ಇತ್ಯಾದಿ ಬೀಜಗಳನ್ನೂ ಬಿತ್ತಿರಿ. ಹೀಗೆ ಬಿತ್ತಿದ ಮರುದಿವಸವೇ ಜೀವಾಮೃತ ನೀಡಿ.

ಪ್ರತಿ ಕಬ್ಬಿನಿಂದ ಮೊದಲ ವರ್ಷದಲ್ಲಿ ೧೮ರಿಂದ ೫೧ರವರೆಗೆ ಟಿಲ್ಲರ್‌ಗಳು ಬರುತ್ತವೆ. ಹಾಗೆ ಬಂದ ಎಲ್ಲ ಟಿಲ್ಲರ್‌ಗಳು ಕಬ್ಬಾಗಿ ರೂಪುಗೊಳ್ಳುವುದಿಲ್ಲ. ನಮ್ಮ ಮಾಮೂಲಿ ಕಬ್ಬು ಬೇಸಾಯದಲ್ಲಿ ಗರಿಷ್ಠ ಅಂದರೆ ೩೬ ಟಿಲ್ಲರ್‌ಗಳು ಬರುತ್ತವೆ. ಹಾಗೆ ಬಂದ ಟಿಲ್ಲರ್‌ಗಳಲ್ಲಿ ಕಬ್ಬಾಗಿ ರೂಪುಗೊಳ್ಳುವವು ಮೂರರಿಂದ ಐದು ಮಾತ್ರ. ನೈಸರ್ಗಿಕ ಕಬ್ಬು ಕೃಷಿ ವಿಧಾನದಲ್ಲಿ ಮೊದಲ ವರ್ಷದಲ್ಲೇ ಕಮ್ಮಿ ಅಂದ್ರೂ ೧೮ ಮರಿ ಕಬ್ಬುಗಳು, ಕಬ್ಬಾಗಿ ರೂಪುಗೊಳ್ಳುತ್ತವೆ. ನಾವಿಲ್ಲಿ ಈ ಪ್ರಮಾಣವನ್ನು ಕನಿಷ್ಠ ೧೨ ಕಬ್ಬಿಗೆ ಇಳಿಸಿಕೊಳ್ಳೋಣ.

 

ಕಬ್ಬಿನ ಬಾಲ್ಯವಧಿಯ ಮೊದಲ ನಾಲ್ಕು ತಿಂಗಳು ಎಲ್ಲ ಬೆಳೆಗಳಿಗೂ ಸೇರಿಸಿ ಅಗತ್ಯಕ್ಕನುಗುಣವಾಗಿ ನೀರು ಕೊಡಿ. ನಾವು ಕಬ್ಬಿನೊಳಗೆ ಈಗ ಅಳವಡಿಸಿರುವ ಯಾವ ಬೆಳೆಯೂ ಪರಸ್ಪರ ಸ್ಪರ್ಧೆಗಿಳಿಯುವುದಿಲ್ಲ. ಈ ನಾಲ್ಕು ತಿಂಗಳ ಅವಧಿಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಅಲಸಂದೆ ಫಸಲುಗಳು ಕೈಗೆ ಬಂದಿರುತ್ತವೆ. ಈಗ ಕಬ್ಬು ಸೇರಿದಂತೆ ಈರುಳ್ಳಿ, ಅಲಸಂದೆ ಸಾಲುಗಳಿಗೆ ನೀರು ನಿಲ್ಲಿಸಿಬಿಡಿ. ಮುಂದಿನ ಎರಡು ತಿಂಗಳವರೆಗೆ ಕಬ್ಬಿನ ಸಾಲಿನಿಂದ ೨.೫ ಅಡಿ ದೂರದಲ್ಲಿ, ಅಂದರೆ ಮಧ್ಯದ ಮೂರು ಅಡಿ ವ್ಯಾಪ್ತಿಯಲ್ಲಿ ೧೫ ದಿವಸಕ್ಕೊಮ್ಮೆ ನೀರು ಕೊಡಿ. ಆರು ತಿಂಗಳ ನಂತರ ಮಧ್ಯದ ಒಂದು ಸಾಲಿನಲ್ಲಿ ಮಾತ್ರ ನೀರು ಹಾಯಲ್ಲಿ. ಏಳರಿಂದ ಒಂಬತ್ತನೆ ತಿಂಗಳ ನಡುವೆ ಮುಂದಿನ ಬಿತ್ತನೆಗಾಗಿ ಕಬ್ಬು ಕಟಾವು ಮಾಡಿ. ಪ್ರತಿ ಕಬ್ಬಿನ ತೆಂಡೆಯಿಂದ ತಲಾ ಹನ್ನೆರಡರಂತೆ ಬಿತ್ತನೆಗೆ ಯೋಗ್ಯವಾದ ಕಬ್ಬುಗಳನ್ನು ಆಯ್ಕೆ ಮಾಡಿಕೊಳ್ಳಿ. ಹೀಗಾದಾಗ ೧೨ x ೧೬ = ೧೯೨. ನಮಗೆ ೧೭೦ ಕಬ್ಬು ಸಾಕು.

ನಾವೀಗ ಒಂದು ಎಕರೆ ವಿಸ್ತೀರ್ಣಕ್ಕೆ ೨,೭೭೨ ಗಿಣ್ಣುಗಳನ್ನು ಆಯ್ಕೆಮಾಡಿಕೊಂಡಿದ್ದೇವೆ. ಗಿಣ್ಣಿನ ಆಕಾರ ಚಿತ್ರದಲ್ಲಿ ತೋರಿಸಿರುವಂತೆ ಇರಲಿ.

ಚಿತ್ರದಲ್ಲಿ ತೋರಿಸಿದಂತೆ ಒಟ್ಟು ಗಿಣ್ಣಿನ ಉದ್ದದಲ್ಲಿ ೧/೩ ಭಾಗ ಗಿಣ್ಣಿನಿಂದ ಮುಂಭಾಗಕ್ಕೂ ೨/೩ ಭಾಗ ಗಿಣ್ಣಿನ ಹಿಂಭಾಗಕ್ಕೂ ಇರಲಿ. ಗಿಣ್ಣಿನ ಹಿಂಭಾಗವನ್ನು ಬೆರಳಿನಿಂದ ಒತ್ತಿ ಮಣ್ಣಿನಲ್ಲಿ ನೆಡಿ.

ಕಬ್ಬು ನಾಟಿ ಮಾಡಲಿರುವ ಜಮೀನನ್ನು ಮರದ ನೇಗಿಲಿನಿಂದ ಎರಡು ಬಾರಿ ಉಳುಮೆ ಮಾಡಿಕೊಳ್ಳಿ. ನೇಗಿಲ ಕುಳ ೪.೫ ಇಂಚಿಗಿಂತಲೂ ಹೆಚ್ಚಿನ ಆಳಕ್ಕೆ ಹೋಗದಿರಲಿ. ಇನ್ನು ಮುಂದಿನ ೩೫ ವರ್ಷವೂ, ಆನಂತರವೂ ಈ ಭೂಮಿಗೆ ಉಳುಮೆ ಇಲ್ಲ. ಕಬ್ಬು ಬಿತ್ತನೆಯ ಒಳ್ಳೆಯ ಸೀಜನ್‌ಗಳು ಇಂತಿವೆ.

೧. ಸಂಕ್ರಾಂತಿಗೂ ಮೊದಲಿನ ಹದಿನೈದು ದಿವಸ; ನಂತರದ ಹದಿನೈದು ದಿವಸ. (ಜನವರಿ ಒಂದನೆ ತಾರೀಖಿನಿಂದ ೩೦ನೇ ತಾರೀಖಿನವರೆಗೆ)

೨. ಮೃಗಶಿರ ಮಳೆ ಪ್ರಾರಂಭದಿಂದ ಪುನರ್ವಸು ಆರಂಭದವರೆಗೆ. (ಜೂನ್ ಮೊದಲ ವಾರದಿಂದ ಜುಲೈ ಮೊದಲ ವಾರದವರೆಗೆ)

೩. ಆಶ್ಲೇಷ ಮಳೆಯ ಮೊದಲನೆ ಚರಣದಿಂದ ಮಖಾ ಮಳೆಯ ಕೊನೆಯ ಚರಣದವರೆಗೆ (ಆಗಸ್ಟ್ ತಿಂಗಳು)

೪. ಹಸ್ತಾ ಮಳೆಯ ಮೊದಲ ಚರಣದಿಂದ ಚಿತ್ತಾ ಮಳೆಯ ಕೊನೆ ಚರಣದವರೆಗೆ (ಸೆಪ್ಟೆಂಬರ್ ಕಡೆ ವಾರದಿಂದ ಅಕ್ಟೋಬರ್ ಮೂರನೇ ವಾರದವರೆಗೆ) ವರ್ಷದ ಈ ನಾಲ್ಕು ಸಂದರ್ಭದ ಮಳೆ ನಕ್ಷತ್ರಗಳು ಕಬ್ಬಿನ ನಾಟಿಗೆ ಸಹಕಾರಿಯಾಗಿವೆ.

ಕಬ್ಬಿನ ನಾಟಿ ಸಾಲಿನಿಂದ ಸಾಲಿಗೆ ಎಂಟು ಅಡಿ ಅಂತರ, ಗುಳಿಯಿಂದ ಗುಳಿಗೆ ಎರಡು ಅಡಿ ಅಂತರದಲ್ಲಿ ಸಾಗಲಿ, ಸಾಲುಗಳು ಉತ್ತರ-ದಕ್ಷಿಣವಾಗಿರಲಿ (ಅಥವಾ ದಕ್ಷಿಣೋತ್ತರ). ಉತ್ತರ ದಕ್ಷಿಣದ ಸಾಲಿನಲ್ಲಿ ಎರಡು ಅಡಿಗೆ ಒಂದರಂತೆ ಕಬ್ಬು ನಾಟಿ ಮಾಡಬೇಕು. ಪೂರ್ವ-ಪಶ್ಚಿಮದ ಸಾಲಿನ ಅಂತರ ಎಂಟು ಅಡಿ ಇರಬೇಕು.

ಸಾಲುಗಳು ದಕ್ಷಿಣೋತ್ತರವಾಗಿಯೇ ಯಾಕಿರಬೇಕು? ಬೆಳಗೆ ಬೆಳಕಿನ (ಸೂರ್ಯ ಕಿರಣಗಳು) ಆಯೋಜನೆ ಇಲ್ಲಿ ಮುಖ್ಯ. ಭೂಮಿ ತನ್ನ ಕಕ್ಷೆಯ ಮೇಲೆ ತಾನು ಸುತ್ತುವುದರ ಜೊತೆಗೆ, ಸೂರ್ಯನ ಸುತ್ತಲೂ ಸುತ್ತುತ್ತದೆ. ಸೂರ್ಯನ ಸುತ್ತ ಒಂದು ಸುತ್ತು ಬರಲು ಭೂಮಿಗೆ ಒಂದು ವರ್ಷದ ಅವಧಿ ಬೇಕು. ಭೂಮಿಯ ಪರಿಭ್ರಮಣದ ಹಿನ್ನೆಲೆಯಲ್ಲಿ ಸೂರ್ಯ ಪೂರ್ವದಲ್ಲೇ ಹುಟ್ಟಿ ಪಶ್ಚಿಮದಲ್ಲೆ ಮುಳುಗುತ್ತಾನೆ ಅಂತ ಭಾವಿಸಿದರೂ ಅವನ ಪಥ ವರ್ಷದ ಆರು ತಿಂಗಳಲ್ಲಿ ದಕ್ಷಿಣಾಭಿಮುಖವಾಗಿಯೂ, ಇನ್ನುಳಿದ ಆರು ತಿಂಗಳಲ್ಲಿ ಉತ್ತರಾಭಿಮುಖವಾಗಿಯೂ ಇರುತ್ತದೆ. ಅಂದರೆ ಪ್ರತಿವರ್ಷ ಜೂನ್ ೨೧ ರಿಂದ ಡಿಸೆಂಬರ್ ೨೦ರವರೆಗೆ ದಕ್ಷಿಣಾಯ ಪಥ, ಡಿಸೆಂಬರ್ ೨೧ ರಿಂದ ಜೂನ್ ೨೦ ರವರೆಗೆ ಉತ್ತರಾಯಣ ಪಥ. (ಭೂಮಿ ಸುತ್ತುವ ಕಾರಣ) ಈ ಹಿನ್ನೆಲೆಯಲ್ಲಿ ದಕ್ಷಿಣೋತ್ತರದ ಸಾಲುಗಳಿದ್ದರೆ ವರ್ಷದ ಎಲ್ಲ ದಿನಗಳಲ್ಲೂ ಸೂರ್ಯನ ಬೆಳಕು ಫಸಲುಗಳಿಗೆ ಲಭಿಸುತ್ತವೆ. ಸಾಲುಗಳಲ್ಲಿ ಬೆಳೆಯುವ ಎಲ್ಲ ಬೆಳೆಗಳನ್ನು ಈ ಪ್ರಕಾರವಾಗಿಯೇ ಆಯೋಜಿಸಬೇಕು. ವಾಸ್ತವವಾಗಿ ನೈಋತ್ಯ-ಈಶಾನ್ಯ ನಿಸರ್ಗದ ದಿಕ್ಕು. ಇದು ಬಹಳ ರೀತಿಯಲ್ಲಿ ಸಮರ್ಪಕವಾದ ದಿಕ್ಕು. ಮಾನ್ಸೂನ್ ಬರುವುದು ನೈಋತ್ಯದ ಕಡೆಯಿಂದಲೆ. ಆದರೆ ನಮ್ಮ ಬಹುಪಾಲು ಹೊಲ, ಗದ್ದೆ, ತೋಟಗಳೆಲ್ಲ ಆಯತಾಕಾರ ಮತ್ತು ಚೌಕಾಕಾರಗಳಲ್ಲೇ ಇರುವುದರಿಂದ ದಕ್ಷಿಣೋತ್ತರ ಬೆಳಕಿನ ವಿನ್ಯಾಸವನ್ನೆ ನಾವು ಅನಿವಾರ್ಯವಾಗಿ ಅಳವಡಿಸಿಕೊಳ್ಳಬೇಕಾಗಿದೆ. ದಕ್ಷಿಣೋತ್ತರದ ಸಾಲುಗಳು ಉಳುಮೆ ಮಾಡಲು, ಕುಂಟೆ ಹೊಡೆಯಲು ಸಹಕಾರಿ ಯಾಗಿವೆ.

ಈ ಮುಂಚಿನ ಬೀಜಾಮೃತದಿಂದ ಬೀಜೋಪಚಾರ ಮಾಡಿ ಕಬ್ಬಿನ ನಾಟಿ ಮಾಡಿ. ಈ ಹಿಂದಿನ ಕ್ರಮದಂತೆ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ ಗಿಡ, ಅಲಸಂದೆ, ರಾಗಿ (ಜೋಳ, ಭತ್ತ, ನವಣೆ ನೆಲಗಡಲೆ ಅಥವಾ ತರಕಾರಿ ಗಿಡ) ಇತ್ಯಾದಿ ಬಿತ್ತನೆಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ಅಳವಡಿಸಿ. ಈ ಬಿತ್ತನೆ ಪೂರ್ವ ಪಶ್ಚಿಮದ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ, ಉತ್ತರ ದಕ್ಷಿಣದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರ ಕಾಯ್ದುಕೊಳ್ಳಲಿ. ಬಿತ್ತನೆ ಮಾಡಿದ ಮರುದಿವಸ ಜೀವಾಮೃತ ನೀಡಿ. ಅನಂತರ ತಿಂಗಳಿಗೊಮ್ಮೆ ನೀಡುತ್ತಾ ಬನ್ನಿ. ಇದು ಕಡ್ಡಾಯ. ಹದಿನೈದು ದಿನಗಳಿಗೊಮ್ಮೆಯೂ ನೀಡಬಹುದು. ಕಬ್ಬು ತಕ್ಷಣವೇ ಬೇರು ಬಿಡುವುದಿಲ್ಲ. ಹೀಗಾಗಿ ಅದು ಮೊಳಕೆಯ ಹಂತದಲ್ಲಿ ತನ್ನೊಳಗಿರುವ ಆಹಾರವನ್ನೇ ತೆಗೆದುಕೊಳ್ಳುತ್ತದೆ. ಮೊದಲು ಗಿಣ್ಣಿನ ಹಿಂಭಾಗದಿಂದ ಅನಂತರ ಗಿಣ್ಣಿನ ಮುಂಭಾಗದಿಂದ ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಗಿಡ ಬೇರುಬಿಟ್ಟಿರುತ್ತದೆ. ನಾಲ್ಕು ತಿಂಗಳವರೆಗೆ ಎಲ್ಲ ಫಸಲಿಗೂ ನೀರು ಲಭ್ಯವಾಗಲಿ. ತಿಂಗಳವರೆಗೆ ಸಣ್ಣ ಸಣ್ಣ ಕಳೆಗಳು ಬರುತ್ತವೆ. ಬೇರುಸಹಿತ ಕಿತ್ತುಹಾಕಿ. ಅಲಸಂದೆ ಬೆಳೆಯುತ್ತಿದ್ದಂತೆ ನೆರಳುಗಟ್ಟುತ್ತದೆ. ಆಗ ಕಳೆ ಗಿಡಗಳು ನಿಯಂತ್ರಣಕ್ಕೆ ಬರುತ್ತವೆ. ಯಾವುದೇ ಕಳೆ ಗಿಡಗಳನ್ನು ಮುಂದಿನ ಎರಡು ವರ್ಷಗಳವರೆಗೆ ಕತ್ತರಿಸಿ ಹಾಕದೆ, ಬೇರುಸಹಿತ ಕಿತ್ತು ಮಲ್ಚಿಂಗ್ ಮಾಡುತ್ತ ಹೋಗಿ. ಬೇರುಸಹಿತವೇ ಯಾಕೆ ಕೀಳಬೇಕೆಂದರೆ; ಮಣ್ಣಿನಲ್ಲಿರುವ UNAEROBIC BACTERIA  ಗಳು ಬೇರುಗಳನ್ನು ಕೊಳೆಸುವ ಪ್ರಕ್ರಿಯೆಯಲ್ಲಿ ಮಣ್ಣಿನಲ್ಲಿರುವ ಸಾರಜನಕವನ್ನು ಹೀರಿಕೊಳ್ಳುತ್ತವೆ. ಶೇಕಡ ೧೪ರಷ್ಟು ಸಾರಜನಕವನ್ನು ಈ ಬ್ಯಾಕ್ಟೀರಿಯಾಗಳೇ ಬಳಸಿಕೊಳ್ಳುತ್ತವೆ. ಹೀಗಾದಾಗ ಮುಖ್ಯ ಫಸಲಿಗೆ ಸಾರಜನಕದ ಕೊರತೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಳೆ ಸಸ್ಯಗಳನ್ನು ಬೇರುಸಹಿತ ಕಿತ್ತುಹಾಕಬೇಕು. ಅಲಸಂದೆ ಬೆಳೆದ ತರುವಾಯ ಕಬ್ಬಿಗೆ ಸಾರಜನಕದ ಕೊರತೆಯಾಗುವುದಿಲ್ಲ. ಮೂರು ವರ್ಷಗಳಷ್ಟೊತ್ತಿಗೆ ಮಣ್ಣಿನಲ್ಲಿ ಹ್ಯೂಮಸ್ ಅಭಿವೃದ್ಧಿಯಾಗುತ್ತದೆ. ಆಗ ಕಳೆಗಿಡಗಳನ್ನು ಕತ್ತಿರಿಸಿಹಾಕಿದರೂ ನಡೆಯುತ್ತದೆ. ಯಾವುದೇ ಗಿಡ-ಮರಗಳಲ್ಲಿ ಹೊಸ ಬೇರು ಬರುತ್ತಿದ್ದಂತೆ ಹಳೆಯ ಬೇರಿನಲ್ಲಿ ಪ್ರತಿಶತ ೩೦ರಷ್ಟು ಸಾಯುತ್ತಾ ಹೋಗುತ್ತವೆ. ಈ ಚಕ್ರ ನಿರಂತರ. ಮಣ್ಣಿನಲ್ಲಿ ಜೀವಾಣುಗಳು ಬದುಕುಳಿಯಲು ಈ ಪ್ರಕ್ರಿಯೆ ಅತ್ಯಗತ್ಯ.

ನಾಲ್ಕು ತಿಂಗಳು ತುಂಬುವ ಹೊತ್ತಿಗೆ ಮರಿ ಕಬ್ಬುಗಳು ಬರಲು ಶುರುವಾಗುತ್ತವೆ. ನಾಲ್ಕೂವರೆ ತಿಂಗಳ ನಂತರ ತಾಯಿ ಕಬ್ಬು ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ರಾಸಾಯನಿಕ ಕೃಷಿಯ ರೈತರು ಮತ್ತು ಸಾವಯವದವರು ಈ ತಾಯಿ ಕಬ್ಬನ್ನು ಕಿತ್ತುಹಾಕುತ್ತಾರೆ. ಹಾಗೆ ಕೀಳಬಾರದು. ತಾಯಿ ಕಬ್ಬು ತನ್ನ ಬೆಳವಣಿಗೆ ನಿಲ್ಲಿಸಿದ್ದರೂ ಮರಿ ಕಬ್ಬುಗಳ ಬಗೆಗೆ ಮುತುವರ್ಜಿ ವಹಿಸುತ್ತದೆ. ನಾವು ನಮ್ಮ ಹಸು ಮುದಿಯಾದ ಕೂಡಲೆ ಮಾರಿಬಿಡುತ್ತೇವೆ. ವಯಸ್ಸಾದ ತಾಯಿ ತಂದೆಯರನ್ನೇ ಅಸಡ್ಡೆಯಿಂದ ಕಾಣುವ ಸಮಾಜ ನಮ್ಮದು. ಹಲವಾರು ಕರುಗಳಿಗೆ ಜನ್ಮ ನೀಡಿ, ಹಾಲು ಕೊಟ್ಟು, ಸಗಣಿ-ಗಂಜಳ ನೀಡಿದ ಹಸು ಮುದಿಯಾದ ಕೂಡಲೆ ನಮಗೆ ಬೇಡವಾಗಿಬಿಡುತ್ತದೆ. ಅದನ್ನು ಮಾರಿಬಿಡುವ ಮೂಲಕ ನಮ್ಮ ಬೇಸಾಯ ಜೀವನದ ಅವಿಭಾಜ್ಯ ಅಂಗವನ್ನು ಕಳೆದುಕೊಳ್ಳುತ್ತಿದ್ದೇವೆ ಅನ್ನುವುದು ಅರಿವಿಗೆ ಬಾರದಿದ್ದರೆ ಹೇಗೆ? ವ್ಯವಸಾಯ ಜೀವನ ಕಲೆ ಅರಿತವರಿಗೆ ಹಸು ಮುದಿಯಾದರೂ ಆಸ್ತಿಯೆ.

ತಾಯಿ ಕಬ್ಬು ಬೆಳವಣಿಗೆ ನಿಲ್ಲಿಸಿದೆ, ಅದರಿಂದ ಲಾಭ ಇಲ್ಲ ಅಂತ ನೀವು ಕಿತ್ತುಹಾಕಿದರೆ ಬಹಳ ದೊಡ್ಡ ನಷ್ಟ ಮಾಡಿಕೊಳ್ಳುತ್ತೀರಿ. ತಾಯಿ ಕಬ್ಬು ತನ್ನ ಇಡೀ ತೆಂಡೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತದೆ. ಭವಿಷ್ಯದಲ್ಲಿ ಎಷ್ಟು ಮರಿ ಕಬ್ಬುಗಳು ಕಬ್ಬುಗಳಾಗಿ ರೂಪುಗೊಳ್ಳಬೇಕು ಎಂಬುದನ್ನು ತಾಯಿ ಕಬ್ಬು ನಿರ್ಧರಿಸುತ್ತದೆ. ಅದು ತನ್ನ ಅಶಕ್ತ ಮರಿ ಕಬ್ಬುಗಳೆಡೆಗೆ ಲಕ್ಷ್ಯವಿಡುತ್ತದೆ. ಇಂಥ ಅಶಕ್ತ ಮರಿ ಕಬ್ಬುಗಳಿಗೆ ಲಿಗ್ನೊ ಪ್ರೊಟೀನ್ ಸರಬರಾಜು ಮಾಡುತ್ತದೆ. ಹವಾದಿಂದ ನೀರು ಮತ್ತು ಲಿಂಗ್ವಿನ್‌ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತಾಯಿ ಕಬ್ಬು ಇದ್ದೆಡೆ ಎರಡನೇ ವರ್ಷದಷ್ಟೊತ್ತಿಗೆ ಕಬ್ಬಿನ ಇಳುವರಿ ೮೦ ಟನ್ ದಾಟಿರುತ್ತದೆ. ಎರಡನೇ ವರ್ಷ ೩೬ರಿಂದ ೯೬ರವರೆಗೆ ಮರಿ ಕಬ್ಬುಗಳು ಬರುತ್ತವೆ. ನೈಸರ್ಗಿಕ ಕಬ್ಬು ಕೃಷಿಯಲ್ಲಿ ಗರಿಷ್ಠ ಮರಿ ಕಬ್ಬುಗಳ ಸಂಖ್ಯೆ-೯೬ . ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ಮರಿ ಕಬ್ಬು-ರಸದುಂಬಿದ ಕಬ್ಬುಗಳಾಗಿ ರೂಪಾಂತಗೊಂಡು ಐದನೇ ವರ್ಷ ದಾಟುತ್ತಿದ್ದಂತೆ ಒಂದು ಎಕರೆ ಇಳುವರಿಯ ಸಾಮರ್ಥ್ಯ ೧೨೦ ಟನ್ ದಾಟುತ್ತದೆ. ಸಮರ್ಪಕ ನೀರು ನಿರ್ವಹಣೆ, ಬಿಸಿಲು ನಿರ್ವಹಣೆ ಮತ್ತು ಮಲ್ಚಿಂಗ್‌ಗಳ ಮೂಲಕ ಕ್ರಮೇಣ ೨೦೦ ಟನ್ ಗುರಿಯ ಮೈಲಿಗಲ್ಲನ್ನು ಅನಾಯಾಸವಾಗಿ ದಾಟಬಹುದು.

ಕಬ್ಬಿನ ಬಾಲ್ಯ ಕಳೆಯುತ್ತಿದ್ದಂತೆ ಕಬ್ಬಿನ ಬುಡಕ್ಕೆ ನೀರು ತಪ್ಪಿಸಿ. ನೀವು ಅಲ್ಲೇ ನೀರು ಕೊಡುತ್ತಿದ್ದರೆ ಕಬ್ಬಿನ ಬೇರುಗಳು ವಿಸ್ತಾರವಾಗಿ ಹರಡಿಕೊಳ್ಳುವುದಿಲ್ಲ. ಯಾವಾಗ ಬೇರುಗಳು ವಿಸ್ತಾರವಾಗಿ ಹರಡಿಕೊಳ್ಳುವುದಿಲ್ಲವೊ ಕಬ್ಬು ಎತ್ತರವಾಗಿ ಮತ್ತು ಬಲಿಷ್ಠವಾಗಿ ಬೆಳೆಯುವುದಿಲ್ಲ. ಬೇರುಗಳು ವಿಸ್ತರಣೆಯಾದೆ ಹೋದರೆ ಲಭ್ಯವಾಗ ಬೇಕಾದ ಎಲ್ಲ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬಲವಾಗಿ ಬೆಳೆಯದ ಕಬ್ಬುಗಳು ಬಾಗಿ ನೆಲಕ್ಕುರುಳುತ್ತವೆ.

ಕಬ್ಬಿನ ಪಕ್ಕದ ಈರುಳ್ಳಿ ಅಲಸಂದೆ ಬೆಳೆ ತೆಗೆದ ತರುವಾಯ, ಆ ಸಾಲುಗಳಲ್ಲಿ ನೀರು ನಿಲ್ಲಿಸಿಬಿಡ. ನೀರಿಗಾಗಿ ದಾಹಗೊಂಡ ಬೇರುಗಳು ನೀರಿರುವೆಡೆಗೆ ಧಾವಿಸುತ್ತವೆ. ಆರು ತಿಂಗಳ ನಂತರ ಮೆಣಸಿನಕಾಯಿ ಗಿಡಗಳ ಸಾಲಿಗೂ ನೀರು ತಪ್ಪಿಸಿ, ಸರಿಯಾಗಿ ಎರಡು ಕಬ್ಬಿನ ಸಾಲಿನಲ್ಲ (ಪೂರ್ವ ಪಶ್ಚಿಮದ ಎಂಟು ಅಡಿ ಅಂತರದ) ನೀರು ಹಾಯಲು ಬಿಡಿ. ಮಳೆ ಇಲ್ಲದಾಗ ಮಾತ್ರ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಾತ್ರ ನೀರು ಕೊಡಿ. ಮುಂದಿನ ಮೂವತ್ತೈದು ವರ್ಷಗಳವರೆಗೆ ಇದು ಹೀಗೆಯೆ ನಡೆಯಲಿ.

ಯಾವುದೇ ಗಿಡ ಇರಲಿ, ಮರವಿರಲಿ ಅದರ ಕೊನೆಯ ಎಲೆ ಎಲ್ಲಿವರೆಗೂ ಚಾಚಿಕೊಂಡಿರುತ್ತವೊ ಅಲ್ಲಿವರೆಗೆ ಮತ್ತು ಅಲ್ಲಿಂದಾಚೆಗೂ ಬೇರು ಕೊಡುತ್ತವೆ. ಬೇರುಗಳು ನೀರು ಮತ್ತು ಪೋಷಕಾಂಶಗಳನ್ನು ಪರಿಪೂರ್ಣವಾಗಿ ತೆಗೆದಕೊಳ್ಳುವುದು ಆ ಗಿಡಿ/ಮರದ ಕೊನೆಯ ಎಲೆ ಹರಡಿರುವ ನೇರದಲ್ಲಿ.

ಯಾವುದೇ ಗಿಡ ಮರದ ಬೇರುಗಳು ನೇರವಾಗಿ ನೀರು ಕುಡಿಯುವುದಿಲ್ಲ. ಭೂಮಿಯಲ್ಲಿ ಆರ್ದ್ರತೆ ಇದ್ದರಷ್ಟೇ ಸಾಕು. ಆ ಆರ್ದ್ರತೆ ಬೇರಿಗೆ ಸಾಕು. ಹ್ಯೂಮಸ್ ಅಭಿವೃದ್ಧಿ ಆದ ಬಳಿಕ ಆ ಆರ್ದ್ರತೆ ನಿರಂತರವಾಗಿ ಜಾರಿಯಲ್ಲಿರುತ್ತದೆ.

ಕಬ್ಬಿನಲ್ಲಿ ಅಂತರ ಬೆಳೆ ಅಳವಡಿಸಿರುವುದರಿಂದಾಗಿ ವರ್ಷಪೂರ್ತಿ ಫಸಲುಗಳು ಬರುತ್ತವೆ. ಆರ್ಥಿಕವಾಗಿಯೂ ಲಾಭ ತರುತ್ತವೆ. ಮೊದಲ ಆರು ತಿಂಗಳ ನಂತರ, ಸಾಲುಗಳ ನಡುವೆ ನೀವು ನೀರು ಹಾಯಿಸುವ ಸಣ್ಣ ಕಾಲುವೆಯ ಎರಡೂ ದಡಗಳಲ್ಲಿ ಎರಡು ಅಡಿಗೊಂದರಂತೆ ಅಲಸಂದೆ, ಹೆಸರು, ಉದ್ದು, ತೊಗರಿ, ಮೆಣಸಿನಕಾಯಿ ಗಿಡ, ರಾಗಿ, ಜೋಳ, ಬಾಸ್ಮತಿ ಭತ್ತ, ಕುಂಬಳ, ಹಾಗಲ ಇತ್ಯಾದಿ ಬೆಳೆಯಿರಿ, ಕಬ್ಬು ಕಟಾವಿನ ನಂತರ ಯಾವುದೇ ಕಾರಣಕ್ಕೂ ಕಬ್ಬಿನ ಸೋಗೆಗೆ ಬೆಂಕಿ ಹಾಕದೆ ಮಲ್ಚಿಂಗ್ ಮಾಡಿ ಎರೆಹುಳು, ಅಸಂಖ್ಯಾತ ಜೀವಾಣುಗಳ ಸಮುಚ್ಛಯವಾಗಿರುವ ನಿಮ್ಮ ಕಬ್ಬಿನ ಗದ್ದೆ ತಣ್ಣಗಿರಲಿ.