೧೮೫೭-೫೮ರಲ್ಲಿ ಭಾರತ ತನಗೆ ದಾಸ್ಯದ ನೊಗ ಹೊರಿಸಿದ ಬ್ರಿಟಿಷರ ವಿರುದ್ದ ಹೋರಾಡಿತು. ದೇಶದಲ್ಲೆಲ್ಲ ಹಬ್ಬಿದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಕರ್ನಾಟಕ ರಾಜ್ಯಕ್ಕೂ ವ್ಯಾಪಿಸಿತ್ತು. ದಕ್ಷಿಣದ ಮೂಲೆ ಮೂಲೆಗಳಲ್ಲೂ ಅನೇಕ ಷೂರ ಪುರುಷರು ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸಿ ಪ್ರಾಣ ಅರ್ಪಿಸಿದ್ದರು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ವಿಫಲಗೊಂಡಿತು ಎಂದು ಇತಿಹಾಸಕಾರರು ಹೇಳಿದರೂ ವಾಸ್ತವಿಕವಾಗಿ ಅದಿನ್ನೂ ಭಾರತದ ಸ್ವಾತಂತ್ರ್ಯ ಹೋರಾಟದ ಆರಂಭ ಮಾತ್ರ ಆಗಿತ್ತು. ಆ ಸ್ವಾತಂತ್ರ್ಯ ಹೋರಾಟದ ಆರಂಭ ಮಾತ್ರ ಆಗಿತ್ತು. ಆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡಿ ಮಡಿದ ವೀರರಲ್ಲಿ ಹಲವು ಕನ್ನಡಿಗರಿರುವುದು ಕನ್ನದ ನಾಡಿನ ಹೆಮ್ಮೆ .

ಕನ್ನಡ ನಾಡಿನ ಉತ್ತರ ಭಾಗದಲ್ಲಿ ಕ್ರಾಂತಿಯ ಕಿಡಿ ಹೋತ್ತಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ ನರಗುಂದದ ಬಾಬಾಸಾಹೇಬ, ಮುಂಡರಗಿಯ ಭೀಮರಾಯ, ಹೆಮ್ಮಗಿ ದೇಸಾಯಿ, ಕೆಂಚನಗೌಡ ಮೊದಲಾದ ಕನ್ನಡ ವೀರರಲ್ಲಿ ಮೊದಲ ಪಂಕ್ತಿಯಲ್ಲಿ ಸ್ಥಾನ ಗಳಿಸಿದವನು ಸುರಪುರದ ಬೇಡರ ನಾಯಕ ವೆಂಕಟಪ್ಪನಾಯಕ.

ಶೂರ ಬೇಡರ ಬೀಡು

ಗುಲ್ಬರ್ಗ ಜಿಲ್ಲೆಯಲ್ಲಿ ಯಾದಗಿರಿಯಿಂದ ೩೦ ಮೈಲು ದೂರದಲ್ಲಿರುವ ಸುರಪುರ, ಹತ್ತೊಂಬತ್ತನೆಯ ಶತಮಾನದಲ್ಲಿ ಶೂರರ ನಾಡೆಂದು ಮೆರೆದ ಇತಿಹಾಸ ಪ್ರಸಿದ್ಧ ರಾಜ್ಯ. ಸ್ವಾತಂತ್ರ್ಯವನ್ನು ಮೈಗೂಡಿಸಿಕೊಂಡು, ಅದನ್ನು ಉಳಿಸಿಕೊಳ್ಳಲು ಪ್ರಾಣ ತ್ಯಜಿಸಲು ಮುಂದಾದ ಶೂರ ಬೇಡರ ಬೀಡು ಎಂದು ಸುರಪುರದ ಖ್ಯಾತಿ. ಹೈದರಾಬಾದಿನ ನಿಜಾಮ, ಬಿಜಾಪುರದ ಅದಿಲ್ ಷಾ ಈ ಇಬ್ಬರ ಮುಸ್ಲಿಂ ರಾಜ್ಯಗಳ  ನೆರೆಯಲ್ಲೇ ಇದ್ದರೂ ಯಾರ ಪಕ್ಷಕ್ಕೂ ಸೇರದೆ ಸ್ವತಂತ್ರ ಅಸ್ತಿತ್ವ ಉಳಿಸಿಕೊಂದು ಬಂದುದಷ್ಟೇ ಅಲ್ಲ, ಕೆಲವೊಮ್ಮೆ ಈ ಎರಡೂ ಶಕ್ತಿಗಳು “ತಮ್ಮ ವೈರಿ” ಎಂದು ಪರಿಗಣಿಸಿದ ಧೀರರ ಬೀಡು ಇದು. ಬ್ರಿಟಿಷ್ ಸೇನೆಗೂ ತಲೆ ಭಾಗದ ಹೋರಾಟ ನಡೆಸಿದ ಶೂರರ ರಾಜ್ಯ.

ವೀರ ಕೃಷ್ಣಪ್ಪನಾಯಕ

ಹತ್ತೊಂಬತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಈ ಬೇಡರ ನಾಡನ್ನು ಆಳುತ್ತಿದ್ದವ ರಾಜಾ ಕೃಷ್ಣಪ್ಪ ನಾಯಕ. ೧೮೨೯ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿಯ ರಾಯನಾಯಕ (ಸಂಗೊಳ್ಳಿ ರಾಯಣ್ಣ) ಸುರಪುರದ ನೆರವು ಬಯಸಿದ್ದ. ರಾಯಣ್ಣನ ಶೌರ್ಯವನ್ನು, “ಏನು ಬೇಕಾದರೂ ಕೇಳು, ಕೊಡುತ್ತೇನೆ” ಎಂದು ಅಭಯ ನೀಡಿದ್ದ. ರಾಯಣ್ಣನ ಉತ್ತರ: “ಮುನ್ನೂರು ಜನ ಬೇಡರನ್ನು ಕೊಡು, ಸಾಕು. ಬ್ರಿಟಿಷರ ವಿರುದ್ಧ ಕ್ರಾಂತಿ ಎಬ್ಬಿಸುತ್ತೇನೆ.” ರಾಯಣ್ಣನ ದಿಟ್ಟೆದೆಗೆ ತಲೆದೂಗಿದ ಕೃಷ್ಣಪ್ಪನಾಯಕ ತಕ್ಷಣ ತನ್ನ ಪಡೆಯ ಆರಿಸಿದ ಮುನ್ನೂರು ಮಂದಿ ಬೇಡ ವೀರರನ್ನು ರಾಯಣ್ಣನಿಗೆ ಒಪ್ಪಿಸಿದ್ದ.

ಆದರೆ ಕೃಷ್ಣಪ್ಪನಾಯಕನ ಈ ಉದಾರತೆಯನ್ನು ಬ್ರಿಟಿಷರು ಮೆಚ್ಚಲಿಲ್ಲ. ಬದಲು ಸುರಪುರವನ್ನು ತಮ್ಮ ಹಗೆ ಎಂದು ಪರಿಗಣಿಸಿದರು. ಈ ಅಪರಾಧಕ್ಕಾಗಿ ಸುರಪುರಕ್ಕೆ ಹತ್ತು ಹಲವು ವಿಧಗಳಲ್ಲಿ ಉಪಟಳಕೊಟ್ಟು, ಸುರಪುರ ತನ್ನ ಬಹುಭಾಗ ಆದಾಯದ ಖಾಲಿಯಾಗುವತ್ತ ಸಂಚು ನಡೆಸಿದರು. ಸುರಪುರದ ವಿರುದ್ಧ ನಿಜಾಮನಿಗೆ ನೆರವಾದರು.

ಮನೆತನದ ಗೌರವಕ್ಕೆ ಕುಂದು ತರಬೇಡ

೧೮೪೧ರಲ್ಲಿ ಕೃಷ್ಣಪ್ಪನಾಯಕ ಕೊನೆಯುಸಿರು ಎಳೆಯುವಾಗ, ಮರಣಶಯ್ಯೆಯಿಂದ ತನ್ನ ಏಳೆಂಟು ವರ್ಷ ಪ್ರಾಯದ ಪುತ್ರ, ಮುದ್ದು ಹಸುಳೆ ವೆಣ್ಕಟಪ್ಪನಾಯಕನಿಗೆ ಹೇಳಿದ ಮಾತು:

“ಮನೆತನಕ್ಕೆ ಯೋಗ್ಯನಾಗಿ ಬಾಳು,

ಮನೆತನದ ಗೌರವಕ್ಕೆ ಕುಂದು ತರದಿರು.

ಕುಲದ ಹಿರಿಮೆ ಎತ್ತಿ ಹಿಡಿ” ಎನ್ನುವುದು

ತಂದೆ ಮಗನಿಗೆ ನೀಡಿದ ಸರ್ವಸ್ವ ಇದೇ ಮಂತ್ರ. ಬಾಲಕನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಕೂಡಿದ ಈ ಮಂತ್ರ ಅನಂತರ ವೆಂಕಟಪ್ಪನ ನಿತ್ಯ ಮಂತ್ರ ಆಯಿತು. ಆತನ ವ್ಯಕ್ತಿತ್ವ ಪೋಷಣೆಯ ಆಹಾರ ಆಯಿತು.

ಮೆಡೋಸ್ ಟೈಲರ್

ಕೃಷ್ಣಪ್ಪನಾಯಕನ ಮರಣದ ಬಗ್ಗೆ ಮೊಸಳೆ ಕಣ್ಣೀರು ಹರಿಸಿದ ಆಂಗ್ಲ ಸರ್ಕಾರ, ಎಳೆಯ ವೆಂಕಟಪ್ಪನ ಪೋಷಣೆಗೆ ತನ್ನ ಓರ್ವ ಚಾಣಾಕ್ಷ ಅಧಿಕಾರಿ ಮೆಡೋಸ್ ತೈಲರ್ ಎಂಬುವನನ್ನು ನೇಮಿಸಿತು.

ತೈಲರ್ ಆರೈಕೆಯಲ್ಲಿ ಬೆಳೆದ ಚಿಕ್ಕ ವೆಂಕಟಪ್ಪ ಆಂಗ್ಲ ಶಿಕ್ಷಣ, ಸಂಸ್ಕೃತಿಗಳನ್ನು ಚೆನ್ನಾಗಿ ಕಲಿತ; ಆದರೆ ಬ್ರಿಟಿಷರ ಎಣಿಕೆಯಂತೆ ಆಂಗ್ಲರ ಗುಲಾಮ ಆಗಲಿಲ್ಲ. ಬದಲು ಆಂಗ್ಲ ಇತಿಹಾಸದ ಉತ್ತಮ ಅಂಶಗಳನ್ನೆಲ್ಲ ರಕ್ತಗತ ಮಾಡಿಕೊಂಡ. ಜೊತೆಗೇ ತನ್ನ ಜನ್ಮಭೊಮಿಯ “ಮಣ್ಣಿನ ಮಗ” ನೂ ಆಗಿ ಬೆಳೆದ. ಅಮೆರಿಕ ಬ್ರಿಟನ್ನಿನ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿತುಕೊಂಡ. ಅವನಿಗೆ ಇವೆಲ್ಲ ತನಗೆ ಮಾರ್ಗದರ್ಶಕ ಎನಿಸಿದವು. ಆಂಗ್ಲರ ಸ್ವಾಭಿಮಾನದೊಂದಿಗೆ ಭಾರತೀಯನ ಸ್ವಾತಂತ್ರ್ಯ ಪ್ರಿಯತೆ, ದೇಶಭಕ್ತಿ, ವೆಂಕಟಪ್ಪನಲ್ಲಿ ಮೂರ್ತೀಭವಿಸಿದವು.

"ಮನೆತನದ ಗೌರವಕ್ಕೆ ಕುಂದು ತರಬೇಡ."

ವಿದ್ವತ್ತು-ಸ್ವಾಭಿಮಾನಗಳ ಕೇಂದ್ರ

 

ಆಕಾಶವನ್ನೇ ಮುಟ್ಟುವ ದುರ್ಭೇದ್ಯ ಬೆಟ್ಟಗಳಿಂದ ಸುತ್ತುವರಿದಿದ್ದ ಸುರಪುರ ನೈಸರ್ಗಿಕವಾಗಿಯೇ ಶೂರಪುರಆಗಿತ್ತು. ಶೂರ ಬೇಡರ ಈ ರಾಜ್ಯ ಹದಿನೆಂಟನೆಯ ಶತಮಾನದಲ್ಲಿ ಅತ್ಯಂತ ಸಂಪದ್ಭರಿತ ಪಾಳೆಯ. ವಿದ್ದಜ್ಜರ ಆಶ್ರಯ ಕೇಂದ್ರ ಎನಿಸಿದ್ದ ಸುರಪುರ ಭಾರತೀಯ ಸಂಗೀತ ಕಲೆಗೂ ಪ್ರಸಿದ್ಧವಾಗಿತ್ತು. ಮನೆತನಗಳು, ಅಂದು ರಾಜರಿಂದ ಉಡುಗೊರೆಯಾಗಿ ಪಡೆದ ಇನಾಮು ಭೂಮಿಗಳು ಕಾಣಸಿಗುತ್ತವೆ.

ಅತ್ಯಂತ ಸಂಪ್ರದಾಯನಿಷ್ಠರು, ಸತ್ಯಸಂಧರು, ಸದ್ಗುಣಿಗಳು ಆದ ಸುರಪುದ ಬೇಡರು ಹುಟ್ಟು ಸ್ವಾಭಿಮಾನಿಗಳು. ಓದು ಬರಹ ತಿಳಿಯದವರಾದರೂ ದೇಶ ಹಾಗೂ ಧರ್ಮಗಳ ಬಗ್ಗೆ ಅನೇಕ ಶಿಕ್ಷಿತರಿಗಿಂತ ಚೆನ್ನಾಗಿ ಬಲ್ಲವರು. ದೇಶ ಹಾಗೂ ಧರ್ಮದ ರಕ್ಷಣೆ ನಾಡಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎನ್ನುವ ಪ್ರಜ್ಞೆ ಬೆಳೆಸಿಕೊಂಡವರು.

ಮೊದಲಿಗೆ ಬಿಜಾಪುರ, ಗೋಲ್ಕೊಂಡಗಳ ಮುಸ್ಲಿಂ ರಾಜಸ್ತ್ತೆಗಳ ಕಾಲದಲ್ಲಿ ಆ ಬೃಹತ್ ರಾಜ್ಯಗಳಿಗೆ ಸೇವೆ ಸಲ್ಲಿಸಿದ್ದ ಸುರಪುರದ ಬೇಡರು, ಕನ್ನಡ ನಾಡಿನ ಭಾಗ್ಯೋದಯದ ಪರ್ವ ಕಾಲದಲ್ಲಿ ಸಹಜವಾಗಿ ವಿಜಯ ನಗರವನ್ನು ಕೂಡಿಕೊಂಡರು. ವಿಜಯನಗರ ಸಾಮ್ರಾಜ್ಯದ ಸಾಮಂತರಾದರು. ವಿಜಯನಗರದ ನೋವು-ನಲಿವುಗಳಲ್ಲಿ ಪಾಲು ಪಡೆದ ಸುರಪುರ, ಸುತ್ತಲಿಂದಲೂ ನಡೆಯುತ್ತಿದ್ದ ಶತ್ರು ಆಕ್ರಮಣಗಳಿಂದ ವಿಜಯನಗರವನ್ನು ರಕ್ಷಿಸುವ ಸಲುವಾಗಿ ಸೇನೆಯ ವಿರುದ್ಧ ಕನ್ನಡಿಗರ ಅಳಿವು-ಉಳಿವಿನ ಹೋರಾಟದಲ್ಲಿ ಕಚ್ಚಿನಿಂದ ಕಾದಿದ ನಾಡು. ವಿಜಯನಗರಕ್ಕೆ ಸುರಪುರದ ಬೇಡರಿಂದ ಸಂದ ಸೇವೆ ಅಪಾರ.

ಛತ್ರಪತಿ ಶಿವಾಜಿ ಕಟ್ಟಿದ ಮರಾಠಾ ರಾಜ್ಯದ ಪ್ರಗತಿಯ ಕಾಲದಲ್ಲಿ ದಿಲ್ಲಿಯ ಬಾದಶಹ ಔರಂಗಜೇಬನ ವಿರುದ್ಧ ಕಾಲದಲ್ಲಿ ದಿಲ್ಲಿಯ ಬಾದಶಹ ಔರಂಗಜೇಬನ ವಿರುದ್ಧ ಮರಾಠರಿಗೆ ನೆರವು ನೀಡಿದ ಖ್ಯಾತಿ ಸುರಪುರದ ಬೇಡರದು.

ಶತ್ರುಗಳ ಕಣ್ಣುಬಿದ್ದಿತು

ವಿಜಯನಗರದ ಪತನದ ಬಳಿಕ ಈ ಪುಟ್ಟ ಸ್ವತಂತ್ರ ಪಾಳೆಯ ಸುರಪುರ. ಬಿಜಾಪುರ ಸುಲ್ತಾನನ ಸಾಮಂತಿಕೆ ಒಪ್ಪಬೇಕಾಯಿತು. ಸುರಪುರದ ಬೇಡರ ಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು, ಸುರಪುರ ರಾಜ್ಯ ಕ್ರಮೇಣ ಕೃಷ್ಣಾ ನದಿಯ ಉತ್ತರ ಭಾಗಕ್ಕೂ ವಿಸ್ತರಿಸುತ್ತಿರುವುದನ್ನು ಗಮನಿಸಿದ ಬಿಜಾಪುರ ಸುಲ್ತಾನ ಇವರೊಂದಿಗೆ ಮೈತ್ರಿಯಿಂದ ಇದ್ದರೆ ತನಗೆ ಲಾಭವೆಂದು ಲೆಕ್ಕ ಹಾಕಿದ . ಅದಕ್ಕಾಗಿ ವಾಗಣಗೇರಿ ಎಂಬಲ್ಲಿ ಸುರಪುರದ ಬೇಡರಿಗೆ ಬಿರುದು-ಬಾವಲಿಗಳನ್ನಿತ್ತು, ಇನಾಮುಗಳನ್ನಿತ್ತು ಗೌರವಿಸಿ, ಆ ಪ್ರದೇಶದ ಭೂ ಕಂದಾಯ ಸಂಗ್ರಹದ ವಿಶೇಷ ಅಧಿಕಾರವನ್ನು ಕೊಟ್ಟು ಬೇಡರ ಮಿತ್ರತ್ವ ಗಳಿಸಿದ.

ರಾಜ್ಯ ವಿಸ್ತರಣೆಯ ಅಪಾರ ಆಕಾಂಕ್ಷೆಯಿಂದ ದಕ್ಷಿಣಕ್ಕೆ ದಂಡೆತ್ತಿ ಬಂದ ಮೊಗಲ ಸಾಮ್ರಾಟ ಔರಂಗಜೇಬನಿಗೆ ಸುರಪುರ ತಲೆಬಾಗದಲ್ಲಿಲ್ಲ. ಬೇಡರ ಬಲ ಎಷ್ಟೆನ್ನುವುದನ್ನು ಅರಿತುಕೊಂಡ ಔರಂಗಜೇಬ ಅವರ ಮೈತ್ರಿಗೆ ಯತ್ನಿಸಿದ್ದ. ಆದರೆ ಶೂರರಾದ ಸ್ವಾತಂತ್ರ್ಯದೇವಿಯ ಪರಮ ಭಕ್ತರಾದ ಸುರಪುರದ ಬೇಡರ ನಾಯಕರು ಔರಂಗಜೇಬನಿಗೆ ಕೈ ನೀಡಿಯಾರೆ? ಅವರಿಂದ ದೊರೆತ ಧಿಕ್ಕಾರದ ಉತ್ತರವನ್ನು ನೋಡಿ ಕೆರಳಿದ ಔರಂಗಜೇಬ ತನ್ನ ದೈತ್ಯ ಸೇನೆಯನ್ನು ವಾಗಣಗೇರಿಯ ಕಡೆ ಓಡಿಸಿದ. ಬೇಡರ ದೊರೆ ವಾಗಣಗೇರಿ ತ್ಯಜಿಸಬೇಕಾಯಿತು. ಅಲ್ಲಿಂದ ಹಿಂದೆ ಸರಿದ ಬೇಡರು ಸುರಪುರದ ಅಭೇದ್ಯ ಕೋಟೆಯನ್ನು ಕೂಡಿಕೊಂಡರು. ಅಲ್ಲಿನ ದುರ್ಗಮ ಬೆಟ್ಟಗಳ ನಡುವೆ ಬಲವಾದ ಕೋಟೆಗಳನ್ನು ಕಟ್ಟಿ, ಔರಂಗಜೇಬನಿಗೆ ಸವಾಲೊಡ್ಡಿ ನಿಂತರು.

ಕೊನೆಗೂ ಸುರಪುರ ಗೆಲ್ಲಲಾಗದ ಔರಂಗಜೇಬ ಬೇಡರ ಶೌರ್ಯ ಮೆಚ್ಚಿ,ಹೊಗಳಿ, ಬಿಜಾಪುರ ಸುಲ್ತಾನನು ಅವರಿಗೆ ನೀಡಿದ್ದ ಕಂದಾಯದ ಹಕ್ಕನ್ನು ಮರಳಿ ಒಪ್ಪಿಸಿ ಬೇಡರ ಸ್ವತಂತ್ರ ಆಸ್ತಿತ್ವವನ್ನು ಮಾನ್ಯ ಮಾಡಿದ.

ಎಂ.ಕಪ್ಪನಾಯಕ

ಹದಿನೆಂಟನೆಯ ಶತಮಾನದ ಅಂತಿಮ ಭಾಗದಲ್ಲಿ ಸುರಪುರದ ಒಡೆಯನಾಗಿದ್ದವನು ಪರಾಕ್ರಮಿ ಎಂಕಪ್ಪ ನಾಯಕ. ಮೈಸೂರನ್ನು ಆಳುತ್ತಿದ್ದ ಹೈದರ್ ಅಲಿ, ಟಿಪ್ಪುಸುಲ್ತಾನನಂತಹವರೇ ನಾಯಕನ ಮೈತ್ರಿ ಬಯಸಿದ್ದರೆಂದರೆ ಆತನ ಪರಾಕ್ರಮ, ಸುರಪುರದ ಖ್ಯಾತಿ ಎಷ್ಟಿರಬೇಡ!

ವೆಂಕಟಪ್ಪನಾಯಕನ ತಂದೆ ಮೃತನಾಗಿ ನಾಯಕನಿಗೆ ಅಧಿಕಾರ ದೊರೆವ ಸಂದರ್ಭದಲ್ಲಿ, ಬಲಿಷ್ಠನಾಗಿದ್ದ ಹೈದರಾಬಾದಿನ ನಿಜಾಮ ೧೫ ಲಕ್ಷ ರೂಪಾಯಿಗಳಷ್ಟು ಭಾರಿ ಮೊತ್ತವನ್ನು “ಉತ್ತರಧಿಕಾರ ಶುಲ್ಕ” ಎಂದು ಹೇರಿದ್ದ. ಅಸಹಾಯಕ ಬೇಡರು ಇದನ್ನು ನಿರ್ವಾಹವಿಲ್ಲದೆ ಒಪ್ಪಿಕೊಳ್ಳಬೇಕಾಯಿತು. ಬಹು ಭಾಗವನ್ನು ನಗದು ರೂಪದಲ್ಲಿ ಸಲ್ಲಿಸಿ ಉಳಿದ ಅಂಶಕ್ಕೆ ಬ್ರಿಟಿಷರ ಜಾಮೀನಿನ ಮೇಲೆ ಕಂತುಗಳನ್ನು ಪಡೆಯಲಾಗಿತ್ತು. ಆದರೆ ಎಂಕಪ್ಪನಾಯಕನ ನಿಧನದ ವೇಳೆಗೂ ಈ ಸಾಲ ನಾಲ್ಕೂವರೆ ಲಕ್ಷ ರೂಪಾಯಿಗಳಷ್ಟು ಬಾಕಿ ಇತ್ತು.

ಬ್ರಿಟಿಷರ ತಂತ್ರ

೧೮೪೧ ರಲ್ಲಿ ರಾಜಾ ಕೃಷ್ಣಪ್ಪನಾಯಕ ಮೃತನಾದಾಗ ಸುರಪುರ ಸಾಲದ ಹೊರೆಯಿಂದ ದಿವಾಳಿ ಸ್ಥಿತಿಯಲ್ಲಿತ್ತು. ನಿಜಾಮನೊಂದಿಗೆ ಕೂಡಿಕೊಂಡ ಬ್ರಿಟಿಷರು ಈ ಸಾಲದ ವ್ಯವಹಾರದ ಸಂಚಿನಿಂದ ಸುರಪುರವನ್ನೇ ಕಬಳಿಸುವ ತಂತ್ರ ಹೂಡಿದ್ದರು.

ಎಳೆಯ ವೆಂಕಟಪ್ಪ ಆಗಿನ್ನೂ ಏಳೆಂಟು ವರ್ಷದ ಬಾಲಕ. ಸುರಪುರದ ಖಜಾನೆ ಬ್ರಿಟಿಷ್ ನಿಜಾಮರಿಂದ ಸೂರೆಗೊಂಡಿತ್ತು. ಸುರಪುರದ ಪರಿಸ್ಥಿತಿ ತಮಗೆ ಅನುಕೂಲವಾಗಿದೆ ಎಂದೇ ಬ್ರಿಟಿಷರು ವೆಂಕಟಪ್ಪನನ್ನು ನೋಡಿಕೊಳ್ಳುವ “ರಾಜಕೀಯ ಕಾರುಭಾರಿ” ಎನ್ನುವ ಹೆಸರಿನಲ್ಲಿ ಮಡೋಸ್ ಟೈಲರ್ ನನ್ನು ಸುರಪುರಕ್ಕೆ ಕಳುಹಿಸಿದ್ದರು.

ನಿಪುಣ ರಾಜಕಾರಣಿ ಟೈಲರ್ ಕೆಲವೇ ವರ್ಷಗಳಲ್ಲಿ ಸುರಪುರದ ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಿ ಕೊಂಡದ್ದು ಮಾತ್ರವಲ್ಲದೇ, ಸುರಪುರದ ಬೇಡರ ವಿಶ್ವಾಸ, ಪ್ರೀತಿಗಳನ್ನೂ ಗಳಿಸಿದ್ದ. ವೆಂಕಟಪ್ಪನಾದರೋ ಟೈಲರ್ ನನ್ನು “ಅಪ್ಪಾ”ಎಂದೇ ಕರೆಯುತ್ತಿದ್ದ. ಟೈಲರ್ ಬಗ್ಗೆ ಅವನಿಗೆ ಪಿತೃವಾತ್ಸಲ್ಯ ಇತ್ತು. ಈ ಪ್ರೀತಿ ವಿಶ್ವಾಸ ವೆಂಕಟಪ್ಪನ ನಿಧನದವರೆಗೂ ಉಳಿದಿತ್ತೆನ್ನುವುದು ಅನಂತರ ತಿಳಿಯುತ್ತದೆ.

ವೆಂಕಟಪ್ಪನಾಯಕ ರಾಜನಾದ

ಪ್ರಾಪ್ತ ವಯಸ್ಕನಾದ ವೆಂಕಟಪ್ಪನಿಗೆ ೧೮೫೩ ರಲ್ಲಿ ಸುರಪುರದ ರಾಜ್ಯ ವಹಿಸಿಕೊಡಲಾಯಿತು. ತರುಣ ವೆಂಕಟಪ್ಪ, ಬೇಡರ ನಾಯಕನಾದ. ಇದೇ ವೇಳೆಗೆ ತನ್ನ ನಾಡಿನ ಪೂರ್ಣ ಇತಿಹಾಸ ಅರಿತಿದ್ದ ವೆಂಕಟಪ್ಪನ ಪರಿಸ್ಥಿತಿ ಕೆಂಡದ ಮೇಲೆ ನಿಂತವನಂತೆ ಆಗಿತ್ತು. ತನ್ನ ದೇಶದ ಹೀನಾಯ ಪರಿಸ್ಥಿತಿ ಆತನನ್ನು ರೊಚ್ಚಿಗೆಬ್ಬಿಸಿತ್ತು. ನಾಡಿನ ಅಪ್ಪರ ಆದಾಯದ ಬಹುಭಾಗವನ್ನು ಬ್ರಿಟಿಷರು ನುಂಗಿದ್ದರು. ಐದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳ ವಾರ್ಷಿಕ ವರಮಾನದ ಸೀಮೆ ಸುರಪುರದ ನಾಯಕನ ಕೈಬಿಟ್ಟು ಹೋಗಿತ್ತು. ಇದು ವೆಂಕಟಪ್ಪನಲ್ಲಿ ಬ್ರಿಟಿಷರ ಬಗ್ಗೆ ವೈರ ಹುಟ್ಟಿಸಲು ಕಾರಣವಾಯಿತು. ಸಿಂಹಾಸನವನ್ನು ಏರುವಾಗಲೇ ವೆಂಕಟಪ್ಪ ತೀರ್ಮಾನ ಮಾಡಿದ್ದ-ತನ್ನ ನಾಡಿಗೆ ಪೂರ್ಣ ಸ್ವಾತಂತ್ರ್ಯವನ್ನು ದೊರಕಿಸಿಕೊಳ್ಳಬೇಕು ಮತ್ತು ಅನ್ಯಾಯದಿಂದ ಬ್ರಿಟಿಷರು ಅಪಹರಿಸಿದ್ದ ಪ್ರದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು.

ಟೈಲರ್ನನ್ನು ಕಂಪೆನಿ ಸರ್ಕಾರ ಬೇರೆ ಕಡೆಗೆ ಕಳುಹಿಸಿತು.

ಡಾಲ್ ಹೌಸಿಯ ಬುದ್ಧಿವಂತಿಕೆ

ವೆಂಕಟಪ್ಪನಾಯಕನಿಗೆ ಪಟ್ಟ ದೊರೆವ ಕಾಲದಲ್ಲಿ ಲಾರ್ಡ್ ಆಲ್ ಹೌಸಿ ಭಾರತದ ಗವರ್ನರ್ ಜನರಲ್ ಆಗಿದ್ದ. ಇವನಿಗೆ ಭಾರತೀಯರಿಂದ ಎಷ್ಟು ನೆಲ, ಎಷ್ಟು ಹಣ ಸುಲಿದರೂ ಸಾಲದು. ಸುರಪುರದ ಹೊಸ ದೊರೆ ತರುಣ ಹಾಗೂ ಅನನುಭವಿಯಾದ ಕಾರಣ ಬ್ರಿಟಿಷ್ ಅಧಿಕಾರಿಯೊಬ್ಬನನ್ನು ಕೆಲವು ಕಾಲದವರೆಗೆ ಸಲಹೆಗಾರನಾಗಿ ಇರಿಸಿಕೊಳ್ಳಬೇಕೆಂದು ಸೂಚಿಸಿದ; ವರ್ಷಕ್ಕೆ ಇದಕ್ಕೆ ತಗಲುವ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಖರ್ಚನ್ನು ಸುರಪುರವೇ ವಹಿಸಿಕೊಳ್ಳಬೇಕೆಂದೂ ಸಲಹೆ ಮಾಡಿದ. ಮೊದಲೇ ರಜ್ಯದ ಹಣಕಾಸು ಸ್ಥಿತಿ ತೀರಾ ಆತಂಕವನ್ನುಂಟು ಮಾಡುವಂತಿತ್ತು. ಅಲ್ಲದ ಹೀಗೆ ಸಲಹೆಗಾರನನ್ನು ಇಟ್ಟುಕೊಳ್ಳುವುದೂ ಒಂದು ರೀತಿಯ ಬಂಧನ ವೆಂಕಟಪ್ಪನಾಯಕನಿಗೆ ಶಿರಸ್ಕರಿಸಿದ. ಒತ್ತಾಯದಿಂದ ಇದನ್ನು ಮಾಡುವುದು ಡಾಲ್ ಹೌಸಿಗೆ ಅಸಾಧ್ಯವಿತ್ತು. ವೆಂಕಟಪ್ಪನಾಯಕ ತನ್ನ ಸಲಹೆಗೆ ನೀಡಿದ ತಿರಸ್ಕಾರ ಆತನನ್ನು ಕೆರಳಿಸಿತು. ಬ್ರಿಟಿಷ್ ಸಾಮ್ರಾಜ್ಯದ ಸಲಹೆಯೊಂದನ್ನು ಸಣ್ಣ ರಾಜ್ಯವೊಂದು ತಿರಸ್ಕಾರಿಸುವುದೆಂದರೆ ಅದು ಇಡಿಯ ಸಾಮ್ರಾಜ್ಯಕ್ಕೆ ಅವಮಾನವೆಂದು ಡೌಲ್ ಹೌಸಿ ತಿಳಿದ. ಇದೊಂದು ಭಾರಿ ಅಪರಾಧ ಎಂದೂ ಲೆಕ್ಕ ಹಾಕಿದ.

ಸುರಪುರದ ಸಿದ್ಧತೆ

ಶೂರರ ಬೀಡು ಸುರಪುರ ತನ್ನ ಸೇನೆಯನ್ನು ಬಲಗೊಳಿಸತೊಡಗಿತು. ಬ್ರಿಟಿಷ್ ಹಾಗೂ ನಿಜಾಮರು ಅವರ ಸಂಚನ್ನು ವಿಫಲಗೊಳಿಸುವ ದೃಡ ಪ್ರತಿಜ್ಞೆ ನಾಯಕನದಾಗಿತ್ತು. ಬ್ರಿಟಿಷರ ಹಂಗಿನಿಂದ ಹಾಗೂ ನಿಜಾಮನ ಭೀಮಯಿಂದ ಸುರಪುರವನ್ನು ಮಾತ್ರವಲ್ಲ ತನ್ನ ಸುತ್ತಲಿನ ಎಲ್ಲ ರಾಜ್ಯಗಳನ್ನು ಮುಕ್ತಗೊಳಿಸಬೇಕೆಂದು ವೆಂಕಟಪ್ಪ ಕಾರ್ಯ ಪ್ರಾರಂಭಿಸಿದ. ಸುರಪುರದಲ್ಲಿ ಶಸ್ತ್ರಾಸ್ತ್ರ ತಯಾರಿ ಆರಂಭವಾಯಿತು. ಹೊರಗಿನಿಂದ ಶಸ್ತ್ರಗಳ ಸಂಗ್ರಹಕ್ಕೂ ಜನರನ್ನು ಗೊತ್ತುಮಾಡಲಾಯಿತು. ತನ್ನ ನಿರಕ್ಷರ ಕುಕ್ಷಿ ಬೇಡರ ಪಡೆಗೆ ಕ್ರಮಬದ್ಧ ಸೈನಿಕ ಶಿಕ್ಷಣ ನೀಡಲು ವೆಂಕಟಪ್ಪ ವ್ಯವಸ್ಥೆ ಮಾಡಿದ . ರೋಹಿಲ ಹಾಗೂ ಅರಬ ಸೈನಿಕರನ್ನು ತನ್ನ ಪಡೆಗೆ ಅರಬ,ರೋಹಿಲರು ಸುರಪುರದಲ್ಲಿ ಸೇರಲಾರಂಭಿಸಿದರು.

ಸ್ವಾತಂತ್ರ್ಯ ಸಂಗ್ರಾಮ ಹಬ್ಬಿತು

ಇದೇ ವೇಳೆಗೆ ಮೊಳಗಿದ್ದ  ಪ್ರಥಮ ಸ್ವಾತಂತ್ಯ್ರ ಸಂಗ್ರಾಮದ ಕಾವು ಸುರಪುರವನ್ನು ತಟ್ಟಿತು. ತರುಣ ವೆಂಕಟಪ್ಪನಿಗೆ ಜಂಬಗಿಯ ದೇಶಮುಖಿ ಬಸಲಿಂಗಪ್ಪ ನೆರವಾದ. ಮದ್ದು ಗುಂಡುಗಳನ್ನು, ಶಸ್ತ್ರಾಸ್ತ್ರಗಳನ್ನು ಶೇಖರಿಸಿ ಸುರಪುರಕ್ಕೆ ಸಾಗಿಸುವ ಕಾಯ್ ಆತನದಾಯಿತು. ನಾನಾಸಾಹೇಬನು ಕ್ರಾಂತಿ ಸಂದೇಶ ಮೊಳಗಿಸಲು ಸೊಲ್ಲಾಪುರಕ್ಕೆ ಬರಲು ತಯಾರಾದ. ಆದರೆ ಈ ಮೂವರ ರಹಸ್ಯಾಲೋಚನೆಗಳು ಕಾರ್ಯಗತವಾಗುವ ಮೊದಲೇ ಸೊಲ್ಲಾಪುರದ ಜಿಲ್ಲಾಧಿಕಾರಿಗೆ ವಿಷಯ ತಿಳಿಯಿತು. ದೇಶಮುಖಿ ಬಸಲಿಂಗಪ್ಪ ಹಾಗು ಅವನ ಮಗನನ್ನು ಸೆರೆ ಹಿಡಿಯಲಾಯಿತು. ಬಸಲಿಂಗಪ್ಪನಿಗೆ ಸೇರಿದ ಕೊಟ್ನಾಲ್ ಕೋಟೆಯನ್ನು ನೆಲಸಮಗೊಳಿಸಿ, ಸುತ್ತಲಿನ ಜಹಗೀರುಗಳಲ್ಲಿ ಬಲವಾದ ಕಾವಲು ಇರಿಸಲಾಯಿತು. ಬಸಲಿಂಗಪ್ಪ ಹಾಗೂ ಆತನ ಮಗ ಸುರಪುರದ ಸ್ವಾತಂತ್ಯ್ರ ಸಮರದ ಮೊದಲ ಬಲಿಯಾಗಿ ಸೆರೆಮನೆ ಸೇರಿದರು.

ಸ್ವಾತಂತ್ಯ್ರದ ಕೆಚ್ಚು ಎದ್ದು ನಿಂತಾಗ ಅದರ ಇದಿರು ಯಾವ ಶಕ್ತಿ ತಾನೇ ನಿಂತಿತು? ವೆಂಕಟಪ್ಪನ ಯತ್ನಗಳಿಗೆ ನಾಡಿನ ಜನರ ಬೆಂಬಲವೂ ದೊರಕಿತು. ರಾಯಚೂರು ಮೊದಲಾದ ಕಡೆಯ ಜಮೀನುದಾರರು ವೆಂಕಟಪ್ಪನ ಯತ್ನಗಳಿಗೆ ಆರ್ಥಿಕ ಬಲ ನೀಡಿದರು.

ದುರ್ದೈವ

ಆಂಗ್ಲ ಸೇನೆಯ ೨೭ನೆಯ ವಾಹಿನಿ ಕೊಲ್ಲಾಪೂರದಲ್ಲೂ ೨೮ನೆಯ ವಾಹಿನಿ ಧಾರವಾಡದಲ್ಲೂ ೨೯ನೆಯ ವಾಹಿನಿ ಬೆಳಗಾವಿಯಲ್ಲೂ ಇದ್ದವು. ಈ ವಾಹಿನಿಗಳಲ್ಲಿದ್ದ ಹೆಚ್ಚಿನ ಸೈನಿಕರು ಭಾರತೀಯರೇ ಆಗಿದ್ದರು. ಇವರಲ್ಲಿ  ಸ್ವಾತಂತ್ಯ್ರದ ಕೆಚ್ಚು ಜಾಗೃತಗೊಲಿಸಬೇಕೆಂದು ವೆಂಕಟಪ್ಪ ನಾಯಕ ನಿರ್ಧರಿಸಿದ. ಅಲ್ಲಿಗೆ ತನ್ನ ನಂಬಿಕೆಯ ಗುಪ್ತಚಾರರನ್ನು ಕಳುಹಿಸಿದ. ಸೈನಿಕರಿಗೆ ವೀರಾವೇಶ ಬರುವಂತೆ ಮಾತನಾಡಿ, ಬ್ರಿಟಿಷರ ಕುತಂತ್ರವನ್ನು, ಗುಲಾಮಗಿರಿಯ ಕೆಡಕನ್ನು ಬಯಲಿಗೆಳೆದು ಸೈನಿಕರು ಬ್ರಿಟಿಷರ ವಿರುದ್ಧ ಎದ್ದು ನಿಲ್ಲುವಂತೆ ಮಾಡುವುದು ಯೋಜನೆ. ಅಂತೆಯೇ ೧೮೫೭ರ ಆಗಸ್ಟ್ ಹತ್ತರಂದು ಈ ಎಲ್ಲ ವಾಹಿನಿಗಳಲ್ಲಿ ಏಕಕಾಲದಲ್ಲಿ ಸ್ವಾತಂತ್ಯ್ರ ಹೋರಾಟದ ಪಾಂಚಜನ್ಯ ಮೊಳಗಬೇಕು. ಸೈನಿಕರು ಪರದೇಶಿ ಆಳ್ವಿಕೆ ವಿರುದ್ಧ ಎದ್ದು ನಿಲ್ಲಬೇಕು ಎಂದು ನಿಶ್ಚಯ ಆಗಿತ್ತು.

 

ಸ್ವಾತಂತ್ಯ್ರಕ್ಕಾಗಿ ವೀರರ ಅಪ್ರತಿಮ ಹೋರಾಟ

ಆದರೆ ಕನ್ನಡನಾಡಿನ ದುರದೃಷ್ಟ, ಬೆಳಗಾವಿಯ ಸೇನಾ ವಾಹಿನಿಗೆ ಬಂಡಾಯದ ಪ್ರಚೋದನೆಗಾಗಿ ಕಳುಹಿಸಲ್ಪಟ್ಟ ಮಹೀಪಾಲಸಿಂಗ ಬ್ರಿಟಿಷರ ಸೆರೆ ಸಿಕ್ಕ. ಜವಾಹರಸಿಂಗ್ ಮಗನಾದ ಈತ ಸುರಪುರದ ಅತ್ಯಂತ ನಂಬಿಕೆಯ ಬಂಟರಲ್ಲಿ ಒಬ್ಬನಾಗಿದ್ದ. ಆತನಿಗೆ ಜಮಖಂಡಿ ಅರಸನ ಬಂಟರಿಬ್ಬರ ಸಹಾಯವಿತ್ತು. ಮೊದಲಿಗೆ ಇವರಿಬ್ಬರು ಸೆರೆ ಸಿಕ್ಕರು. ಮಹೀಪಾಲ ಬೆಳಗಾವಿಯಲ್ಲಿ ಸೇನಾ ಜಮಾದಾರನೊಬ್ಬನ ಬಳಿ ಮಾತನಾಡುತ್ತಿದ್ದಾಗ ಸೆರೆಯಾದ.

ಸೆರೆಮನೆಯಲ್ಲಿ ಮಹೀಪಾಲನನ್ನು ಇಂಗ್ಲಿಷರು ಅತ್ಯಂತ ಕ್ರೂರದಿಂದ ಚಿತ್ರಹಿಂಸೆ ಮಾಡಿದರು. ಅದನ್ನು ತಡೆಯಲಾರದೆ ಆತ ತಾನು ಮಾಡಬೇಕಾಗಿದ್ದ ಕೆಲಸ, ತನಗೆ ಪ್ರೇರಣೆ ಕೊಡುತ್ತಿದ್ದವರನ್ನು, ಎಲ್ಲವನ್ನೂ ಹೇಳಿಬಿಟ್ಟ. ಸುರಪುರ ವೆಂಕಟಪ್ಪ ನಾಯಕ ಎಲ್ಲ ಸಂಚುಗಲಿಗೂ ನಾಯಕನೆಂದು ಹೇಳಿದ. ತಮ್ಮ ಕೆಲಸ ಆದೊಡನೆ ಬ್ರಿಟಿಷರು ಸಹಾಯಕರಿಬ್ಬರನ್ನು ನೇಣು ಕಂಬಕ್ಕೆ ಹಾಕಿದರು. ಮಹಿಪಾಲನಿಗೆ ಬ್ರಿಟಿಷರ ಬಂದೂಕದ ಗುಂಡಿನ ಆತಿಥ್ಯ ದೊರೆಯಿತು. ಸುರಪುರದ ಸ್ವಾತಂತ್ಯ್ರ ಹೋರಾಟ ಮೂವರ ಬಲಿದಾನದಿಂದ ಇನ್ನಷ್ಟು ಉಗ್ರತೆ ಪಡೆಯಿತು.

ಬ್ರಿಟಿಷ್ ಅಧಿಕಾರಿಗಳಿಂದ ಸುರಪುರಕ್ಕೆ ಎಚ್ಚರಿಕೆಯ ಪತ್ರ ಬಂತು. “ಬ್ರಿಟಿಷ್ ಸಾಮ್ರಾಜ್ಯದ  ವಿರುದ್ಧ ಕತ್ತಿ ಮಸೆದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ” ಎಂದು. ಆದರೆ ಶೂರ ವೆಂಕಟಪ್ಪ ಇದಕ್ಕೆಲ್ಲ ಸೊಪ್ಪು ಹಾಕಿಯಾನೇ? ತನ್ನದೇನೂ ತಪ್ಪಿಲ್ಲವೆಂದೂ, ತಾನು ಬ್ರಿಟಿಷ್ ಪ್ರಭುತ್ವದ ಪರಮ ಭಕ್ತನೆಂದೂ, ಅತ್ಯಂತ ವಿನಯದ ಭಾಷೆಯಿಂದ ಬ್ರಿಟಿಷರಿಗೆ ಪತ್ರವೊಮದನ್ನು ಬರೆದ. ಆದರೆ ಕುಯುಕ್ತಿಗಳಿಗೆ ಹೆಸರಾದ ಬ್ರಿಟಿಷರಿಗೆ ಸುರಪುರ ನಾಯಕನ ನಾಟಕ ಅರ್ಥವಾಗಿತ್ತು. ಸುರಪುರ ಆಂಗ್ಲ ಪೊಲೀಸರ ಭದ್ರ ಕಾವಲಿಗೆ ಒಳಗಾಯಿತು. ಎಲ್ಲೆಲ್ಲು ಬ್ರಿಟಿಷ್ ಗೂಢಾಚಾರರು ತುಂಬಿಕೊಂಡರು.

ಬ್ರಿಟಿಷರ ಜಾಲ

ಮೆಡೋಸ್ ಟೈಲರ್ ಸುರಪುರದಿಂದ ತೆರಳಿದ ಬಳಿಕ ಇನ್ನು ಎಳೆ ಮೀಸೆ ಮೂಡುತ್ತಿದ್ದ ವೆಂಕಟಪ್ಪನಿಗೆ ಅನುಭವೀ ಸಲಹೆಗಾರರಾಗಿ ಯಾರೂ ಇರಲಿಲ್ಲ. ಹಾಗಾಗಿ  ಹುರುಪು, ಸಂಘಟನಾ ಚಾತುರ್ಯ, ಜನ ಬೆಂಬಲ ಉಳ್ಳ ತರುಣ ನಾಯಕನಿಗೆ, ತಾನು ಕೈ ಹಾಕಿದ ಬಹುದೊಡ್ಡ ಕಾರ್ಯಕ್ಕೆ ತಕ್ಕ ಮುಂದಾಲೋಚನೆಯ ಕೊರತೆ ಇತ್ತು. ಇದರ ಪರಿಣಾಮವಾಗಿ ತನ್ನ ಸುತ್ತ ಬ್ರಿಟಿಷರು ಹೆಣೆದ ಜಾಲದ ಅರಿವು ಆತನಿಗೆ ಆಗಲಿಲ್ಲ.

ಇದೇ ಸಮಯಕ್ಕೆ ಸುರಪುರದ ಹಲವು ಭಾಗಗಳಲ್ಲಿ ದರೋಡೆಗಳು ನಡೆದವು. ಈ ದರೋಡೆಗಳಲ್ಲೂ ವೆಂಕಟಪ್ಪನ ಕೈವಾಡವಿದೆ ಎಂದು ಬ್ರಿಟಿಷರು ಅನುಮಾನಿಸಿದರು. ದ್ವಿತೀಯ ಸಹಾಯಕ ರೆಸಿಡೆಂಟ್ ಕ್ಯಾಪ್ಟನ್ ಕ್ಯಾಂಬೆಲ್ ಎಂಬ ಅಧಿಕಾರಿಯನ್ನು ಸುರಪುರಕ್ಕೆ ಕೂಲಂಕುಷ ತನಿಖೆಗೆ ಕಳುಹಿಸಲಾಯಿತು. ಸುರಪುರ ಕ್ಯಾಂಬೆಲ್‌ಗೆ ಭವ್ಯ, ಹಾರ್ದಿಕ ಸ್ವಾಗತ ನೀಡಿತು. ಆದರೇನು? ಮುಂದಾಲೋಚನೆ, ಸಹನೆಗಳಿಲ್ಲದ ಮುಂಗೋಪಿ ಬೇಡರು ಕೆಲವರು ಕ್ಯಾಂಬೆಲ್ನನ್ನು ಮುಗಿಸಿ ಬಿಡಲು ಸಂಚು ಹಾಕಿದರು. ಅದನ್ನು ತಿಳಿದ ವೆಂಕಟಪ್ಪ, ಅದರಿಂದಾಗಬಹುದಾದ ಅನರ್ಥಗಳನ್ನು ಅರಿತು, ಕ್ಯಾಂಬೆಲ್‌ನನ್ನು ಸುರಕ್ಷಿತವಾಗಿ ಸುರಪುರದಿಂದ ಹಿಂದೆ ಕಳುಹಿಸಬೇಕಾದರೆ ಬಹಳ ಶ್ರಮ ವಹಿಸಬೇಕಾಯಿತು.

ಸುರಪುರದ ದೃಢ ಸಂಕಲ್ಪ

೧೮೫೮ರ ಜನವರಿ ಹದಿನೈದರಂದು ಹೈದರಾಬಾದಿನ ಬ್ರಿಟಿಷ್ ಅಧಿಕಾರಿಗೆ ಸಾಲಾರ್ ಜಂಗ್ ನಿಂದ ಸುರಪುರದ “ಕ್ರಾಂತಿ ಸಿದ್ಧತೆ” ಬಗ್ಗೆ ಪತ್ರ ಹೋಯಿತು. ಅದರಲ್ಲಿ ವೆಂಕಟಪ್ಪನಾಯಕ ರೋಹಿಲರು ಹಾಗೂ ಅರಬರನ್ನು ಸೇಎಗೆ ಸೇರಿಸಿಕೊಳ್ಳುತ್ತಿರುವುದನ್ನು ತಿಲಿಸಿ, ಭಾರಿ ಪ್ರಮಾಣದ ದಂಗೆಗೆ ಸಿದ್ಧತೆ ಆಗುತ್ತಿದೆ ಎಂದು ತಿಳಿಸಲಾಗಿತ್ತು.

ಆದರೆ ಸುರಪುರದ ನಿರ್ಧಾರ ಅಚಲವಾಗಿತ್ತು. ಬ್ರಿಟಿಷರ ಹಾಗೂ ನಿಜಾಮರ ಹಿಡಿತದಿಂದ ಮುಕ್ತವಾಗಲು ಅದು ದೃಢ ನಿರ್ಧಾರ ಕೈಗೊಂಡಿತ್ತು. ವೆಂಕಟಪ್ಪನಿಗಂತು ತನ್ನ “ಗುಲಾಮಿ” ಸ್ಥಿತಿ ಬಗ್ಗೆ ಅತ್ಯಂತ ಅಸಮಾಧಾನವಿತ್ತು. ಆತ ತಾನು ಸ್ವತಃ “ಗೋಸಸ್ ಬ್ಯಾಂಕ್”ನಿಂದ ಹಣ ಪಡೆಯಬೇಕಾದರೂ ಅದಕ್ಕೆ ಬ್ರಿಟಿಷರ ಪುರ್ವಾನುಮತಿ ಅಗತ್ಯವಿತ್ತು. ಸುಮಾರು ಮೂವತ್ತು ತಲೆಮಾರುಗಳ ಕಾಲ ಸುರಪುರದ ಪರಮಾಧಿಕಾರ ಹೊಂದಿದ್ದ ನಾಯಕ ಮನೆತನಕ್ಕೆ ಈ ಸ್ಥಿತಿಯೇ? “ಮರಾಠರಿಗ ಅನಂತರ ಮುಸ್ಲಿಂರಿಗೆ ತಲೆಬಾಗದೆ ಸ್ವಾತಂತ್ಯ್ರ ಉಳಿಸಿಕೊಂಡ ಸುರಪುರದ ಜನ ಈಗ ಸಹಸ್ರಾರು ಮೈಲು ದೂರದಿಂದ ಬಂದ ಬೆರಳೆಣಿಕೆಯಷ್ಟು ಮಂದಿ ಬಿಳಿಯರಿಗೆ ಗುಲಾಮರಾಗಿ ಬಾಳಬೇಕೆ?” ಎನ್ನುವುದು ಸುರಪುರದ ನಾಯಕನ ಹಾಗೂ ಜನತೆಯ ಎದುರು ನಿಂತಿದ್ದ  ಪ್ರಶ್ನೆಯಾಗಿತ್ತು.

ಸುರಪುರದ ಬೇಡರು ಸ್ವದೇಶಾಭಿಮಾನ ಹಾಗೂ ಸ್ವಾತಂತ್ಯ್ರ ಪ್ರಿಯತೆಗೆ ಹೆಸರಾದವರು. ಅವರ ಈ ಕಾರ್ಯಕ್ಕೆ ಮುಂಡರಗಿಯ ಭೀಮರಾಯ ಹಾಗೂ ನರಗುಂದದ ಬಾಬಾಸಾಹೇಬ ಮೊದಲಾದವರು ಬೆಂಬಲ ಶಕ್ತಿ ನೀಡಿದರು. ಇವರೆಲ್ಲ ಸುರಪುರದ ತರುಣ ದೊರೆಯೊಂದಿಗೆ ಆಗಾಗ ಗುಪ್ತ ಸಮಾಲೋಚನೆ ನಡೆಸುತ್ತಿದ್ದರು.

ಈ ಪರಿಸ್ಥಿತಿಯಲ್ಲಿ ಮೆಡೋಸ್ ಟೈಲರ್ ಸುರಪುರದಲ್ಲಿ ಇದ್ದರೆ ಸುರಪುರದ ಚರಿತ್ರೆಯೇ ಬದಲಾಗುತ್ತಿತ್ತೋ ಏನೋ?. ಸುರಪುರದಲ್ಲಿ ಹತ್ತು ವರ್ಷ ಕಾಲ ಇದ್ದು ಜನರ ನಡೆ, ನುಡಿ, ಪ್ರಖರ ದೇಶಾಬಿಮಾನಗಳನ್ನು ಅರಿತಿದ್ದ ಟೈಲರ್ ಬ್ರಿಟಿಷರಿಗೆ ಹಾಗು ಬೇಡರಿಗೆ ಮಧ್ಯದಲ್ಲಿ ನಿಂತು ಸಂಧಾನ ನಡೆಸಿ ಯುದ್ಧ ತಪ್ಪಿಸಬಹುದಿತ್ತು.

ಬ್ರಿಟಿಷ್ ಸೇನೆ ಮುತ್ತಿತು

ಬ್ರಿಟಿಷರ ಯತ್ನವಾದರೋ ಸುರಪುರವನ್ನು ಸಂಪೂರ್ಣವಾಗಿ ನುಂಗಿಹಾಕಬೇಕೆಂಬುದಾಗಿತ್ತು. ೧೮೫೮ರ ಫೆಬ್ರವರಿ ೭ರಂದು ಲಿಂಗಸೂರಿನ ದಂಡು ಪ್ರದೇಶದಿಮದ ಕ್ಯಾಪ್ಟನ್ ವಿಂಡ್ ಹ್ಯಾಂ ನೇತೃತ್ವದಲ್ಲಿ ಬ್ರಿಟಿಷ್ ಸೇನೆ ಸುರಪುರದ ಕೋಟೆಗೆ ಮುತ್ತಿಗೆ ಹಾಕಿತು.

ಬ್ರಿಟಿಷರು ಏನು ಮಾಡಬಹುದು ಎಂದೆಲ್ಲ ಸುರಪುರದ ರಾಜನೂ ಅಧಿಕಾರಿಗಳೂ ಯೋಚಿಸಿಯೇ ಇದ್ದರು. ಅದಕ್ಕೆ ಸಿದ್ಧರಾಗಿಯೇ ನಿಂತಿದ್ದ ಸುರಪುರದ ಸೈನಿಕರು ರಾತ್ರಿಯ ವೇಳೆ ಬ್ರಿಟಿಷ್ ಸೇನೆಯ ಮೇಲೆ ಮಿಂಚಿನಂತೆ ಎರಗಿದರು. ಬ್ರಿಟಿಷ್ ಸೈನಿಕರಿಗೆ ಮೊದಲ ಏಟಿಗೆ ಸುರಪುರದ ಬೇಡರು ಅಸಾಧ್ಯರೆನಿಸಿದರು. ಮಾರನೆ ದಿನ ಬ್ರಿಟಿಷ್‌ರ ಇನ್ನಷ್ಟು ಸೇನೆ ಸುರಪುರದ ಮುತ್ತಿಗೆಯನ್ನು ಕೂಡಿಕೊಂಡಿತು. ಮತ್ತೆ ರಾತ್ರಿ ಹೋರಾಟ ನಡೆಯಿತು. ಸುರಪುರ ಜಗ್ಗಲಿಲ್ಲ. ಮದರಾಸಿನ ಕಡೆಯಿಂದ ಕರ್ನಲ್ ಹ್ಯೂಸ್ ನೇತೃತ್ವದ ಮೂರನೆ ಬ್ರಿಟಿಷ್ ಸೇನಾದಳವೂ ಬಂತು. ಸುರಪುರದ ವೀರರು ದುರ್ಗಮ ಬೆಟ್ಟಗಳನ್ನೇರಿ ನಿಂತು ಬ್ರಿಟಿಷರನ್ನು ಸದೆಬಡಿಯತೊಡಗಿದರು. ಸುರಪುರದ ಕೋಟೆ ಹತ್ತುವ ಸಿಪಾಯಿ ಪ್ರಾಣದ ಆಸೆ ಇಟ್ಟುಕೊಳ್ಳುವಂತೆಯೇ ಇರಲಿಲ್ಲ.

ಸುರಪುರ ಜಗ್ಗಲಿಲ್ಲ

ಭಾರೀ ಹೋರಾಟ. ಸೂರ್ಯ ಮುಳಗದ ಸಾಮ್ರಾಜ್ಯವುಲ್ಲ ಆಂಗ್ಲರ ಎದುರು, ಕನ್ನಡನಾಡಿನ ಸಣ್ನದೊಂದು ರಾಜ್ಯದ ಕೆಲವೇ ವೀರರ ಅಪ್ರತಿಮ ಹೋರಾಟ. ಎರಡೂ ಕಡೆ ಅಪಾರ ಸಾವು-ನೋವುಗಳಾದರೂ ಸುರುರದ ಕೋಟೆ ಅಜೇಯವಾಗಿ ಉಳಿಯಿತು. ಸ್ವಾತಂತ್ಯ್ರದ ಕೆಚ್ಚು ತುಂಬಿ ನಿಂತ ಕನ್ನಡದ ಕಲಿಗಳೆದುರು ಯಾವ ಶಕ್ತಿ ತಾನೇ ನಿಲ್ಲಲು ಸಾಧ್ಯವೇ? ಬ್ರಿಟಿಷ್ ಸೇನೆಯ ಓರ್ವ ಹಿರಿಯ ಅಧಿಕಾರಿ, ಕ್ಯಾಪ್ಟನ್ ನ್ಯೂಬರಿ ಸುರಪುರದ ಯುದ್ಧದ ಮೂರನೆಯ  ದಿನದಂದು ಕೋಟೆಯ ಕೆಳಗೆ ರಣರಂಗದಲ್ಲಿ ಮಡಿದ. ವಿಂಡ್ ಹ್ಯಾಮ್ ಧೈರ್ಯ ಕುಸಿಯಿತು. ಸುಲಭದಲ್ಲೇ ಸುರಪುರ ಗೆದ್ದೆನೆನ್ನುವ ವಿಶ್ವಾಸ ಮಾಯವಾಯಿತು. ಮಾಲ್ಕಂ ಸಾಹೇಬನ ಪಡೆಯು ತನ್ನನ್ನು ಕೂಡಿಕೊಳ್ಳುವವರೆಗೂ ಸುರಪುರವನ್ನು ತಡೆಹಿಡಿಯುವುದೇ ಆತನಿಗೆ ಕಷ್ಟವಾಯಿತು.

ಮಾಲ್ಕಂ ಸೇನೆಯೂ ಬಂತು. ಸುರಪುರದ ದುರ್ಗಮ ಗೋಡೆಗಳಾಗಲಿ, ಅಜೇಯ ಕೊತ್ತಲಗಳಾಗಲಿ ಬ್ರಿಟಿಷರಿಗೆ ಜಗ್ಗಲಿಲ್ಲ. ಕೊನೆಗೆ ವಂಚನೆಯಿಂದ ಆದರೂ ಕೋಟೆ ಗೆಲ್ಲುವ ನಿರ್ಧಾರದಿಂದ ಬ್ರಿಟಿಷ್ ಸೇನೆಯ ಮೂವರು, ಕೋಟೆಯ ಗುಪ್ತ ಮಾರ್ಗ ಶೋಧನೆಗಾಗಿ ಕಳ್ಳರಂತೆ ಹೊರಟರು. ಆದರೆ ಕೋಟೆಯ ಬುಡ ತಲುಪಿದಾಗಲೇ ಅವರ ತಲೆಗಳು ನೆಲಕ್ಕುರುಳಿದವು. ಇದರಿಂದ ಬ್ರಿಟಿಷರು ತತ್ತರಿಸಿದರು.

ದ್ರೋಹ

ಆದರೆ ಕನ್ನಡ ನಾಡಿನ, ಭಾರತದ ದುರದೃಷ್ಟ, ಇಲ್ಲೂ ಬ್ರಿಟಿಷರ ವಮಚನೆಯ ಮಾರ್ಗ”ಕ್ಕೆ ಸಜ್ಜನರಾಯ ಎಂಬುವವ ಸುರಪುರದ ನಾಯಕನ ಆಪ್ತವರ್ಗದಲ್ಲಿ ಒಬ್ಬನು. ಅವನು ವೆಂಕಟಪ್ಪನ ನಂಬಿಕೆಯ ಬಂಟನೆಂದು ಎಲ್ಲರೂ ತಿಳಿದಿದ್ದರು. ಅವನು ಸ್ವತಃ ಆಸೆ ಆಮಿಷಗಳಿಗೆ ಬಲಿಯಾಗಿ ನಾಡಿಗೆ ದ್ರೋಹ ಬಗೆದ. ಬ್ರಿಟಿಷರು ಎಸೆದ ರೊಟ್ಟಿಯ ಆಸೆಗೆ, ಅನ್ನ ಕೊಟ್ಟ ತಾಯ್ನಾಡಿಗೆ ವಂಚಿಸಿದ. ದುರ್ಗದ ಗುಪ್ತ ಮಾರ್ಗಗಳನ್ನು ಬ್ರಿಟಿಷರಿಗೆ ತಿಳಿಸಿದ. ಅಜೇಯ ಬೀಡು ಸುರಪುರ ವಂಚನೆಗೆ ಬಲಿಯಾಯಿತು. ಬ್ರಿಟಿಷ್ ಸೇನೆ ದುರ್ಗ ಪ್ರವೇಶಿಸಿತು.

ವೆಂಕಟಪ್ಪ ನಾಯಕ ಮೋಸ ಹೋದ

ದ್ರೋಹಿ ಭೀಮರಾಯ ಇಷ್ಟಕ್ಕೆ ತನ್ನ ಆಟ ನಿಲ್ಲಿಸಿದ್ದರೆ ಕತೆ ಬೇರೆ ಆಗಬಹುದಿತ್ತು. ಆದರೆ ಅವನು ತನ್ನ ಆಟ ಮುಂದುವರೆಸಿ, ವೆಂಕಟಪ್ಪನಾಯಕನನ್ನೂ ದುರ್ಗದಿಂದ ಓಡಿಸಿದ. ಈಗ ತಪ್ಪಿಸಿಕೊಳ್ಳುವುದೇ ಉಚಿತವೆಂದು ಬದುಕಿ ಉಳಿದರೆ ಬೇರೆ ಕಡೆ ನಿಂತು ಬ್ರಿಟಿಷರರನ್ನು ಎದುರಿಸಬಹುದೆನೋ ಎಂದು ತರುಣ ನಾಯಕನಿಗೆ ಮನವೊಪ್ಪುವಂತೆ ಸಲಹೆ ನೀಡಿದ. ವಂಚನೆ ಎಂದರೇನೆಂದೆ ತಿಳಿಯದ ನಾಯಕ ಈ ವಂಚಕನ ಮಾತಿಗೆ ಬೆಲೆ ಕೊಟ್ಟನು. ತನ್ನ ಹೆಂಡಿರನ್ನೂ ಬಿಟ್ಟು, ದ್ರೋಹಿ ಭೀಮರಾಯನ ಸಹಿತ ಕೆಲವು ಆಪ್ತರೊಡನೆ ಸೇರಿಕೊಂಡು ಸುರಪುರವನ್ನು ತ್ಯಜಿಸಿದ. ಆಂಗ್ಲ ಸೈನಿಕರು ತಮ್ಮ ಮನಬಂದಂತೆ ಸುರಪುರವನ್ನು ದೋಚಿದರು. ಅಮೂಲ್ಯ ಆಭರಣಗಳು, ಬೆಲೆ ಬಾಳುವ ಸಾಮಗ್ರಿಗಳೆಲ್ಲ ಬ್ರಿಟಿಷ ಸೈನಿಕರ ಪಾಲಾದವು.

ರಾಣಿಯರ ಕಷ್ಟ

ವೆಂಕಟಪ್ಪನ ಅರಸಿಯರು ಅರಮನೆಯನ್ನು ಬಿಟ್ಟು ಓಡಿದರು.  ಮಾನರಕ್ಷಣೆಗಾಗಿ ಹಳ್ಳಿಯೊಂದರಲ್ಲಿ ಆಶ್ರಯ ಪಡೆದರು. ಬ್ರಿಟಿಷ್ ಅಧಿಕಾರಿ ಕ್ಯಾಂಬೆಲ್ ಅವರ ಇರವನ್ನು ಪತ್ತೆಹಚ್ಚಿ, ಅರಮನೆಗೇ ಹಿಂತಿರುಗಿ ಬಂದು ಉಳಿಯಬಹುದೆಂಬ ಔದಾರ್ಯ ಪ್ರಕಟಿಸಿದ. ಅವರಿಗೆಲ್ಲ ರಕ್ಷಣೆಯ ಪೊಳ್ಳು ಆಶ್ವಾಸನೆ ನೀಡಿದ. ಆದರೆ ರಾಣಿಯರು ಹಿಂತಿರುಗಿ ಬಂದಾಗ ಅರಮನೆ ಬರಿದಾಗಿತ್ತು. ಹಿರಿಯ ರಾಣಿ ರಂಗಮ್ಮ ತನ್ನೆರಡು ಸೀರೆಗಳ ಹೊರತಾಗಿ ಉಳಿದ ಯಾವ ಸೊತ್ತನ್ನೂ ಕಾಣದಾದಳು. ಅಮೂಲ್ಯ ಬಟ್ಟೆಬರೆ, ಚಿನ್ನಾಭರಣ, ಪೀಠೋಪಕರಣ ಏನೇನೂ ಇಲ್ಲದ ಅರಮೆನ ಭೂತದ ಮನೆಯಂತಾಗಿತ್ತು. ರಾಣಿಯರ ರೋದನ ಅರಣ್ಯರೋದನವಾಯಿತು.

ಎಷ್ಟು ಜನ ದ್ರೋಹಿಗಳು

ವೆಂಕಟಪ್ಪ ಚಿನ್ನವೆಂದು ನಂಬಿ ಕೈಗೆ ತೆಗೆದು ಕೊಂಡುದು ಬೆಂಕಿಯುಂಡೆ ಆಗಿತ್ತು. ಆತ ಆಪ್ತರೆಂದು ಯಾರ ಜೊತೆಗೂಡಿ ಪರಾರಿಯಾಗಿದ್ದನೋ ಅವರಲ್ಲಿ ಹೆಚ್ಚಿನವರು ದ್ರೋಹಿ ಭೀಮರಾಯನ ಮಿತ್ರರಾಗಿದ್ದರು. ಹೇಗಾದರೂ ಮಾಡಿ ತನ್ನ ಸಾಕುತಂದೆ ಟೈಲರ್ನನ್ನು ಕಾಣಬೇಕೆಂದು ಹೊರಟ ವೆಂಕಟಪ್ಪನಿಗೆ ರಾಜ್ಯದ ಗಡಿ ದಾಟಿದಾಗ ಟೈಲರ್ ಬಿದಿರೆಯಲ್ಲಿದ್ದಾನೆ ಎಂದು ತಿಳಿಯಿತು. ವೆಂಕಟಪ್ಪ ಹೈದರಾಬಾದ್ ಕಡೆಗೆ ಸಾಗಿದ. ಟೈಲರ್‌ನನ್ನು ಕಂಡರೆ ಆತ ತನಗೆ ನೆರವಾಗಬಹುದೆಂದು, ಪ್ರಾಣಭಿಕ್ಷೆ ಕೊಡಲು ಅಲ್ಲದಿದ್ದರೂ, ಅದರ ಬದಲು ಸುರಪುಕ್ಕಾದ ಅನ್ಯಾಯವನ್ನು ಎದುರಿಸಲು ಎಂದು ನಾಯಕನ ಆಸೆಯಾಗಿತ್ತು.

ನಾಯಕ ಹೈದರಾಬಾದ್ ತಲುಪಿದಾಗಾತನೊಂದಿಗೆ ಉಳಿದವರು ಕೇವಲ ಇಬ್ಬರು. ಉಳಿದೆಲ್ಲರೂ ತಮಗೆ ಸಿಕ್ಕದ್ದನ್ನು ಲಪಟಾಯಿಸಿ ಓಡಿದ್ದರು. ಭೀಮರಾಯ ನಾಯಕನ ಅಮೂಲ್ಯ ಆಭರಣ, ಬಟ್ಟೆಬರೆಗಳನ್ನು ಹೊತ್ತು ಪರಾರಿಯಾಗಿದ್ದ. ಈ ರಾಷ್ಟ್ರ ದ್ರೋಹಿಯ ಕತೆಯನ್ನು ಸುರಪುರದ ದುರಂತವನ್ನು ಇಂದಿಗೂ ಇಲ್ಲಿ ಜಾನಪದ ಗೀತೆಯೊಂದರ ರೂಪದಲ್ಲಿ ಜನ ಸ್ಮರಿಸುತ್ತಾರೆ.  ಸೋಲಿನ ಘಳಿಗೆಯಲ್ಲಿ ಅನೇಕ ಮಿತ್ರರೂ ದ್ರೋಹಿಗಳಾಗುತ್ತಾರೆ. ಅಂತೆಯೇ ಇತರ ಕೆಲವರು ಇನ್ನೂ ನಾಯಕನನ್ನು ನಂಬಿದರೆ ಪ್ರಾಣಕ್ಕೆ ಸಂಚಕಾರವೆಂದು ಬಗೆದು ಪರಾರಿಯಾಗಿದ್ದರು.

ನಿಜಾಮ ಕೃತಕೃತ್ಯನಾದ

ಹೈದರಾಬಾದಿನ ನಿಜಾಮ ತನ್ನ ರಾಜ್ಯಕ್ಕೆ ಬಂದ ನಾಯಕನನ್ನು ಸೆರೆಹಿಡಿದು ಶೌರ್ಯ ಪ್ರಕಟಿಸಿದ. ಬ್ರಿಟಿಷರ ಕೃಪೆಗೆ ಕೈ ಒಡ್ಡಿದ ನಿಜಾಮ ಸುರಪುರದ ಸಿಂಹವನ್ನು ಸಲಾರಜಂಗನಿಗೆ ಒಪ್ಪಿಸಿದ. ಸಾಲಾರ್ ಜಂಗ್ ಜಾಗರೂಕತೆಯಿಂದ ನಾಯಕನನ್ನು ಬ್ರಿಟಿಷರಿಗೆ ಒಪ್ಪಿಸಿ ಅವರ ಕೃಪೆಗೆ ಪಾತ್ರನಾದ.

ಶೂರರ ನಾಯಕ ವೆಂಕಟಪ್ಪನನ್ನು ಸಿಕಂದರಾಬಾದ್ ಸೆರೆಮನೆಯಲ್ಲಿಟ್ಟು ಬಲವಾದ ಕಾವಲು ಹಾಕಲಾಯಿತು. ಸುರಪುರದ ಸ್ವಾತಂತ್ಯ್ರ ಪ್ರಿಯತೆಯ ಮಹಾಪರಾಧಕ್ಕಾಗಿ ನಾಯಕ ವೆಂಕಟಪ್ಪನ ವಿಚಾರಣೆಯ ನಾಟಕ ನಡೆಯಿತು.

ಟೈಲರ್‌ನೊಡನೆ ಭೇಟಿ

ಟೈಲರ್‌ನಿಗೆ ಸುರಪುರದ ವಿಷಯ ತಿಳಿದಾಗ ಬಹಳ ವಿಳಂಬವಾಗಿತ್ತು. ಆದರೂ ತನ್ನ ಸಾಕುಪುತ್ರನ ಅವಸ್ಥೆಯನ್ನು ಅರಿತ ಕೂಡಲೇ ಆತ ಹೈದರಾಬಾದಿಗೆ ಧಾವಿಸಿದ.  ಸೆರೆಮನೆಗೆ ತೆರಳಿ ವೆಂಕಟಪ್ಪನನ್ನು ಕಂಡ. “ಅಪ್ಪಾ” ಎಂದು ಕರೆದು ಟೈಲರನನ್ನು ಬಿಗಿದಪ್ಪಿ ಕಣ್ಣೀರು ಸುರಿಸಿದ ತರುಣ ನಾಯಕ ಮೊದಲ ಭೇಟಿಯಲ್ಲೇ ಏನೂ ಹೇಳದಾದ. “ಈಗ ಏನನ್ನೂ ಹೇಳಲು ಆಗುವುದಿಲ್ಲ. ನಾಳೆ ಎಲ್ಲ ಹೇಳುತ್ತೇನೆ” ಎಂದ.

ಮಾರನೆ ದಿನ ಟೈಲರ್ ಬಂದಾಗ, ಹಿಂದಿನ ದಿನದ ಮೋಹದ ಪರದೆಯಿಂದ ಹೊರಬಂದ ವೆಂಕಟಪ್ಪ ಮನಸ್ಸನ್ನು ಹಿಡಿತದಲ್ಲಿಟ್ಟ. ತಾನು ಮಾಡಿದುದೆಲ್ಲವನ್ನೂ ಇದ್ದಿದ್ದಿದಂತೆ ಹೇಳಿದ. “ನಾನು ಮಾಡಿದ ಕೆಲಸ ಅಪರಾಧವಲ್ಲ. ನನ್ನ ದೇಶಕ್ಕೆ ಸ್ವಾತಂತ್ಯ್ರ ತಂದುಕೊಡುವುದು ನನ್ನ ಜನ್ಮ ಸಿದ್ಧ ಹಕ್ಕು” ಎಂದು ಹೇಳಿದ ನಾಯಕ, ಭಾರತದ ಸ್ವಾತಂತ್ಯ್ರದ ಇತಿಹಾಸದಲ್ಲಿ ಸುರಪುರದ ಕತೆ ವೀರ ಕತೆಯಾಗಿ ಮೆರೆಯುತ್ತದೆ” ಎಂದು ಹೇಳಿದ.

ವೆಂಕಟಪ್ಪನಾಯಕ “ತನ್ನ ಪ್ರಾಣ ಉಳಿಸು” ಎಂದು ಬೇಡಿಕೊಳ್ಳುತ್ತಾನೆ ಎಂದು ಭಾವಿಸಿದ್ದ ಟೈಲರ್ ನಾಯಕನ ಧೀರತನದ ಮಾತುಗಳನ್ನು ಕೇಳಿ ಅವನಿಗೆ ನಿರಾಸೆ ಆಯಿತು. ಆದರು ನಾಯಕನನನ್ನು ಮತ್ತೊಮ್ಮೆ ಭೇಟಿಯಾದ.

ಈ ಬಾರಿ  ನಾಯಕ ಬ್ರಿಟಿಷರು ಹಾಗೂ ನಿಜಾಮರ ತನ್ನ ನಾಡಿನ ವಿರುದ್ಧ ನಡೆಸಿದ್ದ ಸಂಚನ್ನು ವಿವರಿಸಿದ. “ಬ್ರಿಟಿಷರ ವಿರುದ್ಧ ನನಗೆ ದ್ವೇಷವಿಲ್ಲ. ನನ್ನ ನಾಡಿಗೆ ಸ್ವಾತಂತ್ಯ್ರ ಇರಬೇಕು. ಅದಕ್ಕೋಸ್ಕರ ಹೋರಾಡಿದೆ ಎಂದ..

ಕನ್ನಡನಾಡಿನ ಕಲಿ

ವೆಂಕಟಪ್ಪನಾಯಕ ತಾನು ಮಾಡಿದ ಕೆಲಸದ ಬಗ್ಗೆ ಪಶ್ಚಾತ್ತಾಪ ಪಟ್ಟನೆಂದು ಇತಿಹಾಸಕಾರ ಟೈಲರ್ ತನ್ನ ಆತ್ಮಕತೆಯಲ್ಲಿ ಬರೆದಿದ್ದಾನೆ. ಆದರೆ ಭಾರತ ಸ್ವಾತಂತ್ಯ್ರ ಇತಿಹಾಸದಲ್ಲಿ ಅತ್ಯಂತ ರೋಮಾಂಚಕ ಸತ್ಯ ಕತೆಗಳನ್ನು ವಿರೂಪಗೊಳಿಸಿ, ತಮ್ಮ ಸರಕಾರದ ಬಗ್ಗೆ ಪಕ್ಷಪಾತ ಇಟ್ಟುಕೊಂಡೇ ಇತಿಹಾಸ ಬರೆದ ಬ್ರಿಟಿಷ್ ಇತಿಹಾಸಕಾರರಲ್ಲಿ ಒಬ್ಬನಾದ ಟೈಲರ್ ಹೀಗೆ ಬರೆಯುವುದು ಸಹಜವೇ. ಕನ್ನಡ ನಾಡಿನ ಈ ವೀರ, ಸ್ವಾತಂತ್ಯ್ರಕ್ಕಾಗಿ ಪ್ರಾಣವನ್ನೇ ತೆತ್ತ ವೆಂಕಟಪ್ಪ ನಾಯಕ ಹೀಗೆ ಹೇಳಿಯಾನೇ? ಒಂದು ವೇಳೆ ನಾಯಕ ಪಶ್ಚಾತ್ತಾಪಪಟ್ಟಿದ್ದರೆ, ಅದು ತನ್ನ ಕೆಲಸವನ್ನು ಇನ್ನಷ್ಟು ಜಾಗರೂಕತೆಯಿಂದ ಬ್ರಿಟಿಷರಿಗೆ ಅರಿವು ಸಿಗದಂತೆ ಮಾಡಿ ಮುಗಿಸಲಿಲ್ಲವಲ್ಲ, ನಾಡಿಗೆ ಸ್ವಾತಂತ್ಯ್ರ ತಂದುಕೊಡಲು ತನ್ನಿಂದ ಆಗದೇ ಹೋಯಿತಲ್ಲಾ, ತನ್ನ ಪ್ರಾಣದ ಬೆಲೆ ವ್ಯರ್ಥವಾಗಿ ಹೋಯಿತಲ್ಲಾ ಎನ್ನುವುದಕ್ಕಾಗಿ ಇದ್ದೀತೆ ಹೊರತು, ಕ್ರಾಂತಿಗಾಗಿ ಯತ್ನಿಸಿದ ಬಗ್ಗೆ ಅಥವಾ ಬ್ರಿಟಿಷರ ವಿರುದ್ಧ ಹೋರಾಡಿದ ಬಗ್ಗೆ ಇರಲಾರದು.

ಟೈಲರ್ ಬ್ರಿಟಿಷ್ ಅಧಿಕಾರಿಯೊಡನೆ ಮಾತನಾಡಿದ “ವೆಂಕಟಪ್ಪನಾಯಕ ಕ್ಷಮೆ ಬೇಡಬೇಕು, ಮತ್ತೆ ಬ್ರಿಟಿಷರ ವಿರುದ್ಧ ಕೈ ಎತ್ತುವುದಿಲ್ಲ” ಎಂದು ಮಾತು ಕೊಡಬೇಕು. ಹಾಗಾದರೆ ಅವನ ಪ್ರಣ ಉಳಿಸುತ್ತೇವೆ” ಎಂದರು ಅವರು.

ಟೈಲರ್ ನಾಯಕನನ್ನು ಕಂಡ ಬ್ರಿಟಿಷ್ ಅಧಿಕಾರಿಗಳು ಹೇಳಿದ್ದನ್ನು ತಿಳಿಸಿದ, ಪರವಾಗಿ ನಾನು ಮಾತನಾಡುತ್ತೇನೆ ಎಂದ “ವೆಂಕಟಪ್ಪ, ನನಗೆ ಪ್ರಾಣ ಭಿಕ್ಷೆ ಬೇಡ. ರಾಜ್ಯ ಹಿಂದೆ ಕೊಟ್ಟರೆ ಬ್ರಿಟಿಷ್ ರೆಸಿಡೆಂಟನನ್ನು ಸದಾಕಾಲ ಸ್ಮರಣೆಯಲ್ಲಿರಿಸಿಕೊಳ್ಳುತ್ತೇನೆ” ಎಂದಷ್ಟೇ ಹೇಳಿದ. ಇನ್ನೆಂದೂ ಬ್ರಿಟಿಷರ ವಿರುದ್ಧ ಹೊರಾಡುವುದಿಲ್ಲ ಎಂದು ನಾಯಕ ಹೇಳಲಿಲ್ಲ.

ಬ್ರಿಟಿಷರ ನ್ಯಾಯ

ಸಿಕಂದರಾಬಾದಿನ ಬ್ರಿಟಿಷ್ ನ್ಯಾಯಾಲಯದಲ್ಲಿ ವೆಂಕಟಪ್ಪನ ವಿಚಾರಣೆ ನಡೆಯಿತು. “ನಾಯಕ ಮಾಡಿದುದು ಅಕ್ಷಮ್ಯ ಅಪರಾಧ ಎಂದು ಅದು ನಿರ್ಧರಿಸಿತು. ಈ ಅಪರಾಧಕ್ಕೆ ಮರಣದಂಡನೆಯೊಂದೇ ಶಿಕ್ಷೆ ಎಂದು ತನ್ನ ತೀರ್ಪೂ ನೀಡಿತು. ಸರಕಾರದ ಪಕ್ಷಪಾತಿಯಾದ ಬ್ರಿಟಿಷ್ ನ್ಯಾಯಾಲಯ ಬೇರೇನು ತೀರ್ಪು ನೀಡಲು ಸಾಧ್ಯ?” ನಾಯಕನಿಗೆ ಸ್ವಾತಂತ್ಯ್ರ ಹೋರಾಟದಲ್ಲಿ ಧುಮುಕಿದ ಎಲ್ಲ ಕ್ರಾಂತಿಕಾರಿ ವೀರರಿಗೆ ದೊರೆತ ನೇಣು ಗಂಬದ ಸ್ವಾಗತದ ಹೊರತಾಗಿ ಬೇರೇನು ಸಿಕ್ಕಲು ಸಾಧ್ಯ?

ಆದರೆ ಟೈಲರ್ ತನ್ನ ಮಧ್ಯಕಸ್ಥಿಕೆಯಿಂದ ವೆಂಕಟಪ್ಪ ನಾಯಕನಿಗೆ ಈ ಸ್ವಾಗತವೂ ಸಿಗದಂತೆ ಮಾಡಿದ. ತರುಣ ನಾಯಕನ ತಪ್ಪನ್ನು ಇಷ್ಟು ದೊಡ್ಡದಾಗಿ ಪರಿಗಣಿಸಲಾರದೆಂದು ಮನವಿ ಮಾಡಿದ. ಬ್ರಿಟಿಷ್ ರೆಸಿಡೆಂಟನ್ನು ತನ್ನ ಸ್ವಂತ ಅಧಿಕಾರ ಚಲಾಯಿಸಿ ನಾಯಕನ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದ. ಮತ್ತೇ ವೈಸರಾಯ್ ಶಿಕ್ಷೆಯನ್ನು ಕೇವಲ ನಾಲ್ಕು ವರ್ಷಗಳಿಗೆ ಇಳಿಸಿದ.  ಅದೂ ಮದರಾಸು ಆಧಿಪತ್ಯದ ಒಂದು ದುರ್ಗದಲ್ಲಿ ನಾಯಕನೊಮದಿಗೆ ಆತನ ಹೆಂಡತಿಯರಿಗೂ ಇರಲು ಅವಕಾಶ. ವಾಸ್ತವಾಗಿ ಇದು ಜೈಲುವಾಸ ಆಗಿರದೆ  “ಗೃಹ ಬಂಧನ” ಆಗಿತ್ತು. ನಾಯಕ ಈ ಅವಧಿಯಲ್ಲಿ ಬಿಳಿಯರಿಗೆ ವಿಧೇಯನಾಗಿ ಬಾಳುವೆನೆಂದು ಭರವಸೆ ತೋರಿದಲ್ಲಿ ಮತ್ತೆ ಅವನಿಗೆ ರಾಜ್ಯ ಹಿಮತಿರುಗಿಸಿ, ಬ್ರಿಟಿಷರ ಗುಲಾಮನಾಗಿ ರಾಜ್ಯಾಧಿಕಾರದಲ್ಲಿರಲು ಬಿಡಬೇಕೆಂದು ವೈಸರಾಯರ ಅಭಿಪ್ರಾಯ.

ಆದರೆ ಸುರಪುರದ ದೊರೆ ವೆಂಕಟಪ್ಪ ಇದಕ್ಕೆ ಹೇಗೆ ಒಪ್ಪಿಯಾನು? ತನ್ನ ಬಗ್ಗೆ ಟೈಲರ್ ನಡೆಸಿದ ಈ ಮಧ್ಯಸ್ಥಿಕೆಯೇ ಆತನಿಗೆ ಹಿಂಸೆ ಎನಿಸಿರಬೇಕು. ಟೈಲರ್ ತನಗೆ ದ್ರೋಹ ಬಗೆದನೆಂದು ಆತ ಭಾವಿಸಿರಬೇಕು. ಕಾಡಿನಲ್ಲಿ ಸ್ವತಂತ್ರವಾಗಿದ್ದು ಸ್ವಯಂ ರಾಜ ಪದವಿ ವಹಿಸಿದ. ಸಿಂಹ, ತನ್ನ ಹುಟ್ಟುಗುಣವನ್ನು ಬಿಟ್ಟುಕೊಟ್ಟು ಹೇಗೆ ತಾನೇ ನಾಲ್ಕು ವರ್ಷ ಕಾಲ ಬಂಧನದ ಪಂಜರದಲ್ಲಿರಲು, ಅನಂತರ ನರಿಯಂತೆ ಜೀವಿಸಲು ಒಪ್ಪಿತು?

ಒಲ್ಲದ ಪ್ರಯಾಣ

ಆಂಗ್ಲ ಅಧಿಕಾರಿಯೊಬ್ಬನ ರಕ್ಷಣೆಯಲ್ಲಿ ವೆಂಕಟಪ್ಪನನ್ನು ಮದ್ರಾಸ್ ಅಧಿಪತ್ಯದ ದುರ್ಗವೊಂದಕ್ಕೆ ಕಳುಹಿಸುವ ವ್ಯವಸ್ಥೆ ಆಯಿತು. ಒಲ್ಲದ ಮನಸ್ಸಿನಿಂದ ನಿರ್ವಾಹವೇ ಇಲ್ಲದೆ ನಾಯಕ ಅಧಿಕಾರಿಯೊಂದಿಗೆ ಹೊರಟ.

ಒಂದು ಕಡೆ, ಮಾರ್ಗಮಧ್ಯದಲ್ಲಿ ಈ ಇಬ್ಬರೂ ವಿಶ್ರಾಂತಿಗಾಗಿ ತಂಗಿದ್ದರು. ಬಿಳಿಯ ಅಧಿಕಾರಿ ತನ್ನ ಸೊಂಟಪಟ್ಟಿಯನ್ನು ಬಿಚ್ಚಿಟ್ಟು ಮುಖ ತೊಳೆಯಲು ಹೊರಗೆ ಹೋಗಿದ್ದ. ಸೊಂಟಪಟ್ಟಿಯಲ್ಲಿ ನೇತಾಡುತ್ತಿದ್ದ ಪಿಸ್ತೂಲು ತರುಣ ವೆಂಕಟಪ್ಪನನ್ನು ಜಾಗೃತಗೊಳಿಸಿತು.

“ಮನೆತನಕ್ಕೆ ಯೋಗ್ಯನಾಗಿ ಬಾಳು

ಮನೆತನದ ಘನತೆಗೆ ಕುಂದು ತರಬೇಡ

ಕುಲದ ಹಿರಿಮೆ ಎತ್ತಿ ಹಿಡಿ”

ಎಂದು ತಂದೆ ಕೃಷ್ಣಪ್ಪನಾಯಕ ಮರನಶಯ್ಯೆಯಲ್ಲಿ ಹೇಳಿದ ಮಾತು ನಾಯಕನ ಕಿವಿಯಲ್ಲಿ ಮೊಳಗಿತು.

ಅಧಿಕಾರಿಯ ಪಿಸ್ತೂಲು ಇದ್ದ ಸ್ಥಳದಲ್ಲಿ ನಾಯಕನಿಗೆ ತಂದೆ ಕಾಣಿಸಿಕೊಂಡಂತಾಯಿತು. ಆತನ ಅಂತಿಮ ಸಂದೇಶ ಪ್ರತಿದ್ವನಿ ಆಗತೊಡಗಿತು. ನಾಯಕನ ಹೃದಯ ಸ್ಪಂದನ ಹೆಚ್ಚಾಯಿತು. ಕೈ ಯಾಂತ್ರಿಕವಾಗಿ ಪಿಸ್ತೂಲಿನ ಕಡೆ ಹೋಯಿತು.

ಧೀರ ಸಾವಿನಲ್ಲೂ ಧೀರನೇ

“ಸದ್ವರ್ತನೆಯಿಂದ, ರಾಜನಿಷ್ಠೆಯಿಂದ ಬಾಳುವೆ ಎಂದು ನಾಲ್ಕು ವರ್ಷಗಳ ಜೈಲುವಾಸದ ಅವಧಿಯಲ್ಲಿ ಬ್ರಿಟಿಷ್ ದೊರೆಗಳಿಗೆ ಮನವರಿಕೆಯಾದರೆ ನಿನ್ನ ರಾಜ್ಯ ನಿನಗೇ ಮರಳಿ ಕೊಡಲಾಗುವುದು” ಎಂದ ವೈಸರಾಯನ ಸಂದೇಶ ಒಂದು ಕಡೆ, ತಂದೆ ಮರಣ ವೇಳೆಯಲ್ಲಿ ನೀಡಿದ ವೀರ ಸಂದೇಶ ಇನ್ನೊಂದ ಕಡೆ ನಾಯಕನ ಮನಸ್ಸನ್ನು ಎಳೆಯತೊಡಗಿತು. ವೈಸರಾಯನ ಸಂದೇಶ ಒಪ್ಪಿದರೆ ತನಗೆ ಪಾರತಂರ್ತ್ಯದ ಚಿನ್ನದ ಸಂಕೋಲೆ, ತಂದೆಯ ನುಡಿಗೆ ಮನಗೊಟ್ಟರೆ ವೀರ ಸ್ವರ್ಗ, ಸಂಕೋಲೆ ಬಂಗಾರದ್ದಾದರೇನು? ಅದು ಸಂಕೋಲೆಯೇ ಅಲ್ಲವೇ?

ಕ್ರಾಂತಿಕಾರಿಗಳಿಗೆ ಯಾರಿಗೂ ಸಿಗದ ಅದ್ಭುತ ಸ್ವಾಗತ ನಾಯಕನ ಕಣ್ಣನ್ನು ಅರಳಿಸಿತು. ಮನಸ್ಸು ಕಲ್ಲಾಯಿತು. ಕೃಷ್ಣಪ್ಪನಾಯಕನ ಆತ್ಮ ದಿಗಂತದಲ್ಲಿ ನಿಂತು, “ಸರಿ, ಮಗನೇ ಸರಿ…. ನನ್ನ ಕುಲದ ರತ್ನ ನೀನು…. ನಿನ್ನ ನಿರ್ಧಾರ ಸರಿ… ವಿಳಂಬ ಮಾಡಬೇಡ … ಬಾ…. ಬಾ… ” ಎಂದು ಕರೆದಂತೆ ನಾಯಕನಿಗೆ ಭಾಸವಾಯಿತು. ಪಿಸ್ತೂಲಿನ ಕುದುರೆ ಚಿಮ್ಮಿತು. “ಢಂ… ಢಂ….” ಸದ್ದು ಬ್ರಿಟಿಷ್ ಅಧಿಕಾರಿಯ ಹೃದಯ ಕೊರೆಯಿತು. ಓಡೋಡಿ ಬಂದ. ಸುರಪುರದ ಶೂರ ನೆಲಕ್ಕೆ ಕುಸಿದಿದದ. ರಕ್ತದ ಮಡುವಿನಲ್ಲಿ ಮಲಗಿದ್ದ. ಪಂಜರ ಸೇರಿಸಬೇಕೆಂದು ಒಂಡೊಯ್ಯುತ್ತಿದ್ದ ಸಿಂಹ ತನ್ನದೇ ಮಾರ್ಗ ಅನುಸರಿಸಿತ್ತು.

ಬಂಗಾರದ ಸರಪಳಿಯೂ ಸರಪಳಿಯೇ

ಅಧಿಕಾರಿ ನಾಯಕನನ್ನು ಕೇಳಿದ : “ಏನಾಯಿತು ಪ್ರಿನ್ಸ್, ಯಾಕೆ ಹೀಗೆ ಮಾಡಿದಿರಿ?”

“ಸರಪಳಿ… ಬಂಗಾರದ್ದಾದರು… ಕೀಳು” ನಾಯಕ ಕೊನೆಯುಸಿರೆಳೆಯುತ್ತ ತೊದಲಿದ. ಹಂಗಿನ ಅರಮನೆಗಿಂತ ವಿದೇಶಿಯರ ಗುಲಾಮನಾಗಿ ಬಾಳುವುದಕ್ಕಿಂತ ವೀರ ಮರಣವೇ ಲೇಸು ಎಂದು ನಾಯಕ ವೀರಸ್ವರ್ಗ ಸೇರಿದ. ಸುರಪುರದ ಸ್ವಾತಂತ್ಯ್ರ ಜ್ಯೋತಿ ವೆಂಕಟಪ್ಪ ಇನ್ನೂ ಇಪ್ಪತ್ತನಾಲ್ಕರ ಹರೆಯದಲ್ಲೇ ದೇವರನ್ನು ಕೂಡಿಕೊಂಡ. 

ಸರಪಳಿ ಬಂಗಾರದ್ದಾದರು..... ಕೀಳು

ನಾಯಕನ ಮರಣವಾರ್ತೆ ಅನಾಥ ಬೇಡರನ್ನು ಕಂಗೆಡಿಸಿತು. ವೆಂಕಟಪ್ಪನ ಆಪ್ತರೆನಿಸಿದ, ಆತನ ಕ್ರಾಂತಿಯತ್ನಕ್ಕೆ ಪೋಷಣೆ, ಬೆಂಬಲ ನೀಡಿದ್ದ ಅನೇಕರನ್ನು  ಬ್ರಿಟಿಷರು ಗಲ್ಲಿಗೇರಿಸಿದರು. ಸುರಪುರದಲ್ಲಿ ಭೀತಿ ತಾಂಡವವಾಡಿತು. ಬ್ರಿಟಿಷರ ಧ್ವಜ ಸುರಪುರದ ಕೋಟೆ ಏರುವುದನ್ನು ಮೂಖರಾಗಿ ನೋಡುವುದರ ಹೊರತಾಗಿ ಬೇರೆ ಏನನ್ನೂ ಮಾಡುವುದು ವೀರರಿಗೆ ಅಸಾಧ್ಯವಾಯಿತು.

ಸುರಪುರ ಕರಗಿಹೋಯಿತು.

೧೮೬೧ರ ಮಾರ್ಚ್ ೪ ರಂದು ಸುರಪುರವನ್ನು ಬ್ರಿಟಿಷರು ಹೈದರಾಬಾದಿನ ನಿಜಾಮನಿಗೆ ಕಾಣಿಕೆ ನಿಡಿದರು. ಕನ್ನಡಿಗರ ನಾನಾ ದುರಂತ ಪರಂಪರೆಗೆ ಬ್ರಿಟಿಷರು ಹಾಕಿದ ಬೀಜಾಂಕುರ ಈ ಕಾನಿಕೆ. ನಿಜಾಮನ ಆಳ್ವಿಕೆಯಲ್ಲಿ ಸುರಪುರ, ನಾಯಕ ಪರಂಪರೆಯ ಸ್ವರ್ಣಯುಗವನ್ನು ಮೆಲುಕು ಹಾಕುತ್ತಾ ಸುಮಾರು ಒಂದು ಶತಮಾನ ಕಾಲ ನರಳಿತು.

ರಾಣಿ ಚೆನ್ನಮ್ಮಾಜಿಯ ಕಿತ್ತೂರು, ರಾಯಣ್ಣನ ಸಂಗೊಳ್ಳಿ, ಅಪರಂಪರ ಸ್ವಾಮಿಯ ಕೊಡಗು-ಗೀಗೆ ಕನ್ನಡ ನಾಡಿನ ನೂರರು ಸಣ್ಣಪುಟ್ಟ ಆಳರಸರು ನಡೆಸಿದ ಸ್ವಾತಂತ್ಯ್ರ ಹೋರಾಟದ ವೀರಗಾತೆಯಲ್ಲಿ ಸುರಪುರದ ಕತೆಯೂ ಸೇರಿತು. ೧೮೫೭ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮದಲ್ಲಿ, ದಿಟ್ಟನದಿಂದ ಹೋರಟ ನಡೆಸಿ ಬ್ರಿಟಿಷ್ ಸಿಂಹಸನವನ್ನು ಅಲ್ಲಾಡಿಸಿದ ಧೀರರಲ್ಲಿ ವೆಂಕಟಪ್ಪ ನಞಯಕನ ಹೆಸರು ಚಿರಸ್ಥಾಯಿಯಾಯಿತು. ಸುರಪುರದಲ್ಲಿ ಆರಂಭಗೊಂಡ ಈ ಸ್ವಾತಂತ್ಯ್ರ ಹೋರಾಟ, ಅನಂತರ ಮುಂಡರಗಿ, ಕೊಪ್ಪಳ, ರಾಯಚೂರು, ಸೋಲ್ಲಾಪುರ, ಹಲಗೇರಿ ಮೊದಲಾದ ಕಡೆಗೂ ವ್ಯಾಪಿಸಿ, ಕನ್ನಡ ನಾಡಿನಲ್ಲು ಸ್ವಾತಂತ್ಯ್ರ ಹೋರಾಟ ಅತ್ಯುಗ್ರವಾಗಿ ನಡೆಯಿತು.