ಹಿಂದುಸ್ಥಾನಿ ಸಂಗೀತ ಕ್ಷೇತ್ರಕ್ಕೆ ನಾಕೋಡ ಮನೆತನದ ಕೊಡುಗೆ ಅಪಾರ. ಹಿಂದೂಸ್ಥಾನಿ ಹಾಡುಗಾರಿಕೆ, ಹಾರ್ಮೋನಿಯಂ ಹಾಗೂ ತಬಲಾ ವಾದನದಲ್ಲಿ ಈ ಮನೆತನದ ಕಲಾವಿದರ ಹೆಸರು ತುಂಬ ಎತ್ತರದಲ್ಲಿದೆ. ಅಂತಹ ಪರಿವಾರದಲ್ಲಿ ಜನಿಸಿದ ಶ್ರೀ ಸುರೇಂದ್ರ ಸಾ ನಾಕೋಡ ಕರ್ನಾಟಕ ಕಂಡ ಅಪರೂಪದ ಕಲಾವಿದರು. ಸಂಗೀತವನ್ನೇ ಉಸಿರಾಗಿಸಿಕೊಂಡ ಸಂಗೀತಗಾರರ ಮನೆತನದಲ್ಲಿ ೧೯೩೨ರಲ್ಲಿ ಜನಿಸಿದ ಶ್ರೀ ಸುರೇಂದ್ರ ಸಾ ನಾಕೋಡ ಅವರು ೧೮  ವರ್ಷಗಳ ಕಾಲ ಪಂಡಿತ ಅರ್ಜುನ ಸಾ. ನಾಕೋಡ ಅವರಲ್ಲಿ ಸಂಗೀತ ಅಧ್ಯಯನ ಮಾಡಿದರು.

ಕಳೆದ ೬೦  ವರ್ಷಗಳಿಂದಲೂ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀಯುತರು, ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ಹಲವಾರು ಕಡೆ ಸಂಗೀತ ಕಛೇರಿ ನಡೆಸಿದ್ದಾರೆ. ‘ಸಂಗೀತ ವಿಶಾರದ’ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಶ್ರೀ ನಾಕೋಡ, ಉತ್ತಮ ಹಾರ್ಮೋನಿಯಂ ವಾದಕ, ತಬಲಾ ವಾದಕ ಮಾತ್ರವಲ್ಲದೇ ಅತ್ಯುತ್ತಮ ನಟರು ಕೂಡ ಹೌದು.

ಕಳೆದ ಮೂರು ವರ್ಷದ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸುರೇಂದ್ರ ಸಾ ನಾಕೋಡ, ಪ್ರಸ್ತುತ ‘ಶ್ರೀ ಶಾರದಾ ಸಂಗೀತ ವಿದ್ಯಾಲಯ’ ನಡೆಸುತ್ತಿದ್ದು ತನ್ಮೂಲಕ ಸಂಗೀತ ಕ್ಷೇತ್ರಕ್ಕೆ ಹಲವಾರು ಉತ್ತಮ ಕೊಡುಗೆಗಳನ್ನು  ನೀಡುತ್ತಿದ್ದಾರೆ. ಶ್ರೀ ಸುರೇಂದ್ರ ಸಾ ನಾಕೋಡ ಅವರ ಸಂಗೀತ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೮-೯೯ನೇ ಸಾಲಿನ ವಾರ್ಷಿಕ ಸಂಗೀತ ಪ್ರಶಸ್ತಿ ನೀಡಿ ಗೌರವಿಸಿದೆ.