ಈ ಕೃತಿಗೆ ಹಿನ್ನೆಲೆಯಾಗಿ ಹೇಳುವುದು ಬಹಳಷ್ಟಿದೆ. ಅದನ್ನೆಲ್ಲ ಮುಂದಿನ ಪರಿಷ್ಕೃತ ಆವೃತ್ತಿಯಲ್ಲಿ ಹೇಳಬಯಸುವೆ. ಸುಭಾಷ್ ಪಾಳೇಕರರಿಗಿರುವ ಕೃಷಿಗೆ ಸಂಬಂಧಿಸಿದ ಜ್ಞಾನದಲ್ಲಿ ನಾನೀಗ ದಾಖಲಿಸಿರುವುದು ತಿಲಮಾತ್ರ. ಮರಾಠಿಯಲ್ಲಿ ಅವರ ಇಪ್ಪತ್ತು ಪುಸ್ತಕಗಳು ಪ್ರಕಟಗೊಂಡಿವೆ.

ನಾನು ಮೂಲತಃ ಕೃಷಿ ಜೀವನದಿಂದ ಬಂದವನು. ಅದರ ಎಲ್ಲ ಆಗು-ಹೋಗುಗಳ ನಡುವೆ ಬೆಳೆದವನು. ಮಸನೊಬು ಫುಕುವೋಕರ ‘ಸಹಜಕೃಷಿ’ಯ ಧ್ಯಾನದಲ್ಲಿ ಇಡೀ ತೋಟವನ್ನು ನಿಸರ್ಗಕ್ಕೆ ಸಮರ್ಪಿಸಿ ಸುಮ್ಮನೆ ನಿಂತಿದ್ದವನು. (ಈ ಕೃತ್ಯದಲ್ಲಿ ನನ್ನ ತಮ್ಮ ಗುರು ಕೂಡ ಸಹಭಾಗಿ) ಇದ್ದಕ್ಕಿದ್ದಂತೆ ಒಂದು ದಿನ, ನಮ್ಮ ರೈತಸಂಘದ ಗೆಳೆಯ ವೈ.ಜಿ.ಶ್ರೀನಿವಾಸ್ ‘ಬನ್ನೂರು ಕೃಷ್ಣಪ್ಪ(ರೈತ ಸಂಘದ ಬನ್ನೂರು ಘಟಕದ ಅಧ್ಯಕ್ಷ) ಬಾಳೆ ಬೆಳೆದವ್ರೆ; ಭಾರೀ ಇಳುವರಿ ಬಂದಿದೆ. ಒಂದೊಂದ್ ಗೊನೆ ೪೦ ಕೆ.ಜಿ, ೪೫ ಕೆ.ಜಿ’ ಅಂದರು. ಆಶ್ಚರ್ಯವಾಗಲಿಲ್ಲ ನನಗೆ. ಯಾಕೆಂದರೆ ಲಿಕ್ವಡ್ ಕೆಮಿಕಲ್ ಫರ್ಟಿಲೈಜರ್ ಬಳಸಿ ೫೦ರಿಂದ ೬೦ ಕೆ.ಜಿ. ಪಚ್ಚಬಾಳೆ ಬೆಳೆದವರನ್ನು ನಾನೇ ನೋಡಿದ್ದೆ. ವಾರಗಳು ಕಳೆದವು. ಮತ್ತೆ ಶ್ರೀನಿವಾಸ್ ಹೇಳಿದರು ‘ಕೃಷ್ಣಪ್ಪನ ಬಾಳೆಗೆ ಭಾರೀ ಬೇಡಿಕೆ. ಆರ್ಗ್ಯಾನಿಕ್ ಅಂತ ಮಾರ್ಕೆಟ್ ರೇಟ್‌ಗಿಂತ ಜಾಸ್ತಿ ಕೊಟ್ಟು ‘ಇಸ್ಕಾನ್’ನವರು ಕೊಳ್ಳುತ್ತಿದ್ದಾರೆ’ ಎಂದರು. ಆಗಲೂ ನನಗೆ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ನಮ್ಮ ನಡುವಿನ ಸಾವಯವ ಪಂಡಿತರು ತಾವು ಬೆಳೆದ ಸೊಪ್ಪು, ತರಕಾರಿ ಮತ್ತು ಆಹಾರಧಾನ್ಯಗಳನ್ನು ಔಷಧಿಗಳ ಬೆಲೆಗೆ ಮಾರಿಕೊಳ್ಳುತ್ತಿದ್ದರು. ಹೀಗೆಯೆ ದಿನಗಳು ಕಳೆದವು. ಮತ್ತೆ ಶ್ರೀನಿವಾಸ್ ಕೃಷ್ಣಪ್ಪನವರ ಬಾಳೆ ಕೃಷಿಯನ್ನೆ ಮಾತಿಗೆತ್ತಿಕೊಂಡರು. ‘ದು ಸಾವಯವ ಕೃಷಿ ಅಲ್ಲ, ನಿಮ್ಮ ಸಹಜ ಕೃಷಿಯೂ ಅಲ್ಲ, ಲಿಕ್ವಿಡ್ ಕೆಮಿಕಲ್ ಫರ್ಟಿಲೈಜರ್ ಕೃಷಿಯಂತೂ ಅಲ್ಲವೇ ಅಲ್ಲ. ಇದರ ಹೆಸರು ಶೂನ್ಯ ಬಂಡವಾಳದ ಲಾಭದಾಯಕ ಕೃಷಿ…’ ಶ್ರೀನಿವಾಸ್ ಮಾತಿಗೆ ತಡೆಹಾಕಿದೆ. ‘ದಿನಕ್ಕೆ ಇಂಥ ನೂರಾರು ಕೃಷಿ ಪದ್ಧತಿಗಳು ಹುಟ್ಟಿಕೊಳ್ಳುತ್ತಿವೆ ಶ್ರೀನಿವಾಸ್. ಒಬ್ಬೊಬ್ಬರೂ ಒಂದೊಂದ್ ಥರ ಮಾತಾಡ್ತಿರ‍್ತಾರೆ. ಕೃಷಿ ಅನ್ನೋದು ಯಾರಿಗೂ ಕರೆಕ್ಟ್ ಆಗಿ ಗೊತ್ತಿಲ್ಲ. ನಮ್ಮ ತಲೆಮಾರಿನವರಿಗಂತೂ ಸಾಂಪ್ರದಾಯಿಕ ಕೃಷಿಜ್ಞಾನ ಇಲ್ಲವೇ ಇಲ್ಲ. ದಿನಪತ್ರಿಕೆಗಳ ಕೃಷಿ ಮ್ಯಾಗಜಿನ್‌ಗಳನ್ನು ಓದಿ ನೋಡಿ’ ತಲೆ ಕೆಟ್ಟು ಗೊಬ್ಬರ ಆಗುವುದೊಂದು ಬಾಕಿ. ರೈತರು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು- ಒಂದೂ ಅರ್ಥವಾಗುತ್ತಿಲ್ಲ. ಯಾವ ಕಾಲಕ್ಕೆ ಯಾವ ಬೀಜ ಬಿತ್ತಬೇಕು. ಯಾವ ಗೊಬ್ಬರ ಹಾಕಬೇಕು, ಎಷ್ಟೆಷ್ಟು ಹಾಕಬೇಕು, ಯಾವ ಔಷಧಿ ಹೊಡಿಬೇಕು, ಎಷ್ಟ್ ಹೊಡಿಬೇಕು ಒಂದೂ ಗೊತ್ತಾಗಲ್ಲ. ಕಳೆದ ಎಂಟು ವರ್ಷಗಳಿಂದ ನಮ್ಮದೂ ಕೂಡ ಶೂನ್ಯ ಬಂಡವಾಳದ ಕೃಷಿನೆ. ನಮ್ಮ ಬಳೆಯ ಬಂಡವಾಳ ಏನು ಅಂತ ಗೊತ್ತಿದೆ. ಹಾಗೆ ಗೊತ್ತಿದ್ರೂ ಕೂಡ ನಾವ್ ನಡಿತಿರೊ ದಾರಿ ಸರಿಯಾಗಿದೆ ಅಂತ ಅನ್ನಿಸ್ತಾ’ ಇದೆ. ಶೂನ್ಯ ಬಂಡವಾಳ ಲಾಭ-ಗೀಬ ಅಂತೆಲ್ಲ ಮಾತಾಡಬೇಡಿ, ಸಮ್ಮನಿದ್ದುಬಿಡಿ’ ಎಂದೆ.

ಶ್ರೀನಿವಾಸ್ ಸುಮ್ಮನಿರಲಿಲ್ಲ. ‘ನೀವು ಫುಕುವೋಕ್ಷ ನಂಬಕಂಡ್ ಕೂತ್ರೆ ಅನ್ನ ಉಣ್ಣೋಕ್ಕಾಗಲ್ಲ. ಆನಂದ ಉಣ್ಣಬಹುದು. ಆದರೆ ಕೃಷ್ಣಪ್ಪನ ನಿಸರ್ಗ ಕೃಷಿ ಇದೆಯೆಲ್ಲ? ಅದೂ ಕೂಡ ನಿಮ್ಮ ಫುಕುವೋಕರ ಕೃಷಿ ತರನೆ. ನೀವು ಫುಕುವೋಕರ‍್ನ ತಲುಪೋದಿಕ್ಕೆ ಮೂವತ್ತು ವರ್ಷ ತಗೊಳ್ತೀರಿ, ಕೃಷ್ಣಪ್ಪನ ಕೃಷಿಯಲ್ಲಿ ಐದೇ ನಿಮಿಷದಲ್ಲಿ ತಲುಪಬಹುದು. (ಇದು ಬಹಳ ಉತ್ಪ್ರೇಕ್ಷೆ ಅನ್ನಿಸುತ್ತಿತ್ತು) ಒಂದೆಕ್ರೆಗೆ ಬರಿ ಹತ್ತು ಕೆ.ಜಿ. ಸಗಣಿ, ಹತ್ತು ಲೀಟರ್ ಗಂಜಳ ಹಾಕಿದ್ರೆ ಬೇಕಾದ್ದು ಬೆಳೆಯಬಹುದು. ಕೀಟನಾಶಕಗಳನ್ನು ತಾವೇ ತಯಾರಿ ಮಾಡಿಕೊಳ್ಳಬಹುದು. ರೈತ ಹೊರಗಿನಿಂದ ಯಾವುದನ್ನೂ ತರಲೇಕೂಡ್ಡು ಅಂತ ರೂಲ್ಸು. ಮಹಾರಾಷ್ಟ್ರದವರು- ಪಾಳೇಕರ್ ಅಂತ, ಕೃಷಿ ವಿಜ್ಞಾನಿ ಅಂತೆ, ಅವ್ರು ನಮ್ಮ ರೈತರಿಗೆಲ್ಲ ತರಬೇತಿ ಕೊಟ್ಟು ಈ ಕೃಷಿ ಮಾಡಿಸ್ತಿದ್ದಾರಂತೆ. ಯಾರೂ ಸಾಲ-ಗೀಲ ಮಾಡ್ಕೊಂಡು ಸಾಯೋಕ್ ಹೋಗ್ಬೇಡಿ. ಈತರಕ್ಕೆ ಈತರ ಮಾಡಿ; ಕೃಷಿ ಅಧಿಕಾರಿಗಳ ಮಾತು ಕೇಳ್ಬೇಡಿ. ವರ್ಮಿ ಕಾಂಪೋಸ್ಟ್, ನೆಡಾಪ್ ತೊಟ್ಟಿ, ಅಗ್ನಿಹೋತ್ರಿ, ಇಂಧೂರ್ ಮೆಥೆಡ್‌ಗಳೆಲ್ಲ ನಾನ್‌ಸೆನ್ಸ್. ಅದರಿಂದೆಲ್ಲ ಹೊರಗ್ ಬನ್ನಿ ಅಂತ ಹೇಳ್ಹೇಳಿ ಕಳುಹಿಸ್ತಿದ್ದಾರಂತೆ’ ಅಂದರು.

ಇನ್ನು, ವಾದ ಮಾಡುವುದರಲ್ಲಿ ಅರ್ಥವೇ ಇಲ್ಲ ಅನ್ನಿಸ್ತು. ಆ ಕ್ಷಣವೇ ನಿಂತ ನಿಲುವಿನಲ್ಲೇ ‘ನಡೆಯಿರಿ ಬನ್ನೂರಿಗೆ’ ಅಂದೆ. ಮೈಸೂರಿನಿಂದ ಮಳವಳ್ಳಿ-ಕನಕಪುರ ರಸ್ತೆಯಲ್ಲಿ ೨೫ ಕಿ.ಮೀಟರ್‌ನ ಹಾದಿ ಬನ್ನೂರಿಗೆ. ಹಸಿ ನೆಲ್ಲು; ಬಿಸಿ ಬೆಲ್ಲ, ಒಳನಾಡು ಮೀನುಗಾರಿಕೆ, ಬಂಡೂರು ಕುರಿಗೆ ಹೆಸರುವಾಸಿ ಬನ್ನೂರು.

ಕೃಷ್ಣಪ್ಪನವರ ತೋಟ ನೋಡ ನೋಡುತ್ತಲೇ ನಾನು ಬೆರಗಾದೆ. ಹೆಚ್ಚಿನ ವಿವರಗಳ ಅಗತ್ಯವೇ ಇರಲಿಲ್ಲ. ಬೀಜಾಮೃತಕ್ಕಿರುವ ಸಾಮರ್ಥ್ಯ, ಚೈತನ್ಯ, ಹೊದಿಕೆ ಮತ್ತು ಆರ್ದ್ರತೆಗಳ ಸಮಾಗಮ ಆ ಮಣ್ಣಿನ ಕಣ ಕಣಗಳಲ್ಲಿ ಜೀವತಳೆದು ಗಿಡಗಳಲ್ಲಿ ಪ್ರತಿಫಲಿಸುತ್ತಿದ್ದವು. ಇದು ಸಾಮಾನ್ಯ ಕೃಷಿ ಅಲ್ಲ, ಅಸಾಮಾನ್ಯ ಕೃಷಿ ಅನ್ನಿಸ್ತು. ಕೃಷ್ಣಪ್ಪನವರ ಆ ನೆಲದಲ್ಲಿ ಬರಿ ಬಾಳೆ ಮಾತ್ರ ಬೆಳೆದಿಲ್ಲ; ಅದರ ಆಳದಲ್ಲಿ ಇಡೀ ಜಗತ್ತಿನ ಕೃಷಿಯ ದಿಕ್ಕನ್ನೇ ಬದಲಿಸುವ ‘ಗತಿ’ ಅಡಗಿದೆ ಅನ್ನಿಸ್ತು. ಅಂಥದೊಂದು ವಿದ್ಯಮಾನ ಅಲ್ಲಿ ಘಟಿಸಿ ಹೋಗಿದೆ, ಜಗತ್ತಿನ ಯಾವ ಶಕ್ತಿಗೂ ಅದನ್ನು ತಡೆಯುವ ಶಕ್ತಿ ಇಲ್ಲ ಅನ್ನಿಸ್ತು. ಇನ್ನು ರೈತ ಬದುಕಿದ, ನಿಸರ್ಗ ಉಳಿಯಿತು, ಜಗತ್ತು ಬದುಕಿತು ಅನ್ನಿಸ್ತು.

ಅಂದು, ಕೃಷ್ಣಪ್ಪ ತಮ್ಮ ಕೃಷಿಯ ಬಗ್ಗೆ ನಾಡಿನ ಹೆಸರಾಂತ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಲೇಖನ ತೋರಿಸಿದರು. ದಿನಾ ಹುಟ್ಟಿ, ದಿನಾ ಸಾಯುವ ನೂರಾರು ಕೃಷಿ ಪದ್ಧತಿಗಳಲ್ಲಿ ಇದೂ ಒಂದಾಗಿತ್ತು. ಬರೆಯುವವರು ನಿಸರ್ಗ ಕೃಷಿಯ ‘ನಿಜ’ ಗ್ರಹಿಸಿರಲಿಲ್ಲ. ವಾಸ್ತವವಾಗಿ ಈಗ ಇರುವ ನೂರಾರು ಕೃಷಿ ಪದ್ಧತಿಗಳಲ್ಲಿ ‘ಇದೂ ಕೂಡ’ ಒಂದಲ್ಲ! ಬದಲಿಗೆ ಇದುವೇ ನಿಜವಾದ ಕೃಷಿ, ಪ್ರಧಾನ ಕೃಷಿ. ಮುಖ್ಯವಾಹಿನಿಯಲ್ಲಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುವಷ್ಟು ಮತ್ತು ತನ್ನನ್ನೆ ಮುಖ್ಯವಾಹಿನಿಯಾಗಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯ ಈ ಕೃಷಿಗಿದೆ. ಅಷ್ಟೊಂದು ಪ್ರಬಲವಾದ ವೈಜ್ಞಾನಿಕ ತಳಹದಿ ಈ ಕೃಷಿಗಿದೆ.

ಅಷ್ಟಲ್ಲದೆ ಈ ಕೃಷಿಯ ಪಿತಾಮಹ ಸುಭಾಷ್ ಪಾಳೇಕರರಿಗಿರುವ ಧ್ಯೇಯಗಳಾದರು ಎಂಥವು? ವಿಷಮುಕ್ತ ಮಣ್ಣು. ವಿಷಮುಕ್ತ ಅನ್ನ, ವಿಷಮುಕ್ತ ಪರಿಸರ, ವಿಷಮುಕ್ತ ಸಮಾಜ: ಪಾಳೇಕರರ ಜ್ಞಾನ ಹಂಚುವ ದಾಹ, ಅವರ ಉದಾತ್ತ ಧ್ಯೇಯ, ತಿಳಿಗೊಳದಂಥ ಮನಸ್ಸು ಮತ್ತು ಅವರ ಕೃಷಿಯ ತಳಹದಿಗಿದ್ದ ವಿಜ್ಞಾನದ ಸಮರ್ಥನೆ- ಇವು ನನ್ನನ್ನು ಈ ನಿರ್ಮಿತಿಯ ಸೊಬಗು ಅರಿಯಲು ಪ್ರೇರೇಪಿಸಿದವು.

ಬನ್ನೂರಿನಿಂದ ಹಿಂದಿರುಗಿದ ಆ ಕ್ಷಣವೆ ನಮ್ಮ ಸಂಪಾದಕರಲ್ಲಿ ಕೇಳಿಕೊಂಡೆ, ‘ಈ ಕುರಿತು ಬರೆಯಲೆ?’ ಎಂದು. ಯಾವತ್ತಿಗೂ ಇಂಥದ್ದು ಬರಿ; ಇಂಥದ್ದು ಬೇಡ ಎಂದು ಏನೂ ಹೇಳದೆ ಅನಿರ್ಬಂಧಿತ ಸ್ವಾತಂತ್ರ್ಯ ದಯಪಾಲಿಸಿರುವ ಅವರು ‘ಕೇಳಬೇಕೇಕೆ? ಬರೆಯಬಾರದೆ?’ ಎಂದರು. ಆದರೆ ನನ್ನಲ್ಲಿ ಹೆಚ್ಚಿನ ಮಾಹಿತಿಗಳಿರಲಿಲ್ಲ. ಕೃಷ್ಣಪ್ಪ ಕೂಡ ಮಿತಿ ದಾಟಿ ತಿಳಿಯಲು ಹೋಗಿರಲಿಲ್ಲ. ಪಾಳೇಕರ ಜೊತೆ ಮಾತಾಡೋಣ ಅಂದರೆ ಹಿಂದಿ, ಮರಾಠಿ ಎರಡೂ ಬರುತ್ತಿರಲಿಲ್ಲ. ಕುಂತಲ್ಲಿ, ನಿಂತಲ್ಲಿ ಪಾಳೇಕರ್ ಆವರಿಸಿಕೊಳ್ಳತೊಡಗಿದ್ದರು. ಕಡೆಗೂ ಧೈರ್ಯ ಮಾಡಿ ಅಮರಾವತಿಗೆ ಫೋನ್ ಮಾಡಿದೆ. ಗೊತ್ತಿದ್ದ ಕೆಲವೇ ಇಂಗ್ಲಿಷ್ ಪದಗಳು ಮತ್ತು ನನ್ನ ಕನ್ನಡ! ಆಶ್ಚರ್ಯವೆಂದರೆ ಈವರೆಗೂ ಅವರ ನನ್ನ ನಡುವೆ ಭಾಷೆ ತೊಡಕಾಗಿ ಪರಿಣಮಿಸಲಿಲ್ಲ. ಅವರ ಹಿಂದಿ ಮಿಶ್ರಿತ ಇಂಗ್ಲಿಷ್ ಮತ್ತು ನನ್ನ ಕನ್ನಡ ಮಿಶ್ರಿತ ಇಂಗ್ಲಿಷ್ ಸಾಂಗತ್ಯ ಸಾಧಿಸಿ ಅದೇ ಒಂದು ಹೊಸ ಭಾಷೆಯಾಗಿ ಹೋಗಿದೆಯೇನೋ ಅನ್ನಿಸುತ್ತೆ.

ಸರಣಿ ಲೇಖನ ಬರೆದು ಅಭ್ಯಾಸವಿರಲಿಲ್ಲ ನನಗೆ. ಕೃಷ್ಣಪ್ಪನವರ ಕೃಷಿಯ ಮೂಲಕ ಪಾಳೇಕರರನ್ನು ಪರಿಚಯಿಸಿಬಿಡೋಣ ಅಂತ ಶುರುವಿಗೆ ಅಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. ಹಾಲಿ ಚಾಲ್ತಿಯಲ್ಲಿದ್ದ ಕೃಷಿ ಪದ್ಧತಿಗಳ ಎಲ್ಲ ಮಗ್ಗಲುಗಳನ್ನೂ ಪರಿಶೀಲಿಸಿ ಪಾಳೇಕರರ ಕೃಷಿಯನ್ನು ನಮ್ಮ ರೈತರಿಗೆ ಮನದಟ್ಟು ಮಾಡಿಸಲೇಬೇಕಾಗಿತ್ತು. ‘ಅಗ್ನಿ’ಯಲ್ಲಿ ಬಂದ ಲೇಖನಗಳಿಗೆ ಸಿಕ್ಕ ಪ್ರತಿಕ್ರಿಯೆ ಅಷ್ಟಿಷ್ಟಲ್ಲ. ‘ಅಗ್ನಿ’ಯ ನಮ್ಮ ಬಸವರಾಜು, ರವೀಂದ್ರರ ಸಂತೋಷಕ್ಕೆ ಪಾರವೇ ಇರಲಿಲ್ಲ.

ಈ ಭೂಮಿಯ ಮೇಲೆ ಬೇಸಾಯಕಲೆ ಶುರುವಾಗಿ ಹತ್ತು ಸಾವಿರ ವರ್ಷಗಳಾಗಿವೆ. ಬೇಸಾಯ ಭೂಮಿಗೆ ಸಗಣಿ ಪರಿಚಯವಾಗಿ ಐದೂವರೆ ಸಾವಿರ ವರ್ಷಗಳಾಗಿವೆ. ಆದರೆ ಅಲ್ಲಿಂದ ಇಲ್ಲಿಯವರೆಗೂ ‘ಬೆಳೆ’ ಬೆಳೆಯಲು ಇಷ್ಟು ಮಾತ್ರ ಸಾಕು, ಬೇರೇನೂ ಬೇಕಾಗಿಯೇ ಇಲ್ಲ’ ಅಂತ ಹೇಳಿದವರು ಯಾರೂ ಇರಲಿಲ್ಲ. ಹತ್ತು ಸಾವಿರ ವರ್ಷಗಳ ನಂತರವಾದರೂ ಸೃಷ್ಟಿ ತನ್ನ ಕಣ್ಣು ತೆರೆದು ಪಾಳೇಕರರನ್ನು ಸೃಷ್ಟಿಸಿದೆ.

ಇಂಥ ಸೃಷ್ಟಿಯನ್ನು ಅತೀವ ಕಾಳಜಿಯಿಂದ ಕರ್ನಾಟಕಕ್ಕೆ ಬರಮಾಡಿಕೊಂಡು ಹತಾಶ ರೈತರ ಮನೆಬಾಗಿಲುಗಳಲ್ಲಿ ತಂದು ನಿಲ್ಲಿಸಿದವರು ನಮ್ಮ ಬಸವರಾಜ ತಂಬಾಕೆಯವರು. ಅವರೊಂದಿಗೆ ಕೈ ಜೋಡಿಸಿದವರು ವಿಶ್ವನಾಥ ಸರಡಗಿ. ಪಾಳೇಕರರನ್ನು ‘ಅಗ್ನಿ’ಗೆ ಪರಿಚಯಿಸುವಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ನಮ್ಮ ಇಂದೂಧರ ಹೊನ್ನಾಪುರ ‘ಅಗ್ನಿ’ಯ ವರದಿಗಳನ್ನು ಅಷ್ಟೇ ಖುಷಿಯಿಂದ ತಮ್ಮ ‘ಸಂವಾದ’ಕ್ಕೂ ಬರಮಾಡಿಕೊಂಡರು. ನಿಮ್ಮ ಮುಂದಿರುವ ಈ ಕೃತಿ ‘ಪರಿಪೂರ್ಣ’ ಅಂತ ಹೇಳಲಾರೆ. ನಿಜಕ್ಕೂ ಕೃಷಿ ಅನ್ನುವುದು ಜೀವನ ಕಲೆ. ಅದರ ಸಾರ್ಥಕತೆ ಅರಿವಾಗುವುದು ಇಡಿಯಾಗಿ ಅರ್ಪಿಸಿಕೊಂಡಾಗಲೆ. ಆ ಇಡಿಯಾಗಿ ಅರ್ಪಿಸಿಕೊಳ್ಳುವ ಅವಕಾಶ ಎಲ್ಲರ ಪಾಲಿಗೂ ಲಭಿಸಲಿ.

‘ಹ್ಯೂಮಸ್’ ಅನ್ನುವುದು ಕೃಷಿ ಭೂಮಿಯ ಜೀವಂತಿಕೆ ಸಾರುವ ಒಂದು ಸ್ಥಿತಿ ನಿಘಂಟಿನಲ್ಲಿ ಅದಕ್ಕೆ ಸರಿಯಾದ ಅರ್ಥಗಳಲ್ಲಿ. ‘ಸ್ಮಂಜು’ ಅಂತ ಹೆಸರಿಡೋಣವೆ?

ಸ್ವಾಮಿ ಆನಂದ್.