ಸೂಪರ್ ಫಾಸ್ಫೇಟ್ (ರಂಜಕ)

ಬೆಳೆಗಳಿಗೆ ಮುಖ್ಯವಾಗಿ ಬೇಕಾದ ರಂಜಕ ಕೂಡ ನಮ್ಮ ಭೂಮಿಯಲ್ಲಿದೆ. ಆದರೆ ಇದು ಕೂಡ ಬೆಳೆಗಳಿಗೆ ನೇರವಾಗಿ ಸಿಗುವುದಿಲ್ಲ. ನಿಸರ್ಗದತ್ತ ಪರಿಸರದಲ್ಲಿ ಇಂಥ ಸ್ಥಿತಿ ಉದ್ಭವವಾಗುವುದಿಲ್ಲ. ಆದರೆ ನಾವು ರಾಸಾಯನಿಕ ಕೃಷಿ ಮಾಡಿ, ಮಣ್ಣಿನಲ್ಲಿ ರಂಜಕ ಸರಬರಾಜು ಮಾಡುವ ಜೀವಾಣುಗಳನ್ನು ಹತ್ಯೆಗೈದಿರುವ ಪರಿಣಾಮದಿಂದ-ರಂಜಕವನ್ನು ಕೂಡ ಹೊರಗಿನಿಂದ ತಂದು ಉಣಬಡಿಸಬೇಕಾದ ದುಸ್ಥಿತಿ ಎದುರಾಗಿದೆ. ಭೂಮಿಯಲ್ಲಿ ರಂಜಕದ ಕಣಗಳು ಏಕದಳ, ದ್ವಿದಳ, ತ್ರಿದಳ ರೂಪಗಳಲ್ಲಿವೆ. ಅವುಗಳ ಸ್ವರೂಪ ಗಮನಿಸಿ.

೧. ಏಕದಳ: O- One gramule – Mono Valent Ortho Phosphate

೨. ದ್ವಿದಳ: ೦೦ – Divalent Orth Phosphate

೩. ತ್ರಿದಳ: ೦೦೦- Tri Valent Ortho Phosphate

ಸದರಿ ರಂಜಕದ ಕಣಗಳನ್ನು ವಿಭಜಿಸಿ ಸಸ್ಯಗಳಿಗೆ ಸರಬರಾಜು ಮಾಡುವ ಶಕ್ತಿ ಸಗಣಿಯಲ್ಲಿರುವ ಪಿಎಸ್‌ಬಿ ಜೀವಾಣುಗಳಿಗಿದೆ. ಈ ಜೀವಾಣುಗಳು ದೇಸಿ ಆಕಳ ಕರುಳಲ್ಲಿ ಹುಟ್ಟುತ್ತವೆ. ಸಗಣಿ ಮೂಲಕ ಹೊರಬರುತ್ತವೆ. ಹತ್ತು ಕೆ.ಜಿ. ಸಗಣಿಯಲ್ಲಿ ೩೦ ಲಕ್ಷ ಪಿಎಸ್‌ಬಿ ಜೀವಾಣುಗಳಿರುತ್ತವೆ. ಇವು ಜೀವಾಮೃತದಲ್ಲಿ ವೃದ್ಧಿಯಾಗುತ್ತವೆ. ಒಂದು ಗ್ರಾಂ ಜೀವಾಮೃತದಲ್ಲಿ ಇವುಗಳ ಸಂಖ್ಯೆ ೫೦೦ ಕೋಟಿಗೂ ಮೀರಿರುತ್ತದೆ. ಜೀವಾಮೃತ ಭೂಮಿಗೆ ಬಿದ್ದಕೂಡಲೆ ಭೂಮಿಯ ಆಂತರಿಕ ಸ್ವರೂಪವೇ ಬದಲಾಗುತ್ತದೆ. ಹೇಗೆ ಒಂದು ಕೊಡ ಹಾಲು ಹೆಪ್ಪಾಗಲು ಒಂದು ಚಮಚೆ ಮೊಸರು ಸಾಕೋ ಹಾಗೆ ಇಡೀ ಭೂಮಿಯಲ್ಲಿ ಆ ಪ್ರಕ್ರಿಯೆ ಜರುಗಲು ನಿರ್ದಿಷ್ಟಪಡಿಸಿದ ಜೀವಾಮೃತ ಸಾಕು. ಒಂದು ಚಮಚೆ ಮೊಸರಿನಲ್ಲಿ ಅಗಣಿತ ಸಂಖ್ಯೆಯಲ್ಲಿ ಲ್ಯಾಕ್ಟ್ರೋಬ್ಯಾಸಿಲಸ್ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಹಾಲು ಹೆಪ್ಪಾಗುವ ಕ್ರಿಯೆಯನ್ನು ತೀವ್ರಗೊಳಿಸುತ್ತವೆ. ಹಾಗೆಯೇ ಭೂಮಿಗೆ ಬಿದ್ದ ಜೀವಾಮೃತದಲ್ಲಿರುವ ಬ್ಯಾಕ್ಟೀರಿಯಾಗಳು ಬೆಳೆಗೆ ಬೇಕಾದ ಸಸ್ಯ ಪೋಷಕಾಂಶಗಳನ್ನು ಪೂರೈಸಲು ಟೊಂಕಕಟ್ಟಿ ನಿಲ್ಲುತ್ತವೆ.

ಆಹಾರ ತಯಾರಿಕೆಗೆ ರಂಜಕದ ಅಗತ್ಯ ಬಿದ್ದಾಗಲೆಲ್ಲ ಗಿಡದ ಎಲೆಗಳು ಬೇರಿಗೆ ಸಂದೇಶ ಕಳುಹಿಸಿತ್ತವೆ- ರಂಜಕ ಪೂರೈಸುವಂತೆ! ಇಲ್ಲಿ ಗಿಡದ ರೂಟ್ ಕ್ಯಾಪ್‌ಗಳು ರಿಮೋಟ್‌ಕಂಟ್ರೋಲ್ ಥರ ವ್ಯವಹರಿಸುತ್ತವೆ. ಎಲೆಗಳ ಸೂಚನೆ ಅರಿಯುತ್ತಿದ್ದಂತೆ ರೂಟ್‌ಕ್ಯಾಪ್ ಒಂದು ಬಗೆಯ ವಿಶಿಷ್ಟ ಗಂಧವನ್ನು ಹೊರಸೂಸುತ್ತದೆ. ಈ ವಿಶೇಷ ಗಂಧದ ಸೂಚನೆ ಅರಿಯುವ ಪಿ. ಎಸ್ ಬ್ಯಾಕ್ಟೀರಿಯಾಗಳು ಕೂಡಲೇ ರಂಜಕದ ಕಣಗಳನ್ನು ಸುತ್ತುವರಿದು ೧೬ ಬಗೆಯ ರಾಸಾಯನಿಕ ದ್ರವ್ಯಗಳನ್ನು ದ್ರವಿಸುವ ಮೂಲಕ ದ್ವಿದಳ, ತ್ರಿದಳ ರೂಪಗಳಲ್ಲಿರುವ ರಂಜಕದ ಕಣಗಳನ್ನು ವಿಭಜಸಿ ಬೇರಿನೆಡೆಗೆ ರವಾನಿಸುತ್ತವೆ. ಪಿ.ಎಸ್. ಬ್ಯಾಕ್ಟೀರಿಯಾಗಳಿದ್ದೆಡೆ ಯಾವ ಗಿಡ ಮರಗಳಿಗೂ ರಂಜಕದ ಕೊರತೆ ಇರುವುದಿಲ್ಲ. ಈಗ ಹೇಳಿ; ಬೆಳೆ ಬೆಳೆಯಲು ಹೊರಗಿನಿಂದ ರಂಜಕ ತರಬೇಕೆ?

ಪೊಟ್ಯಾಷ್

ಪೊಟ್ಯಾಷ್ ಕೂಡ ನಮ್ಮ ಭೂಮಿಯಲ್ಲೇ ಇದೆ. ಆದರೆ ಅದು ಕೂಡ ಬೆಳೆಗಳಿಗೆ ಲಭ್ಯವಿಲ್ಲ. ಯಾಕೆಂದರೆ ಪೊಟ್ಯಾಷ್ ಪೂರೈಸುವ ನಮ್ಮ ಬ್ಯಾಸಿಲಸ್ ಸಿಲಿಕೆಸ್ ಬ್ಯಾಕ್ಟೀರಿಯಾಗಳನ್ನೂ ಕೂಡ ನಮ್ಮ ರಾಸಾಯನಿಕ ಕೃಷಿ ಪದ್ಧತಿ ನಿರ್ನಾಮ ಮಾಡಿದೆ. ಮಣ್ಣಿನಲ್ಲಿರುವ ಪೊಟ್ಯಾಷ್- ಸಿಲಿಕೇಟ್ ಸಂಯುಕ್ತಗಳಿಂದ ಆವರಿಸಿಕೊಂಡಿದೆ. ಈ ಸಿಲಿಕೇಟ್ ಸಂಯುಕ್ತಗಳನ್ನು ವಿಭಜಿಸಿ ಬೆಳೆಗಳಿಗೆ ಪೊಟ್ಯಾಷ್ ಪೂರೈಸುವ ಕೆಲಸವನ್ನು Bacillus Silicus (ಬ್ಯಾಸಿಲಸ್ ಸಿಲಿಕಸ್) ಬ್ಯಾಕ್ಟೀರಿಯಾಗಳು ಮಾಡುತ್ತವೆ. ಈ ಬ್ಯಾಸಿಲಸ್ ಸಿಲಿಕಸ್ ಬ್ಯಾಕ್ಟೀರಿಯಾಗಳು ಕೂಡ ನಮ್ಮ ನಾಡತಳಿಯ ಹಸು, ಎತ್ತು, ಎಮ್ಮೆಗಳ ಕರುಳಲ್ಲಿ ಹುಟ್ಟಿ, ಸಗಣಿ ಮೂಲಕ ಹೊರ ಬಂದು, ಜೀವಾಮೃತದಲ್ಲಿ ವೃದ್ಧಿಯಾಗಿ ಭೂಮಿ ಸೇರುತ್ತವೆ. ಸಗಣಿಯಲ್ಲಿ ೬೭ ಪ್ರಜಾತಿಯ ಬ್ಯಾಸಿಲಸ್ ಸಿಲಿಕಸ್ ಬ್ಯಾಕ್ಟೀರಿಯಾಗಳಿರುತ್ತವೆ.

ಇದೀಗ ರೈಜೋಬಿಯಂ ಜೀವಾಣುಗಳು, ಫಾಸ್ಫೇಟ್ ಸಾಲ್ಯುಬಲೈಜಿಂಗ್ ಬ್ಯಾಕ್ಟೀರಿಯಾಗಳು ಮತ್ತು ಬ್ಯಾಸಿಲಿಸ್ ಸಿಲಿಕಸ್ ಬ್ಯಾಕ್ಟೀರಿಯಾಗಳು ಕ್ರಮವಾಗಿ ನಮ್ಮ ಜಮೀನುಗಳಿಗೆ ಯಾವುದೇ ಖರ್ಚಿಲ್ಲದೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳನ್ನು ಪೂರೈಸುತ್ತವೆ. ಅಂದಾದಮೇಲೆ ಇನ್ನು ಮುಂದೆ ಬೆಳೆ ಬೆಳೆಯಲು NPK ಹಾಕಬೇಕಾಗಿಲ್ಲ ಅಲ್ಲವೆ? ಹಾಗೆಯೇ ಜಗತ್ತಿನಲ್ಲಿರುವ ಎಲ್ಲ ರಸಗೊಬ್ಬರದ ಕಾರ್ಖಾನೆಗಳಿಗೂ ಬೀಗ ಜಡಿಯ ಬಹುದಲ್ಲವೆ?

ನಮ್ಮಲ್ಲಿ ಈ ಮೂರು ಸಸ್ಯ ಪೋಷಕಾಂಶಗಳಿಗೆ ಎಷ್ಟೆಲ್ಲ ದೊಡ್ಡ ವ್ಯವಸ್ಥೆ ಇದೆ ನೋಡಿ; ದೊಡ್ಡ ದೊಡ್ಡ ರಾಸಾಯನಿಕ ಕಾರ್ಖಾನೆಗಳು, ಮಾರಾಟ ಕೇಂದ್ರಗಳು; ದೊಡ್ಡ ದೊಡ್ಡ ಕೃಷಿ ವಿಶ್ವವಿದ್ಯಾಲಯಗಳು, ಅಧ್ಯಾಪಕರು, ಸಂಶೋಧಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು; ಸರಕಾರಿ ಇಲಾಖೆಗಳು, ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರಗಳು; ಬ್ಯಾಂಕುಗಳು, ಸಾಲಗಳು, ಸಬ್ಸಿಡಿಗಳು; ಕಡೆಗೆ ಆತ್ಮಹತ್ಯೆಗಳು! ಇಷ್ಟು ದೊಡ್ಡ ಭಾರೀ ವ್ಯವಸ್ಥೆ ಕೇವಲ ಓPಏ ಬಲದ ಮೇಲೆ ನಿಂತಿದೆ. ನಮ್ಮ ರೈತರಿಗೆ ಸಗಣಿಯ ಗಂಧ ಅರಿವಾದರೆ ಸಾಕು, ಈ ಇಡೀ ವ್ಯವಸ್ಥೆ ನಿಂತ ನಿಲುವಲ್ಲೆ ತನ್ನ ಕಾಲುಗಳ ಮೇಲೆ ತಾನೇ ಕುಸಿಯುತ್ತದೆ.

ಇನ್ನು ಬೆಳೆಗಳಿಗೆ ಬೇಕಾದ ಲಘು ಪೋಷಕಾಂಶಗಳತ್ತ ನೋಡೋಣ. ಈ ಲಘು ಪೋಷಕಾಂಶಗಳಿಗಾಗಿಯೂ ನಾವು ಮಾರುಕಟ್ಟೆಯತ್ತ ಹೋಗಬೇಕಾಗಿಲ್ಲ. ಬೆಳೆ ಬೆಳೆಯಲು ಬೇಕಾದ ಎಲ್ಲ ಪರಿಕರಗಳನ್ನು ನಿಸರ್ಗ ಆ ಬೆಳೆ ಬೆಳೆವ ಜಾಗದಲ್ಲೇ ಸೃಷ್ಟಿಸಿದೆ. ಹೀಗಾಗಿ ಭೂಮಿಯಲ್ಲಿರುವ ಇತರೆಲ್ಲ ಸಸ್ಯ ಪೋಷಕಾಂಶಗಳನ್ನು THIO OXIDENTS (ಥಿಯೋ ಆಕ್ಸಿಡೆಂಟ್ಸ್) FERROUS BACTERIA (ಫೆರೂಸ್ ಬ್ಯಾಕ್ಟೀರಿಯಾ) MHYCHORHIZA FUNGUS (ಮೈಕೋರೈಜಾ ಫಂಗಸ್ ಅಥವಾ ಮೈಕೋರೈಜಾ ಬ್ರೂಸಿ) ಮುಂತಾದವುಗಳು ಸರಬರಾಜು ಮಾಡುತ್ತವೆ. ಸಗಣಿಯಲ್ಲಿ ೩೬ ಬಗೆಯ ಥಿಯೋ ಆಕ್ಸಿಡೆಂಟ್ ಬ್ಯಾಕ್ಟೀರಿಯಾಗಳಿವೆ. ಇವು ಸಸ್ಯಗಳ ಗಂಧಕದ ಅಪೇಕ್ಷೆಯನ್ನು ಪೂರೈಸುತ್ತವೆ. ಫೆರೂಸ್ ಬ್ಯಾಕ್ಟೀರಿಯಾಗಳು ಕಬ್ಬಿಣ, ಮ್ಯಾಗ್ನೀಷಿಯಂ, ಬೋರಾನ್, ತಾಮ್ರ ಮುಂತಾದ ಖನಿಜ, ಲವಣಗಳನ್ನೆಲ್ಲ ಪೂರೈಸುತ್ತವೆ. ಮೈಕೋರೈಜಾ ಫಂಗಸ್, ವೆರಿಬಲ್ ಮುಂತಾದವುಗಳು ಸಸ್ಯಗಳ ಉಳಿದೆಲ್ಲ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತವೆ. ವಿಶೇಷವಾಗಿ ಮೈಕೋರೈಜಾ ಬ್ಯಾಕ್ಟೀರಿಯಾಗಳು ಮಹತ್ವಪೂರ್ಣವಾದ ಕೆಲಸಗಳನ್ನು ಪೂರೈಸುತ್ತವೆ. ಅವುಗಳನ್ನು ಬೆಳೆಗಳ ಪಾಲಿಗೆ ‘ಅಮ್ಮ’, ‘ಅನ್ನಪೂರ್ಣೆ’ ಎಂದೆಲ್ಲಾ ಕರೆಯಬಹುದು. ಸಸ್ಯಗಳಿಗೆ ಕೊರತೆಯಿರುವ ಎಲ್ಲದರ ಉಸ್ತುವಾರಿಯನ್ನು ಇವು ನೋಡಿಕೊಳ್ಳುತ್ತವೆ. ಎಲ್ಲಕ್ಕಿಂತ ಮಿಗಲಾಗಿ ಇವು ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತವೆ. ಜೊತೆಗೆ ಕಸ-ಕಡ್ಡಿಗಳ ಹೊದಿಕೆಯನ್ನು ಬೇಗ ಕೊಳೆಯುವಂತೆಯೂ ನೋಡಿಕೊಳ್ಳುತ್ತವೆ. ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಣ್ಣುಗಳಲ್ಲಿ ಇವು ಯಥೇಚ್ಛ ಸಂಖ್ಯೆಯಲ್ಲಿವೆ. ಮಣ್ಣಿಗೆ ಜೀವಾಮೃತ ಬಿದ್ದ ಆ ಕ್ಷಣವೇ ಇವು ಜಾಗೃತವಾಗುತ್ತವೆ.

ಜೀವಾಮೃತದಲ್ಲಿ ಇಷ್ಟೆಲ್ಲ ಅಡಗಿದೆ. ಕಳೆದ ನಲವತ್ತು ವರ್ಷಗಳಿಂದ ನಮ್ಮ ರೈತ ವೃಥಾ ಬಳಲಿದ್ದಾನೆ. ಭೂಮಿಯೂ ನಲುಗಿ ಹೋಗಿದೆ.  ಈ ಕ್ಷಣವೇ ರಾಸಾಯನಿಕ ಕೃಷಿ ತ್ಯಜಿಸುವ ವಿಷಯದಲ್ಲಿ ಯಾರೂ ಹಿಂದೆ-ಮುಂದೆ ನೋಡಬೇಕಾಗಿಲ್ಲ. ದುಬಾರಿ ವೆಚ್ಚದಲ್ಲಿ ರಾಸಾಯನಿಕಗಳು ಮಾಡುವ ಕೆಲಸವನ್ನು ನಮ್ಮ ಜೀವಾಮೃತವೆ ಮಾಡುತ್ತದೆ. ನಾವು ಹೆಚ್ಚೆಚ್ಚು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿದಂತೆಲ್ಲ ಇಳುವರಿ ಕಮ್ಮಿಯಾಗುತ್ತಾ ಹೋಗುತ್ತದೆ, ಕಡೆಗೆ ಬೆಳೆ ಬೆಳೆವ ಭೂಮಿ ನಿರ್ಜೀವವಾಗುತ್ತದೆ. ಆದರೆ ಜೀವಾಮೃತ ಇಂಥಲ್ಲ; ಅದು ನಿಜಕ್ಕೂ ಅಮೃತ. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚು ಮಾಡುತ್ತಾ ಹೋಗುತ್ತದೆ. ಮಣ್ಣಿಗೆ ಮರುಜೀವ ತಂದುಕೊಡುತ್ತದೆ ಮತ್ತು ಪ್ರತಿ ಮಣ್ಣಿನ ಕಣ, ಕಣವೂ ಜಾಗೃತಿಯಿಂದಿರುವಂತೆ ನೋಡಿಕೊಳ್ಳುತ್ತದೆ.

ಭೂಮಿ ನಿಜಕ್ಕೂ ಅನ್ನಪೂರ್ಣೆ. ಬೆಳೆಗಾಗಿ ಬೇಕಾಗುವ ಎಲ್ಲ ತತ್ವಗಳು ಭೂಮಿ ಮತ್ತು ಪರಿಸರದಲ್ಲಿವೆ. ಜೀವಾಣುಗಳು ಮಾತ್ರ ಆಹಾರ ಸಿದ್ಧಪಡಿಸಿ ಒದಗಿಸುತ್ತವೆ. ಅದಕ್ಕೆ ತಕ್ಕ ವಾತಾವರಣವನ್ನು ಕಲ್ಪಿಸುವುದು ನಮ್ಮಿಂದ ಮಾತ್ರ (ರೈತರಿಂದ) ಸಾಧ್ಯ.

ನಾವೀಗ ನಿಸರ್ಗ ಕೃಷಿಯ ಮೂರನೇ ಗಾಲಿ ‘ಹೊದಿಕೆ’ಯತ್ತ ಹೊರಳೋಣ.

೧. ಬೇಸಾಯ ಭೂಮಿಗೆ ಹೊದಿಕೆಯ ಅಗತ್ಯವಿದೆಯೆ?

೨. ಅಗತ್ಯವಿದ್ಧರೆ ಅದು, ಸೂರ್ಯ ಕಿರಣಗಳು ಭೂಸ್ಪರ್ಶ ಮಾಡದಿರಲಿ ಅನ್ನುವ ಕಾರಣಕ್ಕಾಗಿಯೇ?

೩. ಅಥವಾ ಬೆಳೆದುದನ್ನು ಬೆಳೆದಲ್ಲಿಗೇ ಹಿಂದಿರುಗಿಸಬೇಕು ಎಂಬ ನಿಯಮದ ಕಾರಣಕ್ಕಾಗಿಯೇ?

೪. ಅವುಗಳಲ್ಲಿರುವ ಖನಿಜ ಮತ್ತು ಲವಣಾಂಶಗಳು ಮತ್ತೆ ಭೂಮಿಗೆ ಮರಳಲಿ ಅನ್ನುವ ಉದ್ದೇಶವೆ?

೫. ಆರ್ದ್ರತೆ ಕಾಯ್ದುಕೊಳ್ಳಲಿ ಎಂದೆ?

ಈ ಬಗೆಯ ಪ್ರಶ್ನೆಗಳು ಉದ್ಭವವಾಗಬಹುದು.

ನಿಸರ್ಗದಲ್ಲಿ ಮರ, ಗಿಡಗಳು ತಮ್ಮ ಆಹಾರದ ವ್ಯವಸ್ಥೆಯ್ನು ತಾವೇ ಮಾಡಿಕೊಳ್ಳುವ ನೆಲೆಯಲ್ಲಿ ಭೂಮಿ ಮತ್ತು ಭೂಮಿಯ ಆಳದಲ್ಲಿ ಜರುಗುವ ಮೂರು ಬಗೆಯ ಪ್ರಕ್ರಿಯೆಗಳು ಯಾವ ಬಗೆಯಲ್ಲಿ ನೆರವಾಗುತ್ತವೆ ಅನ್ನುವುದನ್ನು ಗಮನಿಸಿ.

ಈ ಪ್ರಕ್ರಿಯೆಗಳು:

೧. ಸೆಂಟ್ರಿ ಫ್ಯೂಗಲ್ ಫೋರ್ಸ್- ಇದು ಎಲ್ಲರೂ ಬಲ್ಲಂತೆ – ಸ್ಪೆಸಿಫಿಕ್ ಗ್ರಾವಿಟಿ ಫೋರ್ಸ್ (ಗುರುತ್ವಾಕರ್ಷಣ ಶಕ್ತಿ)

೨. ಕ್ಯಾಪಿಲರಿ ಫೋರ್ಸ್ (ಕೇಶಾಕರ್ಷಣ ಶಕ್ತಿ)

೩. ಕಂಟ್ರೋಲಿಂಗ್ ಫೋರ್ಸ್ – ನಿಯಾಮಾಕ್- (ಇದು ರಾಸಾಯನಿಕ ಕೃಷಿಯಲ್ಲಿ ಇರುವುದಿಲ್ಲ)

ಮಾನ್ಸೂನ್ ಶುರುವಾದಾಗ ಬಿದ್ದ ಮಳೆ ಭೂಮಿಯ ಆಳಕ್ಕೆ ಇಳಿಯುತ್ತದೆ, ಅಂತರ್ಜಲವಾಗಿಯೂ ರೂಪುಗೊಳ್ಳೂತ್ತದೆ. ಹಿಡಿದಿಡಲಾಗದ ಹೆಚ್ಚುವರಿ ನೀರು ಹಳ್ಳ- ಕೊಳ್ಳಗಳೆಡೆ ಹರಿಯುತ್ತದೆ. ಇದು ಗುರುತ್ವಾಕರ್ಷಣ ಬಲದಿಂದ ಆಗುವ ಕ್ರಿಯೆ. ಉತ್ತರ ನಕ್ಷತ್ರದ ಕೊನೆಯ ಪಾದ(ಸೆಪ್ಟೆಂಬರ್ ತಿಂಗಳ ಕೊನೆಯ ವಾರ ಮತ್ತು ಅಕ್ಟೋಬರ್ ತಿಂಗಳ ಮೊದಲ ವಾರ)ದಲ್ಲಿ ಈ ಕ್ರಿಯೆ – ಈ ಜವಾಬ್ದಾರಿ, ಕೇಶಾಕರ್ಷಣ ಶಕ್ತಿಗೆ ವರ್ಗಾವಣೆಯಾಗುತ್ತದೆ. ವರ್ಷಋತು ಮತ್ತು ಶರತ್‌ಋತುಗಳ ನಡುವಿನ ಈ ಕಾಲ ನಿಜಕ್ಕೂ ಸಂಧಿಕಾಲ. ನಿಸರ್ಗದಲ್ಲಿರುವ ಗಿಡಗಳ ಮಟ್ಟಿಗೆ ಇದು ಸಂಕಷ್ಟಮಯ. ಈ ಸಂದರ್ಭದಲ್ಲಿ ಬಿಸಿಲಿನ ಪ್ರಖರತೆ ಇದ್ದಕ್ಕಿಂತೆ ಹೆಚ್ಚಾಗುತ್ತದೆ. ವಾತಾವರಣದಲ್ಲಿ ಬಿಸಿ ಏರುತ್ತದೆ. ಒಂದರ್ಥದಲ್ಲಿ ಇದು ಅಕ್ಟೋಬರ್ ಬೇಸಿಗೆ. ಉತ್ತರ ಕರ್ನಾಟಕದಲ್ಲಿ ಈ ಮಿನಿ ಬೇಸಿಗೆಯನ್ನು ಬೆದಿ ಬಿಸಿಲುಕಾಲ ಎನ್ನುತ್ತಾರೆ. ಈ ಸಂದರ್ಭದಲ್ಲೇ ಕೇಶಾಕರ್ಷಣ ಶಕ್ತಿ ಜಾಗೃತಗೊಳ್ಳುತ್ತದೆ. ಈ ಜಾಗೃತಗೊಂಡ ಕೇಶಾಕರ್ಷಣ ಶಕ್ತಿ ಭೂಮಿಯ ಆಳದಲ್ಲಿರುವ ನೀರನ್ನು ಮೇಲ್ಪದರಕ್ಕೆ ತರುತ್ತದೆ. ಭೂಮಿಯ ಆಳದಿಂದ ತೇವಾಂಶವನ್ನು ತರುವಾಗ ಆ ತೇವಾಂಶದೊಂದಿಗೆ ಬೆಳೆಗೆ ಬೇಕಾದ ಎಲ್ಲ ಬಗೆಯ ಖನಿಜ-ಲವಣಾಂಶಗಳನ್ನು ಕೂಡ ತರುತ್ತದೆ. ಒಂದು ರೀತಿಯಲ್ಲಿ ಉತ್ತರ ನಕ್ಷತ್ರದ ಕೊನೆಯ ಚರಣದ ಹೊತ್ತಿಗೆ ಸಸ್ಯಗಳು ಭೂಮಿಯ ಮೇಲ್ಪದರಲ್ಲಿರುವ ಬಹುತೇಕ ಪೋಷಕಾಂಶಗಳನ್ನು ಹೀರಿಕೊಂಡಿರುತ್ತವೆ. ಈ ಸಂದರ್ಭದಲ್ಲಿ ಜರುಗುವ ಕೇಶಾಕರ್ಷಣ ಶಕ್ತಿಯಿಂದಾಗಿ ಆಳದಲ್ಲಿರುವ ಪೋಷಕಾಂಶಗಳು ಭೂಮಿಯ ಮೇಲ್ಪದರಕ್ಕೆ ಬಂದು ಗಿಡಗಳಿಗೆ ಲಭ್ಯವಾಗುತ್ತವೆ. ನೀರು ಮತ್ತು ತೇವಾಂಶದ ಜೊತೆ ಜೊತೆಗೆ ಮೇಲೆ ಬರುವ ಖನಿಜ-ಲವಣಾದಿಗಳ ಮೇಲ್ಪದರದಲ್ಲೇ ಉಳಿದು; ಹೆಚ್ಚುವರಿ ತೇವಾಂಶ ಮತ್ತು ನೀರು ವಾತಾವರಣದಲ್ಲಿ ಆವಿಯಾಗುತ್ತದೆ. ಹೀಗಾದಾಗ ವಾತಾವರಣವೂ ತಂಪಾಗುತ್ತದೆ. ಈ ಕ್ರಿಯೆ ನಿಸರ್ಗದತ್ತವಾಗಿ ಸಂಭವಿಸುವ ಕ್ರಿಯೆ. ಈ ಮೊದಲೇ ತಿಳಿಸಿದಂತೆ ಭೂಮಿಯ ಆಳಕ್ಕೆ ಹೋದಂತೆಲ್ಲ ಸಸ್ಯಕ್ಕೆ ಬೇಕಾದ ಪೋಷಕಾಂಶಗಳು ಹೆಚ್ಚಾಗುತ್ತಾ ಹೋಗಿರುತ್ತವೆ. ಮಾನ್ಸೂನ್ ಮಳೆಯ ದಿನಗಳಲ್ಲಿ ಗುರುತ್ವಾಕರ್ಷಣ ಬಲದಿಂದಾಗಿ ಮೇಲಿನಿಂದ ಕೆಳಕ್ಕಿಳಿಯುವ ಪೋಷಕಾಂಶಗಳು; ಕೇಶಾಕರ್ಷಣ ಶಕ್ತಿ ಕಾರ್ಯಾಚರಣೆ ಶುರುಮಾಡಿದ ಕೂಡಲೆ ಮೇಲ್ಪದರಕ್ಕೆ ಬರುತ್ತವೆ. ನಿಸರ್ಗದಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಈ ಗುರುತ್ವಾಕರ್ಷಣ ಮತ್ತು ಕೇಶಾಕರ್ಷಣ ಬಲಗಳು ಕಾಲಾನುಕಾಲಕ್ಕೆ ನಿಯಮಬದ್ಧವಾಗಿ ಜರುಗುವ ತಮ್ಮ ಕ್ರಿಯೆಗಳ ಮೂಲಕ ಅತ್ಯಂತ ಸುಸಂಬದ್ಧ ರೀತಿಯಲ್ಲಿ ನಿಯೋಜಿಸುತ್ತವೆ. ಈ ಕ್ರಿಯೆಯೇ ಬೆಟ್ಟದ ತುದಿಯಲ್ಲಿ, ಕಲ್ಲಲು ಬಂಡೆಯ ಮೇಲೆ ನಿಂತ ಸಸ್ಯವನ್ನೂ ಸಂರಕ್ಷಿಸುತ್ತದೆ. ನಿಸರ್ಗದ ಈ ಕ್ರಿಯೆಯ ಮುಂದೆ ಮಾನವ ನಿರ್ಮಿತ ಕೃಷಿ ಹೊಂಡ, ಕೃತಕ ನೀರು ಇಂಗಿಸುವಿಕೆ ಇತ್ಯಾದಿಗಳೆಲ್ಲ ಅರ್ಥಹೀನ ಅಲ್ಲವೆ? ಸತತವಾಗಿ ನಾಲ್ಕಾರು ವರ್ಷ ಮಳೆ ಬಾರದಿದ್ದರೂ ಸಹ ನಿಸರ್ಗದಲ್ಲಿರುವ ಸಸ್ಯ ಸಂಕುಲವನ್ನು ಕಾಪಾಡುವ ಶಕ್ತಿ ಈ ಬಲಗಳಿಗಿದ್ದೇ ಇದೆ. ವರ್ಷ ಮತ್ತು ಶರತ್ ಋತುಗಳ ನಡುವೆ ಆರಂಭವಾಗುವ ಕೇಶಾಕರ್ಷಣ ಬಲದ ಕೆಲಸ ಮತ್ತೆ ಮುಂಗಾರು ಶುರುವಾಗುವವರೆಗೂ ಅವಿಶ್ರಾಂತವಾಗಿ ಜರುಗುತ್ತದೆ.

ಗುರುತ್ವಾಕರ್ಷಣ ಮತ್ತು ಕೇಶಾಕರ್ಷಣ ಬಲಗಳಿಂದ ಮಾತ್ರವಲ್ಲದೆ ನಿಸರ್ಗವು ಮತ್ತೊಂದು ರೀತಿಯಲ್ಲಿ ಗಿಡಮರಗಳನ್ನು ಸಂರಕ್ಷಿಸುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಧೂಳು ಜಾಸ್ತಿ. ನಮ್ಮ ದನ, ಕರುಗಳು ಕೊಟ್ಟಿಗೆಯಿಂದ ಹೊಲಕ್ಕೆ, ಕಾಡಿಗೆ ಮೇವಿಗಾಗಿ ಓಡಾಡುತ್ತವೆ. ಕೊಟ್ಟಿಗೆಯಿಂದ ಹೋಗುವಾಗ ಅವುಗಳ ಗೊರಸುಗಳಿಗೆ ಸಗಣಿ-ಗಂಜಳ ಮೆತ್ತಿರುತ್ತೆ. ಅವು ಓಡಾಡುವಾಗ ಆ ಸಗಣಿ-ಗಂಜಳ ಮಣ್ಣಿನ ಕಣಗಳೊಂದಿಗೆ ಬೆರೆಯುತ್ತವೆ. ಮತ್ತೆ ಅವು ಮೇವಿಗಾಗಿ ಗೋಮಾಳ, ಕೆರೆ ಅಂಗಳ, ಹೊಲ, ಗದ್ದೆ, ತೋಟ, ಕಾಡು ಇತ್ಯಾದಿಗಳಲ್ಲಿ ಓಡಾಡುತ್ತವೆ. ಓಡಾಡುವ ಆ ಪ್ರಕ್ರಿಯೆಯಲ್ಲಿ ಅವುಗಳ ಗೊರಸಲ್ಲಿ ಜೀವಕಣಗಳು ಮೆತ್ತಿಕೊಳ್ಳುತ್ತವೆ. ಬರುವಾಗ ಹಾದಿಯಲ್ಲಿ ಆ ಜೀವಾಣುಗಳು ಮಣ್ಣು ಸೇರುತ್ತವೆ. ಜನ, ಜಾನುವಾರುಗಳ ತಿರುಗಾಟದಲ್ಲಿ ಮಣ್ಣು ಧೂಳಿನ ರೂಪ ತಾಳುತ್ತಿರುತ್ತದೆ. ಇತ್ತ ಅರಬ್ಬಿ ಸಮುದ್ರ, ದೇವ ಬಂಗಾಳ, ಹಿಂದೂ ಮಹಾಸಾಗರಗಳಲ್ಲಿ ಡಿಪ್ರೆಷನ್ ಶುರುವಾಗುವಾಗ ಬೆಟ್ಟ, ಗುಡ್ಡ, ಬಯಲುಗಾಡುಗಳಲ್ಲಿ ಸುಂಟರಗಾಳಿಗಳೇರ್ಪಡುತ್ತವೆ. ಹೀಗೆ ಏರ್ಪಟ್ಟ ಸುಂಟರಗಾಳಿ ನೆಲ-ಮುಗಿಲುಗಳನ್ನು ಚುಂಬಿಸುವುದುಂಟು, ಸುಂಟರಗಾಳಿಯಲ್ಲಿ ಮೇಲೆದ್ದ ಧೂಳಿನ ಕಣಗಳು ವಾಯುಗೋಳ ಸೇರುತ್ತವೆ. ಆ ಧೂಳಿನಲ್ಲಿ ಸುಣ್ಣ, ತಾಮ್ರ, ಜಿಂಕ್, ಪೊಟ್ಯಾಷ್, ಬೋರಾನ್, ಕ್ಲೋರಿನ್‌ಗಳೆಲ್ಲ ಸೇರುವುದುಂಟು. ಮಾನ್ಸೂನ್ ಮಳೆಯ ಗುಡುಗು ಮಿಂಚುಗಳ ಆರ್ಭಟದಲ್ಲಿ ಮೇಲೆ ಹೋದ ಸಸ್ಯ ಪೋಷಕಾಂಶಗಳಲ್ಲಿ ಕೆಲವು ರೂಪಾಂತರ ಗೊಳ್ಳುವುದುಂಟು. ಈ ಹಿನ್ನೆಲೆಯಲ್ಲಿ ಮುಂಗಾರು ಮಳೆಯಲ್ಲಿ ಮಳೆ ಹನಿಯೊಂದಿಗೆ ಅಮೋನಿಯಾ ಆಮ್ಲ ಸುರಿಯುವುದು. ಈ ಅಮೋನಿಯಾ ಆಮ್ಲವೇ ಗಿಡಕ್ಕೆ ಬೇಕಾದ ಸಾರಜನಕ. ಇದು ಪ್ರೋಟೀನ್ ಆಗಿ ರೂಪಾಂತರಗೊಳ್ಳುತ್ತದೆ. ಗಿಡಿಗಳಿಗೆ ಬೇಕಾದ ಸಾರಜನಕದಲ್ಲಿ ಶೇಕಡ ೨೫ರಷ್ಟು ಮುಂಗಾರು ಮಳೆಯ ಮೂಲಕ ಮಣ್ಣಿಗೆ ಲಭ್ಯವಾಗುತ್ತದೆ. ನಿಸರ್ಗ ಈ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ. ಜಗದೆಲ್ಲೆಡೆಗೂ ಅದು ಸಾರಜನಕವನ್ನು ಸಮಾನವಾಗಿ ವಿತರಣೆ ಮಾಡುತ್ತದೆ. ಹಾಗೆಯೇ ಸುಂಟರಗಾಳಿಯೊಂದಿಗೆ ಹವಾಗೋಲ ಸೇರಿದ್ದ ಇತರ ಪೋಷಕಾಂಶಗಳು ಮತ್ತೆ ಮರಳಿ ಮಣ್ಣಿಗೆ ಸೇರುತ್ತವೆ. ರಾಸಾಯನಿಕ ಕೃಷಿಯಲ್ಲಿ ಜೀವಾಣುಗಳು ಬದುಕಿ ಉಳಿಯುವ ಸಂಭವವಿಲ್ಲವಾದ್ದರಿಂದ ನಿಸರ್ಗದ ಬಳುವಳಿ ಆ ಕೃಷಿ ಜಮೀನುಗಳಿಗೆ ಪ್ರಾಪ್ತಿಯಾಗುವುದಿಲ್ಲ.

ನಿಸರ್ಗದಲ್ಲಿ ಗಿಡ-ಮರಗಳ ಬೆಳವಣಿಗೆಯ ಹಿಂದೆ ಇನ್ನೊಂದು ವಿಸ್ಮಯ ಅಡಗಿದೆ. ಅದೇನೆಂದರೆ, ಮಣ್ಣಿನಲ್ಲಿರುವ ಕೊರತೆಗಳನ್ನು ನೀಗಿಸುವ ಸ್ವಯಂಚಾಲಿತ ವ್ಯವಸ್ಥೆ. ಇದೂ ಕೂಡ ರಾಸಾಯನಿಕ ಕೃಷಿಗೆ ಪ್ರಾಪ್ತಿಯಾಗುವುದಿಲ್ಲ. ಉದಾಹರಣೆಗೆ ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆ ಇದೆ ಎಂದು ಭಾವಿಸಿ; ಆದರೆ ಅಲ್ಲಿ ತಾಮ್ರ ಸ್ವಲ್ಪ ಹೆಚ್ಚಿರಬಹುದು ಅಂದುಕೊಳ್ಳಿ. ಇಲ್ಲದಿದ್ದರೆ ತಾಮ್ರ ಇಲ್ಲ- ಸುಣ್ಣ ಇದೆ ಅಂದುಕೊಳ್ಳಿ; ಆಗ ನಿಸರ್ಗ ಸ್ವಯಂತಾನೆ ಮುಂದೆ ಬಂದು ಈ ಏರುಪೇರುಗಳನ್ನು ಸರಿಪಡಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನಿಸರ್ಗ Bacilus, Sudomonas ಮತ್ತು Polimixa ಎಂಬ ಮೈಕ್ರೋಬ್ಸ್‌ಗಳನ್ನು ಸೃಷ್ಟಿಸುತ್ತದೆ. ಈ ಬ್ಯಾಸಿಲಸ್, ಸುಡೊನಾಸ್ ಮತ್ತು ಪಾಲಿಮಿಕ್ಸ್ ಮೈಕ್ರೋಬ್‌ಗಳು ಮಣ್ಣಿನಲ್ಲಿ ಇರುವುದಿಲ್ಲ; ಜೀವಾಮೃತದಲ್ಲೂ ಇಲ್ಲ. ಈ ಮೈಕ್ರೋಬ್ಸಗಳು ಸುಣ್ಣವನ್ನೆ ತಾಮ್ರವನ್ನಾಗಿಸುವ ಮತ್ತು ತಾಮ್ರವನ್ನೇ ಸುಣ್ಣವನ್ನಾಗಿಸುವ ಕೌಶಲ್ಯ ಹೊಂದಿವೆ.

ಹೀಗಾಗಿ ಮಿತ್ರರೆ, ನಿಸರ್ಗ ತಾಯಿಯಿದ್ದಂತೆ. ಆಕೆಯ ಅಂತಃಕರಣಕ್ಕೆ ಮಗುವಿನ ನ್ಯೂನತೆಗಳು ಅರ್ಥವಾಗುತ್ತವೆ. ಬರಿಗಣ್ಣಿಗೆ ಕಾಣದ ನ್ಯೂನತೆಗಳು ಅವಾಗಿರಬಹುದು. ಆದರೆ ಆಕೆಯ ಆಂತರ್ಯಕ್ಕೆ ಅವೆಲ್ಲ ಅರ್ಥವಾಗುತ್ತವೆ. ಹೀಗಾಗಿ ಆಕೆ ಜತನದಿಂದ ಎದೆಯ ಹಾಲೂಡಿ ಆ ನ್ಯೂನತೆಗಳನ್ನು ನಿವಾರಿಸುತ್ತಾಳೆ. ಸೃಷ್ಟಿಯಲ್ಲಿ ಒಳಿತು, ಕೆಡಕುಗಳೆರಡೂ ಇರುತ್ತವೆ. ಆ ಕೆಡಕುಗಳು ಇರುವುದೂ ಸಹ ಒಳತಿಗಾಗಿಯೇ. ಆದರೆ ನಾವು ನಮ್ಮ ಕೃಷಿಯಲ್ಲಿ ಒಳಿತಿನ ಹೆಸರಲ್ಲಿ ಬರೇ ಕೆಡಕುಗಳನ್ನೇ ಹೆಚ್ಚು ಬೆಳೆದಿದ್ದೇವೆ. ಇದನ್ನು ಮತ್ತೆ ಸರಿಪಡಿಸುವ ಸಹನೆ, ಶಕ್ತಿ ಎರಡೂ ಇರುವುದು ಆ ನಿಸರ್ಗ ತಾಯಿಗೆ ಮಾತ್ರ.

ಇನ್ನು ಈ ಗುರುತ್ವಾಕರ್ಷಣ, ಕೇಶಾಕರ್ಷಣ ಮತ್ತು ಕಂಟ್ರೋಲಿಂಗ್ ಫೋರ್ಸ್ (ನಿಯಾಮಕ್) ವ್ಯವಸ್ಥೆಯ ಜೊತೆಗೆ ಸಹವರ್ತಿಯಾಗಿರುವ ಜೀವಿಯೊಂದು ನಮ್ಮ ಭೂಮಿಯಲ್ಲಿದೆ. ಅದರ ಹೆಸರು ಎರೆಹುಳು! ನಮ್ಮ ನಿಸರ್ಗ ಕೃಷಿ ರಥದ ನಾಲ್ಕು ಬಂಡಿಗಳು ನಿಂತಿರುವುದು ಈ ಎರೆಹುಳುವಿನ ಮೇಲೆಯೆ. ನಮ್ಮ ಸಾವಯವ ಕೃಷಿಕರು ಆಫ್ರಿಕಾದಿಂದ, ಚೈನಾದಿಂದ-ಅಲ್ಲಿಂದ ಇಲ್ಲಿಗೆ ಎರೆಹುಳುಗಳನ್ನು ತಂದು ಸಾಕಿ ‘ವರ್ಮಿಕಾಂಪೋಸ್ಟ್’ ಹೆಸರಿನಲ್ಲಿ ಗೊಬ್ಬರ ತಯಾರಿಸುತ್ತಾರೆ. ಟನ್‌ಗಟ್ಟಲೆ ಭೂಮಿಗೂ ಸುರಿಯುತ್ತಾರೆ. ಪ್ರಪಂಚದ ಯಾವುದೇ ಭೂಭಾಗದ ಯಾವುದೇ ಭೂಮಿ ಇರಲಿ; ಬೆಳೆ ಬೆಳೆಯಲು ಯಾವುದೇ ಬಗೆಯ ಸಿದ್ಧಗೊಬ್ಬರಗಳ ಅಗತ್ಯವಿಲ್ಲ. ಈ ಸಿದ್ಧಗೊಬ್ಬರಗಳು ರಸಗೊಬ್ಬರಗಳಷ್ಟೇ ಅಪಾಯಕಾರಿ. ನಮ್ಮ ಬಹುತೇಕ ಸಾವಯವ ಕೃಷಿಕರು ನಿಸರ್ಗ ವಿಜ್ಞಾನದ ವಿಷಯದಲ್ಲಿ ಬಹುತೇಕ ಕುರುಡಾಗಿದ್ದಾರೆ. ಅಂಧಾನುಕರುಣೆ ಅನ್ನುವುದು ಅವರಲ್ಲಿ ಪರಂಪರಾನುಗತವಾಗಿ ಬಂದ ಆಸ್ತಿಯಂತಾಗಿದೆ. ದೂರ ದೇಶಗಳಿಂದ ಎರೆಹುಳು ತಂದು ವರ್ಮಿ ಕಾಂಪೋಸ್ಟ್ ಮಾಡಿ ಅನಗತ್ಯ ಶ್ರಮ, ಅನಗತ್ಯ ಖರ್ಚುಗಳಲ್ಲಿ ಸಿಲುಕಿಕೊಂಡಿರುವುದಷ್ಟೇ ಅಲ್ಲದೆ, ಅದನ್ನು ಬಹುದೊಡ್ಡ ವ್ಯಾಪಾರಿ ದಂಧೆಯಾಗಿಯೂ ಪರಿವರ್ತಿಸಿದ್ದಾರೆ. ಇಕೋ ಫ್ರೆಂಡ್ಲಿ,  ಬಯೋ ಫ್ರೆಂಡ್ಲಿ ಹೆಸರುಗಳಲ್ಲಿ ಇನ್ನಿತರ ಸಾವಯವ ಗೊಬ್ಬರಗಳನ್ನೂ ತಯಾರು ಮಾಡಿ ಅಮಾಯಕ ರೈತರ ಶೋಷಣೆಗೂ ಕೈಹಾಕಿದ್ದಾರೆ. ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಹೆಸರಲ್ಲಿ ರಾಸಾಯನಿಕದಷ್ಟೇ ದುಷ್ಪರಿಣಾಮದ ದೊಡ್ಡ ದೊಡ್ಡ ಕಂಪನಿಗಳು, ಕಾರ್ಖಾನೆಗಳು ತಲೆ ಎತ್ತುತ್ತಿವೆ. ಇರಲಿ, ಈ ವಿಷಯಕ್ಕೆ ಆಮೇಲೆ ಬರೋಣ.

ಬೆಳೆ ಬೆಳೆಯಲು ಯಾವುದೇ ಸಿದ್ಧ ಗೊಬ್ಬರಗಳ ಅವಶ್ಯಕತೆ ಇಲ್ಲ ಎಂದಾಯಿತಲ್ಲವೆ? ನಮ್ಮ ಕೃಷಿಯ ಉದ್ದೇಶ ಮಣ್ಣು ಮತ್ತು ಗಿಡಗಳಿಗೆ ಕೆಲಸ ಕೊಡುವುದೇ ಹೊರತು ಮಣ್ಣನ್ನು ನಿಷ್ಕ್ರಿಯಗೊಳಿಸಿ, ಗಿಡವನ್ನು ಸೋಮಾರಿ ಮಾಡುವುದಲ್ಲ, ಇವತ್ತಿನ ಸಾವಯವ ಕೃಷಿ ಮಣ್ಣಿನ ಆಂತರ್ಯ, ಗಿಡದ ಚೈತನ್ಯ ಎರಡನ್ನೂ ಮರೆತು ಬರೀ ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳಲ್ಲಿ ಹೂತುಹೋಗಿದೆ.

ಎರೆಹುಳುಗಳನ್ನು ಕೃಷಿ ವಿಜ್ಞಾನಿಗಳು EARTH WORM ಎಂಬ ಹೆಸರಿಟ್ಟು ಕರೆಯುತ್ತಾರೆ. ಆ ಹೆಸರನ್ನು ನೇರವಾಗಿ ಕನ್ನಡೀಕರಿಸಿ. ಅವರು ವಿದೇಶಗಳಿಂದ ಕರೆತಂದಿರುವ ಜಂತುಗಳು ಗೊಬ್ಬರ ತಿಂದು ಮಣ್ಣು ಕೊಡುತ್ತವೆ. ತಿನ್ನಲು ಗೊಬ್ಬರ ಸಿಗದಿದ್ದರೆ ಮಂಗಮಾಯವಾಗುತ್ತವೆ. ಗೊಬ್ಬರ ತಿಂದು, ಸಾಲದಾದಾಗ ಓಡಿಹೋಗುವ ಆ ಜಂತುಗಳನ್ನು ತಡೆಯಲು ನಮ್ಮ ರೈತರು ಮಾಡುವ ಕಸರತ್ತು ನೋಡಿದರೆ ನಗು ಬರುತ್ತದೆ.

ನಮ್ಮ ಕೃಷಿ ಯೂನಿವರ್ಸಿಟಿಗಳು ಮಾಡುತ್ತಿರುವುದೆಲ್ಲ ಬರೀ ಮಾಡಬಾರದ ಕೆಲಸಗಳನ್ನೆ, ವಿದೇಶಗಳಿಂದ ಎರೆಹುಳುಗಳನ್ನು ತಂದು ಸಾಕಬೇಕಾದ ನಮ್ಮ ರೈತರ ದುಃಸ್ಥಿತಿಗೆ ಈ ಯೂನಿವರ್ಸಿಟಿಗಳೇ ಕಾರಣ. ವಾಸ್ತವವಾಗಿ ಅಂಥ ದುಃಸ್ಥಿತಿಯಲ್ಲಿ ನಮ್ಮ ಎರೆಹುಳುಗಳು ನಮ್ಮನ್ನು ಇಟ್ಟಿಲ್ಲ. ನಮ್ಮ ಎರೆಹುಳುಗಳು ನಮ್ಮ ಭೂಮಿ ಬಿಟ್ಟು ಎಲ್ಲೂ ದೂರು ಓಡಿಹೋಗಿಲ್ಲ. ತಿನ್ನಲು ಏನೂ ಸಿಗದಿದ್ದ ಕಾಲದಲ್ಲೂ ಅವು ಭೂಮಿಯ ೧೫ ಅಡಿ ಆಳದಲ್ಲಿ ಸುಪ್ತಾವಸ್ಥೆಯಲ್ಲಿ ಇದ್ದುಬಿಡುತ್ತವೆ. ಈ ರಾಸಾಯನಿಕ ಕೃಷಿಯ ಆರ್ಭಟದಿಂದಾಗಿ ಅವು ಹದಿನೈದು ಅಡಿ ಆಳದಲ್ಲಿ ಮಹಾಮೌನಿಗಳಾಗಿ ಉಳಿದುಬಿಟ್ಟಿವೆ. ನೀವು ಈಗಿಂದೀಗಲೆ ರಾಸಾಯನಿಕ ಕೃಷಿ ನಿಲ್ಲಿ; ನಿಸರ್ಗ ಕೃಷಿಗೆ ಬನ್ನಿ- ತಕ್ಷಣವೇ ಜೀವಾಮೃತ ಕೊಡಿ. ಜೀವಾಮೃತ ಕೊಟ್ಟ ನಾಲ್ಕೇ ದಿನಗಳಲ್ಲಿ ಎರೆಹುಳು ಕಾಣದಿದ್ದರೆ ಕೇಳಿ! ಬೆಲ್ಲ ಬಿದ್ದ ಕಡೆ ಇರುವೆಗಳು ಸಾಲುಗಟ್ಟುವುದಿಲ್ಲವೆ ಹಾಗೆ! ಜೀವಾಮೃತ ಸೂಸುವ ಗಂಧ ತರಂಗಗಳ ರೂಪದಲ್ಲಿ ಎರೆಹುಳುಗಳನ್ನು ಸ್ಪರ್ಶಿಸುತ್ತವೆ. ತಕ್ಷಣವೇ ಸುಪ್ತಾವಸ್ಥೆಯಲ್ಲಿದ್ದ ಎರೆಹುಳುಗಳು ಜಾಗೃತಗೊಳ್ಳುತ್ತವೆ. ಜೀವಾಮೃತ ನೀಡುತ್ತ ಬಂದಹಾಗೆ ಒಂದು ಎಕರೆ ಪ್ರದೇಶದಲ್ಲಿ ಲಕ್ಷಾವಧಿ ಎರೆಹುಳುಗಳು ಸೃಷ್ಟಿಯಾಗುತ್ತವೆ.

ನಮ್ಮ ಎರೆಹುಳುಗಳು ದಿನದ ೨೪ ಗಂಟೆಯೂ ದುಡಿಯುತ್ತವೆ. ಕಸ ತಿಂದು ರಸ ಕೊಡುತ್ತವೆ. ೧೫ರಿಂದ ೨೫ ಅಡಿ ಆಳಕ್ಕೆ ಹೋಗುತ್ತವೆ ಮತ್ತೆ ಮೇಲೆ ಬರುತ್ತವೆ. ಹಾಗೆ ಹೋಗುವಾಗ ಮತ್ತು ಮೇಲೆ ಬರುವಾಗ ಒಮ್ಮೆ ಬಳಸಿದ ದಾರಿಯನ್ನು ಮತ್ತೊಮ್ಮೆ ಅವು ಬಳಸುವುದಿಲ್ಲ. ವಿದೇಶಿ ಎರೆಹುಳುಗಳು ೨.೫ ಅಡಿ ಆಳಕ್ಕಿಂತ ಹೆಚ್ಚು ಆಳಕ್ಕೆ ಹೋಗುವುದಿಲ್ಲ. ನಮ್ಮ ಎರೆಹುಳುಗಳು ಸಗಣಿ, ಕಸಕಡ್ಡಿ, ಜಿಂಕ್, ಬೂಸ್ಟ್, ಸೂಕ್ಷ್ಮಜೀವಾಣು… ಇತ್ಯಾದಿಗಳನ್ನೆಲ್ಲ ತಿಂದು ಬೆಳೆಗಳಿಗೆ ಸಹಕಾರಿಯಾಗುತ್ತವೆ. ಪ್ರತಿಬಾರಿಯೂ ಭೂಮಿಯ ಮೇಲ್ಪದರಕ್ಕೆ ಬಂದು ವಿಸರ್ಜಿಸುತ್ತವೆ. ಅವುಗಳ ಉದರ ಬಾಯ್ಲರ್ ಇದ್ದಹಾಗೆ! ಅಲ್ಲಿ ಕಬ್ಬಿಣವೂ ಕರಗುತ್ತದೆ.

ಎರೆಹುಳುಗಳು ಮೇಲೆ-ಕೆಳಗೆ ಹೋಗಿಬಂದು ಮಾಡುವಾಗ ರಂಧ್ರಗಳೇರ್ಪಡುತ್ತವೆ. ಆ ರಂಧ್ರಗಳು ಮುಚ್ಚುವುದಿಲ್ಲ. ಹಾಗೆ ಮೇಲೆ-ಕೆಳಗೆ ಹೋಗಿಬರುವಾಗ ಎರೆಹುಳಗಳ ಶರೀರದಿಂದ ಕೆಲವು ರಾಸಾಯನಿಕಗು ಹೊರಬಂದು ರಂಧ್ರದ ಗೋಡೆಗಳಿಗೆ ಲೇಪನಗೊಳ್ಳುತ್ತವೆ. ಎರೆಹುಳು ಸ್ರವಿಸುವ ರಾಸಾಯನಿಕಗಳಲ್ಲಿ ಎಲ್ಲ ಬಗೆಯ ಆಲ್ಕಲೇಡ್‌ಗಳು, ಎಲ್ಲಬಗೆಯ ಗ್ರೋತ್ ಹಾರ್ಮೋನ್‌ಗಳು, ಎಲ್ಲ ಬಗೆಯ ಅಮಿನೊ ಆಸಿಡ್‌ಗಳಿರುತ್ತುವೆ. ಇವು ಗಿಡದ ಬೆಳವಣಿಗೆಗೆ ನೆರವಾಗುತ್ತವೆ. ಸಸ್ಯ ಈ ರಂಧ್ರಗಳಲ್ಲಿ ಬೇರುಬಿಟ್ಟಾಗ- ಆ ಬೇರುಗಳಿಗೆ ಬೇಕಾದ ಪೋಷಕಾಂಶಗಳು ಸೂಕ್ಷ್ಮ ಅನ್ನ ದ್ರವ್ಯಗಳು ಸಲೀಸಾಗಿ ಸಿಗುತ್ತವೆ. ಎರೆಹುಳುಳು ಅವಿಶ್ರಾಂತವಾಗಿ ಚಲನೆಯಲ್ಲಿರುವುದರಿಂದ ಭೂಮಿಗೆ ಉಳುಮೆಯ ಅಗತ್ಯವಿರುವುದಿಲ್ಲ. ಗಿಡದ ಬೆಳವಣಿಗೆಯ ಹಿನ್ನೆಲೆಯಲ್ಲಿ ಭೂಮಿಯ ಆಂತರ್ಯ ನಿರಂತರವಾಗಿ ಉಳುಮೆಗೊಳಗಾಗುತ್ತಲೇ ಇರುತ್ತದೆ. ನಿಸರ್ಗ ಕೃಷಿಯಲ್ಲಿ ಎಷ್ಟೇ ರಭಸದ ಮಳೆ ಆದರೂ ಮಣ್ಣು ಕೊಚ್ಚಿಹೋಗುವುದಿಲ್ಲ. ಮೇಲ್ಮೈ ಮೇಲೆ ಬಿದ್ದ ಮಳೆ ನೀರೆಲ್ಲ ರಂಧ್ರಗಳ ಮೂಲಕ ಸರಾಗವಾಗಿ ಸಾಗಿ ಅಂತರ್ಜಲ ವಲಯವನ್ನು ಪ್ರವೇಶಿಸುತ್ತದೆ. ಬೇರೆ ಕೃಷಿಗಳಲ್ಲಿ ಮಣ್ಣೆಲ್ಲ ಕೊಚ್ಚಿಹೋಗಿ- ಹರಿವ ನೀರು ರಾಡಿಯಾಗುವುದನ್ನು ನೀವು ಗಮನಿಸರಬಹುದು. ಆದರೆ ನಿಸರ್ಗ ಕೃಷಿಯಲ್ಲಿ ಮಣ್ಣು ಸವಕಳಿಯಾಗುವುದಿಲ್ಲ. ಯಾಕೆಂದರೆ ಮಳೆ ನೀರಿಗೆ ಎರೆಹುಳುಗಳ ವಿಸರ್ಜನೆ ಕರಗುವುದಿಲ್ಲ. ಬದಲಾಗಿ ವರ್ಷ ವರ್ಷವೂ ಮೇಲ್ಮಣ್ಣು ವೃದ್ಧಿಯಾಗುತ್ತಾ ಹೋಗುತ್ತದೆ. 

ನಮ್ಮ ಎರೆಹುಳು ವಿಷರ್ಜನೆಯಲ್ಲಿ ಇತರೆ ಎರೆಹುಳುಗಳ ವಿಸರ್ಜನೆಗಿಂತ ಹೆಚ್ಚಿನ ಅಂದರೆ ಹನ್ನೊಂದು ಪಟ್ಟು ಪೊಟ್ಯಾಶ್, ಒಂಬತ್ತು ಪಟ್ಟು ರಂಜಕ, ಏಳು ಪಟ್ಟು ನೈಟ್ರೋಜನ್, ಒಂಬತ್ತು ಪಟ್ಟು ಗಂಧಕ, ಹತ್ತು ಪಟ್ಟು ಮ್ಯಾಗ್ನೇಷಿಯಂ, ಎಂಟು ಪಟ್ಟು ಸುಣ್ಣ, ಹತ್ತು ಪಟ್ಟು ಇನ್ನಿತರ ಪೋಷಕಾಂಶಗಳಿವೆ. ಒಂದು ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಎರಡು ಲಕ್ಷ ಎರೆಹುಳುಗಳು ಕಾರ್ಯಾಚರಣೆಗಿಳಿದರೆ ಆ ಭೂಮಿಯ ಕಬ್ಬು ಇಳುವರಿಯ ಸಾಮರ್ಥ್ಯ ೨೦೦ ಟನ್! ಹೀಗೆಯೇ ಇತರ ಬೆಳೆಗಳ ಇಳುವರಿಯ ಸಾಮರ್ಥ್ಯ ವೃದ್ಧಿಯಾಗುತ್ತದೆ. ಭೂಮಿಯಲ್ಲಿ ಅಗತ್ಯಕ್ಕೂ ಮೀರಿ ಎರೆಹುಳುಗಳು ಇರುವುದಿಲ್ಲ. ಎರೆಹುಳುಗಳ ಜೊತೆಗೆ ಬೆಳೆಗಳಿಗೆ ಬೆಳಕಿನ ಆಯೋಜನೆಯೂ ಮುಖ್ಯ ಅನ್ನುವುದು ನೆನಪಿನಲ್ಲಿ ಇರಲಿ.

ಒಂದು ಎಕರೆ ಭೂ ವಿಸ್ತೀರ್ಣದಲ್ಲಿ ಎರಡು ಲಕ್ಷ ಎರೆಹುಳುಗಳು ಮೇಲೆ-ಕೆಳಗೆ, ಮೇಲೆ-ಕೆಳಗೆ ನಿರಂತರವಾಗಿ ೨೫ ಅಡಿ ಆಳದವರೆಗೂ ಉಳುಮೆ ಮಾಡುತ್ತವೆ ಅಂದಮೇಲೆ ನಾವು ಭೂಮಿಯನ್ನು ಉಳಬೇಕಾಗಿದೆಯೇ? ತೆಂಗು, ಬಾಳೆ, ಅಡಿಕೆ ಇತ್ಯಾದಿ ತೋಟಗಳ ಮಾತಿರಲಿ, ರಾಗಿ, ಭತ್ತ, ನವಣೆ, ಗೋಧಿ ಬೆಳೆ ಬೆಳೆಯುವ ಭೂಮಿಗಳನ್ನೂ ಕೂಡ ಉಳಬೇಕಾಗಿಲ್ಲ. ಅನಂತಾನಂತಾನು ಕೋಟಿ ಬ್ಯಾಕ್ಟೀರಿಯಾಗಳು, ಎರೆಹುಳುಗಳು; ಪ್ರಕೃತಿ ಕೊಟ್ಟಿರುವ ಗಾಳಿ, ಬೆಳಕು, ನೀರು ಇರುವೆಡೆ ಬೆಳೆ ಬೆಳೆವ ಕುರಿತು ಚಿಂತೆಯೇ?

ಎರೆಹುಳುಗಳೂ ಬೆಳಕಿನಲ್ಲಿ ಕೆಲಸ ಮಾಡುವುದಿಲ್ಲ. ಅಂತೆಯೇ ಸೂಕ್ಷ್ಮಾಣು ಜೀವಿಗಳೂ ಕೂಡ. ಎರೆಹುಳುಗಳಾಗಿರಲಿ, ಜೀವಾಣುಗಳಾಗಿರಲಿ- ಅವೆಲ್ಲವೂ ಕ್ರಿಯಾಶೀಲವಾಗಿರಲು ಒಂದು ನಿರ್ದಿಷ್ಟ ಬಗೆಯ ವಾತಾವರಣವಿರಬೇಕು. ಉದಾಹರಣೆಗೆ ಕಬ್ಬಿನ ಬೆಳೆ ತೆಗೆದುಕೊಳ್ಳಿ. ಕಬ್ಬಿನ ಸಾಲುಗಳ ನಡುವೆ ಗಾಳಿ ಆಡುವಂತಿರಬೇಕು. ಆ ಬೆಳೆಯ ಒಳಾವರಣದ ಉಷ್ಣಾಂಶ ೨೫ ಯಿಂದ  ೩೨ವರೆಗೆ ಇರಬೇಕು. ಅಲ್ಲಿ ಶೇಕಡ ೬೫ರಿಂದ ೭೨ರಷ್ಟು Humidity ಇರಬೇಕು. ಮೇಲ್ಮಣ್ಣು ಸಾಧ್ಯವಾದಷ್ಟು ನೆರಳಿನಿಂದ ಆವರಿಸಿಕೊಳ್ಳುವಂತಿರಬೇಕು, ಆನಂತರದ ಭೂಮಿಯ ಆಂತರ್ಯ ಕತ್ತಲಿನಿಂದ ಆವರಿಸಿರಬೇಕು. ಆ ಕತ್ತಲು ಧೈರ್ಯ, ವಿಶ್ವಾಸ, ಭರವಸೆ ಮತ್ತು ರಕ್ಷಣೆಗಳ ಪ್ರತೀಕವಾಗಿರಬೇಕು. ಇಂಥಲ್ಲಿ; ತಾಯಿ ಮಡಿಲಲ್ಲಿ ನಿಶ್ಚಿಂತ ಕಂದಮ್ಮನಿರುವ ಹಾಗೆ ಈ ಎರೆಹುಳುಗಳು, ಸೂಕ್ಷ್ಮಜೀವಾಣುಗಳು ಸಮೃದ್ಧ ಸ್ಥಿತಿಯಲ್ಲಿರುತ್ತವೆ. ಈ ಬಗೆಯ ವಾತಾವರಣವನ್ನೇ ನಾವು ಮೈಕ್ರೋ ಕ್ಲೈಮೇಟ್(ಸೂಕ್ಷ್ಮ ಪರ್ಯಾವರಣ) ಅಂತ ಕರೆಯುವುದು. ಈ ಮೈಕ್ರೋ ಕ್ಲೈಮೇಟ್‌ನ ನಿರ್ಮಾಣವೇ ಹೊದಿಕೆ; ಮಲ್ಚಿಂಗ್ ಅಥವಾ ಮುಚ್ಚಿಗೆ.

ಬೆಳೆಗಳ ನಡುವೆ ಹೊದಿಕೆ ಅಥವಾ ಮಲ್ಚಿಂಗ್ ಇರದೇ ಹೋದರೆ ನಿಸರ್ಗ ಕೃಷಿಯ ರಥ ಸಾಗುವುದಿಲ್ಲ. ಯಾವಾಗ ಮಲ್ಚಿಂಗ್ ಇರುವುದಿಲ್ಲವೋ ಆವಾಗ ಕೇಶಾಕರ್ಷಣ ಶಕ್ತಿಯ ಉಪಯೋಗವನ್ನು ಬೆಳೆ ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ. ಕೇಶಾಕರ್ಷಣ ಶಕ್ತಿಯ ಬಲದಿಂದ ಭೂ ಮೇಲ್ಪದರಕ್ಕೆ ಬರುವ ತೇವಾಂಶ ಅಲ್ಲಿ ತಂಗುದಾಣವೇ ಇಲ್ಲದ್ದನ್ನು ಗಮನಿಸಿ ವಾತಾವರಣದಲ್ಲಿ ಲೀನವಾಗಿಬಿಡುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆಗಳ ನಡುವೆ ಮಲ್ಚಿಂಗ್ ಅತ್ಯಗತ್ಯ.

ಹೊದಿಕೆ ಅಥವಾ ಮಲ್ಚಿಂಗ್‌ನಲ್ಲಿ ಮೂರು ವಿಧ.

೧. Soil Mulching – ಮಣ್ಣಿನ ಹೊದಿಕೆ

೨. Straw Mulching – ಕಾಷ್ಟಾಚ್ಛಾದನ (ತರಗು, ಕಡ್ಡಿ, ಕೃಷಿ ತ್ಯಾಜ್ಯ)

೩. Live Mulching  – ಸಜೀವ ಹೊದಿಕೆ  (ಅಂತರಬೆಳೆ ಮತ್ತು ಮಿಶ್ರ ಬೆಳೆ ವೈವಿಧ್ಯ)

ಹಾಲಿನ ಸಾರ ಹಾಲಿನ ಕೆನೆಯಲ್ಲಿರುವಂತೆ, ಭೂಮಿಯ ಸಾರ ಭೂಮಿಯ ಮೇಲ್ಪದರಿನಲ್ಲಿರುತ್ತದೆ. ಭೂಮಿಯ ಮೇಲ್ಪದರಿನ ೪.೫ ಇಂಚು ಮಣ್ಣು ಅತ್ಯಂತ ಸಾರವಂತಿಕೆಯಿಂದ ಕೂಡಿರುತ್ತದೆ. ಸಸ್ಯಗಳಿಗೆ ಆಹಾರ ಸರಬರಾಜು ಮಾಡುವ ಬೇರುಗಳು ಈ ೪.೫ ಇಂಚನ್ನೇ ಅವಲಂಬಿಸಿರುತ್ತದೆ. ಎರೆಹುಳುಗಳು ಪ್ರತಿನಿತ್ಯ ೧೫ ರಿಂದ ೨೫ ಅಡಿ ಆಳದವರೆಗೆ ಹೋಗ-ಬಂದು ಮಾಡಬಹುದು. ಆದರೆ ಎರೆಹುಳುಗಳು, ಜೀವಾಣುಗಳು ಮತ್ತಿತರ ಮೈಕ್ರೋಬ್‌ಗಳ ಪ್ರಿಯವಾದ ಆವಾಸವೂ ಈ ೪.೫ ಇಂಚೇ. ನಿಸರ್ಗ ಕೃಷಿಯಲ್ಲಿ ಹ್ಯೂಮಸ್ (ಮಣ್ಣನ್ನು ಫಲವತ್ತಾಗಿ ಮಾಡುವಿಕೆ) ಸೃಷ್ಟಿಯಾಗುವುದೂ ಕೂಡ ಈ ಆವರಣದಲ್ಲೆ, ಬೆಳೆಯ ನಡುವೆ ಮಣ್ಣಿನ ಮೇಲ್ಪದರದಲ್ಲಿ ಹೊದಿಕೆ ಹೆಚ್ಚಾದಷ್ಟು ಹ್ಯೂಮಸ್ ಶ್ರೀಮಂತವಾಗುತ್ತದೆ. ಬಾಳೆ, ಕಬ್ಬು, ಅಡಿಕೆ, ತೆಂಗು, ಭತ್ತ, ರಾಗಿ, ಜೋಳ, ಹತ್ತಿ ಇಳುವರಿಗಳೆಲ್ಲ ತೀರ್ಮಾನವಾಗುವುದು ಹ್ಯೂಮಸ್‌ಗಿರುವ ಶ್ರೀಮಂತಿಕೆಯ ಆಧಾರದ ಮೇಲೆಯೆ. ಈ ಹ್ಯೂಮಸ್ ಬ್ಯಾಂಕಿನ ಶ್ರೀಮಂತಿಕೆ ಹೆಚ್ಚಾದಂತೆಲ್ಲ ಇಳುವರಿಯೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ನಾವು ಮೇಲ್ಮಣ್ಣನ್ನೂ ಅತ್ಯಂತ ಜತನದಿಂದ ಸಂರಕ್ಷಿಸಬೇಕು.

ನಿಸರ್ಗಕೃಷಿ ಉಳುಮೆಯನ್ನು ಬೇಡುವುದಿಲ್ಲ. ಆಳವಾದ ಉಳುಮೆ ನಿಮ್ಮ ಕೃಷಿ ಬದುಕಿನ ನೆಮ್ಮದಿಯನ್ನೇ ಹಾಳುಮಾಡುತ್ತದೆ. ಆಳವಾದ ಉಳುಮೆಯಿಂದ ಆಳದ ಮಣ್ಣು ಮೇಲೆ ಬಂದು ಅನಂತ ಕೋಟಿ ಜೀವಾಣುಗಳಿಂದ ಸಜೀವವಾಗಿದ್ದ ಮೇಲ್ಮಣ್ಣು ಕೆಳಹೋಗುತ್ತದೆ. ನಿಸರ್ಗ ಕೃಷಿಗೆ ಆಗಮಿಸುವ ಮಳೆ ಆಶ್ರಿತ ರೈತರು ವರ್ಷಂಪ್ರತಿ ಉಳುವ ಅಗತ್ಯ ತಲೆದೋರುವುದಿಲ್ಲ. ಈಗಷ್ಟೇ ನಿಸರ್ಗ ಕೃಷಿಗೆ ಕಾಲಿಡುವ ಮಳೆ ಆಶ್ರಿತ ಕೃಷಿಕರು ಶುರುವಿಗೆ ಮಾತ್ರ ಉಳುವೆ ಮಾಡಿಕೊಳ್ಳಿ. ಆ ಉಳುಮೆ ಕೂಡ ಆಳದ್ದಾಗಿರಬಾರದು, ಕಬ್ಬಿಣದ ನೇಗಿಲು ಬಳಸಬಾರದು. ಯಾಕೆಂದರೆ ಕಬ್ಬಿಣದ ನೇಗಿಲಿನ ಉಷ್ಣಕಾಂತಿಯಿಂದಾಗಿ ಜೀವಾಣುಗಳು ನಾಶಹೊಂದುತ್ತವೆ. ಉಳುವುದಾದರೆ ಎತ್ತುಗಳನ್ನು ಕಟ್ಟಿ ಮರದ ನೇಗಿಲಿನಿಂದ ಉಳಬೇಕು. ಅಪ್ಪಿತಪ್ಪಿಯೂ ನಿಮ್ಮ ಜಮೀನುಗಳಿಗೆ ಟ್ರ್ಯಾಕ್ಟರ್‌ಗಳನ್ನು ಎಳೆದು ತರಬೇಡಿ. ಯಾಕೆಂದರೆ ನಿಸರ್ಗ ಕೃಷಿಯಲ್ಲಿ ಅದಕ್ಕಿಂತ ಮಿಗಿಲಾದ ಬೇರೊಬ್ಬ ಶತ್ರು ಇರಲಾರ. ಪ್ರತಿವರ್ಷ ನಮ್ಮ ಪ್ರತಿ ಚದರ ಅಡಿ ಭೂಮಿಗೆ ಹದಿನೈದು ಕೆ.ಜಿ. ಧಾನ್ಯ ಕೊಡುವ ಸಾಮರ್ಥ್ಯವನ್ನು ನಿಸರ್ಗ ದಯ ಪಾಲಿಸಿದೆ. ನಮ್ಮ ಪ್ರತಿ ಚದರ ಅಡಿ ನೈಸರ್ಗಿಕ ಕೃಷಿ ಭೂಮಿಗೆ ೩೨ ಕೆ.ಜಿ. ಭಾರ ತಡೆಯುವ ಸಾಮರ್ಥ್ಯವಿದೆ. ಆದರೆ ಟ್ರ್ಯಾಕ್ಟರ್‌ನ ಭಾರ ಎಷ್ಟು?

ಈ ಹಿನ್ನೆಲೆಯಲ್ಲಿ ಪಾಳೇಕರರು ಮತ್ತಷ್ಟು ವಿವರಗಳತ್ತ ಹೋಗುತ್ತಾರೆ:

ಸೌರವ್ಯೂಹದ ಪ್ರಮುಕ ಗ್ರಹಗಳ ಪೈಕಿ ಈ ಪೃಥ್ವಿಯೂ ಒಂದು. ೪೬೦೦ ಮಿಲಿಯ ವರ್ಷಗಳ ಹಿಂದೆ ಈ ಇಳೆ ರೂಪುಗೊಂಡಿತೆಂದು ನಾವೀಗಾಗಲೇ ತಿಳಿದಿದ್ದೇವೆ. ೪೦೦ ಮಿಲಿಯ ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಸಸ್ಯಗಳು, ಜೀವಿಗಳು ಉದಯಿಸಿದವು. ಇದಾದ ಎಷ್ಟೋ ವರ್ಷಗಳ ನಂತರ ಮಾನವ ಜೀವಿ ಜೀವತಳೆದ. ಇದಾದ ಎಷ್ಟೋ ವರ್ಷಗಳ ನಂತರ ಮತ್ತೆ ಇಳೆಯಲ್ಲೇ ಲೀನವಾಗುತ್ತೇವೆ. ಕೋಟ್ಯಾನುಕೋಟಿ ವರ್ಷಗಳಿಂದ ಇದು ಹೀಗೆಯೇ ನಡೆದುಬಂದಿದೆ. ಇಷ್ಟಾದರೂ ಈ ಭೂಮಿಯ ಮೇಲೆ ಒಂದು ಇಂಚು ಮಣ್ಣು ರೂಪುಗೊಳ್ಳಲು ೨೦೦ ರಿಂದ ೫೦೦ ವರ್ಷಗಳ ಅವಧಿ ಬೇಕು.

ಪ್ರತಿ ಜೀವಿಯ ಸೃಷ್ಟಿಯ ಹಿಂದೆ ಸಾವಿರಾರು ವರ್ಷಗಳ ಚರಿತ್ರೆ ಅಡಗಿದೆ. ಆ ಮಟ್ಟಿಗೆ ನಿಸರ್ಗದ ಪರಿಶ್ರಮ ಅಪಾರವಾದದ್ದು. ಸೃಷ್ಟಿಯ ಪ್ರತಿಯೊಂದರಲ್ಲೂ ಒಂದರೊಳಗೊಂದು ಬೆಸೆದುಕೊಂಡಿರುವ ಕೊಂಡಿಗಳಿವೆ. ಋತುಮಾನಗಳು, ನಕ್ಷತ್ರಗಳು ಪ್ರತೀ ಜೀವಿಯ ಮೇಲೂ ತಮ್ಮದೇ ಆದ ಪ್ರಭಾವ ಹೊಂದಿದೆ. ಈ ಕುರಿತ ಅಧ್ಯಯನ ನಿಜಕ್ಕೂ ಕುತೂಹಲಕಾರಿಯದ್ದು ಮತ್ತು ಹೆಜ್ಜೆ ಹೆಜ್ಜೆಗೂ ಬೆರಗುಗೊಳಿಸುವಂಥದ್ದು.

ಕೃಷಿಯೇ ಸರ್ವಸ್ವವಾಗಿದ್ದ ಕಾಲದಲ್ಲಿ ಕೃಷಿಕರಾದ ಎಲ್ಲರಿಗೂ ಈ ಋತುಮಾನಗಳು, ಮಳೆ ನಕ್ಷತ್ರಗಳ ಕುರಿತು ಆಳವಾದ ತಿಳುವಳಿಕೆ ಇತ್ತು. ನಿಸರ್ಗದ ಭಾಷೆ ರೈತರಲ್ಲಿ ಅಂತರ್ಗತವಾಗಿತ್ತು. ಋತುಮಾನ, ಮಳೆ ನಕ್ಷತ್ರ ಆಧರಿಸಿ ಬೆಳೆ ಬೆಳೆವ ವಿಜ್ಞಾನವೀಗ ನಮ್ಮ ಯಾವ ರೈತರಲ್ಲೂ ಇಲ್ಲ, ಕೃಷಿ ವಿಜ್ಞಾನಿಗಳ ಬಳಿಯೂ ಇಲ್ಲ. ಅಶ್ವಿನಿ, ಭರಣಿ, ಕೃತಿಕಾ, ರೋಹಿಣಿ, ಮೃಗಶಿರಾ ಮತ್ತು ಮತ್ತೆ ಮುಂದುವರಿದು ಹಸ್ತಾ, ಚಿತ್ತಾ, ಸ್ವಾತಿ, ವಿಶಾಖ… ಈ ಮಳೆಗಳ ಆವರಣದಲ್ಲೇ ಬೆಳೆ ಬೆಳೆಯುವ ವಿಧಾನ; ಕೀಟ ನಿಯಂತ್ರಣ ಕಳೆ ನಿಯಂತ್ರಣಗಳ ಸರಳ ವಿಜ್ಞಾನ ಅಡಗಿದೆ. ಶರದೃತುವಿನ ಚಂದ್ರನ ಕಿರಣಗಳು ಬೆಳೆಯ ಮೇಲೆ ಉಂಟುಮಾಡುವ ಪರಿಣಾಮ ನಿಮಗೆ ಅರಿವಾದರೆ ನೀವೆಷ್ಟು ವಿಸ್ಮಯಗೊಳ್ಳುವಿರಿ ಗೊತ್ತೆ? ಜಡಿ ಮಳೆ, ತುಂತುರು ಮಳೆ, ಇಬ್ಬನಿಗಳ ವಿಜ್ಞಾನ ಕೃಷಿಕರಾದವರಿಗೆ ಕೇವಲ ಸಾಮಾನ್ಯ ಜ್ಞಾನವಾಗಿದ್ದರಷ್ಟೇ ಸಾಲದು. ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಋತುಗಳ ಕುರಿತು ಮೇಲ್ನೋಟದ ತಿಳುವಳಿಕೆ ಇದ್ದರೆ ಸಾಲದು. ಋತುಮಾನಗಳ ಜೊತೆಗೆ ಅವಿನಾಭಾವ ಸಂಬಂಧ ಏರ್ಪಟ್ಟರೆ ರೈತನಾದವನು ಬೆಳೆಗಳೊಂದಿಗೆ ತಾನೂ ಬೆಳೆಯಬಲ್ಲ, ನರ್ತಿಸಬಲ್ಲ. ಆತನ ಆನಂದೋಲ್ಲಾಸಗಳಿಗೆ ಪಾರವೆಂಬುದೇ ಇರುವುದಿಲ್ಲ. ಈ ಋತುಮಾನಳ ಚಿತ್ರ-ವಿಚಿತ್ರ ಸ್ವಭಾವಗಳನ್ನು, ಬೆಳೆಗಳೊಂದಿಗೆ ಅವುಗಳು ವ್ಯವಹರಿಸುವ ರೀತಿಯನ್ನು, ನಿಸರ್ಗ ವ್ಯವಸ್ಥೆಯಲ್ಲಿ ಅವುಗಳಿಗಿರುವ ಪ್ರಾಮುಖ್ಯತೆಯನ್ನು ಬಿಡಿ ಬಿಡಿಯಾಗಿ ಆನಂತರ ವಿವರಿಸುತ್ತೇನೆ. ಹಾಗೆಯೇ ಮಳೆ ನಕ್ಷತ್ರಗಳ ವೈಶಿಷ್ಟ್ಯ, ಅವುಗಳ ಶಾಂತವೂ, ಪ್ರಶಾಂತವೂ, ಆರ್ಭಟವೂ ಹಾಗೂ ಆಟೋಟ ಉಪಟಳಗಳ, ನರ್ತನಗಳ ಲಯವನ್ನು ನಿರೂಪಿಸುತ್ತಾ ಸಾಗುತ್ತೇನೆ. ನೈಸರ್ಗಿಕ ಕೃಷಿಯಲ್ಲಿ ತೊಡಗುವ ಮತ್ತು ನೈಸರ್ಗಿಕ ಪರಿಸರದಲ್ಲಿ ಬೆಳೆದ ಫಸಲುಗಳನ್ನು ಸೇವಿಸುವ ವಿಕಾರ ರಹಿತ ಮನಸ್ಸುಗಳು ಸೃಷ್ಟಿಯ ಚಿದಂಬರ ರಹಸ್ಯಗಳ ಎದೆ ಬಡಿತಗಳನ್ನು, ನಾಡಿಮಿಡಿತಗಳನ್ನು ಆಲಿಸಲು ಮತ್ತು ಅರಿಯಲು ಸಡಗರದ ಗೆಜ್ಜೆ ಕಟ್ಟಿ ಓಡಿ ಬರುವುದು ಸಹಜ.

ನೈಸರ್ಗಿಕ ವ್ಯವಸ್ಥೆಯಲ್ಲಿ ಗಿಡಗಳ ಅನ್ನಚಕ್ರ ಸ್ವಯಂ  ಪರಿಪೂರ್ಣವಾಗಿರುತ್ತದೆ. ಮಾನವ ಹಸ್ತಕ್ಷೇಪವಿರುವ ಬೇಸಾಯ ಕ್ರಮದಲ್ಲಿ ಈ ಅನ್ನ ಚಕ್ರದ ಸರಪಳಿ ಚಿಂದಿಯಾಗುತ್ತದೆ.

ನಿಸರ್ಗ ವ್ಯವಸ್ಥೆಯಲ್ಲಿ ಸಜೀವ ಇಂದ್ರಿಯಗಳು ಮತ್ತು ನಿರ್ಜೀವ ಅವಯವ-ಅವಶೇಷಗಳು ಬೆಳೆಯ ಅನ್ನಚಕ್ರದ ಕೊಂಡಿ. ನಮ್ಮ ದನ, ಕರು, ಎತ್ತುಗಳು ವ್ಯವಸಾಯಕ್ಕೆ ಪೂರಕ. ಅವುಗಳ ತೊಪ್ಪೆ ಮತ್ತು ಗಂಜಲುಗಳನ್ನು ಮತ್ತೆ ನಾವು ಗೊಬ್ಬರದ ರೂಪದಲ್ಲಿ ವ್ಯವಸಾಯ ಭೂಮಿಗೆ ಹಿಂದಿರುಗಿಸುತ್ತೇವೆ. ಮಣ್ಣಿನಿಂದ ಪಡೆದದ್ದು ಮತ್ತೆ ಮಣ್ಣಿಗೆ ಹಿಂದಿರುಗುತ್ತದೆ. ಬೆಳೆದ ಬೆಳೆಯನ್ನು ಆಹಾರವಾಗಿ ಪಡೆದು ಮತ್ತೆ ಅದನ್ನು ಬೆಳೆದಲ್ಲಿಗೆ ವಿಸರ್ಜಿಸಿದರೆ ಒಂದು ಅನ್ನಚಕ್ರ ಪೂರ್ಣಗೊಳ್ಳುತ್ತದೆ.

ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಅನ್ನದ ವ್ಯವಸ್ಥೆಯನ್ನು ನಿಸರ್ಗವೇ ಕಲ್ಪಿಸಿದೆ. ಹಾಗೆಯೇ ಸೃಷ್ಟಿಯ ಪ್ರತಿಯೊಂದು ಜೀವಿಯ ಅಳಿವು ನಿಸರ್ಗಕ್ಕೆ ಅನ್ನವಾಗಿದೆ. ಭೂಮಿಯ ಮೇಲೆ ಸಹಜವಾಗಿ ಬೆಳೆಯುವ ಪ್ರತಿ ಗಿಡ, ಮರ ತನ್ನ ಅವಯವ, ಅಂದರೆ ಎಲೆ, ಹೂ, ಹಣ್ಣು, ಕಾಯಿ ಕಾಂಡ, ಬೇರುಗಳ ಸಮೇತ ಆಯುಷ್ಯ ಇರುವವರೆಗೂ ಮತ್ತು ಆಯುಷ್ಯ ಪೂರ್ತಿಯಾದ ಬಳಿಕ ಭೂಮಿಗೆ ಹಿಂದಿರುಗುತ್ತಾ ಹೋಗುತ್ತದೆ. ಮಣ್ಣಿನ ಮೇಲ್ಪದರಲ್ಲಿ ಮತ್ತು ಆಳದಲ್ಲಿ ಕಣ್ಣಿಗೆ ಕಾಣುವ-ಕಾಣದ ಕೋಟ್ಯಂತರ ಜೀವಿಗಳಿವೆ. ಇವೆಲ್ಲವೂ ನಿಸರ್ಗಕ್ಕೆ ಪೂರಕವಾಗಿ ಒಂದನೊಂದು ಅವಲಂಬಿಸಿವೆ. ಗಿಡ-ಮರಗಳ ಅವಶೇಷಗಳನ್ನು ತಿಂದು ಬಾಳುವ ಜೀವಿಗಳು ಸತ್ತ ಬಳಿಕ ಅವೇ ಗಿಡಿ-ಮರಗಳಿಗೆ ಪೋಷಕಾಂಶಗಳಾಗಿ ಲಭಿಸುತ್ತವೆ. ಈ ಜೀವಿಗಳನ್ನು ಮತ್ತು ಬೆಳೆದ ಫಸಲನ್ನು ತಿಂದು ಬದುಕುವ ಕಪ್ಪೆ, ಇಲಿ, ಇರುವೆ, ಹಾವು, ಹಕ್ಕಿ ಇತ್ಯಾದಿ ಕೋಟ್ಯಾನುಕೋಟಿ ಜೀವಿಗಳು ಇಡಿ ನಿಸರ್ಗ ವ್ಯವಹಾರದಲ್ಲಿ ತಮ್ಮ ಪ್ರಾಮುಖ್ಯತೆ ಸಾರಿ ಮತ್ತೆ ಮರಳಿ ಮಣ್ಣಾಗುತ್ತವೆ; ಹಾಗೆಯೇ ಮನುಷ್ಯ ಕೂಡ. ಋತುಮಾನಗಳಿಗನುಗುಣವಾಗಿ ಭೂಮಿ ತನ್ನ ಮೇಲಿನ ಸಕಲ ಜೀವರಾಶಿಗಳಿಗೂ ಒಂದು ಅಸ್ತಿತ್ವ ಕಲ್ಪಿಸಿಕೊಟ್ಟಿದೆ.

ಹೇಮಂತ ಋತುವಿನಲ್ಲಿ ಗಿಡ-ಮರಗಳು ಫಲಿತವಾಗುತ್ತವೆ. ಶಿಶಿರನ ಕಾಲಕ್ಕೆ ಎಲೆಗಳು ಉದುರತೊಡಗುತ್ತವೆ. ಎಲೆ ಉದುರುವ ಮುನ್ನ ಮರ ಆ ಎಲೆಯ ಸಾರವನ್ನೆಲ್ಲ ಮುಂದಿನ ತನ್ನ ಚಿಗುರುಗಳಿಗಾಗಿ ಹೀರಿಕೊಂಡಿರುತ್ತದೆ. ಉದುರಿದ ಎಲೆ, ಕಡ್ಡಿ, ಕಾಯಿಗಳು ಆ ಮರದ ಬುಡದಲ್ಲಿ ಹರಡಿಕೊಳ್ಳುತ್ತವೆ. ಆ ಮರದ ಬೇರುಗಳು ತನ್ನ ಆಹಾರ ಸಂಗ್ರಹಕ್ಕಾಗಿ ತನ್ನದೇ ಆದ ಜಾಲ ರೂಪಿಸುತ್ತವೆ.  ಅಲ್ಲಿ ಗೆದ್ದಲು, ಇರುವೆ, ಇಲಿ ಆ ಬೇರುಗಳಿಗೆ ಪೂರಕವಾದ ಕಾರ್ಯನಿರ್ವಹಿಸುತ್ತಿರುತ್ತವೆ. ಜೊತೆಗೆ ಅದೇ ಆವರಣದಲ್ಲಿ ಕಣ್ಣಿಗೆ ಕಾಣದ ಕೋಟ್ಯಾನುಕೋಟಿ ಜೀವಿಗಳು ಹುಟ್ಟುತ್ತಾ, ಸಾಯುತ್ತ ಮಣ್ಣಿನ ಕಣ ಕಣಗಳ ನಡುವೆ ಸೂಕ್ಷ್ಮ ರಂಧ್ರ ಕೊರೆಯುತ್ತ ಮಣ್ಣಿನ ಮೇಲ್ಪದರನ್ನು ಹೂವಿನಂತೆ, ಸ್ಪಂಜಿನಂತೆ ಮೃದುಗೊಳಿಸುತ್ತವೆ.

ಮಾನ್ಸೂನ್ ನಮ್ಮಲ್ಲಿ ರಭಸದ ಮಳೆ. ನೈಸರ್ಗಿಕ ವಾತಾವರಣದಲ್ಲಿ ಈ ಮಳೆ ಎಷ್ಟೇ ಆರ್ಭಟಿಸಿದರೂ ಮಣ್ಣಿನ ಸವಕಳಿ ಉಂಟಾಗುವುದಿಲ್ಲ. ಬಿದ್ದ ಮಳೆ ನೀರೆಲ್ಲ ಆ ಹೂವಿನಂಥ, ಸ್ಪಂಜಿನಂಥ ಮಣ್ಣು ಹೀರಿಕೊಂಡು ತನ್ನ ಕೋಟ್ಯಾನುಕೋಟಿ ರಂಧ್ರಗಳ ಮೂಲಕ ನೆಲದಾಳಕ್ಕೆ ಸರಾಗವಾಗಿ ಕಳುಹಿಸುತ್ತದೆ. ನಿಸರ್ಗದ ನಿಜವಾದ ಸೊಬಗು ಅಡಗಿರುವುದು ಇಲ್ಲಿಯೇ.

ಮಳೆಗೂ ಮುಂಚಿನ ಬೇಸಿಗೆಯಲ್ಲಿ ಕಪ್ಪೆಗಳು ಕಣ್ಮರೆ ಯಾಗಿರುತ್ತವೆ. ಎರೆ ಹುಳುಗಳು ಭೂಮಿಯ ಆಳದಲ್ಲಿರುತ್ತವೆ. ಇರುವೆಗಳು, ಗೆದ್ದಲುಗಳು, ಕಪ್ಪೆಗಳು, ಎರೆಹುಳುಗಳು ಸೇರಿದಂತೆ ಲಕ್ಷಾಂತರ ಜೀವಿಗಳು ನಿಸರ್ಗ ವ್ಯವಸ್ಥೆಯಲ್ಲಿ ತಮ್ಮದೇ ಆದ ಬಗೆಯಲ್ಲಿ ಭೂಮಿಯನ್ನು ಉತ್ತು ಹದಗೊಳಿಸಿರುತ್ತವೆ. ಮಳೆ ಬೀಳುತ್ತಿದ್ದಂತೆ ಭೂಮಿಯ ಉಷ್ಣಾಂಶ ತಗ್ಗಿ ಬಿಲಗಳಿಂದ ಹೊರ ಬರುತ್ತವೆ. ಹೀಗೆ ಹೊರಬಂದವುಗಳು ಬೆಳೆಗಳಿಗೆ ಪೂರಕವಾದ ಕೆಲಸದಲ್ಲಿ ತೊಡಗುತ್ತವೆ.

ನಮ್ಮ ಬೇಸಾಯ ಕ್ರಮವನ್ನು ನಿಸರ್ಗ ನಿಯಮಗಳಿಗೆ ಪೂರಕವಾಗಿ ರೂಪಿಸಿಕೊಳ್ಳಬೇಕು. ಬಂಜರು ಭೂಮಿಯಲ್ಲೂ ನಾವು ಯಾವುದೇ ಖರ್ಚುಗಳಿಲ್ಲದೆ ಫಸಲು ತೆಗೆಯ ಬಹುದು. ಆದರೆ ಆ ಪರಿಸ್ಥಿತಿಗೆ, ಜಾಗಕ್ಕೆ ಒಗ್ಗುವ ಫಸಲುಗಳನ್ನು ಮಾತ್ರ ಹಾಕಬೇಕು. ಮಹಾರಾಷ್ಟ್ರದ ಈಶಾನ್ಯ ಬಂಜರು ಭೂಮಿಗಳಲ್ಲಿ ಸೀತಾಫಲ ಮತ್ತು ನಿಂಬೆ ಸೊಗಸಾಗಿ ಬೆಳೆದಿವೆ. ನಮ್ಮ ಮಹಾರಾಷ್ಟ್ರ ಸರಕಾರ ಇಲ್ಲಿ ಈ ಪ್ರಯೋಗ ನಡೆಸಿ ಯಶಸ್ವಿಯಾಗಿದೆ.

ಉಳುಮೆ ಮಾಡಿ ಬೆಳೆ ಬಿತ್ತುವ ವ್ಯವಸ್ಥೆಯಿಂದ ಆದಷ್ಟೂ ಬೇಗ ನಾವು ದೂರ ಸರಿಯಬೇಕು. ಮಳೆ ಆಶ್ರಿತ ಭೂಮಿಗಳಲ್ಲಿ ನಾವು ಕೇವಲ ಅಲ್ಪಾವಧಿ ಬೆಳೆಗಳಿಗೆ ಮಾತ್ರವೆ ಗಮನ ಕೊಡದೆ ಬಹು ಬಗೆಯ ದೀರ್ಘಾವಧಿ ಫಸಲುಗಳ ಕಡೆಯೂ ಗಮನ ಕೊಡಬೆಕು. ಮಳೆ ಆಶ್ರಿತ ನೆಲಗಳಲ್ಲಿ ತೋಟಗಾರಿಕಾ ಬೆಳೆ ಯಶಸ್ವಿ ಆಗುವ ಹಾಗೆ ನೀರಾವರಿ ಭೂಮಿಯಲ್ಲೂ ಆಗುವುದಿಲ್ಲ. ಆದರೆ ನೀವಿಲ್ಲಿ ನೈಸರ್ಗಿಕ ಕೃಷಿ ಕ್ರಮವನ್ನು ತಪ್ಪದೆ ಅನುಸರಿಸಬೇಕು. ಯಾವುದೇ ಪ್ರದೇಶದಲ್ಲಿ ಖಾಲಿ ಬೆಳೆ ಮಾತ್ರ ತೆಗೆಯಲು ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ಆರ್ದ್ರತೆ- ಈ ಇಷ್ಟು ಜ್ಞಾನ ನಿಮಗಿದ್ದರೆ ಸಾಕು.

ನೈಸರ್ಗಿಕ ಕೃಷಿ ವ್ಯವಸ್ಥೆಯಲ್ಲಿ ಬೆಳೆಗಳ ಮೇಲೆ ಕೀಟಗಳು ಸಮರವನ್ನೇ ಸಾರಲಿ, ಕಳೆಗಳು ಬೆಳೆದು ನಿಲ್ಲಲ್ಲಿ, ಇಲಿಗಳ ಉಪಟಳ ಮೇರೆ ಮೀರಲಿ, ಹಾವುಗಳು, ಹಕ್ಕಿಗಳು, ಪತಂಗಗಳು ಬೇಕಾದ್ದು ಮಾಡಲಿ. ಆದರೆ, ತಿಳಿಯಿರಿ ಆ ಎಲ್ಲವುಗಳು ಇದ್ದಾಗಲೆ ಬೆಳೆಗೆ ಸಮೃದ್ಧಿ! ಈ ಬಾರಿ ಇಲಿಗಳ ಕಾಟ ಹೆಚ್ಚಾಯಿತು ಎಂದುಕೊಳ್ಳಿ. ಶೇಕಡ ಐದರಷ್ಟು ಫಸಲು ಕೂಡ ನಷ್ಟವಾಯಿತು ಅಂದುಕೊಳ್ಳಿ. ಆದರೆ ಅದರ ಮರುವರ್ಷ ನಷ್ಟದ ಹತ್ತು ಪಟ್ಟನ್ನು ನೀವು ಜಪ್ತಿ ಮಾಡಿರುತ್ತೀರಿ. ಯಾಕೆಂದರೆ ಇಲಿಗಳ ವಿಸರ್ಜನೆ, ಕಾರ್ಯಾಚರಣೆ ಅಂಥ ಶಕ್ತಿ ಇದೆ. ಕಳೆ ಬೆಳೆದರೆ ಮತ್ತೆ ಅದು ಬೆಳೆದಲ್ಲಿಗೇ ಸೇರುತ್ತದೆ. ಬೆಳೆಯುತ್ತಿರುವ ಬೆಳೆಯ ಮೇಲೆ ಪೈಪೋಟಿಗೆ ನಿಲ್ಲುವ ಕಳೆಯನ್ನು ನಿಯಂತ್ರಿಸಿ. ಅದನ್ನೇ ಭೂಮಿಗೆ ಹೊದಿಕೆ ಮಾಡಿ. ನಮ್ಮ ರಾಸಾಯನಿಕ ಬೇಸಾಯ- ಹಾವು, ಇಲಿ, ಎರೆಹುಳು, ಗೆದ್ದಲು, ಕಪ್ಪೆ, ಜೇಡ, ದುಂಬಿ, ಜೇನು, ಪತಂಗ, ಹಕ್ಕಿ ಎಲ್ಲವನ್ನೂ ಕೊಲ್ಲುತ್ತಾ ಹೋಗುತ್ತದೆ; ಹಾಗೆಯೇ ಭೂಮಿ ಮೇಲಿನ ಕೋಟ್ಯಾನು ಕೋಟಿ ಜೀವಾಣುಗಳನ್ನು ಕೂಡ. ಭೂಮಿಯಲ್ಲಿ ಬೆಳೆ ತೆಗೆಯಲು ಈ ಬಗೆಯಲ್ಲಿ ಕಸರತ್ತು ನಡೆಸುವ ನಾವು ಸದಾ ಕಾಲ ಬದುಕುಳಿಯಲು ಆಸ್ಪತ್ರೆ, ಔಷಧಿ, ಡಾಕ್ಟರುಗಳ ಮೊರೆಹೋಗಬೇಕಾಗುತ್ತದೆ. ನಾವೀಗ ಮೊದಲು ರೋಗದ ಮೂಲ ಪತ್ತೆ ಹಚ್ಚಬೇಕು. ರೋಗದ ಮೂಲವಿರುವುದೇ ನಮ್ಮ ಬೇಸಾಯ ಕ್ರಮದಲ್ಲಿ! ಅದನ್ನು ಸರಿಪಡಿಸಿಕೊಂಡರೆ ಈ ಆಸ್ಪತ್ರೆಗಳು, ಔಷಧಿಗಳು, ಡಾಕ್ಟರುಗಳು- ಈ ಯಾರಿಗೂ ವಿಳಾಸವೇ ಇರುವುದಿಲ್ಲ.

ಹೀಗಾಗಿ ಬೇಸಾಯದ ಭೂಮಿಗೆ ಟ್ರ್ಯಾಕ್ಟರನ್ನು ತರಕೂಡದು. ಟ್ರ್ಯಾಕ್ಟರ್‌ನ ಭಾರದ ಒತ್ತಡಕ್ಕೆ ಹ್ಯೂಮಸ್ ಸೇರಿದಂತೆ ಜೀವಾಣುಗಳೆಲ್ಲ ನಿರ್ನಾಮವಾಗುತ್ತವೆ. ಟ್ರ್ಯಾಕ್ಟರ್ ಓಡಾಡಿದ ಜಾಗದಲ್ಲಿ ಮೇಲ್‌ಸ್ತರದ ಮಣ್ಣು ಗಟ್ಟಿಯಾಗುತ್ತದೆ. ಭೂಮಿಯ ಆಳಕ್ಕೆ ಹೋಗುವ ರಂಧ್ರಗಳೆಲ್ಲ ಮುಚ್ಚಿಹೋಗುತ್ತವೆ. ಯಾವಾಗ ರಂಧ್ರಗಳು ಮುಚ್ಚಿ ಹೋಗುತ್ತವೋ ಆವಾಗ ಬಿದ್ದ ನೀರನ್ನು ಹಿಡಿದಿಡುವ ಸಾಮರ್ಥ್ಯ ಕಳೆದುಹೋಗುತ್ತದೆ. ಇದರಿಂದಾಗಿ ಭೂಮಿಯೊಳಕ್ಕೆ ನೀರು ಇಳಿಯುವುದಿಲ್ಲ. ಅಂತರ್ಜಲ ಮರುಪೂರಣವಾಗುವುದಿಲ್ಲ. ಇದರಿಂದಾಗಿ ಬಾವಿ, ಬೋರ್ವೆಲ್‌ಗಳೆಲ್ಲ ಬತ್ತಿಹೋಗುತ್ತವೆ.

ನಮ್ಮ ಮಾಮೂಲಿ ಬೇಸಾಯ ಕ್ರಮದಲ್ಲಿ ಮುಂಗರಿಗಿಂತ ಮುಂಚೆಯೆ ಹೊಲಗದ್ದೆಗಳನ್ನು ಉತ್ತು ಹಸನು ಮಾಡಿಕೊಂಡಿರುತ್ತೇವೆ. ಹೀಗೆ ಉತ್ತು ಹಸನು ಮಾಡಿಕೊಳ್ಳುವುದರ ಮೂಲಕ ಆಗುವ ಅನಾಹುತ ನಮ್ಮ ಅರಿವಿಗೆ ಬಂದೇ ಇರುವುದಿಲ್ಲ. ಫಸಲು ತೆಗೆದುಕೊಂಡ ತಕ್ಷಣವೆ ಉಳುಮೆ ಮಾಡುವುದರಿಂದ ನೈಸರ್ಗಿಕವಾಗಿ ಜರುಗಬೇಕಾದ ಕ್ರಿಯೆಗಳು ಜರುಗುವುದಿಲ್ಲ. ಕೊಡು-ಕೊಳ್ಳುವ ಸಂಬಂಧದಲ್ಲಿ ವಾಹಕ ಪಾತ್ರ ನಿರ್ವಹಿಸುವ ಜೀವಾಣುಗಳು ಅಲ್ಲಿ ಇರುವುದಿಲ್ಲ. ಜೊತೆಗೆ ಮಾನ್ಸೂನ್ ಮಳೆಯ ಹೊಡೆತ ಹಸನಾದ ಮಣ್ಣನ್ನೆಲ್ಲ ಕೊಚ್ಚಿಕೊಂಡು ಹೋಗುತ್ತದೆ.

ನಿಮ್ಮ ಉಳುಮೆಯಿಂದಾಗಿ ಭೂಮಿಯ ಸಾರ ನಷ್ಟವಾಯಿತು. ಎರಡನೆಯದಾಗಿ ಸವಕಳಿಯಾದ ಆ ಮಣ್ಣು ಹಳ್ಳ, ಕೊಳ್ಳ, ನದಿ ಪಾತ್ರಗಳ ಹಾದಿಹಿಡಿದು ಸಮುದ್ರದೆಡೆಗೆ ಹರಿಯಿತು. ನಿಮ್ಮ ಕೆರೆ, ಕಟ್ಟೆ, ಹಳ್ಳ, ಬಾವಿ, ಅಣೆಕಟ್ಟುಗಳಲ್ಲಿ ಹೂಳು ತುಂಬಿಕೊಂಡಿತು. ಈ ಉಳುಮೆಯ ಕಾರಣವಾಗಿಯೇ ದೊಡ್ಡ ದೊಡ್ಡ ಅಣೆಕಟ್ಟುಗಳಿಗೆ ಭವಿಷ್ಯವೆ ಇಲ್ಲದಂತಾಗಿದೆ. ಕಬಿನಿ, ತುಂಗಭದ್ರಾ, ಬಾಕ್ರಾನಂಗಲ್ ಸೇರಿದಂತೆ ದೇಶದ ಬಹುತೇಕ ಅಣೆಕಟ್ಟುಗಳಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಹೂಳು ತುಂಬಿ ನೀರು ಸಂಗ್ರಹಣೆಯ ಸಾಮರ್ಥ್ಯವೇ ಕುಸಿಯುತ್ತದೆ! ಇಷ್ಟೆಲ್ಲದರ ನಡುವೆ ಉಳುಮೆ ಮಾಡಿದ ತಪ್ಪಿಗೆ ಕೆರೆಗಳಲ್ಲಿ ಹೂಳಾಗಿ ಪರಿವರ್ತನೆಗೊಂಡಿರುವ ನಿಮ್ಮದೇ ಜಮೀನಿನ ಗೋಡು ಮಣ್ಣನ್ನು ವಾಪಸ್ಸು ತರಲು ಅನಗತ್ಯವಾಗಿ ಹಣ ಮತ್ತು ಶ್ರಮ ಖರ್ಚು ಮಾಡಬೇಕು.

ಉಳುಮೆ ಮಾಡಲು ನಮ್ಮ ಭೂಮಿಯಲ್ಲಿ ಎರೆಹುಳುಗಳಿವೆ. ನಿಸರ್ಗ ಅಸಾಧಾರಣ ಮಟ್ಟದ ಉಳುಮೆಯ ಕೌಶಲ್ಯವನ್ನು ಎರೆಹುಳುಗಳಲ್ಲಿ ತುಂಬಿದೆ. ಅವು ಉಂಟುಮಾಡುವ ರಂಧ್ರಗಳಲ್ಲಿ ನೀರು ಝಳ ಝಳನೆ ಕೆಳಗಿಳಿಯುತ್ತದೆ. ಹಾಗೆಯೇ ಕೇಶಾಕರ್ಷಣ ಬಲದಿಂದ ಮೇಲ್ಮೈಗೂ ಬರುತ್ತದೆ.