1. ಆದಿಮಾನವನು ಅಲೆಮಾರಿ ಪ್ರವೃತ್ತಿಯ ತನ್ನ ಬೇಟೆಯಾಟದ ಬದುಕನ್ನು ಕ್ರಮೇಣ ಬದಲಿಸಿ, ಫಲವತ್ತಾದ ನೆಲ, ನೀರಿನ ಸಮೃದ್ಧಿಯಿದ್ದ ಒಂದೆಡೆಯಲ್ಲಿ ನೆಲೆ ನಿಂತು, ಹೊಲ, ಗದ್ದೆ, ತೋಟ, ವ್ಯವಸಾಯವನ್ನು ಹಸ್ತಗತವಾಗಿಸಿಕೊಂಡ. ಕಾಡು ಕಡಿದು, ಗುಡಿಸಲು ಕಟ್ಟಿ, ಗ್ರಾಮವನ್ನು ನಿರ್ಮಿಸಿಕೊಂಡು, ತನ್ನ ಕೌಟುಂಬಿಕ ಪರಿವಾರದೊಡನೆ, ಕೆಲವು ವಿಧಿ, ನಿಷೇಧಗಳನ್ನು ಹಾಕಿಕೊಂಡು ಶಾಂತಿಯುತ ಸಾಮಾಜಿಕ ಜೀವವನ್ನು ರೂಢಿಸಿಕೊಂಡ. ಈ ಶಾಂತಿಯುತ ಸಾಮಾಜಿಕ ಜೀವನಕ್ಕೆ ಮೂಲವಾದುದು ಮನುಷ್ಯನಲ್ಲಿ ಇರುವ ನಂಬಿಕೆ. ಆಂದರೆ ಬದುಕುವ ನಂಬಿಕೆಯಿಂದ ಸಮಾಜ ಆರಂಭವಾಗುತ್ತದೆ. ಈ ಬದುಕುವ ನಂಬಿಕೆ ಬಂದ ಮೇಲೆ ಮನುಷ್ಯ ತನ್ನ ಬದುಕಿಗೆ ಬೇಕಾದ ಇತರ ಪರಿಕರಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಮಾನವ ಸಮಾಜದ ಅಸ್ಥಿತ್ವಕ್ಕೆ ಈ ನಂಬಿಕೆ ಮೂಲವಸ್ತು.

ನಂಬಿಕೆ ಮಾನವ ಸಮಾಜದ ಮೂಲಾಪೇಕ್ಷೆಯಾದ ‘ಮೌಲ್ಯ’ ಮತ್ತು ‘ತತ್ವಚಿಂತನೆ’ಗೆ ತಳಹದಿ. ಒಂದು ನಂಬಿಕೆ ‘ಮೌಲ್ಯ’ವಾಗುವ ಮೂಲಕ ಒಂದು ಜನಪದ ಸೃಷ್ಟಿಯಾಗುತ್ತದೆ. ಆ ಜನಪದಕ್ಕೊಂದು ಧರ್ಮ ಮತ್ತು ದೇವರುಗಳು ಬರುತ್ತವೆ. ಈ ನಂಬಿಕೆಯ ಮುಂದುವರಿಕೆಯಾಗಿ ಆಚರಣೆ ಅನುಷ್ಠಾನಗಳು ಉಂಟಾಗುತ್ತವೆ. ಹೀಗೆ ಮಾನವ ಬದುಕಿನ ಸ್ಥಾಪನೆ ನಂಬಿಕೆಯಲ್ಲಿದೆ. ಇದೇ ಸ್ಥಾಪನಾ ಆಕಾಂಕ್ಷೆ ಭೂಮಿಯ ಆಚೆಗೆ ಆಕಾಶಕ್ಕೆ, ಭೂಮಿಯ ಕೆಳಗೆ ಪಾತಾಳಕ್ಕೆ ಇಳಿಯುತ್ತದೆ. ಅಂದರೆ ಬದುಕುವ ನಂಬಿಕೆ ಸ್ವರ್ಗ ನರಕಗಳನ್ನು ಸೃಷ್ಟಿಸುತ್ತದೆ. ಈ ಬಗೆಯ ನಂಬಿಕೆಗಳು ಆರ್ಥಿಕ ಸ್ವಭಾವದು. ಇಲ್ಲಿ ಸುಖವಾಗಿರುವವನು ಅಥವಾ ಸುಖದಲ್ಲಿರುವವನು ಸ್ವರ್ಗದಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾನೆ. ವ್ಯಕ್ತಿ ಮನಸ್ಸಿನ ಮೂಲಕ “ಆರ್ಥಿಕ ಸ್ಥಳಾಂತರ”ಗೊಳ್ಳುವುದೇ ಈ ಸ್ವರ್ಗದಲ್ಲಿಯ ನಂಬಿಕೆ. ಪಾತಾಳಕ್ಕೆ ಹೆದರುವ ಮನುಷ್ಯ ಕಷ್ಟವನ್ನು ಅನುಭವಿಸಬಾರದೆಂದು ತಿಳಿದವನಾಗಿದ್ದಾನೆ. ನರಕ ಕೆಟ್ಟ ಆರ್ಥಿಕ ಸ್ಥಿತಿ ಅಥವಾ ಬದುಕಿನ ಬರಗಾಲ. ಭೂಮಿಯ ಮೇಲೆ ಇಂತಹ ಅನೇಕ ಕೆಟ್ಟ ಬರಗಾಲಗಳನ್ನು ಅವನು ಕಂಡಿದ್ದಾನೆ. ಆದ್ದರಿಂದಲೇ ಅಂತಹದ್ದನ್ನು ಅನುಭವಿಸಲಿಕ್ಕೆ ಹೆದರುತ್ತಾನೆ. ಇದರ ಪರಿಣಾಮವೇ ಅವನ ನರಕ ಕಲ್ಪನೆ. ಹೀಗೆ ನಮ್ಮ ನಂಬಿಕೆಯ ಪೂರ್ವದಲ್ಲಿ ಮನುಷ್ಯನ ಆರ್ಥಿಕ ನೆಲೆ ಮತ್ತು ಆರ್ಥಿಕ ಸ್ಥಳಾಂತರಗಳು ಇವೆ.

ಆರ್ಥಿಕ ‘ಅಪೇಕ್ಷೆ’ಯೇ ಮನುಷ್ಯ ನೆಲೆ ನಿಲ್ಲುವುದಕ್ಕೆ ಕಾರಣ. ಈ ‘ಅಪೇಕ್ಷೆ’ ಗಾಗಿ ಮನುಷ್ಯ ಹೇಗೆ ದೈಹಿಕವಾಗಿ ಚಲಿಸುತ್ತನೆಯೋ, ಮಾನಸಿಕವಾಗಿಯೂ ಚಲಿಸುತ್ತಾನೆ. ಈ ಕಾರಣದಿಂದ ಅನೇಕ ನಂಬಿಕೆಗಳು ಹುಟ್ಟುತ್ತವೆ. ಇಂತಹವುಗಳಲ್ಲಿ ‘ಸುಳಿ’ ಬಗೆಗಿರುವ ನಂಬಿಕೆಯು ಒಂದು.