ಮರೆತ ಮಾತು

ಕಬ್ಬು ಕಟಾವಿಗೂ ಮುಂಚೆ ಅಲ್ಲಿಲ್ಲಿ ದ್ವಿದಳ ಧಾನ್ಯ ಚೆಲ್ಲಿ. ಕಟಾವಿನ ನಂತರ ಮಲ್ಚಿಂಗ್ ಮಾಡಿ. ಮಲ್ಚಿಂಗ್ ನಡುವೆ ಹೊಸ ಧಾನ್ಯದ ಕುಡಿಗಳು ಕಾಣಿಸಿಕೊಳ್ಳುತ್ತವೆ. ಕೆಲವೇ ದಿನಗಳಲ್ಲಿ ಒಣ ಹೊದಿಕೆಯ ಮೇಲೆ ಸಜೀವ ಹೊದಿಕೆಯ ಹಾಸು. ಆಕಸ್ಮಿಕವಾಗಿ ಬೆಂಕಿ ಬಿದ್ದರೂ ಕಬ್ಬಿನ ತರಗು ಸುಡುವುದಿಲ್ಲ. ಖರ್ಚೇ ಮಾಡದೆ ಕಬ್ಬು ಫಸಲು ತೆಗೆದಿದ್ದೀರಿ. ತಣ್ಣಗೆ ಕುಳಿತು ಲೆಕ್ಕ ಹಾಕಿ. ಹಾಗೆ ಲೆಕ್ಕ ಹಾಕುವಾಗ ಬೆಲ್ಲ ಬೆರೆಸಿದ ಟೀ ಕುಡಿಯಿರಿ.

ಯಾಕೆಂದರೆ ಸಕ್ಕರೆ ಎಂಬುದು White Poison! ನಮ್ಮ ನಿಸರ್ಗ ಕೃಷಿಯ ಬಣ್ಣ ಬೆರೆಸದ ತಾಜಾ ಬೆಲ್ಲ ಸರ್ವೋತ್ಕೃಷ್ಟ. ಅದು ಬಿಟ್ಟರೆ ಹಳದಿ ಸಕ್ಕರೆ. ಅದನ್ನು ತಯಾರು ಮಾಡುವವರೂ ಇಲ್ಲಾ, ಕೇಳುವವರೂ ಇಲ್ಲ.

ಬಿಟ್ಟಿ ಕೊಟ್ಟರೂ ಬೇಡ ಬಿ.ಟಿ.ಹತ್ತಿ

ಹತ್ತಿ ಬೆಳೆಯುವ ರೈತರು. ಬಿ.ಟಿ. ಹತ್ತಿ ಬಿತ್ತನೆ ಬೀಜದ ಸುಳಿಗೆ ಯಾವುದೇ ಕಾರಣಕ್ಕೂ ಸಿಲುಕಬಾರದು ಅನ್ನುತ್ತಾರೆ ಪಾಳೇಕರ್. ರಾಜ್ಯ ರೈತಸಂಘದ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಕೂಡ ಇದನ್ನೆ ಪ್ರತಿಪಾದಿಸಿ ಮಾನ್ಸಾಂಟೊ, ಕಾರ್ಗಿಲ್ ಬೀಜ ಕಂಪನಿಗಳ ವಿರುದ್ಧ ದಾಳಿ ನಡೆಸಿದ್ದರು.

ಬಿ.ಟಿ. ಹತ್ತಿ – ಬೀಜ ಜೈವಿಕ ತಂತ್ರಜ್ಞಾನದ ಅಭಿವ್ಯಕ್ತಿ. ಬೇರೆ ಬೇರೆ ಬಗೆಯ ತಳಿಗಳ ವಂಶವಾಹಿನಿಗಳನ್ನು ಸಂಯೋಜಿಸಿ ಅಧಿಕ ಇಳುವರಿ ಪಡೆಯಬಹುದೆಂದು ಹೇಳಿಕೊಳ್ಳುವ ತಂತ್ರಜ್ಞಾನವೇ ಬಯೋಟೆಕ್ನಾಲಜಿ. ಬೇರೆ ಬೇರೆ ಕುಲಗಳಿಗೆ ಸಂಬಂಧಿಸಿದ ಬೀಜ, ಸಸ್ಯಗಳ ವಂಶವಾಹಿನಿಯ ಬೆರಕೆ; ಜೊತೆಗೆ ಕೆಲವು ಸಸ್ಯ, ಬೀಜಗಳಿಗೆ ಪ್ರಾಣಿಗಳ ವಂಶವಾಹಿನಿಗಳನ್ನು ಬೆರೆಸುವ ತಂತ್ರಜ್ಞಾನ ಇದಾಗಿದೆ. ಇದರಿಂದ ಸೃಷ್ಟಿಯಾಗುವ ಬೀಜಗಳಿಗೆ ಕುಲಾಂತರಿ ಬೀಜಗಳೆಂದು ಹೆಸರಿಡಲಾಗಿದೆ.

ನಮ್ಮ ಆಧುನಿಕ ಬೇಸಾಯ ಕ್ಷೇತ್ರವನ್ನೀಗ ಕೀಟ ನಿರೋಧಕ, ಕಳೆ ನಿರೋಧಕ- ಹೀಗೆ ಇಬ್ಬಗೆಯ ಗುಣ-ಸ್ವಭಾವಗಳಿರುವ ಕುಲಾಂತರಿ ಬೀಜಗಳು ಆಕ್ರಮಿಸಿಕೊಳ್ಳುತ್ತಿವೆ. ಕೀಟ ನಿರೋಧಕ. ಕಳೆ ನಿರೋಧಕ ಗುಣಗಳಿರುವ ಬೀಜಗಳನ್ನು ನಾವು ಬಿತ್ತಿದರೆ- ಆ ಬೆಳೆಗಳಿಗೆ ಕೀಟನಾಶಕವನ್ನಾಗಲಿ, ಕಳೆನಾಶಕವನ್ನಾಗಲಿ ಸಿಂಪಡಿಸಬೇಕಾಗಿಲ್ಲ. ಹೀಗೆಂದ ಮೇಲೆ ಕೀಟನಾಶಕ, ಕಳೆನಾಸಕ ಬಳಸದೆ ಬೆಳೆ ತೆಗೆಯುವ ಬಿತ್ತನೆಗಾಗಿ ನಮ್ಮ ರೈತ ಸಮುದಾಯ ಮುಗಿಬೀಳುವುದು ಸಹಜ ತಾನೆ?

ಮಾನ್ಸಾಂಟೊ, ಕಾರ್ಗಿಲ್ ಮುಂತಾದ ಬೀಜ ಕಂಪನಿಗಳು ಈ ಎರಡೂ ಬಗೆಯ ತಳಿಗಳನ್ನು ತಂದು ನಮ್ಮ ದೇಶದಲ್ಲಿ ಪ್ರಯೋಗ ನಡೆಸಿವೆ. ಬಯೋಟೆಕ್ನಾಲಜಿಯ ಶಿಶು ಬಿ.ಟಿ. ಹತ್ತಿ ತಳಿ- ಹತ್ತಿ ಬೆಳೆಯುವ ಬಹುತೇಕ ಪ್ರದೇಶಗಳಿಗೆ ಈಗಾಗಲೇ ಪರಿಚಯವಾಗಿದೆ.

ಬಿ.ಟಿ. ಎಂದರೆ ‘ಬ್ಯಾಸಿಲಸ್ ತುರಿಂಗಿಯೆನ್ಸಿಸ್’. ಇದೊಂದು ಬಗೆಯ ಬ್ಯಾಕ್ಟೀರಿಯಾ. ಬ್ಯಾಸಿಲಿಸ್ ತುರಿಂಗಿಯೆನ್ಸಿಸ್ ಬ್ಯಾಕ್ಟೀರಿಯಾಗಳೂ ಕೀಟಗಳನ್ನು ನಾಶಪಡಿಸುವ ವಿಷಗಳನ್ನು ಹೊಂದಿವೆ. ಈ ಬ್ಯಾಕ್ಟೀರಿಯಾಗಳನ್ನು ಹತ್ತಿ ಬೀಜದೊಳಕ್ಕೆ ಜೈವಿಕ ತಂತ್ರಜ್ಞಾನದ ಮೂಲಕ ಸೇರಿಸಲಾಗುತ್ತದೆ. ಹತ್ತಿಯ ಗಿಡ ಬೆಳೆಯುತ್ತಾ ತನ್ನ ಎಲ್ಲ ಭಾಗಗಳಲ್ಲಿ ಕೀಟನಾಶಕ ವಿಷವನ್ನು ಉತ್ಪಾದಿಸುತ್ತದೆಯಾದ್ದರಿಂದ, ಇಂತಹ ಗಿಡದ ಯಾವುದೇ ಭಾಗವನ್ನು ಹತ್ತಿಯ ಕಾಯಿ ಕೊರೆಯುವ ಹುಳು ತಿಂದಕೂಡಲೇ ಸಾಯುತ್ತದೆ. ಈ ಪರಿಣಾಮ ಕಂಡು ಮೊದಲ ಬಾರಿಗೆ ರೈತ ಹಿಗ್ಗಬಹುದು. ಆದರೆ ನಂತರದ ಪರಿಣಾಮಗಳನ್ನು ಗಮನಿಸಿ.

ಕ್ರಮೇಣ ಈ ಹತ್ತಿಕಾಯಿ ಕೊರೆಯುವ ಕೀಟಗಳು ಈ ಗಿಡದಲ್ಲಿರುವ ವಿಷಕ್ಕೆ ಪ್ರತಿರೋಧ ಶಕ್ತಿ ಬೆಳೆಸಿಕೊಂಡುಬಿಡುತ್ತವೆ. ಆ ನಂತರ ಅವು ಆ ವಿಷಕ್ಕೆ ಮಣಿಯುವುದಿಲ್ಲ. ಅವುಗಳ ಮುಂದಿನ ಸಂತತಿಯೂ ಹೆಚ್ಚಿನ ಪ್ರತಿರೋಧ ಶಕ್ತಿಯನ್ನು ಹುಟ್ಟುವಾಗಲೆ ರೂಢಿಸಿಕೊಂಡಿರುತ್ತವೆ. ಆ ನಂತರ ಎಷ್ಟೇ ಕೀಟನಾಶಕ ಬಳಸಿದರೂ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯಾ ಸರದಿಯಲ್ಲಿ ಹತ್ತಿ ಬೆಳೆಗಾರರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು.

ಈ ಬ್ಯಾಸಿಲಸ್ ತುರಿಂಗಿಯೆನ್ಸಿಸ್ ವಿಷಕಾರಿ ಸೂಕ್ಷ್ಮಜೀವಿಗಳು ನಿರ್ದಿಷ್ಟವಾಗಿ ಕೇವಲ ಹತ್ತಿಕಾಯಿಕೊರಕ ಹುಳುಗಳ ನಾಶಕ್ಕಾಗಿ ಮಾತ್ರ ಸೃಷ್ಟಿಯಾದವಲ್ಲ. ಇವು ಎಲ್ಲ ಬಗೆಯ ಸೂಕ್ಷ್ಮಜೀವಿ, ಕೀಟಗಳನ್ನೆಲ್ಲ ನಾಶಪಡಿಸುವಂಥ ವಿಷವನ್ನು ಹೊಂದಿವೆ. ಬಿ.ಟಿ. ವಿಷವು ಗಿಡದ ಎಲ್ಲ ಭಾಗಗಳಲ್ಲಿ ಉತ್ಪತ್ತಿಯಾಗುವುದರಿಂದ ಬೇರುಗಳ ಮೂಲಕ, ನೆಲಕ್ಕೆ ಉದುರುವ ಎಲೆಗಳ ಮೂಲಕ ಮಣ್ಣಿಗೂ ಹರಡುತ್ತದೆ. ಭೂಮಿಯ ಫಲವತ್ತತೆಗೆ ಅತ್ಯವಶ್ಯಕವಾಗಿ ನೆರವಾಗುವ ಸೂಕ್ಷ್ಮಾಣು ಜೀವಿಗಳನ್ನು, ಫಂಗಿಗಳನ್ನು ಸಾಯಿಸುತ್ತದೆ. ಇದರಿಂದಾಗಿ ಭೂಮಿಯ ಫಲವತ್ತತೆ ಹಾಗೂ ಜೀವಂತಿಕೆ ನಾಶವಾಗುತ್ತದೆ.

ಇಷ್ಟಲ್ಲದೆ ಈ ಬಗೆಯ ಹತ್ತಿ ಗಿಡದ ವಿಷ ಬೆಳೆಗಳಿಗೆ ಪೂರಕವಾದ ಇತರೆ ಮಿತ್ರ ಕೀಟಗಳನ್ನೂ ಕೊಲ್ಲುತ್ತದೆ. ಇದರಿಂದಾಗಿ ಬೆಳೆಗಳಿಗೆ ಬೇರೆ ಬೇರೆ ನಮೂನೆಯ ರೋಗಗಳೂ ಹರಡಿಕೊಳ್ಳುತ್ತವೆ. ಕೀಟಗಳನ್ನು ತಿನ್ನುವ ಪಕ್ಷಿಗಳೂ ಕೂಡ ಈ ವಿಷದಿಂದಾಗಿ ಸತ್ತಿವೆ. ಈ ಕಾರಣದಿಂದಲೂ ಬೆಳೆಗೆ ರೋಗಗಳು ಹೆಚ್ಚಾಗುತ್ತವೆ.

ಇವೆಲ್ಲಕ್ಕೂ ಮೀರಿ ಈ ತಳಿಯ ಪರಾಗ ಕ್ರಿಯೆ ಸುತ್ತಲ ಎರಡು ಕಿಲೋಮೀಟರ್‌ವರೆಗೂ ಗಾಳಿಯಲ್ಲಿ ಹರಡುತ್ತದೆ. ನಮ್ಮ ಎಲ್ಲ ದೇಶಿಯ ತಳಿಗಳಿಗೂ ಈ ‘ಪರಾಗ ಮಾಲಿನ್ಯ’ ಹರಡಿ ಆ ತಳಿಯ ಗುಣಸ್ವಭಾವಗಳು ವರ್ಗಾವಣೆಯಾಗುತ್ತವೆ. ಇದರಿಂದಾಗಿ ನಮ್ಮ ಜೈವಿಕ ವೈವಿಧ್ಯತೆ ನಾಶವಾಗುತ್ತದೆ.

ಕಳೆ ನಿರೋಧಕ ತಳಿಯ ಅಪಾಯ

ರೌಂಡ್ ಅಪ್ ರೆಡಿ ಸಿದ್ಧವಂಶವಾಹಿ ಮಾನ್ಸಾಂಟೊ ಕಂಪನಿಯದು. ರೌಂಡ್ ಆಪ್ ರೆಡಿ ಹೆಸರಿನಲ್ಲಿ ಈ ಕಂಪನಿ ಕಳೆನಾಶಕ ತಳಿ ರೂಪಿಸಿದೆ. ಈ ಕಂಪನಿಯ ರೌಂಡ್ ಅಪ್ ರೆಡಿ ತಳಿಯೊಂದನ್ನು ಬಿಟ್ಟು ಮಿಕ್ಕೆಲ್ಲ ಕಳೆಗಳೂ ನಾಶವಾಗುತ್ತವೆ. ಅಧಿಕ ಇಳುವರಿಯ ಬಯಕೆ ಮತ್ತು ಕಳೆ ಖರ್ಚು ಉಳಿಸುವ ಲೆಕ್ಕಾಚಾರಕ್ಕೆ ಮಣಿದು ಮಾನ್ಸಾಂಟೊ ಮೋಹಿನಿಗೆ ವಶನಾದರೆ ಅಲ್ಲಿಗೆ ರೈತನ ಕತೆ ಮುಗಿಯಿತು. ಈ ರೌಂಡ್ ಅಪ್ ರೆಡಿ- ವಿಯಟ್ನಾಂ ವಿರುದ್ಧ ಯುದ್ಧ ಮಾಡುವಾಗ ಅಲ್ಲಿನ ಕಾಡುಗಳನ್ನು ನಾಶ ಮಾಡಲು ಅಮೆರಿಕಾ ಬಳಸಿದ ರಾಸಾಯನಿಕ ವಿಷ.

ಇದು ಯಾವುದೇ ವಿಶಿಷ್ಟ ಕಳೆಗಳನ್ನು ನಾಶಮಾಡಲು ತಯಾರು ಮಾಡಿದ ರಾಸಾಯನಿಕವಲ್ಲ. ಹೀಗಾಗಿ, ಈ ಮಾನ್ಸಾಂಟೊ ಕಂಪೆನಿಯ ರೌಂಡ್ ಅಪ್ ರೆಡಿಗೆ ನಿರೋಧಕ ಶಕ್ತಿಯಿರುವ ತಳಿಗಳು ಮಾತ್ರ ಬದುಕುಳೀಯುತ್ತವೆಯೇ ಹೊರತು, ಮಿಕ್ಕೆಲ್ಲ ಸಸ್ಯಸಂಪತ್ತು ಶಾಶ್ವತವಾಗಿ ನಾಶವಾಗುತ್ತದೆ. ನಮ್ಮ ದೇಶೀಯ ತಳಿಗಳನ್ನೆಲ್ಲ ನಾಶಮಾಡುವ ಬಹು ದೊಡ್ಡ ಹುನ್ನಾರವನ್ನು ಈ ಕಂಪನಿಯ ಮೂಲಕ ಅಮೆರಿಕಾ ಜಾರಿಗೆ ತರಲು ಹೊರಟಿದೆ.

ಬಿ.ಟಿ. ಹತ್ತಿ ಬೀಜದಂತೆಯೇ ಯಥಾಪ್ರಕಾರ ಈ ರೌಂಡ್ ಅಪ್ ರೆಡಿ ಮಣ್ಣಿನಲ್ಲಿರುವ ಎಲ್ಲ ಜೀವಾಣುಗಳನ್ನು ಕೊಲ್ಲುತ್ತದೆ. ಹೀಗಾಗಿ ಭೂಮಿ ತನ್ನ ಸಾರವಂತಿಕೆಯನ್ನು ಕಳೆದುಕೊಳ್ಳುತ್ತದೆ. ಈ ಎಲ್ಲಕ್ಕಿಂತ ಘೋರವೆಂದರೆ ಈ ರೌಂಡ್ ಅಪ್ ವಂಶವಾಹಿನಿಯಲ್ಲಿ ಏವೆಂಟ್ ಆರೆಂಜ್ ಎಂಬ ಕಾರ್ಕೋಟಕ ವಿಷವಿದೆ. ವಿಯಟ್ನಾಂ ಯುದ್ಧದಲ್ಲಿ ಈ ವಿಷದ ಸೋಂಕು ತಗುಲಿದ ಜನರಿಗೆ ಈಗಲೂ ಅಂಗವಿಕಲ ಮಕ್ಕಳು ಹುಟ್ಟುತ್ತಿದ್ದಾರೆ. ಈ ಸಂಬಂಧ ಈಗಲೂ ಅಮೆರಿಕಾದ ವಿರುದ್ಧ ಕಾನೂನು ಸಮರಗಳು ಜರುಗುತ್ತಿವೆ. ಈ ರಾಸಾಯನಿಕ ಬಳಸುತ್ತಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಆಪತ್ತು ತಪ್ಪಿದ್ದಲ್ಲ. ನೇರ ಸಂಪರ್ಕ, ಆಹಾರ, ನೀರು ಯಾವುದರ ಮೂಲಕವೂ ಈ ವಿಷದ ಸೋಂಕು ತಗುಲಬಹುದು.

ಮಾನ್ಸಾಂಟೊ, ಕಾರ್ಗಿಲ್‌ಗಳ ಮೂಲಕ ಅಮೆರಿಕಾ ಸೃಷ್ಟಿಸುತ್ತಿರುವ ಈ ಗಂಡಾಂತರಗಳ ಕುರಿತು ನಮ್ಮ ಪ್ರೊ.ಎಂಡಿಎನ್ ಸಾರಿ ಸಾರಿ ಹೇಳುತ್ತಿದ್ದರು. ಇವತ್ತಿಗೂ ಇದು ಕೃಷಿ, ತೋಟಗಾರಿಕಾ ಮಂತ್ರಿಗಳಿಗೆ ಅರ್ಥವಾದಂತಿಲ್ಲ. ಆದರೆ ರೈತರು ಇದರ ಅನರ್ಥಗಳನ್ನು ಅರ್ಥ ಮಾಡಿಕೊಳ್ಳುವಂತಾಗಬೇಕು. ಬಿ.ಟಿ ತಂತ್ರಜ್ಞಾನವನ್ನು ರಾಕ್ಷಸೀ ತಂತ್ರಜ್ಞಾನ ಎನ್ನುತ್ತಾರೆ ಪಾಳೇಕರ್. ಅದು ಸೃಷ್ಟಿಸಿರುವ ಮಾಯಾವಿ ಬೀಜಗಳ ಮೋಹಕ್ಕೆ ಬಲಿಯಾಗಬೇಡಿ ಅನ್ನುವುದು ಅವರ ವಿನಂತಿ.

ಬಾಳೆ ಬೆಡಗು

ನಮ್ಮ ರೈತರು ಬಾಳೆ ನೆಡಲು ೧.೫ ಅಡಿ ಆಳ, ಎರಡು ಅಡಿ ಅಗಲದ ಗುಂಡಿ ತೋಡುತ್ತಾರೆ. ಗುಂಡಿಯ ಅರ್ಧಭಾಗಕ್ಕೆ ಕೊಟ್ಟಿಗೆ ಗೊಬ್ಬರ, ಕೋಳಿ ಗೊಬ್ಬರ, ಕೆರೆಗೋಡು ಇವುಗಳನ್ನೆಲ್ಲ ತುಂಬಿ ಬಾಳೆ ಕಂದು ನೆಡುತ್ತಾರೆ. ಇಷ್ಟರ ಮೇಲೂ ಎನ್‌ಪಿಕೆಗಾಗಿ ದುಡ್ಡು ಸುರಿಯುತ್ತಾರೆ. ಅಧಿಕ ಶ್ರಮ, ಅಧಿಕ ಖರ್ಚು, ಅಧಿಕ ನೀರು, ಅಸಮರ್ಪಕ ಬೆಳಕಿನ ನಿರ್ವಹಣೆ, ರೋಗಗಳ ಬಾಧೆ, ಇಳುವರಿ ಕಡಿಮೆ… ಇವು ಬಾಳೆ ತೋಟಗಳ ಸಾಮಾನ್ಯ ಗೋಳು. ಸಾವಯವದವರಿಗಂತೂ ಬಾಳೆ ಬೆಳೆಯ ವಿಜ್ಞಾನವೇ ತಿಳಿಯದು. ಇವರ ಬಾಳೆಯ ಸರಾಸರಿ ಇಳುವರಿ ನಾಲ್ಕು ಕೆ.ಜಿ.

ಪಾಳೇಕರರ ನೈಸರ್ಗಿಕ ಕೃಷಿಯಲ್ಲಿ ಬಾಳೆ ಬೆಳೆಯಲು ಹೆಚ್ಚು ಪಾಡುಪಡಬೇಕಾಗಿಲ್ಲ. ಬಾಳೆ ನಡುವಿನ ಉಪಬೆಳೆಗಳು ವರ್ಷಪೂರ್ತಿ ಆದಾಯ ತರುತ್ತವೆ. ಜೊತೆಗೆ ಇಂದು ಬಾಳೆ ನೆಟ್ಟರೆ ನಾಳೀನ ಮೂವತ್ತೈದು ವರ್ಷಗಳವರೆಗೆ ನಿಶ್ಚಿಂತೆಯಿಂದ ಬೆಳೆ ತೆಗೆಯಬಹುದು. ಇಲ್ಲಿ ಬಾಳೆಗಾಗಿ ಗುಂಡಿ ತೋಡಬೇಕಾಗಿಲ್ಲ. ಕೋಳಿ ಕಸ, ಕೊಟ್ಟಿಗೆ ಗೊಬ್ಬರ, ಕೆರೆಗೋಡು ಇತ್ಯಾದಿಗಳನ್ನು ತಂದು ಸುರಿಯಬೇಕಾಗೂ ಇಲ್ಲ. ‘ಗುಂಡಿ’ ವಿಷಯ ಬಾಳೆಗೆ ಮಾತ್ರ ಅನ್ವಯಿಸುವುದಲ್ಲ. ಮಾವು, ತೆಂಗು, ಅಡಿಕೆ, ಪಪ್ಪಾಯಿ, ಸೀಬೆ, ಸಪೋಟ- ಈ ಯಾವುದೇ ಗಿಡಗಳಿಗೂ ಗುಂಡಿ ತೋಡಬೇಕಾಗಿಲ್ಲ. ಬೆಳೆ ಬೆಳೆಯಲು ಬೇಕಾದ ಜೀವಾಣುಗಳು ಮತ್ತು ಅತ್ಯಗತ್ಯ ಪೋಷಕಾಂಶಗಳು ಭೂಮಿಯ ಮೇಲ್ಪದರ (೪.೫ ಇಂಚು)ದಲ್ಲೇ ಇರುವುದರಿಂದ; ನಾವು ಆಳದ ಗುಂಡಿ ತೋಡುವುದು ವ್ಯರ್ಥ. ‘ಅರೆ, ಗುಂಡಿ ತೋಡದಿದ್ದರೆ ಬಾಳೆ ನಿಲ್ಲುವುದು ಹೇಗೆ? ಉರುಳಿ ಬೀಳುವುದಿಲ್ಲವೆ?’ ಹೀಗೆ ಕೆಲವರು ಕೇಳುತ್ತಾರೆ. ಕಾಡಿನಲ್ಲಿ ಅಷ್ಟು ದೊಡ್ಡ ದೊಡ್ಡ ಮರಗಳಿವೆ. ಅವುಗಳನ್ನೆಲ್ಲ ಯಾರಾದರೂ ಗುಂಡಿ ತೋಡಿ ನೆಟ್ಟಿರುವರೆ? ಮತ್ತೆ ಕೆಲವರು ಬಾಳೆ ಗಿಡಗಳನ್ನು ಹಿಂಡಲು ಥರ ಬೆಳೆಸಿರುತ್ತಾರೆ. ಕಾರಣ ಕೇಳಿದರೆ ‘ಜೋರು ಗಾಳಿ ಬೀಸಿದರೆ ಉರುಳಿ ಹೋಗುತ್ತವೆ. ಹಿಂಡಿಲು ಮಾದರಿಯಲ್ಲಿದ್ದರೆ ಉರುಳುವುದಿಲ್ಲ’ ಎನ್ನುತ್ತಾರೆ. ಋತುಮಾನ ವೈಪರೀತ್ಯದಿಂದಾಗಿ ಹತ್ತು ವರ್ಷಕ್ಕೊ, ಹದಿನೈದು ವರ್ಷಕ್ಕೊ ಒಮ್ಮೆ ಜೋರು ಗಾಳಿ ಬೀಸಿದರೆ, ಇಡೀ ಜೀವಮಾನ ಪೂರ್ತಿ ಆ ಒಂದು ಗಾಳಿಯ ವಿರುದ್ಧ ಹೋರಾಡುವುದೊಂದೇ ಗುರಿಯಾಗಬೇಕೆ ಬಾಳೆಗೆ? ಬಿದಿರು ಹಿಂಡಿಲು ಮಾದರಿಯಲ್ಲಿ ಬಾಳೆ ಬೆಳೆದೆ ಗೊನೆಯ ಇಳುವರಿ ೨ರಿಂದ ೩ ಕೆ.ಜಿ. ಮಾತ್ರ!

ನಿಸರ್ಗ ಕೃಷಿಯ ಬಾಳೆ ಸಣ್ಣ ಪುಟ್ಟ ಗಾಳಿ ಹೊಡೆತಕ್ಕೆಲ್ಲ ಬಗ್ಗುವುದಿಲ್ಲ. ಆ ಮಟ್ಟಿಗೆ ಆದರೆ ಬೇರುಗಳು ವಿಸ್ತಾರವಾಗಿ ಹರಡಿ ಭೂಮಿಯಲ್ಲಿ ಬಂಧಿಸಲ್ಪಟ್ಟಿರುತ್ತವೆ. ಅದರ ಕಾಂಡ ಬಲವಾಗಿ ಬೆಳೆದು ಅಧಿಕ ಇಳುವರಿಯ ಸಾಮರ್ಥ್ಯ ಪಡೆದಿರುತ್ತದೆ.

ಬಾಳೆಯಲ್ಲಿ ಗಿಡ್ಡ, ಮಧ್ಯಮ ಎತ್ತರ ಮತ್ತು ಎತ್ತರ ಈ ಪ್ರಕಾರದಲ್ಲಿ ನಾನಾಬಗೆಯ ತಳಿಗಳಿವೆ. ಗಿಡ್ಡ ತಳಿ(ಸ್ಕ್ಯಾಂಡಿವಿಶ್)ಯ ಬಾಳೆಗಳಾದರೆ ಗಿಡದಿಂದ ಗಿಡಕ್ಕೆ ನಾಲ್ಕು ಅಡಿ, ಸಾಲಿನಿಂದ ಸಾಲಿಗೆ ಎಂಟು ಅಡಿ (೪’x೮’) ಅಂತರದಲ್ಲಿರಲಿ. ಮಧ್ಯಮ ಎತ್ತರ (ರೂಬೋಸ್ಟ್)ದ ಪಚ್ಚಬಾಳೆ, ನೇಂದ್ರ ಇತ್ಯಾದಿ ತಳಿಗಳಾದರೆ ಗಿಡದಿಂದ ಗಿಡಕ್ಕೆ ಎಂಟು ಅಡಿ, ಸಾಲಿನಿಂದ ಸಾಲಿಗೆ ಎಂಟು ಅಡಿ (೮’x೮’) ಅಂತರವಿರಲಿ. ಏಲಕ್ಕಿ, ಸಹಸ್ರಬಾಳೆ ಮುಂತಾದ ಎತ್ತರದ ತಳಿಗಳಾದರೆ ಗಿಡದಿಂದ ಗಿಡಕ್ಕೆ ೧೨ ಅಡಿ, ಸಾಲಿನಿಂದ ಸಾಲಿಗೆ ೧೨ ಅಡಿ (೧೨’x೧೨’) ಅಂತರವಿರಲಿ.

ಈ ಮುಂಚೆಯೆ ಹೇಳಿರುವಂತೆ ಬಾಳೆ ಕಂದುಗಳನ್ನು ನೆಡಲು ಗುಂಡಿ ತೆಗೆಯಬೇಕಾಗಿಲ್ಲ. ಮರದ ನೇಗಿಲ ಗೆರೆಯ ಆಳ ಎಷ್ಟಿರುತ್ತೋ ಅಷ್ಟು ಆಳ ಸಾಕು ಕಂದು ನೆಡಲು. ಬಾಳೆ ಕಂದಿನ ಗಾತ್ರ ೪೦೦ರಿಂದ ೮೦೦ ಗ್ರಾಂನ ಒಳಗೆ ಇರಲಿ, ೪೦೦ ಗ್ರಾಂಗಿಂತ ಕಡಿಮೆ ತೂಕದ ಕಂದು ಹಾಕಿದರೆ ಇಳುವರಿ ತಡ ಆಗುತ್ತದೆ. ಸಾಮೂಹಿಕವಾಗಿ ಗೊನೆ ಬರುವುದಿಲ್ಲ. ಕಂದು ಗುಲಾಬಿ ಮಿಶ್ರಿತ ಕೆಂಪು ಬಣ್ಣದ್ದಾಗಿರಲಿ. NEMATODE ಇರುವೆಡೆಯಿಂದ ಕಂದು ತರಬೇಡಿ. ಸಾಧ್ಯವಾದಷ್ಟು ನೈಸರ್ಗಿಕ ಕೃಷಿಯ ತೋಟಗಳಿಂದಲೇ ಕಂದುಗಳನ್ನು ತನ್ನಿ.

ನಮ್ಮ ಕರ್ನಾಟಕದ ಹವಾಗುಣದ ಮಟ್ಟಿಗೆ ೧೨’ X ೧೨’ ಅಂತರ ಏಲಕ್ಕಿ ಬಾಳೆಗೆ ಹೆಚ್ಚಾಗುತ್ತದೆ. ಹೀಗಾಗಿ ೮’x೮’ ಅಂತರಕ್ಕೆ ಸೀಮಿತಗೊಳಿಸೋಣ. ಸಾಲಿನಿಂದ ಸಾಲಿಗೆ; ಗಿಡದಿಂದ ಗಿಡಕ್ಕೆ ಒಂದೇ ಅಂತರ. ಬಾಳೆಗೆ ೩,೭೦೦ರಿಂದ ೪,೫೦೦ ft ಕ್ಯಾಂಡಲ್ ಬೆಳಕಿನ ಪ್ರಖರತೆ ಸಾಕು. ಬಾಳೆ ನೆಡುವ ಹಿಂದಿನ ದಿವಸ ಕಂದುಗಳನ್ನು ಸಂಗ್ರಹಿಸಿ. ೮’ x ೮’ ಅಳತೆಯಲ್ಲಿ ಎಕರೆಗೆ ೬೮೦ ಕಂದುಗಳು ಸಾಕು. ಬೀಜಾಮೃತದಲ್ಲಿ ಕಂದುಗಳ ಬೊಡ್ಡೆಯನ್ನು ಮಾತ್ರ ಮುಳುಗಿಸಿ ತೆಗೆಯಿರಿ. ಆನಂತರ ಕಂದುಗಳನ್ನು ನೆಡಿ. ಕಂದುಗಳನ್ನು ನೆಡುವ ದಿವಸವೇ ಎರಡು ಕಂದುಗಳ ನಡುವೆ ಉತ್ತರ ದಕ್ಷಿಣವಾಗಿ ಎರಡು ಅಡಿಗೊಂದರಂತೆ ಸಾಲುಗಳನ್ನು ತೆಗೆಯಿರಿ. ಕಬ್ಬಿನ ಬೆಳೆಯಲ್ಲಿ ಅಳವಡಿಸಿರುವ ಮಾದರಿಯನ್ನೇ ಬಾಳೆಗೂ ಅಳವಡಿಸಿ.

ಬಾಳೆಯಿಂದ ಬಾಳೆಗೆ ಮೊದಲ ಸಾಲಿನಲ್ಲಿ (ಪೂರ್ವ-ಪಶ್ಚಿಮದ ದಿಕ್ಕು) ಕ್ರಮವಾಗಿ ೧. ಈರುಳ್ಳಿ, ೨. ಅಲಸಂದೆ, ೩. ಮೆಣಸಿಕಾಯಿ ಗಿಡ, ೪. ನುಗ್ಗೆಗಿಡ, ೫. ಮೆಣಸಿನಕಾಯಿ ಗಿಡ, ೬. ಅಲಸಂದೆ, ೭. ಬೆಳ್ಳುಳ್ಳಿ ಫಸಲನ್ನು ಅಳವಡಿಸಿ.

ಇದಾದ ನಂತರ ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರದ ೨ನೇ ಸಾಲಿನಲ್ಲಿ ಕ್ರಮವಾಗಿ ೧. ಈರುಳ್ಳಿ, ೨. ಅಲಸಂದೆ, ೩. ಮೆಣಸಿನಕಾಯಿ ಗಿಡ, ೪. ಭತ್ತ/ರಾಗಿ/ಗೋಧಿ/ಜೋಳ/ನವಣೆ ಅಥವಾ ತರಕಾರಿ. ೫. ಮೆಣಸಿನಕಾಯಿ ಗಿಡ, ೬. ಅಲದಂದೆ, ೭. ಬೆಳ್ಳುಳ್ಳಿ

ಮೂರನೇ ಸಾಲಿನಲ್ಲೂ, ಎರಡನೆ ಸಾಲಿನ ಬೆಳೆಯೇ ಪುನರಾವರ್ತನೆಯಾಗಲಿ. ಆದರೆ ಬಾಳೆಯಿಂದ ಬಾಳೆಗೆ ಬರುವ ಸಾಲಿನ ನಡುವೆ ಮಾತ್ರ ಈರುಳ್ಳಿ, ಅಲಸಂದೆ, ಮೆಣಸಿನಕಾಯಿ ಗಿಡಗಳೊಂದಿಗೆ ನುಗ್ಗೆ ಇರಲಿ. ಉಳಿದಂತೆ ಬೇರೆ ಮಾರ್ಪಾಡುಗಳಿಲ್ಲ. ನುಗ್ಗೆ ಬಾಳೆಗಿಂತ ವೇಗವಾಗಿ ಬೆಳೆಯುತ್ತದೆ. ಹೆಚ್ಚುವರಿ ಬಿಸಿಲಿನ ಪ್ರಖರತೆಯನ್ನು ತಡೆಯುತ್ತದೆ. ಹವಾದಲ್ಲಿರುವ ಸಾರಜನಕವನ್ನು ಹೀರಿ ಬಾಳೆ ಫಸಲಿಗೆ ನೆರವಾಗುತ್ತದೆ.

ಬಾಳೆಯ ಬಾಲ್ಯ ನಾಲ್ಕು ತಿಂಗಳು. ಈ ನಾಲ್ಕು ತಿಂಗಳ ತರುವಾಯ ಅನುಕ್ರಮವಾಗಿ ಈರುಳ್ಳಿ, ಅಲಸಂದೆ ಸಾಲುಗಳಿಗೆ ನೀರು ತಪ್ಪಿಸಿ. ಆರು ತಿಂಗಳಿನ ನಂತರ ನುಗ್ಗೆ ಸಾಲಿನಲ್ಲಿ ಕಾಯಂ ಆಗಿ ನೀರು ಹರಿಯಲಿ. ನೀರನ್ನು ಇಳಿಜಾರಿಗೆ ಅಡ್ಡಲಾಗಿ ಕೊಡಿ. ಮಳೆ ಇಲ್ಲದ ದಿನಗಳಲ್ಲಿ ಪ್ರತಿ ಹದಿನೈದು ದಿವಸಗಳಿಗೊಮ್ಮೆ ನೀರು ಕೊಡಿ. ಹನಿ ನೀರಾವರಿ ಇದ್ದವರು ದಿನದಿಂದ ದಿನಕ್ಕೆ ನೀರಿನ ಪ್ರಮಾಣವನ್ನು ಕಮ್ಮಿ ಮಾಡುತ್ತಾ ಬನ್ನಿ. ಎಲೆ ನಸುಗೆಂಪು ಬಣ್ಣಕ್ಕೆ ತಿರುಗಿದರೆ ನೀರು ಜಾಸ್ತಿಯಾಗಿದೆ ಅಂತ ಅರ್ಥ. ಎಂಟು ತಿಂಗಳ ನಂತರ ನೀರಿರುವ ಸಾಲಿನ ಎರಡು ಬದಿಯ ದಿಂಡುಗಳ ಮೇಲೆ ಜಿಗ್‌ಜಾಗ್ ಮಾದರಿಯಲ್ಲಿ ಕುಂಬಳ, ಹಾಗಲ, ಹೀರೆ, ಸೌತೆ, ಕಲ್ಲಂಗಡಿ, ಕರಬೂಜ- ಹೀಗೆ ಹಬ್ಬುವ ತರಕಾರಿ ಬಳ್ಳಿಗಳು, ದ್ವಿದಳ ಧಾನ್ಯದ ಗಿಡಗಳನ್ನು ನೆಡುತ್ತಾ ಬನ್ನಿ.

ಬಾಳೆ ಬೆಳೆಯುವಾಗ ಹೊಸ ಕಂದುಗಳು ಬರುತ್ತವೆ. ನಿರಂತರವಾಗಿ ಬರುತ್ತಿರುತ್ತವೆ. ಎಳೆಯದಾಗಿರುವಾಗಲೆ ಬೇರುಸಹಿತ ಕಿತ್ತುಹಾಕಿ. ಪ್ರತ್ಯೇಕ ಬಿತ್ತನೆಯ ಉದ್ದೇಶವಿದ್ದರೆ ಮಾತ್ರ ಹೊಸದಾಗಿ ಬರುವ ಕಂದನ್ನು ಬೆಳೆಯಲು ಬಿಡಿ. ಬಿತ್ತನೆ ಕಂದಿನ ಅವಧಿ  ೨.೫ಯಿಂದ ೩.೫ ತಿಂಗಳವರೆಗಿರಲಿ. ಮುಂದೆ ಮೋತೆ ಬರುವಾಗ- ಮೋತೆಗೆ ವಿರುದ್ಧ ದಿಕ್ಕಿನಲ್ಲಿ ಹೊಸದಾಗಿ ಬರುವ ಕಂದನ್ನು ಮಾತ್ರ ಉಳಸಿಕೊಳ್ಳಿ. ಗೊನೆ ಕಟಾವಿನ ನಂತರ ಬಾಳೆ ಕಂಬವನ್ನು ಕಡಿದು ಉರುಳಿಸಬೇಡಿ. ಕಬ್ಬಿನ ಬೆಳೆಯಲ್ಲಿ ತಾಯಿ ಕಬ್ಬು ಮಾಡುವ ಕೆಲಸವನ್ನೆ ತಾಯಿಬಾಳೆ ಮಾಡುತ್ತದೆ.

ಬೆಳೆಯುತ್ತಿರುವ ಬಾಳೆಯಲ್ಲಿ ಹಚ್ಚಹಸಿರಿನ ೧೫ ಬಾಳೆ ಎಲೆಗಳಿರುತ್ತವೆ. ಈ ಎಲ್ಲ ಎಲೆಗಳು ಆಹಾರ ತಯಾರಿಸುತ್ತವೆ. ೧೬ನೇ ಸುಳಿ ಹೊರಬರುತ್ತಿದ್ದಂತೆ ಕೆಳಗಿನ ಬಾಳೆ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹೊಸದಾಗಿ ಸುಳಿ ಬಂದ ತುರವಾಯ, ಬಾಳೆ ತನ್ನ ಹಣ್ಣಾದ ಎಲೆಯನ್ನು ಕಳಚಿಕೊಳ್ಳುವುದಿಲ್ಲ. ಕಬ್ಬು ಕೂಡ ಅಷ್ಟೆ. ಬಾಳೆ, ಕಬ್ಬಿನ ಎಲೆಗಳು ಒಣಗಿದ ತರುವಾಯ ಕಾಂಡಕ್ಕೆ ಮುಚ್ಚಿಗೆಯಾಗುತ್ತವೆ. ಈ ಕಾಂಡಗಳಲ್ಲಿ ಶೇಕಡ ೯೨ರಷ್ಟು ನೀರಿನಂಶವಿರುತ್ತದೆ. ಚಳಿ, ಗಾಳಿ, ಬಿಸಿಗಾಳಿ ಮತ್ತು ಅಧಿಕ ಬಿಸಿಲಿನ ತಾಪ ಕಾಂಡಗಳಿಗೆ ತಟ್ಟದಂತೆ ಈ ಎಲೆಗಳು ಜೋತುಬೀಳುತ್ತವೆ. ಇಷ್ಟಲ್ಲದೆ ಈ ಎಲೆಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಮೆಗ್ನೇಷಿಯಂಗಳಿರುತ್ತವೆ. ಹಾಗೆಯೇ ಕ್ಯಾಲ್ಸಿಯಂ, ಬೋರಾನ್, ಮಾಲಿಬ್ಡಿನಂಗಳು ಕೂಡ. ಹೊಸದಾಗಿ ಮರಿಕಂದುಗಳು ಬರುವಾಗ ಅಥವಾ ತನ್ನ ಬೆಳವಣಿಗೆಗೆ ಈ ಅಂಶಗಳೂ ಕೊರತೆಯಾದಾಗ ಬಾಳೆ ಅಥವಾ ಕಬ್ಬಿನ ಬೇರುಗಳು ಒಣ ಎಲೆಗಳಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಬಾಳೆ ತೋಟ ಅಂದವಾಗಿ ಕಾಣಲಿ ಅಂತ ನಮ್ಮ ರೈತರು ಒಣ ಎಲೆಗಳನ್ನೆಲ್ಲ ಸವರಿಬಿಡುತ್ತಾರೆ. ಇದು ತಪ್ಪು. ಹಾಗೆಯೇ ಊಟದ ಎಲೆಗಾಗಿಯೂ ಬಾಳೆ ಎಲೆಗಳನ್ನು ಕತ್ತರಿಸುತ್ತೇವೆ. ಇದು ಕೂಡ ತಪ್ಪು. ಒಂದು ಚದರಡಿ ಬಾಳೆ ಎಲೆ ಪ್ರತಿದಿನ ೨.೨೫ ಗ್ರಾಂ ಟನ್ನೇಜ್ ಹೆಚ್ಚಿಸುತ್ತದೆ. ಬಾಳೆ ಎಲೆ ಕೊಯ್ದರೆ ಆಗುವ ಹಾನಿ ಲೆಕ್ಕಹಾಕಿ.

ಬಾಳೆಯಲ್ಲಿ ಇಳುವರಿ ಹೆಚ್ಚಾಗಬೇಕಾದರೆ ಮತ್ತೊಂದು ಮಹತ್ವದ ಅಂಶವನ್ನು ಗಮನಿಸಬೇಕು. ಬಾಳೆಯ ಕಾಂಡ ದಪ್ಪ ಆಗಬೇಕಾದರೆ ಬೇರುಗಳು ವಿಸ್ತರಿಸಿ ಬೆಳೆಯಬೇಕು. ಬೇರುಗಳು ವಿಸ್ತರಿಸಿ ಬೆಳೆಯಬೇಕಾದರೆ ನೀರಿನ ದಾಹ ಸೃಷ್ಟಿಸಬೇಕು. ಹೀಗಾಗಿ ನಾವು ಬಾಳೆಯ ಬುಡದಲ್ಲಿ ನೀರು ಕಟ್ಟಬಾರದು. ಇದು ಎಲ್ಲ ಮರಗಿಡಗಳಿಗೂ ಅನ್ವಯಿಸುತ್ತದೆ. ಯಾವುದೇ ಮರಗಿಡಗಳು ಬೇರು ಮತುತ ಕಾಂಡಗಳಲ್ಲಿ ಆಹಾರ ಸಂಗ್ರಹಿಸಿಡುವ ಸಾಮರ್ಥ್ಯ ಪಡೆದಿವೆ. ಬೇರುಗಳು ವಿಸ್ತಾರವಾದರೆ ಈ ಸಾಮರ್ಥ್ಯ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದಾಗಿ ಇಳುವರಿಯೂ ಅಧಿಕವಾಗುತ್ತದೆ. ಬೇರುಗಳು ವಿಸ್ತಾರವಾಗದಿದ್ದರೆ, ಆಹಾರ ಸಂಗ್ರಹಣೆಯ ಸಾಮರ್ಥ್ಯ ಕುಸಿಯುತ್ತದೆ. ಜೊತೆಗೆ ಇಳುವರಿಯೂ ಕಮ್ಮಿಯಾಗುತ್ತದೆ.

ಇದರ ಜೊತೆಗೆ ಬೇರು ಮತ್ತು ಕಾಂಡಗಳು ಆಹಾರ ಸಂಗ್ರಹಣ ಸಾಮರ್ಥ್ಯದ ಬಲದ ಮೇಲೆ, ಎಲೆಗಳ ಆಹಾರ ತಯಾರಿಸುವ ಕ್ರಿಯೆಯೂ ನಿಶ್ಚಯವಾಗುತ್ತದೆ. ಉದಾಹರಣೆಗೆ ಬಾಳೆಯ ಎಲೆಗಳು ಒಂದು ದಿನಕ್ಕೆ ನೂರು ಕೆ.ಜಿ. ಆಹಾರ ತಯಾರಿಸಿ ಬೇರು ಮತ್ತು ಕಾಂಡಗಳಿಗೆ ಕಳುಹಿಸುತ್ತವೆ. ಅದರ ಬೇರು ಮತ್ತು ಕಾಂಡ ೬೦ ಕೆ.ಜಿ. ಆಹಾರ ಮಾತ್ರ ಸಂಗ್ರಹಿಸಿದರೆ, ಮರುದಿನದಿಂದ ಬಾಳೆಯ ಎಲೆಗಳು ತಮ್ಮ ಆಹಾರ ತಯಾರಿಕೆಯನ್ನು ೬೦ ಕೆ.ಜಿ.ಗೆ ಸೀಮಿತಗೊಳಿಸಿಕೊಳ್ಳುತ್ತವೆ. ಇದು ಪರಸ್ಪರ ಅರಿತು ನಡೆಯುವ ಕ್ರಿಯೆ. ಹೀಗಾಗಿ ನಾವು ಬೇರಿನ ವಿಸ್ತರಣೆಯೆಡೆಗೆ ಹೆಚ್ಚಿನ ಗಮನ ಕೊಡಬೇಕು. ಇಲ್ಲದಿದ್ದರೆ ಎಲೆಗಳ ಆಹಾರ ತಯಾರಿಕಾ ಸಾಮರ್ಥ್ಯ ವ್ಯರ್ಥವಾಗುತ್ತದೆ.

ಈ ವರ್ಷ ನಮ್ಮ ಬನ್ನೂರು ಕೃಷ್ಣಪ್ಪ ೪೮ ಕೆ.ಜಿ (ಏಲಕ್ಕಿ ಬಾಳೆ)ವರೆಗೆ ಬಾಳೆಯಿಂದ ಇಳುವರಿ ಪಡೆದಿದ್ದಾರೆ. ಅವರ ಬಾಳೆ ತೋಟದ ಸರಾಸರಿ ಇಳುವರಿ ೨೨ ಕೆ.ಜಿ ಅವರು ಎಕರೆಗೆ ೮೦೦ ಗಿಡ ಹಾಕಿದ್ದರು. ಅಂತರ ಕಮ್ಮಿ ಆದ ಹಿನ್ನೆಲೆಯಲ್ಲಿ ಇಳುವರಿ ಕಮ್ಮಿಯಾಗಿದೆ. ಆದರೆ ರಾಸಾಯನಿಕ ಕೃಷಿಯಲ್ಲಿ ಎಷ್ಟೆಲ್ಲ ಸುರಿದರೂ ಏಲಕ್ಕೆ ಬಾಳೆಯಲ್ಲಿ ಈ ಮಟ್ಟದ ಇಳುವರಿ ಬಂದ ಉದಾಹರಣೆಗಳು ಎಲ್ಲಿಯೂ ಇಲ್ಲ. ನೈಸರ್ಗಿಕ ಕೃಷಿಯಲ್ಲಿ ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚಾಗುತ್ತದೆ.

ಗಾಂಧೀಜಿಯ ದೆಸೆಯಿಂದ

ಮರೆತ ಮಾತು

 

ಬಾಳೆ ಕಂದುಗಳನ್ನು ನೆಡುವ ಮುನ್ನ ಎರಡು ಬಾರಿ ಉಳುಮೆ ಮಾಡಿಕೊಳ್ಳಿ. ಮುಂದೆ ತಲೆಮಾರು ಪೂರ್ತಿ ಉಳುಮೆ ಮಾಡುವ ಅಗತ್ಯವಿಲ್ಲ. ತಿಂಗಳಿಗೊಮ್ಮೆ ಜೀವಾಮೃತ ನೀಡಿ. ಬಾಳೆಯ ನಡುವೆ ಬೆಳೆಯುವ ಉಪಬೆಳೆಗಳಿಂದಲೇ ವರ್ಷಕ್ಕೆ ಕನಿಷ್ಠ ೪೦ರಿಂದ ೫೦ ಸಾವಿರ ರೂ.ಗಳನ್ನು ಸಂಪಾದಿಸಬಹುದು. ಆದಿಚುಂಚನಗಿರಿಯ ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ಶಾಖಾಮಠದವರು ನೈಸರ್ಗಿಕ ಕೃಷಿ ಆರಂಭಿಸಿದ್ದಾರೆ. ತೆಂಗಿನ ನಡುವೆ ಬಾಳೆ ಕೂಡ ಬೆಳೆದಿದ್ದಾರೆ. ಅಲ್ಲಿ ನಿಸರ್ಗ ಕೃಷಿಯ ಉಸ್ತುವಾರಿ ಹೊತ್ತಿರುವ ರಾಮಣ್ಣ ಬಾಳೆಯ ಉಪಬೆಳೆಗಳ ನಡುವೆ ಎರಡೇ ಎರಡು ಬೂದುಗುಂಬಳ ಬೀಜ ನೆಟ್ಟಿದ್ದರು. ಆ ಎರಡು ಗಿಡಗಳ ಇಳುವರಿ ಎಷ್ಟು ಗೊತ್ತೆ? ಒಂದಲ್ಲ, ಎರಡಲ್ಲ… ಮೂರು ಟನ್! ಇದಂತೂ ದಾಖಲೆಯ ಇಳುವರಿ! ಈಗ ಮಾರುಕಟ್ಟೆಯಲ್ಲಿ ಕೆ.ಜಿ. ಬೂದುಗುಂಬಳಕ್ಕೆ ಹತ್ತು ರೂಪಾಯಿ. ಬೆಲೆಯ ಮಾತು ಬಿಡಿ. ಕೆ.ಜಿ.ಗೆ ಒಂದೇ ರೂಪಾಯಿ ಸಿಗಲಿ. ಎರಡೇ ಬೀಜದಿಂದ ಮೂರು ಸಾವಿರ ಕೆ.ಜಿ ಇಳುವರಿ! ನೈಸರ್ಗಿಕ ಕೃಷಿಯಲ್ಲಿ ಇದು ಸಹಜ. ಬೆಳೆಗಳಿಗೆ ಅಗತ್ಯವಾದ ವಾತಾವರಣ ಕಲ್ಪಸಿ. ಬಾಕಿ ಚಿಂತೆ ಬಿಡಿ.

ನೈಸರ್ಗಿಕ ಕೃಷಿಯಲ್ಲಿ ತೋಟ

ವೈವಿಧ್ಯಮಯ ತೋಟಗಳಿಗೆ ಹಲವು ಮಾದರಿಗಳಿವೆ. ಸದ್ಯಕ್ಕೆ ಈ ಮಾದರಿ ನಿಮ್ಮ ಮುಂದಿರಲಿ.

ತೆಂಗಿನ ನೈಸರ್ಗಿಕ ಅಂತರ ಸಾಲಿನಿಂದ ಸಾಲಿಗೆ, ಗಿಡದಿಂದ ಗಿಡಕ್ಕೆ ೪೮ ಅಡಿ (೪೮’ x ೪೮’) ಅಂತರ ಇರಬೇಕು. ಈ ಅಂತರ ಕರಾವಳಿ ತೀರಗಳಿಗೆ ಸೂಕ್ತ. ಒಳನಾಡುಗಳಲ್ಲಿ ಈ ಅಂತರವನ್ನು ಸಾಲಿನಿಂದ ಸಾಲಿಗೆ ೩೬ ಅಡಿ, ಗಿಡದಿಂದ ಗಿಡಕ್ಕೆ ೩೬ ಅಡಿ (೩೬’ x ೩೬’) ಮಾಡಿಕೊಳ್ಳೋಣ. ಈ ಅಂತರದಲ್ಲಿ ಒಂದು ಎಕರೆಯಲ್ಲಿ ೩೩ ಸಸಿಗಳನ್ನು ನಡೆಬಹುದು. ಈಗ ನಾವು ನೆಡಲಿರುವ ಯಾವ ಗಿಡಗಳಿಗೂ ಗುಂಡಿ ತೆಗೆಯಬೇಕಾಗಿಲ್ಲ. ಕೈಯಲ್ಲೇ ಹಳ್ಳ ತೋಡಿ ತೆಂಗು ನೆಡಬಹುದು. (ಚಿತ್ರ ಗಮನಿಸಿ)

ಎರಡು ತೆಂಗುಗಳ ನಡುವೆ ಸಾಲಿನಿಂದ ಸಾಲಿಗೆ (ಪೂರ್ವ ಪಶ್ಚಿಮ) ೩೬ ಅಡಿ; ಗಿಡದಿಂದ ಗಿಡಕ್ಕೆ (ಉತ್ತರ ದಕ್ಷಿಣ) ೩೬ ಅಡಿ ಅಂತರ. ನಾವೀಗ ಈ ನಾಲ್ಕು ತೆಂಗುಗಳ ನಡುವೆ ಬೆಳೆ ಆಯೋಜಿಸೋಣ. ಇನ್ನುಳಿದ ಪ್ರದೇಶಕ್ಕೂ ಈ ಮಾದರಿಯನ್ನು ಅನುಸರಿಸಿ.

ತೆಂಗಿನಿಂದ ತೆಂಗಿಗೆ ಇರುವ ೩೬ ಅಡಿ ಅಂತರದಲ್ಲಿ ೪.೫ ಅಡಿಗೆ ಒಂದರಂತೆ ಕ್ರಮವಾಗಿ ಈ ಗಿಡಗಳನ್ನು ಹಾಕಿ . ೧. ಕೋಕೋ, ೨. ಅಡಿಕೆ, ೩. ಕೋಕೋ, ೪. ಅಡಿಕೆ, ೫. ಕೋಕೋ, ೬. ಅಡಿಕೆ, ೭. ಕೋಕೋ ನಂತರದ ಎರಡನೇ ಸಾಲು ಮೊದಲ ಸಾಲಿನಿಂದ ೪.೫ ಅಡಿ ಹಿಂದಕ್ಕೆ ಇರಲಿ. ಈ ಸಾಲಿನಲ್ಲಿ ೧. ನುಗ್ಗೆ, ೮. ಬಾಳೆ, ೩. ನುಗ್ಗೆ, ೪. ಬಾಳೆ, ೫. ನುಗ್ಗೆ, ೬. ಬಾಳೆ, ೭. ನುಗ್ಗೆ, ೮. ಬಾಳೆ, ೯. ನುಗ್ಗೆ.

ಮೂರನೇ ಸಾಲು ಎರಡನೆ ಸಾಲಿನಿಂದ ೪.೫ ಅಡಿ ಹಿಂದಕ್ಕೆ ಬರಲಿ. ಈ ಸಾಲಿನಲ್ಲಿ ಮೊದಲ ಸಾಲಿನ ೧. ಕೋಕೋ, ೨. ಅಡಿಕೆ, ೩. ಕೋಕೋ, ೪. ಅಡಿಕೆ, ೫. ಕೋಕೋ, ೬. ಅಡಿಕೆ, ೭. ಕೋಕೋ, ೮. ಅಡಿಕೆ, ೯. ಕೋಕೋ.

ನಾಲ್ಕನೇ ಸಾಲಿನಲ್ಲಿ ಎರಡನೆ ಸಾಲಿನಲ್ಲಿರುವ ೧. ನುಗ್ಗೆ, ೨. ಬಾಳೆ, ೩. ನುಗ್ಗೆ, ೪. ಬಾಳೆ, ೫. ನುಗ್ಗೆ, ೬. ಬಾಳೆ, ೭. ನುಗ್ಗೆ, ೮.ಬಾಳೆ.

ಐದನೇ ಸಾಲಿನಲ್ಲಿ ಮತ್ತೆ ಮೊದಲ ಸಾಲಿನ ಬೆಳೆಗಳೇ ಪುನರಾವರ್ತನೆಯಾಗಲಿ. ಪ್ರತಿ ಸಾಲಿನ ಅಂತರ ೪.೫ ಅಡಿ ಇರಲಿ. ೬,೭,೮,೯ರ ಸಾಲುಗಳು ಮೇಲಿನ ಸಾಲುಗಳ ಕ್ರಮದಲ್ಲೇ ಪುನರಾವರ್ತನೆಯಾಗಲಿ. ತೆಂಗು ಸೇರಿದಂತೆ ಈ ೩೬’ x೩೬’ ವಿಸ್ತೀರ್ಣದಲ್ಲಿ ಒಟ್ಟು ೮೧ ಗಿಡಗಳು ಬರುತ್ತವೆ. ಇಲ್ಲಿ ಕೋಕೋ ಬದಲು ಕಾಫಿ ಹಾಕಬಹುದು. ಕಾಫಿ ಬೆಲೆ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಕೋಕೋಗೆ ವಿಶ್ವಾವ್ಯಾಪಿ ಮಾರುಕಟ್ಟೆ ಇದೆ. ಅದರ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯ ಇರುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕೋಕೋ ಬೆಳೆಗೆ ಈ ಬಗೆಯ ವಾತಾವರಣ ಬಹಳ ಇಷ್ಟ. ಬಹಳ ಸಮೃದ್ಧವಾಗಿ, ಚೇತೋಹಾರಿಯಾಗಿ ಅದು ಬೆಳೆಯುತ್ತದೆ. ನುಗ್ಗೆ ಬದಲು ಗ್ಲಿರಿಸಿಡಿಯಾ ಕೂಡ ಹಾಕಬಹುದು. ಇದು ಕೂಡ ಶೀಘ್ರವಾಗಿ ಬೆಳೆದು ನೆರಳು ಕೊಡುತ್ತದೆ. ಇದರ ಬೇರುಗಳ ಗಂಟುಗಳಲ್ಲಿನ ರೈಜೋಬಿಯಂ ಜೀವಾಣುಗಳು ಪರಿಣಾಮಕಾರಿ ಮಟ್ಟದಲ್ಲಿ ಸಾರಜನಕವನ್ನು ಹೀರಿ ಬೆಳೆಗಳಿಗೆ ಸರಬರಾಜು ಮಾಡುತ್ತವೆ. ಗ್ಲಿರಿಸಿಡಿಯಾ ಅತ್ಯುತ್ತಮ ಹೊದಿಕೆ ಕೂಡ. ಇದರ ಬೆಳವಣಿಗೆ ಬೆಳೆಗಳಿಗೆ ನೆರಳು ಕೊಡುವಂತಿರಲಿ. ಅತಿಯಾಗಿ ಬೆಳೆದಾಗ ರೆಂಬೆಗಳನ್ನು ಕತ್ತರಿಸಿ ಹೊದಿಕೆಯಾಗುವಂತೆ ಮಾಡಿ. ನುಗ್ಗೆ ಗ್ಲಿರಿಸಿಡಿಯಾದ ಕೆಲಸವನ್ನೇ ಮಾಡುತ್ತದೆ. ಜೊತೆಗೆ ಆದಾಯ ಕೂಡ ತರುತ್ತದೆ. ಅಡಿಕೆ-ತೆಂಗು ಎತ್ತರಕ್ಕೆ ಬೆಳೆಯುತ್ತಿದ್ದಂತೆ ಪೆಪ್ಪರ್ (ಕರಿಮೆಣಸು) ಬಳ್ಳಿಗಳನ್ನು ಹಬ್ಬಿಸಿ. ನುಗ್ಗೆ ಅಥವಾ ಗ್ಲಿರಿಸಿಡಿಯಾ ಸಾಲಲ್ಲಿ ವೆನಿಲಾ ಬೆಳೆಗೆ ದಾರಿ ಮಾಡಿಕೊಡಿ. ತೆಂಗಿನ ಉತ್ತರ-ದಕ್ಷಿಣದ ನೇರ ಸಾಲಿನಲ್ಲಿ ನುಗ್ಗೆ, ಕೋಕೋ ಬದಲು ಪಪ್ಪಾಯಿ ಗಿಡ ನೆಡಿ.

ಗಿಡಗಳ ಪ್ರತಿ ೪.೫ ಅಡಿ ಸಾಲಿನ ನಡುವೆ ೯ ಇಂಚು ಆಳ ೧.೫ ಅಡಿ ಅಗಲದ ನೀರಿನ ಕಾಲುವೆ ಮಾಡಿ. ಈ ಕಾಲುವೆ ಎರಡೂ ಬದಿಗಳ ನಡುವೆ ಹಬ್ಬುವ ಬಳ್ಳಿ ಗಿಡಗಳು, ಅಲಸಂದೆ, ಮೆಣಸಿನಕಾಯಿಗಿಡ, ಈರುಳ್ಳಿ, ಚೆಂಡುಹೂ, ಸಜ್ಜೆ, ಗೋಧಿ, ರಾಗಿ, ಭತ್ತ ಇತ್ಯಾದಿಗಳನ್ನು ಅಳವಡಿಸಿ. ಜೀವನ ನಿರ್ವಹಣೆ ಮತ್ತು ಆದಾಯಕ್ಕಾಗಿ ಅಡಿಕೆ ಮತ್ತು ತೆಂಗಿನ ಫಸಲು ಬರುವವರೆಗೆ ನೀವು ಕಾಯಬೇಕಾಗಿಲ್ಲ. ತೋಟಕ್ಕೆ ಪ್ರತಿ ಹದಿನೈದು ದಿವಸಕ್ಕೆ ನೀರು ಕೊಡಿ. ಮೊದಲ ಆರು ತಿಂಗಳು ಪ್ರತಿ ಕಾಲುವೆಯಲ್ಲೂ ನೀರು ಹರಿಯಲಿ. ಆರು ತಿಂಗಳ ನಂತರ ಎಲ್ಲ ಕಾಲುವೆಯಲ್ಲೂ ನೀರು ಹರಿಯುವುದು ಬೇಡ. ಒಂದು ಕಾಲುವೆ ತಪ್ಪಿಸಿ ಇನ್ನೊಂದು ಕಾಲುವೆಗೆ ಕೊಡಿ. ಈ ಬಾರಿ ನೀರು ಹರಿದ ಕಾಲುವೆಗೆ ಮುಂದಿನ ಹದಿನೈದು ದಿವಸಕ್ಕೆ ಮತ್ತೆ ನೀರು ಕಟ್ಟುವುದು ಬೇಡ. ಉದಾಹರಣೆಗೆ ಈ ಬಾರಿ ೧,೩,೫,೭ನೇ ಕಾಲುವೆಗಳಲ್ಲಿ ನೀರು ಹರಿಸಿದ್ದರೆ; ಮುಂದಿನ ಹದಿನೈದು ದಿನದಲ್ಲಿ ಪುನಃ ನೀರು ಹಾಯಿಸುವಾಗ ೧, ೩, ೫, ೭ರ ಸಾಲುಗಳಿಗೆ ನೀರು ತಪ್ಪಿಸಿ ೨, ೪, ೬ರ ಕಾಲುವೆಗಳಿಗೆ ಹರಿಸಿ. ಹೀಗಾದಾಗ ಬೇರುಗಳು ವಿಸ್ತಾರವಾಗಿ ಬೆಳೆಯುತ್ತವೆ. ನೀರು ಬಳಕೆಯಲ್ಲೂ ಮಿತವ್ಯಯ ಸಾಧಿಸಬಹುದು. ಈ ವಾತಾವರಣದಲ್ಲಿ ಬಾಳೆ ಹಿಗ್ಗಿನಿಂದ ಬೆಳೆಯುತ್ತದೆ. ಬೆಳಕಿನ ಪ್ರಖರತೆ ಸಾಲದಾದಾಗ ತನ್ನ ಪಾಡಿಗೆ ತಾನೇ ಮೌನವಾಗುತ್ತದೆ. ಹೆಚ್ಚಿನ ನೆರಳು ಬಯಸುವ ಗಿಡಗಳು ಚಿರಕಾಲ ಬಾಳುತ್ತವೆ. ಕೋಕೋ ಬೆಳೆಗೆ ೨,೭೦೦ಜಿಣ ಕ್ಯಾಂಡಲ್ ಬೆಳಕು ಸಾಕು. ಗ್ಲಿರಿಸಿಡಿಯಾ ೨೧ ದಿನಗಳಲ್ಲಿ ಎರಡರಿಂದ ೨.೫ ಅಡಿ ಎತ್ತರ ಬೆಳೆಯುತ್ತದೆ. ಆರಂಭದ ದಿನಗಳಲ್ಲಿ ಸೊಂಟದೆತ್ತರಕ್ಕಿಂತ ಹೆಚ್ಚು ಬೆಳೆಯದಂತೆ ನೋಡಿಕೊಳ್ಳಿ. ಪ್ರತಿ ತಿಂಗಳೂ ತಪ್ಪದೆ ಜೀವಾಮೃತ ಕೊಡಿ. ಎರಡೇ ವರ್ಷದಲ್ಲಿ ಸೂಕ್ಷ್ಮ ಪರ್ಯಾವರಣದ ವ್ಯವಸ್ಥೆ ಇಲ್ಲಿ ರೂಪುಗೊಳ್ಳುತ್ತದೆ. ಆಯಾಯ ಮಣ್ಣು, ಹವಾಮಾನಗಳಿಗನುಗುಣವಾಗಿ ಸಣ್ಣಪುಟ್ಟ ಮಾರ್ಪಾಡುಗಳ ಅಗತ್ಯವಿದೆ ಅಂತ ಅನ್ನಿಸಿದರೆ ಮಾಡಿಕೊಳ್ಳಿ. ಇನ್ನುಳಿದಂತೆ ಜೀವಾಮೃತ, ಹೊದಿಕೆ, ಆರ್ದ್ರತೆ ಕುರಿತು ಗಮನಹರಿಸುವುದೊಂದು ಬಿಟ್ಟು ಬೇರೆ ಕೆಲಸವಿರುವುದಿಲ್ಲ.

ಮಳೆ ಆಶ್ರಯದಲ್ಲಿ ಜೋಳ ಬೆಳೆಯುವವರು ಎಕರೆಗೆ ನಾಲ್ಕು ಕೆ.ಜ. ಬೀಜ ಅಣಿ ಮಾಡಿಕೊಳ್ಳಿ. ಈ ಮೊದಲೇ ಸಂಗ್ರಹಿಸಿಟ್ಟುಕೊಂಡಿರುವ ಎರಡು ಚೀಲ ಕೊಟ್ಟಿಗೆ ಗೊಬ್ಬರಕ್ಕೆ ಹದಿನೈದರಿಂದ ಇಪ್ಪತ್ತು ಲೀಟರ್ ಜೀವಾಮೃತ ಬೆರೆಸಿ ನೆರಳಿನಲ್ಲಿ ಹರಡಿ. ತೇವ ಆರಿದ ಮೇಲೆ, ಬೀಜ ಬಿತ್ತುವ ಜಮೀನಿಗೆ ತೆಳುವಾಗಿ ಚೆಲ್ಲಿರಿ. ಜೋಳದ ಬೀಜದೊಂದಿಗೆ ಎರಡು ಕೆ.ಜಿ. ಹೆಸರುಕಾಳು, ಒಂದು ಕೆ.ಜಿ ಧನಿಯಾ (ಕೊತ್ತಂಬರಿ ಬೀಜ) ಸೇರಿಸಿ ಬೀಜೋಪಚಾರ ಮಾಡಿದ ತರುವಾಯ ಬಿತ್ತನೆ ಮಾಡಿ. ಹೆಸರು ಕಾಳು- ದ್ವಿದಳ ಧಾನ್ಯ. ಅದರ ಮಹಿಮೆ ತಿಳಿದೇ ಇದೆ. ಧನಿಯಾ ಯಾಕೆಂದರೆ; ಜೋಳದ ಬೇರುಗಳಿಗೆ ಕೆಲವು ರೋಗಗಳು ಬರುತ್ತವೆ. ಧನಿಯಾ ಗಿಡಗಳಲ್ಲಿರುವ ಆಲ್ಫಾಟಾಕ್ಸಿಸ್ ರಾಸಾಯನಿಕಗಳು ಜೋಳದ ಬೇರಿಗೆ ಬರುವ ರೋಗಗಳನ್ನು ತಡೆಯುತ್ತವೆ.

ಭೂಮಿಯ ಅಳತೆ

೧ ಗುಂಟೆ = ೩೩ x ೩೩ಅಡಿಗಳು (೧೦೮೯ ಚದರ ಅಡಿಗಳು)

೧ ಎಕರೆ = ೪೦ ಗುಂಟೆಗಳು (೪೩,೫೬೦ ಚದರ ಅಡಿಗಳು)

ಅಡಿಗಳ ಅಂತರದಲ್ಲಿ ಒಂದು ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ನೆಡಬಹುದಾದ ಸಸಿಗಳ ಸಂಖ್ಯೆ:

ಅಡಿಗಳ ಅಂತರ  ಸಸಿಗಳ ಸಂಖ್ಯೆ

೧x೧ ೪೩,೫೬೦
೧.೫x೧.೫ ೧೯,೩೬೦
೨x೨ ೧೦,೮೯೦
೨.೫x೨.೫ ೬,೯೭೦
೩x೩ ೪,೮೪೦
೩.೫x೩.೫ ೩,೫೫೬
೪x೪ ೨,೭೨೨
೪.೫x೪.೫ ೨,೧೫೧
೫x೫ ೧,೭೪೨
೬x೬ ೧,೨೧೩
೮x೮ ೬೮೦
೧೦x೧೦ ೪೩೭
೧೫x೧೫ ೧೯೩
೨೦x೨೦ ೧೦೮
೨೫x೨೫ ೬೯
೩೦x೩೦ ೪೮
೩೬x೩೬ ೩೫
೪೦x೪೦ ೨೭