– ಸುಭಾಷ್ ಪಾಳೇಕರ್ ತಮ್ಮ ನೈಸರ್ಗಿಕ ಕೃಷಿ ಚಿಂತನೆಗಳ ತಳಹದಿಗೆ ಕಾರಣವಾಗಿರುವ ಕೆಲ ಸಂಗತಿಗಳನ್ನು ಹೇಳಬಯಸುತ್ತಾರೆ. ಆಲಿಸಿರಿ. ಅನಂತರ ಅವರ ನೈಸರ್ಗಿಕ ಕೃಷಿ ವಿಜ್ಞಾನದ ಆಂತರ್ಯ ಅರಿಯಲು ಪ್ರಯತ್ನಿಸೋಣ.

“ನಮ್ಮ ಪ್ರಾಚೀನ ಭಾರತೀಯ ಕೃಷಿಗೆ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. ಮೂಲ ಭಾರತೀಯ ಕೃಷಿ ಪದ್ಧತಿ ಇವತ್ತಿಗೂ ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ. ಕಳೆದ ಶತಮಾನದ ಆರಂಭದ ದಿನಗಳಲ್ಲಿ ಬ್ರಿಟನ್ನಿನಿಂದ ಡಾ.ಸರ್ ಆಲ್ಬರ್ಟ್ ವಿಲಿಯಂ ಎಂಬ ಕೃಷಿ ವಿಜ್ಞಾನಿ ಭಾರತಕ್ಕೆ ಬಂದಿದ್ದರು. ಭಾರತದ ಕೃಷಿ ಪದ್ಧತಿ, ಅದರ ಅಭಿವೃದ್ಧಿಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮ ಇತ್ಯಾದಿ ಕುರಿತು ಅವರು ಬ್ರಿಟಿಷ್ ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಸರ್ ಆಲ್ಬರ್ಟ್ ವಿಲಿಯಂ ಇಡೀ ದೇಶ ಸುತ್ತಾಡಿದರು. ಅಧ್ಯಯನ ಮಾಡಿದರು, ಸಂಶೋಧನೆ ನಡೆಸಿದರು, ಭಾರತೀಯ ವ್ಯವಸಾಯ ಸಂಸ್ಕೃತಿಯ ಇತಿಹಾಸವನ್ನೆಲ್ಲ ಜಾಲಾಡಿದರು. ಅಂತಿಮವಾಗಿ ಅವರು ತಮ್ಮ ವರದಿಯಲ್ಲಿ ‘ನಮ್ಮ ಮುಂದುವರಿದಿರುವ ರಾಷ್ಟ್ರಗಳಿಂದ ಭಾರತೀಯ ರೈತರು ಏನನ್ನೂ ಕಲಿಯಬೇಕಾಗಿಲ್ಲ. ಬದಲಾಗಿ ಅವರಿಂದಲೆ ನಾವು ಕಲಿಯುವಂಥದ್ದು ಬಹಳಷ್ಟಿದೆ. ಆ ಮಟ್ಟಿಗೆ ಭಾರತೀಯ ಕೃಷಿ ಪದ್ಧತಿ ಸ್ವಯಂ ಪರಿಪೂರ್ಣವಾಗಿದೆ’ ಎಂಬುದಾಗಿ ದಾಖಲಿಸಿದ್ದರು.

ಇಂದು ಆ ಚಿತ್ರಣಗಳೆಲ್ಲ ನನ್ನ ಕಣ್ಣ ಮುಂದಿವೆ. ಖಾಲಿ ಈ ನಲವತ್ತು ವರ್ಷಗಳಲ್ಲಿ ನಾವು ಏನಾಗಿ ಹೋಗಿದ್ದೇವೆ? ಕನಸುಗಾರ ನೆಹರೂ ‘ಹಸಿರು ಕ್ರಾಂತಿ’ಗೆ ಚಾಲನೆ ನೀಡಿದರು. ಮಿಶ್ರ ಆರ್ಥಿಕ ನೀತಿಯನ್ನು ಜಾರಿಗೆ ತಂದರು. ಇಲ್ಲಿ ಬಂಡವಾಳಶಾಹಿ ಶ್ರಮಜೀವಿ ಇಬ್ಬರೂ ಉದ್ಧಾರವಾಗಲಿಲ್ಲ. ‘ಹಸಿರು ಕ್ರಾಂತಿ’ ಮತ್ತು  ಮಿಶ್ರ ಆರ್ಥಿಕ ನೀತಿ- ಈ ಎರಡರಲ್ಲೂ ಇದ್ದ ತಪ್ಪುಗಳ ಪರಿಣಾಮವನ್ನು ಎಲ್ಲರೂ ಉಂಡಿದ್ದೇವೆ, ಮತ್ತೂ ಉಣ್ಣುತ್ತಿದ್ದೇವೆ.

ಭಾರತಕ್ಕೆ ಆರ್ಯರು ಬರುವ ಮುಂಚೆಯೇ ಇಲ್ಲಿ ಸಮೃದ್ಧವಾದ ಕೃಷಿ ಪದ್ಧತಿ ಮತ್ತು ಸಂಸ್ಕೃತಿ ಇತ್ತು. ಹರಪ್ಪ, ಮೊಹೆಂಜೊದಾರೋ ಉತ್ಖನನ ಎಷ್ಟೆಲ್ಲ ರಹಸ್ಯಗಳನ್ನು ಹೊರಗೆಡವಿತು! ನಮ್ಮ ಪ್ರಾಚೀನ ಭಾರತೀಯ ಋಷಿ- ಮುನಿಗಳು ಕೃಷಿಯಲ್ಲಿ ಬಹುವಾಗಿ ಆಸ್ಥೆ ವಹಿಸಿದ್ದರು. ಅವರ ಸತತ ಪ್ರಯೋಗಶೀಲತೆಯ ಪರಿಣಾಮವಾಗಿ ಕೃಷಿ ಹಂತ ಹಂತವಾಗಿ ಅಭಿವೃದ್ಧಿಯಾಯಿತು. ಪ್ರಾಚೀನ ನೈಸರ್ಗಿಕ ಕೃಷಿ ಸಂಸ್ಕೃತಿಯ ಕುರುಹುಗಳನ್ನು ನಮ್ಮ ಇವತ್ತಿನ ವಿಧರ್ಬಾ ಪ್ರದೇಶದಲ್ಲಿ ಕಾಣಬಹುದು. ಇಲ್ಲಿನ ರೈತಾಪಿ ಮಹಿಳೆಯರು ‘ಋಷಿ ಪಂಚಮಿ’ ಎಂಬ ಹಬ್ಬ ಆಚರಿಸುತ್ತಾರೆ. ಸೇಂದ್ರೀಯ ಪದ್ಧತಿಯಲ್ಲಿ ಬೆಳೆ ಬೆಳೆದು; ಬೆಳೆದ ಹಣ್ಣು, ಧಾನ್ಯ, ತರಕಾರಿಗಳನ್ನು ಹರಿವ ನೀರಿನಲ್ಲಿ ಬಿಟ್ಟು ಅಂದು ಉಪವಾಸ ಆಚರಿಸುವರು. ಪ್ರಾಚೀನ ಸಂಸ್ಕೃತಿಯ ಅದೆಷ್ಟೋ ಉಪಯುಕ್ತ ಮೌಲ್ಯಗಳನ್ನು ಅಲ್ಲಲ್ಲಿ ನಮ್ಮ ಹಳ್ಳಿಗಾಡಿನ ರೈತಾಪಿ ಮಹಿಳೆಯರು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬಂದಿದ್ದಾರೆ.

ಆರ್ಯರು ಇಲ್ಲಿಗೆ ಬಂದ ಬಳಿಕ, ಅಲ್ಲಲ್ಲೇ ನೆಲೆಯೂರಿ ನಿಲ್ಲುವಂತಾದ ಬಳಿಕ ಕೃಷಿ ವಿಧಾನಗಳು ಬದಲಾಗುತ್ತಾ, ಅಭಿವೃದ್ಧಿಯಾಗುತ್ತಾ ಸಾಗಿಬಂದವು. ನಮ್ಮದೇ ಪ್ರಾಚೀನ ಕೃಷಿ ಪದ್ಧತಿ ಮತ್ತು ಸಂಸ್ಕೃತಿಯ ಮೇಲೆ ರೂಪುಗೊಂಡ ವೇದಗಳಲ್ಲಿ ನಾನಾಬಗೆಯ ಕೃಷಿ ಪದ್ಧತಿಗಳ ಉಲ್ಲೇಖಗಳಿವೆ. ಬುದ್ಧ, ಅಶೋಕ, ಅಕ್ಬರ್ ಮುಂತಾದ ಯಾರ ಕಾಲವೇ ಆಗಿರಲಿ ಎಲ್ಲವೂ ಕೃಷಿಯ ಮೇಲೆಯೆ ಅವಲಂಬಿತವಾಗಿದ್ದವು.

ಅಥರ್ವಣ ವೇದಶಾಸ್ತ್ರದಲ್ಲಿ ಒಂದು ಶ್ಲೋಕ ಹೀಗಿದೆ. ‘ಜೀವೋ ಜೀವಸ್ಯ ಜೀವನಂ, ಜೀವ ಜೀವಾತ ಜಾಯತೇ’. ಇದರ ಅರ್ಥವ್ಯಾಪ್ತಿಯ ಹರಹು ದೊಡ್ಡದು. ಸಂಕ್ಷಿಪ್ತವಾಗಿ ಹೇಳುವುದಾದರೆ ಜೀವವು ಜೀವವನ್ನು ಬೆಳಗಿಸುತ್ತದೆ. ಜೀವ, ಜೀವದಿಂದ ಜೀವಕ್ಕೆ ಸಾಗುತ್ತದೆ ಮತ್ತು ಜೀವವು ಜೀವದಲ್ಲೆ ಲೀನವಾಗುತ್ತದೆ. ನೈಸರ್ಗಿಕ ಕೃಷಿಯಲ್ಲಿ ಪರಿಸರದಲ್ಲಿ ಈ ತತ್ವ ಅಡಗಿದೆ.

ಬುದ್ಧನ ಮೂಲಕ ಅವನ ಪ್ರೀತಿ, ಕಾರುಣ್ಯದ ಬೆಳಕಿನಲ್ಲಿ ಈ ದೇಶ ಪ್ರಜ್ವಲಿಸಿತ್ತು. ಬುದ್ಧನಿಗೂ ಮುಂಚೆ ಭಾರತದಲ್ಲಿ ಯಜ್ಞ, ಯಾಗಾದಿಗಳು ಅತಿರೇಕದ ಮಟ್ಟ ದಾಟಿದ್ದವು. ಹಿಂಸೆಯ ತತ್ವ ಮತ್ತು ಆರ್ಭಟಗಳು ಪ್ರಬಲವಾಗಿದ್ದವು. ಬುದ್ಧನ ಆಗಮನ ಹೊಸ ಅರಿವು, ಬೆಳಕು, ಬದಲಾವಣೆಗಳಿಗೆ ದಾರಿ ಮಾಡಿಕೊಟ್ಟಿತ್ತು.

ಜಪಾನಿನ ಮಸನೊಬು ಫುಕುವೋಕರ ಬಗೆಗೆ ಮೊದ ಮೊದಲು ನಮ್ಮ ಪುಣೆ, ಮುಂಬಯಿಗಳಲ್ಲೆಲ್ಲ ಬರಿ ತಪ್ಪು, ತಪ್ಪು ಮಾಹಿತಿಗಳೇ ಇದ್ದವು. ‘ಎರೆಹುಳು ತಂದು ವರ್ಮಿ ಕಾಂಪೋಸ್ಟ್ ಮಾಡುತ್ತಾರೆ, ಧ್ಯಾನ ಮಾಡುತ್ತಾರೆ, ತಪಸ್ಸು ಮಾಡುತ್ತಾರೆ. ಅಗ್ನಿಹೋತ್ರಿ ಯಾಗ ಮಾಡುತ್ತಾರೆ, ಯೋಗ ಮಾಡುತ್ತಾರೆ ಹಾಗೆ-ಹೀಗೆ ಅಂತೆಲ್ಲ. ನಮ್ಮ ಮರಾಠಿ ಪತ್ರಿಕೆಗಳು ಕೂಡ ಇದೇ ಅರ್ಥ ಬರುವಂತೆ ಬರೆಯುತ್ತಿದ್ದವು. ಇದೆಲ್ಲ ಸುಳ್ಳು ಅಂತ ಗೊತ್ತಾದದ್ದು ನಾನವರನ್ನು ಕಂಡು ಮಾತಾಡಿಸಿದ ಮೇಲೆಯೇ. ಫುಕುವೋಕರಲ್ಲಿ ಬುದ್ಧನ ಪ್ರಭಾವ ಗಾಢವಾಗಿದೆ. ಬುದ್ಧನ ಕಾಣ್ಕೆಗಳು ಅವರ ವ್ಯವಸಾಯ ಭೂಮಿಯಲ್ಲಿ ಪ್ರತಿಫಲನಗೊಳ್ಳುತ್ತವೆ. ‘ಕೊಡುವುದು-ಪಡೆಯುವುದು ಮತ್ತು ಪಡೆದುದನ್ನು ಪಡೆದಲ್ಲಿಗೇ ಹಿಂದಿರುಗಿಸುವುದು’ ಫುಕುವೋಕರ ಬೇಸಾಯ ಕ್ರಮದಲ್ಲಿ ಅಡಗಿರುವ ತತ್ವ. ‘ಜೀವೋ ಜೀವಸ್ಯ ಜೀವನಂ, ಜೀವ ಜೀವಾತ ಜಾಯತೇ’ ಶ್ಲೋಕವನ್ನು ಫುಕುವೋಕರ ಬಾಳು ಮತ್ತು ಕೃಷಿಗೆ ಅನ್ವಯಿಸಲು ಯತ್ನಿಸುತ್ತೇನೆ. ನಿಸರ್ಗದಲ್ಲಿ ಈ ನಿಯಮ ಅಡಗಿದೆ ಎಂಬುದನ್ನು ನಾನು ವಿಶೇಷವಾಗಿ ಹೇಳಬೇಕಾಗಿಲ್ಲ ಅಲ್ಲವೆ?

ನಾನು ಕೃಷಿ ವಿಜ್ಞಾನದಲ್ಲಿ ಪದವಿ ಪಡೆದ ವ್ಯಕ್ತಿ. ಆಕಳ ಸಗಣಿ, ಗಂಜಳ ಕುರಿತು ನಾನು ಹೊಸದಾಗಿ ಹೇಳುತ್ತಿಲ್ಲ. ಐದು ಸಾವಿರ ವರ್ಷಗಳ ಹಿಂದೆಯೇ ನಮ್ಮ ವ್ಯವಸಾಯ ಕ್ರಮದಲ್ಲಿ ಸಗಣಿಗಿರುವ ಮಹತ್ವದ ಅರಿವಾಗಿದೆ. ಆ ಮಹತ್ವದ ಅರಿವು ಮಾಡಿಕೊಟ್ಟವರು ನಮ್ಮ ಗೊಲ್ಲರು. ಈ ಆಧುನಿಕ ಬೇಸಾಯದ ಕಾಲಘಟ್ಟದಲ್ಲಿ ನಮ್ಮ ಹೊಸ ತಲೆಮಾರಿನ ರೈತರು ಹಳೆಯದನ್ನೆಲ್ಲ ಮರೆತಿದ್ದಾರೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೀಟನಾಶಕ ಬಳಸಿ ಮಾಡುವ ಕೃಷಿಯಲ್ಲಿ ಅವರಿಗೆ ಭವಿಷ್ಯವೇ ಇಲ್ಲ. ಬೆಳೆಯುವ ನಲೆ ಮತ್ತು ಸುತ್ತಲ ಪರಿಸರ ಉಸಿರು ಕಟ್ಟಿಸುವಂತೆ ಮಾಡಿರುವಾಗ ನಮ್ಮ ರೈತ ಹಳೆಯದಕ್ಕೆ ಹಿಂದಿರುಗಲಾಗದೆ, ಹೊಸದರಲ್ಲಿ ಬಾಳಲಾಗದೆ ಪರಿ ತಪಿಸುತ್ತಿದ್ದಾನೆ. ಈ ನಡುವೆ ವ್ಯವಸಾಯ ಭೂಮಿಗೆ ಅರ್ಥಹೀನ ಅಗ್ನಿಹೋತ್ರಿಯಾಗ, ಪಂಚಗವ್ಯ, ವರ್ಮಿ ಕಾಂಪೋಸ್ಟ್, ಬಯೋ ಕಾಂಪೋಸ್ಟ್ ಇತ್ಯಾದಿಗಳು ಬಂದಿವೆ. ಚಿತ್ರ ವಿಚಿತ್ರ ವಿಧಾನಗಳೆಲ್ಲ ಜಾರಿಗೆ ಬಂದು ವ್ಯವಸಾಯ ಎಂಬುದು ಪೂರ್ತಿ ಕಗ್ಗಂಟಿನ ವ್ಯವಹಾರವಾಗತೊಡಗಿದೆ. ರಾಸಾಯನಿಕ ಗೊಬ್ಬರ, ಕೀಟ ಹಾಗೂ ಕಳೆನಾಶಕಗಳು ನಮ್ಮ ವ್ಯಕ್ತಿತ್ವಗಳನ್ನು, ನಮ್ಮ ಅರಿವಿಗೇ  ಬಾರದಂತೆ ವಿಕಾರಗೊಳಿಸಿಬಿಟ್ಟಿವೆ. ಇದರಿಂದಾಗಿ ಅನಾರೋಗ್ಯಕರ ಮನಸ್ಸು ಮತ್ತು ಅನಾರೋಗ್ಯಕರ ಸಮಾಜ ನಿರ್ಮಾಣವಾಗುತ್ತಿದೆ. ನಮ್ಮ ರಾಜಕಾರಣವೂ ಈ ಅನಾರೋಗ್ಯಕರ ಸಮಾಜದ ಒಂದು ಭಾಗವೇ ಆಗಿದೆ. ಈ ಅವಘಡದ ಅರಿವು ಇಂದು ಬಹುತೇಕ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ.

ಆರಂಭದಲ್ಲಿ ನಾನು ಕೃಷಿಗೆ ಸಂಬಂಧಿಸಿದ ದೇಶ-ವಿದೇಶಗಳ ಗ್ರಂಥಗಳನ್ನೆಲ್ಲ ಪರಿಶೀಲಿಸುತ್ತ ಬಂದೆ. ಹಾಗೆಯೇ ನಮ್ಮ ಪ್ರಾಚೀನ ಬೇಸಯ ಕ್ರಮ, ವೇದಗಳಲ್ಲಿ ಹುದುಗಿ ಹೋಗಿದ್ದ ಸಂಗತಿಗಳತ್ತೆಲ್ಲ ಕಣ್ಣಾಡಿಸಿದೆ. ಹಾಗೆಯೇ ಇವತ್ತಿಗೂ ಆ ಬೇಸಾಯ ಪದ್ಧತಿಯ ಲಕ್ಷಣಗಳನ್ನೆಲ್ಲ ಒಳಗೊಂಡಿದ್ದ ಆದಿವಾಸಿ ಬುಡಕಟ್ಟು ಜನರ ಪ್ರದೇಶಗಳಿಗೆಲ್ಲ ಪದೇ ಪದೆ ಎಡತಾಕಿದೆ. ಮಾನವ ಹಸ್ತಕ್ಷೇಪವಿರುವ ನಮ್ಮ ಅರಣ್ಯಗಳು, ಪಾಳುಬಿದ್ದ ಜಮೀನುಗಳು, ಕೆರೆ-ಕಟ್ಟೆ ನಡುವಿನ ಹಂದರಗಳು, ಬೆಟ್ಟ-ಗುಡ್ಡಗಳು, ನದಿ ಪಾತ್ರಗಳು; ಅತಿ ಹೆಚ್ಚು ಮಳೆ ಬರುವ ಮತ್ತು ಅತಿ ಕಡಿಮೆ ಮಳೆ ಇರುವ ಪ್ರದೇಶಗಳು; ಋತುಮಾನಗಳು, ಸ್ಥಳೀಯ ಬೀಜಗಳು, ಬೆಳೆಗಳು, ಜನರ ಆಹಾರ ಪದ್ಧತಿ; ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಸಂಗತಿಗಳನ್ನೆಲ್ಲ ಗಮನವಿಟ್ಟು ಅಧ್ಯಯನ ನಡೆಸುತ್ತಾ ಬಂದೆ, ಇಷ್ಟಾದರೂ ಕಲಿಯುವುದು, ನೋಡುವುದು, ತಿಳಿಯುವುದು ಬಹಳಷ್ಟಿದೆ.

ಇಷ್ಟೆಲ್ಲ ಆದ ಮೇಲೆಯೆ ನನಗೆ ಆಲಿಬಾಬನ ಗುಹೆಯ ರಹಸ್ಯದ ಅರಿವಾಗಿದ್ದು. ಆ ರಹಸ್ಯ ಇಷ್ಟೆ: ‘ನಿಸರ್ಗವನ್ನು ಅರಿಯುವುದು’. ನಿಸರ್ಗದಲ್ಲೇ ಎಲ್ಲವೂ ಅಡಗಿದೆ. ನಾವು ಮಾತ್ರ ವ್ಯರ್ಥ ಸರ್ಕಸ್ ಮಾಡುತ್ತಿದ್ದೇವೆ ಅಷ್ಟೆ. ನನಗೂ ಮೊದಲು ಇದು ಪುಕುವೋಕರಿಗೆ ಅರ್ಥವಾಗಿದೆ. ಈ ಸೃಷ್ಟಿಯಲ್ಲಿ ಮಾನವನಿಗೂ ಮುಂಚೆ ಮರಗಿಡಗಳು ಬಂದಿವೆ. ನಿಸರ್ಗವು ಮರಗಿಡಗಳಿಗೆ ಈ ಭೂಮಿಯೊಂದಿಗೆ ಅಚರ ಸಂಬಂಧವನ್ನು ಕಲ್ಪಿಸಿದೆ. ಅವುಗಳ ಸಂರಕ್ಷಣೆಯನ್ನೂ ನಿಸರ್ಗವೇ ಮಾಡಿದೆ. ನಿಸರ್ಗವು ಸೃಷ್ಟಿಯ ಕ್ರಿಯೆಯಲ್ಲಿ ತಾನು ಸೃಷ್ಟಿಸುವ ಪ್ರತಿಯೊಂದು ವಸ್ತುವಿನ ಪಾಲನೆ, ಪೋಷಣೆಯನ್ನು ತಾನೇ ಮಾಡುತ್ತದೆ. ಮಗು ಹುಟ್ಟುವ ಮುಂಚೆಯೇ ತಾಯಿಯ ಎದೆಯಲ್ಲಿ ಹಾಲು ಸೃಷ್ಟಿಯಾಗುತ್ತದೆ. ಮಗುವಿಗೆ ಮೂರು ವರ್ಷಗಳಾಗುವವರೆಗೆ ಈ ಕ್ರಿಯೆ ನಿರಂತರ. ನಿಸರ್ಗಕ್ಕೆ ಎಲ್ಲರ ಮತ್ತು ಎಲ್ಲದರ ಕುರಿತು ಕಾಳಜಿ ಇದೆ. ಇಷ್ಟು ಸರಳ ಸಂಗತಿ ಅರ್ಥವಾದರೆ ಸಾಕು. ಬೀಜ ಬಿತ್ತಿ, ಬೆಳೆ ಬೆಳೆಯುವ ರೈತಾಪಿ ಕೆಲಸ ಸಲೀಸಾಗುತ್ತದೆ.

ಒಮ್ಮೆ ನನ್ನನ್ನು ಗೋವಾದ ಕೃಷಿಕರ ವಾರ್ಷಿಕ ಸಮ್ಮೇಳನಕ್ಕೆ ಅಲ್ಲಿನ ಸರಕಾರ ಆಹ್ವಾನಿಸಿತ್ತು. ಅಲ್ಲಿನ ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಕೃಷಿ ಅಧಿಕಾರಿಗಳು ಗೋವಾದ ಕಾಡುಗಳಲ್ಲಿ ಸಹಜವಾಗಿ ಬೆಳೆದಿರುವ ಗೇರು ಮರಗಳನ್ನೂ, ತಾವೇ ತಮ್ಮ ಸಂಶೋಧನಾ ಕೇಂದ್ರದಲ್ಲಿ ಬೆಳೆಸಿರುವ ಮರಗಳನ್ನೂ ತೋರಿಸಿದರು. ಕಾಡಿನಲ್ಲಿ ಬೆಳೆದ ಗೇರು ಬೀಜಗಳು ಪೂರ್ಣ ವಿಷಮುಕ್ತ, ಸ್ವಾದಿಷ್ಟ ಮತ್ತು ಸತ್ವಪೂರಿತ. ಜೊತೆಗೆ ಇಳುವರಿಯೂ ಹೆಚ್ಚು. ಈ ಕಾಡುಗಳಿಂದ ಗೇರು ಫಸಲು ತರುವವರು ವರ್ಷಕ್ಕೊಮ್ಮೆ ಮಾತ್ರ ಕಾಡಿಗೆ ಹೋಗುತ್ತಾರೆ. ಉಳಿದ ದಿನಗಳಲ್ಲಿ ಅವುಗಳತ್ತ ತಿರುಗಿಯೂ ನೋಡುವುದಿಲ್ಲ. ಆದರೆ ಗೇರು ಸಂಶೋಧನಾ ಕೇಂದ್ರದಲ್ಲಿ ಎಲ್ಲ ಬಗೆಯ ಕಾಳಜಿ ವಹಿಸಿ, ಗೊಬ್ಬರ, ನೀರು ನೀಡಿ ಆರೈಕೆ ಮಾಡಿ, ರೋಗಗಳ ಹತೋಟಿಗೆ ಔಷಧಿ ಸಿಂಪಡಿಸಿದ್ದರೂ ಇಳುವರಿ ಕಡಿಮೆ ಮತ್ತು ಕಾಳಿನ ಗಾತ್ರ, ಸತ್ವದಲ್ಲೂ ಕುಂದು. ಅಲ್ಲಲ್ಲಿ ಅರಣ್ಯಗಳಲ್ಲಿ ಕಾಣಸಿಗುವ ನಿಂಬೆ, ಮಾವು, ಹುಣಸೆ ಮುಂತಾದ ಮರಗಳನ್ನು ಗಮನಿಸಿ. ಪ್ರತಿಯೊಂದು ಮರದಲ್ಲೂ ಎಲೆಗಳು ಕಡಿಮೆ ಇರುತ್ತವೆ. ಆದರೆ ಫಸಲು ಮಾತ್ರ ಹೆಚ್ಚು. ತೌಲನಿಕವಾಗಿ ಕೃಷಿ ವಿ.ವಿ.ಗಳ ಸಂಶೋಧನಾ ಕೇಂದ್ರದಲ್ಲಿರುವ ಮರಗಳನ್ನು ಗಮನಿಸಿ. ನಾನು ವಿಧರ್ಬಾ ಮತ್ತು ಆದಿವಾಸಿ ಪ್ರದೇಶಗಳಲ್ಲಿ ಸುತ್ತಾಡುವಾಗ ಕೂಡ ಇದನ್ನು ಗಮನಿಸಿದ್ದೇನೆ. ಮಾನವ ಹಸ್ತಕ್ಷೇಪ ಇಲ್ಲದೆಡೆಯಲ್ಲೆಲ್ಲ ಫಸಲಿಗೆ ಯಾವ ಕುಂದೂ ಇರುವುದಿಲ್ಲ.  ಕೀಟಗಳನ್ನೂ ಕೂಡ ನಿಸರ್ಗವೇ ನಿಯಂತ್ರಿಸುತ್ತದೆ. ವಿಧರ್ಬಾ ಪ್ರದೇಶದಲ್ಲಿ ರೈತರ ಹೆಚ್ಚಿನ ಹಸ್ತಕ್ಷೇಪವಿಲ್ಲದೆ ಬೆಳೆದ ಕಿತ್ತಳೆ ತೋಟಗಳು ಫಲಭರಿತವೂ, ಆರೋಗ್ಯ ಪೂರ್ಣವು ಆಗಿರುತ್ತವೆ. ಅಲ್ಲಿನ ಹೊಂಬಣ್ಣದ ಕಿತ್ತಳೆಗೆ ವಿಶಿಷ್ಟ ರುಚಿ, ಸ್ವಾದಗಳೆಲ್ಲ ಇವೆ. ನಾನು ಆ ಎಲ್ಲ ಮೂಲಗಳಿಂದ ರೈತಾಪಿ ಜನರಿಗೆ ನೆರವಾಗುವ ಶ್ರೇಷ್ಠವೂ, ಉತ್ಕೃಷ್ಟವೂ ಆದ ಸಂಗತಿಗಳನ್ನು ತಂದಿದ್ದೇನೆ. ಹಾಗೆಯೇ ದೇಸಿ ಆಕಳ ಸಗಣಿ, ಗಂಜಳಗಳಲ್ಲಿರುವ ಮಹತ್ವವನ್ನು ಕೂಡ ಅರ್ಥಮಾಡಿಕೊಂಡಿದ್ದೇನೆ. ನಮ್ಮ ಪ್ರಯೋಗಾಲಯದಲ್ಲಿ ದೇಶ-ವಿದೇಶಗಳ ನಾನಾ ಭಾಗಗಳ ನಾನಾ ತಳಿಯ ಜಾನುವಾರುಗಳ ಸಗಣಿ, ಗಂಜಳಗಳ ಮೇಲೆಲ್ಲ ನಾವು ಪ್ರಯೋಗ ನಡೆಸಿದ್ದೇವೆ. ಈ ಹಿನ್ನೆಲೆಯಲ್ಲೇ ನಾನು ದೇಶಿ ಆಕಳುಗಳ ಕರುಳಲ್ಲಿ ಹುಟ್ಟುವ ಪಿಎಸ್‌ವಿ ಬ್ಯಾಕ್ಟೀರಿಯಾಗಳಿಂದಾಗಿ ಅವುಗಳ ತೊಪ್ಪೆ ಮತ್ತು ಗಂಜಳಗಳಲ್ಲಿ ಬೆಳೆಗೆ ಪೂರಕವಾದ ಕೋಟ್ಯಾನುಕೋಟಿ ಜೀವಾಣುಗಳು ಸೃಷ್ಟಿಯಾಗುತ್ತವೆ, ಇದು ನಿಸರ್ಗ ಸೃಷ್ಟಿ; ಮಾನವ ಸೃಷ್ಟಿ – ಅಲ್ಲ ಎಂದಿರುವುದು.

ಸೃಷ್ಟಿ ಕ್ರಿಯೆಯಲ್ಲಿ ನಿಸರ್ಗವು ಕ್ಷಣ ಕ್ಷಣವೂ ಹೊಸ ಹೊಸ ಸೃಷ್ಟಿಯ ಬಗ್ಗೆ ಗಮನ ಹರಿಸುತ್ತದೆ. ಅದರಲ್ಲಿ ಏಕತೆ ಇರುವುದಿಲ್ಲ. ವೈವಿಧ್ಯತೆಗೆ ಹೆಚ್ಚು ಒತ್ತು. ಮಾನವ ಸಮಾಜವನ್ನೆ ಗಮನಿಸಿ; ಒಬ್ಬ ವ್ಯಕ್ತಿ ಇದ್ದಂತೆ ಮತ್ತೊಬ್ಬ ಇರಲಾರ. ಅವಳಿ-ಜವಳಿ, ತ್ರಿವಳಿಗಳು ಇದ್ದರೂ ವ್ಯಕ್ತಿತ್ವದಲ್ಲಿ ಭಿನ್ನತೆ ಇರುತ್ತದೆ. ರೂಪ, ಆಕಾರಗಳಲ್ಲೂ ಭಿನ್ನತೆಯನ್ನು ಗಮನಿಸಬಹುದು. ಅದೇ ರೀತಿ ಒಂದು ಮರದ ಫಲ ಮತ್ತೊಂದು ಮರದ ಫಲದಂತೆ ಇರುವುದಿಲ್ಲ. ಅಷ್ಟೇ ಅಲ್ಲ ಪ್ರತಿಯೊಂದು ಮರದ ಪ್ರತಿಯೊಂದು ಫಲಗಳು ಬೇರೆ ಬೇರೆಯಾಗಿರುತ್ತವೆ. ಕಿತ್ತಳೆ, ದ್ರಾಕ್ಷಿ, ಮಾವು, ದಾಳಿಂಬೆ, ಮೋಸಂಬಿ, ಬಾಳೆ- ಹೀಗೆ ಪ್ರತ್ಯೇಕ ಗಿಡಗಳಲ್ಲಿ ಪ್ರತ್ಯೇಕವಾದ ಸ್ವಭಾವ ವೈಶಿಷ್ಟ್ಯಗಳಿರುತ್ತವೆ. ಅವುಗಳ ಜೀವಾಣುಗಳು ಕೂಡ ಬೇರೆ ಬೇರೆಯಾಗಿಯೇ ಇರುತ್ತವೆ.

ನಮ್ಮ ದೇಶದ ಒಟ್ಟು ೩೨ ಕೋಟಿ ೯೦ ಲಕ್ಷ ಹೆಕ್ಟೇರು ಭೂಮಿ ಜೈವಿಕವಾಗಿ ವಿವಿಧ ಬಗೆಗಳನ್ನು, ಸ್ವರೂಪಗಳನ್ನು, ಭಾವನಗೆಗಳನ್ನು ಒಳಗೊಂಡಿದೆ. ಭಾರತದಲ್ಲಿ ವನಸ್ಪತಿಯ ೪೮ ಸಾವಿರ ಜಾತಿಗಳಿವೆ. ೮೦ ಸಾವಿರ ಉಪಜಾತಿಗಳಿವೆ. ಹಾಗೆಯೇ ಲಕ್ಷೋಪಲಕ್ಷ ಪ್ರಾಣಿ, ಕೀಟಗಳ ಜಾತಿ, ಉಪಜಾತಿಗಳಿವೆ. ಈ ವೈವಿಧ್ಯತೆಯಿಂದಾಗಿಯೆ ಇವೆಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಅವು ಒಂದನ್ನೊಂದು ಅವಲಂಬಿಸಿ ಬಾಳುತ್ತವೆ ಮತ್ತು ಇತರರನ್ನು ಬಾಳಲು ಬಿಡುತ್ತವೆ. ಹೀಗಾಗಿಯೇ ನಾವು ಬೆಳೆ ಬೆಳೆಯುವ ಪದ್ಧತಿಯಲ್ಲಿ ಮಿಶ್ರ ಬೆಳೆಗಳಿಗೆ ಹೆಚ್ಚು ಒತ್ತು ಕೊಡಬೇಕು.”

* * *

ಪಾಳೇಕರರ ನಿಸರ್ಗ ಕೃಷಿಯ ರಥಕ್ಕೆ ನಾಲ್ಕು ಚಕ್ರಗಳು. ಈ ನಾಲ್ಕು ಚಕ್ರಗಳು ನಿಸರ್ಗ ಕೃಷಿಯಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಈ ಚಕ್ರಗಳಿಗೆ ಸುಭಾಷ್ ಪಾಳೇಕರರಿಟ್ಟಿರುವ ಹೆಸರು:

೧. ಬೀಜಾಮೃತ
೨. ಜೀವಾಮೃತ
೩. ಹೊದಿಕೆ(ಅಚ್ಛಾದನ)
೪. ಆರ್ದ್ರತೆ

ನಾವೀಗ ಬೀಜ ಬಿತ್ತುವ ಕ್ರಮದಿಂದಲೇ ನಿಸರ್ಗ ಕೃಷಿಯನ್ನು ಆರಂಭಿಸೋಣ. ಮಣ್ಣಿನ ಗುಣ-ಸ್ವಭಾವ ಯಾವ ಬಗೆಯದೇ ಆಗಿರಲಿ, ಸ್ಥಳೀಯ ಹವಾಗುಣ ಕೂಡ ಯಾವುದೇ ಬಗೆಯದಾಗಿರಲಿ- ನಿಸರ್ಗ ಕೃಷಿಯಲ್ಲಿ ಉಳುಮೆಯ ಅಗತ್ಯವಿಲ್ಲ. ಶುರುವಿಗೆ ಉಳುಮೆ ಮಾಡದೇ ಫಸಲು ಬಿತ್ತುವ ಕ್ರಿಯೆಗೆ ನೀವು ಒಗ್ಗದಿರಬಹುದು. ಆದರೆ ಕ್ರಮೇಣ ನಿಸರ್ಗ ಕೃಷಿಯಲ್ಲಿ ಮುಂದುವರಿದ ಹಾಗೆ ಉಳುಮೆ ಬೇಡದ ಬೇಸಾಯದೆಡೆಗೆ ನೀವು ಸಾಗಿರುತ್ತೀರಿ. ಬಿತ್ತಲಿರುವ ಬೀಜ, ನೆಡಲಿರುವ ಸಸಿಯ ಮೇಲೆ ಉಳುಮೆಯ ಬೇಕು-ಬೇಡಗಳು ನಿರ್ಧಾರವಾಗುತ್ತವೆ. ಉದಾಹರಣೆಗೆ ನೀವು ತೋಟ ಮಾಡಹೊರಡು ವಿರಾದರೆ- ಅಲ್ಲಿ ಅಡಿಕೆ, ಬಾಳೆ, ತೆಂಗು, ಸಪೋಟ, ಸೀಬೆ, ನುಗ್ಗೆ, ಪಪ್ಪಾಯಿ ಇತ್ಯಾದಿ ಬೆಳೆ ಬೆಳೆಯಬೇಕೆಂದಿದ್ದಲ್ಲಿ, ಶುರುವಿನಿಂದಲೇ ಅಲ್ಲಿಗೆ ಉಳುಮೆ ಬೇಕಾಗಿಲ್ಲ. ತೋಟ ಮಾಡುವ ಭೂಮಿ, ಕಾಡು ಭೂಮಿಯಾಗಿದ್ದರೆ ಇನ್ನೂ ಚೆನ್ನ. ನಿಮ್ಮ ಫಸಲಿಗೆ ನೆರವಾಗುವ ಗಿಡ-ಮರಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಬೇರುಸಹಿತ ಕಿತ್ತರೆ ಆಯಿತು. ಹಳ್ಳ ಕೊಳ್ಳಗಳಿದ್ದರೆ ಅವುಗಳನ್ನು ಮುಚ್ಚುವ ತ್ರಾಸ ಬೇಡ. ಭೂಮಿ ಮಟ್ಟವಾಗಿರಬೇಕು, ಸಮತಟ್ಟಾಗಿರಬೇಕು ಇತ್ಯಾದಿ ಪೂರ್ವಗ್ರಹಗಳಿಂದ ಆದಷ್ಟೂ ಬೇಗ ಹೊರಬನ್ನಿ. ನಿಸರ್ಗನಿರ್ಮಿತಿ ಹೇಗಿದೆಯೊ ಹಾಗೇ ಸ್ವೀಕರಿಸುವುದನ್ನು ಕಲಿಯಿರಿ. ಉಳುಮೆಯಿಂದಾಗುವ ಅನಾಹುತಗಳನ್ನು ಮುಂದೆ ತಿಳಿಯೋಣ.

ಪಾಳೇಕಾರ್ ಕೃಷಿ ಪದ್ಧತಿಗೆ ಜೀವಜಲಧಾರೆ

ರಾಸಾಯನಿಕ ಕೃಷಿಯಲ್ಲಿ ಬೀಜೋಪಚಾರಕ್ಕಾಗಿ BAVISTIN ವಿಷ ಬಳಸಲಾಗುತ್ತದೆ. ಗೆದ್ದಲು ನಾಶಕ್ಕಾಗಿ PHORATE ಬಳಸಲಾಗುತ್ತದೆ. PHORATE ಎಷ್ಟು ವಿಷಕಾರಿ ಗೊತ್ತೆ? ಅದನ್ನು ಸಿಂಪಡಿಸಿದ ಮರುದಿವಸ ಆ ಭಾಗದಲ್ಲಿರುವ ಹಾವು. ಇಲಿ, ಹಲ್ಲಿ, ಕಪ್ಪೆ, ಕಾಡುಬೆಕ್ಕು ಎಲ್ಲವೂ ನಿರ್ನಾಮ. ಇನ್ನು ಕಣ್ಣಿಗೆ ಕಾಣದ ಅನಂತಾನಂತಾನು ಕೋಟಿ ಬ್ಯಾಕ್ಟೀರಿಯಾಗಳ ಗತಿ? ಗೆದ್ದಲು, ಹಾವು, ಹಲ್ಲಿ, ಇಲಿ, ಕಪ್ಪೆ, ಕಾಡುಬೆಕ್ಕು ಮುಂತಾದವು ಬೇಸಾಯ ಭೂಮಿಯ ಅವಿಭಾಜ್ಯ ಅಂಗ. ಹಾಗೆ ನೋಡಿದರೆ ಗೆದ್ದಲು ನಿಜಕ್ಕೂ ರೈತನ ಮಿತ್ರ. ಕೃಷಿಯಲ್ಲಿ ಎರೆಹುಳುವಿಗಿರುವಷ್ಟೇ ಪ್ರಾಮುಖ್ಯತೆಯನ್ನು ಗೆದ್ದಲು ಹುಳುಗಳಿಗೂ ನಿಸರ್ಗ ಕಲ್ಪಿಸಿದೆ. ನಾವು ಈ PHORATE ಬಳಸಿ ನಿಸರ್ಗ ಸಂಬಂಧಗಳನ್ನು ಕಡಿದು ಛಿದ್ರಗೊಳಿಸಿದ್ದೇವೆ. ಅಂತರ್ಜಲಕ್ಕೂ ವಿಷ ಬೆರೆಸುತ್ತಾ ಸಾಗಿದ್ದೇವೆ. ಇಂದು ಇದರಿಂದಾಗುತ್ತಿರುವ  ದುಷ್ಪರಿಣಾಮಗಳನ್ನು ಕೂಡ ನಾವೇ  ಅನುಭವಿಸುತ್ತಿದ್ದೇವೆ.

ಇನ್ನು ಮುಂದೆ ಬೀಜ ಬಿತ್ತುವಾಗ ಈ ಪರಿಯ BAVISTIN, PHORATE ವಿಷಗಳನ್ನು ಮಣ್ಣು ಮತ್ತು ಬೀಜಗಳಿಗೆ ಬೆರೆಸಬೇಕಾಗಿಲ್ಲ. ಪಾಳೇಕರರ ಬೀಜಾಮೃತ ನಿಸರ್ಗಕ್ಕೆ ಯಾವುದೇ ಬಗೆಯಲ್ಲೂ ಹಾನಿಯುಂಟುಮಾಡದೆ ಬಿತ್ತಿದ ಬೀಜವನ್ನು ಸಂರಕ್ಷಿಸುತ್ತದೆ. ಬೀಜದೊಳಗೆ ದೋಷಗಳಿದ್ದರೂ ಸರಿಪಡಿಸುತ್ತದೆ. ಮೊಳಕೆಯ ಹಂತದಲ್ಲಿ, ಬೆಳವಣಿಗೆಯ ಹಂತದಲ್ಲಿ ಬೀಜಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಹೆಸರೇ ಸೂಚಿಸುವಂತೆ ಇದು ಮೊಳಕೆಯ ‘ಸಿರಿ’ ಬಯಸುವ ಬೀಜಗಳ ಪಾಲಿಗೆ ‘ಅಮೃತ’ ಹಾಗೆಯೇ ಮೊಳಕೆಯ ‘ಸಿರಿ’ಯೊಂದಿಗೆ ತನ್ನ ಬಾಳ ಸಿರಿ ಅರಸುವ ರೈತನ ಪಾಲಿಗಿದು ಭರವಸೆಯ ಆಶಾಕಿರಣ.

ಬೀಜಾಮೃತ ಸಿದ್ಧಪಡಿಸುವ ರೀತಿ

ಒಂದು ಎಕರೆ ಭೂಮಿಯಲ್ಲಿ ಬೀಜ ಬಿತ್ತಲು ಅಥವಾ ಸಸಿ ನೆಡಲು ಈ ಪ್ರಮಾಣ ಅನುಸರಿಸಿ. ಬೀಜ ಬಿತ್ತುವ ಹಿಂದಿನ ದಿವಸ ಸಂಜೆ ಆರು ಗಂಟೆಗೆ ಸುಮಾರು ೬೫ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಡ್ರಮ್ ರೆಡಿ ಮಾಡಿಕೊಳ್ಳಿ (ಸಿಮೆಂಟ್ ತೊಟ್ಟಿಯೂ ಆಗಬಹುದು). ಬೀಜಾಮೃತಕ್ಕಾಗಿ ೫೦ ಲೀಟರ್ ನೀರು, ಐದು ಕೆ.ಜಿ. ನಾಡ ಹಸುವಿನ ಸಗಣಿ, ಐದು ಲೀಟರ್ ಗಂಜಳ, ೫೦ ಗ್ರಾಂ ಸುಣ್ಣ ಇಷ್ಟು ಮಾತ್ರ ಸಾಕು.

ಬೀಜ ಬಿತ್ತುವ ಹಿಂದಿನ ದಿವಸ ಐದು ಕೆ.ಜಿ. ಸಗಣಿಯನ್ನು ತೆಳುವಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ ೫೦ ಲೀಟರ್ ನೀರಿರುವ ಡ್ರಮ್ಮಿನ ಒಳಕ್ಕೆ ಇಳಿಬಿಡಿ. ಅಥವಾ ತೂಗುಹಾಕಿ. ತೂಗು ಹಾಕಿರುವ ಕಟ್ಟು ತೊಟ್ಟಿಯ ನಡು ಮಧ್ಯ ನೀರಿನಲ್ಲಿ ಮುಳುಗಲಿ. ಆದರೆ ತಳಕ್ಕೆ ತಾಗದಂತೆ ಇರಲಿ. ಇದೇ ಸಮಯದಲ್ಲಿ ಒಂದು ಲೀಟರ್ ನೀರಿರುವ ಪಾತ್ರೆಯಲ್ಲಿ ೫೦ ಗ್ರಾಂ ಸುಣ್ಣ ನೆನೆಹಾಕಿ. ಬೀಜ ಬಿತ್ತುವ ದಿನ, ಬೆಳಗ್ಗಿನ ಆರು ಗಂಟೆಗೆ ನೀರಿನಲ್ಲಿ ಇಳಬಿಟ್ಟಿರುವ ಸಗಣಿ ಗಂಟನ್ನು ಚೆನ್ನಾಗಿ ಕುಲುಕಿಸಿ, ಆದರೆ ಗಂಟು ಬಿಚ್ಚಬೇಡಿ. ಐದಾರು ಬಾರಿ ಸಗಣಿ ಗಂಟನ್ನು ಮೇಲಿತ್ತಿ ಹಿಂಡಿ. ನಂತರ ಸುಣ್ಣದ ತಿಳಿಯನ್ನು ಸಗಣಿ ತಿಳಿಯೊಂದಿಗೆ ಬೆರೆಸಿ. ಇದಾದ ನಂತರ ಐದು ಲೀಟರ್ ಗಂಜಳ ಮಿಕ್ಸ್ ಮಾಡಿ. ಇದೀಗ ಬೀಜಾಮೃತ ರೆಡಿ! ರಾಗಿ, ತೊಗರಿ, ಅಲಸಂದೆ, ಅವರೆ, ಹೆಸರು, ಉದ್ದು, ಜೋಳ, ಭತ್ತ, ಗೋಧಿ ಇತ್ಯಾದಿ ಧಾನ್ಯ ಬಿತ್ತುವವರು ಬೀಜಾಮೃತಕ್ಕಾಗಿ ೫೦ ಲೀಟರ್ ನೀರು ಬಳಸಬೇಕಾಗಿಲ್ಲ. ೨೦ ಲೀಟರ್ ನೀರು ಸಾಕು. ಬಾಳೆ, ಕಬ್ಬು, ಅಡಿಕೆ, ತೆಂಗು, ಗೆಡ್ಡೆ-ಗೆಣಸು, ಭತ್ತ, ರಾಗಿ ಸೇರಿದಂತೆ ಇತರೆ ಗಿಡ, ಪೈರು ನೆಡಲು ೫೦ ಲೀಟರ್ ನೀರು ಬೇಕಾಗುತ್ತದೆ.

ಬೀಜಗಳನ್ನು ಒಂದು ನಿಮಿಷ ಮಾತ್ರ ಬೀಜಾಮೃತದಲ್ಲಿ ಮುಳುಗಿಸಿದರೆ ಸಕು. ಬೀಜಗಳು ಬೀಜಾಮೃತದಲ್ಲಿ ಸೋರಿ ಹೋಗದಿರಲು ಸೂಕ್ಷ್ಮ ರಂಧ್ರಗಳ ವಂದರಿ ಅಥವಾ ಸಣ್ಣ ಕಿಂಡಿಗಳಿರುವ ಬಿದಿರು ಬುಟ್ಟಿ ಬಳಸಿ. ಬೀಜೋಪ ಚಾರವಾದ ಬಳಿಕ ತೇವ ಆರುವವರೆಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ ನೆರಳಿನಲ್ಲಿಡಿ, ತೇವ ಆರಿದ ಬಳಿಕ ಬೀಜ ಬಿತ್ತಿ. ಸಸಿಗಳಾದರೆ ಅವುಗಳ ಬೇರುಗಳನ್ನು ಮಾತ್ರ ಬೀಜಾ ಮೃತದಲ್ಲಿ ಅದ್ದಿರಿ. ಕಬ್ಬು, ಗೆಡ್ಡೆ, ಗೆಣಸುಗಳಾದರೆ ಪೂರ್ಣ ಮುಳುಗಿಸಿ. ಬಾಳೆ, ತೆಂಗು, ಅಡಿಕೆಗಳಾದರೆ ಬುಡಗಳಿಗೆ ಮಾತ್ರ ಬೀಜೋಪಚಾರ ಮಾಡಿ. ಯಾವುದೇ ಸಸಿಗಳ, ಗೆಡ್ಡೆಗಳ, ಬೀಜಗಳ ಬೀಜೋಪಚಾರದ ಅವಧಿ ಒಂದು ನಿಮಿಷ ಮಾತ್ರ.

ಬೀಜಾಮೃತಕ್ಕಾಗಿ ಬಳಸುವ ದೇಸಿ ಆಕಳ ಸಗಣಿ, ಗಂಜಳ ಮತ್ತು ಸುಣ್ಣಗಳ ಪಾತ್ರ ಬಹಳ ಮಹತ್ವದ್ದು. ಸುಣ್ಣ (ಕಚ್ಚಾ ಸುಣ್ಣ) ಬೀಜಾಮೃತದಲ್ಲಿನ ರಸಸಾರ(ಪಿಎಚ್‌ವ್ಯಾಲ್ಯೂ)ದ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಸಗಣಿ ಮತ್ತು ಗಂಜಳಗಳು ಸವೋತ್ಕೃಷ್ಟ ಬಯೋಡೈನಾಮಿಕ್ ಗುಣಗಳನ್ನು ಹೊಂದಿವೆ. ವಿಶೇಷವಾಗಿ ನಮ್ಮ ದೇಸಿ ಆಕಳುಗಳ ಗಂಜಳಕ್ಕೆ ರೋಗ ನಿವಾರಕ ಶಕ್ತಿ ಇದೆ. (ದೇಸಿ ಹಸುವಿನ ಗಂಜಳ ಮತ್ತು ತುಪ್ಪ ಹಳೆಯದಾದಷ್ಟು ಹೆಚ್ಚು ಉಪಯುಕ್ತ. ಇವೆರಡಕ್ಕೂ ತೀವ್ರ ತರದ ಔಷಧ ಗುಣಗಳಿವೆ.) ಬೀಜಾಮೃತ ಬೀಜದಲ್ಲಿರುವ ಜರ್ಮಿನೇಟಿಂಗ್ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಬೀಜಗಳ ಮೊಳಕೆಯ ಹಂತದಲ್ಲಿ ‘ವಿಸ್ಮಯ’ ಅನ್ನಿಸುವಷ್ಟರ ಮಟ್ಟಿಗೆ ಬೀಜಾಮೃತ ತನ್ನ ಕರ್ತವ್ಯಗಳನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸುತ್ತದೆ. ಬೀಜ ಭೂಮಿಗೆ ಬಿದ್ದಕೂಡಲೇ active ಆಗುವ ಸೋಡೋಮೊನಸಸ್ ಪ್ರಿಜೂರಿಯಂ ವೈರಸ್‌ಗಳನ್ನು ಬೀಜಾಮೃತದಲ್ಲಿರುವ ಟ್ರೈಕೋಡರ್ಮ ಬ್ಯಾಕ್ಟೀರಿಯಾಗಳು, ಪೆನಿಸ್‌ಸೀಸನ್ ಫಂಗಸ್‌ಗಳು ವ್ಯವಸ್ಥಿತವಾಗಿ ಹತ್ತಿಕ್ಕುತ್ತವೆ. ಜೊತೆಗೆ ಬೀಜ ಬೇರುಬಿಡುವ ಮುಂಚೆಯೇ ಅದರ ಭಾವೀ ಬೇರುಗಳ ವಲಯವನ್ನು ಬೀಜಾಮೃತದಲ್ಲಿರುವ ಗ್ರೋತ್ (GROWTH) ಹಾರ್ಮೋನ್‌ಗಳು ಆವರಿಸಿಕೊಂಡಿರುತ್ತವೆ. ಒಟ್ಟಾರೆ ಇಡೀ ಬೀಜಾಮೃತದಲ್ಲಿರುವ ಜೀವಾಣುಗಳು ಮಣ್ಣಿಗೆ ಬಿದ್ದ ಬೀಜದ ಯಾ ಗಿಡದ ರಕ್ಷಣೆಗಾಗಿ ಭೂಸೇನೆ ಮಾದರಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ.

ಬೀಜಾಮೃತದಿಂದ ಬೀಜೋಪಚಾರ ಮಾಡುತ್ತಿರುವುದು

ಬೀಜ ಮತ್ತು ಗಿಡದ ಬೇರುಗಳ ಉಪಚಾರದ ತರುವಾಯ ಉಳಿದ ಬೀಜಾಮೃತವನ್ನು ನೀರಿನೊಂದಿಗೆ ಬೆರೆಸಿ ಬಿತ್ತನೆಯ ಭೂಮಿಯಲ್ಲಿ ಅಲ್ಲಲ್ಲಿ ಚೆಲ್ಲಿಬಿಡಿ. ಅದನ್ನು ಸಂಗ್ರಹಿಸಿಡಬೇಡಿ ಅಥವಾ ವ್ಯರ್ಥ ಮಾಡಬೇಡಿ. ಪ್ರತಿಸಾರಿ ಬೀಜ ಬಿತ್ತುವಾಗಲೂ ಹೊಸದಾಗಿಯೇ ಬೀಜಾಮೃತ ಸಿದ್ಧಪಡಿಸಿರಿ. ಇಲ್ಲಿ ೨೫೦ಗ್ರಾಂ ಸುಣ್ಣ ಹೊರತುಪಡಿಸಿದರೆ ಬೇರೆ ಖರ್ಚಿನ ಮಾತೇ ಇಲ್ಲ. ಇನ್ನುಮುಂದೆ   BAVISTIN ಮತ್ತು PHORATE ವಿಷಗಳಿಗೆ ನಮ್ಮ ಈ ಬಗೆಯ ಬೇಸಾಯ ಕ್ರಮದಲ್ಲಿ ಜಾಗವಿಲ್ಲ ತಾನೆ?

ಇದೀಗ ನಿಸರ್ಗ ಕೃಷಿ ರಥದ ಎರಡನೇ ‘ಗಾಲಿ’ಯತ್ತ ಸಾಗೋಣ. ಅದಕ್ಕೂ ಮುಂಚೆ ಈ ನಿಸರ್ಗ ಕೃಷಿಗೆ ನಮ್ಮ ನಾಡ ಹಸುಗಳ ಸಗಣಿ ಮತ್ತು ಗಂಜಳ ಮಾತ್ರವೇ ಬೇಕೆ? ಬೇರೆ ಹಸುಗಳ ಸಗಣಿ ಮತ್ತು ಗಂಜಳ ಬೇಡವೆ? ಈ ಕುರಿತು ಪರಿಶೀಲಿಸೋಣ ಸುಭಾಷ್ ಪಾಳೇಕರರು ನಮ್ಮ ನಡುವಿನ ಎಲ್ಲ ಪ್ರಾಣಿಗಳ ಮಲ, ಮೂತ್ರಗಳನ್ನೂ ಪರೀಕ್ಷೆ ಮಾಡಿ ನೋಡಿದ್ದಾರೆ. ಮಾನವನ ಮಲ ಮೂತ್ರಗಳನ್ನೂ ಕೂಡ!

ಸುಭಾಷ್ ಪಾಳೇಕರರ ಪ್ರಕಾರ ಜೆರ್ಸಿ, ಹೋಲ್‌ಸ್ಟಿನ್‌ಗಳು ಹಸುಗಳೇ ಅಲ್ಲ. ಅವು ಹಸುಗಳ ತರ ಕಾಣುವ ಪ್ರಾಣಿಗಳು. ಜೆರ್ಸಿ, ಹೋಲ್‌ಸ್ಟಿನ್‌ಗಳು ಹಸು-ಹಂದಿಗಳ ಸಮ್ಮಿಶ್ರ ರೂಪ. ಹೀಗಾಗಿ ಅವನ್ನು Cow Pig ಅಂತಲೇ ಪಾಳೇಕರರು ಕರೆಯುವುದು. ಈ ಹಸುಗಳ ಹಾಲು ಹಾಲಲ್ಲ. ಹಾಲಿನ ತರದ ದ್ರವ ಅಷ್ಟೆ. ಅವುಗಳ ಸಗಣಿ, ಗಂಜಳಗಳಲ್ಲಿ ರಾಕ್ಷಸೀ ಜೀವಾಣುಗಳಿವೆ. ಅವುಗಳ ಗಂಜಳ ರೋಗ ನಿವಾರಕ ಅಲ್ಲ; ಬದಲಾಗಿ ರೋಗವರ್ಧಕ. ಈ ಜಗತ್ತಿನ ಯಾರೇ ಆಗಿರಲಿ ಜೆರ್ಸಿ, ಹೋಲ್‌ಸ್ಟಿನ್ ಹಸುಗಳ ಗಂಜಳ ‘ರೋಗವರ್ಧಕ ಅಲ್ಲ; ರೋಗ ನಿವಾರಕ’ ಅಂತ ಸಾಭೀತುಪಡಿಸುವುದಾದರೆ ಅಂಥವರಿಗಾಗಿ ಹತ್ತು ಲಕ್ಷ ರೂ.ಗಳ ಬಹುಮಾನವನ್ನು ಕೂಡ ಪಾಳೇಕರರು ಘೋಷಿಸಿದ್ದಾರೆ.

ನಮ್ಮ ನಾಡತಳಿಯ ಹಸುಗಳು ಜೆಬು ಕುಲಕ್ಕೆ ಸೇರಿದವು. ಈ ಜೆಬು ಕುಲದ ಹಸುಗಳ ಆವಾಸ ಭಾರತ, ಮಧ್ಯ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾಗಳಲ್ಲಿ ಮಾತ್ರ. ಯೂರೋಪ್‌ನಲ್ಲಿ ಈ ಹಸುಗಳಿಲ್ಲ. ನಮ್ಮ ನಾಡ ಹಸುಗಳ ಶರೀರ ರಚನಾಶಾಸ್ತ್ರ ವಿಶಿಷ್ಟ ಬಗೆಯಿಂದ ಕೂಡಿದೆ. ಇವುಗಳಲ್ಲಿ ನಿರ್ಧಿಷ್ಟವಾದ ೨೧ ಗುಣ ಲಕ್ಷಣಗಳಿವೆ.

ಅಧಿಕ ಹಾಲು ಉತ್ಪಾದನೆಯ ಹೆಸರಲ್ಲಿ ಭಾರತದಂಥ ಪಶು ಸಂಪತ್ತಿನ ದೇಶದ ಮೇಲೆ ಜೆರ್ಸಿ, ಹೋಲ್‌ಸ್ಟಿನ್ ಸೇರಿದಂತೆ ಇತರ ರಾಕ್ಷಸೀ ಜೀವಾಣುಗಳ ಮಿಶ್ರ ತಳಿ ಹಸುಗಳನ್ನು ಹೇರಲಾಗಿದೆ. ಭಾರತದ ವ್ಯವಸಾಯ ಸಂಸ್ಕೃತಿಯ ನಾಶದಲ್ಲಿ ಈ ಹಸುಗಳ ಸಗಣಿ, ಗಂಜಳಗಳ ಪಾತ್ರವೂ ಅಡಿಗದೆ. ನಿಧಾನ ವಿಷ ಹೊಂದಿರುವ ಇವುಗಳ ಹಾಲು ನಾನಾ ರೋಗಗಳ ಆಗರ.

ಯಾಕೆ, ಅಧಿಕ ಹಾಲು ಇಳುವರಿಯ ಹಸುಗಳ ನಮ್ಮಲ್ಲಿಲ್ಲವೆ? ನಮ್ಮ ಸಿಂಧಿ ಹಸು ೪೦ ಲೀಟರ್‌ವರೆಗೆ ಹಾಲು ಕೊಡುವುದಿಲ್ಲವೆ? ಇಂದೂರ್, ಸಿಂಧಿ, ಸಾಹಿವಾಲ್ ಹಸುಗಳ ಇವತ್ತಿನ ಸರಾಸರಿ ಹಾಲಿನ ಇಳುವರಿ ದಿನಕ್ಕೆ ೨೫ ಲೀಟರ್! ದೇವುಣಿ, ಗೀರ್, ಲಾಲ್‌ಕಂದಾರ್, ಥಾಪರ್, ಕೃಷ್ಣಾವಾಲಿ ಹಸುಗಳು ದಿನಕ್ಕೆ ಸರಾಸರಿ ಹತ್ತು ಲೀಟರ್ ಹಾಲು ಕರೆಯುತ್ತವೆ. ಸದ್ಯದ ಮುಂಬೈ ನಗರದಲ್ಲಿ ನಾಡಹಸುಗಳ ಒಂದು ಲೀಟರ್ ಹಾಲಿಗೆ ೨೦ ರೂ. ಧಾರಣೆ ಇದೆ. ಜೆಬು ಕುಲದ ನಮ್ಮ ನಾಡಹಸುಗಳು ನೋಡಲು ಸುಂದರವಾಗಿವೆ. ಆರ್ಥಿಕವಾಗಿಯೂ ಲಾಭ ತರುತ್ತವೆ. ಅವುಗಳ ಸಗಣಿ ಮತ್ತು ಗಂಜಳ ರೋಗ ನಿವಾರಕ. ಅವುಗಳಿದ್ದೆಡೆ ಕೃಷಿ ಭೂಮಿಯೂ ಜೀವಂತಿಕೆಯಿಂದ ನಳನಳಿಸುತ್ತದೆ. ವಿಶೇಷವಾಗಿ ಅವುಗಳು ಹೆಚ್ಚಿನ ಮುತುವರ್ಜಿ, ಆರೈಕೆಗಳನ್ನು ಬೇಡುವುದಿಲ್ಲ. ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಕೂಡ ಅಪಾರ ಮಟ್ಟದಲ್ಲಿದೆ. ನಮ್ಮ ಈ ಹಸುಗಳ ಎದೆ-ಭುಜಗಳು ವಿಸ್ತಾರವಾಗಿದ್ದು, ಸೊಂಟಕ್ಕೆ ಸಿಂಹ ಕಟಿಯ ವಿನ್ಯಾಸವಿದ್ದರೆ; ಜೆರ್ಸಿಗಳ ಎದೆ-ಭುಜಗಳು ಕುಗ್ಗಿ, ಅವುಗಳ ಹಿಂಭಾಗ ಹಿಮಾಲಯದ ಏರು! ಈ Cow pigಗಳು ದಿನಕ್ಕೆ ಸರಾಸರಿ ೧೫ ಲೀಟರ್ ಹಾಲು ಕರೆಯುತ್ತವೆ. ಆ ಹಾಲಿನ ಕಿಮ್ಮತ್ತು ಲೀಟರ್‌ಗೆ ಎಂಟು ರೂ. ಮಾತ್ರ. ಇಷ್ಟಿದ್ದಲ್ಲಿ ಇಂದೂರ್, ಸಿಂಧಿ, ಸೈವಾಲ್‌ಗಳಿಗಿಂತ ಹೆಚ್ಚಿನ ರಕ್ಷಣೆಯನ್ನು ಈ ಜೆರ್ಸಿ, ಹೋಲ್‌ಸ್ಟಿನ್‌ಗಳಿಗೆ ದಯಪಾಲಿಸುತ್ತ ಬಂದಿದೆ ನಮ್ಮ Animal Husbandry ವ್ಯವಸ್ಥೆ!

ನಮ್ಮ ನಾಡತಳಿಯ ಹಸುಗಳು ಆಯಾಯ ಪ್ರದೇಶಗಳ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿವೆ. ನಮ್ಮ ಗೀರ್ ಆಕಳು, ದೇವುಣಿ, ಲಾಲ್‌ಕಂದಾರ್, ಕೃಷ್ಣಾವ್ಯಾಲಿ, ಥಾಪರ್, ಕಿಲಾರ್, ಡಾಂಗಿ, ಗೌರವ್, ನಿಮ್ಮಾಡಿ, ಅಮೃತ್ ಮಹಲ್, ಮಲ್ನಾಡ್ ಗಿಡ್ಡ ಮುಂತಾದವುಗಳನ್ನು ನೋಡಿದರೆ ಈ ವೈಶಿಷ್ಟ್ಯ ನಿಮಗೆ ಅರಿವಾಗಬಹುದು. ಇಷ್ಟೆಲ್ಲದರ ನಡುವೆ ನಮ್ಮ ನಾಡಹಸುವಿನ ಒಂದು ಗ್ರಾಂ ಸಗಣಿಯಲ್ಲಿ ೩೦೦ ರಿಂದ ೫೦೦ ಕೋಟಿಯಷ್ಟು ಪರಿಣಾಮಕಾರೀ ಗುಣದ ಮೈಕ್ರೋಬ್‌ಗಳಿರುತ್ತವೆ. ಅದೇ Cow Pig ಜಾತಿಯ ಹಸುಗಳ ಒಂದು ಗ್ರಾಂ ಸಗಣಿಯಲ್ಲಿ ೫೦ರಿಂದ ೭೦ ಲಕ್ಷ ಮೈಕ್ರೋಬ್‌ಗಳಿರುತ್ತವೆ. ಆದರೆ ಅವುಗಳೆಲ್ಲವೂ ಹಾನಿಕಾರಕ ಮೈಕ್ರೋಬ್‌ಗಳು. ಈ ಹಿನ್ನೆಲೆಯಲ್ಲೇ ಸುಭಾಷ್ ಪಾಳೇಕರ್ ನಮ್ಮ ಬೇಸಾಯ ಮತ್ತು ಹೈನುಗಾರಿಕೆ ಸಂಬಂಧದಲ್ಲಿ ಜೆರ್ಸಿ, ಹೋಲ್‌ಸ್ಟಿನ್ ಹಾಗೂ ಇತರ ಮಿಶ್ರ ತಳಿ ಹಸುಗಳನ್ನು ದೂರವಿಡುವಂತೆ ಆಗ್ರಹಿಸುತ್ತಾರೆ.

ಇದೀಗ ನಮ್ಮ ನೈಸರ್ಗಿಕ ಕೃಷಿಗೆ ನೆರವಾಗುವ ಹಸುಗಳ ಕುರಿತು ಗಮನ ಹರಿಸೋಣ. ಈ ಕೃಷಿಗೆ ಹಸು ಮಾತ್ರವೇ ಆಗಬೇಕೆಂದೇನೂ ಇಲ್ಲ. ನಾಡತಳಿಯ ಎತ್ತು, ಎಮ್ಮೆಗಳು ಕೂಡ ಆಗಬಹುದು. ನಿಸರ್ಗ ಕೃಷಿಗೆ ಆಡು, ಕುರಿ, ಕೋಳಿಗಳನ್ನು ಎಳೆತರಬೇಡಿ. ಯಾಕೆಂದರೆ ಅವುಗಳಿಂದ ಆಗುವ ಲಾಭಕ್ಕಿಂತ ಹೆಚ್ಚಿನ ಹಾನಿಯನ್ನು ನಾವು ಭರಿಸಬೇಕಾಗುತ್ತದೆ. ವರ್ಮಿಕಾಂಪೋಸ್ಟ್ ಆಗಲಿ ಇತರ ಯಾವುದೇ ಕಾಂಪೋಸ್ಟ್ ಗೊಬ್ಬರಗಳಾಗಿರಲಿ ನಿಸರ್ಗ ಕೃಷಿಯಲ್ಲಿ ವರ್ಜ್ಯ. ಹೊರಗಿನಿಂದ ಏನನ್ನೂ ತಾರದಿರುವುದು, ಬರಿಗೈಯಲ್ಲೇ ಜೂಜಾಡಿ ಬದುಕು ಕಟ್ಟಿಕೊಳ್ಳುವುದು ಈ ಕೃಷಿಯ ಮೊದಲ ನಿಯಮ.

ಗೋವಿನಹಾಡು (ಪದ್ಯದಆಯ್ದಭಾಗ)

ಪುಣ್ಯಕೋಟಿಯೆ ನೀನು ಬಾರೆ
ಪುಣ್ಯವಾಹಿನಿ ನೀನು ಬಾರೆ
ಪೂರ್ಣಗುಣ ಸಂಪನ್ನೆ ಬಾರೆಂದು
ನಾಣ್ಯದಿಂ ಗೊಲ್ಲ ಕರೆದನು.
ಜಾನಪದ

ನಮ್ಮ ನಾಡಹಸು HF ತಳಿಗಳೊಂದಿಗೆ ಮಿಶ್ರವಾಗಿರಕೂಡದು. ಪಾಳೇಕರರು ಎಲ್ಲ ಬಗೆಯ ಹಸು, ಎಮ್ಮೆ, ಎತ್ತುಗಳ ಮೇಲೆ, ಅವುಗಳ ಸಗಣಿ, ಗಂಜಳಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಅನೇಕಾನೇಕ ವೈಜ್ಞಾನಿಕ ಪರೀಕ್ಷೆಗಳ ಮೂಲಕವೇ ನಾಡಹಸುಗಳಲ್ಲಿರುವ ವಿಶೇಷ ಬಗೆಯ ಗುಣಧರ್ಮಗಳನ್ನೂ ಅರಿತುಕೊಂಡಿದ್ದಾರೆ. ಅವರು ಗುರುತಿಸಿರುವ ಈ ಲಕ್ಷಣಗಳುಳ್ಳ ಹಸುಗಳು ನಿಸರ್ಗ ಕೃಷಿಗೆ ಸಹಕಾರಿ. ಕಣ್ಣುಗಳು ಸರಳವಾಗಿರಬೇಕು, ಶರೀರ ದಪ್ಪವಿರಬಾರದು, ಬಾಲ ಉದ್ದವಿರಬಾರದು, ಹೆಚ್ಚು ಹಾಲು ಕೊಡಬಾರದು; ಕಪ್ಪು, ಬಿಳಿ, ಕಂದು, ಕೆಂಪು ಬಣ್ಣದ ಹಸುಗಳಿಗೆ ಆದ್ಯತೆ ಇರಲಿ. ಈ ಪೈಕಿ ಕಪ್ಪು ಹಸುವಿನ ಸಗಣಿ-ಗಂಜಳ ಉಳಿದೆಲ್ಲ ಹಸುಗಳ ಸಗಣಿ-ಗಂಜಳಗಳಿಗಿಂತ ಸರ್ವೋತ್ಕೃಷ್ಟ. ಈ ಹಸುಗಳ ನಂತರದ ಸ್ಥಾನ ಎತ್ತು, ಎಮ್ಮೆಗಳಿಗೆ ಮೀಸಲು.

‘ಹಸುವನ್ನು ಕಾಮಧೇನು ಎನ್ನುತ್ತಾರೆ. ಹಸುಗಳ ಪ್ರತಿ ರೋಮ, ರೋಮಗಳಲ್ಲೂ ದೇವಾನುದೇವತೆಗಳಿರುವರೆಂದು ಬಿಂಬಿಸಲಾಗುತ್ತದೆ. ಇರಲಿ, ಹಸುಗಳ ರೋಮಗಳಲ್ಲಿ ದೇವಾನುದೇವತೆಗಳಿಲ್ಲದಿರಬಹುದು. ಆದರೆ ಅವುಗಳ ಕರುಳಲ್ಲಿ ಪ್ರತಿ ಕ್ಷಣ ಕ್ಷಣವೂ ಹುಟ್ಟುವ ಬ್ಯಾಕ್ಟೀರಿಯಾಗಳಿಗೆ ಇಡೀ ಭೂಲೋಕವನ್ನೇ ಸ್ವರ್ಗ ಮಾಡುವ ಸಾಮರ್ಥ್ಯವಿದೆ. ಹಸುವಿನ ಸಗಣಿಗಿರುವ ಈ ಗುಣಧರ್ಮವನ್ನೂ ಮೊದಲ ಬಾರಿಗೆ ಗುರುತಿಸಿದವನು ನಮ್ಮ ಶ್ರೀಕೃಷ್ಣ. ಆನಂತರವಷ್ಟೇ ಅದನ್ನು ಬೇಸಾಯ ಭೂಮಿಗೆ ಬಳಸುವ ಕಲೆ ಆರಂಭವಾಯಿತು’ ಎನ್ನುತ್ತಾರೆ ಪಾಳೇಕರ್.

ಜೀವಾಮೃತ

ಸಗಣಿ ಗೊಬ್ಬರವಲ್ಲ; ಬೆಳೆಗಳಿಗೆ ಅನ್ನವೂ ಅಲ್ಲ. ಇದನ್ನು ಅರಿಯದ ನಮ್ಮ ಕೃಷಿ ವಿಜ್ಞಾನಿಗಳು ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ೨೫ ಗಾಡಿ ಕೊಟ್ಟಿಗೆ ಗೊಬ್ಬರ, ಕೆರೆಗೋಡು, ಜೊತೆಗೆ ೧೭೫ ಕೆ.ಜಿ. ಓPಏ(ನೈಟ್ರೋಜನ್, ಪೊಟಾಷ್ ಮತ್ತು ಫಾಸ್ಫರಸ್) ಕೊಡಲೇಬೇಕೆಂದು ವಾದಿಸುತ್ತಾರೆ. ಇವುಗಳ ಜೊತೆಗೆ ಮೈಕ್ರೋ ನ್ಯೂಟಿಯೆಂಟ್ಸ್ ಬೇರೆ? ವಾಸ್ತವವಾಗಿ ಸಗಣಿ ಗೊಬ್ಬರ ಅಲ್ಲವೇ ಅಲ್ಲ. ಬದಲಾಗಿ ಅದೊಂದು ಜೀವಾಣುಗಳ ಸಮುಚ್ಛಯ. ಸಗಣಿಯಲ್ಲಿರುವ ನಾನಾಬಗೆಯ ಜೀವಾಣುಗಳು ಮಣ್ಣಿನಲ್ಲಿರುವ ಪೋಷಕಾಂಶ ಮತ್ತು ಗಿಡದ ಬೇರುಗಳ ನಡುವೆ ವಾಹಕಪಾತ್ರವನ್ನು ನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ಎಷ್ಟು ಸಂಖ್ಯೆಯಲ್ಲಿ ಜೀವಾಣುಗಳ ಅಗತ್ಯವಿದೆ ಅನ್ನುವದು ಇಲ್ಲಿ ಮುಖ್ಯವೇ ಹೊರತು; ಗಾಡಿಗಟ್ಟಲೆ ಕೊಟ್ಟಿಗೆ ಗೊಬ್ಬರ ಹೂಡಿ, ಟನ್‌ಗಟ್ಟಲೆ ಕೆರೆಗೋಡು ಸುರಿದು, ಮೂಟೆಗಟ್ಟಲೆ NPK ಉಣಬಡಿಸುವುದಲ್ಲ. ಹಾಗೆ ಉಣಬಡಿಸಿ ಮೇಲಿನಿಂದ ಎಂಡೋಸಲ್ಫಾನ್ ಸುರಿದರೆ, ಕೊಟ್ಟೆಗೆಗೊಬ್ಬರ, ಕೆರೆಗೋಡುಗಳಲ್ಲಿರುವ ಜೀವಾಣುಗಳನ್ನೆಲ್ಲ ಸಾಮೂಹಿಕವಾಗಿ ಹತ್ಯೆಗೈದಂತೆಯೇ ಸರಿ.

ಭೂಮಿಗೆ ಅಗತ್ಯವಿರುವ ಜೀವಾಣುಗಳನ್ನುನುಸರಿಸಿ, ನಾವು ಸಗಣಿಯ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಎಕರೆಯಲ್ಲಿ ಬೆಳೆ ಬೆಳೆಯಲು (ಅದು ಯಾವುದೇ ಬಗೆಯ ಮಣ್ಣಾಗಿರಲಿ; ಯಾವುದೇ ವಿಧದ ಬೆಳೆಯಾಗಿರಲಿ) ತಿಂಗಳಿಗೆ ೧೦ ಕೆ.ಜಿ. ಸಗಣಿ ಮಾತ್ರ ಸಾಕು. ಒಂದು ನಾಡಹಸು ಒಂದು ದಿವಸಕ್ಕೆ ೧೪ರಿಂದ ೧೬ ಕೆ.ಜಿ. ಸಗಣಿ ನೀಡುತ್ತದೆ. ಹಾಗೆಯೇ ೧೩ರಿಂದ ೧೫ ಲೀಟರ್ ಗಂಜಳ ನೀಡುತ್ತದೆ. ನಾವು ದಿನಕ್ಕೆ ಸರಾಸರಿ ಹತ್ತು ಕೆ.ಜಿ. ಸಗಣಿ, ಹತ್ತು ಲೀಟರ್ ಗಂಜಳ ಸಂಗ್ರಹಿಸುತ್ತೀವಿ ಅಂತಾದರೆ – ಒಂದು ನಾಡಹಸುವಿನ ಸಗಣಿ-ಗಂಜಳಗಳಿಂದಲೇ ೩೦ ಎಕರೆ ಭೂಮಿಯಲ್ಲಿ ಬೇಸಾಯ ಮಾಡಬಹುದು.

ಸಗಣಿಯಲ್ಲಿ ಬೆಳೆಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡಲು ನೆರವಾಗುವ ಪಿಎಸ್‌ಬಿ, ಬ್ಯಾಸಿಲಸ್ ಸಿಲಿಕಸ್, ಥಿಯೋಆಕ್ಸಿಡೆಂಟ್ಸ್, ಮೈಕೋರೈಜಾ ಸೇರಿದಂತೆ ಇನ್ನಿತರ ಅಸಂಖ್ಯಾತ ಜೀವಾಣುಗಳಿರುತ್ತವೆ. ನಾವು ನಿರ್ದಿಷ್ಟಪಡಿಸಿಕೊಂಡಿರುವ ಸಗಣಿಯಲ್ಲೇ ಮತ್ತಷ್ಟು, ಮತ್ತಷ್ಟು ಸಂಖ್ಯೆಗಳಲ್ಲಿ ಜೀವಾಣುಗಳನ್ನು ವೃದ್ಧಿಪಡಿಸಿಕೊಳ್ಳಲು ಪಾಳೇಕರರ ಜೀವಾಮೃತ ವಿಧಾನ ನೆರವಾಗುತ್ತದೆ. ಬೇಸಾಯಭೂಮಿಯಲ್ಲಿ ಈ ಜೀವಾಮೃತ ಅಪೂರ್ವ ರೀತಿಯ ಸಂಚಲನಗಳನ್ನು ಉಂಟುಮಾಡುತ್ತದೆ. ಇಡೀ ಪ್ರಪಂಚದ ಕೃಷಿಯ ದಿಕ್ಕನ್ನೇ ಬದಲಿಸುತ್ತದೆ. ಜೊತೆಗೆ ಜಗತ್ತಿನೆಲ್ಲೆಡೆಯ ಫರ್ಟಿಲೈಜರ್ ಕಾರ್ಖಾನೆಗಳಿಗೆ ಶಾಶ್ವತವಾಗಿ ಬೀಗ ಮುದ್ರೆ ಜಡಿಸುತ್ತದೆ.