ಮಳೆ ನಕ್ಷತ್ರಗಳು

೧. ಅಶ್ವಿನಿ
೨. ಭರಣಿ
೩. ಕೃತಿಕಾ
೪. ರೋಹಿಣಿ
೫. ಮೃಗಶಿರಾ
೬. ಆರಿದ್ರಾ
೭. ಪುನರ್ವಸು
೮. ಪುಷ್ಯ
೯. ಆಶ್ಲೇಷಾ
೧೦. ಮಖಾ
೧೧. ಹುಬ್ಬಾ
೧೨. ಉತ್ತರಾ
೧೩. ಹಸ್ತಾ
೧೪. ಚಿತ್ತಾ
೧೫. ಸ್ವಾತಿ
೧೬. ವಿಶಾಖಾ
೧೭. ಅನುರಾಧಾ
೧೮. ಜೇಷ್ಠಾ
೧೯. ಮೂಲ
೨೦. ಪೂರ್ವಾಷಾಡ
೨೧. ಉತ್ತರಾಷಾಡ
೨೨. ಶ್ರವಣ
೨೩. ಧನಿಷ್ಠಾ
೨೪. ಶತತಾರಕ
೨೫. ಪೂರ್ವಭಾದ್ರಪದ
೨೬. ಉತ್ತರಾಭಾದ್ರಪದ
೨೭. ರೇವತಿ

ಹರಳು ಬೆಳೆ ಬೆಳೆಯುವವರು ೯x೯ ಅಂತರ ಅನುಸರಿಸಿ. ಹರಳು ಬೆಳೆಯ ಕೆಳಗೆ ಅರಿಶಿಣ, ಶುಂಠಿ, ಮೆಣಸಿನಕಾಯಿ ಬೆಳೆಗಳು ಚೆನ್ನಾಗಿ ಬರುತ್ತವೆ. ತಂಬಾಕು, ರೇಷ್ಮೆ ಗಿಡಗಳ ನಡುವೆ ಅಲಸಂದೆ ಇರಲಿ. ಇನ್ನುಳಿದಂತೆ ಭತ್ತ ಹೊರತುಪಡಿಸಿ ಯಾವುದೇ ಏಕದಳ ಬೆಳೆಗಳ ನಡುವೆ ದ್ವಿದಳ ಧಾನ್ಯದ ಬೆಳೆಗಳು; ಯಾವುದೇ ದ್ವಿದಳ ಧಾನ್ಯಗಳ ಬೆಳೆಗಳ ನಡುವೆ ಏಕದಳ ಬೆಳೆಗಳಿರಲಿ. ಬೆಳೆಗಳ ನಡುವೆ ವೈವಿಧ್ಯತೆಗೆ ಹೆಚ್ಚಿನ ಗಮನಕೊಡಿ. ಹಬ್ಬುವ ಬಳ್ಳಿ ಗಿಡಗಳು, ತರಕಾರಿ, ಕಾಯಿಪಲ್ಲೆಗಳನ್ನು ಕಡೆಗಣಿಸಬೇಡಿ. ಜೀವಾಮೃತ ನೀಡುತ್ತಾ ಬನ್ನಿ. ಹೊದಿಕೆ ಮತ್ತು ಆರ್ದ್ರತೆಯೆಡೆಗೆ ಪ್ರಾಮುಖ್ಯತೆ ಕೊಡಿ.

ಹೊಲಗಳು ತೋಟಗಳಾಗಲಿ

ಮಳೆ ಆಶ್ರಿತ ಭೂಮಿಗಳಲ್ಲೂ ತೋಟಗಾರಿಕಾ ಬೆಳೆಗಳು ಯಶಸ್ವಿಯಾಗುತ್ತವೆ. ತೋಟಗಾರಿಕೆಗೆ ಹೋಗುವ ಮುಂಚೆ ನೈಸರ್ಗಿಕ ಕೃಷಿಯಲ್ಲಿ ಅಲ್ಪಾವಧಿಯ ಮಿಶ್ರ ಬೆಳೆಗಳನ್ನು ಬೆಳೆಯುತ್ತಾ ಹೋಗಿ. ಕ್ರಮೇಣ ಉಳುಮೆ ನಿಲ್ಲಿಸಿ. ಒಣ ಹಾಸು-ಸಜೀವ ಹೊದಿಕೆಗಳ ಸಮ್ಮಿಲನ ಮಣ್ಣಿನ ಆರ್ದ್ರತೆಯನ್ನು ಹೆಚ್ಚುಮಾಡುತ್ತವೆ. ಎರೆ ಹುಳುಗಳು ದಿನೇ ದಿನೆ ವೃದ್ಧಿಯಾಗುತ್ತವೆ. ಬಿದ್ದ ಮಳೆ ನೀರು ರಂಧ್ರಗಳಲ್ಲಿ ಇಳಿದು ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಸಂದರ್ಭದಲ್ಲಿ ಜಮೀನಿಗೆ ತೋಟದ ಬೆಳೆಗಳನ್ನು ಪರಿಚಯಿಸುತ್ತಾ ಬನ್ನಿ. ಸಪೋಟ, ಮಾವು, ನೇರಳೆಗಳ ನಡುವೆ ನುಗ್ಗೆ, ದಾಳಿಂಬೆ, ಬಾಳೆ, ನಿಂಬೆ, ಕಿತ್ತಳೆಗಳಿಗೂ ಜಾಗ ಮಾಡಿಕೊಡಿ. ನೀರು ಹಾಯಿಸದೆ ಬಾಳೆ ಕೂಡ ಬೆಳೆಯುವ ಪರಿ ನಿಮ್ಮನ್ನು ಅಚ್ಚರಿಗೊಳಿಸದಿರದು.

ಮಳೆ ಪ್ರಮಾಣ ಕಡಿಮೆ ಇರುವ ಪ್ರದೇಶದವರು ‘ಮರ’ ಬೆಳೆಯುವೆಡೆಗೆ ಗಮನ ಕೊಡಿ. ಅದು ಬಂಜರು ಭೂಮಿಯೇ ಇರಬಹುದು. ಆ ಪರಿಸರಕ್ಕೂ ಒಗ್ಗುವ ಮರಗಿಡಗಳಿವೆ. ಸ್ಥಳೀಯ ಪರಿಸರಕ್ಕನುಗುಣವಾಗಿ ಅವೆಲ್ಲವನ್ನೂ ಗಮನಿಸುತ್ತಾ ಹೋಗಿ. ಉದಾಹರಣೆಗೆ ಕರ್ನಾಟಕದಲ್ಲಿ ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ತುರುಕ್‌ಬೇವು ಅಥವಾ ಹೆಬ್ಬೇವು (ಮಿಲಿಯಾ ದುಬಿಯಾ) ಒಳ್ಳೆಯ ಬೆಳೆ. ಈ ಮರ ‘ಅತಿ’ ಅನ್ನುವಷ್ಟು ಶೀಘ್ರದಲ್ಲಿ ಬೆಳೆಯುತ್ತದೆ. ಗಿಡ ನೆಲೆ ನಿಲ್ಲಲು ಒಂದು ಮಳೆಗಾಲ ಸಾಕು. ಮುಂಗಾರಿನಲ್ಲಿ ತುರುಕು ಬೇವು ಗಿಡಗಳ ನಡುವೆ ರಾಗಿ, ಎಳ್ಳು ಅಥವಾ ರಾಗಿ ಅವರೆ ಅಥವಾ ನೆಲಗಡಲೆ ಬೆಳೆಯಿರಿ. ಹಿಂಗಾರಿನಲ್ಲಿ ಕಡ್ಲೆ, ಕೊತ್ತಂಬರಿ ಅಥವಾ ಹುರುಳಿ, ಹುಚ್ಚೆಳ್ಳು ಬೆಳೆಯಿರಿ. ತುರುಕುಬೇವು ವರ್ಷದಲ್ಲಿ ಆಳೆತ್ತರಕ್ಕೂ ಮಿಗಿಲಾಗಿ ಬೆಳೆದಿರುತ್ತದೆ. ಶುರುವಿಗೆ ೮x೮ ಅಂತರ ಕೊಡಿ. ಎಕರೆಗೆ ೬೮೦ ಗಿಡಗಳು ಬೇಕಾಗುತ್ತವೆ. ತುರುಕುಬೇವಿನ ಬೀಜಗಳಲ್ಲಿ ವಿಪರೀತ ಎನ್ನುವಷ್ಟು ಆಂಟಿ ಜರ್ಮಿನೇಟಿಂಗ್ ಪ್ರೋಟಿನ್‌ಗಳಿರುತ್ತವೆ. ಬೀಜಗಳು ಮೊಳೆಯಲು ಹೆಚ್ಚು ಶಾಖ ಬೇಡುತ್ತವೆ. ಬೀಜಗಳನ್ನು ಆಡುಗಳು ತಿನ್ನುತ್ತವೆ. ಆಡಿನ ಹಿಕ್ಕೆಗಳಿಂದ ಬೀಜಗಳನ್ನು ಸಂಗ್ರಹಿಸಿ. ಬೀಜಾಮೃತದಿಂದ ಉಪಚರಿಸಿ ಸಸಿ ಮಾಡಿ ನಂತರ ಗಿಡಗಳನ್ನು ನೆಡಿ. ನೆಡುವಾಗಲೂ ಗಿಡಗಳ ಬೇರಿಗೆ ಬೀಜಾಮೃತ ನೀಡಿ. ನಂತರ ಜೀವಾಮೃತ ಕೊಡುತ್ತಾ ಬನ್ನಿ, ನಾಲ್ಕು ವರ್ಷಗಳ ಸುಮಾರಿಗೆ ಮರಗಳಾಗುತ್ತವೆ. ಈಗ ಮರದಿಂದ ಮರಕ್ಕೆ ಅಂತರ ಜಾಸ್ತಿ ಮಾಡಬೇಕು. ೨೪ಘಿ೨೪ ಅಂತರವಿಟ್ಟು ಎಕರೆಗೆ ೭೫ ಮರಳನ್ನು ಉಳಿಸಿ. ನೀವೀಗ ಹೆಚ್ಚುವರಿಯಾಗಿದ್ದ ೬೦೫ ಮರಗಳನ್ನು ಕಡಿದಿರುವಿರಿ. ಒಂದು ಮರಕ್ಕೆ ಕನಿಷ್ಠ ಮಾರುಕಟ್ಟೆಯ ದರ ಒಂದು ಸಾವಿರ ರೂಪಾಯಿ. ೬೦೫ ಮರಗಳಿಗೆ ಆರು ಲಕ್ಷದ ೨೫ ಸಾವಿರ ರೂಪಾಯಿ! ಕಡಿಮೆ ಮಳೆ ಆಗುವ ಪ್ರದೇಶದ ಒಂದು ಎಕರೆ ಜಮೀನಿನಲ್ಲಿ ವಿಶೇಷ ನೀರಿನ ಸೌಕರ್ಯ ಕಲ್ಪಿಸದೆ ನಾಲ್ಕೇ ವರ್ಷದಲ್ಲಿ ಆರು ಲಕ್ಷ ರೂಪಾಯಿಗಳ ಆದಾಯವನ್ನು ಎಂದಾದರೂ ಕಂಡಿರುವಿರಾ? ಜೊತೆಗೆ ಉಪಬೆಳೆಗಳ ಆದಾಯ ಬೇರೆ!

ಎಸ್ ಸಾರ್... ಲೇಖಕ ಸ್ವಾಮಿ ಆನಂದ್ ತೋಟದಲ್ಲಿ ಪಾಳೇಕರ್

ಎರಡನೇ ವರ್ಷದಲ್ಲಿ ನೀವು ಉಳುಮೆ ನಿಲ್ಲಿಸಿರುತ್ತೀರಿ. ಹಬ್ಬುವ ಬಳ್ಳಿ ತರಕಾರಿಗಳಿಗೆ ಆಸ್ಪದ ಮಾಡಿಕೊಟ್ಟಿರುವಿರಿ. ಮರಗಳಿಂದಲೂ ಎಲೆಕಡ್ಡಿಗಳು ಉದುರುತ್ತಿರುತ್ತವೆ. ಮೂರು ವರ್ಷದೊಳಗೆ ಹ್ಯೂಮಸ್ ಅಭಿವೃದ್ಧಿಯಾಗುತ್ತದೆ. ಅಂತರ್ಜಲ ವೃದ್ಧಿಯಾಗುತ್ತದೆ. ತುರುಕುಬೇವು ಮರದ ಕೆಳಗೆ ನೆರಳು ಬೆಳಕುಗಳ ಆಟ ಗಮನಿಸಿ, ಉಳಿದ ೭೫ ಮರಗಳಿಗೆ ಪೆಪ್ಪರ್ ಬಳ್ಳಿ ಹಬ್ಬಿಸಿ. ಉಳಿದಂತೆ ನೆರಳು ಬೇಡುವ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆಯಿರಿ. ೧೩ರಿಂದ ೧೫ ವರ್ಷಗಳಲ್ಲಿ ಮರಗಳಿಗೆ ಒಳ್ಳೆಯ ‘ಬನಿ’ (ಚೇಗು/ಕೆಚ್ಚು) ಬಂದಿರುತ್ತದೆ. ಒಂದು ಮರದ ಕನಿಷ್ಠಬೆಲೆ ೨೦ ಸಾವಿರ ರೂಪಾಯಿಗಳು. ಈ ಮರದ ತೀರು, ರೀಪರ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ. ತೀರು, ರೀಪರ್‌ಗಳ ಬಣ್ಣ ನಸುಗಂಪಿನಿಂದ ಕೂಡಿ ಆಕರ್ಷಣೀಯವಾಗಿರುತ್ತವೆ. ಕುಟ್ಟೆಹುಳು ಮತ್ತು ಗೆದ್ದಲು ಹುಳುಗಳು ಈ ಮರದ ಸಾಮಗ್ರಿಗಳ ಬಳಿಗೆ ಸುಳಿಯುವುದಿಲ್ಲ. ಎಲೆ ಮತ್ತು ಕಾಯಿಗಳಿಗೆ ಕೀಟನಾಶಕ ಗುಣಗಳಿವೆ. ಬಲಿತ ಬೀಜದಿಂದ ಎಣ್ಣೆ ತೆಗೆಯಬಹುದು. ಇದರ ಎಣ್ಣೆ ಇಳುವರಿಯ ಪ್ರಮಾಣ ಶೇಕಡ ೩೫ರಷ್ಟು. ಬಯೊಡೀಸೆಲ್ ಆಗಿ ಬಳಸಬಹುದು. ಈ ಬಗೆಯ ಬೇಸಾಯಕ್ರಮದಿಂದ ಬಂಜರು ಭೂಮಿಗಳನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಬಹುದು.

ಜಟ್ರೋಪ ಬೇಡ

ಜಟ್ರೋಪ ಹೊಟ್ಟೆಗೆ ಅನ್ನವಲ್ಲ. ದನಕರುಗಳಿಗೆ ಮೇವು ಕೂಡ ಅಲ್ಲ. ಬೇಲಿಗಳಲ್ಲಿ ನಿಶ್ಚಿಂತೆಯಿಂದ ಬೆಳೆಯುತ್ತಿದ್ದ ಗಿಡವದು. ಈಗ ಅದನ್ನು ಬೆಳೆಯಾಗಿ ಬೆಳೆಸಲು ದೇಶದ ತುಂಬಾ ಕಂಪೆನಿಗಳು ಹುಟ್ಟಿಕೊಂಡಿವೆ. ಕೋಟ್ಯಾಂತರ ಎಕರೆ ಕೃಷಿಯೋಗ್ಯ ಮತ್ತು ಬಂಜರು ಭೂಮಿಗಳಲ್ಲಿ ಈ ಬೆಳೆ ಬೆಳೆಸಲು ಸಮರೋಪಾದಿಯಲ್ಲಿ ಸಿದ್ಧತೆಗಳು ನಡೆದಿವೆ. ಸಾವಿರಾರು ಎಕರೆಗಳ ಮಟ್ಟದಲ್ಲಿ ಬೆಳೆಯುವ ಯಾವುದೇ ಏಕ ಬೆಳೆಯನ್ನು ನಿಸರ್ಗ ಒಪ್ಪಿಕೊಳ್ಳುವುದಿಲ್ಲ. ಏಕ ಬೆಳೆಯಾದರೆ ಕಹಿ ಬೇವಿನ ಮರಗಳಿಗೂ ಕೀಟಗಳು ದಾಳಿ ಇಡುತ್ತವೆ. ಹಾಗಂತ ಮಿಶ್ರ ಬೆಳೆ ಪದ್ಧತಿಯಲ್ಲಿ ಇದನ್ನು ಬೆಳೆಯಬೇಕು ಅಂತ ಭಾವಿಸಬೇಡಿ. ಬಯೋಡೀಸೆಲ್‌ಗಾಗಿ ಪರ್ಯಾಯ ಮಾರ್ಗಗಳಿವೆ. ನಮ್ಮ ರೈತರು ಯಾವುದೇ ಕಂಪನಿ ಬೆಳೆಗಳ ಮೋಹಕ್ಕೆ ಬಲಿಯಾಗುವುದು ಬೇಡ. ತಾಳೆ, ದಾಳಿಂಬೆ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ಇದು ಈಗಾಗಲೇ ಅರಿವಾಗಿದೆ.

ಮಹಾರಾಷ್ಟ್ರದ ನೈಸರ್ಗಿಕ ಕೃಷಿಯ ರೈತರು ತಮ್ಮ ವಾಹನಗಳಿಗೆ ಬೇಕಾದ ಇಂಧನಗಳನ್ನು ತಾವೇ ಉತ್ಪಾದಿಸಿಕೊಳ್ಳುತ್ತಾರೆ. ತಮ್ಮ ಪಂಪುಸೆಟ್ಟುಗಳಿಗೆ ಬೇಕಾದ ವಿದ್ಯುತ್ ಕೂಡ. (ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಾಳೇಕರ್ ತಮ್ಮ ಶಿಬಿರಗಳನ್ನು ತಿಳಿಸುತ್ತಾರೆ) ಮಹಾರಾಷ್ಟ್ರ ಸರಕಾರ ಕೃಷಿಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರಲು ‘ನಿಸರ್ಗ ಕೃಷಿ ನೀತಿ’ ಕೂಡ ಮಾಡಿದೆ. ಇದು ಬೇರೆ  ರಾಜ್ಯಗಳಿಗೂ ಮಾದರಿಯಾಗಬೇಕು.

ನೈಸರ್ಗಿಕ ಕೃಷಿಗೆ ಕೃಷಿ ಹೊಂಡಗಳು ಬೇಕಾಗಿಲ್ಲ.

ಇಳಿಜಾರುಗಳಿಗೆ ಅಡ್ಡಲಾಗಿ ನೀರು ಕಟ್ಟಿ. ಮತ್ತು ಪುಟ್ಟ ಪುಟ್ಟ ಬದುಗಳನ್ನು ನಿರ್ಮಿಸಿ. ಯಾವುದೇ ಕಾರಣಕ್ಕೂ ಕೃಷಿ ಜಮೀನುಗಳಿಗೆ ಕೆರೆಗಳಿಂದ ಕೆರೆಗೋಡು ತಂದು ತುಂಬಬೇಡಿ. ಬಂಜರು ಭೂಮಿಗೂ ಈ ಮಣ್ಣು ಬೇಡ. ಯಾವುದೇ ಭೂಮಿಗೆ ಜೀವಾಮೃತ ಮಾತ್ರವೇ ಸಾಕು. ವಿಶೇಷವಾಗಿ ಕೆರೆಗೋಡು ಯಾಕೆ ಬೇಡವೆಂದರೆ: ಜೀವಾಮೃತದಲ್ಲಿ ವೃದ್ಧಿಯಾಗಿರುವ ಜೀವಾಣುಗಳು ನಮ್ಮ ಮಣ್ಣಿನ ಗುಣ ಸ್ವಭಾವಗಳನ್ನು ಅರ್ಥಮಾಡಿಕೊಂಡಿರುತ್ತವೆ. ಕೆರೆಯಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬೆರೆತ ಮಣ್ಣು ತುಂಬಿರುತ್ತದೆ. ಆ ಮಣ್ಣಿಗೆ ಅನುಗುಣವಾಗಿ ಜೀವಾಣುಗಳು ಜೀವತಳೆದಿರುತ್ತವೆ. ಒಂದುವೇಳೆ ನಮ್ಮ ನೈಸರ್ಗಿಕ ಕೃಷಿ ಜಮೀನಿಗೆ ಕೆರೆಗೋಡು ತಂದು ಸುರಿದರೆ ವೈರುಧ್ಯವಿರುವ ಎರಡೂ ಬಗೆಯ ಜೀವಾಣುಗಳಲ್ಲಿ ಪರಸ್ಪರ ಸಂಘರ್ಷ ಶುರುವಾಗುತ್ತದೆ. ಈ ಸಂಘರ್ಷದಲ್ಲಿ ಜೀವಾಣುಗಳ ಕಾರ್ಯಕ್ಷಮತೆ ಕುಸಿಯುತ್ತದೆ. ಕೋಳಿ ಗೊಬ್ಬರವಂತೂ ವರ್ಜ್ಯ, ಜೆರ್ಸಿ, ಹೋಲ್‌ಸ್ಟಿನ್‌ಗಳ ಸಗಣಿ-ಗಂಜಳ ಎರಡೂ ಬೇಡ. ನೈಸರ್ಗಿಕ ಕೃಷಿಯ ಹೊಲ, ಗದ್ದೆ, ತೋಟಗಳಲ್ಲಿ ಆಡು, ಕುರಿಗಳನ್ನು ಸಾಕಬೇಡಿ. ಸಾಕುವಿದಿದ್ದರೆ ಪ್ರತ್ಯೇಕವಾಗಿ ಸಾಕಿ. ಆಡು, ಕುರಿಗಳ ಹಾವಳಿಯಿಂದಾಗಿ ನೈಸರ್ಗಿಕವಾಗಿ ಬೆಳೆದ ಗಿಡಗಳಿಗೆ, ಬೆಳೆಗಳಿಗೆ ಹಾನಿ. ಅವುಗಳ ಕಾಲ್ತುಳಿತದಿಂದಾಗಿ ಮಣ್ಣಿನ ಸವಕಳಿ ಹೆಚ್ಚಾಗುತ್ತದೆ.

ನೈಸರ್ಗಿಕ ಕೀಟನಾಶಕಗಳು

ಬೆಳೆಯಲ್ಲಿ ವೈವಿಧ್ಯತೆ ಹೆಚ್ಚಾದಷ್ಟು ಹಾನಿಕಾರಕ ಕೀಟಗಳ ಹಾವಳಿ, ಉಪಟಳ ಅಷ್ಟಾಗಿ ಇರುವುದಿಲ್ಲ. ರೈತ ಮತ್ತು ನಿಸರ್ಗದ ನಡುವೆ ಅನ್ಯೋನ್ಯ ಸಂಬಂಧವೇರ್ಪಟ್ಟಾಗ ರೈತನ ಭಾವನೆ ಮತ್ತು ನಿರ್ದೇಶನಗಳು ನಿಸರ್ಗಕ್ಕೆ ಅರಿವಾಗುತ್ತವೆ. ಹಾಗೆಯೇ ನಿಸರ್ಗದ ಭಾವನೆ ಮತ್ತು ನಿರ್ದೇಶನಗಳು ರೈತನಿಗೂ ಅರಿವಾಗುತ್ತವೆ. ದುಷ್ಟ ಕೀಟಗಳಿರುವಂತೆಯೇ, ಅವನ್ನು ಹತ್ತಿಕ್ಕಿ ಬೆಳೆಯನ್ನು ಸಂರಕ್ಷಿಸುವ ಮಿತ್ರ ಕೀಟಗಳೂ ಇರುತ್ತವೆ. ನಾವು ದುಷ್ಟ ಕೀಟಗಳನ್ನು ನಾಶಮಾಡಲು ಹೋಗಿ ಮಿತ್ರ ಕೀಟಗಳನ್ನು ನಾಶ ಮಾಡಿದ್ದೇವೆ.

ನೈಸರ್ಗಿಕ ಕೃಷಿಯಲ್ಲಿ ನಿಸರ್ಗ ಸಮತೋಲನ ಕಾಯ್ದುಕೊಳ್ಳಲು ಯತ್ನಿಸುತ್ತದೆ. ನಾವೀಗ ನಿಸರ್ಗದ ಮಟ್ಟಿಗೆ ಕೊಂಚ ಪೂರಕವೆನಿಸುವ ಕೆಲಸ ಮಾಡೋಣ. ಮಿತ್ರ ಕೀಟಗಳನ್ನು ಸಂರಕ್ಷಿಸಿ ಹಾನಿಕಾರಕ ಕೀಟಗಳನ್ನು ನಿಯಂತ್ರಿಸಿ, ನಿವಾರಿಸೋಣ.

ಶಿಲೀಂಧ್ರ ನಾಶಕ

ಯಾವುದೇ ಬೆಳೆಯಲ್ಲಿ ಫಂಗಸ್ (ಶಿಲೀಂಧ್ರ)ಗಳು ಹೆಚ್ಚಾದಾಗ ಒಂದು ಎಕರೆಗೆ ಐದು ಲೀಟರ್ ಹುಳಿ ಮಜ್ಜಿಗೆಯನ್ನು ೫೦ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿರಿ. (ಮಜ್ಜಿಗೆಯನ್ನು ಸದಾ ಕಾಲ ಸಂಗ್ರಹಿಸಿಡಿ) ಹುಳಿ ಮಜ್ಜಿಗೆ ಜಗತ್ತಿನ ಸರ್ವಶ್ರೇಷ್ಠ ಶಿಲೀಂಧ್ರ ನಾಶಕ. ಒಂದು ಲೀಟರ್ ದೇಸಿ ಆಕಳ ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಿ. ಆನಂತರ ಮೊಸರು ಕಡೆದು ಐದು ಲೀಟರ್ ಮಜ್ಜಿಗೆ ಮಾಡಿಕೊಳ್ಳಿ. ಐದು ದಿವಸ ಈ ಮಜ್ಜಿಗೆಯನ್ನು ಹಾಗೆಯೇ ಇಡಿ. ಅನಂತರ ಐವತ್ತು ಲೀಟರ್ ನೀರಿನಲ್ಲಿ ಬೆರೆಸಿ- ಸಿಂಪಡಿಸಿ ಫಂಗಿಗಳು ಹೇಳಹೆಸರಿಲ್ಲದಂತೆ ನಾಶವಾಗುತ್ತವೆ. ಮಜ್ಜಿಗೆಯನ್ನು ೩೦ರಿಂದ ೪೦ ದಿವಸಗಳ ಕಾಲ ಸಂಗ್ರಹಿಸಿದರೆ ಅದರ ಶಿಲೀಂಧ್ರ ನಾಶಕ ಗುಣ ತೀಕ್ಷ್ಮವಾಗಿರುತ್ತದೆ.

ತಾಮ್ರದ ಪಾತ್ರೆಯಲ್ಲಿಟ್ಟು ಕಿಲುಬು ಭರಿಸಿದರೆ ಇನ್ನೂ ತೀಕ್ಷ್ಮ. ಹೀಗಾಗಿ ಬೆಳೆಗೆ ಶಿಲೀಂಧ್ರ ಆವರಿಸಿಕೊಳ್ಳುವ ಮುನ್ನವೆ; ಮಜ್ಜಿಗೆ ಸಿದ್ಧ ಮಾಡಿಟ್ಟುಕೊಂಡಿದ್ದರೆ ಒಳ್ಳೆಯದು.

ಶಿಲೀಂಧ್ರ ನಾಶಕ

ಐದು ಲೀಟರ್ ದೇಸಿ ಆಕಳ ಹಾಲು. ಕುದಿಯುವಂತೆ ಕಾಯಿಸಿ. ಹಾಲಿನ ಕೆನೆ ತೆಗೆಯಿರಿ. ಎರಡು ಲೀಟರ್ ನೀರಿನಲ್ಲಿ ೨೦೦ ಗ್ರಾಂ ಕರಿಮೆಣಸಿನ ಪುಡಿ (ಪೆಪ್ಪರ್ ಪೌಡರ್) ಹಾಕಿ. ಚೆನ್ನಾಗಿ ಕುದಿಸಿರಿ. ನೀರಿನ ಪ್ರಮಾಣ ಒಂದು ಲೀಟರ್‌ಗೆ ಬರುವವರೆಗೆ ಕುದಿಸಿ. ತಣ್ಣಗಾದ ಮೇಲೆ ಹಾಲಿನೊಂದಿಗೆ ಬೆರೆಸಿ ೨೦೦ ಲೀಟರ್ ನೀರಿನೊಂದಿಗೆ ಸಿಂಪಡಿಸಿ. ಇದು ದಿಢೀರ್ ಶಿಲೀಂದ್ರ ನಾಶಕ. ಒಂದು ಎಕರೆಗೆ ಈ ಪ್ರಮಾಣ ಸಾಕು.

ನೀಮ್ ಬಾಣ

ಹತ್ತು ಕೆ.ಜಿ  ಬೇವಿನ ಬೀಜ ಪುಡಿ ಮಾಡಿಕೊಳ್ಳಿ. ತೆಳುವಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ, ೨೦೦ ಲೀಟರ್ ನೀರಿನಲ್ಲಿ ಇಳಿಬಿಟ್ಟು ೨೪ ಗಂಟೆ ನೆನೆಯಲು ಬಿಡಿ. ೨೪ ಗಂಟೆಯ ತರುವಾಯ ನಾಲ್ಕಾರು ಬಾರಿ ಹಿಂಡಿ. ನಂತರ ಸಿಂಪಡಿಸಿ. ಬೇವಿನ ಬೀಜಗಳಿರದಿದ್ದ ಪಕ್ಷದಲ್ಲಿ ೨೦ ಕೆ.ಜಿ. ಬೇವಿನ ಸೊಪ್ಪನ್ನು ಚೆನ್ನಾಗಿ ಕುಟ್ಟಿ ಅರೆಯಿರಿ. ೨೪ ಗಂಟೆ ೨೦೦ ಲೀಟರ್ ನೀರಿನಲ್ಲಿ ಬೆರೆಸಿ. ನಂತರ ಬಟ್ಟೆಯಲ್ಲಿ ಸೋಸಿ ಸಿಂಪಡಿಸಿ ಒಂದು ಎಕರೆಗೆ ಈ ಪ್ರಮಾಣ ಸಾಕು. ಇದು ಕೀಟನಾಶಕ.

ನೀಮ್ ಬಾಣ

ಐದು ಕೆ.ಜಿ. ಸಗಣಿ, ಹತ್ತು ಲೀಟರ್ ಗಂಜಳ ಹತ್ತು ಕೆ.ಜಿ ಬೇವಿನ ಎಲೆ- ಇಷ್ಟನ್ನು ೨೦೦ ಲೀಟರ್ ನೀರಿನಲ್ಲಿ ಬೆರೆಸಿ. ೪೮ ಗಂಟೆಗಳ ಕಾಲ ನೆನೆಸಿ. ಪ್ರತಿದಿನ ಮೂರು ಬಾರಿ ತಿರುಗಿಸಿ. ನಂತರ ಬಟ್ಟೆಯಲ್ಲಿ ಸೋಸಿ ಸಿಂಪಡಿಸಿರಿ. ಎಪಿಡ್ಸ್, ಜಾಸಿಡ್ಸ್, ಮಿಲಿಬಗ್ಸ್, ವೈಟ್‌ಫ್ಲೈಗಳಿಗಿದು ಮಾರಕ.

ಅಗ್ನಿ ಅಸ್ತ್ರ

೧. ಹತ್ತು ಕೆ.ಜಿ. ಬೇವಿನ ಎಲೆ
೨. ಮೂರು  ಕೆ.ಜಿ. ಹೊಗೆಸೊಪ್ಪು ಪುಡಿ
೩. ಮೂರು ಕೆ.ಜಿ ಬೆಳ್ಳುಳ್ಳಿ
೪. ನಾಲ್ಕು ಕೆ.ಜಿ ಹಸಿಮೆಣಸಿನಕಾಯಿ (ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಗಳನ್ನು ಜಜ್ಜಿ ಕೊಳ್ಳಬೇಕು)

ಇಷ್ಟನ್ನೂ ೨೦ ಲೀಟರ್ ಗಂಜಳದಲ್ಲಿ ಹತ್ತು ದಿನಗಳವರೆಗೆ ನೆನೆಹಾಕಿ. ದಿನವೂ ಮೂರು ಬಾರಿ ತಿರುಗಿಸಿ. ಹತ್ತು ದಿನಗಳ ನಂತರ ಸೋಸಿ. ಮೂರು ತಿಂಗಳವರೆಗೆ ಸಂಗ್ರಹಿಸಿಡಬಹುದು. ನೀಮ್ ಬಾಣ-೨ರಿಂದ ನಿವಾರಣೆಯಾಗದ ಕೀಟಗಳ ವಿರುದ್ಧ ಅಗ್ನಿ ಅಸ್ತ್ರವನ್ನು ಪ್ರಯೋಗಿಸಿ. ಒಂದು ಎಕರೆಗೆ ಮೂರು ಲೀಟರ್ ಅಗ್ನಿ ಅಸ್ತ್ರ ಸಾಕು. ನೂರು ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಿ.

ಬ್ರಹ್ಮಾಸ್ತ್ರ

ತೆಂಗಿನ ನುಸಿರೋಗಕ್ಕೂ ಇದು ಪರಿಣಾಮಕಾರಿ. ನಿಯಂತ್ರಣಕ್ಕೆ ಬಾರದ ಕೀಟಗಳ ನಾಶಕ್ಕೆ ಬ್ರಹ್ಮಾಸ್ತ್ರ ಬಳಸಿ.

೧. ೧೦ ಲೀಟರ್ ಗಂಜಳ
೨. ೩ ಕೆ.ಜಿ ಸಗಣಿ
೩. ೫ ಕೆ.ಜಿ ಬೇವಿನಸೊಪ್ಪು
೪. ೩ ಕೆ.ಜಿ ಹೊಂಗೆಸೊಪ್ಪು
೫. ೨ ಕೆ.ಜಿ ಹಾಗಲಸೊಪ್ಪು
೬. ೨ ಕೆ.ಜಿ ಲಕ್ಕಿ ಸೊಪ್ಪು
೭. ೨ ಕೆ.ಜಿ ಔಡಲಸೊಪ್ಪು (ಹರಳು ಸೊಪ್ಪು)
೮. ೨ ಕೆ.ಜಿ ದಾಳಿಂಬೆ ಸೊಪ್ಪು
೯. ೨ ಕೆ.ಜಿ ಸೀತಾಫಲ ಸೊಪ್ಪು
೧೦. ೨ ಕೆ.ಜಿ ಸೀಬೆ ಸೊಪ್ಪು
೧೧. ೨ ಕೆ.ಜಿ ಪಪ್ಪಾಯ ಎಲೆ
೧೨. ೨ ಕೆ.ಜಿ ನುಗ್ಗೆಸೊಪ್ಪು
೧೩. ೨ ಕೆ.ಜಿ ಬಿಲ್ವಪತ್ರೆ
೧೪. ೨ ಕೆ.ಜಿ ದತ್ತೂರಿ ಎಲೆ
೧೫. ೨ ಕೆ.ಜಿ ಚಗಚೆ ಸೊಪ್ಪು
೧೬. ೪ ಕೆ.ಜಿ ಹಸಿಮೆಣಸಿನಕಾಯಿ
೧೭. ೨ ಕೆ.ಜಿ ಬೆಳ್ಳುಳ್ಳಿ
೧೮. ೩ ಕೆ.ಜಿ ರೊಜ್ವಾಳ್ ಸೊಪ್ಪು (ಲಂಟಾನ)

ಸೊಪ್ಪು ಅಥವಾ ಎಲೆಗಳ ಪೈಕಿ ದತ್ತೂರಿ, ಬೇವು, ಹೊಂಗೆ, ಲಕ್ಕಿ, ಎಕ್ಕ – ಇವು ಕಡ್ಡಾಯ. ಇನ್ನುಳಿದಂತೆ ಯಾವುದಾದರೂ ಏಳು ಬಗೆಯ ಸೊಪ್ಪು ಕಡ್ಡಾಯ (ಎಲ್ಲ ಎಲೆ, ಸೊಪ್ಪುಗಳು ಸಿಗದಿದ್ದಾ). ಈ ಎಲ್ಲವನ್ನೂ ೨೦೦ ಲೀಟರ್ ನೀರಿನಲ್ಲಿ ಕೊಳೆಯಲು ಬಿಡಿ. ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಗಳನ್ನು ಅರೆದುಹಾಕಿ. ಪ್ರತಿದಿನ ಮೂರು ಬಾರಿ (ಬೆಳಿಗ್ಗೆ, ಮಧ್ಯಾಹ್ನ, ಸಂಜೆ) ತಿರುಗಿಸಿ. ೩೦ ದಿನಗಳ ಬಳಿಕ ತೆಳುವಾದ ಬಟ್ಟೆಯಲ್ಲಿ ಸೋಸಿ. ಒಂದು ಎಕರೆಗೆ ೩ರಿಂದ ೫ ಲೀಟರ್ ಬ್ರಹ್ಮಾಸ್ತ್ರವನ್ನು ನೂರು ಲೀಟರ್ ನೀರು, ಮೂರು ಲೀಟರ್ ಗಂಜಳ, ಅರ್ಧ ಲೀಟರ್ ಸಾಬೂನು ನೀರಿನೊಂದಿಗೆ ಬೆರೆಸಿ ಸಿಂಪಡಿಸಿ. ಬ್ರಾಹ್ಮಸ್ತ್ರವನ್ನು ಮೂರ ತಿಂಗಳವರೆಗೆ ಸಂಗ್ರಹಿಸಿಡಬಹುದು ಅಗತ್ಯಬಿದ್ದಾಗ ಸಿಂಪಡಿಸಬಹುದು.

ಬೀಜಗಳ ಆಯ್ಕೆ

ಬಿತ್ತನೆಗಾಗಿ ಸ್ಥಳೀಯ ಬೀಜಗಳನ್ನೆ ಆಯ್ಕೆ ಮಾಡಿಕೊಳ್ಳಿ, ಮುಂದಿನ ಬಿತ್ತನೆ ಮಾಡಿಕೊಳ್ಳಲಾಗದ ಯಾವ ಹೈಬ್ರೀಡ್ ಬೀಜಗಳನ್ನು ಕೊಂಡು ತರಬೇಡಿ. ಕೆಲವು ಬೀಜಗಳು ಸಿಗದೇ ಹೋದಾಗ ಹೈಬ್ರೀಡ್ ಬೀಜ ತನ್ನಿ. ಆದರೆ ಅವು ಮುಂದಿನ ಬಿತ್ತನೆಗೆ ಬರುವಂತಿರಬೇಕು. ಕ್ರಮೇಣ ಪ್ರತಿ ಬಿತ್ತನೆ ಬೀಜದ ವಿಷಯದಲ್ಲಿ ನೀವೇ ಸ್ವಾವಲಂಬಿಗಳಾಗಿ. ಬೆಳೆ ಬಂದಾಗ ಬೀಜದ ಯೋಗ್ಯತೆ, ಸಾಮರ್ಥ್ಯ ಅರಿವಾಗುತ್ತದೆ. ಮುಂದಿನ ಬಿತ್ತನೆಗಳನ್ನು ಉತ್ಕೃಷ್ಟವಾಗಿ ಬೆಳೆದ ಫಸಲುಗಳಿಂದ ಸಂಗ್ರಹಿಸುತ್ತಾ ಹೋಗಿ. ಸತತವಾಗಿ ಮೂರು ವರ್ಷ ಹೀಗೆಯೇ ಮಾಡಿ. ಅನಂತರ ಬೆಳೆಯುವ ಎಲ್ಲ ಫಸಲು ಬೀಜಗಳಿಗೆ ಯೋಗ್ಯವಾಗಿರುತ್ತವೆ. ಬೀಜ ಸಂಗ್ರಹಣೆಗೆ ರೂಢಿಯಲ್ಲಿರುವ ಸಾಂಪ್ರದಾಯಿಕ ತಂತ್ರಜ್ಞಾನ ಅನುಸರಿಸಿ.

ಮಾರುಕಟ್ಟೆ

ವಿಷಮುಕ್ತ ಮಣ್ಣು, ವಿಷಮುಕ್ತ ಆಹಾರ, ವಿಷಮುಕ್ತ ಪರಿಸರ, ವಿಷಮುಕ್ತ ಸಮಾಜ ಮತ್ತು ವಿಷಮುಕ್ತ ಜಗತ್ತು ನಮ್ಮ ಕನಸು. ಅದು ಈ ನೈಸರ್ಗಿಕ ಕೃಷಿಯಿಂದ ಸಾಕಾರಗೊಳ್ಳಲಿದೆ. ಎಲ್ಲರಿಗೂ ವಿಷಮುಕ್ತ ಆಹಾರ, ವಿಷಮುಕ್ತ ಪರಿಸರ ಬೇಕು. ಮಾರುಕಟ್ಟೆಯಲ್ಲಿ ವಿಷಮುಕ್ತ ಆಹಾರಕ್ಕಿರುವ ಪ್ರಾಮುಖ್ಯತೆಯನ್ನು ಬಳಸಿಕೊಂಡು ನಾವು ಯಾರನ್ನೂ ಶೋಷಿಸಕೂಡದು. ಕೊಳ್ಳುವ ಸಾಮರ್ಥ್ಯವಿದ್ದವರಿಗಾಗಿ ಮಾತ್ರ ನಮ್ಮ ಉತ್ಪನ್ನ ಮೀಸಲು ಅಂತಾಗಬಾರದು. ಸದ್ಯಕ್ಕೆ ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆ ಇದೆ. ಭಾರೀ ಬೇಡಿಕಯೂ ಇದೆ. ಈ ಧಾರಣೆ ಮತ್ತು ಬೇಡಿಕೆ- ದುಬಾರಿ ಖರ್ಚಿನ ರಾಸಾಯನಿಕ ಕೃಷಿಗಳಲ್ಲಿ ಮುಳುಗಿ ಆತ್ಮಹತ್ಯಾ ದಾರಿ ಹಿಡಿದಿರುವ ರೈತರ ಗಮನಕ್ಕೆ ಬರಬೇಕೇ ಹೊತರು- ಬೆಲೆ ಹೆಚ್ಚು ಮಾಡಿಕೊಂಡು ನಾವೇ ಲಾಭ ಗಳಿಸುವುದರತ್ತ ಅಲ್ಲ. ಇಷ್ಟಾಗಿಯೂ ರೈತ ಘನತೆಯಿಂದ, ನೆಮ್ಮದಿಯಿಂದ ಬದುಕುವ ಒಂದು ಬೆಲೆ ಬೇಕು. ಅದು ಗ್ರಾಹಕನ ಆರೋಗ್ಯ, ನೆಮ್ಮದಿ, ಘನತೆಯನ್ನು ಕೂಡ ಕಾಪಾಡುವಂತಿರಬೇಕು.

ಸೌರಶಕ್ತಿ ಬೇಲಿ

ಕೃಷಿ ಭೂಮಿಗೆ ಬೇಲಿ ವ್ಯವಸ್ಥೆ ಬೇಕು. ಜೈವಿಕ ಬೇಲಿಗೆ ಆದ್ಯತೆ ಇರಲಿ. ಮುಳ್ಳು ತಂತಿ ಬೇಲಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ನಾಲ್ಕೈದು ವರ್ಷಕ್ಕೆ ತುಕ್ಕು ಹಿಡಿಯುತ್ತವೆ. ಅರಣ್ಯದ ಅಂಚುಗಳಲ್ಲಿ ಮುಳ್ಳು ತಂತಿಬೇಲಿಗಳು ಪರಿಣಾಮಕಾರಿ ಅಲ್ಲ. ವನ್ಯಜೀವಿಗಳು, ಜಾನುವಾರುಗಳ ಹಾವಳಿ ಹೆಚ್ಚಿರುವೆಡೆ ಸೌರಶಕ್ತಿ ಬೇಲಿ ನಿರ್ಮಿಸಿ. ಈ ಬಗೆಯಲ್ಲಿ ಬೇಲಿ ನಿರ್ಮಿಸಲು ಅನೇಕ ಕಂಪನಿಗಳಿವೆ. ಆದರೆ ಅವೆಲ್ಲವೂ ರೈತರನ್ನು ಸುಲಿಗೆ ಮಾಡುತ್ತಿವೆ. ಕರ್ನಾಟಕದ ಮಟ್ಟಿಗೆ ಅತಿ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಚಾಲಿತ ಬೇಲಿ ನಿರ್ಮಿಸುವ ಸಂಸ್ಥೆಯೊಂದು ಇದೆ. ಇದು ಸ್ವತಃ ಬೇಲಿ ನಿರ್ಮಿಸುವವರಿಗೆ ತರಬೇತಿ ಕೂಡ ನೀಡುತ್ತದೆ. ತಂತಿ, ಪಿ.ಪಿ ಇನ್ಸುಲೇಟರ್, ಸ್ಕ್ವೇರ್ ಇನ್ಸುಲೇಟರ್, ಬ್ಯಾಟರಿ, ಎನರ್ಜೈಜರ್, ವೈರ್ ಟೈಟ್ನರ್ ಸೇರಿದಂತೆ ಬೇಲಿಯ ಇತರ ಬಿಡಿಭಾಗಗಳನ್ನು ಮಾರುತ್ತದೆ. ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು ಸಂಪರ್ಕಿಸಿ.

ಚಿನ್ನ ಹುಡುಕುತ್ತಿಲ್ಲ ಸಾರ್... ಭೂಮಿಯಲ್ಲಿ ಹ್ಯೂಮಸ್ ನಿರ್ಮಾಣದ ನೋಟ

ಬೆಳದಿಹೆವು ನಾವು...

ಪಾಳೇಕರ್ ಬೆರಗು

 

ಜಗತ್ತಿನ ಕೃಷಿಲೋಕದ ದಿಕ್ಕನ್ನೆ ಬದಲಿಸಲು ಹೊರಟುನಿಂತಿರುವ ಸುಭಾಷ್ ಪಾಳೇಕರ್ ಮೊನ್ನೆ ಕರ್ನಾಟಕದಲ್ಲೂ ಆ ಬಗೆಯ ಹವಾ ಸೃಷ್ಟಿಸಿ ಹಿಂದಿರುಗಿದ್ದಾರೆ. ಮತ್ತೆ ಜೂನ್ ತಿಂಗಳ ಮುಂಗಾರಿನೊಂದಿಗೆ ಇಲ್ಲಿನ ಕರಾವಳಿ, ಮಲೆನಾಡು, ಬೆಂಗಾಡುಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಮೊನ್ನಿನ ಶಿವಮೊಗ್ಗ, ಮೈಸೂರು ಬೆಂಗಳೂರಿನ ಅವರ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸಿದ್ದ ರೈತರಿನ್ನೂ ಪಾಳೇಕರರ ಗುಂಗಿನಿಂದ ಹೊರಬಂದಿಲ್ಲ. ಬಹುಶಃ ಅವರ‍್ಯಾರೂ ಇನ್ನೆಂದೆಂದಿಗೂ ಆ ಗುಂಗಿನಿಂದ ಹೊರಬರುವ ಪ್ರಯತ್ನ ಮಾಡುವುದಿಲ್ಲ. ಆ ಮಟ್ಟಿಗೆ ಅವರೆಲ್ಲರಿಗೂ ಪಾಳೇಕರ್ ಕುರಿತು ಭರವಸೆ ಮೂಡಿದೆ.

ಸುಭಾಷ್ ಪಾಳೇಕರ್ ಸರಳರಲ್ಲಿ ಸರಳ. ಹಾಗೆಯೇ ಅವರ ನೈಸರ್ಗಿಕ ಕೃಷಿಯೂ ಕೂಡ. ಭೂಮಿಗೆ, ವ್ಯವಸಾಯಕ್ಕೆ ಯಾವುದೆಲ್ಲ ಬೇಡ ಅನ್ನುವುದರ ಕುರಿತು ಅವರಲ್ಲಿ ಅಪಾರವಾದ ತಿಳುವಳಿಕೆ ಇದೆ. ಹಾಗೆಯೇ ಭೂಮಿಗೆ ಏನು ಬೇಕು ಅನ್ನುವುದರ ಕುರಿತಾಗಿಯೂ ಕೂಡ. ಇದುವೇ ಪಾಳೇಕರರ ಕೃಷಿಯ ಬೆರಗು ಮತ್ತು ಬೆಡಗು! ಸಗಣಿ ಬಳಸಿ ಬೇಸಾಯ ಮಾಡುವ ಸಂಸ್ಕೃತಿ ಶುರುವಾಗಿ ೩.೫ ಸಾವಿರ ವರ್ಷಗಳಾಗಿವೆ. ಆದರೆ ಬೇಸಾಯ ಮಾಡಲು ಇಂತಿಷ್ಟೆ ಸಗಣಿ, ಇಂತಿಷ್ಟೆ ಗಂಜಳ ಸಾಕು, ಬೇರೇನೂ ಬೇಕಾಗಿಲ್ಲ ಅಂತ ಇಷ್ಟು ಖಚಿತವಾಗಿ ಈವರೆಗೆ ಯಾರೂ ಹೇಳಿರಲಿಲ್ಲ. ಯಾವ ಕೃಷಿ ವಿಜ್ಞಾನಿಯೂ, ಕೃಷಿ ವಿಶ್ವವಿದ್ಯಾಲಯಗಳೂ ಕೂಡ ಹೇಳಿರಲಿಲ್ಲ. ಕೃಷಿ ವಿಶ್ವವಿದ್ಯಾಲಯ ಗಳು ಹೇಳಿದ್ದನ್ನೆಲ್ಲ ಕೇಳಿದಕ್ಕೆ ಕೃಷಿಭೂಮಿ ಮತ್ತು ಬದುಕುಗಳೆಲ್ಲವೂ ವಿನಾಶದಂಚಿಗೆ ಬಂದು ನಿಂತಿರುವುದು ಎಲ್ಲರಿಗೂ ಗೊತ್ತು.

ಶಿವಮೊಗ್ಗದ ಶಿಬಿರ ಮುಗಿಸಿ, ರಾತ್ರಿಯೆಲ್ಲ ಪ್ರಯಾಣ ಬೆಳೆಸಿ ಮೈಸೂರಿಗೆ ಬಂದ ಪಾಳೇಕರರನ್ನು ರೈಲ್ವೆ ಸ್ಟೇಷನ್‌ನಲ್ಲೆ ಹಸಿರು ಶಾಲು ಹೊದಿಸಿ ಸಂಭ್ರಮದಿಂದ ಬರಮಾಡಿಕೊಂಡವರು ರೈತಸಂಘದವರು. ಬೀಳ್ಕೊಡುವಾಗಲು ಅಷ್ಟೆ- ಘನತೆಯ ಬೀಳ್ಕೊಡುಗೆ. ಮೈಸೂರು ಪೇಟ ತೊಡಿಸಿ ಶ್ರೀಗಂಧದ ಹಾರ ಹಾಕಿ, ಶಾಲು ಹೊದಿಸಿ ‘ಅಪೂರ್ವ ಕೃಷಿಕ್ರಾಂತಿಯ ಹರಿಕಾರ’ ಎಂಬ ಬಿರುದು ನೀಡಿ ಹೃದಯಸ್ಪರ್ಶಿ ಬೀಳ್ಕೊಡುಗೆ. ಪಾಳೇಕರರ ಸತತ ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ, ೫೪ರ ಅವರ ದೇಹ- ಮನಸ್ಸುಗಳಲ್ಲಿ ದಣಿವಿನ ಛಾಯೆ ಕಾಣಿಸಿಕೊಳ್ಳಲಿಲ್ಲ, ಪುಟಿಯುವ ಉತ್ಸಾಹ, ಕಮಾಂಡಿಂಗ್ ಆದ ವಾಗ್‌ಝರಿ, ಜಗತ್ತಿನ ಜ್ಞಾನಸಾಗರವೇ ಪಾಳೇಕರ್ ರೂಪದಲ್ಲಿ ಆ ಇಡೀ ವೇದಿಕೆಯನ್ನು ಆವರಿಸಿಕೊಂಡು ಭಾವ. ಈ ಎಲ್ಲಕ್ಕಿಂತ ಮಿಗಿಲಾಗಿ ‘ಇನ್ನೇನು ದಾರಿಯೇ ಇಲ್ಲ, ಬದುಕುವ ಅವಕಾಶಗಳೇ ಇಲ್ಲ, ಎಲ್ಲವೂ ಮುಗಿದೇ ಹೋಯಿತು’ ಎಂದು ಹತಾಶೆಯ ಕೊನೆ ಅಂಚು ತಲುಪಿದ್ದ ವ್ಯಕ್ತಿಯಲ್ಲೂ ‘ಇನ್ನು ಗೆದ್ದೆ’ ಎಂಬ ಭಾವ ರೂಪಿಸುವುದಿದೆಯೆಲ್ಲ – ಅದು ದೊಡ್ಡದು. ಅಂಥದೊಂದು ವಿದ್ಯಮಾನ ಪಾಳೇಕರ್ ಇದ್ದೆಡೆಯಲ್ಲೆಲ್ಲ, ಹೋದೆಡೆಯಲ್ಲೆಲ್ಲ ಜರುಗುತ್ತಿದೆ. ಅವರ ಮೂರನೇ ದಿನದ ಶಿಬಿರದೊತ್ತಿಗೆ ಅವರು ಘಾಟಿ ಹಿಂದಿ ಕನ್ನಡದಷ್ಟೇ ಆಪ್ತವಾಗಿ ಬಿಡುವುದು ಸೋಜಿಗ.

‘ಪಾಳೇಕರ್ ಕೇವಲ ರೈತರಲ್ಲ. ಕೃಷಿ ವಿಜ್ಞಾನಿಯೂ ಅಲ್ಲ. ಆತನೊಬ್ಬ ಅಪ್ಪಟ ದಾರ್ಶನಿಕ. ಅದೊಂದು ಮೇರೆಯೇ ಇಲ್ಲದ ಮೇರುಕೃತಿ. ಆತನಿಗೆ ಒಳ್ಳೆಯವರಿರಲಿ, ಕೆಟ್ಟವರಿರಲಿ ಎಲ್ಲರ ಕುರಿತೂ ಕಾಳಜಿ ಇದೆ. ಗಾಂಧಿ, ಬುದ್ಧ, ಅಂಬೇಡ್ಕರ್, ಲೋಹಿಯಾ, ವಿನೋಬಾ… ಈ ಯಾರೂ ಆದರ್ಶ ಮಾದರಿಯ ಕೊನೆ ಬಿಂದುಗಳಲ್ಲ. ಅವರು ತೋರಿದ ಬೆಳಕಲ್ಲಿ ಬೆಳಕಿರುವವರೆಗೆ ನಡೆಯೋಣ. ಆಮೇಲೆ ನಾವೇ ಬೆಳಕಾಗೋಣ. ಪ್ರತಿಯೊಬ್ಬರೂ ಇಲ್ಲಿ ಸ್ವಯಂ ಪ್ರಕಾಶಿಸಬೇಕು. ಆಗಮಾತ್ರ ಒಟ್ಟು ಸಮಾಜದ ನಡಿಗೆ ಸುಗಮ’ ಅನ್ನುವುದು ಪಾಳೇಕರರ ತಿಳುವಳಿಕೆ. ಹೀಗೆಂದವರು ಅವರನ್ನು ಆಳವಾಗಿ ಬಲ್ಲ ಕಿಶೋರ್ ಮುಖರ್ಜಿ. ಅಂಥ ವ್ಯಕ್ತಿತ್ವದ ನಿಜ ದರ್ಶನ ಆದವರ ಅಭಿಪ್ರಾಯಗಳೂ ಇಲ್ಲಿವೆ. ಜೊತೆಗೆ ಪಾಳೇಕರ್ ಮೈಸೂರಿನ ನೈಸರ್ಗಿಕ ಕೃಷಿ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಆಡಿದ ಮಾತುಗಳನ್ನೂ ಇಲ್ಲಿ ದಾಖಲಿಸಲಾಗಿದೆ.

ಕೃಷಿಯಿಂದಲೇ ಕ್ರಾಂತಿ

ಮಿತ್ರರೆ, ನೀವೀಗ ತುದಿಗಾಲಲ್ಲಿ ನಿಂತಿರುವಿರಿ. ನಾಳೆ ಮುಂಜಾವಿನಲ್ಲಿ ಉದಯವಾಗಲಿರುವ ಎಂದಿನ ಸೂರ್ಯನನ್ನು ಹೊಸ ಕಣ್ಣುಗಳಿಂದ ನೋಡಲೆಂದು. ಈ ನಡುವೆ ನಾನು ಕೆಲವು ಮಾತುಗಳನ್ನು ನಿಮಗಾಗಿ ಹೇಳಲು ಇಚ್ಛಿಸುವೆ. ಈ ವ್ಯವಸ್ಥೆಯನ್ನು ನಾವು ಆಮೂಲಾಗ್ರವಾಗಿ ಬದಲಾಯಿಸಲೇಬೇಕು. ಅದಕ್ಕಾಗಿ ಇಲ್ಲಿ ಬಹುದೊಡ್ಡ ಕ್ರಾಂತಿಯೇ ಜರುಗಬೇಕು. ಆ ಕ್ರಾಂತಿ ಆಗಬೇಕಾಗಿರುವುದು ದೆಹಲಿಯಲ್ಲಿ, ರಾಜಧಾನಿಗಳಲ್ಲಿ ಅಲ್ಲ! ಬದಲಿಗೆ ನಮ್ಮ ಆಂತರ್ಯದಲ್ಲಿ, ನಮ್ಮ ಹೃದಯದಾಳದಲ್ಲಿ ಜರುಗುವ ಕ್ರಾಂತಿಯೆ ನಿಜವಾದ ಕ್ರಾಂತಿ.

ಐವತ್ತು ವರ್ಷಗಳ ಹಿಂದೆ ಹಸಿರು ಕ್ರಾಂತಿಯ ಬೀಜಾಂಕುರವಾದದ್ದು ದೆಹಲಿಯಲ್ಲಿ, ಅದು ಪಂಜಾಬ್, ಹರ್ಯಾಣ ಸೇರಿದಂತೆ ಇಡೀ ದೇಶವನ್ನು ವ್ಯಾಪಿಸಿತು. ಕ್ರಾಂತಿಗಾಗಿ ಆತ್ಮ ಸಮರ್ಪಣೆ, ಬಲಿದಾನಗಳೆಲ್ಲ ಆಗಬೇಕು. ಹಸಿರು ಕ್ರಾಂತಿಯಿಂದ ಇಡೀ ದೇಶ ಇವತ್ತು ವಿನಾಶದ ಹೊಸ್ತಿಲಲ್ಲಿ ನಿಂತಿದೆ. ರೈತರು ಸರಣಿಯೋಪಾದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಡಾ.ಸ್ವಾಮಿನಾಥನ್ ಮತ್ತು ಜವಹರಲಾಲ್ ನೆಹರೂರವರ ಅಪೇಕ್ಷಿತ ಹಸಿರು ಕ್ರಾಂತಿ ಈ ಬಗೆಯಲ್ಲಿ ಬಲಿದಾನಗಳನ್ನು ಸ್ವೀಕರಿಸುತ್ತಾ ಸಾಗಿದೆ.

ಹಸಿರು ಕ್ರಾಂತಿಯ ಆರಂಭದಲ್ಲಿ ಪಂಜಾಬ್, ಹರ್ಯಾಣಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಎಕರೆಗೆ ೫೦ರಿಂದ ೬೦ ಕ್ವಿಂಟಾಲ್ ಭತ್ತ, ಗೋಧಿಗಳನ್ನು ಬೆಳೆದುರ. ಇದು ಜಾಗತಿಕ ಮಟ್ಟದ ದಾಖಲೆ. ಆದರಿಂದು ಅದೇ ಪ್ರದೇಶದಲ್ಲಿ ೫೦ರಿಂದ ೬೦ ಕ್ವಿಂಟಾಲ್ ರಾಸಾಯನಿಕಗಳನ್ನು ಚೆಲ್ಲಿದರೂ ೧೫ರಿಂದ ೨೦ ಕ್ವಿಂಟಾಲ್ ಧಾನ್ಯ ಬೆಳೆಯುವುದಿಲ್ಲ. ಅಲ್ಲಿನ ರೈತ ಎಂಡೋಸಲ್ಫಾನ್ ಕುಡಿದು ಸಾಯುತ್ತಿದ್ದಾನೆ. ಇದು ಹಸಿರು ಕ್ರಾಂತಿಯ ಪರಿಣಾಮ.

ನಾವೀಗ ಈ ಕ್ರಾಂತಿಯನ್ನು ಧೂಳೀಪಟ ಮಾಡಬೇಕಾಗಿದೆ. ದೆಹಲಿಯಲ್ಲಿ ರಾಜಧಾನಿಗಳಲ್ಲಿ ಕ್ರಾಂತಿ ಜರುಗುವುದಿಲ್ಲ. ಕ್ರಾಂತಿ ಬುಲೆಟ್ ಮತ್ತು ಬ್ಯಾಲೆಟ್‌ಗಳಿಂದಲೂ ಜರುಗುವುದಿಲ್ಲ. ಬ್ಯಾಲೆಟ್‌ನಿಂದ ರಾಜಕೀಯ ಅಧಿಕಾರ ಬದಲಾಗಬಹುದೇ ಹೊರತು ಆಡಳಿತ ಯಂತ್ರ ಅಲ್ಲ. ಯಾಕಂದ್ರೆ ಅಂತಹ ಆಡಳಿತ ವ್ಯವಸ್ಥೆಗೆ ಸ್ಥಿತಿಸ್ಥಾಪಕ ಗುಣವಿರುತ್ತದೆ. ಕ್ರಾಂತಿಯ ಯಾವುದೇ ನೆಲೆಗಟ್ಟನ್ನು ಅದಕ್ಕೆ ಅರ್ಥೈಸಲು ಆಗುವುದಿಲ್ಲ. ಕ್ರಾಂತಿಯಾಗೋದು ಜಾಗೃತಗೊಂಡ ನಮ್ಮ ರೈತರ, ಕಾರ್ಮಿಕರ, ಸಾಮಾನ್ಯ ಜನರ ಅಭೀಪ್ಸೆಯಿಂದಾಗಿಯೆ ಹೊರತು ಬುಲೆಟ್, ಬ್ಯಾಲೆಟ್‌ಗಳಿಂದಲ್ಲ. ಆ ಆಭೀಪ್ಸೆ ಅನ್ನುವಂಥದ್ದು ಹೊರಗಿನ ಯಾವುದನ್ನೊ ಬದಲಾಯಿಸಲು, ಮಾರ್ಪಡಿಸಲು ಹೊರಡು ವಂಥದ್ದಲ್ಲ. ಬದಲಾಗಿ ನಮ್ಮನ್ನೇ, ಅಂದರೆ ನಮ್ಮ ಆಂತರ್ಯವನ್ನೆ ಬದಲಾಯಿಸಿಕೊಳ್ಳುವಂಥದ್ದು. ಚಕ್ರವರ್ತಿ ಅಶೋಕ ಇದನ್ನು ಕಂಡುಕೊಂಡ. ಬುದ್ಧ, ಗಾಂಧೀಜಿಯವರಿಂದಲೂ ಕ್ರಾಂತಿಯಾಯಿತು. ಅವರ ಬಳಿ ಅಸ್ತ್ರಗಳಿದ್ದವೆ? ಅಧಿಕಾರಗಳಿದ್ದವೆ?