ಇಲ್ಲ, ನಿನಗೆ ತೃಪ್ತಿಯೆಂಬುದೆ ಇಲ್ಲ ; ನನ್ನ
ಸರ‍್ವಸ್ವವನು ಸುಲಿದು ನಿರ್ನಾಮ ಮಾಡಿ-
ದರೂ ನಿನಗಿಲ್ಲ ತೃಪ್ತಿ. ನನ್ನ ಮನೆ-ಮಠ
ನಾನುತ್ತು ಬಿತ್ತಿ ತೆನೆಯೆತ್ತಿ ನಿಲ್ಲಿಸಿದ
ಹೊಲಗದ್ದೆ ಎಲ್ಲವೂ ನಿನ್ನ ಬೆಂಕಿಹೆಜ್ಜೆಗೆ
ಸೀದು ಹೊಗೆಯಾಡುತಿವೆ. ಬೆಳ್ಳಗೆ ಹೊಳೆವ
ಎಲುಬು ರಾಶಿಯ ಮೇಲೆ ಕಂಬನಿಯ ದೀಪ
ವರ್ತುಲಗಳಲಿ ಜ್ವಲಿಸುತಿದೆ ಇದೊ ನಿನ್ನ
ಸಿಂಹಾಸನ. ಓ ಪ್ರಳಯ ಮೂರ್ತಿ, ಸುತ್ತಲೂ
ಧ್ವಜವೆತ್ತಿ ನಿಂತಿದೆ ನಿನ್ನದೇ ಧೂಮಕೀರ್ತಿ.