ಜೀವಾಮೃತ ಸಿದ್ಧಪಡಿಸುವ ವಿಧಾನ

೧೦ ಕೆ.ಜಿ. ಸಗಣಿ
೫ ಲೀಟರ್‌ನಿಂದ ೧೦ ಲೀಟರ್‌ವರೆಗೆ ಗಂಜಳ
೨ ಕೆ.ಜಿ. ಕಪ್ಪು ಬೆಲ್ಲ ಅಥವಾ ೫ ಲೀಟರ್ ಕಬ್ಬಿನ ಹಾಲು
೨ ಕೆ.ಜಿ. ಕಡ್ಲೆಹಿಟ್ಟು ಅಥವಾ ಯಾವುದೇ ದ್ವಿದಳ ಧಾನ್ಯಗಳ ಹಿಟ್ಟು
ಒಂದು ಹಿಡಿ ಮಣ್ಣು (ಹಲ, ಗದ್ದೆ ಅಥವಾ ತೋಟದ ಬದುವಿನ ಮಣ್ಣು)
ಜೊತೆಗೆ ೨೦೦ ಲೀಟರ್ ನೀರು.

ಇವಿಷ್ಟೂ ಕೂಡಿದರೆ ಜೀವಾಮೃತ. ಹತ್ತು ಕೆ.ಜಿ. ಸಗಣಿಯಲ್ಲಿ ೩೦ ಲಕ್ಷ ಪಿಎಸ್‌ಬಿ (ಪಾಸ್ಫೇಟ್ ಸಾಲ್ಯು ಬಿಲೈಸಿಂಗ್ ಬ್ಯಾಕ್ಟೀರಿಯಾ) ಜೀವಾಣುಗಳಿರುತ್ತವೆ. ಜೀವಾಮೃತದಲ್ಲಿ ಇವು ಪ್ರತಿ ೨೦ ನಿಮಿಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ೩೦ ರಿಂದ ೬೦ ಲಕ್ಷ, ೬೦ರಿಂದ ಒಂದು ಕೋಟಿ ೨೦ ಲಕ್ಷ … ಹೀಗೆ ವೃದ್ಧಿಯಾಗುತ್ತಾ ಆಗುತ್ತಾ ಏಳು ದಿವಸಗಳೊಳಗೆ ಅಗಣಿತ, ಪಿಎಸ್‌ಬಿ ಜೀವಾಣುಗಳಂತೆಯೇ ಬ್ಯಾಸಿಲಸ್ ಸಿಲಿಕಸ್, ಥಿಯೋ ಆಕ್ಸಿಡೆಂಟ್ಸ್, ಮೈಕೋ ರೈಜಾ ಬ್ಯಾಕ್ಟೀರಿಯಾಗಳು ಕೂಡ ಅಗಣಿತ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಇಷ್ಟು ಪ್ರಮಾಣದ ಈ ಯಾವ ಬ್ಯಾಕ್ಟೀರಿಯಾಗಳು ಕೂಡ ಬರಿಗಣ್ಣಿಗೆ ಕಾಣುವುದಿಲ್ಲ.

ಜೀವಮೃತ ಸಿದ್ಧಪಡಿಸಲು ೨೫೦ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್ ಸಿದ್ಧಮಾಡಿಕೊಳ್ಳಿ. ಕಬ್ಬಿಣದ ಡ್ರಮ್ ಬಳಸಬೇಡಿ. ಪ್ಲಾಸ್ಟಿಕ್ ಡ್ರಮ್ ಇರದಿದ್ದರೆ ಸೀಮೆಂಟ್ ತೊಟ್ಟಿಯನ್ನು ಬಳಸಿಕೊಳ್ಳಬಹುದು. ಸೀಮೆಂಟ್ ತೊಟ್ಟಿಯೂ ಇಲ್ಲದಿದ್ದರೆ ಕಳವಳಪಡಬೇಕಾಗಿಲ್ಲ. ನಿಮ್ಮ ಜಮೀನಿನಲ್ಲಿರುವ ಯಾವುದಾದರೂ ಮರದ ಕೆಳಗೆ ೨೫೦ ಲೀಟರ್ ನೀರು ಹಿಡಿಯುವಷ್ಟು ಪ್ರಮಾಣದ ಗುಂಡಿ ತೋಡಿ. ಅದನ್ನು ಸಗಣಿಯಿಂದ ಸಾರಿಸಿರಿ. ಗುಂಡಿಯ ತಳ ಹಾಗೂ ಒಳಗೋಡೆಯನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿರಿ. ಹೀಗೆ ಸಿದ್ಧಪಡಿಸಿದ ಗುಂಡಿಗೆ ೨೦೦ ಲೀಟರ್ ನೀರು ತುಂಬಿಸಿ. ಗಂಜಳ-ಸಗಣಿಗಳ ಬಗ್ಗಡದೊಂದಿಗೆ ಬೆಲ್ಲ, ಕಡ್ಲೆಹಿಟ್ಟು ಮತ್ತು ಒಂದು ಹಿಡಿ ಮಣ್ಣು ಸೇರಿಸಿ ನೀರಿನೊಂದಿಗೆ ಬೆರಸಿ. ಜೀವಾಮೃತದ ಗುಂಡಿ, ಡ್ರಮ್ಮು ಅಥವ ತೊಟ್ಟಿ ತಂಪಾದ ಜಾಗದಲ್ಲಿ; ಮರದ ಕೆಳಗೆ ಅಥವಾ ನೆರಳಿನಲ್ಲಿರಲಿ. ಜೀವಾಮೃತ ಸಿದ್ಧವಾದ ಬಳಿಕ ತೊಟ್ಟಿಯನ್ನು ತೆಳುವಾದ ಒದ್ದೆ ಗೋಣಿಚೀಲದಿಂದ ಮುಚ್ಚಿ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ (ದಿನಕ್ಕೆ ಮೂರು ಬಾರಿ) ಕೋಲಿನಿಂದ ವೃತ್ತಾಕಾರವಾಗಿ ತಿರುಗಿಸಿ ರಾಡಿ ಮಾಡಿರಿ. ಕೋಲನ್ನು ಪ್ರದಕ್ಷಿಣಾಕಾರವಾಗಿ ತಿರುಗಿಸಿ. ವಿರುದ್ಧ ದಿಕ್ಕಿನಿಂದ ತಿರುಗಿಸಬೇಡಿ. ಸಿದ್ಧಪಡಿಸಿದ ಜೀವಾಮೃತವನ್ನು ಎರಡರಿಂದ ಏಳು ದಿವಸಗಳೊಳಗೆ ಭೂಮಿಗೆ ಸಿಂಪಡಿಸಿ. ಆದರೆ ನೆನಪಿಡಿ: ಜೀವಾಮೃತವನ್ನು ಕೃಷಿ ಭೂಮಿಗೆ ನೀಡುವಾಗ ತೇವವರಿಬೇಕು. ಮಳೆ ಬಿದ್ದಾಗ, ತೇವವಿದ್ದಾಗ, ನೀರು ಹಾಯಿಸುವಾಗ, ಇಲ್ಲವೆ ಮುಂಜಾನೆ ಇಬ್ಬನಿ ಬೀಳುವಾಗ ಜೀವಾಮೃತವನ್ನು ಹನಿಸಬಹುದು. ನಿರ್ದಿಷ್ಟವಾಗಿ ಬೆಳೆಗಳ ಬೇರಿಗೇ ಜೀವಾಮೃತ ನೀಡಬೇಕೆಂಬ ನಿಯಮವೇನಿಲ್ಲ. ಬೆಳೆಗೆ ನೀರು ಹಾಯಿಸುವವರು ಕಾಲುವೆಯ ಮೂಲಕವೇ ಜೀವಾಮೃತ ನೀಡಬಹುದು. ಮಳೆ ಆಶ್ರಯದಲ್ಲಿ ಕೃಷಿ ಮಾಡುವವರು ಭೂಮಿ ತೇವವಿರುವಾಗ ಅಥವಾ ಬೆಳಗ್ಗಿನ ಇಬ್ಬನಿಯ ವೇಳೆ ಜೀವಾಮೃತವನ್ನು ಅಲ್ಲಲ್ಲಿ ಚೆಲ್ಲುತ ಬನ್ನಿ. ಅಥವಾ ಹಸಿರು ಸೊಪ್ಪಿನ ಬರಲು(ಪೊರಕೆ) ಮಾಡಿಕೊಂಡು ಕೂಡ ಸಿಂಪಡಿಸಬಹುದು. ಹನಿ ಮತ್ತು ತುಂತುರು ನೀರಾವರಿಯಲ್ಲಿ ಜೀವಾಮೃತ ಕೊಡುವವರು ಕೆಳ ಕಾಣಿಸಿದ ಮಾದರಿಯನ್ನು ಅನುಸರಿಸಿ.

ಸ್ಥಳೀಯ ಹಸು ತಳಿಗಳಾದ ಕಿಲಾರಿ ಮತ್ತಿ ದಿಯೋನಿ

ಜೀವಾಮೃತ ತಯಾರು

ಸ್ಥಳೀಯವಾಗಿ ನೀವೇ ಫಿಲ್ಟರ್ ಮಾಡಿ; ಹನಿ ಮತ್ತು ತುಂತುರು ನೀರಾವರಿಯ ಸೆಕ್ಷನ್ ಪೈಪುಗಳ ಮೂಲಕ ಜೀವಾಮೃತ ಹಾಯಿಸಬಹುದು. ಇದಕ್ಕಾಗಿ ೫೦ರಿಂದ ೧೦೦ ಲೀಟರ್‌ವರೆಗಿನ ಪ್ಲಾಸ್ಟಿಕ್ ಡ್ರಮ್ ಅಥವಾ ಸಿಮೆಂಟ್ ತೊಟ್ಟಿ ಸಿದ್ಧ ಮಾಡಿಕೊಳ್ಳಿ. ಡ್ರಮ್‌ನ ಕೆಳಭಾಗದಲ್ಲಿ ನಲ್ಲಿ ಇರಲಿ. ಡ್ರಮ್ ಒಳಗೆ ಮೊದಲ ಸ್ತರವಾಗಿ ಆರು ಇಂಚು ಎತ್ತರಕ್ಕೆ ದಪ್ಪ ಜಲ್ಲಿ ಕಲ್ಲುಗಳನ್ನು ತುಂಬಿಸಿ. ನಂತರ, ಆಮೇಲಿನ ಐದು ಇಂಚು ಎತ್ತರದ ಸ್ತರಕ್ಕೆ ಸಣ್ಣ ಜಲ್ಲಿ ಕಲ್ಲುಗಳನ್ನು ತುಂಬಿಸಿ. ಆಮೇಲೆ ಆ ಸಣ್ಣ ಜಲ್ಲಿಗಳ ಮೇಲ್ಭಾಗದ ಸ್ತರಕ್ಕೆ ನಾಲ್ಕು ಇಂಚು ದಪ್ಪಕ್ಕೆ ಮರುಳು ತುಂಬಿರಿ. ಮರಳಿನ ಮೇಲ್ಭಾಗದ ಸ್ತರವನ್ನು ಸೂಕ್ಷ್ಮರಂಧ್ರಗಳಿರುವ ನೈಲಾನ್ ಜಾಲರಿಯಿಂದ ಮುಚ್ಚಿ. ಕಡೆಯದಾಗಿ ಡ್ರಮ್‌ನ ಬಾಯಿಯನ್ನು ತೆಳುವಾದ ಹತ್ತಿ ಬಟ್ಟೆಯಿಂದ ಕಟ್ಟಿಹಾಕಿ. ನಂತರ ಆ ಬಟ್ಟೆಯಿಂದ ಶೋಧಿಸಿ ಹೋಗುವ ಹಾಗೆ ಡ್ರಮ್‌ನೊಳಕ್ಕೆ ಜೀವಾಮೃತ ಸುರಿಯಿರಿ. ನಂತರ ನಲ್ಲಿಯನ್ನು ಸೆಕ್ಷನ್ ಪೈಪ್‌ಗೆ ಕನೆಕ್ಟ್ ಮಾಡಿ. ಮೇಲೆ ತಿಳಿಸಿರುವ ಜೀವಾಮೃತದ ಪ್ರಮಾಣ ಒಂದು ಎಕರೆಗೆ ಮಾತ್ರ.

ಎಲ್ಲಾ ಸರಿ; ಕಡ್ಲೆಹಿಟ್ಟು, ಬೆಲ್ಲ ಮತ್ತು ಹಿಡಿ ಮಣ್ಣು ಯಾಕೆ? ಎಲ್ಲರಲ್ಲೂ ಈ ಪ್ರಶ್ನೆ ಉದ್ಭವಿಸುವುದು ಸಹಜ. ಮಾನವ ಹಸ್ತಕ್ಷೇಪವಿರುವ ಯಾವುದೇ ನಿಸರ್ಗ ವ್ಯವಸ್ಥೆಯನ್ನು ನೀವು ಆಳವಾಗಿ ಗಮನಿಸಿ. ಸ್ವಾಭಾವಿಕವಾಗಿ ಬೆಳದ ಮರ-ಗಿಡಗಳ ಪರಿಸರದಲ್ಲಿ ಯಾವುದೇ ಪೋಷಕಾಂಶಗಳಿಗೂ ಕೊರತೆ ಇರುವುದಿಲ್ಲ. ಆ ಪರಿಸರದಲ್ಲಿ ಅಸಂಖ್ಯಾತ ಜೀವಾಣುಗಳು ಸದಾ ಸಕ್ರಿಯವಾಗಿರುತ್ತವೆ. ಉದಾಹರಣೆಗೆ ಒಂದು ಮರವನ್ನು ಗಮನಿಸಿ. ಆ ಒಂದೇ ಮರದ ಕೆಳಗೆ ೨೬೫ ಕ್ಕೂ ಹೆಚ್ಚಿನ ವನಸ್ಪತಿ ಗಿಡಗಳಿವೆ. ಅವುಗಳಲ್ಲಿ ಶೇಕಡ ೨೫ರಷ್ಟು ಏಕದಳ ಜಾತಿಗೆ ಸೇರಿದ ವನಸ್ಪತಿಗಳು. ಉಳಿದ ಶೇಕಡ ೭೫ರಷ್ಟು ಗಿಡಗಳು ದ್ವಿದಳಧಾನ್ಯದ ಗಿಡಗಳು. ಹಾಗೆಯೇ ಆ ಗಿಡಗಳ ಕೆಳಗೆ ಕಣ್ಣಿಗೆ ಕಾಣುವ ಸಣ್ಣ ಸಣ್ಣ ಇರುವೆಗಳ ಸಾಲುಗಳನ್ನು ಕಾಣುವಿರಿ. ಅವು ಆ ಮರದಬುಡದಿಂದ ಏನನ್ನೋ ಹೊತ್ತೊಯ್ಯುತ್ತಿವೆ. ಒಂದೆಡೆ ಸಂಗ್ರಹಿಸುತ್ತಿವೆ. ಆ ಸಂಗ್ರಹದಲ್ಲಿ ಸಕ್ಕರೆಯ ಅಂಶವೇ ಜಾಸ್ತಿ ಇದೆ. ಎಲ್ಲಿಂದ ಬಂತು ಆ ಸಕ್ಕರೆ? ಆಗ ವಿಜ್ಞಾನ ನಿಮ್ಮ ನೆರವಿಗೆ ಬರುತ್ತದೆ. ಯಾವುದೇ ಮರ-ಗಿಡ ತನ್ನ ಆಹಾರ ತಯಾರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಬೇರು ಮತ್ತು ಕಾಂಡಗಳಲ್ಲಿ ಸಕ್ಕರೆಯನ್ನು ಸಂಗ್ರಹಿಸುತ್ತವೆ. ಹಾಗೆ ಸಂಗ್ರಹಿಸಿಕೊಂಡ ಸಕ್ಕರೆಯಲ್ಲಿ ಒಂದಷ್ಟು ಭಾಗವನ್ನು ಜೀವಾಣುಗಳ ಸಂರಕ್ಷಣೆಗಾಗಿಯೂ ಬೇರುಗಳ ಮೂಲಕ ಹೊರಚಿಮ್ಮಿಸುತ್ತವೆ. ಹೀಗೆ ಹೊರ ಚಿಮ್ಮಲ್ಪಟ್ಟ ಸಕ್ಕರೆಯನ್ನು ಇರುವೆ ಸೇರಿದಂತೆ ಅಸಂಖ್ಯಾತ ಸೂಕ್ಷ್ಮಾತಿಸೂಕ್ಷ್ಮ ಜೀವಾಣುಗಳು ಆಹಾರವಾಗಿ ಬಳಸಿಕೊಳ್ಳುತ್ತವೆ.

ಜೀವಾಮೃತದ ತೊಟ್ಟಿ

 

ಹಾಗೆಯೇ ಪ್ರಕೃತಿ ಆ ಮರದ ಕೆಳಗೆ ಸೃಷ್ಟಿಸಿರುವ ಶೇಕಡ ೭೫ರಷ್ಟು ದ್ವಿದಳ ವನಸ್ಪತಿಗಳಿಂದ ಈ ಬ್ಯಾಕ್ಟೀರಿಯಾಗಳು ಪ್ರೊಟೀನ್ ಸ್ವೀಕರಿಸುತ್ತವೆ. ಈ ಹಿನ್ನೆಲೆಯಲ್ಲಿ ಸಗಣಿ-ಗಂಜಳಗಳಲ್ಲಿರುವ ಜೀವಾಣುಗಳ ವೃದ್ಧಿಗೆ ಮತ್ತು ಸಶಕ್ತತತೆಗೆ ಜೀವಾಮೃತದಲ್ಲಿ ದ್ವಿದಳಧಾನ್ಯದ ಹಿಟ್ಟು ಮತ್ತು ಕಪ್ಪುಬೆಲ್ಲವನ್ನು ಪಾಳೇಕರ್ ಸೇರಿಸಿದ್ದಾರೆ. ಬೆಲ್ಲ ಸರಿ; ಆದರೆ ಬೆಲ್ಲ ಕಪ್ಪಾಗಿರಬೇಕು ಯಾಕೆ? ಈ ಪ್ರಶ್ನೆಯೂ ಉದ್ಭವಿಸಬಹುದು. ನಮ್ಮ ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವವರು ಬೆಲ್ಲಕ್ಕೆ ಬಣ್ಣ ಬರಲಿ ಅನ್ನುವ ಕಾರಣಕ್ಕೆ ಡೆಕೊಲೈಟ್ ಚಿಪ್ಸ್, ಯೂರಿಯಾ, ಮಡ್ಡಿ ನಿವಾರಕ ಪೌಡರ್, ಸುಪರ್ ಹೈಡ್ರೊ (ಸೋಡಿಯಂ ಹೈಡ್ರೋ ಸಲ್ಫೇಟ್) ಇತ್ಯಾದಿ ರಾಸಾಯನಿಕಗಳನ್ನೆಲ್ಲ ಬಳಸುತ್ತಾರೆ. ನಿಜಕ್ಕೂ ಈ ಬೆಲ್ಲ ಆರೋಗ್ಯಕ್ಕೆ ಹಾನಿಕಾರಕ. ಈ ಹಿನ್ನೆಲೆಯಲ್ಲಿ ಈ ಯಾವ ರಾಸಾಯನಿಕಗಳನ್ನೂ ಬಳಸದೆ ತಯಾರಿಸುವ ಬೆಲ್ಲ – ಸ್ವಲ್ಪಮಟ್ಟಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಿಜವಾದ ವಿಷಮುಕ್ತ ಬೆಲ್ಲವನ್ನು ನೈಸರ್ಗಿಕವಾಗಿ ಬೆಳೆದ ಕಬ್ಬಿನ ಫಸಲಿನಿಂದ ಪಡೆಯಬಹುದು. ಅಲ್ಲಿಯವರೆಗೆ ನೀವು ಮಾರುಕಟ್ಟೆಯಲ್ಲಿ ದೊರೆಯುವ ಕಪ್ಪು ಬೆಲ್ಲವನ್ನೇ ಬಳಸಿ. ಅಥವಾ ಹತ್ತಿರದ ಅಲೆಮನೆಗಳನ್ನು ಮೇಲ್ಕಾಣಿಸಿದ ಯಾವುದೇ ರಾಸಾಯನಿಕಗಳನ್ನು ಬೆರೆಸಿಸದೆ ಶುದ್ಧ ಬೆಲ್ಲದ ಅಡುಗೆ ಮಾಡಿಸಿಕೊಳ್ಳಿರಿ.

ಇನ್ನು, ಜೀವಾಮೃತಕ್ಕೆ ಹಿಡಿ ಮಣ್ಣು ಯಾಕೆ ಬೇಕು? ನಿಮ್ಮ ಹೊಲದ ಬದು(ತೆವರಿ)ವಿನ ಮಣ್ಣೇ ಯಾಕೆ ಆಗಬೇಕು? ಈ ಕುರಿತು ಪರಿಶೀಲಿಸೋಣ. ಹೊಲ, ಗದ್ದೆ ಅಥವಾ ತೋಟಗಳ ಬದುಗಳನ್ನು ನೀವು ಉಳುಮೆ ಮಾಡುವುದಿಲ್ಲ. ಅಲ್ಲಿ ಹುಲ್ಲು, ಗರಿಕೆ, ತುಂಬೆ, ಕೊನ್ನಾರಿ, ಕನ್ನೆ, ಮುಟ್ಟಿದರೆ ಮುನಿ ಇತ್ಯಾದಿ ಗಿಡಗಳು ಬೆಳೆದುಕೊಂಡಿರುತ್ತವೆ. ಒಂದು ರೀತಿಯಲ್ಲಿ ಇದು ಜೀವಂತ ಹೊದಿಕೆ. ಜೊತೆಗೆ ಅಲ್ಲಿ ಆರ್ದ್ರತೆ ಇರುತ್ತದೆ. ಅಂಥ ಜಾಗದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಾಣುಗಳಿರುತ್ತವೆ. ಸದರಿ ಜೀವಾಣುಗಳು ನಿಮ್ಮ ಆ ನೆಲದ ವೈಶಿಷ್ಟ್ಯಗಳನ್ನೆಲ್ಲ ಮೈಗೂಡಿಸಿಕೊಂಡಿರುತ್ತವೆ. ಹೀಗಾಗಿ ನೀವು ನಿಮ್ಮ ಜಮೀನಿನ ಯಾವ ಭಾಗಕ್ಕೆ ಜೀವಾಮೃತ ಸಿದ್ಧಪಡಿಸುತ್ತೀರೊ ಆ ಭಾಗದ ಬದುವಿನಿಂದಲೇ ಒಂದು ಹಿಡಿ ಮಣ್ಣು ತನ್ನಿ. ನಿಮ್ಮ ಹೊಲಗಳಲ್ಲಿ ಬದುವೇ ಇಲ್ಲ ಎಂದಾದಾಗ ಆ ಭಾಗದ ಮರದ ಕೆಳಗೆ ಅಥವಾ ಬೇಲಿಯ ಕೆಳಗಿನ ಮಣ್ಣು ತನ್ನಿ. ನಿಮ್ಮ ಆ ಮಣ್ಣು ನಿಮ್ಮ ಜಮೀನಿನ ಗುಣ-ಸ್ವಭಾವಗಳ ಪ್ರತಿನಿಧಿ. ಸಗಣಿ-ಗಂಜಳಗಳಲ್ಲಿರುವ ಬ್ಯಾಕ್ಟೀರಿಯಾಗಳು ಆ ಮಣ್ಣಿನ ಗುಣ-ಸ್ವಭಾವಗಳನ್ನು ಸುಲಭದಲ್ಲಿ ಗ್ರಹಿಸುತ್ತವೆ. ನಾಳಿನ ದಿನಗಳಲ್ಲಿ ಈ ಜೀವಾಮೃತವನ್ನು ದಂಧೆ ಮಾಡಿಕೊಳ್ಳಲು ಹೊರಡುವವರಿಗೆ ನಿಮ್ಮ ಜಮೀನಿನ ಆ ಹಿಡಿ ಮಣ್ಣೇ ಬಹುದೊಡ್ಡ ಅಡ್ಡಿ ಅನ್ನುವುದು ನೆನಪಿರಲಿ. ನಗರಗಳಲ್ಲಿ ಮನೆಯ ಆವರಣದಲ್ಲೇ ಕೈತೋಟ ಮಾಡಿಕೊಂಡಿರುವವರು, ಕುಂಡಗಳಲ್ಲಿ ಗಿಡ ಬೆಳೆಸುತ್ತಿರುವವರು, ನಿಮ್ಮ ಆ ಆವರಣದಲ್ಲೇ ಇರುವ ಮಣ್ಣನ್ನೇ ಜೀವಾಮೃತದ ಕಲ್ಟ್‌ಗೆ ಬೆರೆಸಿ.

ನಾವು ಇನ್ನು ಮುಂದೆ ನಮ್ಮ ನಿಸರ್ಗ ಕೃಷಿಯಲ್ಲಿ ಯಾವುದೇ ಬಗೆಯ ಬೆಳೆ ಬೆಳೆಯಲು ತಿಂಗಳಿಗೊಮ್ಮೆ ಜೀವಾಮೃತ ಮಾತ್ರ ನೀಡುತ್ತೇವೆ. ಹೊರಗಿನಿಂದ ಯಾವ ಗೊಬ್ಬರನವನ್ನೂ ಕೂಡ ತರುವುದಿಲ್ಲ. ನಮ್ಮಲ್ಲೇ ವರ್ಮಿಕಾಂಪೋಸ್ಟ್ ಇದ್ದರೆ ಅದನ್ನು ಬಳಸಿಕೊಳ್ಳುವ ಅಗತ್ಯವೂ ಇರುವುದಿಲ್ಲ. ಇದೀಗ ನಮ್ಮ ಜಮೀನುಗಳಿಗೆ ೨೫ ಗಾಡಿ ಕೊಟ್ಟಿಗೆ ಗೊಬ್ಬರವಿಲ್ಲ, ಲೋಡುಗಟ್ಟಲೆ ಕೆರೆಗೋಡೂ ಇಲ್ಲ, NPK ಯಂತೂ ಇಲ್ಲವೇ ಇಲ್ಲ.

‘ಬರೇ ಹತ್ತು ಕೆ.ಜಿ. ಸಗಣಿ ಸಾಕೆ? ಹೆಚ್ಚು ಅಥವಾ ಕಮ್ಮಿ ಆಗಬಾರದೆ?’ ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗಬಹುದು. ಸುಭಾಷ್ ಪಾಳೇಕರರು ಎಲ್ಲವನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ನಿಖರವಾದ ಫಲಿತಾಂಶಗಳನ್ನು ಪ್ರಯೋಗಗಳ ಮೂಲಕ ಸಾಬೀತುಪಡಿಸಿ ತೋರಿಸಿದ್ದಾರೆ. ಅವರು ಒಂದು ಎಕರೆಗೆ ೧೪ ಗಾಡಿ ಕೊಟ್ಟಿಗೆ ಗೊಬ್ಬರದಿಂದ ಶುರುಮಾಡಿ, ಹಂತ ಹಂತವಾಗಿ ಹೆಚ್ಚುಮಾಡುತ್ತಾ ೪೦ ಗಾಡಿವರೆಗೆ ಸುರಿದು ಫಲಿತಾಂಶಗಳನ್ನು ಗಮನಿಸಿದ್ದಾರೆ. ಹಾಗೆಯೇ ೧೪ ರಿಂದ ೧೩ ಗಾಡಿ, ೧೩ ರಿಂದ  ೧೨ ಗಾಡಿ, ೧೨ ರಿಂದ ೧೧… ೧೦, ೯, ೮, ೭… ಹೀಗೆ ಇಳಿಸುತ್ತಾ ಒಂದು ಗಾಡಿಯವರೆಗೆ; ಕಡೆಗೆ ೧೦೦ ಕೆ.ಜಿ, ೯೦ ಕೆ.ಜಿ… ೧೦ ಕೆ.ಜಿ, ೯ ಕೆ.ಜಿ, ೮ ಕೆ.ಜಿ… ೧ ಕೆ.ಜಿ ಗೊಬ್ಬರದವರೆಗೆ ಪ್ರಯೋಗ ಮಾಡಿ ನೋಡಿದ್ದಾರೆ. ಅವರ ಅಧ್ಯಯನದ ಪ್ರಕಾರ ೪೦ ಗಾಡಿ ಗೊಬ್ಬರಕ್ಕಿಂತ ಹತ್ತು ಕೆ.ಜಿ. ಹಸಿಸಗಣಿ ಅತ್ಯುತ್ಕೃಷ್ಟ. ಹತ್ತು ಕೆ.ಜಿ ಸಗಣಿಯಲ್ಲಿರುವ ಜೀವಾಣುಗಳು- ಜೀವಾಮೃತದಲ್ಲಿ ವೃದ್ಧಿಯಾಗುವಷ್ಟೆ ಒಂದು ಎಕರೆಗೆ ಸಾಕು.

ನಮ್ಮದು ಬಹುಮುಖ್ಯವಾಗಿ ಮಳೆ ಆಶ್ರಿತ ಕೃಷಿಯ ದೇಶ. ಶೇಕಡ ೭೭ ರಷ್ಟು ಕೃಷಿಭೂಮಿಗೆ ಇಲ್ಲಿ ಮಳೆಯೇ ಆಸರೆ. ಮಳೆ ಆಶ್ರಿತ ಕೃಷಿಕರು ಬಿತ್ತನೆಯ ಕಾಲದಲ್ಲಿ ಬೀಜ ಬಿತ್ತುವಾಗ ಈ ಕ್ರಮ ಅನುಸರಿಸಿ. ಪ್ರತಿ ವರ್ಷ ಮಾಘಮಾಸದಲ್ಲಿ – ಮಹಾಶಿವರಾತ್ರಿಗೂ ಮುಂಚಿನ ಹುಣ್ಣಿಮೆ ಮತ್ತು ಶಿವರಾತ್ರಿ ನಂತರದ ಅಮಾವಾಸ್ಯೆಯ ನಡುವಿನ ದಿನಗಳಲ್ಲಿ ಎಕರೆಗೆ ಎರಡು ಚೀಲದಷ್ಟು, ಅಂದರೆ ಅಂದಾಜು ೧೦೦ ಕೆ.ಜಿ.ಯಷ್ಟು ಕೊಟ್ಟಿಗೆಗೊಬ್ಬರ (ನಾಡ ಹಸುವಿನ ಗೊಬ್ಬರ) ಸಂಗ್ರಹಿಸಿಟ್ಟುಕೊಳ್ಳಿ. ಮಹಾಶಿವರಾತ್ರಿ ಹಿಂದಿನ ಹುಣ್ಣಿಮೆ ಮತ್ತು ಮುಂದಿನ ಅಮಾವಾಸ್ಯೆಯ ನಡುವಿನ ದಿನಗಳಲ್ಲಿ ನಕ್ಷತ್ರಗಳ ಪ್ರಭಾವದಿಂದ ಕೊಟ್ಟಿಗೆ ಗೊಬ್ಬರದಲ್ಲಿ ಬಯೋಡೈನಾಮಿಕ್ ಶಕ್ತಿ ಹೆಚ್ಚಿರುತ್ತದೆ. ಈ ದಿನಗಳಲ್ಲಿ ಸಂಗ್ರಹಿಸಿದ ಗೊಬ್ಬರವನ್ನು ಜರಡಿ ಹಿಡಿದು ನೆರಳಲ್ಲಿ ಒಣಗಿಸಿ ಚೀಲಗಳಲ್ಲಿ ತುಂಬಿ ಇಟ್ಟುಕೊಳ್ಳಿ. ಮಳೆ ಬಿದ್ದು, ನೀವು ಬಿತ್ತನೆಗೆ ಅಣಿಯಾಗುವಾಗ ಸದರಿ ಗೊಬ್ಬರವನ್ನು ಜೀವಾಮೃತದಲ್ಲಿ ಬೆರೆಸಿ ಒಂದು ಎಕರೆ ವಿಸ್ತೀರ್ಣಕ್ಕೆ ಹರಡಿ. ನಿಸರ್ಗ ಕೃಷಿ ಶುರುಮಾಡುವ ಮುಂಚೆ ನಿಮ್ಮಲ್ಲಿ ನಾಡ ಹಸುವಿನ ಗೊಬ್ಬರದ ಸಂಗ್ರಹವಿದ್ದಲ್ಲಿ – ಎಕರೆಗೆ ಹತ್ತು ಗಾಡಿಯಂತೆ ಗೊಬ್ಬರ ಹಾಕಬಹುದು. ಹತ್ತು ಗಾಡಿಗಿಂತ ಹೆಚ್ಚಿನ ಗೊಬ್ಬರ ಹಾಕಬೇಡಿ. ಗೊಬ್ಬರ ಹೆಚ್ಚಾದಲ್ಲಿ – ಮಳೆ ಹೆಚ್ಚುಬಿದ್ದರೆ ಗಿಡಗಳು ಹೆಚ್ಚು ಬೆಳೆದು ಇಳುವರಿ ಕಡಿಮೆಯಾಗುತ್ತದೆ. ಮಳೆ ಕಡಿಮೆ ಆದಲ್ಲಿ ಗಿಡಗಳು ಬಾಡುತ್ತವೆ. ಗೊಬ್ಬರದ ಸಂಗ್ರಹ ಇಲ್ಲದವರು ಖರೀದಿ ಮಾಡಿ ತರಬೇಕಾದ ಅಗತ್ಯವಿಲ್ಲ. ಕಾಲ ಕಾಲಕ್ಕೆ ಜೀವಾಮೃತ ಕೊಟ್ಟರಷ್ಟೇ ಸಾಕು.

ಬೆಳೆವ ಬೆಳೆಯ ಹಿಂದೆ ನೂರೆಂಟು ಸತ್ವ; ತತ್ವ

ನಿಜಕ್ಕೂ ಬೆಳೆ ಬೆಳೆಯಲು ಏನೆಲ್ಲಾ ಬೇಕು?

‘ಏನೆಲ್ಲಾ ಬೇಕು? ಮತ್ತು ಬೇಕಾದ್ದೆಲ್ಲ ಸಿಗುವ ಮೂಲ ಯಾವುದು?’ ಇಷ್ಟು ಮಾತ್ರ ಅರ್ಥಮಾಡಿಕೊಂಡರೆ ಸಕು- ನಿಜಕ್ಕೂ ನಮಗೆ ಬೆಳೆ ಬೆಳೆವ ವಿಜ್ಞಾನ ಅರ್ಥ ಆಗುತ್ತದೆ. ನಿಜವಾದ ನಿಸರ್ಗದ ನಿಜ ಅರಿಯದ ಆದರೆ ಜಗದ್ವಿಖ್ಯಾತನೆನಿಸಿದ ವಿಜ್ಞಾನಿ ವಾನ್‌ಲೀಬಿಗ್ ಬೆಳೆ ಬೆಳೆಯಲು ಮೇಲಿನಿಂದ ಸುರಿಯುವುದನ್ನು ಇಡೀ ಜಗತ್ತಿಗೆ ಕಲಿಸಿದ. ಇವತ್ತಿನ ಈ ವಿಷಕಾರಿ ರಾಸಾಯನಿಕ ಕೃಷಿಗೆ ಆತನೇ ಪಿತಾಮಹ. ಪಾಳೇಕರ್ ಕೂಡ ಕೃಷಿ ವಿಜ್ಞಾನಿಯೇ. ಆ ವಿಜ್ಞಾನವನ್ನವರು ನಿಸರ್ಗದ ನಿಜ ಅರಿಯಲು ಬಳಸಿಕೊಂಡರು. ಆದರೆ ನಮ್ಮ ಕೃಷಿ ವಿ.ವಿ.ಗಳು ವಿಜ್ಞಾನಿಗಳು ಇವತ್ತಿಗೂ ನಿಸರ್ಗದ ವಿರುದ್ಧವೇ ಈಜತೊಡಗಿದ್ದಾರೆ. ಇರಲಿ; ನಾವೀಗ ಪಾಳೇಕರರ ಹಾದಿಯಲ್ಲಿ ಬೆಳೆ ಬೆಳೆಯುವ ನಿಜ ವಿಜ್ಞಾನ ಅರಿಯಲು ಪ್ರಯತ್ನಿಸೋಣ.

ಗೊಬ್ಬರ ಹೆಚ್ಚು ಕೊಟ್ಟಷ್ಟು, ಇಳುವರಿಯೂ ಹೆಚ್ಚು ಅನ್ನುವ ನಂಬಿಕೆ ನಮ್ಮ ರೈತರಲ್ಲಿದೆ. ನಾವು ಹಾಕಿದ ಕೊಟ್ಟಿಗೆಗೊಬ್ಬರ, ಕೆರೆಗೋಡು, NPK ಮುಂತಾದವುಗಳೆಲ್ಲ ನಮ್ಮ ಕಬ್ಬು, ಭತ್ತ, ರಾಗಿ, ಬಾಳೆ ಇತ್ಯಾದಿಗಳಲ್ಲಿ ಸೇರ್ಪಡೆಯಾಗಿವೆ ಎಂತಲೇ ನಮ್ಮ ಭಾವನೆ. ವಾಸ್ತವವಾಗಿ ನಿಸರ್ಗದಲ್ಲಿರುವ ಮರ, ಗಿಡ, ಬಳ್ಳಿಗಳೆಲ್ಲವೂ ತಮ್ಮ ಆಹಾರದ ಸಿಂಹಪಾಲನ್ನು ಪಡೆಯುವುದು ವಾತಾವರಣದಿಂದಲೇ- ದ್ಯುತಿ ಸಂಶ್ಲೇಷಣೆಯ ಮೂಲಕ.

ಉದಯರಾಗ (ಪದ್ಯದಆಯ್ದಭಾಗ)ಬೆಳಕಿನ ಕಣ್ಣುಗಳಿಂದಾ ಸೂರ್ಯನು
ನೋಡುವನು, ಬಿಸಿಲೂಡುವನು;
ಚಿಲಿಪಿಲಿ ಹಾಡನು ಹಾಡಿ ಹಕ್ಕಿಯ
ಗೂಡಿನ ಹೊರ ಹೊರ ದೂಡುವನು.

ಬಂಗಾರದ ಚೆಲು ಬಿಸಿ ಕಿರೀಟದ
ಶೃಂಗಾರದ ತಲೆ ಎತ್ತುವನು;
ತೆಂಗಿನ ಕಂಗಿನ ತಾಳೆಯ ಬಾಳೆಯ
ಅಂಗಕ ರಂಗನು ಮೆತ್ತವನು.

ಪಂಜೆ ಮಂಗೇಶರಾವ್

ಉದಾಹರಣೆ ಚಿತ್ರದಲ್ಲಿರುವ ಈ ಹಸಿರು ಎಲೆ ಗಮನಿಸಿ.

ಯಾವುದೇ ಎಲೆಯ ಹಸಿರಿಗೆ ಹರಿತ್ ದ್ರವ್ಯ ಕಾರಣ. ಪ್ರತಿ ಚದರಡಿ ಹಸಿರು ಎಲೆಯ ಮೇಲೆ ೧೨೫೦ ಕಿಲೋ ಕ್ಯಾಲರಿ ಸೂರ್ಯನ ಬೆಳಕು ಬೀಳುತ್ತದೆ. ಹೀಗೆ ಬಿದ್ದ ಎಲ್ಲ ಸೌರಶಕ್ತಿಯನ್ನು ಎಲೆ ಬಳಸಿಕೊಳ್ಳುವುದಿಲ್ಲ. ಈ ೧೨೫೦ ಕಿಲೋ ಕ್ಯಾಲರಿ ಸೌರಶಕ್ತಿಯ ಪೈಕಿ ಯಾವುದೇ ಒಂದು ಚದರಡಿಯ ಹಸಿರೆಳೆ ಶೇಕಡ ಒಂದರಷ್ಟನ್ನು ಅಂದರೆ ೧೨.೫ ಕಿ. ಕ್ಯಾಲರಿ ಶಕ್ತಿಯನ್ನು ಮಾತ್ರ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಹಸಿರೆಲೆಯಲ್ಲಿರುವ ಗ್ರೇನಾ ಕಣಗಳು ಸೌರಶಕ್ತಿಯನ್ನು ಸಂಗ್ರಹಿಸುತ್ತವೆ. ಹೀಗೆ ಸಂಗ್ರಹಿಸಿದ ಸೌರಶಕ್ತಿಯನ್ನು ಬಳಸಲು ATP (Adenosine Tri Phosphate) ನೆರವಾಗುತ್ತದೆ. ಸಸ್ಯದ ಎಲೆಗಳು ವಾತಾವರಣದಿಂದ ಕಾರ್ಬನ್ ಡೈ ಆಕ್ಸೈಡ್, ಗಿಡದ ಬೇರಿನ ಮೂಲಕ ನೀರು, ಸೂರ್ಯನಿಂದ ಬೆಳಕು ಸ್ವೀಕರಿಸಿ ಕಾರ್ಬೋಹೈಡ್ರೇಟ್ (ಕಚ್ಛಾ ಸಕ್ಕರೆ) ತಯಾರಿಸುತ್ತವೆ. ಇಲ್ಲಿ ಪ್ರತಿ ಎಲೆಯೂ ಆಹಾರ ತಯಾರಿಸುವ ಅಡುಗೆಮನೆ ಇದ್ದಂತೆ. 

ಒಂದು ಚದರಡಿ ಹಸಿರು ಎಲೆ ಸೂರ್ಯನಿಂದ ಸ್ವೀಕರಿಸುವ ೧೨.೫ ಕಿಲೋ ಕ್ಯಾಲರಿ ಶಕ್ತಿ ಮತ್ತು ವಾತಾವರಣದಿಂದ ಪಡೆಯುವ ಗಾಳಿ, ನೀರು ಬಳಸಿ ಒಂದು ದಿನಕ್ಕೆ ೪.೫ ಗ್ರಾಂ ಆಹಾರ ತಯಾರಿಸುತ್ತದೆ. ತಾನು ತಯಾರಿಸುವ ಈ ೪.೫ ಗ್ರಾಂ ಆಹಾರದಲ್ಲಿ ಭತ್ತ, ರಾಗಿ, ಗೋಧಿ, ಜೋಳ, ಹೆಸರು, ಉದ್ದು, ಅವರೆ, ಅಲಸಂದೆ ಮುಂತಾದ ಧಾನ್ಯದ ಬೆಳೆಗಳಾದರೆ- ಆ ಧಾನ್ಯಗಳ ನಿರ್ಮಾಣಕ್ಕಾಗಿ ೧.೫ ಗ್ರಾಂ ಆಹಾರ ವಿನಿಯೋಗಿಸುತ್ತದೆ. ಕಬ್ಬು, ಬಾಳೆ, ಗೆಡ್ಡೆ, ಗೆಣಸು, ಹಣ್ಣಿನ ಗಿಡಗಳಾದರೆ, ಅವುಗಳ ಫಲ ನಿರ್ಮಾಣಕ್ಕೆ ೨.೨೫ ಗ್ರಾಂ ಆಹಾರ ವಿನಿ ಯೋಗಿಸುತ್ತದೆ. ಹೊರಗಿನ ಯಾವುದರಿಂದಲೂ ಇದನ್ನು ಹೆಚ್ಚಿಸಲು ಸಾಧ್ಯವಿಲ್ಲ. ಇದು ನಿಸರ್ಗ ನಿಯಮ. ನಾವೀಗ ಒಂದು ಗಿಡ ಗಾಳಿ, ನೀರು, ಬೆಳಕುಗಳಿಂದ ಪಡೆಯುವುದನ್ನು ನೋಡಿದ್ದೇವೆ. ಇನ್ನು ಮಣ್ಣಿನಿಂದ ಪಡೆಯುವುದನ್ನು ನೋಡೋಣ: ಬೆಳೆ ಬೆಳೆಯಲು ಗಾಳಿ, ನೀರು, ಬೆಳಕು ಎಷ್ಟು ಮುಖ್ಯವೋ ಮಣ್ಣು ಕೂಡ ಅಷ್ಟೇ ಮುಖ್ಯ. ಆದರೆ ಗಿಡ ಮಣ್ಣಿನಿಂದ ಪಡೆಯುವುದಾದರೂ ಎಷ್ಟು?

ನೀವೇ ಈ ಪ್ರಯೋಗ ಮಾಡಿ ನೋಡಿ. ಒಂದು ಕ್ವಿಂಟಾಲ್‌ನಷ್ಟು ಕಬ್ಬಿನ ಜಲ್ಲೆಗಳನ್ನು ಕಡಿದು ತನ್ನಿ. ಕಡಿದು ತಂದ ಕಬ್ಬುಗಳನ್ನು ತೂಕ ಹಾಕಿ. ಅಷ್ಟೂ-ಇಷ್ಟೂ ಬೇಡ. ಸರಿಯಾಗಿ ನೂರು ಕೆ.ಜಿ.ಯೇ ಇರಲಿ. ಆ ಕಬ್ಬುಗಳನ್ನು ಬಿಸಿಲಲ್ಲಿ ಪೂರ್ತಿ ಒಣಗಿಸಿ. ಒಣಗಿದ ಕಬ್ಬುಗಳನ್ನು ಈಗ ತೂಕಕ್ಕಿಡಿ. ಅವುಗಳ ತೂಕ ಕರಾರುವಾಕ್ಕಾಗಿ ೨೨ ಕೆ.ಜಿ. ಉಳಿದ ೭೮ ಕೆ.ಜಿ. ಏನಾಯಿತು? ಏನಾಯಿತೆಂದರೆ ಆ ಕಬ್ಬಿನಲ್ಲಿದ್ದ ನೀರೆಲ್ಲ ಆವಿ ಆಯಿತು. ಆ ನೀರು ವಾತಾವರಣದಿಂದ ಲಭಿಸಿದ್ದು; ಮತ್ತೆ ವಾತಾವರಣ ಸೇರಿತು. ಈಗ ಉಳಿದ ೨೨ ಕೆ.ಜಿ. ಒಣ ಕಬ್ಬುಗಳಿಗೆ ಬೆಂಕಿ ಹಚ್ಚಿ. ಉರಿದು ಬೂದಿಯಾಗಲಿ. ಕಡೆಗೆ ಉಳಿದ ಆ ಬೂದಿಯ ತೂಕ ಕೇವಲ ಒಂದೂವರೆ ಕೆ.ಜಿ.! ಅಂದರೆ ಆ ಇಡೀ ನೂರು ಕೆ.ಜಿ. ಕಬ್ಬಿನ ಜಲ್ಲೆಗಳಿಗೆ ಭೂಮಿಯ ಕೊಡುಗೆ ೧.೫ ಕೆ.ಜಿ. ಮಾತ್ರ. ಅಂದಮೇಲೆ ನಾವು ಟನ್‌ನಗಟ್ಟಲೆ ಕೊಟ್ಟ, ಕೊಟ್ಟಿಗೆ ಗೊಬ್ಬರ, NPK ಗಳೆಲ್ಲ ಎಲ್ಲಿ? ಆ ೨೨ ಕೆ.ಜಿ. ಕಬ್ಬು ಉರಿಯುವಾಗ ಸೂರ್ಯನಿಂದ ಬಂದದ್ದು ಜ್ವಾಲೆ ರೂಪದಲ್ಲಿ ಹೋಯಿತು, ಕಾರ್ಬನ್ ಡೈ ಆಕ್ಸೈಡ್‌ನಿಂದ ಬಂದದ್ದು ಹೊಗೆಯ ರೂಪ ತಾಳಿತು. ಈ ಹಿನ್ನೆಲೆಯಲ್ಲೇ ನಾವು ಬೆಳೆಯ ವಿಷಯ ಗಮನಿಸಬೇಕು. ನಾವು ಬೆಳೆವ ಯಾವುದೇ ಬೆಳೆ ಇರಬಹುದು- ಅದು ಶೇಕಡ ೯೮.೫ರಷ್ಟು ವಾತಾವರಣದಿಂದಲೇ ಪಡೆಯುತ್ತದೆ. ಉಳಿದ ಶೇಕಡ ೧.೫ರಷ್ಟು ಭೂಮಿಯಿಂದ ಪಡೆಯುತ್ತದೆ. ಬೆಳೆಗೆ ಬೇಕಾದ ಆ ಶೇಕಡ ೧.೫ರ ವ್ಯವಸ್ಥೆಗಾಗಿ ನಮ್ಮಲ್ಲಿ ಎಷ್ಟೆಲ್ಲ ದೊಡ್ಡ ವ್ಯವಸ್ಥೆ ಇದೆ ಗೊತ್ತೆ? ಆ ವ್ಯವಸ್ಥೆಯೇ ಇಂದು ಇಡೀ ಕೃಷಿಯನ್ನು ಅಧೋಗತಿಯ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ.

ಸಸ್ಯದ ಬೆಳವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳು ಭೂಮಿಯಲ್ಲೇ ಇವೆ. ಬಂಜರು ಅಂತ ನಾವು ಭಾವಿಸುವ ಮಣ್ಣಿನಲ್ಲೂ ಹೇರಳವಾದ ಪೋಷಕಾಂಶಗಳಿವೆ. ೧೯೨೪ರಲ್ಲಿ ಅಮೆರಿಕಾದ ಡಾ.ಕ್ಲಾರ್ಕ್ ಮತ್ತು ಡಾ.ವಾಷಿಂಗ್ಟನ್ ಎಂಬ ಜಗದ್ವಿಖ್ಯಾತ ಭೂಗರ್ಭ ವಿಜ್ಞಾನಿಗಳು ಭಾರತಕ್ಕೆ ಬಂದಿದ್ದರು. ಬರ್ಮಾಸೇಲ್ ಎಂಬ ಕಂಪನಿಯ ಪರವಾಗಿ ಭಾರತದ ನಾನಾ ಭಾಗಗಳಲ್ಲಿ ತೈಲ ಹಾಗೂ ಖನಿಜ ನಿಕ್ಷೇಪಗಳನ್ನು ಪತ್ತೆ ಹಚ್ಚುವುದು ಅವರ ಉದ್ದೇಶವಾಗಿತ್ತು. ಆ ಹಿನ್ನೆಲೆಯಲ್ಲಿ ಅವರು ದೇಶದಾದ್ಯಂತ ನೂರಾರು ಸಂಖ್ಯೆಯಲ್ಲಿ ಸಹಸ್ರ ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆಸಿದರು. ಪ್ರತಿ ಬಾರಿ ಬಾವಿ ಕೊರೆಸುವಾಗಲೂ ವ್ಯವಸ್ಥಿತ ರೀತಿಯಲ್ಲಿ ಮಣ್ಣಿನ ಸ್ಯಾಂಪಲ್‌ಗಳನ್ನು ಕಲೆ ಹಾಕಿದರು. ಪ್ರತೀ ಅರ್ಧ ಅಡಿ ಮಣ್ಣಿಗೂ ಒಂದೊಂದು ಬ್ಯಾಗ್ ಇಟ್ಟು; ಬ್ಯಾಗ್ ನಂ.೧, ಬ್ಯಾಗ್ ನಂ.೨, ಬ್ಯಾಗ್ ನಂ.೩ ರೀತಿಯಲ್ಲಿ ಸಾವಿರ ಅಡಿ ಆಳದವರೆಗೆ ಎರಡು ಸಾವಿರ ಮಾದರಿಗಳನ್ನು ಸಂಗ್ರಹಿಸಿದರು. ಹಾಗೆ ಸಂಗ್ರಹಿಸಿದ ಮಣ್ಣಿನ ಮಾದರಿಗಳ ವಿಶ್ಲೇಷಣೆ ಇಂದಿಗೂ ಅಧಿಕೃತ ದಾಖಲೆಗಳಾಗಿ ಉಳಿದಿವೆ. ಕ್ಲಾರ್ಕ್ ಮತ್ತು ವಾಷಿಂಗ್ಟನ್‌ರ ಆ ವರದಿಗಳ ಪ್ರಕಾರ ಭಾರತದ ಪ್ರತಿ ಇಂಚಿಂಚು ಮಣ್ಣಿನಲ್ಲೂ ಸಸ್ಯಕ್ಕೆ ಬೇಕಾದ ಎಲ್ಲ ಬಗೆಯ ಪೋಷಕಾಂಶಗಳು ಅಡಗಿವೆ. ಸಾವಿರ ಅಡಿ ಆಳದಲ್ಲೂ ಆ ಪೋಷಕಾಂಶಗಳಿಗೆ ಕೊರತೆಯೆಂಬುದಿಲ್ಲ. ಗುಲ್ಬರ್ಗಾದಲ್ಲಿರುವ ಕೇಂದ್ರ ಸರಕಾರದ ಕೃಷಿ ಸಂಶೋಧನಾ ಕೇಂದ್ರದ ಅಧ್ಯಯನ ವರದಿಗಳು ಇದೇ ಮಾತನ್ನು ಹೇಳುತ್ತವೆ. ನಮ್ಮ ಭೂ ವಿಜ್ಞಾನಿ ಮತ್ತು ಕೃಷಿ ವಿಜ್ಞಾನಿಗಳಿಗೂ ಇದು ಮನವರಿಕೆಯಾಗಿದೆ. ಇಷ್ಟೆಲ್ಲ ಗೊತ್ತಿರುವ ನಮ್ಮ ವಿಜ್ಞಾನಿಗಳು ಬೆಳೆ ಬೆಳೆಯುವ ವಿಷಯದಲ್ಲಿ ರಾಸಾಯನಿಕ ಗೊಬ್ಬರಗಳಿಗೇಕೆ ಜೋತುಬಿದ್ದಿದ್ದಾರೆ. ರಾಸಯನಿಕ ಗೊಬ್ಬರಗಳ ದುಷ್ಪರಿಣಾಮಗಳು ತಿಳಿದ ಮೇಲೆಯೂ ಸಹ ಪೂರ್ತಿ ಅಲ್ಲದಿದ್ದರೂ ಸ್ವಲ್ಪವಾದರೂ ಕೊಡಲೇಬೇಕೆಂದು ವಾದಿಸುತ್ತಾರೆ ಏಕೆ?

ನಿಸರ್ಗ ಕೃಷಿಯಲ್ಲಿ ‘ಸಸ್ಯಕ್ಕೆ ಪೋಷಕಾಂಶಗಳ ಕೊರತೆ ಇದೆ’ ಎಂಬ ಮಾತೇ ಉದ್ಭವವಾಗುವುದಿಲ್ಲ. ಇದನ್ನು ಮತ್ತಷ್ಟು ಪರಿಶೀಲಿಸಿ ಜೀವಾಮೃತದ ಚಮತ್ಕಾರದೆಡೆಗೆ ಸಾಗೋಣ.

ಮಾನವ ಶರೀರ ನೂರಾರು ಧಾತುಗಳಿಂದ ನಿರ್ಮಾಣವಾಗಿದೆ. ಹಾಗೆಯೇ ಸಸ್ಯವೂ ಕೂಡ. ಸಸ್ಯದ ಬೆಳವಣಿಗೆಯ ಹಿಂದೆ ೧೦೮ ತತ್ವಗಳು ಕೆಲಸ ಮಾಡುತ್ತವೆ. ವಿಜ್ಞಾನ ಅವುಗಳನ್ನು ಈ ರೀತಿ ವರ್ಗೀಕರಿಸಿದೆ.

ಭಾಗ
ಇಂಗಾಲ (ಕಾರ್ಬನ್)
ಜಲಜನಕ (ಹೈಡ್ರೋಜನ್)
ಆಮ್ಲಜನಕ (ಆಕ್ಸಿಜನ್)

ಭಾಗ
ನೈಟ್ರೋಜನ್ (ಸಾರಜನಕ)
ಫಾಸ್ಪರಸ್ (ರಂಜಕ)
ಪೊಟ್ಯಾಷಿಯಂ
NPK

ಭಾಗ
ಕ್ಯಾಲ್ಸಿಯಂ (ಸುಣ್ಣ)
ಸಲ್ಫರ್ (ಗಂಧಕ)
ಮೆಗ್ನೀಷಿಯಂ

ಭಾಗ
ಮೈಕ್ರೋ ನ್ಯೂಟ್ರಿಯೆಂಟ್ಸ್
(ಸೂಕ್ಷ್ಮ ಪೋಷಕಾಂಶಗಳು ಅಥವಾ ಸೂಕ್ಷ್ಮ ಅನ್ನ ದ್ರವ್ಯಗಳು)

ಬೆಳೆಯ ಬೆಳವಣಿಗೆಯ ಹಿಂದೆ ಮೇಲಿನ ಮೊದಲ ಮೂರು ಭಾಗಗಳ ಒಂಬತ್ತು ಅಂಶಗಳು ಪ್ರಧಾನ ಪಾತ್ರವನ್ನೂ; ನಾಲ್ಕನೇ ಭಾಗದ ಉಳಿದ ೯೯ ಅಂಶಗಳು ಆಂಶಿಕ ಪಾತ್ರವನ್ನೂ ನಿರ್ವಹಿಸುತ್ತವೆ.

ಸೂಕ್ಷ್ಮ ಅನ್ನ ದ್ರವ್ಯಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಹೆಸರಿಸಬಹುದು :

ಕಬ್ಬಣ, ಮ್ಯಾಂಗನೀಸ್, ಬೋರಾನ್, ತಾಮ್ರ, ಸತು, ಕ್ಲೋರಿನ್, ಮಾಲಿಬ್ಡಿನಂ, ಸೆಲಿನಿಯಂ, ವನೆಡಿಯಂ, ಸಿಲಿಕಾನ್, ಐಯೋಡಿನ್, ಕ್ರೋಮಿಯಂ, ಪ್ಲೋರಿನ್, ಬ್ರೋಮೈನ್, ಲಿಥಿಯಂ, ಸೋಡಿಯಂ, ರುಬಿಡಿಯಂ, ಸೆಸಿಯಂ, ಸ್ಟ್ರಾಂಟಿಯಂ, ತವರ, ಕೋಬಾಲ್ಟ್… ಇತ್ಯಾದಿ.

ಮೇಲೆ ತಿಳಿಸಿರುವ ಧಾತುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕ ವಾತಾವರಣದಿಂದ ಬೆಳೆಗಳಿಗೆ ಲಭ್ಯ. ನೈಟ್ರೋಜನ್ ಕೂಡ ವಾತಾವರಣದಲ್ಲಿದೆ. ಆದರೆ ಅದು ಎಲ್ಲ ಬೆಳೆಗಳಿಗೂ ನೇರವಾಗಿ ದೊರೆಯುವುದಿಲ್ಲ. ದ್ವಿದಳ ಧಾನ್ಯದ ಗಿಡಗಳ ಬೇರಿನ ಗಂಟುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಬೆಳೆಗಳಿಗೆ ಪೂರೈಸುತ್ತವೆ. ಇನ್ನುಳಿದಂತೆ ರಂಜಕ, ಪೊಟ್ಯಾಷ್, ಸುಣ್ಣ ಇತ್ಯಾದಿ ಏನೇ ಇರಬಹುದು ಎಲ್ಲವನ್ನೂ ಕೂಡ ಜೀವಾಮೃತದಲ್ಲಿರುವ ಜೀವಾಣುಗಳು ಪೂರೈಸುತ್ತವೆ. ಇದನ್ನು ಮತ್ತಷ್ಟು ವಿವರವಾಗಿ ನೋಡೋಣ.

ಸಕಲೆಂಟು ಜೀವರಾಶಿಗಳ ಅಸ್ತಿತ್ವಕ್ಕೆ ಸೂರ್ಯನೇ ಕಾರಣ. ವಾತಾವರಣದಲ್ಲಿರುವ ಕಾರ್ಬನ್, ಆಕ್ಸಿಜನ್ ಮತ್ತು ಹೈಡ್ರೋಜನ್‌ಗಳನ್ನು ಗಿಡ ತಾನಾಗಿಯೇ ಪಡೆಯುತ್ತದೆ. ಅದಕ್ಕಾಗಿ ಹೊರಗಿನ ಸಹಾಯ, ಸಹಕಾರಗಳು ಬೇಕಾಗಿಲ್ಲ. ಈ ಕ್ರಿಯೆಗೆ ಸೂರ್ಯನ ಸಹಕಾರ ಇದ್ದೇ ಇದೆ.

ಇನ್ನು ನೈಟ್ರೋಜನ್. ನಮ್ಮ ವಾತಾವರಣವನ್ನು ನೈಟ್ರೋಜನ್‌ನ ಮಹಾ ಸಾಗರವೆಂತಲೇ ಕರೆಯಬಹುದು. ವಾತಾವರಣದಲ್ಲಿರುವ ನೈಟ್ರೋಜನ್‌ನ ಪ್ರಮಾಣ ಎಷ್ಟು ಗೊತ್ತೆ? ಶೇಕಡ ೭೮.೬ ಈ ಭೂಮಿಯ ಮೇಲೆ ೪೮ ಸಾವಿರ ಜಾತಿ, ಉಪ ಜಾತಿಗಳ ಸತ್ಯ ಪ್ರಭೇದಗಳಿವೆ. ಇವುಗಳಲ್ಲಿ ದ್ವಿದಳ ಧಾನ್ಯಗಳ ಸಸ್ಯಗಳು ಮಾತ್ರ ವಾತಾವರಣದಲ್ಲಿರುವ ಸಾರಜನಕವನ್ನು ಪಡೆದುಕೊಳ್ಳುವ ಸೌಭಾಗ್ಯ ಹೊಂದಿವೆ. ಉಳಿದ ಬಹುತೇಕ ಸಸ್ಯಗಳಿಗೆ ಈ ಸೌಭಾಗ್ಯವಿಲ್ಲ. ಮುಂಗಾರಿನ ಮಿಂಚು, ಗುಡುಗು ಗಳಾಗರ್ಭಟದ ಮಳೆಯಲ್ಲಿ ಶೇಕಡ ೨೫ರಷ್ಟು ಸಾರಜನಕ ಸಸ್ಯ ಸಂಕುಲಕ್ಕೆ ಲಭ್ಯ. ಈ ಸಾರಜನಕ ಕೂಡ ಮಣ್ಣಿನಿಂದಲೇ ಹವಾಗೋಳಕ್ಕೆ (ವಾತಾವರಣಕ್ಕೆ) ಹೋದದ್ದು! ಬೇಸಿಗೆಯ ಸುಂಟರಗಾಳಿ ಧೂಳಿನೊಂದಿಗೆ ಮಣ್ಣಿನ ಮೇಲ್ಮೈಗಳಲ್ಲಿರುವ ಜೀವಾಣು ಮಣ್ಣನ್ನು ಹೊತ್ತೊಯ್ಯುತ್ತದೆ. ಮುಂಗಾರು ಗುಡುಗು, ಮಿಂಚುಗಳಲ್ಲಿ C6H126+N2 ಇದು ಅಮಿನೋ ಆಮ್ಲವಾಗಿ ಮತ್ತೆ ಭೂಮಿಗೆ ಹಿಂದಿರುಗುತ್ತದೆ. ಈ ಅಮಿನೊ ಆಮ್ಲ ತಾರತಮ್ಯವಿರದೆ ಜಗದೆಲ್ಲೆಡೆಗೂ ಮಳೆಯ ಜೊತೆ ಸುರಿಯುತ್ತದೆ. ಇದು ಪ್ರೋಟೀನ್ ತಯಾರಿಸಿ ಸಸ್ಯದ ಬೆಳವಣಿಗೆಗೆ ನೆರವಾಗುತ್ತದೆ. ಇನ್ನುಳಿದಂತೆ ಒಂದು ಎಕರೆಯಲ್ಲಿ ಬೆಳೆ ಬೆಳೆಯಲು ೩೧ ಕೆ.ಜಿ. ಸಾರಜನಕ ಸಾಕು. ನಿಸರ್ಗ ಕೃಷಿ ಅನುಸರಿಸಿದರೆ ಈ ೩೧ ಕೆ.ಜಿ ಸಾರಜನಕವನ್ನು ಹೊರಗಿನಿಂದ ತಂದುಹಾಕಬೇಕಾಗಿಲ್ಲ. ನೀವು ಬೆಳೆ ಬೆಳೆಯುವಾಗ ಏಕದಳ ಫಸಲುಗಳೊಂದಿಗೆ ದ್ವಿದಳ ಧಾನ್ಯಗಳ ಫಸಲನ್ನೂ ಬೆಳೆಯಿರಿ. ಉದ್ದು, ಹೆಸರು, ತೊಗರಿ, ಅಲಸಂದೆ, ಕಡ್ಲೆ, ನೆಲಗಡಲೆ, ಬಟಾಣಿ, ಗೋರಿಕಾಯಿ, ಮೆಂತ್ಯ… ಹೀಗೆ ಯಾವುದೇ ದ್ವಿದಳ ಧಾನ್ಯದ ಬೇರುಗಳಲ್ಲಿ ಗಂಟುಗಳಿರುತ್ತವೆ. ಆ ಗಂಟುಗಳಲ್ಲಿರುವ ರೈಜೋಬಿಯಂ ಜೀವಾಣುಗಳು ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಳ್ಳುತ್ತವೆ. ನಿಸರ್ಗ ರೈಜೋಬಿಯಂ ಜೀವಾಣುಗಳಿಗೆ ಮೂರು ಪ್ರಮುಖ ಜವಾಬ್ದಾರಿಗಳನ್ನು ವಹಿಸಿದೆ.

೧. ಯಾವುದೇ ದ್ವಿದಳ ಧಾನ್ಯದ ಗಿಡ ತನ್ನ ಬೆಳವಣಿಗೆಗೆ ಬೇಕಾದ ಶೇಕಡ ೧೪ರಷ್ಟು ಸಾರಜನಕವನ್ನು ತಾನೇ ಬಳಸಿಕೊಳ್ಳುವಂತೆ ಮಾಡುವುದು.

೨. ತನ್ನ ಸುತ್ತಲೂ ಇರುವ ಇತರ ಗಿಡಗಳಿಗೆ ಅಗತ್ಯವೆನಿಸುವ ಸಾರಜನಕವನ್ನು ಒದಗಿಸುವುದು.

೩. ಮತ್ತು ಮುಂದಿನ ಫಸಲುಗಳ ಅಗತ್ಯಕ್ಕಾಗಿ ಉಳಿದ ಸಾರಜನಕವನ್ನು ಭೂಮಿಯಲ್ಲಿ ಸ್ಥಿರೀಕರಿಸುವುದು.

ನಿಸರ್ಗ ಎಷ್ಟು ನಾಜೂಕಾಗಿ ಈ ಕೆಲಸವನ್ನು ನಿರ್ವಹಿಸಿದೆ ನೋಡಿ. ನಮ್ಮ ಭತ್ತ, ರಾರಿ, ಫಸಲುಗಳಿಗೂ ನಾವು ಹೊರಗಿನಿಂದ ಸಾರಜನಕ ಹಾಕಬೇಕಾಗಿಲ್ಲ. ಜೊತೆಗೆ ಅವುಗಳೊಂದಿಗೆ ದ್ವಿದಳ ಧಾನ್ಯದ ಬೆಳೆ ಬೆರೆಸಬೇಕಾದ ಅಗತ್ಯವೂ ಇರುವುದಿಲ್ಲ. (ರಾಗಿ ಜೊತೆ ದ್ವಿದಳ ಧಾನ್ಯಗಳ ಸಾಲುಗಳನ್ನು ಬಿತ್ತುವವರು ಬಿತ್ತಬಾರದೆಂದು ಇದರ ಅರ್ಥವಲ್ಲ. ರಾಗಿ ಜೊತೆ ದ್ವಿದಳ ಧಾನ್ಯ ಬಿತ್ತಿ ಮತ್ತು ವೈವಿಧ್ಯತೆಗೆ ಹೆಚ್ಚು ಗಮನ ಕೊಡಿ.) ಯಾಕೆಂದರೆ ಆ ಬೆಳೆಗಳಿಗೆ ಯೂರಿಯಾ ಸರಬರಾಜು ಮಾಡುವ ಕೆಲವು ಸೂಕ್ಷ್ಮ ಜೀವಾಣುಗಳಿವೆ.

ಆ ಜೀವಾಣುಗಳು:

೧. Aceto Bacter (ಅಸಿಟೋ ಬ್ಯಾಕ್ಟರ್)

೨. Azoto Bacter (ಅಜಿಟೋ ಬ್ಯಾಕ್ಟರ್)

೩. Azospirillum (ಅಜೊಸ್ಪೈರಿಲಮ್)

೪. Biegerinkia (ಬೈಜಿರಿಂಕಿಯಾ)

ಈ ನಾಲ್ಕು ಜೀವಾಣುಗಳು ಸಗಣಿಯಲ್ಲಿರುತ್ತವೆ. ಇವು ಜೀವಾಮೃತದಲ್ಲಿ ವೃದ್ಧಿಯಾಗಿ ಈ ಫಸಲುಗಳಿಗೆ ಸಾರಜನಕ ಪೂರೈಸುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಯಾವುದೇ ಬೆಳೆಗಳಿರಲಿ (ಕಬ್ಬು, ಬಾಳೆ, ಅಡಿಕೆ, ತೆಂಗು, ಮಾವು, ಸಪೋಟ, ಸೀಬೆ, ದಾಳಿಂಬೆ, ದ್ರಾಕ್ಷಿ, ವೆನಿಲ ಇತ್ಯಾದಿ ಸೇರಿ.)

ಬೆಳೆ ಬೆಳೆಯುವ ಕಾರಣಕ್ಕೆ ಗೊಬ್ಬರದ ಅಂಗಡಿಗಳಿಂದ ಯೂರಿಯಾ ಮೂಟೆಗಳನ್ನು ಹೊತ್ತು ತರಬೇಕಾಗಿಲ್ಲ ಅಲ್ಲವೆ?