ದನಗಳ ಸಾಕಣೆ ಮೊದಲೋ, ಬೇಸಾಯ ಮೊದಲೋ, ಎಂಬುದು ಒಂದು ಸಮಸ್ಯೆ. ಕೆಲವರ ಪ್ರಕಾರ ಮೊದಲು ದನಗಳ ಸಾಕಣೆ, ತದನಂತರ ಬೇಸಾಯ, ಅವರ ಪ್ರಕಾರ ಮಾನವ ಮೊದಲು ಬೇಟೆಯಾಡುತ್ತಿದ್ದ ಪ್ರಾಣಿಗಳನ್ನು ಪಳಗಿಸಿಕೊಂಡ. ಆಮೇಲೆ ಅವನ ಹೆಂಗಸು ಅವನು ಬೇಟೆಯಾಡುವುದರ ಬದಲು ಆ ಪ್ರಾಣಿಗಳನ್ನೇ ಸಾಕಿ, ಮೇಯಿಸಿ ಇರುವ ಕಡೆಯೇ ಭೂಮಿಯನ್ನು ಉತ್ತು, ಬಿತ್ತಿ ಬೆಳೆಯುವಂತೆ ಪ್ರೇರೇಪಿಸಿದಳು ಎನ್ನುವರು. ಇನ್ನು ಕೆಲವರ ಪ್ರಕಾರ ಆಹಾರಕ್ಕಾಗಿ ಬೇಟೆಯಾಡಿಯೋ, ಕಾಡು, ಮೇಡುಗಳಲ್ಲಿ ಅಲೆದು ಹಣ್ಣು, ಹಂಪಲುಗಳನ್ನು ಆರಿಸಿಕೊಂಡೋ, ಒಂದೆಡೆ ನಿಲ್ಲದೆ ಇದ್ದ ಆಗಿನ ಮಾನವ ಪಶುಗಳನ್ನು ಪಳಗಿಸಲು ಶಕ್ತನಾಗಿರಲಿಲ್ಲ. ಇವನ್ನು ಸಾಕಲು ಕೆಲವು ವಸ್ತುಗಳು ಅನುಕೂಲಗಳು ಬೇಕು. ಕಟ್ಟಲು ಗೂಟ, ಹಗ್ಗ ಬೇಕು; ಮುಂದೆ ಚದುರದಿರಲು ರೊಪ್ಪ ಕಟ್ಟಬೇಕು; ಬೇಲಿ ಹಾಕಬೇಕು. ಗೂಟ ಚೂಪು ಮಾಡುವ ಹತಾರು ಅವನಲ್ಲಿರಲಿಲ್ಲ. ಹಗ್ಗ ಹೊಸೆಯುವ ಕಲೆ ತಿಳಿದಿರಲಿಲ್ಲ. ರೊಪ್ಪ ಕಟ್ಟಲು ತಡಿಕೆಗಳನ್ನು ಹೆಣೆಯುವುದು, ಬೊಂಬುಗಳನ್ನು ಕತ್ತರಿಸುವುದು ಅವನ ಬುದ್ಧಿಶಕ್ತಿಗೆ, ಕೈ ಶಕ್ತಿಗೆ ಮೀರಿದ್ದು. ಅಲ್ಲದೆ ಹೊಟ್ಟೆಪಾಡಿಗಾಗಿ ಯಾವಾಗಲೂ ಅಲೆಯಬೇಕಾದವನಿಗೆ ಪಳಗಿಸುವ ಹವ್ಯಾಸಕ್ಕೆ ವಿರಾಮವೆಲ್ಲಿತ್ತು ! ಯಾವಾಗ ಈ ಮಾನವ ಭೂಮಿಯನ್ನು ಉತ್ತು, ಬಿತ್ತಿ, ಕಳೆ ತೆಗೆದು, ಬೆಳೆಯನ್ನು ಕುಯ್ದು, ತನಗೆ ಬೇಕಾದ ಆಹಾರವನ್ನು ತಾನು ತಂಗಿದ ಕಡೆಯೇ ಹುಟ್ಟಿಸಿಕೊಳ್ಳಲು ಪ್ರಾರಂಭಿಸಿದನೋ, ಹೀಗೆ ಬೆಳೆಸಿದ ಬೆಳೆಯ ಹತ್ತಿರವೇ ಜೋಪಡಿ ಹಾಕಿಕೊಂಡು ಒಂದೆಡೆ ನಿಂತನೋ, ಯಾವಾಗ ಆಹಾರಕ್ಕಾಗಿ ಅಲೆಯುವುದು ತಪ್ಪಿತೋ, ಬಿಡುವು ಸಿಕ್ಕಿತೋ ಆಗ ಅವನು ಪಶುಗಳನ್ನು ಸಾಕಬಲ್ಲ ಸಾಮರ್ಥ್ಯವನ್ನು ಕಾಲಾವಕಾಶವನ್ನು ಅನುಕೂಲಗಳನ್ನು ಪಡೆದ. ಅಂದರೆ, ಮಾನವ ಬೇಸಾಯಗಾರನಾದ; ಆನಂತರ ಪಶುಪಾಲಕನಾದ.

ಹೀಗೆಂದಾಕ್ಷಣ, ಇದಕ್ಕಿಂತ ಮುಂಚೆ ಸಾಕುಪ್ರಾಣಿಗಳೇ ಇರಲಿಲ್ಲವೆಂದಲ್ಲ. ಒಂಟಿ, ಒಂಟಿಯಾಗಿ ಮನೆಗಳಲ್ಲಿ ಬೆಳೆಯುವ ಪ್ರಾಣಿಗಳಾದ ನಾಯಿ, ಕೋಳಿ, ಹಂದಿ, ಮುಂತಾದ ಸಣ್ಣ ಪುಟ್ಟ ಪ್ರಾಣಿಗಳನ್ನು ಸಾಕುತ್ತಿದ್ದರು. ದನ, ಕುರಿ, ಮೇಕೆ, ಒಂಟೆ ಇವು ಹಿಂಡು ಪ್ರಾಣಿಗಳು. ಮಂದೆಯಲ್ಲಿ ಜೀವಿಸುವ ಚಲಿಸುವ ಪ್ರಾಣಿಗಳು, ದೊಡ್ಡ ಪ್ರಾಣಿಗಳನ್ನು ನಂತರ ಸಾಕಿದರು. ದನಗಳನ್ನು ಪಳಗಿಸಿದ ಮೇಲೆ, ಅವು ಸಾಕಷ್ಟು ಸಾಧುವಾದ ಮೇಲೆ, ಈ ದಿನ ಹಿಂಡುಗಳನ್ನು ಹುಡುಗರು, ಎಳೆಯರು ಅಟ್ಟಿಕೊಂಡುಹೋಗಿ ಮೇಯಿಸುವಂತಾಯಿತು

ದನ ಎಮ್ಮೆಗಳ ಓಟ ಕಡಿಮೆ. ಆದುದರಿಂದ ಶತ್ರು ಭಯ ಹೆಚ್ಚು. ಅವಸರವಸರವಾಗಿ ಮೇದು, ಹೊಟ್ಟೆ ತುಂಬಿಕೊಂಡು ಶತ್ರುಗಳು ಇಲ್ಲದ ಕಡೆ ಹೋಗಿ, ಕೂತು, ನಿಧಾನವಾಗಿ ನುಂಗಿದ ಮೇವನ್ನು ಸ್ವಲ್ಪ ಸ್ವಲ್ಪವಾಗಿ ಬಾಯಿಗೆ ತಂದುಕೊಂಡು, ಹಲ್ಲುಗಳಿಂದ ಚೆನ್ನಾಗಿ ಜೊಲ್ಲಿನೊಂದಿಗೆ ಅರೆದು ನುಂಗುತ್ತವೆ. ದನಗಳು ತುತ್ತನ್ನು ಎಡ ದವಡೆಯಲ್ಲಿ ಕೆಲವು ಬಾರಿ, ಆಮೇಲೆ ಅಷ್ಟೇ ಬಾರಿ ಬಲ ದವಡೆಯಲ್ಲಿ ಅರೆಯುತ್ತವೆ. ಎರಡೂ ದವಡೆಯನ್ನು ಉಪಯೋಗಿಸುತ್ತವೆ. ದನದ ಕೆಳ ದವಡೆಯಲ್ಲಿ ೨೦ ಹಲ್ಲು, ಮೇಲ್ದವಡೆಯಲ್ಲಿ ೧೨ ಹಲ್ಲುಗಳಿವೆ. ಕೆಳದವಡೆಯಲ್ಲಿ ಮಾತ್ರ ೮ ಬಾಚಿಹಲ್ಲು, ಮೇಲು ದವಡೆಯಲ್ಲಿ ಈ ಬಾಚಿ ಹಲ್ಲಿನ ಬದಲು ಕೊಂಬಿನಂತಿರುವ ಒಂದು ಸಿಂಬಿ ಮಾತ್ರ ಇದೆ. ಮೇಯುವಾಗ ದನ ಮೇವನ್ನು ತಳದ ಬಾಚಿಹಲ್ಲು ಮತ್ತು ಮೇಲಿನ ಸಿಂಬಿ ಮಧ್ಯೆ ಸಿಕ್ಕಿಸಿಕೊಂಡು ತಲೆಯನ್ನು ಪಕ್ಕಕ್ಕೆ ಥಟ್ಟನೆ ಜಗ್ಗುತ್ತದೆ; ಆಗ ಹುಲ್ಲು ಕಿತ್ತುಕೊಂಡು ಬರುತ್ತದೆ.

ದನಕ್ಕೆ ಏಕೆ ಮೇಲ್ದವಡೆಯಲ್ಲಿ ಮುಂದಿನ ಹಲ್ಲು ಇಲ್ಲ ಎನ್ನುವುದಕ್ಕೆ ಜನಪದರಲ್ಲಿ ಒಂದು ಕಥೆ ಇದೆ. ಅದೇನೆಂದರೆ ಕೃಷ್ಣ ಗೊಲ್ಲ ಅಲ್ಲವೆ? ಬೇಕಾದಷ್ಟು ಹಸುಗಳನ್ನು ಸಾಕಿದ್ದ. ಅವನ ಸಾಕು ತಂದೆ ನಂದ, ಯಶೋಧೆಯ ಗಂಡನಿಗೆ ೯ ಲಕ್ಷ ದನಗಳು ಇದ್ದುವಂತೆ. ಇವುಗಳನ್ನೆಲ್ಲಾ ಮೇಯಿಸಲು, ಪಾಲಿಸಲು ಕಷ್ಟವಲ್ಲವೆ ? ಇದು ಕೃಷ್ಣನಿಗೆ ಸಾಧ್ಯವಿತ್ತು. ಅವನು ಕೊಳಲನ್ನು ಊದಿದ ಎಂದರೆ ಎಲ್ಲಾ ಗೋವುಗಳು ಅವನ ಹತ್ತಿರಕ್ಕೆ ಬರುತ್ತಿದ್ದವಂತೆ; ಅವನ ಕೊಳಲಿನ ಶಕ್ತಿ ಅಂಥದ್ದು. ಕೃಷ್ಣ ದನಗಳನ್ನು ಚೆನ್ನಾಗಿ ಮೇಯಿಸುತ್ತಿದ್ದ. ಅವನ ಮುಂದೆ ದನಗಳು ಮೈತುಂಬಿ ಮಿನುಗುತ್ತಿದ್ದಂತೆ ಮತ್ಯಾರ ಮುಂದೆಯೂ ಇರಲಿಲ್ಲ. ಒಂದು ದಿನ, ದನಗಳನ್ನೆಲ್ಲಾ ಹೊಟ್ಟೆ ತುಂಬ ಮೇಯಿಸಿ, ಗೋಕುಲಕ್ಕೆ ಅಟ್ಟಿ ರೊಪ್ಪಕ್ಕೆ ಸೇರಿಸುತ್ತಿದ್ದ. ಒಂದು ಹಸು ಎಂದೂ ಅವನ ಜೊತೆಯಲ್ಲೇ ಇರುತ್ತಿತ್ತು. ಅವನ ಸಂಗಡವೇ ಮಲಗುತ್ತಿತ್ತು. ಅದು ರೊಪ್ಪಕ್ಕೆ ಬರುವುದಕ್ಕೆ  ಮುಂಚೆ ಮನೆಗೆ ಹೊದೆಸಿದ ಚಾವಣಿಯ ಹುಲ್ಲನ್ನು ಕಿತ್ತು ತಿನ್ನುತ್ತಿತ್ತು. ಕೃಷ್ಟನಿಗೆ ಕೋಪ ಬಂತು “ಮುಂಡೇದೆ, ಹೊಟ್ಟೆ ಬಿರಿಯುವ ಹಾಗೆ ಕಾವಲಿನಲ್ಲಿ ಮೇದಿದ್ದಿಯಾ ಅದೂ ಸಾಲದೆ ಚಾವಣಿ ಹುಲ್ಲೂ ಬೇಕೋ, ಹೊಟ್ಟೆ ಬಾಕ, ಎನ್ನುತ್ತ ಅದರ ಹೆಗ್ಗತಿಗೆ ಚೆನ್ನಾಗಿ ಗುದ್ದಿದ. ದೊಡ್ಡ ಬಾಸುಂಡೆ ಎದ್ದಿತು. ಆದರೂ ಹುಲ್ಲನ್ನು ಎಳೆಯುವುದು ಬಿಡಲಿಲ್ಲ. ಕೃಷ್ಣನಿಗೆ ಕೋಪ ಉಕ್ಕಿತು. ‘ಹಲ್ಲು ಉದುರಿಸಿದ ಹೊರತು ನಿನಗೆ ಬುದ್ಧಿ ಬರುವುದಿಲ್ಲ’ ಅಂತ ಹೇಳಿ ರೊಪ್ಪನೆ ಮೂತಿ ಮೇಲೆ ಬಾರಿಸಿದ. ಆ ಏಟಿಗೆ ೮ ಮುಂದಿನ ಹಲ್ಲು ಉದುರಿತು. ಮತ್ತೆ ಬೆಳೆಯಲಿಲ್ಲ. ಅಂದಿನಿಂದ ಯಾವ ದನಕ್ಕೂ ಮೇಲ್ದವಡೆಯ ಬಾಚಿ ಹಲ್ಲು ಬೆಳೆಯುತ್ತಿಲ್ಲ. ಹಾಗೆ, ಹೆಗ್ಗತಿನ ಬಾಸುಂಡೆಯು ಹಾಗೆ ನಿಂತಿತು; ಡುಬ್ಬವಾಯಿತು. ಕೃಷ್ಣನ ಮಾತು ಹುಸಿಯಾಗುತ್ತದೆಯೇ ?’ (ನರಸಿಂಹ ಅಯ್ಯಂಗಾರ್; ೧೯೭೩ : ೪೧).

ಕರ್ನಾಟಕ ಬಹಳ ಹಿಂದಿನಿಂದಲೂ ಉತ್ತಮ ದನಗಳಿಗೆ ಹೆಸರಾಗಿದೆ. ರಾಜ್ಯದಲ್ಲಿ ಎರಡು ರೀತಿಯ ದನಗಳನ್ನು ಕಾಣಬಹುದು. ಮೊದಲನೆಯದು ಬಹಳ ಹೆಚ್ಚಿನ ಪ್ರಮಾಣದಲ್ಲಿರುವ ನಿರ್ದಿಷ್ಟ ಗುಂಪಿಗೆ ಸೇರಿದ ನಾಡುದನ. ಇವು ಗಾತ್ರದಲ್ಲಿ ಸಣ್ಣವು ಹಾಗೂ ವಿವಿಧ ಬಣ್ಣದವು. ಎರಡನೆಯದು ಮುಖ್ಯವಾದ ಶುದ್ಧ ತಳಿಗಳನ್ನು ಒಳಗೊಳ್ಳುತ್ತದೆ. ಇವುಗಳ ಪ್ರಮಾಣ ಬಹಳ ಕಡಿಮೆ. ಇವು ನಿರ್ದಿಷ್ಟ ಗಾತ್ರ ಹಾಗೂ ಬಣ್ಣದವು.

ಕರ್ನಾಟಕಕ್ಕೇ ವಿಶಿಷ್ಟವಾದ ಹೈನ ತಳಿ ಯಾವುದೂ ಇಲ್ಲ. ಕೆಲವು ಪಟ್ಟಣಗಳಲ್ಲಿ ಹಾಗೂ ಸರ್ಕಾರಿ ಸಾಕಾಣೆ ಕೇಂದ್ರಗಳಲ್ಲಿ ಕೆಲವು ಸಿಂಧಿ ದನಗಳು ಇದ್ದವು. ಇತ್ತೀಚಿನ ವರ್ಷಗಳಲ್ಲಿ ಮಿಶ್ರತಳಿ ಎಬ್ಬಿಕೆಯಿಂದ ಮೈಸೂರು ಹಾಗೂ ಬೆಂಗಳೂರು ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಮಿಶ್ರತಳಿ ದನಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಕೈಗೊಂಡಿರುವ ತೀವ್ರತಳಿ ಅಭಿವೃದ್ಧಿ ಕಾರ್ಯಕ್ರಮದಿಂದಾಗಿ ಇತರ ಜಿಲ್ಲೆಗಳಲ್ಲೂ ಮಿಶ್ರತಳಿಗಳನ್ನು ಕಾಣಬಹುದು.

. ಅಮೃತ ಮಹಲ್ : ಈ ತಳಿ ಕಾರ್ಯಶಕ್ತಿಗೆ ಭಾರತದಲ್ಲೇ ಹೆಸರಾದದ್ದು. ಇದು ಸಿಟ್ಟಿನ, ಚುರುಕು ಸ್ವಭಾವದ್ದು. ಕಷ್ಟ, ಸಹಿಷ್ಣುತೆಗೆ ಹೆಸರಾದದ್ದು. ಈ ತಳಿಯ ಹಸುಗಳಲ್ಲಿ ಹಾಲಿನ ಉತ್ಪಾದನೆ ಬಹಳ ಕಡಿಮೆ. ಸುಸಂಬದ್ಧವಾದ ಕಿರಿದಾದ ಮೈಕಟ್ಟು, ಬೂದುಬಣ್ಣ, ಉದ್ದವಾದ ತುದಿ, ಚೂಪಾದ ಪ್ರಮುಖವಾಗಿ ಕಾಣುವ ಹಣೆಯಿರುವ ತಲೆ, ಕಾಲುಗಳ ಉದ್ದ ಮಧ್ಯಮ ಮತ್ತು ಕಾಲಿನ ಭಾಗಗಳು ಸುಸಂಬದ್ಧ. ಸುಮಾರಾಗಿ ದಪ್ಪನಾದ ಮೂಳೆ, ಲಯಬದ್ಧ ನಡಿಗೆ ಈ ತಳಿಯ ಲಕ್ಷಣ. ಈ ತಳಿಗಳು ಮುಖ್ಯವಾಗಿ ಚಿತ್ರದುರ್ಗ, ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಯ ಭಾಗಗಳಲ್ಲಿ ಕಂಡುಬರುತ್ತವೆ. ಅಲ್ಲದೆ ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳಲ್ಲೂ ಈ ತಳಿಯ ಎತ್ತುಗಳು ಸಾಕಷ್ಟು ಪ್ರಮಾಣದಲ್ಲಿ ಉಂಟು, ಅಮೃತಮಹಲ್ ದನಗಳನ್ನು ಅಜ್ಜಂಪುರ ಕೇಂದ್ರಕ್ಕೆ ಸೇರಿದ ಸಾವಿರಾರು ಎಕರೆಯ ಅಮೃತಮಹಲ್ ಕಾವಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಕಲಾಗುತಿತ್ತು.

. ಹಳ್ಳಿಕಾರ್ : ಕರ್ನಾಟಕದಲ್ಲಿ ಕೆಲಸಕ್ಕೆ ಬಹಳ ಜನಪ್ರಿಯವಾದ ತಳಿ, ರಸ್ತೆ ಸಾರಿಗೆ ಮತ್ತು ಕೃಷಿ ಕೆಲಸಗಳೆರಡಕ್ಕೂ ಇದು ಉಪಯುಕ್ತವೆನಿಸಿದೆ. ದನಗಳನ್ನು ಕೊಟ್ಟಿಗೆಯಲ್ಲಿ ಮೇಯಿಸಿ ಸಣ್ಣ ಗುಂಪುಗಳಲ್ಲಿ ಹಾಕಲಾಗುತ್ತಿದೆ. ಬಣ್ಣ ಸಾಮಾನ್ಯವಾಗಿ ಬೂದು, ಭುಜ ಹಾಗೂ ಚಪ್ಪೆಯ ಮೇಲೆ ಬಣ್ಣ ಸ್ವಲ್ಪ ದಟ್ಟವಾಗಿರುತ್ತದೆ. ಕತ್ತು ತೆಳು ಹಾಗೂ ಉದ್ದವಾದುದು. ಕಾಲುಗಳು ಬಲವಾಗಿದ್ದು ಒಂದರಿಂದ ಒಂದು ದೂರವಾಗಿರುತ್ತವೆ. ತಲೆ ಉದ್ದ ಹಾಗೂ ತುದಿಯಲ್ಲಿ ಚೂಪಾಗಿದೆ. ಹಣೆ ಸ್ವಲ್ಪ ಉಬ್ಬಿದ್ದು ಅದರ ಮಧ್ಯ ಒಂದು ಕಾಲುವೆಯಂತ ತಗ್ಗು ಇರುತ್ತದೆ. ಕೊಂಬುಗಳು ಉದ್ದ ಹಾಗೂ ಚೂಪು ಕತ್ತಿನ ಮೇಲೆ ಹಿಂದಕ್ಕೆ ಸ್ವಲ್ಪ ಮೇಲಕ್ಕೆ ಬಗ್ಗಿದಂತಿವೆ. ಈ ತಳಿಗಳನ್ನು ಮುಖ್ಯವಾಗಿ ತುಮಕೂರು, ಹಾಸನ, ಮೈಸೂರು, ಮಂಡ್ಯ, ಕೋಲಾರ, ಜಿಲ್ಲೆಗಳು ಹಾಗೂ ಬಳ್ಳಾರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಣಬಹುದು.

. ಖಿಲಾರಿ : ಇದು ವ್ಯವಸಾಯ ಮತ್ತು ವೇಗವಾದ ರಸ್ತೆ ಸಾರಿಗೆಗೆ ಸೂಕ್ತವಾದ ಅತ್ಯುತ್ತಮ ಕೆಲಸದ ತಳಿ. ಹಸುಗಳು ಬಹಳ ಕಡಿಮೆ ಹಾಲು ಉತ್ಪಾದಿಸುತ್ತವೆ. ಇದು ಉತ್ತರ ಕರ್ನಾಟಕದ ತಳಿ. ಹಳ್ಳಿಕಾರ್ ಮತ್ತು ಅಮೃತಮಹಲ್ ತಳಿಗಳನ್ನು ಹೋಲುತ್ತದೆ. ಬಿಳಿ ಹಾಗೂ ಬೂದು ಸಾಮಾನ್ಯ ಬಣ್ಣಗಳು. ಮುಖನೀಳ, ಹಣೆಯ ಮಧ್ಯದಲ್ಲಿ ತಗ್ಗು ಬೀಳುವಂತೆ ಕಣ್ಣುಗಳ ಮೇಲೆ ಉಬ್ಬಿರುತ್ತದೆ. ಕೊಂಬು ಬುಡದಲ್ಲಿ ದಪ್ಪವಾಗಿಯೂ ತುದಿಯಲ್ಲಿ ಚೂಪಾಗಿಯೂ ಇರುತ್ತದೆ.

. ಅಲಂಬಾಡಿ :  ಇವು ಮೈಸೂರು ಜಿಲ್ಲೆ, ಕೊಳ್ಳೇಗಾಲ ತಾಲ್ಲೂಕಿನ ಬೆಟ್ಟಗಾಡು ಪ್ರದೇಶದಲ್ಲಿ ಅಭಿವೃದ್ಧಿ ಹೊಂದಿದ ದನಗಳು. ಇವನ್ನು ಸಾಮಾನ್ಯವಾಗಿ ಕಾಡಿನಲ್ಲಿ ಮೇಯಿಸಿ ಸಾಕಲಾಗುತ್ತಿದೆ. ಈ ತಳಿಯು ಹಳ್ಳಿಕಾರ್ ತಳಿಯನ್ನು ಹೋಲುತ್ತದೆ. ದಟ್ಟ ಬೂದು ಅಥವಾ ಕಪ್ಪು ಇದರ ಸಾಮಾನ್ಯ ಗುಣಗಳು. ತಲೆ ಸಣ್ಣ ಮತ್ತು ನೀಲ. ಹಣೆ ಉಬ್ಬಿಕೊಂಡಿರುತ್ತದೆ. ಉದ್ದವಾದ ಕೊಂಬುಗಳು ಹಿಂದಕ್ಕೆ ಹಾಗೂ ಸ್ವಲ್ಪ ಮೇಲಕ್ಕೆ ಚಾಚಿಕೊಂಡಿರುತ್ತವೆ. ಚೆನ್ನಾಗಿ ಬಗ್ಗಿದ ಪಕ್ಕೆಲುಬುಗಳುಳ್ಳ ದೊಡ್ಡ ಮೈಕಟ್ಟು ಇರುತ್ತದೆ. ಎತ್ತುಗಳು ಚುರುಕು ಮತ್ತು ಗಡಸು.

. ದೇವನಿ : ಈ ತಳಿ ಬೀದರ್ ಜಿಲ್ಲೆ ಹಾಗೂ ಗುಲ್ಬರ್ಗ ಮತ್ತು ಬಿಜಾಪುರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಇದು ಮಧ್ಯಮ ಗಾತ್ರದ, ಬಿಳಿ ಕಪ್ಪು ಇಲ್ಲವೆ ಬಿಳಿ ಕಂದು ಬಣ್ಣಗಳ ಅನಿರ್ದಿಷ್ಟ ಮಚ್ಚೆಗಳ ದನ. ಈ ತಳಿಯ ಎತ್ತುಗಳು ಚೆನ್ನಾಗಿ ಕೆಲಸ ಮಾಡುತ್ತವೆ ಹಾಗೂ ಹಸುಗಳು  ಸುಮಾರಾಗಿ ಹಾಲು ಕೊಡುತ್ತವೆ. ಈ ತಳಿ ನೋಡಲು ಸುಂದರ ಚರ್ಮ ಗಾಜಿನಂತೆ ನುಣುಪು, ಹಣೆ ಅಷ್ಟಾಗಿ ಉಬ್ಬಿಲ್ಲ. ಕೊಂಬು ಮೋಟು ಮತ್ತು ಹೊರಕ್ಕೆ ಹಿಂದಕ್ಕೆ ಬಂದಿರುತ್ತವೆ.

. ಕೃಷ್ಣಕೊಳ್ಳ : ಈ ತಳಿಯ ದನಗಳು ದೊಡ್ಡ ಗಾತ್ರದವು. ಆದ್ದರಿಂದ ಕಪ್ಪು ಜೇಡಿಮಣ್ಣಿನಲ್ಲಿ ಕೆಲಸ ಮಾಡಲು ಮತ್ತು ಇತರ ಕಷ್ಟದ ಕೆಲಸಗಳಿಗೆ ಸೂಕ್ತವಾದವು. ಇದು ರಾಮದುರ್ಗ, ಜಮಖಂಡಿ, ಮುಧೋಳ, ಅಥಣೀ ಮತ್ತು ಚಿಕ್ಕೋಡಿ ತಾಲ್ಲೂಕುಗಳಲ್ಲಿ ಕಂಡುಬರುತ್ತವೆ. ಇವು ಬೂದು ಬಿಳಿ ಬಣ್ಣದವು. ಕತ್ತು ತುಂಡಾಗಿದ್ದು ಬಲವಾಗಿರುತ್ತದೆ. ಚಿಕ್ಕದಾದ ಮತ್ತು ಬಗ್ಗಿರುವ ಇದರ ಕೊಂಬುಗಳು ತಲೆಯ ಹೊರಕೋನದಿಂದ ಹೊರಟು ಸ್ವಲ್ಪ ಮೇಲಕ್ಕೆ ಹಾಗೂ ಒಳಕ್ಕೆ ಬಗ್ಗಿರುತ್ತವೆ.

ವ್ಯವಸಾಯ ಪ್ರಧಾನವಾದ ಈ ಸಂಸ್ಕೃತಿಯಲ್ಲಿ ಎತ್ತಿಗೆ ಇದ್ದ ಪ್ರಾಮುಖ್ಯತೆ ಇತರ ಪ್ರಾಣಿಗಳಿಗಿಲ್ಲ. ಹಸು ಎತ್ತಿನ ತಾಯಿ. ಹಾಲು ಕರೆಯುವ ಪ್ರಾಣಿಯಲ್ಲ; ಹಾಲಿಗಾಗಿ ಎಮ್ಮೆ ಎತ್ತಿಗಾಗಿ ಹಸು ಇದು ನಮ್ಮ ಸಂಪ್ರದಾಯ. ಮೊದಲೇ ಹೇಳಿದಂತೆ ವ್ಯವಸಾಯ ಪ್ರಧಾನವಾದ ಸಂಸ್ಕೃತಿಯಲ್ಲಿ ಎತ್ತಿಲ್ಲದೆ ಬೇಸಾಯ ಅಸಾಧ್ಯ. ಆದುದರಿಂದ ಬಹುಪಾಲು ಬೇಸಾಯಗಾರರಿರುವ ನಮ್ಮ ದೇಸದವರಿಗೆ, ಹಾಲಿಗಿಂತ ಎತ್ತೇ ಮುಖ್ಯ. ನೇಗಿಲು ಮುಂತಾದ ಮುಟ್ಟುಗಳನ್ನು ನಿರಾಯಾಸವಾಗಿ ಎಳೆಯಬಲ್ಲ, ಹೆಚ್ಚು ಹೊರೆ ಹಾಕಿದ ಗಾಡಿಗಳನ್ನು ಕಚ್ಚಾ ರಸ್ತೆಗಳಲ್ಲಿ ವೇಗವಾಗಿ ಎಳೆದುಕೊಂಡು ಹೋಗಬಲ್ಲ ಎತ್ತಿಗೇ, ಎತ್ತಿನ ತಳಿಗಳಿಗೇ ಹೆಚ್ಚು ಪ್ರಾಶಸ್ತ್ಯ. ಈ ಬಗೆಯ ತಳಿಗಳನ್ನೇ ನಾವು ನೂರಾರು ವರ್ಷಗಳಿಂದ ರೂಪಿಸಿಕೊಂಡು ಸಾಕುತ್ತಿದ್ದೇವೆ. ಮೆಹೆಂಜೋದಾರೋ ಮುದ್ರೆಯಲ್ಲಿ ಕೆತ್ತಿರುವುದು ಗೂಳಿಯೇ ಹೊರೆತು ಹಸುವಲ್ಲ. ಆಗಿನಿಂದಲೂ ಎತ್ತಿಗೇ ಪ್ರಮುಖ ಸ್ಥಾನ. ನಮ್ಮದೇವರಿಗೂ ಗೂಲಿಯೇ ವಾಹನ. ಶಿವ ನಂದೀಶ್ವರ, ಪಶುಪತಿ, ಬಸವೇಶ್ವರ. ಹೀಗಾಗಿ ನಾವು ಹಸುಗಳನ್ನು ಸಾಕುತ್ತಿರುವುದು ಅದರ ಹಾಲಿಗಲ್ಲ. ಅದರ ಹೋರಿಕರಕ್ಕಾಗಿ. ಹಾಲಿನ ಉಪಯೋಗ, ಗುಣ ನಮಗೆ ಗೊತ್ತಿಲ್ಲದೆ ಇಲ್ಲ. ಅದರ ಹಾಲನ್ನು ಹಸುವಿನಿಂದ ಪಡೆಯುವುದರ ಬದಲು ಎಮ್ಮೆಯಿಂದ ಪಡೆಯುತ್ತಿದ್ದೇವೆ.

ವ್ಯವಸಾಯ ಪ್ರಧಾನ ಸಂಸ್ಕೃತಿಯ ಅಂಗವಾಗಿದ್ದ ಪ್ರಾಣಿ ಎತ್ತು. ಅದನ್ನು ನಂದಿ ಅವತಾರ ಬಸವಣ್ಣ ಎಂದು ಪೂಜಿಸುತ್ತಾರೆ. ಎತ್ತು ಕೃಷಿಕನ ಸ್ನೇಹಿಯಾಗಿ, ಭವಿಷ್ಯ ನಿರ್ಮಾಣದ ಶಕ್ತಿಯಾಗಿ ಬೆಳೆದು ಬಂದಿದೆ. ಅದು ಮನೆಯಲ್ಲೇ ಹುಟ್ಟಿದ್ದಾಗಿದ್ದರೆ ಅದರ ಸುಳಿ ಸೂತ್ರ ಯಾವ ಲಕ್ಷಣವನ್ನು ನೋಡುವುದಿಲ್ಲ. ಆದರೆ ಅದನ್ನು ಕೊಂಡು ತರುವುದಾಗಿದ್ದರೆ, ‘ಪರಿಣಿತ’ರಿಂದ ಅದರ ಶಾಸ್ತ್ರೀಯ ಪರೀಕ್ಷೆ ಮಾಡಿಸುತ್ತಾರೆ. ಹೊಸ ಎತ್ತನ್ನು ಕೊಂಡು ತರುವುದರಿಂದ ಮನೆ ಏರಲೂಬಹುದು ಇಲ್ಲವೆ ಹಾಳು ಆಗಲೂಬಹುದು. ಕೃಷಿಕ ಅನಂತ ಕಾಲದಿಂದ ಹೀಗೆ ನಂಬಿಕೊಂಡು ಬಂದಿದ್ದಾನೆ. ಒಳ್ಳೆಯ ಸುಳಿ ಇದ್ದ ಎತ್ತಿಗೆ ಬೇಡಿಕೆ ಜಾಸ್ತಿ. ಅಲ್ಲದೆ ಎಷ್ಟೋ ಜನರು ಅಂಥ ಎತ್ತುಗಳನ್ನು ಮಾರುವುದೇ ಇಲ್ಲ. ಸತ್ತರೂ ಸಹಿತ ಹೊಲ-ತೋಟಗಳಲ್ಲಿ ಹುಗಿದು, ಅದರ ಕಾಲ್ಗುಣದ ಪರಿಣಾಮ ಶಾಶ್ವತವಾಗಿ ಮನೆಗೇ ಉಳಿಯುತ್ತದೆಂಬ ಭಾವನೆ ಬೆಳೆಸಿಕೊಳ್ಳುತ್ತಾರೆ.

ಎತ್ತನ್ನು ಕೊಂಡುಕೊಳ್ಳುವ ಮುಂಚೆ ಒಳ್ಳೆಯ ಲಕ್ಷಣಗಳಿವೆಯೇ ಎಂದು ಚೆನ್ನಾಗಿ ಪರೀಕ್ಷಿಸುತ್ತಾರೆ. ದನ ಯಾವುದೇ ಆಗಲಿ ಸುಳಿ ನೋಡುವುದು ಬಹಳ ಬಳಕೆಗೆ ಬಂದಿದೆ. ಎತ್ತುಗಳನ್ನು ಕೊಳ್ಳುವಾಗ ತಳಿ ಯಾವುದು, ತಳಿಗೆ ತಕ್ಕ ಎತ್ತರವಿದೆಯೇ, ಎತ್ತುಗಳ ವಯಸ್ಸೆಷ್ಟು, ಎಂದು ಕೇಳುತ್ತಾರೆ; ಗಣ ದೋಷಗಳ ಪರೀಕ್ಷೆ ಕೂಲಂಕಷವಾಗಿ ನೋಡುತ್ತಾರೆ. ಕೊಳ್ಳುವಾಗ ಮುಖ್ಯವಾಗಿ ಎತ್ತಿನ ಕಾಲುಗಳು ‘ಶುದ್ದ’ ವಾಗಿರಬೇಕು. ಕಾಲುಗಳು ಒಂದಕ್ಕೊಂದು ಬಡಿಯಬಾರದು. ಅದಕ್ಕೆ ನೆವರು ಬಡಿದುಕೊಳ್ಳುವುದು ಎನ್ನುತ್ತಾರೆ. ನೆವರು ಬಡಕ ಎತ್ತು ನಿರುಪಯೋಗಿ. ಕಾಲುಗಳು ದಪ್ಪವಾಗಿರಬಾರದು. ಗೊರಸುಗಳು ಬಿರುಸಾಗಿದ್ದು ಸಣ್ಣವೂ, ಎತ್ತರವೂ ಆಗಿರಬೇಕು. ಗೊರಸುಗಳು ಚಪ್ಪಟೆಯಾಗಿರಬಾರದು. ಎತ್ತಿಗೆ ಗಂಗೆದೊಗಲು ಜಾಸ್ತಿ ಇರಬಾರದು ಗಂಗೆದೊಗಲು ತೀರಾ ತೆಳುವಾಗಿರಬೇಕು. ಎತ್ತಿನ ಭುಜ ಸಹ ಉದ್ದಾಗಿರಬಾರದು. ಎತ್ತಿನ ಕೊಂಬುಗಳು ಕೆಲವು ಕಡೆ ಅಗಲವಿದ್ದರೆ ಒಳ್ಳೆಯದು ಎನ್ನುವರು. ಕೆಲವೆಡೆ ಸಣ್ಣಾಗಿ ಎರಡೂ ಒಂದೇ ಅಳತೆ ಆಕಾರದವಾಗಿರಬೇಕು ಎನ್ನುವರು. ಕೆಲವೆಡೆ ಎತ್ತಿನ ಕೊಂಬುಗಳಲ್ಲಿ ಬಲಗಡೆಯ ಕೊಂಬು  ಸ್ವಲ್ಪ ಮುಂದಕ್ಕೆ ಚಾಚಿದ್ದರೆ ಒಳ್ಳೆಯ ಲಕ್ಷಣವೆಂದು ಪರಿಗಣಿಸುತ್ತಾರೆ. ಎತ್ತಿನ ಇಣಿ ತೀರಾ ದೊಡ್ಡದಾಗಲೀ, ತೀರಾ ಚಿಕ್ಕದಾಗಲೀ, ಇರಬಾರದು. ಮುಖ ನೀಳವಾಗಿ, ಉದ್ದಾಗಿರಬೇಕು.

‘ಎತ್ತಿಗೆ ಹೆಗಲು, ಕುದುರೆಗೆ ಕಾಲು’ ಎಂಬ ಮಾತಿನಂತೆ ಎತ್ತಿನ ಹೆಗಲು ದಪ್ಪಾಗಿ ಶಕ್ತಿಯುತವಾಗಿದ್ದರಷ್ಟೇ ಸಾಲದು. ಅದು ನೊಗದ ಘರ್ಷಣೆಯಿಂದ ಗಾಯವಾಗದಂತಿರಬೇಕು. ಈಗ ‘ಹೆಗಲು ಕೊಟ್ಟಿದೆ’ ಎಂದರೆ ಈಗ ಹೂಡಲಿಕ್ಕೆ ಆರಂಭವಾಗಿದೆ ಎಂದರ್ಥ. ‘ಹೆಗಲ ತೊಳದೈತಿ’ ಅಂದರೆ ಆ ಎತ್ತಿಗೆ ನಿವೃತ್ತಿಯಾಗಿದೆ ಎಂದು ತಿಳಿಯಬೇಕು. ‘ಹೆಗಲ ಬಂದೈತಿ’ ಅಂದರೆ ಹೆಗಲಿಗೆ ಗಾಯವಾಗಿದೆ ಎಂದು ಜನಪದರು ತಿಳಿಯುತ್ತಾರೆ. ಆಗಾಗ ಹೆಗಲು ಬರುತ್ತಿದ್ದರೆ ಅಂಥಾ ಎತ್ತು ಹೆಚ್ಚು ಕಾಲ ಉಪಯೋಗವಾಗದು. ‘ಕಾಗಿ ಕಾ ಎಂದರೆ ಲ್ವಾಳೆತ್ತು ಬೆದರಿತ್ತು’ ಅನ್ನುವ ಗಾದೆ ಹೆಗಲು ಹುಣ್ಣಾದ ಎತ್ತಿನ ಸ್ಥಿತಿ ಕಂಡೇ ಹೇಳಿದ ಮಾತು. ಎತ್ತಿನ ಬಾಲ ಮೂಲದಲ್ಲಿ ದಪ್ಪಾಗಿದ್ದು ಸಣ್ಣಾಗಿ ನೇರವಾಗಿ ಉದ್ದಾಗಿರಬೇಕು. ಸಾಮಾನ್ಯವಾಗಿ ಜಂಡೆದ ಕೂದಲು ಹಿರಿಗಾಲು ಮೊಣಕಾಲು ಕೆಳಗೆ ಇಳಿದಿರಬೇಕು. ಎತ್ತಿನ ಗುದದ್ವಾರದ ಕೆಳಗೆ ನಾಗರಹೆಡೆಯ ಆಕಾರದ ಚಿಹ್ನೆ ಇದ್ದರೆ ಬಹಳ ಒಳ್ಳೆಯದು. ಆ ಎತ್ತು ನಾಗರ ಹಾವಿನಂತೆ ಚಪಲವಾಗಿರುತ್ತದಂತೆ. ಕೆಲವು ಎತ್ತುಗಳ ಕೊನೆಯ ಪಕ್ಕೆಲುಬು ಉಳಿದ ಎಲುಬುಗಳ ಅರ್ಧದಷ್ಟಿರುತ್ತದೆ. ಅದು ಒಂದೇ ಪಕ್ಕೆಗೆ ಇದ್ದರೆ ಅದನ್ನು ‘ಮೆಟ್ಟೆಲುಬು’ ಎಂದು ಹೇಳುತ್ತಾರೆ. ಅಂಥಾ ಎತ್ತನ್ನು ಯಾರೂ ಕೊಳ್ಳುವುದಿಲ್ಲ. ಆದರೆ ಆ ರೀತಿಯ ಎಲುಬು ಎರಡೂ ಪಕ್ಕೆಗೆ ಇದ್ದರೆ ಅದನ್ನು ‘ಗರುಡ’ ಎನ್ನುತ್ತಾರೆ ಗರುಡ ಇದ್ದ ಎತ್ತಿಗೆ ಬೇಡಿಕೆ ಬೆಲೆ ಎರಡೂ ಅಧಿಕ. (ಎಂ.ಜಿ. ಬಿರಾದಾರ; ೧೯೮೭; ೪೩-೪೪).

“ಬಣ್ಣದಲ್ಲಿ ರೂಪಾಯಿ ಬಣ್ಣ, ಬೂದು ಬಣ್ಣ, ಸೌರನ್ ಬಣ್ಣ, ಕಪ್ಪು ಬಣ್ಣದ ಎತ್ತುಗಳು ಉತ್ತಮ ಮತ್ತು ನೋಡಲು ಚೆಂದ. ಬಹುತೇಕ ರೈತರು ಇಷ್ಟಪಡುವ ಬಣ್ಣಗಳಿವು. ಜೀಜದ ಹೋರಿ ರೂಪಾಯಿ ಬಣ್ಣದಾಗಿದ್ದರೆ ಒಳ್ಳೆಯದಂತೆ. ವಯಸ್ಸಾದ ದುಡಿವ ಎತ್ತುಗಳಿಗೆ ಬಿಳಿ, ಬೂದು, ರೂಪಾಯಿ ಬಣ್ಣ ನಡೆಯುತ್ತದೆ. ಬಣ್ಣದ ಜೊತೆಗೆ ಜಿಂಕೆಯ ನೋಟವಿರಬೇಕು. ಜೋಲು ಮೋರೆ ಹಾಕಿರಬಾರದು. ಜೋಡಿ ಎತ್ತುಗಳನ್ನು ಕೊಳ್ಳುವಾಗ ಅವು ಬಣ್ಣ, ಎತ್ತರ, ಕೊಂಬುಗಳಲ್ಲಿ ತಾಳೆಯಾಗುವಂತಿರಬೇಕು. ಇಲ್ಲದಿದ್ದರೆ ಹೂಡಲು ಸರಿಯಾಗುವುದಿಲ್ಲ. ಮುಖದ ಮೇಲೆ ಕಣ್ಣಿನ ಸುತ್ತ ರೇಖೆ ಇರುವ ಎತ್ತುಗಳನ್ನು ಬಹಳಷ್ಟು ರೈತರು ಇಷ್ಟಪಡುತ್ತಾರೆ.’ (ಅಶೋಕ ಹೇರಿಂದ್ಯಾಪನಹಳ್ಳಿ; ೨೦೦೦ ೮)

ಬೇಸಾಯದ ಕೆಲಸಕ್ಕೆ, ಗಾಡಿ ಹೊಡೆಯಲು ಎತ್ತು ಕೊಳ್ಳುವವರು ಹೆಗಲನ್ನು ನೋಡುವರು. ಹೆಗಲು ಉರುಟುರುಟಾಗಿದ್ದರೆ ಕೆಲಸದ ಅನುಭವವಿದೆಯೆಂದು ಅರ್ಥ. ಹಾಗೆಯೇ ವಯಸ್ಸು ತಿಳಿಯಲು ತಜ್ಞರು ಹಲ್ಲು ನೋಡುತ್ತಾರೆ. ಹುಟ್ಟು ಹಲ್ಲುಗಳು ಬಿದ್ದು ಹೊಸ ಹಲ್ಲು ಮೂಡಿರುವುದರ ಆಧಾರದ ಮೇಲೆ ವಯಸ್ಸು ಗುರುತಿಸುತ್ತಾರೆ. ಇನ್ನೂ ಹಲ್ಲು ಉದುರಿಲ್ಲದ ಅಥವಾ ಎರಡು ಹಲ್ಲು ಹಾಕಿರುವ ಎತ್ತುಗಳು ಒಳ್ಳೆ ಪ್ರಾಯದವು. ನಾಲ್ಕು ಹಲ್ಲು ಹಾಕಿದರೆ ನಡುವಯಸ್ಸು. ಆರು ಹಲ್ಲು ಮತ್ತು ಕಡೆಹಲ್ಲು ಹಾಕಿದ್ದರೆ ವಯಸ್ಸಾಗಿದೆ ಎಂದರ್ಥ. ಕಡೆ ಹಲ್ಲು ಹಾಕಿದರೆ ಹಲ್ಲು ಕಲೆತಿದೆ (ಬಾಯಿಕಲೆತಿದೆ) ಎನ್ನುತ್ತಾರೆ. ಬೀಜದ ಹೋರಿಗೆ ಹಲ್ಲು ಬಾರದಿದ್ದರೆ ಶ್ರೇಷ್ಠ. ಒಳ್ಳೇ ದುಡಿವ ಎತ್ತು ಎಂದರೆ ನಾಲ್ಕು ಹಲ್ಲು ಹಾಕಿರಬೇಕು. ಹಲ್ಲು ನೋಡಿ ವಯಸ್ಸು ಹೇಳುವುದು ಅನುಭವಿಗೆ ಮಾತ್ರ ಸಾಧ್ಯ. ಜೊತೆಗೆ ಕುತ್ತಿಗೆಯ ಕೆಳಗೆ ಅಥವಾ ಗೋಮಾಳೆಯ ಕೆಳಗಿನ ಚರ್ಮ ವಿಪರೀತ ಜೋತು ಬಿದ್ದಿರಬಾರದು. ಸ್ವಲ್ಪ ಬಿರುಸಾಗಿ ಚೂರು ನೇತಾಡುತ್ತಿರಬೇಕು. ಮುಖ್ಯವಾಗಿ ಬೀಜದ ಹೋರಿ ಮತ್ತು ಎತ್ತುಗಳನ್ನು ಕೊಳ್ಳುವವರು ಈ ಅಂಶವನ್ನು ಗಮನಿಸುತ್ತಾರೆ.

ಕಣ್ಣರ್ಸಿ ಮತ್ತು ಕಾಡಿಗೆಗಣ್ಣು ಇರುವ ಎತ್ತನ್ನು ಕೊಳ್ಳುವುದಿಲ್ಲ. ಇವು ಒಳ್ಳೆಯವು ಅಲ್ಲ. ಕರೆ ಎತ್ತು ಮತ್ತು ಕೆಂದ ಎತ್ತನ್ನು ಕಟ್ಟಬಾರದೆಂಬ ನಂಬಿಕೆ ಇದೆ. ಹಾಗೆಯೇ ಸೂಲಿಹಲ್ಲು ಮತ್ತು ಅರೆಬಾಯಿ ಇರುವ ಎತ್ತನ್ನು ಕಟ್ಟುವುದಿಲ್ಲ. ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಏಕೆಂದರೆ ಆ ಎತ್ತುಗಳು ಸರಿಯಾಗಿ ಮೇಯುವುದಿಲ್ಲ. ಅಲ್ಪಸ್ವಲ್ಪ ಮೇದದ್ದನ್ನು ಉಗುಳುತ್ತವೆ ಎಂಬ ನಂಬಿಕೆ ಇದೆ. ಎತ್ತುಗಳಾಗಲಿ ಎಂಟು ಅಥವಾ ಆರು ಹಲ್ಲುಗಳಿದ್ದರೆ ಒಳ್ಳೆಯದು. ಏಲು ಹಲ್ಲುಗಳಿದ್ದರೆ ಒಳ್ಳೆಯದಲ್ಲ. ಪಂಚಕಲ್ಯಾಣಿ ಎತ್ತನ್ನು ಸಾಮಾನ್ಯವಾಗಿ ಕಟ್ಟುವುದಿಲ್ಲ. ಏಕೆಂದರೆ ಪಂಚಕಲ್ಯಾಣಿ ಎತ್ತು ಇದ್ದರೆ ಸದಾ ಪೂಜೆ ಮಾಡಬೇಕು. ಮಾರಬಾರದು, ಕಟುಗರಿಗೆ ಕೊಡಬಾರದು, ಅದನ್ನು ಹೊಡೆಯಬಾರದು. ಹೀಗಾಗಿ ಪಂಚಕಲ್ಯಾಣಿಯನ್ನು ಯಾರೂ ಕಟ್ಟುವುದಿಲ್ಲ ಪಂಚಕಲ್ಯಾಣಿಯನ್ನು ಕೆಲವೆಡೆ ‘ಬಸವಣ್ಣ’ ಎಂದು ಕರೆಯುವರು. ಎತ್ತಿನ ಮುಂಗಾಲಿನ ಹೆಜ್ಜೆಗಿಂತ ಹಿಂಗಾಲಿನ ಹೆಜ್ಜೆಯು ದೊಡ್ಡದಾಗಿದ್ದರೆ ವ್ಯವಸಾಯದಲ್ಲಿ ಚುರುಕಾಗಿರುವುದೆಂದು ನಂಬುತ್ತಾರೆ.ಎತ್ತುಗಳಿಗೆ ಹೂಬಾಲ ಇದ್ದರೆ ಅದು ದೇವರ ಸಮಾನ ಎಂದು ಭಾವಿಸುತ್ತಾರೆ. ಅದಕ್ಕೆ ಪೊರಕೆ ಸೋಕಿಸಬಾರದು. ಎಂಜಲು ನೀರು ಕುಡಿಸಬಾರದು. ಹಾಗಾಗಿಯೇ ಕೆಲವರು ಇವನ್ನು ಕಟ್ಟುವುದಿಲ್ಲ. ಹಾಗೆಯೇ ಮೂಗುಹಣ್ಣು ಅಥವಾ ಪೀನಾಸಿ ಇರುವ ರಾಸುಗಳನ್ನು ಕಟ್ಟಬಾರದು. ಇವು ಮೇವು ತಿನ್ನುವಾಗ ಗೊರಕೆಯಂತೆ ಸದ್ದು ಮಾಡುತ್ತವೆ. ಇದನ್ನು ಮೇವು ತಿನ್ನಿಸಿ ಪರೀಕ್ಷಿಸುತ್ತಾರೆ. ಸಿಡಿಗಾಲು ಅಂದರೆ ನಡೆಯುವಾಗ ಕಾಲುಗಳನ್ನು ಎಸೆಯುತ್ತಿದ್ದರೆ ಕೊಳ್ಳಬಾರದು. ‘ಹುಳಕಣ್ಣು’ – ಕಣ್ಣಿನಲ್ಲಿ ನೀರು ಸುರಿಯುತ್ತಿದ್ದರೆ, ‘ಹುಳಕಿವಿ’ – ಕಿವಿಯಲ್ಲಿ ಸೋರುತ್ತಿದ್ದರೆ, ‘ಹುಳಕಟ್ಟು’ – ಬಾಲದ ತುದಿಗೆ ಹುಳ ಬಿದ್ದಿದ್ದರೆ, ‘ಆನೆಗಾಲು’ ಕಾಲಲ್ಲಿ ಗೊರಸು ಬೆಳೆದುಕೊಂಡಿದ್ದರೆ, ‘ನೊಗಬಡಕ’ ಹೆಗಲ ಮೇಲೆ ನೊಗ ಇಟ್ಟಾಗ ಕೊಂಬಿನಿಂದ ಬಡಿಯುತ್ತಿದ್ದರೆ ಅಂತಹ ಎತ್ತುಗಳನ್ನು ಕೊಳ್ಲುವುದಿಲ್ಲ. ಎತ್ತುಗಳು ಹಾಯುತ್ತವೆಯೋ ಇಲ್ಲವೊ ಎಂಬುದನ್ನು ಸಹ ನೋಡುವರು.

ಯಾವ ದನಕ್ಕೂ ಹೊಟ್ಟೆಗೆ ಒಂದೇ ಮಗ್ಗಲು ಒಂಟೆಲವು (ಮಂಡೆಲವು) ಇರಬಾರದು. ದನಗಳು ಹಲ್ಲು ತಿನ್ನಬಾರದು ಮತ್ತು ಗೊರಕೆ ಹೊಡೆಯಬಾರದು. ದನಗಳ ತುಟಿ ಕರ‍್ರಗಿರಬಾರದು ಬಾಲದ ಕೂದಲು ಬೆಳ್ಳಗಿರಬಾರದು. ಆದರೆ ದನಗಳ ಖುರ (ಗೊರಸು) ಕರ‍್ರಗಿರಬಾರದು. ತಿರಪ ಕಾಲಿನ ದನ ಇರಬಾರದು. ಹಿಂದಿನ ಕಾಲುಗಳು ಎಳೆಯಬಾರದು, ಹೀಗೆ ಎಳೆಯುತ್ತಿದರೆ ಖುರಗಳು ಹಾಳಾಗುತ್ತವೆ. ಮುಂಗಾಲುಗಳು ಬಡಿದುಕೊಳ್ಳಬಾರದು. ಇದರಿಂದ ಗಾಯವಾಗಿ ದನಗಳು ನಿಶ್ಯಕ್ತವಾಗುತ್ತವೆ. ಕಾಡಿಗೆ ಕಣ್ಣಿನ ಎತ್ತು ಒಳ್ಳೆಯದು. ಆದರೆ ಗಾರೆ ಕಣ್ಣಿನ ಎತ್ತು ಇರಬಾರದು. ಎತ್ತು ಹಾಸು ಹೊಯ್ಯಬಾರದು. ಆದರೆ ಆಕಳು ಹಾಸು ಹೊಯ್ಯುತ್ತಿದ್ದರೆ ಒಳ್ಳೆಯದು. ಎತ್ತಿನ ಕೋಡುಗಳಲ್ಲಿ ಅದರ ಬಲ ಕೋಡು ಮುಂದಿದ್ದರೆ ಶುಭ. ದನಗಳ ಕೋಡುಗಳಿಗೆ ಗೊರಲಿ ಹತ್ತಬಾರದು ಕಣ್ಣುಗಳಲ್ಲಿ ಹೂವು ಬೀಳಬಾರದು. ದನಗಳ ಕಿವಿ ಸೋರಬಾರದು. ಎತ್ತಿನ ತೋಬರಿ (ಜನನೇಂದ್ರಿಯ) ಹೆಚ್ಚು ಜೋತು ಬಿದ್ದಿರಬಾರದು. ಒಂಟಿ ಬೀಜದ ದನ ಇರಬಾರದು. ದನಗಳಗೆ ಅಡ್ಡಹಲ್ಲು ಇರಬಾರದು. ದನಗಳ ಮೈ ಮೆತ್ತಗಿರಬೇಕು. ಮೈಮೇಲಿನ ಕೂದಲು ರೇಷ್ಮೆಯಂತೆ ನಯವಾಗಿರಬೇಕು. ಎತ್ತಿನ ಒಂದು ಕಣ್ಣು ಕಾಡಿಗೆ ಕಣ್ಣು ಇರಬಾರದು. ಎರಡು ಕಾಡಿಗೆ ಕಣ್ಣು ಇದ್ದರೆ ದೋಷವಿಲ್ಲ. ಎಮ್ಮೆಗೆ ಎರಡು ಮೊಲೆಗಳಿರಬಾರದು. ಮೂರು ಮೊಲೆಗಳಿದ್ದರಂತೂ ತೀರ ಅಶುಭ. ಎರಡು ಎತ್ತುಗಳು ಒಂದೇ ಮಗ್ಗುಲಾಗಿ ಮಲಗಿದ್ದರೆ ಶುಭ. ಆ ಕಾಲಕ್ಕೆ ಒಕ್ಕಲಿಗ ಕಾಯಿ ಒಡೆಯುವುದುಂಟು. ಸೋದರಮಾವ, ಸೋದರಳಿಯ ಎತ್ತುಗಳು ಜೊತೆಯಾಗಿ ಸಿಕ್ಕರೆ ಅತ್ಯಂತ ಶುಭವೆಂದು ಹೇಳುತ್ತಾರೆ. ಎತ್ತು ಕಟ್ಟಿದಲ್ಲಿಯೇ ಢರಿ ಹೊಡೆದರೆ ಒಳ್ಳೆಯದು.

“ಸಾಮಾನ್ಯವಾಗಿ (ದನ) ಎತ್ತುಗಳಿಗೆ ಹಣೆಯ ಮೇಲೊಂದು, ಬೆನ್ನಮೇಲೆ, ಇಣಿಯ ಹಿಂದೆ ಐದಾರು ಅಂಗುಲ ಅಳತೆಯಲ್ಲೊಂದು ಸುಳಿಗಳಿರುವುದು ಸ್ವಾಭಾವಿಕ. ಆದರೆ ಇಣಿಗೆ ತೀರ ಹತ್ತಿರ ಅಂದರೆ ಒಂದೆರಡಂಗುಲದಲ್ಲಿ ಸುಳಿ ಇದ್ದರೆ ಅದನ್ನು ‘ಕಾಗೆಸುಳಿ’ ಎಂದು ಹೇಳುತ್ತಾರೆ. ಕೆಲವೆಡೆ ಪಾತಾಳ ಸುಳಿ ಎಂದು ಸಹ ಕರೆಯುವರು. ಕಾಗೆ ಸುಳಿಯ ಎತ್ತನ್ನು ಯಾರೂ ಕೊಳ್ಳುವುದಿಲ್ಲ. ಅದು ಅಪಶಕುನ. ಅವಲಕ್ಷಣ. ಅಂಥ ಎತ್ತು ಮನೆಯಲ್ಲಿದ್ದರೆ ಆ ಮನೆಯ ಉದ್ಧಾರವಾಗುವುದೇ ಇಲವಂತೆ. ಬೆನ್ನು ಹುರಿಯ ಮಧ್ಯದಲ್ಲಿ ನೇರವಾಗಿ ತೋಬರಿಗೆ ಸರಳ ರೇಖೆಯಲ್ಲಿ ಇದ್ದ ಸುಳಿಯನ್ನು ‘ಮೂತ್ರಿ ಸುಳಿ’ ಎನ್ನುತ್ತಾರೆ. ಇದನ್ನೂ ಸಹ ಒಳ್ಳೆಯ ಸುಳಿ ಎನ್ನುವುದಿಲ್ಲ. ಸುಳಿಯಲ್ಲಿ ನೀರು ಹಾಕಿದರೆ ಅದು ತೋಬರಿಯ ತುದಿಯಿಂದ ಬೀಳಬಾರದು. ಹಿಂಗಾಲು ಗೂಟೆಲುಬಿನ ಮುಂದೆ ಐದಾರು ಅಂಗುಲ ಅಂತರದಲ್ಲಿ ಬೆನ್ನುಹುರಿಯ ಬದಿಗೆ, ಎಡಬಲಕ್ಕೆ ಎರಡು ಸುಳಿಗಳಿರುತ್ತವೆ. ಇವುಗಳನ್ನು ‘ಕತ್ತರಿಯ ಸುಳಿ’ ಕೆಲವೆಡೆ ‘ಕೀಲುಸುಳಿ’ ಎಂದು ಕರೆಯುವರು. ಅವು ಎತ್ತಿನ ಬೆನ್ನು ಹುರಿಯ ಆಚೆ, ಈಚೆ ಕತ್ತರಿಯ ಆಕಾರದಲ್ಲಿ ಕಾಣುತ್ತಿರುತ್ತವೆ. ಈ ಹೆಸರಿನಂತೆ ಈ ಸುಳಿಯ ಎತ್ತನ್ನು ಕೊಂಡವನ ಸಂಸಾರ ಕತ್ತರಿಸುತ್ತಲೇ ಹೋಗುತ್ತದೆಂಬುದು ನಂಬಿಕೆ. ಅಲ್ಲಿಯೇ ಗೂಟೆಲುಬಿಗೆ ಹತ್ತಿಯೇ ಎರಡೂ ಕಡೆಗೆ ಇನ್ನೆರಡು ಸುಳಿಗಳಿರುತ್ತವೆ. ಅವುಗಳನ್ನು ‘ಮುಟ್ಟಿನ ಸುಳಿ’ ಎಂದೂ, ‘ಚಾಳಿ ಸುಳಿ’ ಎಂದೂ ಹೇಳುತ್ತಾರೆ. ಈ ಸುಳಿಯ ಎತ್ತನ್ನು ಹೂಡಲಿಕ್ಕೆ ಉಪಯೋಗಿಸುವುದಿಲ್ಲ. ಆದರೆ ಅದನ್ನು ಸಬರಹಾಕಿ ಮೇಲೆ ಕೂಡ್ರಲು, ಹೇರು ಹೇರಲು, ನೀರು ತರಲು ಉಪಯೋಗಿಸುತ್ತಾರೆ. ಅದಕ್ಕೆ ‘ಕಂಟ್ಲೆತ್ತು’ ಎಂದು ಹೆಸರು. ಈ ಸುಳಿಯ ಎತ್ತನ್ನು ಹೂಡಿದರೆ ಒಕ್ಕಲುತನ ಸರಿಯಾಗಿ ಸಾಗದು ಎಂಬುದು ಕಲ್ಪನೆ. ಅದನ್ನು ಕೊಳ್ಳುವವರಿಲ್ಲದಕ್ಕೆ ಮುಟ್ಟುಹಾಕಿ ಕಂಟ್ಲೆಂತ್ತೆಂದು ಬಳಸುತ್ತಾರೆ (ಎಂ.ಜಿ. ಬಿರಾದಾರ; ೧೯೮೬ :೪೧ :೪೨).

ಎತ್ತಿಗೆ ಇರುವ ತೀರಾ ಕೆಟ್ಟ ಸುಳಿ ‘ಕಸಬರಿಗೆಯ ಸುಳಿ’ ಇದನ್ನು ಕೆಲವೆಡೆ ‘ಹೀನಗೈ ಸುಳಿ’ ಎನ್ನುವರು. ಇನ್ನೂ ಕೆಲವೆಡೆ ‘ಬಾರಿಗೆ ಸುಳಿ’ ಎಂದೂ ಕರೆಯುತ್ತಾರೆ. ಈ ಸುಳಿ ಇದ್ದ ಎತ್ತು ತನ್ನ ಒಡೆಯನ ಸಂಸಾರವನ್ನೇ ಉಡುಗಿ ಹಾಕುತ್ತದಂತೆ ! ಈ ಸುಳಿ ಹಿಂಗಾಲು ಗುಟೆಲುಬಿನ ಹಿಂದ ಒಂದು ಕಡೆ ಧೂಮಕೇತುವಿನಂತೆ ಇರುತ್ತದೆ. ಇಂತಹ ಎತ್ತನ್ನು ಯಾರೂ ಕೊಳ್ಳುವುದಿಲ್ಲ. ಎತ್ತಿನ ಗುದದ್ವಾರ ಸ್ಥಾನದಿಂದ ಕೆಳಗೆ ಒಂದೇ ಸುಳಿ ಇದ್ದರೆ ಅದನ್ನು ‘ಲಂಗಟ ಸುಳಿ’ ಎನ್ನುತ್ತಾರೆ. ಹೆಸರೇ ಹೇಳುವಂತೆ ಈ ಎತ್ತಿನ ಒಡೆಯನಿಗೆ ಲಂಗಟವೇ ಗತಿಯಾಗುತ್ತದಂತೆ ! ಅವನಿಗೆ ಕಡುಬಡತನ ತರುತ್ತದೆಂಬುದು ಕಲ್ಪನೆ.  ಆದರೆ ಅಲ್ಲೇ ಎರಡು ಸುಳಿಗಳಿದ್ದರೆ ಬಹಳ ಒಳ್ಳೆಯದು. ಅಂತಹ ಎತ್ತನ್ನು ಕೊಂಡವನ ಏಳ್ಗೆಯಾಗುತ್ತದಂತೆ. ಕೆಲವು ಎತ್ತುಗಳಿಗೆ ಗಂಗೆದೊಗಲಲ್ಲಿ ಎರಡು ಕಡೆಗೆ ಸುಳಿಗಳಿರುತ್ತವೆ. ಅವು ಹೂಡಿದಾಗ ಒತ್ತಗೀಲಕ್ಕೆ ಹತ್ತದಿದ್ದರೆ ಅದು ಸಲ್ಲ ಲಕ್ಷಣವಲ್ಲ. ಆ ಎತ್ತುಗಳು ದಡ್ಡ ಕಡ್ಡ ಇರುತ್ತವಂತೆ. ಅದು ತಿಂದಷ್ಟು ದುಡಿಯದ ದನ. ಇದನ್ನು ಅಷ್ಟು ಸೂಕ್ಷ್ಮವಾಗಿ ಪರೀಕ್ಷಿಸಲಾಗುವುದಿಲ್ಲ. ‘ಎತ್ತಿನ ಎದಿಯಾಗ, ಕುದುರಿ ಕುಂಡ್ಯಾಗ ಸುಳಿ ನೋಡಬಾರದು’ ಎಂಬ ಹೇಳಿಕೆ. ಕಿವಿಯ ಗಡ್ಡಿಯ ಮೇಲೆ ತೋಬರಿಯ ಹಿಂದೆ ಕೆಲವು ಸುಳಿಗಳಿರುತ್ತವೆ. ಅವುಗಳನ್ನು ಅಷ್ಟಾಗಿ ಗಮನಿಸುವುದಿಲ್ಲ. ದನಕ್ಕಿರಬೇಕಾದ ಅತ್ಯುತ್ತಮ ಸುಳಿ ‘ದವಣಿ ಸುಳಿ’ ಇದಕ್ಕೆ ಕೆಲವೆಡೆ ‘ಗೋದ್ಲಿ ಸುಳಿ’ ಎನ್ನುವರು. ಈ ‘ದವಣಿಸುಳಿ’ ಇದ್ದ ಎತ್ತಿನ ದಾವಣಿಯಲ್ಲಿ ಯಾವಾಗಲೂ ದನಗಳಿರುತ್ತವಂತೆ! ಇವು ಎರಡು ಸುಳಿಗಳು. ಒಂದು ಇಣಿಯಿಂದ ಹಿಂದೆ ಬೆನ್ನ ಹುರಿಯಲ್ಲಿ ಒಂದು ಗೇಣಳತೆ ಬಿಟ್ಟು ಇರುತ್ತದೆ. ಇನ್ನೊಂದು ಹಿಂಗಾಲು ಗೂಟೆಲುಬಿನಿಂದ ಮುಂದೆ ಒಂದೆರಡು ಗೇಣಾಂತರದಲ್ಲಿ ಮೊದಲಿನ ಸುಳಿಗೆ ನೇರವಾಗಿ ಬೆನ್ನು ಹುರಿಯ ಮೇಲೆಯೇ ಇರುತ್ತದೆ. ಇವೆರಡನ್ನು ಕೂಡಿಸಿಯೇ ಈ ಹೆಸರು. ಈ ದನ ಬಹಳ ಶುಭದಾಯಕಷ್ಟೇ ಅಲ್ಲ. ದವಣಿ ಸುಳಿ ಇದ್ದ ದನದವನ ಒಕ್ಕಲುತನ ಉತ್ಕರ್ಷ ಹೊಂದುತ್ತದೆಂಬ ಬಲವಾದ ನಂಬುಗೆ. ಇಂತಹ ದನಗಳನ್ನು ಯಾರೂ ಸಾಮಾನ್ಯವಾಗಿ ಮಾರಲು ಮುಂದೆ ಬರುವುದಿಲ್ಲ. ಈ ಸುಳಿ ಇದ್ದರೆ ಬೇರೆ ಯಾವ ಸುಳಿಗಳನ್ನು ನೋಡುವುದೇ ಇಲ್ಲ. ದವಣಿ ಸುಳಿಯ ದನ ದಾವಣಿಯಲ್ಲಿದ್ದರೆ ಇನ್ನುಳಿದ ಕೆಟ್ಟ ಸುಳಿಯ ದನದ ಪ್ರಭಾವ ಒಡೆಯನ ಮೇಲೆ ಆಗುವುದಿಲ್ಲವಂತೆ  (ಎಂ.ಜಿ. ಬಿರಾದಾರ : ೧೯೮೭ : ೪೨ – ೪೩).

ಎತ್ತಿನ ಕಾಲಿನಲ್ಲಿ ಅಂದರೆ ಎರಡೂ ಮುಂಗಾಲಿನ ಗೊರಸಿನ ಮೇಲೆ ಸುಳಿಗಳಿದ್ದರೆ ಬೇಡಿ ಸುಳಿ ಎನ್ನುವರು. ಅಂತಹ ಎತ್ತನ್ನು ಕೊಂಡರೆ ಮನೆಯಲ್ಲಿ ಯಾರಿಗಾದರೂ ಬೇಡಿ ಹಾಕಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎತ್ತಿನ ಎರಡೂ ಕಣ್ಣುಗಳ ಹತ್ತಿರ ಎರಡು ಸುಳಿ ಇದ್ದರೆ ಕೆಟ್ಟದ್ದು. ಆದರೆ ಮೂರು ಸುಳಿಗಳಿದ್ದರೆ ಒಳ್ಳೆಯದು. ಇದನ್ನು ‘ಬಾಸಿಂಗ ಸುಳಿ’ ಎನ್ನುವರು. ಇಂತಹ ಎತ್ತನ್ನು ಕೊಂಡರೆ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತದೆ ಎಂಬ ನಂಬಿಕೆ ಇದೆ. ಎತ್ತಿನ ಎದೆಗುಂಡಿಗೆ ಹತ್ತಿರ ಇರಡೂ ಕಡೆಗೆ ಸುಳಿಗಳಿರುತ್ತವೆ. ಅವನ್ನು ‘ಗುಂಡಿಗೆ ಸುಳಿ’ ಎನ್ನುವರು. ಇಂತಹ ಸುಳಿಯ ಎತ್ತುಗಳು ಒಳ್ಳೆಯವು. ಗುಂಡಿಗೆ ಸುಳಿಯಿಂದ ಸ್ವಲ್ವ ದೂರದಲ್ಲಿ, ಅಂದರೆ ಗುಂಡಿಗೆ ಸುಳಿ ಮೇಲುಗಡೆ ಎರಡಿಂಚು ಅಂತರದಲ್ಲಿ ಎರಡು ಸುಳಿಗಳಿದ್ದರೆ ಅವನ್ನು ‘ಎದುರು ಪಾಮ’ ಎಂದು ಕರೆಯುವರು. ಎದುರು ಪಾಮ ಇದ್ದ ಎತ್ತು ತುಂಬಾ ಬಲಿಷ್ಠವಾಗಿದ್ದು, ವ್ಯವಸಾಯದ ಕೆಲಸಕ್ಕೆ ತುಂಬಾ ಯೋಗ್ಯವಾಗಿರುತ್ತದಂತೆ. ಭುಜದ ಮೇಲೆ ನೇರವಾಗಿ ಇದ್ದರೆ ‘ರಾಶಿಸುಳಿ’ ಎನ್ನುವರು. ಇಂತಹ ಎತ್ತಿರುವ ಮನೆಯು ರಾಶಿ ಏರಿದಂತೆ ಏರುತ್ತದೆ ಎಂಬ ನಂಬಿಕೆ ಇದೆ. ಬೆನ್ನಮೇಲೆ ಇನ್ನೊಂದು ನಡುವೆ ಸುಳಿ ಇರುತ್ತದೆ. ಇದನ್ನು ‘ಸವಗುಡ್ಡ ಸುಳಿ’ ಎನ್ನುವರು. ಈ ಸುಳಿಗೆ ಬಡಿದರೆ ಅಥವಾ ಸುಳಿಯ ಮೇಲೆ ಕಲ್ಲನ್ನು ಇಟ್ಟರೆ ಎತ್ತು ಉಚ್ಚಿ ಹೊಯ್ಯುತ್ತದೆ. ಎತ್ತಿನ ಮೊಣಕಾಲ ಮೇಲೆ ಸುಳಿಗಳಿದ್ದರೆ, ಅವು ಕೆಡಕನ್ನುಂಟು ಮಾಡುವ ಸುಳಿಗಳಾಗಿರುತ್ತವೆ. ಒಟ್ಟಾರೆಯಾಗಿ, ಎತ್ತುಗಳಿಗೆ ಬೇಡಿ ಸುಳಿ, ಕಾಗಿ ಸುಳಿ, ಕಸಬರಿಗೆ ಸುಳಿ, ಕೀಲುಕಂಟಗ ಸುಳಿ, ಜೋಗಿ ಸುಳಿ, ಹಾಗೂ ಅಡಕಲು ಸುಳಿಗಳಿದ್ದರೆ ಒಳ್ಳೆಯ ಫಲ ಕೊಡುವುದಿಲ್ಲ ಎಂಬ ನಂಬಿಕೆ ಜನಪದರಲ್ಲಿ ದಟ್ಟವಾಗಿ ಇದೆ.

ಇನ್ನೂ ಕೆಲವೆಡೆ ಪೊರಕೆ ಸುಳಿ, ಸಂಕಾಲ ಸುಳಿ, ಕಾಡು ಸುಳಿ, ಗೂಬೆಸುಳಿ, ಚಟ್ಟದ ಸುಳಿ, ಬೆನ್ನು ಸುಳಿ, ಮಸ್ತಕ ಸುಳಿ…. ಹೀಗೆ ಹಲವಾರು ಸುಳಿಗಳನ್ನು ಗುರುತಿಸುತ್ತಾರೆ. ಹೀಗಿರುವ ಒಂದೊಂದು ಸುಳಿಗೂ ಅದರದೇ ಆದ ಅರ್ಥ, ಪ್ರಾಮುಖ್ಯತೆ ಇದೆ. ಸುಳಿ ಎತ್ತಿನ ಯಾವ  ಭಾಗದಲ್ಲಿದೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದೋ ಎಂದು ತೀರ್ಮಾನಿಸುತ್ತಾರೆ. ‘ಸಂಕಾಲ ಸುಳಿ’ ಮುಂಗಾಲಿನ ಗೆಣ್ಣಿನಿಂದ ಕೆಳಗಿರುತ್ತದೆ. ‘ಕಾಡುಸುಳಿ’ ಪಕ್ಕೆಗಳ ಮೇಲಿರುತ್ತದೆ. ಕಾಡುಸುಳಿ ಇರುವ ರಾಸು ಕಟ್ಟಿದರೆ ಕಾಡಿಸುತ್ತವೆ ಎಂಬ ಭಾವನೆಯಿಂದ ರೈತರು ಕಟ್ಟುವುದಿಲ್ಲ. ‘ಹೀನ ಸುಳಿ’ ಹಿಂಗಾಲಿನ ಪಂಜದ ಮೇಲಿರುತ್ತದೆ. ಇದು ತುಂಬ ಕೆಟ್ಟ ಸುಳಿ ಎಂಬ ನಂಬಿಕೆಯಿದೆ. ಬಾಲದ ಬುಡದ ‘ಗೂಬೆ ಸುಳಿ’ ಇದೂ ಅನಿಷ್ಟವಂತೆ. ‘ಕೀಲು ಸುಳಿ’ ಕೀಲಿನ ಮುಂಭಾಗದಲ್ಲಿರುತ್ತದೆ. ‘ಪೊರಕೆ ಸುಳಿ’ ಬಾಲದಲ್ಲಿದ್ದು, ಇದನ್ನು ಕಟ್ಟಿದರೆ ಒಳ್ಳೆಯದಾಗುವುದಿಲ್ಲ ಎಂಬ ನಂಬಿಕೆ ಇದೆ. ‘ಪಾತಾಳ ಸುಳಿ’ ಹಿರಿಳಿನ ಮೇಲಿರುತ್ತದೆ. ಈ ರಾಸನ್ನು ಕಟ್ಟಿದರೆ ಪಾತಾಳಕ್ಕೆ ಹೋಗುತ್ತಾರಂತೆ. ‘ಮುಕ್ಕಣ್ಣ ಸುಳಿ’ ಯು ಮುಖದ ಮೇಲೆ ಕಣ್ಣಿನ ನೇರದಲ್ಲಿರುತ್ತದೆ. ‘ಚಕ್ರಸುಳಿ’ ಯು ಕಣ್ಣಿನ ನೇರಕ್ಕೆ ಕೆಳಗಿರುತ್ತದೆ. ಇವೆರಡೂ ಕೆಟ್ಟ ಸುಳಿಗಳು. ತಲೆಯ ಮೇಲಿರುವ ಸುಳಿ ‘ಬಾಸಿಂಗ ಸುಳಿ’ ಈ ಸುಳಿ ಇರುವ ರಾಸುಗಳನ್ನು ಮದುವೆ ಆಗಿರುವವರು ಕಟ್ಟಬಾರದಂತೆ. ‘ಜೊತಗ ಸುಳಿ’ ಇದು ಗೋಮಾಳೆಯಿಂದ ಕೆಳಕ್ಕಿದ್ದು ತುಂಬ ಒಳ್ಳೆಯ ಸುಳಿ. ಈ ಸುಳಿ ಇರುವ ರಾಸುಗಳನ್ನು ಹುಡುಕಿ, ಹುಡುಕಿ ಕೊಳ್ಳುತ್ತಾರೆ. (ಅಶೋಕ ಹೇರಿಂದ್ಯಾಪನಹಳ್ಳಿ; ೨೦೦೦ :೮).

ಡಾ|| ಎಚ್. ಎಲ್. ನಾಗೇಗೌಡರು ದನಗಳ ಸುಳಿಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ. ಅವುಗಳೆಂದರೆ; ‘ಕೀಲುಸುಳಿ, ಪಾತಾಳ ಸುಳಿ, ಪರಕು ಸುಳಿ, ಹೀನ ಸುಳಿ, ದಾವಣಿ ಸುಳಿ, ರಾಜಾ ಸುಳಿ, ಮಂತ್ರಿ ಸುಳಿ, ಹೇಡಿ ಸುಳಿ, ಚೊಟ್ಟ ಬಡಗಿಸುಳಿ, ಬರಗಸುಳಿ, ಮುಕ್ಕಣ್ಣ ಸುಳಿ, ಬಾಸಿಂಗ ಸುಳಿ, ಛತ್ರಿ ಸುಳಿ, ನಾಮದ ಸುಳಿ, ಗುಂಡಿಗೆ ಸುಳಿ, ಬೇಡಿ ಸುಳಿ, ವಕ್ರ ಸುಳಿ, ನಗಾರಿ ಸುಳಿ, ಮಡಿಕೆ ಸುಳಿ ಮುಂತಾದವು. (ಡಾ. ಹೆಚ್.ಎಲ್. ನಾಗೇಗೌಡ; ೧೯೮೮ : ೫).

‘ಸುಳಿ’ ಇದು ದನಗಳಿಗೆ ಹುಟ್ಟಿನಿಂದ ಬಂದುದು ಅಲ್ಲದೆ ಸಾಯುವವರೆಗೆ ಉಳಿಯುವಂತಹದ್ದು. ಆದ್ದರಿಂದ “ಹೀನ ಸುಳಿ ಬೋಳಿಸಿದರೆ ಹೋದೀತೇ” ಎಂಬುದು ಲೋಕೋಕ್ತಿ. ಸುಳಿ ಎಲ್ಲ ದನಗಳಿಗೆ ಇದ್ದರೂ, ಕುರಿ-ಆಡುಗಳನ್ನು ಕೊಳ್ಳುವಾಗ ಸಾಮಾನ್ಯವಾಗಿ ಸುಳಿ ನೋಡುವುದಿಲ್ಲ. ದನಗಳಲ್ಲದೆ ಕುದುರೆಯ ಸುಳಿಗಳನ್ನು ಅತಿ ಸೂಕ್ಷ್ಮವಾಗಿ ನೋಡುವುದುಂಟು. ಆಕಳು, ಎತ್ತುಗಳಿಗೆ ಮುಂಭಾಗಕ್ಕೆ ಕೆಳಕ್ಕೆ ಮಾತ್ರ ಎಂಟು ಹಲ್ಲುಗಳಿರುತ್ತವೆ. ಯಾವ ದನಗಳಿಗೂ ಏಳು ಹಲ್ಲುಗಳಿರಬಾರದು. ಏಳುಹಲ್ಲಿನ ದನ ಗೋಳು ಮಾಡುವುದೆಂದು ಒಕ್ಕಲಿಗನ ನಂಬಿಗೆ.

“ಹಣೆಯ ಮೇಲೆ ನಡುವೆ ಒಂದು ಸುಳಿ ಇದ್ದರೆ ‘ಕುಂಕುಮ ಸುಳಿ’. ಹಣೆಯ ಮೇಲೆ ರೇಖೆಯಂತೆ ಒಂದು ಸುಳಿ ಇದ್ದರೆ ‘ನಾಮ ಸುಳಿ’. ಹಣೆಯ ಮೇಲೆ ಒಂದು ಮೇಲೊಂದು ಎರಡು ಸುಳಿ ಇದ್ದರೆ ‘ಅಡಕಲ ಸುಳಿ’. ಹಣೆಯ ಮೇಲೆ ತ್ರಿಕೋನದಂತೆ ಮೂರು ಸುಳಿ ಇದ್ದರೆ ‘ಬಾಸಿಂಗ ಸುಳಿ’ ಎರಡು ಕೋಡುಗಳ ಮಧ್ಯೆ ಒಂದು ಸುಳಿ ಇದ್ದರೆ, ‘ಮಸಕದ ಸುಳಿ’. ಜಂತಿಗೆಯಲ್ಲಿ ಸಿಗುವಂತೆ ಕುತ್ತಿಗೆಯಲ್ಲಿ ಎರಡು ಸುಳಿ ಇದ್ದರೆ ‘ಉರಲು ಸುಳಿ’ ಎದೆಯ ಮೇಲೆ ಇಬ್ಬದಿಯಲ್ಲಿ ಒಂದೊಂದರಂತೆ ಎರಡು ಸುಳಿಗಳಿದ್ದರೆ ‘ಎದೆಯ ಸುಳಿಗಳು’. ಇಣಿಯ ಮುಂಭಾಗದಲ್ಲಿ ಹೆಗಲ ಮೇಲೆ ಒಂದು ಸುಳಿ ಇದ್ದರೆ ‘ನೊಗ ಮುರುಕ ಸುಳಿ’ ಇಣಿಯ ಹಿಂಬಾಗದಲ್ಲಿ ಒಂದು ಸುಳಿ ಇದ್ದರೆ ‘ಕಾಗಿ ಸುಳಿ’ ಇಣಿಯ ತುದಿಯಲ್ಲಿರುವ ಸುಳಿ ‘ಬೆಟ್ಟದ ಸುಳಿ ಅಥವಾ ಗೋಪುರ ಸುಳಿ’. ಬೆನ್ನ ಮೇಲೆ ಮುಂಭಾಗದಲ್ಲಿ ಒಂದು ಸುಳಿ ಇದ್ದರೆ ‘ರಾಜಾಸುಳಿ’. ಬೆನ್ನ ಮೇಲೆ ಮುಂಭಾಗದಲ್ಲೊಂದು ಹಿಂಭಾಗದಲ್ಲೊಂದು ಸುಳಿ ಇದ್ದರೆ ‘ದಾವಣಿ ಸುಳಿ’ ಬೆನ್ನ ಮಧ್ಯದಲ್ಲಿ ಒಂದು ಸುಳಿಯಿದ್ದು ಅದರ ಮೇಲಿನ ನೀರು ಕೆಳಗೆ ಮೂತ್ರಧಾರೆಗೆ ಕೂಡುವಂತಿರುವ ಸುಳಿ ‘ಮುಟ್ಟುಸುಳಿ ಅಥವಾ ಮೂತ್ರಸುಳಿ’ ಬೆನ್ನ ಮೇಲೆ ಹಿಂಭಾಗದಲ್ಲಿ ಒಂದು ಸುಳಿ ಇದ್ದರೆ ‘ಗದ್ದಗಿ ಸುಳಿ’ ಹೊಟ್ಟೆಯ ಕೆಳಭಾಗದಲ್ಲಿ ಹೊಕ್ಕಳ ಹತ್ತಿರ ಒಂದು ಸುಳಿ ಇದ್ದರೆ ‘ಹೊಕ್ಕಳ ಸುಳಿ’ ಮುಂಗಾಲ ಮಂಡಿಯ ಹಿಂದಿರುವ ಒಂದು ಸುಳಿ ‘ಬೇಡಿ ಸುಳಿ ಅಥವಾ ಜಿರಳಿ ಸುಳಿ’. ಹಿಂಗಾಲ ಚಪ್ಪೆಯ ಕೆಳಗಿರುವ ಒಂದು ಸುಳಿ’ ವಕ್ರ ಸುಳಿ’. ಬಾಲದ ಮೇಲಿರುವ ಒಂದು ಸುಳಿ ‘ಬಾರಿಗಿ ಸುಳಿ’ ಎರಡು ಕಣ್ಣುಗಳ ಮಧ್ಯೆ ಒಂದು ಸುಳಿ ಇದ್ದರೆ ‘ಮುಕ್ಕಣ್ಣ ಸುಳಿ’ ಎನ್ನುವರು” (ಡಾ. ಎಂ.ಎನ್. ವಾಲಿ ೧೯೮೯ :೬).

ಕುಂಕುಮ ಸುಳಿ, ನಾಮ ಸುಳಿ, ಎದೆಯ ಸುಳಿಗಳು, ಬೆಟ್ಟದ ಸುಳಿ, ಅಥವಾ ಗೋಪುರ ಸುಳಿ, ರಾಜಾ ಸುಳಿ, ದಾವಣಿ ಸುಳಿ, ಗದ್ದಿಗೆ ಸುಳಿ, ಹೊಕ್ಕಳ ಸುಳಿ, ನಾಗರ ಹೆಡೆಯಂತಿರುವ ಬಾರಿಗೆ ಸುಳಿಯ ದನಗಳು ಶುಭ ಫಲವನ್ನು ನೀಡುವವು. ಇನ್ನುಳಿದ ಸುಳಿ ಇರುವ ದನಗಳು ಅಶುಭ ಫಲ ನೀಡುವವು.

ರಘುನಾಥ ಕೊಡಗಹಳ್ಳಿ ಅವರು ಜಾನಪದ ಜಗತ್ತು ಸಂಚಿಕೆಯಲ್ಲಿ ಮಂಡ್ಯ ಪರಿಸರದಲ್ಲಿರುವ ದನಗಳ ಸುಳಿಗಳನ್ನು ಗುರುತಿಸಿದ್ದಾರೆ. ಅವರು ತಮ್ಮ ‘ಸುಳು ಮತ್ತು ಜನಪದ ನಂಬಿಕೆಗಳು’ ಎಂಬ ಲೇಖನದಲ್ಲಿ ದನದ ಮೈಯಲ್ಲಿ ಒಟ್ಟು ೨೧ ಸುಳಿಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ ‘ರಾಜಾ ಸುಳಿ, ದಾವಣಿ ಸುಳಿ, ಮಂತ್ರಿ ಸುಳಿ, ವಕ್ರಸುಳಿ, ಪಾತಾಳ ಸುಳಿ, ಕೀಲುಸುಳಿ, ಚೊಟ್ಟದ ಬಡಿಗೆ ಸುಳಿ, ಗುಂಡಿಗೆ ಸುಳಿ, ಮುಕ್ಕಣ್ಣ ಸುಳಿ, ಬಾಸಿಂಗ ಸುಳಿ, ಬೇಡಿಸುಳಿ, ವಕ್ರಸುಳಿ, ನಗಾರಿ ಸುಳಿ, ಚತ್ರು ಸುಳಿ, ಮಸಕದ ಸುಳಿ, ಹೀನಸುಳಿ, ಹೊಕ್ಕಳಸುಳಿ, ಕಂಕುಳ ಸುಳಿ, ಬೆಟ್ಟದ ಸುಳಿ, ನಾಗರ ಸುಳಿ ಮತ್ತು ಮಡಿಕೆ ಸುಳಿ’ ಎಂದು ಗುರುತಿಸುತ್ತಾರೆ. (೧೯೮೬; ೩-೪).

‘ರಾಜಾ ಸುಳಿ’ ಸುಳಿಗಳಲ್ಲಿ ಅತ್ಯಂತ ಶ್ರೇಷ್ಟವಾದುದು. ‘ಉತ್ತಮ ವಂಶಿಕನ ಹೊಟ್ಟೆಯಲ್ಲಿ ವಂಶಿಕ ಹುಟ್ಟಿದ ಹಾಗೆ ‘ ಎಂದು ರಾಜಾಸುಳಿಯ ಬಗ್ಗೆ ಜನಪದರ ನಾಣ್ಣುಡಿಯಿದೆ. ಭುಜದ ಹಿಂದೆ ಒಂದು ಗೇಣು ದೂರದಲ್ಲಿ ಅಂದರೆ, ನಡುಬೆನ್ನಮೇಲೆ ಇದು ಕಂಡುಬರುತ್ತದೆ. ಈ ಸುಳಿ ಇರುವ ಪಶುವಿಗೆ ಬೇಡಿಕೆ ಹೆಚ್ಚು. ‘ದಾವಣಿ ಸುಳಿ’ ಪಶುದೇಹದಲ್ಲಿ ಕಂಡುಬರುವ ವಿಶಿಷ್ಟ ಸುಳಿಗಳಲ್ಲಿ ಒಂದು. ಅಪರೂಪಕ್ಕೆ ಕೆಲವೊಂದು ಪಶುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ದಾವಣಿ ಸುಳಿ ಇರುವ ಹಸು-ಎತ್ತುಗಳು ಮನೆಯಲ್ಲಿ ಹುಟ್ಟಿದರೆ ‘ಕರೇವು ವರ್ಷಂಬತ್ತು ಕಾಲ ಇರುತ್ತದೆ’ ಹಾಗೂ ‘ದನಗಳು ಸಾಲುಸಾಲಾಗಿ ಹುಟ್ಟುತ್ತವೆ’ ಎಂದು ನಮ್ಮ ಜನಪದರು ನಂಬಿದ್ದಾರೆ. ಈ ಸುಳಿ ರಾಜಾಸುಳಿಯ ಮುಂದಕ್ಕೆ ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತದೆ. ‘ಮಂತ್ರಿಸುಳಿ’ಯು ರಾಜಾಸುಳಿ ಮತ್ತು ದಾವಣಿಸುಳಿ ಇವೆರಡರ ಮಧ್ಯೆ ಕಂಡುಬರುತ್ತದೆ. ಈ ಸುಳಿಯ ಬಗ್ಗೆ ವಿಶಿಷ್ಟ ಅಭಿಪ್ರಾಯವೇನಿಲ್ಲ. ‘ವಕ್ರ ಸುಳು’ ಇದನ್ನು ಗಲ್ಲದ ಸುಳಿ ಎಂತಲೂ ಕರೆಯುತ್ತಾರೆ. ಹಿಂಗಾಲ ಚಪ್ಪೆಯ ಕೆಳಗೆ ಕಂಡುಬರುತ್ತದೆ. ಈ ಸುಳಿ ಇರುವ ಪಶು ಹೊಂದಿದ ಮಾಲೀಕನಿಗೆ ಗ್ರಹಚಾರ ವಕ್ಕರಿಸಿದ ಹಾಗೆ ಎನ್ನುತ್ತಾರೆ. ‘ಪಾತಾಳ ಸುಳಿ’ ಯು ಅಪರೂಪವಾಗಿ ಕಂಡು ಬರುವ ಸುಳಿಗಳಲ್ಲಿ ಒಂದು. ಪಶುವಿನ ಭುಜದ ಮೇಲೆ ಕಂಡು ಬರುತ್ತದೆ. ಇಂತಹ ಪಶು ಮನೆಯಲ್ಲಿ ಹುಟ್ಟಿದರೆ ಕೂಡಲೇ ಮಾರುವ ವ್ಯವಸ್ಥೆಯನ್ನು ಮಾಡುತ್ತಾರೆ. ಏಕೆಂದರೆ ‘ಪಾತಾಳಕ್ಕೆ ಹೋದಂಗೆ’ ಎಂಬ ನಂಬಿಕೆಯಿದೆ.

‘ಕೀಲುಸುಳಿ’ಯು ಕೂಡ ವಿಶೇಷವಾಗಿ ಕಂಡುಬರುವ ಸುಳಿ, ಪಶುವಿನ ಹಿಂಗಾಲ ಕೀಲಿನ ಭಾಗದಲ್ಲಿ ಕಂಡು ಬರುತ್ತದೆ. ‘ಕೀಲು ಸುಳಿ’ ಪಶುವಿದ್ದರೆ ‘ಕೀಲು ಮುರಿದಂಗೆ’ ಎನ್ನುತ್ತಾರೆ. ವ್ಯವಸಾಯಕ್ಕೆ ನಾಲಾಯಕ್ಕಾಗಿರುವ ಈ ಪಶುಗಳು ವ್ಯಾಪಾರ ದೃಷ್ಟಿಯಿಂದ ಕಡಿಮೆ ಬೆಲೆಯುಳ್ಳದ್ದಾಗಿರುತ್ತದೆ. ನೋಡಲು ದಷ್ಟಪುಷ್ಟವಾಗಿದ್ದರೂ ಈ ಸುಳಿ ಇರಬಾರದೆಂಬುದು ಹಳ್ಳಿಗರ ವಾದ. ‘ಚೊಟ್ಟದ ಬಡಿಗೆ ಸುಳಿ’ ಕೆಲವು ಪಶುಗಳಲ್ಲಿ ನೊಗವನ್ನು ಇಡುವಂತಹ ಸ್ಥಳದಲ್ಲಿ ಅಂದರೆ ಹೆಗಲ ಮೇಲೆ ಈ ಸುಳಿಯನ್ನು ನೋಡಬಹುದು. ಇದು ಇರಬಾರದೆಂಬ ನಂಬಿಕೆ ಇದೆ. ‘ಗುಂಡಿಗೆ ಸುಳಿ’ ಯು ಬಹುಪಾಲು ಪಶುಗಳಲ್ಲಿ ಕಂಡುಬರುವುದರಿಂದ ಇದನ್ನು ಖಾಯಂ ಸುಳಿಗಳ ಗುಂಪಿಗೆ ಸೇರಿಸಬಹುದು. ಎದೆಗೂಡಿನ ಬಳಿ ಕಂಡುಬರುವುದರಿಂದ ಇದನ್ನು ಗುಂಡಿಗೆ ಸುಳಿ ಎನ್ನುತ್ತಾರೆ. ಗುಂಡಿಗೆಯ ಸ್ಥಳವನ್ನು ಬಿಟ್ಟು ಸ್ವಲ್ಪ ಅದಲು ಬದಲಾದರೂ ಪಶುವಿನ ಬೆಲೆಯಲ್ಲಿ ಏರಿಳಿತವುಂಟಾಗುತ್ತದೆ. ದೊಡ್ಡ ಹುಟ್ಟಿನ ದನಗಳಲ್ಲಿ ಕಂಡು ಬರುವ ಈ ಸುಳಿ ‘ಕೆಟ್ಟದಂತೂ ಅಲ್ಲ’ ‘ಮುಕ್ಕಣ್ಣ ಸುಳಿ’ ಪಶುವಿನ ಎರಡು ಕಣ್ಣುಗಳ ಮಧ್ಯೆ ಇರುತ್ತದೆ. ಇಂತಹ ಪಶುವನ್ನು ಹೊಂದಿದವನಿಗೆ ‘ಕೇಡು ತಪ್ಪಿದ್ದಲ್ಲ’ ಎಂದು ನಂಬಿಕೆ ಇದೆ. ‘ಬಾಸಿಂಗ ಸುಳಿ’ ಯನ್ನು ‘ಪಟ್ಟ ಸುಳಿ’ ಎಂತಲೂ ಕರೆಯುತ್ತಾರೆ ಮದುವೆಯಾದವರು ಈ ಸುಳಿಯುಳ್ಳ ಪಶುಕಟ್ಟಿದರೆ ಒಳ್ಳೆಯದು, ಮದುವೆಯಾಗದವರು ಕಟ್ಟಿದರೆ ಕೆಟ್ಟದ್ದು ಎಂಬ ನಂಬಿಕೆಯುಂಟು. ‘ಬಾಸಿಂಗ ಸುಳಿ’ ದನ ತಂದವನು ಎರಡು ಮದುವೆಯಾದವಳನ್ನು ಕಟ್ಟಿಕೊಂಡ ಹಾಗೆ’ ಎನ್ನುತ್ತಾರೆ. ಈ ಪಶುಗಳು ಚಂಗಲು ಗುಣವನ್ನು ಹೊಂದಿರುತ್ತವಾದ್ದರಿಂದ ಬೆಲೆ ಕಡಿಮೆ. ಅಲ್ಲದೆ ಬಲಹೀನವೂ ವ್ಯವಸಾಯಕ್ಕೆ ಅನರ್ಹವೂ ಎಂದು ಹೇಳುತ್ತಾರೆ.

‘ಬೇಡಿ ಸುಳಿ’ಯನ್ನು ‘ಸಂಕಾಲ ಸುಳಿ’ ಎಂತಲೂ ಕರೆಯುತ್ತಾರೆ. ಇಂತಹ ದನ ಕಟ್ಟಿದರೆ ‘ಬೇಡಿ ಹಾಕಿಸಿಕೊಂಡು ಕುಂತಾಗೆ’ ಎನ್ನುತ್ತಾರೆ. ಮುಂಗಾಲು ಮಂಡಿಯ ಹಿಂಭಾಗದಲ್ಲಿ ಈ ಸುಳಿ ಕಂಡು ಬರುತ್ತದೆ. ‘ವಕ್ರ ಸುಳಿ ದನ ತಂದು ಪೊರದಾಡ್ತಾವ್ನೆ ನೋಡು’ ಎಂಬ ಮಾತು ಹಳ್ಳಿಗಳಲ್ಲಿ ಕೇಳಿಬರುವುದುಂಟು. ಬಾಲದ ದಿಂಡಿನ ಮಧ್ಯದಲ್ಲಿ ಕಂಡುಬರುವ ಈ ಸುಳಿ ಇದ್ದರೆ ವ್ಯವಸಾಯದಲ್ಲಿ ಜಂಜಾಟವೇ ಜಾಸ್ತಿ ಎಂದು ನಂಬಿದ್ದಾರೆ. ‘ನಗಾರಿ ಸುಳಿ’ ಯನ್ನು ‘ಜೋಡಿ ಸುಳಿ’ ಎಂತಲೂ ಕರೆಯುತ್ತಾರೆ. ರಾಜಾ ಸುಳಿಯ ಅಕ್ಕಪಕ್ಕದಲ್ಲಿ ಸಮಾನಾಂತರವಾಗಿ ಕಂಡು ಬರುವ ಈ ಸುಳಿ ಆರಂಭಕಾರನಿಗೆ ಒಳ್ಳೆಯದಲ್ಲ. ‘ಚತ್ರುಸುಳಿ’ ಯನ್ನು ‘ಕೊಡೆಯ ಮೇಲೆ ಕೊಡೆ’ ಎನ್ನುತ್ತಾರೆ. ಮುಕ್ಕಣ್ಣ ಸುಳಿಯಿಂದ ಮೇಲಕ್ಕಿದ್ದು ಆಕಾರದಲ್ಲಿ ಛತ್ರಿಯ ರೂಪದಲ್ಲಿರುವುದರಿಂದ ಈ ಹೆಸರು ಬಂದಿದೆ. ನೋಡಿದ ಕೂಡಲೇ ಎಲ್ಲರಿಗೂ ಎದ್ದು ಕಾಣುವುದರಿಂದ ಪಶುವಿನ ಬೆಲೆಗೆ ಧಕ್ಕೆ. ಕೆಟ್ಟ ಸುಳಿಗಳಲ್ಲಿ ಇದೂ ಒಂದು. ‘ಮಸಕದ ಸುಳಿ’ ಯ ದನ ಕಟ್ಟಿದರೆ ಯಾವಾಗಲೂ ‘ಮಸೆದಾಟ ಜಾಸ್ತಿ’ ಎಚ್ಚರ ಇಟ್ಟ ಹಾಗೆ ಎಂದು ನಂಬಿದ್ದಾರೆ. ಎರಡು ಕೊಂಬುಗಳ ಮಧ್ಯೆ ಕಂಡುಬರುವ ಈ ಸುಳಿ ಇರುವ ದನಗಳಿಗೆ ರೋಷ ಜಾಸ್ತಿ.

‘ಹೀನ ಸುಳಿ’ಯು ದನಗಳ ತೊಡೆಯ ಮೇಲೆ ಕಂಡು ಬರುತ್ತದೆ. ಈ ಸುಳಿಯಿರುವ ದನ ಕಟ್ಟಿದರೆ ‘ಹಣ ನಾಶವಾಗಿ ಬೇರೆಯವರ ಅಪವಾದಕ್ಕೆ ಗುರಿಯಾಗುತ್ತಾರೆ’ ಎಂಬ ನಂಬಿಕೆ ಇದೆ. ‘ಹೊಕ್ಕಳ ಸುಳಿ’ ಪಶುವಿನ ಅಡಿಹೊಟ್ಟೆಯ  ಹೊಕ್ಕುಳ ಭಾಗದಲ್ಲಿ ಕಂಡುಬರುವುದು. ಇದು ಇದ್ದರೆ ತಪ್ಪೇನಿಲ್ಲ. ‘ ಕಂಕುಳ ಸುಳಿ’ ಗುಂಡಿಗೆಯ ಅಕ್ಕಪಕ್ಕದಲ್ಲಿ ಮುಂಗಾಲ ಹತ್ತಿರ ಕಂಡುಬರುತ್ತದೆ. ಈ ಸುಳಿ ಇದ್ದರೆ ತಪ್ಪೇನಿಲ್ಲ. ‘ಬೆಟ್ಟದ ಸುಳಿ’ ಯನ್ನು ‘ಗೋಪುರ ಸುಳಿ’ ಎಂತಲೂ ಕರೆಯುತ್ತಾರೆ. ದನಗಳ ಭುಜನ ಮೆಲೆ ಕಂಡುಬರುವ ಈ ಸುಳಿ ಒಳ್ಳೆಯದು ಎನ್ನುತ್ತಾರೆ. ‘ನಾಗರ ಸುಳಿ’ ಯು ಬಾಲದ ಬಲಭಾಗದ ಮಗ್ಗುಲಲ್ಲಿ ಕಂಡು ಬಂದು ನಾಗರಹಾವಿನ ಹೆಡೆಯಂತೆ ಕಂಡು ಬರುತ್ತದೆ. ಈ ಪಶುಗಳು ನಾಗರ ಹಾವಿನಂತೆ ಭುಸುಗುಟ್ಟುತ್ತವೆ. ಕೆಟ್ಟ ಸುಳಿಗಳಲ್ಲಿ ಇದೂ ಒಂದು. ‘ಮಡಿಕೆ ಸುಳಿ’ ಯ ತೊಡೆಯ ಮೇಲೆ ಕಂಡು ಬರುತ್ತದೆ. ಈ ಸುಳಿಯ ಬಗ್ಗೆ ವಿಶೇಷ ನಂಬಿಕೆಯೇನು ಇಲ್ಲ.