ನಾವು ಯಾರ ವಿರುದ್ಧವೂ ಅಲ್ಲ

ಕೈಯಲ್ಲಿ ತ್ರಿಶೂಲ ಹಿಡಿದು ಆರ್ಭಟಿಸುವುದರಿಂದಾಗಲಿ, ಕೇಸರಿ ಬಾವುಟ ಹಿಡಿದು ಕೂಗಾಡುವುದರಿಂದಾಗಲಿ ಕ್ರಾಂತಿ ಆಗುವುದಿಲ್ಲ. ಇಂಥ ಹುಡುಗರುನ್ನು ಕಂಡು ನನಗೆ ದಿಗಿಲಾಗುತ್ತದೆ. ನಮ್ಮ ಯುವಕರಲ್ಲಿ ಅದೆಂಥ ಶಕ್ತಿ ಅಡಿಗಿದೆ? ಅದೂ ಜಗತ್ತಿನ ಬದಲಾವಣೆಗೆ ಪೂರಕವಾಗಬಲ್ಲ ಶಕ್ತಿ! ಅಂತಹ ಶಕ್ತಿವಂತ, ತಾಖತ್ತುಳ್ಳ ಯುವಕರ ಕೈಯಲ್ಲಿ ತ್ರಿಶೂಲಗಳನ್ನು ನೀಡುವುದು ಎಷ್ಟು ಸರಿ? ಅವರ ಕೈಗಳಿಗೆ ಹಾರೆ, ಗುದ್ದಲಿಗಳನ್ನು ಕೊಡಿ. ಅವರ ಮುಷ್ಟಿಯಲ್ಲೊಂದಿಷ್ಟು ಬೀಜಗಳನ್ನು ತುಂಬಿ. ಅವರು ನಿರ್ಮಿತಿ ಮತ್ತು ಸೃಷ್ಟಿಕ್ರಿಯೆಗಳಲ್ಲಿ ತಲ್ಲೀನರಾಗಲಿ. ನಿರ್ಮಿತಿ ಮತ್ತು ಸೃಷ್ಟಿಕ್ರಿಯೆಗಳಲ್ಲಿ ತೊಡಗುವ ಹುಡುಗರಲ್ಲಿ ವಿಕಾರಗಳಿರುವುದಿಲ್ಲ.

ಮೊನ್ನೆ ನನ್ನ ಆಪ್ತರೊಬ್ಬರು ಕೇಳಿದರು ‘ಪಾಳೇಕರ್ ಜೀ ನಿಮ್ಮ ಈ ಆಂದೋಲನ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧವೆ?’ ಅಂತ. ನಾನು ಹೇಳಿದೆ. ನಾವು ಯಾರ ವಿರುದ್ಧವೂ ಅಲ್ಲ. ನಾವು ಯಾರಿಗೂ ವೈರಿಗಳಿಲ್ಲ ಮತ್ತು ನಮಗೆ ಯಾರೂ ವೈರಿಗಳಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ನಮ್ಮ ಮೇಲೆ ಯಾವುದೇ ಕಾನೂನುಗಳನ್ನು ಮಾಡಿಲ್ಲ. ಅವರ ಉತ್ಪನ್ನಗಳನ್ನು ಕೊಳ್ಳುವ- ಕೊಳ್ಳದಿರುವ ಎರಡೂ ಬಗೆಯ ಸ್ವಾತಂತ್ರ್ಯ ನಮಗಿದ್ದೇ ಇದೆ. ಇಂತಿರುವಾಗ ನಾವು ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಯಾಕೆ ಹೋರಾಟ ಮಾಡಬೇಕು ಹೇಳಿ? ಕೊಳ್ಳುವುದು ರೈತ ಸಂಸ್ಕೃತಿ ಅಲ್ಲ. ಸೃಷ್ಟಿಸುವುದು ರೈತ ಸಂಸ್ಕೃತಿ. ನಿಮ್ಮ ಮುಂದೆ ಆಯ್ಕೆಗಳೇ ಇಲ್ಲವಾದಾಗ ನೀವು ಯಾರಿಗೇ ಬೇಕಾದರೂ ಶರಣಾಗುತ್ತೀರಿ, ಗುಲಾಮರಾಗುತ್ತೀರಿ, ಅವಲಂಬನೆ ಬೆಳೆಸಿಕೊಳ್ಳುತ್ತೀರಿ. ನೀವು ದಯಮಾಡಿ ನಿಮ್ಮ ಆಯ್ಕೆಯನ್ನು ಈ ಮಣ್ಣಿನಲ್ಲಿ, ಈ ನಿಸರ್ಗದಲ್ಲಿ ಕಾಣಿರಿ. ನಿಮ್ಮನ್ನು ಆಹ್ಲಾದದಿಂದ ನರ್ತಿಸುವಂತೆ ಮಾಡುವ ಶಕ್ತಿ ನಿಜಕ್ಕೂ ನಿಸರ್ಗದಲ್ಲಿದೆ. ಆಯ್ಕೆಗಳೇ ಇಲ್ಲವಾದಾಗ, ನಿರ್ಮಿತಿಯ ಮನಸ್ಸೇ ನಿಮ್ಮಲಿಲ್ಲದಾದಾಗ ಎಷ್ಟೇ ಹೋರಾಡಿದರೂ ಅಷ್ಟೆಲ್ಲ ಪೂರ್ತಿ ವ್ಯರ್ಥ. ನಾವು ನಮ್ಮ ಈ ಆಂದೋಲನದಲ್ಲಿ ರಾಸಾಯನಿಕ ಗೊಬ್ಬರ, ಕಳೆನಾಶಕ, ಕ್ರಿಮಿನಾಶಕ ಉತ್ಪಾದಿಸುವವನು, ಮಾರುವವನು, ಕೊಳ್ಳುವವನು… ಹೀಗೆ ಈ ಎಲ್ಲರನ್ನೂ ಸೇರಿಸಿಕೊಳ್ಳುತ್ತೇವೆ. ಯಾಕೆಂದರೆ ರಾಸಾಯನಿಕಗಳನ್ನು ಉತ್ಪಾದಿಸುವ ಕಾರ್ಖಾನೆ ಮಾಲೀಕನಿಗೂ ಕೂಡ ವಿಷಮುಕ್ತ ಅನ್ನ, ವಿಷಮುಕ್ತಗಾಳಿ, ವಿಷಮುಕ್ತ ಪರಿಸರ ಬೇಕಾಗಿದೆ. ನಮ್ಮ ನಿರ್ಮಿತಿ, ನಮ್ಮ ಉತ್ಪನ್ನ ಶ್ರೇಷ್ಠದರ್ಜೆಗೆ ಏರಿದಂತೆಲ್ಲ ಸಹಜವಾಗಿ ಅವನು ಇವತ್ತಲ್ಲ, ನಾಳೆ ನಮ್ಮ ಆಂದೋಲನದೊಂದಿಗೆ ಕೈ ಜೋಡಿಸಿ ನಿಲ್ಲಲೇಬೇಕಾಗುತ್ತದೆ. ಅವತ್ತಿಗೆ ಆತ ರಾಸಾಯನಿಕ ವಿಷವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗೆ ಮಾಲೀಕನಾಗಿರುವುದಿಲ್ಲ, ಬದಲಿಗೆ ತಾಜಾ ಹಣ್ಣು, ತರಕಾರಿಗಳನ್ನು ಬೆಳೆಯುವ ಸ್ವಾವಲಂಬಿ ರೈತನಾಗಿರುತ್ತಾನೆ.

ಮಿತ್ರರೆ, ಇಡೀ ವಿಶ್ವದ ವ್ಯಾಪಾರ ವಹಿವಾಟುಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಅಮೆರಿಕಾ ನಿಯಂತ್ರಿಸುತ್ತಿದೆ. ಜಾಗತೀಕರಣಗೊಳಿಸುವಂಥ ಆಡಳಿತ ವ್ಯವಸ್ಥೆ ಹೊಂದಿರುವ ಅಮೆರಿಕದಂಥ ದೇಶಗಳೊಂದಿಗೆ ನಮ್ಮಂಥ ಅನೇಕ ದೇಶಗಳು ಹೊಂದಿಕೊಂಡು ಹೋಗಲೇಬೇಕಾದಂಥ ಸ್ಥಿತಿ ನಿರ್ಮಾಣವಾಗಿದೆ. ಇಡೀ ಜಗತ್ತಿನ ಸೇನೆ, ಸಂಪತ್ತು ಇದು ಇಂದು ಅಮೆರಿಕಾ ಬಳಿ ಇದೆ. ಅಮೆರಿಕಾವನ್ನು ಪ್ರತಿಭಟಿಸಿದ ಇರಾಕ್ ಪರಿಸ್ಥಿತಿ ಏನಾಯಿತು? ಅಮೆರಿಕಾದ ಅಂತಹ ಸೇನೆ, ಸಂಪತ್ತಿನ ಮದವನ್ನು ಕಂಗೆಡಿಸುವ ದಾರಿ ಸರಳವಾಗಿದೆ. ಅವರ ಬಳಿ ಕೋಟ್ಯಾನುಕೋಟಿ ರೂ. ಬೆಲೆಬಾಳುವ ಕ್ಷಿಪಣಿಗಳಿರಬಹುದು. ನಮ್ಮ ಬಳಿ ಅವರಲ್ಲಿಲ್ಲದ ಅದ್ಭುತ ಶಕ್ತಿಯ ಕ್ಷಿಪಣಿ ಇದೆ. ಅದು ಸ್ವಾವಲಂಬನೆ. ದೇಶಿ ಆಕಳ ಸಗಣಿ ಮತ್ತು ಗಂಜಳ ಇಷ್ಟುಮಾತ್ರದಿಂದಲೇ ನಾವು ಜಾಗತಿಕ ಮಟ್ಟದ ಕ್ರಾಂತಿ ಮಾಡಬಹುದು. ಈ ಕ್ರಾಂತಿ ರೂಪುರೇಷೆ-ಅಹಿಂಸಾತ್ಮಕ. ಈ ಕ್ರಾಂತಿಗಿರುವ ಜಾಗತಿಕ ಹೆಸರು ‘ಶೂನ್ಯ ಬಂಡವಾಳಸ ನೈಸರ್ಗಿಕ ಕೃಷಿ ಕ್ರಾಂತಿ’. ಎಲ್ಲ ಬಗೆಯ ವಯೋಮಾನದವರು, ಎಲ್ಲ ಬಗೆಯ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರೂ ಇದರಲ್ಲಿ ಪಾಲ್ಗೊಳ್ಳಬಹುದು. ಪೇಟೆಯಿಂದ ಏನನ್ನೂ ಖರೀದಿಸದಿರುವುದು ಈ ಕ್ರಾಂತಿಯ ಮೊಟ್ಟಮೊದಲ ನಿಯಮ. ಬೀಜ, ಗೊಬ್ಬರ, ಕ್ರಿಮಿನಾಶಕ ಈ ಯಾವುದನ್ನೂ ನೀವು ಪೇಠೆಯಿಂದ ಖರೀದಿಸಕೂಡದು. ಹಾಗೆಯೇ ವಿದ್ಯುತ್ ಕೂಡ. ಮಹಾರಾಷ್ಟ್ರದ ನೈಸರ್ಗಿಕ ಕೃಷಿಕರು ತಮಗೆ ಬೇಕಾದ ವಿದ್ಯುತ್ ಅನ್ನು ತಾವೇ ಉತ್ಪತ್ತಿ ಮಾಡಿಕೊಳ್ಳುತ್ತಾರೆ. ನಮ್ಮ ಜೀವನಾವಶ್ಯಕ ವಸ್ತುಗಳನ್ನೆಲ್ಲ ನಾವೇ ನಿರ್ಮಿಸೋಣ. ಪೂರ್ಣ ಮಟ್ಟದಲ್ಲಿ ಸ್ವಾವಲಂಬಿಗಳಾಗೋಣ.

ಮುಂಬೈನಲ್ಲಿ ನಾನು ಭಾಗವಹಿಸಿದ್ದ ಸಮ್ಮೇಳನವೊಂದರಲ್ಲಿ ದೆಹಲಿಯ ವಿಖ್ಯಾತ ಸಮಾಜವಾದಿ ಗೆಳೆಯರೊಬ್ಬರು ಭಾಗವಹಿಸಿದ್ದರು. ಅವರು ಜಾಗತೀಕರಣದ ವಿರುದ್ಧ, ಶೋಷಣೆಯ ವಿರುದ್ಧ ದೊಡ್ಡ ದೊಡ್ಡ ಪದ ಬಳಸಿ ಭಾಷಣ ಮಾಡಿದರು. ಸಭೆಯ ನಂತರ ಇಬ್ಬರಿಗೂ ಒಂದೆಡೆಯೇ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅವು ಮಾತಾಡಿದ್ದೆಲ್ಲ ಜಾಗತೀಕರಣದ ವಿರುದ್ಧ ಆದರೆ ಸೇದುತ್ತಿದ್ದದ್ದು ವಿದೇಶಿ ಸಿಗರೇಟು, ತೊಡುವ ಬಟ್ಟೆ ವಿದೇಶಿ, ಕಾಲಿಗೆ ಮೆಟ್ಟುವ ಚಪ್ಪಲಿ ವಿದೇಶಿ. ಕಡೆಗೆ ಶೇವ್ ಮಾಡಿಕೊಳ್ಳುವ ಬ್ಲೇಡ್ ಕೂಡ ವಿದೇಶಿಯದೆ. ಇಂಥವರು ಎಷ್ಟೇ ವಿರೋಧಿಸಿದರೂ, ಪ್ರತಿಭಟಿಸಿದರೂ ಅಮೆರಿಕಾದ ರೋಮ ಕೊಂಕಿಸಲಾಗುವುದಿಲ್ಲ. ನಿರ್ಮಿತಿಯ ಸೊಬಗೇ ತಿಳಿಯದ ಇಂಥವರು ಕಡೆಗೆ ವಿಷಾದದಲ್ಲಿ, ಹತಾಶೆಯಲ್ಲಿ, ದುಗುಡಗಳಲ್ಲಿ ಕಳೆದುಹೋಗುತ್ತಾರೆ.

ಆದ್ದರಿಂದ ಮಿತ್ರರೆ, ಬದಲಾವಣೆ ಎಂಬುದು ಮಾತುಗಳಲ್ಲಿ, ನುಡಿಗಟ್ಟುಗಳಲ್ಲಿ ಆದರೆ ಸಾಲದು. ಅದು ಆಮೂಲಾಗ್ರವಾಗಿ ಆಗಬೇಕು. ಆ ಬದಲಾವಣೆಯ ಪರಿಮಳ ಜಗದ್‌ವ್ಯಾಪಿ ವಿಸ್ತರಿಸಬೇಕು. ನೈಸರ್ಗಿಕ ಕೃಷಿಯಲ್ಲಿ ಆಗುವ ಕ್ರಾಂತಿಗೆ ಒಂದು ವಿಶಿಷ್ಟ ಬಗೆಯ ನಾದ, ಲಯ ವಿನ್ಯಾಸಗಳೆಲ್ಲ ಪ್ರಾಪ್ತವಾಗುತ್ತವೆ. ಆನಾದ, ಲಯ ವಿನ್ಯಾಸಗಳು ನಿಮ್ಮ ನಿಮ್ಮ ಬಾಳುವೆಗಳಿಗೂ ಹರಿದುಬರಲಿ. ನಿರ್ಮಿತಿಯ ಪರಿಶ್ರಮ ನಿಮ್ಮದೇ ಆಗಿರುವುದರಿಂದ ‘ಅದು‘ ಸೂಸುವ ಗಂಧ ಹೆಚ್ಚು ಆಪ್ತವಾಗಿರುತ್ತದೆ. ನಿರ್ಮಿತಿಯ ಧನ್ಯತೆ ನಿಮ್ಮ ಜೀವನಕ್ಕೆ ಅಪಾರ  ಬೆಲೆಯನ್ನು, ಗೌರವವನ್ನು, ಘನತೆಯನ್ನು ತಂದುಕೊಡುತ್ತದೆ.

ಬರುವ ಮಾನ್ಸೂನ್ ದಿನಗಳಿಗಾಗಿ ಬಹಳ ಹೊತ್ತು ಕಾಯಬೇಕಾಗಿಲ್ಲ. ನಾನೂ ಈ ಮೂರು ದಿನ ಹೇಳಿದ್ದೆಲ್ಲ ನಿಮ್ಮ ನೆನಪಲ್ಲಿರಲಿ, ಈಗಲೇ ಬೀಜಗಳನ್ನು ಅಣಿಮಾಡಿಕೊಳ್ಳಿರಿ. ನಿಮ್ಮ ನಡುವೆ ತ್ರಿಶೂಲ ಹಿಡಿದು ಓಡಾಡುವ ತಾಖತ್ತುಳ್ಳ ಹುಡುಗರನ್ನೆಲ್ಲ ಕರೆಯಿರಿ. ಅವರಿಗೂ ಅವರ ಬೊಗಸೆ ತುಂಬಾ ಬೀಜಗಳನ್ನು ತುಂಬಿ ನಿಸರ್ಗ ಕೃಷಿ ಹೇಳಿಕೊಡಿ. ಸೃಷ್ಟಿಯ ಅನಂತಾನಂತ ಸಾಧ್ಯತೆಗಳ ಬೆರಗು ಅವರೆದೆಗೂ ಇಳಿಯಲಿ. ನಿಸರ್ಗದ ಆಹ್ಲಾದ, ಸೊಬಗು, ಮಾರ್ದವತೆ, ಬಣ್ಣ, ಬಿನ್ನಾಣ, ಕಲರವಾದಿಗಳೆಲ್ಲ ಅವರನ್ನೂ ಸುತ್ತುವರಿಯಲಿ.

ಇಷ್ಟು ಹೇಳಿ ಸದ್ದಿಲ್ಲದ ಕ್ರಾಂತಿಗೆ ನಾಂದಿ ಹಾಡಿ ಹೋಗಿದ್ದರೆ ಪಾಳೇಕರ್! 

ಇದು ಸರ್ಕಾರದ ನೀತಿ ಆಗಬೇಕು

ನಮಗೆ ಹೊಸ ಬೆಳಕು ಕಂಡಂತಾಗಿದೆ. ಇದು ಜೀರೋ ಬಜೆಟ್ ಕೃಷಿ. ಬಂಡವಾಳವೇ ಇಲ್ಲ. ಇದು ಸಾವಯವ ಕೃಷಿ ಅಲ್ಲ. ಸಾವಯವ ಎರಡನೆ ನಮೂನಿ ಲೂಟಿ.

ಆದರೆ ಇವತ್ತು ಬಂಡವಾಳವಿಲ್ಲದ ಸುಭಾಷ್ ಪಾಳೇಕರರ ಸ್ವಾಭಾವಿಕ ಕೃಷಿ ಇದೆಯಲ್ಲ ಅದು ಅದ್ಭುತ. ಇದು ಸರಕಾರದ ನೀತಿ ಆಗಬೇಕು. ಇವತ್ತು ಮಹಾರಾಷ್ಟ್ರದಲ್ಲಿ ಇದು ಸರಕಾರದ ನೀತಿ ಆಗಿದೆ. ಪಾಳೇಕರರ ಕೃಷಿ ಶಿಬಿರಗಳನ್ನು ಮಹಾರಾಷ್ಟ್ರದಲ್ಲಿ ಅಲ್ಲಿನ ಸರಕಾರವೇ ವ್ಯವಸ್ಥೆ ಮಾಡುತ್ತಿದೆ. ಆದರೆ ನಮ್ಮ ಸರಕಾರ ಇದನ್ನು ಮಾಡುತ್ತೆ ಅಂತ ನಾವು ಕಾಯಬೇಕಾಗಿಲ್ಲ. ಯಾಕೆಂದರೆ ಅದು ಸಾವಯವ ಕೃಷಿನೀತಿ ಮಾಡಿ ಮತ್ತಷ್ಟು ರೈತರನ್ನು ಲೂಟಿ ಮಾಡಲು ಹುನ್ನಾರ ನಡೆಸುತ್ತಿದೆ. ಹಣ ಕಬಳಿಸುವ ದಂಧೆಯನ್ನಾಗಿ ರೂಪಾಂತರಿಸುತ್ತದೆ. ಈ ಹಿನ್ನೆಲೆಯಲ್ಲಿ ಇದು ನಮ್ಮ ಕೆಲಸವೇ ಆಗಬೇಕು.

ನಿಮ್ಮಲ್ಲಿ ಹತ್ತು ಎಕ್ರೆ ಇದ್ರೆ, ಕಡೇಪಕ್ಷ ಒಂದು ಎಕರೆಯಲ್ಲಾದರೂ ಪ್ರಯೋಗ ಮಾಡಿ ನೋಡಿ. ಆದ್ರೆ ಇದನ್ನ ಅಲಕ್ಷ್ಯ ಮಾಡಿದ್ರೆ ನಾವು ನಾವೇ ವಿಷ ತಗೊಂಡಂಗಾಗುತ್ತೆ, ಜೊತೆಗೆ ಬಳಕೆದಾರರಿಗೂ ವಿಷವನ್ನೆ ಉಣ್ಣಿಸಿದಂತಾಗುತ್ತದೆ. ನಾವು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಇದನ್ನೆಲ್ಲ ತಪ್ಪಿಸಲು ಇದು ಸಾಧನ.

– ಬಸವರಾಜ ತಂಬಾಕೆ

ನೈಸರ್ಗಿಕ ಕೃಷಿ ಬೆಳಕಾಗಲಿ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗಾಂಧಿ ಬಯಸಿದ ಒಂದು ಜೀವನಮಾರ್ಗ ಪಲ್ಲಟವಾಗಿ ನೆಹರೂ ಬಯಸಿದ ಜೀವನಮಾರ್ಗದೆಡೆಗೆ ನಾವು ಚಲಿಸಿದ್ದರಿಂದ ಇಡೀ ಭಾರತದ ಭೂಮಿ ಹಸಿರು ಕ್ರಾಂತಿಯ ನೆಪದಲ್ಲಿ ಕ್ರೌರ್ಯಕ್ಕೆ ಒಳಗಾದ ಪ್ರದೇಶವಾಗಿ ಪರಿವರ್ತನೆಯಾಗಿದೆ. ನಾವೀಗ ಈ ಭೂಮಿಯನ್ನು ತನ್ನ ಎಂದಿನ ಸ್ಥಿತಿಗೆ ಮರಳೀ ಕೊಂಡೊಯ್ಯಬೇಕಾಗಿದೆ… ಆದ್ದರಿಂದ I am very happy to associate with Subash Palekar’s experiment.

ನಾನು ರೈತನಲ್ಲ, ನನಗೆ ಜಮೀನಿಲ್ಲ. ಆದರೆ ನಾನು ಈ ಭೂಮಿಯನ್ನು ಪ್ರೀತಿಸುತ್ತೇನೆ. ಈ ಭೂಮಿಯ ಮೇಲಿರುವ ಎಲ್ಲ ಜೀವ ಜಗತ್ತಿನ ಚಲನೆಯನ್ನೂ ಪ್ರೀತಿಸುತ್ತೇನೆ. ಆ ಚಲನೆ ಅರ್ಥಪೂರ್ಣವಾಗಿ ಸಾಗೋದಾದರೆ ನಾವೆಲ್ಲರೂ ಅವರ ಜೊತೆಗೆ ಅವರ ಹಿಂಬಾಲಕರಾಗಿ ಸಾಗಲು ತಯಾರಿದ್ದೇವೆ. ಯಾಕೆಂದರೆ ಎಲ್ಲರಿಗೂ ಅನ್ನ ಬೇಕು. ಎಲ್ಲರಿಗೂ ಶುದ್ಧಗಾಳಿ- ಬೆಳಕು ಬೇಕು. ಜೀವ ಅತ್ಯಂತ ಪವಿತ್ರವಾದದ್ದು, ಆ ಪಾವಿತ್ರ್ಯವನ್ನು ಉಳಿಸಿಕೊಳ್ಳೋದಕ್ಕೆ ಈ ಶಿಬಿರ ಮಾರ್ಗದರ್ಶಕವಾಗಲಿ. ಅದರಲ್ಲಿ ನೀವೂ ಸಕ್ರಿಯರಾಗಿ ಭಾಗವಹಿಸಿ. ಆ ಅನುಭವಜನ್ಯವಾದಂತಹ ಪ್ರಯೋಗ ಶೀಲತೆಯನ್ನು ನಮ್ಮ ಮನಸ್ಸುಗಳಲ್ಲಿ, ನಮ್ಮ ಹೊಲಗದ್ದೆಗಳಲ್ಲಿ, ನಮ್ಮ ಊರುಗಳಲ್ಲಿ ನಾವು ಬೆಳೆಸೊಣ. ಅದಕ್ಕಾಗಿ ನಾವು ಸಂಕಲ್ಪ ತೊಡೋಣ.

ಪ್ರೊ.ಕೆ.ರಾಮದಾಸ್

ಆಶಾತಂತು

ನಮ್ಮ ಗ್ರಾಮಗಳು ಮತ್ತು ರೈತರು ಅವಸಾನದ ಅಂಚಿಗೆ ತಲುಪಿರುವ ಇಂಥ ಸಂದರ್ಭದಲ್ಲಿ, ನೈಸರ್ಗಿಕ ಕೃಷಿ ಮೂಲಕ ರೈತರ, ಗ್ರಾಮಗಳ ಆಶಾತಂತುವಾಗಿ ಸುಭಾಷ್ ಪಾಳೇಕರ್ ಕಾಣಿಸಿಕೊಂಡಿದ್ದಾರೆ. ಇದು ನೆಮ್ಮದಿಯ ಸಂಗತಿ. ಜೊತೆಗೆ ಇದರಲ್ಲಿ ನಿಜವಾದ ವಿಮೋಚನೆ, ಬಿಡುಗಡೆ ಅಡಗಿದೆ. ನಮ್ಮವರು ಬೇಸಾಯ ಮಾಡುತ್ತಿದ್ದ ದಿನಗಳಲ್ಲಿ ಸಾಲ ತಂದು ಗೊಬ್ಬರ ದಂಗಡಿಗೆ ಸುರಿಯುತ್ತಿದ್ದರು. ನಾನು ಸ್ವತಃ ವ್ಯವಸಾಯ ಶುರುಮಾಡಿದ ಮೇಲೆ ಈ ರಗಳೆಗಳಿಂದೆಲ್ಲ ಹೊರ ಬಂದೆ. ಖಾಲಿ ಕೊಟ್ಟಿಗೆ ಗೊಬ್ಬರ, ಸೊಪ್ಪು-ಸದೆ ಹಾಕಿ ಒಳ್ಳೆ ಬೆಳೆ ತೆಗೆದೆ. ಸುಭಾಷ್ ಪಾಳೇಕರರ ಬಂಡವಾಳ ವಿಲ್ಲದ ನೈಸರ್ಗಿಕ ಕೃಷಿ ಅನುಸರಿಸಿದರೆ ನಾವೆಲ್ಲ ಸ್ವಾವಲಂಬಿಗಳಾಗುವುದು ಸಾಧ್ಯ. ಇಲ್ಲಿ ಮುಖ್ಯವಾಗಿ ನಮ್ಮ ಜೀವನಶೈಲಿಯೂ ಬದಲಾಗಬೇಕು. ಆಗ ಗಾಂಧೀಜಿ ಹೇಳಿದ ರೈತರು-ಹಳ್ಳಿಗಳು ಉದ್ಧಾರ ಆದ್ರೆ ಮಾತ್ರ ದೇಶ ಉದ್ಧಾರ ಎಂಬುದು ನಿಜವಾಗುತ್ತದೆ.

ಅನುಸೂಯಮ್ಮ
ಅರಳಾಳುಸಂದ್ರ, ಕರ್ನಾಟಕ ರಾಜ್ಯ ರೈತಸಂಘ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ

ಸ್ವಾಮಿ ಆನಂದ್
ನಂ.೧೮, ದಿವ್ಯ ಚೇತನ, ೪ನೇ ಮೈನ್, ಜಯಲಕ್ಷ್ಮಿಪುರ
ಮೈಸೂರು-೫೭೦೦೧೨.
ದೂ: ೯೪೪೮೪೭೨೭೪೮, ೦೮೨೧-೨೪೧೨೩೧೩.