ಸುಳಿ

ನಂಬಿಕೆಯನ್ನು ಮೂಲವಾಗಿರಿಸಿಕೊಂಡಿರುವ ಬದುಕು ಮನುಷ್ಯನ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಅಂದರೆ ನಮ್ಮ ನಂಬಿಕೆಯ ಪೂರ್ವದಲ್ಲಿ ಮನುಷ್ಯನ ಆರ್ಥಿಕ ನೆಲೆ ಮತ್ತು ಆರ್ಥಿಕ ಸ್ಥಳಾಂತರಗಳು ಇವೆ. ಹಾಗೆ ನೋಡಿದರೆ ಬಹುತೇಕ ನಂಬಿಕೆಗಳಿಗೆ ಆರ್ಥಿಕ ಅಪೇಕ್ಷೆಗಳೇ ಕಾರಣವಾಗುತ್ತವೆ. ಅಂತಹವುಗಳಲ್ಲಿ ‘ಸುಳಿ’ ಯ ಬಗೆಗಿನ ಬಹುಪಾಲು ನಂಬಿಕೆಗಳು ಆರ್ಥಿಕತೆಯನ್ನು ತಮ್ಮ ಬೆನ್ನಿಗಂಟಿಸಿಕೊಂಡಿವೆ. ಇದನ್ನು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಸುಳಿಯನ್ನು ಗುರುತಿಸುವ ಭೌತಿಕ ಮತ್ತು ಜೈವಿಕ ವಸ್ತುಗಳನ್ನು ನೋಡಿದಾಗ ಗೊತ್ತಾಗುತ್ತದೆ. ಸಾಮಾನ್ಯವಾಗಿ ಕುದುರೆ, ಎತ್ತು, ಹೆಣ್ಣು, ಸಸ್ಯ, ಗಾಳಿ, ಕಲ್ಲು, ನೀರು ಇತ್ಯಾದಿಗಳಲ್ಲಿ ಸುಳಿಯನ್ನು ಗುರುತಿಸುತ್ತಾರೆ. ಒಂದು ಕಾಲದಲ್ಲಿ ಹಾಗೂ ಇತ್ತೀಚೆಗೂ ಸಹ ಕುದುರೆ, ಹೆಣ್ಣು (ಹೆಣ್ಣನ್ನು ಮದುವೆ ಮಾಡಿಕೊಳ್ಳುವ ಮುಖ್ಯ ಉದ್ದೇಶ, ಅವಳು ಮನೆಯನ್ನು ಸರ್ವ ವಿಧದಲ್ಲಿ ಬೆಳಗುತ್ತಾಳೆ ಎಂಬುದಾಗಿದೆ). ಎತ್ತು ಮತ್ತು ಸಸ್ಯ ಇವುಗಳು ಆರ್ಥಿಕ ಚಟುವಟಿಕೆಯ ಬಹುಮುಖ್ಯ ಅಂಶಗಳಾಗಿವೆ.

ಕುದುರೆ, ಹೆಣ್ಣು ಮತ್ತು ಎತ್ತುಗಳ ಮೈಮೇಲಿನ ರೋಮಗಳು ಸಹಜವಾದ ರೀತಿಯಲ್ಲಿರದೆ, ಉಂಗುರಾಕಾರದಲ್ಲಿದ್ದರೆ ಅದಕ್ಕೆ ಸುಳಿ ಎನ್ನುವರು. ಆಕಾರದಲ್ಲಿ ಸುರುಳಿ ಸುರುಳಿಯಾಗಿ ರೋಮಗಳು ಒಂದು ಕೇಂದ್ರಬಿಂದುವಿನಿಂದ ಸುತ್ತಿಕೊಂಡಿರುವುದರಿಂದ ಸುಳಿ ಎಂಬ ಅರ್ಥ ಬಂದಿರಬಹುದು. ಸುಳಿ ಎಂದರೆ ವಂಶದ ಕುಡಿ ಎಂಬ ಇನ್ನೊಂದು ಅರ್ಥವೂ ಇದೆ. “ನಿನ್ನ ಸುಳಿ ಹಾಳಾಗ” ಎಂಬ ಬೈಗುಳದ ನುಡಿಯೊಂದಿದೆ. (ಎತ್ತಿನ ಸುಳಿ ಎಂದರೆ ಒಂದು ಹೆಬ್ಬೆಟ್ಟಿನಗಲ ಕೂದಲು ಸುಳಿಯಂತೆ ಸುತ್ತಿಕೊಂಡು ಮಧ್ಯೆ ಗುಳಿ ಇರುತ್ತದೆ). ಹಾಗೆಯೇ ಗಿಡದ ಕಾಂಡವನ್ನು ಕೊರೆದು ಅದರೊಳಗಿರುವ ಸುಳಿಯನ್ನು ಗುರುತಿಸಬಹುದು. ಜೊತೆಗೆ ಅದರ ಆಯುಷ್ಯವನ್ನು ಸಹ ಹೇಳಬಹುದು. ತೆಂಗು, ಬಾಳೆ ಮತ್ತು ಜೋಳದ ಸಸ್ಯಗಳಿಗೆ ಸುಳಿಯನ್ನು ಗುರುತಿಸುವವರಲ್ಲದೆ, ಸುಳಿ ಬಿದ್ದರೆ ಸಸ್ಯಗಳು ಸತ್ತುಹೋಗುವುದೆಂದು ಭಾವಿಸುವರು. ನೀರು ಸಹಜ ರೀತಿಯಲ್ಲಿ ಹರಿಯದೆ ಚಕ್ರಾಕಾರವಾಗಿ ಅಥವಾ ಉಂಗುರಾಕಾರದಲ್ಲಿ ಸುಳಿಯಾಗಿ ಹರಿದಾಗ ಆ ಜಾಗಕ್ಕೆ ಸುಳಿ ಎನ್ನುವರು. ಗಾಳಿ, ಕಲ್ಲುಗಳಲ್ಲು ಸಹ ಜನಪದರು ಸುಳಿಯನ್ನು ಗುರುತಿಸಿರುವುದು ಕಂಡು ಬರುತ್ತಿದೆ.

ಸುಳಿಯನ್ನು ಗುರುತಿಸುವ ವಸ್ತುಗಳ ಆಧಾರದ ಮೇಲೆ, ಭೌತಿಕ ವಸ್ತುಗಳಾದ ಗಾಳಿ, ಕಲ್ಲು, ನೀರು ಮುಂತಾದವುಗಳ ಮೇಲಿರುವ ಸುಳಿ, ಜೈವಿಕ ವಸ್ತುಗಳಾದ ಮನುಷ್ಯ, ಎತ್ತು, ಕುದುರೆ ಹಾಗೂ ಸಸ್ಯಗಳ ಮೇಲಿರುವ ಸುಳಿ.

ಸುಳಿಯ ಗುಣ ಲಕ್ಷಣಗಳು

ಆರ್ಥಿಕ ಅಪೇಕ್ಷೆಯ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವ ಸುಳಿಯ ಬಗೆಗಿನ ನಂಬಿಕೆಗಳು ಅನಾದಿ ಕಾಲದಿಂದಲೂ ಬಂದಿವೆ. ಕಾಲಕ್ಕೆ ಅನುಗುಣವಾಗಿ ಇವು ಬದಲಾಗುತ್ತಲೂ ಇರುತ್ತವೆ. ಅಂದರೆ ‘ಸುಳಿ’ ಬಗೆಗಿನ ನಂಬಿಕೆಗಳ ಹುಟ್ಟು ಮತ್ತು ಸಾವನ್ನು ತೀರ್ಮಾನಿಸುವುದು ಕಾಲ. ಒಂಟಿ ಮನುಷ್ಯನಲ್ಲ. ಒಂದು ಕಾಲಕ್ಕೆ ಇದ್ದ ಸುಳಿಯ ಬಗೆಗಿನ ನಂಬಿಕೆ ಮತ್ತೊಂದು ಕಾಲಕ್ಕೆ ಬೇಕಾಗದಿದ್ದಾಗ ಆ ಕಾಲ ನಿರ್ದ್ಯಾಕ್ಷಿಣ್ಯವಾಗಿ ತೆಗೆದು ಹಾಕುತ್ತದೆ ಅಥವಾ ಅದರ ಬಗೆಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತದೆ. ಈ ತೆರೆನಾಗಿರುವ ‘ಸುಳಿ’ ಯು ತನ್ನದೇ ಆದ ಹಲವಾರು ಗುಣಲಕ್ಷಣಗಳನ್ನು ಹೊಂದಿದೆ.

ಮಾನಸಿಕ ಗುಣ : ಸುಳಿಯ ಬಗೆಗಿನ ನಂಬಿಕೆಯು ಅನೇಕ ಮಾನಸಿಕ ಅಂಶಗಳನ್ನು ಅವಲಂಬಿಸಿರುತ್ತದೆ. ಸುಳಿ ಎಂಬುದು ಮೂಲತಃ ಮನುಷ್ಯನ ಮಾನಸಿಕ ಅನುಭವದ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವಂತಹದ್ದು. ಯಾವುದೇ ಒಬ್ಬ ವ್ಯಕ್ತಿ ಹೇಳಿದ ಸುಳಿಯನ್ನು ಒಪ್ಪಿಕೊಳ್ಳುವ ಪ್ರಕ್ರಿಯೆಯಲ್ಲಿ ಮನಸ್ಸು ಮುಖ್ಯವಾದುದು. ಅಲ್ಲದೆ ಇದು ಭಾವನಾತ್ಮಕ ಅನುಭವದೊಡನೆ ನಿಕಟವಾದ ಸಂಬಂಧವನ್ನು ಹೊಂದಿರುವಂತೆ ಕಾಣುತ್ತದೆ. ಮನುಷ್ಯ ಮಾನಸಿಕವಾಗಿ ನಂಬುವ ಆಧಾರದ ಮೇಲೆ ಸುಳಿಯ ಕಲ್ಪನೆ ಉಂಟಾಗುತ್ತದೆ. ಮಾನವ ಸಮಾಜ ಮಾನಸಿಕವಾಗಿ ಸುಳಿಯನ್ನು ನಂಬದಿದ್ದಾಗ ಸುಳಿಯ ಬಗ್ಗೆ ಕಲ್ಪನೆಯೆ ಇರುವುದಿಲ್ಲ. ವ್ಯಕ್ತಿಯ ಆಂತರಿಕ ಸ್ಥಿರತೆಯನ್ನು ಅವಲಂಬಿಸಿಯೇ ಅವನ ಆನಂದದಾಯಕ ಭಾವನಾ ಪರಿಸ್ಥಿತಿ ರೂಪಿತವಾಗುವುದು. ಇದು ಕಷ್ಟಗಳ ನಿವಾರಣೆಯಿಂದ ಅಡಚಣೆಗಳ ನಾಶದಿಂದ ಮತ್ತು ಪರಸ್ಪರ ವಿರುದ್ದಾಂಶಗಳ ಸಾಂಗತ್ಯದಿಂದ ಬರುತ್ತದೆ. ಇಂತಹ ಶಾಂತಿದಾಯಕ ಸಾಂಗತ್ಯವನ್ನು ಸುಳಿ ತರುತ್ತದೆ. ಸುಳಿ ಮೂಲಭೂತವಾಗಿ ಮನುಷ್ಯನ ಮನಸ್ಸಿನ ವಿಕಲ್ಪಗಳಿಂದ ಉಂಟಾಗಿರುವುದು.

ವಾಸ್ತವತೆಯ ಅರಿವು : ಸುಳಿಯ ಬಗೆಗಿನ ನಂಬಿಕೆಯನ್ನು ವಾಸ್ತವತೆಯಿಂದ ಬೇರ್ಪಡಿಸುವುದು ಸುಲಭವಲ್ಲ. ಸುಳಿ ಬಗೆಗಿನ ನಂಬಿಕೆ ಮತ್ತು ವಾಸ್ತವಿಕತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಾಸ್ತವಿಕತೆಯೂ ಸಹ ಪ್ರಜ್ಞೆಯ ಒಂದು ಸ್ವರೂಪ. ಅದರಲ್ಲಿ ಒಂದು ವಿಧವಾದ ಸ್ಪರ್ಧೆಯಾಗಲಿ, ಗೊಂದಲವಾಗಲಿ ಇರುವುದಿಲ್ಲ. ಪ್ರತಿಯೊಂದು ಅನುಭವವೂ ತನ್ನದೇ ಆದ ಸ್ಥಾನ ಪಡೆದಿದೆ. ಹಾಗೆಯೇ ಪ್ರತಿಯೊಂದು ಸುಳಿಯ ಬಗೆಗಿನ ನಂಬಿಕೆಗೂ ತನ್ನದೇ ಅದ ಸ್ಥಾನವಿದೆ. ವಾಸ್ತವಾನುಭವವು ನಮ್ಮನ್ನು ಒಂದು ತೀರ್ಪಿಗೆ ಎಳೆದೊಯ್ಯುತ್ತದೆ. ಈ ಕ್ರಿಯೆ ನಡೆಯುವಾಗ ಒಂದರಿಂದ ಮತ್ತೊಂದನ್ನು ಬೇರ್ಪಡಿಸುವ ಹಾಗೂ ಒಪ್ಪಿತವಾದುದನ್ನು ಆರಿಸಿಕೊಳ್ಳುವ ಕ್ರಮವನ್ನು ಅನುಸರಿಸಲಾಗುತದೆ. ಈ ಬಗೆಯ ತೀರ್ಪು ವ್ಯಕ್ತಿಗತವಾಗಿರುತ್ತದೆ. ತೀರ್ಪಿನೆಡೆಗೆ ಕೊಂಡೊಯ್ಯುವ ವಾಸ್ತವಿಕಾನುಭವದ ಅರಿವೇ ಒಂದು ರೀತಿಯಲ್ಲಿ ಸುಳಿಯ ಬಗೆಗಿನ ನಂಬಿಕೆ ಎನ್ನಬಹುದು.

ಜನಪದರ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ : ವಾಸ್ತವಿಕವಾಗಿ ಜನಪದರ ಆರ್ಥಿಕ ಆವರಣದಿಂದ ಸುಳಿಗಳನ್ನು ಬೇರ್ಪಡಿಸಿ ನೋಡುವುದು ಕಷ್ಟ. ಆರ್ಥಿಕ ಸಾಂಸ್ಕೃತಿಕತೆಗೆ ರೂಪಧಾರಣ ಹೊಂದುವ ಪ್ರಾಥಮಿಕ ಸ್ಥಿತಿಯಲ್ಲಿಯೇ ಸುಳಿಯ ಬಗೆಗಿನ ಕೆಲವು ನಂಬಿಕೆಗಳು ನಿಯಮಗಳೆಂಬಂತೆ ಸ್ಥಾನ ಪಡೆದಿವೆ. ಆರ್ಥಿಕತೆಯು ತಾನು ಉತ್ತಮಗೊಳ್ಳಲು ಪ್ರಯತ್ನಿಸಿದಂತೆಲ್ಲಾ ತನ್ನ ಆರ್ಥಿಕ ಸಂಸ್ಕೃತಿಯನ್ನು ತನ್ನದೇ ಆದ ರಿತಿಯಲ್ಲಿ ಕಟ್ಟಲು ಯೋಚಿಸಿದಂತೆಲ್ಲಾ ಈ ಬಗೆಯ ಹಲವು ಸುಳಿಯ ಕಲ್ಪನೆಗಳು ಹುಟ್ಟಿಕೊಂಡಿರಬೇಕು. ಆರ್ಥಿಕ ಸಂಸ್ಕೃತಿಯ ಒಂದು ಅಂಗವಾಗಿ ಸುಳಿಯ ಬಗೆಗಿನ ಕಲ್ಪನೆಗಳು ಹುಟ್ಟುತ್ತವೆ. ಸುಳಿಗಳು ಆಯಾ ಆರ್ಥಿಕ ಸಂಸ್ಕೃತಿಯ ಮೌಲ್ಯ, ನೈತಿಕತೆ ಆದರ್ಶ, ಆಸಕ್ತಿ ನಿಷ್ಠೆಯ ಅಭಿವ್ಯಕ್ತಿಗಳಾಗಿರಬಹುದು.

ಪ್ರಾದೇಶಿಕ ಹಿನ್ನಲೆ : ಕರ್ನಾಟಕದ ಬಹುಪಾಲು ಪ್ರದೇಶಗಳಲ್ಲಿ ಸುಳಿಯ ಬಗೆಗಿನ ನಂಬಿಕೆಗಳನ್ನು ನೋಡಬಹುದು. ಪ್ರದೇಶದಿಂದ ಪ್ರದೇಶಕ್ಕೆ ಸುಳಿಗಳು ಕೊಡುವ ಫಲಿತಾಂಶಗಳಲ್ಲಿ ಭಿನ್ನತೆ ಇರುವುದನ್ನು ಗ್ರಹಿಸಬಹುದು. ಹಾಗೆಯೇ ಸುಳಿಗಳಿರುವ ಜಾಗ ಮತ್ತು ಹೆಸರುಗಳಲ್ಲೂ ಸಹ ಭಿನ್ನತೆಯನ್ನು ಕಾಣಬಹುದು. ಒಂದು ಪ್ರದೇಶದಲ್ಲಿ ಒಂದು ಸುಳಿ ಕೊಡುವ ಫಲ ಒಳ್ಳೆಯದಾಗಿದ್ದರೆ, ಇನ್ನೊಂದು ಪ್ರದೇಶದಲ್ಲಿ ಕೆಟ್ಟದ್ದಾಗಿರಬಹುದು.

ಪ್ರಾಚೀನತೆಯ ಕಲ್ಪನೆ : ಮನುಷ್ಯ ತನ್ನ ಸಂಘ ಜೀವನದ ಜೊತೆ ಜೊತೆಗೆ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಬಿಸಿ ಆರ್ಥಿಕ ಜೀವನಕ್ಕೆ ಎಂದಿನಿಂದ ಎತ್ತು ಮತ್ತು ಕುದುರೆಗಳನ್ನು ಬಳಸಲು ಪ್ರಾರಂಭಿಸಿದನೋ ಅಂದಿನಿಂದಲೇ ಸುಳಿಗಳ ಬಗೆಗಿನ ಕಲ್ಪನೆಗಳು ಹುಟ್ಟಿಕೊಂಡಿರಬೇಕು. ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೂ, ನಶಿಸುತ್ತಲೂ ಇವೆ. ಹಾಗಾಗಿ ಸುಳಿಯ ಬಗೆಗಿನ ಕಲ್ಪನೆಗಳು ಸಹ ಪ್ರಾಚೀನ ಮಾನವನ ಬದುಕಿನೊಂದಿಗೆ ಜನ್ಮ ತಾಳಿರುವುದರಲ್ಲಿ ಆಶ್ಚರ್ಯವಿಲ್ಲ.

ಅನುಭವ ಹಾಗೂ ಮಾನಸಿಕ ಅನುಭವಗಳ ಮಿಳಿತ : ಸುಳಿಯ ಬಗೆಗಿನ ಕಲ್ಪನೆ ಜನತೆಯ ಜೀವನಾನುಭವದ ಮೂಸೆಯಿಂದ ಮೂಡಿಬಂದು, ಆರ್ಥಿಕ ಬದುಕಿನಲ್ಲಿ ಬೆರೆತು ಪರಿಣಾಮಕಾರಿಯಾಗಿ ತಮ್ಮ ಪ್ರಭಾವ ಬೀರಿ ಜೀವಂತವಾಗಿವೆ. ಪುರಾತನ ಕಾಲದಿಂದ ಮಾನವ ನಾಗರೀಕತೆ ಪ್ರೌಢಸಂಸ್ಕೃತಿಯ ಹಂತವನ್ನು ಮುಟ್ಟುವವರೆಗೂ ಅವಿರತ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಸುಳಿಯ ಕಲ್ಫನೆಗಳಿಗೆ ಕಾರಣವಾಗಿರಲೂಬಹುದು. ಅಲ್ಲದೆ ಮಾನಸಿಕವಾಗಿಯೂ ಕೆಲವು ಸುಳಿಯ ಕಲ್ಪನೆಗಳು ಉಂಟಾಗುತ್ತವೆ. ಅವುಗಳು ಘಟನೆಗಳ ಪುನರಾವೃತ್ತಿಯಾಗಿರಬಹುದು, ಅಥವಾ ಘಟನೆಗಳು ಎಂದೋ ನಡೆದು ಮತ್ತೆ ಘಟನೆಗಳು ನಡೆದಾಗ ಸಮರ್ಥನೆಗೆ ಅದು ಒಪ್ಪಿಗೆ ಎಂದಂತಾಗಿರಬಹುದು.

ಅಭಯ  ಅಥವಾ ನೆಚ್ಚಿಕೆಯ ಒಂದು ಮಾನಸಿಕ ಸ್ಥಿತಿ : ಸುಳಿಯ ಬಗೆಗಿನ ನೆಲೆಗಟ್ಟೆಲ್ಲೆವೂ ನಂಬುವವರ ಮನೋವೈಖರಿಯನ್ನು ಪ್ರತಿಬಿಂಬಿಸುತ್ತದೆ. ಒಮ್ಮೊಮ್ಮೆ ಒಂದು ಸುಳಿಯ ಆಧಾರವೇನೆಂದು ನಿರ್ಧಿಷ್ಟವಾಗಿ ಮನಸ್ಸಿನಲ್ಲಿಲ್ಲದಿದ್ದರೂ ಆ  ನಂಬಿಕೆಯನ್ನು ಒಪ್ಪಿ ಸ್ವೀಕರಿಸುವ ಸಾಧ್ಯತೆಯಿದೆ. ಪರಿಣಿತರ ತೀರ್ಪು ಎಷ್ಟೋ ವೇಳೆ ಪೂರ್ಣ ಪ್ರಜ್ಞೆ ಇಲ್ಲದ ಜೀವನಾನುಭವಗಳ ಮೇಲೆಯೇ ನಿಂತಿರುತ್ತದೆ. ಉದಾಹರಣೆಗೆ ‘ದಾವಣಿ ಸುಳಿ ಇರೆಉವ ಎತ್ತನ್ನು ಕೊಂಡರೆ, ಕೊಂಡವರ ದಾವಣಿಯಲ್ಲಿ ಯಾವಾಗಲೂ ದನಗಳಿರುತ್ತವೆ’ ಎಂದು ನಂಬುತ್ತಾರೆ.

ಆರ್ಥಿಕ ಮತ್ತು ಉಪಭೋಗದ ಹಿನ್ನಲೆ : ಎತ್ತು, ಎಮ್ಮೆ, ಕುದುರೆ ಇತ್ಯಾದಿ ಸಾಕು ಪ್ರಾಣಿಗಳು ಮನುಷ್ಯನ ಆರ್ಥಿಕ ಚಟುವಟಿಕೆಯ ಅಂಗಗಳಾಗಿದ್ದವು. ಇವುಗಳನ್ನು ಕೊಳ್ಳುವಲ್ಲಿ, ಮಾರುವಲ್ಲಿ, ಲಾಭಾಕಾಂಕ್ಷಿಯಾಗಿದ್ದ ಮನಸ್ಸು ‘ಸುಳಿ’ಯ ಕಲ್ಪನೆಯನ್ನು ಹುಟ್ಟು ಹಾಕಿತು. ಕ್ರಮೇಣ, ಹೆಣ್ಣು ಉಪಭೋಗದ ವಸ್ತುವಾಗಿ ಪರಿಣಮಿಸಿ ‘ಸುಳಿ’ ಯ ಚೌಕಟ್ಟಿನೊಳಗೆ ಹೆಣ್ಣು ಕೂಡಾ ಸಿಲುಕಿಕೊಂಡಿದ್ದಾಳೆ.

ಭೌತಿಕ ವಸ್ತುಗಳು : ಸುಳಿ

ಪ್ರಕೃತಿಯಲ್ಲಿರುವ ಭೌತಿಕ ವಸ್ತುಗಳು ಮನುಷ್ಯನ ಜೀವನಕ್ಕೆ ಬಹಳ ಕಾಲದಿಂದಲೂ ಸಹಾಯ ಮಾಡುತ್ತಲೇ ಬಂದಿವೆ. ಹಾಗಾಗಿ ಒಂದು ರೀತಿಯಲ್ಲಿ ಪ್ರಕೃತಿಗೂ ಮತ್ತು ಮಾನವನಿಗೂ ಅವಿನಾಭಾವ ಸಂಬಂಧವಿದೆ. ಈ ಸಂಬಂಧಗಳು ಎಷ್ಟೊಂದು ಗಾಢವಾಗಿವೆ ಎಂದರೆ, ತನ್ನ ಅಪೇಕ್ಷೆಯ ಈಡೇರಿಕೆಗಾಗಿ ಸುಳಿ ಬಗೆಗಿನ ನಂಬಿಕೆಗಳನ್ನು ಹೇಗೆ ಹೊಂದಿದನೋ, ಹಾಗೆಯೇ ಪಕೃತಿಯ ಭೌತಿಕ ವಸ್ತುಗಳಾದ ಗಾಳಿ, ನೀರು ಮತ್ತು ಕಲ್ಲುಗಳಲ್ಲಿಯೂ ‘ಸುಳಿ’ ಯನ್ನು ಗುರುತಿಸಿಕೊಂಡನು. ಹಾಗೆಯೇ ಅವುಗಳ ಬಗೆಗೆ ತನ್ನದೇ ಆದ ನಂಬಿಕೆಗಳನ್ನು ಸೃಷ್ಟಿಸಿಕೊಂಡನು.

ಗಾಳಿಯಲ್ಲಿರುವ ಸುಳಿಯನ್ನು ಸುಳಿಗಾಳಿ ಎಂದು ಕರೆಯುತ್ತಾರೆ. ಸುಂಟರಗಾಳಿ ಅದರ ವಿರಾಟ್ ಸ್ವರೂಪವಾಗಿದೆ.  ಜನಪದರು ನೀರಿನ ಸುಳಿಗೆ ‘ಮಡೆ’ ಎಂದು ಕರೆಯುತ್ತಾರೆ ಅಂದರೆ ನೀರು ಯಥಾ ಸ್ಥಿತಿಯಲ್ಲಿ ಹರಿಯದೆ ಸುಳಿಯಾಕಾರದಲ್ಲಿ ತಿರುಗಿ ತಿರುಗಿ ಹರಿದಾಗ ಆ ಜಾಗಕ್ಕೆ ಸುಳಿ ಎನ್ನುತ್ತಾರೆ. ಸುಳಿ ತೀರಾ ದೊಡ್ಡದಾಗಿದ್ದರೆ ಅದನ್ನು ‘ತಿರುಗಣಿ’ ಎಂದು ಕರೆಯುತ್ತಾರೆ. ಅದರಲ್ಲಿ ಮನುಷ್ಯ, ಪ್ರಾಣಿ ಯಾವುದಾದರೂ ಸಿಕ್ಕಿ ಹಾಕಿಕೊಂಡರೆ ಪ್ರಾಣಾಪಾಯದಿಂದ ಹೊರಬರಲು ಸಾಧ್ಯವಿರುವುದಿಲ್ಲ. ಅಷ್ಟೊಂದು ಶಕ್ತಿ ನೀರಿನ ಸುಳಿ ಪಡೆದಿದೆ.

ಕಲ್ಲಿನಲ್ಲಿರುವ ಸುಳಿಯು ಸಹ ತನ್ನದೇ ಆದ ವಿಶಿಷ್ಟ ಲಕ್ಷಣ ಹೊಂದಿದೆ. ಸುಳಿಯು ಕಲ್ಲನ್ನು ಬೇರ್ಪಡಿಸುವಿಕೆಗೆ ಸಹಾಯ ಮಾಡುತ್ತದೆ. ಏಕೆಂದರೆ ಕಲ್ಲನ್ನು ಒಡೆಯಬೇಕಾದರೆ ಸುಳಿ ನೋಡಿ ಏಟು ಹಾಕಬೇಕು ಎನ್ನುತ್ತಾರೆ. ಇದನ್ನು ನೋಡಿಯೇ ಇರಬೇಕು ‘ಸುಳಿ ನೋಡಿ ಕಲ್ಲು ಪಡೆ, ಪಳಿ ನೋಡಿ ಕುಸ್ತಿ ಹಿಡಿ’ ಎಂಬ ಗಾದೆ. ಸುಳಿ ನೋಡಿ ಕಲ್ಲು ಒಡೆದರೆ ಕಲ್ಲನ್ನು ನಮಗೆ ಬೇಕಾದ ರೀತಿಯಲ್ಲಿ ಬಾಗ ಮಾಡಿಕೊಳ್ಳಬಹುದು. ಶಿಲ್ಪಶಾಸ್ತ್ರಜ್ಞರ ಪ್ರಕಾರ “ಸುಳಿ ಇರುವ ಕಲ್ಲುಗಳನ್ನು ಹೆಚ್ಚಾಗಿ ಶಿಲ್ಪಕಲೆಗೆ ಉಪಯೋಗಿಸುವುದಿಲ್ಲ ಎನ್ನುವುದು. ಅಂದರೆ ಕಲ್ಲಿನಲ್ಲಿರುವ ಸುಳಿಗಳು ತಮ್ಮದೇ ಆದ ಪಾತ್ರ ವಹಿಸುತ್ತವೆ ಎಂಬುದನ್ನು ಇದರಿಂದ ಗ್ರಹಿಸಬಹುದು” (ಎಸ್.ಎಂ. ಸಾವಿತ್ರಿ; ೧೯೯೫; ೫)

ಜೀವ ಜಗತ್ತು : ಸುಳಿ

ಪ್ರಕೃತಿಯ ಭೌತಿಕ ವಸ್ತುಗಳು ನೀಡುವ ಅನುಕೂಲದಂತೆಯೇ ಜೈವಿಕ ವಸ್ತುಗಳು ಸಹ ಮಾನವನ ಸುಸಂಬದ್ಧ ನೆಮ್ಮದಿಯ ಜೀವನಕ್ಕೆ ಅನುಕೂಲವನ್ನು ನೀಡುತ್ತಿವೆ. ಅದರಲ್ಲೂ ಪುರಷ ಎಂದು ಹೆಣ್ಣಿನ ಮೇಲೆ ಮೇಲುಗೈ ಸಾಧಿಸಿ ಅವಳನ್ನು ತನ್ನ ಭೋಗದ ವಸ್ತುವಿನಂತೆ ಕಂಡನೋ ಅಂದಿನಿಂದ ಹೆಣ್ಣಿನ ಮೇಲೆ ಹಲವಾರು ವಿಧಿ, ನಿಯಮ, ನಿಷೇದ ನಂಬಿಕೆಗಳನ್ನು ಹೇರಿದನು. ಅಂತಹವುಗಳಲ್ಲಿ ‘ಸುಳಿ’ ಒಂದು. ಮನುಷ್ಯರಿಗೆ ತಲೆಕೂದಲಲ್ಲಿಯ ಸುಳಿ ಸ್ವಾಭಾವಿಕ. ಮೈಮೇಲೂ ಅಲ್ಲಲ್ಲಿ ಕೂದಲ್ಲಿದ್ದಲ್ಲಿ ಸುಳಿಗಳನ್ನು ಕಾಣಬಹುದು. ಹೆಣ್ಣಿನ ಮೈಮೇಲೆ ಇರುವ ಈ ಸುಳಿಗಳ ಆಧಾರದ ಮೇಲೆ ಅವಳ ಭವಿಷ್ಯ ನಿರ್ಧಾರವಾಗುತ್ತಿತ್ತು. ಅದರಂತೆ ದನಕರುಗಳಿಗೂ ಹಲವು ಸುಳಿಗಳಿರುವುದು ಅಸಂಭವವೇನಲ್ಲ. ವಿಶೇಷವಾಗಿ ಹೆಣ್ಣು, ಎತ್ತು ಮತ್ತು ಕುದುರೆಗಳ ವಿಷಯದಲ್ಲಿ ಜನಪದರು ಸುಳಿ ಕುರಿತು ತಮ್ಮದೇ ಅದ ಶಾಸ್ತ್ರವನ್ನು ರಚಿಸಿದ್ದಾರೆ. ಹಾಗೆಯೇ ಸಸ್ಯಗಳ ಬಗೆಗೂ ಸುಳಿಗಳನ್ನು ಗುರುತಿಸಿದ್ದಾರೆ.

ಸಸ್ಯ : ಸುಳಿ

ಮನುಷ್ಯನಿಗೆ ಭೌತಿಕ ವಸ್ತುಗಳು, ಪ್ರಾಣಿಗಳು ಹಾಗೂ ಪಕ್ಷಿಗಳು ಹೇಗೆ ಜೀವನಕ್ಕೆ ಅವಶ್ಯಕವಾಗಿರುತ್ತವೆಯೋ ಹಾಗೆಯೇ ಸಸ್ಯ ಜಗತ್ತು ಸಹ ಅಷ್ಟೆ ಅವಶ್ಯಕವಾಗಿರುತ್ತದೆ. ಜೀವನಾವಶ್ಯಕಕ್ಕೆ ಬೇಕಾಗುವ ಬಹುಪಾಲು ಆಹಾರ ಮತ್ತು ಗಾಳಿಯನ್ನು ಒದಗಿಸುವುದರಲ್ಲಿ ಸಸ್ಯಗಳ ಪಾತ್ರ ಬಹು ಮುಖ್ಯವಾದುದು. ನಮ್ಮ ಒಕ್ಕಲಿಗರು ‘ಬಾಳಿ ಸುಳಿಬಿಟ್ಟೈತಿ’ ‘ಟೆಂಗಿನ ಸುಳಿ ಒಣಗೈತಿ’  ‘ಜ್ವಾಳದ ಸಸಿಗೆ ಸುಳಿ ಬಿದ್ದೈತಿ’  ಎನ್ನುವುದು ಸಾಮಾನ್ಯ. ನಮ್ಮ ಜನಪದರ ದೃಷ್ಟಿಯಲ್ಲಿ ಸುಳಿಗಳನ್ನು ಹೊಂದಿರುವ ಮರಗಳನ್ನು ಕಡಿದರೆ ಕಡಿದವರು ಸತ್ತುಹೋಗುತ್ತಾರೆ ಅಲ್ಲದೆ ಅವರ ಸುಳಿಯೇ (ವಂಶವೇ) ಸತ್ತು ಹೋಗುತ್ತದೆಂಬ ನಂಬಿಕೆ ಇದೆ.

ಕುದುರೆ : ಸುಳಿ, ಲಕ್ಷಣ

ಇತಿಹಾಸಪೂರ್ವ ಯುಗಗಳಲ್ಲಿ ಯುರೋಪು ಮತ್ತು ಏಷ್ಯಾ ಖಂಡಗಳ ಹಲವು ಪ್ರದೇಶಗಳಲ್ಲಿ ಕುದುರೆ ಜಾತಿಯ ಪಶುಗಳು ಕಾಡಾಡಿಗಳಲ್ಲಿ ಅಲೆಯುತ್ತಿದ್ದ ಕಾಲವಿತ್ತು. ಹಾಗೆಯೇ ಕತ್ತೆ, ಒಂಟೆ ಮೊದಲಾದವೂ ಇದ್ದವು. ಇಂದು ವನ್ಯ ಸ್ಥಿತಿಯಲ್ಲಿರುವ ಕುದುರೆಗಳ ಬಳಗ ತೀರಾ ಸ್ವಲ್ಪ. ಕಳೆದ ಶತಮಾನದ ತನಕವೂ ಯುರೋಪ್ಯಾದಲ್ಲಿ ಅವು ಮೊದಲಿದ್ದ ಯಾವಲ್ಲಿಯೂ ಕಾಡು ಕುದುರೆಗಳ ಕುಲ ಇಂದು ಉಳಿದಿಲ್ಲ. ಅವುಗಳಿಂದ ಪಡೆದ, ಸಾಧು ಮಾಡಿದ ಕುಲವೇ ಈಚಿನ ಎಂಟು ಸಾವಿರ ವರ್ಷಗಳಿಂದಲೂ ಮನುಷ್ಯನ ಆಳಾಗಿ ಬಂದುದು ಕಾಣಿಸುತ್ತದೆ. ಅದೇ ಕುಲದ ಪಶುಗಳು, ಸೈಬೀರಿಯಾದ ಹುಲ್ಲುಗಾವಲು ಮತ್ತು ಮರುಭೂಮಿಗಳಲ್ಲೂ, ಮಂಗೋಲಿಯ ಮತ್ತು ಚೀನಾ ದೇಶಗಳಲ್ಲೂ ಉಳಿದುಕೊಂಡಿದ್ದವಂತೆ. ಇತ್ತೀಚೆಗೆ ಅವುಗಳಲ್ಲಿ ಕೆಲವೇ ಕಾಡು ಕುದುರೆಗಳು ಗೋಬಿ ಮರುಭೂಮಿಯಲ್ಲಿವೆ ಎಂದು ಹೇಳುವವರಿದ್ದಾರೆ. ಮಾನವನ ಆರೈಕೆಯಲ್ಲಿ ದನ, ನಾಯಿ, ಕುರಿ, ಕತ್ತೆ, ಮೊದಲಾದ ಪಶುಗಳು ಹೇಗೆ ಸಾಧುವಾದವೋ, ಅದೇ ರೀತಿ ವಿವಿಧ ಗುಣ, ಬಳಕಜೆ, ಆಕಾರ ಮೊದಲಾದ ಉದ್ದೇಶಗಳಿಗಾಗಿ ಮಿಶ್ರ ತಳಿಗಳಿಂದ ಪಡೆದ ಕುದುರೆಗಳು ಇವೆ.

ತಾಂತ್ರಿಕತೆಯ ಅವಿಷ್ಕಾರಕ್ಕಿಂತ ಮೊದಲು ಒಂದೂರಿನಿಂದ ಇನ್ನೊಂದು ಊರಿಗೆ ಪ್ರಯಾಣಕ್ಕೆ, ಮನೆಗೆ ನೀರು ತರಲು, ಹೊಲದಿಂದ ಭಾರವಾದ ವಸ್ತುಗಳನ್ನು ತರಲು ದನಕರುಗಳನ್ನು ಮೇಯಿಸಲು ಕುದುರೆಯನ್ನು ಬಳಸುತ್ತಿದ್ದರು. ಕಾಲಾನಂತರದಲ್ಲಿ ರಾಜರುಗಳು ಯದ್ಧದಲ್ಲಿ ಕುದುರೆಗಳನ್ನು ಬಳಸಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಯ ಸಂಕೇತವಾಗಿ ಶ್ರೀಮಂತರು ಬಳಸುತ್ತಿದ್ದರು. ಇತ್ತೀಚೆಗೆ ಜಟಕಾ ಬಂಡಿಗಳನ್ನು ಎಳೆಯಲು ಕುದುರೆಗಳನ್ನು ಬಳಸುವರು. ಬಹುಮುಖ್ಯವಾಗಿ ಈಗ ರೇಸ್ ನಲ್ಲಿ ಕುದುರೆಗಳನ್ನು ಬಳಸುತ್ತಾರೆ.

‘ಹೆಣ್ಣಿನ ನೆಲೆ, ನೀರಿನ ನೆಲೆ, ಕುದುರೆಯ ನೆಲೆ ತಿಳಿದಿಲ್ಲ’ ಎಂಬ ಜನಪದರ ಹೇಳಿಕೆ, ಅವರ ಅನುಭವ ಜನ್ಯವಾದುದು. ಏಕೆಂದರೆ, ಕುದುರೆಯು ಮನುಷ್ಯನ ಸಾಕು ಪ್ರಾಣಿಯಾಗಿದ್ದರೂ ಸಹ, ಅದರ ಸಂಪೂರ್ಣ ಶಕ್ತಿ ಸಾಮರ್ಥ್ಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಕಷ್ಟ ಸಾಧ್ಯ. ಇಂತಹ ಕುದುರೆಗಳನ್ನು ಕೊಳ್ಳುವಾಗ ‘ಸುಳಿ’ ಯನ್ನು ನೋಡುವಷ್ಟು ಇನ್ನಾವ ಪ್ರಾಣಿಗೂ ನೋಡುತ್ತಿರಲಿಲ್ಲವಂತೆ. ಕುದುರೆಯ ‘ಸುಳಿ’ ಸರಿಯಾಗಿರದಿದ್ದರೆ ಅದರ ಮಾಲೀಕನಿಗೆ ಕೆಡುಕು ಕಟ್ಟಿಟ್ಟದ್ದು. ಎಷ್ಟೋ ಜನರ ಪ್ರಾಣಹಾನಿಗೂ ಅದರ ಸುಳಿ ಕಾರಣವೆಂದು ಪರಿಭಾವಿಸಲಾಗುತ್ತಿತ್ತು.

ಒಂದು ಗಾದೆಯಂತೆ ಎತ್ತಿಗೆ ಹತ್ತು ಸುಳಿಗಳಾದರೇ ಕುದುರೆಗೆ ಮುನ್ನೂರಾ ಅರವತ್ತು ಸುಳಿಗಳೆಂದು ಹೇಳಲಾಗುತ್ತದೆ. ಅದರ ಲದ್ದಿಗೂ ಸುಳಿಗಳಿರುತ್ತವಂತೆ. ಈ ಎಲ್ಲಾ ಸುಳಿಗಳನ್ನು ಪರಿಶೀಲಿಸಿ ಕುದುರೆ ಕೊಳ್ಳುವ ಕೆಲಸ ಸಣ್ಣದೇನಲ್ಲ. ಹಿಂದೆ ರಾಜರುಗಳಿಗೆ ಕುದುರೆ ಪ್ರಮುಖ ವಸ್ತುವಾಗಿತ್ತು. ಕುದುರೆ ಬಲ ಅರಸರ ಸೈನ್ಯ ಬಲದ ಪ್ರಮುಖ ಅಂಗವಾಗಿತ್ತು. ಅದಕ್ಕಾಗಿ ರಾಜರುಗಳು ತಮ್ಮ ಆಸ್ಥಾನದಲ್ಲಿ ಗಜಶಾಸ್ತ್ರ, ಹಯಶಾಸ್ತ್ರ ಲಕ್ಷಣಗಳ ಬಗೆಗೆ ಬಲ್ಲವರನ್ನು ಇಟ್ಟುಕೊಳ್ಳುತ್ತಿದ್ದರು.

ಬಿಳಿ ಮತ್ತು ಕೆಂಪು ಬಣ್ಣದ ಕುದುರೆಗಳನ್ನು ಸಾಕುವುದು ಒಳ್ಳೆಯದೆಂದು ನಂಬುತ್ತಾರೆ. ಕೆಲವೆಡೆ ಒಂದೇ ಬಣ್ಣದ ಕುದುರೆಯನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಕಪ್ಪು, ಕರಿಯಮಾಸ (ಬೂದಿಬಣ್ಣ) ಕುದುರೆಯನ್ನು ಯಾರೂ ಇಷ್ಟಪಡುವುದಿಲ್ಲ. ಅಂತಹವುಗಳು ಅಶುಭ ಮತ್ತು ಮಂದ ಗುಣದ್ದೆಂದು ಭಾವಿಸುವರು. ಗಂಡು ಕುದುರೆ ಕರಿ ಇಲ್ಲವ ಕೆಂಪು ಬಣ್ಣದಿದ್ದು, ಅದರ ಹಣೆಯ ಮೇಲೆ (ಹಣೆಚಿಕ್ಕಿ) ಸಣ್ಣ ಬಿಳಿಯ ಪಟ್ಟಿ ಬಾಯಿಯವರೆಗೆ ಬಂದಿರಬಾರದು. ಅದನ್ನು ಅಶುಭ ಲಕ್ಷಣವೆನ್ನುವುದಕ್ಕಿಂತ ಅಂತಹ ಕುದುರೆ ಹೇಳಿಕೊಳ್ಳಬೇಕಾದಷ್ಟು ಜಾಣ ಇಲ್ಲವೆ ಚಪಲವಲ್ಲ ಎಂಬುದು ಅವರ ಅನುಭವ ಸತ್ಯವಾಗಿರಬಹುದು.

ಕರಿಯ ಇಲ್ಲವೆ ಕೆಂಪು ಬಣ್ಣದ ಕುದುರೆ ಇದ್ದು, ಅದರ ಹಣೆಯ ಮೇಲೆ ಬಿಳಿಯ ಪಟ್ಟಿ ಇರುವುದಲ್ಲದೆ ಅದರ ಸಮಪಾದಗಳು ಬಿಳಿಯವಿರಬೇಕು. ವಿಷಮ ಪಾದಗಳಿಗೆ ಬಿಳಿಯ ಬಣ್ಣವಿದ್ದರೆ ಅದು ಕೊಳ್ಳಲು ಯೋಗ್ಯವೆಂದು ಪರಿಣಿತರು ಹೇಳುತ್ತಿರಲಿಲ್ಲ. ನಾಲ್ಕೂ ಪಾದಗಳು ಬಿಳಿಯವಿದ್ದು, ಹಣೆಯ ಮೇಲೆ ಚಿಕ್ಕದಾದ ಬಿಳಿಯ ಪಟ್ಟಿ ಇದ್ದರೆ ಅದು ಬಹಳ ಒಳ್ಳೆಯ ಲಕ್ಷಣವೆಂದು ತಿಳಿಯುತ್ತಿದ್ದರು. ಅಂತಹ ಕುದುರೆಯನ್ನು ‘ಪಂಚ-ರಂಗಿ’, ‘ಅಬಲಾಕ’ ಎಂದು ಕರೆಯುತ್ತಿದ್ದರು. ಸಂಪೂರ್ಣ ಕೆಂಪು ಬಣ್ಣದ ಕುದುರೆಯ ಬೆನ್ನಮೇಲೆ ಉದ್ದಕ್ಕೂ ಗಡದಾದ ಕೆಂಪುಪಟ್ಟಿ ಇದ್ದರೆ, ಅದನ್ನು ಸಭ್ಯ ಉತ್ತಮ ಕುದುರೆ ಎಂದು ಪರಿಗಣಿಸಲಾಗುತ್ತದೆ. ಹಂಡಬಂಡ (ಕೆಂಪು ಮತ್ತು ಬಿಳಿ ಅಥವಾ ಕರಿ ಮತ್ತು ಬಿಳಿ) ಕುದುರೆಗಳನ್ನು ಉತ್ತಮ ಕುದುರೆಗಳೆಂದು ನಂಬಲಾಗುತ್ತಿದ್ದರೂ ಅದರಲ್ಲಿ ಬಿಳಿಯ ಭಾಗ ಹೆಚ್ಚಿರಬಾರದಂತೆ! ಅದರಲ್ಲೂ ಕೆಂಪು ಮತ್ತು ಬಿಳಿಯ ಹಂಡ ಬಂಡದ ಕುದುರೆಗಳು ವಿಶೇಷ ಬೇಡಿಕೆಯಲ್ಲಿರುತ್ತವೆ.

“ಆಯಾಲು (ಕುತ್ತಿಗೆಯ ಮೇಲೆನ ಜವೆಗೂದಲು) ಹೆಣ್ಣು ಕುದುರೆಗೆ ಎಡಕ್ಕೆ ಬೀಳಬೇಕು. ಗಂಡುಕುದುರೆಗೆ ಬಲಕ್ಕೆ ಬೀಳಬೇಕು. ಇದಕ್ಕೆ ವ್ಯತಿರಿಕ್ತವಾಗಿದ್ದ ಕುದುರೆ ಮೇಲುನೋಟದಿಂದಲೇ ತ್ಯಾಜ್ಯ. ಅದರಂತೆ ಬಾಲದ ಜವೆ ನೀಳವಾಗಿರಬೇಕು. ಅವು ಹುರಿಯಾಗಿ ಇಲ್ಲವೇ ಗುಂಗುರಾಗಿ ಇರಕೂಡದು. ಗೊರಸು ಬಿರುಸಾಗಿ ಚಿಕ್ಕವಾಗಿರಬೇಕು, ಚಪ್ಪಟೆ ಗೊರಸಿನ ಕುದುರೆ ನಿರುಪಯೋಗಿ. ಕಿವಿಗಳು ಚಿಕ್ಕವಾಗಿರುವುದು ಸಲ್ಲ ಲಕ್ಷಣದ ಕುರುಹು. ಉತ್ತಮ, ಜಾತಿಯ ಕುದುರೆ ಎಂದೂ ಮಲಗುವುದೇ ಇಲ್ಲ. ಅದರ ನಿದ್ರೆ ನಿಂತಲ್ಲೇ” (ಎಂ.ಜಿ. ಬಿರಾದಾರ ೧೯೮೭-೪೬).

ಕುದುರೆಯ ಶರೀರ ತತ್ವವು ಪೃಥ್ಯ, ಅಪ್ಪು, ತೇಜ, ವಾಯು ಎಂಬ ನಾಲ್ಕು ತತ್ವಗಳನ್ನೂ ಒಳಗೊಂಡಿರುತ್ತದೆ. ಪೃಥ್ವ ತತ್ವವುಳ್ಳದ್ದು, ಮೀನಿನ ವಾಸನೆಯಿಂದ ಕೂಡಿಯೂ ಬಲಹೀನವಾಗಿಯೂ ದುಡುಕು ಬುದ್ಧಿಯಿಂದಲೂ ಇರುತ್ತದೆ. ಅಪ್ಪು ತತ್ವವನ್ನುಳ್ಳ ಕುದುರೆಯ ಶರೀರ ಸುವಾಸನೆಯಿಂದಲೂ ಆಹಾರ ನಿಯಮಗಳಲ್ಲಿ ಮಿತವುಳ್ಳದ್ದಾಗಿಯೂ, ಚೊಕ್ಕಟವಾಗಿಯೂ ಇರುತ್ತದೆ. ತೇಜೋ ತತ್ವವನ್ನುಳ ಕುದುರೆಯ ಶರೀರ ಸಾಂಬ್ರಾಣಿ ವಾಸನೆಯುಳ್ಳದ್ದಾಗಿಯೂ ಬಲ ಹಾಗೂ ಚುರುಕಾಗಿಯೂ ಇರುತ್ತದೆ. ವಾಯು ತತ್ವವನ್ನುಳ್ಳ ಕುದುರೆಯ ಶರೀರ ತುಪ್ಪದ ವಾಸನೆಯಿಂದಲೂ ಗರ್ವಯುಕ್ತವಾಗಿಯೂ ಇರುತ್ತದೆ. ಇವಲ್ಲದೆ ಶ್ವಾಸ, ಶ್ಲೇಷ, ಪೈತ್ಯ, ವಾಯು ತತ್ವಗಳಿಂದಾಗಿ ನಾಲ್ಕು ವಿಧ ತತ್ವಗಳಿರುತ್ತವೆ.

ನಾಲ್ಕು ಬಣ್ಣದ ಕುದುರೆಗಳಿರುತ್ತವೆ. ಅವುಗಳಲ್ಲಿ ‘ಬಿಳಿ ಕುದುರೆಯು ಬ್ರಾಹ್ಮಣ ವರ್ಗಕ್ಕೂ, ಕೆಂಪು ಕುದುರೆಯು ಕ್ಷತ್ರಿಯ ವರ್ಗಕ್ಕೂ, ಹಳದಿ ಕುದುರೆ ವೈಶ್ಯ ಪಂಗಡಕ್ಕೂ, ಕಪ್ಪು ಕುದುರೆಯು ಶೂದ್ರ ವರ್ಗಕ್ಕೂ ಸೇರಿರುತ್ತವೆಂದು ಅಶ್ವಶಾಸ್ತ್ರದಿಂದ ತಿಳಿಯುತ್ತದೆ. ನಾಲ್ಕು ಕಾಲುಗಳು, ಎರಡು ಕರ್ಣಾಂತಗಳು, ಮುಖ, ಬಾಲವು ಇವೆಲ್ಲ ಬಿಳುಪಾಗಿರುವ ಕುದುರೆ ‘ಅಷ್ಟ ಮಂಗಳಿ’ ಎಂತಲೂ; ನಾಲ್ಕು ಕಾಲುಗಳು ಮತ್ತು ಮುಖ ಬಿಳುಪಾಗಿರತಕ್ಕ ಕುದುರೆ ‘ಪಂಚಕಲ್ಯಾಣಿ’ ಎಂತಲೂ ಕರೆಸಿಕೊಳ್ಳುತ್ತದೆ. ಅಷ್ಟಮಂಗಳಿ ಒಡೆಯನಿಗೆ ರಾಜ ವೈಭವವನ್ನುಂಟು ಮಾಡುತ್ತದೆ. ಕೆಂಪು ಬಣ್ಣದ ಕುದುರೆಗೆ ಬೆನ್ನಿನ ಮೇಲೆ ಬಿಳಿ ಪಟ್ಟಿಯು ದುಂಡಾಗಿಯೂ ಶರೀರವು ಬಿಳುಪು, ಕಪ್ಪು, ಹಳದಿ ಬಣ್ಣವಾಗಿದ್ದೂ ಬೆನ್ನಿನ ಮೇಲೆ ದುಂಡಾದ ಚಿಹ್ನೆಗಳೂ ಹೊಟ್ಟೆಯ ಕೆಳಭಾಗವು ಬಿಳುಪಾಗಿಯೂ ಇರುವ ಕುದುರೆ ಯೋಗ್ಯವಾದದ್ದೆಂದು ತಿಳಿದು ಬರುತ್ತದೆ.  (ಡಾ. ಚಂದ್ರಶೇಖರ ಕಂಬಾರ; ೧೯೮೫; ೪೩೭)

ಎಲ್ಲಾ ಕುದುರೆಗಳಲ್ಲಿ ಶಂಕ, ಚಕ್ರ, ಹಲ, ಧನಸ್ಸು ಗದೆ, ಸೂರ್ಯಬಿಂಬ, ಯಜ್ಞವೇದಿಕೆ, ಕಲಶ, ಮತ್ಸ್ಯ, ಅಂಕುಶ, ಧ್ವಜ, ಕೂರ್ಮ, ವಜ್ರ, ಅಷ್ಟಕೋನಾ, ಬಾಣ, ಪಂಚಕೋಣ, ಛತ್ರ – ಈ ವಸ್ತುಗಳ ಆಕಾರಗಳಿದ್ದು ಮುಖವು ಬಿಳುಪಾಗಿರತಕ್ಕ ಕುದುರೆಗಳು ಮಂಗಳಕರವಾದವುಗಳು.

ಎಲ್ಲಾ ಕುದುರೆಗಳಲ್ಲಿ ಸಾಮಾನ್ಯವಾಗಿರುವಂತಹದ್ದು ‘ಮಸಕ್ತ ಸುಳಿ’ ಅದು ಕಿವಿಯ ಗಡ್ಡಿಯ ಹಿಂದೆ ಒಂದಂಗಲ ಅಂತರದಲ್ಲಿ ಇರುತ್ತದೆ. ಇದು ಒಳ್ಳೆಯದು. ಇದಕ್ಕಿಂತ ಒಂದಂಗಲ ಕೆಳಕ್ಕಿದ್ದರೆ ಅದು ‘ಜಾರಮಸ್ತಕ ಸುಳಿ’ ಇದು ಕುದುರೆಗೇ ಕುಂದು. ಎರಡೂ ಕಣ್ಣಿನ ಮಧ್ಯದಿಂದ ಒಂದೆರಡಂಗುಲ ಮೇಲೆ ಸುಳಿ ಇದ್ದು ಅದರ ಹಣೆಗೆ ಇನ್ನೊಂದು ಚಿಕ್ಕದಾದ ಸುಳಿ ಇದ್ದರೆ ಈ ಎರಡನ್ನೂ ‘ಅಡಕ ಸುಳಿ’ ಎಂದೂ ಕರೆಯುತ್ತಾರೆ. ಈ ಸುಳಿ ಇದ್ದ ಕುದುರೆ ಕೊಂಡವರ ಮನೆತನ ಅಡಕವೇರಿದಂತೆ ಏರುತ್ತದೆಯಂತೆ ! ಒಂದು ವೇಳೆ ಕೆಳಗಿನ ಸುಳಿಗಿಂತ ಮೇಲಿನದು ದೊಡ್ಡದಿದ್ದರೆ ಅಡಕಲು ಉರುಳಿ ಬೀಳುವುದು. ಇದು ಅಶುಭ. ಇಲ್ಲವೇ ಕೆಳಗಿನ ಸುಳಿ ಎರಡೂ ಕಣ್ಣಿನ ಮಧ್ಯೆ ಇದ್ದರೆ ಅದು ‘ಶೋಕಾವಳಿ’ . ಹಾಗೆ ಕರೆಯುವಲ್ಲಿಯೇ ಅದರ ದುಷ್ಪರಿಣಾಮ ಧ್ವನಿಸುತ್ತದೆ. ಸಾಮಾನ್ಯವಾಗಿ ಬಹಳ ಕುದುರೆಗಳಿಗೆ ಹಣೆಯ ನಡುವೇ ಒಂದೇ ಸುಳಿ ಇರುವುದು. ಕುಂಕುಮ ಹಚ್ಚುವ ಸ್ಥಳದಲ್ಲಿ ಅದು ಇರುವುದರಿಂದ ಅದಕ್ಕೆ ‘ಕುಂಕುಮ ಸುಳಿ’ ಎನ್ನುವರು. ಕಣ್ಣಿನಿಂದ ಒಂದಂಗುಲ ಕೆಳಗೆ ಕಪಾಳಕ್ಕೆ ತೀರಾ ಚಿಕ್ಕದಾದ ಸುಳಿಯೊಂದಿದ್ದು, ಅದರ ಕೆಳಗೆ ಅಂದರೆ, ಕೆಳದವಡೆಯ ಕಡೆಗೆ ಇನ್ನೊಂದು ಅಷ್ಟೇ ಚಿಕ್ಕದಾದ ಸುಳಿ ಇರುತ್ತದೆ. ಇವೆರಡನ್ನು ಕೂಡಿಯೇ ‘ಗಾನಕೋಡ ಸುಳಿ’ ಎನ್ನುತ್ತಾರ. ಮೂಗಿನ ಹೊರಳೆಗಳ ಮಧ್ಯೆ ಸುಳಿ ಇದ್ದರೆ ಆ ಕುದುರೆ ತೀರ ದಡ್ಡ ಇರುವುದೆಂದು ಹೇಳುತ್ತಾರೆ. ಅದನ್ನು ‘ದಡ್ಡ ಸುಳಿ’ ಎಂದೇ ಕರೆಯುತ್ತಾರೆ. ಇದಕ್ಕೂ ಕೆಟ್ಟದಾದ ಇನ್ನೊಂದು ಸುಳಿ ‘ಬೊಬ್ಬಿಸುಳಿ’ ಅದು ಕುದುರೆಯ ಕೆಳದುಟಿಯ ಕೆಳಗೆ ಇರುತ್ತದೆ. ಈ ಎರಡೂ ಸುಳಿಗಳಿದ್ದ ಕುದುರೆ ಎಂದೂ ಮಾರಾಟವಾಗುವುದೇ ಕಷ್ಟ. ಕೊಂಡವರು ಬೊಬ್ಬೆ ಹೊಡೆಯದೆ ಬೇರೆ ಗತಿಯಿಲ್ಲವಂತೆ. ‘ಕುದುರೆಗೆ ಸುಳಿ ಕೊರಳ ತುಂಬ’ ಎಂದು ಹೇಳುತ್ತಾರೆ. ಒಂಭತ್ತನೆಯ ಸುಳಿ ‘ಉರ್ಲ ಸುಳಿ’. ಈ ಕುದುರೆ ಕಟ್ಟಿದವ ಸಂಸಾರದ ತಾಪತ್ರಯಕ್ಕೆ, ಬುದುಕಿನ ಬೇರೆ ಸಮಸ್ಯೆಗಳಿಗೂ ಹೆದರಿ ಉರ್ಲು ಹಾಕಿಕೊಂಡು ಸಾಯಬೇಕಾಗುತ್ತದಂತೆ. ಈ ಸುಳಿ ಕುದುರೆಯ ಮುಖದಿಂದ ಕುತ್ತಿಗೆ ಆರಂಭವಾಗುವಲ್ಲಿ ಗಂಟಲಿಗೆ ಇರುತ್ತದೆ. ಅದರ ಕೆಳಗೆ ಗೆಜ್ಜೆ, ಲಡ್ಡು, ಕಟ್ಟುವಲ್ಲಿ ಇದ್ದ ಸುಳಿಯನ್ನು ‘ಕಂಠಾಭರಣ ಸುಳಿ’ ಎನ್ನುವರು. ಇದು ಮಂಗಲದಾಯಕ. ಶುಭ ಸೂಚಕ. ಇದಕ್ಕೂ ಕೆಳಗಿನ ಕುತ್ತಿಗೆಯ ಭಾಗದಲ್ಲಿದ್ದ ಅಂದರೆ ಎದೆಯಿಂದ ಕುತ್ತಿಗೆಯ ನಡುವೆ ಇದ್ದ ಸುಳಿಯನ್ನು ‘ದೇವಮಣಿ ಸುಳಿ’ ಎಂದು ಹೇಳುತ್ತಾರೆ ಈ ಸುಳಿಯ ಕುದುರೆ ಬಹಳ ಚಪಲವಾಗಿದ್ದು ಇದಕ್ಕೆ ಬೇಡಿಕೆ ಅಧಿಕವಾಗಿರುತ್ತದೆ. ಎರಡೂ ಮುಂಗಾಲ ಮೊಳಕಾಲ ಹಿಂದೆ ಇದ್ದ ಸುಳಿಗಳನ್ನು ‘ಬೇಡಿಸುಳು’ ಎಂದು ಹೆಸರಿಸುತ್ತಾರೆ. ಈ ಕುದುರೆಯ ಯಜಮಾನನ ಕೈಗೆ ಖಚಿತವಾಗಿ ಬೇಡಿ ಬರುತ್ತದೆಂಬ ನಂಬಿಕೆ ಇದೆ. ಇದು ತೀರಾ ಕೆಟ್ಟ ಸುಳಿಗಳಲ್ಲೊಂದು. ಹಿಂಗಾಲ ಮೊಳಕಾಲಿಗೂ ಅದೇ ರೀತಿಯ ಸುಳಿಗಳಿದ್ದರೆ ಅವನ್ನೂ ತೀರ ಕೆಟ್ಟವೆಂದು ಪರಿಗಣೀಸುತ್ತಾರೆ. ‘ಗೂಟಾಪಳಿ ಸುಳಿ’ ಸುಳಿಯಿದ್ದ ಕುದುರೆ ತನ್ನ ಮಾಲೀಕನನ್ನು ‘ಗೂಟ’ ‘ಪಳಿ’ ಕಿತ್ತಿಸುತ್ತದೆ. ಅಂದರೆ ಅವನನ್ನು ಊರು ಬಿಡಿಸುತ್ತದೆಂಬುದು ಜನಜನಿತ ತಿಳುವಳಿಕೆ. ಇಂತಹ ಕುದುರೆಗಳ ಮಾರಾಟ ಇಲ್ಲವೆಂದೇ ತಿಳಿಯಬೇಕು. ಕೆಲವು ಕುದುರೆಗಳನ್ನು ಹತ್ತಿ ತಿರುಗಾಡಲು ಬಳಸುವುದೇ ಇಲ್ಲ. ಕೇವಲ ಭಾರ ಹೊರಲು, ಸೇಂದಿ ಮೊದಲಾದ ಕೀಲು ವಸ್ತುಗಳನ್ನು ತರಲು ಮಾತ್ರ ಬಳಸುತ್ತಾರೆ. ಇಂತಹ ಕುದುರೆಗಳಿಗೆ ‘ಪಕಾಲಿ ಸುಳಿ’ ಇರುತ್ತದೆ. ಈ ಸುಳಿ ಇದ್ದ ಕುದುರೆಗಳನ್ನು ಮೇಲ್ವರ್ಗದವರಾರೂ ಸಾಕುವುದಿಲ್ಲ. ಹಿಂಗಾಲಿನಿಂದ ಸ್ವಲ್ಪ ಮುಂದೆ ಕಿಪ್ಪೊಟೆಯ ಮೇಲೆ ಈ ಸುಳಿ ಇರುತ್ತದೆ. ಕೆಲವು ಸುಳಿಗಳು ಒಬ್ಬರಿಗೆ ಅನುಕೂಲವಾಗಿದ್ದರೆ ಅವೇ ಸುಳಿಗಳು ಇನ್ನೂ ಕೆಲವರಿಗೆ ಪ್ರತಿಕೂಲವೂ ಆಗಿರುವುದುಂಟು. ‘ಗಂಗಾವಾಟಸುಳಿ’ ಅಥವಾ ‘ಬಂಗಾರಪಾಟ ಸುಳಿ’ ಎಂದು ಹೇಳುವ ಸುಳಿಯನ್ನು ಉದಾಹರಿಸಬಹುದು. ಥಡಿಯ ಮುಂದಿನ ಭಾಗವಿರುವ ಸ್ಥಳದಲ್ಲಿ ನೀರು ಹಾಕಿದರೆ, ಅದು ಮುಂಗಾಲು ನಡುವಿರುವ ಎದೆಯಿಂದ ಸ್ವಲ್ಪ ಹಿಂದೆ ಹಾದು ಬೀಳುವಲ್ಲಿ ಈ ಸುಳಿ ನೆಲಕ್ಕೆ ಮುಖ ಮಾಡಿ ಇರುತ್ತದೆ. ಈ ಸುಳಿಯಿದ್ದ ಕುದುರೆ ಕೆಲವರ ‘ಘರ್ ಸಪಾಟ’ ಮಾಡಲೂಬಹುದು. ಇನ್ನು ಕೆಲವರಿಗೆ ‘ಬಂಗಾರ ಪಾಟ’ ಆಗಿ ಅವರನ್ನು ಉತ್ಕರ್ಷಕ್ಕೂ ಒಯ್ಯಬಹುದು. ಮುಂಗಾಲು ಪಚ್ಚೆಯ ಮೇಲೆ ಇರುವ ಇನ್ನೊಂದು ಸುಳಿಯನ್ನು ‘ಹುರದಾವಳಿಸುಳಿ’ ಎಂದೂ ಹೇಳುತ್ತಾರೆ. ಈ ಸುಳಿಯ ಕುದುರೆ ಬಹಳ ‘ವಾಂಡ’ ಇರುತ್ತದೆ ನಂಬಿಗಸ್ಥವಲ್ಲ. ನಿಯಂತ್ರಣದಲ್ಲಿ ಆ ಕುದುರೆ ಬರುವುದೇ ಇಲ್ಲ. ‘ಸಿದಿಗಿ ಸುಳಿ’ ಎಂದು ಹೇಳುವ ಸುಳಿ ತೀರ ಕೆಟ್ಟದ್ದು. ಕುತ್ತಿಗೆ ಮಧ್ಯೆ ಆಯಾಲುವಿನಲ್ಲಿ ಈ ಸುಳಿ ಇರುತ್ತದೆ. ಈ ಸುಳಿ ಅಶುಭವಷ್ಟೇ ಅಲ್ಲ. ಸಾಕಿ ಸವಾರನ ಸಿದಿಗೆ ಕಟ್ಟಿಸುತ್ತದೆ ಎಂಬುದು ಬಹುಪಾಲು ಜನರ ನಂಬಿಕೆ (ಎಂ.ಜಿ. ಬಿರಾದಾರ; ೧೯೮೭-೪೬:೪೭:೪೮). ಹಿಂಗಾಲ ಮೊಣಕಾಲ ಮೇಲೆ ಅಂದರೆ ಸುಮರು ಎರಡು ಇಂಚು ಮೇಲುಗಡೆ ಎರಡೂ ಕಾಲಲ್ಲಿ ಸುಳಿ ಇದ್ದರೆ ಅದನ್ನು ‘ಕಸಬರಿಗೆ ಸುಳಿ’ ಎಂದು ಗುರುತಿಸುತ್ತಾರೆ. ಈ ಸುಳಿ ಇರುವ ಕುದುರೆಯನ್ನು ಯಾರೂ ಕೊಳ್ಳುವುದಿಲ್ಲ. ಏಕೆಂದರೆ ಕೊಂಡವನ ಮನೆ ಕಸಬರಿಗೆಯಿಂದ ಗುಡಿಸಿದಂತೆ ಎಲ್ಲಾ ಖಾಲಿಯಾಗುತ್ತದೆ ಎಂದು ನಂಬುತ್ತಾರೆ. ಹಾಗಾಗಿ ಸಾಮಾನ್ಯವಾಗಿ ಯಾರೂ ಈ ಕುದುರೆಯನ್ನು ಕೊಳ್ಳುವುದಿಲ್ಲ.

ಕುದುರೆಗಳ ಶರೀರದಲ್ಲಿ ಕೂದಲುಗಳು ಚಕ್ರಾಕಾರವಾಗಿ ಸುತ್ತಿಕೊಂಡಿರುತ್ತವೆ. ಇವುಗಳ ಶುಭಾಶುಭ ಫಲಗಳಲ್ಲಿ ಹಿಂದೂಗಳಿಗೆ ಅಪಾರ ನಂಬಿಕೆ ಇದೆ. ಲಕ್ಷಣವಾಗಿರುವ ಕುದುರೆಗಳನ್ನು ಯಾವನು ಕಟ್ಟಿರುತ್ತಾನೋ ಅಂಥವನ ಮನೆಯಲ್ಲಿ ಸರ್ವಕಾಲ ಲಕ್ಷ್ಮಿ ಸಂಚರಿಸುತ್ತಿರುವಳೆಂದೂ ದುರ್ಲಕ್ಷಣಯುಕ್ತ ಕುದುರೆಗಳನ್ನು ಕಟ್ಟಿರುವ ಮನೆಯಲ್ಲಿ ನಿಷ್ಕಾರಣವಾಗಿ ಆಪತ್ತುಗಳು ಸಂಭವಿಸುತ್ತವೆಂದು ತಿಳಿದು ಬರುವುದರಿಂದ ರತ್ನ, ಸ್ತ್ರೀಯರು, ಕುದುರೆ ಮುಂತಾದವುಗಳ ಲಕ್ಷಣಗಳನ್ನು ನೋಡುವಾಗ ಮೊದಲು ಪರೀಕ್ಷಿಸಬೇಕಾದ್ದು ಈ ಸುಳಿಗಳನ್ನು ಎಂದು ನಮ್ಮವರು ಅಭಿಪ್ರಾಯಪಡುತ್ತಾರೆ. ಕುದುರೆಗಳ ಶರೀರದಲ್ಲಿ ಸುಳಿ, ಮುಕುಳ, ಪಾದುಕ, ಶಕ್ತಿ, ಸಮೂಹ, ಪಾದುಕಾರ್ಥ, ಅವಲೀಢ, ಶತಪದಿಗಳೆಂದು ಎಂಟು ಸುಳಿಗಳಿರುತ್ತವೆ.

“ನೀರಿನ ಸುಳಿಯಂತೆ ಬಲಪ್ರದಕ್ಷಿಣವಾಗಿ ತಿರುಗಿಕೊಂಡ ಸುಮಾರು ಅರ್ಧ ಅಂಗುಲ ಪ್ರಮಾಣವುಳ್ಳ ಚಚ್ಚೌಕವಾದ ಸುಳಿಗೆ ‘ಸುಳಿ’ ಎಂದೂ, ಕೂದಲಿನ ತುದಿಗಳು ಪರಸ್ಪರ ಕೂಡಿಕೊಂಡು ಮಲ್ಲಿಗೆ ಮೊಗ್ಗಿನ ಆಕಾರವಾಗಿಯೂ ಕಾಲು ಅಂಗುಲ ಪ್ರಮಾಣವುಳ್ಳದ್ದಾಗಿಯೂ ಇರತಕ್ಕ ಸುಳಿಗೆ ‘ಮುಕುಳ’ವೆಂದೂ, ಕೂದಲುಗಳು ತಿರುಗಿಕೊಂಡು ನಾಲ್ಕು ಅಂಗುಳ ಅಳತೆಯುಳ್ಳದ್ದಾಗಿಯೂ ಪಾದುಕೆಯ ಆಕಾರವುಳ್ಳದ್ದಾಗಿಯೂ ಇರುವ ಸುಳಿಗೆ ‘ಪಾದುಕ’ ವೆಂತಲೂ, ಮುತ್ತಿನ ಚಿಪ್ಪಿನ ಹಾಗೆ ತಿರುಗಿಕೊಂಡು ಎರಡು ಅಂಗುಲ ಪ್ರಮಾಣವುಳ್ಳ ಸುಳಿಗೆ ಶಕ್ತಿ ಎಂತಲೂ, ಮೂರಂಗುಲ ಪ್ರಮಾಣವುಳ್ಳದ್ದಾಗಿ ಕರುಗ ನಾಲಗೆಯಿಂದ ಶರೀರವನ್ನು ನೆಕ್ಕಿಕೊಂಡರೆ ಯಾವ ರೀತಿಯಲ್ಲಿ ರೋಮಗಳು ಒಂದು ಕಡೆಗೆ ಬಾಗಿಕೊಂಡಿರುತ್ತವೆಯೋ ಆ ರೀತಿಯಲ್ಲಿ ರೋಮಗಳು ಒಂದು ಕಡೆ ಬಾಗಿಕೊಂಡಿರತಕ್ಕಂತಹ ಸುಳಿಗೆ ‘ಅವಲೀಡ’ ಎಂತಲೂ, ಎಂಟು ಅಂಗುಲ ವಿಸ್ತಾರವಾಗಿ ಇರತಕ್ಕ ರೋಮಗಳ ಗುಂಪಿನ ಸುಳಿಗೆ ‘ಸಮೂಹ’ವೆಂತಲೂ, ನಾಲ್ಕು ಅಂಗುಲ ವಿಸ್ತಾರವಾಗಿ ಜರಿಯು ಹರಿದಂತೆ ಉದ್ದವಾಗಿರುವ ಸುಳಿಯು ‘ಶತಪಾದಿ’ ಎಂತಲೂ, ಮುಕ್ಕಾಲು ಅಂಗುಲ ಪರಿಮಾಣವುಳ್ಳದಾಗಿ ಒಡೆದುಹೋದ ಪಾದುಕೆಯ ತುಂಡಿನ ಆಕಾರದಲ್ಲಿ ಇರತಕ್ಕ ಸುಳಿಗೆ ‘ಪಾದುಕಾರ್ಥ’ವೆಂತಲೂ ಹೆಸರುಗಳಿವೆ. ಇವುಗಳಲ್ಲಿ ಆವರ್ತ, ಮುಕುಳ, ಶಕ್ತಿ ಎಂಬ ಮೂರು ಸುಳಿಗಳು ಶುಭಕರ, ಉಳಿದ ಐದು ಸುಳಿಗಳು ಕೇಡನ್ನುಂಟು ಮಾಡುತ್ತವೆ. ಉತ್ತಮ ಸುಳಿಗಳಿರಬೇಕಾದ ಜಾಗಗಳಲ್ಲಿ ಹೀನಸುಳಿಗಳಿದ್ದರೆ ಅಶುಭ. ಸುಳಿಗಳಿಲ್ಲದ ಕುದುರೆಯು ಅನಿಷ್ಟವೆಂದೆನಿಸಿ ಅದರ ದರ್ಶನ ಸ್ಪರ್ಶ ಮಾಡಬಾರದೆಂದು, ಮತ್ತು ಮನೆಯಲ್ಲಿ ಹುಟ್ಟಿದ ಕುದುರೆಗೆ ಹೀನ ಸುಳಿಯಿದ್ದರೂ ದೋಷವಿಲ್ಲವೆಂದೂ ಹೇಳುತ್ತಾರೆ. ಕುದುರೆಯ ಹಣೆಯ ಮೇಲೆ ನಾಲ್ಕು ಸುಳಿಗಳು ವಜ್ರದಂತೆ ಚಚ್ಚೌಕವಾಗಿರುವ ಕುದುರೆಯ ಯಜಮಾನನು ಸಪ್ತಸಮುದ್ರ ಮಧ್ಯಸ್ತವಾಗಿರತಕ್ಕ ಭೂಮಂಡಲವನ್ನುಳ್ಳ ಚಕ್ರವರ್ತಿಯಾಗುತ್ತಾನೆ. ಹಣೆಯ ಮೇಲೆ ತ್ರಿಕೋಣಾಕಾರವಾದ ಮೂರು ಸುಳಿಗಳಿದ್ದರೆ ಅಂಥಾ ಅಶ್ವದ ಒಡಯನು ತ್ರೈಲೋಕ್ಯ ವಿಕ್ರಮಿಯೀ ಕೀರ್ತಿಯುಳ್ಳವನೂ ಆಗುತ್ತಾನಂತೆ (ಡಾ. ಚಂದ್ರಶೇಖರ ಕಂಬಾರ; ೧೯೮೫ : ೪೩೭-೪೩೮)

ಶ್ವೇತವರ್ಣ, ಪಂಚಕಲ್ಯಾಣಿ, ಅಷ್ಟಮಂಗಳಿ, ಕೆಂಪು ಬಣ್ಣ ಮತ್ತು ದೈವ ಮಣಿಯುಳ್ಳ ಕುದುರೆ ಜಯವನ್ನು, ಸುಖವನ್ನು ಭೋಗವನ್ನು ಉಂಟು ಮಾಡುತ್ತದೆ.