ಸುರೇಂದ್ರನಾಥ ಬ್ಯಾನರ್ಜಿಯವರ  ಕೆಲಸದ ಹಿರಿಮೆ ಅರ್ಥವಾಗಬೇಕಾದರೆ ಅವರು ಕೆಲಸ ಮಾಡಿದ ಯುಗವನ್ನು ಅರ್ಥಮಾಡಿಕೊಳ್ಳಬೇಕು.

ಬ್ರಿಟಿಷರು ನಮ್ಮ ದೇಶದಲ್ಲಿ ಆಡಳಿತವನ್ನು ಭದ್ರಪಡಿಸಿಕೊಂಡ ಕಾಲ ಅದು. ಅನೈಕ್ಯ – ಅಜ್ಞಾನಗಳಿಂದ ಸ್ವತ್ವವನ್ನೂ ಸತ್ವವನ್ನೂ ಕಳೆದುಕೊಂಡು ದೀನರೂ ದುರ್ಬಲರೂ ಆದ ಜನರ ಸಮೂಹ. ಹಲವಾರು ವರ್ಷಗಳ ಕಲಹ-ಕಾದಾಟಗಳು ಕೊನೆಗೊಂಡು ಸ್ವಲ್ಪ ಮಟ್ಟಿನ ಶಾಂತಿ ನೆಲೆಸಿತ್ತಾದರೂ ಜನರ ಅಜ್ಞಾನವನ್ನು ಉಪಯೋಗಿಸಿಕೊಂಡು ತಮ್ಮ ಬೊಕ್ಕಸ ತುಂಬಿಸುತ್ತಿದ್ದ ಬ್ರಿಟಿಷರ ನಿರಂಕುಶ ಆಡಳಿತ. ಜನರು ಅಜ್ಞಾನ ಮತ್ತು ಅನೈಕ್ಯದಲ್ಲಿದ್ದರೆ ತಮ್ಮ ಸತ್ತೆಯೂ ಸುಲಿಗೆಯೂ ನಿರಾತಂಕವಾಗಿ ಸಾಗಬಹುದೆಂಬುದು ಅವರ ಲೆಕ್ಕಾಚಾರ. ಇದನ್ನು ಅರ್ಥಮಾಡಿಕೊಂಡವರೂ ಇದ್ದರು. ೧೮೫೭ರ ಸ್ವಾತಂತ್ರ‍್ಯ ಹೋರಾಟ ಇದಕ್ಕೆ ಸಾಕ್ಷಿ. ಆದರೆ ಒಟ್ಟು ಪರಿಸ್ಥಿತಿಯಲ್ಲಿ ಬ್ರಿಟಿಷರಿಗೆ ಇದೊಂದು ದೊಡ್ಡ ಸವಾಲಾಗಿರಲಿಲ್ಲ. ಅವರು ಬಲಪ್ರಯೋಗದಿಂದ ಬಂಡಾಯವನ್ನು ಅಡಗಿಸಲೂ ಉಪಾಯಾಂತರಗಳಿಂದ ಜನರನ್ನು ಸಮಜಾಯಿಸಲೂ ಶಕ್ತರಾದರು. ಭಾರತೀಯರಿಗೆ ಯಾವ ಅಧಿಕಾರವೂ ಇರಲಿಲ್ಲ. ಎಲ್ಲ ದೊಡ್ಡ ಹುದ್ದೆಗಳೂ ಬ್ರಿಟಿಷರಿಗೇ ಮೀಸಲು. ಶ್ರೀಮಂತ ಹಾಗೂ ಮಧ್ಯಮ ವರ್ಗದ ಜನರು ಇಂಗ್ಲೀಷ್‌ ಕಲಿತು ಇಂಗ್ಲೀಷರ ಕೃಪಾಶ್ರಯಗಳಿಗಾಗಿ ಹೊತೊರೆಯ ತೊಡಗಿದರು. ದೇಶನಿಷ್ಠೆ ಎಂಬುದು ಮರೆತುಹೋಗುವ ಮಟ್ಟಕ್ಕೆ ಮುಟ್ಟಿತ್ತು. ಬ್ರಿಟಿಷರಿಲ್ಲದೆ ಬೇರೆ ದಿಕ್ಕು ದೈವಗಳಿಲ್ಲ ಎಂಬ ನಂಬಿಕೆಗೆ ವೇಗ ಬರುತ್ತಿತ್ತು. ಆದರೂ ತರುಣ ಜನರಲ್ಲಿ ಸ್ವಲ್ಪ ಮಟ್ಟಿನ ವಿಚಾರಮಂಥನ ನಡೆಯುತ್ತಿತು. ರೂಢಿಯ, ದಾಸ್ಯದ ವಿರುದ್ಧ ದಂಗೆಯ ಮನೋಧರ್ಮ ಪುಟಿದೇಳುತ್ತಿತ್ತು. ಈ ಸನ್ನಿವಶೇದಲ್ಲಿ ಸಾಮಜಿಕ ಸ್ಥಿರತೆಯನ್ನೂ ರಾಜಕೀಯ ಭದ್ರತೆಯನ್ನೂ ಸಾಧಿಸಲು ಬಂಗಾಳದಲ್ಲಿ ರಾಜಾ ರಾಮಮೋಹನ ರಾಯ್‌, ಕೇಶವಚಂದ್ರ ಸೇನ್‌, ಈಶ್ವರಚಂದ್ರ ವಿದ್ಯಾಸಾಗರ ಮುಂತಾದವರು ಪ್ರಯತ್ನಿಸುತ್ತಲೂ ಇದ್ದರು.

ದಿಟ್ಟ ಮನಸ್ಸಿನ ತಂದೆ

ಇಂಥ ಬಿಕ್ಕಟ್ಟಿನ ದಿನಗಳಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ಕಲ್ಕತ್ತದ ತಾಲತೊಲ ಎಂಬಲ್ಲಿ ೧೮೪೮ರ ನವೆಂಬರ್ ೧೦ರಂದು ಹುಟ್ಟಿದರು. ತಂದೆ ದುರ್ಗಾಚರಣ. ತಾಯಿ ಜಗದಂಬಾದೇವವಿ; ದುರ್ಗಾಚರಣರ ಎರಡನೆಯ ಮಡದಿ. ಅಜ್ಜ ಗೋಲಕಚಂದ್ರ ವಂದ್ಯೋಪಾಧ್ಯಾಯರು ಸನಾತರ ಸಂಪ್ರದಾಯಸ್ಥರು. ಆದರೆ ದುರ್ಗಾಚರಣರು ಹೊಸ ಸಂಪ್ರದಾಯವನ್ನು ಸ್ವಾಗತಿಸುವ ದಟ್ಟ ಹೆಜ್ಜೆ ಇಟ್ಟವರು. ಮೊದಲ ಹೆಂಡತಿ ಕಾಲರಾ ವ್ಯಾಧಿಯಿಂದ ಅಕಾಲ ಮರಣಕ್ಕೆ ಗುರಿಯಾದುದರಿಂದ ವ್ಯಾಧಿಪೀಡಿತ ಜನರ ಸೇವೆ ಮಾಡುವ ಸಲುವಾಗಿ ವೈದ್ಯ ಶಾಸ್ತ್ರವನ್ನು ವ್ಯಾಸಂಗ ಮಾಡಿ ಕಲ್ಕತ್ತದಲ್ಲಿ ಪ್ರಸಿದ್ಧ ವೈದ್ಯರೆಂದು ಖ್ಯಾತಿಯನ್ನು ಗಳಿಸಿದ್ದರು. ದಿನದಲ್ಲಿ ಎರಡು ಗಂಟೆಗಳ ಕಾಲ ಬಡವರ ಶುಶ್ರೂಷೆಗೆ ಮೀಸಲು-ಉಚಿತ ಸೇವೆ. ಸುರೇಂದ್ರನಾಥ ಬ್ಯಾನರ್ಜಿ ದುರ್ಗಾಚರಣರ ಎರಡನೆಯ ಮಗ.

ವಾತಾವರಣ

ಹಳೆಯ ಮತ್ತು ಹೊಸ ಸಂಪ್ರದಾಯಗಳ ತಾಕಲಾಟದಿಂದ ಉಂಟಾದ ಒಂದು ವಿಶಿಷ್ಟ ವಾತಾವರಣದಲ್ಲಿ ಸುರೇಂದ್ರನಾಥರ ಬಾಲ್ಯ ಕಳೆಯಿತು. ಈ ವಾತಾವರಣ ಆಗಿನ ಬಂಗಾಳದಲ್ಲಿ ಸರ್ವೇ ಸಾಮಾನ್ಯವಾಗಿತ್ತು. ವಿದ್ಯಾವಂತರೆನಸಿದವರ ಮನೆಗಳಲ್ಲಿ ಹಳೆಯ ಜನರ ಕಾಲ ಕಳೆದು ಪಾಶ್ಚಾತ್ಯ ಆಚಾರ-ವಿಚಾರ ನುಸುಳಿಕೊಳ್ಳುತ್ತಿತ್ತು. ಈ ಹೊಸ ವಾತಾವರಣ ಸುರೇಂದ್ರನಾಥರ ಮೇಲೆ ಪ್ರಭಾವ ಬೀರದಿರಲಿಲ್ಲ. ಅವರು ಬಾಲ್ಯದಿಂದಳು ಸೂಕ್ಷ್ಮಮತಿಯವರೂ ಪ್ರತಿಭಾಶಾಲಿಗಳೂ ಆಗಿದ್ದರು. ಹೊಸ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಜನರ ಸುಖದುಃಖಗಳಲ್ಲಿ ಬೆರೆತುಕೊಳ್ಳುವ ಸ್ವಭಾವ ಮೈಗೂಡಿತ್ತು. ಅಜ್ಜನ ಸಂಪ್ರದಾಯನಿಷ್ಠೆ, ತಂದೆಯ ವಿಚಾರವಾದಗಳು ಸುರೇಂದ್ರನಾಥರನ್ನು ಸಮತೋಲನ ಬುದ್ಧಿಯ ಅಪ್ರತಿಮ ದೇಶಬಕ್ತರನ್ನಾಗಿ ಮಾಡಲು ಮೂಲ ಆಧಾರವಾದವು.

ದುರ್ಗಾಚಣರು ಮಕ್ಕಳ ವಿದ್ಯೆ ಮತ್ತು ದೈಹಿಕ ಆರೋಗ್ಯ ಈ ಎರಡರಲ್ಲೂ ವಿಶೇಷ ಶ್ರದ್ಧೆವಹಿಸುತ್ತಿದ್ದುದರಿಂದ ಸುರೇಂದ್ರನಾಥರು ಎಂ. ಎ. ಪದವಿ ಗಳಿಸದ್ದಂತೆ ಉತ್ತಮ ದೇಹದಾರ್ಢ್ಯವನ್ನೂ ಪಡೆದಿದ್ದರು.

ಇಂಗ್ಲೆಂಡಿನ ಅನುಭವಗಳು

ದೇಶದ ಜನತೆಗೆ ಪರಕೀಯ ಆಳ್ವಿಕೆಯಿಂದ ಒದಗಿದ ದುರ್ಗತಿಯನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಡಲು ಅವರ ಜೀವನದಲ್ಲಿ ಒದಗಿ ಬಂದ ಕೆಲ ಘಟನೆಗಳೇ ಕಾರಣವಾದವು. ಅವರ ತಂದೆಗೆ ಮಗನನ್ನು ಐ.ಸಿ.ಎಸ್‌. ತೇರ್ಗಡೆ ಮಾಡಿಸುವ ಆಸೆ. ಅದಕ್ಕಾಗಿ ಸುರೇಂದ್ರನಾಥರನ್ನು ಇಂಗ್ಲೆಂಡಿಗೆ ಕಳುಹಿಸುವ ಯೋಚನೆ ಮಾಡಿದರು. ಆದರೆ ಆಗಿನ ಕಾಲದಲ್ಲಿ ಸಮುದ್ರವನ್ನು ದಾಟಿಹೋಗುವುದು ತಪ್ಪು ಎಂಬ ಭಾವನೆ ಸಂಪ್ರದಾಯಸ್ಥರಲ್ಲಿ ಮೂಡಿತ್ತು. ಹೀಗೆ ಸುರೇಂದ್ರನಾಥರು ಇಂಗ್ಲೆಂಡಿಗೆ ಹೋಗುತ್ತಾರೆ ಎಂಬುದನ್ನು ಅವರೂ ಅವರ ತಂದೆಯೂ ಯಾರಿಗೂ ಸುರೇಂದ್ರನಾಥರ ತಾಯಿಗೂ ತಿಳಿಸಲಿಲ್ಲ. ಅವರು ಹೊರಡಲು ಎರಡು ದಿನ ಇದೆ ಎನ್ನುವಾಗ ತಾಯಿಗೆ ವಿಷಯ ತಿಳಿಯಿತು. ಕೇಳುತ್ತಲೇ ಅವರು ಮೂರ್ಛೆ ಹೋದರು.

ಅಂತೂ ಸುರೇಂದ್ರನಾಥರು ಇಂಗ್ಲೆಂಡಿಗೆ ಹೋದರು. ಆದರೆ ಓರ್ವ ಭಾರತೀಯನಿಗೆ ಐ.ಸಿ.ಎಸ್‌. ಆಗಬೇಕಾದರೆ ಎಷ್ಟೆಲ್ಲ ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅಲ್ಲವರು ಅನುಭವಿಸಿದರು. ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು. ಆಗ ಬ್ರಿಟಿಷ್‌ ಸರ್ಕಾರ, ಈ ಪರೀಕ್ಷೆಗೆ ಗೊತ್ತು ಮಾಡಿದ ಮಿತಿಗಿಂತ ಅವರಿಗೆ ಕೆಲವು ತಿಂಗಳು ವಯಸ್ಸು ಹೆಚ್ಚು ಎಂದು ಅವರ ಹೆಸರನ್ನು ತೆಗೆದು ಹಾಕಿತು. ತಮಗೆ ನಿಜವಾಗಿ ವಯಸ್ಸು ಹೆಚ್ಚಾಗಿಲ್ಲ ಎಂದು ಸರ್ಕಾರವನ್ನು ಒಪ್ಪಿಸಲು ಅವರು ದೊಡ್ಡ ಹೋರಾಟವನ್ನೇ ನಡೆಸಬೇಕಾಯಿತು. ನ್ಯಾಯಾಲಯಕ್ಕೂ ಹೋಗಬೇಕಾಯಿತು. ಕಡೆಗೂ ಅವರು ಗೆದ್ದರು. ಭಾರತದ ಆತ್ಮಗೌರವವನ್ನು ಮತ್ತು ನ್ಯಾಯವಾದ ಹಕ್ಕುಗಳನ್ನು ರಕ್ಷಿಸಲು ಹೋರಾಟಬೇಕು ಎಂಬ ದೀಕ್ಷೆ ತಳೆಯಲು ಇದು ಸಹಾಯವಾಯಿತೆನ್ನಬೇಕು.

ಈ ಹೋರಾಟದಲ್ಲಿ ಗೆದ್ದೆ ಎಂದು ಅವರು ಸಂತೋಷ ಪಡುವ ಹೊತ್ತಿಗೆ ಅವರ ತಂದೆ ತೀರಿಕೊಂಡರು ಎಂಬ ಸುದ್ಧಿ ಬಂದಿತು. ಸುರೇಂದ್ರನಾಥರಿಗೆ ಇದೊಂದು ಕ್ರೂರ ಪೆಟ್ಟು.

ಐ.ಸಿ.ಎಸ್‌.

ಸುರೇಂದ್ರನಾಥರು ಭಾರತಕ್ಕೆ ಹಿಂದಿರುಗಿದರು. ಆದರೆ ಅವರಿಗೆ ಸುಖ ಸಿಕ್ಕಲಿಲ್ಲ. ಐ.ಸಿ.ಎಸ್‌. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಊರಿಗೆ ಬಂದ ಬಳಿಕ ಅವರಿಗೆ ದೊರಕಿದ್ದು ಆಂಗ್ಲೋ-ಇಂಡಿಯನ್‌ ಮ್ಯಾಜಿಷ್ಟ್ರೇಟಿನ ಕೈಕೆಳಗಿನ ಅಸಿಸ್ಟಂಟ್‌ ಮ್ಯಾಜಿಸ್ಟ್ರೇಟ್‌ ಹುದ್ದೆ. ವಿದೇಶಯಾತ್ರೆ ಮಾಡಿಬಂದವನೆಂದು ಸಂಪ್ರದಾಯ ನಿಷ್ಠರ ಗೊಣಗಾಟ ಬೇರೆ. ಆಗ ಬಂಗಾಳದಲ್ಲಿ ಮಾತ್ರವಲ್ಲ, ಇಡೀ ಭಾರತದಲ್ಲಿ ಗೌರವ ಪಡೆದಿದ್ದ ಈಶ್ವರಚಂದ್ರ ವಿದ್ಯಾಸಾಗರರು ಸುರೇಂದ್ರನಾಥರಿಗೆ ಸ್ವಾಗತ ನೀಡಿ ಜನರ ಗೊಣಗಾಟಕ್ಕೆ ವಿರಾಮ ಹಾಕಿದ್ದರು. ಆದರೆ ಹುದ್ದೆಯಲ್ಲಿ ಸರಿಯಾದ ಕೆಲಸ ಮಾಡುವುದಕ್ಕೆ ಆಂಗ್ಲೋ-ಇಂಡಿಯನ್‌ ಮ್ಯಾಜಿಷ್ಟ್ರೇಟನ ಮಾತ್ಸರ್ಯ ಅಡ್ಡಿಯಾಯಿತು. ಆತ ಯಾವುದೋ ಸಣ್ಣ ತಾಂತ್ರಿಕ ತಪ್ಪೊಂದನ್ನು ಕಂಡು ಹಿಡಿದು ಸುರೇಂದ್ರನಾಥರು ವಜಾ ಆಗುವಂತೆ ಮಾಡಿದ. ತನ್ನನ್ನು ವಜಾ ಮಾಡಿದ ಆಜ್ಞೆಯ ವಿರುದ್ಧ ಇಂಗ್ಲೆಂಡ್‌ವರೆಗೆ ಹೋಗಿ ವಾದಿಸಿದರೂ ಪ್ರಯೋಜನವಾಗಲಿಲ್ಲ. ವಸ್ತುತಃ ಸುರೇಂದ್ರನಾಥರದೇನೂ ದೊಡ್ಡ ತಪ್ಪಿಇರಲಿಲ್ಲ. ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದವನೊಬ್ಬ ಅವರಿಗೆ ಮೋಸ ಮಾಡಿದ್ದ. ಇದು ಮುಂದೆ ಬ್ರಿಟಿಷ್‌ ಅಧಿಕಾರಿಗಳಿಗೂ ಮನವರಿಕೆಯಾಯಿತು. ಏನಿದ್ದರೂ ಭಾರತೀಯನೊಬ್ಬನು ಮೇಲೇರದಂತೆ ನೋಡಿಕೊಳ್ಳುವ ಬುದ್ಧಿ ತತ್ಕಾಲಕ್ಕೆ ಗೆದ್ದಿತು.!

ಇದರಿಂದ ಒಟ್ಟಿನಲ್ಲಿ ದೇಶಕ್ಕೆ ಉಪಕಾರವಾಯಿತು. ರಾಷ್ಟ್ರೀಯ ಗೌರವವನ್ನು ಕಾಪಾಡುವ ಅವರ ವೀರ ಸಂಕಲ್ಪಕ್ಕೆ ಇದರಿಂದ ಹೆಚ್ಚು ಪುಷ್ಟಿ ಬಂತು.

ಸುರೇಂದ್ರನಾಥರು ವಕೀಲರಾಗಬೇಕೆಂದು, ಇಂಗ್ಲೆಂಡಿನಲ್ಲಿ ತಮ್ಮ ಕೆಲಸದ ವಿಷಯಕ್ಕೆ ವಾದ ಮಾಡಲು ಹೋದಾಗಲೇ ತರಗತಿಗಳಿಗೆ ಹೋಗುತ್ತಿದ್ದರು. ಎಲ್ಲ ಶಿಕ್ಷಣ ಮುಗಿದು, ಅವರು ವಕೀಲರಾಗುವ ಕಾಲ ಬಂತು ಎನ್ನುವಾಗ ಇಂಗ್ಲೆಂಡಿನಲ್ಲಿ ಅದಕ್ಕೆ ಸಂಬಂಧಪಟ್ಟ ಸಂಸ್ಥೆ ಅವರಿಗೆ ಅನ್ಯಾಯ ಮಾಡಿತು. ಅವರು ಸಿವಿಲ್‌ ಸರ್ವಿಸ್‌ನಿಂದ ವಜಾ ಆದವರು, ಆದುದರಿಂದ ವಕೀಲರಾಗಲು ಅರ್ಹರಲ್ಲ ಎಂದು ತೀರ್ಮಾನಿಸಿತು.

ಬಾಳ ಗುರಿ

ಒಂದಾದ ಮೇಲೊಂದು ಹೊಡೆತ. ಸಿವಿಲ್‌ ಸರ್ವಿಸ್‌ ಪರೀಕ್ಷೆಯಲ್ಲಿ ಅವರೆಗೆ ಉತ್ತೀರ್ಣರಾಗಿದ್ದ ಭಾರತೀಯರೇ ಕೈ ಬೆರಳಿನಲ್ಲಿ ಎಣಿಸುವಷ್ಟು ಮಂದಿ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ – ಹೆಸರನ್ನೇ ಪಟ್ಟಿಯಿಂದ ಹೊಡೆದು ಹಾಕಿದರು. ಅಸಾಧಾರಣ ಹೋರಾಟ ನಡೆಸಿ ಆ ಅನ್ಯಾಯವನ್ನು ಸರಿಪಡಿಸಿಕೊಂಡರೆ – ತಂದೆಯ ಸಾವು. ಕೆಲಸಕ್ಕೆ ಸೇರಿದರೆ-ಸ್ವಲ್ಪ ಕಾಲದಲ್ಲೇ ಕೆಲಸ ಹೋಯಿತು. ಮತ್ತೆ ಹೋರಾಟ- ಭಾರತದಲ್ಲಿ, ಇಂಗ್ಲೆಂಡಿನಲ್ಲಿ. ಅಪಜಯ. ಮತ್ತೆ ಇಂಗ್ಲೆಂಡಿನಲ್ಲಿ ಓದು. ವಕೀಲನಾಗುತ್ತೇನೆ ಎನ್ನುವ ಹೊತ್ತಿಗೆ “ಸಾಧ್ಯವಿಲ್ಲ” ಎಂದು ತಳ್ಳಿದ ಕೈ! ಇಷ್ಟಾದಾಗ ಅವರಿಗಿನ್ನೂ ೨೬ ವರ್ಷ!

ಈ ಕಷ್ಟದ, ಕತ್ತಲೆಯ ದಿನಗಳಲ್ಲಿ ಸುರೇಂದ್ರನಾಥರು ಯೋಚಿಸಿದರು; “ತಮಗೆ ಇಷ್ಟು ಅನ್ಯಾಯವಾದದ್ದಕ್ಕೆ ಕಾರಣವೇನು? ತಾವು ಭಾರತೀಯರಾದದ್ದು ಗುಲಾಮರು ಎನ್ನಿಸಿಕೊಂಡವರಾದದ್ದು. ತಮಗಂತೂ ಅನ್ಯಾಯ ಆಗಿಹೋಯಿತು, ತಮ್ಮ ದೇಶದ ಇತರರಿಗಾದರೂ ಅನ್ಯಾಯವಾಗಬಾರದು. ತಾವು ಅವರ ಸೇವೆಗೆ ಮುಡಿಪಾಗಬೇಕು” ಎಂದು ನಿರ್ಧರಿಸಿದರು.

ಒಂದು ವರ್ಷ ಕಾಲ ಪುಸ್ತಕಗಳ ಅಧ್ಯಯನ ಮಾಡಿದರು. ಇಂಗ್ಲೀಷ್‌ ಸಾಹಿತ್ಯ, ಚರಿತ್ರೆ-ಹಲವಾರು ವಿಷಯಗಳ ಅಧ್ಯಯನ ಮಾಡಿದರು. ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ದೇಶಸೇವೆಗೆ ಸಿದ್ಧತೆ ಮಾಡಿಕೊಂಡರು.

ಸುರೇಂದ್ರನಾಥ ಬ್ಯಾನರ್ಜಿ, ಈಶ್ವರಚಂದ್ರ ವಿದ್ಯಾಸಾಗರರು.

ಅಧ್ಯಾಪಕರು

ಇಂಗ್ಲೆಂಡಿನಿಂದ ಮರಳಿ ಬಂದೊಡನೆ ಈಶ್ವರ ಚಂದ್ರ ವಿದ್ಯಾಸಾಗರರು ಅವರಿಗೆ ಕಲ್ಕತ್ತೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂಗ್ಲೀಷ್‌ ಪ್ರೊಫೆಸರ್ ಹುದ್ದೆ ನೀಡಿದರು. ತಿಂಗಳಿಗೆ ೨೦೦ ರೂಪಾಯಿ ವೇತನ. ಉತ್ತಮ ಬೋಧಕರಾದ ಬ್ಯಾನರ್ಜಿ ಬಹು ಬೇಗನೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನವರಾದರು. ಶಿಕ್ಷಕ ವೃತ್ತಿಯಿಂದ ಅವರಿಗೆ ತರುಣ ಜನಾಂಗದ ನಿಕಟ ಸಂಪರ್ಕ ದೊರೆತುದರಿಂದ ಸಂಘಟನೆಗೆ ಸುವರ್ಣ ಅವಕಾಶ ದೊರಕಿದಂತಾಯಿತು. ತ್ರಿಪುರ ರಾಜ್ಯದಲ್ಲಿ ೭೦೦ ರೂಪಾಯಿಗಳ ಸಂಬಳದ ಕೆಲಸಕ್ಕೆ ಆಹ್ವಾನ ಬಂದಿತು. “ನಾನು ಅಧ್ಯಾಪಕನಾಗಿಯೇ ಇರುತ್ತೇನೆ” ಎಂದು ಹೇಳಿ ಬಿಟ್ಟರು ಸುರೇಂದ್ರನಾಥರು. ಮುಂದೆ ಇನ್ನೊಂದು ಸಂಸ್ಥೆಯಲ್ಲಿ ಪ್ರೊಫೆಸರರಾಗಿ ಸೇರಿ ಕೆಲಕಾಲ ಸೇವೆ ಸಲ್ಲಿಸಿದರು. ಆಮೇಲೆ ತಾವೇ ಒಂದು ಸಂಸ್ಥೆ ಬೆಳೆಸಿದರು. ಮುಂದೆ ಅದು ಸುರೇಂದ್ರನಾಥ ಬ್ಯಾನರ್ಜಿ ಕಾಲೇಜ್‌ ಎಂದು ಪ್ರಸಿದ್ಧವಾಯಿತು.

ಸುರೇಂದ್ರನಾಥರು ೩೭ ವರ್ಷಗಳ ಕಾಲ ಶಿಕ್ಷಕರಾಗಿದ್ದಕೊಂಡು ವಿದ್ಯಾರ್ಥಿಗಳನ್ನು ಸರಿಯಾದ ನಿಟ್ಟಿನಲ್ಲಿ ಸಂಘಟಿಸಿದರು. ನಮ್ಮ ದೇಶದಲ್ಲಿ ವಿದ್ಯಾರ್ಥಿ ಸಂಘಟನೆಯ ಜನಕರೂ ಅವರೆ. ರಾಜಕೀಯ ಸ್ವಾತಂತ್ರ‍್ಯ ಸಾಧಿಸಲು ವಿದ್ಯಾರ್ಥಿ ಸಂಘಟನೆ ಅಗತ್ಯ ಎಂದು ಅವರು ಹೇಳುತ್ತಿದ್ದರು. ವಿದ್ಯಾರ್ಥಿಗಳು ರಾಜಕೀಯದಲ್ಲಿ ಪಾಲ್ಗೊಳ್ಳುವುದನ್ನೂ ಅವರು ಸಮರ್ಥಿಸುತ್ತಿದ್ದರು. ಆದರೆ ವಿದ್ಯಾರ್ಥಿಗಳ ಅಶಿಸ್ತನ್ನು ಅವರು ಸಹಿಸುತ್ತಿರಲಿಲ್ಲ.

ಇಂಡಿಯನ್‌ ಅಸೋಸಿಯೇಷನ್‌

ಅವರು ಬಂಗಾಳದಲ್ಲಿ ಶಿಕ್ಷಕರಾಗಿದ್ದರೂ ಅವರ ಮನಸ್ಸು ಭಾರತದ ಬಗೆಗೆ ಮಿಡಿಯುತ್ತಿತ್ತು. ಅವರ ಕಣ್ಣ ಎದುರಿಗೆ ಇದ್ದುದು ಇಡೀ ಭಾರತ- ಭಾರತದ ಎಲ್ಲ ಭಾಷೆಗಳ, ಎಲ್ಲ ಧರ್ಮಗಳ ಜನರು. ಏಕೀಕೃತ ಭಾರತ ಮತ್ತು ಜಾತ್ಯತೀತ ಭಾರತದ ಕಲ್ಪನೆಯನ್ನು ಕೊಟ್ಟವರೇ ಸುರೇಂದ್ರನಾಥ ಬ್ಯಾನರ್ಜಿ. ಪಾನ ನಿರೋಧದಿಂದ ಬಡವರ ಹಿತ ಸಾಧನೆಯಾಗುವುದೆಂಬುದನ್ನೂ ಅವರು ಕಂಡುಕೊಂಡಿದ್ದರು. ಒಮ್ಮೆ ಸರ್ಕಾರ ವರಮಾನದ ಆಸೆಗಾಗಿ, ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಹೆಂಡದ ಬೆಲೆಯನ್ನು ಇಳಿಸಿತು. ಕುಡಿಯುವವರ ಸಂಖ್ಯೆ ಏರಿತು. ಸುರೇಂದ್ರನಾಥರು ಇದರ ವಿರುದ್ಧ ತೀವ್ರ ಚಳವಳಿಯನ್ನೇ ಪ್ರಾರಂಭಿಸಿದರು. ಕಡೆಗೆ ಸರ್ಕಾರವೇ ಸೋಲನ್ನು ಒಪ್ಪಿಕೊಂಡಿತು. ಭಾರತದ ಒಟ್ಟು ಹಿತ ಸಾಧಿಸುವುದು ಎಲ್ಲರ ಗುರಿಯಾಗಬೇಕು, ಇದಕ್ಕೆ ಭಾಷೆ, ಜಾತಿ, ಮತ ಧರ್ಮ ಅಡ್ಡವಾಗಬಾರದು ಎಂಬುದು ಅವರ ಮಂತ್ರ. ಇದನ್ನು ಸಾಧಿಸಲು ಅವರು “ಇಂಡಿಯನ್‌ ಅಸೋಸಿಯೇಷನ್‌” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಭಾರತದಲ್ಲಿ ಎಲ್ಲ ಭಾಷೆಗಳವರಲ್ಲಿಯೂ ಹಿಂದು, ಕ್ರೈಸ್ತ, ಪಾರ್ಸಿ, ಮುಸ್ಲಿಂ, ಸಿಖ್‌ ಮುಂತಾದ ಎಲ್ಲ ಮತಗಳವರಲ್ಲಿಯೂ ಒಗ್ಗಟ್ಟವನ್ನುಂಟು ಮಾಡುವ ಮುಖ್ಯ ಗುರಿಯಿಂದ ಈ ಸಂಸ್ಥೆಯನ್ನವರು ರೂಪಿಸಿದರು. ಇದಕ್ಕೆ ಆನಂದ ಮೋಹನ್‌ ಬೋಸ್‌ ಮತ್ತು ದ್ವಾರಕಾನಾಥ ಗಂಗೂಲಿ ಮೊದಲಾದವರು ಬೆಂಬಲ ನೀಡಿದರು. ಆಗ ಬ್ರಿಟಿಷ್‌ ಇಂಡಿಯನ್‌ ಅಸೋಸಿಯೇಷನ್‌ ಎಂಬ ಒಂದು ಸಂಸ್ಥೆಯೂ ಇದ್ದಿತು. ಆದರೆ ಅದು ಕೇವಲ ಭೂ ಮಾಲೀಕರ ವೇದಿಕೆಯಾಗಿದ್ದುದರಿಂದ ಭಾರತದ ಧನ್ವಿಯನ್ನು ಎತ್ತುವ ತ್ರಾಣವಿರಲಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ಪ್ರಕಟಿಸಲು ಬ್ಯಾನರ್ಜಿಯವರ ಇಂಡಿಯನ್‌ ಅಸೋಸಿಯೇಷನ್‌ ಮಾತ್ರ ಪ್ರಾತಿನಿಧಿಕ ಶಕ್ತಿ ಪಡೆಯಿತು. ಬ್ರಿಟಿಷರು ಭಾರತೀಯರಿಗೆ ಮಾಡುತ್ತಿದ್ದ ಅನ್ಯಾಯಗಳು ಒಂದೊಂದಲ್ಲ. ಉದಾಹರಣೆಗೆ ಐ.ಸಿ.ಎಸ್‌. ಪರೀಕ್ಷೆಗೆ ಕುಳಿತುಕೊಳ್ಳುವ ಭಾರತೀಯರಿಗೆ ೨೧ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಕೂಡದು ಎಂದು ನಿಯಮವಿತ್ತು. ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿನ ಹೋಗಿ ೨೧ ವರ್ಷವಾಗುವುದರೊಳಗೆ ಐ.ಸಿ.ಎಸ್‌. ಮಾಡುವುದು ತೀರಾ ಕಷ್ಟವಾಗಿತ್ತು. ಬ್ರಿಟಿಷ್‌ ಸರ್ಕಾರ ಈ ನಿಯಮಗಳನ್ನು ಮಾರ್ಪಡಿಸಿ, ೧೯ ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಕೂಡದು ಎಂದಿತು ! ಇಂತಹ ಅನ್ಯಾಯಗಳ ವಿರುದ್ಧ ಜನರ ಅಭಿಪ್ರಾಯವನ್ನು ಸಂಘಟಿಸಲು ಬ್ಯಾನರ್ಜಿಯವರೇ ಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿ ಉತ್ತರ ಭಾರತದ ಪ್ರಮುಖ ನಗರಗಳ ಪ್ರವಾಸ ಕೈಗೊಂಡರು. ಅವರು ಹೋದಲ್ಲೆಲ್ಲ ಅಪೂರ್ವ ಜನಜಾಗೃತಿಯುಂಟಾಯಿತು.  ಇದರಿಂದ ಅವರಿಗೆ ಎಲ್ಲ ಕಡೆಗೆ ಸ್ನೇಹ ಪರಿಚಯ ಲಾಭವೂ ಆಯಿತು. ಹೀಗೆ ಅವರು ಸಮಗ್ರ ಭಾರತದ ಒಂದು ವೇದಿಕೆ ನಿರ್ಮಿಸುವಲ್ಲಿ ಯಶಸ್ವಿಯಾದರು.

‘ಪ್ರೆಸ್‌ ಅಸೋಸಿಯೇಷನ್‌’

ಬ್ರಿಟಿಷ್‌ ಸರ್ಕಾರದ ಪರವಾಗಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಲಾರ್ಡ್ ಲಿಟ್ಟನ್‌ ೧೮೭೭ ರಲ್ಲಿ ಬ್ರಿಟಿಷ್‌ ರಾಣಿಯನ್ನು  ಭಾರತದ ಸಾಮ್ರಾಜ್ಞಿಯನ್ನಾಗಿ ಘೋಷಿಸಲು ತೀರ್ಮಾನಿಸಿದ; ಇದಕ್ಕಾಗಿ ದೆಹಲಿಯಲ್ಲಿ ವೈಭವದ ದರ್ಬಾರ್ ನಡೆಸುವ ಏರ್ಪಾಟು ಪ್ರಾರಂಭಿಸಿದ. ಆಗ ಬಂಗಾಳ ಮತ್ತು ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಭಿಕರ ಕ್ಷಾಮ. ಆಳುವ ಬ್ರಿಟಿಷರಿಗೆ ಜನರ ಕಷ್ಟಗಳನ್ನು ಪರಿಹರಿಸುವಲ್ಲಿ ನಿರಾಸಕ್ತಿ; ಬ್ರಿಟಿಷ್‌ ರಾಣಿಯ ವೈಭವ ಪ್ರದರ್ಶನದಲ್ಲಿ ಆಸಕ್ತಿ./ ಇದು ಸುರೇಂದ್ರನಾಥ ಬ್ಯಾನರ್ಜಿಯವರ ಮನಸ್ಸನ್ನು ಕಲಕಿತು.

ಜನರ ಅಭಿಪ್ರಾಯಕ್ಕೆ ಬೆಲೆ ಇರಲಿಲ್ಲ. ಆಯುಧ ಶಾಸನ, ದೇಶಭಾಷಾ ಪತ್ರಿಕಾ ಶಾಸನಗಳಂತಹವು ಜನರ ಕೈ ಬಾಯಿಗಳನ್ನು ಕಟ್ಟಿದ್ದವು. ಬ್ಯಾನರ್ಜಿಯವರು “ಹಿಂದೂ ಪೇಟ್ರಿಯಾಟ್‌” ಪತ್ರಿಕೆಯ ಲಂಡನ್‌ ಬಾತ್ಮಿದಾರರೂ ಆಗಿದ್ದರು. ಅದೇ ಪತ್ರಿಕೆಯ ಪರವಾಗಿ ದೆಹಲಿ ದರ್ಬಾರಿಗೆ ಹೋದ ಸುರೇಂದ್ರನಾಥರು “ಪ್ರೆಸ್‌ ಅಸೋಸಿಯೇಷನ್‌” ಎಂಬ ಸಂಸ್ಥೆಯನ್ನು ಸಂಘಟಿಸಿದರು. ಸಂಘದ ಪರವಾಗಿ ಕೆಲವು ಪತ್ರಿಕೋದ್ಯಮಿಗಳೊಡನೆ ವೈಸರಾಯನನ್ನು ಭೇಟಿಮಾಡಿ, ಪತ್ರಿಕೆಗಳ ಸ್ವಾತಂತ್ರ್ಯಕ್ಕೆ ಭಂಗ ತರಬಾರದು ಎಂದು ವಾದಿಸಿದರು. ಹೀಗೆ ಭಾರತದ ಪತ್ರಿಕೋದ್ಯಮಿಗಳನ್ನು ಮೊಟ್ಟ ಮೊದಲ ಬಾರಿಗೆ ಒಗ್ಗೂಡಿಸಿದ ಕೀರ್ತಿ ಸುರೇಂದ್ರನಾಥ ಬ್ಯಾನರ್ಜಿಯವರದು.  ಇಷ್ಟಾದರೂ ವೈಸರಾಯ್‌ ೧೮೭೮ರಲ್ಲಿ ಪತ್ರಿಕೆಗಳ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ಕಸಿದುಕೊಳ್ಳುವ ಕಾನೂನನ್ನು ಬಹುಮಟ್ಟಿಗೆ ಕಸಿದುಕೊಳ್ಳುವ ಕಾನೂನನ್ನು ಮಾಡಿಯೇ ಮಾಡಿದ. ೧೮೮೦ರಲ್ಲಿ ಬ್ರಿಟಿಷ್‌ ಚುನಾವಣೆಯ ವೇಳೆ, ಇಂಡಿಯನ್‌ ಅಸೋಸಿಯೇಷನ್‌ ಪರವಾಗಿ ಲಾಲ ಮೋಹನ ಘೋಷರನ್ನು ಇಂಗ್ಲೆಂಡಿಗೆ ಕಳುಹಿಸಿ ಭಾರತದ ಭಾವನೆಗಳನ್ನು ಅಲ್ಲಿ ವಿಧಿತಗೊಳಿಸುವ ಏರ್ಪಾಟನ್ನೂ ಮಾಡಿದರು ಸುರೇಂದ್ರನಾಥರು. ಬ್ರಿಟನ್‌ನಲ್ಲಿ ಉದಾರಮತವಾದಿಗಳು ಗೆದ್ದು ಬಂದರು. ಭಾರತವನ್ನು ಕುರಿತು ಸಹಾನುಭೂತಿ ಹೊಂದಿದ ಗ್ಲಾಡ್‌ಸ್ಟನ್‌ ಪ್ರಧಾನಿಯಾದ. ಆತ ಲಾರ್ಡ ರಿಪ್ಪನ್‌ನನ್ನು ವೈಸರಾಯ್‌ಯನ್ನಾಗಿ ಕಳಿಸಿದ. ರಿಪ್ಷನ್‌ ಉದಾರವಾದಿಯಾಗಿದ್ದ ಕಾರಣ ಭಾರತದ ಭಾವನೆಗಳನ್ನು ಅರಿಯಬಲ್ಲವನಾಗಿದ್ದ. ಆದುದರಿಂದಲೇ ಆತ ಭಾಷಾಪತ್ರಿಕೆಗಳ ಶಾಸನವನ್ನು ಹಿಂತೆಗೆದುಕೊಂಡ. ಇದಕ್ಕೆಲ್ಲ ಬ್ಯಾನರ್ಜಿಯವರ ಸತತ ಪ್ರಯತ್ನ ಕಾರಣ ಎಂಬುದನ್ನು ಮರೆಯುವಂತಿಲ್ಲ.

ನಂಬಿಕೆ

ಭಾರತೀಯರು ತಮ್ಮನ್ನು ತಾವೇ ಆಳಿಕೊಳ್ಳುವ ಅಧಿಕಾರವಿರಬೇಕು ಎಂದು ಬ್ಯಾನರ್ಜಿಯವರ ಗುರಿ. ಬ್ರಿಟಿಷರ ನ್ಯಾಯನಿಷ್ಠೆಯಲ್ಲಿ ಅವರಿಗೆ ನಂಬಿಕೆ. ಆದುದರಿಂದಲೇ ಅವರು ಕಾನೂನುಗಳ ಪ್ರಕಾರವೇ ಹೋರಾಟ ನಡೆಸಬೇಕು, ಭಾರತೀಯರು ಕೇಳುವುದು ನ್ಯಾಯ ಎಂದು ಬ್ರಿಟಿಷರಿಗೆ ತೋರಿದರೆ ಅವರು ಒಪ್ಪಿಕೊಳ್ಳುತ್ತಾರೆ ಎಂದೂ ನಂಬಿಕೊಂಡಿದ್ದರು. ತನ್ನ ಗುರಿಯನ್ನು ಸಾಧಿಸಲು ಸ್ಥಳೀಯ ಆಡಳಿತದಲ್ಲಿ -ಗ್ರಾಮ, ನಗರ ಇವುಗಳ ಆಡಳಿತದಲ್ಲಿ ಭಾರತೀಯರಿಗೆ ಅಧಿಕಾರ ಬರುವುದು ಮೊದಲ ಮೆಟ್ಟಿಲು ಎಂಬುದು ಅವರ ಮತ. ನಮ್ಮನ್ನು ನಾವು ಆಳಿಕೊಳ್ಳುವ ಅಧಿಕಾರವನ್ನು ಹಂತ ಹಂತವಾಗಿ ಗಳಿಸಬಹುದು ಎಂದವರ ಭಾವನೆ. ಆದುದರಿಂದಲೇ ಅವರು ಬ್ರಿಟಿಷರು ಕಾಲಕಾಲಕ್ಕೆ ಮಾಡುವ ಸುಧಾರಣೆಗಳನ್ನು ತಿಕ್ಕಿ – ತೀಡಿ ಸ್ವೀಕರಿಸಬೇಕೆಂದು ವಾದಿಸುತ್ತಿದ್ದರು. ಈ ನಿಟ್ಟಿನಲ್ಲಿ ಅವರು ಚುನಾಯಿತ ನಗರಸಭೆಗಳಿರಬೇಕೆಂದು ಪ್ರತಿಪಾದಿಸುತ್ತಿದ್ದರು. ಕೊನೆಯ ತನಕವೂ ಅವರದು ಇದೇ ನಿಲುವು. ಕಾಲ ಮಾರ್ಪಾಟಾಗುತ್ತಲೇ ಇತ್ತು. ಅವರು ಮಾರ್ಪಾಟಾಗಲಿಲ್ಲ. ಈ ನಿಲುವಿನಿಂದಾಗಿ ಅವರು ಜನರಿಂದ ದೂರವಾಗಬೇಕಾಗಿ ಬಂದರು ಜಗ್ಗಲಿಲ್ಲ. ಆದುದರಿಂದಲೇ ಅವರು ಒಮ್ಮೆ ಜನರ ಅನಭಿಷಿಕ್ತ ದೊರೆಯೆನಿಸಿದರು; ಒಮ್ಮಡ ‘ಅಧಿಕಾರಪ್ರಿಯ’ರೆಂಬ ನಿಂದೆಗೂ ಗುರಿಯಾದರು. ಅವರು ಹೂಮಾಲೆಗಳ ಸುರಿಮಳೆಯನ್ನೂ ಸ್ವೀಕರಿಸಿದ್ದರು; ಒಂದು ಹಂತದಲ್ಲಿ ಚಪ್ಪಲಿ ತೂರಾಟಕ್ಕೂ ಗುರಿಯಾದರು. ಹೊಸ ವಿಚಾರಗಳ ಅಲೆಯಲ್ಲಿ ಜನ ತೀವ್ರವಾದಿಗಳತ್ತ ಸರಿದರೂ ಅವರು ಮಾತ್ರ ತಮ್ಮ ಧೃಢ ನಿಲುವಿನಿಂದ ಅತ್ತಿತ್ತ ಸರಿದಿಲ್ಲ. ಹಾಗೆಂದು ಅವರು ಬರೀ ಮಂದವಾದಿಗಳೂ ಅಲ್ಲ. ತಕ್ಕ ಸಮಯದಲ್ಲಿ ಧೀರ ಹೋರಾಟಗಾರರೂ ತೀವ್ರವಾದಿಗಳೂ ಆಗಿರುತ್ತಿದ್ದರು. ಒಮ್ಮೆ ಇವರನ್ನು ಗಡೀಪಾರು ಮಡಬೇಕೆಂದೂ ಬ್ರಿಟಿಷರು ಯೋಚಿಸಿದ್ದರು.

ಜನಾಭಿಪ್ರಾಯದ ಪ್ರತಿಬಿಂಬ

ಜನತೆಯ ಅಭಿಪ್ರಾಯವನ್ನು ಪ್ರತಿಬಿಂಬಿಸಲಿಕ್ಕಾಗಿ ಸುರೇಂದ್ರನಾಥರು ೧೮೭೯ರಲ್ಲಿ “ಬಂಗಾಳೀ” ಎಂಬ ಪತ್ರಿಕೆಯ ಮಾಲಿಕತ್ವವನ್ನು ವಹಿಸಿಕೊಂಡರು. ಆಗ ಇದು ವಾರಪತ್ರಿಕೆ. ಇದನ್ನು ಕೊಳ್ಳುವುದರಲ್ಲಿ ಅವರ ಒಂದೇ ಉದ್ದೇಶ ಜನಸೇವೆ. ಪತ್ರಿಕೆಯಿಂದ ತುಂಬ ನಷ್ಟವೇ ಆಗುತ್ತಿತ್ತು. ಆದರೂ ಅವರು ಪತ್ರಿಕೆಯನ್ನು ನಡೆಸಿದರು. ಮುಂದೆ (೧೯೦೦-೧೯೦೧) ಅದನ್ನು ದಯನಿಕವಾಗಿ ಮಾರ್ಪಡಿಸಿದರು. ಸುಮಾರು ನಲವತ್ತು ವರ್ಷಗಳ ಕಾಲ ಅವರು ಆ ಪತ್ರಿಕೆಯ ಸಂಪಾದಕರಾಗಿದ್ದರು. ಗಾಂಭೀರ್ಯ, ನ್ಯಾಯ ಇವೆರಡು ಸದಾ ಅವರ ಮುಂದಿರುತ್ತಿದ್ದ ಗುರಿಗಳು. ಜನತೆಯ ತಕ್ಕ ಸಂಘಟನೆಯನ್ನೇರ್ಪಡಿಸುವಲ್ಲಿ, ಜನತಾ ಜಾಗೃತಿ ನಿರ್ಮಿಸುವಲ್ಲಿ “ಬಂಗಾಳೀ” ವಹಿಸಿದ ಪಾತ್ರ ಅಮೋಘ. ಒಂದು ಪ್ರಕರಣದಲ್ಲಿ ಬರೆದ ಸಂಪದಾಕೀಯ ಲೇಖನ ಆಳರಸರನ್ನು ಕೆರಳಿ ಬ್ಯಾನರ್ಜಿಯವರನ್ನು ಎರಡು ತಿಂಗಳು ಸೆರೆಮನೆವಾಸಕ್ಕೆ ಗುರಿಮಾಡಿತು. ವಿಷಯ ಸಣ್ಣದು. ಕಲ್ಕತ್ತ ಹೈಕೋರ್ಟಿನಲ್ಲಿ ನ್ಯಾಯಾಧೀಶ ನಾವಿಸ್‌ ಯಾವುದೋ ಒಂದು ಪ್ರಕರಣದಲ್ಲಿ ಸಾಲಿಗ್ರಾಮವನ್ನು ಕೋರ್ಟಿಗೆ ಹಾಜರುಪಡಿಸಲು ಆದೇಶವಿತ್ತನು. ಸಾಲಿಗ್ರಾಮವು ಪೂಜಾವಸ್ತುವಾಗಿದ್ದು ಅದನ್ನು ಕೋರ್ಟಿಗೆ ಹಾಜರುಪಡಿಸಲು ವಿಧಿಸಿದ ಆಜ್ಞೆ ಜನರನ್ನು ಕೆರಳಿಸಿತು. ಸುರೇಂದ್ರನಾಥರು “ಬಂಗಾಳೀ” ಯಲ್ಲಿ ಜನರ ಮನಸ್ಸನ್ನು ಪ್ರತಿಬಿಂಬಿಸಿ ಸಂಪಾದಕೀಯ ಬರೆದರು. ಮಾತು ಮೊನೆಯಾಗಿತ್ತು. ನ್ಯಾಯಾಧೀಶ ರೇಗಿದ. ಸುರೇಂದ್ರನಾಥರು ನ್ಯಾಯಾಲಯಕ್ಕೆ ಅಪಮಾನ ಮಾಡಿದರೆಂದು ವಿಚಾರಣೆ ನಡೆಯಿತು. ಅವರಿಗೆ ಎರಡು ತಿಂಗಳು ಸೆರೆಮನೆವಾಸದ ಶಿಕ್ಷೆ ವಿಧಿಸಲಾಯಿತು. ಇದು ಜನರಲ್ಲಿ ಮತ್ತಷ್ಟು ಕ್ರೋಧವನ್ನು ಕೆರಳಿಸಿತು. ಜನಪ್ರಿಯ ನಾಯಕನಿಗೆ ವಿಧಿಸಿದ ಈ ಶಿಕ್ಷೆಗೆ ಭಾರತದಾದ್ಯಂತ ಪ್ರತಿಭಟನೆ ವ್ಯಕ್ತಪಟ್ಟಿತು. ಕಲ್ಕತ್ತಾದಲ್ಲಿ ಹರತಾಳ, ವಿದ್ಯಾರ್ಥಿಗಳ ಪ್ರತಿಭಟನಾ ಚಳುವಳಿ ನಡೆದವು. ಬ್ರಿಟಿಷರೇ ನಡೆಸುತ್ತಿದ್ದ “ಸ್ಟೇಟ್ಸ್‌ಮನ್‌” ಪತ್ರಿಕೆಯೂ ಶಿಕ್ಷೆಯನ್ನು ಖಂಡಿಸಿತು. ಆ ಕಾಲದಲ್ಲಿ ಸಾರ್ವಜನಿಕ ಕಾರಣಕ್ಕಾಗಿ ಜೈಲಿಗೆ ಸೇರಿದವರು ಇಬ್ಬರೆ; ೧೮೮೨ರಲ್ಲಿ ತಿಲಕರು, ೧೮೮೩ರಲ್ಲಿ ಸುರೇಂದ್ರನಾಥ ಬ್ಯಾನರ್ಜಿ.

೧೮೮೩ರ ಜುಲೈ ೪ ರಂದು ಸುರೇಂದ್ರನಾಥರ ಬಿಡುಗಡೆಯಾಯಿತು. ಕೂಡಲೆ ಅವರು ದೇಶದ ಕೆಲಸಕ್ಕೆ ಧುಮುಕಿದರು. ಭಾರತೀಯರಿಗೆ ಹೆಚ್ಚಿನ ಅಧಿಕಾರ ಸಿಗಬೇಕು, ಇದಕ್ಕಾಗಿ ಭಾರತದಲ್ಲಿಯೂ ಇಂಗ್ಲೆಂಡಿನಲ್ಲಿಯೂ ಚಳುವಳಿಯಾಗಬೇಕು, ಭಾರತೀಯರಲ್ಲಿ ಚೈತನ್ಯವನ್ನು ತುಂಬಬೇಕು, ಭಾರತದ ಮತ್ತು ಬ್ರಿಟನ್‌ನ ಅಧಿಕಾರಿಗಳಿಗೆ ಜನರ ಬಯಕೆಯ ಕೇಳಿಕೆಯ ಅರಿವಾಗಬೇಕು, ಭಾರತದ ಸ್ಥಿತಿಗತಿ ಬ್ರಿಟನ್‌ನ ಜನ ಸಾಮಾನ್ಯರಿಗೂ ರಾಜಕೀಯ ನಾಯಕರಿಗೂ ಅರ್ಥವಾಗಬೇಕು- ಇದು ಅವರ ಗುರಿ. ಆದರೆ ಇದಕ್ಕೆ ಹಣ ಬೇಕಲ್ಲವೇ? ಅವರೂ ಅವರ ಗೆಳೆಯರೂ ಇದಕ್ಕಾಗಿ ಕೆಲಸ ಮಾಡಿ ೧೮೮೩ರ ಜುಲೈ ೧೭ ರಂದು ಕಲ್ಕತ್ತೆಯಲ್ಲಿ ಭಾರಿ ಸಭೆಯನ್ನು ನಡೆಸಿದರು. ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರಿದ ಈ ಸಭೆಯಲ್ಲಿ ಭಾರತೀಯರ ಚಳುವಳಿಗಾಗಿ ಹಣ ಕೂಡಿಸಲು ತೀರ್ಮಾನವಾಯಿತು. ಸುರೇಂದ್ರನಾಥ ಬ್ಯಾನರ್ಜಿಯವರೇ ಕೋಶಾಧಿಕಾರಿಗಳಾದರು.

ಕಾಂಗ್ರೆಸ್‌ ಉದಯ

ಇಂಡಿಯನ್‌ ಅಸೋಸಿಯೇಷನ್‌ನ ಆಶ್ರಯದಲ್ಲಿ ಸುರೇಂದ್ರನಾಥರು ೧೮೮೩ರಲ್ಲಿ ಪ್ರಥಮ ರಾಷ್ಟ್ರೀಯ ಸಮ್ಮೇಳನವೊಂದನ್ನು ಕರೆದರು. ಭಾರತದ ಎಲ್ಲಾ ಭಾಗಗಳಿಂದ ಪ್ರತಿನಿಧಿಗಳು ಬಂದಿದ್ದರು. ಒಂದು ದೃಷ್ಟಿಯಿಂದ ಅಖಿಲ ಭಾರತ ಕಾಂಗ್ರೆಸಿನಿಂದ ಒಂದು ರಾಷ್ಟ್ರೀಯ ವೇದಿಕೆ ರೂಪುಗೊಳ್ಳಲು ಬ್ಯಾನರ್ಜಿಯವರ ಈ ಪ್ರಯತ್ನವೇ ಕಾರಣವಾಯಿತು. ಭಾರತದ ರಾಷ್ಟ್ರೀಯ ಕಾಂಗ್ರೆಸಿನ ಜನಕರು ಯಾರು ಎಂಬ ಬಗ್ಗೆ ವಿವಾದವಿರಬಹುದಾದರೂ ಅದರ ಸಂಸ್ಥಾಪಕರಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಪ್ರಮುಖರು ಎಂಬುದರಲ್ಲಿ ವಿವಾದವಿಲ್ಲ. ಮಹಾತ್ಮಾ ಗಾಂಧಿಜಿಯವರಂತಹವರೇ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಜಾತೀಯ ಸೌಹಾರ್ದ, ಸಮಗ್ರ ಭಾರತ, ಸ್ವದೇಶೀ, ಸ್ವರಾಜ್ಯ ಮುಂತಾದ ಕಲ್ಪನೆಗಳನ್ನು ಒದಗಿಸಿದವರಲ್ಲಿ , ಈ ಮೂಲಕ ರಾಷ್ಟ್ರೀಯರನ್ನು ಚೇತರಿಸಿ ಸಂಘಟಿಸದವರಲ್ಲಿ ಪ್ರಮುಖರಾದವರೂ ಸುರೇಂದ್ರನಾಥ ಬ್ಯಾನರ್ಜಿಯವರೇ. ಮುಂದೆ ಕಾಂಗ್ರೆಸ್ಸಿನಲ್ಲಿ ತೀವ್ರವಾದಿಗಳು ಪ್ರಬಲರಾಗುವವರೆಗೆ ಕಾಂಗ್ರೆಸ್ಸಿನ ಪ್ರಧಾನ ಚೇತನ ಶಕ್ತಿಯೆನಿಸಿ ಅದನ್ನು ಬೆಳೆಸಿದವರೂ ಅವರೇ. ೧೮೯೦ರಲ್ಲಿ ಕಾಂಗ್ರೆಸ್‌ ಒಂದು ತೀರ್ಮಾನವನ್ನು ಮಾಡಿತು. ಅದರಂತೆ ಎಂಟು ಮಂದಿ ಇಂಗ್ಲೆಂಡಿಗೆ ಹೋಗಬೇಕು. ಭಾರತದಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಇಂಗ್ಲೆಂಡಿನ ಜನತೆಗೆ ವಿವರಿಸಿ ಭಾರತೀಯರಿಗೆ ಹೆಚ್ಚು ಅಧಿಕಾರ ಕೊಡುವಂತೆ ಅವರ ಮನ ಒಲಿಸಬೇಕು. ಈ ಎಂಟು ಮಂದಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ವೆಚ್ಚವನ್ನು ತಾವೇ ನಿರ್ವಹಿಸಬೇಕು. ಇದು ತೀರ್ಮಾನ. ಒಟ್ಟು ಖರ್ಚು ಸುಮಾರು ನಾಲ್ಕು ಸಾವಿರ ರೂಪಾಯಿಗಳು. ನಲವತ್ತೆರಡು ವರ್ಷ ವಯಸ್ಸಿನ  ಸುರೇಂದ್ರನಾಥರು ಇಡೀ ಜೀವಮಾನದಲ್ಲಿ ಕೂಡಿಸಿ ಇಟ್ಟಿದ್ದ ಹಣ ಹದಿಮೂರು ಸಾವಿರ ರೂಪಾಯಿಗಳು. ಇವೂ ಹೆಂಡತಿ ಸಂತೋಷದಿಂದ ಒಪ್ಪಿ ತಮ್ಮ ಆಸ್ತಿಯ ಮೂರರಲ್ಲಿ ಒಂದು ಭಾಗವನ್ನು ದೇಶಕ್ಕಾಗಿ ವೆಚ್ಚ ಮಾಡಿಬಿಟ್ಟರು. ಪುಣೆಯ ಕಾಂಗ್ರೆಸ್‌ ಅಧಿವೇಶನ (೧೮೯೫) ಮತ್ತು ಅಹಮದಾಬಾದ್‌ ಕಾಂಗ್ರೆಸ್‌ ಅಧಿವೇಶನದಲ್ಲಿ ಅವರು ಅಧ್ಯಕ್ಷರಾಗಿ ಮಾಡಿದ ಭಾಷಣಗಳು ಅಮೋಘವಾಗಿದ್ದು ಅವರ ಉತ್ಕಟ ದೇಶಾಭಿಮಾನಕ್ಕೂ ಅದ್ವಿತೀಯ ಮೇಧಾಶಕ್ತಿಗೂ ಸಾಕ್ಷಿಯಾಗಿದ್ದವು. ಕಾಂಗ್ರೆಸಿನ ಪ್ರತಿಯೊಂದು ಅಧಿವೇಶನದಲ್ಲೂ ಅವರದೇ ಪ್ರಧಾನ ಪಾತ್ರ. ರಾಷ್ಟ್ರೀಯ ಸಮಸ್ಯೆಗಳ ಕುರಿತು ಪ್ರಮುಖ ನಿರ್ಣಯಗಳನ್ನು ಮಂಡಿಸುವವರೂ ಸಮರ್ಥಿಸುವವರೂ ಅವರೇ. “ಕಾಂಗ್ರೆಸ್‌ ಹೊರಗಿನ ಪಾರ್ಲಿಮೆಂಟು” ಎಂಬ ಹೆಸರು ಗಳಿಸಿದ್ದು ಸುರೇಂದ್ರನಾಥ ಬ್ಯಾನರ್ಜಿಯವರಿಂದಲೆ.

ವಂಗ ವಿಭಜನೆಯ ಹೋರಾಟ

೧೮೮೯ರಲ್ಲಿ ವೈಸರಾಯ್‌ ಬಂದ ಲಾರ್ಡ್‌ ಕರ್ಜನ್‌ ಬುದ್ಧಿವಂತನಾದರೂ ಒರಟ. ಇದರಿಂದ ಅವನು ಭಾರತದಲ್ಲಿ ತೀರ ಅಪ್ರಿಯನಾದ. ಅವನ ಜನವಿರೋಧಿ ಕೃತ್ಯದಲ್ಲಿ ಪ್ರಧಾನವಾದದ್ದು ವಂಗ ವಿಭಜನೆ. ಬಂಗಾಳಿ ಮಾತಾಡುವ ಮೂರು ಜಿಲ್ಲೆಗಳನ್ನು ಅಸ್ಸಾಮಿಗೆ ಸೇರಿಸಿದಾಗಲೇ ಬಂಗಾಳಿಗಳಲ್ಲಿ ಅತೃಪ್ತಿ ಉಂಟಾಗಿತ್ತು. ಆದರೆ ಅದನ್ನು ಬಲವಾಗಿ ಪ್ರಕಟಿಸಲಿಲ್ಲ. ಕರ್ಜನ್‌ ಬಂದು ಬಂಗಾಳವನ್ನು ತುಂಡರಿಸಿ ಪೂರ್ವ ಬಂಗಾಳ ಎಂದು ಪ್ರತ್ಯೇಕ ಪ್ರಾಂತವನ್ನು ನಿರ್ಮಿಸಿದಾಗಲಂತೂ (೧೯೦೫) ಬಂಗಾಳಿಗಳು ವಿಕ್ಷುಬ್ಧರಾದರು. ಸುರೇಂದ್ರನಾಥರ ಬ್ಯಾನರ್ಜಿಯವರು ಅಗ್ರನಾಯಕರಾಗಿ ನಿಂತು ವಂಗ ವಿಭಜನೆಯ ವಿರುದ್ಧ ದೊಡ್ಡ ಹೋರಾಟವನ್ನೇ ಹೂಡಿದರು. ಬಂಗಾಳವು ಗಾತ್ರದಲ್ಲಿ ಬಹು ದೊಡ್ಡದಾಗಿದ್ದು ಆಡಳಿತಕ್ಕೆ ಕಷ್ಟವಾಗುವ ಕಾರಣ ಆಡಳಿತದ ಸೌಕರ್ಯ ದೃಷ್ಟಿಯಿಂದ ಎರಡು ಪ್ರಾಂತಗಳನ್ನಾಗಿ ಮಾಡಲಾಯಿತು. ಎಂಬುದು ಆಡಳಿತದವರ ವಾದ. ಆದರೆ ಒಳಕಾರಣ ಬೇರೆಯೇ ಇತ್ತು. ಮುಸ್ಲಿಮರು ಹೆಚ್ಚಾಗಿರುವ ಭಾಗವನ್ನು ಪ್ರತ್ಯೇಕಿಸಿ ಒಂದು ಹೊಸ ಪ್ರಾಂತ ರಚಿಸಲಾಗಿತ್ತು. ಇದು ಬ್ರಿಟಿಷರ ಒಡೆದು ಆಳುವ ನೀತಿಯ ಗತ್ತು ಗಾರಿಕೆಯಲ್ಲಿದೆ ಬೇರೇನೂ ಅಲ್ಲ. ಜಾತೀಯ ಸೌಹಾರ್ದವನ್ನು ಸಾಧಿಸುತ್ತಿದ್ದ ಬ್ಯಾನರ್ಜಿಯವರು ಇದರ ಮರ್ಮವನ್ನರಿತು ವಂಗ ವಿಭಜನೆಯಿಂದಾದ ತಪ್ಪನ್ನು ತಿದ್ದುವಂತೆ ಮಾಡುವುದಾಗಿ ಪಣ ತೊಟ್ಟರು. ವಂಗ ವಿಭಜನೆ ಬಂಗಾಳಿಗಳ ಪ್ರಶ್ನೆಯಾಗಿ ಉಳಿಯಲಿಲ್ಲ ; ಅದು ರಾಷ್ಟ್ರೀಯ ಪ್ರಶ್ನೆಯಾಗಿ ಭಾರತದಾದ್ಯಂತ ಅದನ್ನು ವಿರೋಧಿಸಲಾಯಿತು.

ತಪ್ಪೇನು?

ವಂಗ ವಿಭಜನೆಯನ್ನು ವಿರೋಧಿಸುವ ಕಾಲದಲ್ಲಿ ಸುರೇಂದ್ರನಾಥರ ಕೆಚ್ಚು, ಚಟುವಟಿಕೆ ಇವು ಎಲ್ಲರನ್ನೂ ಬೆರಗುಗೊಳಿಸಿದವು. ೧೯೦೬ರಲ್ಲಿ ಬಂಗಾಳದ ಬಾರಿಸಾಲ್‌ ಎಂಬಲ್ಲಿ ಬಂಗಾಳ ಪ್ರಾಂತೀಯ ಸಮ್ಮೇಳನ ನಡೆಯಿತು. “ವಂದೇ ಮಾತರಂ” ಎನ್ನುವುದೇ ಬ್ರಿಟಿಷ್ ಸರ್ಕಾರದ ಕಣ್ಣಿನಲ್ಲಿ ಮಹಾಪರಾಧ. ಸಮ್ಮೇಳನದ ಪ್ರತಿನಿಧಿಗಳ ಮೆರವಣಿಗೆ ಹೊರಟಿತು. ಅವರು “ವಂದೇ ಮಾತರಂ” ಎಂದು ಘೋಷಿಸುವ ಮೊದಲೇ ಪೋಲೀಸರು ಲಾಠಿ ಪ್ರಹಾರ ಪ್ರಾರಂಭಿಸಿದರು. ಜನರ ರಕ್ತ ಸುರಿಯಿತು. ಆದರೆ ಲಾಠಿ ಏಟು ಹೆಚ್ಚಾದಂತೆ “ವಂದೇ ಮಾತರಂ” ಘೋಷಣೆಯೂ ಆಕಾಶವನ್ನು ಮುಟ್ಟಿತು. ಪೋಲೀಸ್ ಸೂಪರಿಂಟೆಂಡೆಂಟ್‌ ಆಗಿದ್ದ ಕೆಂಪ್‌ ಎಂಬಾತ ಸುರೇಂದ್ರನಾಥರ ಕಣ್ಣಿಗೆ ಕಾಣಿಸಿದ. ಅವನನ್ನು ತಡೆದು ನಿಲ್ಲಿಸಿ ಅವರೆಂದರು : “ಈ ಜನರನ್ನು ಏಕೆ ಬಡಿಯುತ್ತೀರಿ” ಅವರು ಏನು ಮಾಡಿದ್ದರೂ ಅದರ ಹೊಣೆ ನನ್ನದು. ಬೇಕಾದರೆ ನನ್ನನ್ನು ಬಂಧಿಸಿ.” ಪೋಲೀಸರು ಅವರನ್ನು ಬಂಧಿಸಿದರು. ಅಂದು ದಸ್ತಗಿರಿ ಆದವರು ಅವರೊಬ್ಬರೇ.

ಬ್ಯಾನರ್ಜಿಯವರನ್ನು ಮ್ಯಾಜಿಸ್ಟ್ರೇಟರ ಬಳಿಗೆ ಕರೆದುಕೊಂಡು ಹೋದರು. ಬ್ಯಾನರ್ಜಿ ಅಲ್ಲಿದ್ದ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೋದಾಗ ಅಧಿಕಾರಿ, “ನೀವು ಸೆರೆಯಾಳು, ನನ್ನ ಮುಂದೆ ಕುಳಿತುಕೊಳ್ಳಬಾರದು” ಎಂದ.

ಬ್ಯಾನರ್ಜಿ ಹೇಳಿದರು : “ನಿಮ್ಮಿಂದ ಅವಮಾನ ಮಾಡಿಸಿಕೊಳ್ಳಲು ಬಂದಿಲ್ಲ. ನನ್ನನ್ನು ನೀವು ಗೌರವದಿಂದ ಕಾಣಬೇಕು.”

“ನಿಮ್ಮ ಈ ಮಾತುಗಳಿಗೆ ನೀವು ಕ್ಷಮಾಪಣೆ ಕೇಳಬೇಕು” ಎಂದ ಅಧಿಕಾರಿ.

“ನಾನು ತಪ್ಪು ಮಾತನಾಡಿಲ್ಲ. ಕ್ಷಮೆ ಕೇಳುವುದಿಲ್ಲ” ಎಂದರು ಸುರೇಂದ್ರನಾಥರು.

ನ್ಯಾಯಾಲಯಕ್ಕೆ ಅಪಮಾನ ಮಾಡಿದರೆಂದು ಇನ್ನೂರು ರೂಪಾಯಿ ಜುಲ್ಮಾನೆ ಮತ್ತು ಕಾನೂನಿಗೆ ವಿರುದ್ಧವಾಗಿ ಮೆರವಣಿಗೆ ನಡೆಸಿದರೆಂದು ಇನ್ನೂರು ರೂಪಾಯಿ ಜುಲ್ಮಾನೆಯಾಯಿತು. ಬ್ಯಾನರ್ಜಿಯವರಿಗೆ.

ಕಲ್ಕತ್ತಾದಲ್ಲಿ ಸೇರಿದ ಸಭೆಯಲ್ಲಿ ಬ್ಯಾನರ್ಜಿಯವರು ಬ್ರಿಟಿಷರ ಬಹಿಷ್ಕಾರ ಮತ್ತು ಸ್ವದೇಶಿ ಪ್ರೊತ್ಸಾಹದ ಮಂತ್ರೋಪದೇಶ ಮಾಡಿ ಚಳವಳಿಗೆ ಹೊಸ ರೂಪು ನೀಡಿದರು. ಇದು ಅವರ ತಾತ್ಕಾಲಿಕ ಕ್ರಮವಾದರೂ ಮುಂದೆ ಬ್ರಿಟಿಷ್ ವಸ್ತುಗಳ ಬಹಿಷ್ಕಾರ ಮತ್ತು ಸ್ವದೇಶಿ ಚಳವಳಿ ಕಾಂಗ್ರೆಸಿನ ಧೋರಣೆಯಾಯಿತು ಎಂಬುದು ಗಮನಾರ್ಹ. ಇಂಪೀರಿಯಲ್‌ ಪ್ರೆಸ್‌ ಕಾನ್‌ಫರೆನ್ಸಿಗೆ ಬಂದ ಆಹ್ವಾನವನ್ನು ಸ್ವೀಕರಿಸಿ ಅವರು ೧೯೦೯ರಲ್ಲಿ ಲಂಡನ್ನಿಗೆ ತೆರಳಿದಾಗ ಅಲ್ಲಿ ತಮ್ಮ ಅಪೂರ್ವ ಪಾಂಡಿತ್ಯ – ಪ್ರತಿಭೆಗಳಿಂದ ಎಲ್ಲರ ಮನ್ನಣೆಗಳಿಸುವುದರೊಂದಿಗೆ ವಂಗ ವಿಭಜನೆಯ ಕುರಿತ ಜನಾಭಿಪ್ರಾಯವನ್ನು ಪ್ರಚುರಗೊಳಿಸಿದರು.

ಬ್ಯಾನರ್ಜಿಯವರ ಅಖಂಡವಾದ ಐತಿಹಾಸಿಕ ಹೋರಾಟದ ಫಲವಾಗಿ ೧೯೧೦ರಲ್ಲಿ ಸರ್ಕಾರ ಎರಡು ಹೋಳಾಗಿದ್ದ ಬಂಗಾಳವನ್ನು ಮತ್ತೆ ಒಂದು ಗೂಡಿಸಿತು. ಜನತೆಗೆ ಪ್ರಚಂಡ ವಿಜಯ ದೊರಕಿತು. ಇದು ಬ್ಯಾನರ್ಜಿಯವರ ಪ್ರಚಂಡ ವಿಜಯವೂ ಹೌದು.

ಅನ್ಯಾಯಕ್ಕೆ ಪ್ರತಿಭಟನೆ

ಜನತೆಗೆ ಅನ್ಯಾಯವಾಗುವುದನ್ನು, ಅವಮಾನವಾಗುವುದನ್ನು ಅವರು ಎಂದೂ ಸಹಿಸುತ್ತಿರಲಿಲ್ಲ. ಅವರ ಜೀವಮಾನದುದ್ದಕ್ಕೂ ಜನರ ಗೌರವ ಮತ್ತು ನ್ಯಾಯ ಕಾಪಾಡಲು ಹೋರಾಡಿದರು. ಅವರ ಜೀವನದಲ್ಲಿ ಇದಕ್ಕೆ ಬೇಕಾದಷ್ಟು ನಿದರ್ಶನಗಳಿವೆ.

ಬರಾಕ್‌ಪುರದ ಡಾ. ಸುರೇಶಚಂದ್ರ ಸರಕಾರ್ ಸುಪ್ರಸಿದ್ಧ ವೈದ್ಯರು. ಅವರು ಸುರೇಂದ್ರನಾಥ ಬ್ಯಾನರ್ಜಿಯವರ ಮಿತ್ರರು. ಒಂದು ರಾತ್ರಿ ಅವರು ತಮ್ಮ ಕೆಲಸ ಮುಗಿಸಿ ಚಿಕಿತ್ಸಾಲಯದಿಂದ ಮನೆಗೆ ಹೊರಡಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಕುಡಿದು ಮತ್ತರಾದ ಮೂವರು ಐರೋಪ್ಯ ಸಿಪಾಯಿಗಳು ಅಲ್ಲಿಗೆ ಬಂದರು. ಏನೋ ಮಾತಿಗೆ ಜಗಳವಾಡಿ ಡಾ.ಸರಕಾರ್‌ರನ್ನು ಚೆನ್ನಾಗಿ  ಥಳಿಸಿದರು. ಡಾಕ್ಟರರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕೆಲವೇ ಕ್ಷಣಗಳಲ್ಲಿ ಅವರು ಅಸುನೀಗಿದರು.

 

"ಈ ಜನರನ್ನು ಏಕೆ ಬಡಿಯುತ್ತೀರಿ? ಅವರು ಏನು ಮಾಡಿದ್ದರೂ ಅದರ ಹೊಣೆ ನನ್ನದು"

ಈ ಘಟನೆಯಿಂದ ಸುರೇಂದ್ರನಾಥ ಬ್ಯಾನರ್ಜಿಯವರು ಕೆರಳಿ ಜ್ವಾಲಾಮುಖಿಯಾದರು. ತಪ್ಪಿತಸ್ಥರಿಗೆ ತಕ್ಕ ದಂಡನೆಯಾಗಬೇಕೆಂದು ಕೇಳಿದರು. ಆಗಿನ ಕಾನೂನಿನಂತೆ, ಬ್ರಿಟಿಷರವನು ತಪ್ಪು ಮಾಡಿದರೆ ಬ್ರಿಟಿಷರೇ ಅವನ ವಿಚಾರಣೆ ಮಾಡಬೇಕಾಗಿತ್ತು ; ಭಾರತೀಯ ನ್ಯಾಯಾಧೀಶರು ಮಾಡುವಂತಿರಲಿಲ್ಲ. ಅವನು ತಪ್ಪಿತಸ್ಥ ಹೌದೇ ಅಲ್ಲವೇ ಎಂದು ಬ್ರಿಟಿಷರೇ ಕೆಲವರು ವಿಚಾರಣೆ ಕೇಳಿ (ಇವರಿಗೆ ಜ್ಯೂರಿಗಳು ಎಂದು ಹೆಸರು) ತೀರ್ಮಾನಿಸಬೇಕಾಗಿತ್ತು. ಇಂತಹ ನ್ಯಾಯಾಲಯದಲ್ಲಿ ಸುರೇಂದ್ರನಾಥರಿಗೆ ನ್ಯಾಯ ದೊರೆಯುವುದು ಸುಲಭವಿರಲಿಲ್ಲ. ಆದರೂ ಅವರು ಅದಕ್ಕಾಗಿ ಪಟ್ಟು ಹಿಡಿದು ಶ್ರಮಿಸಿದರು. ಬಂಗಾಳದ ಲೆಫ್ಟಿನೆಂಟ್‌ ಗವರ್ನರ್‌ನ್ನು ಭೇಟಿಯಾಗಿ ನ್ಯಾಯ ದೊರಕಿಸುವಂತೆ ಮನವಿ ಮಾಡಿಕೊಂಡರು. ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಈ ವಿಚಾರವು ಪ್ರಕಟವಾಗುವಂತೆ ಮಾಡಿದರು. ಇದರಿಂದಾಗಿ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲೂ ಇದರ ಪ್ರಸ್ತಾಪ ಬಂತು. ಅಪರಾಧಿಗಳ ವಿಚಾರಣೆ ನಡೆಸುವಂತೆ ಇಂಗ್ಲೆಂಡಿನಲ್ಲಿ ಭಾರತ ಸರ್ಕಾರಕ್ಕೆ ನಿರ್ದೇಶನವೂ ಬಂತು. ಇದರ ಫಲವಾಗಿ ಮೂವರು ಅಪರಾಧಿಗಳ ವಿಚಾರಣೆ ಜರುಗಿತು. ಅವರು ಕೊಲ್ಲಬೇಕೆಂದು ಕೊಲ್ಲಲಿಲ್ಲ. ಆದರೆ ಅವರ ಹೊಡೆತದಿಂದ ಡಾಕ್ಟರ್ ಸರರ್ಕಾರರು ಸತ್ತರು ಎಂದು ನ್ಯಾಯಾಧೀಶರು ತೀರ್ಮಾನಿಸಿ ಅವರಿಗೆ ಶಿಕ್ಷೆ ವಿಧಿಸಿದರು.

ಇಂತಹುದೇ ಇನ್ನೊಂದು ಪ್ರಕರಣದಲ್ಲೂ ಸುರೇಂದ್ರನಾಥರು ಭಾರತೀಯನೊಬ್ಬನ ಸಾವಿಗೆ ಕಾರಣರಾದ ಇಬ್ಬರು ಐರೋಪ್ಯರ ವಿರುದ್ಧ ಲೆಫ್ಟಿನೆಂಟ್‌ ಗವರ್ನರರವರೆಗೆ ದೂರನ್ನು ಒಯ್ದು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಒತ್ತಾಯ ಮಾಡಿದ್ದರು. ಅಪರಾಧಿಗಳಲ್ಲಿ ಒಬ್ಬನು ದಕ್ಷಿಣ ಆಫ್ರಿಕಾಕ್ಕೆ ಹೊರಟು ಹೋಗಿದ್ದ. ಇನ್ನೊಬ್ಬನಿಗೆ ವಿಚಾರಣೆಯಾಗಿ ಶಿಕ್ಷೆಯಾಯಿತು. ಆಗಿನ ಕಾಲದಲ್ಲಿ ಬ್ರಿಟಿಷರ ದರ್ಪಕ್ಕೆ ಸಾಟಿಯಿರಲಿಲ್ಲ. ಇಂತಹ ಪ್ರಕರಣಗಳು ಸರ್ವಸಾಮಾನ್ಯವಾಗಿದ್ದುವು. ಇಂತಹವುಗಳನ್ನು ದಿಟ್ಟತನದಿಂದ ಎದುರಿಸಿ ಅಪರಾಧಿಗಳನ್ನು ದಂಡಿಸುವಂತೆ ಮಾಡುವುದು ಸಾಹಸವೇ ಆಗಿತ್ತು. ಆಗಿನ ಕಾಲಪರಿಸ್ಥಿತಿಯಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ದೇಶೀಯರ ಮಾನರಕ್ಷಣೆಯ ದಿಸೆಯಲ್ಲಿ ಅಪೂರ್ವ ಕೆಲಸ ಮಾಡಿದರು. ಜನರಲ್ಲಿ ಧೈರ್ಯವನ್ನೂ, ಆತ್ಮಪ್ರಜ್ಞೆಯನ್ನೂ ಬೆಳೆಸಿದರು.

ಜಾಲಿಯನ್ ವಾಲಾಬಾಗ್‌ನಲ್ಲಿ ಹತ್ಯಾಕಾಂಡವಾದಾಗ, ತಿಲಕರ ಬಂಧನವಾದಾಗ, ಡಾ. ಅನಿಬೆಸೆಂಟರ ಸೆರೆಯಾದಾಗ ಮತ್ತು ಜನತೆಯ ಹಕ್ಕುಗಳನ್ನು ನಿರ್ಲಕ್ಷಿಸಿದಾಗ ಸುರೇಂದ್ರನಾಥ ಬ್ಯಾನರ್ಜಿಯವರು ಸರ್ಕಾರದ ನೀತಿಯನ್ನು ಉಗ್ರವಾಗಿ ಖಂಡಿಸುತ್ತಿದ್ದರು. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರಭಾವ ಪ್ರಾರಂಭವಾದದ್ದು ೧೯೧೮-೧೯ರಿಂದ, ಸುರೇಂದ್ರನಾಥ ಬ್ಯಾನರ್ಜಿಯವರು ಕೆಲಸ ಮಾಡಿದ್ದು ಇದಕ್ಕೆ ಎಷ್ಟೋ ವರ್ಷಗಳ ಮೊದಲು ಎಂಬುದನ್ನು ನೆನಪಿಡಬೇಕು. ಸರ್ಕಾರವು ಅನ್ಯಾಯ ಮಾಡಿದಾಗ ಅದನ್ನು ಎದುರಿಸಬೇಕೆಂಬ ಪಾಠವನ್ನು ಕಲಿಸಿದವರೇ ಬ್ಯಾನರ್ಜಿಯವರೆಂದರೂ ಸಲ್ಲುವುದು.

ತೀವ್ರವಾದಿಗಳ ಪ್ರಾಬಲ್ಯ

ಸುರೇಂದ್ರನಾಥ ಬ್ಯಾನರ್ಜಿಯವರು ಕಾಂಗ್ರೆಸಿನ ಸಂಸ್ಥಾಪಕರಾಗಿದ್ದರೂ ೧೯೦೬ರಿಂದ ಕಾಂಗ್ರೆಸಿನಲ್ಲಿ ಹೊಸ ಗಾಳಿ ಸಂಚಾರ ಪ್ರಾರಂಭವಾಗಿ, ತೀವ್ರವಾದಿಗಳ ಪ್ರಾಬಲ್ಯ ಹೆಚ್ಚತೊಡಗಿತು. (ಭಾರತೀಯರ ಸ್ಥಿತಿಯನ್ನು ಉತ್ತಮ ಪಡಿಸಲು “ನಮಗೆ ನ್ಯಾಯ ದೊರಕಿಸಿ” ಎಂದು ಬೇಡಿ ಪ್ರಯೋಜನವಿಲ್ಲ, ಹೋರಾಟ ನಡೆಸಬೇಕು ಎನ್ನುವವರು ತೀವ್ರವಾದಿಗಳು. ಬ್ರಿಟಿಷ್‌ ಸರ್ಕಾರಕ್ಕೂ ಜನರಿಗೂ ನಮ್ಮ ಬೇಡಿಕೆ ನ್ಯಾಯ ಎಂದು ತೋರಿಸಿಕೊಟ್ಟು ಜಯಗಳಿಸಬೇಕು ಎನ್ನುವವರು ಮಿತವಾದಿಗಳು) ಸುರೇಂದ್ರನಾಥರು ಮಿತವಾದಿಗಳೆಂದು ಹೆಸರಾಗಿದ್ದರು. ಎಲ್ಲವನ್ನು ಸಂವಿಧಾನಬದ್ಧ ಮಾರ್ಗದಲ್ಲಿಯೇ ಸಾಗಿಸಬೇಕು ಎಂಬುದು ಅವರ ನಿಲುವು. ಬ್ರಿಟಿಷರನ್ನು ಪೂರ್ಣ ತೊಲಗಿಸಬೇಕೆನ್ನುವ ಕಲ್ಪನೆ ಅವರಿಗೆ ಸಮ್ಮತವಾಗಿರಲಿಲ್ಲ. ಅನ್ಯಾಯವನ್ನು ಎದುರಿಸಿಯೂ ಸಂವಿಧಾನಾತ್ಮಕ ಮಾರ್ಗಗಳಿಂದ ಹಕ್ಕುಗಳನ್ನು ಗಳಿಸಿಯೂ ಗುರಿ ಸೇರಬಹುದು ಎಂಬುದು ಅವರ ನಂಬಿಕೆ. ಅದುದರಿಂದಲೇ ಅವರು ಸರ್ಕಾರದಲ್ಲಿ ಭಾರತೀಯರಿಗೆ ಹೆಚ್ಚಿನ ಹೊಣೆಗಾರಿಕೆ ಒಪ್ಪಿಸಬೇಕೆಂದು ಸತತವಾಗಿ ಪ್ರತಿಪಾದಿಸುತ್ತಿದ್ದರು. ಮೊದಮೊದಲು ಬ್ರಿಟಿಷರು ಇದನ್ನು ಕವಿಯ ಮೇಲೆ ಹಾಕಿಕೊಳ್ಳದಿದ್ದರೂ ಕ್ರಮೇಣ ಅವರು ಇದನ್ನು ಗಮನಿಸುವುದು ಅನಿವಾರ್ಯವಾಯಿತು. ಮಾರ್ಲೆ-ಮಿಂಟೋ ಸುಧಾರಣೆಗಳು, ಮಾಂಟೆಗು ಚೆಲ್ಮ್ಸ್‌ಫರ್ಡ್‌ ಸುಧಾರಣೆಗಳು – ಇಂತಹ ಸುಧಾರಣೆಗಳನ್ನಾದರೂ ಬ್ರಿಟಿಷ್‌ ಸರ್ಕಾರ ಮಾಡಿದುದಕ್ಕೆ ಬ್ಯಾನರ್ಜಿಯವರು ಪ್ರಾರಂಭಿಸಿದ ಹೋರಾಟವೇ ಕಾರಣವಾಗಿತ್ತು. ಇವರು ಭಾರತೀಯರಿಗೆ ಸ್ವಲ್ಪ ಸ್ವಲ್ಪ ಅಧಿಕಾರವನ್ನು ನೀಡಿದ್ದರು. ಆದರೆ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಯ ಹಕ್ಕು ಕೊಟ್ಟು ಹಿಂದೂಗಳನ್ನೂ ಮುಸ್ಲಿಮರನ್ನೂ ಒಡೆಯುವ ತಂತ್ರವನ್ನು ಬ್ರಿಟಿಷರು ಅನುಸರಿಸಿದರು. ಅದುದರಿಂದಲೇ ಕಾಂಗ್ರೆಸ್ಸಿನ ತೀವ್ರಗಾಮಿಗಳಿಗೆ ಅಸಮಾಧಾನವಾಗುತ್ತಿತ್ತು. ಹೊಂದಾಣಿಕೆಯಿಂದ ಕಾರ್ಯ ಸಾಧಿಸಿಕೊಳ್ಳಬೇಕು ಎಂಬ ನಿಲುವು ವಹಿಸಿದ್ದ ಬ್ಯಾನರ್ಜಿಯವರು ಇವುಗಳನ್ನು ಟೀಕಿಸಿದರೂ ಸ್ವೀಕರಿಸಲು ಸಿದ್ಧರಾಗಿದ್ದರು. ಅದುದರಿಂದಲೇ ಅವರು ಕೌನ್ಸಿಲ್‌ಗಳ ಸದಸ್ಯರಾಗಿಯೂ ಕೊನೆಗೊಮ್ಮೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಅವರು ಸಚಿವರಾಗಿ ದೇಶದಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚು ಪ್ರಾತಿನಿಧಿಕವಾಗುವಂತೆ ಭದ್ರ ತಳಪಾಯವನ್ನು ಹಾಕಿದರು. ಲೆಜಿಸ್ಟೇಟಿವ್‌ ಕೌನ್ಸಿಲ್‌ಗಳಲ್ಲಿ ಸದಸ್ಯರಾಗಿ ಹೆಚ್ಚು ಹೊಣೆಗಾರಿಕೆ ವಹಿಸುವಂಥ ಅವಕಾಶ ನಿರ್ಮಿಸಿದರು. ಅವರದು ಗಾಢವಾದ ದೇಶಾಭಿಮಾನ; ಇದನ್ನು ತಿಳಿದಿದ್ದರೂ ಬ್ರಿಟಿಷರು ಅವರ ಸಮತೋಲನ ಬುದ್ಧಿಯನ್ನು ಗೌರವಿಸುತ್ತಿದ್ದುದರಿಂದ ಅವರ ಮಾತುಗಳಿಗೆ ಬೆಲೆಯೂ ಬರುತ್ತಿತ್ತು. ಆದರೆ ಅವರು ಅಧಿಕಾರಕ್ಕಾಗಿ ಎಂದೂ ಈ ಸ್ಥಾನಗಳನ್ನು ಏರಿರಲಿಲ್ಲ. ತಮ್ಮ ಉದ್ದೇಶಗಳಿಗೆ, ರಾಷ್ಟ್ರದ ಹಿತಾಸಕ್ತಿಗಳಿಗೆ ಹಾನಿ ಬಂದಾಗ ಅವರು ಪ್ರತಿಭಟಿಸಲು ಎಂದೂ ಹಿಂದುಳಿಯಲಿಲ್ಲ. ಒಮ್ಮೆ ಸರ್ಕಾರ ಕಲ್ಕತ್ತಾ ಕಾರ್ಪೋರೇಶನ್‌ನ ಅಧಿಕಾರವನ್ನು ಮೊಟಕುಗೊಳಿಸಿತು. ಸುರೇಂದ್ರನಾಥ ಇಪ್ಪತ್ತೇಳು ಕಾರ್ಪೋರೇಟರುಗಳಿಗೆ ರಾಜೀನಾಮೆ ನೀಡಿ ಹೊರಬಂದರು.

ರಾಜಕೀಯದಿಂದ ನಿವೃತ್ತಿ

೧೯೦೬ರಿಂದ ಕಾಂಗ್ರೆಸ್‌ ಪಕ್ಷದಲ್ಲಿ ಮಿತವಾದಿಗಳ ನಿಲುಮೆಗೆ ವಿರೋಧ ಹೆಚ್ಚುತ್ತ ಹೋಯಿತು. ತಿಲಕರ ಮತ್ತು ಚಿತ್ತರಂಜನ ದಾಸರ ಪ್ರವೇಶದಿಂದ, ಡಾ. ಅನಿಬೆಸೆಂಟರ ವಿಚಾರಗಳಿಂದ, ಮುಂದೆ ಗಾಂಧೀಜಿಯವರ ಆಗಮನದಿಂದ ಕಾಂಗ್ರೆಸ್‌ ಪಕ್ಷವು ತೀವ್ರವಾದಿಗಳ ವೇದಿಕೆಯಾಗಿ ಬೆಳೆಯಿತು. ಕಾಂಗ್ರೆಸ್‌ ಸಮ್ಮೇಳನಗಳಲ್ಲಿ ರಾಷ್ಟ್ರೀಯ ವಸ್ತು ಪ್ರದರ್ಶನಗಳನ್ನು ಏರ್ಪಡಿಸಿ ಸ್ವದೇಶಿ ಚಳವಳಿಯನ್ನು ಪುರಸ್ಕರಿಸಿದ್ದೇ ಬ್ಯಾನರ್ಜಿಯವರು. ಆದರೂ ಅವರ ಹೊಂದಾಣಿಕೆಯ ಮತ್ತು ಉದಾರನೀತಿಯ ಮಾರ್ಗವನ್ನು ಜನತೆ ಒಪ್ಪಿಕೊಳ್ಳಲಿಲ್ಲ. ಇದರಿಂದ ಒಂದು ಕಾಲದಲ್ಲಿ ಬಂಗಾಳದ ಅನಭಿಷಿಕ್ತ ದೊರೆಯನಿಸಿದ್ದ ಬ್ಯಾನರ್ಜಿಯವರು ಚಿತ್ತರಂಜನ ದಾಸರ ಎದುರು ನಿಸ್ತೇಜರಾಗುವಂತಾಯಿತು. ಕಲ್ಕತ್ತ ಕಾರ್ಪೋರೇಶನ್ನಿಗೆ ನಡೆದ ಚುನಾವಣೆಯಲ್ಲಿ ಚಿತ್ತರಂಜನ ದಾಸರ ಪಕ್ಷದವರೇ ಅತ್ಯಧಿಕ ಸಂಖ್ಯೆಯಲ್ಲಿ ಆಯ್ದು ಬಂದು ಚಿತ್ತರಂಜನ ದಾಸರೇ ಪ್ರಥಮ ಚುನಾಯಿತ ಮೇಯರ್ ಪದವಿಯನ್ನು ಅಲಂಕರಿಸಿದರು. ಎದುರಿಲ್ಲದ ನಾಯಕರೆನಿಸಿದ ಬ್ಯಾನರ್ಜಿಯವರು ೧೯೨೩ರಲ್ಲಿ ಕೌನ್ಸಿಲ್ ಚುನಾವಣೆಯಲ್ಲಿ ಡಾ.ಬಿ.ಸಿ.ರಾಯ್ ಅವರಿಂದ ಪರಾಭವವನ್ನು ಹೊಂದಬೇಕಾಯಿತು. ೧೯೧೮ರಲ್ಲಿ ಅವರು ಕಾಂಗ್ರೆಸ್ಸಿನಿಂದ ದೂರವಾದರು. ಮಾಡರೇಟ್‌ ಪಾರ್ಟಿಯನ್ನು ಸಂಘಟಿಸಿದರು. ಕಾಂಗ್ರೆಸ್‌ ಪಕ್ಷವು ಪೂರ್ಣ ಸ್ವರಾಜ್ಯಕ್ಕಾಗಿ ಚಳವಳಿ ಮುಂತಾದವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕೆಂಬುದು ಬ್ಯಾನರ್ಜಿಯವರ ಧೋರಣೆ; ಅವರು ಅವನ್ನೇ ತಮ್ಮ ದಾರಿ ಎಂದು ಒಪ್ಪಿರಲಿಲ್ಲ. ಆದರೆ ಗಾಂಧಿಜೀಯವರು ಅವನ್ನು ಜನತಾ ಆಂದೋಳನದ ಮುಖ್ಯ ಅಸ್ತ್ರಗಳನ್ನಾಗಿ ಸ್ವೀಕರಿಸಿದರು; ಜೊತೆಗೆ, ಎಲ್ಲ ಚಳವಳಿಯೂ ಅಹಿಂಸೆಯಿಂದ ನಡೆಯಬೇಕು ಎಂದು ವಿಧಿಸಿದರು. ಸುರೇಂದ್ರನಾಥ ಬ್ಯಾನರ್ಜಿಯವರು ತಮ್ಮ ವಿಚಾರ ಸರಣಿಗೆ ಬೆಲೆ ಕಡಿಮೆಯಾಗುತ್ತಿರುವುದನ್ನೂ ತೀವ್ರವಾದಿಗಳ ಅಭಿಪ್ರಾಯಗಳತ್ತ ಜನರು ಆಕರ್ಷಿತರಾಗುತ್ತಿರುವುದನ್ನೂ ಕಂಡರು. ಬಿ.ಸಿ.ರಾಯ್‌ರವರಿಂದ ಪರಾಜಿತರಾದೊಡನೆ ಸಾರ್ವಜನಿಕ ಜೀವನದಿಂದ ವಿಶ್ರಾಂತಿಯನ್ನು ಬಯಸಿದರು; ಮುಂದೆ ಅವರು ಕೊನೆಯ ತನಕ ಪತ್ರಿಕೋದ್ಯಮವನ್ನು ಮುಂದುವರಿಸಿದರು.

ದೀಪ ನಂದಿತು

ಅವರ ಬದುಕಿನ ಎಲ್ಲ ರಂಗಗಳಲ್ಲೂ ಚೇತನ ತುಂಬುತ್ತಿದ್ದ ಅವರ ಧರ್ಮಪತ್ನಿ ಚಂಡೀಬಾಯಿ ಅವರೂ ೧೯೨೩ ಅಗಲಿದರು. ಇದು ಅವರಿಗೆ ಒಂದು ದೃಷ್ಟಿಯಿಂದ ಏಕಾಕಿತನದ ಅನುಭವವನ್ನುಂಟು ಮಾಡಿತು ಎನ್ನಬೇಕು.

ಇಂಥ ಹಿರಿಯ ಜೀವ ೧೯೨೫ನೇಯ ಆಗಸ್ಟ್‌ ೬ರಂದು ಅಸ್ತಂಗತವಾಯಿತು. ಭಾರತದ ಉಜ್ವಲ ಜ್ಯೋತಿಯೊಂದು ನಂದಿತು.

ಗಟ್ಟಿ ವ್ಯಕ್ತಿತ್ವ

ಸುರೇಂದ್ರನಾಥ ಬ್ಯಾನರ್ಜಿ ಹೆಸರಿಗಾಗಿ ಬದುಕಿದವರಲ್ಲ. ದೇಶಕ್ಕಾಗಿ ಬದುಕಿದರು; ದೇಶದ, ಜನರ ಏಳಿಗೆಗಾಗಿ ದುಡಿದು ಬಾಳಿದರು. ಕೊನೆಯ ಉಸಿರು ಇರುವವರೆಗೂ ದೇಶದ ಕುರಿತು, ಜನರ ಕುರಿತು ಹಗಲೂ ಇರುಳೂ ಚಿಂತಿಸಿದರು; ಒಳಿತಿಗಾಗಿ ದಣಿವಿಲ್ಲದೆ ದುಡಿದರು. ಮರೆಯಬಹುದೇ ಅಂತಹವರನ್ನು ?

ನಾಡಿನ ಮಂಗಳವನ್ನು ಸಾಧಿಸಲು ಅವರು ತಮ್ಮದೇ ಆದ ಮಾರ್ಗ ಅನುಸರಿಸಿದ್ದರು. ಅವರನ್ನು ಮಿತವಾದಿಗಳು ಎಂದು ಹೇಳುತ್ತಾರೆ. ಆದರೆ ನಾಡಿನ ಕಲ್ಯಾಣಕ್ಕಾಗಿ ಅವರು ತಮ್ಮನ್ನೇ ಅರ್ಪಿಸಿಕೊಂಡು ತೋರಿದ ಶ್ರದ್ಧೆ, ಮಾಡಿದ ಸಾಧನೆ ಅಮಿತವಾದದ್ದು. ಅವರು ಮಂದವಾದಿಗಳ ಗುಂಪಿಗೆ ಸೇರಿದವರಾಗಿದ್ದರೂ ಪ್ರಜೆಗಳ ಹಕ್ಕು ಹಾರೈಕೆಗಳ ರಕ್ಷಣೆಯಲ್ಲಿ ಅವರ ಭಾವನೆಗಳು ತೀವ್ರವಾದಿಗಳಿಗಿಂತ ಕಡಿಮೆಯೇನೂ ಆಗಿರಲಿಲ್ಲ. ಐವತ್ತು ವರ್ಷಗಳ ಅವರ ರಾಜಕೀಯ ಜೀವನದಲ್ಲಿ ಜನಸಮೂಹದ ದಾರಿ – ಧೋರಣೆಗಳು ಮಾರ್ಪಾಡು ಹೊಂದಿರಬಹುದು. ಆದರೆ ಅವರು ಎಂದೂ ತಮ್ಮ ನಿಲುವಿನಲ್ಲಿ ನಂಬಿಕೆ ಕಳೆದುಕೊಂಡಿಲ್ಲ. ಹೊಸ ಗಾಳಿ, ಹೊಸ ಪಾಳಿ ಇವರನ್ನು ಬಿಟ್ಟು ಸಾಗಿತಾದರೂ ಅವರು ವಿಚಲಿತರಾಗಲೂ ಇಲ್ಲ; ಹೊಸ ಗಾಳಿಗೆ ಅಡ್ಡ ಗೋಡೆ ಕಟ್ಟುವ ಚಾಳಿಗೆ ಇಳಿಯಲೂ ಇಲ್ಲ. ಈ ಗಟ್ಟಿ ವ್ಯಕ್ತಿತ್ವವೇ ಅವರ ಉನ್ನತಿಕೆ. ಅವರು ಹುಟ್ಟಿ ಬೆಳೆದ ಕಾಲ ಮತ್ತು ವಾತಾವರಣಗಳನ್ನು ಗಮನಿಸಿದರೆ ಅವರ ನಿಲುಮೆ ಅರ್ಥವಾದೀತು. ವಸ್ತುತಃ ಅವರ ಜೀವನಗಾಥೆ ನವಭಾರತದ ನಾಂದಿಗೀತೆ; ರಾಷ್ಟೋತ್ಥಾನದ ಆದಿಪರ್ವ.

ಬ್ಯಾನರ್ಜಿಯವರು ರಾಷ್ಟ್ರೀಯ ಪ್ರಜ್ಞೆಯನ್ನು ಉದ್ದೀಪನಗೊಳಿಸಿದವರಲ್ಲಿ ಪ್ರಥಮರು. ದೇಶದ ಮಂಗಳಕ್ಕಾಗಿ ಹೋರಾಡಿದವರಲ್ಲಿ ಅಗ್ರಗಣ್ಯರು ಎಂಬುದನ್ನು ಒಪ್ಪಬೇಕು. ರಾಷ್ಟ್ರೀಯತೆ, ಸಮಗ್ರತೆ, ಜಾತ್ಯತೀತತೆ ಮುಂತಾದ ಮಾರ್ಗದರ್ಶಿ ತತ್ವಗಳ ಪ್ರೇರಕರೂ ಸ್ವಾತಂತ್ರ್ಯ ಸಂಸ್ಥಾಪಕರಲ್ಲೊಬರು ಆದ ಬ್ಯಾನರ್ಜಿಯವರ ಜೀವನ – ಸಾಧನೆಗಳನ್ನು ಅರಿಯದೆ ಇದ್ದರೆ ಆಧುನಿಕ ಭಾರತದ ಚರಿತ್ರೆಯನ್ನು ಪೂರ್ಣವಾಗಿ ಅರಿತಂತಾಗುವುದಿಲ್ಲ. ಅವರ ಜೀವನಗಾಥೆ ಆಧುನಿಕ ಭಾರತದ ಚರಿತ್ರೆಯಲ್ಲಿ ಜ್ವಲಂತ ಅಧ್ಯಾಯ. ಅದಿಲ್ಲದೆ ರಾಷ್ಟ್ರೀಯ ಹೋರಾಟದ ಇತಿಹಾಸ ಅಪೂರ್ಣ. ನವಭಾರತದ ನಿರ್ಮಾಣಕ್ಕೆ ಅವರ ಬದುಕು ಒಂದು ಸ್ಫೂರ್ತಿ. ಮುಂದಿನ ಎಲ್ಲ ಬೆಳವಣಿಗೆಗಳಿಗೆ ಅವರ ಸಾಧನೆಗಳೇ ಭದ್ರ ಬುನಾದಿ.