ನಾರಾಯಣಪುರ ಡ್ಯಾಂ 

ತಾ. ಸುರಪೂರ
ದೂರ : ೪೦ ಕಿ.ಮೀ.

ಸುರಪೂರ ತಾಲೂಕಿನ ನಾರಾಯಣಪುರದಿಂದ ೫ ಕಿ.ಮೀ., ಲಿಂಗಸೂರಿನಿಂದ ೨೨ ಕಿ.ಮೀ., ಮುದ್ದೇಬಿಹಾಳದಿಂದ ೩೦ ಕಿ.ಮೀ. ದೂರದಲ್ಲಿರುವ ಈ ರಮ್ಯತಾಣವು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಗ್ರಾಮ ನಿವೇಶನದಲ್ಲಿದ್ದು ಪ್ರವಾಸಿಗರ ಆನಂದಧಾಮವಾಗಿದೆ.  ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಕೃಷ್ಣಾ ನದಿಗೆ ಇಲ್ಲಿ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಗುಲಬರ್ಗಾ ಹಾಗೂ ಬಿಜಾಪೂರ ಜಿಲ್ಲೆಯ ಹಲವಾರು ಪ್ರದೇಶಗಳಿಗೆ ನೀರಾವರಿ ಹಾಗೂ ವಿದ್ಯುಚ್ಛಕ್ತಿ ಸೌಲಭ್ಯ ದೊರಕಲಿದೆ ಸುಮಾರು ಅರ್ಧ ಕಿ.ಮೀ., ಉದ್ದವಿರುವ ಈ ಅಣೆಕಟ್ಟಿನ ಮೇಲೆ ಹಾದು ಹೋಗುವಾಗ ಸುಡು ಬಿಸಿಲಲ್ಲೂ ಸಾಗರದ ಮೇಲಿಂದ ತೇಲಿ ಬರುವ ತಿಳಿಗಾಳಿ ಪ್ರವಾಸಿಗಳಿಗೆ ಅವರ್ಣನೀಯ ಆನಂದವನ್ನು ನೀಡುತ್ತದೆ. ಅಣೆಕಟ್ಟಿನ ಬಳಿಯಲ್ಲೇ ಸುಂದರವಾದ ಗುಲಾಬಿ ಉದ್ಯಾನ ರೂಪುಗೊಳ್ಳುತ್ತಿದ್ದು, ಪ್ರವಾಸಕ್ಕೆ ಜುಲೈ – ಆಗಷ್ಟ್ ತಿಂಗಳು ಸೂಕ್ತ ಕಾಲವಾಗಿದ್ದು ವಿಹಾರಕ್ಕೆ ಯೋಗ್ಯವಾಗಿದೆ.  ಪ್ರವಾಸಿಗರಿಗೆಂದೇ ಸರ್ಕಾರಿ ವಸತಿ ಗೃಹವಿದೆ.  ಪ್ರವಾಸೋಧ್ಯಮದ ಅಭಿವೃದ್ಧಿಗೆ ಸದಾವಕಾಶವಿದೆ.

ಟೈಲರಸ್ ಬಂಗ್ಲಾ

ಸುರಪೂರ ತಾಲೂಕಿನ ಪುಷ್ಕರಣಿ

ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಸುರಪೂರ ಕಮಿಷನರ್ ಆಗಿ ೧೮೪೦ ರಿಂದ ರಾಜಾವೆಂಕಟಪ್ಪ ನಾಯಕನನ್ನು ಸಿಂಹಾಸನದಲ್ಲಿ ಕೂಡಿಸಿ ಅಧಿಕಾರ ನಡೆಸಿದ ಮೇಡೋಸ್ ಟೈಲರನು ಇಲ್ಲಿ ನಿರ್ಮಿಸಿರುವ ಬಂಗಲೆಯು ಭವ್ಯವಾಗಿದ್ದು ಅತ್ಯುತ್ತಮ ತಾಂತ್ರಿಕತೆಗೆ ಹೆಸರಾಗಿದ್ದು ವೀಕ್ಷಕರಲ್ಲಿ ವಿಸ್ಮಯವನ್ನು ಉಂಟು ಮಾಡುತ್ತಿದ್ದು, ಇಂದು ಇದು ವಿಶ್ರಾಂತಿಯ ಗೃಹವಾಗಿ ಬಳಸಲ್ಪಡುತ್ತಿದೆ. ಗುಲಬರ್ಗಾದ ಹಲವು ಐತಿಹಾಸಿಕ ನೆಲೆಗಳನ್ನು ಬೆಳಕಿಗೆ ತಂದ ಕೀರ್ತಿ ಮೆಡೋಸ್ ಟೈಲರನಿಗೆ ಸಲ್ಲುತ್ತದೆ.

 

ಕೊಡೇಕಲ್ ದೇವಸ್ಥಾನ

ತಾ.ಸುರಪೂರ
ದೂರ: ೪೨ ಕಿ.ಮೀ.

ಕೊಡೇಕಲ್ ತಾಲೂಕು ಕೇಂದ್ರವಾದ ಸುರಪುರದಿಂದ ನೈಋತ್ಯಕ್ಕೆ ೪೨ ಕಿ.ಮೀ. ದೂರದಲ್ಲಿದೆ.  ಸುಮಾರು ೧೫ನೇ ಶತಮಾನದಲ್ಲಿದ್ದ ಅರೂಢ ಸಂಪ್ರಾದಾಯದ ಕೊಡೇಕಲ್ ಬಸವಣ್ಣ ಇಲ್ಲಿ ನಿಂತು ಕಾಲಜ್ಙಾನ ರಚಿಸಿ, ಹಿಂದೂ-ಮುಸ್ಲಿಂ ಭಾವೈಕ್ಯತೆಗಾಗಿ ದುಡಿದು ದೇಹ ತ್ಯಜಿಸಿದ ಪುಣ್ಯ ಸ್ಥಳವಾಗಿದ್ದು, ಅದರಿಂದಾಗಿ ಇದಕ್ಕೆ ಅಮರ ಕಲ್ಯಾಣವೆಂದೂ ಕರೆಯುವ ವಾಡಿಕೆಯಿದೆ.

ಕೊಡೇಕಲ್ ನಲ್ಲಿ ಬಸವಣ್ಣನ ಎರಡು ಗುಡಿಗಳಿದ್ದು, ಪೇಟೆ ಬಸವಣ್ಣನ ಗುಡಿಯು ಕೊಡೇಕಲ್ ಬಸವಣ್ಣ ಕುಳಿತು ಕಾಲಜ್ಞಾನ ಬರೆದಂತಹ ಸ್ಥಳವಾದರೆ, ಊರ ಬಸವಣ್ಣನ ಗುಡಿಯು ಇವನು ಐಕ್ಯ ಹೊಂದಿದ ಸ್ಥಳವಾಗಿದೆ.  ಈ ಎರಡೂ ಗುಡಿಗಳು ಮುಸ್ಲಿಂ ವಾಸ್ತು ಶೈಲಿಯ ರಚನೆಗಳಾಗಿದ್ದು, ಸುಂದರವಾಗಿವೆ. ಕೊಡೇಕಲ್ ಬಸವಣ್ಣನ ಜಾತ್ರೆ ವರುಷದಲ್ಲಿ ಎರಡು ಬಾರಿ ದೀಪಾವಳಿ ಹಾಗೂ ಯುಗಾದಿಯಾದ ೧೫ ದಿನಕ್ಕೆ ಜರುಗುತ್ತಿದ್ದು, ಆ ಸಂದರ್ಭಗಳಲ್ಲಿ ಪಲ್ಲಕಿ ಉತ್ಸವ ನಡೆಯುತ್ತಿದ್ದು ಸುಮಾರು ೧೫೦೦೦ ಜನ ಪಾಲ್ಗೊಳ್ಳುತ್ತಾರೆ. ಮೈಸೂರು ಜಿಲ್ಲೆಯ ಬೊಪ್ಪಗೌಡನ ಪುರದ ಮಂಟೇ ಸ್ವಾಮಿಯು ಕೊಡೇಕಲ್ ಬಸವಣ್ಣನ ಶಿಷ್ಯನಾಗಿದ್ದು, ಕಪ್ಪಡಿ ರಾಜಪ್ಪಾಜಿಯು, ಕೊಡೇಕಲ್ ಬಸವಣ್ಣನ ಮಕ್ಕಳಲ್ಲಿ ಒಬ್ಬನಾಗಿದ್ದಾನು.

 

ದೇವರ ಗೋನಾಳ       

ತಾ. ಸುರಪೂರ
ದೂರ : ೧೦ ಕಿ.ಮೀ.

ದೇವರ ಗೋನಾಳ ತಾಲೂಕ ಕೇಂದ್ರವಾದ ಸುರಪೂರದಿಂದ ವಾಯುವ್ಯಕ್ಕೆ ೧೦ ಕಿ.ಮೀ. ದೂರದಲ್ಲಿದ್ದು ಪವಾಡ ಪುರುಷ ತಿಂಥಿಣಿ ಮೌನೇಶ್ವರರ ಹುಟ್ಟೂರಾಗಿರುವುದರಿಂದ ಮಹತ್ವ ಪಡೆದಿದೆ. ಗ್ರಾಮ ಪಂಚಾಯತಿ ಕಛೇರಿ ಮುಂದಿರುವ ಎರಡು ಶಿಲಾ ಶಾಸನಗಳಿಂದ ಈ ಊರಿನ ಪ್ರಾಚೀನತೆಯನ್ನು ಸುಮಾರು ೧೧-೧೨ನೇ ಶತಮಾನದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ.

ಇವುಗಳಲ್ಲಿ ಸುಮಾರು ೧೧೦೬ ರ ಪ್ರಾಚೀನ ಶಾಸನವು ಕಲ್ಯಾಣದ ಚಾಳುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ಮಹಾಮಂಡಳೇಶ್ವರ ದೇವರಸ, ಭೋಗರಸ, ದಂಡನಾಯಕರು ಹಾಗೂ ಚಕ್ರವರ್ತಿಯ ರಾಣಿ ಧಾರಲ ದೇವಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದು, ಮುಂದಿನ ಭಾಗ ಹಾಳಾಗಿರುವುದರಿಂದ ಹೆಚ್ಚಿನ ವಿವರ ಲಭಿಸುವುದಿಲ್ಲ.  ಆದರೂ ಸಾಂದರ್ಭಿಕ ಆಧಾರಗಳಿಂದ ಗೋನಾಳದಲ್ಲಿರುವ ಪ್ರಾಚೀನ ಆದಿಲಿಂಗೇಶ್ವರದ ದೇವಾಲಯಕ್ಕೆ ಸಂಬಂಧಿಸಿದ ಶಾಸನವಿದೆಂದು ಊಹಿಸಬಹುದಾಗಿದ್ದು, ಇದರಂದ ಆ ಗುಡಿಯ ನಿರ್ಮಾಣ ಕಾಲವನ್ನು ಸುಮಾರು ೧೧೦೬ ಕ್ಕೆ ನಿಗದಿಪಡಿಸಬಹುದಾಗಿದೆ.

 

ತಿಂಥಿಣಿ ಶ್ರೀ ಮೌನೇಶ್ವರ          

ತಾ.ಸುರಪುರ
ದೂರ : ೪೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ ೧೦೦ ಕಿ.ಮೀ. ದೂರದಲ್ಲಿದೆ.

ತಾಲೂಕು ಕೇಂದ್ರವಾದ ಸುರಪುರದಿಂದ ನೈಋತ್ಯಕ್ಕೆ ೧೯ಕಿ.ಮೀ ದೂರದಲ್ಲಿ ಸುರಪುರ ಲಿಂಗಸುಗೂರ ಮಾರ್ಗದಿಂದ ೫ ಕಿ.ಮೀ. ಒಳಗಾದಂತೆ ಕೃಷ್ಣಾ ನದಿಯ ಎಡ ದಂಡೆಯ ಮೇಲಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಧಾರ್ಮಿಕ ಕೇಂದ್ರವಾಗಿದೆ.  ಸುಮಾರು ೧೭ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಮೌನಪ್ಪಯ್ಯನ ಗದ್ದುಗೆ ಇಲ್ಲಿದ್ದು ಹಿಂದೂಗಳು ಇವರನ್ನು ಮೌನೇಶ್ವರನೆಂದೂ ಮತ್ತು ಮುಸ್ಲಿಮರು ಮೌನುದ್ದೀನ್ ರೆಂದೂ ಭಕ್ತಿಯಿಂದ ಆರಾಧಿಸುತ್ತಾರೆ. ಸುರಪುರ ತಾಲೂಕಿನ ದೇವರ ಗೊನಾಳದಲ್ಲಿ ವಿಶ್ವಕರ್ಮ ಕುಟುಂಬದಲ್ಲಿ ಜನಿಸಿದ ಮೌನೇಶ್ವರರು ಹಿಂದೂ-ಮುಸ್ಲಿಂ ಸಮಾಜದ ಸಮಾನ ಗೌರವಕ್ಕೆ ಪಾತ್ರವಾದ ದಿವ್ಯಚೇತನ.  ಈ ಸಂತರು ಐಕ್ಯವಾದ ಸ್ಥಳದಲ್ಲಿ ಇಂದು ಇರುವ ಕಮಾನು ಮಿನರೇಟ್ ಹಾಗೂ ಗುಮ್ಮಟಗಳನ್ನುಳ್ಳ ಮೌನಪ್ಪಯ್ಯ ಗುಡಿಯನ್ನು ಸುರಪುರದ ನಾಯಕನ ಆಸ್ಥಾನದಲ್ಲಿ ೧೭೫೨-೧೮೦೨ ರ ವರೆಗೆ ಮಂತ್ರಿಗಳಾಗಿದ್ದ ನಿಷ್ಠಿ ಕಡೆಲೆಪ್ಪ, ನಿಷ್ಠಿ ವೀರಪ್ಪಯ್ಯ ಹಾಗೂ ಪ್ರಮುಖರಾದ ಶೆಟ್ಟಿ ಸೊಂಬಣ್ಣ ನಿರ್ಮಿಸಿದರೆಂದು ತಿಳಿದು ಬರುತ್ತದೆ.  ವಿಶಾಲವಾದ ಪ್ರಾಕಾರದಲ್ಲಿರುವ ಮೌನಪ್ಪನ ಗುಡಿಯು ನೆಲಮಾಳಿಗೆಯಲ್ಲಿದ್ದು ಮೇಲೆ ಮುಸ್ಲಿಮರ ಮಜಾರ ಇದೆ.  ನೆಲ ಮಾಳಿಗೆಯಲ್ಲಿ ಹೂಜಿ, ಚೆಪ್ಪಕೊಡಲಿ, ಪರಾಸು ಬಟ್ಟಲು ಹಾಗೂ ಪರುಷ ಮಣಿಗಳನ್ನಿಟ್ಟು ಪೂಜೆ ಮಾಡುತ್ತಾರೆ.  ಇಲ್ಲಿ ಸೊರಬಣ್ಣನ ಗದ್ದುಗೆ ಶಿಷ್ಯ ಗುರುಪ್ಪಯ್ಯ ಮಂದಿರ, ಕೈಲಾಸಕಟ್ಟೆ ಶಾಸನ ಕಟ್ಟೆಗಳಿದ್ದು ಸಮೀಪದ ಚಿಕ್ಕ ಬೆಟ್ಟದ ಮೇಲೆ ಮೌನಪ್ಪಯ್ಯನ ಕಮ್ಮಟ ಶಾಲೆ ಇತ್ತೆಂದು ಸ್ಥಳೀಯರು ಹೇಳುತ್ತಾರೆ.  ಏಕಲಾಕ್ ಅಸ್ಸಿ ಹಜಾರ ಪಾಂಚೋಪೀರ ಪೈಗಂಬರ ಮೌನುದ್ದೀನ್ ಎಂಬ ಘೋಷಣೆಯು ಈ ಸಂತನನ್ನು ಜನಪ್ರಿಯಗೊಳಿಸಿದ್ದು ಈವರೆಗೆ ಈತ ರಚಿಸಿರುವ ಸುಮಾರು ೮೦೦ಕ್ಕಿಂತ ಹೆಚ್ಚು ವಚನಗಳು ಲಭಿಸಿವೆ.